ಅಂತರ್ಜಾತಿ ಮತ್ತು ಅಂತರ ಧರ್ಮೀಯ ವಿವಾಹಗಳು ಈ ಸಮುದಾಯದಲ್ಲಿ ಬಹು ಹಿಂದಿನಿಂದಲೆ ನಡೆದಿವೆ. ಈ ಪರಂಪರೆ ಈಗಲೂ ವಿರಳವಾಗಿ ಮುಂದುವರಿದೆ. ಕ್ಷೇತ್ರಕಾರ್ಯದಲ್ಲಿ ಸಿಕ್ಕ ಮಾಹಿತಿಯ ಪ್ರಕಾರ ತಮಗಿಂತ ಮೇಲಿನ ಸಮುದಾಯಗಳಲ್ಲಿ ಮತ್ತು ಸಮನಾಂತರ ಎಂದು ಭಾವಿಸಿದ ಸಮುದಾಯಗಳಲ್ಲಿ ಮದುವೆ ನಡೆದಿರುವುದು ಹೆಚ್ಚು. ತಮಗಿಂತ ಕೆಳಗಿನವರು ಎಂದು ಭಾವಿಸಿದ ಸಮುದಾಯಗಳ ಜತೆ ಮದುವೆ ಸಂಬಂಧಗಳು ಸಂಭವಿಸಿರುವುದು ಕಡಿಮೆ. ಹುಟ್ಟಿನಿಂದ ಸಾವಿನವರೆಗೆ ಸಮುದಾಯದವರು ನಡೆಸುವ ಆಚರಣೆಗಳು ವಿಭಿನ್ನವಾಗಿವೆ.
ಡಾ. ಅರುಣ್ ಜೋಳದ ಕೂಡ್ಲಿಗಿ ಬರೆಯುವ ‘ಗಂಟಿಚೋರರ ಕಥನಗಳು’ ಸರಣಿಯ ಹದಿನೈದನೇ ಕಂತು.
ಗಂಟಿಚೋರ ಸಮುದಾಯದಲ್ಲಿ ಜೀವನಾವರ್ತಮ ಆಚರಣೆಗಳು
ಗಂಟಿಚೋರ ಸಮುದಾಯವು ಜೀವನಾವರ್ತನ ಆಚರಣೆಗಳಲ್ಲಿ ತಮ್ಮ ಸಮುದಾಯ ನಿಷ್ಠ ಗುರುತುಗಳನ್ನು ಬಹುಪಾಲು ಅಳಿಸಿಕೊಂಡಿದೆಯೆಂದೇ ಹೇಳಬೇಕು. ಕಾರಣ ಈ ಸಮುದಾಯ ತನ್ನ ನೆರೆಹೊರೆಯ ಸಮಾಜದ ಜತೆ ಬೆರೆಯುತ್ತಾ ಮೇಲುಚಲನೆಯ ಭಾಗವಾಗಿ ಅನೇಕ ಆಚರಣೆಗಳನ್ನು ತನ್ನ ಸುತ್ತಣ ಪರಿವಾರದ ಪ್ರಭಾವದಿಂದ ಮರು ರೂಪಿಸಿಕೊಂಡಂತಿದೆ. ಹಾಗಾಗಿ ಕ್ಷೇತ್ರಕಾರ್ಯದ ಸಂದರ್ಭದಲ್ಲಿ ನಿಮ್ಮ ಸಮುದಾಯ ಮಾತ್ರ ಮಾಡಬಹುದಾದ ಆಚರಣೆಗಳೇನಾದರೂ ಇದೆಯಾ ಎಂದರೆ, ಏನಿಲ್ರಿ ಎಲ್ರೂ ಮಾಡಿದಂಗೆ ಮಾಡ್ತೀವಿ ಎನ್ನುವ ಸಿದ್ದ ಉತ್ತರವೊಂದು ಎದುರಾಯಿತು. ಆದರೆ ಈ ಸಮುದಾಯದ ಹಿರಿಯರ ಜತೆ ಮಾತನಾಡುತ್ತಾ ಹೋದಂತೆ ಜೀವನಾವರ್ತನ ಆಚರಣೆಗಳಲ್ಲಿ ಕೆಲವು ವಿಶಿಷ್ಠಾಂಶಗಳು ಕಾಣುತ್ತವೆ. ಇಲ್ಲಿ ಅಂತಹ ವಿಶಿಷ್ಠಾಂಶಗಳನ್ನು ಮಾತ್ರ ಮುಖ್ಯವಾಗಿ ಚರ್ಚೆ ಮಾಡುವುದು ಸೂಕ್ತ ಎಂದು ಕಾಣುತ್ತದೆ.
ಹುಟ್ಟು:
ಕೂಸು ಹುಟ್ಟಿದ ಮೂರು ದಿನಕ್ಕೆ ತಣ್ಣೀರಿನ `ಬೆದರ ನೀರು’ ಹಾಕುವ ಸಂಪ್ರದಾಯವಿದೆ. ಇದರ ಹಿಂದೆ ಮಗು ಮುಂದೆ ದೈರ್ಯದಿಂದಿರಲಿ ಎನ್ನುವ ನಂಬಿಕೆ ಇದೆ. ಮೊದಲ ಮೂರು ದಿನ ತಾಯಿಯ ಹಾಲಿನ ಬದಲಿಗೆ ಮಗುವಿಗೆ ಜೇನು ತುಪ್ಪ ಕೊಡುವ ನಂಬಿಕೆ ಇತ್ತು. ವೈದ್ಯಕೀಯ ಪರಿಚಯದಿಂದಾಗಿ ಈ ನಂಬಿಕೆ ಈಗ ಬದಲಾಗಿದೆ. ಸಾಮಾನ್ಯವಾಗಿ ತಾಯಿಗೆ ಸಜಕಾ, ಕೊಬ್ರಿ, ಖಾರಾ, ಗೋದಿಹಿಟ್ಟಿನ ಆಹಾರವನ್ನು ಕೊಡುತ್ತಾರೆ. ಮೊದಲು ಬಾಣಂತಿಗೆ ಸೇಂದಿ (ಭಟ್ಟಿಸೆರೆ) ಕೊಡುವ ಪದ್ದತಿ ಇತ್ತು. ಇದೀಗ ಬದಲಾಗಿದೆ. ಕೆಲವು ಕಡೆಗಳಲ್ಲಿ ಆಧುನಿಕ ಸಾರಾಯಿ, ಬ್ರಾಂದಿಯನ್ನು ಕೊಡುವ ಪದ್ದತಿ ಇದೆ. ಇದರಲ್ಲಿ ನಗರ ಗ್ರಾಮೀಣರಲ್ಲಿ ಫರಕಿದೆ. ಸಾಮಾನ್ಯವಾಗಿ ಬಾಣಂತಿಗೆ ಮಾಂಸಾಹಾರವನ್ನು ಕೊಡುತ್ತಾರೆ.
