ಶಿಶಿರ ಋತುವಿನ ಚಳಿಗಾಲದಲ್ಲಿ ಒಣಗಿದ ಮರ-ಗಿಡಗಳು ವಸಂತ ಋತುವಿನಲ್ಲಿ ಮತ್ತೆ ಚಿಗುರುವಂತೆ `ಯುಗಾದಿ’ ಯ ಹೊಸತನ ಮನುಷ್ಯನ ಬದುಕಲ್ಲಿಯೂ ಹೊಸ ಜೀವ ತುಂಬಬಲ್ಲ ಹಬ್ಬವಾಗಿರುವುದರಿಂದ ಈ ಹಬ್ಬದ ಆಚರಣೆ ಇಡೀ ದೇಶದಲ್ಲಿಯೇ ವಿಭಿನ್ನವಾಗಿ ನಡೆಯುತ್ತದೆ. ಮುಖ್ಯವಾಗಿ ಕೃಷಿ ಆಧಾರಿತ ದೇಶದಲ್ಲಿ, ಬೇಸಿಗೆಯ ಈ ಹಬ್ಬದಲ್ಲಿ ಸಂಭ್ರಮವು ಒಂದು ತೂಕ ಹೆಚ್ಚೇ. ಬೈಸಾಕಿ, ಗುಡಿಪಾಡ್ವಾ, ಯುಗಾದಿ ಎಂಬೆಲ್ಲ ಹತ್ತಾರು ಹೆಸರುಗಳಲ್ಲಿ ಬರುವ ಈ ಹಬ್ಬವನ್ನು ಕನ್ನಡದ ಕವಿಗಳು ತಮ್ಮದೇ ದೃಷ್ಟಿಕೋನದಲ್ಲಿ ಬಣ್ಣಿಸಿದ್ದಾರೆ. ಅಂತಹ ನೋಟಗಳನ್ನು ಪೋಣಿಸುವ ಪ್ರಯತ್ನವನ್ನು ಲೇಖಕ ಮಂಡಲಗಿರಿ ಪ್ರಸನ್ನ ಅವರು ಇಲ್ಲಿ ಮಾಡಿದ್ದಾರೆ.
ಶುಭಕೃತ್ ನಾಮ ಸಂವತ್ಸರದೊಂದಿಗೆ ಯುಗಾದಿ ಮತ್ತೆ ಆಗಮಿಸಿದೆ. ಕಳೆದೆರಡು ವರ್ಷಗಳಲ್ಲಿ ಹಬ್ಬದ ಸಂಭ್ರಮಕ್ಕೆ ಕೋವಿಡ್ ಕರಿನೆರಳು ಇದ್ದುದರಿಂದ ಖುಷಿಗೂ ಕಲೆ ಅಂಟಿದಂತಿತ್ತು. ಆದರೆ ಈ ಬಾರಿ ಮನಸ್ಸು ತುಸು ಮುಕ್ತವಾಗಿದೆ. ಯುದ್ಧದ ಹಿನ್ನೆಲೆಯಲ್ಲಿ ಬೆಲೆ ಏರಿಕೆಯ ಬಿಸಿಯನ್ನು ತಾಳಿಕೊಂಡರೆ ಹಬ್ಬದ ಸಂಭ್ರಮವನ್ನು ಅನುಭವಿಸಬಹುದೇನೋ. ಅದೇನೇ ಇರಲಿ, ಈ ಸಂದರ್ಭದಲ್ಲಿ ಹಬ್ಬವನ್ನು ಬಣ್ಣಿಸಿದ ಕನ್ನಡದ ಕವಿಗಳು ನೆನಪಾಗುತ್ತಾರೆ. ಯಾವ ಹೊಸ ಸಂವತ್ಸರ ಬಂದರೂ ಕನ್ನಡದ ವರಕವಿ ದ.ರಾ.ಬೇಂದ್ರೆ ಅವರ ಹಾಡು ನೆನಪಾಗದೇ ಇರದು. ಈ ಹಾಡು ರಚಿತಗೊಂಡಂದಿನಿಂದ ಅಜರಾಮರವಾಗೆ ಉಳಿದಿದೆ. ಒತ್ತಾಯವಲ್ಲದಿದ್ದರೂ, ಅನಿವಾರ್ಯವಾಗಿ ಕಿವಿಯಲಿ ರಿಂಗಣಿಸುತ್ತದೆ.
