ಹಬ್ಬಗಳಲ್ಲಿ, ಅದರಲ್ಲಿಯೂ ನವರಾತ್ರಿಯಲ್ಲಿ ಕೊಡುವ ದಕ್ಷಿಣೆ ನಮಗೆ ಪಾಕೆಟ್‌ಮನಿ ತರಹ. ಆಗ ನಮಗೆ ಕೊಡುತ್ತಿದ್ದುದು ಹತ್ತು ನಯಾಪೈಸೆ. ಎಲ್ಲ ಹಬ್ಬಗಳಲ್ಲಿ ಕೊಡುತ್ತಿದ್ದ ದಕ್ಷಿಣೆಯನ್ನು ಜೋಪಾನವಾಗಿ ಕಾಪಿಟ್ಟು ಅದರಿಂದ ಬಣ್ಣದ ದಾರ, ಮಣಿಗಳನ್ನು ತರಿಸಿಕೊಂಡು ಲೇಸು, ಬಾಗಿಲತೋರಣ, ಕಸೂತಿ, ಮಣಿಗಳಿಂದ ಆರತಿ ಕಟ್ಟು ತಯಾರಿಸಿ ನಮ್ಮ ನಮ್ಮ ಕೌಶಲಗಳನ್ನು ಮೆರೆಯಲು ಈ ಹಣ ಸಹಕಾರಿಯಾಗಿತ್ತು. ಹಬ್ಬ ಎನ್ನುವುದು ಹೆಣ್ಣುಮಕ್ಕಳಿಗೆ ಬದುಕಲು ಬೇಕಾದ ಚಾಕಚಕ್ಯತೆಗಳನ್ನು ಕಲಿಸುತ್ತಿತ್ತೇ? ಇದ್ದಿರಬಹುದು.
ಡಾ. ಚಂದ್ರಮತಿ ಸೋಂದಾ ಬರೆಯುವ “ಮಾತು ಮಂದಲಿಗೆ” ಸರಣಿಯ ಒಂಭತ್ತನೆಯ ಕಂತಿನಲ್ಲಿ ದಸರಾ ಹಬ್ಬದ ಕುರಿತ ಬರಹ ನಿಮ್ಮ ಓದಿಗೆ
ಮುಗಿಲ ಬಣ್ಣ ಸದಾ ಒಂದೇ ಸಮನಾಗಿದ್ದರೆ ಬಾಳು ಮೂರು ದಿನಕ್ಕೆ ಬೇಸರವಾದೀತು ಎನ್ನುವ ಮಾತಿದೆ. ಅದೆಷ್ಟು ನಿಜ ಎನಿಸುತ್ತದೆ ಅಲ್ಲವೇ? ಮಕ್ಕಳಿಗೂ ಅಷ್ಟೆ ಪ್ರತಿ ದಿನ ಶಾಲೆಗೆ ಹೋಗುವುದು ಬೇಸರವೇ. ಹಾಗಂತ ಶಾಲೆ ಇಲ್ಲದಿದ್ದರೂ ಹೊತ್ತು ಹೋಗದು. ಬದಲಾವಣೆ ಬೇಕು ಅಷ್ಟೆ. ಈಗ ಮಕ್ಕಳಿಗೆಲ್ಲ ದಸರಾ ರಜೆ ಶುರುವಾಗಿದೆ. ಕೆಲವು ಮಕ್ಕಳು ರಜೆಯಲ್ಲಿ ಆಟವಾಡುತ್ತಿದ್ದಾರೆ; ಕೆಲವರು ಊರಿಗೋ ಮತ್ತೆಲ್ಲಿಗೋ ಹೋಗುತ್ತಿದ್ದಾರೆ. ಶಾಲೆಗೆ ಹೋಗುವ ಧಾವಂತವಿಲ್ಲ; ಓದುವ, ಬರೆಯುವ ಒತ್ತಡವಿಲ್ಲ. ನಾವು ಚಿಕ್ಕವರಿರುವಾಗ ನಮಗೆ ಮಧ್ಯಂತರ ರಜೆಯನ್ನು ಕೊಡುತ್ತಿದ್ದರು. ನಾವದನ್ನು ನವರಾತ್ರಿ ರಜೆ ಎಂದು ಹೇಳುವುದೂ ಇತ್ತು. ಆಗ ಮಹಾಲಯ ಅಮವಾಸ್ಯೆಯಿಂದ ಹುಣ್ಣಿಮೆಯವರೆಗೆ ಹದಿನೈದು ದಿವಸಗಳ ಅವಧಿ ರಜೆಯದು. ಈಗ ಸರಕಾರಿ ಶಾಲೆಗಳಷ್ಟೆ ಅಲ್ಲ ಖಾಸಗಿ ಶಾಲೆಗಳ ಸಂಖ್ಯೆಯೂ ಸಾಕಷ್ಟಿವೆ. ಹಾಗಾಗಿ ನಮ್ಮ ಕಾಲದಂತೆ ಈ ದಿನಾಂಕದಿಂದ ಈ ದಿನಾಂಕದವರೆಗೆ ಶಾಲೆಗಳಿಗೆಲ್ಲ ರಜೆ ಇರುತ್ತದೆ ಎನ್ನುವಂತಿಲ್ಲ. ಖಾಸಗಿ ಶಾಲೆಯವರು ಬೇರೆಬೇರೆ ದಿನಾಂಕಗಳಂದು ರಜೆಯನ್ನು ಘೋಷಿಸುವುದೂ ಇದೆ. ಬೇಸಿಗೆ ರಜೆಯನ್ನು ಮುಗಿಸಿ ಮುಂದಿನ ತರಗತಿಗೆ ಹೋಗುವ ಮಕ್ಕಳು ಹೊಸ ಸ್ನೇಹಿತರು, ಬೇರೆಯೇ ಉಪಾಧ್ಯಾಯರು ಎಂದು ಹೊಂದಿಕೊಳ್ಳುವ ಅವಧಿ ಮುಗಿದಿರುತ್ತದೆ. ಈ ರಜೆಯಲ್ಲಿ ಒಂದಿಷ್ಟು ಬದಲಾವಣೆಯ ಮೂಲಕ ಹೊಸ ಹುರುಪಿನಿಂದ ಮತ್ತೆ ಶಾಲೆಯತ್ತ ಮುಖ ಮಾಡಲು ಇದೊಂದು ತಂಗುದಾಣ ಅನ್ನಬಹುದೇನೋ?
