ತಲೆಯನ್ನು ಸ್ವಲ್ಪ ಮೇಲಕ್ಕೆ ಎತ್ತಿ ಹಿಡಿದು ಸರವನ್ನು ಬಿಚ್ಚಿದನು. ಅರಿಶಿನ ದಾರವನ್ನು ಮಾತ್ರ ಹಾಗೇ ಬಿಟ್ಟುಬಿಟ್ಟು ಬಂಗಾರದ ತಾಳಿ, ಕಾಸನ್ನು ಸೆಳೆದು ತೆಗೆದುಕೊಂಡನು. ಮೂಗುತಿಯನ್ನು ಬಿಚ್ಚಲು ನೋಡಿದ ತಿರುಪು ಎಂಬ ಸೂಕ್ಷ್ಮವನ್ನು ಅಕ್ಕಸಾಲಿಗನು ಒಳಗೆ ಇಟ್ಟಿದ್ದಾನೆ. ಬೆರಳ ತೂರಿಸಿ ಎಷ್ಟು ಪ್ರಯತ್ನಿಸಿದರೂ ಬಿಚ್ಚಲಾಗಲಿಲ್ಲ. ಕಾಡೈಯನ್ ತಾಳ್ಮೆಗೆಟ್ಟನು. ಮೂಗುತಿ ಮುಖ್ಯವೇ ಹೊರತು ಮೂಗು ಯಾತಕ್ಕೆ ಹೆಣಕ್ಕೆ? ಒಂದು ಬಾರಿ ಎಳೆದನು. ಮೃದುಭಕ್ಷ್ಯವನ್ನು ಎಳೆದಂತೆ ಮೂಗಿನ ಮಾಂಸದೊಂದಿಗೆ ಕೈಗೇ ಬಂದುಬಿಟ್ಟಿತು ಮೂಗುತಿ.
ಡಾ. ಮಲರ್‌ ವಿಳಿ ಅನುವಾದಿಸಿದ ತಮಿಳು ಕಥೆಗಾರ ಡಾ. ವೈರಮುತ್ತು ಬರೆದ “ಸ್ವಲ್ಪ ಹೊತ್ತು ಮನುಷ್ಯನಾಗಿದ್ದವನು” ಕತೆ, ನಿಮ್ಮ ಈ ಭಾನುವಾರದ ಬಿಡುವಿನ ಓದಿಗೆ

ಒಬ್ಬ ಮನುಷ್ಯನಿಗೆ ಸಾಮಾನ್ಯವಾಗಿ ಅದೃಷ್ಟವೆಂಬುದು ಹೇಗೆ ಬರುತ್ತೆ? ಬಂಗಾರದ ರೂಪದಲ್ಲಿ ಬರುತ್ತೆ; ಇಲ್ಲದಿದ್ದರೆ ವಸ್ತುಗಳ ರೂಪದಲ್ಲಿ ಬರುತ್ತೆ. ಹೆಣದ ರೂಪದಲ್ಲಿ ಬಂತಪ್ಪಾ ಕಾಡೈಯನ್‌ಗೆ ಅದೃಷ್ಟ.

ಕೆದರಿದ ಕೂದಲಿನೊಂದಿಗೆ ಸೆಟೆದುಕೊಂಡ ಕೈಗಳೆರಡನ್ನೂ ಚಾಚಿಕೊಂಡು ‘ಇಗೋ ಬಂದುಬಿಟ್ಟೆ ಬಂದುಬಿಟ್ಟೇ’ ಅಂತಾ ತೀರದಲ್ಲಿ ತೇಲುತ್ತಾ ಹೆಣವೊಂದು ಕಾಡೈಯನ್‌ನನ್ನು ಕರೆಯಿತು.

ಹೆಣದ ಮುಖ ನೋಡಿದ್ರೆ ಒಳ್ಳೇದು ಅಂತಾ ಹೇಳುತ್ತಾರೆ ಆ ಊರಿನ ಜನರು. ಹೆಣವೇ ನಿನ್ನ ಮುಖವನ್ನು ಬಂದು ನೋಡಿದ್ರೆ! ಕಾಡೈಯನ್ ನಿಜಕ್ಕೂ ಅದೃಷ್ಟವಂತನಲ್ಲವೇ?

ವೈಗೈ ನದಿಯಲ್ಲಿ ಹೂಗಳು ತುಂಬಿ ತುಳುಕಿ ತೇಲುತ್ತಾ ಬರುತ್ತಿತ್ತಂತೆ ಒಂದು ಕಾಲದಲ್ಲಿ ಬರೆದಿದ್ದಾರೆ- ಸಟೆಯ ಬಳಸಿ ದಿಟವ ಹೇಳುವ ಕವಿ ಮಹಾಶಯರು. ಮಲ್ಲಿಗೆ, ಆಕಾಶ ಮಲ್ಲಿಗೆ, ಮಾಧವೀ(ಕುರುಕ್ಕತ್ತಿ), ಕುವಲಯ, ಸುರಹೊನ್ನೆ… ಹೀಗೆ ಹೂಗಳು ತೇಲಿ ಬಂದಂತಹ ಕಾಲವೆಲ್ಲಾ ಮುಗಿದು ಹೋಯಿತು. ಪೆರಿಯಾರು(ಪೇರಿ-ಆರ್= ದೊಡ್ಡ ನದಿ) ತುಂಬಿ ವರುಷ ನಾಡಿನಲ್ಲಿ ಧಾರಾಕಾರವಾಗಿ ಮಳೆ ಸುರಿದು ಪ್ರವಾಹ ಉಕ್ಕಿ ಹರಿದು ಒಡೆದ ತೀರಗಳೆರಡನ್ನೂ ಕೈಚಾಚಿ ಮುಟ್ಟುತ್ತಾ ಜಲ್ಲಿಕಟ್ಟಿ ನ ಗೂಳಿಯಂತೆ ಪ್ರವಾಹ ನುಗ್ಗಿ ವೇಗವಾಗಿ ಹರಿವಾಗ ಏನನ್ನು ಕೊಚ್ಚಿಕೊಂಡು ಬರುತ್ತಿದೆ ಗೊತ್ತುಂಟಾ? ತೇಗದ ಕೊರಡು ಅರಸಿನ ಬೂರುಗ, ಬಿಳಿಧೂಪ, ಕರಿ ಮರದ ಕೊರಡು ಕಾರಿನ ಟಯರ್, ಮಂಚ ಬೀರು ಒಳ್ಳೇದು, ಕೆಟ್ಟದ್ದು ಹೀಗೆ ಎಲ್ಲವನ್ನೂ ಕೊಚ್ಚಿಕೊಂಡು ಬರುತ್ತದೆ ಪ್ರವಾಹ.

