ಕುಂಜಕ್ಕನ ಹೋಟೆಲಿಗೆ ಹಪ್ಪಳ ತಲುಪಿಸುತ್ತಿದ್ದ ಆಕೆಯ ಪರವಶಗೊಳಿಸಿದ್ದು ಅಲ್ಲಿನ ಬಿರಿಯಾನಿಯ ಪರಿಮಳ. ಯಾರ ದೃಷ್ಟಿಗೂ ಬೀಳದಂತೆ ಹೋಟೆಲಿನ ಹಿಂಬಾಗಿಲ ಬಳಿ ಕುಳಿತು ಆಕೆ ಬಿರಿಯಾನಿಯ ಚಪ್ಪರಿಸುತ್ತಿದ್ದಳು, ಅದರ ಕಾಲಾತೀತ ಪ್ರೇಯಸಿ ಮೊಸರು ಬಜ್ಜಿಯ ಒಂಚೂರು ಹೆಚ್ಚೆನಿಸುವಷ್ಟು ಸೇರಿಸಿಕೊಂಡು. ಅಲ್ಲೇ ಆಗಿದ್ದು ಅವರ ಪರಿಣಯದ ಉದ್ಘಾಟನೆ. ಮುಂದೆ ಆತ ಅವಳಿಗೆ ತನ್ನದೇ ಶೈಲಿಯ ಬಿರಿಯಾನಿಯ ಮಾಡಿ ತಿನ್ನಿಸುತ್ತಿದ್ದರೆ, ಅವಳು ಆತನೆಡೆಗೆ ತನ್ನ ಚಂದಿರ ಮೂಡುವ ಕೆನ್ನೆಗಳ ಒಳಸೆಳೆದು ತುಟಿಯಂಚಿನಲ್ಲಿ ನಗು ಚೆಲ್ಲುತ್ತಾ ಪ್ರೀತಿಯ ಭಾವವ ತಣ್ಣಗೆ ಧಾರೆಯೆರೆಯುತ್ತಿದ್ದಳು.
ರಾಮ್ ಪ್ರಕಾಶ್ ರೈ ಕೆ. ಬರೆಯುವ ಸಿನಿಮಾಗಳ ಕುರಿತ “ಸಿನಿ ಪನೋರಮಾ” ಸರಣಿ ಇಂದಿನಿಂದ ಹದಿನೈದು ದಿನಗಳಿಗೊಮ್ಮೆ ನಿಮ್ಮ ಕೆಂಡಸಂಪಿಗೆಯಲ್ಲಿ

ಮಧುರಂ: ಭಾವ ಭರಿತ ಬೀದಿಯಲ್ಲೊಂದು ಸಂಬಂಧಗಳ ಸಂಚಾರ

ಸಿನಿಮಾವೆಂದರೆ ಕತ್ತಲು ಬೆಳಕಿನ ರಂಗಸ್ಥಳದಲ್ಲಿ ನಡೆಯುವ ಭಾವಗಳ ಕುಣಿತ. ಇಲ್ಲಿ ದೃಶ್ಯಗಳು ಮಳೆಯಾದರೆ, ನಾದ ಅದನ್ನಪ್ಪಿಕೊಳ್ಳುತ್ತಿರುವ ತಂಗಾಳಿಯಂತಿರುತ್ತದೆ. ಇಂತಿಪ್ಪ ಚಲನಚಿತ್ರದಲ್ಲಿ ನೋಡುಗರ ಆಸಕ್ತಿಗನುಗುಣವಾಗಿ ಎರಡು ನಮೂನೆಗಳಿವೆ.

1. ಜಗತ್ತು ಸ್ಥಾಪಿಸಿರುವ, ನಂಬಿರುವ ಸತ್ಯಗಳ ಸರಹದ್ದನ್ನು ದಾಟಿ, ವಾಸ್ತವದ ವಿರುದ್ಧ ದಿಕ್ಕಿನಲ್ಲಿ ಹೆಜ್ಜೆ ಹಾಕುವ, ನೀರ ರಾಶಿಯ ಮೇಲೆ ಬೆಂಕಿಯೆಬ್ಬಿಸುವ ಸಿನಿಮಾಗಳು. ಈ ಚಿತ್ರಗಳಲ್ಲಿ ನಾಯಕ ಸರ್ವ ಶಕ್ತನಾಗಿರುತ್ತಾನೆ. ಬಹುಮಹಡಿ ಕಟ್ಟಡದಿಂದ ಛಂಗನೆ ನೆಗೆಯುತ್ತ, ಎರಡು ಡಜನ್ ಖೂಳರನ್ನು, ತನ್ನೆರಡು ಕೈಗಳಿಂದಲೇ ಸದೆಬಡಿದು ನರಕಕ್ಕಟ್ಟುತ್ತಾನೆ. ಸ್ವರ್ಗದ ದೇವತೆಗೆ ಹೊಟ್ಟೆ ಕಿಚ್ಚಾಗುವಂತೆ ಸಿಂಗರಿಸಿಕೊಂಡ ರಮಣೀಯ ನಾಯಕಿ ಆತನ ತೋಳ ತೆಕ್ಕೆಯಲ್ಲಿರುತ್ತಾಳೆ. ಕಣ್ಣು ಕೋರೈಸುವ ಸೆಟ್ಟುಗಳಲ್ಲಿ ಮೈ ನವಿರೇಳಿಸುವ ಸಾಹಸ ದೃಶ್ಯಗಳು, ಕಣ್ಮನ ಸೆಳೆಯುವ ಪ್ರೇಮಗೀತೆಗಳ ಪ್ರದರ್ಶನವಿರುತ್ತದೆ. ಹೀಗೆ ದಿನಕರ- ಚಂದಿರನ ಕಣ್ಣಿಗೆ ಹೊಸತೆನಿಸುವ ಒಂದು ಪ್ರಪಂಚಕ್ಕೆ ಸಾಗುವ ಅನುಭವವನ್ನು ಪ್ರೇಕ್ಷಕರಿಗೆ ಧಾರೆಯೆರೆಯುತ್ತದೆ ಈ ಚಿತ್ರಗಳು.

