ಹಳ್ಳಿಗೆ ಹೋಗಿ ಹೀಗಾಯಿತು ಎಂದು ಹೇಳಿದರೆ ನನ್ನ ಕನಸು ನನ್ನ ದುಃಖ ಅವರಿಗೆ ಅರ್ಥವಾಗುತ್ತಿರಲಿಲ್ಲ. ಯಾರಿಗೂ ಹೇಳಿಕೊಳ್ಳಲು ಆಗುತ್ತಿರಲಿಲ್ಲ. ಹೇಳಿಕೊಂಡರೆ ನಗುತ್ತಿದ್ದರು. ಜುಜುಬಿ ಫೋಕ್‌ಲೋರ್ ಓದ್ಬುಟ್ಟು ಇಷ್ಟೆಲ್ಲಾ ಬಿಲ್ಡಪ್ ಕೊಡ್ತಿಯಲ್ಲಾ. ನಿನ್ನ ರೇಂಜ್ ಏನಿದೆಯೊ ಅದ್ನೇ ಮೆಯಿಂಟೇನ್ ಮಾಡು ಎಂದಿದ್ದರು ಗೆಳೆಯರು. ನಿಜವಿತ್ತು. ನಾನೇನು ಮಹಾ ತಿಳಿದವನಾಗಿರಲಿಲ್ಲ. ಅವೆಲ್ಲ ಈ ವ್ಯವಸ್ಥೆಯ ಬಲೆಯಿಂದ ತಪ್ಪಿಸಿಕೊಂಡು ಕಣ್ಮರೆಯಾಗಿ ಎಲ್ಲೊ ಹೋಗಿ ಅನಾಥನೇ ಆಗಿ ಬದುಕಲು ಹೂಡುತ್ತಿದ್ದ ವಿಕಟ ವಿನೋದ ದುರಂತ ನಾಟಕ. ಕೆ.ಆರ್.ಮಾರ್ಕೆಟಲ್ಲಿ ಹೋಗಿ ಮೂಟೆ ಹೊತ್ತು ಸಂಸಾರ ನಡೆಸಲು ಇಲ್ಲಿ ತನಕ ಹೋರಾಡಿ ಬರಬೇಕಿತ್ತೇ…
ಮೊಗಳ್ಳಿ ಗಣೇಶ್ ಬರೆಯುವ “ನನ್ನ ಅನಂತ ಅಸ್ಪೃಶ್ಯ ಆಕಾಶ” ಆತ್ಮಕತೆ ಸರಣಿಯ 36ನೇ ಕಂತು
ತನ್ನ ಅಕ್ಕನ ಮಗಳ ಮದುವೆ ಆಗಲು ಮಾತು ಕೊಟ್ಟು ಬಂದಿದ್ದಾನೆಂಬ ಸುದ್ದಿ ದೇಮಯ್ಯನಿಂದ ಹಲವರಿಗೆ ಗೊತ್ತಾಯಿತು. ಮಿಶ್ರ ಅಭಿಪ್ರಾಯ. ಕೆಲ ಹುಡುಗಿಯರು ಕೇಳಿ ಬೇಜಾರು ಮಾಡಿಕೊಂಡರು. ಒಬ್ಬ ಚಾಮುಂಡಿ ಇದ್ದಳು. ತಮಿಳು ಮೂಲದವಳು. ಮುದ್ದೋ ಮುದ್ದು; ಆದರೆ ಕಡುಕಪ್ಪು ಕಂದುನೀಲಿ ಇಷ್ಟಗಲ ಬಣ್ಣಗಳು ಬೆರೆತಿದ್ದವು. ‘ನಾನು ನಿನಗಾಗಿ ಕಾಯ್ತಾ ಇದ್ರೆ… ನನ್ಗೇ ಕೈ ಕೊಟ್ಬುಟ್ಟಾ’ ಎಂದಳು. ‘ಕೈ ಕೊಟ್ಟು ಇಲ್ಲ; ಮನಸೂ ಕೊಟ್ಟಿಲ್ಲ… ಅದೆಂಗಾಗುತ್ತೆ…’ ಎಂದೆ. ‘ಆಯ್ತು; ಮದುವೆ ಆಗೊ ತನಕನಾದರೂ ನನ್ನ ಜೊತೆಗಿರು’ ಎಂದಳು. ‘ಆಗಲ್ಲ ಕಪ್ಪು ವಜ್ರವೇ… ನಿನಗೆ ಬೇಕಾದರೆ ಹಣೆಗೆ ಮುತ್ತಿಡುವೆ… ಮುಂದುವರಿದರೆ ನನ್ನ ಶೋಭಳಿಗೆ ಗೊತ್ತಾಗಿಬಿಡುತ್ತದೆ’ ಎಂದು ತಮಾಷೆಯಲ್ಲೆ ಅವಳ ಪಕ್ಕ ಸರಿಸಿದ್ದೆ. ಆದರೆ; ಆ ಪಾಪಿ ಪಿಂಡ ಪ್ರೇತ ಪ್ರಾಧ್ಯಾಪಕನೊಬ್ಬ ಬೇರೆ ಆರೋಪ ಮಾಡಿದ್ದ. ‘ಇಲ್ಲಿ ಮಜಾಮಾಡೋಕೆ ನಾಲ್ಕಾರು ಹೆಣ್ಣು; ಅಲ್ಲಿ ಮದುವೆ ಆಗೋಕೆ ಅಕ್ಕನ ಮಗಳು. ಇಂತಹ ನೀಚರಿಗೆ ತಕ್ಕ ಶಿಕ್ಷೆಯಾಗಬೇಕು’ ಎಂದು ಗಾಸಿಪ್ ಮಾಡಿದ್ದ. ‘ನನಗೆ ಮೋಸ ಮಾಡಿದ್ದಾನೆ ಎಂದು ಒಂದು ಅರ್ಜಿ ಬರೆದು ಕೊಡಮ್ಮ’ ಎಂದು ಸಂಚು ಮಾಡಿದ್ದರು. ಆಕೆ ಚಾಮುಂಡಿ ಒಪ್ಪಿರಲಿಲ್ಲ. ‘ನಂದು ಅವಂದು ನಮ್ಮ ಪರ್ಸನಲ್ ಮ್ಯಾಟರ್. ನೀವ್ಯಾಕೆ ಇಂಗೆ ಮಾಡ್ತಿರಿ. ಅವನು ನನಗೆ ಇಷ್ಟ. ಅವನು ತಪ್ಪು ಮಾಡಿಲ್ಲ’ ಎಂದು ತಿರುಗಿ ಬಿದ್ದ ಮೇಲೆ ನನ್ನ ಮದುವೆ ವಿಷಯವನ್ನು ಬಿಟ್ಟಿದ್ದರು. ‘ಇವನು ಮದುವೆಗೆ ಹೋಗ್ತಾನೊ; ಮಸಣಕ್ಕೆ ಹೋಗ್ತಾನೊ… ಜೈಲಿಗೆ ಹೋಗ್ತಾನೊ… ಯಾರಿಗೆ ಗೊತ್ತು? ಹಾಳಾಗಿ ಹೋಗ್ಲಿ ಬಿಡಿ’ ಎಂದಿದ್ದರು ಅವರವರೆ.
ಏನೊ ಕೊಂಚ ನಿರಾಳತೆ. ಮದುವೆ ಆದ ಮೇಲೆ ಮೈಸೂರ ಯಾವ ಏರಿಯಾದಲ್ಲಿ ಮನೆ ಮಾಡಬೇಕೂ ಎಂದು ಲೆಕ್ಕ ಹಾಕುತಿದ್ದೆ. ಅದು ಅಷ್ಟು ಸುಲಭ ಆಗಿರಲಿಲ್ಲ. ಕ್ರಾಂತಿಕಾರಿ ವೇಷ ಹಾಕಿ ನಮ್ಮಂತವರಿಗೇ ಟೋಪಿ ಹಾಕಿಬಿಟ್ಟ… ಹೋಗಿ ಹೋಗಿ ತನ್ನ ಜಾತಿಯಲ್ಲೇ ಸಂಪ್ರದಾಯವಾದಿಗಳಂತೆ ಮದುವೆ ಆಗುತ್ತಿದ್ದಾನೆಂದು ಬುದ್ಧಿಜೀವಿ ಬಳಗ ತನ್ನ ಅಸಮಾಧಾನವನ್ನು ಈ ನೆಪದಲ್ಲಿ ಹೊರಹಾಕಿತ್ತು. ʻನಮ್ಮ ಭಾಷಣಕ್ಕೆ ಚಪ್ಪಾಳೆ ಹೊಡೆಯುತ್ತಿದ್ದವನು ಇವತ್ತು ಲಂಕೇಶ್ ಜೊತೆ ವಿಸ್ಕಿ ಕುಡಿಯುವ ಹಂತಕ್ಕೆ ಹೊರಟು ಹೋದನೇʼ ಎಂದು ಯಾವತ್ತೂ ಗ್ಯಾಸ್‌ಟ್ರಬಲ್‌ನಿಂದ ಬಳಲುತ್ತಿದ್ದ ಕ್ರಾಂತಿಕಾರಿಗಳು ಕರುಳು ಕಿವಿಚಿಕೊಂಡು ಕಾನ್ಸ್ಟಿಪೇಷನ್‌ಗೆ… ಅಂದರೆ ಮಲಬದ್ಧತೆಗೆ ಒಳಗಾಗಿದ್ದರು. ನಾನವರಿಗೆ ಔಷಧಿ ಕೊಡುವಂತಿರಲಿಲ್ಲ. ಲಂಕೇಶರು ಕೇಳಿಸಿಕೊಂಡು ನಿರ್ಲಕ್ಷಿಸಿದ್ದರು. ತೆಪ್ಪ ತೇಲುತಿತ್ತು. ಆರೋಪಗಳ ಬಿರುಗಾಳಿ ಯಾವ ದಿಕ್ಕಿಂದ ಧುತ್ತೆಂದು ಅಪ್ಪಳಿಸಿ ಬರುತ್ತದೊ ಎಂದು ಮುನ್ನೆಚ್ಚರಿಕೆ ವಹಿಸುತ್ತಿದ್ದೆ. ಯಾಕೊ ಎದೆ ಭಾರವಾಯಿತು. ಮೆಲ್ಲಗೆ ಆತ್ಮ ಕರೆಯಿತು. ‘ಏನು’ ಎಂದೆ. ಮದುವೆ ಆಗ್ತಿದ್ದೀಯೇ. ಸಂತೋಷ ಅಲ್ಲವೇ ಎದೆ ತುಂಬ ನಿನ್ನವಳೆ ಆವರಿಸಿ ಬಿಟ್ಟಿದ್ದಾಳೇ. ನಾನು ನಿನಗೆ ನೆನಪೇ ಇಲ್ಲವಲ್ಲಾ… ಸಂಸಾರ ಎಂದರೆ ಏನು ಹೇಳು’ ಎಂದು ಕೇಳಿತು. ಈಗ ಯಾಕೆ ಅದರ ಸಮಾಚಾರ… ನನ್ನವಳ ಕಾಳಜಿ ನನಗೆ ಇಲ್ಲವೇ… ನಮ್ಮ ವಂಶದಲ್ಲಿ ಎಷ್ಟೊಂದು ಸಂಸಾರಗಳ ಕಂಡಿರುವೇ… ಅವೆಲ್ಲ ರಕ್ತಸಿಕ್ತವಾಗಿ ಉರುಳಾಡಿ ಸತ್ತಿರುವುದ ಕಂಡಿರುವೆ. ಆ ಭಯದ ವಿಚಾರಗಳ ಎತ್ತಬೇಡ ಬಿಡು. ಈ ರಾತ್ರಿಯಾದರೂ ಒಂದಿಷ್ಟು ನೆಮ್ಮದಿಯಿಂದ ನಿದ್ದೆ ಮಾಡುವೆ ಬಿಡೊ…’ ‘ಸುಂದರ ಆದರ್ಶ ಸಂಸಾರ ಬೇಕಲ್ಲವೆ ನಿನಗೇ.’ ‘ಹೌದು; ಇನ್ನೇನು ಕಿತ್ತೋಗಿ ತ್ಯಾಪೆ ಹಾಕಳೊ ಸಂಸಾರ ಬೇಕು ಅಂತೀನಾ.’ ‘ಅದು ಅಷ್ಟು ಸುಲಭ ಅಲ್ಲಪ್ಪಾ… ಮುಕ್ಕಿರ್ದೋಯ್ತಿಯೇ’. ‘ಆಗ್ಲಿಬಿಡೂ… ಅದ್ನೂ ನೋಡೇ ಬಿಡ್ತಿನಿ.’ ‘ ಅನ್ಕಂದಸ್ಟು ಸುಲ್ಬ ಅಲ್ಲ ನಿನ್ನಂತೋರ್ಗೆ’. ‘ಯಾಕೇ…’, ‘ಯಾಕೆ ಅಂದ್ರೆ ಆಪಾಟಿ ಬಂದು ಬಳಗ ದಂಡು ದಾಳಿ ಹಿಂದೆ ಮುಂದೆ ಆಳು ಕಾಳು ಎಲ್ಲ ನಿನ್ನ ಬಲಬಾಗುಕ್ಕೆ ಇದ್ದವೇನಪ್ಪಾ…’. ‘ಅಯ್ಯೋ ಹೋಗ್ಲಿ ಬಿಡಪ್ಪಾ ಅತ್ತಾಗಿ ಯಾವ್ದೊ ಗಾಡಿ ವಡ್ಕಂದೊಂಟೋಯ್ತು ಅಂತ ಅಲ್ಲೆ ಪಟ್ಟಂತ ಪರಾಣ ಬಿಡ್ತೀನಿ’. ‘ಹೂಂ; ಇಂತೆ ಮಾತೆಲೆಲ್ಲ ನೀನು ರುಸ್ತುಮ. ಬತ್ತದೆ ಇರೂ ಬರಸಿಡ್ಲು’ ಎಂದು ಹೇಳಿದ ಆತ್ಮ ಅತ್ತ ಮುದುರಿಕೊಂಡಿತು. ಅಂತಹ ಬೆಳಕಲ್ಲಿ ಸಾಯಲು ಪುಣ್ಯ ಬೇಕು ಎನಿಸಿತು.
ನಟ್ಟನಡು ರಾತ್ರಿ. ಶೋಭ ಎದ್ದು ಎದೆಯ ಮೇಲೆ ಕೂತಿದ್ದಳು. ಕೆರೆಯ ತಾವರೆ ಹೂಗಳ ಕಿತ್ತು ಕೊಟ್ಟು ಕೈ ಹಿಡಿದು ಏರಿ ಮೇಲೆ ಕೂತು ಈ ವಿಶ್ವ ವಿಕಾಸದ ಕತೆ ಹೇಳುತ್ತಿದ್ದೆ. ಅವಳ ವಿಸ್ಮಯ ಕಣ್ಣುಗಳಲ್ಲಿ ಲೋಕವೇ ಒಮ್ಮೆ ಬೆಳಗಿದಂತೆ ಕಂಡಿತ್ತು. ಪ್ರಾಯದ ಎದೆಯ ಮೊಗ್ಗಿನ ಕನಸುಗಳೇ ಹಾಗೆ! ಏನೇನೊ ಹರೆಯದ ಪಿಸುಗನಸು. ಸನ್ಯಾಸಿ ಭಾವ ಎಲ್ಲಿ ಹೋಯಿತು ಆತ್ಮವೇ ಎಂದು ಕೇಳಿದೆ. ಮದುವೆ ಆಗು ಮೊದಲು. ಆಮೇಲೆ ಅದೇ ನಿನ್ನನ್ನು ಹುಡುಕಿಕೊಂಡು ಬರುತ್ತದೆ ಎಂದಿತು. ಸುಂದರ ಸ್ವಪ್ನಗಳಲ್ಲೆ ದುಃಸ್ವಪ್ನಗಳು ನುಗ್ಗಿ ಬಂದು ಬಿಡುತ್ತವಲ್ಲಾ ಯಾಕೆ… ಯೋಚಿಸುತ್ತಿದ್ದೆ. ಉತ್ತರ ಹೊಳೆಯಲಿಲ್ಲ. ‘ಅದು ಆಪತ್ತು… ಇನ್ನಾವುದೊ ಸ್ಥಿತಿಯ ಬಾಗಿಲು’ ಎಂದಿತು ಆತ್ಮ. ‘ಬಾಗಿಲು ಹೇಗಾಗುತ್ತೆ?’ ‘ಬದುಕಿನಲ್ಲಿ ಒಂದು ಬಾಗಿಲು ಮುಚ್ಚಿಕೊಂಡಾಗ ಇನ್ನೊಂದು ಯಾವುದಾದರು ಬಾಗಿಲು ತೆರಕೊಳ್ಳಬೇಕಲ್ಲಪ್ಪಾ… ಅದು ಸೃಷ್ಟಿಯ ನಿಯಮ. ದುಃಸ್ವಪ್ನಗಳು ಇನ್ನೂ ಮುಂದೆ ಮುಂದೆ ಮದುವೆ ಆಗಿ ಮಕ್ಕಳಾಗಿ; ಮಕ್ಕಳಿಗೆ ಮಕ್ಕಳಾಗಿ ನೀನು ಸಾಯುವ ಕೊನೆಯ ರಾತ್ರಿಗೂ ದುಃಸ್ವಪ್ನ ಬರ್ತನೇ ಇರ್ತವೆ. ಆದ್ರೆ ಕೊನೇ ದುಃಸ್ವಪ್ನವ ಹೇಳಲು ಆಗ ನಿನಗೆ ಎಚ್ಚರವೇ ಇರೋದಿಲ್ಲ. ಆದರೆ ಆ ದುಃಸ್ವಪ್ನಗಳು ಮಾನವನ ಪಾಡಾಗಿ ತಲೆಮಾರಿನಿಂದ ತಲೆಮಾರಿಗೆ ಸಾಗಿ ಬರುತ್ತವೆ.’ ‘ಇಷ್ಟೆಲ್ಲ ದೊಡ್ಡ ಪುರಾಣ ಯಾಕಪ್ಪಾ. ಮುಟ್ವಾಗಿ ಚುಟುಕಾಗಿ ಹೇಳು. ದುಃಸ್ವಪ್ನಗಳು ಹೇಗೆ ಬಾಗಿಲು?’ ಮಗ್ಗಲು ಬದಲಿಸಿದೆ. ನಿದ್ದೆಯೊ ಭ್ರಮೆಯೊ ಅರೆನಿದ್ದೆಯೊ ಅರೆ ಸಾವೊ ಎಂದು ಕೇಳಿಕೊಂಡೆ. ಛೇ; ಕೋಮಲ ಅಕ್ಕನ ಮಗಳಿಗೆ ತಾನು ತಕ್ಕ ಗಂಡನಾಗುವೆನೇ… ಅಲ್ಲಿ ಆ ಮದುವೆ ಮನೆಯಲ್ಲಿ ಏನು ಮಾಯೆ ಕವಿದಿತ್ತು… ಈ ಕ್ಷಣವೇ ಇವಳನ್ನು ಈ ದುಃಖದಿಂದ ಪಾರು ಮಾಡಬೇಕು ಎಂಬ ಅಂತಃಕರಣ ಅಷ್ಟೇ ತಾನೆ ಅಲ್ಲಿದ್ದದ್ದು… ಅದು ಪ್ರೇಮ ಮೋಹ ಕಾಮ ಆಗಿರಲಿಲ್ಲ. ಮುಂದೆ ಬಂದು ಮದುವೆ ಆಗುವೆ ಎಂದು ಬಾಯಿಂದ ನುಡಿಸಿದ್ದು ನನ್ನ ನೆರಳೇ; ನನ್ನ ತಾಯ ಕರುಳೇ ಎಂದುಕೊಂಡೆ. ಉತ್ತರ ಹೊಳೆಯಲಿಲ್ಲ.