ಮಗು ಹುಟ್ಟಿದ ಐದನೇ ದಿನಕ್ಕೆ ಹೊರಗಿನವರು ಮನೆಗೆ ಬರುವ, ಹೆರಿಗೆಯಾದ ಮನೆಯವರು ಹೊರಗಿನ ಮನೆಗೆ ಹೋಗುವ ಕಟ್ಟುನಿಟ್ಟು (ಹೊಲಿಮನಿ) ಮುರಿಯುತ್ತದೆ. ಇದಕ್ಕೆ `ಐದೇಸಿ’ ಎನ್ನುವರು. ಈ ದಿನದಂದು `ಸೆಟಿಗೆವ್ವನ’ ಪೂಜೆ ಮಾಡುತ್ತಾರೆ. ಸೆಟಿಗೆವ್ವ ಮಗುವಿನ ಹಣೆಬರಹ ಬರೆಯುವಂತೆ ಸಮುದಾಯ ನಂಬುತ್ತದೆ. ಇದರಲ್ಲಿ ಗುಂಡುಕಲ್ಲಿಗೆ ಬಾಣಂತಿ ತಾಳಿಯನ್ನು ಹಾಕಿ ಪೂಜೆ ಮಾಡುವುದು ವಿಶೇಷವಾಗಿದೆ. ಪೂಜೆಯಾದ ಬಳಿಕ ಬಾಣಂತಿಗೆ ಬಳೆ ಹಾಕುವುದಿದೆ. ಇದು ಪ್ರಕೃತಿಪೂಜೆಯನ್ನು ನೆನಪಿಸುತ್ತದೆ. ಈ ಪೂಜೆಯಲ್ಲಿ ಸೆಟಿಗೆವ್ವನಲ್ಲಿಮಗುವಿನ ಹಣೆಬರಹ ಚೆನ್ನಾಗಿ ಬರೆಯುವಂತೆ ಬೇಡಿಕೊಳ್ಳುತ್ತಾರೆಂದು ಸಮುದಾಯದ ಹಿರಿಯ ಹೆಣ್ಣುಮಕ್ಕಳು ಹೇಳುತ್ತಾರೆ. ಗಂಡನ ಮನೆಯವರು `ಸಜ್ಜಾ’ ಕೊಬ್ಬರಿ ಖಾರ ಮುಂತಾದ ಶಕ್ತಿವರ್ಧಕ ಆಹಾರ ಸಾಮಗ್ರಿಗಳನ್ನು ತರುತ್ತಾರೆ.
ಮಗು ಹುಟ್ಟಿದ ೭.೯.೧೩,೧೫, ೨೧, ೩೧ ಈ ಯಾವುದೇ ದಿನದಲ್ಲಿ ಮಗುವಿನ ಹೆಸರು ಇಡುವ ಪದ್ದತಿ ಇದೆ. ಆರಂಭದಲ್ಲಿ ಮನೆದೇವರ ಹೆಸರು ಕರೆದು ನಂತರ ಯಾವುದೇ ಹೆಸರು ಇಡುವ ಪದ್ದತಿ ಇದೆ. ಮಗುವಿನ ನಾಮಕರಣವಾದ ನಂತರ ಬಾಣಂತಿ ಇತರರ ಮನೆಗಳಿಗೆ ಹೋಗಬಹುದಾಗಿದೆ. ಮೊದಲು ನಾಮಕರಣವಾದ ನಂತರ ಹನುಮಂತ ದೇವರ ದರ್ಶನ ಮಾಡಿಸುವುದು ವಿಶೇಷವಾಗಿದೆ.
ಹುಟ್ಟಿಗೆ ಸಂಬಂಧಿಸಿದಂತೆ ಸಮುದಾಯಕ್ಕೇ ವಿಶಿಷ್ಠವಾದ ಆಚರಣೆಗಳು ಇಲ್ಲ. ಇತರೆ ಸಮುದಾಯಗಳು ಆಚರಿಸುವ ಸಾಮಾನ್ಯ ಆಚರಣೆಗಳೇ ನಡೆಯುತ್ತವೆ. ಉಳಿದಂತೆ ವಾರ ತಿಥಿ ನಕ್ಷತ್ರ ಮುಂತಾದವುಗಳನ್ನು ನೋಡುವಲ್ಲಿ ಮೇಲುಜಾತಿಗಳ ಅನುಕರಣೆ ಹೆಚ್ಚಾಗಿದೆ. ಅಂತೆಯೇ ಭಟ್ಟರ ಬಳಿ ಹೋಗುವು ಶಾಸ್ತç ಕೇಳಿಸುವ ಮುಂತಾದ ಮೇಲುಜಾತಿಯ ಚಲನೆಗಳು ಈ ಆಚರಣೆಯಲ್ಲಿ ಕಾಣುತ್ತದೆ. ಜವುಳ, ಕೂದಲು ತೆಗೆಸುವ ಆಚರಣೆ, ನಾಮಕರಣ, ಮುಂತಾದವುಗಳನ್ನು ಶಕ್ತಿದೇವತೆಗಳಾಗ ಯಲ್ಲಮ್ಮ, ಅಂಬಾಭವಾನಿ ಒಳಗೊಂಡಂತೆ ಅಲ್ಲಲ್ಲಿನ ಸ್ಥಳೀಯ ದೇವತೆಗಳ ನೆಲೆಗಳಲ್ಲಿ ಮಾಡುವುದು ಮತ್ತು ಹುಟ್ಟಿಗೆ ಸಂಬಂಧಿಸಿದಂತೆ ಹನುಮಂತನ ದೇವರ ಪೂಜೆ ಮಾಡಿಸುವುದು ವಿಶೇಷವಾಗಿದೆ.
ಋತುಮತಿ:
ಹೆಣ್ಣಿನ ಮೊದಲ ಋತುಸ್ರಾವವನ್ನು ಫಲವಂತಿಕೆಯ ಸಾಂಕೇತಿಕವಾಗಿ ಬುಡಕಟ್ಟು ಸಮುದಾಯಗಳಲ್ಲಿ ವಿಶೇಷವಾದ ಆಚರಣೆಗಳನ್ನು ಮಾಡುತ್ತಾರೆ. ಕೆಲವು ಮೇಲುಜಾತಿಗಳಲ್ಲಿ ಈ ಆಚರಣೆಯು ಬಹಿರಂಗವಾಗಿ ಆಗದೆ ಅದು ಗೌಪ್ಯಕ್ಕೆ ಒಳಗಾಗಿದೆ. ಆದರೆ ದಲಿತ ಕೆಳಜಾತಿಗಳಲ್ಲಿ ಋತುಮತಿಯಾದ ಸಂದರ್ಭವನ್ನು ಸಂಭ್ರಮದ ಆಚರಣೆಯಾಗಿ ಆಚರಿಸುತ್ತಾರೆ. ಗಂಟಿಚೋರ ಸಮುದಾಯದಲ್ಲಿಯೂ ಈ ಆಚರಣೆ ಸಂಭ್ರಮದ ಆಚರಣೆಯೇ ಅಗಿದೆ. ಆದರೆ ಕಾಲಾನಂತರದಲ್ಲಿ ಹಲವು ಬದಲಾವಣೆಗಳೂ ಆಗಿವೆ. ಈ ಸಮುದಾಯದ ಹಳ್ಳಿ ಮತ್ತು ನಗರಗಳಲ್ಲಿ ಋತುಮತಿ ಆಚರಣೆಗೆ ಸಂಬಂಧಿಸಿದಂತೆ ಕೆಲವು ಬದಲಾವಣೆಗಳಿವೆ. ಈ ಬದಲಾವಣೆ ಸಹಜವೂ ಆಗಿದೆ.
ಈ ಸಂದರ್ಭದ ಆಚರಣೆಗಳಲ್ಲಿ ಉಡುಪಿನ ಬದಲಾವಣೆಯ ಸಂಕೇತವಾಗಿ ಲಂಗ ದವಣಿ ಉಟ್ಟವಳಿಗೆ ಸೀರೆಯನ್ನು ಕೊಡುವ ಪದ್ದತಿ ಇದೆ. ಅಂತೆಯೇ ಮದುವೆಯಾಗುವ ಸಂಭವ ಇರುವ ಬೀಗರ ಕಡೆಯವರು ಬಳೆ ಸೀರೆ ಕೊಟ್ಟು ಮದುವೆಗೆ ಪೂರ್ವತಯಾರಿ ಸಂಕೇತವಾಗಿಯೂ ಆಚರಣೆ ನಡೆಯುತ್ತದೆ. ಹಿಂದೆ ಬಾಲ್ಯವಿವಾಹ ಪದ್ದತಿ ಇದ್ದ ಬಗ್ಗೆ ಎಂಥೋವನ್ ಒಳಗೊಂಡಂತೆ ಕೆಲವು ಅಧ್ಯಯನಕಾರರು ಗುರುತಿಸುತ್ತಾರೆ. ಆ ಸಂದರ್ಭದಲ್ಲಿ ಈ ಪದ್ದತಿಯ ಲಕ್ಷಣಗಳು ಬೇರೆಯಾಗಿದ್ದವು. ಹೆಣ್ಣುಮಗುವಿನ ತೊಟ್ಟಿಲಿಗೆ ಬಾಸಿಂಗ ಕಟ್ಟಿ, ಹೂ ಹಾಕಿ ಮದುವೆ ಮಾಡಿರುತ್ತಿದ್ದರು. ಹೀಗೆ ಬಾಲ್ಯ ವಿವಾಹ ನಡೆದಿದ್ದರೆ, ಋತುಮತಿಯಾದಾಗ ಬಾಲ್ಯ ವಿವಾಹವಾದ ಗಂಡಿಗೆ ಬಣ್ಣ ಚೆಲ್ಲಿ ಸಂಭ್ರಮಿಸುತ್ತಾರೆ. ಆದರೆ ಇಂದು ಬಾಲ್ಯವಿವಾಹ ಪದ್ದತಿ ಇಲ್ಲವೆನ್ನುವಷ್ಟು ಕಡಿಮೆಯಾಗಿದೆ.
ಗಂಟಿಚೋರ ಸಮುದಾಯದಲ್ಲಿ ಪಾತ್ರೋಟ್ಸ್ ಇದ್ದ ಕಾರಣ ಋತುಮತಿಯಾದ ಹುಡುಗಿಯನ್ನು ಕೂರಿಸಿ ಆರತಿ ಮಾಡುವ ಸಂದರ್ಭಗಳಲ್ಲಿ ಸಮುದಾಯದ ಹೆಣ್ಣುಮಕ್ಕಳು ಗಂಡಿನ ವೇಷ ಧರಿಸಿ ನಟಿಸಿ ಜನರನ್ನು ರಂಜಿಸುವ ಆಟಗಳು ನಡೆಯುತ್ತಿದ್ದವು. ಹಾಡು ಹೇಳುವುದು, ಹುಡುಗಿಯನ್ನು ಚುಡಾಯಿಸುವಿಕೆ ಮುಂತಾದ ಮನೋರಂಜನೆಯೂ ಈ ಆಚರಣೆಯಲ್ಲಿ ಇರುತ್ತಿತ್ತು. ಈಚಿನ ದಿನಗಳಲ್ಲಿ ವಿವಾಹದ ಸಂಕೇತವಾಗಿದ್ದ ಆಚರಣೆಗಳು ಕಡಿಮೆಯಾಗಿವೆ. ಸಾಮಾನ್ಯವಾಗಿ ಋತುಮತಿಯಾದ ನಂತರ ಈ ಸಮುದಾಯದಲ್ಲಿ ಹೆಣ್ಣಿಗೆ ಕಟ್ಟುಪಾಡುಗಳು ಹೆಚ್ಚಾಗುತ್ತವೆ. ಈ ಆಚರಣೆಯಲ್ಲಿ ಇಂದು ಹಲವು ಬದಲಾವಣೆಗಳು ಘಟಿಸಿವೆ. ಇದು ಇತರೆ ಸಮುದಾಯಗಳ ಜತೆ ಬೆರೆತು ಬದುಕುತ್ತಿರುವ ಸಮುದಾಯದ ನಡೆಯೂ ಆಗಿದೆ.
ಜ್ಹಾನ್ ನಿಕೋಲ್ ಫರ‍್ಕರ್ ಎನ್ನುವ ಮದ್ರಾಸ್ ಪ್ರೆಸಿಡೆನ್ಸಿಗೆ ಬಂದ ಸ್ಕೋಟಿಷ್ ಎಜುಕೇಷನ್ ಮಿಷನರಿ `ಮಾಡ್ರನ್ ರಿಲಿಜೀಯಸ್ ಮೂವ್‌ಮೆಂಟ್ ಇನ್ ಇಂಡಿಯಾ’ (೧೯೧೫) ಕೃತಿಯಲ್ಲಿ ಗಂಟಿಚೋರ್ ಸಮುದಾಯದ ಮದುವೆ ಬಗ್ಗೆ ಬರೆಯುತ್ತಾ `ಈ ಸಮುದಾಯ ಕಳ್ಳತನದಲ್ಲಿ ತೊಡಗಿಕೊಂಡಿದೆ. ಹಾಗಾಗಿ ಈ ಸಮುದಾಯದ ಯುವಕ ಮಹಿಳೆಯೊಬ್ಬಳ ಮೂಗಿನ ನತ್ತನ್ನು (ಮೂಗುತಿ) ಕದಿಯುವ ತನಕ ಮದುವೆಗೆ ಅರ್ಹನಾಗುತ್ತಿರಲಿಲ್ಲ. ಹೀಗೆ ಮೂಗುತಿ ಕದ್ದು ಅದನ್ನು ಪಂಚಾಯ್ತಿಯವರಿಗೆ ತಿಳಿಸಿದ ಮೇಲೆಯೇ ಈ ಸಮುದಾಯ ಈ ಯುವಕನು ಮದುವೆಗೆ ಅರ್ಹನು ಎಂದು ಘೋಷಿಸುತ್ತಿದ್ದರು. `ಛೊಲೋ ರಂಗಾಯ್ತ್ ಐದಾನ ಕೊಟ್ಟ ಬಿಡ್ರಿ ಹೆಣ್ಣ’ ಅಂದರೆ ತುಗುಡು ಮಾಡಿ ತುಂಬಾ ಕೂಡಿಟ್ಟಿದ್ದಾನೆ ಎಂಬ ಮಾತುಕತೆ ನಡೆಯುತ್ತಿತ್ತು.
