ಅವರು ಅಟವಳಕರ್ ಸಾಹೇಬರ ಹಾಗೆ ಪ್ಯಾಂಟು ಹ್ಯಾಟು ತೊಟ್ಟಿರಲಿಲ್ಲ. ನನ್ನ ತಂದೆಯ ಹಾಗೆ ಸಾದಾ ಧೋತರ, ಅಂಗಿ ಮತ್ತು ಟೋಪಿ ಧರಿಸಿದ್ದರು. ನನ್ನ ತಂದೆಯಂಥ ಸಾಮಾನ್ಯರೂ ದೊಡ್ಡ ಮನುಷ್ಯರಾಗಿರುತ್ತಾರೆ ಎಂಬುದು ನನಗೆ ಮೊದಲ ಬಾರಿಗೆ ಅನಿಸಿತು. ನನ್ನ ಜೀವನದಲ್ಲಿ ನಾನು ನೋಡಿದ ಮೊದಲ ದೊಡ್ಡವ್ಯಕ್ತಿ ಅವರಾಗಿದ್ದರು. ನಾನು ಒಂದನೆಯ ಇಯತ್ತೆಯ ವಿದ್ಯಾರ್ಥಿಯಾಗಿದ್ದಾಗಲೇ ಮನುಷ್ಯರು ಹೇಗೆ ಇರಬೇಕು ಎಂಬುದರ ಪಾಠವನ್ನು ಅವರನ್ನು ನೋಡುವುದರ ಮೂಲಕ ಕಲಿತೆ. ಇಂದಿಗೂ ಆ ಪಾಠವೇ ನನ್ನ ಬದುಕನ್ನು ರೂಪಿಸುತ್ತಿದೆ. ಹೀಗಾಗಿ ಅವರ ನೆನಪು ನನ್ನಲ್ಲಿ ಸದಾ ಹಸಿರಾಗಿದೆ.
ರಂಜಾನ್ ದರ್ಗಾ ಬರೆಯುವ ಆತ್ಮಕತೆ ನೆನಪಾದಾಗಲೆಲ್ಲ ಸರಣಿಯ 38ನೆಯ ಕಂತು ಇಲ್ಲಿದೆ.

65 ವರ್ಷಗಳಷ್ಟು ಹಿಂದಿನ ಮಾತು ವಿಜಾಪುರದ ನಮ್ಮ ಬಾಡಿಗೆ ಮನೆಯ ಮುಂದೆ ಓಣಿಯ ಹುಡುಗರ ಜೊತೆ ಗೋಠಿ ಆಡುತ್ತಿದ್ದೆ. ಒಬ್ಬ ವ್ಯಕ್ತಿ ನಮ್ಮ ಆಟವನ್ನು ನೋಡುತ್ತ ಮಾತುಗಳನ್ನು ಆಲಿಸುತ್ತಿದ್ದರು. ಮರುದಿನ ಅವರು ನಮ್ಮ ಮನೆಗೆ ಬಂದು ನನ್ನ ತಂದೆಯ ಕೂಡ ಮಾತನಾಡಿದರು. ‘ಹುಡುಗ ಶಾನ್ಯಾ ಅದಾನ; ಅವಂಗ ಸಾಲಿಗಿ ಹಾಕು’ಎಂದು ನನ್ನನ್ನು ತೋರಿಸುತ್ತ ನನ್ನ ತಂದೆಗೆ ಹೇಳಿದರು.

ಆ ತೆಳ್ಳಗಿನ ಮತ್ತು ಕೆಂಪಗಿನ ವ್ಯಕ್ತಿ ನಮ್ಮ ಮನೆಯ ಬಳಿಯೆ ಇದ್ದರು. ಅವರು ಮರಾಠಿ ಮಾತನಾಡುವ ಬ್ರಾಹ್ಮಣರಾಗಿದ್ದರು. ಸದಾ ಖಾಕಿ ಪ್ಯಾಂಟು, ಇನ್‌ಷರ್ಟ್ ಮಾಡಿದ ಬಿಳಿ ಹಾಫ್ ಷರ್ಟು ಮತ್ತು ದಪ್ಪನೆಯ ಖಾಕಿ ಬಣ್ಣದ ಹ್ಯಾಟು ಧರಿಸುತ್ತಿದ್ದರು. ಬಹಳ ಶಿಸ್ತಿನ ವ್ಯಕ್ತಿ. ಅವರ ಅಡ್ಡಹೆಸರು ಅಟವಳಕರ್ ಎಂದು ಇದ್ದಿರಬಹುದು. ಅವರು ಬ್ರಿಟಿಷ್ ಸರ್ಕಾರವಿದ್ದಾಗ ವಿಜಾಪುರ ಮುನಸಿಪಾಲಿಟಿಯಲ್ಲಿ ಸಣ್ಣ ಅಧಿಕಾರಿಯಾಗಿದ್ದರಂತೆ. ಬ್ರಿಟಿಷರು ಹೋದರೂ ತಾವೊಬ್ಬ ಬ್ರಿಟಿಷ್ ಕಾಲದ ಅಧಿಕಾರಿ ಎಂಬ ಭಾವನೆ ಅವರಲ್ಲಿತ್ತು. ಆದರೆ ಅವರು ನಿಗರ್ವಿ ಮತ್ತು ಮಿತಭಾಷಿಯಾಗಿದ್ದರು. ಅವರು ಹೇಳಿದ್ದು ನನ್ನ ತಂದೆಗೆ ಹಿಡಿಸಿತು. ಮರುದಿನವೇ 5 ನೇ ನಂಬರ್ ಶಾಲೆಗೆ ಕರೆದೊಯ್ದರು. (ಈಗ ಅದು ಹೆಣ್ಣುಮಕ್ಕಳ 5ನೇ ನಂಬರ್ ಶಾಲೆ ಆಗಿದೆ.) ಮಾಸ್ತರರೊಬ್ಬರು ಹೆಸರು ಮುಂತಾದ ಮಾಹಿತಿ ಕೇಳಿದರು. ಜನ್ಮ ದಿನದ ಬಗ್ಗೆ ಕೇಳಿದಾಗ ಅದಾವುದೋ ಸಂದರ್ಭದಲ್ಲಿ ಬಂದ ರಂಜಾನ್ ತಿಂಗಳ ಒಂದು ಶನಿವಾರದಂದು ನನ್ನ ಜನನವಾದುದರ ಬಗ್ಗೆ ಆ ಮಾಸ್ತರರಿಗೆ ಮಾಹಿತಿ ದೊರೆಯಿತು. ಅದಾವುದರ ಬಗ್ಗೆ ತಲೆ ಕೆಡಿಸಿಕೊಳ್ಳದ ಆ ಮಾಸ್ತರರು. ಏಳು ವರ್ಷ ಹಿಂದಕ್ಕೆ ಹೋಗಿ 1951ನೇ ಜೂನ್ 20 ಎಂದು ಬರೆದರು!

