ಕುರುಬ ಸಮುದಾಯದ’ಕನಕ’, ಕನಕದಾಸರಾಗಿದ್ದುದರ ಬಗ್ಗೆ ಅನೇಕ ಕಥನಗಳಿವೆ. ಆದರೆ ಈ ಹಾದಿಯಲ್ಲಿ ಕನಕರು ಕುಲದ ಕಾರಣಕ್ಕಾಗಿ ಎದುರಿಸಬೇಕಾಗಿ ಬಂದ ಸಂಕಟಗಳನ್ನು ನಾವು ಗಮನಿಸಬೇಕು. ಶ್ರೀನಿವಾಸ ಶೆಟ್ಟಿ, ಪುರಂದರ ದಾಸರಾಗಲು ಇರುವ ಅವಕಾಶ ಕನಕನಾಯಕ ಕನಕದಾಸರಾಗೋದಕ್ಕೆ ಇರಲಿಲ್ಲ. ಅವರು ತಮ್ಮ ಹುಟ್ಟಿನ ಸೂತಕದ ಕಾರಣಕ್ಕಾಗಿ ಮತ್ತೆ ಮತ್ತೆ ಸಾಮರ್ಥ್ಯವನ್ನು ಸಾಬೀತು ಪಡಿಸಿಕೊಳ್ಳಬೇಕಾಯ್ತು. ಅಷ್ಟೇ ಅಲ್ಲ, ಕನಕದಾಸರು ಕುಲವನ್ನು ಮೀರುವ ತಮ್ಮ ಕೃತಿಯನ್ನು ತಮ್ಮ ಬದುಕಿನ ಮೂಲಕವೂ ಬರೆದರು. ಡಾ.ಶ್ರೀಪಾದ ಭಟ್ ಬರೆದ ಲೇಖನ ಇಲ್ಲಿದೆ:
‘ಅಸಮಗ್ರ’ ಎನ್ನುವ ತಮ್ಮ ಪುಸ್ತಕದಲ್ಲಿ ರಾಜೇಂದ್ರ ಚೆನ್ನಿ ಒಂದು ಅಪೂರ್ವ ಪರಿಕಲ್ಪನೆಯನ್ನು ಮಂಡಿಸುತ್ತಾರೆ. ಅದು, ‘ಮತ್ತೆ ಕಲ್ಯಾಣದತ್ತ’ ಅನ್ನುವ ಪರಿಕಲ್ಪನೆ. ಬುದ್ದ, ಬಸವ, ಕನಕ, ಗಾಂಧಿ, ಇವರೆಲ್ಲರಿಂದ ಹಿಡಿದು ಇಂದಿನ ಮೇಧಾ ಪಾಟ್ಕರ್, ಬಹುಗುಣ, ಅಲ್ಲದೇ ವ್ಯವಸ್ಥೆ ಒಕ್ಕಲೆಬ್ಬಿಸುತ್ತಿರುವ ಎಲ್ಲರೂ ಕಲ್ಯಾಣದತ್ತ ಹೊರಟಿದ್ದಾರೆ. ಶಾಸ್ತ್ರಗಳು, ಸೌಂದರ್ಯ ಶಾಸ್ತ್ರಗಳು ಚಿಂತನಾಗೋಷ್ಠಿಗಳೂ ಇವೆಲ್ಲವೂ ಕಲ್ಯಾಣದತ್ತ ಇಡುತ್ತಿರುವ ಹೆಜ್ಜೆಗಳೇ ಆಗಿವೆ. ನಮ್ಮ ಮುಂದಿರುವ ಆದರ್ಶ ಸ್ಮೃತಿ ಅದು. ಎಲ್ಲರನ್ನೊಳಗೊಂಡ ಕಲ್ಯಾಣದ ಕನಸು ಅದು. ಕುಲ ಸಂಬಂಧಿತ ವಿಚಾರ ವ್ಯಾಪಕವಾಗಿ ಚರ್ಚೆಯಾಗುತ್ತಿರುವ ಈ ಹೊತ್ತಿನಲ್ಲಿ ಕನಕ ಕಾಣ ಬಯಸಿದ ಕಲ್ಯಾಣದ ಕುರಿತು ಒಂದು ಕನಸನ್ನು ಉದಾರಚರಿತದ ರೂಪಕವಾಗಿ ಮಂಡಿಸಲು ಇಲ್ಲಿ ಪ್ರಯತ್ನಿಸುತ್ತಿರುವೆ.
ಬಸವಣ್ಣ ಕಲ್ಯಾಣ ಕಟ್ಟುವ ಸಂದರ್ಭದಲ್ಲಿ ಬಹಳ ಮುಖ್ಯವಾಗಿ ಆತ ಕಲಕಿದ್ದು ಜಾತಿಯ ಒಳ ರಚನೆಗಳನ್ನ. ಎಲ್ಲರ ಕಲ್ಯಾಣದಲ್ಲಿ ಅಡ್ಡನಿಂತ ದೊಡ್ಡ ಅಡ್ಡಿ ಅದು, ಜಾತಿ ವ್ಯವಸ್ಥೆ ಅನ್ನೋದು ಆತನಿಗೆ ಗೊತ್ತಿತ್ತು. ಹಾಗಾಗಿ ಆತ ಕ್ರಿಯಾತ್ಮಕವಾಗಿ ಈ ವಿಷಯದಲ್ಲಿ ತೊಡಗಿಕೊಂಡ. ಸೈದ್ಧಾಂತಿಕವಾಗಿ ಹಲವರು ಈ ಹಿಂದೆಯೇ ಕುಲವನ್ನ, ಜಾತಿಯನ್ನ ಅದರ ವೈಷಮ್ಯವನ್ನ ನಿವಾರಿಸುವುದಕ್ಕೆ ಪ್ರಯತ್ನ ಮಾಡಿದ್ದುಂಟು. ಕವಿರಾಜಮಾರ್ಗಕಾರ ‘ಕಸ’ ಮತ್ತು ‘ಕಸವರ’ವನ್ನು ವ್ಯಾಖ್ಯಾನಿಸಿದ್ದೇ ಹೀಗೆ. ಪರ ವಿಚಾರ, ಪರ ಮತವನ್ನು ಸಹಿಸುವದು ‘ಕಸವರ’ವಾದರೆ ಅದರ ಕುರಿತ ಅಸಹನೆ ‘ಕಸ’ವಾಗುತ್ತದೆ ಅಂತ. ಪಂಪನು ಕರ್ಣನ ಮೂಲಕ ಕುಲವನ್ನು ಪುನರ್ ವ್ಯಾಖ್ಯಾನಿಸಿದ. ಛಲವೇ ಕುಲ, ಅಭಿಮಾನ ಕುಲ, ಅಣ್ಮು ಕುಲ . . ಹೀಗೆ. ಈಗಾಗಲೇ ಸಮಾಜ ಒಪ್ಪಿಕೊಂಡು ಆಚರಿಸುತ್ತ ಬಂದಿರುವ ಕುಲದ ನಂಬಿಕೆ ಏನಿದೆ ಅದು ಭಾರತವನ್ನು ವ್ಯಾಕುಲಕ್ಕೆ ಈಡು ಮಾಡುತ್ತದೆ ಎಂದು ಎಚ್ಚರಿಕೆ ಕೊಟ್ಟ.
ವಚನಕಾರರ ಸಂದರ್ಭ ಅದು ಮಾತು ಕ್ರಿಯೆಯಾದ ಸಂದರ್ಭ. ಹೀಗಾಗಿ ಅವರು ದಮನಿತರೆಲ್ಲರನ್ನೂ ಸಂಘಟಿಸುತ್ತ ಹೋದರು. ಈ ಹಿಂದೆ ತರತಮವನ್ನು ಎತ್ತಿಹಿಡಿದಿದ್ದ ಸ್ಥಾಪಿತ ಹಿತಾಸಕ್ತಿಗಳೆಲ್ಲದರ ಕಪಟವನ್ನೂ ಬಯಲು ಮಾಡಿದರು. ಪ್ರಭುತ್ವ ಕೇಂದ್ರಕ್ಕೆ ನೆರವಾಗುವ ಕರ್ಮವನ್ನು ಕಾಯಕದ ಶ್ರೇಷ್ಠತೆಯನ್ನು ಸಾರುವ ಮೂಲಕ ನಿರಾಕರಿಸಿದರು. ಸಂಚಿತ ಕರ್ಮವೇ ನಮ್ಮನ್ನು ಆಳುತ್ತದೆ ಅನ್ನುವ ನಂಬಿಕೆಯ ಬದಲಾಗಿ ನಮ್ಮ ನಮ್ಮ ಕಾಯಕವೇ ನಮ್ಮ ವ್ಯಕ್ತಿತ್ವವನ್ನು ಅದರ ಘನತೆಯನ್ನೂ ರೂಪಿಸುತ್ತದೆ ಅನ್ನೋದನ್ನ ಮನಗಾಣಿಸಿದರು. ‘ಕಾಸಿ ಕಮ್ಮಾರನಾದ, ಬೀಸಿ ಮಡಿವಾಳನಾದ’ ಎನ್ನುತ್ತ ಜಾತಿ ಸಾಂಸ್ಥಿಕತೆಗೆ ಪ್ರತಿಭಟನೆ ತೋರಿತು. ‘ಉಳ್ಳವರು ಶಿವಾಲಯ ಮಾಡುವರು’ ಎನ್ನುತ್ತ ಸಾಂಸ್ಕೃತಿಕ ರೂಪದ ಪ್ರತಿಭಟನೆಯನ್ನೂ ರೂಪಿಸಿತು. ‘ಕೊಲುವವನೆ ಮಾದಿಗ’ ಎನ್ನುತ್ತ ಪಂಪನಕಾಲದ ಕುಲದ ಮರು ವ್ಯಾಖ್ಯಾನವನ್ನು ಮುಂದುವರಿಸಿತು. ಅಂಬೇಡ್ಕರ ಹೇಳಿದರು ‘ಈ ಜಾತಿವ್ಯವಸ್ಥೆ ಅಂದರೆ ೫, ೬ ಮಹಡಿಗಳಿರುವ ಕಟ್ಟಡ; ಅದರ ದುರಂತವೆಂದರೆ ಒಂದು ಮಹಡಿಯಿಂದ ಇನ್ನೊಂದು ಮಹಡಿಗೆ ಹೋಗಲು ಮೆಟ್ಟಿಲುಗಳೇ ಇಲ್ಲ’ ಅಂತ. ಈ ವಚನಕಾರರು ಮನೆಯನ್ನೇ ಕಟ್ಟಲಿಲ್ಲ, ಬಯಲು ಮಾಡಿಕೊಂಡರು. ಭಕ್ತಿಯುಗ ಹಿಂದೂ ಧಾರ್ಮಿಕ ವ್ಯವಸ್ಥೆಯ ಜಡ ಸ್ವರೂಪದಲ್ಲಿ ಛದ್ಮವೇಷಧಾರಿಗಳಾಗಿ ಕುಳಿತ ಅಮಾನವೀಯ ರೂಢಿ ಆಚಾರಗಳನ್ನೂ ವಿರೋಧಿಸಿ, ಧಾರ್ಮಿಕತೆಯನ್ನು ವೈಯಕ್ತಿಕ ಅನುಭವದ ಅರ್ಪಣಾತ್ಮಕ ನೆಲೆಯಿಂದ ಅರ್ಥೈಸಿತು. ವೈಯಕ್ತಿಕ ನೆಲೆಯಿಂದ ಇದರ ಪರಿಹಾರಕ್ಕೆ ಯತ್ನಿಸಿತು. ಮುಕ್ತಿಯ ಹಾದಿಯಲ್ಲಿ ಈ ‘ಜಾತಿಯ ಅಹಂಕಾರ’ ಅಡ್ಡಿಯಾಗುವದನ್ನು ಮತ್ತೆ ಮತ್ತೆ ಉಲ್ಲೇಖಿಸಿತು. ನಿಜವಾದ ಮನುಷ್ಯನನ್ನ ಹುಡುಕುವ ಮಾದರಿಯನ್ನು ರೂಪಿಸಿತು. “ಭಾರತದ ಧಾರ್ಮಿಕ ಚರಿತ್ರೆಯಲ್ಲಿ’ಮನುಷ್ಯ’ನ ಅನಾವರಣ ಆದ ಕಾಲವೆಂದರೆ ಭಕ್ತಿಯ ಸಂದರ್ಭವೇ ಆಗಿದೆಯೆನ್ನಬಹುದು”೧ ಎಂದು ಶಿವರಾಮ ಪಡಿಕ್ಕಲ್ ಸರಿಯಾಗಿಯೇ ಗುರುತಿಸಿದ್ದಾರೆ.
೧೯ರ ಅಂತ್ಯದಿಂದ ೨೦ರವರೆಗೆ ಹಲವು ಚಳುವಳಿಗಳನ್ನು ಕಾಣುತ್ತೇವೆ. ತಿರುವಾಂಕೂರಿನ ಗುರು ನಾರಾಯಣ ಸ್ವಾಮಿ ಹೋರಾಟ, ಪೆರಿಯಾರರ ಚಳುವಳಿ, ಅದ್ ಧರ್ಮದ ಚಳುವಳಿ, ಮಹಿಮಾ ಚಳುವಳಿ, ಗಾಂಧೀವಾದಿ ಚಿಂತನೆ ಹಾಗೂ ಅಂಬೇಡ್ಕರರ ಹೋರಾಟ ಜತೆಗೆ ಸಾಹಿತ್ಯ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ಅರಿವು ಮೂಡಿಸುವ ಪ್ರಯತ್ನ ಹೀಗೆ .
