ಸಂಶೋಧನಾ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡವರು ಸೃಜನಶೀಲ ಬರವಣಿಗೆಯನ್ನು ನಿರ್ಲಕ್ಷಿಸಬಾರದು ಎಂದು ಕಿವಿ ಮಾತು ಹೇಳುತ್ತಿದ್ದ ಬಹುಭಾಷಾ ವಿದ್ವಾಂಸ ಪ್ರೊ. ಕೋಡಿ ಕುಶಾಲಪ್ಪ ಗೌಡರು ಸ್ವತಃ ಸೃಜನಶೀಲ ಲೇಖಕರು. ಅವರ ಬೋಧನಾ ಶೈಲಿಯೂ ಅನೇಕ ಸಂಶೋಧಕರು, ಸೃಜನಶೀಲ ಬರಹಗಾರರಿಗೆ ಮಾರ್ಗದರ್ಶಿಯಂತಿತ್ತು. ಶಬ್ದಮಣಿದರ್ಪಣವನ್ನು ಹೇಗೆ ರಸವತ್ತಾಗಿ ಸಾಹಿತ್ಯಕೃತಿಯಂತೆಯೇ ಪಾಠ ಹೇಳಬಹುದೆಂಬುದನ್ನೂ ಅವರು ತೋರಿಸಿಕೊಡುತ್ತಿದ್ದರು. ಬಹುದೊಡ್ಡ ಶಿಷ್ಯ ಪರಂಪರೆಯನ್ನು ಹೊಂದಿದ್ದ ಹಿರಿಯ ಜೀವಿ ಪ್ರೊ. ಗೌಡರು ಶುಕ್ರವಾರ ಸಂಜೆ ನಿಧನರಾದರು. ಅವರ ಕುರಿತು ಡಾ. ಹರಿಕೃಷ್ಣ ಭರಣ್ಯ ಬರೆದ ಲೇಖನವೊಂದು ಕೆಂಡಸಂಪಿಗೆಯ ಓದುಗರಿಗಾಗಿ.

ಪ್ರೊಫೆಸರ್ ಕೋಡಿ ಕುಶಾಲಪ್ಪ ಗೌಡರು ಒಬ್ಬ ಸುಪ್ರಸಿದ್ಧ ಭಾಷಾವಿಜ್ಞಾನಿ, ಸಾಹಿತಿ, ಸಂಶೋಧಕ, ಪ್ರಾಧ್ಯಾಪಕ ಜೊತೆಗೆ ರಸಿಕ ಹೃದಯದ ಸರಳ ಸಜ್ಜನ. 1977ರಲ್ಲಿ ನಾನು ಎಂಫಿಲ್ ಸಂಶೋಧನೆ, ವ್ಯಾಸಂಗಕ್ಕಾಗಿ ಮದರಾಸು ವಿಶ್ವವಿದ್ಯಾನಿಲಯದ ಕನ್ನಡ ವಿಭಾಗವನ್ನು ಹೊಕ್ಕಂದಿನಿಂದ ಅವರನ್ನು ಬಲ್ಲವನು.
ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿಗೆ ಸೇರಿದ ಪೆರಾಜೆ ಗ್ರಾಮದ ಕೋಡಿ ಮನೆಯಲ್ಲಿ ಕುಶಾಲಪ್ಪಗೌಡರು 1930ನೇ ಇಸವಿಯ ಮೇ ತಿಂಗಳ 30ನೇ ತಾರೀಯಿ ಶನಿವಾರದಂದು ಜನಿಸಿದರು. ಅವರ ತಂದೆ ಕೃಷ್ಣಪ್ಪಗೌಡರು ಹಾಗೂ ತಾಯಿ ಗೌರಮ್ಮ. ಈ ದಂಪತಿಗೆ ನಾಲ್ಕುಮಂದಿ ಮಕ್ಕಳು ಎಂದರೆ ಇವರಿಗೆ ಇಬ್ಬರು ಅಣ್ಣಂದಿರು ಹಾಗೂ ಒಬ್ಬಳು ತಂಗಿ.
ಗೌಡರ ಪ್ರಾರಂಭಿಕ ವಿದ್ಯಾಭ್ಯಾಸದ ಪಕ್ಕದ ಪೆರಾಜೆ ಶಾಲೆಯಲ್ಲಿ ಮತ್ತು ಸುಳ್ಯದ ಬೋರ್ಡು ಹಯರ್ ಎಲಿಮೆಂಟರಿ ಶಾಲೆಗಳಲ್ಲಿ ನಡೆದು, ಮುಂದೆ ಮತ್ತೂರಿನ ಬೋರ್ಡು, ಹೈಸ್ಕೂಲಿನಲ್ಲಿ ಪ್ರೌಢಶಾಲಾ ವ್ಯಾಸಂಗವು ನಡೆಯಿತು. 1949ರಲ್ಲಿ ಮಡಿಕೇರಿಯ ಸರಕಾರಿ ಕಾಲೇಜಿನಲ್ಲಿ ಆಗಿನ ಇಂಟರ್ ಮೀಡಿಯೇಟ್ ಕಲಿಕೆಯನ್ನು ನಡೆಸಿ, ಮುಂದೆ ಧಾರವಾಡದ ಅಗ್ರಿಕಲ್ಚರ್ ಕಾಲೇಜಿನಲ್ಲಿ ಬಿ.ಎಸ್ಸಿ (ಅಗ್ರಿ)ಗೆ ಸೇರಿದ್ದರೂ, ಕಾರಣಾಂತರದಿಂದ ಅದನ್ನು ಬಿಟ್ಟು, ದೂರದ ಮದರಾಸಿನ ಪ್ರಸಿಡೆನ್ಸಿ ಕಾಲೇಜಿನಲ್ಲಿ ಕನ್ನಡ ಬಿ.ಎ. ಆನರ್ಸ್ ತರಗತಿಗೆ ಸೇರಿಕೊಂಡರು. 1955ರಲ್ಲಿ ಆನರ್ಸ್ ಕಲಿಕೆ ಮುಗಿದೊಡನೆಯೇ, ಸುಳ್ಯದ ಮಿತ್ತಮಜಲು ಎಲ್ದಣ್ಣಗೌಡ – ಜಾನಕಿ ದಂಪತಿಯ ಮಗಳು ಕಮಲಾ ಅವರೊಂದಿಗೆ ವಿವಾಹವೂ ನಡೆಯಿತು. ಆದೇ ವರ್ಷ ಆ ಪ್ರೆಸಿಡೆನ್ಸಿ ಕಾಲೇಜಿನಲ್ಲೇ ತಾತ್ಕಾಲಿಕವಾಗಿ ಆಸಿಸ್ಟೆಂಟ್ ಪ್ರೊಫೆಸರ್ ಹುದ್ದೆಗೆ ಆಯ್ಕೆಯಾದರು. ಮುಂದಿನ ವರ್ಷವೇ ಮದನಪಲ್ಲಿಯ ಬೆಸೆಂಟ್ ಥಿಯೊಸೂಫಿಕಲ್ ಕಾಲೇಜಿನಲ್ಲಿ ಉಪನ್ಯಾಸಕರಾದರು.