(ಗಾಂಧೀವಾದಿ ಶಾಸಕರಾಗಿದ್ದ ಲಿಂ. ಶರಣಯ್ಯ ವಸ್ತ್ರದ ಅವರು)

ಹಳೆಯ ಅಡತಿ ಅಂಗಡಿಯಲ್ಲಿ ಆ ಶಾಲೆ ನಡೆಯುತ್ತಿತ್ತು. ಹಿಂದಿನ ವಖಾರದಲ್ಲಿ ಬಹುಶಃ ಮೂಲೆಗೊಂದರಂತೆ ಕ್ಲಾಸುಗಳು ನಡೆಯುತ್ತಿದ್ದ ನೆನೆಪು. ಮುಂದಿನ ಭಾಗದಲ್ಲಿ ಕೂಡ ಅನೇಕ ಕೋಣೆಗಳಿದ್ದವು. ನಾನು ಶಾಲೆಗೆ ಸೇರಿದ ಹೊಸದರಲ್ಲಿ ಸಾಯಂಕಾಲ ಗಂಟೆ ಬಾರಿಸುವುದನ್ನೇ ಕಾಯುತ್ತಿದ್ದೆ. ಬಂದ ಹೊಸದರಲ್ಲಿ ಒಂದು ದಿನ ಮಧ್ಯಾಹ್ನದ ಬಿಡುವಿನ ನಂತರ ಹೆಡ್ ಮಾಸ್ತರರು ಬಂದು ಎಲ್ಲ ಮಕ್ಕಳನ್ನು ಶಿಸ್ತಿನಿಂದ ವಖಾರದಲ್ಲಿ ಕೂಡಿಸಲು ಮಾಸ್ತರರಿಗೆ ಹೇಳಿದರು. ಆ ವಖಾರ ಹಳೆಯದಾದರೂ ಸ್ವಚ್ಛ ಹಾಗೂ ಸಾದಾ ಸಭಾಭವನದ ಹಾಗೆ ಇತ್ತು. ಎಲ್ಲ ಕ್ಲಾಸಿನ ಮಕ್ಕಳು ಅಲ್ಲಿ ಸೇರಿದೆವು. ಅಂದು ಅದಾವುದೊ ಸ್ಥಾನಕ್ಕೆ ಆಯ್ಕೆಯಾದ ಗಣ್ಯವ್ಯಕ್ತಿಯೊಬ್ಬರಿಗೆ ಸನ್ಮಾನಿಸುವ ಮತ್ತು ಮಕ್ಕಳನ್ನು ಉದ್ದೇಶಿಸಿ ಅವರು ಮಾತನಾಡುವ ಕಾರ್ಯಕ್ರಮ ಅದಾಗಿತ್ತು. ಸ್ವಲ್ಪ ಸಮಯದ ನಂತರ ಬಂದ ಗಣ್ಯವ್ಯಕ್ತಿ ಶರಣಯ್ಯ ವಸ್ತ್ರದ ಅವರು ಎಂಬುದು ತಿಳಿಯಿತು. (ಅವರು ಆಗ ಶಾಸಕರಾಗಿದ್ದರೆಂದು ನೆನಪು)

ಅವರು ಅಟವಳಕರ್ ಸಾಹೇಬರ ಹಾಗೆ ಪ್ಯಾಂಟು ಹ್ಯಾಟು ತೊಟ್ಟಿರಲಿಲ್ಲ. ನನ್ನ ತಂದೆಯ ಹಾಗೆ ಸಾದಾ ಧೋತರ, ಅಂಗಿ ಮತ್ತು ಟೋಪಿ ಧರಿಸಿದ್ದರು. ನನ್ನ ತಂದೆಯಂಥ ಸಾಮಾನ್ಯರೂ ದೊಡ್ಡ ಮನುಷ್ಯರಾಗಿರುತ್ತಾರೆ ಎಂಬುದು ನನಗೆ ಮೊದಲ ಬಾರಿಗೆ ಅನಿಸಿತು. ನನ್ನ ಜೀವನದಲ್ಲಿ ನಾನು ನೋಡಿದ ಮೊದಲ ದೊಡ್ಡವ್ಯಕ್ತಿ ಅವರಾಗಿದ್ದರು. ನಾನು ಒಂದನೆಯ ಇಯತ್ತೆಯ ವಿದ್ಯಾರ್ಥಿಯಾಗಿದ್ದಾಗಲೇ ಮನುಷ್ಯರು ಹೇಗೆ ಇರಬೇಕು ಎಂಬುದರ ಪಾಠವನ್ನು ಅವರನ್ನು ನೋಡುವುದರ ಮೂಲಕ ಕಲಿತೆ. ಇಂದಿಗೂ ಆ ಪಾಠವೇ ನನ್ನ ಬದುಕನ್ನು ರೂಪಿಸುತ್ತಿದೆ. ಹೀಗಾಗಿ ಅವರ ನೆನಪು ನನ್ನಲ್ಲಿ ಸದಾ ಹಸಿರಾಗಿದೆ.

