ಪರಸ್ಪರ ಆಕರ್ಷಣೆ ಅವಕಾಶಗಳಿದ್ದ ಯಾವ ಪ್ರಣಯಾಸಕ್ತಿಗಳನ್ನೂ ಸಹ ಸಾಹಿರ್ ಒಂದು ಹಂತದ ನಂತರ ಮುಂದುವರೆಸುವ ಇಚ್ಛೆ ತೋರಿಸುತ್ತಿರಲಿಲ್ಲ. ಸಾಹಿರನ ಕಥೆ ವ್ಯಥೆಗಳನ್ನು ಆಪ್ತವಾಗಿ ಬಲ್ಲ ಒಡನಾಡಿಗಳು ಹಾಗು ವಿಮರ್ಶಕರು ಈ ವಿಷಯವಾಗಿ ಅನೇಕ ರೀತಿಯ ಟೀಕೆ ಟಿಪ್ಪಣಿಗಳನ್ನು ಕೊಡುತ್ತಾರೆ. ಹೆತ್ತರವರ ನಡುವಿನ ವಿರಸ ಘರ್ಷಣೆಗಳ ಮಧ್ಯೆ ಸಿಲುಕಿ ನಲುಗಿ ಹೀಗೆ ಜವಾಬ್ದಾರಿಗಳಿಂದ ದೂರ ಸರಿಯುತ್ತಾನೆ ಎಂದು ಅನೇಕರು ಹೇಳುತ್ತಾರೆ. ಮಾರ್ಚ್ 8 ಅಂದರೆ ಆತನ 101ನೆಯ ಹುಟ್ಟುಹಬ್ಬದಂದು ಅಚಲ ಸೇತು ಅವರು ಆ ಮಹಾನ್ ಕವಿಯ ವ್ಯಕ್ತಿಚಿತ್ರವನ್ನು ಕಟ್ಟಿಕೊಟ್ಟಿದ್ದಾರೆ.
“ನನ್ನ ಹಾಡು ನನ್ನದು… ಎಲ್ಲೆಲ್ಲಿಯೂ ಎಂದೆಂದಿಗೂ ನನ್ನಂತೆ ನಾನು ಇರುವೆನು ನುಡಿವೆನು ನಡೆವೆನು ದುಡಿವೆನು ಈ ಬಾಳಲಿ” ಎಸ್ ಪಿ ಬಿ ಮಧುರ ಕಂಠದಿಂದ ಸುಪ್ರಭಾತ ಚಿತ್ರದ ಹಾಡು ಹೊಮ್ಮುತ್ತಿತ್ತು. ಎಲ್ಲೆಲ್ಲಿಯೂ ಎಂದೆಂದಿಗೂ ನಮ್ಮಂತೆ ನಾವು ಇರುವುದು ಸುಲಲಿತವಾದ ಹಾಡಿನಂತೆ ಸುಲಭಸಾಧ್ಯವೇ? ತಮ್ಮ ಬೇಳೆ ಬೇಯಿಸಿಕೊಳ್ಳುವ ಸಲುವಾಗಿ ತಗ್ಗಿ ಬಗ್ಗಿ ಬದುಕಿಗೆ ಒಗ್ಗಿಕೊಳ್ಳಲು ಹೈರಾಣಾಗುವ ಶ್ರೀ ಸಾಮಾನ್ಯರ ನಡುವೆ ಯಾರಿಗೂ ಕ್ಯಾರೇ ಅನ್ನದೆ ತಮ್ಮಂತೆ ತಾವು ಇದ್ದು ಗೆಲ್ಲುವವರು ವಿರಳ. ಗೀತ ರಚನೆಯಲ್ಲಿ ಮಾಹಿರನೆನೆಸಿದ್ದ ಎಪ್ಪತ್ತರ ದಶಕದ ಸಾಹಿತಿ ಸಾಹಿರ್ ಲುಧಿಯಾನ್ವಿ ತನ್ನ ಕಲೆ ಬೆಲೆಗಳ ಬಗ್ಗೆ ಅಚಲ ನಂಬಿಕೆ ಇಟ್ಟು ಹಿಂದಿ/ಉರ್ದು ಸಾಹಿತ್ಯ ಹಾಗು ಸಿನಿಮಾ ಕ್ಷೇತ್ರಗಳಲ್ಲಿ ಗಟ್ಟಿ ನೆಲೆ ಕಂಡುಕೊಂಡಂತಹ ಒಬ್ಬ ಅಪರೂಪದ ವ್ಯಕ್ತಿ.
