ಅವರ ಮೊದಲ ಸಂಕಲನವು ನಗರ ಜೀವನದಲ್ಲಿ ಸುಲಭವಾಗಿ ಕಂಡುಬರದ ನಿರ್ಮಾಲ್ಯದ ಹಂಬಲವನ್ನು ತೋರಿಸುತ್ತದೆ, ಆದರೆ ಕಾವ್ಯದ ಸ್ವರ ಶಾಂತವಾಗಿದೆ, ಬಹುಶಃ ಹೆಚ್ಚು ವಿರಕ್ತಿಯಿಂದ ಕೂಡಿದೆ. ಬಾಲೋಡ್-ರ ಪ್ರತಿಮೆಗಳು ಇಂದ್ರಿಯಗಳಿಗೆ ಆಕರ್ಷಣೀಯವೆಂದೆನಿಸಿದರೂ, ಕೆಲವೊಮ್ಮೆ ಅರ್ಥಮಾಡಿಕೊಳ್ಳಲು ಕಷ್ಟವಾಗುತ್ತದೆ. ಆಕೆಯ ಕವಿತೆಗಳು ಯಾವುದೇ ಸುಲಭವಾದ ಬೌದ್ಧಿಕ ವಿಶ್ಲೇಷಣೆಯಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳುತ್ತವೆ ಎಂದು ತೋರುತ್ತದೆ, ಆದರೂ ಕವನಗಳ ಅಂತರ್ಗತ ಸಂಗೀತವು ನಿಸ್ಸಂದಿಗ್ಧವಾಗಿದೆ ಮತ್ತು ಬೇಡವೆಂದರೂ ಒಳಗೆ ಸೆಳೆದುಕೊಳ್ಳುತ್ತೆ.
ಎಸ್. ಜಯಶ್ರೀನಿವಾಸ ರಾವ್ ಬರೆಯುವ “ಲೋಕ ಕಾವ್ಯ ವಿಹಾರ” ಸರಣಿಯಲ್ಲಿ ಲ್ಯಾಟ್ವಿಯಾ ದೇಶದ ಕವಿ ಇಂಗ್ಮಾರಾ ಬಲೋಡ್-ರ (Ingmāra Balode) ಕಾವ್ಯದ ಕುರಿತ ಬರಹ ಹಾಗೂ ಅವರ ಕೆಲವು ಅನುವಾದಿತ ಕವಿತೆಗಳು ನಿಮ್ಮ ಓದಿಗೆ
Six Latvian Poets (ಆರು ಲ್ಯಾಟ್ವಿಯನ್ ಕವಿಗಳ ಕವನಗಳ ಇಂಗ್ಲಿಷ್ ಅನುವಾದ ಸಂಕಲನ, 2011) ಸಂಕಲನದ ಸಂಪಾದಕರಾದ ಇಯೆವಾ ಲೆಸಿನ್ಸ್ಕಾ-ರು (Ieva Lešinska) ತಮ್ಮ ಪ್ರಸ್ತಾವನೆಯಲ್ಲಿ ಇಂಗ್ಮಾರಾ ಬಲೋಡ್-ರ ಕಾವ್ಯದ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ: “ಅವರ ಮೊದಲ ಸಂಕಲನವು ನಗರ ಜೀವನದಲ್ಲಿ ಸುಲಭವಾಗಿ ಕಂಡುಬರದ ನಿರ್ಮಾಲ್ಯದ ಹಂಬಲವನ್ನು ತೋರಿಸುತ್ತದೆ, ಆದರೆ ಕಾವ್ಯದ ಸ್ವರ ಶಾಂತವಾಗಿದೆ, ಬಹುಶಃ ಹೆಚ್ಚು ವಿರಕ್ತಿಯಿಂದ ಕೂಡಿದೆ. ಬಾಲೋಡ್-ರ ಪ್ರತಿಮೆಗಳು ಇಂದ್ರಿಯಗಳಿಗೆ ಆಕರ್ಷಣೀಯವೆಂದೆನಿಸಿದರೂ, ಕೆಲವೊಮ್ಮೆ ಅರ್ಥಮಾಡಿಕೊಳ್ಳಲು ಕಷ್ಟವಾಗುತ್ತದೆ. ಆಕೆಯ ಕವಿತೆಗಳು ಯಾವುದೇ ಸುಲಭವಾದ ಬೌದ್ಧಿಕ ವಿಶ್ಲೇಷಣೆಯಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳುತ್ತವೆ ಎಂದು ತೋರುತ್ತದೆ, ಆದರೂ ಕವನಗಳ ಅಂತರ್ಗತ ಸಂಗೀತವು ನಿಸ್ಸಂದಿಗ್ಧವಾಗಿದೆ ಮತ್ತು ಬೇಡವೆಂದರೂ ಒಳಗೆ ಸೆಳೆದುಕೊಳ್ಳುತ್ತೆ. ಕಿಂಚಿತ್ ಕೌಶಲ್ಯದವರ ಕೈಯಲ್ಲಿ ಹಳಸಾದ ಭಾವುಕತೆಯ ಪ್ರತಿಮೆಗಳು ಎಂದೆನಿಸುವ ಪದಗಳು ಮತ್ತು ಪದಗುಚ್ಛಗಳು, ಬಲೋಡ್-ರ ಕವಿತೆಗಳಲ್ಲಿ ತಾಜಾ ಮತ್ತು ಆಶ್ಚರ್ಯಕರವಾಗಿ ಕಾಣುತ್ತದೆ. ಅದೇ ಸಮಯದಲ್ಲಿ, ಅವರು ಆಧುನಿಕತಾವಾದಿ ಮಾದರಿಯಲ್ಲಿ ಕೂಡ ಸಮಾನವಾದ ನಿರಾಳತೆಯನ್ನು ತೋರುತ್ತಾರೆ (ಮಿತಭಾಷೆಯ ಅಭಿವ್ಯಕ್ತಿ, ವಿರಾಮಚಿಹ್ನೆಗಳ ತ್ಯಾಗ, ಅಸಾಮಾನ್ಯ ಪದಗುಚ್ಛ). ಇದು ಇಪ್ಪತ್ತನೇ ಮತ್ತು ಇಪ್ಪತ್ತೊಂದನೇ ಶತಮಾನದ ಕವಿಗಳಾದ ಇ. ಇ. ಕಮಿಂಗ್ಸ್, ಆಡಮ್ ಜ಼ಾಗಯೆವ್‌ಸ್ಕಿ-ಯವರ ಕವನಗಳನ್ನು ಭಾಷಾಂತರಿಸುವಲ್ಲಿ ಅವರ ಅನುಭವದ ಪ್ರಭಾವಗಳನ್ನು ತೋರಿಸುತ್ತದೆ.”
