ಮಾಳವದ ಯಶೋಧರ್ಮನು ಭಾರತದಲ್ಲಿ ಹೂಣರನ್ನು ಅಣಗಿಸಲು ಪ್ರಮುಖ ಪಾತ್ರ ವಹಿಸಿದವನು. ದಿಗ್ವಿಜಯವನ್ನು ಮಾಡಿ ಬ್ರಹ್ಮಪುತ್ರಾ ನದಿಯಿಂದ ಮಹೇಂದ್ರ ಪರ್ವತದವರೆಗೂ, ಹಿಮಾಲಯದಿಂದ ಪಶ್ಚಿಮ ಸಮುದ್ರದ ತನಕವೂ ವಿಸ್ತರಿಸಿದ್ದ ರಾಜ್ಯವನ್ನು ಮಂಡಸೋರದ ರಾಜಧಾನಿಯಿಂದ ಆಳಿದನು. ಯಶೋಧರ್ಮನು ಉತ್ತಮ ಹಿಂದೂ ಅರಸನಾಗಿದ್ದು ಮನು, ಭರತ ಮೊದಲಾದವರಿಗೆ ಹೋಲಿಸಲ್ಪಟ್ಟಿದ್ದನು. ಈತನ ಮಂತ್ರಿಯಾದ ಧರ್ಮದೋಷನು ವರ್ಣಸಂಕರವಾಗದಂತೆ ಯತ್ನಿಸಿದನು. ಯಶೋಧರ್ಮನ ವಿಷಯಗಳು ಮಂಡಸೋರದ ಶಿಲಾಸ್ತಂಭದಿಂದ ತಿಳಿಯುತ್ತವೆ.
ಕೆ.ವಿ. ತಿರುಮಲೇಶ್ ಬರೆಯುವ ‘ನನ್ನ ಹಿಸ್ಟರಿ ಪುಸ್ತಕ’ ಸರಣಿಯ ಬರಹ ಇಲ್ಲಿದೆ.
ಹೂಣರು
ತೋರಮಾನನ ನಾಯಕತ್ವದಲ್ಲಿ ಹೂಣರು ಕ್ರಿ.ಶ. ೫೦೦ರಲ್ಲಿ ಪುನಃ ವಾಯವ್ಯ ಭಾರತವನ್ನು ಆಕ್ರಮಿಸಿ ಮಾಳವವನ್ನು ಗೆದ್ದರು. ಇವರಲ್ಲಿ ಕೆಲವರು ಪರ್ಶಿಯಾದಲ್ಲಿಯೂ ರಾಜ್ಯವನ್ನು ಸ್ಥಾಪಿಸಿದರು.
ವಿಜಯದ ಕಾರಣಗಳು:
೧. ಪರ್ಶಿಯಾದ ಸಾಮ್ರಾಜ್ಯವು ಅಳಿದುದರಿಂದ ಮಧ್ಯ ಏಶಿಯದ ಹೊಸ ಪಂಗಡಗಳು ಬಂದು ಇಲ್ಲಿದ್ದ ಹೂಣರನ್ನು ಸೇರಲು ಸುಲಭವಾಯಿತು.
೨. ಹೂಣರು ಕ್ರೂರಿಗಳೂ, ಬಲಿಷ್ಠರೂ, ಉತ್ತಮ ಅಶ್ವಾರೋಹಿಗಳೂ ಆಗಿದ್ದರು.
೩. ಸ್ಕಂದಗುಪ್ತನ ಅನಂತರ ಗುಪ್ತ ಸಾಮ್ರಾಜ್ಯವು ಶಕ್ತಿಹೀನವಾದುದರಿಂದ ಅವರನ್ನು (ಹೂಣರನ್ನು) ತಡೆಗಟ್ಟಬಲ್ಲ ಅರಸರಾರೂ ಇರಲಿಲ್ಲ.
ಮಿಹಿರಗುಲ (ಕ್ರಿ,ಶ. ೫೧೫-೫೩೩). ತೋರಮಾನನ ಅನಂತರ ಅವನ ಮಗನಾದ ಮಿಹಿರಗುಲನು ಅಧಿಕಾರಕ್ಕೆ ಬಂದನು. ಅವನು ‘ಸಕಲ’ವನ್ನು (ಸಿಯಾಲ್‌ಕೋಟ್) ರಾಜಧಾನಿಯಾಗಿ ಮಾಡಿಕೊಂಡು ಅಲ್ಲಿಂದ ರಾಜ್ಯಾಡಳಿತ ನಡೆಸಿದನು. ಮಿಹಿರಗುಲನು ತನ್ನ ಕಿರಿಯ ಮಲತಮ್ಮ ಪ್ರವರಸೇನನಿಂದ ಪದಚ್ಯುತನಾಗಿ ಕಾಶ್ಮೀರದ ಅರಸನಲ್ಲಿ ಆಶ್ರಯ ಪಡೆದನು. ಆಮೇಲೆ ತನ್ನ ಆಶ್ರಯದಾತನನ್ನೇ ವಂಚನೆಯಿಂದ ಸೋಲಿಸಿ ಕಾಶ್ಮೀರದ ಗದ್ದುಗೆಯೇರಿದನು. ಆಮೇಲೆ ಗಾಂಧಾರವನ್ನು ಆಕ್ರಮಿಸಿ ಸೂರೆಗೈದನಲ್ಲದೆ ಬೌದ್ಧ ಸ್ಮಾರಕಗಳನ್ನು ನಾಶಪಡಿಸಿದನು, ಮಿಹಿರಗುಲನ ಅನಂತರ ಪ್ರವರಸೇನನು ಕಾಶ್ಮೀರವನ್ನು ಚೆನ್ನಾಗಿಯೆ ಆಳಿದನಾದರೂ ಅವನ ತರುವಾಯ ವಂಶವು ಕ್ಷೀಣಿಸಿ ನಾಶವಾಯಿತು.
