ತಮ್ಮ `ಹಳ್ಳ ಬಂತು ಹಳ್ಳ’ ಕಾದಂಬರಿಗಾಗಿ ಈ ಬಾರಿಯ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಶ್ರೀನಿವಾಸ ವೈದ್ಯರ ಸಣ್ಣ ಕಥೆ ‘ಶ್ರದ್ಧಾ’ ಇಲ್ಲಿದೆ.

ಮಾಘ ಮಾಸದ ಶುಕ್ಲಪಕ್ಷದ ದ್ವಾದಶಿ ನಮ್ಮ ತಂದೆಯವರ ಶ್ರಾದ್ಧದ ದಿನ. ಅದು ಸಾಧಾರಣ ಜನೆವರಿ- ಫೆಬ್ರುವರಿ ತಿಂಗಳಿನ್ಯಾಗ ಯಾವಾಗೋ ಬರತದ. ಆ ಸುಮಾರಕ್ಕ ನನ್ನ ಸ್ವರ್ಗಸ್ಥ ತಂದೆಯವರ ನೆನಪು ನನ್ನನ್ನು ಎಡೆಬಿಡದೆ ಕಾಡುತ್ತಿರುತ್ತದೆ.

ಹಂಗ ನೋಡಿದರ ನಮ್ಮ ತಂದೀದು ಸಾಕಷ್ಟು ವಿರೋಧಾಭಾಸಗಳಿಂದ ಕೂಡಿದ ಮರೆಯಲಾಗದ ವ್ಯಕ್ತಿತ್ವ. ಇಡೀ ವರುಷನ ಅವರ ನೆನಪು ಬಿಟ್ಟಿರೂದಿಲ್ಲ. ಆದರೂ ಮಾಘ ಮಾಸದ ಶುಕ್ಲಪಕ್ಷದ ಸುಮ-ಸುಮಾರಿಗೆ ಅವರ ಸ್ಮೃತಿ ತೀವ್ರವಾಗಿ ಇನ್ನೇನು ಮನೆಯ ಯಾವುದೋ ಒಂದು ಮೂಲೆಯಿಂದ ಅವರು ಎದ್ದು ಬಂದು ಬಿಡತಾರೇನೋ ಅನ್ನುವಷ್ಟು ಸ್ಫುಟವಾಗಿ ತೀಕ್ಷ್ಣವಾಗಿ ಮನಸ್ಸನ್ನು ಕೆಣಕತದ.

ನಮ್ಮ ತಂದಿ ಲೋಕಮಾನ್ಯ ಟಿಳಕರ ಭಕ್ತರು. ಟಿಳಕರ ತತ್ವಗಳನ್ನೂ ಕಠೋರ ಶಿಸ್ತನ್ನೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಲು ಹವಣಿಸಿದವರು. ಒಂದೆರಡು ಸಲ ಜೇಲು ಕಂಡವರು. ಅಂತೆಯೇ ಅವರಿಗೆ ಈ ನಾಲ್ಕಾಣೆ ಎರಡಾಣೆ ಚಿಲ್ಲರೆಗಳಿಂದ ತುಂಬಿದ ವ್ಯಾವಹಾರಿಕ ಜಗತ್ತಿನಲ್ಲಿ ವ್ಯವಹರಿಸಲು ಬರಲೇ ಇಲ್ಲ.

ನಮ್ಮದು ನರಸಿಂಹನ ಒಕ್ಕಲು. ನಮ್ಮ ತಂದೀದು ಶ್ರೀಮದ್ಗಾಂಭಿರ್ಯದಿಂದೊಪ್ಪುವ, ತುಸು ಮಟ್ಟಿಗೆ ಉಗ್ರವೇ ಎನ್ನಬಹುದಾದ ರೂಪ. ಸಾಮಾನ್ಯಕ್ಕಿಂತ ಸ್ವಲ್ಪ ಎತ್ತರವೇ, ದಪ್ಪವೇ ಎನ್ನಬಹುದಾದ ಮೈಕಟ್ಟು. ದುಂಡು ಮುಖಕ್ಕೆ ಒಪ್ಪದ ಕೆಂಡಗಣ್ಣು. ಎತ್ತರ ಮಟ್ಟಸವಾದ ಹಣೆ. ಮುಖದ ಮೇಲೆ ಎರಡೋ ಮೂರೋ ದಿವ್ಸದ ಕಳೆ. ತಿದ್ದಿ ತಿದ್ದಿ ತೀಡಿ ತೀಡಿ ಎರಡೂ ಕಡೆ ಚೂಪಾಗಿ ಬೆಳೆಸಿದ ಜೊಂಡು ಮೀಸೆ. ಮಶಿನ್ ಕಟ್ ತಲೆ. ಮಂಗಳಾರತಿ ಬತ್ತಿಯಷ್ಟು ಚಂಡಿಕೆ. ನಿತ್ಯಪೂಜೆ ಮಾಡಿಯೂ ಕೂಡ ಸಾಂಸಾರಿಕ ಸೋಲುಗಳನ್ನು ಎದುರಿಸಲಾರದ್ದಕ್ಕೊ ಏನೋ ಮುಖದಲ್ಲಿ ಮೂಡಿದ ನಿರಂತರ ಸಿನಿಕ ಕಳೆ, ಸಾತ್ವಿಕ ಸಂತಾಪದ ಕ್ರುದ್ಧ ಭಾವ.

ಅವರು ಸದೋದೀತ ಎರಡೂ ಕೈಯಿಂದ ಮೀಸೆ ತಿರುಚಿ, ತಿರುಚಿ ಒಂದೊಂದು ತುದಿಗೂ ಒಂದೊಂದು ಲಿಂಬೆಹಣ್ಣು ಚುಚ್ಚಲಿಕ್ಕೆ ಬರುವಂತೆ ಚೂಪಾದ ಮೀಸೆ ಬೆಳೆಸಿದ್ದರು, ಕ್ರಾಂತಿಕಾರಿ ಚಂದ್ರಶೇಖರ ಆಜಾದನಂತೆ.

ಯಾವಾಗಲೂ ಎಡಗೈಯಿಂದ ಬಲಗಡೆ ಮೀಸೆ, ಬಲಗೈಯಿಂದ ಎಡಗಡೆ ಮೀಸೆ ನೇವರಿಸುತ್ತಿದ್ದರು. ಈ ಕೈಯಿಂದ ಆ ಮೀಸೆ, ಆ ಕೈಯಿಂದ ಈ ಮೀಸೆ! ಯಾವುದಾದರೊಂದು ಕೈ ಖಾಲಿ ಇಲ್ಲದಿದ್ದರೆ ನವೆ ಅನುಭವಿಸುತ್ತಾ ಹಾಗೇ ಇರುತ್ತಿದ್ದರೇ ಹೊರತು, ಅದೇ ಕೈಯಿಂದ ಅದೇ ಮೀಸೆಯನ್ನು ಎಂದೂ ನೇವರಿಸುತ್ತಿದ್ದಿಲ್ಲ. ತತ್ವನಿಷ್ಠೆ ಅಂದರೆ ಅದು!

ಆ ಕಾಲದ ತಂದೆಯವರದ್ದೊಂದು ವಿಚಿತ್ರನೂ ಇತ್ತು. ಮಕ್ಕಳ ಸಂಗ್ತೀ ನೇರವಾಗಿ ಡಾಯಿರೆಕ್ಟ್‌ ಆಗಿ, One to one ಆಗಿ Face to face ಎಂದೂ ಮಾತಾಡತಿದ್ದಿಲ್ಲ. ಏನೇ ಇದ್ದರೂ ಅದು ತಮ್ಮ ಶ್ರೀಮತಿಯ ಮುಖಾಂತರ ಅಂದರೆ ನಮ್ಮ ತಾಯಿಯವರ ಮುಖಾಂತರವೇ. ಟಿಳಕರು ತಮ್ಮ ಮಕ್ಕಳನ್ನು ಹೀಂಗ ಬೆಳೆಸಿದರು ಅಂತ ಕೇಳಿದ್ದೆ. ಬಹುಶಃ ಪ್ರೀತಿ ಅಂತಃಕರಣ, ಮಮತೆ, ಸ್ನೇಹ, ವಾತ್ಸಲ್ಯ ಇಂತಹ ದುರ್ಬಲ ಭಾವನೆಗಳಿಗೆ ಆಸ್ಪದ ಕೊಟ್ಟರೆ ಮಕ್ಕಳು ಎಲ್ಲಿ ಕೆಟ್ಟು ಹೋದಾರೋ ಎಂಬ ಭಯ.