ಹದಿನೈದು ದಿನ ತುಂಬಿದ್ದವು. ನೀನು ಸಿಲಬಸ್ ಕವರ್ ಮಾಡಿಲ್ಲ. ರಜೆ ಕೊಡಲು ಸಾಧ್ಯವಿಲ್ಲ ಎಂದರು. ಮುದ್ದು ಮಡದಿಗೆ ಒಂದು ಪ್ರೇಮ ಪತ್ರ ಎಂದು ಬರೆದು ಕಳಿಸಿದೆ. ಶೋಭ ಅದನ್ನು ಈಗಲೂ ಇಟ್ಟುಕೊಂಡಿದ್ದಾಳೆ. ಓದಲು ಕನ್ನಡದ ಶ್ರೇಷ್ಠ ಕಥೆಗಳ ಸಂಕಲನಗಳ ಕಳಿಸಿಕೊಟ್ಟಿದ್ದೆ. ಉನ್ನತವಾಗಿಯೆ ಓದಿರುತ್ತಿದ್ದಳು. ನನ್ನ ಮಾವ ಬಂದಿದ್ದರು. ಶೋಭ, ‘ಕರ್ಕಂಡು ಬರೋಗಪ್ಪ’ ಎಂದು ತನ್ನ ತಂದೆಯನ್ನೆ ಕಳಿಸಿದ್ದಳು. ಶನಿವಾರ ಭಾನುವಾರ ಬಿಡುವು ಮಾಡಿಕೊಂಡು ಹೋಗಿ ಬಂದಿದ್ದೆ. ಅದನ್ನು ಅತ್ತ ಬಿಟ್ಟು ಇಲ್ಲೆ ನನ್ನ ಜೊತೆಯೇ ಯಾವತ್ತೂ ಏನಾದರೂ ಮಾತಾಡುತ್ತ ಇರು ಎನ್ನುತ್ತಿದ್ದಳು. ಮದುವೆ ಆದಮೇಲೆ ಅದೆ ತಾನೆ ಕೆಲಸ; ತಾಳು ಎಂದು ಹಿಂತಿರುಗಿದ್ದೆ. ಅಕ್ಕ ಬಹಳ ಫಾಸ್ಟ್. ‘ಅಯ್ಯೋ ಆ ಮದುವೆ ಶಾಸ್ತ್ರ ಅತ್ತಾಗಿ ಇರ್ಲೀ… ನಿಂಜೊತೆಲೆ ಮೈಸೂರ್ಗೆ ಕರ್ಕಂಡೋಗಪ್ಪಾ… ಸದಾ ನಿನ್ನ ಕನವರಿಸ್ತನೇ ಇರ್ತಳೆ’ ಎಂದು ಅಕ್ಕ ಕಳಿಸಿಕೊಡಲು ತುದಿಗಾಲಲ್ಲಿ ಇದ್ದಳು. ಕರೆತಂದು ಇಲ್ಲಿ ಎಲ್ಲಿ ಮನೆ ಮಾಡುವುದು ಎಂಬ ವಿಷಯ ಬಂದಾಗ ಕಣ್ಣಿಗೆ ಬಟ್ಟೆ ಕಟ್ಟಿದಂತಾಗುತಿತ್ತು.
ಜನ ಅಕ್ಕನ ತಲೆ ಕೆಡಿಸಿದ್ದರು. ವಿಪರೀತ ವೋದ್ದೋರು ನಿಯತ್ತಾಗಿರುದಿಲ್ಲಾ. ಚಂಚಲವಾಗಿರ್ತಾರೆ… ಆಪಾಟಿ ಓದಿರುನು… ಹುಡ್ಗೀರ ಜೊತೆಲೇ ಇರ್ತಾನಂತೇ… ನೋಡವ್ವ… ಯಂಗ್ಮಾಡಿಯೊ ಏನೊ… ಅಲ್ಲೆ ಹಿಡ್ದು ತಾಳಿ ಕಟ್ಟಿಸ್ಬುಟ್ಟು ಜ್ಯೊತೆಗೇ ಕಳಿಸ್ಬುಡು. ಆಗ ಆದಾಗಿದ್ದದೇ ದಾರಿ ಕಂಡ್ಕತದೆ ಎಂದಿದ್ದರು. ಅಕ್ಕ ಪತ್ರ ಬರೆಸಿದ್ದಳು. ಅತ್ತ ಪರೀಕ್ಷೆ… ನೂರೆಂಟು ಕೆಲಸ. ಇತ್ತ ಪಿಎಚ್.ಡಿ ಆರು ತಿಂಗಳ ವರದಿ… ಸಾಲು ಸಾಲಾಗಿ ಬಂದವು. ಬೇಗ ಮುಗಿಸಿ ಬಿಡುವ ಎಂದು ತೊಡಗಿದೆ. ಅದೇ ವೇಳೆಗೆ ಅಮೆರಿಕಾದಿಂದ ಮೈಕೇಲ್ ಪತ್ರ ಬರೆದು ಅಪ್ಲಿಕೇಶನ್ ಕಳಿಸಿದ್ದ. ಇಂಗ್ಲೀಷಿನಲ್ಲಿ ಅತ್ಯುತ್ತಮವಾದ ಪ್ರಸ್ತಾವನೆಯನ್ನು ಬರೆದು ಸಲ್ಲಿಸಬೇಕಿತ್ತು.
ವಿಷಯ ಮುಖ್ಯವಾಗಿತ್ತು. ಅಂತರ ರಾಷ್ಟ್ರೀಯ ಮಟ್ಟದಲ್ಲಿ ಇರಬೇಕಿತ್ತು. ಅದು ನನಗೆ ಕಷ್ಟವೇ ಇರಲಿಲ್ಲ. ‘ಅಪಾರ್ಥಿಡ್ ಅಂಡ್ ಅನ್‌ಟಚಬಿಲಿಟಿ ಇನ್ ದಿ ಕಾಂಟೆಕ್ಸ್ಟ್ ಆಫ್ ಹ್ಯೂಮನ್ ರೈಟ್ಸ್’ ಎಂಬ ಈ ವಿಷಯ ಆಗ ಮುಖ್ಯವಾಗಿತ್ತು. ಎಷ್ಟು ಆಳವಾಗಿ ಪ್ರಸ್ತಾವನೆ ತಯಾರಿಸಿದ್ದೆ ಎಂದರೆ ಈ ಎರಡು ಮಾನವ ಸಮಸ್ಯೆಗಳ ಹುಟ್ಟು ಬೆಳವಣಿಗೆ ಹೇಗೆ ಸಾವಿರಾರು ವರ್ಷಗಳಿಂದ ಸಾಗಿ ಬಂದಿದೆ… ಕಾರಣ ಏನು… ಈ ವ್ಯಾಧಿಯ ಮೂಲ ಮಾನದಂಡಗಳ ಚಾರಿತ್ರಿಕತೆ ಏನು… ಮಾನವತ್ವದ ವಿಕಾಸದ ಯಾವ ಬಿಕ್ಕಟ್ಟಿನಿಂದ ಇದು ಹೊಸ ಹೊಸ ರೂಪಗಳಲ್ಲಿ ಬೆಳೆಯುತ್ತ ಬಂದಿದೆ ಎಂಬುದನ್ನು ವಿವರಿಸಿದ್ದೆ. ಖಂಡಿತ ನಿನಗೆ ಫೆಲೋಶಿಫ್ ಸಿಗುತ್ತದೆ ಎಂದು ಮೈಕೇಲ್ ಹೇಳಿದ್ದ. ಅದಕ್ಕೆ ಒಂದು ಮಟ್ಟದ ಬೌದ್ಧಿಕ ಲಾಭಿಯನ್ನೂ ಮಾಡಿದ್ದ. ನನ್ನ ಇಂಗ್ಲೀಷ್ ಸರಿ ಇದೆಯೊ ಇಲ್ಲವೊ ಎಂದು ಹಿರಿಯರೊಬ್ಬರಿಗೆ ತೋರಿಸಿದ್ದೆ. ಬೆನ್ನು ತಟ್ಟಿದ್ದರು. ಎಲ್ಲ ಸಿದ್ಧತೆ ಮಾಡಿಕೊಂಡು ಸಂಸ್ಥೆಯ ನಿರ್ದೇಶಕರ ಕಾಣಲು ಹೋದೆ. ಅವರು ಬೆಳಿಗ್ಗೆಯಿಂದ ಸಾಯಂಕಾಲದ ತನಕ ಕಾಯಿಸಿದರು. ಅನುಮಾನವಾಯಿತು. ಕಂಬನಿ ಬಂದು ಬಂದು ಆವಿಯಾಗುತ್ತಿದ್ದವು. ಕಣ್ಣುಗಳು ಕಾದು ಕಾದು ಉರಿಯುತ್ತಿದ್ದವು. ಅಪ್ಲಿಕೇಶನ್ ಅನ್ನು ವಿಶ್ವವಿದ್ಯಾಲಯದ ಮೂಲಕವೇ ಸಂಸ್ಥೆಯ ಶಿಫಾರಸ್ಸಿನಿಂದ ಕಳಿಸಬೇಕಿತ್ತು. ಇಲ್ಲದಿದ್ದರೆ ಅದು ಸ್ವೀಕಾರ ಆಗುತ್ತಿರಲಿಲ್ಲ. ಸತಾಯಿಸಿದ. ಐದು ಗಂಟೆ ಆಯಿತು. ಕಛೇರಿ ಬಾಗಿಲು ಹಾಕುತಿದ್ದರು. ನಾಳೆ ಬನ್ರೀ ನೋಡೋಣ ಎಂದ ಆ ಸಂಸ್ಥೆಯ ನಿರ್ದೇಶಕ. ಕೆಂಡದ ಲಾವ ಕುದಿಯುತ್ತಿತ್ತು.
ತಾಳ್ಮೆ ವಹಿಸಿ ಮರುದಿನ ಹೋದರೆ ರಜೆ ಹಾಕಿದ್ದ. ತಲೆ ಕೆಟ್ಟಿತು. ಯೂನಿವರ್ಸಿಟಿಯ ಹೈಯರ್ ಅಥಾರಿಟಿಯ ಕಂಡೆ. ಇಲ್ಲಾ… ಅಲ್ಲಿಂದಲೆ ಫಾರ್ವರ್ಡ್ ಆಗಬೇಕು ಎಂದರು. ಇನ್ನೂ ಎರಡು ದಿನ ತಡವಾಯಿತು. ನಿರ್ದೇಶಕರ ಕೊಠಡಿಯ ಒಳಕ್ಕೆ ನುಗ್ಗಿದೆ. ಜವಾನ ತಡೆದ. ನೂಕಿದೆ. ಅಲ್ಲಿ ಕಾಡು ಹರಟೆಯಲ್ಲಿ ಪಿಂಡ ಪ್ರೇತ ಪ್ರಾಧ್ಯಾಪಕರ ಜೊತೆ ಆ ನಿರ್ದೇಶಕ ಬೀಡಿ ಸೇದುತ್ತ; ಎಮ್ಮೆ ಹಾಲು ಹೀಗೆ ಹಿಂಡಬೇಕು ಎಂದು ಆ್ಯಕ್ಷನ್ ಮಾಡಿ ಹೇಳುತ್ತಿದ್ದ. ಅವರ ಮನೆಯಲ್ಲಿ ಸಾಕಷ್ಟು ಎಮ್ಮೆಗಳಿದ್ದವು. ಎಮ್ಮೆ ಸಾಕುವುದರಲ್ಲಾದರೂ ಇವನು ನಿಸ್ಸೀಮ ಎಂದು ಸಿಟ್ಟು ತಡೆದುಕೊಂಡು; ‘ಸಾರ್; ಪ್ಲೀಸ್ ಫಾರ್ವರ್ಡ್ ಮಾಡಿ. ಟೈಂ ಇಲ್ಲ. ಡೇಟ್ ಮುಗಿತಾ ಇದೆ’ ಎಂದು ವಿನಂತಿಸಿದೆ. ಒಂದೇ ಸಲಕ್ಕೆ ರೈಸ್ ಆದ. ‘ಹೇ, ಲೇ ಇವ್ನೇ… ಯಾಕೊ ಇವ್ನ ಒಳಗೆ ಬಿಟ್ಟೆ… ಬಾರೊ ಇಲ್ಲೀ; ಕಳ್ಸೋ ಆಚೆಗೆ ಇವನಾ’ ಎಂದು ಕರೆದರು. ‘ಏನ್ರೀ; ಕಾಮನ್‌ಸೆನ್ಸ್ ಇಲ್ಲವಾ… ಸೀರಿಯಸ್ ಮೀಟಿಂಗಲ್ಲಿ ನುಗ್ಗಿ ದಾಂದಲೆ ಮಾಡ್ತಿರಲ್ಲಾ… ಕರೆಸಬೇಕಾ ಪೋಲೀಸರ…’ ಎಂದರು ಉಳಿದ ಪಿರ್ಕಿ ಪ್ರಾಧ್ಯಾಪಕರು. ‘ಇಲ್ಲ ಸಾರ್… ಮೂರು ದಿನದಿಂದ ಕಾಯ್ತಿದ್ದೀನಿ ಒಂದು ಸಹಿಗಾಗಿ’ ಎಂದೆ. ‘ಹೇ… ಯಾರೊ ನಿನುಗೆ ಅಪ್ಲಿಕೇಶನ್ ಹಾಕು ಅಂತ ಹೇಳ್ದೋನೂ… ಏನವನು ಅಮೇರಿಕದ ಅಧ್ಯಕ್ಷ ರೊನ್ಯಾಲ್ಡ್ ರೇಗನ್ ಫೋನ್ ಮಾಡಿ ಹೇಳಿದ್ನೇನೊ… ಎತ್ಕಂದೋಗೊ ಆಚ್ಕೆ… ನಾನು ಸಹಿ ಮಾಡಲ್ಲ. ನಿನಗೆ ಯಾವ ಯೋಗ್ಯತೆ ಇದೆ ಅಂತಾ ಅರ್ಜಿ ಹಾಕ್ತಿದ್ದೀಯೇ… ಅಲ್ಲಿ ನಿನಗೆ ರಿಜ಼ರ್ವೇಶನ್ ಕೊಡುಕೆ ಅಲ್ಲೇನು ನಿಮ್ಮ ತಾತ ಇದ್ದಾನಾ… ನಿನ್ನಂತ ಚಿಲ್ರೆಗಳಿಗಲ್ಲ ನನ್ನ ಸಿಗ್ನೇಚರ್ ಇರೋದು… ನಡಿ ನಡೀ ಆಚೆಗೆ ನಡಿ’ ಎಂದು ಅವರೇ ಎದ್ದು ಬಂದು ಹೊರಕ್ಕೆ ತಳ್ಳಿದರು. ಹಿಂತಿರುಗಿ ತಳ್ಳಿದ್ದರೆ ಏನಾಗುತಿತ್ತೊ… ತಕ್ಷಣ ಬಂಧಿಸಿ ಬಿಡುತ್ತಿದ್ದರು. ಆ ಠಕ್ಕ ಜವಾನ ಎದೆ ನೀವಿಕೊಂಡು ಜೊಲ್ಲು ಸುರಿಸುತ್ತ ಕಾರಿಡಾರಿನ ಛೇರಿನ ಮೇಲೆ ಅಯ್ಯೋ ಪಾಪ ಎಂಬಂತೆ ಕೂತಿದ್ದ. ಅವನ ಎದೆಗೂಡಿಗೆ ಗುದ್ದಿದೆ.
ಕುಲಪತಿಗಳ ಕಚೇರಿಗೆ ಓಡಿ ಹೋದೆ. ದುರದೃಷ್ಟ… ಅವರು ರಜೆಯಲ್ಲಿದ್ದರು. ಇತರೆ ಅಧಿಕಾರಿಗಳ ಮುಂದೆ ಅತ್ತುಕೊಂಡು ಕೋರಿದೆ. ಇಲ್ಲಪ್ಪಾ… ಸಿಸ್ಟಮ್ ಈಸ್ ಎ ಸಿಸ್ಟಮ್. ಒವರ್ ಲ್ಯಾಪ್ ಮಾಡಲ್ಲ. ಅವರು ಫಾರ್ವರ್ಡ್ ಮಾಡಿದ್ರೆ ಮಾತ್ರ ಮುಂದಿನ ಡಿಸ್‌ಪ್ಯಾಚಿಂಗ್ ಮಾತು. ಆಗಲ್ಲ ಹೋಗಪ್ಪ’ ಎಂದುಬಿಟ್ಟರು. ಎಷ್ಟೊಂದು ಬಲ್ಲ ಮಹಾತ್ಮರಿದ್ದಾರೆ… ಆದರೆ ಅವರಾರೂ ಈ ಕ್ಷಣಕ್ಕೆ ನನ್ನ ಧಾವಂತಕ್ಕೆ ಎಟುಕುತ್ತಿಲ್ಲವಲ್ಲಾ ಎಂದು ಒಳಗೊಳಗೇ ರೋಧಿಸುತ್ತ ಕುಕ್ಕರಹಳ್ಳಿ ಕೆರೆಯ ಏರಿಯ ಕಾಲುದಾರಿಯ ಕಲ್ಲು ಬೆಂಚಿನಲ್ಲಿ ಕೂತು ಸಂಕಟ ಪಟ್ಟೆ. ಮುಗಂಡವಾಗಿ ನಾನೇ ಸಹಿ ಇಲ್ಲದೆ ಹೀಗಾಗಿದೆ ಎಂದು ವಿವರಿಸಿ ಅರ್ಜಿ ಕಳಿಸಲೇ ಎಂಬ ಹತಾಶೆಯ ಯೋಚನೆ ಬಂತು. ಇದೆಲ್ಲ ಆಗದು. ತಾಳ್ಮೆ ವಹಿಸು ಎಂದಿತು ಆತ್ಮ. ಕುಲಪತಿ ಬಂದಿದ್ದರು. ವಿಶ್ವಾಸ ಇತ್ತು. ನಡುಬಗ್ಗಿಸಿ ಕೈ ಮುಗಿದು ದೀನವಾಗಿ ಕೋರಿದೆ. ಈ ದೇಶವ ಒಮ್ಮೆ ಬಿಟ್ಟು ಹೋದರೆ ಸಾಕೂ… ಅನಂತರ ಅಲ್ಲೇ ನೆಲೆಸಿ ಹಕ್ಕಿಯಾಗಿ ಬಂದು ಹೆಗಲ ಮೇಲೆ ಹೆಂಡತಿಯ ಕೂರಿಸಿಕೊಂಡು ಮಾಯವಾಗಿಬಿಡಬಹುದು ಎಂಬ ಉತ್ಕಟ ಆಸೆಯಲ್ಲಿ ಪರದಾಡಿದೆ. ಯಾರ್ಯಾರನ್ನೋ ಬೇಡಿದೆ. ಯಾರೂ ಬಾಗಿಲು ತೆಗೆಯಲಿಲ್ಲ. ಈ ನರಕದಿಂದ ತಪ್ಪಿಸಿಕೊಳ್ಳಲು ಹೆಣಗಾಡುತಿದ್ದೆ. ಬಹುದೂರ ಅನಾಮಿಕ ಸಮಾಜದಲ್ಲಿ ಅನಾಮಿಕ ಚಹರೆಯಲ್ಲಿ ಮೂರು ಮಕ್ಕಳ ಹೆತ್ತುಕೊಂಡು; ಆ ಮಕ್ಕಳನ್ನಾದರೂ ನಾನು ಪಾರು ಮಾಡಬಹುದಲ್ಲಾ ಎಂದು ವಿಪರೀತ ಒತ್ತಡದಲ್ಲಿ ಕುಡಿದೆ. ಕುಡಿದರೆ ನನ್ನ ಸಮಸ್ಯೆ ಬಗೆಹರಿಯುತ್ತಿರಲಿಲ್ಲ. ಇನ್ನಷ್ಟು ಬಿಗಡಾಯಿಸುತ್ತವೆ ಎಂಬುದು ಗೊತ್ತಿತ್ತು. ಆ ಕಷ್ಟಕಾಲದಲ್ಲಿ ಕೈ ಹಿಡಿದು ನಡೆಸುವವರು ಯಾರೂ ಇರಲಿಲ್ಲ.