ಸಾಮಾನ್ಯವಾಗಿ ಗಂಟಿಚೋರರ ಮದುವೆ ಆಚರಣೆಯಲ್ಲಿ ನಿಸರ್ಗದ ಒಡನಾಟದ ಸಂಕೇತಗಳು ಹೆಚ್ಚಿವೆ. ಮೊದಲಿಗೆ ಗಂಡಿಗೆ ಎಕ್ಕೆಗಿಡ, ಅರಳಿಮರ, ತುಳಸಿಗಿಡಗಳಜತೆ ಮದುವೆ ಮಾಡುವ ಆಚರಣೆಗಳು ಹೆಚ್ಚು ಚಾಲ್ತಿಯಲ್ಲಿದ್ದವು. ಆದರೆ ಇಂದು ಇಂತಹ ಆಚರಣೆಗಳ ಸಾಂಕೇತಿಕತೆ ನಡೆಯುತ್ತದೆ. ಗಂಡಿನ ಆರ್ಹತೆಯ ಪ್ರಶ್ನೆಯೊಂದು ಗಂಟಿಚೋರ ಸಮುದಾಯದಲ್ಲಿ ವಿಶಿಷ್ಠವಾಗಿದ್ದ ಬಗ್ಗೆ ಹಿರಿಯರು ಹೇಳುತ್ತಾರೆ. ತುಡುಗುತನವನ್ನು ಸಮುದಾಯ ಮುಖ್ಯ ಪ್ರವೃತ್ತಿಯನ್ನಾಗಿಸಿಕೊಂಡ ಸಂದರ್ಭದಲ್ಲಿ ಹೆಚ್ಚು ಪ್ರಸಿದ್ಧಿ ಹೊಂದಿದ ಕಳ್ಳನಿಗೆ ಹೆಣ್ಣು ಕೊಡುತ್ತಿದ್ದರು. ಅಂತೆಯೇ ಕಳ್ಳರಲ್ಲಿಯೇ ಅತೀ ಚಾಣಾಕ್ಷನನ್ನು ಹುಡುಕಿ ಹೆಣ್ಣುಕೊಡುವ ರೂಢಿಯಿತ್ತು. ಚೆನ್ನಾಗಿ ತುಡುಗು ಮಾಡಲು ಬಂದರೆ, ಮತ್ತು ಯಾರಿಗೂ ಸಿಗದ ಹಾಗೆ ಚಾಣಾಕ್ಷತನದಿಂದ ತುಡುಗು ಮಾಡಿದರೆ ನನ್ನ ಮಗಳನ್ನು ಚೆನ್ನಾಗಿ ಸಲಹುತ್ತಾನೆ ಎಂದು ನಂಬುತ್ತಿದ್ದರು. ಇದಕ್ಕೆ ಸಂಬಂಧಿಸಿದಂತೆ ಕ್ಷೇತ್ರಕಾರ್ಯದಲ್ಲಿ ಹಲವು ಉದಾಹರಣೆಗಳನ್ನು ನೀಡಿ ಹೇಳುತ್ತಿದ್ದರು. ಸಾಮಾನ್ಯವಾಗಿ ವಿರುದ್ಧ ಗೋತ್ರಗಳಲ್ಲಿ ಮದುವೆಯಾಗುತ್ತಾರೆ.
ಅಂತರ್ಜಾತಿ ಮತ್ತು ಅಂತರ ಧರ್ಮೀಯ ವಿವಾಹಗಳು ಈ ಸಮುದಾಯದಲ್ಲಿ ಬಹು ಹಿಂದಿನಿಂದಲೆ ನಡೆದಿರುವುದು ಕ್ಷೇತ್ರಕಾರ್ಯದ ಸಂದರ್ಭದಲ್ಲಿ ತಿಳಿಯಿತು. ಈ ಪರಂಪರೆ ಈಗಲೂ ವಿರಳವಾಗಿ ಮುಂದುವರಿದೆ. ಕ್ಷೇತ್ರಕಾರ್ಯದಲ್ಲಿ ಸಿಕ್ಕ ಮಾಹಿತಿಯ ಪ್ರಕಾರ ತಮಗಿಂತ ಮೇಲಿನ ಸಮುದಾಯಗಳಲ್ಲಿ ಮತ್ತು ಸಮನಾಂತರ ಎಂದು ಭಾವಿಸಿದ ಸಮುದಾಯಗಳಲ್ಲಿ ಮದುವೆ ನಡೆದಿರುವುದು ಹೆಚ್ಚು. ತಮಗಿಂತ ಕೆಳಗಿನವರು ಎಂದು ಭಾವಿಸಿದ ಸಮುದಾಯಗಳ ಜತೆ ಮದುವೆ ಸಂಬಂಧಗಳು ಸಂಭವಿಸಿರುವುದು ಕಡಿಮೆಯಾಗಿದೆ. ಮುಖ್ಯವಾಗಿ ಅರಣ್ಯಶಿಕಾರಿ, ಬಾರಕೇರ, ಕೊರಮ, ಬೋವಿ, ವಡ್ಡರು ಮುಂತಾದ ಸಮುದಾಯಗಳ ಜತೆ ಮದುವೆಗಳು ನಡೆದಿವೆ. ಅಂತೆಯೇ ವಿರಳವಾಗಿ ಅನ್ಯ ಧರ್ಮಿಯ ಅಂದರೆ ಮುಖ್ಯವಾಗಿ ಮುಸ್ಲಿಂ ಧರ್ಮದವರ ಜತೆಯೂ ವಿವಾಹಗಳಾಗಿರುವ ಉದಾಹರಣೆಗಳು ಇವೆ.