ಅಷ್ಟೂ ಅಲ್ಲ ಪರೋಕ್ಷವಾಗಿ, Indirect ಆಗಿ ಸಹಿತ ಏನೇ ಮಾತಾಡಿದರೂ ಅದು ಕೂಡ ಅತ್ಯಂತ ವೈಭವೋಪೇರಿತಲಾದ, ತೀಕ್ಷ್ಣವಾದ, ಹರಿತವಾದ, ಉಗ್ರವಾದ ವ್ಯಂಗ್ಯದಿಂದ ಕೂಡಿರುತ್ತಿತ್ತು. ಅಬ್ಬಬ್ಬ! ಅಂತಹ ರುದ್ರ ಗಂಭೀರ ಶ್ರೀಮಂತ ವ್ಯಂಗ್ಯವನ್ನು ನಾನು ಆಮೇಲೆ ಕೇಳಲೇ ಇಲ್ಲ. ಅನುಭವಿಸಲೇ ಇಲ್ಲ.

ಈ ರೀತಿ ನಮ್ಮ ಹಿರಿಯರ, ನಿಷ್ಠುರ ಕಠೋರ ದರ್ಪದ ಆಡಳಿತದಲ್ಲಿ ನಾನೂ ನನ್ನ ಅಕ್ಕ ಸರೋಜಕ್ಕ ಇಬ್ಬರೂ ಬೆಳೆದವು. ಸರೋಜಕ್ಕನ ಜತೆಗೆ ಮಾತ್ರ ಆಗಾಗ ಸ್ವಲ್ಪ ಮಮತೆಯಿಂದ ಪ್ರೀತಿಯಿಂದ ಕಾಲ ಕಳೆಯುತ್ತಿದ್ದರು ನಮ್ಮ ತಂದೆ. ಬಹುಶಃ ಅವಳು ಕುಲಕ್ಕೆ ಹೊರಗಾಗಬೇಕಾದ ಹೆಣ್ಣು ಎಂತಲೋ ಎನೋ? ನನ್ನ ಜತೆ ಮಾತ್ರ ಯಾವಾಗಲೂ ಎದುರಾಳಿಯಂತೆ ಅದೂ ಆಟದ ಎದುರಾಳಿಯಲ್ಲ, ಕಾಳಗದಲ್ಲಿಯ ಎದುರಾಳಿಯಂತೆ.

ಒಂದು ಸಲ ಬಹುಶಃ ನಾನು ಹತ್ತು ಹನ್ನೆರಡು ವರುಷದವನಿದ್ದಾಗ “ಅವ್ವಾ ದಿನಾ ಜೋಳದ ಭಕ್ರಿ ತಿಂದು ಬ್ಯಾಸರ ಬಂದದ. ಇವತ್ತೊಂದು ದಿವ್ಸ ಚಪಾತಿ ಮಾಡವ್ವ” ಅಂದೆ. ಅವತ್ತೇ ಮನ್ಯಾಗ ಗೋಧಿ ಇದ್ದಿದ್ದಿಲ್ಲ ಅಂತ ಕಾಣಸ್ತದ. ನಮ್ಮ ಜಿವ್ಹಾ ಚಾಪಲ್ಯದ ಸುದ್ದಿ ನಮ್ಮ ತೀರ್ಥರೂಪರ ಕಿವಿಗೆ ಬಿತ್ತು. ತೊಗೋ… ಮಂತ್ರಪುಷ್ಪ ಸುರೂನ ಆತು.

“ನಾನು ಒಬ್ಬ ನತದೃಷ್ಟ ದಟ್ಟ ದರಿದ್ರ ಬಡ ಕಾರಕೂನ. ಅಧಮಾಧಮ. ನನಗೆ ಬರೋ ಕೂಲೀ ದುಡ್ಡಿನೊಳಗ ಗೋದಿ ತರಲಿಕ್ಕೆ ಆಗೂದುಲ್ಲ ಅಂತ ಹೇಳ್ರಿ. ನಾಳೆ ನಮ್ಮ ಚಿರಂಜೀವರೇನು ದಿವಾಣ ಸಾಹೇಬರು ಆಗ್ತಾರಲ್ಲ… ಆದ ಮ್ಯಾಲ ದಿನಾಲೂ ಹೋಳಿಗೆ… ತುಪ್ಪ … ಕಡಬೂ…. ಪಾಯಸ… ಮಂಡಿಗೆ ಇತ್ಯಾದಿಯಲ್ಲಾ ಪಂಚಭಕ್ಷ್ಯ ಪರಮಾನ್ನ ತಿಂದು ತುಪ್ಪದಾಗ ಕೈತೊಳಕೊಳ್ಳಲಿಕ್ಕೆ ಹೇಳ್ರಿ… ತುಪ್ಪದಾಗ ಕೈತೊಳೆದುಕೊಂಡು ತಲೀ ಬೋಳಿಸಿಕೊಳ್ಳಲಿಕ್ಕೆ ಹೇಳ್ರಿ.”

ಈ ತಲೆ ಬೋಳಿಸಿಕೊಳ್ಳುವ ಮಾತು ನಮ್ಮ ನಿತ್ಯ ಜೀವನದ ಪ್ರತಿಕ್ಷಣದ ಒಂದು ಅವಿಭಾಜ್ಯ ಅಂಗವೇ ಆಗಿತ್ತು. ಅದು common factor, bracket ನ ಹೊರಗ ಇದ್ದಾಂಗ. ಉಳಿದದೆಲ್ಲ bbracket ನ ಒಳಗ, ಉದಾಹರಣೆಗೆ,

“ಕುಮಾರ ಕಂಠೀರವ ಅವರಿಗೆ ಸ್ನಾನಾ ಮಾಡಿ ತಲಿ ಬೋಳಿಸಿಕೊಳ್ಳಲಿಕ್ಕೆ ಹೇಳ್ರಿ.”
“ಯಜಮಾನರು ಊಟಾ ಮುಗಿಸಿ ತಲೀ ಬೋಳಸಿಗೋತಾರೇನು ಕೇಳ್ರಿ.”
“ಪಡಸಾಲ್ಯಾಗಿಂದು ಆ ದರಿದ್ರ ಮಾರೀ ಸಾಯಿಕಲ್ ಹೊರಗಿಟ್ಟು ತಲೀ ಬೋಳಸಿಕೊ ಅನ್ನರಿ ನಿಮ್ಮ ಚಿರಂಜೀವರಿಗೆ.”
“ಇವತ್ತ ಗುರುವಾರ ಅದೂ ರಾಯರ ವಾರ. ನಿಮ್ಮ ಮಿರ್ಜಾ ಸಾಹೇಬರಿಗೆ ಸ್ನಾನಾ ಮುಗಿಸಿ ಒಂದಿಷ್ಟು ಗುರುಸ್ತೋತ್ರ ಅಂದು ತಲೀ ಬೋಳಿಸಿಕೊಳ್ಳಿಕ್ಕೆ ಹೇಳ್ರಿ.”
“ನಿಮ್ಮ ಪುತ್ರರತ್ನರಿಗೆ ಸ್ವಲ್ಪ ನಾರಾಯಣಾಚಾರ ಮನೀ ತನಕ ಹೋಗಿ ವೈಷ್ಣವರ ಏಕಾದಶಿ ಯಂದ… ಅಂತ ಕೇಳಿಕೊಂಡ ಬಂದು ತಲೀ ಬೋಳಸಿಕೊಳ್ಳಲಿಕ್ಕೆ ಹೇಳ್ರಿ.”

ಈ ರೀತಿ ಅಸ್ಮಾದಿಕರು ಯಾವುದೇ ಕಾರ್ಯವನ್ನು ಮಾಡಿದರೂ ಅದು ನಮ್ಮ ತಲೆ ಬೋಳಿಸಿಕೊಳ್ಳುವುದರಲ್ಲಿ ಪರ್ಯವಸಾನವಾಗುತ್ತಿತ್ತು.

ನಮ್ಮ ತೀರ್ಥರೂಪರಿಗೆ ನನ್ನ ಕೇಶರಾಶಿಯ ಮೇಲಿದ್ದ ಈ ಅಪೂರ್ವ ಪ್ರೀತಿ ವಾತ್ಸಲ್ಯಗಳನ್ನು ಕಂಡು ನಾವು ಎಳೆಯರು ಅವರಿಗೆ ಮುಂಡನ ಮಿಶ್ರರು ಅಂತ ನಾಮಕರಣ ಮಾಡಿದ್ದೆವು.

