ಮಗಳ ಹೇರ್ ಕಟ್ ಮಾಡಿಸಲು ಇದೇ ಏರಿಯಾದಲ್ಲಿರುವ ಬ್ಯುಟಿ ಸಲೂನ್‌ಗೆ ಹೋದಾಗ ನಡೆದ ಘಟನೆಯು ಇದಕ್ಕೆ ಸಂಬಂಧಿಸಿದ್ದೆ ಆಗಿತ್ತು. ಯಾವಾಗಲೂ ನಗುತ್ತಾ ಎಲ್ಲ ಕೆಲಸಗಳನ್ನು ತುಂಬಾ ಅಚ್ಚುಕಟ್ಟಾಗಿ ಮಾಡುತ್ತಿದ್ದ ಅಂಶುಲ್ ತನ್ನ ಕೆಲಸವನ್ನು ಕಡಿಮೆ ರೇಟಿಂಗ್ ಹಾಗೂ ಒಂದೆರಡು ನೆಗೆಟಿವ್ ರಿವ್ಯು ಬಂತೆಂದು ಕೆಲಸ ಕಳೆದುಕೊಂಡಿದ್ದಳಂತೆ. ನಮ್ಮ ಏರಿಯಾದಲ್ಲಿರುವ ನನ್ನ ಹತ್ತು ಹನ್ನೆರಡು ಸ್ನೇಹಿತೆಯರ ಗುಂಪಿಗೆ ಅವಳು ಹಾಗೂ ಅವಳ ಕೆಲಸ ಅಚ್ಚುಮೆಚ್ಚಾಗಿತ್ತು. ಅವಳು ಕಡಿಮೆ ರೇಟಿಂಗ್ ಕಾರಣಕ್ಕಾಗಿ ಕೆಲಸ ಕಳೆದುಕೊಂಡಿದ್ದು ನಮಗೆಲ್ಲಾ ನಂಬಲು ಸಾಧ್ಯವಾಗಿರಲಿಲ್ಲ.
ರೇಟಿಂಗ್ ಕೊಡುವಿಕೆಯ ಕುರಿತ ಪೂರ್ಣಿಮಾ ಹೆಗಡೆ ಬರಹ ನಿಮ್ಮ ಓದಿಗೆ
“ಹಲೋ ಮ್ಯಾಮ್, ಆಯ್ ಹ್ಯಾವ್ ನಾಟ್ ರೀಸಿವ್ಡ್ “
ನಿದ್ರಾದೇವಿಯ ತೆಕ್ಕೆಯಲ್ಲಿ ನೆಮ್ಮದಿಯಿಂದ ಅಂಟಿಕೊಂಡಿದ್ದ ನನ್ನ ಕಣ್ರೆಪ್ಪೆಗಳು ಥಟ್ ಎಂದು ಬೇರಾದವು. ಜೋರಾಗಿ ಬೀಸಿದ ಗಾಳಿಗೆ ಪಟಾರ್ ಎಂದು ಬಾಲ್ಕನಿಯ ಬಾಗಿಲು ಬಡಿದುಕೊಂಡ ಸದ್ದಿಗೆ ಬೆಚ್ಚಿ ಬಿದ್ದು ಸಮಯ ಎಷ್ಟಿರಬಹುದು ಎಂದು ಮೊಬೈಲ್ ನೋಡಿದರೆ ನೋಟಿಫಿಕೇಶನಲ್ಲಿ ಯಾವುದೊ ಹೊಸ ನಂಬರ್‌ನಿಂದ ಬಂದ ಈ ವಾಟ್ಸಪ್ ಸಂದೇಶ ಸವಿ ನಿದ್ದೆಯನ್ನು ಹಾರಿಸಿ ದಿಗಿಲು ಹುಟ್ಟಿಸಿತು. ಸಂದೇಶದಲ್ಲಿದ್ದ ಅಪೂರ್ಣ ವಾಕ್ಯದ ಅರ್ಥ ತಿಳಿಯದೆ ಗಲಿಬಿಲಿಯಾಯಿತು. ನಾನೇನಾದರೂ ಇವರಿಗೆ ಹಣ ಕೊಡುವುದಿದೆಯೇ ಎಂದು ಯೋಚಿಸುವಂತಾಯಿತು.