2. ಈ ಚಿತ್ರಗಳು ವಾಸ್ತವಿಕತೆಯ ಹರಿಗೋಲು ಹಿಡಿದು ಸಾಗುವ ನಾವೆಯಂಥವು. ಇಲ್ಲಿ ಅತಿಶಯೋಕ್ತಿಗೆ ಜಾಗವಿಲ್ಲ. ನಾವು ಸದಾ ಕಾಣುವ, ಆದರೆ ಗಮನಿಸದ ಅಂಶಗಳ ಉಲ್ಲೇಖವೇ ಇಲ್ಲಿನ ಕಥಾನಕಗಳ ವೈಶಿಷ್ಟ್ಯ. ಪಕ್ಕದ ಮನೆಯ ತರಕಾರಿ ಮಾರುವ ಹುಡುಗ, ಬ್ಯೂಟಿ ಪಾರ್ಲರ್ ಕೆಲಸಕ್ಕೆ ಹೋಗುವ ಹುಡುಗಿಯ ತೆರನಾದ ಅದೆಷ್ಟೋ ಬದುಕಿನುದ್ದಕ್ಕೂ ಎದುರಾಗುವ ಜನರೇ ಇಲ್ಲಿ ಪಾತ್ರಗಳಾಗುತ್ತಾರೆ. ಈ ನಮೂನೆಯ ಚಿತ್ರಗಳು ಮುಗಿದ ನಂತರವೂ ಬಹುಕಾಲ ಮನದೊಳಗೆ ಲಂಗರು ಹಾಕಿ ಕಾಡುತ್ತದೆ. ಪ್ರಾಯಶಃ ಮಲಯಾಳಂ ಸಿನಿಮಾಗಳು ಈ ನಮೂನೆಗೆ ಅತ್ಯಂತ ಸೂಕ್ತ ಉದಾಹರಣೆ.

ಕರೋನ ಕಾಲದಲ್ಲಿ, OTT ಗಳಲ್ಲಿ ಮಲಯಾಳಂ ಚಿತ್ರಗಳು ವೀಕ್ಷಕರ ಸೆಳೆದ ಪರಿಣಾಮ, ಇಂದು ಎಲ್ಲಾ ಭಾಷೆಗಳಲ್ಲೂ ರಿಯಲಿಸ್ಟಿಕ್ ಆದ ಕಥೆ ಹೇಳುವಿಕೆಯ ಪ್ರಮಾಣ ಅಧಿಕವಾಗಿದೆ. ಮಲಯಾಳಂ ಚಿತ್ರಗಳ ವಿಚಾರಕ್ಕೆ ಬಂದರೆ ಅವು ಅರಳುವುದು ಸಾಗರದ ತಟದ ಮಣ್ಣಿನ ಸೊಗಡಿನಲ್ಲಿ. ಭೋರ್ಗರೆವ ಅಲೆಗಳು, ಹಿನ್ನೀರಿನ ಸರೋವರ, ಹಳೆಯ ಕೆಂಪು ಇಟ್ಟಿಗೆಯಲ್ಲಿ ವಸ್ತ್ರವಿಲ್ಲದೆ ಬೆತ್ತಲಾಗಿ ನಿಂತ ಚಹದ ಹೋಟೆಲು ಹೀಗೆ ನಿತ್ಯ ಕಾಣುವ ಲೋಕವೇ ಇಲ್ಲಿ ಸೆಟ್ಟುಗಳು. ಸಿಕ್ಸ್ ಪ್ಯಾಕ್‌ಗಳಿಲ್ಲದ ನಾಯಕ, ಗ್ಲಾಮರ್ ಎಂಬ ಪದಕ್ಕೆ ತನ್ನ ಪದಕೋಶದಲ್ಲಿ ಜಾಗವೇ ಇರದಂತೆ ಕಣ್ಣಿಗೆ ಕಾಡಿಗೆಯಷ್ಟೇ ಹಚ್ಚಿ ಸರಳ, ಸಹಜ ಸುಂದರಿಯಂತೆ ಸೆಳೆಯುವ ನಾಯಕಿ, ಊರಲ್ಲಿರುವ ದೊಡ್ಡ ಹೊಟ್ಟೆಯ ಪೋಲೀಸು ಹೀಗೆ ಎಲ್ಲರೂ ನಮಗಿಲ್ಲಿ ಕಾಣ ಸಿಗುತ್ತಾರೆ. ಪೂರ್ಣಚಂದ್ರ ತೇಜಸ್ವಿಯವರ ಕಥೆಗಳಲ್ಲಿರುವ ನಿಗೂಢತೆಯನ್ನು ಅಪ್ಪಿಕೊಂಡಿರುವ ವಿಲಕ್ಷಣ ವ್ಯಕ್ತಿತ್ವಗಳು ಇಲ್ಲಿ ಹೇರಳವಾಗಿ ಸಿಗುತ್ತವೆ. ಇಂತಹ ಪಾತ್ರಗಳೆಲ್ಲವನ್ನೂ ಪೋಣಿಸಿ, ವಸ್ತು ಸ್ಥಿತಿಯ ಬೆನ್ನೇರಿ ಕುಳಿತು, ಭಾವುಕತೆಯ ರೆಕ್ಕೆ ಕಟ್ಟಿ ಹಾರುವ ದೃಶ್ಯಗಳು ಮಣಿಸರದ ರೀತಿ ಸಂಕಲನಗೊಂಡು ಸಿನಿಮಾವಾಗಿ ರೂಪ ತಳೆಯುತ್ತದೆ.

(ಅಹಮ್ಮದ್ ಕಬೀರ್)

ಸಂಕ್ಷಿಪ್ತವಾಗಿ ಹೇಳಬೇಕೆಂದರೆ, ‘ಇದಮಿತ್ಥಂ’ ಎಂಬ ಅನುಗಾಲದ ಅಣೆಕಟ್ಟಿಗೆ ಹಾಕಿದ ಮರದ ಹಲಗೆಗಳ ತೆರವುಗೊಳಿಸಿ, ನದಿಯ ವಿಶಾಲ ಹರಿವಿಗೆ ಇಶಾರೆಯ ನೀಡುವ ಕಾಯಕ. ಇಂತಹ ಅದೆಷ್ಟೋ ‘ತೀರದೆ’ ಉಳಿದ ‘ತೀರ’ದ ಕಥೆಗಳಲ್ಲಿ ‘ಮಧುರಂ’ ಮನದ ಹತ್ತಿರದ ಸ್ಥಾನವ ಗಳಿಸಿರುವಂಥದ್ದು.

ಜಯಂತ ಕಾಯ್ಕಿಣಿಯವರ ಮಾತೊಂದಿದೆ ‘ಜಗತ್ತಿನಲ್ಲಿ made for each other ಎಂಬಂತಿರುವುದು ಚಪ್ಪಲಿಗಳು ಮಾತ್ರ’ ಎಂದು. ಆ ಮಾತು ಮರೆಯುವಂತೆ ಕಾಣುವ, ಕಾಡುವ ಜೋಡಿ ಸಾಬು ಮತ್ತು ಚಿತ್ರಾರದ್ದು. ಆತ ಹಡಗಿನಲ್ಲಿ ಮುಖ್ಯ ಅಡುಗೆಯವನ ಸಹಾಯಕ. ತರಹೇವಾರಿ ರೆಸಿಪಿಗಳನ್ನು ಕರಗತಗೊಳಿಸಿಕೊಂಡು, ಅಸಂಖ್ಯ ರಸಗ್ರಂಥಿಗಳಿಗೆ ಅಪರಿಮಿತ ಆನಂದವ ನೀಡುವಾತ. ಹಡಗಿನ ಕೆಲಸಕ್ಕೆ ರಜೆಯಿದ್ದಾಗ, ಕುಂಜಕ್ಕನ ಹೋಟೆಲಿಗೆ ಬಂದು ನಾಸಿಕಕ್ಕೆ ನಶೆ ಹಿಡಿಸುವ ಬಿರಿಯಾನಿಯ ಸಜ್ಜುಗೊಳಿಸುತ್ತಿದ್ದ. ಅವಳು ಆ ಊರಿಗೆ ಬಂದ ಗುಜರಾತಿ ಕುಟುಂಬದ ಮುದ್ದಿನ ಮಗಳು. ಕಾಡಿಗೆ ಮುತ್ತಿಕ್ಕಿದ ಅಗಲವಾದ ಲೋಚನಗಳು, ದೊಡ್ಡದಾದ ರಂಗು ಬಳಿದುಕೊಂಡ ಮೂಗು ಬೊಟ್ಟು, ನರ್ತಿಸುವ ಜುಮುಕಿ ಹೊತ್ತ ಆಕೆ ಚಲಿಸುವ ಸಿಹಿಗಾಳಿ. ಆಕೆಯ ಕುಟುಂಬ ಹಪ್ಪಳ, ಸಿಹಿತಿನಿಸುಗಳಾದ ಜಿಲೇಬಿ, ಮೈಸೂರು ಪಾಕ್, ಲಡ್ಡು ತಯಾರಿಸಿ ವ್ಯಾಪಾರದಲ್ಲಿ ತೊಡಗಿತ್ತು. ಕುಂಜಕ್ಕನ ಹೋಟೆಲಿಗೆ ಹಪ್ಪಳ ತಲುಪಿಸುತ್ತಿದ್ದ ಆಕೆಯ ಪರವಶಗೊಳಿಸಿದ್ದು ಅಲ್ಲಿನ ಬಿರಿಯಾನಿಯ ಪರಿಮಳ. ಯಾರ ದೃಷ್ಟಿಗೂ ಬೀಳದಂತೆ ಹೋಟೆಲಿನ ಹಿಂಬಾಗಿಲ ಬಳಿ ಕುಳಿತು ಆಕೆ ಬಿರಿಯಾನಿಯ ಚಪ್ಪರಿಸುತ್ತಿದ್ದಳು, ಅದರ ಕಾಲಾತೀತ ಪ್ರೇಯಸಿ ಮೊಸರು ಬಜ್ಜಿಯ ಒಂಚೂರು ಹೆಚ್ಚೆನಿಸುವಷ್ಟು ಸೇರಿಸಿಕೊಂಡು. ಅಲ್ಲೇ ಆಗಿದ್ದು ಅವರ ಪರಿಣಯದ ಉದ್ಘಾಟನೆ. ಮುಂದೆ ಆತ ಅವಳಿಗೆ ತನ್ನದೇ ಶೈಲಿಯ ಬಿರಿಯಾನಿಯ ಮಾಡಿ ತಿನ್ನಿಸುತ್ತಿದ್ದರೆ, ಅವಳು ಆತನೆಡೆಗೆ ತನ್ನ ಚಂದಿರ ಮೂಡುವ ಕೆನ್ನೆಗಳ ಒಳಸೆಳೆದು ತುಟಿಯಂಚಿನಲ್ಲಿ ನಗು ಚೆಲ್ಲುತ್ತಾ ಪ್ರೀತಿಯ ಭಾವವ ತಣ್ಣಗೆ ಧಾರೆಯೆರೆಯುತ್ತಿದ್ದಳು.