ಅದೊಂದು ಸರಳ ಹಾಗೂ ನನ್ನ ಪಾಲಿನ ಅವಿಸ್ಮರಣೀಯ ಸಮಾರಂಭವಾಗಿತ್ತು. ಸಾತ್ವಿಕ ಹಾಗೂ ಪ್ರಶಾಂತ ವ್ಯಕ್ತಿತ್ವದ ಶರಣಯ್ಯ ವಸ್ತ್ರದ ಅವರಿಗೆ ಸಭೆಯಲ್ಲಿ ದಾರದ ಲಾಡಿಯನ್ನು ಹೂವಿನ ಹಾರದ ಹಾಗೆ ಹಾಕಲಾಯಿತು. ಹೂವಿನ ಹಾರ ಹಾಕುವುದನ್ನು ನೋಡಿದ್ದ ನನಗೆ ಅದು ಬಹಳ ಹೊಸದೆನಿಸಿತು. ಆ ಖಾದಿಹಾರ ನನ್ನಲ್ಲಿ ಒಂದುರೀತಿಯ ಹೊಸತನವನ್ನು ಮೂಡಿಸಿತು. ಸರಳತೆಯ ಸೌಂದರ್ಯಾನುಭೂತಿ ನನಗೆ ಅರಿಯದಂತೆಯೆ ಆಯಿತು. ಆ ದೃಶ್ಯ ನನ್ನ ಮನಸ್ಸಿನಿಂದ ಎಂದೂ ಮಾಸಲೇ ಇಲ್ಲ. ಅಂದು ಗಂಟೆ ಬಾರಿಸುವ ಮೊದಲೆ ನಮಗೆ ಮನೆಗೆ ಹೋಗುವ ಅವಕಾಶ ಸಿಕ್ಕಿದ್ದು ಬಹುಶಃ ಆ ಸಭೆಯ ಬಗ್ಗೆ ಹೆಚ್ಚಿನ ಗೌರವ ಮೂಡಿರಲು ಸಾಕು.

(ಆ ಕಾಲದಲ್ಲಿದ್ದ ಎಸ್.ಎಸ್. ಹೈಸ್ಕೂಲ್ ಕಟ್ಟಡದಲ್ಲಿನ ತೆಗ್ಗಿನ ಶಾಲೆ)

ತದ ನಂತರ ಅವರು ಮೆಲ್ಲಗೆ ಸೈಕಲ್ ಸವಾರಿ ಮಾಡುವದನ್ನು ನೋಡಿದಾಗಲೆಲ್ಲ ನನಗೆ ಆ ಶಾಲಾ ಸಭೆಯ ನೆನೆಪು ಮರುಕಳಿಸುತ್ತಿತ್ತು. ಅದೇಕೋ ಒಂದನೇ ಇಯತ್ತೆ ಮುಗಿದ ಕೂಡಲೆ ಶ್ರೀ ಸಿದ್ಧೇಶ್ವರ ಪ್ರಾಥಮಿಕ ಶಾಲೆಗೆ ಹೋದೆ. ಅದು ಎಸ್.ಎಸ್. ಹೈಸ್ಕೂಲಿನ ಮುಖ್ಯ ಕಟ್ಟಡದ ನೆಲ ಮಾಳಿಗೆಯಲ್ಲಿ ಇದ್ದುದರಿಂದ ಅದು ತೆಗ್ಗಿನ ಶಾಲೆ ಎಂದೇ ಪ್ರಸಿದ್ಧವಾಗಿತ್ತು. ಅದರ ಕಿಟಕಿ ಭೂತಳಕ್ಕೆ ಹತ್ತಿಕೊಂಡಿತ್ತು. ಯೂನಿಫಾರ್ಮ್ ಇಲ್ಲದ ನನ್ನನ್ನು ಮಾಸ್ತರರು ಹೊರಗೆ ಹಾಕಿದಾಗ ಆ ಕಿಟಕಿಯ ಮುಂದೆ ಕುಳಿತು ಪಾಠ ಕಲಿಯುತ್ತಿದ್ದೆ. ಒಂದು ಸಲ ಕಪ್ಪು ಹಲಗೆಯ ಮೇಲೆ ಗಣಿತ ಸಮಸ್ಯೆಯೊಂದನ್ನು ಬರೆದು ಉತ್ತರ ಬರೆಯಲು ತಿಳಿಸಿದರು. ನಾನು ಮನದಲ್ಲೇ ಕೂಡಿಸಿ ಕಳೆದು ಭಾಗಿಸಿ ತಟ್ಟನೆ ಉತ್ತರ ಹೇಳಿದೆ. ಆ ಮೇಲೆ ಮಾಸ್ತರರು ನನಗೆ ಸಮವಸ್ತ್ರ ಇಲ್ಲದ್ದಕ್ಕೆ ಹೊರಗೆ ಹಾಕಲಿಲ್ಲ. ಕೆಲ ವರ್ಷಗಳ ಹಿಂದೆ ವಿಜಾಪುರಕ್ಕೆ ಹೋದಾಗ ಆ ಕಿಟಕಿಯ ಬಳಿ ಹೋಗಿ ನಿಂತೆ ಅಲ್ಲಿ ಈಗ ಶಾಲೆ ಇಲ್ಲ. ಬಡಗಿಗಳು ಕುರ್ಚಿ ಮೇಜು ತಯಾರಿಸುವ ತಾಣ ಅದಾಗಿತ್ತು. ಅದಿರಲಿ, ಒಂದನೇ ಇಯತ್ತೆ ನಂತರ ಈ ತೆಗ್ಗಿನ ಶಾಲೆಗೆ ಹೇಗೆ ಬಂದೆ ಎಂಬುದು ನೆನಪಿಲ್ಲ.

(ವಿಜಾಪುರದ 5ನೇ ನಂಬರ್ ಶಾಲೆ)