ಅಣ್ಣಾಮಲೈ ವಿ.ವಿ.ಯು ಭಾಷಾವಿಜ್ಞಾನಕ್ಕೆ ನಲಂದವಿದ್ದ ಹಾಗೆ, ಅಲ್ಲಿ ಭಾಷಾವಿಜ್ಞಾನ ವಿಷಯದಲ್ಲಿ ಸರ್ಟಿಫಿಕೇಟು-ಡಿಪ್ಲೊಮಾಗಳನ್ನು ಪಾಸುಮಾಡಿಕೊಂಡರು. ಹಾಗೂ ಅದೇ ವಿಭಾಗಕ್ಕೆ ಉಪನ್ಯಾಸಕರಾಗಿ ಮರುಆಯ್ಕೆಗೊಂಡು ಸೇರಿದರು. ಗೌಡರು ಅದೇ ವಿಷಯವಾಗಿ ಅಲ್ಲೇ ಎಂ.ಲಿಟ್ ಹಾಗೂ ಪಿಹೆಚ್ಡಿಗಳಿಗಾಗಿ ಸಂಶೋಧನೆ ನಡೆಸಿ ಆ ಪದವಿಗಳನ್ನು ಗಳಿಸಿಕೊಂಡರು. ಇಷ್ಟರಲ್ಲೇ ಆ ವಿಭಾಗವು Central Advanced Studies (CAS) in einguisties ಆಗಿ ಬೆಳೆದು ನಿಂತಿತ್ತು. 1969ರಲ್ಲಿ ಕೊಲಂಬೊ ಪ್ಲಾನ್ ಅಡಿಯಲ್ಲಿ ಡಾ. ಗೌಡರು, ಇಂಗ್ಲೆಂಡಿಗೆ ಹೋಗಿಬಂದರು. ಅಲ್ಲಿ 10 ತಿಂಗಳುಗಳ ಕಾಲ ಮ್ಯಾಂಚೆಸ್ಟರ್ ವಿ.ವಿ.ಯಲ್ಲಿ ಭಾಷಾ ವಿಜ್ಞಾನದಲ್ಲಿ ವಿಶೇಷ ಅಧ್ಯಯನವನ್ನು ನಡೆಸಿದರು. ಜೊತೆಯಲ್ಲೇ, ಯೂರೋಪ್ ಪ್ರವಾಸವನ್ನೂ ಮುಗಿಸಿ ಮರಳಿದರು.
ಅಣ್ಣಾಮಲೈ ವಿಶ್ವವಿದ್ಯಾನಿಲಯವಿರುವುದು ಸುಪ್ರಸಿದ್ಧ ನಟರಾಜ ದೇವಾಲಯವಿರುವ ಅಪ್ಪಟ ತಮಿಳುನಾಡಿನ ಚಿದಂಬರಂನಲ್ಲಿ. ಅಲ್ಲಿನ ಬದುಕು ಅವರಿಗೆ ಅನೇಕ ಅನುಭವಗಳನ್ನು ಕಟ್ಟಿಕೊಡುತ್ತಿತ್ತು, ಅವರ ತಾಯ್ನುಡಿಯಾದ ಅರೆಬಾಸೆ (ಗೌಡ ಕನ್ನಡ)ಯೊಂದಿಗೆ, ಕನ್ನಡ, ತುಳು, ತಮಿಳು, ಇಂಗ್ಲಿಷ್ ಸಂಸ್ಕೃತಗಳ ಜೊತೆಗೆ ಅವರು ಬೆಳೆದವರು. ಇದನ್ನೆಲ್ಲಾ ಚೆನ್ನಾಗಿ ಅರಗಿಸಿಕೊಂಡವರು. ಭಾಷಾವಿಜ್ಞಾನದ ಅಧ್ಯಾಪಕರಾದುದರಿಂದ ಇನ್ನೂ ಅನೇಕ ಭಾಷೆಗಳನ್ನು ತಿಳಿಯುವ ಅವಕಾಶ ಅವರಿಗೆ ಒದಗಿ ಬಂದಿತ್ತು. ಹೀಗೆ ಅಣ್ಣಾಮಲೈ ವಿ.ವಿ.ಯ ಭಾಷಾ ವಿಜ್ಞಾನ ವಿಭಾಗದಲ್ಲಿ ಅವರು ಉಪನ್ಯಾಸಕರಾಗಿ, ಪ್ರವಾಚಕರಾಗಿ ವಿಭಾಗದ ಮುಖ್ಯಸ್ಥರಾಗಿಯೂ ದುಡಿದರು.

1976ರಲ್ಲಿ ಡಾ. ಗೌಡರು ಮರಳಿ ಮದರಾಸಿಗೆ ಬರುವ ಅವಕಾಶ ಒದಗಿಬಂತು. ಪ್ರೊ.ಮರಿಯಪ್ಪ ಭಟ್ಟರು ಮುನ್ನಡೆಸಿದ ಮದರಾಸು ವಿ.ವಿ.ಯ ಕನ್ನಡ ವಿಭಾಗದಲ್ಲಿ ಅವರ ಶಿಷ್ಯರೇ ಆದ ಡಾ. ಗೌಡರು ಪ್ರಾಧ್ಯಾಪಕ ಮುಖ್ಯಸ್ಥರಾಗಿ ಆಯ್ಕೆಯಾದರು. ಮದರಾಸಿನಲ್ಲಿ ಸುಮಾರು ಹದಿನೈದು ವರ್ಷಗಳ ಸೇವೆಯಲ್ಲಿ (1976-1991) ಅವರಿಂದ ಹಲವಾರು ಶೈಕ್ಷಣಿಕ ಸಾಂಸ್ಕೃತಿಕ ಹಾಗೂ ಇನ್ನಿತರ ಕೆಲಸಗಳು ನಡೆದಿರುವುದು ಇಂದು ಇತಿಹಾಸ. ಅವರ ಕೈಕೆಳಗೆ ಹನ್ನೆರಡು ಎಂ.ಫಿಲ್ ಸಂಪ್ರಬಂಧಗಳೂ ಏಳು ಪಿಎಚ್.ಡಿ ಸಂಶೋಧನೆಗಳಲ್ಲದೆ, ಇನ್ನಿತರ ಹಲವಾರು ಸಂಶೋಧನೆಗಳನ್ನೂ ನಡೆಸಿದ ಹೆಮ್ಮೆ ಇವರದ್ದು . ಅವರ ಶಿಷ್ಯವರ್ಗವು ದೊಡ್ಡದೇ.