1981-ರಲ್ಲಿ ಜನಿಸಿದ ಲ್ಯಾಟ್ವಿಯಾದ ಕವಿ ಇಂಗ್ಮಾರಾ ಬಲೋಡ್ ರೀಗಾ ಕಾಲೆಜ್ ಫ಼ರ್ ಅಪ್ಲೈಡ್ ಆರ್ಟ್-ನಿಂದ ಶಿಲ್ಪಕಲೆ ಮತ್ತು ಅನ್ವಯಿಕ ಕಲೆಗಳನ್ನು ಕಲಿತರು ಹಾಗೂ ಲ್ಯಾಟ್ವಿಯನ್ ಅಕಾಡೆಮಿ ಆಫ್ ಕಲ್ಚರ್-ನಿಂದ ಪದವಿ ಮತ್ತು ಸ್ನಾತಕೋತ್ತರ ಪದವಿಗಳನ್ನು ಪಡೆದರು.
ಬಲೋಡ್ ಅವರ ಕವನಗಳು, ಕಥೆಗಳು ಮತ್ತು ಲೇಖನಗಳು ಮೊದಲ ಬಾರಿಗೆ 1990-ರ ದಶಕದ ಮಧ್ಯಭಾಗದಲ್ಲಿ ಲ್ಯಾಟ್ವಿಯನ್ ಸಾಂಸ್ಕೃತಿಕ ಪತ್ರಿಕೆಗಳಲ್ಲಿ ಕಾಣಿಸಿಕೊಂಡವು. ಅವರ ಮೊದಲ ಕವನ ಸಂಕಲನ, Ledenes, ar kurām var sagriezt mēli (Hard Candy that Can Cut Your Tongue), 2007-ರಲ್ಲಿ ಪ್ರಕಟವಾಯಿತು ಮತ್ತು ಅತ್ಯುತ್ತಮ ಚೊಚ್ಚಲ ಕೃತಿಗಾಗಿ ವಾರ್ಷಿಕ ಲ್ಯಾಟ್ವಿಯನ್ ಸಾಹಿತ್ಯ ಪ್ರಶಸ್ತಿಯನ್ನು (Annual Latvian Literature Award for the best debut) ಪಡೆಯಿತು. ಬಲೋಡ್ ಅವರ ಕವನಗಳನ್ನು ಜೆಕ್, ಇಂಗ್ಲಿಷ್, ಲಿಥುವೇನಿಯನ್, ಪೋಲಿಷ್ ಮತ್ತು ಯುಕ್ರೇನಿಯನ್ ಭಾಷೆಗಳಿಗೆ ಅನುವಾದಿಸಲಾಗಿದೆ.
ಇಂಗ್ಮಾರಾ ಬಲೋಡ್-ರು ಅನುವಾದಕರಾಗಿರೂ ಹೆಸರು ಪಡೆದಿದ್ದಾರೆ. ಅವರು ಇಂಗ್ಲಿಷ್ ಮತ್ತು ಪೋಲಿಷ್ ಭಾಷೆಗಳಿಂದ ಕಾದಂಬರಿಗಳನ್ನು ಹಾಗೂ ಕವನಗಳನ್ನು ಲ್ಯಾಟ್ವಿಯನ್ ಭಾಷೆಗೆ ಅನುವಾದಿಸಿದ್ದಾರೆ. ಪೋಲಿಷ್ ಬರಹಗಾರರಾದ ಡೊರೊಟಾ ಮಸ್ಲೊವ್ಸ್ಕಾ (Dorota Masłowska) , ಹಾನ್ನಾ ಕ್ರಾಲ್ (Hanna Krall) ಮತ್ತು ಮೈಕೊಲಾಯ್ ಲೊಝಿನ್ಸ್ಕಿ (Mikołaj Łoziński) ಅವರ ಕಾದಂಬರಿಗಳನ್ನು ಮತ್ತು ಖ್ಯಾತ ಪೋಲಿಷ್ ಕವಿ ಆಡಮ್ ಜ಼ಾಗಯೆವ್‌ಸ್ಕಿ (Adam Zagajewski) ಮತ್ತು ಖ್ಯಾತ ಅಮೇರಿಕನ್ ಕವಿ ಇ. ಇ. ಕಮಿಂಗ್ಸ್ (e. e. cummings) ಅವರ ಕವನಗಳನ್ನು ಅನುವಾದಿಸಿದ್ದಾರೆ. ಇವಲ್ಲದೆ ಬಲೋಡ್-ರು ಜೆಕ್, ರಷ್ಯನ್ ಮತ್ತು ಸ್ಲೋವೇಕಿಯನ್ ಭಾಷೆಗಳಿಂದ ಸಹ ಕವನಗಳನ್ನು ಅನುವಾದಿಸಿದ್ದಾರೆ.