ಹಳ್ಳಿಗೆ ಹೋಗಿ ಹೀಗಾಯಿತು ಎಂದು ಹೇಳಿದರೆ ನನ್ನ ಕನಸು ನನ್ನ ದುಃಖ ಅವರಿಗೆ ಅರ್ಥವಾಗುತ್ತಿರಲಿಲ್ಲ. ಯಾರಿಗೂ ಹೇಳಿಕೊಳ್ಳಲು ಆಗುತ್ತಿರಲಿಲ್ಲ. ಹೇಳಿಕೊಂಡರೆ ನಗುತ್ತಿದ್ದರು. ಜುಜುಬಿ ಫೋಕ್‌ಲೋರ್ ಓದ್ಬುಟ್ಟು ಇಷ್ಟೆಲ್ಲಾ ಬಿಲ್ಡಪ್ ಕೊಡ್ತಿಯಲ್ಲಾ. ನಿನ್ನ ರೇಂಜ್ ಏನಿದೆಯೊ ಅದ್ನೇ ಮೆಯಿಂಟೇನ್ ಮಾಡು ಎಂದಿದ್ದರು ಗೆಳೆಯರು. ನಿಜವಿತ್ತು. ನಾನೇನು ಮಹಾ ತಿಳಿದವನಾಗಿರಲಿಲ್ಲ. ಅವೆಲ್ಲ ಈ ವ್ಯವಸ್ಥೆಯ ಬಲೆಯಿಂದ ತಪ್ಪಿಸಿಕೊಂಡು ಕಣ್ಮರೆಯಾಗಿ ಎಲ್ಲೊ ಹೋಗಿ ಅನಾಥನೇ ಆಗಿ ಬದುಕಲು ಹೂಡುತ್ತಿದ್ದ ವಿಕಟ ವಿನೋದ ದುರಂತ ನಾಟಕ. ಕೆ.ಆರ್.ಮಾರ್ಕೆಟಲ್ಲಿ ಹೋಗಿ ಮೂಟೆ ಹೊತ್ತು ಸಂಸಾರ ನಡೆಸಲು ಇಲ್ಲಿ ತನಕ ಹೋರಾಡಿ ಬರಬೇಕಿತ್ತೇ… ಎಷ್ಟು ದ್ವೇಷ ಈ ಜಾತಿಗಳಿಗೆ… ಕತ್ತಿಡಿದು ತಳ್ಳಿದನಲ್ಲಾ… ಛೀ; ಅಸಹ್ಯ ಕೈಗಳು ಅವನವು ಎಂದು ಮೈಕೇಲ್‌ಗೆ ಅಂತರರಾಷ್ಟ್ರೀಯ ಕರೆ ಮಾಡಲು ಬಹಳ ಕಷ್ಟ ಪಟ್ಟೆ. ಆಗ ಎಸ್‌ಟಿಡಿ ಬೂತಲ್ಲಿ ಆ ಅವಕಾಶ ನನಗೆ ಸಿಕ್ಕಿರಲಿಲ್ಲ. ಸುಮ್ಮನೆ ಪತ್ರ ಬರೆದೆ. ನನ್ನ ಈ ದುರ್ದೈವದ ದೇಶದಲ್ಲಿ ನಾನು ಎಷ್ಟೆಲ್ಲ ಪ್ರಯತ್ನಿಸಬಹುದೊ ಅಷ್ಟೆಲ್ಲ ಮಾಡಿದೆ. ಪ್ರತಿಭೆ ಮುಖ್ಯ ಎಂದು ನಿನ್ನ ದೇಶ ಕೇಳುತ್ತದೆ. ನನ್ನ ದೇಶ ಅಂತಿಮವಾಗಿ ಮೇಲುಜಾತಿಯನ್ನು ಎತ್ತಿ ಹಿಡಿಯುತ್ತದೆ. ನಿನ್ನ ದೇಶಕ್ಕೆ ಗುಲಾಮರಾಗಿ ಬಂದು ನೆಲೆಸಿ ತಲೆ ಎತ್ತಿದ ಕರಿಯರ ಗತಿಗಿಂತಲು ಕಡೆಯಾದುದು ನನ್ನ ಸ್ಥಿತಿ. ಮತ್ತೆ ನಾವು ಬೆಟ್ಟಿ ಆಗುತ್ತೇವೆ ಎಂಬುದರಲ್ಲಿ ವಿಶ್ವಾಸ ಇಲ್ಲ. ನೀನು ನನ್ನ ಜೊತೆಗೆ ಒಂದು ತಾಸಿನ ಸಂದರ್ಶನ ಮಾಡಿದ್ದೆ ಫೋಕ್‌ಲೋರ್ ಮ್ಯೂಸಿಯಂನಲ್ಲಿ. ನಿನ್ನ ಹೆಂಡತಿ ‘ನೋವಾ’ ರೆಕಾರ್ಡ್ ಮಾಡಿದ್ದು. ಅದರ ಒಂದು ವೀಡಿಯೊ ಕಳಿಸಿಕೊಡು. ನಮ್ಮಿಬ್ಬರ ಸಂಬಂಧಕ್ಕೆ ಇರುವುದು ಅದೊಂದೆ ದಾಖಲೆ… ಎಂದು ಪತ್ರ ಬರೆದಿದ್ದೆ. ಅಲ್ಲಿಗೆ ಮೈಕೇಲ್ ಸಂಬಂಧ ತುಂಡಾಗಿತ್ತು. ಸನ್ಯಾಸಿ ಭಾವ ಮತ್ತೆ ಹೆಗಲ ಮೇಲೆ ಬಂದು ಕೂತಿತ್ತು.
ಹಾಗಾದರೆ ಅಕ್ಕನ ಮಗಳ ಗತಿ! ಇಲ್ಲ ಇಲ್ಲಾ… ಮಾತು ತಪ್ಪುವುದಿಲ್ಲ ಎಂದು ಹಳ್ಳಿಗೆ ಹೋಗಿ ಬಂದೆ. ನಿನ್ನ ಕೆಲ್ಸ ಪರ್ಮಿನೆಂಟ್ ಏನಪ್ಪಾ… ಸಂಬಳ ಎಷ್ಟು ಎಂದು ಮಾವ ಕೇಳಿದ್ದರು. ಬೇಸರವಾಗಿತ್ತು. ನಿಖರವಾಗಿ ಏನೂ ಹೇಳಲು ಆಗಿರಲಿಲ್ಲ. ಜನ ಅನುಮಾನ ಪಡುತ್ತಿದ್ದರು. ‘ಉಷಾರು ಗೌರಮ್ಮಾ… ನಿಮ್ಮಪ್ಪನ ಕಡೆ ಗಂಡು ಮಕ್ಕಳ ಯೋಗ್ಯತೆ ಸರಿ ಇಲ್ಲಾ… ಎಲ್ಲೆಲ್ಲಿ ಏನೇನು ತಿನ್ಕಂದು ಕಚ್ಚೆ ಹರ್ಕಂದಿರ್ತವೊ’ ಎಂದು ನನ್ನ ಬಗ್ಗೆ ಕಲ್ಪಿತ ಆರೋಪಗಳ ಆ ನರೆಕೂದಲ ಮುದುಕ ಹೇಳಿ ಹೆದರಿಸಿಬಿಟ್ಟಿದ್ದ. ಅಯ್ಯೋ… ನನಗೆ ಎಲ್ಲ ಕಡೆ ಇಷ್ಟೊಂದು ಲವ್ ಮಾಡಿ ಕೇರು ಮಾಡೊ ಜನ ಇದ್ದಾರಲ್ಲಪ್ಪಾ ಎಂದು ನನ್ನನ್ನು ನಾನೆ ಗೇಲಿ ಮಾಡಿಕೊಂಡೆ. ಬೇಗ ಲಗ್ನ ಮಾಡ್ಕಪ ಎಂದು ಅಕ್ಕ ಒತ್ತಾಯಿಸಿದಳು. ಕೆಲಸದಿಂದ ಇವನನ್ನು ಕಿತ್ತು ಹಾಕಲೆಬೇಕೆಂದು ಅವರತ್ತ ಬಲೆ ಬೀಸುತ್ತಲೆ ಇದ್ದರು.
ಛೇ; ಕೋಮಲ ಅಕ್ಕನ ಮಗಳಿಗೆ ತಾನು ತಕ್ಕ ಗಂಡನಾಗುವೆನೇ… ಅಲ್ಲಿ ಆ ಮದುವೆ ಮನೆಯಲ್ಲಿ ಏನು ಮಾಯೆ ಕವಿದಿತ್ತು… ಈ ಕ್ಷಣವೇ ಇವಳನ್ನು ಈ ದುಃಖದಿಂದ ಪಾರು ಮಾಡಬೇಕು ಎಂಬ ಅಂತಃಕರಣ ಅಷ್ಟೇ ತಾನೆ ಅಲ್ಲಿದ್ದದ್ದು… ಅದು ಪ್ರೇಮ ಮೋಹ ಕಾಮ ಆಗಿರಲಿಲ್ಲ. ಮುಂದೆ ಬಂದು ಮದುವೆ ಆಗುವೆ ಎಂದು ಬಾಯಿಂದ ನುಡಿಸಿದ್ದು ನನ್ನ ನೆರಳೇ; ನನ್ನ ತಾಯ ಕರುಳೇ ಎಂದುಕೊಂಡೆ. ಉತ್ತರ ಹೊಳೆಯಲಿಲ್ಲ.
ಈಸ್ಟ್‌ವೆಸ್ಟ್ ಫೆಲೋಷಿಪ್ ಸಿಕ್ಕಿದ್ದಿದ್ದರೆ ಶೋಭಳ ಕಟ್ಟಿಕೊಂಡು ಅಮೇರಿಕಕ್ಕೇ ಹಾರಿಬಿಡುತ್ತಿದ್ದೆ. ತಪ್ಪಿಸಿಬಿಟ್ಟರು. ಏನೂ ಮಾಡುವಂತಿರಲಿಲ್ಲ. ಹಳ್ಳಿಯ ಆ ಚಿಕ್ಕಪ್ಪಂದಿರು ಗಂಗೋತ್ರಿಗೆ ಬಂದು ಅಪಮಾನ ಮಾಡಲು ಹೇಸದವರು. ಅಕ್ಕನ ಕಡೆಯಿಂದ ಅವರ ತಡೆಸಲು ಕೋರಿಕೊಂಡಿದ್ದೆ. ಏನೊ ಒಂದು ತಪ್ಪೊಪ್ಪಿಗೆ ಪಂಚಾಯ್ತಿ ಮಾಡಿ ಅವರ ಕೋಪತಾಪಗಳ ತಗ್ಗಿಸಿದ್ದಳು. ಅವರದೆಲ್ಲ ಒಂದೇ ಉರಿ. ಇವನು ಇಂಗಾಗುಬುಟ್ಟನಲ್ಲಾ. ನಮ್ಮ ಮಕ್ಕಳು ಆಟೊ ಓಡಿಸೊ ಮಟ್ಟದಲ್ಲೆ ಉಳಿದರಲ್ಲಾ ಎಂದು ವಯಕ್ತಿಕವಾಗಿ ಅಪಾರ ಸಿಟ್ಟು ಮಾಡಿಕೊಂಡಿದ್ದರು. ನಾನು ಎಲ್ಲ ಕಡೆಯಿಂದ ವಿರೋಧ ಕಟ್ಟಿಕೊಂಡಿದ್ದೆ. ನನಗೆ ನಯ ವಿನಯ ನಾಟಕ ಬರುತ್ತಿರಲಿಲ್ಲ. ಸಾದಾಸೀದ. ಅಲ್ಲಿ ತಪ್ಪಾಯ್ತು ಎಂದರೆ ಅಲ್ಲೇ ಖಂಡಿಸಿ ದಂಡಿಸುವ ದುಡುಕು ಸ್ವಭಾವ. ಸುಳ್ಳು ಹೇಳುವ ದಡ್ಡರ ಕಂಡರೆ ಅಲ್ಲೆ ಬಾರಿಸುತ್ತಿದ್ದೆ. ಮತ್ತೆ ಓದಿನ ಜಾಡಿನಲ್ಲಿ ಮುಳುಗಿದೆ. ಮದುವೆ ಆಗಲು ಆರು ತಿಂಗಳು ಸಮಯ ತೆಗೆದುಕೊಂಡು ಬಂದು ಈ ಪರಿ ದಬ್ಬಾಕ್ತ ಕುಂತಿದ್ದಿಯಲ್ಲಾ… ಇದ್ಕೂ ಮದುವೆಗೂ ಏನು ಸಂಬಂಧ ಎಂದು ವ್ಯಂಗ್ಯದಲ್ಲಿ ಆತ್ಮ ಕೇಳಿತು. ‘ಇಲ್ಲಿ ಕೊನೆ ಅವಕಾಶಕ್ಕಾಗಿ ಕಾಯುತ್ತಿರುವೆ’. ‘ಇಲ್ಲೇನು ಸಿಗಲ್ಲ ಅಂದ್ರೆ…’ ‘ಏನಾರ ಮಾಡ್ತಿನಿ…’ ಹೀಗೇ ನಿತ್ಯ ಚಿಂತೆ.
ಇಂತಿರುವಾಗಲೇ ಅನಂತಮೂರ್ತಿ ಅವರ ಬೆನ್ನು ಬಿದ್ದಿದ್ದೆ. ಅಪೂರ್ವವಾದ ಸಾಹಿತ್ಯದ ವಿಚಾರಗಳಲ್ಲಿ ಮುಳುಗಿಸಿ ಏಳಿಸುತ್ತಿದ್ದರು. ಅವತ್ತು ಒಂದು ವಿಶೇಷ ಅವಕಾಶ ನಿರ್ಮಾಣ ಆಗಿತ್ತು. ಧ್ವನ್ಯಾಲೋಕದಲ್ಲಿ ಎ.ಕೆ.ರಾಮಾನುಜನ್ ಅವರ ವಿಶೇಷ ಉಪನ್ಯಾಸ ಇತ್ತು. ಆಗ ಅವರು ಆಕಸ್ಮಿಕವಾಗಿ ಅಮೆರಿಕದಿಂದ ಬಂದಿದ್ದರು. ಧ್ವನ್ಯಾಲೋಕ ಸಿ.ಡಿ.ಎನ್. ಅವರ ಪ್ರತಿಷ್ಠಿತ ಸಂಸ್ಥೆ. ಕಾಮನ್ ವೆಲ್ತ್ ದೇಶಗಳ ಉನ್ನತ ಲೇಖಕರ ಕರೆಸಿ ಉಪನ್ಯಾಸ ಏರ್ಪಡಿಸುತ್ತಿದ್ದರು. ಗಣ್ಯರಷ್ಟೇ ಅಲ್ಲಿರುತ್ತಿದ್ದರು. ನಾನು ಅಲ್ಲಿಗೆ ಹೋಗಿದ್ದೆ. ಅನಂತಮೂರ್ತಿ ಅವರ ಜೊತೆ ರಾಮಾನುಜನ್ ಕಾರಿಂದ ಇಳಿದು ಬಂದರು. ಗುಬ್ಬಿಯಂತೆ ಕಾಣುವ ಈ ಮನುಷ್ಯನಲ್ಲಿ ಎಷ್ಟೊಂದು ರಣಹದ್ದುಗಳನ್ನೆಲ್ಲ ಹೂ ಹಕ್ಕಿಯನ್ನಾಗಿ ಮಾರ್ಪಡಿಸುವ ಶಕ್ತಿ ಇದೆಯಲ್ಲಾ ಎಂದು ಗುಂಪಲ್ಲಿ ನಮಸ್ಕರಿಸಿದೆ. ಕೈ ಮುಗಿಯುತ್ತ ವೇದಿಕೆಗೆ ರಾಮಾನುಜನ್ ಬಂದರು.
ಸಣ್ಣದನಿಯ ಮಾತುಗಾರ. ತನ್ನ ಆತ್ಮದ ಜೊತೆ ಸಂವಾದ ಮಾಡಿಕೊಳ್ಳುವಂತಿತ್ತು.