`ಯುಗ ಯುಗಾದಿ ಕಳೆದರು
ಯುಗಾದಿ ಮರಳಿ ಬರುತಿದೆ
ಹೊಸ ವರುಷಕೆ ಹೊಸ ವರುಷವ
ಹೊಸತು ಹೊಸತು ತರುತಿದೆ’
ಯುಗಾದಿ ಕವನದ ಈ ಸಾಲುಗಳು ಎಲ್ಲ ಕಾಲಕ್ಕೂ ಪ್ರಸ್ತುತ. ಇಲ್ಲಿನ ಸಾಲುಗಳು ಅತ್ಯಂತ ಸರಳ, ಸುಂದರ ಹಾಗೂ ಸಾರ್ವಕಾಲಿಕ ಶ್ರೇಷ್ಠ ರಚನೆ ಎಂಬುದನ್ನು ತೋರಿಸುವ ಅಂಶ ಈ ಕವಿತೆಯಲ್ಲಿದೆ. ಈ ಹಾಡಿನ ಸಾಲುಗಳು ಯುಗಾದಿ ಹಬ್ಬದ ಹಿರಿಮೆಯನ್ನು, ಗರಿಮೆಯನ್ನು, ಮಾನವನ ಬದುಕಿನಲ್ಲಿ ಈ ಹಬ್ಬ ಮೇಳೈಸಿರುವ ಸುಖ-ದುಃಖದ ಅಷ್ಟೇ ಸಮರ್ಥ, ಸಮೃದ್ಧವಾಗಿ, ಅರ್ಥಪೂರ್ಣವಾಗಿ ಹೇಳುವುದು ಈ ಹಾಡಿನ ಧ್ವನಿಪೂರ್ಣತೆಗೆ ಸಾಕ್ಷಿ.
ಬಿರುಬೇಸಿಗೆಯ ಸೆಕೆಯನ್ನು ಮರೆಸಿ, ಕನಸುಗಳನ್ನು ಬಿತ್ತುವ ಯುಗಾದಿ ಹಬ್ಬವು ಕವಿಗಳಿಗೆ ಇಷ್ಟವಾಗದೇ ಇರುವುದೇ. ಯುಗಾದಿಯ ನೆಪ ವಿಲ್ಲದೇ ಇದ್ದರೂ, ಮಾಮರದ ಹಸಿರು, ಹಣ್ಣುಗಳ ಸೊಬಗು, ಕೋಗಿಲೆ ಉಲಿಯು ಕವಿಗಳಿಗೆ ಸ್ಫೂರ್ತಿ ತಾನೇ. ಅದಕ್ಕೇ ವಸಂತನಿಗೆ ಋತುಗಳ ರಾಜ ಎಂಬ ಹೆಸರಾದರೆ, ಮಾವಿಗೆ ಹಣ್ಣುಗಳ ರಾಜ ಎಂಬ ಮನ್ನಣೆ.
ಗಾಳಿಯ ತಂಪು ಜನಗಳ ಜಾತ್ರೆಯ ಗುಂಪು
ಕಿವಿಗಳಿಗಿಂಪು ಹಕ್ಕಿಗಳುಲುಹಿನ ಪೆಂಪು
ಯುಗಾದಿಯ ನೆಪ ವಿಲ್ಲದೇ ಇದ್ದರೂ, ಮಾಮರದ ಹಸಿರು, ಹಣ್ಣುಗಳ ಸೊಬಗು, ಕೋಗಿಲೆ ಉಲಿಯು ಕವಿಗಳಿಗೆ ಸ್ಫೂರ್ತಿ ತಾನೇ. ಅದಕ್ಕೇ ವಸಂತನಿಗೆ ಋತುಗಳ ರಾಜ ಎಂಬ ಹೆಸರಾದರೆ, ಮಾವಿಗೆ ಹಣ್ಣುಗಳ ರಾಜ ಎಂಬ ಮನ್ನಣೆ.