2010-ರಲ್ಲಿ, ಪೋಲಿಷ್ ಕವಿ ಆಡಮ್ ಜ಼ಾಗಯೆವ್‌ಸ್ಕಿ ಅವರ ಆಯ್ದ ಕವಿತೆಗಳ ಅನುವಾದ ಸಂಕಲನಕ್ಕಾಗಿ (Svešā skaistumā, In the Alien Beauty) Latvju Teksti (Latvian Writings) ಎಂಬ ಖ್ಯಾತ ಸಾಹಿತ್ಯ ಪತ್ರಿಕೆ ನೀಡುವ ಕವನ ಅನುವಾದ ಬಹುಮಾನವನ್ನು ನೀಡಲಾಯಿತು. 2012-ರಲ್ಲಿ ಅವರು ತಮ್ಮ ಎರಡನೇ ಕವನ ಸಂಕಲನ alba-ಕ್ಕಾಗಿ ವಾರ್ಷಿಕ ಲಟ್ವಿಯನ್ ಸಾಹಿತ್ಯ ಪ್ರಶಸ್ತಿಯನ್ನು ((Annual Latvian Literature Award) ಪಡೆದರು.
ಬಲೋಡ್ ಅವರು ಎರಡನೆಯ ಕವನ ಸಂಕಲನದ (alba) ಬಗ್ಗೆ ಮಾತನಾಡುತ್ತಾ, ಕವಿ ಮೈರಾ ಅಸರೆ (Maira Asare) ಹೀಗೆನ್ನುತ್ತಾರೆ, “ಈ ಸಂಕಲನದಲ್ಲಿ ಕವಿಯ ಕಾವ್ಯಾತ್ಮಕ ಮತ್ತು ಮಾನವ ಅನುಭವಗಳಲ್ಲಿ ಯುರೋಪಿಯನ್ ಸಂಸ್ಕೃತಿಯ ಆಳವಾದ ಪದರಗಳ ಅಸ್ತಿತ್ವದ ಅರಿವಾಗುತ್ತದೆ. ಇದು ಕವಿಯ ಧ್ವನಿ ದುರ್ಬಲ ಮತ್ತು ಅರಕ್ಷಿತ ಎಂದು ಅನಿಸುವ ಸಮಯಗಳಲ್ಲಿ ಕೂಡ ದೃಢತೆ ಮತ್ತು ಸ್ಥಿರತೆಯನ್ನು ಸೇರಿಸುತ್ತದೆ.”
2020-ರಲ್ಲಿ, ಬಲೋಡ್ ಅವರ ಮೂರನೆಯ ಹಾಗೂ ಇತ್ತೀಚಿನ ಕವನ ಸಂಕಲನ Dzejoļi pēc mūsu ēras (Poems after our Era) ಪ್ರಕಟವಾಯಿತು. ಈ ಸಂಕಲನದಲ್ಲಿ ಬಲೋಡ್ ಅವರ ಕಾವ್ಯ ವಿರಾಮದ ಸ್ವರವನ್ನು ಹೊಂದಿದೆ ಹಾಗೂ ನಗರ ಮತ್ತು ಪ್ರಕೃತಿಯ ಸೂಕ್ಷ್ಮವಾದ ಮತ್ತು ಆಸಕ್ತಿಭರಿತ ಅವಲೋಕನವಿದೆ. ಅವರ ಕವನಗಳಲ್ಲಿ ಬರುವ ವಿವಿಧ ಸಾಂಸ್ಕೃತಿಕ ಉಲ್ಲೇಖಗಳು ಎಂದಿಗೂ ಸ್ವಾರ್ಥಸಾಧಕವೆಂದನಿಸುವುದಿಲ್ಲ, ಆದರೆ ನಿರ್ದಿಷ್ಟವಾದ ಅಸ್ತಿತ್ವವಾದದ ಸಮಸ್ಯೆಯನ್ನು ಮತ್ತೂ ಚೆನ್ನಾಗಿ ವ್ಯಕ್ತಪಡಿಸಲು ಮತ್ತು ಸಂದರ್ಭೋಚಿತಗೊಳಿಸಲು ಸಹಾಯ ಮಾಡುತ್ತವೆ.