ವಂಶದ ವಿನಾಶಕ್ಕೆ ಕಾರಣಗಳು:
೧. ಹೂಣರ ಕ್ರೌರ್ಯದಿಂದಾಗಿ ಜನತೆ ಅವರನ್ನು ದ್ವೇಷಿಸುತ್ತಿದ್ದುದು,
೨. ಯಶೋಧರ್ಮ ಮೌಖಾರಿಗಳು, ಪುಷ್ಯಭೂತಿಗಳು, ಬಾಲಾದಿತ್ಯ ಮೊದಲಾದ ಅರಸರು ಅವರ ನಾಶಕ್ಕೆ ಪ್ರಯತ್ನಿಸಿದುದು.
೩. ಪರ್ಶಿಯಾದಲ್ಲಿ ಹೂಣರು ಸೋಲಿಸಲ್ಪಟ್ಟುದು
ಯಶೋಧರ್ಮ
ಮಾಳವದ ಯಶೋಧರ್ಮನು ಭಾರತದಲ್ಲಿ ಹೂಣರನ್ನು ಅಣಗಿಸಲು ಪ್ರಮುಖ ಪಾತ್ರ ವಹಿಸಿದವನು. ದಿಗ್ವಿಜಯವನ್ನು ಮಾಡಿ ಬ್ರಹ್ಮಪುತ್ರಾ ನದಿಯಿಂದ ಮಹೇಂದ್ರ ಪರ್ವತದವರೆಗೂ, ಹಿಮಾಲಯದಿಂದ ಪಶ್ಚಿಮ ಸಮುದ್ರದ ತನಕವೂ ವಿಸ್ತರಿಸಿದ್ದ ರಾಜ್ಯವನ್ನು ಮಂಡಸೋರದ ರಾಜಧಾನಿಯಿಂದ ಆಳಿದನು. ಯಶೋಧರ್ಮನು ಉತ್ತಮ ಹಿಂದೂ ಅರಸನಾಗಿದ್ದು ಮನು, ಭರತ ಮೊದಲಾದವರಿಗೆ ಹೋಲಿಸಲ್ಪಟ್ಟಿದ್ದನು. ಈತನ ಮಂತ್ರಿಯಾದ ಧರ್ಮದೋಷನು ವರ್ಣಸಂಕರವಾಗದಂತೆ ಯತ್ನಿಸಿದನು. ಯಶೋಧರ್ಮನ ವಿಷಯಗಳು ಮಂಡಸೋರದ ಶಿಲಾಸ್ತಂಭದಿಂದ ತಿಳಿಯುತ್ತವೆ.
ಪಲ್ಲವರು
ಕ್ರಿ.ಶ. ೪ನೇ ಶತಮಾನದಲ್ಲಿ ಕಾಂಚಿಯ ಪಲ್ಲವರು ಪ್ರಬಲರಾದರು. ಮೊದಲನೇ ಬಲಿಷ್ಠ ಅರಸನಾದ ಶಿವಸ್ಕಂದ ವರ್ಮನು ಕೃಷ್ಣಾ ನದಿಯಿಂದ ದಕ್ಷಿಣ ಪೆನ್ನಾರಿನವರೆಗಿನ ರಾಜ್ಯವನ್ನು ಕಟ್ಟಿದನು. ಶೈವನಾದ ಶಿವಸ್ಕಂದನು ಅಶ್ವಮೇಧ ಯಾಗವನ್ನು ಮಾಡಿ ಧರ್ಮಮಹಾರಾಜನೆಂಬ ಬಿರುದನ್ನು ಪಡೆದನು.
ವಿಷ್ಣುಗೋಪನು ವಿಷ್ಣುಸ್ಕಂದ, ವಿಜಯಸ್ಕಂದರಂತೆ ಪ್ರಾಕೃತವನ್ನು ರಾಜ್ಯಭಾಷೆಯಾಗಿ ಮಾಡದೆ, ಸಂಸ್ಕೃತವನ್ನು ಮಾಡಿದನು. ಅವನು ಸಮುದ್ರಗುಪ್ತನಿಂದ ಸೋಲಿಸಲ್ಪಟ್ಟನು.
ಸಿಂಹ ವಿಷ್ಣು – ಅವನಿಸಿಂಹ (೫೭೫-೬೦೦). ಪಲ್ಲವ ಸಾಮ್ರಾಜ್ಯವನ್ನು ಇನ್ನೊಮ್ಮೆ ವಿಸ್ತರಿಸಿದವನು ಸಿಂಹ ವಿಷ್ಣು. ಈತನು ಕಲಭ್ರ, ಚೋಳ, ಪಾಂಡ್ಯರನ್ನು ಸೋಲಿಸಿ ಅವನಿಸಿಂಹನೆಂಬ ಬಿರುದನ್ನು ತಳೆದನು. ಅವನು ತನ್ನ ಸಾಮ್ರಾಜ್ಯವನ್ನು ಮದ್ರಾಸಿನಿಂದ ಕಾವೇರಿ ನದಿಯ ತನಕ ವಿಸ್ತರಿಸಿದನು.