ಪ್ರೊ. ಗೌಡರ ಪತ್ನಿ ಕಮಲಮ್ಮ. ಈ ದಂಪತಿಗೆ ಮೂವರು ಮಗಳಂದಿರು, ಕುಸುಮ, ಸುಮನ ಹಾಗೂ ಮಾಲಿನಿ, ಇವರೆಲ್ಲರೂ ಕುಟುಂಬ ಸಮೇತರಾಗಿದ್ದು, ಕುಸುಮಾ (ಪತಿ ಶ್ರೀ ರಾಮಕೃಷ್ಣ) ಮದರಾಸಿನಲ್ಲಿ ಸುಮನ (ಪತಿ ಶ್ರೀ ಯೇಸುದಾಸ್) ಆಸ್ಟ್ರೇಲಿಯಾದಲ್ಲಿ, ಹಾಗೂ ಮಾಲಿನಿ (ಪತಿ ಶ್ರೀರಾಮಚಂದ್ರ) ಇವರು ಪ್ರೊ ಗೌಡರ ಜೊತೆಯಲ್ಲಿ ಸುಳ್ಯದ ಒಟ್ಟಿಪಳ್ಳದ “ಮಾನಸ’ದಲ್ಲಿ ನೆಲೆಸಿದ್ದಾರೆ. 1991ರಲ್ಲಿ ಕಮಲಮ್ಮನವರು ಹಠಾತ್ ತೀರಿಕೊಂಡರು. ಆದೇ ವರ್ಷ ನಿವೃತ್ತರಾದ ಪ್ರೊ. ಗೌಡರು ಮರಳಿ ಮಣ್ಣಿಗೆ ಬಂದು ಸುಳ್ಯದಲ್ಲಿ ಮಗಳು, ಅಳಿಯ ಮತ್ತು ಮೊಮ್ಮಕ್ಕಳೊಡನೆ ವಾಸಿಸಲಾರಂಭಿಸಿದರು.

ಸಾಧನೆಯ ಪಥ:

ಪ್ರೊ. ಗೌಡರ ಬರವಣಿಗೆಯಲ್ಲಿ ಬಹುಪಾಲು ಸಂಶೋಧನೆಗಳು, ಅದರಲ್ಲೂ ಭಾಷೆ ಮತ್ತು ವ್ಯಾಕರಣಗಳ ಬಗೆಗಿನವು. ಇದಕ್ಕೆ ಸಂಬಂಧಿಸಿದಂತೆ ಆಂಗ್ಲ ಭಾಷೆಯಲ್ಲಿ ನಾಲ್ಕು ಗ್ರಂಥಗಳನ್ನೂ, ಕನ್ನಡದಲ್ಲಿ ಐದಾರು ಕೃತಿಗಳನ್ನೂ ರಚಿಸಿದ್ದಾರೆ. ಅವರಿಗೆ ಅನುವಾದ ಕಲೆಯೂ ಚೆನ್ನಾಗಿ ಕರಗತವೇ. ತಮಿಳು, ಸಂಸ್ಕೃತ ಭಾಷೆಗಳ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಅವರು ಬರೆದ ಸಂಶೋಧನೆ ಲೇಖನಗಳೂ ಕಡಿಮೆಯೇನಲ್ಲ, ಇಂಗ್ಲೀಷಿನಲ್ಲಿ 21, ಕನ್ನಡದಲ್ಲಿ 32, ವಿಮರ್ಶಾತ್ಮಕ ಲೇಖನಗಳು 24, ಸಾಮಾನ್ಯಭಾಷಾ ವಿಜ್ಞಾನಕ್ಕೆ ಸಂಬಂಧಿಸಿದವು 24, ಅನುವಾದ ಲೇಖನಗಳು: 2. ಹೀಗೆ ಸಾಗುತ್ತದೆ. ಸೃಜನಶೀಲ ಬರಹಗಳಲ್ಲಿ, ಲಲಿತ ಹರಟೆ ಪ್ರಬಂಧಗಳೇ ಸಿಂಹಪಾಲು. ಈ ಸಾಲಿನಲ್ಲಿ ನಾಲ್ಕು ಪುಸ್ತಕಗಳು, 16 ಗದ್ಯಬರಹಗಳು, ಅಲ್ಲದೆ ಹಲವಾರು ಕವಿತೆಗಳನ್ನು ರಚಿಸಿ ಪ್ರಕಟಿಸಿದ್ದಾರೆ. ಮಾತ್ರವಲ್ಲ ತಾಯ್ನುಡಿಯಾದ ಅರೆಬಾಸೆ (ಗೌಡರ ಕನ್ನಡ)ಯಲ್ಲಿ ‘ಮಾನಸ ಮಹಾಭಾರತ’ವೆಂಬ ಗದ್ಯಕಾವ್ಯವನ್ನು ರಚಿಸಿ ಆ ಉಪಭಾಷೆಯ ಮಹತ್ವವನ್ನು ತೋರಿಸಿಕೊಟ್ಟಿದ್ದಾರೆ.
ಈ ದೃಷ್ಟಿಯಿಂದ ನೋಡಿದರೆ, ಅವರಿಗೆ ಸಂದ ಪ್ರಶಸ್ತಿ/ಗೌರವಗಳು ಕಡಿಮೆಯೆಂದೇ ಅನಿಸುತ್ತದೆ. 1987ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ 1994ರಲ್ಲಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗಳು ಅವರನ್ನು ಅರಸಿ ಬಂದಿವೆ.