ನೆನಪಿಸಿಕೊಂಡೆ. ನಿನ್ನೆ ನಾಲ್ಕೈದು ಮಾರಾಟಗಾರರಿಂದ ಕರಕುಶಲ ವಸ್ತುಗಳನ್ನು ನಮ್ಮ ಅಂಗಡಿಗೆ ತರಿಸಿದ್ದೆ. ಆದರೆ ಅವರಿಗೆ ನಿನ್ನೆಯೆ ದುಡ್ಡು ಕೊಟ್ಟು ಬಂದಿದ್ದೆ. ಮತ್ತೆನಾದರೂ ನಮ್ಮ ಕಡೆಯಿಂದ ಬಾಕಿಯಿದೆಯೆ ಎಂಬ ಅನುಮಾನ ಮೂಡಿತು. ಯಾವುದಕ್ಕೂ ಒಮ್ಮೆ ಮಂಜುಳಾ ಅಥವಾ ನಾಗನ ಬಳಿ ವಿಚಾರಿಸಬೇಕು. ಅದಕ್ಕೆ ಬೆಳಕು ಹರಿಯುವ ತನಕ ಕಾಯಲೇಬೇಕು ಎಂದುಕೊಂಡೆ. ಆದರೆ ತಲೆಗೆ ಹೊಕ್ಕ ಹುಳ ಮಾತ್ರ ತಲೆಯಿಂದ ಹೊರಬೀಳುವ ಲಕ್ಷಣ ಮಾತ್ರ ಕಾಣಲಿಲ್ಲ. ಬೆಳಿಗ್ಗೆ ಎದ್ದ ಕೂಡಲೆ ಪತಿದೇವನ ತಲೆಗೂ ಈ ಹುಳವನ್ನು ಬಿಟ್ಟೆ. ಇವತ್ತು ಭಾನುವಾರ ನಾಳೆ ಅಂಗಡಿಗೆ ಹೋಗಿ ವಿಚಾರಿಸು ಎಂದು ಕೊಡವಿಬಿಟ್ಟು, ಆರಾಮವಾಗಿ ಭಾನುವಾರದ ಬಿಸಿ ಬಿಸಿ ತಿಂಡಿ, ದಿನಪತ್ರಿಕೆಯ ಬಿಸಿ ಬಿಸಿ ಸುದ್ದಿ ಸವಿಯಲು ತೊಡಗಿದರು. ನನ್ನ ಅವಸ್ಥೆಗೆ ಮರುಗಿದ ನನ್ನ ಮಗಳು ವಾಟ್ಸಪ್ ತೆರೆದು ನೋಡಿ ಏನೇನೋ ಯೋಚಿಸಿ ಸಂದೇಶವನ್ನು ಡಿಕೋಡ್ ಮಾಡಿ ಯುರೇಕಾ ಎನ್ನುವಂತೆ “ಅಯ್ಯೊ ಅಮ್ಮ, ಇದು ಸ್ಟಾರ್ ಹಾಗೂ ಪ್ಲಿಡಿಂಗ್ ಇಮೋಜಿ. ಸ್ಟಾರ್ ಇಮೋಜಿ ಅಂದ್ರೆ ರೇಟಿಂಗ್ ಹಾಗೂ ಪ್ಲಿಡಿಂಗ್ ಇಮೋಜಿ ಅಂದ್ರೆ ಮನವಿ ಅಥವಾ ಬೇಡಿಕೊಳ್ಳೋದು ಎಂದು ಅರ್ಥ. ನೀನು ಯಾರಿಗಾದ್ರು ರೇಟಿಂಗ್ ಅಥವಾ ರಿವ್ಯು ಕೊಡೊದು ಬಾಕಿ ಇದೆಯಾ?” ಎಂದು ಕೇಳಿದಳು. “ರೇಟಿಂಗ್! ಇಲ್ಲವಲ್ಲ”. ಈ ವಾರದಲ್ಲಿ ಒಂದು ಆರೇಳು ವಿವಿಧ ಮಾರಾಟಗಾರರಿಂದ ಕರಕುಶಲ ವಸ್ತುಗಳನ್ನು ಅಂಗಡಿಗೆ ತರಿಸಿದ್ದೆ. ಆದರೆ ಅವರೆಲ್ಲರ ನಂಬರ್ ನನ್ನ ಹತ್ತಿರ ಇದೆ. ಇದು ಯಾವುದೋ ಹೊಸ ನಂಬರ್‌ನಿಂದ ಬಂದಿರುವುದು. ಒಮ್ಮೆ ಯಾರು ಎಂದು ಪ್ರತಿ ಮೆಸ್ಸೆಜ್ ಮಾಡಿ ಬಿಡಲೆ? ಇಲ್ಲಾ ಕಾಲ್ ಮಾಡಿ ಕೇಳಿಬಿಡಲೆ ಅನ್ನಿಸಿತು. ನಾನು ಪ್ರತಿಯಾಗಿ ಯಾರು ಎಂದು ಕೇಳಲಿ ಎಂದೇ ಅಪೂರ್ಣವಾದ ಸಂದೇಶ ಕಳುಹಿಸಿದ್ದರೆ ನಾನು ಬಹಳ ಸುಲಭವಾಗಿ ಅವರ ಸಂಚಿಗೆ ಬಲಿಯಾದರೇ! ಎಂಬ ಯೋಚನೆಗಳ ಅಲೆಗಳು ತಾಮುಂದು ತಾಮುಂದು ಎಂದು ಸ್ಪರ್ಧೆಗೆ ಬಿದ್ದವರಂತೆ ಬಡಿಯಲಾರಂಭಿಸಿದ್ದು ಸತ್ಯವಾಗಿತ್ತು.
ಈ ರೇಟಿಂಗ್, ರಿವ್ಯುಗಳದ್ದೊಂದು ಹಾವಳಿ ಅಯ್ತಲ್ಲಾ. ಈ ರೇಟಿಂಗ್, ರಿವ್ಯು ಎನ್ನುವ ವಿಧಾನ ಒಂದು ಒಳ್ಳೆಯ ಉದ್ದೇಶ ಹೊಂದಿ ಪ್ರಾರಂಭ ಆಗಿದ್ದೇನೋ ನಿಜ. ಇದು ಗ್ರಾಹಕರಿಗೆ ವ್ಯವಹಾರದ ಬಗ್ಗೆ ಅವರಿಗೆ ಆದ ಅನುಭವ ಅಥವಾ ಅವರು ಖರೀದಿಸಿದ ಉತ್ಪನ್ನಗಳ ಕುರಿತು ಸಾರ್ವಜನಿಕವಾಗಿ ಪ್ರತಿಕ್ರಿಯೆ ನೀಡಲು ಒಂದು ವೇದಿಕೆ ಕಲ್ಪಿಸುತ್ತದೆ. ಹಾಗೆ ಬೇರೆಯವರಿಗೆ ಆ ಉತ್ಪನ್ನಗಳ ಬಗ್ಗೆ, ಅದರ ಗುಣಮಟ್ಟದ ಬಗ್ಗೆ ಒಂದು ತಿಳುವಳಿಕೆ ಸಿಗುವುದರಿಂದ ಅದರ ಖರೀದಿಯ ಬಗ್ಗೆ ಸರಿಯಾದ ನಿರ್ಧಾರ ತೆಗೆದುಕೊಳ್ಳಲು ಸಹಾಯವಾಗುತ್ತದೆ. ಹೀಗೆ ಒದಗಿಸುವ ರಿವ್ಯುಗಳು ಆಧುನಿಕ ದಿನಗಳ ಬಾಯಿ ಮಾತುಗಳಿಗೆ ಸಮ ಎಂದು ಹೇಳುತ್ತಾರೆ. ಈ ರೀತಿಯ ರಿವ್ಯುಗಳಿಂದ ವ್ಯಾಪಾರವು ನಾಲ್ಕು ಜನರಿಗೆ ತಿಳಿದು ವೇಗವಾಗಿ ಅಭಿವೃದ್ಧಿ ಹೊಂದಿ ರಾಷ್ಟ್ರದ ಆರ್ಥಿಕತೆಗೂ ಸಹಾಯಕವಾಗುತ್ತದೆ. ತಂತ್ರಜ್ಞಾನ ಬೆಳೆಯುತ್ತಾ ಬೆಳೆಯುತ್ತಾ ನಮ್ಮ ಬದುಕಿನ ನಿಯಂತ್ರಕಗಳಾಗಿ ಮಾರ್ಪಟ್ಟಿವೆ. ಅದರಲ್ಲಿ ಈ ರೇಟಿಂಗ್, ರಿವ್ಯುಗಳು ಎಂಬ ಸವಲತ್ತೂ ಒಂದು. ಒಮ್ಮೊಮ್ಮೆ ಭೂಮಿ ಮೇಲೆ ಎಲ್ಲ ನಿಂತಿರುವುದೆ ಈ ರೇಟಿಂಗ್‌ಗಳಿಂದನೆನೋ ಎಂದು ಅನಿಸುವಷ್ಟು. ಒಂದು ವ್ಯವಸ್ಥೆಯಿಂದ ಅನುಕೂಲಗಳು ಇರುತ್ತವೆ, ಅನಾನುಕೂಲಗಳೂ ಇರುತ್ತವೆ. ಈಗೀಗ ಇದರಿಂದ ಆಗುವ ಆವಾಂತರಗಳು ಒಂದೆರಡಲ್ಲ.
ಮೊನ್ನೆ ಹಾಗೆ ಆಯ್ತು. ಮಗಳ ಹೇರ್ ಕಟ್ ಮಾಡಿಸಲು ಇದೇ ಏರಿಯಾದಲ್ಲಿರುವ ಬ್ಯುಟಿ ಸಲೂನ್‌ಗೆ ಹೋದಾಗ ನಡೆದ ಘಟನೆಯು ಇದಕ್ಕೆ ಸಂಬಂಧಿಸಿದ್ದೆ ಆಗಿತ್ತು. ಯಾವಾಗಲೂ ನಗುತ್ತಾ ಎಲ್ಲ ಕೆಲಸಗಳನ್ನು ತುಂಬಾ ಅಚ್ಚುಕಟ್ಟಾಗಿ ಮಾಡುತ್ತಿದ್ದ ಅಂಶುಲ್ ತನ್ನ ಕೆಲಸವನ್ನು ಕಡಿಮೆ ರೇಟಿಂಗ್ ಹಾಗೂ ಒಂದೆರಡು ನೆಗೆಟಿವ್ ರಿವ್ಯು ಬಂತೆಂದು ಕೆಲಸ ಕಳೆದುಕೊಂಡಿದ್ದಳಂತೆ. ನಮ್ಮ ಏರಿಯಾದಲ್ಲಿರುವ ನನ್ನ ಹತ್ತು ಹನ್ನೆರಡು ಸ್ನೇಹಿತೆಯರ ಗುಂಪಿಗೆ ಅವಳು ಹಾಗೂ ಅವಳ ಕೆಲಸ ಅಚ್ಚುಮೆಚ್ಚಾಗಿತ್ತು. ಅವಳು ಕಡಿಮೆ ರೇಟಿಂಗ್ ಕಾರಣಕ್ಕಾಗಿ ಕೆಲಸ ಕಳೆದುಕೊಂಡಿದ್ದು ನಮಗೆಲ್ಲಾ ನಂಬಲು ಸಾಧ್ಯವಾಗಿರಲಿಲ್ಲ. ಅಲ್ಲಿಯೇ ಕೆಲಸ ಮಾಡುವ ಇನ್ನೊಬ್ಬಳ ಕೆಲಸಕ್ಕೆ 5 ಸ್ಟಾರ್ ರೇಟಿಂಗ್ ಹಾಗು ರಿವ್ಯು ಬಂದಿದೆಯಂತೆ. ಯಾವ ಕೆಲಸವನ್ನೂ ಅಚ್ಚುಕಟ್ಟಾಗಿ ಮಾಡದ, ನಿಮ್ಮ ಐಬ್ರೋ ಅಥವಾ ಹುಬ್ಬಿನ ಶೇಪ್ ಸರಿ ಇಲ್ಲ ಎಂದು ವಾದಿಸುವ ಅವಳಿಗೆ ಆ ರೀತಿಯ ಒಳ್ಳೆಯ ರಿವ್ಯು ಕೊಟ್ಟವರು ಯಾರಿರಬಹುದು ಎಂದು ನಾವೆಲ್ಲ ಮಾತಾಡಿಕೊಂಡಿದ್ದೆವು.
ಜೀವನದಲ್ಲಿ ನೊಂದು ಬಹಳಷ್ಟು ಏಳುಬೀಳುಗಳನ್ನು ಕಂಡ ಅಂಶುಲ್‌ಗೆ ಈ ಕೆಲಸ ಎಷ್ಟು ಮುಖ್ಯ ಎಂದು ನಮಗೆಲ್ಲ ಅರಿವಿತ್ತು. ಸಂಗಾತಿಯಿಲ್ಲದೇ ಮಗಳನ್ನು ಬೆಳೆಸುವ ಹೊಣೆ ಹೊತ್ತ ಅವಳ ಕಷ್ಟಕ್ಕೆ ಮರುಗಿದ ನಮ್ಮ ಗುಂಪಿನಲ್ಲಿ ಒಬ್ಬಳು ಇನ್ನೂ ಮುಂದೆ ಹೋಗಿ ಇನ್ನೂ ಹೆಚ್ಚಿನ ಶೋಧನೆಗೆ ತೊಡಗಿದ್ದಳು. ಅವಳ ಸಂಶೋಧನೆಯಿಂದ ತಿಳಿದು ಬಂದ ಅಚ್ಚರಿಯ ವಿಷಯ ಏನೆಂದರೆ ಪ್ರತಿಬಾರಿ ಅಂಶುಲ್‌ಗೆ ಪೊಸಿಟಿವ್ ರಿವ್ಯು ಬಿದ್ದ ಮರುಕ್ಷಣವೇ ಎರಡ್ಮೂರು ನೆಗೆಟಿವ್ ರೇಟಿಂಗ್ ಅಥವಾ ರಿವ್ಯು ಕೂಡಾ ಬೀಳುತ್ತಿತ್ತು. ಹಾಗೆ ಅದೇ ಸಮಯದಲ್ಲಿ ಮತ್ತೊಬ್ಬಳಿಗೆ ಪೊಸಿಟಿವ್ ರೇಟಿಂಗ್ ಬಿದ್ದಿರುತ್ತಿತ್ತು. ಇದರ ಹಿಂದೆ ಯಾವುದೋ ಜಾದುಗಾರನ ಕೈಚಳಕವಂತೂ ಇತ್ತು. ಈ ಹಿಂದೆ ಅನೇಕ ಬಾರಿ ನಾನು ಬ್ಯುಟಿ ಸಲೂನ್‌ಗೆ ಹೋದಾಗ ಅಂಶುಲ್ ತನ್ನ ಕೆಲಸ ಮೆಚ್ಚುಗೆ ಆದರೆ ರಿವ್ಯು ಕೊಡುವಂತೆ ಕೇಳಿಕೊಂಡಿದ್ದಳು. ಆದರೆ ನಾನು ಕೆಲಸದ ಧಾವಂತದ ನಡುವೆ ಮರೆತೆ ಬಿಟ್ಟಿದ್ದೆ. ನಾವು ಕೊಡುವ ಒಂದು ರಿವ್ಯು ಅದು ಅಸಲಿಯೋ ಅಥವಾ ನಕಲಿಯೋ ಅದು ಇಷ್ಟೊಂದು ಪ್ರಭಾವ ಬೀರಬಹುದು ಎಂಬ ಅಂದಾಜು ನನಗಿರಲಿಲ್ಲ. ನನ್ನಂತಹ ಜನರ ಮರೆಗುಳಿತನ, ಆಲಸ್ಯದ ಫಲವೋ ಎಂಬಂತೆ, ನಕಲಿ ರಿವ್ಯುಗಳ ಮುಂದೆ ಅಸಲಿ ರಿವ್ಯುಗಳು ಮಂಡಿಯೂರಿ ಕುಳಿತುಕೊಳ್ಳುತ್ತಿರಬಹುದೆನೋ ಎಂಬುದು ನನ್ನ ಅನಿಸಿಕೆ.
