ಇದೇ ಶನಿವಾರ ಮೇ ೨೨ರ ಮುಂಜಾನೆ ನಾನು ನನ್ನ ಹೆಂಡತಿ ನಿರ್ಮಲಳಿಂದ ಫೋನ್ ಕಾಲ್ ನಿರೀಕ್ಷಿಸುತ್ತಿದ್ದೆ; ಹೈದರಾಬಾದ್ ನ ನಮ್ಮ ವಸತಿಯಲ್ಲಿ ಅಂತಾರಾಷ್ಟ್ರೀಯ ಕಾಲಿಂಗ್ ಅನುಕೂಲತೆ ಇದೆ, ಆದ್ದರಿಂದ ಹೆಚ್ಚಾಗಿ ನಿರ್ಮಲ ನನಗೆ ಫೋನ್ ಮಾಡುವುದು ಪದ್ಧತಿ. ಮೇ ೨೨ ವೈಯಕ್ತಿಕವಾಗಿ ನಮಗಿಬ್ಬರಿಗೂ ನೆನಪಿನ ದಿನ: ನಮ್ಮ ಮದುವೆ ನಡೆದುದು ಇದೇ ದಿನದಂದು. ನಿರ್ಮಲಳ ಕರೆಯೇನೋ ಬಂತು; ಆದರೆ ಅವಳು ಮೊದಲು ಹೇಳಿದ್ದೇ ಮಂಗಳೂರಿನಲ್ಲಿ ಅಂದು ನಸುಕಿಗೆ ಸಂಭವಿಸಿದ ಏರ್ ಇಂಡಿಯಾ ಬೋಯಿಂಗ್ ವಿಮಾನ ದುರಂತದ ಬಗ್ಗೆ. ಸ್ವಲ್ಪ ಸಮಯದ ನಂತರ ಬಿ.ಬಿ.ಸಿ. ಮತ್ತು ಅಲ್ ಜಜೀರಾ ಟೀವಿ ಚಾನೆಲುಗಳು ಈ ಸುದ್ದಿಯನ್ನು ಬಿತ್ತರಿಸಲು ಸುರುಮಾಡಿದುವು.
ವಿಮಾನ ದುರಂತಗಳು ಸಂಭವಿಸದ ವರ್ಷಗಳೇ ಇಲ್ಲ, ದೇಶಗಳೂ ಇಲ್ಲ. ಎಲ್ಲಿ ದುರಂತ ಸಂಭವಿಸಿದರೂ ಅದು ನಮಗೇ ಸಂಭವಿಸಿದಂತೆ ಅನಿಸುತ್ತದೆ; ಈಚೆಗೆ ಕತಿನ್ ದುರಂತದಲ್ಲಿ ಪೋಲಿಶ್ ಪ್ರಧಾನಿ ಮತ್ತು ಇತರರು ತೀರಿಕೊಂಡಾಗಲೂ ನನ್ನ ಮನಸ್ಸು ಕಲಕಿತ್ತು; ಯಾಕೆಂದರೆ ಅದೊಂದು ಇಮ್ಮಡಿಯ ದುರಂತ: ದುಃಖಾರ್ಪಣೆಗೆ ಹೋದವರೇ ದುಃಖಭಾಜನರೂ ಆದದ್ದು. ಆದರೆ ಮಂಗಳೂರಲ್ಲಿ ನಡೆದ ದುರಂತ ನಮ್ಮದೇ ದೇಶಕ್ಕೆ ಮತ್ತು ದೇಶಬಾಂಧವರಿಗೆ ಸಂಬಂಧಿಸಿದ ಸಂಗತಿ, ಆದ್ದರಿಂದ ತೀರಾ ಹತ್ತಿರ; ಮಾತ್ರವಲ್ಲ ನಿರ್ಮಲ ಮತ್ತು ನಾನು ಇಬ್ಬರೂ ಮಂಗಳೂರಿಗೆ ಕೇವಲ ಮೂವತ್ತು ಮೈಲು ದಕ್ಷಿಣಕ್ಕಿರುವ ಕಾಸರಗೋಡು ಕಡೆಯವರು. ಈ ದುರಂತದಲ್ಲಿ ಸತ್ತವರು ನಮ್ಮವರೇ ಎನ್ನುವ ಭಾವನೆ. ದಕ್ಷಿಣಕನ್ನಡ ಮತ್ತು ಕೇರಳದ ಕರಾವಳಿಯ ಈ ಜನ ನನಗೆ ಚೆನ್ನಾಗಿ ಗೊತ್ತು: ಇವರು ಆಲಸಿಗಳಲ್ಲ, ಸದಾ ಚಟುವಟಿಕೆಯಲ್ಲಿರುವವರು; ನೆಲ ಸಂಪತ್ತು ಕಡಿಮೆಯಿದ್ದು ಜನಸಂಖ್ಯೆ ಹೆಚ್ಚಿರುವ ಈ ಪ್ರದೇಶದವರು ಉದ್ಯೋಗವನ್ನು ಹುಡುಕಿಕೊಂಡು ಎಲ್ಲಿಗೆ ಬೇಕಾದರೂ ಹೋಗಬಲ್ಲ ಸಾಹಸಿಗಳೂ ಹೌದು; ಆದರೆ ಎಲ್ಲಿ ಹೋದರೂ ಇವರು ಊರ ಸಂಪರ್ಕ ಇಟ್ಟುಕೊಂಡೇ ಇರುತ್ತಾರೆ. ದುಬೈಯಂಥ ದೇಶದಲ್ಲಿ ಮಲಯಾಳಿ ಸಂಘಗಳಿರುವಂತೆಯೇ ಕನ್ನಡ ಸಂಘಗಳೂ ಇವೆ. ಈ ಸಂಘದವರು ತಮ್ಮ ಭಾಷೆ, ಸಂಸ್ಕೃತಿಗಳನ್ನು ತಮ್ಮದೇ ರೀತಿಯಲ್ಲಿ ಕೊಂಡಾಡುತ್ತಾರೆ. ಮಲೆಯಾಳಿಗಳು, ಕನ್ನಡಿಗರು, ತುಳುವರು, ಹಿಂದೂಗಳು, ಮುಸ್ಲಿಮರು, ಕ್ರಿಶ್ಚಿಯನರು ಹೀಗೆ ಇವರು ಭಾರತದ ಒಂದು ಪ್ರಾತಿನಿಧ್ಯ ಎಂಬಂತೆ ವಿವಿಧ ಗುಂಪುಗಳಿಗೆ ಸೇರಿದವರು. ಅದೇ ರೀತಿ, ಎಂಜಿನಿಯರರು, ಅಧ್ಯಾಪಕರು, ಇಲೆಕ್ಟ್ರಿಶಿಯನ್ಸ್, ಲೆಕ್ಕ ಪರಿಶೋಧಕರು, ಪ್ಲಂಬರುಗಳು, ಕಟ್ಟಡ ಕೆಲಸದವರು, ಮನೆಗೆಲಸದವರು, ನರ್ಸುಗಳು ಇತ್ಯಾದಿ ಹಲವು ಕ್ಷೇತ್ರಗಳಲ್ಲಿ ಕೆಲಸಮಾಡುವವರು. ದೇಶ ತೊರೆದ ಇವರು ಭಾರತದ ವಿದೇಶೀವಿನಿಮಯ ಸಂಪತ್ತಿಗೆ ದೊಡ್ಡ ಕೊಡುಗೆ ನೀಡುವವರೂ ಆಗಿದ್ದಾರೆ. ಹಲವರು ಕುಟುಂಬಜೀವನದ ಸುಖವನ್ನು ತ್ಯಜಿಸಿ ವಿದೇಶಗಳಲ್ಲಿ ದುಡಿಯುತ್ತಿದ್ದಾರೆ. ದಕ್ಷಿಣ ಕನ್ನಡ, ಕೇರಳ ಮುಂತಾದ ಪ್ರದೇಶಗಳಲ್ಲಿ ಹೆಚ್ಚಿನ ಕುಟುಂಬಗಳಲ್ಲೂ ವಿದೇಶದಲ್ಲಿ ದುಡಿಯುವ ಒಬ್ಬರಾದರೂ ಇರುತ್ತಾರೆ.