ವಿಮರ್ಶಕಿ ಆ್ಯನಾ ಮಿಲೇರ್-ರ ಪ್ರಕಾರ, “ಬಲೋಡ್ ಅವರ ಕಾವ್ಯವು ಯಾವುದೇ ಹೊಸದನ್ನು ಬಹಿರಂಗಪಡಿಸದಿರಬಹುದು, ಆದರೆ ಅದು ಅಸ್ತಿತ್ವದಲ್ಲಿರುವ ರೂಪಗಳನ್ನು ಬಹಿರಂಗಪಡಿಸಲು ಮತ್ತು ಅನ್ವೇಷಿಸಲು ಧೈರ್ಯ ಮಾಡುತ್ತದೆ – ಕಾವ್ಯಾತ್ಮಕ ರಚನೆಗಳು ಮತ್ತು ಜಗತ್ತು ಮತ್ತು ಅದನ್ನು ಅನುಭವಿಸುವ ವಿಧಾನಗಳು. ತನ್ನ ಉತ್ಕೃಷ್ಟದಲ್ಲಿ ಬರೆಯುವಾಗ, ಬಲೊಡ್ ಅವರ ಕವನಗಳು ನಮ್ಮ ಕಣ್ಣಮುಂದೆಯೇ ರಚಿತವಾದಂತೆ ನೈಜ ಸಮಯದಲ್ಲಿ ತೆರೆದುಕೊಳ್ಳುತ್ತಿದೆ.”
ನಾನು ಕನ್ನಡಕ್ಕೆ ಅನುವಾದಿಸಿರುವ ಇಲ್ಲಿರುವ ಇಂಗ್ಮಾರಾ ಬಲೋಡ್-ರ ಆರು ಕವನಗಳಲ್ಲಿ ಮೊದಲ ಕವನವನ್ನು ಮಾರ್ಟಾ ಜ಼ಯ್ಮೆಲಿಸ್ (Mārta Ziemelis) ಹಾಗೂ ಉಳಿದ ಐದು ಕವನಗಳನ್ನು ಇಯೆವಾ ಲೆಸಿನ್ಸ್ಕಾ-ರವರು (Ieva Lešinska) ಮೂಲ ಲ್ಯಾಟ್ವಿಯನ್ ಭಾಷೆಯಿಂದ ಇಂಗ್ಲಿಷ್-ಗೆ ಅನುವಾದಿಸಿದ್ದಾರೆ.
1
ಗೋಡೆ
ಮೂಲ: The Wall
ಇಲ್ಲಿ ಬಾ, ಈ ಗೋಡೆಗೆ ಆತುಕೊ.
ನಾ ಕಂಡ ಸ್ವಪ್ನವೊಂದರಲ್ಲಿ
ಒಂದು ಸೈಕಲ್-ನ್ನು ಒರಗಿಸಲಾಗಿತ್ತು
ಇಲ್ಲಿ.
ಒಂದು ಹಳದಿ ಬಣ್ಣದ ನಕ್ಷತ್ರ.
ನೆಲದ ಮೇಲೆ ಎಲೆಯ ಹಾಗೆ.
ಇಲ್ಲಿ ಬಾ, ಆ ರೈಲುಗಾಡಿ ಬರೀ ಒಂದು ಗೆರೆಯ ಹಾಗೆ.
ಬಿರುಸಾಗಿ ನುಗ್ಗುತಿದೆ ರಾತ್ರಿಯ ಒಳಗೆ.
ಮರು ಪಕ್ಕದಲ್ಲಿ,
ಮುಂಜಾನೆಯು ಬಣ್ಣಗಳ ಭರವಸೆ ನೀಡುತ್ತೆ.
ಕಾವಳದ ಪದರೊಂದನ್ನು ನೋಡುತ್ತಿದ್ದೇವೆ ನಾವು.
ಮೇಘ ನಾದಕಾರರು
ನಿಧಾನವಾಗಿ ಕುಸಿಯುತ್ತಿರುವ ಈ ಮನೆಗಳನ್ನು
ನಾದದಿಂದ ಆವರಿಸುತ್ತಿದ್ದಾರೆ.
ಇಲ್ಲಿ ಬಾ, ಈ ಗೋಡೆಗೆ ಆತುಕೊ, ಬಾ ಇಲ್ಲಿ.
ಆ ವಾಂತಿಬರುವ ಅನಿಸಿಕೆ ಹೋಗಿಬಿಡುತ್ತೆ.
ನಿನ್ನ ಹಣೆಯನ್ನು
ಮಳೆಯಂತೆ ಮೆಲ್ಲನೆ
ಕೈಯಿಂದ
ಯಾರೋ ತಡವುತ್ತಿದ್ದಾರೆ
ಅಂತನಿಸುತದೆ.
***
2
ತೆರಪು
ಮೂಲ: Open
ನಿನ್ನೊಳು ಏನೋ ತೆರೆದಿದೆ,
ಹೂವಿಗೆ ಮುಚ್ಚೆಂದು
ಆದೇಶಿಸಲಾಗದ ಹಾಗೆ,
ನಡೆದು ಹೋಗುತ್ತಿರುವ ಬೆಕ್ಕಿಗೆ
ನಿಲ್ಲೆಂದು ಹೇಳಲಾಗದ ಹಾಗೆ.