ಸಮೀಪದ ಹಳ್ಳಿಯ ಹದಿಹರೆಯದವರು ತರುಣರು ಎಲ್ಲ ಪ್ರವಾಹ ಬಂತು ಅಂದ್ರೆ ಸಾಕು ಮನೇಲ್ಲಿರೋದಿಲ್ಲಾ. ವೈಗೈ ಮಾತೆ ಕೈ ಬಿಡೋಲ್ಲಾಂತಾ ನದಿಯಲ್ಲಿ ಕೊಚ್ಚಿಕೊಂಡು ಬರುವಂತಹ ವಸ್ತುಗಳನ್ನು ಅವರವರ ಚಾತುರ್ಯಕ್ಕೆ ತಕ್ಕಂತೆ ಬಾಚಿಕೊಂಡು ಹೋಗಿ ಬಿಡುತ್ತಿದ್ದರು.

ಹೀಗೇ ಎಂ. ಜಿ. ಆರ್. ಕಾಲವಾದಾಗ- 87 ರಲ್ಲಿ ಪ್ರವಾಹ ಬಂದಾಗ- ನದಿಯ ಪ್ರವಾಹದಲ್ಲಿ ಕೊಚ್ಚಿಕೊಂಡು ಬಂದ ವಸ್ತುಗಳನ್ನು ಮಾರಾಟ ಮಾಡಿ ಬಂದ ಹಣದಲ್ಲಿ ಮೂವರು ವ್ಯಕ್ತಿಗಳು ಕುನ್ನೂರಿನಲ್ಲಿ ಗುಡಿಲುಗಳನ್ನು ಕಿತ್ತೆಸೆದು ತಾರಸಿ ಮನೆಗಳನ್ನು ಕಟ್ಟಿಕೊಂಡರು.

ಹಾಗೆ ನದಿಯಲ್ಲಿ ಕೊಚ್ಚಿಕೊಂಡು ಬರುತ್ತಿರುವ ವಸ್ತುಗಳ ವಾರಸುದಾರರು ಯಾರೂ ಹುಡುಕಿಕೊಂಡು ಬರೋದೂ ಇಲ್ಲ; ಕೇಳಿದ್ರೂ ಸಹ ತೆಗೆದುಕೊಂಡವರು ಕೊಡೋದೂ ಇಲ್ಲ.

ಒಂದು ಬಾರಿ ನದಿಯಲ್ಲಿ ಬಂದ ಪ್ರವಾಹದಲ್ಲಿ ದೊಡ್ಡ ಬಾಗಿಲೊಂದು ತೀರದಂಚಿನಲ್ಲಿ ಸರಿದು ಬಿದ್ದಿತ್ತು. ಅದು ಕರಟ್ಟುಪಟ್ಟಿ ಹಳ್ಳಿಗರ ಕೈಗೆ ಸಿಕ್ಕಿತು. ಆನೆಯ ಹಣೆಯಂತಹ ವಿಶಾಲವಾದ ಬಾಗಿಲದು. ಒಂದು ಕಾಲದಲ್ಲಿ ಚೆನ್ನಾಗಿ ಬಾಳಿ ಬದುಕಿ ಬಡತನ ಹೊಂದಿದ ಜಮೀನ್ದಾರರ ಮನೆಯ ವಸ್ತುವೋ ಏನೋ?

ಬಾಗಿಲನ್ನು ಬಿಚ್ಚಿ, ಬಿಡಿಸಿ ನೋಡಿದ್ರೆ ಬಂಗಾರದ ನಾಣ್ಯಗಳಿದ್ದವಂತೆ. ಒಂದು ರಂಧ್ರದಲ್ಲಿ ವಜ್ರ ಇಟ್ಟಿದ್ದರಂತೆ. ಅದನ್ನು ತೆಗೆದುಕೊಂಡ ಕುಟುಂಬವೇ ಆಂಡಿಪಟ್ಟಿ ಹಳ್ಳಿಯಲ್ಲಿ ಸಿನಿಮಾ ಟೆಂಟ್ ಕಟ್ಟಿದುದಾಗಿ ಹೇಳುತ್ತಾರೆ. ಹೀಗೆಲ್ಲಾ ಸುತ್ತ ಮುತ್ತಲ ಊರ ಜನರಿಗೆ ‘ನದಿಯಲಿ ಬಂದ ದ್ರವ್ಯ’ವು ಸಮಧರ್ಮ, ಸಮಾನತೆಯನ್ನು ಒದಗಿಸಿದೆ.

*****

ಇನ್ನು ಬೆಳಕು ಹರಿದಿಲ್ಲ.
ಮಸುಕು ಮಸುಕಾಗಿದೆ, ಜಡಿ ಮಳೆ ಜಿನುಗುತ್ತಿದೆ. ನಿನ್ನೆ ರಾತ್ರಿ ವೈಗೈ ಜಲಾಶಯದಿಂದ ಹರಿದುಬಂದ ನೀರಿನಲ್ಲಿ ಮೀನು ಹಿಡಿಯಲು ಬಲೆ ಹಾಕಿದ್ದರು. ಕಾಡೈಯನ್ ಮತ್ತು ಅವನ ಸಹಾಯಕ ವಾತ್ತುರಾಮನ್. ನಸುಕಿನಲ್ಲಿ ಬಲೆಯನ್ನು ತೆಗೆಯಲು ಹೊರಟಂತಹವರು ನದಿಯ ನೀರಿನ ರಭಸವನ್ನು ಕಂಡು ಸ್ಥಂಭೀಭೂತರಾದರು. ಇವರು ಬಲೆ ಒಣಗಿಸುವ ಕುಣ್ಣಾಂಬಾರೈ ರಾತ್ರೋರಾತ್ರಿಯೇ ಮುಳುಗಿಹೋಗಿದೆ. ನಿನ್ನೆ ರಾತ್ರಿ ವರುಷನಾಡಿನ ಮಳೆಯೋ, ಮುಲ್ಲೈ ನದಿಯಲ್ಲಿ ಬಂದ ಪ್ರವಾಹವೋ ತುಂಬಿ ಹರಿದಿದೆ ಅನ್ನಿಸುತ್ತೆ. ಮುಳ್ಳುಕಂಟಿ, ಪುಳ್ಳೆ, ಒಣಗಿದ ಕಟ್ಟಿಗೆಗಳು ವಿವಿಧ ಮರದ ಕೊರಡುಗಳು, ಸೀಮೆ ಎಣ್ಣೆ ಟಿನ್‍ಗಳು ತೇಲುತ್ತಾ ಹೋಗುತ್ತಿವೆ. ಕೆಲವು ತೀರದಲ್ಲಿ ಬಂದು ಸರಿದು ಬಿದ್ದಿವೆ. ಇದರಲ್ಲಿ ಮೀನುಹಿಡಿಯಲು ಬೀಸಿದ ಬಲೆಯನ್ನು ಎಲ್ಲೀಂತಾ ಇಳಿದು ಹುಡುಕುವುದು?

ಪ್ರವಾಹ ಬಂದ ಸುದ್ದಿ ಇನ್ನು ಊರೊಳಗೆ ಹೋಗಿ ತಲುಪಿಲ್ಲ.
ಇಲ್ಲದಿದ್ದರೆ ತರುಣರು ‘ಹ್ಹ… ಹಾ’ ಎಂದು ಓಡಿ ಬಂದಿರುತ್ತಿದ್ದರು.