ತಲಖಿಯಾನ್ ಎಂಬ ಕಹಿ ಸತ್ಯ
ಶ್ರೀಮಂತ ಕುಟುಂಬದಲ್ಲಿ ಜನಿಸಿದ್ದರೂ ಸಾಹಿರನ ಬಾಲ್ಯ ಕಷ್ಟ ಕಾರ್ಪಣ್ಯಗಳಿಂದ ತುಂಬಿತ್ತು. ತಂದೆ ಫಝಲ್ ಮೊಹಮ್ಮದ್ ಹೆಂಡ ಹೆಣ್ಣುಗಳ ಲೋಲುಪತೆಯಲ್ಲಿ ಓಲಾಡುವ ಜಮೀನುದಾರ. ಆತನ ಜೊತೆಗಿನ ಗುಲಾಮಗಿರಿಯ ಜೀವನವನ್ನು ಧಿಕ್ಕರಿಸಿ ಪುಟ್ಟ ಮಗನೊಂದಿಗೆ ಸಂಸಾರದಿಂದ ಹೊರ ನಡೆದ ಸಾಹಿರನ ತಾಯಿ ಸರ್ದಾರ್ ಬೇಗಂ ಗಟ್ಟಿಗಿತ್ತಿ. ತಂದೆ ತಾಯಿಯರ ಕೋರ್ಟು ಕಚೇರಿಗಳ ವ್ಯಾಜ್ಯ, ಬಡತನ, ಅವಮಾನ ಅಸಹಾಯಕತೆಗಳು ಸಾಹಿರನನ್ನು ಗಝಲ್ ನಝಮ್ ಗಳ ಪ್ರಪಂಚದಲ್ಲಿ, ಸಮತಾವಾದದ ನೆಲೆಗಟ್ಟು ಹೊಂದಿರುವ ವಿಚಾರಧಾರೆಗಳಲ್ಲಿ ತನ್ನ ಅಭಿವ್ಯಕ್ತಿಯನ್ನು ಕಂಡುಕೊಳ್ಳುವಂತೆ ಪ್ರೇರೇಪಿಸಿದವು. “ಅನುಭವ ಅವಘಡಗಳ ಮುಖವಾಡ ಹೊತ್ತು ಜಗತ್ತು ನನಗೆ ಏನು ನೀಡಿರುವುದೋ ಅದನ್ನು ಹಾಗೆಯೇ ಹಿಂದಿರಿಗಿಸುತ್ತಿರುವೆ” ಎಂಬ ಮುನ್ನುಡಿಯೊಂದಿಗೆ ಇಪ್ಪತ್ತ ಮೂರನೆಯ ವಯಸ್ಸಿನಲ್ಲಿ ಸಾಹಿರನ ಮೊದಲ ಕವನ ಸಂಕಲನ ‘ತಲಖಿಯಾನ್’(ಕಹಿ) ಪ್ರಕಟಣೆಯಾಗುತ್ತದೆ. ಪ್ರಣಯದ ಕೋಮಲ ಭಾವನೆಗಳಿಗೆ ವ್ಯತಿರಿಕ್ತವಾದ ಯುದ್ಧದ ಭೀಷಣ ಭೀಭತ್ಸಗಳನ್ನು ಪಕ್ಕ ಪಕ್ಕದಲ್ಲೇ ಇರಿಸಿ ಹೋಲಿಸುವ ‘ಪರ್ಚಾಯಿಯಾನ್’, ಬಾದಷಾಹನ ದರ್ಪ ದಬ್ಬಾಳಿಕೆಯ ಸಂಕೇತವೇ ಹೊರತು ಪ್ರೇಮದ ಪ್ರತೀಕವಲ್ಲವೆನ್ನುವ ‘ತಾಜ್ ಮಹಲ್’, ಕಭೀ ಕಭೀ ಮೇರೇ ದಿಲ್ ಮೇ, ಫನ್ಕಾರ್ ನಂತಹ ಸುಂದರ ಕವನಗಳು ತಲಖಿಯಾನ್ ನಲ್ಲಿವೆ.
