ಆ ರಾತ್ರಿ ನಾವು ದಲಿತ ಹುಡುಗರು ಪ್ರತಿಭಟನೆಯ ಭಾಗವಾಗಿ ಅಡುಗೆ ಮನೆಗೆ ಬೀಗ ಹಾಕಿದ್ದೆವು. ಹಾಗೇಯೇ ಅಂಬೇಡ್ಕರ್‌ಗೆ ಆದ ಅಪಮಾನದಿಂದ ನೊಂದು ಉಪವಾಸ ಆಚರಿಸುತ್ತೇವೆ ಎಂದು ಸ್ವಯಂ ದಂಡಿಸಿಕೊಂಡಿದ್ದೆವು. ಇಡೀ ಹಾಸ್ಟೆಲ್ ಬಿಕೊ ಎನ್ನುತ್ತಿತ್ತು. ನಾಲ್ವಡಿ ಅವರ ಕಾಲದ ತಳದ ಹಳೆಯ ಬಿಲ್ಡಿಂಗಿನಲ್ಲಿ ನಮಗೆ ರೂಮುಗಳು ಪ್ರತ್ಯೇಕವಾಗಿದ್ದವು. ಹೊಸ ಕಟ್ಟಡದಲ್ಲಿ ಅವರಿಗೇ ಮೊದಲು ಆದ್ಯತೆ ಇದ್ದದ್ದು. ಜಾತಿ ಬೇಡ ಎನ್ನುವವರೂ ಅಪರೂಪಕ್ಕೆ ನಮ್ಮ ಜೊತೆಗೆ ಹೊಂದಿಕೊಂಡಿದ್ದರು. ಅಂತವರ ಸಂಖ್ಯೆ ದೊಡ್ಡ ಪ್ರಮಾಣದಲ್ಲಿತ್ತು.
ಮೊಗಳ್ಳಿ ಗಣೇಶ್ ಬರೆಯುವ ಆತ್ಮಕತೆ ‘ನನ್ನ ಅನಂತ ಅಸ್ಪೃಶ್ಯ ಆಕಾಶ’ ಸರಣಿ.

ನಾನು ಮೈಸೂರು ಸೇರುವ ಮುನ್ನ ನೆಲಮಂಗಲ ಸರ್ಕಾರಿ ಪಿ.ಯು.ಕಾಲೇಜಿನಲ್ಲಿ ಟಾಪರ್ ಆಗಿ ಪಾಸಾಗಿದ್ದೆ. ಅಲ್ಲಿ ಎರಡು ವರ್ಷ ಇದ್ದೆ. ಅಷ್ಟರಲ್ಲಿ ಚಿಕ್ಕಪ್ಪನಿಗೆ ಮದುವೆ ಆಗಿತ್ತು. ಅವರ ಖಾಸಗಿ ಜೀವನಕ್ಕೆ ನಾನು ಅಡೆ ತಡೆಯಂತೆ ಕಂಡಿದ್ದೆ. ಅಲ್ಲಿಂದ ಹೊರಟು ನಾನೇ ನನ್ನ ದಾರಿಯ ಹುಡುಕಬೇಕಿತ್ತು. ಒಂದು ದಿನ ನಾನು ಮೈಸೂರಿಗೆ ಬಿ.ಎ. ಕಲಿಯಲು ಹೋಗುವೆ ಎಂದೆ. ಆ ಮಾತಿಗೇ ಕಾದಂತಿತ್ತು. ‘ಆಯ್ತಪ್ಪಾ… ಮೂರು ವರ್ಷ ನೋಡ್ಕಂಡೆ. ಬಿ.ಎ ಸೇರ್ಕಬೇಕು ಅಂತೀಯೆ… ಹೋಗಪ್ಪ ಒಳ್ಳೇದಾಗಲಿ. ಇಷ್ಟೇ ನನ್ನ ಕೈಲಿ ಸಾಧ್ಯವಾದದ್ದು. ಇನ್ನೂ ಬ್ಯಾರೆ ಬ್ಯಾರೆಯವರು ಇದ್ದಾರೆ. ಅವರ್ನ ಕೇಳ್ನೋಡು’ ಎಂದು ಬಾಗಿಲು ಮುಚ್ಚಿಕೊಂಡಿದ್ದರು. ಇನ್ನೂ ಚಿಕ್ಕಪ್ಪಂದಿರಿದ್ದರು. ಅವರ ಬಳಿ ಕಾಸಿಗೆ ನೋಟಿಗೆ ಅಂಟಿದ್ದ ಕೊಳೆಯನ್ನು ಕೂಡ ನಿರೀಕ್ಷಿಸುವಂತಿರಲಿಲ್ಲ. ಬಿಟ್ಟಿದ್ದೆ. ಏನೊ ಸಡಗರ. ಆ ವೇಳೆಗೆ ಮೈಸೂರಿನ ರೀಜನಲ್ ಕಾಲೇಜಿಗೆ ಸೇರಲು ಮುಂದಾಗಿದ್ದೆ.