ಹಿಂದಿನ ಕಾಲದ ರಾಜಮನೆತನಗಳಿಗೆಲ್ಲ ಒಂದೊಂದು ಲಾಂಛನ, ಧ್ವಜ ಇರುತ್ತಿತ್ತಂತೆ. ಹುಲಿಯನ್ನು ಹೊಯ್ಯುತ್ತಿದ್ದ ಹೊಯ್ಸಳ, ಮಹಾಭಾರತದ ಮಹಾರಥಿಗಳಾದ ಕಪಿಧ್ವಜ, ಉರಗಪತಾಕ, ಗಂಡಭೇರುಂಡದ ಮೈಸೂರ ಅರಸರು ಹೀಗೆ ಒಂದೊಂದು ವಂಶಕ್ಕೂ ಒಂದೊಂದು ಪತಾಕೆ, ಒಂದೊಂದು ಚಿಹ್ನೆ, ಒಂದು ವೇಳೆ ನಮ್ಮದೇನಾದರೂ ಅಂತಹ ರಾಜ ಮನೆತನವಾಗಿದ್ದರೆ, ನಮ್ಮ ಚಿಹ್ನೆಯಾಗಿ ಒಂದು ಉಗ್ರಮುಖದ ಮುಂಡ ಮೋಚಿದ ರುಂಡ ಮಾತ್ರ ಇರುತ್ತಿತ್ತು. ಮತ್ತೂ ನಾವೂ ಹೊಯ್ಸಳರಂತೆ ಬೋಳ್ತಲೆಯವರೆಂದು ಪ್ರಸಿದ್ಧರಾಗಿರುತ್ತಿದ್ದೆವು.

ವೀರಾಧಿವೀರರಾದ ನಮ್ಮ ವಂಶದ ಹಿರಿಯರು ಕದಂಬರ ಜತೆಗೋ ಹೊಯ್ಸಳರ ಜತೆಗೋ ಘನ ಘೋರ ಕಾಳಗದಲ್ಲಿ ತೊಡಗಿದ್ದಾಗ, ನಮ್ಮ ಸೇನಾ ತುಕಡಿಗಳು ನಮ್ಮ ವಂಶದ ಬೋಳ್ತಲೆ ಪತಾಕೆ ಹಿಡಿದು, ‘ಹೊಯ್ಸಳ ಮುರದಾಬಾದ್‌ ಬೋಳ್ತಲೆ ಜಿಂದಾಬಾದ್‌, ಬೋಳ್ತಲೆಯವರಿಗೆ ಜಯವಾಗಲಿ’ ಎಂದು ವೀರಾವೇಶದ ಘೋಷಣೆಗಳನ್ನು ಕೂಗುತ್ತಾ ಸಮರಾಂಗಣದಲ್ಲಿ ಶತ್ರು ಸೈನಿಕರನ್ನು ಬೆನ್ನಟ್ಟಿ ಹಿಡಿ ಹಿಡಿದು ಅವರ ತಲೆ ಬೋಳಿಸುತ್ತಿದ್ದರೋ ಏನೋ.

ಇರಲಿ, ಮುಂಡನಮಿಶ್ರರು ಗ್ರಾಮೋದ್ಯೋಗದ ಕುಸಬಿ ಎಣ್ಣೆಯ ಕೇಂದ್ರದಾಗ ಅಕೌಂಟ್ಸ್‌ ಅಸಿಸ್ಟಂಟ್‌ ಅಂತ ಕೆಲಸ ಮಾಡುತ್ತಿದ್ದರು. ಸ್ವಾತಂತ್ರ್ಯ ಸಿಕ್ಕ ಮೇಲೆ ಟಿಳಕರ ಅನುಯಾಯಿಗಳು, ಗಾಂಧೀ ಭಕ್ತರು ಇಂತಹ ಕೆಲವು ಕೈಲಾಗದ ಅಪಹಾತ ದೇಶಭಕ್ತರಿಗೆ ಜೀವನೋಪಾಯಕ್ಕೆ ಇರಲೀಂತ ಸರಕಾರದವರು ಖಾದೀ ಗ್ರಾಮೋದ್ಯೋಗ, ನೀರಾ ಕೇಂದ್ರ, ಅಂಬರ ಚರಖಾದಂತಹ ಕೆಲಕೆಲವು ಅಳುಬುರುಕ ರಣಹೇಡಿ ಡಿಪಾರ್ಟಮೆಂಟಗಳನ್ನು ಸೃಷ್ಟಿಸಿದ್ದರು. ಉಳಿದ ಘಟ್ಟುಳ್ಳ ದೇಶಭಕ್ತರೆಲ್ಲ ಮಂತ್ರಿಗಳೂ ಉಪಮಂತ್ರಿಗಳೂ ಆಗಿ ದೇಶವನ್ನು ಬಾಚಿಕೊಳ್ಳಲಿಕ್ಕೆ ಸುರು ಮಾಡಿದ್ದರು ಆಗಲೇ!

ನಮ್ಮ ತಂದೆಯವರೇನೋ ಗ್ರಾಮೋದ್ಯೋಗದಲ್ಲಿ ಅತ್ಯಂತ ನಿಷ್ಠೆಯಿಂದ ಶ್ರದ್ಧಾಭಕ್ತಿಗಳಿಂದ, ಗರಗದ ರೈತ ಗದಿಗೆಪ್ಪನಿಗೆ
ಕುಶಿಬಿ ಬಾಬ್ತು ರೂ. ೧೨. ಆ. ೬. ಪೈ. ೪
ಚಕ್ಕಡಿ ಬಾಡಿಗೆ ರೂ. ೦. ಆ. ೮. ಪೈ. ೫
ಹಮಾಲಿ ರೂ. ೦. ಆ. ೬. ಪೈ. ೧

ಹಿಂತಾ ಹುಚ್ಚ ಹುಚ್ಚ ಲೆಕ್ಕ ಬರೀತಿದ್ದರು. ಆದರೆ ಅವರ ಮಗನಾದ ನನಗ ಮಾತ್ರ ಲೆಕ್ಕ ಅಂದ್ರ ಅಷ್ಟಕ್ಕಷ್ಟೆ.

ಒಮ್ಮೆ, ಬಹುಶಃ ನಮ್ಮ ಆರನೇ ಇಯತ್ತೆಯ ಪರೀಕ್ಷೆಯಲ್ಲಿ ಗಣಿತ ಪೇಪರಿನಲ್ಲಿ ನನಗೆ ಗುಂಡು ಗುಂಡಾದ ಒಂದು ಸೊನ್ನೆ ಪ್ರಾಪ್ತವಾಗಿತ್ತು. ಅಬ್ಬ! ಮುಂಡನಮಿಶ್ರರ ಅಂದಿನ ಆ ಆರ್ಭಟ, ಕೋಪಾಟೋಪ, ಹಿರಣ್ಯಕಶಿಪುನಂತಹ ಉಗ್ರರೂಪ, ಒದರಾಟ ಚೀರ್‍ಯಾಟ ಎಂದಿಗೂ ಮರೆಯಲಿಕ್ಕಾಗದು. ಏನು ಅಂದಿನವರೆಗೆ ಜಗತ್ತಿನಲ್ಲಿ ಯಾರಿಗೂ ಗಣಿತ ಪೇಪರಿಗೆ ಸೊನ್ನೆ ಬಿದ್ದಿದ್ದೆ ಇಲ್ಲವೇ? ಶೂನ್ಯ ಸಂಪಾದನೆಯ ಈ ಪ್ರಥಮ ಶ್ರೇಯಸ್ಸು ನಮಗೇ ಸಲ್ಲಬೇಕೇನು? ಇದೆಲ್ಲ ತಿಳೀಬೇಕಲ್ಲ! ಇಲ್ಲ, ಬರೇ ಥಥೈ ಥತಥೈ ಅಂತ ಕುಣಿದೇ ಕುಣದ್ರು ಕುಣದ ಕುಣದರು ಇಡೀ ದಿವಸ.