ರಾಮಾನುಜನ್ ಆ ಕಾಲಕ್ಕೆ ಅಮೇರಿಕದಲ್ಲಿ ಎಷ್ಟು ಹೆಸರುವಾಸಿ ಕವಿ ಆಗಿದ್ದರು ಎಂದರೆ ಅವರ ಇಂಗ್ಲಿಷ್ ಕವಿತೆಯ ಸಾಲುಗಳು ಸಾರ್ವಜನಿಕ ಸ್ಥಳಗಳಲ್ಲಿ; ಬಸ್ಸುಗಳಲ್ಲಿ ನಮೂದಿಸಲ್ಪಟ್ಟು ಪ್ರಖ್ಯಾತರಾಗಿದ್ದರು. ಇಂಗ್ಲಿಷ್ ಕವಿಯಾಗಿ ಎತ್ತರ ಏರಿದ್ದರು. ಮತ್ತೊಂದೆಡೆ ಜನಗತ್ತಿನ ಸಂಸ್ಕೃತಿ ಚಿಂತಕರಲ್ಲಿ ಒಬ್ಬರಾಗಿದ್ದರು. ಭಾರತದ ದಮನಿತ ಸಮಾಜಗಳ ಜ್ಞಾನ ಪರಂಪರೆಗಳನ್ನು ದ್ರಾವಿಡ ನೆಲೆಯಿಂದ ವ್ಯಾಖ್ಯಾನಿಸಿ ಮನ್ನಣೆ ತಂದುಕೊಟ್ಟಿದ್ದರು. ಪೂರ್ವ ಪಶ್ಚಿಮಗಳ ಆಳವಾದ ಸಾಂಸ್ಕೃತಿಕ ವಿಕಾಸದ ಚರಿತ್ರೆಯನ್ನು ಬಲ್ಲವರಾಗಿದ್ದರು. ಗಂಭೀರ ಸಭೆ. ಅಲ್ಲಿದ್ದ ಒಬ್ಬೊಬ್ಬರೂ ಸಭಿಕರೇ ಪ್ರವೀಣರು. ಇದ್ದರೆ ಅಂತಹ ಪರಿಸರದಲ್ಲಿ ಬದುಕಬೇಕು, ಬೆಳೆಯಬೇಕು, ಕಲಿಯಬೇಕು ಎನಿಸುತ್ತಿತ್ತು. ಒಂದೂವರೆ ತಾಸು ಮಾತಾಡಿದರೂ ಒಂದೇ ಒಂದು ಸದ್ದು ಹೊರಡಲಿಲ್ಲ. ಎಲ್ಲರ ಚಿತ್ತ ಅವರ ವಿಚಾರಗಳಿಗೇ ಅಂಟಿಕೊಂಡಿತ್ತು. ಸಂವಾದ ಆಂಭವಾಯಿತು. ಅವೈದಿಕ ಭಾರತದ ದಮನಿತ ಭಕ್ತಿ ಪಂಥದ ಕಾವ್ಯ ಪರಂಪರೆಗಳ ಕುರಿತಾಗಿ ರಾಮಾನುಜನ್ ಮಾತಾಡಿದ್ದರು. ಭಾರತದ ಮೂಲೆ ಮೂಲೆಯ ಕಂಡು ಕೇಳರಿಯದ ಮಿಸ್ಟಿಕ್ ಕವಿಗಳ ಸಾಲುಗಳನ್ನೆಲ್ಲ ಅಲ್ಲೇ ಇಂಗ್ಲಿಷಿಗೆ ಅನುವಾದ ಮಾಡಿಕೊಂಡು ಒಂದು ಅನುಭಾವವನ್ನು ಸೃಷ್ಟಿಸುತ್ತಿದ್ದ ಪರಿ ಬೆಲೆ ಕಟ್ಟಲಾಗದ್ದು. ಮೂಕನಾಗಿದ್ದೆ. ಇವರ ಜೊತೆ ಓಡಿಹೋಗಬೇಕು ಎನಿಸುತ್ತಿತ್ತು.
ಸಭೆ ಮುಗಿಯಿತು. ಚಂದದ ಸ್ನ್ಯಾಕ್ಸ್, ಕಾಫಿ, ಟೀ, ಅರೇಂಜಾಗಿತ್ತು. ನಾನು ಹನಿಕೇಕ್ ತಿಂದು ಮುರುಕು ತಿಂದು ಕಾಫಿ ಕುಡಿದೆ. ಅಲ್ಲಿನ ಹೈಟೇ ಬೇರೆ. ಅನಂತಮೂರ್ತಿ ಅವರ ಗಮನ ಸೆಳೆದೆ. ಬಹುಪಾಲು ಬ್ರಾಹ್ಮಣರೇ ತುಂಬಿದ್ದರು. ಸುಶಿಕ್ಷಿತರಾಗಿದ್ದರು. ಕರ್ಮಠರಲ್ಲ. ಅನಂತಮೂರ್ತಿ ಬಾ ಬಾ ಎಂದು ಹತ್ತಿರ ಕರೆದರು. ನೀನಿಲ್ಲಿ ಬಂದಿದ್ದೇ ನನಗೆ ಗೊತ್ತಾಗಲಿಲ್ಲ… ರಾಮಾನುಜನ್ ಅವರ ಮಾತಾಡಿಸಿದೆಯಾ ಎಂದು ಕೇಳಿದರು. ಹಿಂಜರಿದಿದ್ದೆ. ಆದರೂ ಬುಗುರಿ ಪುಸ್ತಕ ಕೊಡಲು ಕೊಂಡೊಯ್ದಿದ್ದೆ. ಬಾ ಎಂದು ಅವರ ಬಳಿ ಕರೆದು… ‘ರಾಮಾನುಜನ್… ಇವನು ಗೊತ್ತಾ’ ಎಂದರು. ‘ಹಾsss ಕಳೆದ ಬಾರಿ ಇಂಡಿಯಾಕ್ಕೆ ಬಂದಿದ್ದಾಗ ಕಂಡಿದ್ದೆ. ನೀವು ಲಂಕೇಶ್ ಪತ್ರಿಕೆಗೆ ನನ್ನನ್ನ ಇಂಟರ್ವ್ಯೂ ಮಾಡಿದ್ರಿ ಅಲ್ಲವಾ… ಅದು ಪಬ್ಲಿಷ್ ಆಯ್ತಾ’ ಎಂದರು. ತಡವರಿಸಿದೆ. ಬುಗುರಿ ಪುಸ್ತಕ ಕೊಟ್ಟೆ. ‘ಒಹೋ ನೀವೆನಾ ಈ ಕಥೆಗಾರಾ… ನೀವೇ ಬೇರೆ ಅನ್ಕೊಂಡಿದ್ದೆ. ನಿಮ್ಮ ಕಥೆ ಓದಿದ್ದೀನೀ… ಓಹ್! ನಾನು ಸುಸ್ತಾಗಿದ್ದೆ ಬುಗುರಿ ಓದಿ…’ ಎಂದು ಹಗ್ ಮಾಡಿದರು. ‘ರಾಮಾನುಜನ್… ಇವನೀಗ ಪಿಎಚ್.ಡಿ ಮಾಡ್ತಿದ್ದಾನೆ… ಇವನನ್ನು ನೀನು ಯಾಕೆ ಚಿಕಾಗೊ ಯೂನಿವರ್ಸಿಟಿಗೆ ಸೇರಿಸಿಕೊಳ್ಳಬಾರದೂ… ಪಶ್ಚಿಮ ದೇಶದವರಿಗೆ ಶ್ರೀ ಕೃಷ್ಣನ ಶಂಖ ಪಾಂಚಜನ್ಯದ ಸದ್ದು ಗೊತ್ತು… ನಮ್ಮ ದೇಶದ ತಮಟೆ ನಗಾರಿಗಳು ಹೇಗೆ ಜಗತ್ತಿನ ಎಲ್ಲರ ನಾಡಿ ಬಡಿತಕ್ಕೂ ಮಿಡಿಯುತ್ತವೆ ಎಂಬುದು ಇವನ ಮೂಲಕ ತಿಳಿಯಲಿ… ಪ್ಲೀಸ್ ಟೇಕ್ ಹಿಮ್ಮ್ ವಿತ್ ಯೂ’ ಎಂದರು. ಅನಂತಮೂರ್ತಿ ಅವರು ಅಷ್ಟು ಸುಲಭವಾಗಿ ಅಷ್ಟು ಎತ್ತರಕ್ಕೆ ಏರಿಸುವವರಲ್ಲ.
ರಾಮಾನುಜನ್ ಒಂದು ಕ್ಷಣ ನನ್ನ ‘ವಿಧಿ’ ಏನು ಎಂಬಂತೆ ಕಣ್ಣು ಕಿರಿದಾಗಿಸಿಕೊಂಡು ನೋಡಿದರು. ಅಹಾ! ದೇವರೇ ಕರುಣಿಸು… ಈಗಲಾದರೂ ಇವರಿಂದಾದರೂ ನಾನು ಈ ದೇಶ ಬಿಟ್ಟು ಎಲ್ಲೊ ಹೋಗಿ ನೆಲೆಸುವಂತಾಗಲಿ ಎಂದು ಒಬ್ಬ ಅಪ್ಪಟ ಬಹಿಷ್ಕೃತ ಭಾರತೀಯನಾಗಿ ಅವರಿಗೆ ಕೈ ಮುಗಿದು… ಪ್ಲೀಸ್ ಮನಸ್ಸು ಮಾಡಿ ಎಂಬಂತೆ ಭಾವ ತೋರಿದೆ. ‘ಖಂಡಿತ ಆಗಬಹುದು… ನೀವು ಬೇಗ ಪಿಎಚ್.ಡಿ ಮುಗಿಸಿ… ನಾನೇ ಕರೆದುಕೊಂಡು ಹೋಗುವೆ. ನೀವು ಅವತ್ತು ಒಂದು ವಿಷ್ಯ ಹೇಳಿದ್ರಿ… ನೆನಪಿದೆಯಾ… ಬ್ಲಾಕ್ ಫೋಕ್‌ಲೋರ್ ತರದಲ್ಲಿ ದಲಿತ್ ಫೋಕ್‌ಲೋರ್ ಕುರಿತು ಅಧ್ಯಯನ ಮಾಡುವೆ ಎಂದು. `ಸಚ್ ಎ ವಂಡರ್‌ಫುಲ್ ಐಡಿಯಾ… ಅದು ಒಂದು ರೀತಿ ಸ್ಪಾರ್ಕ್ ಆಗಿ ಮನಸ್ಸಿನಲ್ಲಿ ನಿಮಗೆ ಹೊಳೆದಿತ್ತು ಅನಿಸುತ್ತೆ. ಅದು ನನಗೂ ಕಾಡಿದ ಒಂದು ಸಂಗತಿ. ಅದರ ಬಗ್ಗೆ ಡೀಪಾಗಿ ಅಧ್ಯಯನ ಮಾಡಲು ನಾನೇ ವ್ಯವಸ್ಥೆ ಮಾಡುವೆ’ ಎಂದರು. ನನ್ನ ಹೃದಯ ಎಲ್ಲಿ ಬಿರಿದು ಹೋಗುತ್ತದೊ ಎಂಬಷ್ಟು ಸಂತೋಷವಾಗಿತ್ತು. ಓಡಿ ಹೋಗಿ ಶೋಭಳ ಮುಂದೆ ಹೇಳಿಕೊಂಡು ಆನಂದದಿಂದ ಅತ್ತು ಬಿಡಬೇಕೆನಿಸಿತು. ತಡೆದುಕೊಂಡೆ. ಆ ರಾತ್ರಿ ಅಲ್ಲಿ ಅತಿಗಣ್ಯರಿಗೆ ಸಂತೋಷ ಕೂಟ ಇತ್ತು. ಹೇಗೊ ನುಸುಳಬಹುದಿತ್ತು. ನನ್ನ ಯೋಗ್ಯತೆ ಮೀರಿ ವರ್ತಿಸಬಾರದು ಎಂದು ಹಾಸ್ಟಲಿಗೆ ಬಂದೆ. ಕುಂತಲ್ಲಿ ನಿಂತಲ್ಲಿ ಎಲ್ಲೆಡೆ ರಾಮಾನುಜನ್ ಆಶ್ವಾಸನೆಯೇ ಮಿಂಚಾಗಿ ತಲೆಯಲ್ಲಿ ಕುಣಿಯುತ್ತಿತ್ತು. ಊಟ ಮಾಡಲಿಲ್ಲ. ನಿದ್ದೆ ಮಾಡಲಿಲ್ಲ. ಬೇರೇನೂ ಯೋಚಿಸಲಿಲ್ಲ. ಅದೇ ಚಿಕಾಗೊ. ಅದೇ ದಕ್ಷಿಣ ಏಷ್ಯಾದ ಅಧ್ಯಯನ ಕೇಂದ್ರ; ಅದರ ಬಹು ವಿಧ ಶಾಖೆಗಳು, ಅಲ್ಲಿನ ವಿದ್ವಾಂಸರು. ಅಲ್ಲಿ ಲೋಕದ ಯಾವ ಯಾವ ಮೂಲೆಯಿಂದ ಕಲಿಯಲು ಬರುತ್ತಾರೆ; ಹೇಗೆ ಕಲಿಸುತ್ತಾರೆ… ಎಷ್ಟು ವಿಷಯಗಳಿರುತ್ತವೇ. ನನ್ನ ಬಡ ಇಂಗ್ಲೀಷ್ ಅಲ್ಲಿಗೆ ಸಾಕಾಗದು! ಅದಕ್ಕಾಗಿ ಏನೆಲ್ಲ ಸಿದ್ಧತೆ ಮಾಡಿಕೊಳ್ಳಬೇಕೂ… ಎಂದು ಎಡೆ ಬಿಡದೆ ಅದದನ್ನೇ ನಿದ್ದೆಯಲ್ಲೂ ಚಿಂತಿಸಿ ಎದ್ದೆದ್ದು ಕೂತು; ಆ ಮಹಾನ್ ನಗರ… ಅಲ್ಲಿನ ಸಮಾಜ; ಮಾನವ ಸಂಬಂಧಗಳ ಸಂಕೀರ್ಣತೆಗಳನೆಲ್ಲ ಅಳೆಯುತ್ತಿದ್ದೆ.
ಮೊದಲು ನನ್ನ ಶೋಭಳಿಗೆ ಮಿನಿಮಮ್ ಇಂಗ್ಲೀಷ್ ಕಲಿಸಬೇಕು ಎಂದು ಪ್ಲಾನು ಹಾಕಿಕೊಂಡೆ. ಚಿಕಾಗೊ ಯೂನಿವರ್ಸಿಟಿಯ ಚರಿತ್ರೆಯನ್ನು ಓದಿಕೊಂಡೆ. ʻಇಲ್ಲಿರುವೆ ನೆಪಕ್ಕೆ… ನಾಳೆ ಅಲ್ಲಿಗೆ ಹೋಗುವೆ ನಿಜಕ್ಕೆʼ ಎಂದು ಅಲ್ಲಿನ ಮಟ್ಟಕ್ಕೆ ಸೆಟ್ಟಾಗುವಂತೆ ಪಾಠ ಮಾಡುವ ವಿಭಿನ್ನ ರೀತಿಯನ್ನು ಅಭ್ಯಾಸ ಮಾಡಿಕೊಂಡೆ. ಹೇಳಿಕೊಡುವವರಿಲ್ಲ. ನನಗೆ ನಾನೇ ಗುರು ಶಿಷ್ಯ ಮೂರ್ಖ ಮಹಾಗಗ್ಗ ಮಹಾಜ್ಞಾನಿ ಎಲ್ಲ ಆಗಿ ಸೈಲೆಂಟಾಗಿಬಿಟ್ಟೆ. ಕಾವುಕೂತ ಕೋಳಿಯಂತಾದೆ. ಮದುವೆಯ ಮುಂದೂಡುವ ಎಂದು ಅದರ ಆಸಕ್ತಿಯನ್ನೆ ಬಿಟ್ಟೆ. ನನ್ನ ಮಾವ ಬಂದು ಬಂದು ಟೈಂ ಆಯ್ತಲ್ಲಪ್ಪಾ ಎನ್ನುತ್ತಿದ್ದರು. ಯಾವುದಕ್ಕೆ ಸಮಯ ಮುಗಿಯುತ್ತಿದೇ… ಈ ಕ್ಯಾಂಪಸ್ಸಿಗೂ ನನಗೂ ಟೈಂ ಮುಗಿಯುತ್ತಿದೆ ಎಂದುಕೊಂಡು ಗರಿಗೆದರುತ್ತಿದ್ದೆ. ಎಲ್ಲವೂ ಮಗುಮ್ಮಾಗಿತ್ತು. ಈಸ್ಟ್‌ವೆಸ್ಟ್ ಕನಸಿನ ಸಮಾಧಿ ಮೇಲೆ ಗುಲಾಬಿ ಅರಳಿದೆ ಎಂದು ಆ ಮೂರ್ಖರ ಮುಂದೆ ತಲೆ ಎತ್ತಿ ನಡೆದೆ.
ಲಂಕೇಶರನ್ನು ಕಂಡು ಬರಲು ಹೋದೆ. ಹೇಳಿದೆ. ಅಷ್ಟಾಗಿ ಇಷ್ಟಪಡಲಿಲ್ಲ. ಆ ಬ್ರಾಹ್ಮಣರ ಹಂಗಿನಲ್ಲಿ ಸಿಕ್ಕಿಹಾಕಿಕೊಳ್ಳಬೇಡ ಎಂದು ಎಚ್ಚರಿಸಿದರು. ಅತ್ತ ಶೂದ್ರರು ಇತ್ತ ದಲಿತರು ಸುತ್ತಾ ಮುತ್ತಾ ಬಾರಿಸ್ತಿರೊವಾಗ ಆ ಸಭ್ಯ ಬ್ರಾಹ್ಮಣರಿಂದ ನನಗೇನು ಮೋಸ ಎಂದು ಯೋಚಿಸಿದೆ. ಸದ್ಯಕ್ಕೆ ನನ್ನನ್ನು ಎಲ್ಲ ರೀತಿಯಿಂದಲೂ ಒಪ್ಪಿಕೊಂಡಿದ್ದವರೇ ಅವರು! ಅವರನ್ನೂ ಬಿಟ್ಟರೆ ಗತಿಯಾರು ಎಂದು ಗೊಂದಲಗೊಂಡೆ. ಆಗೊಂದು ಟೆಲಿಗ್ರಾಂ ಬಂತು. ತಾತ ತೀರಿಕೊಂಡಿದ್ದ. ನಾನಂತು ಹೋಗಲೆಬೇಕಿತ್ತು. ದೌಡಾಯಿಸಿದೆ. ಆ ಕಾಳ ಟೆಲಿಗ್ರಾಂ ಮಾಡಿದ್ದು. ಆ ಯಾವ ಚಿಕ್ಕಪ್ಪಂದಿರಿಗೂ ನನಗೆ ಸುದ್ದಿ ಮುಟ್ಟಿಸುವುದು ಇಷ್ಟ ಇರಲಿಲ್ಲ. ನನ್ನ ನೆನಪೂ ಬಂದಿರಲಿಲ್ಲ. ಇದು ಕೊನೆಯಬಾರಿ. ಆ ತಾತ ಇಲ್ಲದಿದ್ದರೆ ಇಷ್ಟು ಹೊತ್ತಿಗೆ ಯಾವ ನನ್ನ ಮೂಳೆಯು ಬದುಕುತ್ತಿರಲಿಲ್ಲ ಎಂದು ಬಂದೆ. ತುಂಬ ಜನ ನೆರೆದಿತ್ತು. ಸ್ನಾನ ಮಾಡಿಸುತ್ತಿದ್ದರು ಶವಕ್ಕೆ. ಹಾಗೆ ಹತ್ತಿರದ ಬಂಧುಗಳು ಸ್ನಾನ ಮಾಡುವುದು ಪುಣ್ಯದ ಕೆಲಸ ಎನ್ನುತ್ತಿದ್ದರು. ನಾನದನ್ನು ಋಣ ತೀರಿಸಲು ಹಾಗೂ ಮೈಯ ಕೊನೇಗೆ ಮುಟ್ಟಿ ಬೀಳ್ಕೊಡುವ ಕರ್ತವ್ಯ ಎಂದು ಭಾವಿಸಿದ್ದೆ.