ಅಗತ್ಯ ದಾಖಲೆಗಳ ಹೆಗಲ ಬ್ಯಾಗಿನಲ್ಲಿಟ್ಟುಕೊಂಡು ವಿಳಾಸ ಹುಡುಕಿದ್ದೆ. ಆಟೋದವನು ಯಾರೊ; ಅವನಿಗೆ ಕೈಮುಗಿಯಬೇಕು. ಅದು ಕಾಲು ದಾರಿಗೆ ಸಿಗೋದಿಲ್ಲಾ ಬಾ ಬಾ… ನಾನು ಕರೆದೊಯ್ಯುವೆ ಎಂದು ಕೂರಿಸಿಕೊಂಡು ವರ್ರೊ ಸದ್ದಿನಲ್ಲಿ ಜರ್ರನೆ ಆ ಕಾಲೇಜಿನ ಮುಂದೆ ನಿಲ್ಲಿಸಿದ. ‘ಇದೇ ನೋಡು ಹೋಗು ಒಳ್ಳೆದಾಗಲಿ’ ಎಂದ. ಮೂರು ಗಂಟೆ ಆಗಿತ್ತು. ಹಸಿವೇ ಮರೆತು ಹೋಗಿತ್ತು. ಕಾಲೇಜಿನ ಅಂಗಳದ ತುಂಬ ತರಾವರಿ ವಿದ್ಯಾರ್ಥಿಗಳು. ದೊಡ್ಡ ಕ್ಯಾಂಪಸ್ಸು. ದೇಶದ ನಾನಾ ಮೂಲೆಗಳಿಂದ ಬಂದವರು ಅಲ್ಲಿ ಕಲಿಯುತ್ತಿದ್ದರು. ಪಿ.ಯು ಕಾಲೇಜಿನ ‘ಲಾಜಿಕ್’ ಮಾಸ್ತರು ಹೇಳಿದ್ದರು, ರೀಜನಲ್ ಕಾಲೇಜಿನ ಬಗ್ಗೆ. ಅವರ ಹೆಸರು ನಾಗರಾಜ ರಾವ್. ಎತ್ತರದ ಗೂನು ಬೆನ್ನಿದ್ದಂತಿದ್ದವರು. ಕರುಣಾಮಯಿ ಅವರು. ಮೂಲತಃ ಮೈಸೂರಿನವರಾಗಿದ್ದರು. ಕಛೇರಿಯಲ್ಲಿ ವಿಚಾರಿಸಿದೆ. ಬೋರ್ಡ್ ನೋಡು ಎಂದರು. ಗೊತ್ತಾಗಲಿಲ್ಲ. ಎಷ್ಟೋ ನೊಟೀಸುಗಳಿದ್ದವು. ಅಲ್ಲೆಲ್ಲ ಇಂಗ್ಲೀಷ್ ಮಯ. ಕೇಂದ್ರ ಸರ್ಕಾರದ ಅಡಿಯಲ್ಲಿ ಬರುವ ಪ್ರತಿಷ್ಠಿತ ಕಾಲೇಜು. ನನ್ನ ಅರೆಬರೆ ಇಂಗ್ಲೀಷಿನಿಂದಲೇ ಅವರಿಗೆ ಗೊತ್ತಾಗಿತ್ತು; ಇವನು ಹಳ್ಳಿಗಾಡಿಂದ ಬಂದವನೆಂದು. ಪ್ರಿನ್ಸಿಪಾಲರನ್ನು ಕೇಳಿಕೊಳ್ಳುವೆ ದಯವಿಟ್ಟು ಅವಕಾಶ ಮಾಡಿಕೊಡಿ ಎಂದು ಹತ್ತಾರು ಬಾರಿ ಆ ಇಂಗ್ಲೀಷ್ ವಾಕ್ಯವನ್ನು ಮನನ ಮಾಡಿ ಕೋರಿದೆ. ಬಿಟ್ಟುಕೊಟ್ಟಿದ್ದರು. ಅವರು ಯಾರೊ ತಮಿಳಿಗರಂತಿದ್ದರು. ಕನ್ನಡ ತಿಳಿಯುತ್ತಿತ್ತು. ‘ಸಾರಿ ಐ ಕಾಂಟ್ ಹೆಲ್ಪ್ ಯೂ… ಟೈಂ ಆಗಿ ಹೋಗಿದೆ ಅಡ್ಮಿಷನ್ ಒವರ್ರಾಗಿದೆ… ಇಂಪಾಸಿಬಲ್ ಟು ಗೆಟು ಯೂ ಇನ್‌ಟು ಅಡ್ಮಿಷನ್…ʼ ಎಂದರು ಆ ನಿಯಮಗಳೆಲ್ಲ ನನಗೆ ಗೊತ್ತಿರಲಿಲ್ಲ. ಗೋಗರೆದೆ ‘ಬೇರೆ ಕಾಲೇಜುಗಳಿವೆ. ಮೊಸ್ಟ್‌ಲೀ ಅಲ್ಲೂ ಅಡ್ಮಿಷನ್ ಮುಗಿದಿರುತ್ತೆ. ಮಹರಾಜ ಕಾಲೇಜು ಒಂದಿದೆ. ಅಲ್ಲಿ ಕೇಳಿ… ಸಿಕ್ಕರೂ ಸಿಗಬಹುದು’ ಎಂದು ಬೆಲ್ ಮಾಡಿದರು. ಇಲ್ಲಿ ನನಗೆ ಋಣವಿಲ್ಲ ಎಂದು ಮಹರಾಜ ಕಾಲೇಜಿನ ದಾರಿ ಹುಡುಕುತ್ತ ಕುಲುಕು ನಡಿಗೆಯಲ್ಲಿ ಓದುತ್ತ ಬಂದೆ. ಹೊತ್ತಾಗುತ್ತಿತ್ತು. ಮಹರಾಜ ಕಾಲೇಜು ಭವ್ಯವಾಗಿತ್ತು. ಅಬ್ಬರ ಇರಲಿಲ್ಲ. ಕ್ಲಾಸುಗಳು ಮುಗಿದಿದ್ದವು. ಮೇಲೆ ಪ್ರಿನ್ಸಿಪಾಲರ ಕೊಠಡಿಯ ಪಕ್ಕದಲ್ಲೆ ಕಛೇರಿ ಇದೆ ಎಂದರು. ಅಂದೇ ಅಲ್ಲೂ ಕೂಡ ಕೊನೆಯ ದಿನವಾಗಿತ್ತು ಸೇರಲು. ದಡ ದಡನೆ ಮೆಟ್ಟಿಲು ಏರಿದೆ. ಮರದ ಹಳೇ ಕಾಲದ ಮೆಟ್ಟಿಲುಗಳು. ದಾಖಲೆಗಳ ಪರಿಶೀಲಿಸಿದರು. ಡೂಪ್ಲಿಕೇಟುಗಳಿಗೆ ಅಧ್ಯಾಪಕರಿಂದ ಸಹಿ ಮಾಡಿಸಿ ತನ್ನಿ ಎಂದರು. ಕೆಳಗಿಳಿದೆ. ಅಲ್ಲೇ ಇತ್ತು ಅಧ್ಯಾಪಕರ ವಿಶಾಲವಾದ ಕೋಣೆ. ಬಹುಪಾಲು ಎಲ್ಲ ಹೊರಟು ಹೋಗಿದ್ದರು. ಒಬ್ಬರು ಸಿಗರೇಟು ಸೇದುತ್ತಿದ್ದರು. ಇವರು ಅಧ್ಯಾಪಕರಲ್ಲವೆಂದು ಅತ್ತಿತ್ತ ನೋಡುತ್ತಿದ್ದೆ. ‘ಬನ್ರೀ… ಏನಾಗ್ಬೇಕೂ’ ಎಂದು ಗಡಸು ದನಿಯಲ್ಲಿ ಕರೆದರು. ಅಳುಕುತ್ತ ಹೇಳಿದೆ. ಕೊಡು ಎಂದು ಸಹಿ ಹಾಕಿದರು. ಎಲ್ಲಿಂದ ಬಂದೆ ಎಂದು ವಿಚಾರಿಸಿದರು. ಆ ಕಾಲಕ್ಕೆ ನಾನು ಎಂಬತ್ತು ಪರ್ಸೆಂಟ್ ಮೇಲೆ ಅಂಕಗಳ ಪಡೆದಿದ್ದೆ. ಇಂಗ್ಲೀಷಿನಲ್ಲಿ ಮಾತ್ರ ಕಡಿಮೆ ಬಂದಿದ್ದವು. ಮೆಚ್ಚಿದರು. ಅಲ್ಲಿತನಕ ಅಡ್ಮಿಷನ್‌ಗೆ ಇಷ್ಟು ಫೀಜ್ ಕಟ್ಟಬೇಕಾಗುತ್ತದೆ ಎಂಬ ಅರಿವೇ ಇರಲಿಲ್ಲ. ಹೋಗಿ ಅಲ್ಲಿ ಮೇಲೆ ಜಾಯ್ನಾಗು ಎಂದರು. ಹೋದೆ ಜೇಬಲ್ಲಿದ್ದ ಬಿಡಿಗಾಸುಗಳನ್ನೆಲ್ಲ ಕೂಡಿಸಿದರೂ ನನ್ನ ಬಳಿ ಹದಿನೇಳು ರೂಪಾಯಿಗಳಿರಲಿಲ್ಲ. ‘ಕ್ಯಾಶ್ ಇಲ್ಲೇ ಕಟ್ಟಬೇಕು. ಇಲ್ಲದಿದ್ದರೆ ಇಲ್ಲಾ’ ಎಂದರು. ಕೆಳಗಿಳಿದು ಓಡಿ ಬಂದೆ ಸಹಿ ಮಾಡಿದ್ದ ಆ ಸರ್ ತಮ್ಮ ಬಲೆಟ್ ನಂತಹ ಸ್ಕೂಟರನ್ನು ಕಿಕ್ ಮಾಡುತ್ತಿದ್ದರು. ಸಾರ್ ಸಾರ್ ಎಂದು ಕರೆದೆ. ಹಿಂತಿರುಗಿ ನೋಡಿದರು. ಏನಾಯ್ತು ಎಂದರು. ವಿವರಿಸಿ ವಿನಂತಿಸಿದೆ. ಮುವತ್ತು ರೂಪಾಯಿಗಳ ಕೈಗಿತ್ತು ನಾಳೆ ಸಿಕ್ಕು ಎಂದು ಹೊರಟು ಹೋದರು. ಜಾಯಿನ್ ಆಗಿದ್ದೆ. ಆ ರಾತ್ರಿ ಅಲ್ಲೇ ಕ್ರಿಕೇಟ್ ಆಟದ ಮೈದಾನದ ಬೇವಿನ ಮರದಡಿ ಮಲಗಿದ್ದೆ. ಬೆಳಿಗ್ಗೆ ಬೇಗ ಎದ್ದಿದ್ದೆ. ಮೈದಾನದ ಮೂಲೆಯಲ್ಲಿ ನಲ್ಲಿ ಇತ್ತು. ಆ ಕ್ರಿಕೇಟ್ ಅಂಗಳಕ್ಕೆ ಕಾಲಿಡಲು ಹಿಂಜರಿತವಾಗಿತ್ತು. ಅಷ್ಟು ವಿಶಾಲ ಮೈದಾನವ ಎಲ್ಲೂ ಕಂಡಿರಲಿಲ್ಲ. ಹಚ್ಚ ಹಸಿರಾಗಿತ್ತು. ಮಧ್ಯೆ ಕ್ರಿಕೇಟ್ ಪಿಚ್ ಇತ್ತು. ಆ ಅಂಗಳದಲ್ಲಿ ಆಡುವವರಿಗೆ ಹೆಲ್ಪರ್ ಆಗಿ ಬಾಲ್ ಬಾಯ್ ಆಗಬೇಕೆಂದುಕೊಂಡೆ. ಎಲ್ಲೇ ಹೋದರೂ ದೀನ ಭಾವನೆ ಬಂದು ಬಿಡುತ್ತಿತ್ತು. ನಾನೆಲ್ಲಿದ್ದೇನೆ ಎಂಬುದೆ ನನಗೆ ತಿಳಿಯುತ್ತಿರಲಿಲ್ಲ. ಆ ಹಸಿರು ಹುಲ್ಲಿನ ಮೇಲೆ ನೀರು ಹಾಯಿಸುತ್ತಿದ್ದವನ ಪರಿಚಯ ಮಾಡಿಕೊಂಡಿದ್ದೆ. ಇಲ್ಲಿ ಆಟ ಆಡೋರೆಲ್ಲ ನಿನ್ನಂತವರೇ. ಕಾಲೇಜಿನ ವಿದ್ಯಾರ್ಥಿಗಳಿಗೆಂದೇ ಮಾಡಿರುವ ಮೈದಾನ ಇದು ಎಂದಾಗ ದಂಗಾಗಿದ್ದೆ. ಇಲ್ಲಿ ನಾನೂ ಆಡಬಹುದೇ ಎಂದು ಹತ್ತು ಬಾರಿ ಕೇಳಿದ್ದೆ. ‘ಕೋಚರ್ ಬರ್ತಾರೆ ಸಂಜೇ… ಇಲ್ಲಿಗೆ ಬಾ. ಪರ್ಚಯ ಮಾಡಿಸ್ತೀನಿ’ ಎಂದಿದ್ದ. ನಂಬದಾಗಿದ್ದೆ. ನನ್ನ ಊರ ನರಕವೇ ಮರೆತು ಹೋಗಿತ್ತು. ಕೈಲಾಸಕ್ಕೆ ಬಂದಂತಾಗಿತ್ತು. ಚಾಮುಂಡಿ ಬೆಟ್ಟಕ್ಕೆ ಕೈ ಮುಗಿದಿದ್ದೆ. ಹೊಸ ಗೆಳೆಯರು ಸಿಕ್ಕಿದ್ದರು. ಹಾಸ್ಟೆಲಿನಲ್ಲಿ ಮೊದಲ ಸೀಟೇ ನನ್ನದಾಗಿತ್ತು. ಮಹಾರಾಜ ಕಾಲೇಜಿನ ಮಂತ್ ಎಂಡ್ ಫೀಸ್ಟ್ ಹಬ್ಬವನ್ನು ವರ್ಣಿಸಲಾರೆ. ನನ್ನ ಸುಖಕ್ಕೆ ಕೊನೆ ಮೊದಲು ಎರಡೂ ಇಲ್ಲ ಎನಿಸಿತ್ತು.

ಒಂದು ದಿನ ತರಗತಿಗೆ ಆ ಸರ್ ಧೀಮಂತವಾಗಿ ಪ್ರವೇಶಿಸಿದ್ದರು. ಎದ್ದು ನಿಂತು ಕೂತೆವು. ಅಹಾ! ಅವರ ದನಿಯ ಎತ್ತರದ ಮಾತುಗಳು ಆ ಕೂಡಲೆ ಮೋಡಿ ಮಾಡಿದ್ದವು. ನನ್ನ ಬಂಧಿಸಿದ್ದವು. ಗ್ರೀಕ್‌ನ ರುದ್ರ ನಾಟಕ ಮೀಡಿಯಾಳ ದುರಂತವನ್ನು ಅಮೋಘವಾಗಿ ಪದ ಪದಗಳಲ್ಲಿ ಚಿತ್ರಿಸುವಂತೆ ಗಟ್ಟಿ ದನಿಯಲ್ಲಿ ಹೇಳುತ್ತಿದ್ದಂತೆಯೇ ನನ್ನ ತಾಯಿಯೂ ಚಿಕ್ಕಮ್ಮ ಮಾದೇವಿಯೂ ನನ್ನ ಸುಪ್ತ ಪ್ರಜ್ಞೆಯಿಂದ ಎದ್ದು ಕೂತಿದ್ದರು. ಸಾವಿನ ವಿಷದ ವಜ್ರ ಕಿರೀಟವ ಧರಿಸಿ ಕುದುರೆ ರಥದಲ್ಲಿ ಓಡುತ್ತಿದ್ದ ಮೀಡಿಯಾಳಂತೆಯೇ ಚಿಕ್ಕಮ್ಮ ಸಾವಿನ ಕುದುರೆಯನೇರಿ ಹೊರಟಂತೆ ಭಾಸವಾಗಿತ್ತು.

ಆ ಸರ್ ಕೆ. ರಾಮದಾಸ್ ಆಗಿದ್ದರು. ಅವತ್ತು ಮುವತ್ತು ರೂಪಾಯಿಗಳ ಕೊಟ್ಟವರಾಗಿದ್ದರು. ಗಮನ ಸೆಳೆದಿದ್ದೆ. ಮರೆತಂತಿದ್ದರು. ಅವರ ಧೀರ ನಡೆಯ ಹಿಂದೆಯೇ ಸಾಗಬೇಕೆಂದು ನಿರ್ಧರಿಸಿದ್ದೆ. ಕಾಲೇಜಿನ ಲೈಬ್ರರಿಯೋ ನನಗೆ ಸ್ವರ್ಗವ ತೋರಿತ್ತು. ಹಾಸ್ಟೆಲಲ್ಲಿ ಒಕ್ಕಲಿಗರ ದಬ್ಬಾಳಿಕೆ ಇತ್ತು. ಸಹಜ ಅದು. ಮೆರಿಟ್ ಮೇಲೆ ಕೆಲವೇ ವಿದ್ಯಾರ್ಥಿಗಳಿಗೆ ಅಲ್ಲಿ ಅವಕಾಶ ಇತ್ತು. ಸಣ್ಣ ಪ್ರಮಾಣದಲ್ಲಿ ಒರಟು ತನವ ಅಲ್ಲಿ ಕಲಿತೆ. ದಾಸ್ ಕ್ಯಾಪಿಟಲ್ ಹಿಡಿದು ಅಡ್ಡಾಡಿದೆ. ಆಗ ನನಗೆ ಅಂಬೇಡ್ಕರರೇ ಸರಿಯಾಗಿ ಗೊತ್ತಿರಲಿಲ್ಲ. ನಾವು ದಲಿತ ವಿದ್ಯಾರ್ಥಿಗಳು ಒಂದೆಡೆ ಸೇರಿದೆವು. ಮೆಳೇಕಲ್ಲ ಹಳ್ಳಿ ಉದಯ ಎಂಬ ಗೆಳೆಯ ಆಗ ನಮ್ಮ ನಡುವೆ ಭಾವಗೀತೆಗಳ ಕವಿಯಾಗಿದ್ದ. ನಾನಿನ್ನೂ ಏನೂ ಬರೆದಿರಲಿಲ್ಲ. ಬಂಜಗೆರೆ ಜಯಪ್ರಕಾಶ್ ಕೊಂಚ ಬೇರೆ ಕವಿಯಾಗಿ ಒಂದು ಸಂಕಲನವನ್ನೆ ತಂದಿದ್ದ. ತನ್ನದೊಂದು ಕವಿತೆಗೆ ರಾಗಸಂಯೋಜನೆ ಮಾಡಿ ಹಾಡೊ ಎಂದಿದ್ದ. ಹಾಡಿದ್ದೆ.