ಆವತ್ತ ನಾವು ಅಡಿಗೀ ಮನಿಯೊಳಗ ದೊಡ್ಡ ಖಂಬದ ಹಿಂದೆ ಅಡಗಿ ಕುಳಿತಿದ್ದೆವು. ಪಕ್ಕದಲ್ಲಿ ನಮ್ಮ ಮಾತೋಶ್ರೀಯವರು ಭಕ್ರೀ ಬಡಕೋತ ಕೂತಿದ್ದರು. ಅದೇ ಸಮಯಕ್ಕೆ ರಕ್ಕಸನಾದ ಆ ಹಿರಣ್ಯಕಶಿಪು ಕೋಪೋದ್ರಿಕ್ತನಾಗಿ ಖಡ್ಗವನ್ನು ಝಳಪಿಸುತ್ತಾ ಧಾವಿಸಿ ಬಂದು ನಮ್ಮ ಬಡ ತಾಯಿಗೆ “ನಿಮ್ಮ ಚಿರಂಜೀವರಿಗೆ… ನಿಮ್ಮ ವಂಶದ ಕುಡಿಗೆ ಯಷ್ಟು ಮಾರ್ಕ್ಸ ಬಿದ್ದಾವ ನೋಡೀರೇನು?… ನಮ್ಮ ಸಮಸ್ತ ಮನೆತನದ ಮರ್ಯಾದಿ ಈ ಕಡೆಯಿಂದ ಆ ಕಡೆ ಹಾಯ್ದು ಹೋಗೋ ಅಷ್ಟು ಬಿದ್ದಾವ… ಇಷ್ಟು ದಿವಸ ಈ ನಿಮ್ಮ ವಂಶೋದ್ಧಾರಕರು… ಈ ನಿಮ್ಮ ಕುಲದೀಪಕರು… ಈ ದೇವಾಂಶ ಸಂಭೂತರು ತಮ್ಮ ತಲೀ ಅಷ್ಟ ಬೋಳಿಸಿಕೋತಿದ್ದರು… ಇವತ್ತ ತಮ್ಮದಷ್ಟ ಅಲ್ಲದ ನಮ್ಮದೂ… ನಮ್ಮ ಪಿತೃಗಳದೂ… ಪಿತಾಮಹ ಪ್ರಪಿತಾಮಹಗಳದೂ…ಎಲ್ಲಾರದೂ ತಲೀ ಬೋಳಿಸಿ ಒಗದು ಬಿಟ್ಟಾರ… ಇನ್ನೊಂದ ಸ್ವಲ್ಪ ದಿವ್ಸ ಹೀಂಗ ಬಿಟ್ಟರ ಅವರನ್ನ ಹೆತ್ತ ಹೊತ್ತ ತಪ್ಪಿಗೆ ನಿಮ್ಮದನ್ನೂ ಮುಗಿಸಿ ಬಿಡತಾರ… ಒಂದು ಸಣ್ಣಮಣೀ ತಂದು ಅದರ ಮ್ಯಾಲ ಕೂಡಂತಾರ ನಿಮಗ .. ಯಲ್ಲಿದ್ದಾರ… ಯಲ್ಲಿದ್ದಾರ ? … ನಿಮ್ಮ ಪುತ್ರರತ್ನರು ಯಲ್ಲಿದ್ದಾರ…? ಈ ಮನೆತನದ ಮೇಧಾವಿ ಗಣಿತಜ್ಞ ಶ್ರೀನಿವಾಸನ್ ರಾಮಾನುಜಂರವರು ಯಲ್ಲಿದ್ದಾರ…. ? ದೈವೀ ಕಳೆಯಿಂದ ತುಂಬಿ ತುಳುಕುತ್ತಿರುವ ಅವರ ಆ ದರಿದ್ರ ವದನಾರವಿಂದದ ದರ್ಶನ ಮಾಡಿಕೊಂಡು ಹಾಳಾಗಿ ಹೋಗಬೇಕಂತೇನಿ…ಯಲ್ಲಿದ್ದಾರ… ಯಲ್ಲಿದ್ದಾರ…?”

…ಈ ರೀತಿ ಒದರ್‍ಯಾಡಿಕೋತ…. ಚೀರ್‍ಯಾಡಿಕೋತ…. ಹಣಿ ಹಣಿ ಬಡಕೋತ, ಭಕ್ತಪ್ರಲ್ಹಾದ ನಾಟಕದಾಗಿನ ಹಿರಣ್ಯಕಶಿಪುನ್ಹಂಗ ರಂಗದ ಇನ್ನೊಂದು ಭಾಗಕ್ಕೆ ನಿಷ್ಕ್ರಮಿಸಿದರು. ಇಷ್ಟೆಲ್ಲ ಯಾಕ ಅಂದ್ರ ಅದೊಂದು ಸೊಟ್ಟ ಮಾರಿ ಗಣಿತದಾಗ ಜೀರೋ ಬಿದ್ದಿದ್ದಕ್ಕ. ಹಂಗ ನೋಡಿದರ ಅದೊಂದೇ ಸಲ ನನಗೆ ಜೀರೋ ಬಿದ್ದಿದ್ದು, ಅದಕ್ಕೂ ಮೊದಲೆಲ್ಲ ಛೊಲೋತನ್ಯಾಗ ಏಳು… ಎಂಟು… ಮಾರ್ಕ್‌ ಬೀಳತಿದ್ದವು.

ಏನೇ ಇರಲಿ, ಅವತ್ತಿನ ನಮ್ಮ ಪಿತಾಶ್ರೀಯವರ ಹಿರಣ್ಯಕಶಿಪುನ ಆರ್ಭಟಕ್ಕೆ ಖಂಬದ ಹಿಂದ ನಾವೂ ಖಂಬದ ಒಳಗ ಸಾಕ್ಷಾತ್‌ ನರಸಿಂಹಸ್ವಾಮಿಯೂ ಗಡ ಗಡ ಗಡ ಗಡ ನಡುಗುತ್ತ ಕುಳಿತದ್ದು ಸುಳ್ಳಲ್ಲ.

ಆವತ್ತ ಸ್ವಲ್ಪ ಹೊತ್ತಾದ ಮ್ಯಾಲ ಯಂದೂ ನನಗೆ ಏನೂ ಅನ್ನದ ನಮ್ಮ ಅವ್ವ “ಶೀನಪ್ಪ ನೀನರ ಹಿಂಗ್ಯಾಕ ಮಾಡತೀಯೋ? ನಿನ್ನ ಸಲುವಾಗಿ ಎಷ್ಟು ಕೆಟ್ಟ ಕೆಟ್ಟ ವಾಗತ್ಯದ ಮಾತೆಲ್ಲ ಕೇಳಬೇಕಾಗತದಲ್ಲೋ ನನಗೆ? ಸ್ವಲ್ಪ ಛೋಲೋತ್ನಾಗಿ ಓದಿಕೋಬಾರದೇನೋ…” ಎನ್ನುತ್ತಲೇ ನಾವೂ ತಂದೆಯಷ್ಟೇ ಕ್ರುದ್ಧರಾಗಿ, “ಸುಮ್ಮನಿರವ್ವಾ, ನಿನಗೇನು ತಿಳೀತದ… ಈ ಸಮಸ್ತ ಇಳಾ ತಳದೊಳಗ …. ಭೂಮಂಡಲದಲ್ಲಿ…. ಧರಿತ್ರಿಯ ಮ್ಯಾಲ………Under the sun on the earth ………………..ಆ ಅನಂತಕೋಟಿ ಬ್ರಹ್ಮಾಂಡ ನಾಯಕನು ಸೃಷ್ಟಿಸಿದ ಈ ಮಾನವ ಪ್ರಪಂಚದಲ್ಲಿ ನನಗೊಬ್ಬನಿಗೇ ಏನು ಈ ಶೂನ್ಯ ಸಂಪಾದನೆಯಾದದ್ದು” ಎಂದು ಆಕ್ರೋಶಿಸಿದ್ದೆವು.

ಅಂತೂ ಪಿತಾ- ಪುತ್ರ ಭಾಷಾಡಂಬರದ ಈ ಮಸ್ತಿಯಲ್ಲಿ, ವಾಗ್ವೈಖರಿಯ ಈ ಕುಸ್ತಿಯಲ್ಲಿ ಪಾಪ ನಮ್ಮ ತಾಯಿ ನುಗ್ಗು ನುಗ್ಗಾಗಿ ಹೋಗಿದ್ದರು.

ನಮ್ಮ ತಂದೆಯಿಂದ ನನಗೇನು ಬಳುವಳಿಯಾಗಿ ಬಂತೋ ಗೊತ್ತಿಲ್ಲ. ಆದರ ಈ ಪದಲಾಲಿತ್ಯದ ಮೋಹ, ಶಬ್ದಾಡಂಬರದ ಈ ಗುಡಗುಡಾಟ ಮಾತ್ರ ಅವರದ್ದೇ.