ತುತ್ತು ಮುತ್ತುಗಳ ಸುಳಿಯಲ್ಲಿ
ಎತ್ತರದ ನಿಲುವಿನ ಅಬ್ದುಲ್ ಹಯೀ ಸುಂದರ ಪುರುಷನೇನಲ್ಲ. ಪಂಜಾಬಿನ ಲುಧಿಯಾನಾ ನಗರದಲ್ಲಿ ಹುಟ್ಟಿ ಬೆಳೆದು ಕವಿತೆ ಕವನಗಳ ಸೃಷ್ಟಿ ಸಂವಹನಗಳಲ್ಲಿ ಪಳಗುತ್ತಾ ಫಳಗುಟ್ಟುತ್ತ ತನಗೆ ತಾನು ಕೊಟ್ಟುಕೊಂಡ ಕಾವ್ಯ ನಾಮ ಸಾಹಿರ್(ಜಾದೂಗಾರ) ಎಂದು. ಸಾಹಿರನ ಜಾದೂ ಕಾಲೇಜಿನ ದಿನಗಳಿಂದಲೇ ಹದಿ ಹರೆಯದ ಹುಡುಗಿಯರನ್ನು ಮೋಡಿ ಮಾಡುತ್ತಿತ್ತು.
ಇಶಾರ್ ಕೌರ್ ಎಂಬ ಪಂಜಾಬಿ ಹುಡಿಗಿಯೊಬ್ಬಳ ಜೊತೆಗಿನ ಪ್ರೇಮ ಸಲ್ಲಾಪ ಗುಲ್ಲಾಗಿ ಕಡೆಗೆ ಸಾಹಿರನನ್ನು ಕಾಲೇಜಿನಿಂದ ಹೊರಹಾಕಲಾಯಿತು. ಹೊಸ ಯವ್ವನದ ಹೊನಲಲ್ಲಿ ಬುರುಗು ಬುರುಗಾಗಿ ಉಕ್ಕಿ ಹರಿದು ತಣ್ಣಗಾಗುವ ಮತ್ತೊಂದೆರಡು ಪ್ರೇಮ ಪ್ರಕರಣಗಳ ಪರವಶತೆ ವಿವಶತೆಗಳಲ್ಲಿ ಮಿಂದು ಸಾಹಿರನ ಕವಿತೆಗಳು ಸಭೆ ಸಮಾವೇಶಗಳಲ್ಲಿ ನಳನಳಿಸಲಾರಂಭಿಸಿದವು. ಲಾಹೋರಿನಲ್ಲಿ ನಡೆದ ಕವಿಗೋಷ್ಠಿಯೊಂದರಲ್ಲಿ ಸಾಹಿರನ ಮುಲಾಕಾತ್ ಪಂಜಾಬಿ ಕವಯತ್ರಿ ಅಮೃತ ಪ್ರೀತಮಳ ಜೊತೆ ಆಯಿತು. ಮೃದು ಮಧುರ ಭಾಷಿಣಿ ಅಮೃತ ಸೌಂದರ್ಯದ ಖನಿ. ಸಾಹಿರ ಆದರ್ಶ ಪೌರುಷಗಳ ಗಣಿ. ಬೆಂಕಿ ಬೆಣ್ಣೆ ಸಮೀಕರಣವಾಗಿ ಇಬ್ಬರ ನಡುವೆ ಪ್ರೇಮ ಅಂಕುರವಾಯಿತು. ಮುಂದೆ ಹಲವಾರು ವರ್ಷಗಳ ಕಾಲ ಇಬ್ಬರ ನಡುವೆ ಬಾಂಧವ್ಯ ಮುಂದುವರೆದರೂ ಅವರ ಪ್ರೀತಿ ಮದುವೆಯ ವರೆಗೆ ತಲುಪಲಿಲ್ಲ. ಸಮಾಜದ ಕಾಯ್ದೆ ಕಟ್ಟಳೆಗಳನ್ನು ಧಿಕ್ಕರಿಸಿ ಅಮೃತ ಸಾಹಿರನ ಜೊತೆ ಬಾಳ್ವೆ ಮಾಡಬಯಸಿದರು ಸಹ ಸಾಹಿರ ಮುಂದಿನ ಹೆಜ್ಜೆ ಇಡುವ ಬಗ್ಗೆ ಆಸಕ್ತಿ ತೋರ್ಪಡಿಸಲಿಲ್ಲ. ಪರಸ್ಪರ ಆಕರ್ಷಣೆ ಅವಕಾಶಗಳಿದ್ದ ಯಾವ ಪ್ರಣಯಾಸಕ್ತಿಗಳನ್ನೂ ಸಹ ಅವನು ಒಂದು ಹಂತದ ನಂತರ ಮುಂದುವರೆಸುವ ಇಚ್ಛೆ ತೋರಿಸುತ್ತಿರಲಿಲ್ಲ. ಸಾಹಿರನ ಕಥೆ ವ್ಯಥೆಗಳನ್ನು ಆಪ್ತವಾಗಿ ಬಲ್ಲ ಒಡನಾಡಿಗಳು ಹಾಗು ವಿಮರ್ಶಕರು ಈ ವಿಷಯವಾಗಿ ಅನೇಕ ರೀತಿಯ ಟೀಕೆ ಟಿಪ್ಪಣಿಗಳನ್ನು ಕೊಡುತ್ತಾರೆ. ಹೆತ್ತರವರ ನಡುವಿನ ವಿರಸ ಘರ್ಷಣೆಗಳ ಮಧ್ಯೆ ಸಿಲುಕಿ ನಲುಗಿ ಮದುವೆಯ ಬಾಧ್ಯತೆ ಹಾಗು ಕಟ್ಟುಪಾಡುಗಳ ಬಗ್ಗೆ ತೀವ್ರತರವಾದ ಭಯ ಸಾಹಿರನ ಮನದಲ್ಲಿ ಮನೆಮಾಡಿತ್ತು ಎಂದು ಪ್ರಖ್ಯಾತ ಸಾಹಿತಿ ಮತ್ತು ಒಡನಾಡಿ ಜಾವೇದ್ ಅಕ್ತರ್ ಹೇಳುತ್ತಾರೆ.
ಉಸಿರು ಕಟ್ಟುವಂತಹ ತಾಯಿಯ ವಜ್ರ ಮುಷ್ಟಿಯ ಹಿಡಿತ, ಆಕೆಯ ತ್ಯಾಗ ಧೈರ್ಯಗಳ ಬಗ್ಗೆ ತೀವ್ರವಾದ ಅಭಿಮಾನ, ಜೊತೆಗಾತಿಯ ಹಂಬಲ ಹೀಗೆ ಹಲವಾರು ಭಾವನೆಗಳ ತಾಕಲಾಟಗಳಿಂದ ಮುಂದಿನ ಹೆಜ್ಜೆ ಎತ್ತಲಾರದೆ ಹುಟ್ಟುತ್ತಿದ್ದ ತಟಸ್ಥ ನಿಲುವು. ‘ಸಾಹಿರ್ ತನ್ನ ಜೀವನದಲ್ಲಿ ಪ್ರೀತಿಸಿದ ಒಂದೇ ಹೆಣ್ಣು ತನ್ನ ತಾಯಿ ಮತ್ತು ದ್ವೇಷಿಸಿದ್ದು ತನ್ನ ತಂದೆಯನ್ನು ಮಾತ್ರ’ ಸ್ನೇಹಿತ ಅಹ್ಮದ್ ರಾಹಿಯ ಹೇಳಿಕೆಯನ್ನು ಮುಂದುವರೆಸುತ್ತ ಲೇಖಕ ಖುಷ್ವಂತ್ ಸಿಂಗ್ ಈಡಿಪಸ್ ಸಂಕೀರ್ಣತೆಯನ್ನು ಹೆಸರಿಸುತ್ತಾರೆ. ಕಾರಣ ಏನೇ ಇರಲಿ, ರಸಿಕ ವಾಚಕರ ಮನದಲ್ಲಿ ಒಲವಿನ ರಾಗ ರಂಗುಗಳ ಗುಂಗು ತುಂಬುವ ಅದ್ಭುತ ಕವನಗಳ ಕರ್ತೃವಿಗೆ ಜೀವನ ಸಂಗಾತಿಯ ದೊರಕದಿದ್ದದ್ದು ಬೇಸರದ ಸಂಗತಿ.