ಇದೀಗ ಇಂತಹ ಅಂತರ್ ಜಾತಿ ಮತ್ತು ಧರ್ಮದ ಮದುವೆಗಳು ಅಂತಸ್ಥಿನ ಭಾಗವಾಗಿ ವರ್ಗದ ನೆಲೆಯಲ್ಲಿ ಜರುಗುತ್ತಿರುವುದು ವಿಶಿಷ್ಠವಾಗಿದೆ. ಅಂದರೆ ವಿದ್ಯಾಭ್ಯಾಸ ಹೊಂದಿ, ನೌಕರಿ ಪಡೆದವರು ತಮ್ಮ ಅಂತಸ್ತಿಗೆ ತಕ್ಕನಾದ ವರ ಅಥವಾ ವಧು ತಮ್ಮ ಸಮುದಾಯದಲ್ಲಿ ಸಿಗದಿದ್ದಾಗ ಬೇರೆ ಜಾತಿ ಧರ್ಮದವರಲ್ಲಿ ಉತ್ತಮಸ್ಥ ವರ ಅಥವಾ ವಧು ಸಿಕ್ಕರೆ ಮದುವೆಯಾಗುವ ಪದ್ದತಿ ರೂಢಿಗೆ ಬಂದಿದೆ. ಇದನ್ನು ನೋಡಿದರೆ ಆರಂಭದಲ್ಲಿ ಹಲವು ಸಮುದಾಯಗಳ ಕೊಡುಕೊಳೆಯ ಭಾಗವಾಗಿ ಅಂತರ್ಜಾತಿ ವಿವಾಹಗಳು ಸಂಭವಿಸಿದರೆ, ಈಗ ಆರ್ಥಿಕ ನೆಲೆಯಲ್ಲಿ ಅಂತಸ್ಥಿನ ಭಾಗವಾಗಿಯೂ ಇಂತಹ ವಿವಾಹಗಳು ನಡೆಯುತ್ತಿರುವುದನ್ನು ಸೂಕ್ಷ್ಮವಾಗಿ ಗಮನಿಸಬಹುದಾಗಿದೆ.
ಸೆಟಿಗೆವ್ವ ಮಗುವಿನ ಹಣೆಬರಹ ಬರೆಯುವಂತೆ ಸಮುದಾಯ ನಂಬುತ್ತದೆ. ಇದರಲ್ಲಿ ಗುಂಡುಕಲ್ಲಿಗೆ ಬಾಣಂತಿ ತಾಳಿಯನ್ನು ಹಾಕಿ ಪೂಜೆ ಮಾಡುವುದು ವಿಶೇಷವಾಗಿದೆ. ಪೂಜೆಯಾದ ಬಳಿಕ ಬಾಣಂತಿಗೆ ಬಳೆ ಹಾಕುವುದಿದೆ. ಇದು ಪ್ರಕೃತಿಪೂಜೆಯನ್ನು ನೆನಪಿಸುತ್ತದೆ.
ಎಸ್.ಆರ್.ಸಂಕೇಶ್ವರ್ ಅವರು ಧಾರವಾಡ ಜಿಲ್ಲೆಯ ಗಂಟಿಚೋರ ಸಮುದಾಯವನ್ನು ಆಧರಿಸಿ ಮಾಡಿದ ಸಂಶೋಧನೆಯಲ್ಲಿ ಮದುವೆಯ ಸಂಬಂಧಗಳ ಶೇಕಡವಾರನ್ನು ಕೊಟ್ಟಿದ್ದಾರೆ. ಅದರ ಪ್ರಕಾರ ಸಂಬಂಧಿಕರು ಮತ್ತು ಬೀಗರ ನಡುವೆ ಮದುವೆಯಾದವರ ಪ್ರಮಾಣ ಶೇ ೫೩%ರಷ್ಟಿದೆ, ಈ ಪ್ರಮಾಣ ಬಾಲೆ ಹೊಸೂರಲ್ಲಿ ಅಕ್ಕ ಅಥವಾ ತಂಗಿಯ ಮಗಳನ್ನು ಮದುವೆಯಾಗಿರುವ ಪ್ರಮಾಣ ಶೇ ೩೯.೭ ರಷ್ಟಿದೆ, ಮಾವನ ಮಗಳ (ತಾಯಿಯ ಅಣ್ಣ ಅಥವಾ ತಮ್ಮನ ಮಗಳು) ಜತೆ ಮದುವೆಯಾಗಿರುವ ಪ್ರಮಾಣ ಶೇ ೯.೯ ರಷ್ಟಿದೆ. ತಂದೆಯ ತಂಗಿ ಅಥಾವ ಅಕ್ಕನ ಮಕ್ಕಳನ್ನು ಮದುವೆಯಾಗುವ ಪ್ರಮಾಣ ೧೦.೭ ರಷ್ಟಿದೆ. (ಆರ್.ಎಸ್. ಸಂಕೇಶ್ವರ್:೧೯೯೬:೧೧೪) ಎಂದು ಮದುವೆಯಲ್ಲಿ ಬಂಧುತ್ವದ ಸ್ವರೂಪವನ್ನು ವಿವರಿಸುತ್ತಾರೆ.
ಈ ಸಮುದಾಯದಲ್ಲಿ ತೀರಾ ಈಚಿನವರೆಗೂ ಗಂಡಿನವರು ಹುಡುಗಿಗೆ ತೆರಕೊಡುವ ಪದ್ದತಿ ಇತ್ತು. ಇದು ಮಾತೃಪ್ರಧಾನ ಕುಟುಂಬದ ಚಹರೆಯ ಲಕ್ಷಣವಾಗಿದೆ. ಹಾಗೆ ತೆರ ಕೊಟ್ಟು ಮದುವೆಯಾದ ಹಿರಿಯರ ಉದಾಹರಣೆಗಳು ಸಾಕಷ್ಟಿದೆ. ಈಗಲೂ ಆಚರಣೆಯ ಭಾಗವಾಗಿ ತೆರವನ್ನು ಕೊಟ್ಟು ವಿವಾಹವಾಗುವ ಪದ್ದತಿ ವಿರಳವಾಗಿ ಕಂಡುಬರುತ್ತದೆ. ಹುಡುಗಿಯ ಸೌಂದರ್ಯವನ್ನು ಆಧರಿಸಿ ತೆರದ ಹಣ ನಿರ್ದಾರವಾಗುತ್ತಿತ್ತು, ೧೯೬೦ ರಲ್ಲಿ ೨೦೦ ರೂಪಾಯಿ ತೆರ ಕೊಡುವ ಪದ್ದತಿ ಇತ್ತು ಎಂದು ಹಿರಿಯರು ಹೇಳುತ್ತಾರೆ. ಹುಡುಗಿ ಸುಂದರವಾಗಿದ್ದರೆ ಹೆಚ್ಚು ತೆರ ಕೊಟ್ಟು ಮದುವೆಯಾಗುತ್ತಿದ್ದರು. ಬಿಜಾಪುರ ಹಿರಿಯರಾದ ಸೀತೋಳೆ ಅವರು ಹೇಳುವಂತೆ ಬರಗುಡಿಯ ಹುಡುಗಿಯೊಬ್ಬಳು ಚಿಗರಿ ಹಿಡಿದಿದ್ದಳಂತೆ, ಅಪೂರ್ವ ಸುಂದರಿಯಾಗಿದ್ದಳಂತೆ ಈ ಹುಡುಗಿಗೆ ಸುಮಾರು ೫೦ ವರ್ಷದ ಹಿಂದೆ ೫೦೦ ರೂಗಳ ತೆರ ಕೊಟ್ಟು ಮದುವೆಯಾಗಿದ್ದ ಘಟನೆ ಇದೆ ಎಂದು ಹೇಳುತ್ತಾರೆ. ಈಗ ಸಾಮಾನ್ಯವಾಗಿ ಆರ್ಥಿಕ ಸ್ಥಿತಿಗತಿಗೆ ಅನುಗುಣವಾಗಿ ವರದಕ್ಷಿಣಿಯ ಪದ್ದತಿ ಈ ಸಮುದಾಯದಲ್ಲಿಯೂ ಇದೆ. ಆದರೆ ಅದು ಸ್ಥಿತಿವಂತ ಹಾಗೂ ನಗರ ಪ್ರದೇಶಗಳಲ್ಲಿ ನೆಲೆಸಿದ ಈ ಸಮುದಾಯಗಳಲ್ಲಿ ಮಾತ್ರ ಹೆಚ್ಚಾಗಿ ಕಂಡುಬರುತ್ತದೆ. ಗ್ರಾಮೀಣ ಪ್ರದೇಶಗಳಲ್ಲಿ ಸ್ವಲ್ಪಮಟ್ಟಿಗೆ ಕಡಿಮೆ ಪ್ರಮಾಣದಲ್ಲಿದೆ.