ಹೀಗೆ ಆಧುನಿಕ ಭಾರತದಲ್ಲೂ ಜಾತಿ ವ್ಯವಸ್ಥೆಯ ವಿರುದ್ಧದ ಹೋರಾಟದಲ್ಲಿ ಎರಡು ಧಾರೆಗಳಿವೆ. ಒಂದು, ಆಧ್ಯಾತ್ಮಿಕ ಸ್ವರೂಪದ್ದು, ಹಲವು ಯೋಗಿಗಳು ಇದನ್ನು ನಡೆಸಿದರು. ಡಿ.ಆರ್.ನಾಗರಾಜರು ಹೇಳುವಹಾಗೆ೨ೆ(ಉರಿ ಚಮ್ಮಾಳಿಗೆ.ಪು.೭) ಅನುಭಾವಿಕ ಅವಶ್ಯಕತೆಯಾಗಿ ಸಾಮಾಜಿಕ ಸುಧಾರಣೆಯ ಅಂಗವಾಗಿ ಅವರು ಜಾತಿ ವ್ಯವಸ್ಥೆಯ ವಿರುದ್ಧ ಹೋರಾಡಿದರು. ಶಿಶುನಾಳ ಶರೀಫ ಮತ್ತು ಕೈವಾರ ನಾರಣಪ್ಪ ಮುಂತಾದವರಿಂದ ತೊಡಗಿ ಗಾಂಧಿವರೆಗೆ. ಇನ್ನೊಂದು, ಲೌಕಿಕವಾದದು, ವಸಾಹತು ಶಾಹಿ ಅನುಭವದಿಂದ ಪ್ರೇರಿತವಾದ ಅಬ್ರಾಹ್ಮಣ ಚಳುವಳಿಗಳು ಅಂಬೇಡ್ಕರರವರೆಗೆ.
ಉರಿ ಚೆಮ್ಮಾಳಿಗೆ ಪುಸ್ತಕದಲ್ಲಿ ಡಿ.ಆರ್.ಒಂದು ಕತೆಯನ್ನು ಪ್ರಸ್ತಾಪಿಸುತ್ತಾರೆ. ಇದೊಂದು ‘ಮಿಥ್’. ಒಮ್ಮೆ ಚಮ್ಮಾರನಾದ ರವಿದಾಸನಿಗೆ ದೇವರು ಸತ್ತ ಹಸುವನ್ನು ತೆಗೆಯುವಂತೆ ಹೇಳುತ್ತಾನೆ. ಕುಲ ಕಸುಬು ಮಾಡಲೇ ಬೇಕಲ್ಲ. ಈ ಕವಿ-ಸಂತ ಅದನ್ನು ಪಾಲಿಸುತ್ತಾನೆ. ಅವನು ಸತ್ತ ಪ್ರಾಣಿಯ ಒಂದು ಭಾಗವನ್ನು, ಅದರ ಹೃದಯವನ್ನು ಉಳಿಸಿ ಭೂಮಿಯಲ್ಲಿ ಬಿತ್ತುತ್ತಾನೆ. ಅದರಿಂದ ಒಂದು ಗಿಡ ಹುಟ್ಟಿ ಹೃದಯದ ಬಣ್ಣದ, ಹೃದಯದ ಆಕಾರದ ಹೂವು ಅರಳುತ್ತದೆ. ಸಮಾಜದ ಹೃದಯಹೀನ ಸ್ಥಿತಿಯನ್ನು ರವಿದಾಸನ ಕಾಯಕ ಮೀರುತ್ತದೆ. ಸಾಂಸ್ಕೃತಿಕ ಸ್ವರೂಪದ ಪ್ರತಿಭಟನೆಗೆ ತುಂಬ ಶಕ್ತವಾದ ಪ್ರತಿಮೆ ಇದು.
ಇಂದಿನ ವರ್ತಮಾನದ ಭಾರತದಲ್ಲಿ ಜಾತಿ ಅಹಂಕಾರ ಬೆಳೆಸುತ್ತ ವಿಘಟಿತ ಸಮಾಜ ರಚನೆಗೆ ಕಾರಣವಾಗುತ್ತಿರುವ ಹಲವು ವಿದ್ಯಮಾನಗಳನ್ನು ನಾವು ದಿನ ನಿತ್ಯ ನಮ್ಮ ಸುತ್ತಲೂ ಕಾಣುತ್ತಿದ್ದೇವೆ. ಕನಕದಾಸರು ಈ ಸಂದರ್ಭದಲ್ಲಿ ನಮಗೆ ಮುಖ್ಯರಾಗೋದು ಅವರು ಜಾತಿ ಅಹಂಕಾರಗಳನ್ನು ನಾಶಮಾಡುತ್ತ, ಸಮೂಹ ಬಾಳ್ವೆಯ, ಅಸಹನೆಯಾಚೆಯ ಸಮಾಜವನ್ನು ಕಲ್ಲಿಸಿಕೊಂಡಿದ್ದರಿಂದ.