ಈ ರಜೆಯಲ್ಲಿ ನಮಗೆ ಒಂದಿಷ್ಟು ಶಾಲೆಯಲ್ಲಿ ಕಲಿಸಿದ ಪಾಠಗಳನ್ನು ನೆನಪಿಸಿಕೊಳ್ಳುವ ಕೆಲಸ ಕೊಡುತ್ತಿದ್ದರು. ಹತ್ತೋ ಇಪ್ಪತ್ತೋ ಲೆಕ್ಕಗಳು, ಒಂದರಿಂದ ಇಪ್ಪತ್ತರವರೆಗಿನ ಮಗ್ಗಿ, ಯಾವುದಾದರೂ ಪಠ್ಯದ ಪಾಠಗಳು ಮುಂತಾಗಿ ರಜೆಯಲ್ಲಿ ಬರೆಯಲು ಕೊಡುತ್ತಿದ್ದರು. ಅಷ್ಟು ಬರೆದು ಮುಗಿಸಿದರೆ ಸಾಕಿತ್ತು. ಓದಿರಿ, ಬರೆಯಿರಿ ಎನ್ನುವ ಒತ್ತಡವಿರುತ್ತಿರಲಿಲ್ಲ. ಹಾಗಿದ್ದರೂ ನಾವು ನವರಾತ್ರಿಯ ಏಳನೆಯ ದಿನದ ಸರಸ್ವತಿ ಪೂಜೆಯ ದಿನವನ್ನು ಕಾಯುತ್ತಿದ್ದೆವು. ಸರಸ್ವತಿ ಪೂಜೆ ಅಂದಮೇಲೆ ಪುಸ್ತಕಗಳನ್ನು ಪೂಜೆಗೆ ಇಡಬೇಕು ತಾನೇ? ಮನೆಯ ಹಿರಿಯರು ತಾವು ಪವಿತ್ರ ಎಂದುಕೊಂಡಿರುವ ಪುಸ್ತಕಗಳನ್ನು ಸರಸ್ವತಿ ಪೂಜೆಗೆ ಇಡುತ್ತಿದ್ದರು. ʻಅಪ್ಪ ಪೂಜೆಗೆ ಇಡಲು ನನ್ನ ಪುಸ್ತಕವನ್ನು ಕೊಡುವೆ ʼ ಎನ್ನುವ ರಾಗ ಎಲ್ಲ ಮಕ್ಕಳದೂ. ನಮ್ಮನೆಯಲ್ಲಿ ಉಪನಿಷತ್ತುಗಳು, ಗೀತಾರಹಸ್ಯ, ಕುಮಾರವ್ಯಾಸ ಭಾರತ, ಜೈಮಿನಿ ಭಾರತ ಮುಂತಾದ ಪುಸ್ತಕಗಳನ್ನು ಇಡುವುದು ವಾಡಿಕೆ. ಹಾಗಂತ ನಮಗೆ ಬೇಸರ ಮಾಡುತ್ತಿರಲಿಲ್ಲ. ನಮ್ಮ ಪಠ್ಯವನ್ನೂ ಸೇರಿಸುತ್ತಿದ್ದರು. ಶಾರದಾ ವಿಸರ್ಜನೆಯಾಗುತ್ತಲೇ ಪುಸ್ತಕವನ್ನು ತೆರೆದು ಓದಬೇಕೆನ್ನುವ ಪರಿಪಾಠವಿತ್ತು. ನಮಗೆ ನಮ್ಮ ನಮ್ಮ ಪುಸ್ತಕಗಳನ್ನು ಓದಲು ಕೊಡುತ್ತಿದ್ದರು. ಇದು ನವರಾತ್ರಿ ರಜೆಯ ಒಂದು ಭಾಗ.
ನಾನು ಚಿಕ್ಕವಳಿರುವಾಗ ನಮ್ಮನೆಯಲ್ಲಿ ಮೂರು ದಿನಗಳ ನವರಾತ್ರಿ ಆಚರಣೆ ಇತ್ತು. ಪ್ರಾಥಮಿಕ ಶಾಲೆ ಮುಗಿಯುವಷ್ಟರಲ್ಲಿ ಅದು ಒಂಭತ್ತು ದಿನಗಳಿಗೆ ಭಡ್ತಿ ಪಡೆದಿತ್ತು. ಸದ್ಯ ನವರಾತ್ರಿ ಎಂದು ರಾತ್ರಿಯ ಆಚರಣೆಯಾಗಿರಲಿಲ್ಲ ಅದು. ಹಗಲೇ ನವರಾತ್ರಿ ಪೂಜೆ, ಪುನಸ್ಕಾರಗಳು ನಡೆಯುತ್ತಿದ್ದವು.
ನವರಾತ್ರಿ ಆಚರಣೆಯ ವಿಷಯಕ್ಕೆ ಬಂದರೆ ಅದಕ್ಕೆ ಹೀಗೆಯೇ ಎನ್ನುವ ಒಂದು ನಿರ್ದಿಷ್ಟ ಸೂತ್ರವಿದ್ದಂತೆ ತೋರುವುದಿಲ್ಲ. ಕೆಲವರ ಮನೆಯಲ್ಲಿ ಒಂಬತ್ತೂ ದಿನಗಳ ಕಾಲ ನವರಾತ್ರಿಯನ್ನು ಆಚರಿಸುತ್ತಾರೆ. ಒಂಬತ್ತು ದಿನ ಆಚರಿಸುವವರು ಸಾಧಾರಣವಾಗಿ ಮಧ್ಯಾಹ್ನ ಊಟ ಮಾಡುವುದಿಲ್ಲ. ಒಪ್ಪತ್ತು ಮಾಡುತ್ತಾರೆ. ಸಂಜೆ ಸ್ನಾನದ ನಂತರದಲ್ಲಿ ದೀರ್ಘ ಅವಧಿಯ ಪೂಜೆ ನಡೆಯುತ್ತದೆ. ಅವರ ಮನೆಯ ಪೂಜೆಯ ಸದ್ದು ಊರತುಂಬ ಅನುರಣಿಸುತ್ತದೆ. ಶಂಖ, ಜಾಗಟೆ, ಎಂದು ಸುಮಾರು ಅರ್ಧಗಂಟೆಯ ಮಂಗಳಾರತಿ. ಹತ್ತನೆಯ ದಿನದ ಆಚರಣೆ ಮುಗಿಯುವಷ್ಟರಲ್ಲಿ ಮನೆಯ ಹೆಂಗಸರು ಹೈರಾಣವಾಗುತ್ತಿದ್ದರು. ಪ್ರತಿದಿನದ ಪೂಜೆಯಲ್ಲಿ ನೆಂಟರು, ಇಷ್ಟರು ಭಾಗಿಗಳಾಗುತ್ತಿದ್ದರು. ನಮ್ಮ ಬಳಗದಲ್ಲಿಯೂ ಒಬ್ಬರ ಮನೆಯಲ್ಲಿ ಇದೇ ರೀತಿಯಲ್ಲಿ ನವರಾತ್ರಿಯನ್ನ ಆಚರಿಸುತ್ತಿದ್ದರು. ನಮಗೆ ಅಲ್ಲಿಗೆ ಹೋಗುವುದು ಖುಶಿಯೆನಿಸುತ್ತಿತ್ತು. ಬಗೆಬಗೆಯ ಕಡುಬು ಕಜ್ಜಾಯಗಳು. ಮಾಡುವವರ ಕಷ್ಟ ನಮಗ್ಯಾಕೆ? ನಾವಂತೂ ಗಡದ್ದಾಗಿ ಊಟಮಾಡಿ ಖುಶಿಯಾಗಿ ಬರುತ್ತಿದ್ದೆವು.