2005ರಲ್ಲಿ ಪ್ರೊ ಗೌಡರಿಗೆ ಅವರ ಅಭಿಮಾನಿಗಳು, ಮಿತ್ರರು, ಬಂಧುಗಳು, ವಿದ್ಯಾರ್ಥಿಗಳು ಸೇರಿಕೊಂಡು ದ.ಕ.ದ ಸುಳ್ಯದಲ್ಲಿ ಅಭಿನಂದನಾ ಕಾರ್ಯಕ್ರಮಗಳನ್ನು ವಿಜೃಂಭಣೆಯಿಂದ ನಡೆಸಿದ್ದಾರೆ. ಜೊತೆಗೆ ಎಲ್ಲರ ಪ್ರೀತಿಯ ಹಾಗೂ ಗೌರವದ ‘ನುಡಿಒಸಗೆ’ ಎಂಬ ಸುಂದರವಾದ ಮತ್ತು ಅಚ್ಚುಕಟ್ಟಾದ ಆಭಿನಂದನ ಗ್ರಂಥವನ್ನು ಸಮರ್ಪಿಸಿದ್ದಾರೆ. ಈ ಕೃತಿಯಲ್ಲಿ ಅವರ ವಿದ್ಯಾರ್ಥಿಗಳು, ನಾಡಿನ ಹಾಗೂ ಹೊರಗಿನ ವಿದ್ವಾಂಸರುಗಳು ಬರೆದ ಅನೇಕ ಲೇಖನಗಳಿದ್ದು, ಒಂದು ಮಹತ್ವಪೂರ್ಣ ಆಕರಗಂಥವಾಗಿದೆ.
ಎಂ.ಫಿಲ್ ಪದವಿ ಮುಗಿಸಿ ಪಿಹೆಚ್. ಡಿ ವ್ಯಾಸಂಗಕ್ಕಾಗಿ ನಾನು ಮತ್ತೆ ಅದೇ ವಿಭಾಗದಲ್ಲಿ ಸೇರಿಕೊಂಡು 1983ರವರೆಗೆ ನನ್ನ ಸಂಶೋಧನೆಯ ಹಾದಿಯಲ್ಲಿ ನನ್ನ ಮಾರ್ಗದರ್ಶಕ ಗುರುಗಳೂ ಆದ ಪ್ರೊ. ಗೌಡರನ್ನು ಹತ್ತಿರದಿಂದ ನೋಡಿದೆ.ಈ ಹಂತದಲ್ಲಿ ಪ್ರೊ. ಗೌಡರಿಂದ ನಾನು ಪಡೆದುಕೊಂಡುದು ಎಷ್ಟೋ, ಸಂಶೋಧನೆಯ ಮೂಲಭೂತ ವಿಚಾರಗಳು, ಅದಕ್ಕೆ ಬೇಕಾಗಿರುವ ಆರ್ತತೆ, ಅದನ್ನು ನಿರ್ವಹಿಸುವ ರೀತಿ, ಬರವಣಿಗೆ, ಇತ್ಯಾದಿ ಸಂಶೋಧನೆ ವಿಧಾನದ ಬಗ್ಗೆ ಸರಳವಾಗಿಯೂ ಆಕರ್ಷಕವಾಗಿಯೂ ಮಾರ್ಗದರ್ಶನವನ್ನು ಮಾಡುತ್ತಿದ್ದವರು ಅವರು. ಪ್ರೊ. ಗೌಡರೆಂದರೆ  ಸಂಶೋಧನೆಯ ದೃಷ್ಟಿಯಲ್ಲಿ ಹೇಗೆ ಸರಳ, ನೇರ ಮತ್ತು ಸ್ಪಷ್ಟತೆಗಳಿಗೆ ಆದ್ಯತೆಯೋ, ಹಾಗೆಯೇ ಬದುಕಿನಲ್ಲೂ. ಹೀಗಾಗಿ ಅವರೊಂದಿಗೆ ಇರುವುದು, ಮಾತನಾಡುವದು ಎಂದರೆ, ಇವನ್ನೆಲ್ಲಾ ಅನುಭವಿಸುವುದೇ ಆಗಿ, ಬದುಕಿಗೊಂದು ಹೊಸ ದೃಷ್ಟಿಯನ್ನೇ ಕಂಡುಕೊಳ್ಳಲು ಅವಕಾಶವಾಯಿತು.

ಪ್ರೊ.ಗೌಡರ ವ್ಯಕ್ತಿತ್ವ-ಆತ್ಮೀಯತೆಗಳನ್ನು ಎಷ್ಟು ಬೇಕಾದರೂ ವಿವರಿಸಿ ಹೇಳಬಹುದು. ನಾನು ಸಂಶೋಧಕನಾಗಿದ್ದಾಗ, ಅವರ ತರಗತಿಯಲ್ಲಿ ಹೋಗಿ ಕುಳಿತು ಅವರ ಪಾಠವನ್ನು ಕೇಳುವ ಆಸೆ ಬರುತ್ತಿತ್ತು. ಶಬ್ದಮಣಿದರ್ಪಣ, ಪಂಪಭಾರತ, ಕರ್ಣಾಟಕ ಕಾದಂಬರಿ, ಭಾಷಾವಿಜ್ಞಾನ – ಹೀಗೆ ಅವರ ಅಸಕ್ತಿಯ ವಿಷಯಗಳೆಂದು ನನ್ನ ಅನಿಸಿಕೆ: ನಾನು ಬಿಡುವಾಗಿದ್ದಾಗಲೆಲ್ಲಾ ಅವರ ತರಗತಿಗೆ ಹೋಗಿ ಕುಳಿತಿರುತ್ತಿದ್ದೆ. ವ್ಯಾಕರಣದ ಬಗ್ಗೆ, ‘ಶುಷ್ಕವೈಯಾಕರಣ’ ಎಂಬ ಮಾತು ಬಂದಾಗ ಅವರದನ್ನು ಸಹಿಸುತ್ತಿರಲಿಲ್ಲ. ಮಾತ್ರವಲ್ಲ ಶಬ್ದಮಣಿದರ್ಪಣವನ್ನು ಹೇಗೆ ರಸವತ್ತಾಗಿ ಸಾಹಿತ್ಯಕೃತಿಯಂತೆಯೇ ಪಾಠ ಹೇಳಬಹುದೆಂಬುದನ್ನೂ ಅವರು ತೋರಿಸಿಕೊಡುತ್ತಿದ್ದರು, ಅವರು ಭಾಷಾ ವಿಜ್ಞಾನಿಗಳಾಗಿ, ಸಾಹಿತ್ಯದ ಅಧ್ಯಾಪಕರಾಗಿ, ಸೃಜನಶೀಲ ಬರಹಗಾರರಾಗಿ-ಬಹುಮುಖವಾಗಿ ಬೆಳೆದವರು.