ಬೆಳಕು ಹರಿಯಿತು.
“ಲೋ! ವಾತ್ತುರಾಮನ್….. ಏ ಅಲ್ನೋಡೋ ಒಂದು ಮೇಕೆ ಮರಿ”.

ತೀರದಲ್ಲೇ ಒಂದು ಹುಲ್ಲಿನ ಬಣವೆ ತೇಲಿಕೊಂಡು ಹೋಗುತ್ತಿದೆ. ಅದರ ಮೇಲೆ ಸಾವಿನದವಡೆಯಿಂದ ತಪ್ಪಿ ಬದುಕಿದ ಒಂದು ಮೇಕೆ ಮರಿ.
ಸಂತೋಷದಲ್ಲಿ ಕೂಗುತ್ತಿದ್ದಾನೆ ಕಾಡೈಯನ್:

“ಲೋ ವಾತ್ತುರಾಮನ್ ಮೇಕೆ ಮರಿ ನನಗೆ; ಹುಲ್ಲಿನ ಬಣವೆ ನಿನಗೆ”.

ವಾತ್ತುರಾಮನ್ ಸೊಂಟಕ್ಕೆ ಎರಡು ಸೀಮೆ ಎಣ್ಣೆ ಕ್ಯಾನ್ ಕಟ್ಟಿಕೊಂಡು ನದಿಯಲ್ಲಿ ಜಿಗಿದನು. ಅವನು ಜಿಗಿದು ಹುಲ್ಲಿನ ಬಣವೆಯನ್ನು ಅಡ್ಡಗಟ್ಟಿ ಹಗ್ಗದಂತೆ ತಿರುಚಿ ಹುಲ್ಲಿನ ಕಂತೆಯನ್ನು ಎಳೆಯಲು ಸರಸರನೆ ಬರುತ್ತಿದೆ. ನೀರಿನಲ್ಲಿ ವಸ್ತು ಭಾರವನ್ನು ಕಳೆದುಕೊಳ್ಳುತ್ತದೆ ಎಂಬ ವೈಜ್ಞಾನಿಕ ಸಿದ್ಧಾಂತ ಈಗ ವಾತ್ತುರಾಮನ್‌ನ ನೆರವಿಗೆ ಬರುತ್ತಿದೆ. ಹುಲ್ಲಿನ ಬಣವೆಯ ಜೊತೆ ಹೋಗುತ್ತಿದ್ದ ಮೇಕೆ ಮರಿಯನ್ನು ತೀರಕ್ಕೆ ತಂದು ತಲುಪಿಸಿದನು.

“ ಮೇ… ಮೇ…”

ಧಾವಿಸಿ ಬಂದ ಮೇಕೆ ಮರಿಯನ್ನು ತನ್ನೆರಡು ಕರಗಳನ್ನು ಚಾಚಿ ಎದೆಗವಚಿಕೊಂಡು ತೋಳಿನಲ್ಲಿದ್ದ ವಸ್ತ್ರ ಕೊರಳಿಗೆ ಕಟ್ಟಿ ತೀರದಲ್ಲಿದ್ದ (ಗಟ್ಟಿಯಾದ ಒಂದು ಕರಿಮರ) ಬಲಾರದ ಮರಕ್ಕೆ ಕಟ್ಟಿಬಿಟ್ಟನು.

ಒಂದು ಬಾರಿ ನದಿಯಲ್ಲಿ ಬಂದ ಪ್ರವಾಹದಲ್ಲಿ ದೊಡ್ಡ ಬಾಗಿಲೊಂದು ತೀರದಂಚಿನಲ್ಲಿ ಸರಿದು ಬಿದ್ದಿತ್ತು. ಅದು ಕರಟ್ಟುಪಟ್ಟಿ ಹಳ್ಳಿಗರ ಕೈಗೆ ಸಿಕ್ಕಿತು. ಆನೆಯ ಹಣೆಯಂತಹ ವಿಶಾಲವಾದ ಬಾಗಿಲದು. ಒಂದು ಕಾಲದಲ್ಲಿ ಚೆನ್ನಾಗಿ ಬಾಳಿ ಬದುಕಿ ಬಡತನ ಹೊಂದಿದ ಜಮೀನ್ದಾರರ ಮನೆಯ ವಸ್ತುವೋ ಏನೋ?

ಅನಂತರ ನೋಡು ತೇಲುತ್ತಾಬಂತು ಅದೃಷ್ಟ.

ವಾತ್ತುರಾಮನ್‌ನೇ ಮೊಟ್ಟಮೊದಲು ನೋಡಿದನು.
“ಲೋ… ಅಲ್ನೋಡು ಏನೋ ಕಣ್ಣಿಗೆ ರಾಚುವ ಹಾಗಿದೆ. ನೆಂದು ತೇಲಿ ಬರುತ್ತಿದೆ ಒಂದು ಹೆಣ್ಣಿನ ಹೆಣ; ಕಡುಗೆಂಪು ಬಣ್ಣದ ಒಂದು ಸೀರೆಯುಟ್ಟಿದ್ದಾಳೆ.
“ಲೋ! ಏನ್ಲಾ! ಯಾವ ಹೆಂಗಸಲ್ಲೂ ಇಷ್ಟೊಂದು ದಟ್ಟವಾದ ತಲೆಗೂದಲನ್ನು ನಾನಂತೂ ಕಂಡಿರಲಿಲ್ಲ. ದುಂಡನೆಯ ತೆಪ್ಪದಂತೆ ಅಷ್ಟಗಲಕ್ಕೂ ಹರಡಿದೆ.”

ಗಾಳವನ್ನು ತೆಗೆದುಕೊಂಡು ಛಂಗನೆ ನೀರಿನಲ್ಲಿ ಹಾರಿ ಸ್ವಲ್ಪ ದೂರ ಈಜಿ ಗಾಳವನ್ನು ಅವಳ ಜುಟ್ಟಿನ ಬಳಿ ಬೀಸಿ ಒಂದು ಬಾರಿ ಸುರುಟಿ ಎಳೆಯಲು, ‘ಇಗೋ ಬಂದೆ ಇಗೋ ಬಂದೇಂತಾ’ ಕೈಗೇ ಬರುತ್ತಿದೆ ಹೆಣ. ತೀರಕ್ಕೆ ಎಳೆದು ಹಾಕಿದ ಕೂಡಲೇ ಕಾಡೈಯನ್ ಹೆಣದ ಸೆರಗನ್ನು ಸರಿಪಡಿಸಿದನು.