ಪ್ರಭುತ್ವ ಕೇಂದ್ರಕ್ಕೆ ನೆರವಾಗುವ ಕರ್ಮವನ್ನು ಕಾಯಕದ ಶ್ರೇಷ್ಠತೆಯನ್ನು ಸಾರುವ ಮೂಲಕ ನಿರಾಕರಿಸಿದರು. ಸಂಚಿತ ಕರ್ಮವೇ ನಮ್ಮನ್ನು ಆಳುತ್ತದೆ ಅನ್ನುವ ನಂಬಿಕೆಯ ಬದಲಾಗಿ ನಮ್ಮ ನಮ್ಮ ಕಾಯಕವೇ ನಮ್ಮ ವ್ಯಕ್ತಿತ್ವವನ್ನು ಅದರ ಘನತೆಯನ್ನೂ ರೂಪಿಸುತ್ತದೆ ಅನ್ನೋದನ್ನ ಮನಗಾಣಿಸಿದರು.
ಕುರುಬನಾಗಿದ್ದ ಕನಕ, ಕನಕದಾಸರಾಗಿದ್ದುದರ ಬಗ್ಗೆ ಇರುವ ಕಥನಗಳನ್ನು ನಾನು ಪುನರಾವರ್ತಿಸುವದಿಲ್ಲ. ಆದರೆ ಈ ಹಾದಿಯಲ್ಲಿ ಕನಕರು ಕುಲದ ಕಾರಣಕ್ಕಾಗಿ ಎದುರಿಸಬೇಕಾಗಿ ಬಂದ ಸಂಕಟಗಳನ್ನು ನಾವು ಗಮನಿಸಬೇಕು. ಶ್ರೀನಿವಾಸ ಶೆಟ್ಟಿ, ಪುರಂದರ ದಾಸರಾಗಲು ಇರುವ ಅವಕಾಶ ಕನಕನಾಯಕ ಕನಕದಾಸರಾಗೋದಕ್ಕೆ ಇರಲಿಲ್ಲ. ಅವರು ತಮ್ಮ ಹುಟ್ಟಿನ ಸೂತಕದ ಕಾರಣಕ್ಕಾಗಿ ಮತ್ತೆ ಮತ್ತೆ ಸಾಮರ್ಥ್ಯವನ್ನು ಸಾಬೀತು ಪಡಿಸಿಕೊಳ್ಳಬೇಕಾಯ್ತು. ಅವರ ಕುರಿತಾಗಿರುವ ಹಲವು ಕತೆಗಳನ್ನು, ಬಾಳೆಹಣ್ಣಿನ ಕತೆ, ನಾನು ಹೋದರೆ ಹೋದೇನು ಕತೆ, ಕೋಣನ ಕತೆ ಇವೆಲ್ಲವನ್ನೂ ಈ ಹಿನ್ನೆಲೆಯಲ್ಲಿ ನೋಡಬೇಕಾಗುತ್ತದೆ. ಕನಕದಾಸರು ಕುಲವನ್ನು ಮೀರುವ ತಮ್ಮ ಕೃತಿಯನ್ನು ತಮ್ಮ ಬದುಕಿನಮೂಲಕವೂ ಬರೆದರು.
ಬದುಕಿನ ಕಥನದಲ್ಲಿ ಅವರು ಕುಲದ ಅಹಂಕಾರವನ್ನು ಮೀರುವ ಕ್ರಿಯೆಯ ಹಲವು ಸಾಧ್ಯತೆಗಳನ್ನು ತೋರಿದ ಹಾಗೆ ಬರಹದಲ್ಲೂ ತೋರಿದರು. ಕುಲವನ್ನು ಕೀರ್ತಿಸುವವರನ್ನು ಛೇಡಿಸುವ ಅವರ ಹಲವು ಕವನಗಳಿವೆ.