ಮಂಗಳೂರಿನಲ್ಲಿ ನಡೆದ ಈ ದುರಂತ ಹೆಚ್ಚು ದಾರುಣವಾಗುವುದು ಇವರಲ್ಲಿ ಬಹುಮಂದಿ ಇಂಥ ಸಾಹಸಿ ಜನರೇ ಎನ್ನುವುದು. ದುಡಿದು ಹಣ ಸಂಪಾದನೆ ಮಾಡಲೆಂದು ದುಬೈಗೆ ಹೋಗಿ ಅಲ್ಲಿನ ಕಷ್ಟಕಾರ್ಪಣ್ಯಗಳನ್ನು ಅನುಭವಿಸಿ ಬಹುಶಃ ವಾರ್ಷಿಕ ರಜೆಯಲ್ಲಿ ಊರಿಗೆ ಮರಳುತ್ತಿದ್ದವರು. ಬೇಸಿಗೆ ರಜಾಕಾಲದಲ್ಲಿ ತಾವೂ ಸ್ವಲ್ಪ ಕಾಲ ತಂದೆ ಜತೆ ಇದ್ದು ಶಾಲೆ ಸುರುವಾದ ಕಾರಣ ಮರಳುವ ಮಕ್ಕಳೂ ಅವರ ಅಮ್ಮಂದಿರೂ ಸಾವಿಗೀಡಾದವರಲ್ಲಿ ಇದ್ದಿರಬೇಕು. ತಾಯ್ನಾಡಿನ ನೆಲದ ಮೇಲೆ ವಿಮಾನ ಇನ್ನೇನು ಇಳಿಯಬೇಕು ಎನ್ನುವ ಹೊತ್ತಿನಲ್ಲಿ ನಡೆದ ದುರಂತ ಇದು. ವಿದೇಶದಲ್ಲಿ ಇದ್ದು ಊರಿಗೆ ಮರಳುವವರ ಸಡಗರ ಅನುಭವಿಸಿದವರಿಗೇ ಗೊತ್ತು. ಅವರಲ್ಲಿ ಸ್ವಲ್ಪ ಹಣವಿರುತ್ತದೆ; ಊರಿನ ಬಳಗದವರಿಗೆ ಕೊಡಲೆಂದು ಏನೇನೋ ಉಡುಗೊರೆಗಳನ್ನು ಕೊಂಡಿರುತ್ತಾರೆ; ದುಬೈಯಂಥ ಪಟ್ಟಣ ಎಂದ ಮೇಲೆ ಅಲ್ಲಿಂದ ಬರುವವರೆಲ್ಲರೂ ಒಂದಷ್ಟು ಚಿನ್ನವನ್ನೂ ಖರೀದಿಸಿರುತ್ತಾರೆ. ಊರಿಗೆ ಮರಳುವ ಬುಕಿಂಗ್ ಇತ್ಯಾದಿಗಳು ತಿಂಗಳು ಮುನ್ನವೇ ಸುರುವಾಗಿರುತ್ತದೆ. ಆಮೇಲೆ ಪ್ಯಾಕಿಂಗ್, ವಿಮಾನ ನಿಲ್ದಾಣಕ್ಕೆ ಟ್ಯಾಕ್ಸಿ, ಚೆಕಿಂಗ್, ಸ್ಕ್ರೀನಿಂಗ್, ಮೈಗ್ರೇಶನ್, ಉಡ್ಡಯಣ, ಒಂದೆರಡೆ! ವಿದೇಶ ಪ್ರಯಾಣವೆಂದರೆ ಒಂದು ರಿಚುವಲ್ ಇದ್ದಹಾಗೆ. ಸುದೀರ್ಘ ಪ್ರಯಾಣ ಮುಗಿಸಿ ಕೊನೆಗೂ ಗಗನಸಖಿ ಇನ್ನು ಕೆಲವೇ ನಿಮಿಷಗಳಲ್ಲಿ ವಿಮಾನ ಇಳಿಯಲಿದೆ, ಸೀಟ್ ನಲ್ಲಿ ನೆಟ್ಟಗೆ ಕುಳಿತು