ತದನಂತರ ಕೆಲ ವರ್ಷಗಳು ಕಳೆದ ಮೇಲೆ ನಾ ಒಂದನೇ ಇಯತ್ತೆ ಓದಿದ 5ನೇ ನಂಬರ್ ಶಾಲೆ ಸುಂದರ ಹೊಸ ಕಟ್ಟಡಕ್ಕೆ ಸ್ಥಳಾಂತರಗೊಂಡಿತು. ಅಂದಿನ ಶಿಕ್ಷಣ ಸಚಿವ ಅಣ್ಣಾರಾವ ಗಣಮುಖಿ ಅವರು ಆ ಶಾಲೆಯ ಉದ್ಘಾಟನೆಗೆ ಬಂದಿದ್ದರು. ಆ ಸಮಾರಂಭಕ್ಕೆ ಹೋಗಿದ್ದ ನನಗೆ ಮತ್ತೆ ಅಲ್ಲಿ ಗಾಂಧೀವಾದಿ ಶಾಸಕ ಶರಣಯ್ಯ ವಸ್ತ್ರದ ಅವರನ್ನು ನೋಡಿದ ನೆನಪು. ಚೆನ್ನಾಗಿ ಕಲಿಯಬೇಕೆಂಬ ಆಸೆ ಹುಟ್ಟಿತು. ಅಲ್ಲಿ ಹು.ಹ. ಮೆಳ್ಳಿಗಟ್ಟಿ ಎಂಬ ಹೆಸರಿನ ಮಾಸ್ತರರು ಬಹಳ ಪ್ರಸಿದ್ಧರಾಗಿದ್ದರು. ಅವರ ಶಿಷ್ಯರಾಗುವ ತವಕ ನನಗೆ ಮತ್ತು ನನ್ನ ಕೆಲ ಗೆಳೆಯರಿಗೆ ಹೆಚ್ಚಾಯಿತು. ಈಗಿರುವ ಶಾಲೆಯ ಮಾಸ್ತರರಿಗೆ ಎದುರು ಹಾಕಿಕೊಂಡು ಬೇರೆ ಶಾಲೆಗೆ ಹೋಗುವುದು ಅಷ್ಟು ಸುಲಭವಾಗಿರಲಿಲ್ಲ. ಬಿ.ಎಸ್. ಪಾಟೀಲ ಅವರಂಥ ಉತ್ತಮ ಶಿಕ್ಷಕರನ್ನು ಬಿಟ್ಟು ಹೋಗುವುದು ನೋವಿನ ವಿಚಾರವಾಗಿತ್ತು. ಏಳನೆಯ ಇಯತ್ತೆ ಓದುವಾಗ ಹಠ ಹಿಡಿದು 5 ನೇ ನಂಬರ್ ಶಾಲೆಗೆ ಹೋದೆ. ಪರೀಕ್ಷೆಯ ದಿನಗಳಲ್ಲಿ ಓದುವುದಕ್ಕಾಗಿ ಬಗೀಚೆಯಿಂದ ಬಗೀಚೆಗೆ ತಿರುಗುತ್ತಿದ್ದೆವು. ಆಗಾಗ ಶಾಸಕ ಶರಣಯ್ಯನವರ ಸೈಕಲ್ ಸವಾರಿ ಎದುರಾಗುತ್ತಿತ್ತು. ಆಗ ಅವರ ಮನೆ ವಿಜಾಪುರ ನಗರದ ಮಧ್ಯಭಾಗದಲ್ಲಿರುವ ಛೋಟಾ ಆಸಾರ್ ಮಸೀದಿ ಬಳಿ ಇತ್ತು. ಅವರು ತಮ್ಮ ಮನೆಯ ಎದುರಿಗೇ ಛೋಟಾ ಆಸಾರದ ವಿಶಾಲ ಆವರಣಕ್ಕೆ ಹೊಂದಿಕೊಂಡಿದ್ದ ಮುನಿಸಿಪಾಲಿಟಿ ಜಾಗದಲ್ಲಿ ಕೊಡತಯಾರಿಸುವ ಬಡ ಮುಸ್ಲಿಂ ತಾಮಟಗಾರರಿಗೆ ಚಿಕ್ಕ ಚಿಕ್ಕ ಅಂಗಡಿಗಳನ್ನು ಹಾಕಿಕೊಳ್ಳಲು ಅನುಮತಿ ದೊರಕಿಸಿ ಕೊಟ್ಟರೆಂದು ತಿಳಿದುಬಂದಿತು. ಆ ತಾಮಟಗಾರರು ತಾಮ್ರ ಮತ್ತು ಹಿತ್ತಾಳೆಯ ದಪ್ಪ ಮತ್ತು ಅಗಲವಾದ ಶೀಟುಗಳನನ್ನು ಸತತವಾಗಿ ಬಡೆಯುತ್ತ ಕೊಡ, ನೀರು ಕಾಯಿಸುವ ಬಾಯಿಲರ್ ಮುಂತಾದವುಗಳನ್ನು ತಯಾರಿಸುತ್ತಿದ್ದರು. ಆಗ ಕೂಡ ಶರಣಯ್ಯನವರು ಆ ಎದುರಿನ ಮನೆಯಲ್ಲಿ ಅಸಾಧ್ಯವಾದ ಸಪ್ಪಳವನ್ನು ಸಹಿಸುತ್ತ ತಮ್ಮದೇ ಆದ ಕೆಲಸ ಕಾರ್ಯಗಳಲಿ ಮಗ್ನನಾಗಿರುವುದನ್ನು ನೋಡಿದ್ದೇನೆ.

(ತಾಮಟಗಾರರು)

ನಾನು ಐದನೇ ಇಯತ್ತೆ ಬರುವುದರೊಳಗಾಗಿ ಸೇವಾದಳ ಸೇರಿದೆ. ಶರಣಯ್ಯ ವಸ್ತ್ರದ ಅವರ ಪ್ರಭಾವವೂ ಇದಕ್ಕೆ ಕಾರಣವಾಗಿತ್ತು. ಆದರೆ ನನಗೆ ಸೇವಾದಳದ ಬಗ್ಗೆ ತಿಳಿಸಿದಾತ ನನ್ನ ಒಬ್ಬ ಸಹಪಾಠಿ ಎಂಬ ನೆನಪು. ಸೇವಾದಳ ಸೇರುವ ಮೊದಲು ನನ್ನ ಮೇಲೆ ಆರ್.ಎಸ್.ಎಸ್. ಪ್ರಭಾವ ಬೀರಿತ್ತು. ಅದೊಂದು ಆಕಸ್ಮಿಕ ಪ್ರಭಾವ. ಒಂದು ಸಾಯಂಕಾಲ ಮುಲ್ಕಮೈದಾನ್ ತೋಪು (ಮಲೀಕ್ ಏ ಮೈದಾನ) ನೋಡಲು ಹೋಗಿದ್ದೆ. (ಕವಳಿಗೇಟ್‌ನಿಂದ ಮುಳ್ಳಗಸಿಯ ಕಡೆಗೆ ಸ್ವಲ್ಪ ದೂರ ಸಾಗಿದರೆ ಎಡಗಡೆ ಕೋಟೆ ಗೋಡೆಯ ವಿಶಾಲವಾದ ಬುರುಜ್ ಮೇಲೆ ಬೃಹತ್ತಾದ ಈ ತೋಪು ಇದೆ. ಇದಕ್ಕೆ ಕನ್ನಡದಲ್ಲಿ ‘ರಣರಂಗದ ರಾಜ’ ಎಂದು ಕರೆಯಬಹುದು. 16ನೇ ಶತಮಾನದಲ್ಲಿ ಇಷ್ಟುದೊಡ್ಡ ತೋಪು ಎಲ್ಲಿಯೂ ಇರಲಿಲ್ಲ. 550 ಕ್ಟಿಂಟಲ್ ಭಾರದ ಈ ತೋಪು 4 ಮೀಟರ್ ಉದ್ದವಿದೆ. ಇದರ ಬಾಯಿಯ ವ್ಯಾಸ 1.5 ಮೀಟರ್‌ನಷ್ಟಿದೆ. ಕಬ್ಬಿಣ, ತಾಮ್ರ ಮುಂತಾದ ಐದು ಲೋಹಗಳಿಂದ ಇದನ್ನು ನಿರ್ಮಿಸಲಾಗಿದೆ. ಕಡು ಬಿಸಿಲಲ್ಲೂ ಇದು ತಂಪಾಗಿರುವುದು. ಇದಕ್ಕೆ ತಟ್ಟಿದರೆ ಘಂಟಾನಾದ ಬರುವುದು. ಇದರ ಹೊಳಪು ಇಂದಿಗೂ ಮಾಸಿಲ್ಲ. ಇದರ ಮುಖ ಉಗ್ರ ಸಿಂಹದ ಹಾಗೆ ಇದ್ದು, ಆನೆಯನ್ನು ಕಚ್ಚುತ್ತಿರುವಂತೆ ರೂಪಿಸಲಾಗಿದೆ. ಈ ತೋಪು ಇಡುವುದಕ್ಕಾಗಿಯೆ ಬೃಹತ್‌ ಪೀಠವನ್ನು ರಚಿಸಲಾಗಿದೆ. ಮುಹಮ್ಮದ್ ಆದಿಲಶಾಹನ ಅಣತಿ ಮೇರೆಗೆ ಈ ತೋಪನ್ನು ಅಲ್ಲಿನ ‘ಬುರ್ಜ್ ಏ ಶೇರ್ಜ್’ ಹೆಸರಿನ ಬುರ್ಜ್ ಮೇಲೆ ಪ್ರತಿಷ್ಠಾಪಿಸಲಾಯಿತು.