ಕಲಭ್ರರು
ತೊಂಡಮಂಡಲಮಿನ ಉತ್ತರ ಗಡಿಯಲ್ಲಿ ಕಲಭ್ರರು ಎಂಬ ಬಹುಶಃ ಗುಡ್ಡಗಾಡು ಜನರ ಪಂಗಡವು, ಪಲ್ಲವರು ತೊಂಡಮಂಡಲಮಿನ ದಕ್ಷಿಣ ಭಾಗವನ್ನು ಗೆದ್ದುಕೊಂಡುದರಿಂದ ಸಿಟ್ಟುಗೊಂಡು, ತಿರುಪತಿಯ ಪುಳ್ಳಿ (?) ಎಂಬವನ ನಾಯಕತ್ವದಲ್ಲಿ ಪಲ್ಲವರ ಮೇಲೆ ಯುದ್ಧವನ್ನು ಸಾರಿದರು. ಯುದ್ಧದಲ್ಲಿ ವಿಜಯಿಗಳಾದ ಈ ಅನಾಗರಿಕ ಪಂಗಡವು ವಿಜಯೋತ್ಸಾಹದಿಂದ ಚೋಳ, ಪಾಂಡ್ಯರ ಮೇಲೆ ಜಯ ಗಳಿಸಿತು. ನಾಲ್ಕನೇ ಶತಮಾನದಲ್ಲಿ ಕಳೆದುಕೊಂಡ ಪ್ರದೇಶಗಳನ್ನು ಪಲ್ಲವರು ಮತ್ತೆ ಆರನೇ ಶತಮಾನದಲ್ಲಿ ಪಡೆದುಕೊಂಡರು. ಚೋಳರು ಒಂಭತ್ತನೇ ಶತಮಾನದಲ್ಲಿ ತಮ್ಮದನ್ನು ಗಳಿಸಿಕೊಂಡರು.
ಪುಷ್ಯಭೂತಿ ವಂಶ
ಥಾನೇಶ್ವರದ ಪುಷ್ಯಭೂತಿ ವಂಶವು ಕ್ರಿ.ಶ. ಸುಮಾರು ೫೮೩ರಲ್ಲಿ ಪ್ರಸಿದ್ಧಿಗೆ ಬಂತು. ಈ ವಂಶದ ಅರಸನಾದ ಪ್ರಭಾಕರವರ್ಧನನು ಸುತ್ತ ಮುತ್ತಲ ರಾಜರನ್ನು ಜಯಿಸಿ, ಮಹಾ ರಾಜಾಧಿರಾಜ ಎಂಬ ಬಿರುದನ್ನು ಪಡೆದನು.
ಕ್ರಿ.ಶ. ೬೦೯ರಲ್ಲಿ ಪ್ರಭಾಕರವರ್ಧನನು ಕಾಲವಶನಾದಾಗ, ಹರ್ಷವರ್ಧನನ ಅಣ್ಣನಾದ ರಾಜ್ಯವರ್ಧನನು ಪಟ್ಟವನ್ನೇರಿದನು. ಅವನು ಬಂಗಾಲದ ಅರಸ ಶಶಾಂಕನಿಂದ ಕೊಲ್ಲಲ್ಪಟ್ಟನು.
ಹರ್ಷವರ್ಧನನು ಕ್ರಿ.ಶ. ೬೦೬ರಲ್ಲಿ ಪಟ್ಟವೇರಿದನು. ತನ್ನ ತಂಗಿಯನ್ನು ಹುಡುಕಿ ಕರೆತಂದನು. ಮತ್ತು ಮಾಳವ, ಬಂಗಾಳಗಳನ್ನು ಗೆದ್ದುಕೊಂಡನು. ೬೧೨ರಲ್ಲಿ ತನ್ನ ರಾಜಧಾನಿಯನ್ನು ಥಾನೇಶ್ವರದಿಂದ ಕನೋಜಕ್ಕೆ ವರ್ಗಾಯಿಸಿದನು. ದಕ್ಷಿಣಕ್ಕೆ ದಂಡೆತ್ತಿ ಹೋಗುವಾಗ ಪುಲಿಕೇಶಿಯು ಈತನನ್ನು ತಡೆದನು. ರಜಪುತಾನ ಮತ್ತು ಸಿಂಧನ್ನು ಬಿಟ್ಟು ಬ್ರಹ್ಮಪುತ್ರ ಮುಖಜ ಭೂಮಿಯಿಂದ ಹಿಡಿದು ಪಂಜಾಬಿನ ತನಕದ ಉತ್ತರ ಹಿಂದುಸ್ಥಾನದ ಎಲ್ಲ ಭೂಭಾಗವೂ ಈತನ ಸಾಮ್ರಾಜ್ಯದಲ್ಲಿ ಅಡಕವಾಯಿತು. ಇವನು ಚೀನಾ ದೇಶಕ್ಕೆ ರಾಯಭಾರಿಯನ್ನು ಕಳಿಸಿದನು. ೬೩೫ರಲ್ಲಿ ವಲ್ಲಭಿಗೆ ದಂಡೆತ್ತಿ ಹೋಗಿ ಅಲ್ಲಿನ ರಾಜನನ್ನು ಸೋಲಿಸಿ, ತನ್ನ ಮಗಳನ್ನು ಕೊಟ್ಟು ವಿವಾಹ ಸಂಬಂಧವನ್ನು ಬೆಳೆಸಿದನು.
ಹರ್ಷ ಮತ್ತು ಧರ್ಮ
ಬೌದ್ಧನಾದ ಹರ್ಷವರ್ಧನನು ಅದರ ನಿಯಮದಂತೆಯೇ ನಡೆದುಕೊಳ್ಳುತ್ತಿದ್ದನು. ಬೌದ್ಧವಿಹಾರಗಳನ್ನೂ, ಯಾತ್ರಿಕರಿಗಾಗಿ ವಿಶ್ರಾಂತಿಗೃಹಗಳನ್ನೂ ಕಟ್ಟಿಸಿದನು. ವರ್ಷಕ್ಕೊಮ್ಮೆ ಎಲ್ಲಾ ಬೌದ್ಧ ಯತಿಗಳನ್ನೂ ಕರೆಸಿ ಇಪ್ಪತ್ತೊಂದು ದಿನಗಳ ತನಕ ಅವರ ಸೇವೆಯನ್ನು ಆದರದಿಂದ ಮಾಡಿ ಗೌರವಿಸುತ್ತಿದ್ದನು. ಐದು ವರ್ಷಗಳಿಗೊಮ್ಮೆ ಮೋಕ್ಷಪರಿಷದಗಳನ್ನು ಏರ್ಪಡಿಸಿ, ಅಲ್ಲಿ ನೆರೆದ ಎಲ್ಲರಿಗೂ ದಾನ ಮಾಡಿ ತನ್ನ ಖಜಾನೆಯನ್ನು ಬರಿದುಗೊಳಿಸುತ್ತಿದ್ದನು.