ಒಂದು ಬೆಳದಿಂಗಳಲ್ಲಿ, ಅಂಬೇಡ್ಕರ್ ಹುಟ್ಟು ಹಬ್ಬ ಬಂದಿತ್ತು. ದಲಿತ ವಿದ್ಯಾರ್ಥಿಗಳು ಆಚರಣೆಗೆ ಮುಂದಾಗಿದ್ದರು. ಅದರ ಪ್ರಯುಕ್ತ ಒಂದು ಕ್ರಾಂತಿಕಾರಿ ಹಾಡ ಹಾಡಿಸಲು ತೀರ್ಮಾನಿಸಿದರು. ಅಂತಹ ಒಂದು ಹಾಡನ್ನು ನಾನೇ ಬರೆದು ಸ್ವರ ಸಂಯೋಜನೆ ಮಾಡಿ ವೇದಿಕೆಯಲ್ಲಿ ಹಾಡಬೇಕಿತ್ತು. ಆ ತನಕ ಕವಿತೆಯನ್ನೇ ಬರೆಯದಿದ್ದ ನಾನು ಅಳುಕುತ್ತಲೇ ಒಪ್ಪಿಕೊಂಡಿದ್ದೆ. ಯಾವುದೊ ಒಂದು ಅಂದಾಜು ಗೀತೆ ರಚಿಸಿದ್ದೆ. ಕ್ರಾಂತಿಕಾರಿಯಾಗಿಲ್ಲ ಎಂದರು ಸೀನಿಯರ್‍ಗಳು. ಯತ್ನಿಸಿದೆ. ನೋವಿನ ಹಾಡಾಗಿತ್ತು. ಸೆಂಟಿನರಿ ಹಾಲ್ ತುಂಬಿತ್ತು. ಯಾರು ಭಾಷಣಕಾರರು, ಗಣ್ಯ ವ್ಯಕ್ತಿಗಳು ಎಂಬುದರತ್ತ ಚಿತ್ತವಿರಲಿಲ್ಲ. ಅಂತಹ ಇಕ್ಕಟ್ಟಿಗೆ ಸಿಲುಕಿಯೆ ಇರಲಿಲ್ಲ. ಅಪ್ಪನ ಕ್ರೂರ ಕಣ್ಣುಗಳಿಂದ ಪಾರಾಗುತ್ತಿದ್ದ ನಾನು ವೇದಿಕೆ ಏರಿ ಕೂತ ಕೂಡಲೆ ಗೊತ್ತಾಗಿದ್ದುದು; ತಪ್ಪಿಸಿಕೊಳ್ಳಲು ಸಾಧ್ಯವಿರಲಿಲ್ಲ. ಹಾರ್ಮೊನಿಯಂ ತಬಲ ಪಕ್ಕವಾದ್ಯಗಳಾಗಿದ್ದವು. ಚಿಕ್ಕಣ್ಣ ಎಂಬಾತ ಗೋವಾದ ಸ್ಪೆಲ್ಲಿಂಗ್ ಹೇಳಿ ಎಂದು ಅನೇಕರನ್ನು ಸೋಲಿಸುತ್ತಿದ್ದ. ಅವನೇ ಹಾರ್ಮೊನಿಯಂ ನುಡಿಸುತ್ತ ಉತ್ತೇಜನ ನೀಡುತ್ತ ಕಣ್ಣ ಹುಬ್ಬ ಮಿಟುಕಿಸುತ್ತಿದ್ದ. ಮೈಕು ವರ್ರೊ ಎಂದಿತು. ಬಾಯಿ ಕಟ್ಟಿತ್ತು. ಅಷ್ಟೊಂದು ಜನರ ಎದಿರು ಅಂತಹ ಗಾಂಭೀರ್ಯದ ಗಣ್ಯರ ಜೊತೆ ಕೂತಿದ್ದೇ ಅದೇ ಮೊದಲು. ‘ಬಾ ಬಾ ಬಾಬಾ ನಮ್ಮ ಸಾಹೇಬಾ ಬಾ ಬಾ ಬಾಬಾ ಸಾಹೇಬಾ’ ಎಂದು ರಾಗ ಎಳೆದೆ. ತಬಲ ಎಲ್ಲೊ ಹಾರ್ಮೋನಿಯಂ ಎಲ್ಲೋ ನಾನೆಲ್ಲೋ ತಾಳ ಮೇಳ ಕೂಡಲಿಲ್ಲ. ಕ್ರಾಂತಿಯ ದನಿಯೇ ಇರಲಿಲ್ಲ. ನಾನೇ ಮಾಡಿದ್ದ ಸಂಯೋಜನೆ ನನ್ನ ಗಂಟಲನ್ನೆ ತಡೆಯಿತು. ಗುಸು ಗುಸು ತಮಾಷೆಯ ಸದ್ದಾಯಿತು. ಚಿಕ್ಕಣ್ಣ ಯದುರ್ಕೊ ಬ್ಯಾಡ ಹಾಡೊ’ ಎಂದ. ಮೈಕಿನಲ್ಲಿ ಕೇಳಿಸಿ ಎಲ್ಲರೂ ಗೊಳ್ಳೆಂದರು. ಏನೊ ಗೊಣಗಿದಂತೆ ಹಾಡಿದ್ದೆ. ಅಂತಹ ಚಾರಿತ್ರಿಕ ವೇದಿಕೆಯ ಮಹತ್ವವೇ ನನಗೆ ಗೊತ್ತಿರಲಿಲ್ಲ. ಆದರೆ ಅಂತಹ ಸ್ಥಿತಿಗೆ ಯಾವುದೊ ಶಕ್ತಿ ನನ್ನನ್ನು ಎಳೆದು ತಂದಿತ್ತು. ಹಾಡು ಮುಗಿಸಿ ತೆರೆ ಮರೆಗೆ ಬಂದು ಅಪಮಾನದಿಂದ ಬಿಕ್ಕಿದೆ. ‘ನಾಕಕ್ಷರ ಕಲ್ತುಕೊ… ಜವಾನ ಆಗಿ ಬಂದ್ರೂ ನನ್ಮಗ ಸಾಹೇಬ ಅಂತಾ ಯೇಳ್ಕತಿನಿ’ ಎಂದು ತಾಯಿ ಹನಿಗಣ್ಣಲ್ಲಿ ಹೇಳಿದ್ದು ನೆನಪಾಗಿ ಏನೊ ನೆರಳು ಸರಿದು ಹೋದಂತಾಯಿತು. ಮುಂದೆ ಆದದ್ದೇ ಬೇರೆ.

ಎತ್ತರದ ಆ ಸೆಂಚುನರಿ ಹಾಲ್‌ನ ಕಟ್ಟಡದ ಆಚೆ ಮರೆಯಲ್ಲಿ ಹೆಜ್ಜೇನು ಗೂಡು ಕಟ್ಟಿತ್ತು. ಮೈಕಿನಲ್ಲಿ ರಭಸವಾಗಿ ಯಾರೊ ಮಾತಾಡುತ್ತಿದ್ದರು. ಇಡೀ ಸಭಾಂಗಣವೆ ಮೊಳಗುತ್ತಿತ್ತು. ಮೈ ಮೇಲಿನ ಕೂದಲುಗಳು ಎದ್ದು ನಿಲ್ಲುತ್ತಿದ್ದವು. ಅವರ ಹೆಸರು ನೆನಪಿಲ್ಲ. ಹಾಡಲಾರದೆ ಅಪಮಾನಿತನಾಗಿದ್ದೆ. ಯಾರೂ ಮಾತಾಡಿಸಿರಲಿಲ್ಲ. ಒಂದೇ ಬಾರಿಗೆ ಹೆಜ್ಜೇನಿಗೆ ಕಲ್ಲು ಬಿದ್ದಿತ್ತು. ಜೇನು ಹುಳುಗಳು ಜೊಯ್‌ಗೆರೆಯುತ್ತ ತೆರೆದಿದ್ದ ಮೇಲಿನ ಕಾರಿಡಾರ್ ಮೂಲಕ ಸಭೆಗೆ ನುಗ್ಗಿದವು. ಕೆಲವರಿಗೆ ಕಚ್ಚಿದ್ದವು. ಕ್ಷಣ ಮಾತ್ರದಲ್ಲಿ ಎಲ್ಲರೂ ಎದ್ದು ಹೊರಗೆ ಬಂದು ದಿಕ್ಕಾಪಾಲಾಗಿ ಓಡಿದರು. ಅಲ್ಲಿಗೆ ಆ ಕಾರ್ಯಕ್ರಮವೇ ಮುಗಿದಿತ್ತು. ಒಂದು ಗುಂಪಿನವರು ನಮ್ಮತ್ತ ನೋಡಿ ನಗಾಡುತ್ತಿದ್ದರು. ಮಂಡ್ಯದ ಗೌಡರ ಕಡೆಯ ಹುಡುಗರು ಎಂದು ನಂತರ ತಿಳಿಯಿತು. ಅವರೇ ಕಲ್ಲು ಬೀರಿದ್ದು ಎಂದು ನಂತರ ಆರೋಪಿಸಿದರು ಹಿರಿಯ ವಿದ್ಯಾರ್ಥಿಗಳು. ನನಗೆ ಜಾತಿಯ ಕಾರಣಕ್ಕೆ ಮೊದಲಿಗೆ ಭಯವಾಗಿತ್ತು. ಹಾಸ್ಟೆಲಿಗೆ ಬಂದೆವು ಒಟ್ಟಾಗಿ. ಗುಸುಗುಸು ಬುಸುಗುಟ್ಟುತ್ತಿದ್ದೆವು. ಅಷ್ಟರಲ್ಲಾಗಲೇ ಅಂಬೇಡ್ಕರ್ ಹಬ್ಬದ ಸಲುವಾಗಿ ಹಾಸ್ಟಲಲ್ಲಿ ಸಿಹಿ ಅಡುಗೆ ಮಾಡಿಸಿದ್ದರು. ಅವರ ಹೆಸರಲ್ಲಾದ ಊಟ ನಮಗೆ ಬೇಡ ಎಂದು ದೊಡ್ಡ ಹಾಸ್ಟೆಲಿನ ಅಡುಗೆ ಮನೆಗೆ ನುಗ್ಗಿದ್ದವರು ಬಚ್ಚಲಿಗೆ ಊಟವ ಸುರಿದಿದ್ದರು. ಹಿಂಜರಿಯುವಂತಿಲ್ಲ ನಾವೂ ಕೈ ಮಿಲಾಯಿಸುವ ಎಂದು ಒಟ್ಟಾದೆವು. ಇದು ಅಂಬೇಡ್ಕರ್‌ಗಾದ ಅವಮಾನ ಎಂದು ಕೂಗಾಡಿದರು. ಅದೆಲ್ಲಿ ಅಪಾಯಕಾರಿ ಆಯುಧಗಳ ಬಚ್ಚಿಟ್ಟಿದ್ದನೊ ಏನೊ; ಅವನು ಬ್ಲೇಡನ್ನು ವಕ್ರವಾಗಿ ಮುರಿದು ಪೆನ್ನು ಹಿಡಿವ ಬೆರಳುಗಳ ನಡುವೆ ಇಟ್ಟು ಅವರು ಬಂದರೆ ಹೀಗೆ ಗೀರಿ ಹಾಕಿ ಎಂದು ಗಾಳಿಯಲ್ಲಿ ಬ್ಲೇಡ್ ಹಿಡಿದು ಬೀಸಿ ಹೇಳಿಕೊಟ್ಟ. ನಾನೂ ಹಿಡಿದಿದ್ದೆ. ಬೆರಳು ಕಂಪಿಸುತ್ತಿದ್ದವು. ಸ್ವಲ್ಪ ರೌಡಿ ಬುದ್ದಿ ಅವನದು. ನಾನು ಮೊದಲು ನುಗ್ಗುವೆ. ನಂತರ ಹಿಂದೆ ಬಂದು ದಾಳಿ ಮಾಡಿ ಎಂದ. ವಾರ್ಡನ್ ಬಂದಿದ್ದ. ಗೆರಾವು ಮಾಡಿದ್ದೆವು. ನಾಳೆ ಇನ್ನೊಮ್ಮೆ ಅಡುಗೆ ಮಾಡಿಸುವೆ ಹೋಗಿ ರೂಮಿಗೆ ಎಂದ. ಬಿಡಲಿಲ್ಲ. ಮುಂದಿದ್ದವರು ಬಾಬಾ ಸಾಹೇಬರನ್ನು ಪ್ರತಿಪಾದಿಸುತ್ತಿದ್ದ ರೀತಿಯನ್ನು ಕಂಡು ಗರಬಡಿದವನಂತಾಗಿದ್ದೆ. ಅವೆಲ್ಲ ನಾನೇ ಆಡಬೇಕಿದ್ದ ಮಾತು ಎನಿಸುತ್ತಿತ್ತು.