ಸೀಟ್ ಬೆಲ್ಟ್ ಹಾಕಿಕೊಳ್ಳಿ, ಮೊಬೈಲ್ ಮತ್ತು ಇನ್ನಿತರ ಇಲೆಕ್ಟ್ರಾನಿಕ್ ಸಲಕರಣೆಗಳನ್ನು ಸ್ವಿಚ್ ಆಫ್ ಮಾಡಿ ಎಂದು ಕರೆಕೊಡುವ ಕ್ಷಣ ದಿವ್ಯವಾದುದು. ಪ್ರಯಾಣಿಕರಿಗೆ ಗೊತ್ತು, ತಮ್ಮ ಹಲವು ಬಂಧುಗಳು ಊರ ನಿಲ್ದಾಣದಲ್ಲಿ ಕಾದಿರುತ್ತಾರೆ ಎನ್ನುವುದು. ಅವರೂ ಅದೆಂಥ ನಿರೀಕ್ಷೆಯಲ್ಲಿರುತ್ತಾರೆ, ಎಲ್ಲೆಲ್ಲಿಂದಲೋ ಬಂದು ಕಾಯುತ್ತ, ಎಲ್ಲರೂ ತವಕದಲ್ಲಿ.
ವಿಮಾನ ಪ್ರಯಾಣದಲ್ಲಿ ಎರಡು ಸಂದರ್ಭಗಳು ಬಹಳ ಕ್ರಿಟಿಕಲ್ ಅನ್ನುತ್ತಾರೆ: ಒಂದು ಉಡ್ಡಯಣ, ಇನ್ನೊಂದು ಇಳಿತ. ಈ ಸಂದರ್ಭಗಳಲ್ಲಿ ದೇವರನ್ನು ಪ್ರಾರ್ಥಿಸುವ ಜನರನ್ನು ನಾನು ನೋಡಿದ್ದೇನೆ. ನಾನಾದರೂ ಮೌನವಾಗಿರುತ್ತೇನೆ. ಪ್ರಯಾಣದಲ್ಲಿ ಇನ್ನೊಂದು ಆತಂಕದ ಕಾಲವೆಂದರೆ ಅನನುಕೂಲ ಹವಾಮಾನ; ಕೆಲವು ಸಲ ಏರ್ ಪಾಕೆಟ್ಸ್ (`ಗಾಳಿಚೀಲಗಳು’: ಹವಾಶೂನ್ಯ ಜಾಗಗಳು, ಅಥವಾ ಗಾಳಿ ಕೆಳಮುಖವಾಗಿ ಬೀಸುವ ಸ್ಥಳಗಳು) ಮೂಲಕ ವಿಮಾನ ಹಾಯುವಾಗ ನಡೆಯುವ ಅಲ್ಲಾಟ. ಇನ್ನೇನು ವಿಮಾನ ಬಿದ್ದುಹೋಗುವುದೇ ಎಂದು ಗಾಬರಿಯಾಗುತ್ತದೆ. ಹೊಟ್ಟೆಯಲ್ಲಿದ್ದುದು ಬಾಯಿಗೆ ಬರುತ್ತದೆ. ಆದರೆ ಇಂಥ ಸಮಯದಲ್ಲಿ ಸೀಟ್ ಬೆಲ್ಟ್ ಗಟ್ಟಿ ಮಾಡಿಕೊಂಡು ಸುಮ್ಮನಿರುವುದಲ್ಲದೆ ಪ್ರಯಾಣಿಕರು ಬೇರೇನೂ ಮಾಡುವಂತಿಲ್ಲ; ಒಂದು ರೀತಿಯಲ್ಲಿ ವಿಮಾನ ಯಾತ್ರಿಕರು ಬಂದಿಗಳೇ ಸರಿ. ನಾನು ವಿಮಾನದಲ್ಲಿ ಹಲವು ಸಲ ಪ್ರಯಾಣ ಬೆಳೆಸಿದ್ದೇನಾದರೂ ಕೆಲವೊಮ್ಮೆ ಇಂಥ ಗಾಬರಿಗೆ ಈಗಲೂ ಒಳಗಾಗುವುದಿದೆ.