ಹರ್ಷನು ಪರಧರ್ಮದ್ವೇಷಿಯಾಗಿರಲಿಲ್ಲ. ಹಿಂದು ಮತ್ತು ಜೈನ ಧರ್ಮಗಳಿಗೆ ಸಹಾಯ ನೀಡುತ್ತಿದ್ದನು. ಪ್ರತಿ ದಿನದ ಆದಾಯದ ಮೂರನೇ ಎರಡಂಶವನ್ನು ಅವನು ಧಾರ್ಮಿಕ ಕಾರ್ಯಗಳಿಗೋಸ್ಕರ ಉಪಯೋಗಿಸುತ್ತಿದ್ದನು.
ಯಶೋವರ್ಮನ್
ಕ್ರಿ.ಶ. ೭೩೦ರಲ್ಲಿ ಕನೋಜದ ಪಟ್ಟವನ್ನೇರಿದ ಯಶೋವರ್ಮನು ಉತ್ತರ ಭಾರತದಲ್ಲಿ ಬಲವಾದ ಸರಕಾರವನ್ನು ಸ್ಥಾಪಿಸಿದನು. ಬಂಗಾಳದ ಅರಸನನ್ನು ಸೋಲಿಸಿದನಲ್ಲದೆ, ನರ್ಮದಾ, ರಜಪುತಾನ, ಥಾನೇಶ್ವರಗಳ ದಾರಿಯಾಗಿ ಕನೋಜವನ್ನು ಸೇರಿದನು. ೪೦ ವರ್ಷಗಳ ಅವಧಿಯ ಆಡಳಿತವನ್ನು ನಡೆಸಿದ ಅನಂತರ ಇವನು ೭೭೦ರಲ್ಲಿ ಕಾಶ್ಮೀರದ ಅರಸನೊಂದಿಗೆ ನಡೆಸಿದ ಯುದ್ಧದಲ್ಲಿ ಹತನಾದನು. ಕನೋಜವು ಕಾಶ್ಮೀರದ ಅರಸನ ವಶವಾಯಿತು. ಯಶೋವರ್ಮನು ಸಾಹಿತ್ಯಾಭಿರುಚಿಯುಳ್ಳವನಾಗಿದ್ದನು. ಈತನು “ರಾಮಾಭ್ಯುದಯಮ್” ಎಂಬ ಒಂದು ನಾಟಕವನ್ನೂ ಬರೆದಿದ್ದನು. ಸುಪ್ರಸಿದ್ಧ ಕವಿ ನಾಟಕಕಾರ ಭವಭೂತಿಯು ಯಶೋವರ್ಮನ ಆಸ್ಥಾನದಲ್ಲಿದ್ದನು.
ಪಲ್ಲವರ ಪುನರುದಯ
ಕಲಭ್ರರ ಧಾಳಿಗೊಳಗಾದ ಪಲ್ಲವರು ೭ನೇ ಶತಮಾನದಲ್ಲಿ ಬೇಗನೆ ಚೇತರಿಸಿಕೊಂಡರು.
ಮಹೇಂದ್ರವರ್ಮನ್ (೬೦೦-೬೩೦) ತನ್ನ ರಾಜ್ಯವನ್ನು ದಕ್ಷಿಣಕ್ಕೆ ವಿಸ್ತರಿಸಿದನು. ಎರಡನೇ ಪುಲಿಕೇಶಿಯಿಂದ ಸೋಲಿಸಲ್ಪಟ್ಟು ರಾಜ್ಯದ ಸ್ವಲ್ಪ ಭಾಗವನ್ನು ಕಳೆದುಕೊಂಡನು. ಮೊದಲು ಜೈನನಾಗಿದ್ದ ಈತನು ಕ್ರಮೇಣ ಶೈವ ಮತವನ್ನು ಅವಲಂಬಿಸಿದನು. ಶೈವ ದೇವಾಲಯಗಳನ್ನು ಕಟ್ಟಿಸಿದನು. ಜೈನನಾಗಿದ್ದಾಗ ಇತರ ದರ್ಮಗಳನ್ನು ಪ್ರೀತಿಸುತ್ತಿದ್ದ ಮಹೇಂದ್ರವರ್ಮನ್ ಶೈವನಾದ ಮೇಲೆ ಜೈನ ದೇವಾಲಯಗಳನ್ನು ಧ್ವಂಸಗೊಳಿಸಿದನು. ವಿಚಿತ್ರಚಿತ್ತನೆಂದರೆ ಇವನೇ!