 

(ಮುಲ್ಕ ಮೈದಾನ್ ತೋಪು)

ಹೂವಿನ ಹಾರ ಹಾಕುವುದನ್ನು ನೋಡಿದ್ದ ನನಗೆ ಅದು ಬಹಳ ಹೊಸದೆನಿಸಿತು. ಆ ಖಾದಿಹಾರ ನನ್ನಲ್ಲಿ ಒಂದುರೀತಿಯ ಹೊಸತನವನ್ನು ಮೂಡಿಸಿತು. ಸರಳತೆಯ ಸೌಂದರ್ಯಾನುಭೂತಿ ನನಗೆ ಅರಿಯದಂತೆಯೆ ಆಯಿತು. ಆ ದೃಶ್ಯ ನನ್ನ ಮನಸ್ಸಿನಿಂದ ಎಂದೂ ಮಾಸಲೇ ಇಲ್ಲ.

ಈ ತೋಪು ಹಾರಿಸುವಾಗ ಭಯಂಕರ ಶಬ್ದ ಉಂಟಾಗುತ್ತಿತ್ತು. ಆದ್ದರಿಂದ ಇದರ ಪಕ್ಕದಲ್ಲಿ ನೀರಿನ ತೊಟ್ಟಿಯನ್ನು ನಿರ್ಮಿಸಲಾಗಿದ್ದು, ಹಾರಿಸುವ ಪ್ರಸಂಗ ಬಂದಾಗ, ಬೆಂಕಿ ಹಚ್ಚುವ ಸೈನಿಕ ತೋಪಿನಲ್ಲಿ ತುಂಬಿದ ಮದ್ದಿಗೆ ಬೆಂಕಿ ಹಚ್ಚಿದ ಕೂಡಲೆ ಆ ನೀರಿನ ತೊಟ್ಟಿಯಲ್ಲಿ ಮುಳುಗುವ ಮೂಲಕ ತನ್ನ ಕಿವಿಗಳು ಕಿವುಡಾಗದಂತೆ ನೋಡಿಕೊಳ್ಳುತ್ತಿದ್ದ. ಇದರ ಭಯಾನಕ ಶಬ್ದ ಬಹಳ ದೂರದವರೆಗೆ ಕೇಳಿಸುತ್ತಿತ್ತು.

ಅಹಮದನಗರದ ಸುಲ್ತಾನನಿಗಾಗಿ ಟರ್ಕಿ ಮೂಲದ ಅಧಿಕಾರಿ ಮುಹಮ್ಮದ್ ಬಿನ್ ಹಸನ್ ರೂಮಿ ಮೇಲ್ವಿಚಾರಣೆಯಲ್ಲಿ ಈ ಫಿರಂಗಿಯ ನಿರ್ಮಾಣ ಮಾಡಲಾಯಿತು. ಮುಹಮ್ಮದ್ ಆದಿಲಶಾಹಿ ಸೇನಾಪತಿ ಮುರಾರಿ ಪಂಡಿತ ಅಹಮದ ನಗರದ ಸುಲ್ತಾನನನ್ನು ಸೋಲಿಸಿದ ನಂತರ ವಿಜಯದ ಸಂಕೇತವಾಗಿ ಈ ಫಿರಂಗಿಯನ್ನು ವಿಜಾಪುರಕ್ಕೆ ತಂದ. ಇದನ್ನು ಬುರ್ಜ್ ಮೇಲೆ ಒಯ್ದು ಇಡಲು 400 ಎತ್ತು, 10 ಆನೆ ಮತ್ತು 100 ಜನ ನುರಿತ ಸೈನಿಕರನ್ನು ಬಳಸಲಾಯಿತು.

(ಬುರ್ಜ್ ಮೈದಾನ)

ಆ ವಿಶಾಲವಾದ ಬುರ್ಜ್ ಮೇಲಿನ ಮೈದಾನದಲ್ಲಿ ಒಬ್ಬ ಯುವಕ ಖಾಕಿ ಚಡ್ಡಿ ಬಿಳಿ ಷರ್ಟ್ ಮತ್ತು ಕಪ್ಪು ಟೋಪಿ ಹಾಕಿಕೊಂಡು ಮಕ್ಕಳಿಗೆ ಕವಾಯತು ಕಲಿಸುತ್ತಿದ್ದ. ಆ ಮಕ್ಕಳ ಯೂನಿಫಾರ್ಮ್ ಕೂಡ ಅದೇ ಆಗಿತ್ತು. ಅವರ ಕವಾಯತು ಆಕರ್ಷಕವಾಗಿತ್ತು. ತದೇಕ ಚಿತ್ತದಿಂದ ನೋಡುತ್ತ ನಿಂತೆ. ಅವರು ತಮ್ಮ ಪಾಡಿಗೆ ತಾವು ಆಟವನ್ನೂ ಆಡಿದರು. ಏನೋ ಹೇಳಿದರು. ಅವರಲ್ಲಿ ಎರಡು ಗುಂಪುಗಳನ್ನು ಮಾಡಿ ಒಂದೊಂದಕ್ಕೆ ಒಬ್ಬೊಬ್ಬ ದೊಡ್ಡ ವ್ಯಕ್ತಿಯ ಹೆಸರು ಇಟ್ಟಿದ್ದರು. ಆ ಹೆಸರುಗಳು ನನಗೆ ಗೊತ್ತಿದ್ದ ಗಾಂಧಿ, ನೆಹರು, ಬೋಸ್ ಮುಂತಾದವರ ಹೆಸರು ಇರಲಿಲ್ಲ.