ಯಾರೊ ಒಬ್ಬ ಅಬ್ಬರಿಸಿದ. ನೋಡಿದೆ ಬೆರಗಾಗಿ. ‘ದಲಿತರ ಅನ್ನವ ಬಚ್ಚಲಿಗೆ ಸುರಿದ ಜಾತಿವಾದಿಗಳಿಗೆ ಧಿಕ್ಕಾರಾ ಧಿಕ್ಕಾರ’ ಎಂದು ಕೂಗಿದ. ನಮ್ಮ ಗುಂಪು ಅವನಿಗೆ ದನಿಯಾಗಿ ಧಿಕ್ಕಾರವ ಮೊಳಗಿಸಿತು. ಅಂತಹ ಒಂದು ದನಿ ನಮ್ಮ ಹಳ್ಳಿಯಲ್ಲಿ ಸಾಧ್ಯವೇ ಇರಲಿಲ್ಲ. ‘ಈ ಕೂಡಲೇ ತಪ್ಪಿತಸ್ತರ ಪತ್ತೆ ಮಾಡಿ ಹಾಸ್ಟೆಲಿಂದ ಹೊರ ಹಾಕಿ’ ಎಂದು ಗುಡುಗಿದ. ಅವನು ಸಾಧಾರಣ ಆಸಾಮಿ ಆಗಿರಲಿಲ್ಲ. ಅರವತ್ತು ಕೇಜಿ ವಿಭಾಗದ ಕುಸ್ತಿಪಟುವಾಗಿದ್ದ. ಜೊತೆಗೆ ಬಾಕ್ಸರ್ ಕೂಡ ಆಗಿದ್ದು ಮುಷ್ಠಿ ಹಿಡಿದು ರಭಸವಾಗಿ ಕೈ ಬೀಸಿ ವಾರ್ಡನ್ ಮುಂದೆ ಗುಟುರು ಹಾಕಿದ್ದ. ನನಗರಿವಿಲ್ಲದೇ ಬೆವೆತಿದ್ದೆ. ಉಗುರು ಕಡಿಯುವ ಅಭ್ಯಾಸವಿದ್ದ ಆ ವಾರ್ಡನ್ ಪರದಾಡುತ್ತಿದ್ದ. ಗುದ್ದಿಯೇ ಬಿಡುತ್ತಾನೆ ಎನಿಸಿ ಗೆಳೆಯರು ತಡೆದರು. ಅವನು ಮಳವಳ್ಳಿಯ ದೊಡ್ಡ ಹೊಲಗೇರಿಯಿಂದ ಬಂದವನಾಗಿದ್ದ. ಅಂತಹ ಒಂದು ಪ್ರತಿರೋಧವನ್ನೆ ನಾನೆಂದೂ ಕಂಡಿರಲಿಲ್ಲ. ಅಪ್ಪನ ನರಕದಲ್ಲಿ ಅದು ಹೇಗೆ ಮೂಕ ಪ್ರಾಣಿಗಳ ಹಾಗೆ ನಾನೂ ತಾಯಿಯೂ ಯಾವತ್ತೂ ನಲುಗುತ್ತಿದ್ದೆವಲ್ಲಾ ಎಂದು ಎಲ್ಲೆಲ್ಲಿನ ಘಟನೆಗಳೂ ಅವೆಲ್ಲ ಬೇಕಾದಂತೆ ಜೋಡಿ ಆಗುತ್ತಿದ್ದವು. ಅವತ್ತು ಆ ಪರಿಸೆಯಲ್ಲಿ ತಾತನಿಗೆ ಹಾಗೆ ಕಟ್ಟಿ ಹಾಕಿ ಹೊಡೆದಾಗ ಆತ ಯಾಕೆ ಒಂದೇ ಒಂದಾದರೂ ಇಂತಹ ಮಾತಾಡದೇ; ಹೊಡೆದವರ ಕೈಗಳಿಗೆ ನೋವಾಯಿತೇ ಎಂಬಂತೆ ದೂರ ಹೊರಟು ಹೋಗಿದ್ದನಲ್ಲಾ ಎನಿಸಿತ್ತು. ಹಠ ಬಿಟ್ಟಿರಲಿಲ್ಲ ಇವರು. ಕಿಡಿಗೇಡಿಗಳು. ನಾಪತ್ತೆಯಾಗಿದ್ದರು. ಚಿಕ್ಕಣ್ಣನ ಬೆರಳ ತುದಿಯಲ್ಲಿದ್ದ ಬ್ಲೇಡು ಸೂರ್ಯನ ಕಿರಣಗಳಿಗೆ ಮಿನುಗಿ ಮಾಯವಾಗುತ್ತಿತ್ತು. ಗೀರುವ ರಭಸದಲ್ಲಿ ನನಗೆ ತಾಗಿದರೆ ಎಂದು ಹೆದರಿ ಪಕ್ಕ ಸರಿದಿದ್ದೆ. ಜೀವನದಲ್ಲಿ ಮೊದಲ ಬಾರಿಗೆ ಹೋರಾಟದ ಮೋಡ ನನ್ನೆದುರು ಹೆಪ್ಪುಗಟ್ಟುತ್ತಿತ್ತು ಉಸಿರು ಗಟ್ಟಿದಂತಾಗುತ್ತಿತ್ತು. ಅಂತವನು ಮೈಕಿನ ಮುಂದೆ ವೇದಿಕೆ ಹತ್ತಿ ಕೂತು ಎಂತದೊ ರಾಗ ಎಳೆದಿದ್ದೆನಲ್ಲಾ ಎನಿಸಿ ಅಪಮಾನದಿಂದ ಕಸಿವಿಸಿಯಾಗುತ್ತಿತ್ತು. ಗುಂಪನ್ನು ಬಿಟ್ಟು ಹೊರ ಹೋಗುವಂತಿರಲಿಲ್ಲ. ತಕ್ಕ ಸಾಕ್ಷಿ ನಮ್ಮ ಬಳಿ ಇರಲಿಲ್ಲ; ಆದರೆ ಈ ಕೃತ್ಯ ಎಸಗಿದವರು ಅವರೇ ಎಂಬುದು ಖಚಿತವಾಗಿತ್ತು. ಪ್ರತಿ ವರ್ಷ ‘ಇವೆಲ್ಲ ಮಾಮೂಲು ಬಿಡ್ರೀ; ನಿಮ್ಮ ಕೈಮುಗೀತೀನಿ’ ಎಂದು ವಾರ್ಡನ್ ದೀನವಾದಾಗ ಹುಡುಗರು ಕ್ಷಮಿಸಿದ್ದರು. ಆದರೆ ಮಳವಳ್ಳಿಯ ಆ ಜಟ್ಟಿ ಸುಮ್ಮನಿರಲಿಲ್ಲ. ‘ಲೇ ಕುಸ್ತಿ ಅಖಾಡಕ್ಕೆ ಬರ್ರೊ; ಅದೆಷ್ಟು ಪಟ್ಟಾಕ್ತಿರೊ ಹಾಕ್ರೊ… ನಂದೊಂದು ರ್ವಾಮನೂ ಕಿತ್ಕೊಕೆ ನಿಮ್ಕೈಲಿ ಆಗುದಿಲ್ಲ ಕನ್ರೊ’ ಎಂದು ಅವರ ಬ್ಲಾಕಿನ ಮುಂದೆ ತೊಡೆ ತಟ್ಟಿ ಸವಾಲು ಹಾಕಿದ್ದ. ಚಿಕ್ಕಣ್ಣ ಮೆಲ್ಲಗೆ ಹೇಳಿದ್ದ; ‘ದಪ್ಪ ಕಾಗದ ಸುತ್ತಿ ಮಡಚಿಟ್ಟುಕೊಳ್ಳಿ ಬ್ಲೇಡಾ… ನೀವು ಒಬ್ಬೊಬ್ರೆ ಇದ್ದಾಗ ಬೇಕಾಗುತ್ತೇ’ ಎಂದಿದ್ದ. ನನ್ನಿಂದ ಸಾಧ್ಯವಿರಲಿಲ್ಲ. ಆ ಬ್ಲೇಡನ್ನು ನಾನು ಮೆಲ್ಲಗೆ ಕಾಣದಂತೆ ಬಚ್ಚಲಿಗೇ ಎಸೆದು ಬಿಟ್ಟಿದ್ದೆ. ಆ ಅಪ್ಪನ ಹಂದಿಗಳ ಕತ್ತ ಕಡಿಯುವಾಗ ಹೇಗೆ ರಕ್ತ ಚಿಲ್ಲನೆ ಚಿಮ್ಮುತ್ತಿತ್ತು ಎಂದು ಕಂಡಿದ್ದ ನನಗೆ ಇನ್ನೂ ಮನುಷ್ಯರ ನೆತ್ತರ ನೋಡಲು ಸಾಧ್ಯವೇ? ಮನಸ್ಸೆಲ್ಲ ಕಂತುಹೋದಂತಾಗಿತ್ತು. ಇಲ್ಲೂ ನನಗೆ ನೆಮ್ಮದಿ ಇಲ್ಲವೇ ಎನಿಸಿ ಒಬ್ಬನೇ ನನ್ನ ಕೊಠಡಿಯಲ್ಲಿ ಕೂತಿದ್ದೆ.