ಹತ್ತಿರ ಹೋಗುತ್ತಿದ್ದಂತೆಯೆ ಸಂಬಂಧಿಕರು ಹಿಂದಕ್ಕೆ ತಳ್ಳಿದರು. ಅಲ್ಲಿ ಆ ಸ್ಥಿತಿಯಲ್ಲಿ ಮಾತಿಗೆಲ್ಲಿ ಕ್ಷಣ… ನುಗ್ಗಿದೆ… ‘ಲೇ ಅತ್ತಾಗಿ ತಳ್ರೋ ಆ ಸೂಳೆಮಗನ’ ಎಂದ ಅಪ್ಪ ಎನ್ನಿಸಿಕೊಳ್ಳೋ ಕೊಳಕುಮಂಡಲ. ದುರುಗಟ್ಟಿದೆ. ಯಾವನೊ ತಳ್ಳಿದ. ಜನ ಜಂಗುಳಿ. ಹಿರಿ ಮನುಷ್ಯ… ಹಾಗೆ ಹೀಗೆ ಏನೇನೊ ಕೀರ್ತನೆಗಳು. ಶವವನ್ನು ಮುಟ್ಟಲು ಬಿಡಲಿಲ್ಲ. ನೀರು ಹಾಕಲೂ ಅವಕಾಶ ಇಲ್ಲ ಎಂದರು. ಯಾಕೆ ಎಂದೆ ಹತಾಶೆಯಲ್ಲಿ. ನೀನು ದೂರ ಹೋದವನು. ಬಳಗ ಬಿಟ್ಟವನು. ಬಹಿಷ್ಕರಿಸಿದ್ದೇವೆ ಎಂದರು. ನನಗೊಂದು ಅವಕಾಶ ಕೊಡಿ… ಶವಕ್ಕೆ ನಮಸ್ಕಾರ ಮಾಡುವೆ ಎಂದೆ. ಅದಕ್ಕೂ ಬಿಡಲಿಲ್ಲ. ‘ಲೇ ಸುಮ್ನಿರ್ರೋ ಪಾಪಾ… ಸತ್ತವನಿಗೊಂದು ಗೌರವ ಕೊಡುವ ಅಂತ ಬಂದವನೆ’ ಎಂದರು ಯಾರೊ. ಕುಡಿದು ಅಮಲಾಗಿ ನಟಿಸುವಂತೆ ಬಾಯಿ ಬಡಿದುಕೊಂಡು ಹೆಂಗಸರು ದೊಡ್ಡ ಗಂಟಲು ತೆಗೆದಿದ್ದರು. ಸುಮ್ಮನೆ ಇತ್ತ ಬಂದು ನಿಂತೆ. ನಾನೇ ಇಲ್ಲಿ ಸತ್ತು ಹೋಗಿರುವೆ ಎನಿಸಿತು. ಇನ್ನು ನಾಳೆ ನಾನು ಸತ್ತರೆ ಇವರು ಯಾರೂ ಬರುವುದಿಲ್ಲ ಶವಕ್ಕೆ ಒಂದಿಷ್ಟು ಉಗಿದು ಮಣ್ಣು ಹಾಕೋದಕ್ಕಾದರೂ… ಬರೋದಿಲ್ಲ ಇವರು. ಆಗಲೆ ಇವರು ಕೂಡ ನನ್ನ ಕೊಂದುಬಿಟ್ಟಿದ್ದಾರೆ… ಯಾರ್ಯಾರೆಲ್ಲ ಕೊಂದರು. ಕೊಲ್ಲುತ್ತಲೇ ಇದ್ದಾರಲ್ಲಾ; ಎಷ್ಟು ಸಾಯುವುದು ಹುಟ್ಟುವುದು ಸತ್ತು ಸತ್ತು ಉಸಿರು ಕೂಡಿಸಿಕೊಂಡು ಬರೆದೊ ಬರೆಹಾಕಿಸಿಕೊಂಡೊ ಬದುಕುವುದೂ… ಎಲ್ಲೊ ನನ್ನಲ್ಲೇ ಅನೇಕ ತಪ್ಪುಗಳಿರಬಹುದು. ನನ್ನ ವ್ಯಕ್ತಿತ್ವವೇ ಭಗ್ನವಾಗಿದೆಯೇನೊ… ಸುಲಭವಾಗಿ ಯಾರಿಗೂ ಅರ್ಥ ಆಗಲಾರೆ… ಸ್ಮಶಾನದ ತನಕ ಹಿಂಬಾಲಿಸಿದೆ. ಅಲ್ಲೆಲ್ಲಾದರು ಹಿಂದೆ ಮುಂದೆ ಹೋಗಿ ಚಟ್ಟಕ್ಕೆ ಹೆಗಲು ಕೊಡುವ ಎಂದುಕೊಂಡೆ. ಕೆಲವರು ನನ್ನನ್ನೇ ಗಮನಿಸಿ ಬಿರುಗಣ್ಣು ಬಿಡುತ್ತಿದ್ದರು. ಕೊನೆಯ ಒಂದಿಡಿ ಮಣ್ಣು ಹಾಕಲೂ ಬಿಡಲಿಲ್ಲ.
ಅಹಾ! ದೇವರೇ; ಈ ತಾತನಿಗೆ ನಾನು ಅಷ್ಟೊಂದು ಕೆಟ್ಟವನಾಗಿದ್ದೆನೇ… ಇವನೇ ತಾನೆ ಬಾಲ್ಯದಲ್ಲಿ ತನ್ನ ಮಗನೊಬ್ಬನ ಮನೆಗೆ ಕರೆದೊಯ್ದು ನಾಲ್ಕು ಅಕ್ಷರ ಕಲಿಯಲು ನೆರವಾಗಪ್ಪ ಎಂದು ವಿನಂತಿಸಿ ನನಗೆ ಒಂದು ದಾರಿ ತೋರಿದವನು… ಎಂದು ಒತ್ತರಿಸಿ ಬಂದ ದುಃಖವ ನುಂಗಿಕೊಂಡೆ. ಬಾಲ್ಯದಲ್ಲಿ ಈ ಇದೇ ಮಸಣದಲ್ಲಿಯೆ ತಾನೆ ನಾನು ಜೀವ ರಕ್ಷಿಸಿಕೊಂಡು ಪೊದೆಯಲ್ಲಿ ಮಲಗಿರುತ್ತಿದ್ದುದೂ… ನಾನಿಲ್ಲಿಗೆ ಬರುವೆನೊ… ಎಲ್ಲೊ ಒಂದು ದಿನ ಒಂಟಿ ಅನಾಥ ಶವವಾಗಿ ಕಣ್ಮರೆಯಾಗುವೆನೊ ಎಂದು ಸಂಕಟಗೊಂಡೆ. ನನ್ನ ಅಕ್ಕ ಅಲ್ಲೇ ಹೆಂಗಸರ ಜೊತೆ ದುಃಖಿಸುತ್ತಿದ್ದಳು. ಆ ಸ್ಮಶಾನದಲ್ಲೇ ಅಣ್ಣ ತಮ್ಮಂದಿರಲ್ಲಿ ಜಗಳ ಆರಂಭ ಆಗಿತ್ತು. ಆಸ್ತಿ ಹಂಚಿಕೆಯ ಪಂಚಾಯ್ತಿ ಈ ರಾತ್ರಿಯೇ ಆಗಬೇಕು ಎಂದು ಒತ್ತಾಯಿಸುತ್ತಿದ್ದರು. ಅದು ನನಗೆ ಸಂಬಂಧಪಟ್ಟ ಸಂಗತಿ ಆಗಿರಲಿಲ್ಲ.
ತಾತನ ಶವವ ಮುಟ್ಟಲೂ ಬಿಡಲಿಲ್ಲವಲ್ಲಾ… ಇವರು ನನಗೆ ಏನು ಕೊಡಬಲ್ಲರು… ಇವರೆಲ್ಲ ನನಗೆ ಯಾಕೆ ಬೇಕೂ… ಇವರು ವಿಷಕೊಟ್ಟು ಬೇಕಾದರೆ ಸಾಯಿಸಿಬಿಡುತ್ತಾರೆ. ಇನ್ನೆಂದೂ ಇವರ ಸಹವಾಸ ಬೇಡ ಎಂದು ಮನಸ್ಸನ್ನು ಕಲ್ಲು ಮಾಡಿಕೊಳ್ಳುತ್ತಿದ್ದೆ. ಸಾವಿತ್ರಿ ಹುಡುಕಿಕೊಂಡು ಬಂದಳು. ಅಹಾ! ದೇವರೇ; ಸ್ಮಶಾನದಲ್ಲೂ ಪ್ರೇಯಸಿ ಪ್ರೇಯಸಿಯೇ. ಅತ್ತು ಕಣ್ಣು ಕೆಂಪಾಗಿದ್ದವು. ಅವಳು ನನ್ನ ಒಂದೊಂದು ಹೆಜ್ಜೆಯನ್ನೂ ಗಮನಿಸಿದ್ದಳು. ಹುಟ್ಟಿದ ಮನೆಯಲ್ಲೇ ಶವ ಸಂಸ್ಕಾರದ ಗಳಿಗೆಯಲ್ಲೂ ಒಂದಿಷ್ಟು ಕನಿಕರ ತೋರಲಿಲ್ಲವಲ್ಲ ಈ ಜನ ಎಂದು ನನಗಾಗಿ ಮರುಗುತ್ತಿದ್ದಳು. ಆ ಕ್ಷಣ ಎನಿಸಿತು… ಈ ಜಗತ್ತಿನಲ್ಲಿ ದೇವರಾದಿಯಾಗಿ ಎಲ್ಲ ಎಲ್ಲರೂ ನನ್ನ ಎದಿರಾಗಿ ದಿಕ್ಕರಿಸಿ ನಿಂತರೂ ಒಂದು ನಿಜವಾದ ಪ್ರೇಮದ ಹೆಣ್ಣಿನ ಕಣ್ಣೀರಿದ್ದರೆ ಸಾಕೂ… ನಾನು ಈ ಸಪ್ತಋಷಿ ಮಂಡಲವನ್ನೇ ದಾಟುವೆ ಎನಿಸಿತು. ಒಬ್ಬರನ್ನೊಬ್ಬರು ದಿಟ್ಟಿಸಿಕೊಂಡೆವು ಅಷ್ಟೇ… ಮಾತಾಡದೆಯೇ ಅನಂತವಾದ ಏನನ್ನೊ ಮಾತಾಡಿಕೊಂಡೆವು. ಹೊಳೆಯ ನೀರ ತಲೆ ಮೇಲೆ ಹಾಕಿಕೊಂಡು ಹಿಂತಿರುಗಿದೆ. ಆ ಅದೇ ಬಾಲ್ಯದ ದಾಹದ ಹೊಳೆಯ ನೀರ ತಾಯ ಹಾಲು ಎಂದು ಕುಡಿದೆ. ಮನೆಯ ಪಡಸಾಲೆಯಲ್ಲಿ ತಾತನ ಆತ್ಮದ ಸಂಕೇತವಾಗಿ ದೀಪ ಹಚ್ಚಿದ್ದರು. ಅದಕ್ಕೆ ಮಂಡಿಯೂರಿ ನಮಸ್ಕರಿಸಿದೆ. ಬೆಳಕ ಮುಟ್ಟಿದೆ. ತಾತನೇ ಕೈ ಹಿಡಿದು… ನಿನಗೆ ಒಳ್ಳೆಯದಾಗಲಿ… ಯಾವತ್ತು ನಿನ್ನ ತಾಯಿ ನೆರಳಾಗಿ ನಿನ್ನ ಬೆನ್ನ ಹಿಂದೆ ಇದ್ದೇ ಇದ್ದಾಳೆ… ನನ್ನ ಆಸೆಯಂತೆ ಬೆಳೆದಿದ್ದೀಯೇ… ಇನ್ನೂ ಬೆಳೆಯಬೇಕಾಗಿದೆ… ದೈವವೇ ನಿನ್ನ ಬಲಭಾಗಕ್ಕಿದೆ… ಇಲ್ಲಿ ನಿನಗೆ ಏನೂ ಇಲ್ಲಾ; ಯಾರೂ ಇಲ್ಲ. ಇಲ್ಲೆಲ್ಲ ಮತ್ತೆ ಬರಬೇಡ. ನಿನ್ನ ದಾರಿಯಲ್ಲಿ ನೀನು ಹೊರಟು ಹೋಗು ಎಂದಂತಾಯಿತು. ಅಷ್ಟೇ… ಅಲ್ಲಿ ನಿಲ್ಲಲಿಲ್ಲ. ಮೈಸೂರಿಗೆ ಹಿಂತಿರುಗಿದ್ದೆ. ಅದೇ ಸೀಮಿತ ಪಾಠ, ನೋಟ್ಸ್, ರೀಸರ್ಚ್ ಟಿಪ್ಪಣಿಗಳು ಬೋರೆನಿಸಿದವು. ಲೈಬ್ರರಿಯ ಕ್ಯೂಬಿಕಲ್ ಸೇರಿದೆ ಎಂದರೆ ಎದ್ದು ಹೊರ ಬರುತ್ತಲೇ ಇರಲಿಲ್ಲ. ಪಶ್ಚಿಮ ಜಗತ್ತು ವಿಜ್ಞಾನವನ್ನೂ ಸಮಾಜಶಾಸ್ತ್ರಗಳ ಜೊತೆ ಸಮನಾಗಿ ಕಲಿತಿರುತ್ತದೆ ಎಂದುಕೊಂಡು ವಿಜ್ಞಾನದ ಇತಿಹಾಸವನ್ನು ಮನನ ಮಾಡಿಕೊಂಡೆ. ಓದೆಲ್ಲ ಚೂರು ಚೂರು; ಸಾಲದು ಎನಿಸುತಿತ್ತು.
ಮದುವೆ ಸಮಯ ಬಂದಿತ್ತು. ನಿಮಗೆ ತಿಳಿದಂತೆ ಲಗ್ನ ಪತ್ರಿಕೆ ಮಾಡಿಸಿಕೊಳ್ಳಿ. ನನ್ನ ಮೇಲೆ ಯಾವ ನಿಮ್ಮ ಆಚಾರ ವಿಚಾರಗಳ ಹೇರಬೇಡಿ ಎಂದಿದ್ದೆ. ಒಂದು ಸಿಂಪಲ್ ಕಾರ್ಡ್ ಮಾಡಿಸಿ ಗೆಳೆಯರಿಗೆ ಕೊಟ್ಟಿದ್ದೆ. ಗಣ್ಯರ್ಯಾರಿಗೂ ಹೇಳಲಿಲ್ಲ. ಆ ನನ್ನ ಮದುವೆ ಮನೆಯಲ್ಲೇ ಆ ಹಳ್ಳಿ ಜನ ಬಂದು ನನ್ನ ಮೇಲೆ ಹಲ್ಲೆ ಮಾಡಿ ಅಪಮಾನ ಮಾಡಿದರೆ ಮಾನ ಹೋಗುತ್ತದೆ ಎಂದು ಹೆದರಿದ್ದೆ. ಛೇ; ಮದುವೆಯನ್ನು ಒಂದು ತಾಳ್ಮೆಯಲ್ಲಿ ನೆಮ್ಮದಿಯಿಂದ ಮಾಡಿಕೊಳ್ಳಲೂ ಆಗದಲ್ಲಾ ಎಂದು ಚಡಪಡಿಸುತ್ತಿದ್ದೆ. ಮದುಮಗನಿಗೆ ಇರಬೇಕಾದ ಯಾವ ಸಡಗರವೂ ಇರಲಿಲ್ಲ. ಒಂದೇ ಒಂದು ಹೊಸ ಬಟ್ಟೆ ಖರೀದಿಸಲಿಲ್ಲ. ಯಾರಿಗೂ ಕೂಡ ನಾನಾದರು ಹೊಸ ಬಟ್ಟೆಗಳ ಕೊಡಿಸಲಿಲ್ಲ. ವಿಚಿತ್ರ ಎಂದರೆ; ಮದುವೆ ಇನ್ನು ಹತ್ತು ದಿನ ಇದೆ ಎನ್ನುವಾಗ ತನಗೆ ಈ ಮದುವೆಯ ಅವಶ್ಯಕತೆ ಇದೆಯೆ ಎಂಬ ಪ್ರಶ್ನೆ ಬಂದು ತಿವಿಯುತ್ತಿತ್ತು. ಅದರ ನೀತಿ ಅನೀತಿ ಏನೆಂಬುದೇ ಹೊಳೆಯುತ್ತಿರಲಿಲ್ಲ. ಈ ಸಂದರ್ಭದಲ್ಲಿ ಈ ಇಬ್ಬಂದಿ ಮನಸ್ಸು ಯಾಕೆ ಎಂದು ಆತ್ಮವ ಕೇಳಿದರೆ ಅದು ಮುನಿದಂತಿತ್ತು. ಯಾವ ಸಿದ್ಧತೆಗಳನ್ನೂ ಮಾಡಿಕೊಂಡಿರಲಿಲ್ಲ. ನನಗೆ ಯಾರೂ ಇಲ್ಲ ಎನಿಸಿತ್ತು. ತಬ್ಬಲಿತನ ಬೇತಾಳವಾಗಿ ಬೆನ್ನೇರಿತ್ತು. ಇನ್ನೂ ಮೂರು ದಿನ ಇತ್ತು. ಅಕ್ಕನ ಮನೆಗೆ ಹೋದೆ. ಏನೋ ನಾಚಿಕೆ, ಅಪಮಾನ, ತಿರುಬೋಕಿ ತಿರುಪೆ ಬೇವಾರ್ಸಿ ಎಂಬ ಭಾವನೆಗಳು ನನ್ನ ಸುತ್ತ ಚಪ್ಪಾಳೆ ಬಡಿಯುತ್ತ ಸುತ್ತಿ ಆಡಿಸುತ್ತಿದ್ದವು. ನನಗೆ ಅದು ಸುಖವೊ ದುಃಖವೊ ಎರಡೂ ಗೊತ್ತಾಗದೆ ಪೆಚ್ಚಾಗಿದ್ದೆ.