ಇಶಾರ್ ಕೌರ್ ಎಂಬ ಪಂಜಾಬಿ ಹುಡಿಗಿಯೊಬ್ಬಳ ಜೊತೆಗಿನ ಪ್ರೇಮ ಸಲ್ಲಾಪ ಗುಲ್ಲಾಗಿ ಕಡೆಗೆ ಸಾಹಿರನನ್ನು ಕಾಲೇಜಿನಿಂದ ಹೊರಹಾಕಲಾಯಿತು. ಹೊಸ ಯವ್ವನದ ಹೊನಲಲ್ಲಿ ಬುರುಗು ಬುರುಗಾಗಿ ಉಕ್ಕಿ ಹರಿದು ತಣ್ಣಗಾಗುವ ಮತ್ತೊಂದೆರಡು ಪ್ರೇಮ ಪ್ರಕರಣಗಳ ಪರವಶತೆ ವಿವಶತೆಗಳಲ್ಲಿ ಮಿಂದು ಸಾಹಿರನ ಕವಿತೆಗಳು ಸಭೆ ಸಮಾವೇಶಗಳಲ್ಲಿ ನಳನಳಿಸಲಾರಂಭಿಸಿದವು.
ಗೆಲುದನಿಯ ಗುಡುಗುಡುಗಿಗೆ ಸೋಲು ಸೊಲ್ಲಡಗಿದಾಗ
ದೇಶದ ವಿಭಜನೆಯಾದ ಬಳಿಕ ಕನಸುಗಳ ನಗರಿ ಮುಂಬೈ ಸಾಹಿರನ ಪ್ರತಿಭೆಗೆ ತಕ್ಕುದಾದ ವೇದಿಕೆ ಅವಕಾಶಗಳನ್ನು ಕೊಟ್ಟು ಪೋಷಿಸಿತು. ಐವತ್ತು ಹಾಗು ಅರವತ್ತರ ದಶಕಗಳಲ್ಲಿ ತೆರೆ ಕಂಡ ಬಾಝಿ, ಪ್ಯಾಸಾ, ತಾಜ್ ಮಹಲ್, ಹಮ್ ದೋನೋ ಮುಂತಾದ ಚಿತ್ರಗಳ ಹಾಡುಗಳು ಅಪಾರ ಜನಮನ್ನಣೆಗೆ ಪಾತ್ರವಾದವು. ಸಾಹಿರನಿಗಂತು ತನ್ನ ಕಲೆಯ ಬಗ್ಗೆ ಅಪರಿಮಿತ ವಿಶ್ವಾಸ, ಅಭಿಮಾನ. ಯಶಸ್ಸಿನ ಕೀರ್ತಿ ಪತಾಕೆಯನ್ನು ಹಾರಿಸುತ್ತ ಮೆರೆವ ಇವನ ಹಮ್ಮು ಬಿಮ್ಮುಗಳಿಂದ ಕಿರಿಕಿರಿಗೊಂಡವರು ಅನೇಕರು. ಲತಾ ಮಂಗೇಶ್ಕರಳ ಧ್ವನಿ, ಸಂಗೀತಜ್ಞರ ರಾಗ ಸಂಯೋಜನೆ ಇರದ ಸಾಹಿರನ ಗೀತೆಗಳಿಗೆ ಕವಡೆ ಕಾಸಿನ ಕಿಮ್ಮತ್ತೆಂದರು. ಹೀಗಳೆವರ ಸೊಲ್ಲಡಗಿಸಲು ಎರಡು ವರುಷಗಳ ಕಾಲ ಲತಾಳ ಜೊತೆ ಕೆಲಸ ಮಾಡದೆ ಉದಯೋನ್ಮುಖ ಸಂಗೀತ ನಿರ್ದೇಶಕರು ಹಾಗು ಗಾಯಕರ ಜೊತೆಗೂಡಿ ಅನೇಕ ಹಿಟ್ ಗೀತೆಗಳನ್ನು ನೀಡುವ ಮೂಲಕ ತನ್ನ ವರ್ಚಸ್ಸನ್ನು ಮತ್ತೂ ವಿಸ್ತರಿಸಿಕೊಂಡು ಮಿಂಚಿದ. ಮೆಲೊಡಿ ಕ್ವೀನ್ ಲತಾಳ ಜೊತೆ ಮತ್ತೆ ಕೆಲಸ ಮಾಡುವಂತೆ ಅಂಗಲಾಚುವ ನಿರ್ಮಾಪಕರ ಬೇಡಿಕೆಗೆ ಮಣಿದು ಆಕೆಗಿಂತ ಒಂದು ರೂಪಾಯಿ ಹೆಚ್ಚಿನ ಸಂಭಾವನೆ ಪಡೆಯುವ ಷರತ್ತಿನೊಂದಿಗೆ ಒಪ್ಪಿಗೆ ನೀಡಿದನಂತೆ! ಗೆಲುವು ಬೆನ್ನು ತಟ್ಟಿ ಹುರಿದುಂಬಿಸುತ್ತಿತ್ತು. ಆತ್ಮ ವಿಶ್ವಾಸ ಪುಟಿ ಪುಟಿದು ಕುಣಿಯುತ್ತಿತ್ತು. ಫದ್ಯೋರ್ ದಾಸ್ತಾವೆಸ್ಕಿ ಬರೆದ ‘ಕ್ರೈಂ ಅಂಡ್ ಪನಿಶ್ಮೆಂಟ್’ ಕಾದಂಬರಿಯನ್ನು ಆಧರಿಸಿದ “ಫಿರ್ ಸುಬಹ್ ಆಯೇಗಿ” ಚಿತ್ರಕ್ಕೆ ಶಂಕರ್ ಜೈಕಿಶನ್ ಸಂಗೀತ ಮತ್ತು ಸಾಹಿರನ ಗೀತ ರಚನೆ ಎಂಬ ಒಡಂಬಡಿಕೆಯಾಗಿತ್ತು. ಸಂಗೀತ ನಿರ್ದೇಶಕರಿಗೆ ಮೂಲ ಕಾದಂಬರಿಯ ಪರಿಚಯವಿರಲಿಲ್ಲ ಎಂಬ ಕಾರಣಕ್ಕೆ ಸಾಹಿರ ಅವರೊಡನೆ ಕೆಲಸ ಮಾಡಲು ಒಪ್ಪದೆ ಉದಯೋನ್ಮುಖ ಸಂಗೀತಗಾರ ಖಯ್ಯಾಮ್ ನನ್ನು ಶಿಫಾರಸು ಮಾಡಿದ. ಚಿತ್ರದ ಗೆಲುವಿನ ಜೊತೆಗೆ ಸಾಹಿರನ ಅಧಿಕ ಪ್ರಸಂಗಿತನ ಹೆಚ್ಚಾಯಿತು. ಸಂಗೀತ ನಿರ್ದೇಶಕರು ರಚಿಸಿದ ಟ್ಯೂನುಗಳಿಗೆ ಹೊಂದುವಂತೆ ಹಾಡು ಬರೆಯುವುದು ತನ್ನ ಘನತೆಗೆ ಅಪಮಾನ ಎನಿಸತೊಡಗಿತು. ತಾನು ಬರೆದ ಗೀತೆಗಳಿಗೆ ರಾಗ ಹಾಕುವಂತೆ ವರಾತ ಹೂಡತೊಡಗಿದ. ಎಸ್. ಡಿ. ಬರ್ಮನ್ ನಂತಹ ದಿಗ್ಗಜರು ಸಾಹಿರನ ಜೊತೆ ಏಗಲಾರದೆ ದೂರ ಸರಿಯತೊಡಗಿದರು. ಆದರೆ ಸಾಹಿರನ ಧೃಡ ಹಾಗು ಪ್ರಭಾವಿ ವ್ಯಕ್ತಿತ್ವದಿಂದ ಅನೇಕ ಒಳ್ಳೆಯ ಕೆಲಸಗಳು ಸಹ ಆದವು.
ಆ ದಿನಗಳಲ್ಲಿ ಗೋಡೆಗಳ ಮೇಲೆ ರಾರಾಜಿಸುವ ಸಿನಿಮಾ ಭಿತ್ತಿಪತ್ರಗಳಲ್ಲಿ ಹಾಗು ಚಿತ್ರಗೀತೆಗಳನ್ನು ಪ್ರಸಾರ ಮಾಡುವ ಬಾನುಲಿ ಕಾರ್ಯಕ್ರಮಗಳಲ್ಲಿ ಗೀತಕಾರರನ್ನು ಹೆಸರಿಸುವ ಪರಿಪಾಠವಿರಲಿಲ್ಲ. ಸಾಹಿರನ ಹಸ್ತಕ್ಷೇಪದಿಂದ ಗೀತ ರಚನೆಕಾರರಿಗೆ ಮನ್ನಣೆ ಸಿಗುವಂತಾಯಿತು. ಆನೆ ತಾನು ನಡೆದಿದ್ದೇ ದಾರಿ ಎಂದು ತರು ಲತೆಗಳನ್ನು ಲಟ ಲಟ ಮುರಿಯುತ್ತ ನಡೆಯುವಾಗ ಸೊಕ್ಕಿನ ಸಲಗವೋ ಅಥವಾ ಸಂಕಷ್ಟಗಳನ್ನು ಎದೆಗಾರಿಕೆಯಿಂದ ಎದುರಿಸುವ ಗಜರಾಜನೊ ಎನ್ನುವುದು ಅಡ್ಡ ಬಂದವರ ಅಥವಾ ಹಿಂಬಾಲಕರ ದೃಷ್ಟಿಕೋನಕ್ಕೆ ಬಿಟ್ಟದ್ದು ಅಲ್ಲವೇ? ವಿರೋಧಾಭಾಸಗಳಿಂದ ತುಂಬಿದ ಸಾಹಿರನ ವ್ಯಕ್ತಿತ್ವ ಅವನಿಗೆ ಅನೇಕ ಮಿತ್ರರ ಜೊತೆ ಶತ್ರುಗಳನ್ನು ಕೊಟ್ಟಿತು.