• ‘ಜಲವೆ ಸಕಲ ಕುಲಕ್ಕೆ ತಾಯಲ್ಲವೆ ಜಲದ ಕುಲವನೇನಾದರು ಬಲ್ಲಿರ’
• ‘ಕೆಸರೊಳು ತಾವರೆ ಪುಟ್ಟಲು ಅದ ತಂದು ಬಿಸಜನಾಭನಿಗರ್ಪಿಸಲಿಲ್ಲವೆ/ ಹಸುವಿನ ಮಾಂಸದೊಳು ಉತ್ಪತ್ತಿಯಾದ ಕ್ಷೀರವ ಭೂಸುರರು ಉಣಲಿಲ್ಲವೆ’
• ‘ಏಕೆ ನಡುಗಿದೆ ತಾಯಿ – ಲಲನೆಯರ ಮೇಲೆ ಕಣ್ಣಿಡುವ ಹೊಲೆಯರನು ನಾನೊಲಿದು ಹೊರಲಾರೆನೆಂದು ನಡುಗಿದೆಯಾ’
• ‘ಆಲದೊಳಗೆ ಮುಳುಗಿದರೆ ತೊಲಗದು ಹೊಲೆಗೆಲಸ ಈ ದೇಹದೊಳು ನೀ ನೆಲೆಸಿರಲು ಹೊಲೆ ಉಂಟೆ ರಕ್ಷಿಸು ನಮ್ಮನನವರತ’
• ‘ತೊಲಗುವದು ಕಡೆಕಡೆಗೆ ತಾ ಹೊಲೆ ಹೊಲೆಯೆನುತ ಕಳವಳಿಸಿ ಮೂತ್ರದ ಬಿಲದೊಳಗೆ ಬಂದಿಹುದ ಕಾಣದೆ ಬರಿದೆ ಮನನೊಂದು’ . . . . . ಇತ್ಯಾದಿ
ವೈಜ್ಞಾನಿಕತೆ, ತರ್ಕ, ಉಪಮೆ, ಪ್ರಾರ್ಥನೆ ಹೀಗೆ ಎಲ್ಲ ಬಗೆಯನ್ನೂ ಬಳಸಿ ಅವರು ಕುಲವನ್ನು ಮೀರುವ ಕಾವ್ಯ ಬರೆದರು.
ಅವರ ಕೃತಿಗಳಲ್ಲೇ ಅಪೂರ್ವವಾದುದು ‘ರಾಮಧಾನ್ಯ ಚರಿತ’. ಅದು ೧೬ನೇ ಶತಮಾನದ ಸಾಮಾಜಿಕ ಸ್ಥಿತಿಯನ್ನೂ, ಬ್ರಾಹ್ಮಣ/ಶೂದ್ರ ಜಾತಿವ್ಯವಸ್ಥೆಯ ಕರಾಳ ಛಾಯೆಯನ್ನೂ ಕಾಣಿಸುವ ರೂಪಕ ಕಾವ್ಯ ಅಣಕು ಮಹಾಕಾವ್ಯ. ‘ಪಂಚತಂತ್ರ’ದಂತೆ. ಅಲ್ಲಿ ಪ್ರಾಣಿ ಪ್ರಪಂಚದ ಮೂಲಕ ಕಥೆ ಕಟ್ಟಿಕೊಂಡರೆ ಇಲ್ಲಿ ಧಾನ್ಯಗಳ ಮೂಲಕ ಪಾತ್ರಗಳನ್ನು ಕಟ್ಟಿಕೊಳ್ಳಲಾಗಿದೆ. ಕತೆ ಬಹಳ ಪ್ರಸಿದ್ಧವಿರುವುದರಿಂದ ನಾನದನ್ನು ಮತ್ತೆ ಹೇಳಲ್ಲ. ಆದರೆ ಕೆಲವು ಗಮನ ಸೆಳೆಯುವ ಅಂಶಗಳನ್ನು ಪ್ರಸ್ತಾಪಿಸ ಬಯಸುವೆ.
ಅಲ್ಲಿ ಭತ್ತ ಮತ್ತು ರಾಗಿಗಳು ಪರಸ್ಪರ ಇಬ್ಬರನ್ನೂ ದೂಷಿಸಿಕೊಳ್ಳುವಾಗ ಆಡುವ ಮಾತುಗಳನ್ನು ಗಮನಿಸಿ.