ನವರಾತ್ರಿಯಲ್ಲಿ ಶಾರದಾ ಪೂಜೆ ಮಾಡುವ ರೀತಿಯಲ್ಲಿಯೂ ಭಿನ್ನತೆ ಇದೆ. ಕೆಲವರು ಕಲಶವಿಟ್ಟು ಅದಕ್ಕೆ ಶಾರದೆಯ ಮುಖವನ್ನು ಇಟ್ಟು ಸೀರೆ ಉಡಿಸಿ ಬಹಳ ಸುಂದರವಾಗಿ ಅಲಂಕರಿಸುತ್ತಾರೆ. ಇನ್ನು ಕೆಲವರ ಮನೆಯಲ್ಲಿ ಪುಸ್ತಕಗಳನ್ನು ಜೋಡಿಸಿ ಅದರ ಮೇಲೆ ಶಾರದೆಯ (ಹೆಚ್ಚಾಗಿ ಶೃಂಗೇರಿ ಶಾರದೆ) ಫೋಟೋ ಇರಿಸಿ ಪೂಜಿಸುತ್ತಾರೆ. ಪೂಜೆ ಹೇಗೇ ಇರಲಿ ಹೂವಿಗೆ ಬಹಳ ಆದ್ಯತೆ. ನಾವು ಹಿತ್ತಲಿನಲ್ಲಿರುವ ಒಂದು ಹೂವನ್ನೂ ಬಿಡದೆ ಕೊಯ್ದು ತರುತ್ತಿದ್ದೆವು. ಅಕ್ಕಂದಿರಿಗೆ ಅವನ್ನು ಕಟ್ಟಿ ಮಾಲೆಮಾಡುವ ಕೆಲಸ. ನವರಾತ್ರಿ ಸಮಯಕ್ಕೆ ಡೇರೆ, ಶಾವಂತಿಗೆ ಹೂಗಳ ಶ್ರಾಯ. ಅದೆಷ್ಟು ಬಗೆಯ, ಬಣ್ಣದ ಡೇರೆ ಹೂಗಳು ಅರಳುತ್ತಿದ್ದವು. ಅವು ಗಾತ್ರದಲ್ಲಿ ದೊಡ್ಡವು ಹಾಗಾಗಿ ಮಾಲೆ ಕಟ್ಟುವ ಅಗತ್ಯವಿಲ್ಲ. ಶಾವಂತಿಗೆ ಹೂಗಳು ಬಣ್ಣ, ಗಾತ್ರಗಳಲ್ಲಿ ಭಿನ್ನವಾಗಿದ್ದರೂ ದೇವರ ಅಲಂಕಾರಕ್ಕೆ ಮಾಲೆಯ ಅಗತ್ಯವನ್ನು ಅವು ಪೂರೈಸುತ್ತಿದ್ದವು. ನಂದಿಬಟ್ಟಲು, ತುಂಬೆ, ಗೋರಟೆ ಮುಂತಾದ ಹೂಗಳಿಗೆ ಮಾಲೆಯಾಗಿ ದೇವರ ಮುಡಿ ಸೇರುವ ಭಾಗ್ಯ. ಹೂವಿನ ಮಾಲೆಯನ್ನು ಕಟ್ಟುವುದನ್ನು ಕಲಿಯಲಿಕ್ಕೂ ಇದೊಂದು ಒಳ್ಳೆಯ ಅವಕಾಶ. ಬಾಳೆಯ ನಾರಿನಲ್ಲಿ ಪೋಣಿಸುವುದು ಸುಲಭದ್ದು ಆದರೆ ಅದನ್ನು ಗಂಟುಹಾಕಿ ಕೈಯಲ್ಲಿ ಮಾಲೆಕಟ್ಟುವುದು ಒಂದು ನಾಜೂಕಿನ ಕೆಲಸ. ಅದರಲ್ಲಿಯೂ ಮೂರು ಎಳೆಯ ನಾರಿನಲ್ಲಿ ಹೂವನ್ನು ಜಡೆಹೆಣಿದು ದಂಡೆ ಕಟ್ಟುವುದಂತು ಸುಲಭವಲ್ಲ. ಎಷ್ಟೊಂದು ರೀತಿಯಲ್ಲಿ ಹೂವನ್ನು ಕಟ್ಟಬಹುದು ಎನ್ನುವುದನ್ನು ಇಂಥ ಹಬ್ಬಗಳಲ್ಲಿ ಕಲಿಯಬಹುದಾಗಿತ್ತು.
ರಂಗೋಲಿ ಹಾಕುವುದು ಮುಖ್ಯವಾಗಿತ್ತು. ಪ್ರತಿ ದಿನವೂ ವಿಭಿನ್ನ ವಿನ್ಯಾಸದ ರಂಗೋಲಿಯನ್ನು ದೇವರೆದುರಿನಲ್ಲಿ ಹಾಕುತ್ತ ನಾವೂ ಪರಿಣಿತರಾಗಲು ಸಾಧ್ಯವಿತ್ತು. ಚುಕ್ಕಿ ರಂಗೋಲಿ, ಬರಿ ಎಳೆಯಲ್ಲಿ ಬರೆಯುವ ರಂಗೋಲಿಗಳು, ಅರಶಿನವನ್ನೋ ಕುಂಕುಮವನ್ನೋ ತುಂಬುವುದು (ನಮಗೆ ಬಣ್ಣದ ಪುಡಿಯನ್ನು ತಂದುಕೊಡುವವರು ಇರಲಿಲ್ಲ) ಆಗೆಲ್ಲ ಮನೆತುಂಬ ಮಕ್ಕಳು. ಅಕ್ಕಂದಿರ ಕೈಚಳಕವನ್ನು ನೋಡುತ್ತ ನಾವೂ ಕಲಿಯಬಹುದಿತ್ತು. ಜೊತೆಗೆ ದಿನದಿನವೂ ಆರತಿ ಬರೆಯುವ ಕೆಲಸವೂ ಇರುತ್ತಿತ್ತು. ಹಿತ್ತಾಳೆಯ ಹರಿವಾಣವನ್ನು ಹುಳಿಹಚ್ಚಿ ಬೆಳಗಿ, ಎಣ್ಣೆಗೆ ತುಸು ಕುಂಕುಮ ಬೆರೆಸಿ ಅದರಲ್ಲಿ ಕಡ್ಡಿಯನ್ನು ಅದ್ದಿ ಅದರ ಮೇಲೆ ಚಿತ್ತಾರ ಬಿಡಿಸುವುದು ಬಹಳ ನಾಜೂಕಿನ ಕೆಲಸ. ಹೀಗೆ ಬರೆದ ರಂಗೋಲಿಗೆ ಅರಿಶಿನ ಅಥವಾ ಕುಂಕುಮವನ್ನು ಹಾಕಿ ರಂಗೋಲಿಯ ಚಂದವನ್ನು ಹೆಚ್ಚಿಸುತ್ತಿದ್ದರು.. ಆಯಾ ದಿನದಲ್ಲಿ ಪೂಜಿಸುವ ದೇವಿಯ ಹಾಡನ್ನು ಮಂಗಳಾರತಿ ಸಮಯದಲ್ಲಿ ಹೇಳುತ್ತಿದ್ದರು. ಶಾರದೆ, ದುರ್ಗೆ, ದೇವಿ ಹೀಗೆ ಎಲ್ಲ ಶಕ್ತಿ ದೇವತೆಗಳ ಹಾಡುಗಳು ಮೊಳಗುತ್ತಿದ್ದವು. ಯಾರೋ ಹೇಳಿದ ಹಾಡು ಇಷ್ಟವಾದರೆ ʻಅತ್ತೆ ಆ ಹಾಡನ್ನು ನನಗೂ ಕಲಿಸಿಕೊಡುʼ ಅಂತಲೋ ʻನಾನು ನಾಳೆ ಆ ಹಾಡನ್ನು ನನ್ನ ಹಾಡಿನ ಪುಸ್ತಕದಲ್ಲಿ ಬರೆದುಕೊಳ್ಳುತ್ತೇನೆʼ ಎಂದು ಹೊಸ ಹಾಡುಗಳನ್ನು ಕಲಿಯುತ್ತಿದ್ದೆವು. ಒಂದು ರೀತಿಯಲ್ಲಿ ನವರಾತ್ರಿ ರಜೆ ಎನ್ನುವುದು ಶಾಲೆಯ ಹೊರಗಿನ ಕಲಿಕೆಗೆ ದಾರಿ ಮಾಡಿಕೊಡುತ್ತಿತ್ತೇ ಎನ್ನಿಸುತ್ತಿದೆ ಈಗ. ಇದು ಹೆಣ್ಣುಮಕ್ಕಳ ಕತೆಯಾದರೆ ಗಂಡು ಮಕ್ಕಳಿಗೂ ಒಂದಿಷ್ಟು ಕಲಿಯುವ ಅವಕಾಶ ತೆರೆದಿರುತ್ತಿತ್ತು.
ಹತ್ತನೆಯ ದಿನದ ಆಚರಣೆ ಮುಗಿಯುವಷ್ಟರಲ್ಲಿ ಮನೆಯ ಹೆಂಗಸರು ಹೈರಾಣವಾಗುತ್ತಿದ್ದರು. ಪ್ರತಿದಿನದ ಪೂಜೆಯಲ್ಲಿ ನೆಂಟರು, ಇಷ್ಟರು ಭಾಗಿಗಳಾಗುತ್ತಿದ್ದರು. ನಮ್ಮ ಬಳಗದಲ್ಲಿಯೂ ಒಬ್ಬರ ಮನೆಯಲ್ಲಿ ಇದೇ ರೀತಿಯಲ್ಲಿ ನವರಾತ್ರಿಯನ್ನ ಆಚರಿಸುತ್ತಿದ್ದರು. ನಮಗೆ ಅಲ್ಲಿಗೆ ಹೋಗುವುದು ಖುಶಿಯೆನಿಸುತ್ತಿತ್ತು. ಬಗೆಬಗೆಯ ಕಡುಬು ಕಜ್ಜಾಯಗಳು. ಮಾಡುವವರ ಕಷ್ಟ ನಮಗ್ಯಾಕೆ? ನಾವಂತೂ ಗಡದ್ದಾಗಿ ಊಟಮಾಡಿ ಖುಶಿಯಾಗಿ ಬರುತ್ತಿದ್ದೆವು.
ಮಧ್ಯಂತರ ರಜೆಯ ಕಾಲ ಗದ್ದೆ ತೋಟದ ಬೆಳೆಗಳು ಕೊಯಿಲಿಗೆ ಬರುವ ಪೂರ್ವದ ದಿನಗಳು. ತೋಟದಲ್ಲಿ ಬಿದ್ದಿರುವ ಅಡಿಕೆ, ಸೋಗೆಗಳನ್ನು ಹೆಕ್ಕಿ ಜೋಡಿಸುವ ಕೆಲಸವಾಗಬೇಕು. ಗದ್ದೆಗೆ ಬರುವ ಹಂದಿಗಳನ್ನು ಕಾಯಲು ಅಟ್ಟಣಿಗೆಯನ್ನು ನಿರ್ಮಿಸುವ ಕೆಲಸವಿರುತ್ತಿತ್ತು. ಸಂಭ್ರಮದಿಂದ ಒಂಬತ್ತು ದಿನ ನವರಾತ್ರಿಯನ್ನು ಆಚರಿಸುವ ಮನೆಗಳಲ್ಲಿ ದೇವರ ಮುಂದೆ ಕಾಗದದಿಂದ ಮಂಟಪಗಳನ್ನು ನಿರ್ಮಿಸುತ್ತಿದ್ದರು. ಕಾಗದವನ್ನು ವಿವಿಧ ಆಕಾರ, ಅಳತೆಗಳಲ್ಲಿ ಕತ್ತರಿಸಿ ಮಾಡುವ ಮಂಟಪದ ನಿರ್ಮಿತಿಗೆ ವಿಶೇಷ ಕೌಶಲ ಇರಬೇಕು. ಬಣ್ಣಗಳ ಆಯ್ಕೆ, ಹೂವಿನ ಸ್ವರೂಪ, ಅವುಗಳ ಜೋಡಣೆ ಎಲ್ಲವೂ ಲೆಕ್ಕಾಚಾರದಲ್ಲಿದ್ದರೆ ಮಾತ್ರ ಅದಕ್ಕೊಂದು ವಿಶೇಷ ಕಳೆ. ಹಿರಿಯರೊಂದಿಗೆ ಸೇರಿ ಅವರ ಕೆಲಸವನ್ನು ಕಲಿಯುವ ಅವಕಾಶವಿತ್ತು.