ತಾರುಣ್ಯ ಹೆಣ; ಅಬ್ಬಬ್ಬಾ! ಮಿರುಗುಟ್ಟುತ್ತಿದೆ. ಈ ವರ್ಷವಷ್ಟೇ ವಿವಾಹವಾದ ಹೆಣ್ಣಿನಂತೆ ಕಾಣುತ್ತಿದೆ. ನೀರಿನಲ್ಲಿ ನೆನೆದು ಹೆಣ ಕಳೆಗುಂದಿದೆ.
ಬಾಯಿ ತೆರೆದೇ ಇದೆ. ಮುಚ್ಚಿದರೂ ಅಂಟುತ್ತಿಲ್ಲ ಎರಡು ದವಡೆಗಳು. ಗರ್ಭಿಣಿಯಂತೆ ಬಾತುಹೋಗಿದೆ ನೀರು ಕುಡಿದ ಬಸಿರ್(ಹೊಟ್ಟೆ). ಕೊರಳಲ್ಲಿ ಸುಮಾರು ಹತ್ತು ಸವರನ್ ಸರ ಇರಬಹುದು. ಅರಿಶಿನ ದಾರದಲ್ಲಿ ತಾಳಿಯೊಂದಿಗೆ ಎರಡು ಕಾಸು, ಗುಂಡು. ಸೆಟೆದುಕೊಂಡಿರುವ ಮೂಗಿನಲ್ಲಿ ಮೂಗುತಿ, ಕಿವಿಗಳೆರಡರಲ್ಲೂ ಓಲೆ ಒಂದು ಕೈಯಲ್ಲಿ ಎರಡು ಬಳೆಗಳಿವೆ. ಒಂದು ಕಾಲಿನಲ್ಲಿ ಗೆಜ್ಜೆ ಇನ್ನೊಂದು ಕಾಣುತ್ತಿಲ್ಲ; ಕಳಚಿಕೊಂಡು ಬಿದ್ದಿರಬೇಕು ಅನ್ನಿಸುತ್ತೆ.

ಕಾಡೈಯನ್ ಕಣ್ಣಳತೆಯಲ್ಲೇ ಲೆಕ್ಕಹಾಕಿ ಮುಗಿಸಿದ; ಈಗ ಒಪ್ಪಂದ ಬದಲಾಯಿತು. ವಾತ್ತುರಾಮನನ್ನು ನೋಡಿದ:
“ಲೋ! ಹುಲ್ಲಿನ ಬಣವೆ ಮತ್ತು ಮೇಕೆಮರಿ ನಿನಗೆ; ಬಂದಂತಹ ಹೆಣ ನನಗೆ”

ತಲೆಯನ್ನು ಸ್ವಲ್ಪ ಮೇಲಕ್ಕೆ ಎತ್ತಿ ಹಿಡಿದು ಸರವನ್ನು ಬಿಚ್ಚಿದನು. ಅರಿಶಿನ ದಾರವನ್ನು ಮಾತ್ರ ಹಾಗೇ ಬಿಟ್ಟುಬಿಟ್ಟು ಬಂಗಾರದ ತಾಳಿ, ಕಾಸನ್ನು ಸೆಳೆದು ತೆಗೆದುಕೊಂಡನು. ಮೂಗುತಿಯನ್ನು ಬಿಚ್ಚಲು ನೋಡಿದ ತಿರುಪು ಎಂಬ ಸೂಕ್ಷ್ಮವನ್ನು ಅಕ್ಕಸಾಲಿಗನು ಒಳಗೆ ಇಟ್ಟಿದ್ದಾನೆ. ಬೆರಳ ತೂರಿಸಿ ಎಷ್ಟು ಪ್ರಯತ್ನಿಸಿದರೂ ಬಿಚ್ಚಲಾಗಲಿಲ್ಲ. ಕಾಡೈಯನ್ ತಾಳ್ಮೆಗೆಟ್ಟನು. ಮೂಗುತಿ ಮುಖ್ಯವೇ ಹೊರತು ಮೂಗು ಯಾತಕ್ಕೆ ಹೆಣಕ್ಕೆ? ಒಂದು ಬಾರಿ ಎಳೆದನು. ಮೃದುಭಕ್ಷ್ಯವನ್ನು ಎಳೆದಂತೆ ಮೂಗಿನ ಮಾಂಸದೊಂದಿಗೆ ಕೈಗೇ ಬಂದುಬಿಟ್ಟಿತು ಮೂಗುತಿ. ಒದರಿ ನೋಡಿದ; ಉರುಬಿ ನೋಡಿದ; ಉದುರುತ್ತಿಲ್ಲ “ಥೂ ಶನಿ ಅಂಟಿದ ಮಾಂಸ” ಹಲ್ಲಿನ ತುದಿಯಲ್ಲಿ ಕಚ್ಚಿ ‘ಥೂ’ ಅಂತಾ ಉಗಿದನು. ಈಗ ಕಿವಿಯ ಓಲೆಯ ಕಡೆಗೆ ಕಣ್ಣು ಹಾಯಿಸಿದ. ನೀರಿನಲ್ಲಿ ನೆನೆದು ಪಾಚಿ ಅಂಟಿಕೊಂಡು ಓಲೆ ಗಟ್ಟಿಯಾಗಿತ್ತು.

ಗಾಳವನ್ನು ಕಿವಿಗೆ ಹಾಕಿ ಎರಡು ಬಾರಿ ಎಳೆದ; ಓಲೆ ಕೈಗೇ ಬಂದುಬಿಡ್ತು. ಕಾಲಿನ ಗೆಜ್ಜೆಯನ್ನು ಕಳಚಿ ಸೊಂಟಕ್ಕೆ ಸುತ್ತಿದ್ದ ಪಂಚೆಯ ತುದಿಯಲ್ಲಿ ಗಂಟು ಹಾಕಿ ಉಡಿದಾರದಲ್ಲಿ ಸಿಗಿಸಿಕೊಂಡು, ಗೆಜ್ಜೆಗೆ ಮಾತ್ರ ಒಂದು ಎಚ್ಚರಿಕೆಯನ್ನು ನೀಡುತ್ತಾನೆ; ‘ಸದ್ದು ಗಿದ್ದು ಮಾಡಿದ್ರೆ… ಜೀವಂತವಾಗಿರೋಲ್ಲ ನೋಡು…. ಕರಗ್ಸಿ ಮಾರಿಬಿಡ್ತೀನಿ ನೋಡ್ಕೋ ನಿನ್ನಾ’

ಈಗ ಮೂಗು ಅರ್ಧಹರಿದು ಅಂಗವಿಕಲವಾಗಿದೆ ಹೆಣ. ಸುತ್ತಮುತ್ತಲೂ ನೋಡಿದನು. ಪ್ರವಾಹ ಬಂದ ಸುದ್ದಿ ತಿಳಿದು ಆ ಊರಿನ ಜನರು ದೂರದಲ್ಲಿ ಧಾವಿಸಿ ಬರುತ್ತಿದ್ದಾರೆ. ಅವನು ಬಂಗಾರ ತೆಗೆದುಕೊಳ್ಳುತ್ತಿರುವುದನ್ನು ನೋಡುವುದ ಬಿಟ್ಟು ಸರಿದ ಸೀರೆಯನ್ನೇ ವಿನೋದವಾಗಿ ನೋಡುತ್ತಿದ್ದಂತಹ ವಾತ್ತುರಾಮನ್‌ನ ಕುತ್ತಿಗೆ ಮೇಲೆ ಕಾಡೈಯನ್ ಒಂದೇಟು ಹಾಕಿದನು.