ಪ್ರೊ. ಗೌಡರೆಂದರೆ ಅಣ್ಣಾಮಲೈ ವಿ.ವಿ.ಯ ಭಾಷಾವಿಜ್ಞಾನದ ಕಡಲಿನಿಂದ ಹೊರತೆಗೆದ ನುಡಿಮುತ್ತು, ಅವರ ಉಚ್ಚಾರಣೆಯ ಶೈಲಿಯೇ ಒಂದು ವಿಶಿಷ್ಟ ಹಾಗೂ ಆಕರ್ಷಕ ವಿಷಯವೆಂಬುದು ನನ್ನಂತ ಹಲವಾರು ಮಂದಿ ವಿದ್ಯಾರ್ಥಿಗಳಿಗೆಲ್ಲ ಗೊತ್ತು. ಅಣ್ಣಾಮಲೈಯಿಂದ ಹಲವಾರು ವರ್ಷಗಳ ಸಂಶೋಧನ ಹಾಗೂ ಬೋಧನಾನುಭವದ ಸಂಪತ್ತನ್ನು ಹೊತ್ತು, ಕನ್ನಡ ವಿಭಾಗದ ಮುಖ್ಯಸ್ಥರಾಗಿ ಮದರಾಸು ವಿ.ವಿ.ಗೆ ಬಂದಾಗ ಅವರಿಗೆ ಇಬ್ಬಗೆಯ ತೃಪ್ತಿ, ಒಂದು, ತಾನು ಓದಿದ ವಿಭಾಗದಲ್ಲಿ ಪ್ರಾಧ್ಯಾಪಕ-ಮುಖ್ಯಸ್ಥರಾಗಿ ಕೆಲಸ ಮಾಡುವ ಅಪೂರ್ವ ಯೋಗಾಯೋಗ, ಇನ್ನೊಂದು, ತಮ್ಮ ಆಸಕ್ತಿಯ ಕ್ಷೇತ್ರವಾದ ಕನ್ನಡ ಸಾಹಿತ್ಯದೊಂದಿಗೆ ಭಾಷಾ ವಿಜ್ಞಾನವನ್ನು ಮೇಲೈಸಿಕೊಂಡು ಕನ್ನಡದ ಭಾಷೆ ಹಾಗೂ ವ್ಯಾಕರಣ ಪರಂಪರೆಗೆ ಹೊಸ ಆಯಾಮವನ್ನು ಕೊಡಲು ಅವಕಾಶವಾದುದು: ಇವುಗಳ ಪರಿಣಾಮವೇ ಅವರ ಭಾಷಾವಿಜ್ಞಾನ ವ್ಯಾಕರಣ ಮುಂತಾದುವುಗಳಿಗೆ ಬರೆದ ಅನೇಕಾನೇಕ ಲೇಖನಗಳು ಹಾಗೂ ಕೃತಿಗಳು.

ಪ್ರೊ. ಗೌಡರ ಒಳಗೊಬ್ಬ ಸುಪ್ತ, ಮುಗ್ಧ ವಿದ್ವಾಂಸ ಕುಳಿತಿದ್ದಾನೆ ಎಂದರೆ ಅವರು ವಿಚಾರಕ್ಕೆ ಒತ್ತು ಕೊಡುವವರೂ ಹೌದು, ಹೃದಯವಂತ ಕವಿ, ಹರಟೆ ಬರಹಗಾರರೂ ಹೌದು, ವಸ್ತುನಿಷ್ಠ ವಿವೇಚನೆ, ಸರಳತೆ, ತಪ್ಪುಗಳನ್ನು ಪ್ರಾಂಜಲವಾಗಿ ಸ್ವೀಕರಿಸಿ ತಿದ್ದಿಕೊಂಡು ಬೆಳವಣಿಗೆಗೆ ತುಡಿಯುವ ಮನಸ್ಸು ಅವರದ್ದು. ಸಂಶೋಧನ ಬರವಣಿಗೆ, ಸೃಜನಶೀಲ ಬರವಣಿಗೆ, ಅಧ್ಯಾಪನ ಇವೆಲ್ಲವನ್ನೂ ಏಕಕಾಲದಲ್ಲಿ ನಿರ್ವಹಿಸುವುದು ಸ್ವಲ್ಪ ಸವಾಲಿನ ಕೆಲಸವೇ, ಎಂದರೆ ಮೂರಕ್ಕೂ ಭಾಷೆಯನ್ನು ದುಡಿಸಿಕೊಳ್ಳುವ ರೀತಿ ಬೇರೆ ಬೇರೆಯೇ ಆಗಿರುತ್ತದೆ. ಇದು ನನ್ನಅನುಭವ ಕೂಡಾ.