ಭತ್ತ – ಕುಲಹೀನ, ಮತಿಹೀನ, ಶೂದ್ರಾನ್ನ, ಬಾಹಿರ, ಹದ್ದು, ಬಕ, ಕಾಗೆ
ರಾಗಿ-ಭಂಡ, ಕಡುಜಡ, ಸತ್ವಹೀನ, ಬಡವರವಿರೋಧಿ, ಹೆಣದತುತ್ತು, ದುರಾತ್ಮ, ಮಧುಪಾನ, ದುರ್ಮತಿ
ಜಾತಿ ಬೈಗುಳಗಳನ್ನು ತುಂಬ ಜಾಣ್ಮೆಯಿಂದ ಬಳಸಿಕೊಳ್ಳುತ್ತ, ರಾಘವನ ಕೃಪೆಗೆ ರಾಗಿಯನ್ನು ಪಾತ್ರನನ್ನಾಗಿಸಿ ಬಡವರ ವಿಜಯ ಘೋಷಿಸಿ ವರ್ಣದ ಜತೆ ವರ್ಗವನ್ನೂ ಮೇಳೈಸಿ ಈ ಕಥಾನಕ ಕಟ್ಟಿದ್ದು ಕನಕದಾಸರ ಒಂದು ಹೆಚ್ಚುಗಾರಿಕೆ ಆದರೆ –
ಇನ್ನೊಂದು – ಸಹಬಾಳ್ವೆಯ ಆಶಯವನ್ನು ಕಟ್ಟಿಕೊಡೋದರಲ್ಲಿ ಅವರು ತೋರಿದ ನಿಲುಮೆ. ರಾಮಧಾನ್ಯ ಚರಿತದಲ್ಲಿ ಕೊನೆಯಲ್ಲೊಂದು ಘಟನೆ ನಡೆಯುತ್ತದೆ. ರಾಗಿಯೇ ವಿಜಯಿ ಎಂದು ಸಾರಿದ ರಾಘವ ರಾಮ, ಕುಗ್ಗಿ ಹೋದ ಭತ್ತದ ಹತ್ತಿರ ಬಂದು ಅದನ್ನು ಸಮಾಧಾನ ಪಡಿಸುತ್ತಾನೆ. “ದೀನರಲಿ ದಾರಿದ್ರ ಜನರಲಿ ನೀನು ನಿರ್ದಯನೆಂದೆವಲ್ಲದೆ ಹೀನಗಳೆದವರಲ್ಲ ನಿನ್ನನ್ನು ನಾವು ಸಭೆಯೊಳಗೆ . . .ಬಿಡು ಚಿಂತೆಯಾಕೆಂದ” ಈ ಪದ್ಯವನ್ನು ರಾಮನ ಚಿಲ್ಲರೆ ರಾಜಕೀಯದ ದ್ಯೋತಕವಾಗಿ ಹಲವರು ವಿಶ್ಲೇಷಿಸಿದ್ದಾರೆ. ಆದರೆ ಎಲ್ಲವನ್ನೂ ಒಳಗೊಳ್ಳುವ ಗುಣದ ಸಂಬಂಧವಾಗಿ ಇದನ್ನು ನೋಡಲು ಸಾಧ್ಯವಿದೆ. ಮತ್ತು ಅದು ‘ಕಸವರ’ದ ನಿಲುಮೆ. ವರ್ತಮಾನದ ಭಾರತಕ್ಕೆ ಇದರ ಅಗತ್ಯ ತುಂಬ ಇದೆ ಎಂದುಕೊಂಡಿದ್ದೇನೆ.
ಇನ್ನೊಂದು ಕವನವಿದೆ. ನಾವು ಕುರುಬರು ಅನ್ನೋದು. ಇದು, ಕೆಲವರೆನ್ನುವ ಹಾಗೆ ಕೇವಲ ಅವರ ಅಡ್ರೆಸ್ ಹೇಳುವ ಕವನವಲ್ಲ; ಅವರ ಜೀವನ ದೃಷ್ಟಿಯನ್ನು ಸಾರುವ ಕವನವಾಗಿದೆ.
‘ನಾವು ಕುರುಬರು ನಮ್ಮ ದೇವರು ಬೀರಯ್ಯ ಕಾವ ನಮ್ಮಜ್ಜ ನರಕುರಿಯಾ ಹಿಂಡುಗಳ’ ಎನ್ನುತ್ತ ಸಾಗುವ ಈ ಕವನದಲ್ಲಿ ಮುಂದೆ ಈ ಸಾಲುಗಳು ಬರುತ್ತವೆ. ‘ವೇದ ಶಾಸ್ತ್ರ ಪುರಾಣವೆಂತೆಂಬ ಶ್ವಾನಗಳು/ ಕಾದಿದ್ದು ನಮ್ಮಜ್ಜನ ಹಿಂಡೊಳಗೆ/ಹಾದಿಕಾಣದೆ ಕೂಗಿ ಬಾಯಾರಿ ಕಾಲ್ಗೆಡಲು/ ಆದರಿಸಿ ಅಂಬಲಿಯನೆರೆವ ನಮ್ಮಜ್ಜ/ . . ಅಷ್ಟು ಪ್ರಾಣಿಗಳಿಗೆ/ ಇಷ್ಟು ಅಂಬಲಿಯ ಮಾಡಿ/ ಹೊಟ್ಟೆ ತುಂಬುವ ಹಾಗೆ/ ಎರೆವ ನಮ್ಮಜ್ಜ’
ಕುರುಬರ ಕುರಿಗಳ ಮಂದೆಯ ಜತೆಗಿರುವ ನಾಯಿಗಳಿಗೆ ಬಹಳ ಮಹತ್ವವಿದೆ. ಅವನ್ನು ಇತರರಿಂದ ರಕ್ಷಿಸುವ ಕಾಯಕದಲ್ಲಿ ಕುರುಬನಿಗೆ ನೆರವಾಗುವವೇ ಇವು. ಈ ವಾಸ್ತವಿಕ ಬದುಕನ್ನು ಕನಕದಾಸರು ರೂಪಕವಾಗಿಸುವದನ್ನು ಗಮನಿಸಬೇಕು. ವೇದ ಶಾಸ್ತ್ರಗಳನ್ನು ಬಾಗಿಸುತ್ತಾನೆ. ನಾಯಿಗಳನ್ನು ಪಳಗಿಸಿದ್ದಾನೆಅ. ಅನ್ಯವೆಂದು ಹೊರಗಿಡುವದಿಲ್ಲ. ಅವರ ಕುರುಬ ಎಲ್ಲರಿಗೂ ಇಷ್ಟಿಷ್ಟು ಅಂಬಲಿ ನೀಡುತ್ತಾನೆ.