“ ಲೋ… ಇಲ್ನೋಡು ನಾವು ಕೊಲೆ ಮಾಡಿಲ್ಲ; ಅಪರಾಧ, ತಂಟೆ ತಕರಾರು ಮಾಡಿಲ್ಲ. ನದಿಯ ಮೂಲಕ ಅಂಗಾಳ ಪರಮೇಶ್ವರಿ ದೇವಿ ನೀಡಿದ್ದು. ಹೊರಗೆ ಹೋಗಿ ಉಸುರೆತ್ತಬೇಡ; ಉಸಿರಿದೇಂತಾ ತಿಳಕೋ…. ನದೀಲೀ ಹೋಗೋ ಹೆಣ ಮುಂದಿನದು ನಿಂದೇ”.

ನದಿಯ ನೀರು ಬತ್ತಿದ್ದಾಗ ತೀರದಲ್ಲಿ ಬಂದು ಸೇರಿದ ಮಣ್ಣನ್ನು ಒಂದು ಬದಿಯಿಂದ ಅಗೆದು ತೆಗೆದುಕೊಂಡು ವ್ಯವಸಾಯಕ್ಕೆ ಗೊಬ್ಬರವಾಗಿ ಆ ಊರಿನ ಜನರು ಉಪಯೋಗಿಸಿಕೊಳ್ಳುತ್ತಿದ್ದರು.

ಆ ರೀತಿ ಮಣ್ಣನ್ನು ಅಗೆದು ತೆಗೆದಿದ್ದ ಒಂದು ಹಳ್ಳದಲ್ಲಿ ಹೆಣಕ್ಕೆ ಹೊಂದುವ ಒಂದು ಹಳ್ಳವನ್ನು ಕಂಡು ಹಿಡಿದರು. ಹೆಣವನ್ನು ಉರುಳಿಸಿ ಉಟ್ಟಿದ್ದ ಸೀರೆಯನ್ನು ಸೆಳೆದುಕೊಂಡು ಹಳ್ಳದಲ್ಲಿ ನೂಕಿ ಕಾಲಿನಿಂದಲೇ ಮಣ್ಣನ್ನು ತಳ್ಳಿ ಮುಚ್ಚಿದರು.

ಹೀಗೊಂದು ಘಟನೆ ಭೂಮಿಯಲ್ಲಿ ನಡದೇ ಇಲ್ಲವೇನೋ ಎಂಬಂತೆ ನಡೆದುಕೊಂಡು ಹೋದರು.

“ಹೊಸಾ ಸೀರೆ ಕಣೇ…. ನದೀಲಿ ಸಿಕ್ತು. ಜಾಲ್ಸಿ ಉಟ್ಕೊ” ಹೆಂಡತಿಯ ಬಳಿ ಸೀರೆಯನ್ನು ನೀಡಿ ಚಿನ್ನದ ಒಡವೆಗಳನ್ನು ಕಾಡೈಯನ್ ಯಾರಿಗೂ ತಿಳಿಯದಂತೆ ಅವಿತಿಟ್ಟನು.

*****

ಎರಡು ದಿನದ ನಂತರ ಮುಸ್ಸಂಜೆಯಲಿ ಊರಿನೊಳಕ್ಕೆ ಒಂದು ವೊಡ್ಕಾಸಿ ಕಾರು ಬಂದು ನಿಂತಿತು.

“ಕಾಡೈಯನ್‌ನ ಮನೆ ಇದೇನಾ ತಾಯಿ. . .”
ಮಧ್ಯವಯಸ್ಸಿನ ತೆಳ್ಳಗಿನ ಒಬ್ಬ ಪುರುಷ ಮತ್ತು ದರ್ಪ ನಡಿಗೆಯ ಒಬ್ಬ ಸ್ತ್ರೀ ವಿಚಾರಿಸುತ್ತಿರಬೇಕಾದರೆ ಹುತ್ತದೊಳಗೆ ಇರುತ್ತ ತಲೆಯನ್ನು ಮಾತ್ರ ತೋರಿಸುವ ಹಾವಿನಂತೆ ಪುಸಕ್ಕನೆ ಮನೆಯಿಂದ ಹೊರಕ್ಕೆ ಕಾಡೈಯನ್ ಬಂದನು.

ಬಂದವರನ್ನು ಜಗುಲಿಯ ಮೇಲೆ ಕುಳಿತುಕೊಳ್ಳಲು ಹೇಳಿದನು.
“ಯಾರ್ ನೀವು? ಏನ್ ವಿಷ್ಯ?”

“ನಮ್ಮ ಮನೆಗೆ ಸೊಸೆಯಾಗಿ ಬಂದ ಮಹಾಲಕ್ಷ್ಮಿ ನದೀಲೇ ಹೊರಟುಹೋದಳು. ಈ ಊರಿನಲ್ಲಿ ಹೊಡಕೊಂಡು ಬಂದು ತೀರದಲ್ಲಿ ಸರಿದು ಬಿದ್ದಿತ್ತು ಅಂತಾ ಸುದ್ದಿ ಅದ್ಕೆ ನಿಮ್ನಾ ಇಚಾರಿಸೋಣಾಂತಾ ಬಂದ್ವಿ”. ಬಂದ ವ್ಯಕ್ತಿ ಮಾತುಗಳನ್ನು ತಡೆದು ತಡೆದು ತಡವರಿಸಿಕೊಂಡು ಮಾತನಾಡಿದನು.

“ಮದ್ವೆಯಾಗಿ ಏಳೇ ತಿಂಗ್ಳಾಯ್ತು. ನಮ್ಮಗ ಮಿಲಿಟರಿಯಲ್ಲಿ ಇದ್ದಾನೆ. ಹೂವು, ಕುಂಕುಮಸಹಿತ ಮುತ್ತೈದೆಯಾಗಿ ಹೋದವಳು ಹೊನ್ನಿನೊಂದಿಗೇ ಹೊರಟುಹೋದಳು”. ಅತ್ತೆ ಆಡುವ ನುಡಿಗಳೆಲ್ಲಾ ಅಳುತ್ತಿವೆ. ಆದರೆ ಅವಳು ಮಾತ್ರ ಅಳುತ್ತಿಲ್ಲ. ಎಣ್ಣೆಯೊಂದಿಗಿನ ನೀರಿನಂತೆ ಅವಳ ಮುಖದಲ್ಲಿ ಶೋಕ ಅಂಟಿಲ್ಲ.

ಕಾಡೈಯನ್ ತುಟಿಪಿಟಕ್ಕೆನ್ನಲಿಲ್ಲ.