ಕವಿಯ ಕೆಲ ಸಾಲುಗಳ ಗುನುಗು
ಜೀವನ ಪ್ರೀತಿ, ರಸಿಕತೆ, ಬಂಡಾಯ ಭಾವಗಳಲ್ಲಿ ಮುಳುಗಿದರೂ ತೇಲುತ್ತ ಅಂತರ ಕಾಪಾಡಿಕೊಳ್ಳುವ ಒಂದು ಬಗೆಯ ವಿರಕ್ತಿಯ ಸುಳಿವು ಸಾಹಿರನ ಕವಿತೆಗಳಲ್ಲಿರುತ್ತದೆ.
ಬಾಳ ತಾಳ ಮೇಳಕೆ ಸಮನಾಗಿ ನಡೆವೆನು
ಅಳಿದ ಮೇಲೆ ಉಳಿವ ಅಳುವು ನಿರುಪಯೋಗವು
ಅಳಿಯಿತೆಂದು ನಲಿವ ನಗುವೇ ಪರಮ ಯೋಗವು
ಹಿಂದಿಯಿಂದ ಕನ್ನಡಕ್ಕೆ ಸಡಿಲವಾಗಿ ಅನುವಾದಿಸಿರುವ ಈ ಸಾಲುಗಳು ಸಾಹಿರ್ ಲುಧಿಯಾನ್ವಿಯ ಸೂಪರ್ ಹಿಟ್ ಗೀತೆಯೊಂದರ ತುಣುಕು. ಸಂಗೀತಗಾರ ಜಯದೇವರ ಸಾರಥ್ಯದಲ್ಲಿ ಮೊಹಮ್ಮದ್ ರಫಿಯ ಮಧುರ ಕಂಠದಿಂದ ಹೊಮ್ಮಿದ “ಝಿಂದಗೀಕ ಸಾಥ್ ನಿಭಾತಾ ಚಲಾಗಯಾ” ಹಾಡಿನ ಸಾಹಿತ್ಯ ಅತ್ಯಂತ ಸರಳವಾಗಿ ಸುಖ ದುಃಖಗಳು ಒಂದೇ ನಾಣ್ಯದ ಎರಡು ಮುಖಗಳು ಎನ್ನುವ ತತ್ವವನ್ನು ಹೇಳುತ್ತಾ ಸಾಗುತ್ತದೆ.
ಪ್ಯಾಸಾ ಚಿತ್ರದ “ಏ ದುನಿಯಾ ಅಗರ್ ಮಿಲ್ ಭೀ ಜಾಯೆ ತೊ ಕ್ಯಾ ಹೈ”, ಮಾತೃ ಹೃದಯದ ವಿದ್ರಾವಕ ಜೋಗುಳ “ತು ಮೇರೇ ಸಾಥ್ ರಹೇಗಾ ಮುನ್ನೆ”, “ಕಭಿ ಖುದ್ ಫೆ ಕಭಿ ಹಾಲಾತ್ ಪೆ ರೋನಾ ಆಯಾ” ಮನ ಮಿಡಿಯುವ ಹಾಡುಗಳ ಮೂಲಕ ಸಾಹಿರ ತನ್ನ ಆತ್ಮ ಚರಿತೆಯ ಕೆಲ ಪುಟಗಳನ್ನೂ ಹಂಚಿಕೊಂಡಂತಿವೆ.
ಕಡಲಾಚೆಗಿನ ಕನ್ನಡದ ಬರಹಗಾರ್ತಿ..