ನವರಾತ್ರಿಯು ಮೈಸೂರಿಗರಿಗೆ ಬೊಂಬೆಹಬ್ಬವೂ ಹೌದು. ವಿವಿಧ ಬಗೆಯ ಕಡುಬು ಕಜ್ಜಾಯಗಳನ್ನು ಸಿದ್ಧಪಡಿಸಿ ಪುಟ್ಟ ಹೆಣ್ಣುಮಕ್ಕಳಿಗೆ ಬಾಗಿನ ಕೊಡುವ ಸಂಪ್ರದಾಯದ ಬಗ್ಗೆ ಸಾಕಷ್ಟು ಬರವಣಿಗೆಗಳಿವೆ. ಈಗಲೂ ಮೂಲ ಮೈಸೂರಿಗರು ಈ ಸಂಭ್ರಮವನ್ನು ಆಚರಿಸುತ್ತಾರೆ. ಪ್ರಾಯಶಃ ಅರಮನೆಯ ಸಂಪ್ರದಾಯದ ಆಚರಣೆಯ ಭಾಗವಾಗಿರುವ ಇದನ್ನು ಸ್ಥಳೀಯರು ಅನುಸರಿಸುತ್ತ ಬಂದಂತಿದೆ. ಆದರೆ ನಮ್ಮೂರಿನ ಕಡೆ ಇಂತಹ ಆಚರಣೆಗಳಿಲ್ಲ. ಪ್ರತಿ ಮನೆಯಲ್ಲಿ ಮಾಡುವ ತಿಂಡಿಗಳಲ್ಲಿ ವಿಭಿನ್ನತೆ ಇರುತ್ತದೆ. ಅಮ್ಮ ಶಾರದಾಪೂಜೆಗೆ ಮನೆಯಲ್ಲಿ ಕೈಯಿಂದ ತಯಾರಿಸಿದ ಶಾವಿಗೆ ಪಾಯಸ ಮಾಡಿದರೆ, ದುರ್ಗಾಷ್ಟಮಿಯಂದು ಅಂಬೊಡೆ ಮಾಡುತ್ತಿದ್ದರು. ನಮ್ಮ ಅತ್ತೆ ಆ ದಿನ ತಪ್ಪದೆ ಕೆಸುವಿನ ದಂಟಿನ ಸಿಹಿ ದೋಸೆ ಮಾಡುತ್ತಿದ್ದರು. ಕೆಲವರು ಮಹಾ ನವಮಿಯಂದು ಹೋಳಿಗೆ ಮಾಡುವುದಿತ್ತು. ನಮ್ಮನೆಯಲ್ಲಿ ಅವತ್ತು ಒಡೆಯಕ್ಕಿ ಮುದ್ದೆ, ಅದಕ್ಕೆ ಕಾಯಿಹಾಲು. ಕೆಲವರು ದುರ್ಗಾಷ್ಟಮಿಗೆ ಇನ್ನು ಕೆಲವರು ಮಹಾನವಮಿಗೆ ಮುತ್ತೈದೆ ಬಾಗಿನ ಕೊಡುತ್ತಿದ್ದರು. ನವರಾತ್ರಿಯಲ್ಲಿ ದುರ್ಗೆಯರಿಗೆ ವಿಶೇಷ ಮನ್ನಣೆ. ಹತ್ತು ವರ್ಷದ ಒಳಗಿನ ಹೆಣ್ಣುಮಗು ದುರ್ಗೆ ಎನ್ನುವ ನಂಬಿಕೆ. ಅಮ್ಮ ನವರಾತ್ರಿಯಲ್ಲಿ ನಮಗೆ ದಕ್ಷಿಣೆ ಕೊಟ್ಟು ನಮಸ್ಕಾರ ಮಾಡುತ್ತಿದ್ದರು. ನಮಗೆ ಬೆರಗು, ಸಂಕೋಚ ಎರಡೂ ಅಗುತ್ತಿತ್ತು. ʻಇವತ್ತು ನೀವೆಲ್ಲ ನನ್ನ ಮಕ್ಕಳಲ್ಲ, ದುರ್ಗೆಯರುʼ ಎನ್ನುತ್ತಿದ್ದರು.