“ತಮ್ಮಾ …. ಬಲೆ ಹಾಕಿದ್ದ ಜಾಗದಲ್ಲಿ ನೀನೇ ಹೆಣವನ್ನು ನೋಡಿದ್ದೀಯಂತಾ ನಮ್ಗೆ ಸುದ್ದಿ ತಲುಪ್ತು. ಕೊರಳಲ್ಲಿ ಸರ, ಕಿವೀಲೀ ಓಲೆ, ನಮ್ಮ ಸೊಸೆ ನಮ್ಮನೇ ಹೊಸ್ತಿಲು ದಾಟ್ದ ಕೂಡಲೇ ನಮ್ಗಂತೂ ಸಿರಿ, ಸಂಪತ್ತು ಐಶ್ವರ್ಯ ಬಂತು. ನಮ್ ಮನೇ ಲಕ್ಷ್ಮಿ ಹೊರಟೋಯ್ತಲ್ಲಾ….”

ಆ ವ್ಯಕ್ತಿ ಹೇಳಿದ ಮಾತಿನಲ್ಲಿ ನಿಜ ಇರೋ ಹಾಗಿದೆ; ಸಂವೇದನೆ ಇಲ್ಲ. “ನೋಡಿದ್ರೆ ನಮ್ಮ ಒಡವುಟ್ದವನಂಗೆ ಇದ್ದೀಯಾ, ಬೇಕಾದ್ರೆ ನೀನೊಂದು ಭಾಗ ತೆಗೆದ್ಕೊ ತಮ್ಮಾ. ದೊಡ್ಡ ಮನಸ್ಸು ಮಾಡಿ ನಮ್ಮ ಒಡವೆಗಳನ್ನೆಲ್ಲಾ ಕೊಟ್ಬಿಟ್ರೆ ನಿಮಗೆ ಕೈ ಮುಗ್ದು ಹೋಗ್ತೀವಿ….”

ಅತ್ತೆ ಹೇಳಿಮುಗಿಸುವ ಮುನ್ನ ಕಾಡೈಯನ್‌ನ ಮೂಗಿನ ತುದೀಲಿ ಕೋಪ ಬಂತು.

“ಏಯ್ ಏನ್ ಮಾತ್ ಮಾತ್ನಾಡ್ತೀರಿ? ಈ ನದಿ ಮೂವತ್ತು ಮೈಲು ಉದ್ದವಿದೆ. ಇದರಲ್ಲಿ ಯಾವ ಹೆಣ ಇಲ್ಲಿ ಬಂದು ಬಿತ್ತು? ಯಾವ ಹೆಣವನ್ನು ಯಾರು ತೆಗೆದ್ರೂಂತಾ ಯಾರಿಗ್ಗೊತ್ತು?

ಮೀನು ಹಿಡಿಯಲು ಬೀಸ್ದ ಬಲೆ ನದೀಲೇ ಕೊಚ್ಚಿಕೊಂಡುಹೋಯತಲ್ಲಪ್ಪೋಂತಾ ನಾನೇ ನೊಂದುಕೊಂಡು ಬಿದ್ದಿದ್ದೀನಿ. ಬೆಂದಹುಣ್ಣಮೇಲೆ ಬರೆ ಎಳಿತಿದ್ದೀರಲ್ಲಾ! ಮರ್ಯಾದೆಯಿಂದ ಎದ್ದು ಬೇರೆ ಊರಿಗೆ ಹೋಗಿ ವಿಚಾರಿಸಿ; ಹೋಗ್ ಹೋಗಿ”.

ಕೆಲವು ಸಮಯಗಳಲ್ಲಿ ಸುಳ್ಳು ತನ್ನನ್ನು ನಂಬಿಸುವ ಸಲುವಾಗಿ ಜೋರು ಸದ್ದನ್ನು ನೆರವಿಗೆ ಕರೆಯುತ್ತದೆ. ಅವರು ಹೊರಟು ಹೋದರು. ಹೊರಗೆ ಬಯಲಲಿ ಕಡುಗೆಂಪು ಸೀರೆ ಒಣಗುತ್ತಿದ್ದುದು ಅವರ ಕಣ್ಣಿಗೆ ಬೀಳಲಿಲ್ಲ.

ಮರುದಿವಸ ಬಿಕೋ ಅಂತಿದ್ದ ಮಟ ಮಟ ಮಧ್ಯಾಹ್ನದ ಹೊತ್ತು ಊರಿನ ಚಾ- ಅಂಗಡಿಯ ಮುಂದೆ ನಿಶ್ಶಬ್ದವಾಗಿ ಬಂದು ಒಂದು ಆಟೋ ನಿಲ್ಲುತ್ತಿದೆ. ಅದರೊಳಗೆ… ಅತ್ತು ಮುಖವೆಲ್ಲಾ ಊದಿರುವ ಒಬ್ಬ ಹೆಂಗಸು, ಶಾಲೆಗೆ ಹೋಗುವ ವಯಸ್ಸಿನ ಒಬ್ಬ ಹುಡುಗ, ಖಾದಿವಸ್ತ್ರ ಹಾಗೂ ಕನ್ನಡಕವನ್ನು ಧರಿಸಿದ ಒಬ್ಬ ವ್ಯಕ್ತಿ, ಒಟ್ಟು ಮೂವರು.

“ಕಾಡೈಯನ್ ತಾನೇ… ಮನೇನಾ ನಾನು ತೋರಿಸ್ತೀನಿ”
“ಮುಂದೆ ಕೂತ್ಕೋ ತಮ್ಮಾ”
“ನೀವು ಯಾತಕ್ಕೆ ಬಂದಿದ್ದೀರಿ….. ನನಗೆಲ್ಲಾ ಗೊತ್ತುಂಟು.”
“ಹೇಗೆ ಗೊತ್ತು?”
“ಇಡೀ ಊರಿಗೆಲ್ಲಾ ಸುದ್ದಿ ಹೇಳಿದ್ದು ನಾನೇ ಅಲ್ಲವೇ!”
“ನಂಬಬಹುದೇ ತಮ್ಮಾ?”- ಆ ಹೆಂಗಸು ಗೊಳೋ ಎಂದು ಅಳುತ್ತಲೇ, ಗೋಗರೆಯುತ್ತಲೇ ಕೇಳುತ್ತಿದ್ದಾಳೆ.
“ನಂಬಬಹುದು. ನೀವು ಬರಿಗೈಲಿ ಹೋಗೋಲ್ಲ. ಅಗೋ ಅಲ್ಲಿ ಕಾಣ್ತಾ ಇದಿಯಲ್ಲಾ ಬೇವಿನ ಮರ….. ಅದೇ ಕಾಡೈಯನ್‌ನ ಮನೆ”
“ನೀ ಚೆನ್ನಾಗಿರಪ್ಪಾ” ನಿನ್ನ ಹೆಸರು ಏನು ತಮ್ಮಾ?
“ವಾತ್ತುರಾಮನ್”

*****

ನಿನ್ನೆ ಅತ್ತೆ ಮಾವ ಕುಳಿತಿದ್ದ ಅದೇ ಜಗಲಿ ಮೇಲೆ ಕುಳಿತುಕೊಳ್ಳುತ್ತಿದ್ದಾರೆ ಆ ಮೂರು ಜೀವಗಳು.
ಮೂವರನ್ನೂ ಸೂಕ್ಷ್ಮವಾಗಿ ದಿಟ್ಟಿಸಿ ನೋಡುತ್ತಾನೆ ಕಾಡೈಯನ್. ಆ ಹುಡುಗನನ್ನು ನೋಡಿದ ಕೂಡಲೇ ಅರ್ಥ ಆಗಿ ಬಿಡ್ತು ಅವನಿಗೆ ಹೂಳಿದ ಹೆಣಕ್ಕೆ ಗಂಡು ವೇಷ ತೊಡಿಸಿದಂತೆ ಇದ್ದಾನೆ ಆ ಹುಡುಗ.