ಬೇಸಗೆಯ ಕೊನೆಯ ರಾತ್ರಿ
ನಿನ್ನೊಳು ತೆರೆದಿದೆಯೆಂದು ನಿನಗೆ ಗೊತ್ತಾಗದು,
ತಮಗೆ ಏನು ಬೇಕು ಎಂದು ತಿಳಿದವರಂತೆ
ತಾರೆಗಳು ಅದರ ಮೇಲೆ ಹಾರುತ್ತವೆ,
ಹಳದಿಯರಿವೆಯ ಹೆಂಗಸರು ಆಕಾಶಕ್ಕೆ
ಒತ್ತಿಸಿಕೊಳ್ಳುತ್ತಾರೆ,
ಅಂತಿಮ ನಗ್ನತೆಯ ನಂಬಿಕೆಯಲ್ಲಿ
ಪಾದಕ್ಕೆ ಪಾದ ಒತ್ತಿಸಿಕೊಂಡಂತೆ.
ಬರೆದು, ಹರಿದು, ಯಾ ಹಾಡಿ
ಅದನ್ನು ನೀನು ತಳ್ಳಿಹಾಕುವಹಾಗಿಲ್ಲ,
ಆ ಅಗಲ ಹರಡಿರುವ ವೈಶಾಲ್ಯತೆ ಒಡೆಯುತ್ತೆ,
ಆದರೆ ಒಂದು ತೊಟ್ಟು ಕೂಡ ನೆಲಕ್ಕೆ ಬೀಳಲ್ಲ.
ಹೊನ್ನಿನಂತೆ, ಮಣ್ಣಿನಂತೆ
ನಮ್ಮೊಳಗೇ ಹರಿಯುವೆವು ನಾವು,
ದೈತ್ಯರಂತೆ, ದುರ್ಗಗಳಂತೆ
ಬೃಹತ್ ಆಕಾರದವರು ನಾವು,
ಕಾಣದ ಕತ್ತಲಂತೆ
ಓಕ್-ಮರದಲ್ಲಿ ಬಚ್ಚಿಕೊಂಡಿರುವ
ಹಕ್ಕಿ ನಾವು,
ಹಾಗೆಯೇ ನಾಜೂಕೂ ಕೂಡ ನಾವು.
ಆದರೂ ನಮ್ಮೊಳಗೆ
ಎಷ್ಟೊಂದು ಜೀವವಿದೆ.
ಮತ್ತೆ ಹುಟ್ಟುತ್ತಿವೆ ಅವು
ಲಾರ್ಚ್ ಮರದ ಮೇಲೆ ಬಿದ್ದ
ಹಗುರವಾದ ತೆಳ್ಳಗಿರುವ ಹಳದಿ ಕಿರಣಗಳಂತೆ.
***
3
ನಿನ್ನ ಹಿಡಿತುಂಬು ಕನಸುಗಳ ಜತೆ ನನಗೆ ಪ್ರೇಮವಾಗಿದೆ ಅಂದನಿಸುತಿದೆ
ಮೂಲ: I think I fell in love with a handful of your dreams
ನಿನ್ನ ಹಿಡಿತುಂಬು ಕನಸುಗಳ ಜತೆ
ನನಗೆ ಪ್ರೇಮವಾಗಿದೆ ಅಂದನಿಸುತಿದೆ
ಅವು ನನ್ನ ಕನಸುಗಳ ಜತೆ
ಬೆರೆತುಹೋಗಿವೆ ಅಂದನಿಸುತಿದೆ
ಪ್ರತಿ ರಸ್ತೆಯಲ್ಲೂ ನಾವು ಸೈಕಲ್
ಹೊಡೆಯುತ್ತಿದ್ದೇವೆ ಅಂದನಿಸುತಿದೆ
ಹೊಯಿಗೆಯ ಮೇಲೆ ಸಾಷ್ಠಾಂಗ ಮಲಗಿರುವೆವು
ನಿಂಬೆಹಣ್ಣು ಕಿತ್ತುವೆವು
ಸೀಟಿಗಳ ಕೆತ್ತುವೆವು
ಮಲೆ-ನಗರಗಳ ಕಲ್ಲು ರಸ್ತೆಗಳಲ್ಲಿ
ಚಪ್ಪಲಿಗಳ ಸವೆಸುವೆವು
ನಾವು ಬೇರೆಲ್ಲೋ ಹೋಗಿದ್ದೇವೆ ಅಂತನಿಸುತಿದೆ ನನಗೆ
ಬೇಸಿಗೆಕಾಲದ ನಿರಾಳ ನಾಷ್ಟಗಳಿಗಾಗಿ
ಕೆಲವೇ ಕೆಲವು ಬೆರಿ-ಹಣ್ಣುಗಳನ್ನು ಮಾತ್ರ ಉಳಿಸಿಬಿಟ್ಟು
ಚುಂಬಿಸು ನನ್ನನ್ನು ನೀನು ಅಲ್ಲಿ
ದೂರದಲ್ಲಿ
ನಾನಿಲ್ಲಿಂದ ಹೇಳುವೆ
ತುಟಿಗಳನ್ನು ಅಲುಗಾಡಿಸದೇ
ಹಾಗೇ ಚುಂಬಿಸುವೆ ನೀನು ನನ್ನನ್ನು ಅಲ್ಲಿ
ದೂರದಲ್ಲಿ
ತುಟಿಗಳನ್ನು ಅಲುಗಾಡಿಸದೇ
***
4
ಬೀದಿ
ಮೂಲ: Street
ವಸಂತಮಾಸದಲ್ಲಿ ಆ ಬೀದಿಮೂಲೆ
ಪ್ರಕಾಶಮಾನವಾಗಿರುತ್ತಿತ್ತು.