ಈ ಸಮುದಾಯದ ಮದುವೆ ಆಚರಣೆಯಲ್ಲಿ `ಹಾಲುಗಂಬ ಹಸಿರುಗಂಬ’ ಎನ್ನುವ ಆಚರಣೆಯು ವಿಶಿಷ್ಟವಾಗಿದೆ. ಮದುವೆ ಆಚರಣೆಗಳು ಆರಂಭವಾದ ಮೊದಲ ದಿನ ವರನ ಸೋದರ ಮಾವ ಬಸರಿ ಮತ್ತು ಇಂಗಳೆ ಗಿಡದ ಒಂದೊಂದು ಟೊಂಗೆಗಳನ್ನು ತಂದು ಮದುವೆ ಮನೆಯ ಬಾಗಿಲ ಬಲಗಡೆ ನೆಲದಲ್ಲಿ ನೆಡುತ್ತಾರೆ. ಅವುಗಳಿಗೆ ಪೂಜೆ ಮಾಡಿ ಐದು ಜನ ಮುತೈದೆಯರು ಈ ಟೊಂಗೆಗಳಿಗೆ ಮದುವೆ ಕಾರ್ಯ ಮಾಡುತ್ತಾರೆ. ಮರ ತಂದ ಸೋದರ ಮಾವನಿಗೆ ನಂತರ ಚಾಜಾ ಕೊಡುತ್ತಾರೆ. ನಂತರ ಎಲ್ಲರಿಗೂ ಪೂಜೆಗೆ ಬಳಸಿದ ಹಣ್ಣು ಆಹಾರವನ್ನು ಪ್ರಸಾದವಾಗಿ ಹಂಚುತ್ತಾರೆ. ಮದುವೆಯಾಗಿ ಐದನೇ ದಿನಕ್ಕೆ ಹಾಲುಗಂಬ ಹಸಿರುಕಂಬವನ್ನು ಇಳಿಸುವ ಕಾರ್ಯ ಮಾಡುತ್ತಾರೆ. ಇದು ಮದುವೆ ಕಾರ್ಯ ಮುಗಿದದ್ದರ ಸಂಕೇತವಾಗಿದೆ. ಈ ಬಗೆಯ ವೃಕ್ಷಗಳ ಮದುವೆ ನಿಸರ್ಗದ ಸಂಬಂಧವನ್ನು ಮತ್ತು ಈ ಸಮುದಾಯದ ಪ್ರಾಚೀನತೆಯನ್ನು ಬಿಂಬಿಸುತ್ತದೆ ಎಂದು ಸಮುದಾಯದ ಬಿಜಾಪುರದ ಸೀತೋಳೆ ಅವರು ಅಭಿಪ್ರಾಯ ಪಡುತ್ತಾರೆ. ಈ ಆಚರಣೆಯನ್ನು ಸೂಕ್ಷö್ಮವಾಗಿ ಗಮನಿಸಿದರೆ ಗಂಟಿಚೋರ ಸಮುದಾಯವು ಶಾಕ್ತಪಂಥದ ಆರಾಧಕರಾಗಿದ್ದರು ಎನ್ನುವುದರ ಕುರುಹಾಗಿದೆ.
ಗಂಟಿಚೋರರ ಮದುವೆಗಳಲ್ಲಿ `ಸುರುಗಿ’ ಸುತ್ತುವ ಪದ್ಧತಿಯು ಈ ಸಮುದಾಯದ ಜಲ ಸಂಸ್ಕೃತಿಯ ಕುರುಹುಗಳನ್ನು ಸೂಚಿಸುತ್ತಿದೆ. ಮೊದಲನೆ ಸುರುಗಿ ನೀರನ್ನು ಸಾವಿಗೆ ಮಣಿಯ ಮೇಲೆ ಮದುಮಗನ ಚಿಕ್ಕ ತಂಗಿ ಮತ್ತು ಮದುಮಗಳ ತಮ್ಮನನ್ನು ಕೂಡಿಸಿ ನೀರಾಕಿ ಕಂಕಣ ಕಟ್ಟುವಿಕೆ ಇದೆ. ಈ ಪ್ರಕ್ರಿಯೆ ಹಿಂದೆ ಗಂಡು ಮತ್ತು ಹೆಣ್ಣು ಇಬ್ಬರ ಮನೆಯ ಮುಂದೆಯೂ ನಡೆಯುತ್ತಿತ್ತು ಇದನ್ನು ಒಂದು ಮತ್ತು ಎರಡನೆ ನೀರು ಎಂದು ಕರೆಯುತ್ತಿದ್ದರು. ನಂತರ ಮತ್ತೊಮ್ಮೆ ಮದುಮಗನ ತಂಗಿ ಮತ್ತು ಮದುಮಗಳ ತಮ್ಮನನ್ನು ಕೂಡಿಸಿ ಮದುವೆ ಚಪ್ಪರದಡಿ ನೀರಾಕುವರು, ಈ ಮಕ್ಕಳಿಗೆ `ಬಲುಗುಡುಮ’ ಎನ್ನುತ್ತಾರೆ. ಇದು ಮೂರನೆ ನೀರಾಗಿದೆ.