ಮಂಗಳೂರಲ್ಲಿ ನಡೆದ ಈ ದುರಂತಕ್ಕೆ ಏನು ಕಾರಣ ಎನ್ನುವುದನ್ನು ತಜ್ಞರು ಪರೀಕ್ಷಿಸಿ ಕಂಡುಹಿಡಿಯಬೇಕು. ಆದರೆ ಸಾಮಾನ್ಯವಾದ ಒಂದೆರಡು ಸಂಗತಿಗಳನ್ನು ಒಬ್ಬ ಪ್ರಯಾಣಿಕನಾಗಿ ನಾನಿಲ್ಲಿ ಹೇಳಬಹುದೇನೊ. ಮೊದಲನೆಯದಾಗಿ, ವಿಮಾನದಂಥ ಸೂಕ್ಷ್ಮ ಯಂತ್ರಗಳ ಕುರಿತಾಗಿ ನಿಯುಕ್ತ ಎಂಜಿನಿಯರರು ಇಡಬೇಕಾದ ನಿಗಾ. ಭಾರತೀಯ ಏರ್ ಲೈನುಗಳಲ್ಲಿ ಈಚೆಗೆ ಹಲವು ವರ್ಷಗಳಿಂದ ಇಂಥ ದುರಂತಗಳು ನಡೆದಿಲ್ಲ ಎನ್ನುವುದು ನಿಜ; ಆದರೆ ದುರಂತ ಈಗ ನಡೆದುದು ಸಾಕು, ಪರಿಣತರು ಇನ್ನಷ್ಟು ಕಾಳಜಿವಹಿಸಿ ಇಂಥದು ಇನ್ನು ಮುಂದೆ ನಡೆಯದ ಹಾಗೆ ನೋಡಿಕೊಳ್ಳುವುದಕ್ಕೆ. ಯಂತ್ರ ಸುಸ್ತು (machine fatigue) ಎನ್ನುವುದಿದೆ; ಮನುಷ್ಯರಿಗೆ ಹೇಗೆ ವಿಶ್ರಾಂತಿ ಬೇಕಾಗುತ್ತದೋ ಹಾಗೇ ಯಂತ್ರಗಳಿಗೂ ಬೇಕಾಗುತ್ತದೆ. ಏರ್ ಇಂಡಿಯಾ ವಿಮಾನಗಳನ್ನು ಅವು ತಾಳಿಕೊಳ್ಳುವುದಕ್ಕಿಂತ ಹೆಚ್ಚು ದುಡಿಸುತ್ತಿದ್ದೇವೆಯೇ ಎಂದು ಕೇಳುವುದು ಅಗತ್ಯ. ಈ ಯಂತ್ರಗಳ ಆರೈಕೆ (maintenance) ಕುರಿತೂ ಹೆಚ್ಚು ಸೂಕ್ಷ್ಮವಾಗಿ ಯೋಚಿಸಬೇಕು. ಇದರ ಮೇಲೆ ಕಣ್ಣಿರಿಸುವುದಕ್ಕೆ ಅಂತಾರಾಷ್ಟ್ರಿಯ ಸಮಿತಿಗಳಿವೆ ಎನ್ನುವುದೇನೋ ನಿಜ; ಆದರೆ ಭಾರತೀಯರಾದ ನಮ್ಮ ಇನ್ನಿತರ ವಿಷಯಗಳ ಬಗೆಗಿನ ಧೋರಣೆ, `ಸಾಕಿಷ್ಟು’, `ಚಲ್ತಾ ಹೈ’ ಎಂಬುದು. ಎರಡನೆದಾಗಿ ಮಂಗಳೂರು ಏರ್ ಪೋರ್ಟ್‌ನ ವಿಷಯ; ನಾನು ಒಮ್ಮೆ ಮಾತ್ರ ಇಲ್ಲಿ ಇಳಿದಿದ್ದೇನೆ; ಈಗ ಅದು ಅಂತಾರಾಷ್ಟ್ರೀಯ ಮಟ್ಟಕ್ಕೆ ಏರಿದೆ. ಆದರೆ ನಿಲ್ದಾಣವಿರುವುದು ಇಕ್ಕಟ್ಟಾದ ಜಾಗದಲ್ಲಿ ಎಂದು ನನ್ನ ನೆನಪು. ಇಲ್ಲಿ ರನ್ ವೇಗೆ ಸಾಕಷ್ಟು ಮಾನಸಿಕ ಜಾಗ ಇರಲಾರದು ಎಂದು ನನಗನಿಸುತ್ತದೆ.
ಮೂರನೇದಾಗಿ, ಮತ್ತು ಅಷ್ಟೇ ಮುಖ್ಯವಾಗಿ, ವಿಮಾನ ಸಿಬ್ಬಂದಿ: ಚಾಲಕರು, ಗಗನಸಖಿಯರು, ಮಾತ್ರವಲ್ಲದೆ ಗ್ರೌಂಡ್ ಸ್ಟಾಫ್ ಕೂಡಾ. ವಿಮಾನಯಾನದ ಯೋಗಕ್ಷೇಮ ಇವರೆಲ್ಲರ ಕೈಯಲ್ಲೂ ಒಟ್ಟಾಗಿ ಇದೆ. ಬೇರೊಂದು ಸಂದರ್ಭದಲ್ಲಿ ಮಾರ್ಕ್ಸ್ ಹೇಳಿದಂತೆ, ಒಂದು ಸರಪಳಿಯ ಬಲವನ್ನು ಅದರ ದುರ್ಬಲ ಕೊಂಡಿಯಿಂದ ಅಳೆಯಬೇಕಾಗುತ್ತದೆ. ಈ ದುರ್ಬಲ ಕೊಂಡಿ ಯಾವುದು ಎನ್ನುವುದನ್ನು ಗುರುತಿಸಬೇಕು. ಚಾಲಕರು, ಗಗನಸಖಿಯರು ಶುಭ್ರವಾದ ಸಮವಸ್ತ್ರ ಧರಿಸಿ ಇನ್ನೊಂದು ಲೋಕಕ್ಕೆ ಸೇರಿದವರಂತೆ ನಮಗೆ ಕಾಣಿಸುತ್ತಾರೆ. ಅವರನ್ನು ಕಂಡಾಗ ನಮ್ಮಲ್ಲಿ ಸ್ಥೈರ್ಯ ಮೂಡುತ್ತದೆ, ಅವರಲ್ಲಿ ಪೂರ್ಣ ವಿಶ್ವಾಸವಿಡುತ್ತೇವೆ. ಆದರೆ ಸಾಮಾನ್ಯರು ತಿಳಿದುಕೊಂಡಂತೆ ಅವರ ದೈನಂದಿನ ಜೀವನ ಅಷ್ಟೇನೂ ಸುಖಕರವಲ್ಲ. ಅವರಿಗೆ ಧಾರಾಳ ಹಣ, ಸೌಲಭ್ಯ, ಪ್ರತಿಷ್ಠೆ ಮುಂತಾದುವು ಸಿಗುತ್ತವೆ ನಿಜ; ಆದರೆ ಅವರು ಕಳಕೊಳ್ಳುವುದೂ ಬಹಳ ಇದೆ. ಅವರಿಗೆ ನಮ್ಮ ನಿಮ್ಮಂಥ ತರದ ಕುಟುಂಬ ಜೀವನ ಲಭ್ಯವಿಲ್ಲ. ಚಾಲಕ ಎಷ್ಟು ಪರಿಣತನಿದ್ದರೇನು? ಅವನು ಕ್ಷಣ ಕ್ಷಣಕ್ಕೂ ನಿರ್ಣಯಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಯಂತ್ರವನ್ನು ಮನುಷ್ಯ ನಿಯಂತ್ರಿಸಬೇಕಲ್ಲದೆ, ಯಂತ್ರ ಮನುಷ್ಯನನ್ನಲ್ಲ. ಮನುಷ್ಯ ತಪ್ಪುಗಳು ಸಾವಿರದಲ್ಲಿ ಒಂದು ಸಲವಾದರೂ ದುರಂತ ತಪ್ಪಿದ್ದಲ್ಲ. If it can happen, it will happen ಎಂಬ ಮರ್ಫೀಸ್ ಲಾ ನೆನಪಾಗುತ್ತದೆ. ನಾನಿಲ್ಲಿ ಹೇಳುತ್ತಿರುವುದು ವಿಮಾನ ಸಿಬ್ಬಂದಿಯ ಮನಃಸ್ವಾಸ್ಥ್ಯದ ಬಗ್ಗೆ. ನಾವವರನ್ನು ಮನುಷ್ಯರಂತೆ ನೋಡಿಕೊಳ್ಳುತ್ತಿದ್ದೇವೆಯೇ ಅಥವಾ ಯಂತ್ರದಂತೆ ಕಾಣುತ್ತೇವೆಯೇ? ಯಾವುದೇ ವಿಮಾನ ದುರಂತ ನಡೆದಾಗಲೂ ಸಂಶಯಕ್ಕೆ ಒಳಗಾಗುವುದು ಮೊದಲು ಚಾಲಕ. ಆದರೆ ಚಾಲಕರು ತಪ್ಪಾಗಿ ವಿಮಾನ ನಡೆಸಿ ಆತ್ಮಹತ್ಯೆ ಮಾಡಿಕೊಳ್ಳಲು ಬಯಸುವುದಿಲ್ಲ. ಕಾಕ್ ಪಿಟ್ ನ ವಿವಿಧ ಸಲಕರಣೆಗಳಿಂದ ಹೊರಡುವ ವಿಕರಣಗಳು ಚಾಲಕ ಸಿಬ್ಬಂದಿಯ ಮೇಲೆ ದುಷ್ಪರಿಣಾಮವನ್ನು ಉಂಟುಮಾಡುತ್ತವೆ ಎಂಬ ಅಧ್ಯಯನ ವರದಿಯೊಂದನ್ನು ನಾನು ಓದಿದ ನೆನಪು.