ತಮ್ಮದೊಂದೇ ರೌದ್ರ ಕ್ರೌರ್ಯ ಸಾಲದೇನೋ ಎಂಬಂತೆ, ನಮ್ಮ ತಂದೆ ಆಗೀಗ ಶಾಲೆಗೆ ಬಂದು ಮಾಸ್ತರಿಗೆ ಸಹಿತ “ನನ್ನ ಮಗಾ ಅಂತ ಅನಮಾನ ಮಾಡಬ್ರಾಡ್ರೀ. ತಪ್ಪ ಮಾಡಿದಾ ಅಂದ್ರ ಇಕ್ಕರಿಸಿರಿ… ಏನರ ಮಾಡಿದ ಅಂದ್ರ ಇಕ್ಕರಿಸಿರಿ….” ಅಂತ ಬಜಾಯಿಸಿ ಹೋಗಿದ್ದರು. ಕೇಳಬೇಕ? ಮೊದಲ ಮಂಗ್ಯಾನಂತಹ ಮಾಸ್ತರಗೋಳ ಅವರು…. ಮುಂದ ಮುಂದ ಕೇವಲ ಇವನ ಮಗ…. ಈ ತಿರಸಷ್ಟನ ಮಗ ಅಂತ ತಪ್ಪ ಮಾಡಲಿ ಬಿಡಲಿ ಇಕ್ಕರಸಲಿಕ್ಕೆ ಹತ್ತಿದರು.

ಯಾರಿಗೆ ಹೇಳೋದದ? ಹಿಂಗ ಅನುಭವಿಸಿದಿವಿ. ಆವಾಗಿನ ಕಾಲಕ್ಕ ಈಗಿನ ಹಂಗ ಪ್ರಾಣಿ ದಯಾ ಸಂಘ ಸಂಸ್ಥೆಗಳೂ ಇರಲಿಲ್ಲ.

ಒಮ್ಮೊಮ್ಮೆ ನಮ್ಮ ತಂದಿನ್ನ ನೋಡಿ ನನಗೆ ಕೆಟ್ಟ ಅನಸತಿತ್ತು ಪಾಪ! ಅವರು ತಾವು ನೆಚ್ಚಿದ ಆದರ್ಶಗಳಿಗೆ, ನಂಬಿದ ತತ್ವಗಳಿಗೆ ನಿಷ್ಟರಾಗಿ ಬದುಕಲಿಕ್ಕೆ ಒದ್ದ್ಯಾಡತಿದ್ದರು. ಆದರೆ ಸುಳ್ಳು ಮೋಸ, ವಂಚನೆಯಿಂದ ತುಂಬಿದ ಈ ನಿತ್ಯದ ಬದುಕಿನ ಜತೆಗೆ ಅವರಿಗೆ ಹೊಂದಾಣಿಕೆ ಮಾಡಿಕೊಳ್ಳಲಿಕ್ಕೆ ಬರಲೇ ಇಲ್ಲ. ಈ ಸುಮಾರಿಗೇ ಅವರ ಅಣ್ಣ ತಮ್ಮಂದಿರು- ನಮ್ಮ ಕಕ್ಕಂದಿರು – ಸಹಿತ ಕೈಕೊಟ್ಟರು. ಅತ್ಯಂತ ಸಣ್ಣತನ ಮಾಡಿ ಧೂರ್ತತನ ಮಾಡಿ ಅವರ ಆಸ್ತಿ ಪಾಸ್ತಿಯೆಲ್ಲ ಎಗರಿಸಿಬಿಟ್ಟರು. ಆಸ್ತಿ ಪಾಸ್ತಿ ಕಳಕೊಂಡದ್ದಕ್ಕ ಅವರಿಗೆ ಕೆಟ್ಟ ಅನಸಲಿಲ್ಲ. ಆದರ ಮನುಷ್ಯರೆಂಬುವರ, ವಿಶೇಷತಃ ತನ್ನವರೆಂಬುವವರ ಸಣ್ಣತನ ನೋಡಿ, ಕ್ಷುದ್ರತನ ನೋಡಿ ಆವರು ಗಾಬರಿಯಾಗಿ ಬಿಟ್ಟಿದ್ದರು. ಒಮ್ಮೊಮ್ಮೆ ತಾವೊಬ್ಬರೇ ಇದ್ದಾಗ, “ಪಂಚ ಮಹಾಭೂತಯೆಲ್ಲಾ ಸುಳ್ಳು, ಮನಿಶ್ಯಾನ್ನ ಬರೇ ಮಣ್ಣಿನಿಂದ ಮಾಡ್ಯಾರ… ಬರೇ ಮಣ್ಣು…. ಆಕಾಶ…. ಕರುಣೆಯ ಆಪ ಯಲ್ಲಾ ಎಲ್ಲ್ಯದ ಬರೇ ಮಣ್ಣು ಮಣ್ಣು… ಪಂಚ ಮಹಾಭೂತಗಳನ್ನುಳಿದು ಒಂದು ಅಕರಾಳ ವಿಕರಾಳ ಆರನೇ ಭೂತ ಆಗ್ಯಾನ ಮನಶಾ ಆರನೇ ಭೂತ” ಎಂದು ತಮ್ಮಷ್ಟಕ್ಕೇ ತಾವೇ ಒಟಗುಡುತಿದ್ದರು. ಮುಗ್ಧ ಹೆಂಡತಿ, ಅಬೋಧ ಮಕ್ಕಳು ಹಿಂಗಾಗೀ ಅವರ ಭಾವನಾ ಪ್ರಪಂಚದಾಗ ಯಾರ ಜತೆಗೂ ಹಂಚಿಕೊಳ್ಳಲಾಗದ ಒಂದು ಬೃಹತ್ ಶೂನ್ಯತೆ ಅವರಿಸ ತೊಡಗಿತ್ತು. ಒಂದು ತರಹದ ಪರದೇಶೀತನ ಅವರ ಮುಖದ ಮ್ಯಾಲ ಹೊಡೀತಿತ್ತು. ಅಂತರಂಗದ ಅವ್ಯಕ್ತ ಭೀತಿಗೆ, ಬೆಂಬಿಡದ ಪರದೇಶೀತನದ ಭಾವನೆಗೆ ಬೇಸತ್ತು. ಮೌಲ್ಯ ರಹಿತ ಸಮಾಜದಲ್ಲಿ ಬದುಕಲಿಕ್ಕಾಗದೇ, ಕ್ರುದ್ಧರಾಗಿ ಅವರು ಇಡೀ ವಿಶ್ವದ ತಲೆ ಬೋಳಿಸಲಿಕ್ಕೆ ಹೊರಟಂತಿತ್ತು. ಒಂದು ದೃಷ್ಟಿಯಿಂದ ಅವರೊಬ್ಬ Angry old man !
ನಮ್ಮ ತಂದೆಯವರು ಯಾವಾಗಲೂ ಸಿಡಿಮಿಡಿ ಸ್ವಭಾವದವರು, ತಿರಸಷ್ಟರು ಇದ್ದರು ನಿಜ. ಆದರೆ ಅವರ ಮನದಲ್ಲಿ ಮಮತೆಯ ವಾತ್ಸಲ್ಯದ ಸೆಲೆ ಬತ್ತಿ ಹೊಗಿತ್ತಂತಲ್ಲ. ಆದರೆ ಅವರ ಮಮತೆ, ವಾತ್ಯಲ್ಯಗಳು ಕೂಡ ಅತ್ಯುಗ್ರ ರೂಪದಲ್ಲಿಯೇ ಪ್ರಕಟವಾಗುತ್ತಿದ್ದವು.

ಒಮ್ಮೆ ನಾನು ಶಾಲೆಯಲ್ಲಿ ಯಾವದೋ ಆಟದಲ್ಲಿ ಬಿದ್ದು ಕೈಮುರಿದುಕೊಂಡು ಬ್ಯಾಂಡೇಜು ಕಟ್ಟಿಕೊಂಡು ಮನೆಗೆ ಬಂದು ನರಳುತ್ತ ಮಲಗಿದ್ದೆ. ಸುದ್ದಿ ತಿಳಿದು ಓಡೋಡಿ ಬಂದ ನಮ್ಮ ತಂದೆ ನನ್ನ ಹಾಸಿಗೆಗೆ ಧಾವಿಸಿ “ನೀ ಅಷ್ಟು ಸುಖದಿಂದ ಇದ್ದದ್ದನ್ನು ನೋಡಿ, ತಲೀ ಬೋಳಿಸಿಕೊಂಡು ಸಾಯಬೇಕಂತೇನಲ್ಲೊ….” ಎಂದು ಹಣೆ ಹಣೆ ಚಚ್ಚಿಕೊಂಡಿದ್ದರು ಆತಂಕದಲ್ಲಿ. ಅಂತಹ ನೋವಿನಲ್ಲೂ ಸಹ ಅಂದು ಅವರು ನನ್ನನ್ನು ಏಕವಚನದಲ್ಲಿ ಸಂಬೋಧಿಸಿದ್ದನ್ನು ಕಂಡು ಒಂದು ವಿಚಿತ್ರ ತೃಪ್ತಿಯನ್ನು ಅನುಭವಿಸಿದ್ದೆ.