ಆತ ಕೆವಿನ್. ಅವಳು ಚೆರ್ರಿ. ಕುಟುಂಬದ ನಿರ್ಧಾರಕ್ಕನುಗುಣವಾಗಿ ಆದ ಸಂಗಾತಿಗಳು. ಅತ್ತೆ ಮತ್ತು ಸೊಸೆಯ ನಡುವೆ ಮೂಡಿದ ಸಹಜ ಭಿನ್ನಾಭಿಪ್ರಾಯಗಳ ಗಮನಿಸಿ, ಆತನಿಗೆ ಚೆರ್ರಿಯದ್ದು ಅಸಹಜ ತಪ್ಪುಗಳೆನಿಸಿ, ಅವಳ ಮೇಲಿನ ಪ್ರೀತಿ ಅರಳುವಾಗಲೇ ಮುದುಡಿ ಹೋಗುತ್ತದೆ. ಅದೆಷ್ಟರ ಮಟ್ಟಿಗೆ ಅಂದರೆ, ವಾಶ್ ರೂಮಿನ ಹಿಡಿಕೆಯಲ್ಲಿ ತನ್ನ ಹಲ್ಲುಜ್ಜುವ ಬ್ರಶ್‌ನ ಹೆಗಲಿಗೆ ಅವಳ ಟೂತ್ ಬ್ರಶ್ ವಾಲಿದ್ದರೂ ಆತನಿಗೆ ಸಹಿಸಲು ಸಾಧ್ಯವಾಗದೆ ಅದನ್ನು ದೂರವಾಗಿಸುತ್ತಾನೆ. ಇದೆಲ್ಲವು ತಿಳಿದಿದ್ದರೂ ಆಕೆ, ಯು ಟ್ಯೂಬ್ ವಿಡಿಯೋಗಳನ್ನೆಲ್ಲಾ ಜಾಲಾಡಿ, ರುಚಿಕರವಾದ ತಿನಿಸುಗಳ ತಯಾರಿಸಿ, ಅವನು ಮತ್ತೆ ಮೊದಲಿನಂತೆಯೇ ಸಂತಸದಿಂದ ಕುಣಿದಾಡುವಂತಾಗಬೇಕು ಎಂಬ ಕನಸು ಕಾಣುತ್ತಾ, ಸಕಾರಾತ್ಮಕ ಸೂರ್ಯೋದಯಕ್ಕೆ ಕಾಯುತ್ತಿರುತ್ತಾಳೆ. ಈ ಕೆವಿನ್ ಮತ್ತು ಸಾಬು ಸೇರಿದಂತೆ ಹಲವು ಬದುಕುಗಳು ಭೇಟಿಯಾಗುವುದು ಕೊಚ್ಚಿ ಸರ್ಕಾರಿ ವೈದ್ಯಕೀಯ ಕಾಲೇಜಿನ ಬೈ ಸ್ಟ್ಯಾಂಡರ್ ಹಾಲಿನಲ್ಲಿ. ಕಳೆದುಹೋದ ಆರೋಗ್ಯವ ಸರಿ ಪಡಿಸಿಕೊಳ್ಳಲು ಬಂದಿರುವ ಜನರ ಪತಿ, ಪೋಷಕರು, ಸಂಬಂಧಿಕರು ಇವರೇ ಬೈ ಸ್ಟಾಂಡರ್ ಹಾಲಿನ ಸದಸ್ಯರು. ಸಾಬುವಿನ ಪತ್ನಿ ಚಿತ್ರಾಳಿಗೆ ಬೆನ್ನಿನಲ್ಲೇನೋ ಸಮಸ್ಯೆಯಾಗಿದೆ. ಕೆವಿನ್ ತಾಯಿಗೆ, ರವಿಯ ಪ್ರೀತಿಯ ಮಡದಿಗೆ, ತಾಜುವಿನ ತಂದೆಗೆ, ನೀತುವಿನ ಅಕ್ಕನಿಗೆ ಶಸ್ತ್ರ ಚಿಕಿತ್ಸೆಯ ಅಗತ್ಯವಿದೆ. ಅವರೆಲ್ಲರೂ ಗೋಡೆಗಳೇ ಇಲ್ಲದ ಆ ಕೋಣೆಯಲ್ಲಿ ತಮ್ಮ ನೋವು, ನಲಿವು, ಮಾತು, ಮೌನಗಳ ಹಂಚಿಕೊಂಡು ಹೊಸ ಸಂಬಂಧಗಳಿಗೆ ಆರಂಭವ ಬರೆಯುತ್ತಾರೆ. ಅವರಲ್ಲಿ ಕಳೆವ ದಿನಗಳಲ್ಲಿ ಅನುಭವಿಸುವ ಖುಷಿ, ದುಃಖ, ಆತಂಕ, ಭರವಸೆ, ಪ್ರೀತಿ ಇತ್ಯಾದಿಗಳೆಲ್ಲವೂ ಹನಿಗಳಂತೆ ಒಟ್ಟುಗೂಡಿ, ನೆನಪಿನ ಮಳೆಯಾಗಿ ಎಲ್ಲರ ಹೃದಯದ ಒಡಲನ್ನು ಭರ್ತಿಗೊಳಿಸುತ್ತಿರುತ್ತದೆ. ವಿಭಿನ್ನ ದಿಕ್ಕುಗಳಿಂದ ಆಗಮಿಸುವ ಅನೇಕ ಬಸ್ಸುಗಳು ಹಾಲ್ಟ್ ಸ್ಟ್ಯಾಂಡಿನಲ್ಲಿ ಸಂಗಮಿಸುವಂತೆ, ಬಹು ವ್ಯಕ್ತಿತ್ವಗಳ ಸಂಕಲನವಾಗಿ, ಆಂತರ್ಯ ಅನಾವರಣಗೊಳ್ಳಲು ರಂಗಸ್ಥಳವಾಗಿದೆ ಬೈ ಸ್ಟಾಂಡರ್ ಹಾಲ್. ಹೀಗೆ, ಇವರೆಲ್ಲರ ಬದುಕನ್ನು, ಆಸ್ಪತ್ರೆಯೆಂಬ ಭಾವಗಳು ರೋಲರ್ ಕೋಸ್ಟರ್ ಪಯಣದಲ್ಲಿರುವ ಜಾಗದಲ್ಲಿ, ಕಡು ಬೇಸರದ ದನಿಯಲ್ಲೂ ಕಾಡುವ ‘ಮಧುರ’ತೆಯ ತುಂಬಿ ಪ್ರಸ್ತುತಗೊಳಿಸಿದ್ದಾರೆ ನಿರ್ದೇಶಕ ಅಹಮ್ಮದ್ ಕಬೀರ್.

ಭೋರ್ಗರೆವ ಅಲೆಗಳು, ಹಿನ್ನೀರಿನ ಸರೋವರ, ಹಳೆಯ ಕೆಂಪು ಇಟ್ಟಿಗೆಯಲ್ಲಿ ವಸ್ತ್ರವಿಲ್ಲದೆ ಬೆತ್ತಲಾಗಿ ನಿಂತ ಚಹದ ಹೋಟೆಲು ಹೀಗೆ ನಿತ್ಯ ಕಾಣುವ ಲೋಕವೇ ಇಲ್ಲಿ ಸೆಟ್ಟುಗಳು. ಸಿಕ್ಸ್ ಪ್ಯಾಕ್‌ಗಳಿಲ್ಲದ ನಾಯಕ, ಗ್ಲಾಮರ್ ಎಂಬ ಪದಕ್ಕೆ ತನ್ನ ಪದಕೋಶದಲ್ಲಿ ಜಾಗವೇ ಇರದಂತೆ ಕಣ್ಣಿಗೆ ಕಾಡಿಗೆಯಷ್ಟೇ ಹಚ್ಚಿ ಸರಳ, ಸಹಜ ಸುಂದರಿಯಂತೆ ಸೆಳೆಯುವ ನಾಯಕಿ, ಊರಲ್ಲಿರುವ ದೊಡ್ಡ ಹೊಟ್ಟೆಯ ಪೋಲೀಸು ಹೀಗೆ ಎಲ್ಲರೂ ನಮಗಿಲ್ಲಿ ಕಾಣ ಸಿಗುತ್ತಾರೆ. ಪೂರ್ಣಚಂದ್ರ ತೇಜಸ್ವಿಯವರ ಕಥೆಗಳಲ್ಲಿರುವ ನಿಗೂಢತೆಯನ್ನು ಅಪ್ಪಿಕೊಂಡಿರುವ ವಿಲಕ್ಷಣ ವ್ಯಕ್ತಿತ್ವಗಳು ಇಲ್ಲಿ ಹೇರಳವಾಗಿ ಸಿಗುತ್ತವೆ.