ಒಂದನೇ ನರಸಿಂಹ ವರ್ಮನ್. ತನ್ನ ತಂದೆಗೆ ಒದಗಿದ ಸೋಲನ್ನು ೬೩೦ರಲ್ಲಿ ಪಟ್ಟಕ್ಕೆ ಬಂದ ನರಸಿಂಹವರ್ಮನ್ ನಿವಾರಿಸಿದನು. ಪುಲಿಕೇಶಿಯ ಮೇಲೆ ದಂಡೆತ್ತಿಹೋಗಿ ವಾತಾಪಿ ನಗರವನ್ನು ಆಕ್ರಮಿಸಿ ಧ್ವಂಸಗೊಳಿಸಿ ‘ವಾತಾಪಿಕೊಂಡನ್’ ಎಂಬ ಬಿರುದನ್ನು ಗಳಿಸಿದನು. ಈತನು ಸಿಂಹಳದ ಅರಸನನ್ನು ಎರಡು ಬಾರಿ ಸೋಲಿಸಿದನು. ತಂದೆಯಂತೆ ಇವನು ಧರ್ಮದ್ವೇಷಿಯಾಗಿರಲಿಲ್ಲ. ಮಹಾಬಲಿಪುರದ ಕಲಾಕೌಶಲ್ಯಗಳಿಗೆ ಈತನೇ ಕಾರಣ.
ಮಿಹಿರಗುಲನು ತನ್ನ ಕಿರಿಯ ಮಲತಮ್ಮ ಪ್ರವರಸೇನನಿಂದ ಪದಚ್ಯುತನಾಗಿ ಕಾಶ್ಮೀರದ ಅರಸನಲ್ಲಿ ಆಶ್ರಯ ಪಡೆದನು. ಆಮೇಲೆ ತನ್ನ ಆಶ್ರಯದಾತನನ್ನೇ ವಂಚನೆಯಿಂದ ಸೋಲಿಸಿ ಕಾಶ್ಮೀರದ ಗದ್ದುಗೆಯೇರಿದನು. ಆಮೇಲೆ ಗಾಂಧಾರವನ್ನು ಆಕ್ರಮಿಸಿ ಸೂರೆಗೈದನಲ್ಲದೆ ಬೌದ್ಧ ಸ್ಮಾರಕಗಳನ್ನು ನಾಶಪಡಿಸಿದನು.
ಎರಡನೇ ನರಸಿಂಹವರ್ಮನ ಕಾಲದಲ್ಲಿ ದೇಶದಲ್ಲಿ ಸುಖಶಾಂತಿಯು ನೆಲಸಿತ್ತು. ಮಹಾಬಲಿಪುರದಲ್ಲಿ ಇವನು ಸಹಾ ದೇವಾಲಯಗಳನ್ನು ಕಟ್ಟಿಸಿ ಹೆಸರುವಾಸಿಯಾದನು. ಇವನಿಗೆ ಗಾನ, ಸಾಹಿತ್ಯಗಳಲ್ಲಿ ವಿಶೇಷವಾದ ಅಬಿರುಚಿಯಿತ್ತು. ಇವನ ತಂದೆ ಒಂದನೇ ನರಸಿಂಹನು ಕೂಡಾ ಕಲೆಗೆ ಪ್ರೋತ್ಸಾಹವಿತ್ತಿದ್ದನು.
‘ಪಲ್ಲವಮಲ್ಲ’ ನಂದಿವರ್ಮನ್ ಪಲ್ಲವನಿಗೆ ಎಷ್ಟೋ ಶತ್ರುಗಳನ್ನು ಎದುರಿಸಬೇಕಾಯಿತು. ಎರಡನೇ ಚಾಲುಕ್ಯ ವಿಕ್ರಮಾದಿತ್ಯನು ಇವನನ್ನು ಪರಾಜಯಗೊಳಿಸಿ ಕಾಂಚಿಯನ್ನು ಸ್ವಲ್ಪ ಕಾಲದ ವರೆಗೆ ತನ್ನ ಅಧೀನದಲ್ಲಿ ಇರಿಸಿಕೊಂಡನು. ಪಾಂಡ್ಯ ಅರಸ ರಾಜಸಿಂಹನೊಂದಿಗೆ ವೈರವು ಬಹುಕಾಲದ ವರೆಗೆ ಸಾಗಿತು. ಪೂರ್ವ ಚಾಲುಕ್ಯರ ಒಂದು ಭಾಗವನ್ನು ನಂದಿವರ್ಮನ್ ವಶಪಡಿಸಿಕೊಂಡನು. ರಾಷ್ಟ್ರಕೂಟ ದಂತಿದುರ್ಗನೊಂದಿಗೆ ಒಪ್ಪಂದವನ್ನು ಮಾಡಿಕೊಂಡನು. ವೈಷ್ಣವನಾಗಿದ್ದ ನಂದಿವರ್ಮನ್ ಕಾಂಚಿಯಲ್ಲಿ ಮುಕ್ತೇಶ್ವರ ದೇವಾಲಯವನ್ನು ಕಟ್ಟಿಸಿದನು.
ಅವನ ಮಗ ದಂತಿವರ್ಮನ ಕಾಲದಲ್ಲಿ ರಾಷ್ಟ್ರಕೂಟ ವಂಶದ ಧ್ರುವ ಮತ್ತು ಮೂರನೇ ಗೋವಿಂದನಿಂದ ಯುದ್ಧವು ಸಾರಲ್ಪಟ್ಟು ರಾಜ್ಯವು ಕಳೆಗುಂದಿತು. ೯ನೇ ಶತಮಾನದಲ್ಲಿ ಈ ರಾಜ್ಯವು ನಶಿಸಲ್ಪಟ್ಟಿತು.