ಹೆಣದ ತಮ್ಮನಿರಬೇಕು; ಕಣ್ಣು ಬಾತುಕೊಂಡು ಬಂದಿರುವ ಈರ್ವರು ತಾಯಿ-ತಂದೆ ಹೌದು.

ಧಡಾರನೆ ಅವನ ಕಾಲಿಗೆ ಬಿದ್ದು ಗಟ್ಟಿಯಾಗಿ ಹಿಡಿದುಕೊಂಡು ಬಿಕ್ಕಿ ಬಿಕ್ಕಿ ಅಳುತ್ತಿದ್ದಾಳೆ ಆ ಹೆಂಗಸು.
“ನಿನ್ನನ್ನು ದೇವರೂಂತಾ ತಿಳ್ಕೊಂಡು ಕೇಳ್ತೀವಿ ತಮ್ಮಾ ಎಲ್ಲಪ್ಪಾ ನನ್ಮಗಳು? ಒಂದು ಇರುವೆ ಗಿರುವೆ ಕೂಡ ಸುಳಿದಂಗ ಸಾಕಿದ ಬಂಗಾರ ಕಣಪ್ಪಾ ನನ್ಮಗು. ನಮ್ಮ ಬದುಕನ್ನೇ ಮಾರಿ ಅವಳಿಗೆ ಮದುವೆ ಮಾಡಿದೆವು. ಕೊನೇಲಿ ಅನಾಥ ಹೆಣವಾಗಿ ಹೋದಳಲ್ಲಾ! ನನ್ನ ಬಸಿರಲ್ಲಿ ಬೆಳೆದ ರಾಣಿ . ಏಳೋಲ್ಲಾಪ್ಪಾ ಮಗನೇ. ನನ್ನ ಮಗಳನ್ನು ನನಗೆ ಕೊಟ್ಬಿಡು. ಅವಳ ಕಿವೀಲೀ, ಮೂಗಲಿ, ಕೊರಳಲಿ ಇದ್ದುದನ್ನು ನೀನೇ ಇಟ್ಕೋ ಕಣೋಪ್ಪಾ. ಅವಳ್ನ ದಹನ ಮಾಡಿದ್ಯೋ, ಹೂತ್ಯೋ ಆ ಜಾಗವನ್ನು ಮಾತ್ರ ತೋರಿಸು. ಅಲ್ಲೇ ನಾನ್ ಸತ್ತು ನನ್ನ ಜನ್ಮವನ್ನು ಕಳಕೊಳ್ತೀನಿ.”

ಕರುಳು ಕಿವುಚಿದ ಹಾಗಾಯಿತು ಕಾಡೈಯನ್‌ನ ಮನದೊಳಗೆ
ಹೋರಾಟ ನಡೆಯುತ್ತಿದೆ.

“ವೈಗೈ ಮಾತೆ ಕೊಟ್ಟಳು ಅಂತಾ ತಿಳ್ಕೊಂಡೆವು; ಹೆತ್ತ ತಾಯಿ ಕೇಳ್ತಾ ಇದ್ದಾಳಲ್ಲಾ” ಕೊಡಲೇ ಬೇಕೇನು… ಇಲ್ಲದಿದ್ರೆ ನಿನ್ನೆ ಥರಾನೆ ಗಟ್ಟಿಯಾಗಿ ‘ಕಿರುಚಿ’ ಸತ್ಯವನ್ನು ಮರೆಮಾಚಿ ತೆಗೆದುಕೊಂಡ ವಸ್ತುವನ್ನು ಉಳಿಸ್ಕೊಂಡು ಬಿಡೋಣ್ವಾ? ಇಂಥಾ ಹೆಣಾ ಎಲ್ಲಾದ್ರೂ ಬರುವುದುಂಟೇ? ಸಿಗುವುದುಂಟೇ? ಬಂದರೂ ಚಿನ್ನದೊಂದಿಗೆ ಬರುತ್ಯೆ? ಎರಡು ದಿವಸಕ್ಕೆ ಮುಂಚೆ ಅಂಗಾಳ ಈಶ್ವರಿ ಕೊಟ್ಟದ್ದನ್ನು ತಾಯಿ ಬಂದು ಕಸೀತಿದ್ದಾಳಲ್ಲಾ! ಕಾಡೈಯನ್! ಜೋರಾಗಿ ಕಿರುಚು. ಪಾಪದ ಜನ ಓಡಿಹೋಗುತ್ತಾರೆ. ಮ್.. ಕಿರುಚು.. ಅರಚು… ಹೊರಡ್ತಾ ಇಲ್ವಲ್ಲಾ! ಸದ್ದೇ ಹೊರಡ್ತಾ ಇಲ್ವಲ್ಲಾ! ಹೃದಯ ಅಡ್ಡಿ ಮಾಡ್ತಾ ಇದಿಯಲ್ಲಾ! ನಿನ್ನೆ ಇದ್ದಂತಹ ಧೈರ್ಯ ಇಂದೇಕೆ ಇಲ್ಲದೆ ಹೋಯಿತು? ನಿನ್ನೆ ಬಂದಂತಹವರು ಅತ್ತೆ ಮಾವ. ಸ್ವತ್ತನ್ನು ಅರಸಿ ಬಂದವರು. ಅವರ ಉದ್ದೇಶವೆಲ್ಲ ಐಶ್ವರ್ಯ, ಒಡವೆ ಮಾತ್ರ. ಈಗ ಬಂದಿರೋವ್ರು ಹೆತ್ತವರು ಒಡವೆ, ಆಸ್ತಿಯನ್ನು ಅರಸಿ ಬಂದಿಲ್ಲ; ಬಾಂಧವ್ಯವನ್ನರಸಿ ಬಂದು ಅಳುತ್ತಿದ್ದಾರೆ. ಬೇಡ ಕಣೋ ಕಾಡೈಯನ್….. ಹೆಣದ ಒಡವೆ ಕಸಿದೆ; ಪಾಪವಿಲ್ಲ. ಹೆಣದಿಂದ ತಾಯಿಯನ್ನು ಕಸಿಯಬೇಡ. . . ಹೋಗ್- ಹೋಗೋ ಹೋಗಿ ತೆಗೆದು ಕೊಟ್ಬಿಡೋ ನಾಚಿಗ್ಗೆಟ್ಟವನೇ”
ಅವನನ್ನು ಮನಸಾಕ್ಷಿ ಚುಚ್ಚಿ, ಹಿಂಸಿಸಿ ಕೊರೆಯುತ್ತಿದೆ.