ಯುಗ ಯುಗಾದಿ ಕಳೆದರೂ ಮರಳಿ ಮರಳಿ ಬರುವ ಈ ಹಬ್ಬ ಮತ್ತೆ ಮತ್ತೆ ಬರುವ ಇತರೆ ಹಬ್ಬಗಳಂತಲ್ಲ. ಶಿಶಿರ ಋತುವಿನ ಚಳಿಗಾಲದಿಂದ ಒಣಗಿದ ಮರ-ಗಿಡಗಳು ವಸಂತ ಋತುವಿನಲ್ಲಿ ಮತ್ತೆ ಚಿಗುರುವಂತೆ `ಯುಗಾದಿ’ ಯ ಹೊಸತನ ಮನುಷ್ಯನ ಬದುಕಲ್ಲಿಯೂ ಹೊಸ ಜೀವ ತುಂಬಬಲ್ಲ ಹಬ್ಬವಾಗಿರುವುದರಿಂದ `ಯುಗಾದಿ’ ಹೊಸ ಯುಗದ, ಅಂದರೆ ಹೊಸ ವರ್ಷದ ನಾಂದಿ. ಯುಗಾದಿಯ ಬಗ್ಗೆ ಪುರಾಣೇತಿಹಾಸಗಳು ಏನೇ ಇರಲಿ, ಆದರೆ ಸುಲಭದ ವಿಶ್ಲೇಷಣೆ ಹೊಸವರುಷದ ಆರಂಭ ಎಂದರ್ಥ. ವ್ಯಾವಹಾರಿಕವಾಗಿ ಇಂಗ್ಲೀಷರ ಜನೆವರಿ ತಿಂಗಳು ವರ್ಷದ ಆರಂಭವಾದರೂ ಹಿಂದೂಗಳಿಗೆ ಯುಗಾದಿ ಶುಭದಿನ, ನೂತನ ವಷಾರಂಭದ ಪರ್ವ ಕಾಲ.
ಮಾನವನ ಎಂತಹ ದುಷ್ಟ ಪ್ರವೃತ್ತಿಯನ್ನೂ ಸಹಿಸಿಕೊಂಡು, ಪ್ರಕೃತಿ ಅತ್ಯಂತ ಸಂಯಮದಿಂದ ಪಕ್ಷಿ, ಗಿಡ, ಮರ, ಹೂ, ಹಸಿರಿನ ಮೂಲಕ ಮನುಷ್ಯನ ಬದುಕಿನಲ್ಲಿ ಹೊಸ ಆಕಾಂಕ್ಷೆ ಮೂಡಿಸಬಲ್ಲದು. ಅದರ ಸಂಕೇತವೇ ಯುಗಾದಿ.
ಬೇವು-ಬೆಲ್ಲ ಸೇವನೆ, ಹೋಳಿಗೆ ಊಟ ಯುಗಾದಿ ಹಬ್ಬದ ಮತ್ತೊಂದು ಪ್ರಮುಖ ಅಂಶ. ಬೇವು-ಬೆಲ್ಲ ಸೇವನೆಗೆ ನಮ್ಮ ಹಿರಿಯರು ಯುಗಾದಿಯ ಮೂಲಕ ಎಂಥ ಅರ್ಥಪೂರ್ಣವಾದ ಕಾರಣ ಕೂಡಿಸಿಟ್ಟಿದ್ದಾರೆಂದರೆ, ಬೇವು ಕಹಿಯ ಮತ್ತು ಬೆಲ್ಲ ಸಿಹಿಯ ಸಂಕೇತ. ಸಿಹಿ-ಕಹಿಯನ್ನು ಅಂದರೆ ಸುಖ-ದುಃಖವನ್ನು ಸಮಾನವಾಗಿ ಬದುಕಲ್ಲಿ ಸ್ವೀಕರಿಸುವ ದ್ಯೋತಕವೆ ಈ ಯುಗಾದಿ ಹಬ್ಬ.