ಪ್ರೊ. ಗೌಡರು ಬಹುಶಃ ಬರವಣಿಗೆಯನ್ನಾರಂಭಿಸಿದ್ದು ಕವಿತೆಗಳ ಮೂಲಕವೇ, ಪ್ರಕಟಗೊಂಡ ಅದರಲ್ಲೂ ಪ್ರೇಮಕವಿಯಾಗಿ, ‘ಕಮಲಾನಂದ, ‘ಗೌರಿತನಯ’, ಇತ್ಯಾದಿ ಕಾವ್ಯನಾಮಗಳಿಂದ ಅನೇಕ ಬಿಡಿಕವಿತೆಗಳನ್ನು ನೋಡಿದರೆ ಗೊತ್ತಾಗುತ್ತದೆ. ಇದು ‘ಮೊಗ್ಗುಮಲರು’ ಎಂಬ ಸಂಕಲನವಾಗಿ ಪ್ರಕಟವಾಗಿದೆ.’ ಎರಡನೆಯದಾಗಿ, ಅವರೊಬ್ಬ ಲಲಿತ ಪ್ರಬಂಧಕಾರರು, ನೆನಪುಗಳನ್ನು ಹಸಿಯಾಗಿಟ್ಟು ಸವಿಯಾಗಿ ಕಟ್ಟಿಕೊಡುವ, ಚೌಚಿತ್ಯಪೂರ್ಣವಾಗಿ ಸಮಕಾಲೀನ ಬದುಕಿನೊಂದಿಗೆ ಸಮೀಕರಿಸುವ ರೀತಿಯನ್ನು ಅವರ ‘ಊರೊಸಗೆ’, ‘ಕಡಲತಡಿಯ ಕನವರಿಕೆ’, ‘ಬೆಟ್ಟದ ಮೇಲೊಂದು ಮನೆಯನು ಮಾಡಿ’, ಮುಂತಾದವುಗಳಲ್ಲಿ ಕಾಣುತ್ತೇವೆ. ಇವು ಒಂದೇ ಸಮಗ್ರ ಸಂಕಲನವಾಗಿ ಪಯಸ್ವಿನಿಯ ಕಲರವ’ ಎಂಬ ಹೆಸರಿನಿಂದ ಪ್ರಕಟವಾಗಿವೆ. ಇಂಥಾ ಮನೋಭಾವವೇ ಶುಷ್ಕರಾಗಿ ಹೋಗಿಬಿಡಬಹುದಾಗಿದ್ದ ಅವರನ್ನು ಚಿರಹಸಿರಾಗಿಸಿಬಿಟ್ಟಿದೆ ಎಂದು ನನ್ನ ಪ್ರಾಮಾಣಿಕ ಅನ್ನಿಸಿಕೆ. ಅವರು ಇದನ್ನು ನನ್ನೊಂದಿಗೆ ಆಗಾಗ ಹೇಳುತ್ತಿದ್ದರು, ‘ನೋಡಿ ಭಟ್ಟರೇ, ಸಂಶೋಧನೆಯೊಂದಿಗೆ ಶುಷ್ಕರಾಗಿ ಹೋಗಿಬಿಡಬೇಡಿ, ನಿಮ್ಮ ಸೃಜನಶೀಲತೆಗೂ ಸಾಕಷ್ಟು ಕೆಲಸಕೊಡಿ’ ಎಂಬುದಾಗಿ, ಬರಬರುತ್ತಾ ನಾನೂ ಅದಕ್ಕೆ ಸ್ವಲ್ಪ ಸ್ವಲ್ಪವೇ ಹೊಂದಿಕೊಂಡೆನೆನ್ನಿ, ಮಾತ್ರವಲ್ಲ, ನಾನು ಇದನ್ನೇ ನಿಯಮಿತವಾಗಿ ಅನುಸರಿಸುತ್ತಾ ಬರುತ್ತಿರುವವನು, ಮಾತ್ರವಲ್ಲ ನನ್ನ ವಿದ್ಯಾರ್ಥಿಗಳಿಗೂ ಇದನ್ನೇ ಹೇಳುತ್ತಿದ್ದವನು.

1981ರಲ್ಲಿ, ನನ್ನ ಸಂಶೋಧನೆಗೆ ಸಂಬಂಧಿಸಿದ ಕೆಲವೊಂದು ಲೇಖನಗಳನ್ನು ಕಲೆಹಾಕಿ ಅವರ ಮುಂದಿಟ್ಟೆ. ಅವರು ಅವನ್ನೆಲ್ಲ ಪ್ರೀತಿಯಿಂದ ಓದಿದರು, ತಪ್ಪಿದಡೆ ತಿದ್ದಿದರು. ಬೆನ್ನುತಟ್ಟಿ ಪ್ರೋತ್ಸಾಹಿಸಿದರು. ಇದುವೇ ನನ್ನ ಮೊದಲ ಕೃತಿ ಪ್ರವೇಶ, ಇದಕ್ಕೆ ಮುನ್ನುಡಿಯ ಕಲಶವನ್ನೂ ಇಟ್ಟು ಹರಸಿದವರು ಅವರು, ಮಾತ್ರವಲ್ಲ, ಆಗ ನಾನು ಬರೆಯುತ್ತಿದ್ದ ಲೇಖನಗಳನ್ನೆಲ್ಲಾ ಅವರ ಮುಂದಿಡುತ್ತಿದ್ದೆ. ಅವರು ತಾಳ್ಮೆಯಿಂದ, ಪ್ರೀತಿಯಿಂದ, ಅಕ್ಷರ ಬಿಡದಂತೆ ಓದಿ ತೂಗಿನೋಡಿ ಸೂಕ್ತವಾದ ಸಲಹೆ-ಸೂಚನೆಗಳನ್ನು ನೀಡುತ್ತಿದ್ದರು.

ಪ್ರೊ.ಗೌಡರದ್ದು ಹೊರನಾಡಿನಲ್ಲಿದ್ದುಕೊಂಡೇ ಬೆಳೆದು ಅರಳಿದ ಪ್ರತಿಭೆ, ಅದರಲ್ಲೂ ಮದರಾಸಿನಲ್ಲಿ ಪ್ರೊ.ಮರಿಯಪ್ಪ ಭಟ್ಟರೇ ಮೊದಲಾದ ಘಟಾನುಘಟಿಗಳ ಗರಡಿಯಲ್ಲಿ ಪಳಗಿ ಬೆಳೆದು ಬಂದವರು, ಶಿಕ್ಷಣ, ಬೋಧನೆ, ಸಂಶೋಧನೆಗಳ ಅನುಭವವೆಲ್ಲವೂ ಹೊರನಾಡಿನದ್ದು, ಹೀಗಾಗಿ ತಾಯ್ನಾಡಿನೊಳಗಿನ ಸಾಹಿತ್ಯಕ ವಲಯಗಳಲ್ಲಿ ಸೇರಿಕೊಳ್ಳುವುದಕ್ಕೆ ತಕ್ಕಷ್ಟು ಸಮಯ ಹಿಡಿಯಿತೇನೋ.