ಆ ಒಂದು ಮುದುಕಿ ಬಂತು. ಹೆದರಿದೆ; ಏನಾದರೂ ಚುಚ್ಚುವಳು ಎಂದು. ನನ್ನಕ್ಕ ಅವಳಿಗೆ ಹೊಗೆಸೊಪ್ಪು ಕೊಟ್ಟು ಕಳಿಸಿಬಿಟ್ಟಳು. ಹೆಣ್ಣಿಗೆ ಹತ್ತಾರು ಶಾಸ್ತ್ರಗಳ ಮಾಡುತ್ತಲೇ ಇದ್ದರು. ಶೋಭಳಿಗೂ ಅವು ಇಷ್ಟ ಇದ್ದಂತಿರಲಿಲ್ಲ. ಸೀರೆ ಕಟ್ಟುಕೊಳ್ಳುವ ವಯಸ್ಸೇ ಅಲ್ಲ. ನನಗೊ; ಈ ಮದುವೆ ಎಷ್ಟು ಬೇಗ ಆಗುತ್ತೊ ಎಂದು ಜಿಗುಪ್ಸೆ ಬಂದು ಬಿಟ್ಟಿತ್ತು. ಗಂಡಿನ ಕಡೆಯವರು ಎಲ್ಲಿ ಎಂದರು ಮದುವೆ ಮಾಡುವ ಯಜಮಾನರು. ಹೆಣ್ಣು ಗಂಡು ಎರಡೂ ಕಡೆಯವರೂ ನಾನೇ… ನಾವೇ… ಏನೇಳಿ’ ಎಂದಳು ಅಕ್ಕ. ‘ಗಂಡನ್ನು ಬೇರೆ ಮನೆಯಲ್ಲಿ ಇರಿಸಮ್ಮಾ… ಈಗ ಜೊತೆಯಲ್ಲಿರಿಸಬಾರದು’ ಎಂದರು. ಆಯ್ತು ಎಂದ ಕೂಡಲೆ ಯಾರೊ ಹಿಡಿದು ಆ ಹೊಗೆಸೊಪ್ಪಿನ ಮುದುಕಿಯ ಮನೆಗೆ ಕರೆದುಕೊಂಡು ಹೋಗಿ ತಾತ್ಕಾಲಿಕವಾಗಿ ಒಂದು ಗಂಡಿನ ಮನೆಯನ್ನೇ ಸ್ಥಾಪಿಸಿಬಿಟ್ಟರು. ಅದೊ ಗಬ್ಬೆದ್ದು ನಾರುತ್ತಿದ್ದ ತೊಟ್ಟಿಮನೆ. ಎಲ್ಲ ಅಲ್ಲೇ… ಕೂರಲು ಪ್ರತ್ಯೇಕ ಕೊಠಡಿ ಇಲ್ಲ. ‘ಗಂಡು ಕಚ್ಚೆ ಪಂಚೆ ಹಾಕಂಡು ಪೇಟ ಕಟ್ಕಬೇಕು’ ಎಂದರು. ‘ಆಗಲ್ಲ’ ಎಂದೆ. ‘ಇದೇನಪ್ಪಾ ನಿಂದು ಮೊಂಡಾಟ… ಆಗ್ಬೇಕಾದ ಕಾಲ್ಕೆ ಮದ್ವೆ ಆಗ್ದೆ ಮುದುಕ ಆಗುವಾಗ ಬಂದಿದ್ದೀಯೇ… ಹೋಗ್ಲಿ ಬಿಡು ಅಂತಾ ಹೆಣ್ಣ ಕೊಟ್ಟು ಮದುವೆ ಮಾಡ್ತಾ ಇದ್ದೀವಿ… ಅದ್ಯಾವುದು ಅದು ನಿನ್ನ ಪ್ಯಾಂಟು ಅಂಗಿಯ ಅತ್ತಾಗಿ ಬಿಚ್ಚಿ ಬಿಸಾಕುಬುಟ್ಟು ವಡ್ದಾರ್ದೆಲಿ ಬಾ… ಕಚ್ಚೆ ಕಟ್ತೀವಿ’ ಎಂದರು. ನಾನು ಉಡುದಾರ ಕಿತ್ತು ಬಿಸಾಡಿದ್ದು ಬಾಲ್ಯದಲ್ಲಿ… ಅದರಲ್ಲೇ ಇನ್ನೂ ಇರುತ್ತಾನೆ ಎಂದುಕೊಂಡಿದ್ದಾರಲ್ಲಾ ಎಂದು ಸುಮ್ಮನೆ ಕೂತೇ ಇದ್ದೆ. ಆ ಮುದುಕಿ ಹತ್ತಿರ ಬಂದವಳೇ… ‘ಅದಿದ್ದಾದೊ ಇಲ್ಲವೊ ಅಂತಾ ನೋಡ್ತಾರೆ! ಇದ್ರೆ ಬಿಗಿದಿ ಕಟ್ತರೆ… ವೋಗು ನಾಚ್ಕಬ್ಯಾಡ’ ಎಂದಳು. ‘ಅದಿಲ್ಲ ಅಜ್ಜೀ’ ಎಂದೇ ಬಿಟ್ಟೆ. ‘ಹಾsss’ ಎಂದು ಹೌಹಾರಿ… ‘ಅಯ್ಯಯ್ಯೋ ಅದೇ ಇಲ್ಲಾ ಅಂತಾ ಗಂಡೇ ಹೇಳ್ತಾ ಅದೇ’ ಎಂದು ಬಾಯಿ ತೆಗೆದುಕೊಂಡು ಸದ್ದು ಮಾಡಿದಳು. ನನಗೊ ನಾಚಿಕೆ, ನಗು, ಸಿಟ್ಟು… ಈ ಮೂರ್ಖರ ಕೈಗೆ ಸಿಕ್ಕಿಬಿದ್ದೆನಲ್ಲಾ ಎಂಬ ಮುಜುಗುರ. ಅವನಾರೊ ಕೊಂಚ ನನ್ನ ಪರವಾಗಿದ್ದವನು… ಹೇ ಬೋಡೀ… ಅದಿದ್ದದೊ ಇಲುವೊ ಅಂತಾ ಕೈ ಹಾಕಿ ನೋಡಿ ಕಟ್ಟುರು ನಾವೂ… ನೀನೆಲ್ಲಿ ಕೈ ಹಾಕಿ ನೋಡಿದ್ದೇ… ಮಾನಮರ್ವಾದಿ ಇದ್ದದೆ ನಿನಗೆ’ ಎಂದು ರೇಗಿದ. ಲೇ ನನ್ಗೆ ಮರ್ವಾದಿ ಅದೆ ಕನಾವೋಲಾ… ಮಾನ ಇಲ್ಲ ಅಂದೋನು ಅವುನೇ ತಾನೆ’ ಎಂದಿದ್ದು ಕೇಳಿಸಿತು. ಆ ಮನೆಯಿಂದ ಹೊರ ಬಂದು ರೇಗಿದ್ದೆ. ನನ್ನ ಮಾವ ಸಮಾಧಾನ ಮಾಡಿದರು. ಯಾರೊ ನಗುತ್ತಿದ್ದರು. ‘ಹೋಗ್ಲಿ ಒಂದು ಸೂಟಾದ್ರು ಆಕಂದು ಬರುಕಿಲ್ಲುವೇ’ ಎಂದರು ಯಾರೊ. ‘ಸ್ನಾನ ಮಾಡಿಸಿ ಮುತ್ತೈದೆಯರ ಕೈಲಿ’ ಎಂದು ಮುದುಕಿ ಪರೀಕ್ಷೆ ಮಾಡೇ ಬಿಡುವ ಎಂಬಂತೆ ಒತ್ತಾಯಿಸಿದಳು. ಅದು ಅವರ ಶಾಸ್ತ್ರ. ‘ನಾನು ದಿನಾಲು ಸ್ನಾನ ಮಾಡ್ತೀನ್ರಮ್ಮಾ… ಬೀದಿಯಲ್ಲಿ ಬೆತ್ತಲೆಯಾಗಿ ಕೂತು ಸ್ನಾನ ಮಾಡಲಾರೆ’ ಎಂದೆ.
‘ಹಂಗಲ್ಲಕನಪಾ… ಅರುಸುಣದ ನೀರಾಕ್ತಿವಿ. ಅದಿಲ್ದೆ ಮದುವೆ ಮಾಡಂಗಿಲ್ಲ’ ಎಂದರು. ತಕ್ಷಣವೇ ಆ ಮುದುಕಿ; ‘ಅದ್ನೇ ನಾನು ಯೇಳ್ತಿರುದು ಅಟ್ಟೊತ್ತಿಂದ್ಲು… ಅದಿಲ್ದೆ ಕಂಕಣ ಕಟ್ಟಬಾರ್ದು ಅಂತಾ’ ಎಂದು ಪರಿಶೀಲನೆಗೆ ಒತ್ತಾಯಿಸುವಂತೆ ಜನರ ಗಮನ ಸೆಳೆದಳು. ‘ಇರ್ಲಿ ಬಿಡಮ್ಮಾ… ಅವುರು ಪ್ಯಾಟೆಯವರು. ಹೆಚ್ಚಾಗಿ ವಿದ್ಯಾವಂತ್ರು. ಇಂತೆವೆಲ್ಲ ಅವುರಿಗೆ ಇಷ್ಟ ಇಲ್ಲ’ ಎಂದು ಹೇಗೊ ಬೀದಿಯಲ್ಲಿ ಕೂರಿಸಿ ಸ್ನಾನ ಮಾಡಿಸುವುದ ತಪ್ಪಿಸಿದ್ದರು.
ಮರುದಿನ ಗಂಡನ್ನು ಕರೆದುಕೊಂಡು ಮದ್ದೂರಿನ ಗುರುಭವನಕ್ಕೆ ಹೋಗಬೇಕಿತ್ತು. ನಾನು ಜೊತೆಗೆ ಯಾರನ್ನೂ ಕರೆದುಕೊಂಡು ಹೋಗಿರಲಿಲ್ಲ. ‘ಇದೇನೊ… ಯಾವ ಸೀಮೆ ಗಂಡೊ… ನಿಂಜೊತೆಗೆ ಒಬ್ನೇ ವಬ್ನೂ ಇಲ್ಲಾ’ ಎಂದು ಮುದುಕ ಛೇಡಿಸಿದ. ಆ ಕೂಪ ಮಂಡೂಕಗಳಿಗೆ ನಾನು ಏನು ಎಂಬುದೇ ಗೊತ್ತಿರಲಿಲ್ಲ. ನಾಡಿಗೆಲ್ಲ ಗೊತ್ತಿದ್ದೆ; ಆದರೆ ಆ ಕುಗ್ರಾಮಕ್ಕೆ ನಾನೊಬ್ಬ ವ್ಯರ್ಥವಾದ ಮೂರ್ಖನಂತೆ ಕಂಡಿದ್ದೆ. ನನ್ನ ತಾಯಿಯ ತಾಯಿ ತನ್ನ ಬಳಗವನ್ನೆಲ್ಲ ಕಟ್ಟಿಕೊಂಡು ಬಂದಿದ್ದಳು. ಒಂದೇ ಸಮನೆ ದುಃಖದ ಒದ್ದೆಯಾದ ಕಣ್ಣುಗಳಲ್ಲಿ ನನ್ನನ್ನು ದಿಟ್ಟಿಸುತ್ತಲೇ ಇದ್ದಳು. ಇವನ ಕತ್ತ ಮುರಿದು ಬಿಡುತ್ತಿದ್ದೆ ಅವತ್ತು ಗೋಧೂಳಿ ಸಂತೆ ಹೊತ್ತಲ್ಲಿ ಆ ಮರೆಯ ತಿರುವುದಾರಿಯಲ್ಲಿ ಎಂದು ಆ ಕ್ಷಣ ಅವಳನ್ನು ಕಾಡುತ್ತಿತ್ತೇನೊ. ಅಜ್ಜಿ ಸರಿಯಾದ ನಿರ್ಣಯಕ್ಕೇ ಬಂದಿದ್ದಳು. ಯಾರೊ ಬಂದು ಉಳಿಸಿಬಿಟ್ಟರು ಎಂದು ಆ ಕ್ಷಣವ ನೆನೆದೆ. ಈಗ ತನ್ನ ಮಗಳು ಇದ್ದಿದ್ದರೆ ಎಷ್ಟು ಸಂತೋಷ ಪಡುತ್ತಿದ್ದಳೊ ಮಗನ ಕಂಡು ಎಂದು ಜನರ ಜೊತೆ ಹೇಳಿಕೊಂಡು ಹಳೆಯ ಗಾಯಗಳ ಪೊರೆಗಳ ಎಳೆದುಕೊಳ್ಳುತ್ತಿದ್ದಳು.
ಛೇ… ಮದುವೆ ಮನೆಯೇ ಒಂದು ಅಸಂಗತ ನಾಟಕಗಳ ದೊಡ್ಡ ಸಂತೆ. ಸಂತೆಯ ಒಳಗೆ ಎಷ್ಟೊಂದು ಕಂತೆಗಳು… ಎಂದು ಪಡಸಾಲೆಯಲ್ಲಿ ಚಾಪೆ ಮೇಲೆ ಒಬ್ಬನೇ ಕೂತಿದ್ದೆ. ಯಾರ್ಯಾರೊ ಬಂದು ಮದುವೆ ಗಂಡು ಎಲ್ಲಿದ್ದಾದಪ್ಪಾ ಎಂದು ನನ್ನನ್ನೇ ಕೇಳುತ್ತಿದ್ದರು. ‘ಒಳಗೆ ರೆಡಿ ಆಗ್ತಾ ಇದೇ… ನಾನು ಅವರ ಕಡೆಯವನು. ಅದು ಇದು ಕೆಲಸ ಮಾಡುಕೆ ಬಂದಿವಿನಿ’ ಎಂದಿದ್ದೆ. ಅಕ್ಕ ಶಾಂತಿ ಇಬ್ಬರೂ ಬಾರಿ ಓಡಾಡುತ್ತಿದ್ದರು. ಕೆಲವರು ತಿಳಿದು; ‘ಇದೆನಾ ಗಾಂಡು… ಇದ್ಯಾವ ಸೀಮೆಯೋನೊ… ತಥ್ ತನಗೆ ಬ್ಯಾಡಾ… ಮದ್ವೆ ಹೆಣ್ಣಿನ ಜೊತೆ ನಿಂತ್ಕೊಂಡು ಅಚ್ಚುಕಟ್ಟಾಗಿ ನಕ್ಕಂದು ತಾಳಿ ಕಟ್ಟುಕೆ ಒಂದೊಳ್ಳೆ ಬಟ್ಟೆನೂ ಹಾಕದೇ ಬಂದವನಲ್ಲಾ… ಇಂತೆವುನ ಎಂಗೆ ಗಂಡು ಅನ್ನುದು’ ಎಂದು ಅತ್ತ ಸಂದಿಯಲ್ಲಿ ಮಾತಾಡುತ್ತ ವಿಷಾದ ಪಡುತ್ತಿದ್ದರು. ಬಲವಂತವಾಗಿ ಹಿಡಿದು ತಂದು ಮದುವೆ ಮಾಡಿಸುತ್ತಿದ್ದಾರೇನೊ ಎಂದು ಕೆಲವರು ಗುಮಾನಿ ಪಡುತ್ತಿದ್ದರು. ‘ಗಂಡಿಗೆ ಒಂದೊಳ್ಳೆ ಡ್ರೆಸ್ ತಕೊಡುಕೆ ಏನಾಗಿತ್ರತ್ತಿಗೇ ನಿಮಗೇ… ನನ್ನತ್ರ ಎರಡು ಎಕ್ಸಟ್ರಾ ಡ್ರಸ್ ಅವೇ… ಅವ್ನೇ ಕೊಟ್ತಿನಿ. ಹಾಕಿಸಿಬಿಡಿ. ಅಳ್ತೆ ಸರೋಗ್ದೆ ಇದ್ರೆ ಎಳ್ದು ಬೆಲ್ಟ ಆಕುವ’ ಎಂದ ಬೆಂಗಳೂರಿಂದ ವಿಪರೀತ ಸೆಂಟು ಮೆತ್ತಿಕೊಂಡು ಬಂದಿದ್ದವನೊಬ್ಬ. ಯಾರೊ ಬಂದು… ‘ಸಾರ್ ಡ್ರೆಸ್ ಚೇಂಜ್ ಮಾಡ್ಕಳಿ’ ಎಂದ. ಕೈ ಸನ್ನೆ ಮಾಡಿ ‘ತೊಲಗಿ’ ಎಂದಿದ್ದೆ. ಅದೊಂದು ಲಡಾಸು ಗುರುಭವನ. ವಿವರಿಸಿದರೆ ರೇಜಿಗೆ ಆಗುತ್ತದೆ. ಮೂತ್ರ ವಿಸರ್ಜಿಸಲು ಒತ್ತಾಯ ಆಗುತ್ತಿದೆ. ಅಲ್ಲಿಗೆ ಹೋಗಲು ಸಾಧ್ಯವೇ ಇರಲಿಲ್ಲ. ಆ ಜನ ಅದನ್ನು ಅಷ್ಟು ಕೆಡಿಸಿದ್ದರು.
ಅಂತೂ ಅಲ್ಲೊಂದು ಜಲಶಾಸ್ತ್ರಕ್ಕೆ ಒಪ್ಪಿದೆ. ಅದರ ಮೂಲಕ ಮೂತ್ರ ವಿಸರ್ಜಿಸಲು ಅಲ್ಲೆಲ್ಲಾದರು ಮರೆ ಸಿಗುತ್ತದೆ ಎಂದು. ಬಾವಿಯಿಂದ ನೀರು ತರುವುದು ಆ ಶಾಸ್ತ್ರಹೊಸ ಮಡಕೆಯಲ್ಲಿ ಹೆಂಗಸರು ನೀರು ಹೊತ್ತುಕೊಂಡು ನನ್ನನ್ನು ಮುಂದೆ ಬಿಟ್ಟುಕೊಂಡು ಬರುವ ಆಚಾರ ಒಂದೆಜ್ಜೆಯನ್ನೂ ಅತ್ತಿತ್ತ ಬಿಡಲಿಲ್ಲ. ಆ ಹೆಂಗಸರೊ ಹಿಂದೆ ಹಿಂದೆಯೆ ಬರುತ್ತಿದ್ದರು. ಮೂತ್ರ ವಿಸರ್ಜಿಸಲು ಆಗಲಿಲ್ಲ. ಹಸೆ ಮಣೆ ಮೇಲೆ ನಿಲ್ಲಿಸಿದರು. ಶೋಭಳ ಮುಖ ನೋಡಿದರೆ ಗುರುತೇ ಸಿಗುತ್ತಿಲ್ಲ. ಅಷ್ಟೊಂದು ಯರ್ರಾಬಿರ್ರಿ ಯಕ್ಷಗಾನದ ವೇಷಧಾರಿಯಂತೆ ಅದ್ಧೂರಿ ಅಲಂಕಾರ ಮಾಡಿಬಿಟ್ಟಿದ್ದರು. ನಾನು ಗಡ್ಡ ಕೂಡ ಬೋಳಿಸಿರಲಿಲ್ಲ. ಯಾವನೊ ಒಂದು ದೊಗಳೆ ಮೈಸೂರು ಪೇಟವ ತಂದು ತಲೆಗೆ ದಬ್ಬಾಕಿದ್ದ. ತೆಗೆದು ಅತ್ತ ಹಾಕಿದ್ದೆ. ನೂಕು ನುಗ್ಗಲು ಜನ. ಯಮ ಭಯಂಕರ ವಾದ್ಯದವರ ಪೈಪೋಟಿ ಸದ್ದು. ಅವರು ಕುಡಿದು ಚಿತ್ತಾಗಿದ್ದರು. ಆ ಡೋಲು ಬಾರಿಸುವ ಇಬ್ಬರು ಬಲವಾದ ಡೋಲುಗಳ ಹೆಗಲಿಗೆ ಹೇರಿಕೊಂಡು ತಮ್ಮ ದಡಿ ಹೊಟ್ಟೆಗಳ ಮೇಲೆ ಕುಣಿಸಿಕೊಂಡು ಡೋಲು ಬಡಿಯುತ್ತಿದ್ದ ರಭಸಕ್ಕೆ ಆ ಪುಟ್ಟ ಮದುವೆ ಮನೆಯ ತಾರಸಿಯೇ ಕಿತ್ತು ಬೀಳುವಂತಿತ್ತು. ಅದೂ ಅಲ್ಲದೆ ನಾನು ಹೆಚ್ಚೊ ನೀನು ಹೆಚ್ಚೋ ಎಂದು ತರಾವರಿ ವಾಲಗದವರು ಅಪಸ್ವರಗಳ ಮೇಳದಲ್ಲಿ ಕುಣಿದಾಡುತ್ತ ನಾದ ಬ್ರಹ್ಮರಂತೆ ಮಂಗಳವಾದ್ಯವನ್ನೆ ರಣ ವಾದ್ಯವಾಗಿ ಮಾರ್ಪಡಿಸಿದ್ದರು. ಅನೇಕರು ಅವರಿಗೆ ಕುಮ್ಮಕ್ಕು ಕೊಡುತ್ತಿದ್ದರು. ಎಲ್ಲರೂ ಜಗಳವನ್ನು ಕೈ ಕೈ ಮಿಲಾಯಿಸಿ ಹೀನಾಯ ಬೈಯ್ಗಳಿಂದ ಮಾಡಿದರೆ ಈ ವಾದ್ಯದವರು ವಾದ್ಯ ಪರಿಕರಗಳನ್ನೇ ಯುದ್ಧೋಪಕರಣಗಳನ್ನಾಗಿ ಮಾಡಿಕೊಂಡು ಈ ಪರಿ ಬಡಿದಾಡುತ್ತಿದ್ದಾರಲ್ಲಾ… ನಾಳೆ ನನ್ನ ಭವಿಷ್ಯದ ಮುನ್ಸೂಚನೆಯೇ ಇದು ಎಂದು ದಿಗಿಲಾಯಿತು.