ಯುಗಾದಿಯನ್ನು ದೇಶದ ಅನೇಕ ಭಾಗಗಳಲ್ಲಿ ಆಚರಿಸುವ ರೂಢಿ ವಿಭಿನ್ನವಾಗಿದೆ. ಈ ಹಬ್ಬದ ಆಚರಣೆಗೆ ಶತಶತಮಾನಗಳ ಇತಿಹಾಸವಿದೆ. ಯುಗದ ಆರಂಭದ ಹಬ್ಬ ಯುಗಾದಿ ಎಂಬುದಕ್ಕೆ ಅನ್ವರ್ಥಕ ಎಂಬಂತೆ ಜಗತ್ತಿನ ಪ್ರಮುಖ ನಾಗರಿಕತೆಗಳ ಜೊತೆಗೇ ಈ ಹಬ್ಬವೂ ಆಚರಣೆಗೆ ಬಂದಿತೆನ್ನಬಹುದು.
ಯುಗಾದಿ ಕೇವಲ ಸಂತಸ, ಸಡಗರದ ಹಬ್ಬ ಮಾತ್ರವಲ್ಲ. ಯುಗಾದಿಗೆ ತನ್ನದೆ ಆದ ವಿಶಿಷ್ಟ ಇತಿಹಾಸವಿರುವ ಈ ಹಬ್ಬದಲ್ಲಿ ಭಕ್ತಿಗೆ ಅಗ್ರಪ್ರಾಶಸ್ತ್ಯ. ಸಾಂಪ್ರದಾಯಿಕ ಪೂಜೆ, ಪುನಸ್ಕಾರಗಳ ಜೊತೆಗೆ ಪಂಚಾಂಗ ಪಠಣ, ಶಾರದಾ ಪೂಜೆ, ಹೀಗೆ ವಿವಿಧ ಬಗೆಯಲ್ಲಿ ಈ ಹಬ್ಬವನ್ನು ಆಚರಿಸುವ ಪದ್ಧತಿ ನಮ್ಮ ಸಮಾಜದಲ್ಲಿದೆ. ಇನ್ನು ಈ ಹಬ್ಬ ನಮ್ಮ ನೆರೆಯ ರಾಜ್ಯಗಳಾದ ಆಂಧ್ರ, ತೆಲಂಗಾಣ, ತಮಿಳುನಾಡಲ್ಲಿ, ಮಹಾರಾಷ್ಟ್ರ ಹಾಗೂ ಕೇರಳದಲ್ಲಿಯೂ ವಿವಿಧ ಹೆಸರುಗಳಿಂದ ವಿಭಿನ್ನ ಶೈಲಿಯಲ್ಲಿ ಆಚರಿಸಲಾಗುತ್ತದೆ.
ನಮ್ಮ ರಾಜ್ಯದ ವಿವಿಧ ಜೆಲ್ಲೆಗಳಲ್ಲಿಯೂ ವಿಧವಿಧ ರೀತಿಯಲ್ಲಿ ಆಚರಿಸುವ ಯುಗಾದಿ ಹಬ್ಬ, ವಿಶೇಷವಾಗಿ ಕೆಲ ಜಿಲ್ಲೆಗಳಲ್ಲಿ ಅಂದಿನ ದಿನ ಬೇಟೆಯಾಡುವ ಪದ್ಧತಿ ಇತ್ತೆಂಬ ಬಗ್ಗೆ ಕೇಳಲ್ಪಟ್ಟಿರುವೆ. ಯುಗಾದಿಯ ಆಸುಪಾಸಿನಲ್ಲಿ ದೇಶದ ತುಂಬೆಲ್ಲ ಊರ ದೇವರ ಉತ್ಸವ, ಜಾತ್ರೆಗಳು ಸಹ ಸಂಭ್ರಮದಿಂದ ನಡೆಯುವುದನ್ನು ನೋಡಬಹುದು. ಬಹಳ ವಿಶೇಷ ಎಂದರೆ ಗ್ರಾಮೀಣ ಪ್ರದೇಶದ ಜನರಿಗೆ ಯುಗಾದಿ ಹಬ್ಬ ಸುಖ-ಸಂತೋಷ ಮತ್ತು ಸಮೃದ್ಧಿಯ ಸಂಕೇತ. ಯುಗಾದಿ ಹಬ್ಬದ ಕಾಲ ಚೈತ್ರಮಾಸದ ಸಮಯ. ಹೊಸ ಚಿಗುರು, ಎಲ್ಲೆಲ್ಲಿಯೂ ಹಸಿರು ಮೂಡಿರುವ ಕಾಲ. ಅದೇ ತಾನೆ ಸುಗ್ಗಿ ಮುಗಿಸಿ, ದುಡಿದು ದಣಿದ ರೈತರಿಗೆ ಅದು ಹಾಯಾಗಿ ಕಾಲ ಕಳೆವ ಸಮಯ. ಈ ಸಂದರ್ಭದಲ್ಲಿ ರೈತರು ಹಾಡಿ, ಕುಣಿದು ನಲಿಯುತ್ತಾರೆ. ಹೊಸ ವರ್ಷದ ಈ ಯುಗಾದಿಯ ಸಂದರ್ಭ ಕೃಷಿ ಚಟುವಟಿಕೆಗಳಿಗೂ ಅದು ಶುಭದಿನ ಎಂಬುದು ರೈತಾಪಿ ವರ್ಗದ ನಂಬಿಕೆ. ಇದಕ್ಕೆ ಸಾಕ್ಷಿ ಎನ್ನುವಂತೆ ಯುಗಾದಿಯ ಎಡಬಲದಲ್ಲಿ ಅಲ್ಪಸ್ವಲ್ಪ ಮಳೆ ಬಿದ್ದು ಭೂಮಿ ಹದವಾಗುವ ಸೃಷ್ಟಿಕ್ರಿಯೆ ಕಾಣಬಹುದು. ಉತ್ತರ ಕರ್ನಾಟಕದಲ್ಲಿ ಎಳ್ಳು-ಬೆಲ್ಲವನ್ನು ಪರಸ್ಪರ ಬಂಧು-ಮಿತ್ರರು ಹಂಚಿಕೊಂಡು `ಎಳ್ಳುಬೆಲ್ಲ ತಿಂದು ಒಳ್ಳೆಯ ಮಾತಾಡೋಣ; ಒಳ್ಳೆಯವರಾಗಿ ಇರೋಣ;’ ಎಂದೆಲ್ಲ ಹಾರೈಸುವ ಪ್ರಮುಖ ಸಂಗತಿ ಕಾಣಬಹುದು.
ಯುಗಾದಿಯ ಆಸುಪಾಸಿನಲ್ಲಿ ದೇಶದ ತುಂಬೆಲ್ಲ ಊರ ದೇವರ ಉತ್ಸವ, ಜಾತ್ರೆಗಳು ಸಹ ಸಂಭ್ರಮದಿಂದ ನಡೆಯುವುದನ್ನು ನೋಡಬಹುದು. ಬಹಳ ವಿಶೇಷ ಎಂದರೆ ಗ್ರಾಮೀಣ ಪ್ರದೇಶದ ಜನರಿಗೆ ಯುಗಾದಿ ಹಬ್ಬ ಸುಖ-ಸಂತೋಷ ಮತ್ತು ಸಮೃದ್ಧಿಯ ಸಂಕೇತ
ಇನ್ನು ಕನ್ನಡದ ಕವಿಗಳಿಗಂತೂ ಈ ಯುಗಾದಿ ಕಾಲ ಹೇಳಿ ಮಾಡಿಸಿದ್ದು. ಚೈತ್ರಮಾಸದ, ವಸಂತ ಋತುವಿನ ಬಗ್ಗೆ ಸಾವಿರಾರು ಪದ್ಯಗಳನ್ನು, ಕವನಗಳನ್ನು ನಮ್ಮ ಕವಿಗಳು ಬರೆದಿದ್ದಾರೆ. ರಾಷ್ಟ್ರಕವಿ ದಿ. ಜಿ.ಎಸ್.ಶಿವರುದ್ರಪ್ಪನವರು ವಸಂತನನ್ನು ಶ್ರೀ ಕೃಷ್ಣನಿಗೆ ಹೋಲಿಸಿ ಹೊಗಳಿದ್ದಾರೆ. ಅವರು ಹೇಮಂತವನ್ನೂ, ಶಿಶಿರವನ್ನೂಬಣ್ಣಿಸುವ ರೀತಿಯೇ ಅಪರೂಪದ್ದಾಗಿದೆ.