ಸಂಜೆ ಎಲ್ಲ ಮುಗಿದ ಮೇಲೆ ಅವರು ಹೊರಟು ಹೋದರು. ನಾನು ಮುಲ್ಕ ಮೈದಾನ್ ತೋಪಿನ ಕಡೆ ಹೋಗದೆ ಮನೆಗೆ ಹೋದೆ. ಮರುದಿನ ಸಾಯಂಕಾಲ ಆದ ಕೂಡಲೆ ಶಾಲೆಯ ಸಮವಸ್ತ್ರವಾದ ಖಾಕಿ ಪ್ಯಾಂಟ್ ಮತ್ತು ಬಿಳಿ ಷರ್ಟ್ ಹಾಕಿಕೊಂಡು ಮನೆಯಲ್ಲೇ ಇದ್ದ ಒಂದು ಲಾಠಿಯನ್ನು ಹಿಡಿದುಕೊಂಡು ಆ ಕವಾಯತು ನಡೆಯುವಲ್ಲಿಗೆ ಹೋದೆ. ಧೈರ್ಯ ಮಾಡಿ ಆ ಕವಾಯತ್ ಮಾಸ್ಟರ್‍ಗೆ ನಾನೂ ಇತರರ ಜೊತೆ ಕವಾಯತು ಮಾಡುವುದಾಗಿ ತಿಳಿಸಿದೆ. ಆತ ಹೆಸರು ಕೇಳಿದ. ಹೇಳಿದೆ. ‘ಇಲ್ಲ ನಿನ್ನನ್ನು ಕರೆದುಕೊಳ್ಳುವುದಿಲ್ಲ’ ಎಂದ. ನನಗೇನು ಬೇಸರವಾದ ಹಾಗೆ ಕಾಣಲಿಲ್ಲ. ಒಂಟಿಯಾಗಿ ದೂರದಲ್ಲೇ ಇದ್ದು ಅವರು ಮಾಡುವುದನ್ನು ಅನುಕರಿಸುತ್ತಿದ್ದೆ. ಶಿಸ್ತಿನ ಸಿಪಾಯಿಯಂತಾಗುತ್ತಿದ್ದೇನೆ ಎಂಬ ಸಂತೋಷ ಉಕ್ಕುತ್ತಿತ್ತು. ಹಾಗೆ ಪ್ರತಿದಿನ ಅಲ್ಲಿಗೆ ಹೋಗಿ ನನ್ನ ಪಾಡಿಗೆ ನಾನು ಮಾಡುತ್ತಿದ್ದೆ. ದೇಶಪ್ರೇಮದಿಂದ ತುಂಬಿ ತುಳುಕುತ್ತಿದ್ದ ನನ್ನ ಮನದಾಳದಲ್ಲಿ ಅವರು ಸೇರಿಸಿಕೊಳ್ಳಲಿಲ್ಲ ಎಂಬ ವಿಚಾರ ತಲೆಯಲ್ಲಿ ಸುಳಿಯಲಿಲ್ಲ.