ಅಷ್ಟರಲ್ಲಿ ಯಾರೊ ಗದ್ದಲ ದೊಂಬಿ ಮದುವೆಯಲ್ಲಿ ಜೇಬಿಗೆ ಕೈ ಹಾಕುತ್ತಿದ್ದಾರಲ್ಲಾ ಎನಿಸಿತು. ನನ್ನ ಕೈಗೆ ಕಂಕಣ ಕಟ್ಟಿ ಹೆಣ್ಣು ಗಂಡು ಇಬ್ಬರ ಕೈಯಲ್ಲು ತೆಂಗಿನ ಕಾಯಿ ಹಿಡಿಸಿ ಹಾಲು ಬಿಡಿಸಿ ಅಕ್ಷತೆ ಹಾಕಿಸುತ್ತಿದ್ದಾರೆ… ಛೀ ಯಾವುದು ಹುಳ ಎಂದರೆ ಪಿಕ್‌ಪ್ಯಾಕೆಟ್ ಪರಿಣಿತ ಕೈ ಬೆರಳುಗಳೆನಿಸಿ ತೊಡೆಯಿಂದ ತಳ್ಳಿ; ಯಾರೊ ಜೇಬಿಗೆ ಕೈ ಹಾಕುತ್ತಿದ್ದಾರೆ ನೋಡು ಎಂದು ನನ್ನ ಮಿತ್ರನಿಗೆ ಹೇಳಿದೆ. ಆತ ಉಮೇಶ್ ಚಂದ್ರ. ಪ್ರತಿಭಾವಂತ… ತಿಕ್ಕಲ… ಮಹಾಮುಂಗೋಪಿ… ತ್ಯಾಗಕ್ಕೂ ಸೈ… ಪಟ್ಟಂತ ಹಿಡಿದಿದ್ದ ಆ ಕಳ್ಳನ. ಅವನು ಕೊನೆಯ ಚಿಕ್ಕಪ್ಪ. ಮೆಲ್ಲಗೆ ನುಸುಳಿ ಬಂದು ದುಡ್ಡು ಎಗರಿಸಲು ಕೈ ಹಾಕಿದ್ದ. ಪಟಾರೆಂದು ಅಲ್ಲೆ ಬಾರಿಸಿದ್ದ ಗೆಳೆಯ. ಅಷ್ಟು ಹೊತ್ತಿಗೆ ಮೈಸೂರಿಂದ ನನ್ನ ವಿದ್ಯಾರ್ಥಿಮಿತ್ರರೆಲ್ಲ ಬಂದಿದ್ದರು. ಗಂಡುನ್ ಚಿಕ್ಕಪ್ಪ ನಾನು… ಅರ್ಜೆಂಟು ಅಲ್ಲಿ ಸಾಸ್ತ್ರ ಮಾಡುಕೆ ದುಡ್ಡು ಬೇಕಿತ್ತು; ಅದ್ಕೆ ಕೈ ಹಾಕಿದ್ದೆ ಎಂದು ಸುಳ್ಳು ಹೇಳಿದ್ದ. ನನ್ನ ಅತ್ತೆಯರು ಹಾಲು ಬಿಡುತ್ತಿದ್ದರು. ಆ ಪಾಪಿ ಚಿಕ್ಕಪ್ಪ ನಾರುತ್ತ ತೂರಾಡುತ್ತಿದ್ದ. ನೂರು ರೂ ಕೊಟ್ಟು ಅತ್ತ ಅವನ ತಳ್ಳಿ ಎಂದಿದ್ದೆ.
ಎಂತಹ ಖದೀಮ! ಅವತ್ತು ತಾತ ತೀರಿಕೊಂಡಾಗ ಒಂದಿಡಿ ಮಣ್ಣನ್ನೂ ಹಾಕುವಂತಿಲ್ಲ ಎಂದು ದೂರ ನೂಕಿದ್ದನಲ್ಲವೇ ಇವನೂ… ಅಂತವನು ಈಗ ಕದಿಯಲು ನನ್ನ ಜೇಬಿಗೆ ಮದುವೆ ಮಂಟಪದಲ್ಲಿ ಕೈ ಹಾಕಿದನಲ್ಲಾ… ಇವರೆಲ್ಲ ಯಾವ ಕಾಲಕ್ಕೂ ಉದ್ಧಾರ ಆಗುವುದಿಲ್ಲ… ಎಂದು ವಿಷಾದಗೊಂಡೆ. ತಂಗಿ ಶಾಂತಿ ನನ್ನ ಮುಖವ ಕರ್ಚೀಪಿನಿಂದ ಒರೆಸಿ ಅಕ್ಕರೆ ಮಾಡುತ್ತಿದ್ದಳು. ಅವಳ ತಾಯಿ ಆ ಕೊನೆ ಕ್ಷಣದಲ್ಲಿ ತನ್ನ ಮಗುವ ನನ್ನ ಕಂಕುಳಿಂದ ಕಿತ್ತುಕೊಂಡು ರಭಸವಾಗಿ ಬಿರುಗಾಳಿಯಂತೆ ಓಡಿ ಹೋಗುತ್ತಿದ್ದ ಆ ಕ್ರೂರ ದೃಶ್ಯ ದೂಳಿನಂತೆ ಕಣ್ಣಿಗೆ ಬಡಿಯಿತು. ಶಾಂತಿಯ ಮುಖವ ನೋಡಿದೆ. ಅಣ್ಣ ಎಂಬ ಪ್ರೀತಿಯಲ್ಲಿ ಏನೊ ಸಡಗರ ಪಡುತ್ತಿದ್ದ ಅವಳ ಕಣ್ಣಲ್ಲಿ ‘ಮಾದೇವಕ್ಕ’ ಕಂಡಂತಾಯಿತು. ನನ್ನ ತಾಯಿ ನೆರಳಂತೆ ನನ್ನನ್ನು ಸುತ್ತಿಕೊಂಡೇ ಇದ್ದಳು. ಅಷ್ಟೊಂದು ಚೆಂದದ ಹುಡುಗಿಯರು ಹಿಂದೆ ಬಿದ್ದಿದ್ದರಲ್ಲಾ; ಅವರೆಲ್ಲ ಈಗ ಎಲ್ಲಿ ಹೋದರೂ… ಒಂದು ದಿನ ಎಲ್ಲರೂ ಹೀಗೆಯೇ. ತಂತಾನೆ ದೂರವಾಗಿಬಿಡುತ್ತಾರೆ. ಅದಕ್ಕೇ ಏನೊ… ಹೆಣ್ಣಿಗೊಂದು ಗಂಡು; ಗಂಡಿಗೊಂದು ಹೆಣ್ಣು ಕಟ್ಟಿಹಾಕುವುದು ಎಂದು ತಾಳಿ ಕಟ್ಟಿದೆ. ತಲೆ ಚಿಟ್ಟು ಹಿಡಿಯುತಿತ್ತು. ಅವನು ಒಬ್ಬ ಚಿಕ್ಕಪ್ಪ ಉರಿಗಣ್ಣಲ್ಲಿ ದಿಟ್ಟಿಸುತ್ತಿದ್ದ. ಜಗಳ ತೆಗೆಯಲು ಕಾಲು ಕೆರೆಯುತ್ತಿದ್ದ. ಇವನು ಒಬ್ಬನೇ ಸಿಕ್ಕರೆ ಹೃದಯ ಸ್ತಂಭನ ಪೆಟ್ಟಿನಿಂದ ಒಂದೇ ಹೊಡೆತಕ್ಕೆ ಕೊಂದೇ ಬಿಡುವೆ ಎಂಬ ಸಿಟ್ಟು ಬಂತು. ಫೋಟೊ ತೆಗೆಸಿಕೊಳ್ಳಲು ಬಂದಂತೆ ಹತ್ತಿರ ಬಂದೂ… ‘ಬೂಟ್ ಪಾಲಿಸ್ ಮಾಡೋನಿಗಿಂತ್ಲು ಕಡೆಯಾದಲ್ಲೊ… ನಮ್ಮ ವಂಶದ ಮಾನ ಹರಾಜಾಕ್ದಲ್ಲೊ… ಒಂದು ಒಳ್ಳೆ ಬಟ್ಟೆಗೂ ಗತಿ ಇಲ್ಲವಲ್ಲೊ ನಿನಗೆ’ ಎಂದು ಜಗಳ ತೆಗೆದ. ಅಲ್ಲೇ ಒಂದು ಛೇರಿನ ಮೇಲೆ ಪಾಳೆಯಗಾರನಂತೆ ಕೂತು ಏನೇನೊ ಬೈಯ್ಯುತ್ತಿದ್ದ. ‘ಇವುನಿಗೆ ಒಂದು ದಾರಿ ತೋರಿಸ್ದೋ… ನಮ್ಮ ಯಾರ ಮಾತಿಗು ಬೆಲೆ ಕೊಡ್ಲಿಲ್ಲ… ನಮಗೇ ಮೋಸ ಮಾಡುಬುಟ್ಟ’ ಎಂದು ಬೂಟಿನ ಕಾಲು ಕುಣಿಸುತ್ತ ಕೆಕ್ಕರಿಸಿದ. ‘ಆಗಲಪ್ಪಾ… ನೀನು ದಾರಿ ತೋರಿಸಿರೊ ದೇವರು… ನಿನ್ನ ಮಕ್ಕಳಿಗೆ ನೀನೂ ನಾಳೆ ಮದುವೆ ಮಾಡ್ಬೇಕಲ್ಲಾ; ನೋಡ್ತಿನಿ… ನಿನ್ನ ಮಕ್ಕಳಿಗೆ ನೀನು ಯಾವ ದಾರಿ ತೋರಿಸ್ತೀಯೆ ಅಂತಾ ನೋಡ್ತೀನಿ…’ ಎಂದು ಮನಸ್ಸನ್ನು ಅತ್ತ ಸರಿಸಿದೆ. ಹೆಣ್ಣು ಗಂಡನ್ನು ಊಟಕ್ಕೆ ಕೂರಿಸಿದರು. ನನ್ನ ಹಳ್ಳಿಯ ಬಾಲ್ಯದ ಆ ಎಲ್ಲ ಜನರು ಕಂಡರು. ಆದರೆ ಅವತ್ತಿನ ಬಾಲ್ಯದ ಮುಗ್ಧತೆಯೇ ನನಗಿರಲಿಲ್ಲ.
ತೋಪಮ್ಮ ಕಂಡಳು. ಮಡಕೂಸಮ್ಮ ತಲೆ ಸವರಿದಳು. ಎಲ್ಲರೂ ಹಣ್ಣು ಹಣ್ಣು ಮುದುಕಿಯರು. ‘ನೀನೆಲ್ಲಪ್ಪ ನಮ್ಮೂರಿಗೆ ಬಂದಿಯೇ… ನಾವು ಸತ್ರೆ ಸುದ್ದಿಯ ನಿನುಗೆ ಯಾರಪ್ಪ ಯೇಳಾರೂ… ಸಾಯೋಕು ಮುಂಚೆ ನಿನ್ನ ತಲೆ ಮ್ಯಾಲೆ ಅಕ್ಕಿಕಾಳು ಹಾಕುವ ಅಂತಾ ಬಂದೊ… ನಮುಗೆಲ್ಲ ಗೊತ್ತು ಕನಪ್ಪಾ… ಯೇನ್ಮಾಡ್ತಿಯೆ! ಮಾತಾಡುವಂಗಿಲ್ಲ. ತಬ್ಲಿ ಮಗ ನೀನು ಯೆಂಗೆ ಸತ್ತು ಬದ್ಕಿದ್ದೀಯೆ ಅನ್ನುದು ನಿನುಗೆ ಮಾತ್ರ ಗೊತ್ತು… ಆಡ್ಕೊಳೊರು ಆಡ್ಕಲಿ… ದೇವ್ರು ನೋಡ್ಕತನೆ…’ ಎಂದು ಹಾರೈಸುತ್ತಿದ್ದರು. ಅವನು ನಮ್ಮಪ್ಪ ತನ್ನ ಸಂಗಡಿಗರ ಜೊತೆ ಕಲ್ಲಿನಂತೆ ನಿಂತಿದ್ದ. ಅಕ್ಷತೆ ಹಾಕಲು ಬರಲಿಲ್ಲ. ಬೇಕಿರಲಿಲ್ಲ. ಉಣ್ಣಲೂ ಮನಸ್ಸಿಲ್ಲ. ಮದುವೆ ಮನೆಯಲ್ಲಿ ಜಗಳ ಆಗಲಿಲ್ಲ ಎಂದರೆ ಮದುವೆ ಸರಿಯಾಗಿ ಆಗಲಿಲ್ಲ ಎಂಬ ಪ್ರತೀತಿ. ಚಿಕ್ಕಪ್ಪಂದಿರು ಪುಂಡರ ಕಟ್ಟಿಕೊಂಡು ಕೈ ಕೈ ಮಿಲಾಯಿಸಲು ಮುಂದಾಗುತ್ತಿದ್ದರು. ನನ್ನ ಮಾವ ಎಲ್ಲರಿಗೂ ಕೈ ಮುಗಿಯುತ್ತಿದ್ದ. ಎಲೆ ಮೇಲೆ ಏನೇನು ಹಾಕಿದ್ದರೊ… ಸುಮ್ಮನೆ ಕೈಯ್ಯಾಡಿಸಿದ್ದೆ. ಯಾವತ್ತೂ ನೆನಪಾಗದಿದ್ದ ಕವಿ ಡಿ.ವಿ.ಜಿ.ಯ ಸಾಲು ನುಗ್ಗಿ ನುಸುಳಿ ಬಂತು. ಬದುಕು ಜಟಕಾ ಬಂಡಿ; ವಿಧಿ ಅದರ ಸಾಹೇಬ… ನಡೆ ಎಲ್ಲೆಂದರಲ್ಲಿಗೆ… ಮದುವೆಗೂ ಮಸಣಕೋ’ ಛೇ; ಈ ಇಂತಹ ಗಳಿಗೆಯಲ್ಲೂ ಸ್ಮಶಾನ ನಮ್ಮ ಕಂಕುಳಲ್ಲೇ ಕೂತಿರುವಂತೆ ನೆನಪಿಗೆ ಬರುತ್ತದಲ್ಲಾ ಎನಿಸಿ ಹೆಂಡತಿ ಮುಖ ನೋಡಿದೆ. ಏನೊ ಆತಂಕ ಅವಳ ಮುಖದಲ್ಲೂ ತುಂಬಿತ್ತು.
ಯಾವುದೊ ಒಂದು ಬಾಡಿಗೆ ವಾಹನದಲ್ಲಿ ಬಂದಿದ್ದ ಚಿಕ್ಕಪ್ಪ ಎರಡು ಬಸ್ಸಿನಿಂದ ಊರ ಜನರ ಕರೆತಂದಿರುವೆ ಎಂದು ದುಡ್ಡು ವಸೂಲಿ ಮಾಡುತಿದ್ದ. ಅಸಹ್ಯ ಎನಿಸಿತು. ಯಾರೊಬ್ಬರನ್ನು ಮಾತಾಡಿಸಲಿಲ್ಲ. ನಾಗವಾರ ಹಾಗೂ ಬೆಸಗರಹಳ್ಳಿ ಮತ್ತು ಸ್ವಾಮಿಆನಂದ ಬಂದಿದ್ದರು. ಆ ಕಿರಿಕಿರಿಯಲ್ಲಿ ನಾನವರ ಸರಿಯಾಗಿ ನಡೆಸಿಕೊಳ್ಳಲು ಆಗಲಿಲ್ಲ. ಬಂದವರೆಲ್ಲ ಹೊರಡುತ್ತಿದ್ದರು. ಮದುವೆ ಮಂಟಪ ಬಿಕೊ ಎನ್ನುತ್ತಿತ್ತು. ಊರಿಗೆ ಹಿಂತಿರುಗಿದೆವು. ಸಾಕಾಗಿ ಹೋಗಿತ್ತು. ಎಲ್ಲಿಯಾದರು ಓಡಿ ಹೊಗಬೇಕು ಎನಿಸುತಿತ್ತು. ಮನೆ ತುಂಬ ಜನ. ಗಿಜಿಗಿಜಿ… ‘ಅಂತೂ ಯಡವಟ್ಟು ಮದ್ವೆ ಮುಗೀತು’ ಎಂದು ಯಾವನೊ ಕೆಮ್ಮುತಿದ್ದ. ಒಂದು ಮೂಲೆ ಸೇರಿದೆ. ಮೂರು ದಿನ ಆಗಿ ನೆರವಿಯೂ ಮುಗಿಯಿತು. ತಾಯಿಯ ತಾಯಿ ಉಳಿದುಕೊಂಡಿದ್ದಳು. ಸಾಕಷ್ಟು ಬುದ್ಧಿ ಹೇಳಿದಳು. ಹದಿನೈದು ದಿನ ಕಳೆದು ಕ್ಯಾಂಪಸ್ಸಿಗೆ ಹಿಂತಿರುಗಿದ್ದೆ.