ಕೊನೆಯವರೆಗೂ ಕಾಣಿಸುತ್ತಿದ್ದೆ
ನೀನು ಮೂಲೆವರೆಗೂ ನಡೆದಾಗ,
ಉಕ್ಕುವ ಪ್ರೀತಿಯಿಂದ
ಬಿಗಿದ ಹೊಸ ಮುಖದೊಂದಿಗೆ.
ಈಗ ಆ ಬೀದಿ ನಮಗೆ ಬೆನ್ನು ತಿರುಗಿಸಿದೆ,
ತನ್ನನ್ನು ದಪ್ಪನಾದ ಎಲೆಗಳಿಂದ ಮುಚ್ಚಿಕೊಂಡಿದೆ.
ನೀನು ಬೀದಿಮೂಲೆಯಲ್ಲಿ ತಿರುಗುವೆ,
ನೀರಸವಾಗಿ,
ಬಾಯಿ ನೋಯಿಸುವ ಅಕೇಶಿಯಾ ಸೀಟಿಯ ಸ್ವರದಂತೆ,
ನವೆಂಬರ್ ತಿಂಗಳ ಕೈಗಳನ್ನು ಹಠಾತ್ತಾಗಿ ಹುಟ್ಟಿಸಿಕೊಂಡ
ಜುಲೈ ತಿಂಗಳ ಕತ್ತಲೊಳಗೆ
ಮಾಯವಾಗುವೆ.
***
6
ನಿದ್ರಿಸುತ್ತಿರುವ ಮಗುವಿನಂತೆ ನನ್ನನ್ನು ನಾನು ಕಂಡೆ
ಮೂಲ: I found myself sleeping like a child
ಜಾನ್ ಪಾಲ್ ಬೆಲ್ಮೊಂಡೊ*- ನಂತೆ
ಹೆಬ್ಬೆಟ್ಟನ್ನು ತುಟಿಗೆ ಒತ್ತಿಕೊಂಡು
ನಿದ್ರಿಸುತ್ತಿರುವ ಮಗುವಿನಂತೆ
ನನ್ನನ್ನು ನಾನು ಕಂಡೆ
ಕಿಟಕಿಯ ಹೊರಗೆ
ಏನೂ
ಇರಲಿಲ್ಲ
ಈ ಮಂಜು ಶಹರವನ್ನು ಒಂದು ಸೂಟ್‌ಕೇಸಿನ
ಒಳಗೆ ತುರುಕಿದೆ,
ಇಡೀ ಜಗತ್ತನ್ನು, ನ್ಯೂ ರಿಗಾ ಥಿಯೇಟರ್*-ನ್ನು,
ಗೊಡಾರ್ಡ್*, ಹಾಗೂ ಹರ್ಮಾನಿಸ್*-ರನ್ನೂ ಸೇರಿದಂತೆ,
ಸೂಟ್‌ಕೇಸಿನ ಒಳಗೆ ತುರುಕಿ
ಕೊಂಡೊಯ್ಯುತ್ತೆ ಅಲ್ಲಿಗೆ
ಬೆಳ್ಳನ ತೊರೆಗಳು ಪೊರೆದಿರುವ,
ಮತ್ತೆ ಎಲೆಬಿಡಲು ಹೊಂಚು ಹಾಕುತ್ತಿರುವ
ಆ ಬೋಳುಮರಗಳಿರುವಲ್ಲಿಗೆ.
ಆದರೆ ನನಗೆ ಗೊತ್ತಾಗುತ್ತಿಲ್ಲ
ನಾನು ಹೋಗುತ್ತಿರುವೆನೋ ಬರುತ್ತಿರುವೆನೋ ಎಂದು,
ಸರಿ ದಾರಿಯೆನ್ನುವುದು ಯಾವುದೂ ಇಲ್ಲ,
ನಿರ್ಗಮದ್ವಾರಗಳೆಲ್ಲವನ್ನೂ ಆಗಮದ್ವಾರಗಳನ್ನಾಗಿ
ಬದಲಿಸಲಾಗಿದೆ,
ದ್ವಾರಗಂಬಗಳೆಲ್ಲವೂ ಬೆಳ್ಳಗಾಗಿವೆ ನೋವಿನಂತೆ.
ದ್ವಾರಗಂಬಗಳಿಗೆ ಬೆಳ್ಳನೆಯ ನೋವಿನ ಬಣ್ಣ ಹತ್ತಿದೆ
ನಿನ್ನ ಕನಸಿನಲ್ಲಿ ಯಾರೂ ಬರಲ್ಲ,
ಯಾರೂ ಸೇದಲು ಸಿಗರೇಟೂ ಕೊಡಲ್ಲ.