ಆ ರಾತ್ರಿ ನಾವು ದಲಿತ ಹುಡುಗರು ಪ್ರತಿಭಟನೆಯ ಭಾಗವಾಗಿ ಅಡುಗೆ ಮನೆಗೆ ಬೀಗ ಹಾಕಿದ್ದೆವು. ಹಾಗೇಯೇ ಅಂಬೇಡ್ಕರ್‌ಗೆ ಆದ ಅಪಮಾನದಿಂದ ನೊಂದು ಉಪವಾಸ ಆಚರಿಸುತ್ತೇವೆ ಎಂದು ಸ್ವಯಂ ದಂಡಿಸಿಕೊಂಡಿದ್ದೆವು. ಇಡೀ ಹಾಸ್ಟೆಲ್ ಬಿಕೊ ಎನ್ನುತ್ತಿತ್ತು. ನಾಲ್ವಡಿ ಅವರ ಕಾಲದ ತಳದ ಹಳೆಯ ಬಿಲ್ಡಿಂಗಿನಲ್ಲಿ ನಮಗೆ ರೂಮುಗಳು ಪ್ರತ್ಯೇಕವಾಗಿದ್ದವು. ಹೊಸ ಕಟ್ಟಡದಲ್ಲಿ ಅವರಿಗೇ ಮೊದಲು ಆದ್ಯತೆ ಇದ್ದದ್ದು. ಜಾತಿ ಬೇಡ ಎನ್ನುವವರೂ ಅಪರೂಪಕ್ಕೆ ನಮ್ಮ ಜೊತೆಗೆ ಹೊಂದಿಕೊಂಡಿದ್ದರು. ನನಗಂತು ಅಂತವರ ಸಂಖ್ಯೆ ದೊಡ್ಡ ಪ್ರಮಾಣದಲ್ಲಿತ್ತು. ನನ್ನ ಮೂಲ ಗುರುತನ್ನು ಸುಲಭವಾಗಿ ಪತ್ತೆ ಮಾಡಲು ಸಾಧ್ಯವಿರಲಿಲ್ಲ. ನಮ್ಮವರೇ ನನ್ನನ್ನು ಅನುಮಾನಿಸುತ್ತಿದ್ದರು. ನನ್ನ ನಡವಳಿಕೆಯೂ ಹಾಗೇ ಇತ್ತು.

(ಇಲ್ಲಸ್ಟ್ರೇಷನ್‌ ಕಲೆ: ರೂಪಶ್ರೀ ಕಲ್ಲಿಗನೂರ್)

ಎಲ್ಲೇ ಹೋದರೂ ದೀನ ಭಾವನೆ ಬಂದು ಬಿಡುತ್ತಿತ್ತು. ನಾನೆಲ್ಲಿದ್ದೇನೆ ಎಂಬುದೆ ನನಗೆ ತಿಳಿಯುತ್ತಿರಲಿಲ್ಲ. ಆ ಹಸಿರು ಹುಲ್ಲಿನ ಮೇಲೆ ನೀರು ಹಾಯಿಸುತ್ತಿದ್ದವನ ಪರಿಚಯ ಮಾಡಿಕೊಂಡಿದ್ದೆ. ಇಲ್ಲಿ ಆಟ ಆಡೋರೆಲ್ಲ ನಿನ್ನಂತವರೇ. ಕಾಲೇಜಿನ ವಿದ್ಯಾರ್ಥಿಗಳಿಗೆಂದೇ ಮಾಡಿರುವ ಮೈದಾನ ಇದು ಎಂದಾಗ ದಂಗಾಗಿದ್ದೆ. ಇಲ್ಲಿ ನಾನೂ ಆಡಬಹುದೇ ಎಂದು ಹತ್ತು ಬಾರಿ ಕೇಳಿದ್ದೆ.

ಮರದ ಮೆಟ್ಟಿಲು ಹತ್ತಿ ಒಂದಷ್ಟು ಜನ ಬರುತ್ತಿರುವ ಸದ್ದಾಯಿತು. ಹೆದರಿದೆ. ಅಂತಹ ಸದ್ದು ಗಲಭೆಯ ಸೂಚನೆ. ಏನೊ ಆಗುತ್ತದೆ ಎಂದು ಬಾಗಿಲು ತೆಗೆಯಲೊ ಬೇಡವೊ ಎನ್ನುವಷ್ಟರಲ್ಲಿ ನನ್ನ ಕೊಠಡಿಯ ಕದವನ್ನೇ ಜೋರಾಗಿ ಬಡಿದರು. ಚಿಕ್ಕಣ್ಣನ ಬ್ಲೇಡ್ ಬಿಸಾಡಿ ಕೆಟ್ಟೆನಲ್ಲಾ ಎನಿಸಿ ಕಂಗಾಲಾದೆ. ಚಿಕ್ಕಣ್ಣನೆ ಜೋರಾಗಿ ಕೂಗಿ ‘ತೆಗಿಯೊ ಬಾಗಿಲಾ’ ಎಂದ. ತೆಗೆಯಲೇ ಬೇಕಿತ್ತು. ನೋಡಿದೆ ಅದೇ ಮಂದಿ. ಎದೆ ಧಸಕ್ಕೆಂದಿತು. ಒಳ ಬಂದು ಕೂತರು. ಆ ಮಳವಳ್ಳಿ ಪೈಲ್ವಾನ ಗುರುಗುಟ್ಟಿ ನೋಡಿ; ಯಾವೂರಿಂದ ಬಂದೊ… ಯಾವ್ದೋ ನಿಂದು ರಾಗಾ… ಪದವೇನೊ ಅದೂsss ರಾಗ ಎಳಿತನೆ ರಾಗವ… ಯಾರೊ ಯೇಳ್ಕೊಟ್ಟಿದ್ದು ನಿನ್ಗೇ; ಕೇಳಿದ್ದೀಯೇನೊ ನಂಜನಾ ಎಂಗಾಡ್ತಾರೆ ಅಂತಾ; ಯಕ್ಕುಟ್ಟಿಸ್ಬುಟ್ಟಲ್ಲೊ… ನಿನ್ನಿಂದ್ಲೂ ಬಾಬಾ ಸಾಹೇಬ್ರುಗೆ ಅವಮಾನ ಆಯ್ತು. ಕಿತ್ತೋಗುವಂಗೆ ಆಡ್ಬೇಕು ಅವರ ತಾಳ ತಂಬೂರಿ ತಿಲ್ಲಾನ ಪಲ್ಲಾನಯೆಲ್ಲ ಯೆಲ್ಲ ಗಾಳಿಗಾರೋಗುವಂಗೆ ಹಾಡ್ಬೇಕನಲೇ. ಯಾವ್ದೋ ನಿಂದದು ರಾಗಾ; ನಮ್ಮಾನವ ನೀನೇ ತೆಗೆದಲ್ಲೊ’ ಎಂದು ಮುಷ್ಠಿಯ ಬಿಗಿ ಹಿಡಿದಿದ್ದ. ಎಲ್ಲರೂ ಹಿರಿಯ ವಿದ್ಯಾರ್ಥಿಗಳೇ. ಬಾಯಿಗೆ ಬಂದಂತೆ ನಿಂದಿಸಿದರು. ‘ಬಿಡ್ರೊ ಹೊಸ್ಬ ಕಲ್ಕತನೆ. ಸರಿ ಮಾಡ್ತೀನಿ ನಾನೇ’ ಎಂದು ಅವರಲ್ಲೊಬ್ಬ ಅವರ ಸಿಟ್ಟ ತಗ್ಗಿಸಿದ. ಯಾವೂರಿಂದ ಬಂದೊ ಎಂದು ಮತ್ತೆ ಕೇಳಿದರು. ಅಷ್ಟರಲ್ಲಿ ಗಂಟಲು ಒಣಗಿತ್ತು. ಕಂಬನಿ ಬಟ್ಟಾಡುತ್ತಿದ್ದವು. ಯಾವ ಊರ ಹೆಸರು ಹೇಳಲಿ… ತಂದೆಯ ಊರ ಹೆಸರ ಹೇಳಲೇ; ತಾಯಿಯ ಊರಿಗೆ ಬೇಲಿ ಹಾಕಿದ್ದಾರಲ್ಲಾ… ದೊಡ್ಡ ಬಳ್ಳಾಪುರ ಎನ್ನಲೇ; ನೆಲಮಂಗಲದಿಂದ ಬಂದಿರುವೆ ಎಂದರೆ ಸರಿಯೇ ಎಂದು ಯೋಚಿಸಲೂ ಸಮಯ ಇಲ್ಲದಿದ್ದಾಗ ‘ಯೇಳಲೇಯ್’ ಎಂದು ಅಬ್ಬರಿಸಿದ ಪೈಲ್ವಾನ. ಅಕ್ಷರಸಹ ಅವನಿಗೆ ಕೈಮುಗಿದೆ. ಎಚ್ಚರಿಸಿ ಎಲ್ಲರೂ ಹೊರಟು ಹೋದರು.

ಅನಂತರ ನಾನೆಂದೂ ವೇದಿಕೆಯ ಮೇಲೇರಿ ಹೋರಿ ಹಾಡುವ ಸಾಹಸ ಮಾಡಲಿಲ್ಲ. ಆದರೆ ಆ ಒಂದು ಘಟನೆ ನನ್ನನ್ನು ಎಲ್ಲೆಲ್ಲಿಗೊ ಕರೆದೊಯ್ದಿತು. ಅಲ್ಲಿ ಆ ದಿನ ನನಗೆ ಕಂಡದ್ದು ಬಾಬಾ ಸಾಹೇಬರ ಮೇಲಿದ್ದ ಅಪಾರ ಕಿಚ್ಚಿನ ಪ್ರೀತಿ ಅಭಿಮಾನ ಹೆಮ್ಮೆ… ಅದು ನನಗೆ ಯಾಕೆ ಸಾಧ್ಯವಾಗಿರಲಿಲ್ಲಾ… ತಾತ ಮಾತ್ರ ಒಮ್ಮೆ ಯಾರಿಗೊ ಹೇಳುತ್ತಿದ್ದುದು ಕಿವಿ ಮೇಲೆ ಹಾಕಿಕೊಂಡಿದ್ದೆ ಅಷ್ಟೇ. ‘ಅಂಬೇಡ್ಕರ್ ಅನ್ನುರೂ ನಂಜಾತಿಯೋರೂ… ಸಮುದ್ರಾ ದಾಟ್ಕಂದು ವೋಗಿ ಪ್ರಪಂಚನೆಲ್ಲ ವೋದ್ಕ ಬಂದಿದ್ದಾರಂತೇ.’ ಅದಷ್ಟೇ ಶಬ್ದ ನನ್ನ ಕಿವಿಯಲ್ಲಿ ಮಂತ್ರವಾಗಿ ಹೊಕ್ಕಿದ್ದರೆ ಇವತ್ತು ಈ ಪರಿಸ್ಥಿತಿ ಬರುತ್ತಿರಲಿಲ್ಲ ಎಂದು ಇಡೀ ರಾತ್ರಿ ನಿದ್ದೆಯಿಲ್ಲದೆ ಹೊರಳಾಡಿದೆ. ಆ ಸೀನಿಯರ್‌ಗಳು ನಿರೀಕ್ಷಿಸಿದ್ದೇ ಬೇರೆ. ನನ್ನ ರೂಮೇಟ್ ಆಗಿದ್ದವನು ಅದೇ ಗುಂಡ್ಲುಪೇಟೆ ಕಡೆಯವನು. ಅವರ ತಂದೆ ನೌಕರಿಯಲ್ಲಿದ್ದು ಮೈಸೂರಿನ ಅಶೋಕ ಪುರಂನಲ್ಲೇ ಮನೆಮಾಡಿದ್ದರು ಗೆಳೆಯ ಶ್ರೀಧರ ಇಂಗ್ಲೀಷ್ ಮೀಡಿಯಂ ನವನು. ನಾನೆಲ್ಲ ಕನ್ನಡಮಯ. ಅವನಿಗೆ ನಿರಾಶೆಯಾಗಿತ್ತು. ಆದರೆ ಪ್ರೀತಿಯಿಂದ ಇಂಗ್ಲೀಷ್ ಕಲಿಯೊ ಎಂದು ಪೀಡಿಸುತ್ತಿದ್ದ. ಅದಕ್ಕೆ ಪೂರಕವಾಗಿ ಕೃಷ್ಣಮೂರ್ತಿಪುರಂನಿಂದ ಒಬ್ಬ ಬ್ರಾಹ್ಮಣ ಒಂದಷ್ಟು ದಡ್ಡ ಹುಡುಗರಾದ ನಮಗೆ ಇಂಗ್ಲೀಷ್ ಕಲಿಸಲು ಬರುತ್ತಿದ್ದರು. ಅವರೇ ನಮ್ಮನ್ನು ಹುಡುಕಿಕೊಂಡಿದ್ದರು.