ತಂತ್ರಜ್ಞಾನ ಬೆಳೆಯುತ್ತಾ ಬೆಳೆಯುತ್ತಾ ನಮ್ಮ ಬದುಕಿನ ನಿಯಂತ್ರಕಗಳಾಗಿ ಮಾರ್ಪಟ್ಟಿವೆ. ಅದರಲ್ಲಿ ಈ ರೇಟಿಂಗ್, ರಿವ್ಯುಗಳು ಎಂಬ ಸವಲತ್ತೂ ಒಂದು. ಒಮ್ಮೊಮ್ಮೆ ಭೂಮಿ ಮೇಲೆ ಎಲ್ಲ ನಿಂತಿರುವುದೆ ಈ ರೇಟಿಂಗ್‌ಗಳಿಂದನೆನೋ ಎಂದು ಅನಿಸುವಷ್ಟು. ಒಂದು ವ್ಯವಸ್ಥೆಯಿಂದ ಅನುಕೂಲಗಳು ಇರುತ್ತವೆ, ಅನಾನುಕೂಲಗಳೂ ಇರುತ್ತವೆ. ಈಗೀಗ ಇದರಿಂದ ಆಗುವ ಆವಾಂತರಗಳು ಒಂದೆರಡಲ್ಲ.
ನಕಲಿ ರಿವ್ಯುಗಳ ಪರಿಣಾಮದ ಬಗ್ಗೆ ಯೋಚಿಸುವಾಗ ಭಯವಾಗುವುದು ಸತ್ಯ. ಕೆಲವು ದಿನಗಳ ಹಿಂದೆ ಗೆಳತಿ ಸರಯು ಇಂತಹ ಪಾಶಕ್ಕೆ ಬಿದ್ದು ತನ್ನ ಹಣ ಹಾಗೂ ಸಮಯ ಹಾಳುಮಾಡಿಕೊಂಡಿದ್ದಳು. ಅವಳು ಮಾಡಿರುವುದು ಇಷ್ಟೇ. ಅತ್ತೆಯ ಬೆನ್ನು ನೋವಿಗೆ ಒಳ್ಳೆಯ ರಿವ್ಯು ಇದೆ ಎಂದು ಆರ್ಥೋಪೆಡಿಕ್ ಆಸ್ಪತ್ರೆಗೆ ಹೋದರೆ ಅವರಲ್ಲಿರುವ ಎಲ್ಲಾ ಲ್ಯಾಬ್ ಟೆಸ್ಟ್‌ಗಳನ್ನು ಮಾಡಿಸಿ, ಇದು ವಯೋಸಹಜ ನೋವು ಎಂದು ನೋವು ನಿವಾರಕ ಮಾತ್ರೆ ಬರೆದು ಕೊಟ್ಟು ಹನ್ನೆರಡು ಸಾವಿರ ಬಿಲ್ ಮಾಡಿ ಕಳುಹಿಸಿದ್ದರು. ಆ ಆಸ್ಪತ್ರೆಯನ್ನು ಬಿಟ್ಟು ಮತ್ತೊಂದು ಆಸ್ಪತ್ರೆಗೆ ಹೋದರೆ ಅಪರೇಷನ್ ಮಾಡಬೇಕು ಅಂತ ಹೇಳಿದ್ದರಂತೆ. ಕೊನೆಗೆ ಯಾರನ್ನು ನಂಬಬೇಕು ಬಿಡಬೇಕು ಎಂದು ತಿಳಿಯದೇ ನನ್ನಲ್ಲಿ ಅವಲತ್ತುಕೊಂಡಿದ್ದಳು. ಇವಳ ಸ್ಥಿತಿಯನ್ನು ನೋಡಿ ಈಗ ನನಗೆ ಅನ್ನಿಸುತ್ತಿದೆ. ಏನೋ ಇಷ್ಟರಲ್ಲೇ ಹೋಯಿತು, ಇನ್ನೂ ಏನೇನೋ ಔಷಧ ಕೊಟ್ಟು ಯಾರದ್ದಾದರೂ ಜೀವಕ್ಕೆ ಮುಳುವಾದರೆ ಯಾರು ಹೊಣೆ? ನಕಲಿ ರಿವ್ಯು ಕೊಟ್ಟವರೇ ಅಥವಾ ಅದನ್ನು ನಂಬಿ ಹಳ್ಳಕ್ಕೆ ಬಿದ್ದ ನಾವೇ? ಈ ರೀತಿ ಜನರನ್ನು ದಾರಿ ತಪ್ಪಿಸುವ ಕ್ರಿಯೆಗೆ ಏನೆನ್ನಬೇಕು ಎಂಬುದು ತಿಳಿಯುತ್ತಿಲ್ಲ.