ಬಹುಶ ಇದೇ ಕೊನೆಯೆಂಬ ಅರಿವು ನಿನ್ನಲ್ಲಿ
ಭಯ ಹುಟ್ಟಿಸುತ್ತೆ
ನಿನ್ನ ಕಿಟಕಿಯಿಂದ ಕಾಣುವುದು
ಅಷ್ಟೇ ಜಗತ್ತಿನ ಹೊರ ಎಲ್ಲೆ
ಅಷ್ಟೊಂದು ಮೌನ
ನಿನಗೆ ಉಸಿರುಗಟ್ಟುತ್ತೆ
ಅಷ್ಟೊಂದು ಶಾಂತಿ
ನೀನು ಖುಷಿಯಿಂದ ಕುಣಿದಾಡಬಹುದು
ಅಷ್ಟೊಂದು ಒಂಟಿತನ
ಶೂನ್ಯದಂತೆ ಅಚಲ
*ಖ್ಯಾತ ಫ್ರೆಂಚ್ ಸಿನಿಮಾ ನಿರ್ದೇಶಕ ಜಾನ್-ಲುಕ್ ಗೊಡಾರ್ಡ್-ನ (Jean-Luc Godard) ಮೊದಲ ಚಲನಚಿತ್ರ ‘ಬ್ರೆತ್ಲೆಸ್’ (Breathless) ನಲ್ಲಿ ನಟ ಜಾನ್ ಪಾಲ್ ಬೆಲ್ಮೊಂಡೊ (Jean Paul Belmondo) ಚಿತ್ರದ ಮೊದಲ ದೃಶ್ಯದಲ್ಲಿ ಹಾಗೂ ಅನಂತರ ಕೂಡ ತನ್ನ ಹೆಬ್ಬೆಟ್ಟನ್ನು ತುಟಿಗಳಿಗೆ ಒತ್ತಿಕೊಳ್ಳುವ ‘ಜೆಶ್ಚರ್’ನ್ನು ಇಲ್ಲಿ ಕವಿ ಇಂಗ್ಮಾರಾ ಬಾಲೋಡ್ ಉಲ್ಲೇಖಿಸಿದ್ದಾರೆ. ನ್ಯೂ ರಿಗಾ ಥಿಯೇಟರ್ (ಈ ಕವನದಲ್ಲಿ ಬರುವ JRT – Jaunais Rigas Teatris) ಹಾಗೂ ಅದರ ಆರ್ಟಿಸ್ಟಿಕ್ ಡೈರೆಕ್ಟರ್ ಅಗಿರುವ ಆಲ್ವಿಸ್ ಹರ್ಮಾನಿಸ್-ರ ಉಲ್ಲೇಖಗಳೂ ಇಲ್ಲಿ ಕಾಣುತ್ತೇವೆ.
***
6
ಒಂದು ಭಿನ್ನವಾದ ಅನುಭವ
ಮೂಲ: Something Different
ಪ್ರೇಮಿಸುವುದೆಂದರೆ,
ಕೊನೆಗೂ, ಒಂದು ಭಿನ್ನವಾದ ಅನುಭವವೇ.
ಒಂದು ಜತೆ ತೋಳುಗಳು ಹಾಗೂ
ಒಂದು ಬೆನ್ನಿನ ಮೇಲೆ ಭರವಸೆ ಇಡುವುದು.
ದೂರತ್ವ, ಅವಧಿ, ಶಾಂತತೆ.
ಎಲ್ಲಾ ಋತುಗಳಲ್ಲೂ
ಪ್ರೇಮವನ್ನು ನೆಮ್ಮದಿಯಿಂದ ಆನಂದದಿಂದ ಪಾಲಿಸುವುದು,
ಪರಿಮಳಿತವಾಗಿ ಅದನ್ನು ಸ್ಪರ್ಶಿಸುವುದು
ಜನ್ನಲಿನ ಹೊರಗಿರುವ ಸೇಬಿನ ಮರವನ್ನು ಸ್ಪರ್ಶಿಸುವಂತೆ.
ಎಲ್ಲಾ ಋತುಗಳಲ್ಲೂ. ಕಹಿಯಾಗಿ, ಉಪ್ಪುಪ್ಪಾಗಿ,
ಸುವಾಸಿತವಾಗಿ, ಪ್ರತಿ ಬೇಸಗೆಯಲ್ಲಿ ಒಮ್ಮೆ ಹಿಂದಿರುಗುವುದು
ನಮಗೆ ನೆನಪುಗಳನ್ನು ಉಡುಗೊರೆಯಾಗಿ ಕೊಡಲು.
ನಿರ್ಮಲವಾಗಿ. ಹಸಿರು ಹುಲ್ಲಿನಲ್ಲಿ.
ಪ್ರೇಮಿಸುವುದೆಂದರೆ ಅದು ಭಿನ್ನವಾದದ್ದು.
ಅಂದರೆ ಧೂಳಿನೊಳಗಿಂದ ನೋಡುವುದು
ಸ್ವಹಾಗಮನಕ್ಕಾಗಿ ಕಾಯುವುದು.
ನಿರ್ಗಮನವೊಂದೇ
ಸೂಕ್ತವಾದ ದಾರಿಯೆಂದನಿಸಿದಾಗ
ಬಿಕ್ಕಿ ಬಿಕ್ಕಿ ಅಳುವುದು,
ಆದರೆ ಭೂಮಿಯಲ್ಲಲ್ಲ.
ಇಲ್ಲಿ ಇರುವುದು ಕಲ್ಲುರಸ್ತೆಗಳು ಮಾತ್ರ.