ಪಾಂಡ್ಯರ ಪ್ರಾದುರ್ಭಾವ
ಅರಿಕೇಸರಿ ಪರಾಂಕುಶ ಮಾರವರ್ಮನ್. ಕುನ್ ಪಾಂಡ್ಯನೆಂದೂ ಹೆಸರು ಪಡೆದ ಈತನು ಪಲ್ಲವರೊಡನೆ ಕಲಹವನ್ನು ಪ್ರಾರಂಭಿಸಿದನು. ಚೇರರನ್ನು ಸೋಲಿಸಿದನು. ಮೊದಲು ಜೈನನಾಗಿದ್ದ ಈತ ಶೈವ ಯತಿ ಸಂಬಂದರ್‌ನ ಪ್ರೋತ್ಸಾಹದಿಂದ ಶೈವ ಮತವನ್ನು ಸ್ವೀಕರಿಸಿ, ಆಮೇಲೆ ಜೈನದ್ವೇಷಿಯಾಗಿ ಆ ಧರ್ಮದ ವಿನಾಶಕ್ಕಾಗಿ ಕೆಲಸ ಮಾಡಿದನು.
ಮೊದಲನೇ ಮಾರವರ್ಮನ್ ರಾಜಸಿಂಹ ಕೂಡಾ ರಾಜ್ಯ ವಿಸ್ತರಿಸಲು ಪ್ರಯತ್ನಿಸಿದನು. ನಂದಿವರ್ಮ ಪಲ್ಲವನನ್ನು ಸೋಲಿಸಿ ಕಾವೇರಿ ಪ್ರದೇಶಂವನ್ನು ಗೆದ್ದುದಲ್ಲದೆ ಎರಡನೇ ಕೀರ್ತಿವರ್ಮನನ್ನು ಪರಾಜಯಗೊಳಿಸಿದನು.
ಜಲಪರಾಂತಕ ನೆಡುಂಜಡೆಯನ್. ಒಂದನೆ ವರಗುಣನೆಂದು ಹೆಸರು ಧರಿಸಿದ ಈತನು ಚೇರ, ಪಲ್ಲವರ ಧಾಳಿಯನ್ನು ಎದುರಿಸಿದನು. ಈತನು ಈ ವಂಶದ ಪ್ರಖ್ಯಾತ ಅರಸನು. ತಂಜಾವೂರು, ತಿರುಚಿರಪಳ್ಳಿ, ತಿರುವಾಂಕೂರುಗಳನ್ನು ಗೆದ್ದುಕೊಂಡನು. ಶಿವ ಮತ್ತು ವಿಷ್ಣು ದೇವಾಲಯಗಳನ್ನು ಕಟ್ಟಿಸಿದನು. ೯ನೇ ಶತಮಾನದಲ್ಲಿ ಈ ವಂಶವು ನಾಶವಾಯಿತು.
ಕನ್ನಡದ ಕಡುಗಲಿಗಳು
ಚಾಲುಕ್ಯರೆಂದೂ ರಾಷ್ಟ್ರಕೂಟರೆಂದೂ ಎರಡು ಪ್ರಬಲ ಕನ್ನಡ ಅರಸು ಮನೆತನಗಳು ಉತ್ತರ ಭಾರತದಲ್ಲಿ ಹಲವು ಕಾಲ ಮೆರೆದುವು. ಚಾಲುಕ್ಯರಲ್ಲಿ ಬಾದಾಮಿಯ ಚಾಲುಕ್ಯರೆಂದೂ, ವೆಂಗಿಯ ಪೂರ್ವದ ಚಾಲುಕ್ಯರೆಂದೂ, ಕಲ್ಯಾಣಿಯ ಚಾಲುಕ್ಯರೆಂದೂ ಮೂರು ಬಣಗಳಿದ್ದುವು. ಆದರೆ ರಾಷ್ಟ್ರಕೂಟರು ಒಂದೇ ಪಂಗಡವಾಗಿದ್ದರು.
ಬಾದಾಮಿಯ ಚಾಲುಕ್ಯರು
ಒಂದನೇ ಪುಲಿಕೇಶಿಯಿಂದ ಸ್ಥಾಪಿಸಲ್ಪಟ್ಟ ವಾತಾಪಿ (ಬಾದಾಮಿ)ಯ ಸಾಮ್ರಾಜ್ಯವು ಅವನ ಮಗ ಒಂದನೇ ಕೀರ್ತಿವರ್ಮನಿಂದ ವಿಸ್ತರಿಸಲ್ಪಟ್ಟು ವಿಶಾಲವಾಯಿತು. ಕೀರ್ತಿವರ್ಮನು ಸಾಯುವಾಗ ಅವನ ಮಗ ಪುಲಿಕೇಶಿಯು ಬಾಲಕನಾಗಿದ್ದುರಿಂದ ಚಿಕ್ಕಪ್ಪನಾದ ಮಂಗಳೇಶನು ಸಿಂಹಾಸನವನ್ನೇರಿದನು, ವಿಷ್ಣು ದೇವಾಲಯವನ್ನು ಕಟ್ಟಿಸಿದನಲ್ಲದೆ ರೇವತೀ ದ್ವೀಪವನ್ನು ಜಯಿಸಿದನು.
ಎರಡನೇ ಪುಲಿಕೇಶಿ (೬೦೮-೬೪೨). ಮಂಗಳೇಶನಿಂದ ತನಗೆ ಸಿಗಬೇಕಿದ್ದ ರಾಜ್ಯವನ್ನು ಕಿತ್ತುಕೊಂಡವನೇ, ಲಾಟ, ಮಾಳವ, ಕೋಸಲ ರಾಜ್ಯಗಳನ್ನೂ, ಕದಂಬ, ಗಂಗ, ಕಳಿಂಗಗಳನ್ನೂ ಗೆದ್ದು ದಕ್ಷಿಣದ ಪಲ್ಲವರನ್ನು ಸೋಲಿಸಿ ಕಾಂಚಿಯನ್ನು ಸೆಳೆದುಕೊಂಡನು. ಹರ್ಷನ ದಂಡನ್ನು ತಡೆದು ಸೋಲಿಸಿ ಕೀರ್ತಿವಂತನಾದನು. ಇವನು ಸತ್ಯಾಶ್ರಯ, ಪರಮ ಮಹೇಶ್ವರ ಎಂಬಿತ್ಯಾದಿ ಬಿರುದುಗಳನ್ನು ತನ್ನದಾಗಿಸಿಕೊಂಡನೆಂದು ಐಹೊಳೆಯ ಶಾಸನದಿಂದ ತಿಳಿದುಬರುತ್ತದೆ.
ಐಹೊಳೆ ಶಾಸನ
ಕ್ರಿ.ಶ. ೬೩೪ರಲ್ಲಿ ರವಿಕೀರ್ತಿಯಿಂದ ಬರೆಯಲ್ಪಟ್ಟ ಐಹೊಳೆಯ ಶಾಸನದಲ್ಲಿ ಎರಡನೇ ಪುಲಿಕೇಶಿಯ ತನಕದ ಅರಸರ ವಿಷಯಗಳು ಇವೆ. ಪುಲಿಕೇಶಿಯ ವಿಷಯವು ಇದರಿಂದ ತಿಳಿಯತ್ತದೆ. ಎರಡನೇ ಖುಸ್ರುವಿಗೆ (ಇರಾನಿನ ಶಾ) ಪುಲಿಕೇಶಿಯು ಕಳಿಸಿದ ರಾಯಭಾರಿಗೆ ಪ್ರತಿಯಾಗಿ ಖುಸ್ರುವು ಬಾದಾಮಿಗೆ ರಾಯಭಾರಿಯನ್ನು ಕಳಿಸಿದನು. ಪಲ್ಲವ ಅರಸನಾದ ಒಂದನೇ ನರಸಿಂಹವರ್ಮನು ತನ್ನ ತಂದೆಗಾದ ಸೋಲಿನ ಸೇಡನ್ನು ತೀರಿಸಲೋಸ್ಕರ ಪುಲಿಕೇಶಿಯ ಮೇಲೆ ಹೂಡಿದ ಯುದ್ಧದಿಂದಾಗಿ ೬೪೨ರಲ್ಲಿ ಪುಲಿಕೇಶಿಯು ಹತನಾದನು.
ಒಂದನೇ ವಿಕ್ರಮಾದಿತ್ಯನು (೬೫೫-೬೮೦) ಪಲ್ಲವ ಅರಸ ಮಹಾಮಲ್ಲ ನರಸಿಂಹವರ್ಮನನ್ನು ಸೋಲಿಸಿ ರಾಜಮಲ್ಲನೆಂಬ ಬಿರುದನ್ನು ಪಡೆದನಲ್ಲದೆ, ನರಸಿಂಹವರ್ಮನ ಅನಂತರ ಪಟ್ಟಕ್ಕೆ ಬಂದ ಈಶ್ವರ ಪೋತರಾಜನನ್ನು ಕೂಡ ಸೋಲಿಸಿ, ಪ್ರತೀಕಾರವನ್ನು ಸಂಪೂರ್ಣವಾಗಿ ತೀರಿಸಿಕೊಂಡನು. ರಣರಸಿಕನಾದ ಈತನು ತನ್ನ ರಾಜ್ಯವನ್ನು ಎಲ್ಲಾ ಕಡೆ ವಿಸ್ತರಿಸಿದನು.
ಅವನ ಅನಂತರ ಎರಡನೇ ವಿಕ್ರಮಾದಿತ್ಯನು ಪಲ್ಲವರ ವಿರುದ್ಧ ಯುದ್ಧ ಸಾರಿದನು. ಈತನು ಜೈನನಾಗಿದ್ದನು. ಎರಡನೇ ಕೀರ್ತಿವರ್ಮನ ಕಾಲದಲ್ಲಿ ದಂತಿ ದುರ್ಗ ರಾಷ್ಟ್ರಕೂಟರಿಂದ ಈ ವಂಶವು ನಾಶಹೊಂದಿತು.
ವೆಂಗಿಯ ಪೂರ್ವ ಚಾಲುಕ್ಯರು
ವೆಂಗಿಯನ್ನು ಆಂಧ್ರರಿಂದ ವಶಪಡಿಸಿಕೊಂಡ ಸತ್ಯಾಶ್ರಯ ಪುಲಿಕೇಶಿಯು ತನ್ನ ತಮ್ಮ ಕುಬ್ಜ ವಿಷ್ಣುವರ್ಧನನ್ನು ಅಲ್ಲಿಯ ಅಧಿಕಾರಿಯನ್ನಾಗಿ ನೇಮಿಸಿದನು. ಪುಲಿಕೇಶಿಯು ಮಡಿದಾಗ ವಿಷ್ಣುವರ್ಧನನು ಸ್ವತಂತ್ರನಾದನು. ಹಲವು ಕಾಲ ಇದು ರಾಷ್ಟ್ರಕೂಟರ ದಾಸ್ಯಕ್ಕೆ ಒಳಪಟ್ಟಿತು. ನಾಲ್ಕನೇ ವಿಷ್ಣುವರ್ಧನನು ರಾಷ್ಟ್ರಕೂಟರ ಒಂದನೇ ಕೃಷ್ಣನಿಂದ ಸೋಲಿಸಲ್ಪಟ್ಟನು. ಧ್ರುವನು ಮೂರನೇ ಗೋವಿಂದನ ಸಾಮಂತನಾಗಿದ್ದು ಪಲ್ಲವರ ಮೇಲೆ ಯುದ್ಧಕ್ಕೆ ಸಹಾಯಕನಾದನು.