ಪಕ್ಕದ ಮನೆಯ ಕಿರಣನದೂ ಹೆಚ್ಚು ಕಡಿಮೆ ಇದೇ ಕಥೆ ಆಗಿತ್ತು. ಬೈಕ್‌ನಿಂದ ಬಿದ್ದಾಗಿನಿಂದ ಪ್ರಾರಂಭವಾದ ಕಾಲುನೋವು ದಿನೇ ದಿನೇ ಹೆಚ್ಚಾಗುತ್ತಿತ್ತು. ವೈದ್ಯರು ಪಿಸಿಯೊಥೆರಪಿಯ ಸಲಹೆ ನೀಡಿದ್ದರು. ಎಲ್ಲರಂತೆ ಈತ ಕೂಡ ಗೂಗಲ್‌ನಲ್ಲಿ ಹುಡುಕಿ ಒಳ್ಳೆ ರಿವ್ಯು ಹಾಗೂ ರೇಟಿಂಗ್ ಇದ್ದ ಪಿಸಿಯೊಥೆರಪಿ ಸೆಂಟರ್‌ನ ಮೊರೆಹೋಗಿದ್ದ. ಅಲ್ಲಿ ಅವನು ಕೊಟ್ಟ ಚಿಕಿತ್ಸೆಯಿಂದ ನೋವು ಇನ್ನೂ ಜಾಸ್ತಿಯಾಗತೊಡಗಿತು. ಅಲ್ಲದೇ ಹೋದ ದಿನದಿಂದ ರಿವ್ಯು ಕೊಡಿ, 5 ಸ್ಟಾರ್ ರೇಟಿಂಗ್ ಕೊಡಿ ಎಂದು ಪೀಡಿಸುತ್ತಿದ್ದ ಆತನ ಕಾಟ ಹಾಗೂ ದಿನೇ ದಿನೇ ಜಾಸ್ತಿಯಾಗುತ್ತಿದ್ದ ನೋವಿನಿಂದ ಬೇಸತ್ತು ನೆಗೆಟಿವ್ ರಿವ್ಯು ಹಾಕಿದರೆ ಕ್ಷಣಮಾತ್ರದಲ್ಲಿ ಎರಡ್ಮೂರು ಪೊಸಿಟಿವ್ ರಿವ್ಯುಗಳು ಬಿದ್ದಿದ್ದವು. ಒಂದು ತಾಸಿನ ಒಳಗೆ ಅವನು ಹಾಕಿದ್ದ ನೆಗೆಟಿವ್ ರಿವ್ಯು ಕೆಳಗೆ ಹೋಗಿತ್ತು. ಇನ್ನೂ ಅಚ್ಚರಿಯ ವಿಷಯ ಏನೆಂದರೆ ಒಂದೇ ರೀತಿಯ ರಿವ್ಯುಗಳು, ಒಂದು ಪದವೂ ವ್ಯತ್ಯಾಸವಾಗದ ರೀತಿಯಲ್ಲಿ ವಿವಿಧ ಅಕೌಂಟ್‌ಗಳಿಂದ ಬೇರೆ ಬೇರೆ ಪಿಸಿಯೊಥೆರಪಿ ಸೆಂಟರ್‌ಗಳಿಗೆ ಹಾಕಿದ್ದರು!
ಇವೆಲ್ಲ ಕಂಪನಿಗಳ ಮಾರ್ಕೆಂಟಿಂಗ್ ಗಿಮಿಕ್‌ಗಳು ಅಂದುಕೊಳ್ಳೋಣ. ಆದರೆ ಮೊನ್ನೆ ಜಯಾ ಹೇಳಿದ ಸಂಗತಿಯಂತೂ ಮೂಗಿನ ಮೇಲೆ ಬೆರಳಿಡುವಂತೆ ಮಾಡಿತ್ತು. ಅವಳ ಮನೆಯ ಕೆಲಸದವಳು ನಿಮ್ಮ ಮನೆಗೆ ಕೆಲಸಕ್ಕೆ ಬರಲು ಪ್ರಾರಂಭಿಸಿ ಆರು ತಿಂಗಳಾಯಿತು. ಇನ್ನೂ ನೀವು 5 ಸ್ಟಾರ್ ರೇಟಿಂಗ್ ಆಗಲಿ, ರಿವ್ಯು ಆಗಲಿ ಕೊಟ್ಟಿಲ್ಲ ಅಪಾರ್ಟ್ಮೆಂಟ್ ಮ್ಯಾನೇಜ್ಮೆಂಟ್ ಆ್ಯಪ್‌ನಲ್ಲಿ ಎಂದು ವಾದ ಮಾಡಿದ್ದಳಂತೆ. ಕೆಲಸಕ್ಕೆ ಸೇರಿ ಆರು ತಿಂಗಳಾಗಿದ್ದೇನೋ ನಿಜ, ಆದರೆ ಕೆಲಸಕ್ಕೆ ಬಂದಿದ್ದು ಮಾತ್ರ ಮೂರು ತಿಂಗಳು. ಅದರಲ್ಲೂ ಕೆಲಸಕ್ಕೆ ಬಂದಾಗಲೂ ಇವತ್ತು ಕೈ ನೋವು ಬಟ್ಟೆ ತೊಳೆಯಲ್ಲ, ಇವತ್ತು ಕಾಲು ನೋವು ನೆಲ ಒರೆಸಲ್ಲ, ಇವತ್ತು ಸೊಂಟ ನೋವು ಎನ್ನುತ್ತ ಆ ಕೆಲಸ ಮಾಡಲ್ಲ ಅಂತ ಏನೇನೊ ಸಬೂಬು ಹೇಳಿ ನನ್ನ ಹತ್ತಿರವೇ ಕೆಲಸಗಳನ್ನು ಮಾಡಿಸಿ, 5 ಸ್ಟಾರ್ ಕೇಳುತ್ತಿದ್ದಾಳೆ. ಫೈವ್ ಸ್ಟಾರ್ ಕಡ್ಡಾಯ ಎನ್ನುವ ರೀತಿಯಲ್ಲಿ ಅವಳ ಮಾತಿನ ದಾಟಿಯಿತ್ತು. ಈ ರೀತಿಯ ಕೆಲಸ ಮಾಡುವವರಿಗೆ ಹೇಗೆ ಒಳ್ಳೆಯ ರೇಟಿಂಗ್ ಅಥವಾ ರಿವ್ಯು ಕೊಡಲಿ? ಏನಾದರೂ ನೆಗೆಟಿವ್ ರಿವ್ಯು ಕೊಟ್ಟರೆ ಮರುದಿನದಿಂದಲೇ ಕೆಲಸಕ್ಕೆ ಚಕ್ಕರ್. ಮತ್ತೆ ಮನೆಕೆಲಸಕ್ಕೆ ಬೇರೆಯವರನ್ನು ನನ್ನ ಬಜೆಟ್‌ಗೆ ಹುಡುಕುವುದು ಕಷ್ಟ. ಇದೊಂದು ರೀತಿಯಲ್ಲಿ ಬಲವಂತವಾಗಿ ನಿಮ್ಮ ಕೆಲಸ ಮೆಚ್ಚಿಕೊಂಡೆ ಅಂತ ಹೇಳಿಸಿಕೊಳ್ಳುವ ಹಾಗೂ ಇನ್ನೊಬ್ಬರನ್ನು ಹಳ್ಳಕ್ಕೆ ಬೀಳಿಸುವ ಹುಚ್ಚು ಎಂದು ದುಃಖ ತೋಡಿಕೊಂಡಿದ್ದಳು.
“ಇದೇನು ಹಾಲೋ ಅಥವಾ ನೀರೋ” ಎಂಬ ಯಜಮಾನರ ಅಸಹನೆಯ ಕೂಗು ನನ್ನ ಧ್ಯಾನಸ್ಥ ಸ್ಥಿತಿಗೆ ಭಂಗ ತಂದಿತು. ಕಾಫಿ ಮಾಡಲು ಹೋದ ಅವರು ಹಾಲಿನ ಗುಣಮಟ್ಟ ಕಂಡು ಅಸಮಾಧಾನಗೊಂಡು ಕೂಗಿದ್ದರು. ಅಪಾರ್ಟ್ಮೆಂಟ್ ಆ್ಯಪ್‌ನಲ್ಲಿ ಒಳ್ಳೆ ರೇಟಿಂಗ್, ರಿವ್ಯು ಇದೆ ಎಂದು ಇತ್ತಿಚೆಗಷ್ಟೆ ಹಾಲು ಹಾಕುವವರನ್ನು ಬದಲಾಯಿಸಿದ್ದೆವು. ಇರುಳು ಕಂಡ ಬಾವಿಗೆ ಹಗಲು ಬಿದ್ದಂತೆ ಎಂಬಂತೆ, ಬೇರೆಯವರು ಹಳ್ಳಕ್ಕೆ ಬಿದ್ದ ಕಥೆ ಅಷ್ಟೇ ಕೇಳುತ್ತಿದ್ದ ನಾವು, ಈಗ ಅರಿಯದೇ ಅದೇ ಹಳ್ಳಕ್ಕೆ ಬಿದ್ದಾಗಿತ್ತು. ಹುಲುಮಾನವರು ಇದರಿಂದ ಪಾರಾಗುವುದು ಅಸಾಧ್ಯವೋ ಅನ್ನುವಷ್ಟು ಈ ರೀವ್ಯು, ರೇಟಿಂಗ್‌ಗಳು ನಮ್ಮನ್ನು ಆವರಿಸಿಬಿಟ್ಟಿದೆ. ಏನಾದರೂ ಆಗಲಿ ಎಂದು ಬೆಳಗ್ಗೆ ನೋಡಿದ ಸಂದೇಶದ ಸಮಸ್ಯೆಯನ್ನು ಆದಷ್ಟು ಬೇಗ ನಿವಾರಿಸಬೇಕೆನ್ನುವ ಉದ್ದೇಶದಿಂದ ಅಂಗಡಿಯ ಕಾರ್ಮಿಕರಾದ ಮಂಜುಳಾ ಹಾಗೂ ನಾಗನನ್ನು ವಿಚಾರಿಸಿದ್ದೂ ಆಯಿತು. ಎಲ್ಲಾ ಮಾರಾಟಗಾರರಿಗೂ ದುಡ್ಡು ಕೊಟ್ಟು ಆಗಿದೆ ಎಂಬ ಉತ್ತರದಿಂದ ಮನಸ್ಸಿಗೆ ನಿರಾಳವಾದರೂ, ಏಲ್ಲೋ ಒಂದು ಕಡೆ ಆ ವಿಷಯ ಕೊರೆಯುತ್ತಲೆ ಇತ್ತು.