`ಖಳದುಶ್ಯಾಸನ ಹೇಮಂತ
ಮರಗಳ ಹಸಿರುಡುಗೆಯ
ಸೆಳೆದು ಹಾಕಿ ನಗ್ನಗೊಳಿಸಿ
ಅವಮಾನವ ಮಾಡಿದ
ಇಗೋ ಬಂದ ಋತು ವಸಂತ
ಕೊಳಲೂದುತ ಎಲ್ಲೋ ನಿಂತು
ಮರಮರಗಳ ಮೈಯ ತುಂಬ
ಹೊಸ ಚಿಗುರನು ಉಡಿಸಿದ’
ಎಂದು ವಿಡಂಬನ್ಮಾತ್ಮಕವಾಗಿ ಹೇಳಿದ್ದರೆ.
ಎಂ.ಗೋಪಾಲಕೃಷ್ಣ ಅಡಿಗರು ಮನುಷ್ಯನಿಗೆ ಸುಖ ನೀಡುವ ಹಬ್ಬದ ಕುರಿತು ಬರೆದ ಸಾಲುಗಳು ಇಲ್ಲಿವೆ:
`ಯುಗ ಯುಗಾದಿಯ ತೆರೆಗಳೇಳುತಿವೆ ಬೀಳುತಿವೆ
ಹೊಸ ಹೊಸವು ಪ್ರತಿ ವರುಷವೂ….
ವರುಷ ವರುಷವೂ ನಮ್ಮ ಪಯಣ ಮೊದಲಗುತಿದೆ
ಇದಕು ಮಿಗಿಲಿಲ್ಲ ಹಾ, ನರಗೆ ಸೊಗವು….’
ಹೊಸ ಬದುಕಿನ ಹೊಸ ಸುಖ ಈ ಯುಗಾದಿ ಎನ್ನುತ್ತ, ಮನುಷ್ಯ ಜೀವನದ ಪಯಣದ ಕುರಿತ ಸಾಲುಗಳನ್ನು ಹೆಣೆದಿದ್ದಾರೆ.
ಸುಮತೀಂದ್ರ ನಾಡಿಗರಿಗೆ ಕೂಡ ಯುಗಾದಿ ಪ್ರತಿಬಾರಿ ಹೊಸದು. ಅದು ಹಳೆಯದಾಗುವುದಿಲ್ಲ. ಆದರೆ ಅದನ್ನು ನೋಡುವ ಮನುಷ್ಯನಿಗೆ ಮಗುವಿನಂತಹ ಕುತೂಹಲದ ಕಣ್ಣು ಇರಬೇಕು. ಆಗ ಜಗವು ಹೊಸದಾಗಿ ಕಾಣುವುದು.
`ಯುಗದ ಆದಿಯಲ್ಲಿ ಮತ್ತೆ ನವನವೋನ್ಮೇ಼ಷ
ಹಸುಳೆಕಣ್ಣಿನಿಂದ ಪುನಃ ವಿಶಿಷ್ಟತೆಯ ವೀಕ್ಷಣ
ಅದಕ್ಕಾಗಿ ಬಂತು ಹಬ್ಬ ನವೀನ ಜನ್ಮ ಬಂದ ಹಾಗೆ
ನಮಗೆ ಈಗ ಹೊಸ ಯುಗ, ಹೊಸತಾಗಿದೆ ಈ ಜಗ’
-ಎಂದು ಯುಗಾದಿ ಎನ್ನುವುದು ಹೊಸ ಜನ್ಮದ ಬರುವಿಕೆ ಎಂದಿದ್ದಾರೆ.