ಹಬ್ಬಗಳಲ್ಲಿ, ಅದರಲ್ಲಿಯೂ ನವರಾತ್ರಿಯಲ್ಲಿ ಕೊಡುವ ದಕ್ಷಿಣೆ ನಮಗೆ ಪಾಕೆಟ್‌ಮನಿ ತರಹ. ಆಗ ನಮಗೆ ಕೊಡುತ್ತಿದ್ದುದು ಹತ್ತು ನಯಾಪೈಸೆ. ಎಲ್ಲ ಹಬ್ಬಗಳಲ್ಲಿ ಕೊಡುತ್ತಿದ್ದ ದಕ್ಷಿಣೆಯನ್ನು ಜೋಪಾನವಾಗಿ ಕಾಪಿಟ್ಟು ಅದರಿಂದ ಬಣ್ಣದ ದಾರ, ಮಣಿಗಳನ್ನು ತರಿಸಿಕೊಂಡು ಲೇಸು, ಬಾಗಿಲತೋರಣ, ಕಸೂತಿ, ಮಣಿಗಳಿಂದ ಆರತಿ ಕಟ್ಟು ತಯಾರಿಸಿ ನಮ್ಮ ನಮ್ಮ ಕೌಶಲಗಳನ್ನು ಮೆರೆಯಲು ಈ ಹಣ ಸಹಕಾರಿಯಾಗಿತ್ತು. ಹಬ್ಬ ಎನ್ನುವುದು ಹೆಣ್ಣುಮಕ್ಕಳಿಗೆ ಬದುಕಲು ಬೇಕಾದ ಚಾಕಚಕ್ಯತೆಗಳನ್ನು ಕಲಿಸುತ್ತಿತ್ತೇ? ಇದ್ದಿರಬಹುದು.
ನವರಾತ್ರಿಯಲ್ಲಿ ಮಾಡುವ ದೇವಿಯರ ಆರಾಧನೆ ಆಗಿರಲಿ ಅಥವಾ ಯಾವುದೇ ಶಕ್ತಿ ದೇವತೆಗಳ ಪೂಜೆ, ಪನಸ್ಕಾರಗಳಿರಲಿ ಅಲ್ಲಿ ಅದರ ಬಗೆಗೆ ನಾವು ಅಷ್ಟೊಂದು ಭಿನ್ನತೆಯನ್ನು ಕಾಣುವುದಿಲ್ಲ. ಮಹಾಕಾಳಿ, ಮಹಾಲಕ್ಷ್ಮಿ ಮಹಾಸರಸ್ವತಿ ಎಂದು ತ್ರಿಮೂರ್ತಿಯರ ಪತ್ನಿಯನ್ನು ಹೆಸರಿಸಿದರೂ ಅವರ ನಡುವೆ ಘರ್ಷಣೆ ನಡೆದ ಕತೆಗಳು ಪ್ರಚಲಿತದಲ್ಲಿಲ್ಲ. ಆದರೆ ತ್ರಿಮೂರ್ತಿಗಳಾದ ಬ್ರಹ್ಮ, ವಿಷ್ಣು, ಮಹೇಶ್ವರರ ನಡುವೆ ಯಾರು ಹೆಚ್ಚು ಎನ್ನುವ ಸ್ಪರ್ಧೆಗಳನ್ನು ಕುರಿತ ಪೌರಾಣಿಕ ಕತೆಗಳು ಬಹಳ ಇವೆ. ಹರಿ ಹರರಲ್ಲಿ ಭೇದವಿಲ್ಲ ಎನ್ನುವ ಮಾತು ಕೇವಲ ಮೇಲುನೋಟಕ್ಕೆ ಎನ್ನುವಂತೆ ಇಲ್ಲಿನ ಸಂಗತಿಗಳು ಕಾಣಿಸುತ್ತವೆ. ಪಂಚಮುಖವಿದ್ದ ಬ್ರಹ್ಮನನ್ನು ಚತುರ್ಮುಖ ಮಾಡಲು ಹೋಗಿ ಬ್ರಹ್ಮಕಪಾಲ ಹಿಡಿಸಿಕೊಂಡ ಶಿವನನ್ನು ಕಾಪಾಡಿದವನು ಹರಿಯೇ. ಭಕ್ತನಿಗೆ ವರಕೊಟ್ಟು ಅವನು ಲೋಕಕಂಟಕನಾಗಿ ತನ್ನನ್ನೇ ಮುಗಿಸಲು ಬಂದಿದ್ದ ಭಸ್ಮಾಸುರನಿಂದ ಶಿವನನ್ನು ಪಾರು ಮಾಡುವವನು ಹರಿಯೇ. ಚರಿತ್ರೆಯ ಕಾಲದಲ್ಲಿಯೂ ಹರಿ, ಹರರ ಶ್ರೇಷ್ಟತೆಯನ್ನು ಕುರಿತಂತೆ ಶೈವ, ವೈಷ್ಣವ ಪಂಥಗಳ ನಡುವೆ ಕಾದಾಟಗಳು ನಡೆದಿವೆ. ಅನೇಕ ಶಾಸನಗಳಲ್ಲಿ ಇದಕ್ಕೆ ಸಂಬಂಧಿಸಿದ ವಿವರಗಳು