ರೈಲಿನ ಬೋಗಿಯಂತೆ ಒಂದರ ಹಿಂದೊಂದು ಕಾದಿದ್ದ ಮನೆಕೆಲಸಗಳೆಲ್ಲ ಭಾನುವಾರವನ್ನು ಆಪೋಶನ ತೆಗೆದುಕೊಂಡಿತ್ತು. ಸಂಜೆ ಹಾಲಿನವನು ಬಂದು ಒಂದು ವಾರವಾಯಿತು ನಿಮ್ಮ ಮನೆಗೆ ಹಾಲು ಹಾಕಲು ಪ್ರಾರಂಭಿಸಿ, ಇಷ್ಟು ದಿನವಾದರೂ ಏನೂ ರೇಟಿಂಗ್ ಕೊಟ್ಟಿಲ್ಲ, ನಿಮಗೆ ರೇಟಿಂಗ್ ಕೊಡುವಂತೆ ಮೆಸೆಜ್ ಕೂಡಾ ಹಾಕಿದ್ದೆ ನಿನ್ನೆ, ಆದರೂ ನೀವು ಹಾಕಲೇ ಇಲ್ಲ ಎಂದು ದೂರುವಂತೆ ನುಡಿದಾಗ ನನ್ನನ್ನು ಇಡಿ ದಿನ ಕೊರೆಯುತ್ತಿದ್ದ ಹುಳುವಿಗೆ ಮುಕ್ತಿ ದೊರಕಿತ್ತು.
ಹೀಗೆ ಹೋಟೆಲ್, ಥಿಯೆಟರ್, ಶಾಲೆಗಳು, ಕಂಪೆನಿಗಳು, ಅಂಗಡಿಗಳು, ಈಕಾಮರ್ಸ್ ವೆಬ್‌ಸೈಟ್ ಇತ್ಯಾದಿಗಳು ಈ ಗೀಳಿಗೆ ಹೊರತಲ್ಲ. ಆದರೆ ಈ ರೀತಿಯ ವ್ಯಾಧಿಗೆ ನಮ್ಮ ಅಂಶುಲ್ ಅಂತಹ ಕೆಲಸಕ್ಕೆ ಬದ್ಧರಾದ, ಪ್ರಾಮಾಣಿಕರು ಹೇಳ ಹೆಸರಿಲ್ಲದಂತೆ ಬಲಿಯಾಗುವುದನ್ನು ಕಂಡಾಗ, ಜನರ ಆರೋಗ್ಯದ ಮೇಲೆ ಅಡ್ಡ ಪರಿಣಾಮವಾಗುವುದನ್ನು ಕಂಡಾಗ ಸಂಕಟವಾಗುತ್ತದೆ. ಈಗ ತಂತ್ರಜ್ಞಾನವಿಲ್ಲದ ಪ್ರಪಂಚವನ್ನು ಊಹಿಸಲೂ ಅಸಾಧ್ಯ. ತಂತ್ರಜ್ಞಾನ ಅತಿ ವೇಗವಾಗಿ ಬೆಳೆಯುತ್ತಿದೆ. ಕೃತಕ ಬುದ್ಧಿಮತ್ತೆಯಿಂದ ಮನುಷ್ಯರಂತೆಯೆ ಸಂವಹನ ಮಾಡುತ್ತಾ, ಕವನ, ಪ್ರಬಂಧಗಳನ್ನು ಕ್ಷಣಮಾತ್ರದಲ್ಲಿ ರಚಿಸಬಲ್ಲ ಚಾಟ್ ಜಿಪಿಟಿ(ChatGPT) ಇನ್ನು ಸ್ವಲ್ಪ ದಿನಗಳಲ್ಲೇ ಎಲ್ಲರ ಜೀವನದ ಅವಿಭಾಜ್ಯ ಅಂಗವೇ ಎನ್ನುವಂತೆ ಇದ್ದ ಗೂಗಲ್‌ನನ್ನು ಹಿಂದಿಕ್ಕಿ ಮುನ್ನಲೆಗೆ ಬರಲಿದೆ. ಅತಿಯಾದರೆ ಅಮೃತವೂ ವಿಷ ಎಂಬಂತೆ ಯಾವುದೇ ಒಂದು ವಸ್ತು, ತಂತ್ರಜ್ಞಾನ ಅಥವಾ ವ್ಯವಸ್ಥೆಯನ್ನು ಸದ್ಬಳಕೆ ಮಾಡದೆ ತಮ್ಮ ದುರಾಸೆ, ಲೋಭಕ್ಕಾಗಿ ದುರ್ಬಳಕೆ ಮಾಡಿದರೆ ಸಮಾಜದ ಸ್ವಾಸ್ಥ್ಯಕ್ಕೆ ಅಥವಾ ಬುನಾದಿಗೆ ಪೆಟ್ಟು ಬಿದ್ದಂತೆ. ತಂತ್ರಜ್ಞಾನವಾಗಲಿ, ಜೀವವಿರದ ಯಂತ್ರಗಳಾಗಲಿ ಜೀವವಿರುವ ನಮ್ಮನ್ನು ಯಂತ್ರಗಳನ್ನಾಗಿಸುವ ಮೊದಲೆ ಎಚ್ಚೆತ್ತರೆ ಚೆನ್ನ.
ತುಂಬಾ ಚೆನ್ನಾಗಿದೆ ಲೇಖನ ಪೂರ್ಣಿಮಾರವರೆ