ಅಂತೂ ಶಾಲೆಯ ಓದಿನಲ್ಲಿ, ಬಾಲ್ಯದ ಆಟ ಪಾಠಗಳಲ್ಲಿ ಸರೋಜಕ್ಕನ ಜತೆ ಜಗಳಾಟದಲ್ಲಿ ದಿನ ಕಳೆದದ್ದೇ ತಿಳಿಯಲಿಲ್ಲ.

ಒಂದು ದಿನ ಇದ್ದಕ್ಕಿದ್ದಂತೆ ದೊಡ್ಡವನಾಗಿ graduation ಮುಗಿಸಿ ಮುಂಬಯಿಗೆ ಹೊರಟು ನಿಂತು ಬಿಟ್ಟಿದ್ದೆ. ಆಗಿನ ದಿನದಾಗ ಸಾಲೀ ಕಾಲೇಜಿನ ಓದು ಮುಗಿಯೂತಲೆ ಯಲ್ಲಾರೂ ಬುದು ಬುದು ಅಂತ ಮುಂಬಯಿಗೆ ಹೋಗಿ ಬಿಡುತ್ತಿದ್ದರು. ಹುಟ್ಟಿಸಿದ ದೇವರು ಹುಲ್ಲು ಮೇಯಿಸಿದರೂ ಅದನ್ನ ಮುಂಬಯಿಯೊಳಗ ಮೇಯಿಸತಿದ್ದ. ಹೀಂಗಾಗಿ ಆ ಬುದು ಬುದುದೊಳಗ ನಾನೂ ಒಬ್ಬಾವ ಬುದು ಆಗಿ ಬುದ್ದು ಆಗಿ ಮುಂಬಯಿಗೆ ಹೊರಟಿದ್ದೆ.

೧೯೫೯ ಮೇ ತಿಂಗಳಿನ ೨೯ನೇ ತಾರೀಖು ನನಗೆಂದಿಗೂ ಮರೆಯದ ದಿನ. ಅವತ್ತ ನಾ ಧಾರವಾಡದ ತಾಯಿಗೆ ಶರಣು ಹೊಡೆದಿದ್ದೆ. ನನ್ನ ಜೀವನದ ಬಾಲ್ಯಕಾಂಡ ಮುಗಿದು ಸುಂದರಕಾಂಡನೋ ಇಲ್ಲ ಬಂದರ ಕಾಂಡನೋ ಯಾವುದೋ ಒಂದು ಹೊಸ ಅಧ್ಯಾಯ ಪ್ರಾರಂಭ ಆಗೋದಿತ್ತು.

ಅವತ್ತ ಮಧ್ಯಾಹ್ನ ೩.೫೮ಕ್ಕ ಪೂನಾ ಮೇಲ್‌ ಧಾರವಾಡ ಸ್ಟೇಶನ್ ಬಿಡೋದಿತ್ತು. ಮರುದಿವ್ಸ ಮುಂಜಾನೆ ಪುಣೆದಾಗ ಗಾಡಿ ಬದ್ಲ ಮಾಡಿ ಮುಂಬಯಿಗೆ ಹೋಗಬೇಕು. ಕಳೆದ ಏಳೆಂಟು ದಿನಗಳಿಂದ ಮನೆಯಲ್ಲಿ, ಗೆಳೆಯರ ಬಳಗದಲ್ಲಿ ಅದ ಮಾತ ನಡದಿತ್ತು. ‘ಗಾಡಿ ಹ್ಯಾಂಗ ಹತ್ತಬೇಕು…. ಪುಣೆದಾಗ ಪ್ಲ್ಯಾಟಫಾರ್ಮ್‌ ಹ್ಯಾಂಗ ಬದಲ ಮಾಡಬೇಕು… ಪುಣೇದ ಹಮಾಲರು ಭಾಮಟ್ಯಾಗೋಳು ಇರತಾರ. ಅವರ ಸಂಗ್ತಿ ಹೆಂಗ ಜಿಕೇರಿ ಮಾಡಬೇಕು. ಮುಂಬಯಿ ವ್ಹಿ.ಟಿಯ ಸ್ಟೇಶನದೊಳಗ ಯಂಕಣ್ಣ ಕಾಕಾ ಕರೀಲಿಕ್ಕೆ ಬಂದಿದ್ದಿಲ್ಲಾ ಅಂದ್ರ ಏನ ಮಾಡಬೇಕು… ಏನ ಮಾಡಬಾರದು…’ ತಲೀ ಚಿಟ್ಟ ಹಿಡಿದುಹೋಗಿತ್ತು. ಅವ ಅವ ಮಾತ ಕೇಳಿ ಕೇಳಿ; ಮೊನ್ನೆಯಿಂದ ಯಾಕೋ ನಮ್ಮ ಪಿತಾಶ್ರೀಯವರೂ ಸ್ವಲ್ಪ ಮೆತ್ತಗಾಗಿದ್ದರು. ನನಗೆ ಕೇಳಸೋ ಹಂಗ ನಮ್ಮ ತಾಯಿಗೆ, “ವ್ಯಾಳ ವ್ಯಾಳ್ಯಾಕ್ಕ ಸರಿಯಾಗ ಊಟಾ ಮಾಡಲಿಕ್ಕೆ ಹೇಳ್ರಿ… ಪ್ರಕೃತಿ ಸಂಭಾಳಿಸಲಿಕ್ಕೆ ಹೇಳ್ರಿ…. ಏನರ ಅನವು ಅಪತ್ತು ಬಂದ್ರ ಪತ್ರ ಬರೀಲಿಕ್ಕೆ ಹೇಳ್ರಿ ಯಷ್ಟ ತ್ರಾಸಾದರೂ ಚಿಂತಿಲ್ಲ ರೊಕ್ಕ ಕಳಸ್ತೇನಿ…” ಅಂತ ಪದೇ ಪದೇ ಹೇಳತಿದ್ದರು.

ಅವ್ವ ಒಂದು ಬಿಳಿಯ ಅಲೀಮನಿ ಡಬ್ಬೀ ತುಂಬ ಹೆಸರಿಟ್ಟಿನ ಉಂಡಿ ಮಾಡಿ ಕೊಟ್ಟಿದ್ದಳು. ಸರೋಜಕ್ಕ ದೀಪಾವಳೀ ಆರತಿ ಒಳಗ ಕೂಡಿಸಿದ್ದು ಹತ್ತು ರೂಪಾಯಿ ನನ್ನ ಕೈಯಾಗ ಕೊಟ್ಟು ಒಂದು ಜತೆ ಲೋಲಕ್ ತರಲಿಕ್ಕೆ ಹೇಳಿದ್ದಳು.

ಅವತ್ತ ಧಾರವಾಡ ಸ್ಟೇಶನ್‌ಕ್ಕ ನನ್ನ ಬೀಳ್ಕೊಡಲಿಕ್ಕೆ ಅಂತ ನನ್ನ ಅನೇಕ ಗೆಳೆಯರು, ಸರೋಜಕ್ಕ ಹಾಗೀ ಆಕಿ ಕೆಲವು ಗೆಳತಿಯರು ಬಂದಿದ್ದರು. ನನ್ನ ಅವ್ವ ಅಪ್ಪ ಮಾತ್ರ ಮನಿಯಿಂದನ ಆಶೀರ್ವಾದ ಮಾಡಿ ಕಳಿಸಿದ್ದರು. ಪ್ಲ್ಯಾಟ್‌ಫಾರಂ ಮ್ಯಾಲೆ ಸರೋಜಕ್ಕನ ಗೆಳತೇರು ಒಂದು ಕಡೆ, ನಾವೆಲ್ಲ ಗಂಡು ಹುಡುಗೂರು ಒಂದು ಕಡೆ ಗುಂಪು ಗುಂಪಾಗಿ ನಿಂತು ಹರಟಿ ಹೋಡೀಲಿಕ್ಕೆ ಹತ್ತಿದ್ವಿ. ಗಾಡೀ ಬರಲಿಕ್ಕೆ ಇನ್ನೂ ಹತ್ತು ಹದಿನೈದು ಮಿನೀಟು ಇತ್ತು.