ಒಂದು ದಿನ ನನ್ನ ಸಹಪಾಠಿ ಯಾರನ್ನೋ ಕರೆದುಕೊಂಡು ಮುಲ್ಕ ಮೈದಾನ ತೋಪು ತೋರಿಸಲು ಬಂದ. ಅವರಿಗೆ ತೋಪು ತೋರಿಸಿ ವಾಪಸ್ ಬರುವುದರೊಳಗಾಗಿ ಕವಾಯತು ಮುಗಿದಿತ್ತು. ನನ್ನ ಅವಸ್ಥೇ ನೋಡಿ ಮರುಗಿದ. ಆತನ ತಂದೆ ಸ್ವಾತಂತ್ರ್ಯ ಹೋರಾಟಗಾರನಾಗಿದ್ದಿರಬಹುದು. ಆತನಿಗೆ ಈ ಕುರಿತು ತಿಳಿವಳಿಕೆ ಇತ್ತು. ‘ಇವರು ಗಾಂಧಿ ಕೊಂದವರು. ಇಲ್ಯಾಕ ಸಾಯ್ತಿ. ಗಗನ ಮಹಲ ಬಾಜು ಇರುವ ಕಂದಕದ ಪಕ್ಕದ ಬಯಲಿಗೆ ಬಾ. ಅಲ್ಲಿ ಸೇವಾದಳದ ಕವಾಯತ ಇರತೈತಿ. ದೇಶಭಕ್ತಿ ಬಗ್ಗೆ ಕೂಡ ಹೇಳ್ತಾರ. ನಿನಗ ಸ್ವಯಂಸೇವಕ ಮಾಡ್ತಾರ’ ಎಂದು ಮುಂತಾಗಿ ಹೇಳಿದ. ಎಂಥಲ್ಲಿ ಬಂದಿದ್ದೇನಲ್ಲಾ ಎಂದು ಶಾಕ್ ಆಯಿತು. ಮುಸ್ಲಿಂ ಆಗಿರುವುದರಿಂದ ನಾನು ಬೇರೆ ಎಂಬುದನ್ನು ಆರ್.ಎಸ್.ಎಸ್. ತೋರಿಸಿಕೊಟ್ಟಿತು. ಇದು ನನ್ನ ಜೀವನದಲ್ಲಿ ಆದ ಮೊದಲ ಅವಮಾನ. ಮರುದಿನ ಆ ಕಡೆ ಹೋದೆ. ಆ ಸೇವಾದಳ ನನ್ನ ಬದುಕನ್ನು ರೂಪಿಸುವಲ್ಲಿ ಮಹತ್ತರ ಪಾತ್ರ ವಹಿಸಿತು. ಅಲ್ಲಿ ಆರ್.ಎಸ್.ಎಸ್. ನವರಿಂದ ಆದ ಅವಮಾನವನ್ನು ಇಲ್ಲಿ ಸೇವಾದಳದಲಿ ಮರೆತೆ. (1923ನೇ ಡಿಸೆಂಬರ್ 28ರಂದು ಸೇವಾದಳದ ಸ್ಥಾಪನೆಯಾಯಿತು. ಡಾ|| ನಾರಾಯಣ ಸುಬ್ಬರಾವ ಹರ್ಡಿಕರ್ ಅವರು ಸೇವಾದಳವನ್ನು ಮಹಾರಾಷ್ಟ್ರದ ನಾಗಪುರದಲ್ಲಿ ಸ್ಥಾಪಿಸಿದರು. ಆರಂಭವಾದಾಗ ‘ಹಿಂದುಸ್ತಾನ್ ಸೇವಾ ದಳ’ ಎಂದು ಕರೆಯಲಾಗುತ್ತಿತ್ತು.. ರಾಷ್ಟ್ರದ ಅಭಿವೃದ್ಧಿಗಾಗಿ ಯುವಶಕ್ತಿಗೆ ತರಬೇತಿ ನೀಡುವುದು ಈ ಕಾಂಗ್ರೆಸ್ ಸೇವಾದಳದ ಉದ್ದೇಶವಾಗಿತ್ತು.
ಅದೊಂದು ಅಪೂರ್ವ ಅನುಭವ. ಬಿಳಿ ಹಾಪ್ ಪ್ಯಾಂಟ್, ಬಿಳಿ ಷರ್ಟ್ ಮತ್ತು ಗಾಂಧಿಟೋಪಿ ಧರಿಸಿ ಶಿಸ್ತಿನ ಸಿಪಾಯಿಯಾಗಿ ಮಾರ್ಚ್ ಮಾಡಿದ್ದು ಮತ್ತು ಎಲ್ಲರಿಗಿಂತ ಚಿಕ್ಕವನಾಗಿದ್ದ ನಾನು ಎಲ್ಲರ ಸಮನಾಗಿ ನಿಂತದ್ದು ನೆನಪಾಗುತ್ತಿದೆ. ಸೇವಾದಳದ ನಾಯಕ ಗಾಂಧಿ, ಗಡಿನಾಡ ಗಾಂಧಿ, ನೆಹರೂ, ಮೌಲಾನಾ ಅಬುಲ್ ಕಲಾಂ ಆಜಾದ್ ಅಂಥ ರಾಷ್ಟ್ರೀಯ ನಾಯಕರ ಕುರಿತು ಸಿಂಪಿ ಸರ್ ತಿಳಿಸುವುದನ್ನು ತದೇಕ ಚಿತ್ತದಿಂದ ಕೇಳಿಸಿಕೊಳ್ಳುವುದು. ಹೀಗೆ ಎಲ್ಲವೂ ಬದುಕಿನಲ್ಲಿ ಹೊಸತನ ತಂದು ದೇಶದ ಮಹತ್ವವನ್ನು ಅರುಹಿದವು. ಒಂದನೇ ಇಯತ್ತೆಯಲ್ಲಿ ಶರಣಯ್ಯ ವಸ್ತ್ರದ ಅವರಿಂದಾಗಿ ಆದ ಪ್ರಭಾವವೇ ಇದಕ್ಕೆಲ್ಲ ಕಾರಣವಾಗಿತ್ತು.

(ಗಗನಮಹಲ್ ಕಂದಕದ ಪಕ್ಕದ ಮೈದಾನದಲ್ಲಿ ಸೇವಾದಳದ ಕವಾಯತ ನಡೆಯುತ್ತಿತ್ತು)

ಸೇವಾದಳದ ಮುಖ್ಯಸ್ಥ ಸಿಂಪಿ ಸರ್ ಒಂದು ಘಟನೆ ಕುರಿತು ಹೇಳಿದ್ದು ನನ್ನ ಮೇಲೆ ಸೇವಾದಳದ ವಿಚಾರವಾಗಿ ಗಾಢವಾದ ಪರಿಣಾಮ ಬೀರಿತು. ಅದೇನೆಂದರೆ ಒಮ್ಮೆ ಎಐಸಿಸಿ ಅಧಿವೇಶನ ಒಂದರಲ್ಲಿ ಜವಾಹರಲಾಲ ನೆಹರೂ ಅವರು ಪಾಸ್ ಬಿಟ್ಟು ಬಂದಿದ್ದರಂತೆ. ಆಗ ಮುಖ್ಯದ್ವಾರದಲ್ಲಿ ದ್ವಾರಪಾಲಕರಾಗಿದ್ದ ಸೇವಾದಳದ ಸದಸ್ಯರು ಒಳಗೆ ಬಿಡಲಿಲ್ಲವಂತೆ. ನೆಹರೂ ಅವರು ಈ ಶಿಸ್ತನ್ನು ಬಹುವಾಗಿ ಮೆಚ್ಚಿಕೊಂಡು ತಮ್ಮ ಪಾಸ್ ತಂದುಕೊಡುವವರೆಗೆ ಅಲ್ಲೇ ನಿಂತರಂತೆ!

ನಮ್ಮ ದೇಶದಲ್ಲಿ ಬಾಲ್ಯದಲ್ಲೇ ಮನಸ್ಸಿಗೆ ಹೇಗೆ ಆಘಾತವನ್ನುಂಟು ಮಾಡುತ್ತಾರೆ ಎಂಬುದಕ್ಕೆ ಆರ್.ಎಸ್.ಎಸ್. ಒಂದು ಉದಾಹರಣೆ. ಹೀಗೆ ಭೇದ ಮಾಡುವ ಆರ್.ಎಸ್.ಎಸ್. ಇಂದು ದೈತ್ಯಾಕಾರವಾಗಿ ಬೆಳೆದಿದೆ. ಆದರೆ ಎಲ್ಲರನ್ನೂ ಅಪ್ಪಿಕೊಳ್ಳುವ ಸೇವಾದಳಕ್ಕೆ ಕಾಂಗ್ರೆಸ್ಸಿನವರ ಅವಜ್ಞೆಯಿಂದಾಗಿ ಕ್ಷಯರೋಗ ಬಡೆದಿದೆ. ಅದಕ್ಕೆ ಸರಿಯಾಗಿ ಉಸಿರಾಡಲಿಕ್ಕೂ ಆಗುತ್ತಿಲ್ಲ. ಅದು ಇದೆ ಎಂಬುದನ್ನು ಕಾಂಗ್ರೆಸ್ಸಿಗರೂ ಮರೆತಿದ್ದಾರೆ.