“ಮಧುರಂ” ಮನವನ್ನೇ ಆವರಿಸಲು, ಆಪೋಶನ ತೆಗೆದುಕೊಳ್ಳಲು ಕಾರಣ ಜೀವನದ ಬಗ್ಗೆ ಅದು ಸಾರುವ ಅದಮ್ಯ ಪ್ರೀತಿಯ ಪರಿಮಾಣ ಹಾಗೂ ನೋಡುಗನಲ್ಲಿ ಉಂಟು ಮಾಡುವ ಪರಿಣಾಮ. ಅಪಘಾತದ ಆಘಾತದಲ್ಲಿ ಚಲನಶೀಲತೆಯ ಕಳೆದುಕೊಂಡು, ಮೌನ ತಟಕ್ಕೆ ಜಾರಿರುವ ಚಿತ್ರಾಳ ಬಗ್ಗೆ ಸಾಬು ತೋರುವ ನಿರಪೇಕ್ಷ, ಚಿರಂತನ ಪ್ರೀತಿಯ ಧಾರೆ, 40 ಇಯರ್ಸ್ ರವಿ ವೆಡ್ಸ್ ಸುಲೇಖಾ ಎನ್ನುತ್ತಾ ಪತ್ನಿಯ ಜೊತೆಗಿನ ಒಲವ ನೆನಪುಗಳನ್ನು ರವಿ ಸಂಭ್ರಮಿಸುವ ಪರಿ ಇವೆಲ್ಲವೂ ವಾಸ್ತವ ಬದುಕಿನಲ್ಲಿ ಸಂಬಂಧಗಳ ಸಂಚಾರ ಸಿಹಿಯಾಗಿರಲು ಮಾದರಿಯಾಗುವ ಸಾದೃಶ್ಯಗಳು. ಪ್ರಮುಖವಾಗಿ, ಅಪೇಕ್ಷೆಯ ಅರ್ಥವೇ ಬಯಸದ ಪ್ರೇಮ. ಇಲ್ಲೊಂದು ಸನ್ನಿವೇಶವಿದೆ. ರವಿ ತನ್ನ ಮಡದಿಯ ಉಡುಪುಗಳನ್ನು ತೊಳೆಯುತ್ತಿರುತ್ತಾರೆ. ಅದರ ಬಗ್ಗೆಯೇ ಮಾತನಾಡುತ್ತಾ ಹೇಳುತ್ತಾರೆ. “ಅವಳು ಒಂದು ದಿನವೂ ನೆಪವೇ ಹೇಳದೆ 40 ವರುಷಗಳ ಕಾಲ ನನ್ನ ಕೆಲಸಗಳಿಗೆ ಹೆಗಲಾದಳು. ಇದು ನಾನವಳ ಅಪರಿಮಿತ ಪ್ರೀತಿಗೆ ಮಾಡುತ್ತಿರುವ ಅತಿ ಸಣ್ಣ ಕರ್ತವ್ಯ”, ಎಂದು… ‘ಅವಳ ಸಾಗರದ ಪ್ರೀತಿಗೆ, ನನ್ನೀ ಕೆಲಸ ಬೊಗಸೆಯಲ್ಲಿ ಹಿಡಿದ ಮಳೆಹನಿಯಂತೆ’ ಎಂಬ ಭಾವದ ಮಾತದು. ಎಲ್ಲರೂ ಉಪೇಕ್ಷಿಸುವ, ತೆರೆಯಲ್ಲಡಗಿದ ಸತ್ಯವಲ್ಲವೇ ಇದು! ಅದೆಷ್ಟೇ ಕಷ್ಟಗಳಿದ್ದರೂ ರುಚಿ ರುಚಿಯ ಅಡುಗೆ ಮಾಡಿ ಕೈ ತುತ್ತು ನೀಡುವ ಅಮ್ಮ, ತನ್ನ ಇಷ್ಟಗಳೆಲ್ಲವ ಮರೆತು, ಅನುಗಾಲದ ಸ್ನೇಹಿತನ ಆಶೋತ್ತರಗಳೇ ತನ್ನದೆಂದು ಬದುಕುವ ಪತ್ನಿ ಹೀಗೆ ಹೆಣ್ಣು ಜೀವದ ಈ ಶ್ರೇಷ್ಟ ಭಾವ ಬಹುಪಾಲು ಪುರುಷರಿಗೆ ಅರಿವಾಗುವುದು ಅವರ ಗೈರಿನಲ್ಲಿ ಮಾತ್ರವೆಂಬುದರ ಚಿತ್ರಣ, ಪ್ರತಿ ನೋಡುಗನ ಹೃದಯದ ಬಾಗಿಲ ಬಳಿ ಬಂದು ಪ್ರಶ್ನೆಯಾಗಿ ಕಾಡಲು ತೊಡಗುತ್ತದೆ. ತನ್ನ ಮತ್ತು ಚೆರ್ರಿಯ ನಡುವಿನ ಭಿನ್ನಾಭಿಪ್ರಾಯಗಳು ಬಿಗಿಯಾಗಿ ಬೇರೆಯಾಗುವತ್ತ ಚಿತ್ತ ಹರಿಸುವ ಕೆವಿನ್‌ಗೆ, ನೋವುಗಳ ಮಧ್ಯೆಯೂ ತಮ್ಮ ಪ್ರೇಮದ ಮಧುರ ಹೆಜ್ಜೆಗಳ ನಡಿಗೆಯನ್ನು ಹೇಳುತ್ತಾ, ಕೊನೆಗೆ ಅಮ್ಮನ ಶಸ್ತ್ರ ಚಿಕಿತ್ಸೆಯ ದಿನ ಚೆರ್ರಿಯ ತೋಳ ಅಕ್ಕರೆಗೆ ಶರಣಾಗುವಂತೆ ಮಾಡುವ ಸಾಬು ಮತ್ತು ರವಿ, ತಾಜುವಿನ ಆ ಕ್ಷಣದ ಪ್ರೀತಿಗೂ ಅಕ್ಷತೆಯಾಗುತ್ತಾರೆ.