ಒಟ್ಟಿನಲ್ಲಿ, ಪ್ರತಿ ಯುಗಾದಿ ಹೊಸ ಬಗೆಯಲಿ ಬರಲಿ, ಜೊತೆಗೆ ಸಾವಿರ ಸಾವಿರ ಸುಖ ತರಲಿ ಎಂದು ಹಾರೈಸುವ ಕವಿ ಮಾತಿಗೆ ಅರ್ಥಪೂರ್ಣ ಎನ್ನುವಂತೆ ಬರುವ ಯುಗಾದಿ ಪ್ರಕೃತಿಯ ಪೂರ್ಣಮೇಳ ಪಲ್ಲವಿತ, ಮಧುಮಾಸದ ಚೈತನ್ಯ, ಶಾಂತಿ-ಸಮೃದ್ಧಿ, ಸಂತೃಪ್ತಿಯ ಸಂದೇಶ ಮೂಡಿಸಲಿ ಎಂಬುದೆ ಪ್ರಮುಖ ಮತ್ತು ಕವಿಯಾಗಿ ನನ್ನ ಕವಿತೆಯ ಸಾಲುಗಳ ಆಶಯ ಸಹ ಇದೆ ಆಗಿದೆ.
`ಯುಗಾದಿ ಬರಲಿ ಸುಖವ ತರಲಿ
ಹೊಸ ಬಾಳಿನ ನವ ಪಥಕೆ
ಹೊಸತು ರಾಗ ಹಾಡಲಿ’
ವಸಂತಾಗಮನದ ಯುಗಾದಿಯ ಈ ಶುಭ ಸಂದರ್ಭದಲ್ಲಿ ಇಂದು ಜಗತ್ತಿಗೆ ಅತ್ಯಂತ ಅವಶ್ಯಕವಾಗಿರುವ ಶಾಂತಿ, ಸೌಹಾರ್ಧತೆ, ನೆಮ್ಮದಿ, ಸಾಮಾಜಿಕ ಸಾಮರಸ್ಯತೆ, ಬರಲಿರುವ ಶುಭಕೃತ್ ನಾಮ ಸಂವತ್ಸರವು ಮಾನಸಿಕ ಸ್ವಾಸ್ಥ್ಯ, ಭಾತೃತ್ವಪ್ರೇಮ, ಮಾನವೀಯ ಗುಣಗಳ ಐಶ್ವರ್ಯ ತರಲಿ ಎಂದು ಹಾರೈಸುವುದು ಇಂದಿನ ಸಂದರ್ಭದಲ್ಲಿ ಎಷ್ಟೊಂದು ಮುಖ್ಯವಾಗಿದೆ ಅಲ್ಲವೇ.
ಮಂಡಲಗಿರಿ ಪ್ರಸನ್ನ ಮೂಲತಃ ರಾಯಚೂರಿನವರು. ಓದಿದ್ದು ಇಂಜಿನಿಯರಿಂಗ್. ಹಲವು ವರ್ಷಗಳ ಕಾಲ ಬಹುರಾಷ್ಟ್ರೀಯ ಕಂಪೆನಿಯೊಂದರಲ್ಲಿ `ಪ್ರಾಜೆಕ್ಟ್ ಮತ್ತು ಮಾರ್ಕೆಟಿಂಗ್’ ವಿಭಾಗದ ಅಧಿಕಾರಿಯಾಗಿ ಸೇವೆ ಸಲ್ಲಿಸಿ, ಈಗ ಸ್ವಯಂ ನಿವೃತ್ತಿ ಪಡೆದಿದ್ದಾರೆ. ಕನಸು ಅರಳುವ ಆಸೆ(ಕವಿತೆ), ಅಮ್ಮ ರೆಕ್ಕೆ ಹಚ್ಚು(ಮಕ್ಕಳ ಕವಿತೆ), ನಿನ್ನಂತಾಗಬೇಕು ಬುದ್ಧ(ಕವಿತೆ), ಏಳು ಮಕ್ಕಳ ನಾಟಕಗಳು(ಮಕ್ಕಳ ನಾಟಕ), ಪದರಗಲ್ಲು (ಸಂಪಾದನೆ), ನಾದಲಹರಿ(ಸಂಪಾದನೆ-2010) ಸೇರಿ ಒಟ್ಟು ಒಂಭತ್ತು ಕೃತಿಗಳು ಪ್ರಕಟವಾಗಿವೆ