ಉದಾತ್ತ ಮಾನವ ಶರಣಯ್ಯ ವಸ್ತ್ರದ ಅವರು ಅದೆಂಥ ರಾಜಕಾರಣಿಯೊ ಇಂದಿಗೂ ಅರ್ಥವಾಗುತ್ತಿಲ್ಲ. ಅವರಿಗೆ ದೇಖಾವೆ ಎನ್ನುವುದೇ ಗೊತ್ತಿರಲಿಲ್ಲ. ಅವರು ಎರಡು ಸಲ ಶಾಸಕರಾಗಿದ್ದು ಅವರಿದ್ದ ಕಾಂಗ್ರೆಸ್ ಪಕ್ಷಕ್ಕೂ ಮರೆತು ಹೋಗಿದೆ. ಅವರ ನಂತರದ ಕಾಂಗ್ರೆಸ್ ರಾಜಕಾರಣಿಗಳು ಅವರ ಘನತೆಯನ್ನು ಸ್ಮರಿಸಿ ಹೊಸ ಪೀಳಿಗೆಗೆ ತಿಳಿಸಿಕೊಡುವ ಯಾವ ಪ್ರಯತ್ನವೂ ಇಲ್ಲಿಯವರೆಗೆ ಆಗಿಲ್ಲ. ‘ಮಾಡಿದೆನೆಂಬುದು ಮನದಲಿ ಹೊಳೆದರೆ ಏಡಿಸಿ ಕಾಡಿತ್ತು ಶಿವನ ಡಂಗುರ’ ಎಂಬ ಭಾವದಲ್ಲಿ ಅವರು ಇರುತ್ತಿದ್ದರು. ನನ್ನೂರಿನ ರಾಜಕಾರಣಿಗಳಲ್ಲಿ ಇಂದಿಗೂ ಅತಿ ಹೆಚ್ಚು ನೆನಪಾಗುವವರು ಅವರೇ ಆಗಿದ್ದಾರೆ.

ಅಟವಳಕರ್ ಅವರು ಶಾಲೆಯ ಮುಖ ತೋರಿಸಿದರು. ಶರಣಯ್ಯ ವಸ್ತ್ರದ ಅವರು ಬದುಕಿನಲಿ ಏನನ್ನು ಕಲಿಯಬೇಕೆಂಬುದನ್ನು ಬದುಕಿ ತೋರಿಸಿದರು. ಬಿಟಿಷರ ಕ್ರೌರ್ಯವನ್ನು ಬದಿಗಿಟ್ಟು, ಅವರ ಶಿಸ್ತಿನೊಂದಿಗೆ ಗಾಂಧೀಜಿಯವರ ಸರಳತೆಯನ್ನು ಮೇಳೈಸಿದರೆ ಉತ್ತಮ ವ್ಯಕ್ತಿಗಳಿಂದ ಕೂಡಿದ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದು ನನಗೆ ಇಂದಿಗೂ ಅನಿಸುತ್ತಿದೆ. ಈ ಕಾರಣದಿಂದಲೇ ಬ್ರಿಟಿಷ್ ಹ್ಯಾಟಿನ ಅಟವಳಕರ್ ಮತ್ತು ಗಾಂಧಿಟೋಪಿಯ ಶರಣಯ್ಯ ವಸ್ತ್ರದ ಅವರು ಸದಾ ನನ್ನ ಮನಸ್ಸನ್ನು ಜಾಗೃತವಾಗಿಟ್ಟಿದ್ದಾರೆ.

ಇಂದು ಒಣ ಧಿಮಾಕಿನಿಂದ ಕೂಡಿದ ಕೃತ್ರಿಮ ಬದುಕು ನಮ್ಮದಾಗಿದೆ. ನಮ್ಮ ಸ್ವರೂಪಗೊಂದಲಗಳನ್ನು ನಿವಾರಿಸಿಕೊಳ್ಳಲು ‘ಗರ್ವಸೇ ಕಹೋ ಹಂ ಹಿಂದೂ ಹೈ’, ‘ಗರ್ವಸೇ ಕಹೊ ಹಂ ಮುಸ್ಲಿಂ ಹೈ’ ಎಂದು ಬೊಗಳುತ್ತ ತಿರುಗುತ್ತಿದ್ದೇವೆ. ಕೋಮುವಾದಿಗಳು ಮತ್ತು ಭಯೋತ್ಪಾದಕರು ದೇಶವನ್ನು ಯುದ್ಧಭೂಮಿ ಮಾಡುತ್ತಿರುವುದನ್ನು ನಿಷ್ಕ್ರಿಯವಾಗಿ ನೋಡುತ್ತ ನಿಂತಿದ್ದೇವೆ. ದೇಶದ ಧರ್ಮವಾದ ಪ್ರಜಾಪ್ರಭುತ್ವಕ್ಕೆ ಮತ್ತು ರಾಷ್ಟ್ರೀಯ ಧರ್ಮಗ್ರಂಥವಾದ ಸಂವಿಧಾನಕ್ಕೆ ನಮ್ಮ ಸಣ್ಣತನದ ಮೂಲಕ ಅವಮಾನ ಮಾಡುತ್ತಿದ್ದೇವೆ. ದೇಶವನ್ನು ಎಲ್ಲದರಿಂದ ಪಾರು ಮಾಡಲು ಶಿಸ್ತು ಮತ್ತು ಸರಳತೆ ನಮ್ಮ ಬದುಕಿನ ದಾರಿದೀಪಗಳಾಗಬೇಕು. ಇಲ್ಲದಿದ್ದರೆ ಅಂಧಃಕಾರದಲ್ಲಿ ಮುನ್ನುಗ್ಗುವಾಗ ಶರಣಯ್ಯ ವಸ್ತ್ರದ ಅವರಂಥ ಬೆಳಕು ನಮಗೆ ಎದುರಾಗುವುದೇ ಇಲ್ಲ. ಎದುರಾಗುವಂಥವರು ನಾಥೂರಾಂ ಗೋಡ್ಸೆ ಅಂಥವರು, ಬಿನ್ನ ಲಾಡೆನ್ ಅಂಥವರು…

(ಚಿತ್ರಗಳು: ಸುನೀಲಕುಮಾರ ಸುಧಾಕರ)