ಪ್ರೊ. ಗೌಡರದ್ದು ಮೃದು ಸ್ವಭಾವ, ಜೊತೆಗೆ ಅಚ್ಚುಕಟ್ಟು ಶಿಸ್ತಿನ ವ್ಯಕ್ತಿತ್ವ, ಹಿಡಿದ ಕೆಲಸವನ್ನು ಹೇಗಾದರಾಗಲೀ ವ್ಯವಸ್ಥಿತವಾಗಿ ಮುಗಿಸುವ ಪ್ರವೃತ್ತಿಯವರು. ಅವರ ಕೆಲವೊಂದು ಕೃತಿರಚನೆಯ ಸಂದರ್ಭದಲ್ಲಿ ನಾನು ಅವರನ್ನು ಹತ್ತಿರದಿಂದ ನೋಡಿದವನು, ಅವರ ಕೆಲವು ಲೇಖನ/ಕೃತಿಗಳನ್ನು ಪ್ರತಿಮಾಡಿಯೂ ಕೊಟ್ಟಿದ್ದೆ. ಆಗೆಲ್ಲಾ ಅವರು ನನ್ನೊಂದಿಗೆ ಅಭಿಪ್ರಾಯ-ಅನಿಸಿಕೆಗಳನ್ನು ಕೇಳುತ್ತಿದ್ದರು. ಆಗೆಲ್ಲಾ ನನಗೆ ಮುಜುಗರವಾಗುತ್ತಿತ್ತು. ಹಾಗೆಂದು ಅವರು ಬಿಟ್ಟುಬಿಡುತ್ತಿರಲಿಲ್ಲ, ಎಂದರೆ ಒಳ್ಳೆಯದನ್ನು ರಚನಾತ್ಮಕವಾದುದನ್ನು ಎಲ್ಲಿಂದಾದರೂ ಹೆಕ್ಕಿಕೊಂಡು ಬೆಳೆಯಲು ತುಡಿಯುವ ವ್ಯಕ್ತಿತ್ವ ಅವರದು, ಯಾವ ಹಂತದಲ್ಲೂ ಅವರು ಆತ್ಮೀಯತೆ  ಮಾನವೀಯತೆಗಳಿಗೆ ಬೆಲೆ ಕೊಡುವವರು, ಪ್ರೀತಿಯಿಂದ ಮಾತನಾಡಿಸುವವರು. ಅವರ ಶ್ರೀಮತಿಯವರೂ ಅಷ್ಟೇ, ಊರಿನಿಂದ ಹೊರಗಿರುವಾಗ ನಮಗೆಲ್ಲ ಅಮ್ಮನಂತಿದ್ದವರು. ಮದರಾಸಿನ ಆಮಂಜಿಕರೆಯಲ್ಲಿದ್ದ ಗೌಡರ ಮನೆಗೆ ಹೋಗುವುದೆಂದರೆ ನಮಗೆಲ್ಲಾ ಏನೋ ಸಡಗರ, ಸಂಭ್ರಮ, ಊರಿನ ನಮ್ಮ ಮನೆಗೇ ಹೋಗುತ್ತಿದ್ದೇವೆ ಎಂಬ ಹಾಗೆ.

ಪ್ರೊ.ಮರಿಯಪ್ಪ ಭಟ್ಟರು ಕಲೆಹಾಕಿ ತಯಾರಿ ನಡೆಸಿದ್ದ ಹವ್ಯಕ ಇಂಗ್ಲಿಷ್ ಪದಕೋಶದ ಹಸ್ತಪ್ರತಿಯು ಪ್ರೊ.ಗೌಡರಿಗೆ ಬಂದಾಗ ಮೊದಲಾಗಿ ಅವರು ಡಾ. ಆರ್ತಿಕಜೆಯವರನ್ನೂ ನನ್ನನ್ನೂ ಕರೆದಿದ್ದರು. ನಾವು ಮೂವರು ದಿನಾಲೂ ಕೆಲಘಂಟೆಗಳ ಹೊತ್ತು ಕುಳಿತು ಆ ಪದಕೋಶಕ್ಕೆ ಕಾಯಕಲ್ಪವನ್ನು ಕೊಡುತ್ತಿದ್ದವು, ಇದು ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದಿಂದ ಪ್ರೊ.ಕು.ಶಿ ಹುದಾಸ ಭಟ್ಟರ ನೇತೃತ್ವದಲ್ಲಿ ಪ್ರಕಟಗೊಂಡಿದೆ. ಆಗಲ್ಲಾ ಪ್ರೊ. ಗೌಡರು ಹವ್ಯಕ ಭಾಷೆ, ಪದ-ವೈಶಿಷ್ಟ್ಯ ಇತ್ಯಾದಿಗಳ ಬಗ್ಗೆ ಕುತೂಹಲವನ್ನು ವ್ಯಕ್ತಪಡಿಸುತ್ತಿದ್ದರು. ಜೊತೆಗೆ ಅವರ ತಾರವಾದ ಗೌಡಕನ್ನಡ (ಅರೆಭಾಷೆ) ದಲ್ಲಿರುವ ಇಂಥಾ ಅನೇಕ ಸ್ವಾರಸ್ಯಕರ ವಿಚಾರಗಳನ್ನು ಹೇಳುತ್ತಿದ್ದರು. ಭಾಷೆಗಳ ಬಗೆಗೆ ಅವರಿಗಿರುವ ಪ್ರೀತಿ, ಜಿಜ್ಞಾಸೆ, ಕಳಕಳಿ, ಪಾಂಡಿತ್ಯ ಮುಂತಾದವುಗಳನ್ನು ಸಮಾನಾಗಿ ಗುರುತಿಸಬಲ್ಲವರು. ಎಂದರೆ ಭಾಷೆಯ ಬಳಕೆಯ ವಿಧಾನಗಳು, ಸಾಧ್ಯತೆಗಳು ಇವುಗಳಲ್ಲೆಲ್ಲ ಅವರನ್ನು ತೆರೆದ ಹೃದಯ, ಯಾವುದೇ ಮಡಿವಂತಿಕೆಗಳಿಗೆ ಆಸ್ಪದವೇ ಇಲ್ಲ.

ಪ್ರೊ. ಗೌಡರ ಮಾರ್ಗದರ್ಶನದಲ್ಲಿ ಹಲವರು ಎಂ.ಫಿಲ್ ಹಾಗೂ ಪಿಹೆಚ್.ಡಿ ಸಂಶೋಧನೆ ಪ್ರಬಂಧಗಳು ರಚನೆಯಾಗಿ ಪದವಿ ಪ್ರಧಾನವಾಗಿವೆ. ಅವೆಲ್ಲ ಪ್ರಧಾನವಾಗಿ ಭಾಷೆ-ವ್ಯಾಕರಣ ಇತ್ಯಾದಿಗಳಿಗೆ ಸಂಬಂದಿಸಿದುವೇ. ಅವರ ಮಾರ್ಗದರ್ಶನದಲ್ಲಿ ಮೊದಲಬಾರಿಗೆ ಕನ್ನಡ ಸಾಹಿತ್ಯ ವಿಷಯದಲ್ಲಿ ಸಂಶೋಧನೆ ನಡೆಸಿ, ಪಿಹಚ್.ಡಿ ಗಿಟ್ಟಿಸಿಕೊಂಡವನು ನಾನು. ಯಾವುದೇ ಇತರ ಕೆಲಸಗಳ ಒತ್ತಡವಿದ್ದರೂ ಅವನ್ನೆಲ್ಲಾ ಬಿದಿಗಿರಿಸಿ ಅವರು ವಿದ್ಯಾರ್ಥಿಗಳ ಭಾವನೆಗಳಿಗೆ ಸ್ಪಂದಿಸುತ್ತಿದ್ದ ರೀತಿ, ತಾಳ್ಮೆಯಿಂದ, ಸಮಾಧಾನಕರವಾದ ಮಾತುಗಳಿಂದ ತಿದ್ದಿ ತೀಡಿ ಒಪ್ಪಗೊಳಿಸುವ ರೀತಿ ಇವೆಲ್ಲವೂ ಅನನ್ಯ. ಇದು ನಿಜವಾದ ಮಾರ್ಗದರ್ಶಕ ಗುರುವಿನ ಲಕ್ಷಣವೆಂದು ನಂಬಿದ್ದೇನೆ.