ಕನಕದಾಸರು ಕಟ್ಟಲು ಹೊರಟ ಕಲ್ಯಾಣದಲ್ಲಿ ಎಲ್ಲರಿಗೂ ಅವಕಾಶವಿದೆ. ಕೆಲವರನ್ನು ಒಳಬಿಟ್ಟು ಕೆಲವರನ್ನು ಹೊರಗಿಡುವ ಪ್ರಯತ್ನ ಅಲ್ಲಿಲ್ಲ. ಯಾರು ಇದುವರೆಗೂ ತನ್ನನ್ನು ಹೊರಗಿಟ್ಟಿದ್ದಾರೋ ಅವರನ್ನೂ ಅಗತ್ಯ ಪರಿವರ್ತನೆಯೊಂದಿಗೆ ಒಳಗೊಳ್ಳುವ ಒಟ್ಟೂ ಕಲ್ಯಾಣದ ಮಾದರಿ ಕನಕದಾಸರದು.
ಆಕರ:
೧. “ ಭಾರತದ ಧಾರ್ಮಿಕ ಚರಿತ್ರೆಯಲ್ಲಿ’ಮನುಷ್ಯ’ನ ಅನಾವರಣ ಆದ ಕಾಲವೆಂದರೆ ಭಕ್ತಿಯ ಸಂದರ್ಭವೇ ಆಗಿದೆಯೆನ್ನಬಹುದು” ಎಂದು ಶಿವರಾಮ ಪಡಿಕ್ಕಲ್ ಸರಿಯಾಗಿಯೇ ಗುರುತಿಸಿದ್ದಾರೆ.
೨. ನಾಗರಾಜ್ ಡಿ.ಆರ್. ಉರಿಚೆಮ್ಮಾಳಿಗೆ,/ ಪು.೭./ದಲಿತ ಚಳುವಳಿಯ ಅಧ್ಯಯನ/ಅನು-ಎಂ.ಎಸ್.ಆಶಾದೇವಿ/ವಸಂತ ಪ್ರಕಾಶನ ಬೆಂಗಳೂರು ೨೦೦೨
ಉತ್ತರ ಕನ್ನಡ ಜಿಲ್ಲೆಯ ರಂಗಭೂಮಿ ಎಂಬ ವಿಷಯದಲ್ಲಿ ಡಾಕ್ಟರೇಟ್ ಮಾಡಿರುವ ಶ್ರೀಪಾದ ಭಟ್, ಸಂಗೀತ, ಸಾಹಿತ್ಯ, ಶಿಕ್ಷಣ ಮತ್ತು ಜನಪದ ಕ್ಷೇತ್ರದಲ್ಲಿ ಸಕ್ರಿಯರಾಗಿ ತೊಡಗಿಸಿಕೊಂಡವರು. ದೆಹಲಿಯ ಎನ್ ಎಸ್ ಡಿ ಆಯೋಜಿಸಿದ ರಂಗಭಾರತ ಮಹೋತ್ಸವದಲ್ಲಿ ಅವರು ನಿರ್ದೇಶಿಸಿದ ಕರ್ಣಭಾರ ಮತ್ತು ಚಿತ್ರಾ ನಾಟಕ ಪ್ರದರ್ಶನ ಕಂಡಿವೆ. ‘ಪಾಪು ಬಾಪು’ ಸಾವಿರಕ್ಕೂ ಹೆಚ್ಚು ಪ್ರದರ್ಶನ ಕಂಡ ನಾಟಕ. ಸದಾನಂದ ಸುವರ್ಣ ಪ್ರಶಸ್ತಿ, ಮಂಜುನಾಥ ಉದ್ಯಾವರ ಪ್ರಶಸ್ತಿ ಸೇರಿದಂತೆ ಅನೇಕ ಪುರಸ್ಕಾರಗಳು ಅವರನ್ನು ಅರಸಿಕೊಂಡು ಬಂದಿವೆ.