ಕಾಡೈಯನ್ ಸರಸರನೆ ಮನೆಯೊಳಕ್ಕೆ ಧಾವಿಸಿದ. ಹೆಂಡತಿ ಉಟ್ಟು ಮಲಗಿದ್ದಳು ಹೆಣದ ಕೆಂಪು ಸೀರೆಯನ್ನು. ಅದನ್ನು ಸರಕ್ಕನೆ ಸೆಳೆದುಕೊಂಡು ಒಡವೆಗಳನ್ನೆಲ್ಲಾ ಅದರಲ್ಲಿ ಸುತ್ತಿದ. “ಏಯ್ ತಿಕ್ಕಲು ಗಂಡಸೇ! ಏನಯ್ಯಾ ಏನ್ ಮಾಡ್ತಿದ್ದೀಯಾ?” ಎಂದು ಅಡ್ಡ ಗಟ್ಟಿ ನಿಂತ ಹೆಂಡತಿಯನ್ನು ದೂಡಿ ಹೊರಗೆ ಬಂದನು.
“ಇಗೋ ತಾಯಿ… ಇದೇ ನಿನ್ನ ಮಗಳು”

ಹೆತ್ತವಳ ಕೈಯಲ್ಲಿ ಕೊಟ್ಟು ಕಣ್ಣನ್ನು ಒರಸಿಕೊಂಡನು.

ಆ ಸೀರೆಯನ್ನು ಮುಟ್ಟಿದ ಕೂಡಲೇ ಆ ತಾಯಿ ಕಿರುಚಿದ ಸದ್ದು ಇದೆಯಲ್ಲಾ….. ಕೇಳಿದ್ದರೆ ಗುಳಿಯಲ್ಲಿ ಬಿದ್ದಿದ್ದ ಹೆಣ ಹೊರಳಿ ಮಲಗಿ ತತ್ತರಿಸುತ್ತಿತ್ತು.

ಅಡಿ ಟಿಪ್ಪಣಿ: ಜಲ್ಲಿಕ್ಕಟ್ಟು—ತಮಿಳುನಾಡಿನ ಅತ್ಯಂತ ಪ್ರಾಚೀನ ವೀರ ಸಾಹಸವನ್ನು ಮೆರೆವ ಒಂದು ಕ್ರೀಡಾ ಪ್ರದರ್ಶನ ಈ ಸ್ಪರ್ಧೆಯಲ್ಲಿ ಗೂಳಿಯನ್ನು ಓಡಲು ಬಿಡುತ್ತಾರೆ. ಅದನ್ನು ಆ ಊರಿನ ವೀರರು ಅಡ್ಡಗಟ್ಟಿ ತಡೆದು ನಿಲ್ಲಿಸಿದರೆ ಮನುಷ್ಯನ ಗೆಲುವು. ಮುನುಷ್ಯನ ಕೈಗೇ ಸಿಗದೇ ಗೂಳಿ ಓಡಿ ಹೋದರೆ ಗೂಳಿಗೆ ಗೆಲುವು ಹಾಗೂ ಅದನ್ನು ಪಳಗಿಸಿ ಓಡಿಸಿದವನಿಗೆ ಲಾಭ ಮತ್ತು ಕೀರ್ತಿ.

ಡಾ. ವೈರಮುತ್ತು
ಪದ್ಮಭೂಷಣ್ ಡಾ. ವೈರಮುತ್ತುರವರು ಸಮಕಾಲೀನ ತಮಿಳುಸಾಹಿತ್ಯ ಲೋಕದಲ್ಲಿ ಪ್ರಖ್ಯಾತರಾದವರು. ಅವರ ಸಾಹಿತ್ಯಕ ಕೊಡುಗೆಗಾಗಿ ಪದ್ಮಶ್ರೀ ಮತ್ತು ಪದ್ಮಭೂಷಣ್ ಪ್ರಶಸ್ತಿ ಹಾಗೂ ಅವರ ಕಳ್ಳಿಕ್ಕಾಟ್ಟು ಇದಿಹಾಸಂ ಎಂಬ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ. ಭಾರತದ ಶ್ರೇಷ್ಠ ಗೀತೆರಚನಾಕಾರರೆಂದು ಏಳು ಬಾರಿ ರಾಷ್ಟ್ರಪ್ರಶಸ್ತಿ ಹಾಗೂ ತಮಿಳಿನ ಅತ್ಯುತ್ತಮ ಗೀತೆರಚನಾಕಾರರೆಂದು ಆರು ಬಾರಿ ರಾಜ್ಯಪ್ರಶಸ್ತಿಯನ್ನೂ ಪಡೆದಿದ್ದಾರೆ. ಒಟ್ಟು 8000 ಚಲನಚಿತ್ರಗೀತೆಗಳನ್ನು ರಚಿಸಿದ್ದಾರೆ. ಇವರ ಇತ್ತೀಚಿನ ಕೃತಿಗಳು- ಆಯಿರಂ ಪಾಡಲ್‍ಗಳ್,(ಸಾವಿರ ಚಲನಚಿತ್ರಗೀತೆಗಳು) ಮೂನ್ರಾಮ್ ಉಲಗ ಪೋರ್(ಮೂರನೆಯ ಜಾಗತಿಕ ಸಮರ-ಪರಿಸರವನ್ನು ರಕ್ಷಿಸದಿದ್ದರೆ ಪ್ರಕೃತಿಗೂ ಮನುಷ್ಯರಿಗೂ ನಡೆಯುವ ಸಮರ) ಹೀಗೆ ಒಟ್ಟು ೪ ೦ ಸಾಹಿತ್ಯಕ ಕೃತಿಗಳು ಹಾಗೂ 600 ಕವಿತೆಗಳ ಮೂಲಕ ಅನನ್ಯ ಕಲ್ಪನಾ ಪ್ರತಿಭೆಯಿಂದ ಸಾಹಿತ್ಯಲೋಕದಲ್ಲಿ ಮಿಂಚುತ್ತಿದ್ದಾರೆ.
ಕವಿಪೇರರಸು ಶ್ರೀ ವೈರಮುತ್ತು ಅವರ ಹೆಸರು ಪ್ರತಿದಿನವೂ 8 ಕೋಟಿ ತಮಿಳರ ನಾಲಗೆಯಲ್ಲಿ ನಲಿದಾಡುತ್ತಿದೆ. ಸಾಹಿತ್ಯದಲ್ಲಿ ಅನನ್ಯತೆ ಹಾಗೂ ವಿಶ್ವ ಮಟ್ಟದಲ್ಲಿ ಪ್ರಗತಿಪರ ಚಿಂತಕರಾಗಿ ಅದ್ವೀತಿಯ ದೃಷ್ಟಿಕೋನಗಳಿಂದಲೂ ನವಚೈತನ್ಯದಿಂದಲೂ ಸಾಹಿತ್ಯ ಲೋಕದಲ್ಲಿ ವಿಹರಿಸುತ್ತಿದ್ದಾರೆ.