ವಯಸ್ಸಾಗಿತ್ತು. ನಮ್ಮ ಹಾಸ್ಟೆಲಿನ ಹಿಂದೆಯೆ ಕೃಷ್ಣಮೂರ್ತಿಪುರಂ ಇತ್ತು. ನಮಗೆಲ್ಲ ಮೊದಲಿಗೆ ಅವರು ಕೈಗೆ ಇತ್ತದ್ದು ‘ರೆನ್ ಅಂಡ್ ಮಾರ್ಟಿನ್’ನ ಕಬ್ಬಿಣದ ಕಡಲೆಯಾದ ಇಂಗ್ಲೀಷಿನ ಆ ಪುಸ್ತಕವನ್ನು. ವ್ಯಾಕರಣ ಗ್ರಂಥವನ್ನು ಆಧರಿಸಿ ನಾನು ಒಂದೆರಡು ಸ್ವಂತ ಉದ್ದ ವಾಕ್ಯಗಳನ್ನು ಕಲಿಯದಾಗಿದ್ದೆ. ಅವರೇನೊ ನಿಷ್ಟಾವಂತರು… ಸಂಜೆ ವೇಳೆಗೆ ಹಾಸ್ಟೆಲಿಗೆ ಪಂಚೆಯುಟ್ಟು ತಿಲಕ ಧರಿಸಿ ಬರುತ್ತಿದ್ದರು. ಅವರಿಗೆ ಗೊತ್ತಿತ್ತು ನಾವು ಯಾವ ಜಾತಿಯವರೆಂದು. ಪರಿಗಣಿಸಿರಲಿಲ್ಲ. ಅವರ ಗ್ರಾಮರ್ ಪಾಠ ತಲೆ ಚಿಟ್ಟು ಹಿಡಿಸುತ್ತಿತ್ತು. ಮೈಸೂರಿನ ಆ ಚೆಂದದ ಸಂಜೆಗಳಲ್ಲಿ ಹಂಸಗಳಂತೆ ಆ ಬಣ್ಣಗಳ ಬೆಳಕಲ್ಲಿ ತೇಲಿ ಬರುವ ಹುಡುಗಿಯರನ್ನು ನೋಡಿ ಸುತ್ತಾಡಿಕೊಂಡು ಬರುವುದೇ ಪರಮಾನಂದವಾದ ಕೆಲಸವಾಗಿತ್ತು. ನನ್ನ ಗೆಳೆಯರು ಆತ ಬರುತ್ತಿದ್ದಾನೆಂದೇ ತಲೆಮರೆಸಿಕೊಳ್ಳುತ್ತಿದ್ದರು. ಅವರು ನನ್ನ ರೂಮಿಗೇ ಬರುತ್ತಿದ್ದರು. ‘ಕರೆಯಪ್ಪಾ ಉಳಿದವರಾ’ ಎನ್ನುತ್ತಿದ್ದರು. ಕೊನೆಗೆ ನಾನು ತಪ್ಪಿಸಿಕೊಳ್ಳುತ್ತಿದ್ದೆ. ಪ್ರಾಯದ ಅವತ್ತಿನ ಹೆದ್ದಾರಿಗಳಲ್ಲಿ ಜೀವನದ ಒಳದಾರಿಗಳ ಬಗ್ಗೆ ಒಂಚೂರೂ ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ಆ ಕೂಡಲೆ ಏನು ಮಾಡಬೇಕು ಎನಿಸುತ್ತಿತ್ತೋ ಅದಕ್ಕೇ ತಲೆಕೊಡುತ್ತಿದ್ದೆವು. ಆದರೆ ಹಾಗೆ ನುಗ್ಗುವ ಮೊದಲು ಅಳುಕುತ್ತಲೇ ಹೆಜ್ಜೆ ಇಡುತ್ತಿದ್ದೆ.

ನಾನಾಗ ಮಾರ್ಕ್ಸ್‌ವಾದಿ ಪುಸ್ತಕಗಳನ್ನೆ ಹಿಡಿದು ತಿರುಗುವಾಗ ಆ ಪೈಲ್ವಾನ ಎಚ್ಚರಿಸಿದ್ದ ಬಿರುಗಣ್ಣಿಂದಲೇ. ಆಗ ಬಾಬಾ ಸಾಹೇಬರ ಸಮಗ್ರ ಸಂಪುಟಗಳು ಪ್ರಕಟವಾಗಿರಲಿಲ್ಲ. ಅವರು ಬರೆದಿದ್ದ ‘ಅನ್‌ಹಿಲೇಷನ್ ಆಫ್ ದಿ ಕಾಸ್ಟ್’ ಪುಸ್ತಕದ ಒಂದೆರಡು ಪುಟಗಳನ್ನು ಅರಗಿಸಿಕೊಳ್ಳುವುದೂ ಸಾಧ್ಯವಿರಲಿಲ್ಲ. ಆ ಕಾಲದ ಪಶ್ಚಿಮ ಜಗತ್ತಿನ ವಿದ್ವತ್ತಿನ ಇಂಗ್ಲೀಷ್ ಭಾಷೆ ಅದಾಗಿತ್ತು. ಈಗಲೂ ಕಷ್ಟವೇ. ಅಂಬೇಡ್ಕರ್ ಆ ಎತ್ತರದ ಇಂಗ್ಲೀಷ್ ಮೂಲಕ ಅದಾಗಲೇ ಜಗತ್ತಿನ ಗಮನ ಸೆಳೆದಿದ್ದರು. ಅಷ್ಟೊಂದು ಒಳಹುಗಳು ತುಂಬಿರುತ್ತಿದ್ದವು. ಒಂದು ತೀರ್ಮಾನಕ್ಕೆ ಹತ್ತಾರು ಪುರಾವೆಗಳ ನೀಡಿ ಸೈದ್ಧಾಂತೀಕರಿಸುವ ಅವರ ಕೌಶಲ್ಯದ ಮುಂದೆ ಭಾಷೆಯೇ ಹಿಂಜರಿದಂತಿತ್ತು. ನನಗಿನ್ನೂ ಅಷ್ಟು ವಿವೇಚನೆ ಸಾಧ್ಯವಿರಲಿಲ್ಲ. ಮೆಲ್ಲಗೆ ಅಭಿಮಾನ ಬೆಳೆಯುತ್ತಿತ್ತು. ಆದರೆ ಬಾಬಾ ಸಾಹೇಬರ ಬಗ್ಗೆ ಬಹುಪಾಲು ಮಂದಿಗೆ ತಕ್ಕ ತಿಳುವಳಿಕೆ ಇರಲಿಲ್ಲ. ಮೈಸೂರಿನ ಒಬ್ಬ ವಿಚಾರವಾದಿ ಇದ್ದರು. ಅವರು ಆಗ ಅಂಬೇಡ್ಕರ್ ‘ಹರಿಕಥೆ’ಗೆ ಬಹಳ ಪ್ರಸಿದ್ದರಾಗಿದ್ದರು. ಈಗಲೂ ಇದ್ದಾರೆ. ಅಪಾಯಕಾರಿ ಮನುಷ್ಯ ಅಲ್ಲ. ಅವರೊಬ್ಬರೇ ಎಲ್ಲ ದಲಿತ ಸಭೆಗಳಲ್ಲೂ ಅಂಬೇಡ್ಕರ್ ಕುರಿತು ಮಾತಾಡುತ್ತಿದ್ದುದು. ಮಾತಾಡಿ ಮಾತಾಡಿ ಎಷ್ಟು ಮೊಂಡಾಗಿದ್ದರು ಎಂದರೆ; ಅವರಿಗೇ ಗೊತ್ತಿಲ್ಲದಂತೆ ಆ ಕಾಲದ ಪ್ರಸಿದ್ಧ ಹರಿಕಥೆ ದಾಸರಾಗಿದ್ದ ಗುರುರಾಜ ನಾಯ್ಡು ಅವರಂತಾಗಿದ್ದರು. ನಾನೂ ನನ್ನ ಗೆಳೆಯರೂ ಅವರ ಭಜನೆಗೆ ಮತ್ತಷ್ಟು ಹುಮ್ಮಸ್ಸು ಬರುವಂತೆ ತಲೆ ಆಡಿಸುತ್ತಾ ಹಾವಭಾವಗಳಲ್ಲಿ ದಂಗಾದಂತೆ ನಟಿಸುತ್ತಾ ಬಾಯಿ ಕಣ್ಣು ಬಿಟ್ಟುಕೊಂಡು ಉದ್ಗಾರ ಎಳೆಯುತ್ತ… ಮಾತಾಡಿ ಮಾತಾಡೀ; ಇವತ್ತು ನೀವು ಸೋಲುವಿರೊ; ನಾವು ಗೆಲ್ಲುತ್ತೇವೆಯೊ ನೋಡೇ ಬಿಡೋಣ ಎಂದು ಹುರಿದುಂಬಿಸುತ್ತಿದ್ದೆವು. ಆ ವಿಚಾರವಾದಿಗೆ ನಮ್ಮ ಇಕ್ಮತ್ತೆ ಗೊತ್ತಾಗುತ್ತಿರಲಿಲ್ಲ. ಅದದೇ ಮಾತುಗಳಲ್ಲಿ ಸುಸ್ತಾಗಿ ನೀರು ಕುಡಿಯುತ್ತಿದ್ದರು. ಹಾಗೆ ಕುಡಿಸಿ ಸಾಕು ಮಾಡುತ್ತಿದ್ದೆವು. ಅಂಬೇಡ್ಕರರ ನಾಡಿ ಮಿಡಿತದಿಂದ ಅವರು ಮಾತಾಡುತ್ತಿರಲಿಲ್ಲ. ಒಣ ಮೀನಿನ ನುಡಿಗಳಾಗಿದ್ದವು ಅವು. ‘ಅದ್ಭುತ ಸಾರ್; ಬಾಬಾಸಾಹೇಬರೇ ನಿಮ್ಮ ಮೈಮೇಲೆ ಬಂದಂತಿತ್ತು ಸಾರ್. ಸೂಪರ್ ಸಾರ್ ನೀವೂ’ ಎಂದು ಹೊಗಳಿ ಇನ್ನೊಂದು ಸುತ್ತಿನ ಸುಸ್ತಿಗೆ ತಳ್ಳಲು ಕಾಲು ಎಳೆಯುತ್ತಿದ್ದೆವು. ಯಾಕೆ ಹಾಗೆ ಮಾಡುತ್ತಿದ್ದೆವೊ? ಭಾಗಶಃ ನಮಗೆ ಬೇಕಾದ ರೀತಿಯಲ್ಲಿ ಇವರು ಅಂಬೇಡ್ಕರ್ ಅವರ ಬೇರುಗಳನ್ನು ತೋರುತ್ತಿಲ್ಲ ಎಂದಿರಬೇಕು. ಜಡಗೊಂಡವರ ಗೇಲಿ ಮಾಡುವ ಗುಣ ತಂತಾನೆ ಬಂದು ಬಿಟ್ಟಿತ್ತು. ಬೂಸಾಗಳ ಕಂಡರೆ ವಿಪರೀತ ತಿರಸ್ಕಾರ ಹೇಗೊ ಮೈಗೂಡಿತ್ತು. ಹಾಗೆಯೇ ಇದ್ದಕ್ಕಿದ್ದಂತೆ ಈ ಯಾವ ಗೋಜಲೂ ಬೇಡ ಎಂದು ದೂರ ಸರಿಯುತ್ತಿದ್ದೆ. ಸುತ್ತ ತರಾವರಿ ಗೆಳೆಯರು. ಬಿಡುತ್ತಿರಲಿಲ್ಲ. ಸೆಳೆದುಕೊಳ್ಳುತ್ತಿದ್ದರು ಯಾವುದಾದರೂ ಒಂದು ಚಟುವಟಿಕೆಗೆ. ದಿನದ ಇಪ್ಪತ್ತನಾಲ್ಕು ಗಂಟೆಗಳು ನಮಗೆ ಸಾಲುವುದಿಲ್ಲ. ಹಾಗಾಗಿ ಎರಡು ದಿನಗಳನ್ನು ಸೇರಿಸಿ ಒಂದು ದಿನ ಮಾಡಿ ಎಂದು ತರಲೆ ಮಾಡುತ್ತಿದ್ದೆವು. ಇಷ್ಟು ಬೇಗ ನಾನು ಹೇಗೆ ಈಜುಲು ಕಲಿತೆ ಎಂಬಂತಾಗಿತ್ತು.