ನಾಲ್ಕನೇ ನೀರನ್ನು `ತಾಯಿ ಸುರುಗಿ’ ಎನ್ನುತ್ತಾರೆ. ಇದರಲ್ಲಿ ಮದುಮಗ ಮತ್ತು ಮದುಮಗಳ ತಾಯಿಯರನ್ನು ಕೂರಿಸಿ ನೀರಾಕುತ್ತಾರೆ. ನಾಲ್ಕು ಮೂಲೆಗೂ ನಾಲ್ಕು ತಾಮ್ರದ ಚರಿಗೆ ಮತ್ತು ನಡುಮಧ್ಯೆ ಒಂದು ಚೆರಿಗೆ ಇಟ್ಟು ಐದೆಳೆಯ ದಾರದಿಂದ ಸುರಿಗೆ ಸುತ್ತಲಾಗುತ್ತದೆ. ನೀರುತುಂಬಿ ತೆಂಗಿನಕಾಯಿ ವೀಳ್ಯದ ಎಲೆ ಇಟ್ಟು ಸಿಂಗರಿಸಿರುತ್ತಾರೆ. ಇದನ್ನು ಪಂಚಕಳಸ ಎನ್ನುತ್ತಾರೆ. ಈ ಸುರಿಗೆ ಸುತ್ತಿನ ನಡುಮಧ್ಯೆ ವಧುವರರನ್ನು ಕೂರಿಸಿ ಮದುವೆಕಾರ್ಯ ಮಾಡುತ್ತಾರೆ. ಸುರಿಗೆಯ ಈ ಐದು ತಂಬಿಗೆಗಳು ಶಿವ ಸಂಸ್ಕೃತಿಯ ಕುರುಹುಗಳು ಎಂದು ಹೇಳಲಾಗುತ್ತದೆ.
ಗಂಟಿಚೋರ ಸಮುದಾಯದಲ್ಲಿ ವಿಚ್ಚೇದನಕ್ಕೆ ಕೆಲವು ಕಡೆಗಳಲ್ಲಿ ಸೋಡಾಚೀಟಿ ಎಂದು ಕರೆಯುತ್ತಾರೆ. ಗಂಡ ಹೆಂಡತಿಯರು ಒಟ್ಟಿಗೆ ಜೀವಿಸಲು ಸಾಧ್ಯವಾಗದಷ್ಟು ಭಿನ್ನಾಬಿಪ್ರಾಯಗಳು ಬಂದರೆ ವಿಚ್ಚೇದನ ಪಡೆಯಬಹುದು. ಸಮುದಾಯದ ಐದು ಜನ ಪಂಚರು ಒಂದೆಡೆ ಸೇರಿ ವಿಚ್ಚೇದನವನ್ನು ನಿರ್ಧರಿಸುತ್ತಾರೆ. ಗಂಡನೇ ಬೇರೆಯಾಗುವ ಪ್ರಸ್ತಾವ ಒಡ್ಡಿದರೆ ಹೆಂಡತಿಗೆ ಒಂದು ಜೊತೆ ಹೊಸ ಬಟ್ಟೆ ಕೊಟ್ಟು ವಿಚ್ಚೇದನ ಪಡೆಯಬಹುದು. ಹಿಂದೆ ಪಂಚಾಯ್ತಿ ಖರ್ಚು ೨೫ ರೂ ಕಟ್ಟಬೇಕಿತ್ತು. ಮಕ್ಕಳಿದ್ದರೆ ಗಂಡನ ಸುಪರ್ಧಿಗೆ ಕೊಡುತ್ತಾರೆ. ಈಗೀಗ ವಿಚ್ಚೇದನಗಳು ಕಾನೂನು ಕಟ್ಟಳೆಗಳಲ್ಲಿ ನಡೆಯುತ್ತವೆ. ಪಂಚಾಯ್ತಿಗೆ ವ್ಯಾಜ್ಯಗಳು ಹೋಗುವುದು ಇಂದಿನ ದಿನಮಾನಗಳಲ್ಲಿ ತುಂಬಾ ಕಡಿಮೆಯಾಗಿದೆ. ಅದರಲ್ಲೂ ವಿಚ್ಚೇದನದಂತಹ ವಿಷಯಗಳು ಇಂದು ಸಾಮಾನ್ಯವಾಗಿ ಕೋರ್ಟು ಮೆಟ್ಟಿಲೇರುತ್ತವೆ.
ಬಹುಪಾಲು ಬುಡಕಟ್ಟುಗಳಲ್ಲಿ ಮರುಮದುವೆ ಸಾಮಾನ್ಯ ಸಂಗತಿಯಾಗಿರುತ್ತದೆ. ಇದು ಕೆಳಜಾತಿಗಳಲ್ಲಿಯೂ ಸಾಮಾನ್ಯ ಸಂಗತಿಯಾಗಿದೆ. ಗಂಟಿಚೋರ ಸಮುದಾಯದಲ್ಲಿಯೂ ಮರುವಿವಾಹವು ನಿಶಿದ್ಧವಲ್ಲ. ಬದಲಾಗಿ ಮುಕ್ತವಾದ ಅವಕಾಶವಿದೆ. ಚಿಕ್ಕ ವಯಸ್ಸಿಗೆ ಗಂಡ ಸತ್ತ ಹೆಂಡತಿ, ಅಥವಾ ಹೆಂಡತಿ ಸತ್ತ ಗಂಡ, ಕಾರಣಾಂತರಗಳಿಂದ ಬಿಡುಗಡೆಯಾದ ಗಂಡಹೆಂಡರಿಬ್ಬರೂ ಮರು ಮದುವೆಯಾಗಲು ಸಮುದಾಯದಲ್ಲಿ ಅವಕಾಶವಿದೆ. ಇದಕ್ಕೆ ಉಡಿಕೆ ಅಥವಾ ಕೂಡಿಕೆ ಸಂಬಂಧ ಎಂದು ಕರೆಯುತ್ತಾರೆ. ಮರುವಿವಾಹದ ಆಚರಣೆಗಳು ಸ್ವಲ್ಪ ಭಿನ್ನವಾಗಿವೆ. ಮುಖ್ಯವಾಗಿ ಈ ಮದುವೆಗಳು ಅದ್ದೂರಿಯಾಗಿ ಜರುಗುವುದಿಲ್ಲ. ಕೆಲವೇ ಕೆಲವು ಬಂದು ಬಳಗದ ಮಧ್ಯೆ ಈ ಮದುವೆಗಳು ನಡೆಯುತ್ತವೆ. ವಿಧವೆಯು ಗಂಡನ ಸಹೋದರನನ್ನು ಮದುವೆಯಾಗಬಹುದಾಗಿದೆ (ಇದು ಕಡ್ಡಾಯವೇನಲ್ಲ). ಉಡಕಿ ಮದುವೆಯಲ್ಲಿ ಹುಬ್ಬಳ್ಳಿ ಕಡೆ ಮೊದಲು ಗಂಡು ಎಕ್ಕಿ ಗಿಡಕ್ಕೆ ಪೂಜೆ ಮಾಡಿ ತಾಳಿಕಟ್ಟಿ ಮದ್ವೆ ಪೂಜೆ ಮಾಡುತ್ತಿದ್ದರು. ಮರುದಿನ ಅದೇ ತಾಳಿಯನ್ನು ಉಡಿಕೆ ಆಗುವ ಹೆಣ್ಣಿಗೆ ಕಟ್ಟಬೇಕಿತ್ತು.