ಸಿಗುತ್ತವೆ. ಅದೇ ಹೊತ್ತಿನಲ್ಲಿ ನಮ್ಮ ರಾಜ್ಯದಲ್ಲಿ ಹರಿಹರ ದೇವಸ್ಥಾನ, ಶಂಕರನಾರಾಯಣ ದೇವಸ್ಥಾನಗಳು ಜನ್ಮತಾಳಿವೆ. ಮುಪ್ಪಿನ ಷಡಕ್ಷರಿಯವರು ಹೇಳುವಂತೆ ʻಅವರವರ ಭಾವಕ್ಕೆ ಅವರವರ ಭಕುತಿಗೆʼ ದೇವರ ಸ್ವರೂಪವನ್ನು ಆರಾಧಿಸಿದಲ್ಲಿ ಘರ್ಷಣೆ ನಡೆಯದು ಎನಿಸುತ್ತದೆ. ದೇವರು ಒಬ್ಬ ಎನ್ನುವುದಾದರೆ ʻಹರಿಯ ಭಕ್ತರಿಗೆ ಹರಿ, ಹರನ ಭಕ್ತರಿಗೆ ಹರ ನರರೇನು ಭಾವಿಸುವರದರಂತೆ ತೋರುವನುʼ
ಶೈವ, ವೈಷ್ಣವ ಎನ್ನುವ ಪಂಥಗಳು ಇದ್ದಂತೆ ದೇವಿಯರನ್ನು ಆರಾಧಿಸುವಲ್ಲಿ ಹೀಗೆ ಗೆರೆಯೆಳೆದಂತಹ ಭಿನ್ನತೆ ಕಾಣಿಸುವುದಿಲ್ಲ. ಲೌಕಿಕದಲ್ಲಿ ಇಬ್ಬರು ಹೆಂಗಸರು ಒಟ್ಟಾಗಿ ಸಮಾಧಾನದಿಂದ ಒಂದೆಡೆ ಇರುವುದಿಲ್ಲ ಎನ್ನುವ ಅಪವಾದ ಇದ್ದರೂ ಅದು ನಿಜವೇ ಎನ್ನುವ ಪ್ರಶ್ನೆಗೆ ಇದು ಉತ್ತರವೂ ಆದೀತೇ? ಭಕ್ತರಲ್ಲಿಯೂ ಇವರ ಪೂಜೆಯನ್ನು ಮಾಡುವುದಕ್ಕೆ ಸಂಬಂಧಿಸಿದಂತೆ ಭಿನ್ನ ಮನಸ್ಥಿತಿ ಇದ್ದಂತೆ ತೋರುವುದಿಲ್ಲ. ಶೈವ, ವೈಷ್ಣವ ಎರಡೂ ಗುಂಪುಗಳು ದೇವಿಯರನ್ನು ಆರಾಧಿಸುವುದು ಕಂಡುಬರುತ್ತದೆ. ಈ ದೃಷ್ಟಿಯಿಂದ ನವರಾತ್ರಿಯ ಆಚರಣೆಗೆ ಹೆಚ್ಚಿನ ಮಹತ್ವವಿದೆ. ನವದೇವಿಯರು ಎಂದು ಆಗಮಿಕರು ಯಾವ ಹೆಸರಿನಿಂದ ಕರೆಯಲಿ, ಜನಸಾಮಾನ್ಯರರು ಪೂಜಿಸುವುದು ಶಾರದೆ, ಸರಸ್ವತಿ, ದುರ್ಗೆ ಮುಂತಾದ ಪರಿಚಿತ ಹೆಸರಿನಿಂದಲೇ. ಮೈಸೂರಿನಲ್ಲಿ ಬಹಳ ಹಿಂದಿನಿಂದಲೂ ನವರಾತ್ರಿ ಎಂದರೆ ಚಾಮುಂಡೇಶ್ವರಿಯ ಆರಾಧನೆ. ರೂಪ ಯಾವುದಾದರೂ ಪೂಜೆ ಸಲ್ಲುವುದು ಮಾತ್ರ ಶಕ್ತಿ ದೇವತೆಗೆ. ʻಕಾಯೌ ಶ್ರೀಗೌರಿ ಕರುಣಾ ಲಹರಿʼ ಎನ್ನುವ ಪ್ರಾರ್ಥನೆಯಂತೆ ನಾಡನ್ನು ಆಕೆ ಕಾಯಲಿ ಎಂದು ನಾವೂ ದನಿಗೂಡಿಸೋಣ.
ಡಾ. ಚಂದ್ರಮತಿ ಸೋಂದಾ ಅವರಿಗೆ ಸಾಹಿತ್ಯದಲ್ಲಿ ಆಸಕ್ತಿ. ‘ಮೈಸೂರು ಮಿತ್ರ’ದಲ್ಲಿ ಬರೆದ ಇವರ ಅಂಕಣಗಳು ಆರು ಸಂಕಲನಗಳಲ್ಲಿ ಪ್ರಕಟವಾಗಿವೆ. ಮಹಿಳಾಪರ ಚಿಂತನೆ ಅವರ ಆದ್ಯತೆ.