ಎಸ್.ಎಫ್.ಐ ಕಡೆಯಿಂದ ಒಂದಿಬ್ಬರು ವಿದ್ಯಾರ್ಥಿ ನಾಯಕರು ಬಂದರು. ಬಂಜಗೆರೆಯ ಪಟ್ಟಾಗಿ ಹಿಡಿದರು. ಆಗ ಅವನೇ ಮುಂದಿದ್ದ. ಚೆನ್ನಾಗಿ ಭಾಷಣ ಮಾಡುತ್ತಿದ್ದ. ತಿಳುವಳಿಕೆಯೂ ಇತ್ತು. ಲಕ್ಷಣವಾಗಿದ್ದ. ದಮನಿತ ತಬ್ಬಲಿ ಜಾತಿಯಿಂದ ಬಂದಿದ್ದ. ಆ ಮಾರ್ಕ್ಸ್‌ವಾದಿಗಳು ಮಳವಳ್ಳಿ ಪೈಲ್ವಾನನ ಬಳಿಯೋ ಬ್ಲೇಡೇಟಿನ ಚಿಕ್ಕಣ್ಣನ ಬಳಿಯೊ ಹೋಗಲು ಸಾಧ್ಯವಿರಲಿಲ್ಲ. ಬಂಜಗೆರೆ ಜಯಪ್ರಕಾಶ್‌ನನ್ನು ಜೆ.ಪಿ. ಎನ್ನುತ್ತಿದ್ದೆವು. ಜೆ.ಪಿ.ಯ ಕೊಠಡಿಗೆ ಬರುತ್ತಿದ್ದ ಆ ಮಾರ್ಕ್ಸ್‌ವಾದಿ; ಬಹಳ ಬಡಪಾಯಿಯಂತೆ ಕಾಣುತ್ತಿದ್ದ. ವರ್ಗ ಸಂಘರ್ಷದ ಯುದ್ದದಲ್ಲಿ ಸಿಲುಕಿ ಬದುಕಿ ಉಳಿದು ಬಂದಿದ್ದ ಯೋಧನಂತೆ ಕಾಣುತ್ತಿದ್ದ. ಅವನು ಮಾರ್ಕ್ಸ್‌ವಾದವನ್ನು ಅಕ್ಷರಶಃ ಯುದ್ಧ ಭೂಮಿಯ ವಾರ್ತೆಯಂತೆಯೇ ನಮ್ಮನ್ನು ಕೂರಿಸಿಕೊಂಡು ಮೈದುಂಬಿ ಹೇಳುತ್ತಿದ್ದ. ನಾಳೆಯೊ ನಾಡಿದ್ದೊ ವರ್ಗಕ್ರಾಂತಿ ಆಗುತ್ತದೆ; ಆಗ ಅದರಲ್ಲಿ ನಿಮ್ಮ ಪಾತ್ರ ಏನು ಎಂಬಂತೆ ಪ್ರಶ್ನಿಸುತ್ತಿದ್ದ. ರಷ್ಯಾದ ಹದಿನೇಳರ ಕ್ರಾಂತಿಯಲ್ಲಿ ಆಗತಾನೆ ಭಾಗವಹಿಸಿ ಸುರಿವ ಹಿಮ ಮಳೆಯಿಂದ ಈಗ ತಾನೆ ದಾಟಿಕೊಂಡು ಬಂದು ಉದ್ದ ನಿಲುವಂಗಿಯ ಬಿಚ್ಚಿ ಅತ್ತ ಇಟ್ಟಂತೆ ತನ್ನ ಹಳೆ ಕಾಲದ ಮೇಲುಕೋಟೆಯ ಹೆಗಲ ಚೀಲವ ಬಿಸಾಡಿ ದಿನದಿಂದ ದಿನಕ್ಕೆ ನಮ್ಮನ್ನು ಹಿಡಿತಕ್ಕೆ ತಂದುಕೊಂಡಂತೆ ಮಾತಿನ ರಭಸವನ್ನು ಏರಿಸುತ್ತಿದ್ದ. ನನಗೇನೂ ಅಭ್ಯಂತರವಿರಲಿಲ್ಲ. ಕೆಲವರು ಕೊಠಡಿಗೆ ಇಣುಕಿ ಕಿವಿಗೊಟ್ಟು ಹೋಗುತ್ತಿದ್ದರು. ಎಲ್ಲಿ ಆ ಮಳವಳ್ಳಿ ಪೈಲ್ವಾನ ಬಂದು; ‘ಏನಿದು ನಿಮ್ಮ ಗುಪ್ತ ಸಮಾಲೋಚನೆ’ ಎಂದು ಬಡಿದಾನೆಂದು ಭಯವಾಗುತ್ತಿತ್ತು. ಆ ಕಾಲದ ಒಂದು ಪತ್ರಿಕೆಯಲ್ಲಿ ಗುಪ್ತ ಸಮಾಲೋಚನೆ ಎಂಬ ಅಂಕಣ ಬರಹ ಬರುತ್ತಿತ್ತು. ಛೇ; ಎಂತಹ ಅಧಿಕ ಪ್ರಸಂಗಿತನ! ಅದನ್ನು ಓದುವಲ್ಲಿ ಇರುತ್ತಿದ್ದ ಆಸಕ್ತಿ ಕಾಮ್ರೇಡನ ಮಾತುಗಳ ಕಡೆಗೆ ಇರಲಿಲ್ಲ. ಪ್ರಾಯದ ಚಿಗುರು ಮೀಸೆಯ ಹುಡುಗರಾಗಿದ್ದ ನಮಗೆ ಮಾರ್ಕ್ಸ್‌, ಲೆನಿನ್, ಮಾವೋತ್ಸೆತುಂಗರ ಪೋಸ್ಟರ್‌ಗಳು ನಮ್ಮ ಕೊಠಡಿಗಳ ಗೋಡೆ ಮೇಲಿದ್ದರೆ ಸಾಕು ಎನಿಸುತ್ತಿತ್ತು. ಆಗಿನ್ನೂ ರಸ್ತೆ ಬದಿಯಲ್ಲಿ ಅಂಬೇಡ್ಕರ್ ಪೋಸ್ಟರ್‌ಗಳು ಚಲಾವಣೆಗೆ ಬಂದಿರಲಿಲ್ಲ. ಯಾರೂ ಮಾರುತ್ತಿರಲಿಲ್ಲ.

ಆ ಕಾಮ್ರೇಡ್ ಮಾರ್ಕ್ಸ್‌ವಾದ ಬಿಟ್ಟು ಬೇರೆ ಏನೂ ಮಾತಾಡುತ್ತಿರಲಿಲ್ಲ. ಬಹಳ ಬೇಗ ಈತ ‘ಬೋರ್‍ವೆಲ್’ ಕಂಪನಿಯವನು ಎಂದು ತಿಳಿದ ನಂತರ ನಾನು ಹಿಂದೆ ಸರಿದೆ. ವರ್ಗ ಕ್ರಾಂತಿಯ ಮಗ್ಗಿ ಪುಸ್ತಕ ಮಾತ್ರ ಅವರಿಗೆ ಗೊತ್ತಿತ್ತು. ಹೆಗೆಲ್, ಏಂಗಲ್ಸ್ ಸಲೀಸಾಗಿ ಬಾಯಿಗೆ ಬಂದು ಹೋಗುತ್ತಿದ್ದರು. ಸುಮ್ಮನೆ ಅರಿಯದೆ ಲೆನಿನ್‌ನನ್ನು ಆರಾಧಿಸುತ್ತಿದ್ದೆವು. ಒಕ್ಕಲಿಗರಿಗೂ ನಮಗೂ ಜಗಳ ಬಡಿದಾಟ ಆದಾಗ, ತಾರತಮ್ಯದಲ್ಲಿ ಅಸ್ಪೃಶ್ಯತೆಯನ್ನು ಆಚರಿಸುವಾಗ ಇವರ್ಯಾರ ನೆನಪೂ ಬರುತ್ತಿರಲಿಲ್ಲ. ಬಾಬಾ ಸಾಹೇಬರ ಒಂದು ಹೆಸರೇ ನಮಗೆ ರಕ್ಷಾಕವಚದಂತೆ ಕಾಯುತ್ತಿತ್ತು. ಫ್ರೆಂಚ್ ಕ್ರಾಂತಿ; ಯುರೋಪಿನ ಪುನರುಜ್ಜೀವನದ ತತ್ವಜ್ಞಾನಿಗಳ ಕೊಡುಗೆ ಇತ್ಯಾದಿಗಳೆಲ್ಲ ಆವತ್ತಿನ ತಜ್ಞರ ನಾಲಿಗೆಯ ತುದಿಯಲ್ಲೆ ಇರುತ್ತಿದ್ದವಾದರೂ ಅಂಬೇಡ್ಕರರ ವಿಚಾರಗಳು ನೆಪಕ್ಕೆ ಸಂವಿಧಾನದ ಹೆಸರಲ್ಲಿ ಬರುತ್ತಿದ್ದವು. ಬೇರೂರಿಸಬೇಕಾದ ರೀತಿಯಲ್ಲಿ ಅವರನ್ನು ಪರಿಚಯಿಸುವ ದಾರಿಗಳೆ ಕಂಡಿರಲಿಲ್ಲ. ನಮಗೂ ತಿಳಿಯುವ ಅಂತಹ ಆಸಕ್ತಿಯೂ ಇರಲಿಲ್ಲ. ಆ ದೊಡ್ಡ ಗಡಿಯಾರದ ಪಕ್ಕದಲ್ಲೇ ಅರಮನೆ ಬೀದಿಗೆ ಎದುರಾಗಿಯೇ ಮಾರ್ಕ್ಸ್‌ವಾದಿಗಳ ಒಂದು ಕಛೇರಿ ಇತ್ತು. ನಾನೂ ಜೇಪಿ ಒಮ್ಮೆ ಅಲ್ಲಿಗೆ ಹೋಗಿದ್ದೆವು. ಬಹಳ ನಿರಾಶೆಯಾಗಿತ್ತು. ತತ್ ಸುಮ್ಮನೆ ದೇವಸ್ಥಾನ ಒಂದಕ್ಕೆ ಹೋಗಿದ್ದರೆ ಅಲ್ಲಿ ಮೈದುಂಬಿದ ಭಕ್ತ ಆಂಟಿಯರಾದರೂ ಕಾಣುತ್ತಿದ್ದರು… ಅಲ್ಲೇ ಹಾಸ್ಟೆಲಿನ ಹಿಂದಿದ್ದ ಅಗ್ರಹಾರದ ತಂಪು ಬೀದಿಗಳಲ್ಲಿ ಸುತ್ತಾಡಿದರೂ ಆ ಚೆಂದದ ಮಲ್ಲಿಗೆ ಮುಡಿದ ಬ್ರಾಹ್ಮಣ ಕನ್ನೆಯರಾದರೂ ಸಿಗುತ್ತಿದ್ದರು. ಅವರ ನಗೆಯ ಕದ್ದು ತಂದು ಜತನವಾಗಿ ಕನಸಲ್ಲಿ ತೇಲಿ ಬಿಟ್ಟು ಹಿತವಾದ ನಿದ್ದೆ ಮಾಡಬಹುದಿತ್ತಲ್ಲಾ ಎನಿಸಿತ್ತು.