ಎರಡನೇ ವಿಜಯಾದಿತ್ಯ. ವಿಷ್ಣುವರ್ಧನನ ಮಗನಾದ ವಿಜಯಾದಿತ್ಯನು ರಾಷ್ಟ್ರಕೂಟರಿಂದ ಸ್ವಾತಂತ್ರ್ಯವನ್ನು ಪಡೆಯಲೆಂದು ದಂಗೆಯೆದ್ದು ತನ್ನ ರಾಜ್ಯವನ್ನು ಕಳೆದುಕೊಂಡನು, ನೃಪತುಂಗನ ಕಾಲದಲ್ಲಿ ಮರಳಿ ಪಡೆದನು.
ಮೂರನೇ ವಿಜಯಾದಿತ್ಯನು ನೃಪತುಂಗನಿಂದ ಸೋಲಿಸಲ್ಪಟ್ಟರೂ, ಪಲ್ಲವ, ಪಾಂಡ್ಯ, ಗಂಗರ ಮೇಲೆ ವಿಜಯವನ್ನು ಗಳಿಸಿ ಪ್ರಖ್ಯಾತನಾದನು.
ಇವನ ಅನಂತರ ಭೀಮನು ರಾಷ್ಟ್ರಕೂಟರಿಂದ ಸಂಪೂರ್ಣವಾಗಿ ಸ್ವತಂತ್ರನಾದನು. ಈ ಅರಸರೆಲ್ಲ ಹಿಂದುಗಳಾಗಿದ್ದು ಹಿಂದೂ ಧರ್ಮವನ್ನು ಪ್ರೋತ್ಸಾಹಿಸಿದವರು.
ಕಲ್ಯಾಣಿಯ ಚಾಲುಕ್ಯರು
ತ್ರಿಪುರಿಯ ಕಾಳಚೂರ್ಯರ ಸಹಾಯದಿಂದ ಚಾಲುಕ್ಯ ವಂಶದ ಎರಡನೇ ತೈಲ(ಪ) ಎಂಬವನು ರಾಷ್ಟ್ರಕೂಟರನ್ನು ನಾಶಮಾಡಿ, ಕಲ್ಯಾಣಿಯಲ್ಲಿ ಕ್ರಿ.ಶ. ೯೭೩ರಲ್ಲಿ ರಾಜ್ಯವನ್ನು ಕಟ್ಟಿದನು.
ಒಂದನೇ ಸೋಮೇಶ್ವರ ‘ಆಹವಮಲ್ಲ’ನು ಚೋಳರಿಂದ ಸೋಲಿಸಲ್ಪಟ್ಟರೂ ಪರಮರ ಮತ್ತು ತ್ರಿಪುರಿಯ ಕಾಳಚೂರ್ಯರನ್ನು ಸೋಲಿಸಿ ರಾಜ್ಯವನ್ನು ಅಭಿವೃದ್ಧಿಗೊಳಿಸಿದನು.
ಆರನೇ ವಿಕ್ರಮಾದಿತ್ಯನು ಪೂರ್ವಚಾಲುಕ್ಯರನ್ನು ಸೋಲಿಸಿ ವೆಂಗಿಯ ತನಕ ರಾಜ್ಯವನ್ನು ವಿಸ್ತರಿಸಿದನು. ಶೈವನಾದ ವಿಕ್ರಮಾದಿತ್ಯನು ಕವಿಗಳಿಗೆ ಆಶ್ರಯದಾತನಾಗಿದ್ದನು. ಚರಿತ್ರಕಾರನಾದ ಬಿಲ್ಹಣನು ವಿಕ್ರಮಾದಿತ್ಯನ ಆಶ್ರಯವನ್ನು ಪಡೆದಿದ್ದನಲ್ಲದೆ ವಿಕ್ರಮಾಂಕನ ಚರಿತ್ರೆಯ ಮೂಲಕ ಅರಸನನ್ನು ಹೊಗಳಿದ್ದಾನೆ.
ಹೈದರಾಬಾದಿನಲ್ಲಿ ನೆಲೆಸಿರುವ ಕನ್ನಡದ ಹಿರಿಯ ಕವಿ, ಲೇಖಕ ಮತ್ತು ಭಾಷಾಶಾಸ್ತ್ರಜ್ಞರು, ಮೂಲತಃ ಕಾಸರಗೋಡಿನ ಬಳಿಯ ಕಾರಡ್ಕದವರು. ಹೈದರಾಬಾದಿನ ಸೆಂಟ್ರಲ್ ಇನ್ಸ್ಟಿಟ್ಯೂಟ್ ಆಫ್ ಇಂಗ್ಲೀಷ್ ಅಂಡ್ ಫಾರಿನ್ ಲಾಂಗ್ವೇಜಸ್ ಸಂಸ್ಥೆಯಲ್ಲಿ ಪ್ರಾಧ್ಯಾಪಕರಾಗಿ ನಿವೃತ್ತಿಯನ್ನು ಹೊಂದಿ, ನಂತರ ಯೆಮನ್ ದೇಶದಲ್ಲಿ ಕೆಲಕಾಲ ಇಂಗ್ಲೀಷ್ ಅಧ್ಯಾಪನ ಮಾಡಿ, ಈಗ ಹೈದರಾಬಾದಿನಲ್ಲಿ ತಮ್ಮ ನಿವೃತ್ತಿ ಜೀವನವನ್ನು ಕಳೆಯುತ್ತಿದ್ದಾರೆ. ನಾಟಕ, ಕವನ, ಕಥೆ, ಕಾದಂಬರಿಗಳನ್ನು ರಚಿಸಿರುವ ಅವರು ಭಾಷಾವಿಜ್ಞಾನ ಕ್ಷೇತ್ರದಲ್ಲಿ ಮೌಲಿಕ ಕೃತಿಗಳನ್ನು ಪ್ರಕಟಿಸಿರುವ ವಿದ್ವಾಂಸರು. ವಿಮರ್ಶಕರು.