“ಮುಂಬಯಿ ಒಳಗ ಯಾವ್ಯಾವ ಫಿಲ್ಮಿ ಸ್ಟಾರ್ ಯೆಲ್ಲೆಲ್ಲಿ ಇರತಾರ… ಸ್ಕೂಲ್‌ ಆಫ್ ಇಕಾನೊಮಿಕ್ಸದಾಗ ಎಂ.ಎ. ಮಾಡಿದರ ಹೆಂಗ… ಮರಾಠಿ ಹುಡಿಗೇರು ಭಾಳ ನಖರಾ ಮಾಡತಾರ…” ಇತ್ಯಾದಿ ಇತ್ಯಾದಿ ನಮಗರಿವಿಲ್ಲದಂತೆಯೇ ಹರಟೆಗೆ ರಂಗು ಏರಲಿಕ್ಕೆ ಹತ್ತಿತ್ತು. ಅಷ್ಟರಾಗ A.S.M ಬಂದು ಕಡೀ ಘಂಟೆ ಹೊಡದಾ. ನನ್ನ ಗೆಳೆಯರು ಒಂದೊಂದ ಬ್ಯಾಗ ಎತ್ತಲಿಕ್ಕೆ ಹತ್ತಿದರು. ಸರೋಜಕ್ಕ ಬಂದು ‘ಇನ್ನ ಮ್ಯಾಲ ಸಿಗರೇಟು ಸೇದೂದುಲ್ಲ’ ಅಂತ ಆಣಿ ಮಾಡಿಸಿಕೊಂಡಳು. ಆಕೀ ಗೆಳತಿಯರು ‘ಶೀನೂ ದೀಪಾವಳಿಗೆ ಬಾ ಪಗಡಿ ಆಡೋಣ’ ಅನ್ನಲಿಕ್ಕೆ ಹತ್ತಿದ್ದರು. ದೂರ ನವಲೂರ ತಿರುವಿನ ಹತ್ತಿರ ಪೂನಾ ಮೇಲಿನ ಝಕ್ ಝಕ್ ಹೊಗೆ ಕಾಣಿಸಲಿಕ್ಕೆ ಹತ್ತಿತ್ತು. ಅಷ್ಟರಾಗ ಪಾಟೀಲ ಪರಮೇಶಿ ನನ್ನ ಹತ್ತಿರ ಬಂದು “ಶೀನೂ ನಿಮ್ಮ ಫಾದರ್‌ ಬರಲಿಕ್ಕೆ ಹತ್ಯಾರ ನೋಡು” ಅಂದ. ನಾ ಗೇಟಿನ ಕಡೆ ನೋಡಿದೆ.

ನಮ್ಮ ಅಪ್ಪ ಧೋತರ ಎತ್ತಿ ಹಿಡಿದು ದಾಪುಗಾಲು ಹಾಕುತ್ತ ಏದುಸಿರು ಬಿಟಗೋತ ಧಾವಿಸಿ ಧಾವಿಸಿ ಗೇಟಿನೊಳಗ ಬರಲಿಕ್ಕೆ ಹತ್ತಿದ್ದರು. ನಾನು ಲಗುಬಗೆಯಿಂದ ಅವರ ಬಳಿ ಧಾವಿಸಿ “ಅಪ್ಪಾ ಈ ಬಿಸಿಲಾಗ ನೀವ್ಯಾಕ ಬರಲಿಕ್ಕೆ ಹೋಗಿದ್ರಿ?” ಎನ್ನುತ್ತಿದ್ದಂತೆಯೇ ಅವರು ಬೆವರೊರೆಸಿಕೊಳ್ಳತ್ತಾ “ಉಶ್ಯಪ್ಪ ಎಲ್ಲಿ ಗಾಡಿ ಹೋಗಿ ಬಿಟ್ಟಿರತದೋ ಅನಕೋತ ಓಡೋಡಿ ಬಂದೆ” ಅನಕೋತ ತಮ್ಮ ಕೋಟಿನ ಕಿಶೇಯಿಂದ ನೂರರ ಎರಡು ನೋಟು ತಗದು ನನ್ನ ಕೈಯಾಗ ಜುಲುಮಿಯಿಂದ ಇಟ್ಟರು. ನಾನು “ಕೊಟ್ಟಿಯಲ್ಲ ಮತ್ಯಾಕ” ಎಂದು ಪ್ರತಿಭಟಿಸುತ್ತಿದ್ದಂತೆಯೇ “ಇರಲಿ ಇಟಗೋ ಬೇಕಾಗತದ…” ಅನಕೋತ ನನ್ನೆರಡೂ ಕೈ ಕ್ಷಣ ಹೊತ್ತು ಘಟ್ಟಿ ಬಿಗಿ ಹಿಡಿದು ನನ್ನ ಮುಖದ ಮ್ಯಾಲೆಲ್ಲ ಕಣ್ಣಾಡಿಸಿದರು.

srinivasa vaidyaನಾನು ಬಗ್ಗಿ ನಮಸ್ಕಾರ ಮಾಡಿ ಅವರ ಪಾದಸ್ಪರ್ಶ ಮಾಡಿದೆ. ಕೂಡಲೇ ಅವರು ಎರಡೂ ಕೈಲೆ ನನ್ನ ಬಾಚಿ ಎಬ್ಬಿಸಿ ನನ್ನ ಬೆನ್ನ ಮೇಲೆ ಕೈಯಾಡಿಸಿ, ಹೌದೋ ಅಲ್ಲೋ ಅನ್ನುವಷ್ಟು ನನ್ನನ್ನು ತಬ್ಬಿ ಹಿಡಿದು, “ನಡಿ ಇನ್ನ ಗಾಡೀ ಬಿಟ್ಟೀತು…” ಅನಕೋತ ನನ್ನ ದೂರ ಮಾಡಿದರು. ಅಷ್ಟರಾಗನ ಪರಮೇಶ ಮತ್ತ ಸರೋಜಕ್ಕ ಓಡೋಡಿ ಬಂದು “ಶೀನೂ ಗಾಡಿ ಬಿಡತದ ನಡಿ” ಅಂತ ನನ್ನ ಓಡಿಸಿದರು. ನಾನು ಅವರ ಜತೆ ಜತೆಯಲ್ಲೇ ಓಡುತ್ತ ಒಂದು ಕ್ಷಣ ನಿಂತು ಹೊರಳಿ ನೋಡಿದೆ. ನೋಡಬಾರದಿತ್ತು ನೋಡಿದೆ.

ನಮ್ಮ ಹಿರಣ್ಯಕಶಿಪು ತಂದೆ, ಧಾರವಾಡ ಸ್ಟೇಶನ್‌ದ ಬೃಹತ್ ಗಾತ್ರದ ಲೋಹದ ಕಂಬಕ್ಕೆ ಆತುಗೊಂಡು ನಿಂತು, ಬಲಗೈಯಿಂದ ಧೋತರ ಚುಂಗಿನಿಂದ ಕಣ್ಣೊರಸಿಕೊಳ್ಳುತ್ತ ತಮ್ಮ ನಡುಗುವ ಎಡಗೈ ಮೇಲತ್ತಿ ನನಗೆ ವಿದಾಯ ಹೇಳುತ್ತಿದ್ದರು. ಅವರ ಮುಖದ ಮ್ಯಾಲೆ ಇನ್ನಿಲ್ಲದ ದೈನ್ಯ ಒಟ್ಟುಗೂಡಿ ಒಂದು ತೆರದ ಅನಾಥ ಪರದೇಶಿ ಕಳೆ ಸುರೀಲಿಕ್ಕೆ ಹತ್ತಿತ್ತು. ಅವರು ಒಮ್ಮೆಲೆ ಒಂದಿಪ್ಪತ್ತು ವರುಷ ಹೆಚ್ಚಿದ ನಿರ್ವಿಣ್ಣ, ನಿತ್ರಾಣ ಮುದುಕನಂತೆ ಕಾಣಸಲಿಕ್ಕೆ ಹತ್ತಿದ್ದರು.

ನನ್ನ ಜೀವನದ ಪ್ರಥಮೋಧ್ಯಾಯದ ಸಮಾಪ್ತಿ ಕಾಲದಲ್ಲಿ ಅವತ್ತ ಧಾರವಾಡ ಬಿಡುವಾಗಿನ ತೀರ ಕೊನೆಯ ಕ್ಷಣದಲ್ಲಿ, ನಾನು ನನ್ನ ಕಣ್ಣುಗಳೊಳಗ, ಮನಸ್ಸಿನೊಳಗ, ಹೃದಯದೊಳಗ, ನನ್ನ ಹೆತ್ತ ತಂದೆಯ ಈ ಕರುಣಾರ್ದ್ರ, ದೈನಾಸ ಮೂರ್ತಿಯನ್ನು ತುಂಬಿಕೊಂಡು ಊರು ಬಿಟ್ಟೆ.