ಮಾರ್ಕ್ಸ್‌ವಾದ ಘನತೆಯನ್ನು ಮುಟ್ಟಿಸುವ ಮಾತುಗಾರರೆ ನಮಗೆ ಸಿಕ್ಕಿರಲಿಲ್ಲ. ಅದರಲ್ಲೂ ಹತ್ತಾರು ವಾದಗಳು ನಮ್ಮ ಮುಂದಿದ್ದವು. ಯಾವುದು ಬೇಕು ಬೇಡ ಎಂಬ ವಿವೇಚನೆ ಇರಲಿಲ್ಲ. ನನಗಂತೂ ಎಲ್ಲವೂ ಬೇಕು ಎನಿಸುತ್ತಿತ್ತು. ಅದೃಷ್ಟವಶಾತ್; ಅವತ್ತು ಅಲ್ಲಿ ಯಾವೊಂದು ಬಲಪಂಥೀಯರೂ ಇರಲಿಲ್ಲ. ನನಗದು ಏನು ಎಂಬುದೆ ತಿಳಿದಿರಲಿಲ್ಲ. ವಿಪರೀತ ಆಯ್ಕೆಗಳಿದ್ದವು. ಗಾಂಧಿವಾದಿಗಳೂ ನಮ್ಮ ಪ್ರಾಯದ ಒಗರಿನ ಮುಂದೆ ಸಂಜೆಗಣ್ಣ ನೋಟದಲ್ಲಿ ವಾಯುವಿಹಾರಕ್ಕೆ ಬಂದು ಗಮನ ಸೆಳೆಯುತ್ತಿದ್ದರು. ಅಯ್ಯೋ ಪಾಪ ಎಂದು ಗೌರವ ಕೊಡುತ್ತಿದ್ದೆವು. ನಮ್ಮ ಸಂಜೆಗಳೊ ರಂಗಾಗಿರುತ್ತಿದ್ದವು. ಆ ಗಾಂಧಿವಾದಿಗಳ ಕಂಗಳಲ್ಲಿ ವಿಷಾದ ತುಂಬಿರುತ್ತಿತ್ತು. ಗಾಂಧೀಜಿಯ ಕಂಬನಿ ಹೆಪ್ಪುಗಟ್ಟಿದ್ದು ದಪ್ಪದಾದ ಕನ್ನಡಕಗಳು ಗತಕಾಲವನ್ನು ಸಾಧ್ಯಂತ ಹಿಗ್ಗಲಿಸಿ ನೋಡಿ ವರ್ತಮಾನವನ್ನು ನೋಡಲಾರದಂತೆ ಭಾಸವಾಗುತ್ತಿದ್ದವು. ಕುಕ್ಕರಹಳ್ಳಿ ಕೆರೆಯ ಸುಂದರ ಏರಿ ಮೇಲೆ ವಾಕಿಂಗ್ ಸ್ಟಿಕ್ ಹಿಡಿದು ನಡೆವ ಅವರು ಅಪರೂಪಕ್ಕೆ ಎದುರಾಗುತ್ತಿದ್ದರು. ಅಲ್ಲಲ್ಲಿ ಕಲ್ಲಿನ ಬೆಂಚುಗಳು ಇದ್ದವು ತರಾವರಿ ಬಳ್ಳಿಗಳ ಹಬ್ಬಿಸಿ ಕಬ್ಬಿಣದ ಕಮಾನುಗಳಿಗೆ ಅಲಂಕಾರ ತಂದಿದ್ದರು. ಅಲ್ಲಿ ಮೌನವಾಗಿ ಆ ಮುದುಕರು ಕೂರುತ್ತಿದ್ದರು. ಕೆರೆಯ ಕೆಳಗೆ ಸರಸ್ವತಿಪುರಂ ಪ್ರಶಾಂತವಾಗಿತ್ತು. ಅಲ್ಲೆಲ್ಲ ಪ್ರಜ್ಞಾವಂತ ನಾಗರೀಕರೇ ಮನೆ ಮಾಡಿಕೊಂಡಿದ್ದರು. ಗಾಂಧಿವಾದಿಗಳು ಅಷ್ಟು ಸುಲಭವಾಗಿ ಎದುರಾದವರ ಮುಖ ನೋಡುತ್ತಿರಲಿಲ್ಲ. ಈ ಕಾಲದ ಮಕ್ಕಳು ನಮ್ಮ ಪಾಲಿಗೆ ಇಲ್ಲ ಎಂಬ ವಿಷಾದವಿತ್ತು.
ಅದು ನಿಜವಿತ್ತು. ಗಾಂಧಿವಾದಿಗಳ ಮಾತಿಗೂ ಹೋಗುತ್ತಿದ್ದೆ. ಕೆಲವೇ ಮಂದಿ ಇರುತ್ತಿದ್ದರು. ಯುವಕರು ಕಾಣುತ್ತಿರಲಿಲ್ಲ. ನನಗೊ ಈ ಮುದುಕರು ಯಾಕೆ ಇಷ್ಟು ಕಷ್ಟ ಪಡುತ್ತಾರೆ ಎನಿಸಿ ಮುರುಕ ಉಂಟಾಗುತ್ತಿತ್ತು. ಮುಪ್ಪಿನ ಗಂಟಲಿನ ಅವರ ಮಾತುಗಳು ನಿಧಾನಕ್ಕೆ ಹೊರಡುತ್ತಿದ್ದವು. ಅಲ್ಲೇನೊ ಮಾಗಿದ ಮಾತುಗಳಿದ್ದವು. ಗಾಂಧೀಜಿ ತಂದು ಕೊಟ್ಟ ಸ್ವಾತಂತ್ರ್ಯ ಏನಾಯಿತು ಎಂದು ಹಪಹಪಿಸುತ್ತಿದ್ದರು. ನಮ್ಮ ನಡುವೆಯೇ ಕಳೆದು ಹೋಗುತ್ತಿರುವ ಹಳಬರು ಎಂದುಕೊಳ್ಳುತ್ತಿದ್ದೆ. ಗಾಂಧೀಜಿಯ ಬಗ್ಗೆ ಓದಲೆಬೇಕಿರಲಿಲ್ಲ. ಅವರ ಬಗೆಗಿನ ಭಾಷಣಗಳನ್ನು ಕೇಳಿದರೇ ಸಾಕಿತ್ತು. ಭಾರತದ ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸದ ಪುಟಗಳ ತುಂಬ ಅವರು ಆವರಿಸಿಕೊಂಡಿದ್ದರ ವಿವರಗಳೆಲ್ಲ ಪಾಠಗಳ ಮೂಲಕ ಗೊತ್ತಿತ್ತು. ವಿಚಿತ್ರ ಪ್ರಶ್ನೆ ಕೇಳಿದ್ದೆ, ಗಾಂಧೀಜಿಯನ್ನು ಯಾಕೆ ಕೊಂದರು ಎಂದ ಕೂಡಲೆ; ಅಹಾ! ಎಂದು ಉದ್ಗಾರ ತೆಗೆದು ‘ಯಾರಪ್ಪ ನೀನೂ’ ಎಂದಿದ್ದರು. ಅಷ್ಟಕ್ಕೆ ನನ್ನೊಳಗೆ ಅಪರಾಧಿ ಭಾವ ಮೂಡಿತ್ತು. ಕೇಳಬಾರದಿತ್ತು ಎನಿಸಿತ್ತು. ಕೇಳಿಬಿಟ್ಟಿದ್ದೆ. ಹಲವು ಗಾಂಧಿವಾದಿಗಳು ಹಿಂತಿರುಗಿ ನನ್ನತ್ತ ನೋಡಿದ್ದರು. ಹಿರಿಯ ಆ ಗಾಂಧಿವಾದಿ ಉತ್ತರಿಸಿರಲಿಲ್ಲ. ಆ ಹತ್ಯೆಯನ್ನು ಮಾತನಾಡುವುದೂ ಕೂಡ ಅಪರಾಧ ಎಂದಿದ್ದರು. ಮಾರ್ಮಿಕ ಮಾತಿನ ಮರ್ಮ ತಿಳಿದಿರಲಿಲ್ಲ.


ಗೆಳೆಯರ ಕಣ್ಣು ತಪ್ಪಿಸಿ ಗಾಂಧೀಜಿಯ ಸಭೆಗಳಿಗೆ ಹೋಗುತ್ತಿದ್ದುದ್ದನ್ನು ಕಡಿಮೆ ಮಾಡಿಕೊಂಡೆ. ನನ್ನ ತಾತ ತರ್ಕವೇ ಇಲ್ಲದ ಕಾರುಣ್ಯವನ್ನು ಗಾಂಧೀಜಿಯ ಬಗ್ಗೆ ಯಾಕೆ ಅಷ್ಟೊಂದು ಇಟ್ಟುಕೊಂಡಿದ್ದ… ತಾತ ತನ್ನ ಹೋಟೆಲಲ್ಲಿ ವಿರಾಮ ಕಾಲದಲ್ಲಿ ಗಾಂಧೀಜಿಯ ಬಗ್ಗೆ ಓದದೆಯೇ ಏನೇನೊ ಹೇಳುತ್ತಿದ್ದ. ಗಾಂಧೀಜಿ ರಾಷ್ಟ್ರಪಿತ ಎನಿಸಿಕೊಳ್ಳುವ ಮೊದಲೇ ಆತ ಗುಂಡೇಟಿನಿಂದ ಸತ್ತಾಗ ಇಡೀ ಊರು ಕಣ್ಣೀರು ಹಾಕಿ ತಿಥಿ ಮಾಡಿತ್ತಂತೆ. ಎಂತಹ ರಕ್ತ ಸಂಬಂಧವಿತ್ತು ಗಾಂಧೀಜಿಯ ಬಗ್ಗೆ ಅವತ್ತಿನ ನನ್ನ ಊರಿನವರಿಗೇ… ನನ್ನ ತಾತ ಗಾಂಧೀಜಿಯನ್ನು ಕಂಡಿದ್ದವನು, ಮುಟ್ಟಿಸಿಕೊಂಡಿದ್ದವನು… ತಾತನ ಗಾಂಧೀ ಸ್ಮರಣೆಯಲ್ಲಿ ಅಪ್ಪಟ ದೇಶ ಭಕ್ತಿ ಇತ್ತು. ಆ ತರದ ಯಾವ ಭಕ್ತಿಗಳೂ ನನಗೆ ಬಂದಿರಲಿಲ್ಲ. ಆದರೆ ಗಾಂಧಿವಾದಿಗಳ ಬಗ್ಗೆ ತಂತಾನೆ ಮೃದುಧೋರಣೆ ಬೇರು ಬಿಟ್ಟಿತ್ತು. ನನ್ನ ತಾಯಿಯ ಎಷ್ಟೋ ಧೋರಣೆ, ನಡವಳಿಕೆಗಳು ಗಾಂಧೀಜಿಯ ಹೋರಾಟದಲ್ಲಿ ಆಗಲೇ ಸಹಜವಾಗಿ ನನಗೆ ಕಂಡಿದ್ದವು.