ಯಾದಿ ಮೇ ಶಾದಿ: ಬಿಳಿಹಾಳೆಯ ಮೇಲೆ ಮಾತುಕತೆಯನ್ನು ಲಿಖಿತಗೊಳಿಸಿ ಅದಕ್ಕೆ ಕೆಲವು ದೈವಸ್ಥರ ಸಾಕ್ಷಿಯನ್ನು ಒಳಗೊಂಡಂತೆ ಯಾದಿ ಮಾಡುತ್ತಾರೆ, ಇದರ ಪ್ರಕಾರ ಮಾತುಕತೆ ಮುಗಿದ ಸಾಯಂಕಲವೇ ಮದುವೆಯಾಗುವ ಪದ್ದತಿ ಇತ್ತು. ಇಂತಹದ್ದೊಂದು ಮದುವೆಯಲ್ಲಿ ಭಾಗವಹಿಸಿದ್ದಾಗಿ ರಾಜ್ಯ ಗಂಟಿಚೋರ ಸಂಘದ ಅಧ್ಯಕ್ಷರಾದ ಸುರೇಶ ಬಾಲೆಹೊಸೂರು ಅವರು ನೆನಪಿಸಿಕೊಳ್ಳುತ್ತಾರೆ. ಮುಖ್ಯವಾಗಿ ಈ ಪದ್ಧತಿಯು ಬಿಜಾಪುರ ಮತ್ತು ಬೆಳಗಾಂ ಜಿಲ್ಲೆಗಳಲ್ಲಿ ಕಂಡುಬರುತ್ತದೆ. ಈ ಬಗೆಯ ವಿವಾಹ ಪದ್ದತಿಯನ್ನು `ಯಾದಿ ಮೆ ಶಾದಿ’ ಎಂದು ಕರೆಯುತ್ತಾರೆ.
ಸಯ್ಯದ್ ಹಸನ್ ತನ್ನ `ನಿಜಾಮ್ ಕಾಲದ ಬುಡಕಟ್ಟು ಮತ್ತು ಜಾತಿಗಳು’ (೧೯೨೦) ಕೃತಿಯಲ್ಲಿ ಭಾಮ್ಟಾ, ಗಂಟಿಚೋರ್ಸ್ ಸಮುದಾಯದ ಬಗ್ಗೆ ಉಲ್ಲೇಖಿಸುತ್ತಾ `ವಿಧವಾ ವಿವಾಹಕ್ಕೆ ಆದ್ಯತೆ ಇದೆ. ಊರ ಹೊರಗಿನ ದೇವಸ್ಥಾನಗಳಲ್ಲಿ ಸಾಮಾನ್ಯವಾಗಿ ರಾತ್ರಿಯ ಹೊತ್ತು ಈ ಮದುವೆಗಳು ನಡೆಯುತ್ತವೆ. ಈ ವಿವಾಹಕ್ಕೆ ಸಾಮಾನ್ಯವಾಗಿ ವಿಧವೆಯರು ಮಾತ್ರ ಸೇರಿರುತ್ತಾರೆ. ವಿವಾಹ ವಿಚ್ಚೇಧನವು ಪಂಚಾಯ್ತಿಯಲ್ಲಿ ಅವಕಾಶವಿದೆ. ಅಂತೆಯೇ ವಿಧವೆಯಂತೆ ವಿಚ್ಚೇದಿತ ಮಹಿಳೆಯೂ ಮರು ವಿವಾಹವಾಗಬಹುದು’ ಎನ್ನುತ್ತಾನೆ.
ಅರಣ್ ಜೋಳದಕೂಡ್ಲಿಗಿ ವಿಜಯನಗರ ಜಿಲ್ಲೆಯ ಕೊಟ್ಟೂರು ತಾಲೂಕಿನ ಜೋಳದಕೂಡ್ಲಿಗಿಯವರು. ಜಾನಪದ ಎಂ.ಎ ಮತ್ತು ಕನ್ನಡ ಸಾಹಿತ್ಯದಲ್ಲಿ ಎಂ.ಎ ಸ್ನಾತಕೋತ್ತರ ಪದವಿಗಳನ್ನು ಕನ್ನಡ ವಿಶ್ವವಿದ್ಯಾಲಯದಲ್ಲಿ ಪಡೆದರು. ಅಲ್ಲಿಯೇ ಪಿಎಚ್.ಡಿ ಪದವಿ ಪಡೆದು, ಪ್ರಸ್ತುತ ಪೋಸ್ಟ್ ಡಾಕ್ಟರಲ್ ಉನ್ನತ ಸಂಶೋಧನೆಯಲ್ಲಿ ಮುಗಿಸಿದ್ದಾರೆ.ಕರ್ನಾಟಕ ಜಾನಪದ ವಿಶ್ವವಿದ್ಯಾಲಯದಲ್ಲಿ ಅತಿಥಿ ಪ್ರಾಧ್ಯಾಪಕರಾಗಿ ಕೆಲಸ ಮಾಡುತ್ತಿದ್ದಾರೆ. ಪ್ರಕಟಿತ ಕೃತಿಗಳು: ನೆರಳು ಮಾತನಾಡುವ ಹೊತ್ತು (ಕವಿತೆ, 2004) ಸಂಡೂರು ಭೂಹೋರಾಟ ( ಸಂಶೋಧನೆ, 2008) ಅವ್ವನ ಅಂಗನವಾಡಿ ( ಕವನಸಂಕಲನ, 2010), ಕನ್ನಡ ಜಾನಪದ ತಾತ್ವಿಕ ನೆಲೆಗಳು ( ಪಿಎಚ್.ಡಿ ಸಂಶೋಧನೆ, 2012), ಜಾನಪದ ಮುಖಾಮುಖಿ (ಸಂಶೋಧನೆ, 2013), ಜಾನಪದ ವರ್ತಮಾನ (ಸಂಶೋಧನೆ, 2013), ಕನಸೊಡೆದೆದ್ದೆ ( ವಿಮರ್ಶೆ, 2013) ಗಂಟಿಚೋರ್ ಸಮುದಾಯ (ಸಂಶೋಧನೆ, 2016) ತತ್ವಪದ ಪ್ರವೇಶಿಕೆ (ಪ್ರೊ.ರಹಮತ್ ತರೀಕೆರೆ ಅವರ ಜತೆ ಸಹ ಸಂಪಾದಕ, 2017) ಓದು ಒಕ್ಕಾಲು ( ಸಾಹಿತ್ಯ ವಿಮರ್ಶೆ, 2020) ಕೊರೋನಾ ಜಾನಪದ (ನವಜಾನಪದ ಕುರಿತ ಸಂಶೋಧನ ಲೇಖನಗಳ ಸಂಕಲನ, 2020) ನಡುವೆ ಸುಳಿವ ಹೆಣ್ಣು ( ಮಂಜಮ್ಮ ಜೋಗತಿ ಅವರ ಆತ್ಮಕಥನದ ನಿರೂಪಣೆ, 2020)