ಛೇ; ಎಂತಹ ವಿಷಾದ ಮರೆವು? ಆ ಸಾವಿತ್ರಿ ಮದುವೆಗೆ ಬಂದಿರಲಿಲ್ಲ ಅಲ್ಲವೆ? ಯಾರನ್ನು ಕೇಳಲಿ… ಎಲ್ಲರ ಮುಖಗಳು ಸಾಲಾಗಿ ಬಂದು ಹೋದವು. ಕೊನೆಯ ಪಟ್ಟಾಗಿ ಗಂಡು ನನ್ನ ಮಗ… ಅವನಿಗೆ ವರೋಪಚಾರ ಮಾಡಿಲ್ಲ. ಒಂದು ಲಕ್ಷವ ನನಗೆ ಕೊಟ್ಟರೆ ಸರಿ; ಇಲ್ಲ ಎಂದರೆ ಈ ಸಂಸಾರವ ನಾಶ ಮಾಡದೆ ಬಿಡೆನು ಎಂದು ಅವನು ಅಪ್ಪ ಎನಿಸಿಕೊಳ್ಳುವ ಪ್ರಾಣಿ ಅಕ್ಕನಿಗೆ ಬೆದರಿಕೆ ಹಾಕಿದ್ದ. ಅಕ್ಕ ಹೇಗೊ ಸುಳ್ಳು ಭರವಸೆ ನೀಡಿ ಚಿಲ್ಲರೆ ಕಾಸು ಕೊಟ್ಟು ಕಳಿಸಿದ್ದಳು. ಕಿತ್ತು ತಿನ್ನುವ ಬಳಗ ಯಾವ ಆಧಾರದ ಮೇಲೆ ನನ್ನ ಮೇಲೆ ಹಕ್ಕು ಚಲಾಯಿಸುತ್ತದೆ ಎಂಬುದೇ ಗೊತ್ತಾಗುತ್ತಿರಲಿಲ್ಲ. ಸವಾಲುಗಳು ಸಾಲಾಗಿ ಮುಂದೆ ನಿಂತಿದ್ದವು. ಎ.ಕೆ.ರಾಮಾನುಜನ್ ಅವರು ಕೊಟ್ಟಿದ್ದ ಭರವಸೆಯ ಕಾಮನಬಿಲ್ಲ ಮೇಲೆ ಹಾರಾಡುತಿದ್ದೆ. ‘ಮದುಮಗನಾಗಿ ಬಂದವನೆ ಬೋಳಿಮಗ! ನಾಳೆ ಆಗುವನು ಕೋಳಿ ಮಗ! ಮುಂದೆ ಅದೆ ಮಾರಿ ಹಬ್ಬ’ ಎಂದಿದ್ದನಂತೆ ಪಿಂಡ ಪ್ರೇತ ಪ್ರಾಧ್ಯಾಪಕ. ಆ ನೊಣಜಾನಪದ ತಜ್ಞ ನಾಳೆ ಯಾವುದರ ಮೇಲೆ ಹೋಗಿ ಕೂತಿರುತ್ತಾನೊ; ಕಾಲ ನಿರ್ಧರಿಸುತ್ತದೆ ಎಂದು ಕಿವುಡನಂತಿದ್ದೆ. ಲಂಕೇಶರನ್ನು ಮದುವೆಗೆ ಕರೆದಿರಲಿಲ್ಲ. ಹೋಗಿ ಮಾತಾಡಿಸಿದ್ದೆ. ಆಗಲೇ ಏನೇನೊ ಚಾಡಿಗಳ ಬಿತ್ತಿದ್ದರು ಸಹ ಲೇಖಕರು. ಬದುಕಿ ಉಳಿಯೋಕೆ ಯಾಕಪ್ಪ ದೇವರೆ ಮನುಷ್ಯರಿಗೆ ಇಷ್ಟೊಂದು ಸುಳ್ಳುಗಳ ಕಲಿಸಿಕೊಟ್ಟಿರುವೆ ಎಂದು ದೇವರನ್ನೆ ಶಪಿಸಿದೆ.
ಏನೊ ಆಗುತ್ತದೆ ಎಂಬ ಸುಳಿವು ತಲೆ ಮೇಲೆ ಕಾಗೆ ಹಾರಾಡಿದಂತೆ ಕಿರುಕುಳ ಉಂಟಾಗುತಿತ್ತು. ತಿಂಗಳಲ್ಲಿ ಸಂಬಳವನ್ನೊ; ಫೆಲೋಷಿಪ್ ಅನ್ನೊ ಒಂದನ್ನು ಮಾತ್ರ ಪಡೆಯಬೇಕಾಗಿತ್ತು. ಲೆಕ್ಚರ್ ಸಂಬಳ ತೆಗೆದುಕೊಂಡರೆ ನಾಳೆ ಇಲ್ಲಿ ಕೆಲಸ ಖಾಯಂ ಆಗುತ್ತದೆ ಎಂದು ಫೆಲೋಷಿಪ್ ಬಿಟ್ಟು ಸಂಬಳವನ್ನೆ ಅವಲಂಬಿಸಿದ್ದೆ. ಅದಕ್ಕೆ ನೂರೆಂಟು ತರಲೆ. ಯಾರ ಮೇಲೂ ಹೇರದಿದ್ದ ನಿಯಮವ ನನ್ನ ಮೇಲೆ ಹಾಕಿದ್ದರು. ನಾನು ಯೋಗ್ಯವಾಗಿ ಪಾಠ ಮಾಡಿರುವೆನೊ ಇಲ್ಲವೊ ಎಂದು ಮೊದಲು ನನ್ನ ವಿದ್ಯಾರ್ಥಿಗಳು ಸರ್ಟಿಫೈ ಮಾಡಿ ‘ತೃಪ್ತಿಕರ ಪಾಠ’ ಎಂದು ವಿಭಾಗ ಮುಖ್ಯಸ್ಥರಿಗೆ ಬರೆದು ಕೊಡಬೇಕಿತ್ತು. ನಂತರ ಅದನ್ನು ಪಿಂಡ ಪ್ರಾಧ್ಯಾಪಕ ಕ್ರಾಸ್ ಚೆಕ್ ಮಾಡಿ ನಿರ್ದೇಶಕರಿಗೆ ಶಿಫಾರಸ್ಸು ಮಾಡಬೇಕಿತ್ತು. ತದನಂತರ ಅದನ್ನು ವಾರಗಟ್ಟಲೆ ಫೈಲ್ ಇಟ್ಟುಕೊಂಡು ಆ ನಿರ್ದೇಶಕ ನನ್ನ ಕರೆಸಿ; ಏನೇನು ನೋಟ್ಸು ಕೊಟ್ಟಿರುವೆ ಎಂದು ಪ್ರತಿಗಳ ತೋರಿಸಿ ಅವನ ಮುಂದೆ ವಿನೀತವಾಗಿ ನಡೆದುಕೊಳ್ಳಬೇಕು. ಆಯಿತು ಎಂದು ಹಾಗೆ ನಡೆದುಕೊಂಡರೆ; ಕೇಸ್‍ವರ್ಕರ್ ಹತ್ತಾರು ಲೋಪ ಹುಡುಕಿ ಆ ಫೈಲ್ ಪಾಸಾಗದೆ ಹಿಂದೆ ಬರಬೇಕು… ಮತ್ತೆ ಸರಿಪಡಿಸಿ ಫೈಲ್ ಹಿಡಿದುಕೊಂಡು ಆಡಳಿತ ಕಛೇರಿಯ ಕಾಂಜಿಪೀಂಜಿಗಳಿಗೆಲ್ಲ ತಲೆ ಬಾಗಿ ಚೆಕ್ ಆಗುವಷ್ಟರಲ್ಲಿ ತಿಂಗಳುಗಳೇ ಕಳೆದು ಹೋಗಿ ಲಂಚವನ್ನೂ ನೀಡಬೇಕಾಗುತಿತ್ತು. ರೇಗಿದರೆ ಇನ್ನೂ ತಡ ಮಾಡುತ್ತಿದ್ದರು. ಅದೊಂದು ಜಾತಿಯ ಚೈನು. ಅದು ತಂತಾನೆ ನನ್ನಂತವರ ವಿರುದ್ಧ ಹಾಗೇ ತಾಂತ್ರಿಕವಾಗಿ ಬೇಟೆ ಆಡಿ ಆಡಿ ಆ ಮಿಕವೇ ಮುಂದೆ ಬಂದು ಬಾಣಕ್ಕೆ ಎದೆ ಒಡ್ಡಬೇಕಾದ ಅನಿವಾರ್ಯತೆ ಉಂಟಾಗುತಿತ್ತು. ಸಹಿಸಿ ಸಹಿಸಿ ಸಾಕಾಗುತಿದ್ದೆ. ಪಿಎಚ್.ಡಿ ಮುಗಿಸಲಾದರೂ ಮುಂದಾಗುವ ಎಂದು ಯತ್ನಿಸಿದೆ. ತರಾವರಿ ಟೆಕ್ನಿಕಲ್ ಸಮಸ್ಯೆ ಒಡ್ಡಿದರು. ಏಕ ಕಾಲಕ್ಕೆ ಎರಡು ಕೆಲಸ ಮಾಡುವಂತಿಲ್ಲ. ಎರಡು ವರ್ಷ ಅಧ್ಯಾಪಕ ವೃತ್ತಿಯನ್ನು ಮಾಡಿರುವುದು ಸಾಧಾರಣ ಸರಿ ಅಷ್ಟೇ; ಆದರೆ ಪಿಎಚ್.ಡಿ ವರದಿಗಳನ್ನೇ ತೃಪ್ತಿಕರವಾಗಿ ಸಲ್ಲಿಸಿಲ್ಲ. ಹಾಗಾಗಿ ನಿಮ್ಮ ಸಂಶೋಧನಾ ಶಿಷ್ಯವೇತನವನ್ನು ಕೂಡ ಪಡೆಯಲು ಅರ್ಹರಿಲ್ಲ ಎಂದು ಸುತ್ತೋಲೆಗಳ ಕೊಟ್ಟಿದ್ದರು. ನಾನು ತೃಪ್ತಿಕರವಾಗಿ ಬರೆದುಕೊಟ್ಟಿದ್ದರೂ ಅತೃಪ್ತಿ, ಅಸಮರ್ಪಕ ಎಂದು ವರದಿಯಲ್ಲಿ ದಾಖಲಿಸಿದ್ದರು. ವ್ಯಗ್ರನಾಗುತಿದ್ದೆ. ಹಳ್ಳಿಗೆ ಹೋಗಿ ಬರುತ್ತಿದ್ದೆ.
ಅಕ್ಕ ಯಾವಾಗ ಮಗಳ ಮೈಸೂರಿಗೆ ಕರೆದುಕೊಂಡು ಹೋಗುವೆಯಪ್ಪಾ ಎಂದು ಒತ್ತಾಯಿಸುತ್ತಲೇ ಇದ್ದಳು. ಒಳಗಿನದನ್ನು ಯಾರಲ್ಲು ಹೇಳಿಕೊಳ್ಳುತ್ತಿರಲಿಲ್ಲ. ಇನ್ನು ಸ್ವಲ್ಪ ಸಮಯ ಬೇಕು ಅಕ್ಕಾ ಎಂದು ವಿನಂತಿಸಿಕೊಳ್ಳುತ್ತಿದ್ದೆ. ಏನೊ ಸಂಕಟ… ಏನೊ ತಳಮಳ… ಯಾರಲ್ಲಿ ನಿರಾಳತೆಯ ಹುಡುಕಲಿ ಎಂದು ನರಳುತ್ತಿದ್ದೆ. ಆಘಾತವಾಗಿತ್ತು. ಎ.ಕೆ.ರಾಮಾನುಜನ್ ಅವರು ತೀರಿಕೊಂಡಿದ್ದರು. ಪಿಎಚ್.ಡಿ ಬರೆದು ಮುಗಿಸಲು ಸಿದ್ಧತೆ ಮಾಡಿಕೊಂಡಿದ್ದೆ. ಅನಂತಮೂರ್ತಿ ಇಂಗ್ಲೆಂಡಿನಲ್ಲಿದ್ದರು. ಲಂಕೇಶರು ದೂರವಾಗಿದ್ದರು. ಆದರೂ ಅವರನ್ನು ಬಿಡಲಾರದೆ ಪರಿತಪಿಸುತಿದ್ದೆ. ಬೆಂಗಳೂರಿಗೆ ಹೋದೆ. ರಾಮಾನುಜನ್ ಅವರ ಬಗ್ಗೆ ಲಂಕೇಶರು ಶ್ರದ್ಧಾಂಜಲಿ ಸಭೆ ಏರ್ಪಡಿಸಿದ್ದರು. ಕಛೇರಿ ಗಣ್ಯರಿಂದ ಪತ್ರಿಕೆಯ ಬಳಗದಿಂದ ತುಂಬಿತ್ತು. ರಾಮಚಂದ್ರ ಶರ್ಮ ಅವರು ರಾಮಾನುಜನ್ ಬಗ್ಗೆ ಮಾತಾಡಿದರು. ಅವರ ಇಂಗ್ಲಿಷ್ ಕವಿತೆಗಳನ್ನು ಅತ್ಯಂತ ಮಾರ್ಮಿಕವಾಗಿ ವಾಚಿಸಿದ್ದ ಕ್ಯಾಸೆಟ್ ಹಾಕಿ ಕೇಳಿಸಿದರು. ನನ್ನ ಒಳಗನ್ನು ಕದಡಿದಂತಾಗಿತ್ತು. ಅವರ ಬಗ್ಗೆ ಮಾತಾಡಿ ಕಂಬನಿ ಮಿಡಿಯಲು ಆತುರನಾಗಿದ್ದೆ. ಎಲ್ಲ ಎಲ್ಲ ಗಣ್ಯರೇ ಇದ್ದರು. ಹೆಚ್ಚು ಮಾತಿಗೆ ಅವಕಾಶ ಇರಲಿಲ್ಲ. ಲಂಕೇಶರು ಚುಟುಕಾಗಿ ಮಾತಾಡಿ ಸಭೆ ಮುಗಿಸಿದ್ದರು.
ಕತ್ತಲಾಗಿತ್ತು. ಎಲ್ಲರಿಗೂ ಕುಡಿಯಲು ವ್ಯವಸ್ಥೆ ಇತ್ತು. ಅಲ್ಲಲ್ಲಿ ಕೂತು ಹರಟಲು ಟೇಬಲು ಕುರ್ಚಿಗಳಿದ್ದವು. ತಂತಾನೆ ನಿಶೆ ಏರಿ ಅಲ್ಲಲ್ಲಿ ಸಮಾನ ಮನಸ್ಕ ಗುಂಪುಗಳು ರಾಮಾನುಜನ್ ಬಗ್ಗೆ ಮಾತಾಡತೊಡಗಿದವು. ಲಂಕೇಶ್ ಪತ್ರಿಕೆಗಾಗಿ ಮಾಡಿಟ್ಟುಕೊಂಡಿದ್ದ ರಾಮಾನುಜನ್ನರ ಸಂದರ್ಶನ ನೆನಪಾಯಿತು. ಸಂಕಟವಾಯಿತು. ಸಾಕಷ್ಟು ಕುಡಿದೆ. ಅಲ್ಲೇ ಡಿ.ಆರ್. ನಾಗರಾಜ್ ಇದ್ದರು. ರಾಮಾನುಜನ್ ಇದ್ದ ಚಿಕಾಗೊ ಯೂನಿವರ್ಸಿಟಿಯಲ್ಲಿ ಕನ್ನಡ ಸಾಹಿತ್ಯದ ಬಗ್ಗೆ ಕಲಿಸಲು ಅವಕಾಶ ಇತ್ತು. ಅಲ್ಲಿಗೆ ಡಿ.ಆರ್. ನಾಗರಾಜರನ್ನು ಲಂಕೇಶ್ ಪ್ರಪೋಸ್ ಮಾಡಿದ್ದರು. ನಾನು ಕೇಳಿಸಿಕೊಂಡು ನಿಟ್ಟುಸಿರು ಬಿಟ್ಟೆ. ಯಾರಿಗೂ ಏನನ್ನೂ ಹೇಳಲಿಲ್ಲ. ‘ಕುಡೀರಿ ದಣೀ… ಯಾಕೆ ಡಲ್ಲಾಗಿ ಬಿಟ್ರಿ’ ಎಂದು ಬಸವರಾಜ್ ಭುಜ ಅಲುಗಾಡಿಸಿದ. ಮನದ ಒಳಗೆ ದುಃಖ ಕುದಿಯುತಿತ್ತು. ಏನೂ ಇಲ್ಲ ಎಂದು ತಲೆ ಆಡಿಸಿದೆ. ಅಲ್ಲಿ ತನಕ ಹೋಗುವ ಯೋಗ್ಯತೆ ಇರೊ ಮನುಷ್ಯನೇ ನಾನೂ… ಯಾರು ಕರೆದುಕೊಂಡು ಹೋಗುತ್ತಾರೆ… ನನ್ನ ಮನೆಯವರೇ ನನ್ನ ಬುಗುರಿ ಪುಸ್ತಕವ ಚರಂಡಿಗೆ ಹಾಕಿ ತುಳಿದುಬಿಟ್ಟರಲ್ಲಾ… ಇನ್ನು ಹೊರಗಿನವರಿಂದ ಏನನ್ನು ನಿರೀಕ್ಷಿಸಲಿ ಎಂದು ತೂರಾಡುತಿದ್ದೆ. ಡಿ.ಆರ್.ನಾಗರಾಜ್ ತುಂಬ ಪ್ರತಿಭಾವಂತರು. ಅವರ ನೆರಳ ಜೋಡಿಯೂ ನಿಲ್ಲಲಾರದವನು ನಾನೂ… ನಾನೆಲ್ಲಿ ಅವರೆಲ್ಲಿ… ಎ.ಕೆ. ರಾಮಾನುಜನ್ ಅವರೆಲ್ಲಿ ಎಂದು ಎಲ್ಲ ಅಮಲುದಾರರ ನಡುವೆ ಮಧ್ಯ ರಾತ್ರಿ ತನಕ ಕುಡಿಯುತ್ತಲೇ ಇದ್ದೆ. ಅಲ್ಲಿಗೆ ನನ್ನ ಚಿಕಾಗೊ ಕನಸು ನುಚ್ಚು ನೂರಾಗಿತ್ತು. ಇರುವೇ… ಇರುವೆ… ನಾನಿಲ್ಲೇ ಇರುವೆ. ಈ ದೇಶದ ನರಕದ ಕೂಪದಲ್ಲೇ ನನ್ನ ಹೆಂಡತಿಯ ಕಟ್ಟಿಕೊಂಡು ಇಲ್ಲೇ ಸಾಯುವೆ… ಇನ್ನೆಲ್ಲಿ ಹೋಗಿ ಸಾಯಲಿ… ಈ ಪಾಪಿ ಜಾತಿ ಕೂಪದಲ್ಲಿ ನಾನು ಅದರಲ್ಲೇ ಸತ್ತು ಅದೇ ಅಸ್ಪೃಶ್ಯ ಸ್ಮಶಾನದಲ್ಲೇ ಮಣ್ಣಾಗಬೇಕು ಎಂದುಕೊಂಡು ಮರುದಿನ ಮೈಸೂರಿಗೆ ಹಿಂತಿರುಗಿದ್ದೆ.
ಕಥೆಗಾರ, ಕವಿ ಮತ್ತು ಕಾದಂಬರಿಕಾರ. ಹಂಪಿ ಕನ್ನಡ ವಿಶ್ವವಿದ್ಯಾಲಯದ ಜಾನಪದ ಅಧ್ಯಯನ ವಿಭಾಗದಲ್ಲಿ ಪ್ರಾಧ್ಯಾಪಕರಾಗಿದ್ದಾರೆ.
Iam readinding your autobiography here without missing single word, its Heartwarming i became your huge fan with respect, thank you sir
Thanks for your response.