ಪ್ರೊ. ಗೌಡರ ಪ್ರಕಟಿತ ಕೃತಿಗಳು

ಸಂಶೋಧನೆ:
I: ವಡ್ಡಾರಾಧನೆಯ ಭಾಷಿಕ ಅಧ್ಯಯನ (ಎಂ.ಲಿಟ್, ಸಂ ಪ್ರಬಂಧ) 2 ಕನ್ನಡ ಶಾಸನಗಳ ಭಾಷಿಕ ಅಧ್ಯಯನ (ಪಿಹೆಚ್.ಡಿ. ಸಂ ಪ್ರಬಂದ) (ಕ್ರಿ.ಶ. 1000 ರಿಂದ 40ರವರೆಗಿನ ದಕ ಮತ್ತು ಕೊಡಗು ಜಿಲ್ಲೆ)

ಪ್ರಕಟಿತ ಕೃತಿಗಳು ಇಂಗ್ಲಿಷಿನಲ್ಲಿ
3. Gowda Kannada: Annamalai University 1970.
4. A Grammar of Kannada based on the inseriptions of eoorg. south and north kannada districts. 1000 to 1400 A.D. Annamalai University 1972.
5. Dravidian case system (Ed with others) Annamalai University, 1976,
6. A course in Modem Kannada (Teaching material for non Kannada studients) Madras University 1991

ಕನ್ನಡದಲ್ಲಿ:
7. ಕಂಬನ್ (ಅನುವಾದ: ಮೂಲ-ಇಂಗ್ಲಿಷ್) ಸಾಹಿತ್ಯ ಅಕಾಡೆಮಿ 1977.
8 ದ.ಕ. ಜಿಲ್ಲೆಯ ಕೃಷಿಯತ್ತುಗಳು (ಸಹ: ಕೆ. ಚಿನ್ನಪ್ಪಡ) ಉಜಿರೆ
9 ಕನ್ನಡ ಭಾಷಾವಲೋಕನ (ಪ್ರಂಧಗಳು) ಮದರಾಸು ವಿವಿ
10. ಸಿಂಜಿನಿ (ಲಘು ಪ್ರಬಂಧಗಳು) ವಾಗ್ದೇವಿ, ಮೈಸೂರು 1985
11: ಕನ್ನಡ ಭಾಷೆ ಮತ್ತು ವ್ಯಾಕರಣಗಳ ಒಂದು ಅಧ್ಯಯನ: ಪ್ರಸಾರಾಂಗ, ಮೈಸೂರು ವಿ.ವಿ. 1986
12. ಗಂಗಾದೇವಿ ವಿರಚಿತ ಮಧುರಾವಿಜಯಂ ಅಥವಾ ವೀರ ಕೆಂಪರಾ ಚರಿತಂ (ಮೂಲ ಸಂಸ್ಕೃತ) ಜಯಗೌರೀ: ಪ್ರಕಾಶನ ಕೋಡಿ, ಪೆರಾಜೆ 1990.
13. ಊರೊಸೆಗೆ (ಲಘು ಪ್ರಬಂಧಗಳು) ಸ್ನೇಹ ಪ್ರಕಾಶನ, ಬೆಂಗಳೂರು 1990 14,
14 ಕಡಲತಡಿಯ ಕನವರಿಕೆ (ಲಘು ಪಬಂಧಗಳು), ಗುರುಕುಮಾರ ಪ್ರಕಾಶನ,
ಮೈಸೂರು 1991
15 ಕನ್ನಡ ತಿರುಳ ಕನ್ನಡ ಮತ್ತು ಸಮಾಜ: ಪ್ರಸಾರಾಂಗ, ಬೆಂಗಳೂರು ವಿ.ವಿ. 1991
16 ಕಮಲ ನಿಮೀಲನ (ಬಾಷ್ಪಾಂಜಲಿ) ಜಯಗೌರೀ, ಪೆರಾಜೆ 1991
17 ಕನ್ನಡ ವ್ಯಾಕರಣ: ಸಾಂಪ್ರದಾಯಿಕ ಹಾಗೂ ಭಾಷಾ ವೈಜ್ಞಾನಿಕ, ಕರ್ನಾಟಕ
ಎ.ವಿ. ಧಾರವಾಡ 1992
18. ಬೆಟ್ಟದ ಮೇಲೊಂದು ಮನೆಯಮಾಡಿ: ಪ್ರಿಯದರ್ಶಿನಿ, ಬೆಂಗಳೂರು 1991
19. ಕಂಬರಾಮಾಯಣ ಒಂದು ಕಿರುಪರಿಚಯ: ಕರ್ನಾಟಕ ಸಂಘ ಮತ್ತೂರು 2000 20
20 ತುಣುಕು-ಮಿಣುಕು ಎಂಬ ಬಯೋಗ್ರಫಿ: ಪ್ರಿಯದರ್ಶಿನಿ ಪ್ರಕಾಶನ ಬೆಂಗಳೂರು: 2011
21. ಮಾನಸ ಮಹಾಭಾರತ: ಅರೆಬಾಸೆಯಲ್ಲಿ ಗದ್ಯಕಾವ್ಯ: ಜಯಗೌಲಪ್ರಕಾಶನ ಸುಳ್ಯ: 2014
22, ಕನ್ನಡ ಸಂಕ್ಷಿಪ್ತ ವ್ಯಾಕರಣ: ಕನ್ನಡ ವಿಶ್ವವಿದ್ಯಾನಿಲಯ, ವಿದ್ಯಾರಣ್ಯ ಹಂಪಿ, ದ್ವಿತೀಯ ಮುದ್ರಣ: 2015
23, .ಕನ್ನಡ ಭಾಷೆ ಮತ್ತು ವ್ಯಾಕರಣಗಳ ಒಂದು ಸಮೀಕ್ಷೆ: ಕಾರ್ತಿಕ್ ಎಂಟ ಪ್ರೈಸಸ್ ಬೆಂಗಳೂರು: 2008