ಗಾಡಿ ಬಿಟ್ಟಿತು. ಗಾಡೀ ಜತೆಗೇನ ಓಡೋಡಿ ಬಂದು ಟಾ…ಟಾ ಹೇಳಿಕೋತ ಗೆಳೆಯರು ಹಿಂದುಳಿದರು. ಕಣ್ಣು ತುಳುಕಿಸುತ್ತ ನಿಂತಿದ್ದ ಸರೋಜಕ್ಕ, ಅಕೀ ಗೆಳತಿಯರು ದೂರಾದರು. ಧಾರವಾಡದ ಸ್ಟೇಶನ್ನು, ಬಾರಾಕೋಟ್ರಿ, ಯುನಿವರ್ಸಿಟಿ ಲೆವಲ್ ಕ್ರಾಸಿಂಗ ಯಲ್ಲಾ ಹಿಂದ ಹಿಂದ ಸರದವು, ಆದರ ಪ್ಲ್ಯಾಟ್‌ಫಾ‍ರ್ಮಿನ ಮೇಲೆ ಖಂಬಕ್ಕೊರಗಿ ಧೋತರ ಚುಂಗಲೇ ಕಣ್ಣೊರಿಸಿಗೋತ ನಿಂತ ನಮ್ಮ ಮುದಿ ತಂದೆ ಮಾತ್ರ ನನ್ನ ಜತೆಗೇ ಬಂದು ಬಿಟ್ರು.

ಆವತ್ತ ರೇಲ್ವೆ ಡಬ್ಬಿಯೊಳಗ ತರ ತರದ ಜನ ತುಂಬಿದ್ದರು. ಬಿಕ್ಕೆಯವರೂ, ಹಾಕರ್ಸೂ ತಮ್ಮ ಕಂಠ ಶೋಷಣೆ ನಡೆಸಿದ್ದರು. ಕಿಟಕಿ ಹೊರಗ ನಾಗಲಾವಿ, ಕಂಬಾರ ಗಣವಿ ಆಚೆಗೆ ಅಳ್ನಾಣಾವರದ ಜಂಗಲ್ಲು ಚಾಚಿಕೊಳ್ಳಲಿಕ್ಕೆ ಹತ್ತಿತ್ತು. ನನಗ ಇದ್ಯಾವದರ ಕಡೆನೂ ಲಕ್ಷ ಇದ್ದಿಲ್ಲ. ಧಾರವಾಡ ಸ್ಟೇಶನ್ ಮ್ಯಾಲ ಬಿಟ್ಟು ಬಂದ ಆ ಮುದಿ ಜೀವಕ್ಕ ನಾನು ಆರ್ತನಾಗಿ, ದೀನನಾಗಿ, ಕೇಳಿಕೊಳ್ಳಲಿಕ್ಕೆ ಹತ್ತಿದ್ದೆ.

“ಅಪ್ಪಾ..ಅಪ್ಪಾ.. ಈ ದೈನ್ಯ ಈ ಕಾರುಣ್ಯ ನಿಮಗ ಒಪ್ಪುದಿಲ್ಲಪ್ಪ… ನೀವು ಮೊದಲಿನ ಹಂಗ ಉಗ್ರರಾಗಿಯೇ ಇರಬೇಕಪ್ಪ… ನೀವು ಹಿಂಗ ಸಣ್ಣ ಮಾರಿ ಮಾಡಿ ಕಣ್ಣೀರ ಹಾಕಿದ್ರ ಅದು ಮನೆತನಕ್ಕೆ ಒಳ್ಳೆಯದಲ್ಲಪ್ಪಾ… ನನ್ನ ಬಗ್ಗೆ ಏನೇನೂ ಚಿಂತಿ ಮಾಡಬ್ಯಾಡಪ್ಪ… ನಾ ಹೊತ್ತ ಹೊತ್ತಿಗೆ ಊಟ ತಿಂಡಿ ಮಾಡಿಕೋತ ಪ್ರಕೃತಿ ಸಂಭಾಳಿಸತೇನಪ್ಪಾ… ಕಾಳಜೀ ಮಾಡಬ್ಯಾಡಪ್ಪಾ… ಯಾವುದೇ ದೃಷ್ಟಿಯಿಂದ ನಿನ್ನ ಹೆಸರಿಗೆ ಕಳಂಕ ಬರದಂತೆ ಮನೆತನದ ಮರ್ಯಾದಿಗೆ ಧಕ್ಕೆ ಬರದಂತೆ ಬದಕತೇನಪ್ಪಾ… ನಿಮ್ಮಿಬ್ಬರನೂ ಮುಪ್ಪಿನ ಕಾಲಕ್ಕೆ ಗಿಳಿ ಸಾಕಿಧಾಂಗ ಸಾಕತೇನಪ್ಪ… ಅಕ್ಕನ ಲಗ್ನ ಮಾಡೋಣಪ್ಪ… ನಾ ದುಡ್ಡು ಕಳಸತೇನಪ್ಪ.. .. ನೀ ಅಗದೀ ಏನೇನೂ… ಬಿಲ್ಕೂಲ್‌ ಚಿಂತಿ ಮಾಡಬ್ಯಾಡಪ್ಪ…. ನಾ ಮುಂಬಯಿಗೆ ಹೋದ ಕೂಡಲೇ ತಲಿ ಬೋಳಸಿಕೋತೇನಪ್ಪಾ…”

************

ಅದೆಲ್ಲ ಹಳೇ ಕಥಿ. ಸರೋಜಕ್ಕನ ಲಗ್ನ ಆತು. ಆಕಿನ್ನ ಹುಬ್ಬಳ್ಳಿಗೆ ಕೊಟ್ಟಿವಿ. ಈಗ ಅವರಿಬ್ಬರೂ ಗಂಡ ಹೆಂಡತಿ ಪರದೇಶಕ್ಕ ಹೋಗಿ ಕೂತು ಬಿಟ್ಟಾರ. ಸುದ್ದಿ ಇಲ್ಲ ಸುಖ ದುಃಖ ಇಲ್ಲ. ಮುಂದ ಎಂಟ ಹತ್ತು ವರುಷದಾಗ ತಾಯಿ ತಂದಿ ಇಬ್ಬರೂ ಹೋಗಿ ಬಿಟ್ಟರು. ಈಗ ನಾನೂ ನನ್ನ ಹೇಣ್ತಿ ಮಕ್ಕಳು ಯಲ್ಲಾರೂ ಕೂಡಿ ಹಿರಿಯರ ಶ್ರಾದ್ಧ ಕರ್ಮಗಳನ್ನು ಮಾಡತೀವಿ. ಮಾಘ ಮಾಸದ ಶುಕ್ಲಪಕ್ಷದ ದ್ವಾದಶಿ ನಮ್ಮ ತಂದಿ ಶ್ರಾದ್ಧ. ವೈದಿಕರು ಏನೇನೋ ಮಣ ಮಣ ಮಂತ್ರ ಅಂತಾರ. ಶ್ರದ್ದೆಯಿಂದ ಮಾಡೋದ ಶ್ರಾದ್ದ ಅಂತಾರ. ಎಳ್ಳು ನೀರಿನ ತರ್ಪಣ ಬಿಡಿರಿ ಅಂತಾರ.

ಪ್ರತಿ ಮಾಘ ಮಾಸ ಶುಕ್ಲ ಪಕ್ಷದ ದ್ವಾದಶಿ ದಿವಸ ಧಾರವಾಡ ಸ್ಟೇಶನದೊಳಗ ಖಂಬಕ್ಕೊರಗಿ ಧೋತರ ಚುಂಗಲೇ ಕಣ್ಣೊರಸಿಕೊಳತಿದ್ದ ನಮ್ಮ ತಂದೀ ನೆನಪು ತೀವ್ರವಾಗಿ ಬರತದ. ಅವರನ್ನ ನೆನೆಯುವದೇ ನಾನು ತೋರುವ ಶ್ರದ್ಧೆ. ಆಗ ನನ್ನ ಕಣ್ಣಂಚಿನಲ್ಲಿ ತುಳುಕುವ ಎರಡು ಹನಿಯೇ ತರ್ಪಣ.