ಮಗುವೊಂದು ಓಡಾಡುವಾಗ ಎಡವಿ ತನ್ನ
ಕಾಲ್ಬೆರಳುಗಳನ್ನು ಗಾಯಿಸಿಕೊಳ್ಳುತ್ತೆ,
ಉಗುರುಗಳಿಗೆ ಹೂದಳಗನ್ನು ಅಂಟಿಸಿಕೊಳ್ಳುತ್ತೆ,
ರಾಜಕುಮಾರಿಯಂತೆ ನಟಿಸುತ್ತೆ,
ಕಹಿತ್ವ ಹಿಂಜರಿಯುತ್ತಿದೆಯೆಂದು
ಗಂಟೆ ಬಾರಿಸುತ್ತೆ.
ಭಿನ್ನವಾದದ್ದೇ. ಮುಂಜಾವಿನಲ್ಲಿ ಮನೆಗೆ ಹಿಂದಿರುಗುವುದು.
ಬೆಚ್ಚನೆಯ ಜೋಂಪರಿಸುವ ಬೆನ್ನಿಗೆ ಒತ್ತಿಕೊಳ್ಳುವುದು.
ಕಿವಿಗಳಿಗೆ ದೂರದ ಹೈವೆಯ ಶಶಶ-ಶಬ್ಧ ತಾಕುವುದು,
ಜತೆಗೆ ಗೆಳೆಯರ ದನಿಗಳ ಕಿಣಿಕಿಣಿ ಸದ್ದು.
ನಿದ್ದೆಯಿಂದೆದ್ದಾಗ
ಕಾಸುಗಳ ಕಿಣಿಕಿಣಿ ಸದ್ದು ಮಾತ್ರ.
ಶನಿವಾರ ಮಾರ್ನಿಂಗ್-ವಾಕ್ ಹೋಗುವಾಗ
ಈ ಕಾಸು ಕೊಟ್ಟು ಗಟ್ಟಿ ಸಕ್ಕರೆ ಮಿಠಾಯಿ ಕೊಳ್ಳುತ್ತಾನವನು
ಬಣ್ಣ ಬಣ್ಣದ ಪ್ಯಾಕೇಟುಗಳಲ್ಲಿ –
ಅದನ್ನು ತಿನ್ನುತ್ತಾ ನಿನ್ನ ನಾಲಿಗೆ ಕತ್ತರಿಸಿಕೊಳ್ಳಬಹುದು ನೀನು.
ಜಯಶ್ರೀನಿವಾಸ ರಾವ್ ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಗದ್ಯ-ಪದ್ಯಗಳ ಅನುವಾದಕರು. ‘ಚಂದ್ರಮುಖಿಯ ಘಾತವು’ (1900) ಕಾದಂಬರಿಯನ್ನು, ‘ಸ್ಟೀಲ್ ನಿಬ್ಸ್ ಆರ್ ಸ್ಪ್ರೌಟಿಂಗ್: ನ್ಯೂ ದಲಿತ್ ರೈಟಿಂಗ್ ಫ಼್ರಮ್ ಸೌತ್ ಇಂಡಿಯ’ ಸಂಕಲನದಲ್ಲಿ ಕವನಗಳು, ಕತೆಗಳು, ಹಾಗೂ ಪ್ರಬಂಧಗಳನ್ನು, ಹಾಗೂ ಕೇರೂರ ವಾಸುದೇವಾಚಾರ್ಯರ ಸ್ವರಚಿತ ‘ವಿಸ್ಮಯಜನಕವಾದ ಹಿಂಸೆಯ ಕ್ರಮವು’ ಎಂಬ ಶರ್ಲಾಕ್ ಹೋಮ್ಸ್ ಕತೆಯನ್ನು ಇಂಗ್ಲಿಷಿಗೆ ಅನುವಾದ ಮಾಡಿದ್ದಾರೆ. “ಸುರಿದಾವೋ ತಾರೆಗಳು: ಅನುವಾದಿತ ಪೋಲಿಷ್ ಕವನಗಳು” (ಪೋಲೀಷ್ ಕವಿತೆಗಳ ಕನ್ನಡಾನುವಾದಿತ ಸಂಕಲನ). ಇವರು ಇಂಗ್ಲಿಷಿಗೆ ಅನುವಾದ ಮಾಡಿದ ಶ್ರೀ ಕೆ. ವಿ. ತಿರುಮಲೇಶರ ಕವನಗಳು ಇಂಗ್ಲಿಷ್ ಸಾಹಿತ್ಯ ಪತ್ರಿಕೆಗಳಾದ ‘ಸೆಷುರೆ’ ಹಾಗೂ ‘ಮ್ಯೂಜ಼್ ಇಂಡಿಯ’ ದಲ್ಲಿ ಪ್ರಕಟವಾಗಿವೆ. ಹೈದರಾಬಾದಿನ CIEFLನಿಂದ (ಈಗ The EFL University) ‘Translation and Transformation: The Early Days of the Novel in Kannada’ ಶೀರ್ಷಿಕೆಯಡಿಯಲ್ಲಿ ನಡೆಸಿದ ಸಂಶೋಧನೆಗಾಗಿ 2003ರಲ್ಲಿ PhD ಪದವಿ ಪಡೆದಿದ್ದಾರೆ.