ಇಂಥ ನನ್ನ ವಿಚಾರಗಳು ಕೇವಲ ಒಬ್ಬ ಸಾಮಾನ್ಯನದು. ಇವು ಈ ಸಂದರ್ಭಕ್ಕೆ ಉಚಿತವೋ ಅಲ್ಲವೋ ಎನ್ನುವುದೂ ನನಗೆ ತಿಳಿಯದು. ನನ್ನ ಮನಸ್ಸಿನಲ್ಲಿ ಹಾದುಹೋಗುವ ವಿಷಯಗಳನ್ನು ಇಲ್ಲಿ ಹಂಚಿಕೊಳ್ಳುತ್ತಿದ್ದೇನೆ ಅಷ್ಟೆ. ಇಂಥದೊಂದು ದುರಂತಕ್ಕೆ ಕೆಲವರು ಕೆಲವೊಂದು ರೀತಿಯಲ್ಲಿ ಪ್ರತಿಕ್ರಿಯೆ ನೀಡಬಹುದು. ಕೆಲವರು ಕೆಲವರನ್ನು, ಏನಿಲ್ಲದಿದ್ದರೆ ಸರಕಾರವನ್ನು, ಹಳಿಯಬಹುದು. ಇನ್ನು ಕೆಲವರು `ದೇವರ ಚಿತ್ತ’ ಎಂದು ಕಾಣದ ದೈವದ ಮೇಲೆ ಭಾರ ಹಾಕಬಹುದು. `ಏನು ನಡೆಯುತ್ತದೋ ನಡೆಯುತ್ತದೆ’ Que sera sera ಎಂದು ವಿಧಿವಾದಕ್ಕೆ ಶರಣಾಗಬಹುದು. ಆದರೆ ಇಂಥ ದುರಂತಗಳು ಇನ್ನು ನಡೆಯದ ಹಾಗೆ ನೋಡಿಕೊಳ್ಳುವುದು ಹೇಗೆ ಎಂದು ಯೋಚನೆ ಮಾಡುವುದು ಅಗತ್ಯ. ಯಾಕೆಂದರೆ ವಿಮಾನಯಾನ ಇಂದಿನ ಜಗತ್ತಿಗೆ ಅನಿವಾರ್ಯ. ಇದನ್ನು ಕೈಬಿಡುವ ಹಾಗೇ ಇಲ್ಲ. ಆದರೆ ಬಹುಶಃ ಹೆಚ್ಚು ಸುರಕ್ಷಿತಗೊಳಿಸುವುದು ಸಾಧ್ಯ. ಅದೇ ರೀತಿ ಇಂಥ ದುರಂತದಲ್ಲಿ ಸಾವಿಗೀಡಾದವರ ಅವಲಂಬಿಗಳಿಗೆ ಆರ್ಥಿಕ ಮತ್ತು ಇನ್ನಿತರ ಸಹಾಯವೂ ಅಗತ್ಯವಿದೆ.
ಹೈದರಾಬಾದಿನಲ್ಲಿ ನೆಲೆಸಿರುವ ಕನ್ನಡದ ಹಿರಿಯ ಕವಿ, ಲೇಖಕ ಮತ್ತು ಭಾಷಾಶಾಸ್ತ್ರಜ್ಞರು, ಮೂಲತಃ ಕಾಸರಗೋಡಿನ ಬಳಿಯ ಕಾರಡ್ಕದವರು. ಹೈದರಾಬಾದಿನ ಸೆಂಟ್ರಲ್ ಇನ್ಸ್ಟಿಟ್ಯೂಟ್ ಆಫ್ ಇಂಗ್ಲೀಷ್ ಅಂಡ್ ಫಾರಿನ್ ಲಾಂಗ್ವೇಜಸ್ ಸಂಸ್ಥೆಯಲ್ಲಿ ಪ್ರಾಧ್ಯಾಪಕರಾಗಿ ನಿವೃತ್ತಿಯನ್ನು ಹೊಂದಿ, ನಂತರ ಯೆಮನ್ ದೇಶದಲ್ಲಿ ಕೆಲಕಾಲ ಇಂಗ್ಲೀಷ್ ಅಧ್ಯಾಪನ ಮಾಡಿ, ಈಗ ಹೈದರಾಬಾದಿನಲ್ಲಿ ತಮ್ಮ ನಿವೃತ್ತಿ ಜೀವನವನ್ನು ಕಳೆಯುತ್ತಿದ್ದಾರೆ. ನಾಟಕ, ಕವನ, ಕಥೆ, ಕಾದಂಬರಿಗಳನ್ನು ರಚಿಸಿರುವ ಅವರು ಭಾಷಾವಿಜ್ಞಾನ ಕ್ಷೇತ್ರದಲ್ಲಿ ಮೌಲಿಕ ಕೃತಿಗಳನ್ನು ಪ್ರಕಟಿಸಿರುವ ವಿದ್ವಾಂಸರು. ವಿಮರ್ಶಕರು.