ಹೀಗೆ ಒಲವೆಂಬ ಒರತೆಯು ಒಡಗೂಡಿ, ಬದುಕೆಂಬ ನದಿಯಾಗಿ ಹರಿವ ಪರಿಯ ಸೊಬಗೇ ಇಲ್ಲಿ ಸುಂದರ. ಹಾಗೆಂದು ಚಿತ್ರ ಭಾರವಾಗಿಯೇ ಸಾಗುವುದಿಲ್ಲ. ಅಲ್ಲಲ್ಲಿ ನಗುತರಿಸುವ ಪುಟ್ಟ ಪುಟ್ಟ ಸನ್ನಿವೇಶಗಳಿವೆ. ಬೈ ಸ್ಟಾಂಡರ್ ಹಾಲಿನ ಸದಸ್ಯರ ಧಾರಾವಾಹಿ ಪ್ರೇಮ, ಫುಟ್ ಬಾಲ್ ಹುಚ್ಚಿಗೆ ಹಲ್ಲೆಗೊಂಡು ನರಳುವ ಟಿವಿ ಮತ್ತು ರಿಮೋಟ್, ಇರುವ ಒಂದು ಚಾರ್ಜಿಂಗ್ ಸ್ಥಳಕ್ಕೆ ಏರ್ಪಡುವ ಸ್ಪರ್ಧಾತ್ಮಕ ಪೈಪೋಟಿ, ನೀತುವಿನ ನಯನ ಸೆಳೆಯಲು ತಾಜು ಹೂಡುವ ತಂತ್ರಗಳು ಹೀಗೆ ಹಗುರಗೊಳ್ಳಲು ಅನುವು ಮಾಡುವ ಕೆಲವು ಚಿತ್ರಿಕೆಗಳಿವೆ.

ಜೋಜು ಜಾರ್ಜ್ ಸಾಬುವಾಗಿ ಕಾಡುತ್ತಾರೆ. ಸರಳ ಭಾವ, ಮಂದ್ರ ಸ್ಥಾಯಿಯ ಗಟ್ಟಿ ದನಿಯ ಮೂಲಕ ಕಿರುನಗೆಯ ಮೂಡಿಸುತ್ತಾರೆ, ಹೃದಯವ ಭಾರಗೊಳಿಸುತ್ತಾರೆ. ಚಿತ್ರಾಳಾಗಿ ಶ್ರುತಿ ರಾಮಚಂದ್ರನ್ ‘ಇನ್ನೇನು ಉಳಿದಿಲ್ಲ ಧಾರೆಯೆರೆಯಲು ಪ್ರೇಮ’ ವೆಂಬಂತೆ ತನ್ನ ಕತ್ತಲ ಕಳೆವ ಕಂದೀಲಿನ ತೆರನಾದ ಕಣ್ಣುಗಳಿಂದ ತೆರೆಯ ತುಂಬೆಲ್ಲಾ ಬೆಳಕು ಚೆಲ್ಲುತ್ತಾರೆ. ಸಾಬುವಿನ ಬದುಕಿನಲ್ಲೂ ಕೂಡ. ಇನ್ನು ಯುವ ಜೋಡಿಯಾಗಿ ಕೆವಿನ್ ಮತ್ತು ಚೆರ್ರಿ ಪಾತ್ರದಲ್ಲಿ ಅರ್ಜುನ್ ಅಶೋಕನ್ ಮತ್ತು ನಿಖಿಲಾ ವಿಮಲ್ ಸೆಳೆಯುತ್ತಾರೆ. ಪ್ರಾಯಶಃ, ಈ ಕಾಲದ ಸಹಜ ಅಭಿನಯದ ನಟಿ ಎಂದು ಹುಡುಕಿದರೆ ನಿಖಿಲಾ ವಿಮಲ್ ಹೆಸರೇ ಅಗ್ರ ಪಟ್ಟಿಯಲ್ಲಿ ಬರಬಹುದು. ಇದು ಅತಿಶಯೋಕ್ತಿಯಲ್ಲ. ಅವರ ಅಭಿನಯದ ಪ್ರತೀ ಚಿತ್ರಗಳೂ ಇದಕ್ಕೆ ಸಾಕ್ಷಿ. ಕುಂಜಿಕ್ಕನಾಗಿ ಜಾಫರ್ ಇಡುಕ್ಕಿ, ರವಿಯಾಗಿ ಇಂದ್ರನ್ಸ್ ನೆನಪಲ್ಲಿ ಉಳಿದರೆ, ನೀತುವಾಗಿ ಮಾಳವಿಕಾ ಮನ ಮೆಚ್ಚುವ ಜೀವಿಸುವಿಕೆ. ಸಂಗೀತ, ಛಾಯಾಗ್ರಹಣ ಮತ್ತು ನಿರ್ದೇಶನ ಇವು ಮೂರರ ಗಟ್ಟಿಯಾದ ಬೆಸುಗೆಯೇ ಚಿತ್ರದ ಚಿಗುರುವಿಕೆಯ ಬೆನ್ನೆಲುಬು. ಆಸ್ಪತ್ರೆಯ ಕ್ಯಾಂಟೀನ್‌ನಲ್ಲಿ ಉಯ್ಯಾಲೆಯಾಡುವ ಚಹಾ, ಗಾಳಿ ಹಿಡಿಯಲು ಹಾರುವ ಸೀರೆಗಳು, ಖಾಲಿ ಹಾಳೆಯಂತಾದ ಸಂಜೆಯಲ್ಲಿ ಆಸ್ಪತ್ರೆಯ ಆವರಣ ಬರೆಯುವ ಒಲವ ಕಥೆಗಳು ಇಂತಹ ಅದೆಷ್ಟೋ ಬಣ್ಣ ಹಚ್ಚಿದ ಭಾವಗಳು, ಪ್ರಚೋದಕ ಸದ್ದಿನ ಹಿನ್ನೆಲೆಯೊಂದಿಗೆ ಪ್ರತ್ಯಕ್ಷವಾಗುವುದೇ ಈ ತಾಂ’ತ್ರಿ’ಕ ವರ್ಗದ ಕ್ರಿಯಾತ್ಮಕ ದೃಷ್ಟಿಕೋನಕ್ಕೆ ಹಿಡಿದ ಕನ್ನಡಿ. ವಿಶೇಷತಃ, ತಿನಿಸುಗಳ ತೋರಿಸಿದ ಪರಿ. ಕುಚ್ಚಲಕ್ಕಿ ಗಂಜಿಯ ತಟದಲ್ಲಿ ನಗುವ ತೆಂಗಿನಕಾಯಿ ಚಟ್ನಿ, ಕರಿದ ಮೀನು, ಆಟವಾಡಿ ದಣಿದು ಬಂದು ಅಡ್ಡಾದಿಡ್ಡಿ ಮಲಗಿರುವ ಮಕ್ಕಳಂತೆ ಕಾಣುವ ಈರುಳ್ಳಿಯ ಚೂರುಗಳು, ಮೊಸರು ಬಜ್ಜಿಯ ದೇಹದ ತುಂಬೆಲ್ಲಾ ಬಳಿದುಕೊಂಡ ಬಿರಿಯಾನಿ ಹೀಗೆ ಆಹಾರವೆಲ್ಲವೂ ಹಾರ ಧರಿಸಿ ಸಿಂಗಾರಗೊಂಡ ದೇವತೆಯಂತೆ ಕಂಗೊಳಿಸುತ್ತದೆ. ಹೆಶಾಮ್ ಅಬ್ದುಲ್ ವಹಾಬ್ ಮತ್ತು ಗೋವಿಂದ ವಸಂತರ ಹಿನ್ನೆಲೆ ಸಂಗೀತ ಮತ್ತು ಹಾಡುಗಳು ಮನವಿಯೇ ನೀಡದೆ ಮನವ ಪೂರಾ ಅಕ್ರಮಿಸಿಕೊಳ್ಳುತ್ತದೆ. ‘ನಿನ್ನ ಕಣ್ಣಲಡಗಿರುವ ಕಿಡಿಗೆ ನಾ ಕರಗಿ ಹೋದೆ’ ಎಂಬರ್ಥವ ಕೊಡುವ ಹಾಡು ಇದಕ್ಕೊಂದು ಅತ್ಯುತ್ತಮ ಉದಾಹರಣೆ. ಸಂಬಂಧಗಳು ಕವಲುದಾರಿಯಲ್ಲಿ ಸಾಗುತ್ತಿರುವ ಈ ಕಾಲದಲ್ಲಿ, ದಾರಿಯುದ್ದಕ್ಕೂ ಕತ್ತಲ ಕಳೆವ ದೀಪದಂತೆ, ಹೊಸ ಭರವಸೆಯ ನಗು ಬೀರುವ ಚಂದಿರನಂತೆ ಅರಳುವ ಚಿತ್ರವನ್ನು ಬಗೆ ಬಗೆಯ ಬಣ್ಣಗಳ ಬಂಧನದೊಂದಿಗೆ ಕಟ್ಟಿ ಕೊಟ್ಟಿದ್ದಾರೆ ಸೂತ್ರಧಾರ ಅಹಮ್ಮದ್ ಕಬೀರ್.

‘ಬದುಕು ಬಂದಂತೆ ಸ್ವೀಕರಿಸಿ, ಹೊಂದಿಕೆಯೇ ಬದುಕು’ ಎಂಬುದು ರಾಮೇನಹಳ್ಳಿ ಜಗನ್ನಾಥರ ‘ಹೊಂದಿಸಿ ಬರೆಯಿರಿ’ ಚಿತ್ರದ ಸಾಲುಗಳು. ‘ಮಧುರಂ’ ಮಾತನಾಡುವುದು ಆ ಭಾವದ ಬಗ್ಗೆಯೇ. ಬದುಕು, ಬಂಧಗಳೆಂದರೆ ತಡೆ ರಹಿತ ಹೆದ್ದಾರಿಯಲ್ಲಿ ಸಾಗುವ ಯಾನವಲ್ಲ. ತಿರುವುಗಳು ತಂಡ ಕಟ್ಟಿಕೊಂಡು ಎದುರಾಗುವ ರಸ್ತೆಯ ಮೇಲಿನ ಪಯಣ. ಬಿರುಕು, ಭಿನ್ನಾಭಿಪ್ರಾಯಗಳು ಉಬ್ಬು ತಗ್ಗುಗಳಂತೆ ಎದುರಾದರೂ, ಪ್ರೀತಿಯೇ ಬದುಕಿಗೆ ದೀಪ್ತಿ ಎನ್ನುತ್ತಾ ಸಾಗುತ್ತಿರಬೇಕು, ಹಳೆಯ ಕೆಂಪು ಬಸ್ಸಿನಲ್ಲಿ ಸದಾ ಕಾಣುತ್ತಿದ್ದ ಡಿ ವಿ ಜಿ ಯವರ ಸಾಲುಗಳಂತೆ.
‘ಇರುವ ಭಾಗ್ಯವ ನೆನೆದು ಬಾರೆನೆಂಬುದನ್ನು ಬಿಡು, ಹರುಷಕ್ಕಿದೇ ದಾರಿ’……..