ಮಾರೂತಿ ಮುಂಜಾನೆ ನಡು ಊರ ಕಟ್ಟೆ ಕಡೆಗೂ ಬಂದಿಲ್ಲ. ಹೋಟಲ್ ಕಡೆಗೂ ಬಂದಿಲ್ಲ. ಆತನ ಈ ಅನಾಥ ಚಪ್ಪಲಿ ನೋಡಿದಾಗಿನಿಂದ ನನ್ನ ಮನಸ್ಸಿಗೆ ಸಮಾಧಾನವೇ ಇಲ್ಲದಂತಾಗಿದೆ. ಕೆಲಸಕ್ಕೆ ಹೋಗಲೂ ಮನಸ್ಸಾಗುತ್ತಿಲ್ಲ ಅಂತ ಪಂಪಾಪತಿ ಹೇಳಿದಾಗ ಆತನಿಗೋಸ್ಕರ ಇವತ್ತು ನಾವು ಕೆಲಸಾ ಬಿಟ್ಟರೂ ಪರವಾಗಿಲ್ಲ ನಮಗೆ ನಮ್ಮ ಗೆಳೆಯನ ಸುರಕ್ಷತೆ ಮುಖ್ಯ ಅಂತ ದೇವಿಂದ್ರನೂ ದನಿಗೂಡಿಸಿದ. ಇವರ ಮಾತು ರಾಜೇಂದ್ರನಿಗೆ ಯೋಚಿಸುವಂತೆ ಮಾಡಿತು.
ಶರಣಗೌಡ ಬಿ.ಪಾಟೀಲ ತಿಳಗೂಳ ಬರೆದ ಪ್ರಬಂಧ ನಿಮ್ಮ ಓದಿಗೆ
ಮುಂಜಾನೆ ಸಮಯ; ಊರ ಜನ ತಮ್ಮ ಕೆಲಸ ಕಾರ್ಯಗಳಿಗೆ ಹೋಗುವ ಗಡಿಬಿಡಿಯಲ್ಲಿದ್ದರು. ಎಲ್ಲರಂತೆ ಪಂಪಾಪತಿ ಕೂಡ ಸಂಗಡಿಗ ದೇವಿಂದ್ರನ ಜೊತೆ ಹೊಲದ ಕೆಲಸಕ್ಕೆ ಹೋಗುತಿದ್ದ. ಅಚಾನಕ ಆತನ ದೃಷ್ಟಿ ಹಾದಿಬದಿ ಅನಾಥವಾಗಿ ಬಿದ್ದ ಚಪ್ಪಲಿ ಕಡೆ ಹರಿಯಿತು. ಆಗ ಗಕ್ಕನೆ ಅಲ್ಲೇ ನಿಂತು,
“ಅರೇ ಈ ಚಪ್ಪಲಿ ಇಲ್ಯಾಕ ಬಿದ್ದಿದೆ? ಇದು ಮಾರೂತಿಯ ಚಪ್ಪಲಿ” ಅಂತ ಯೋಚಿಸತೊಡಗಿದ.
“ಏನಾಯಿತು ಮಾರಾಯ? ಯಾಕೆ ನಿಂತೆ ಕೆಲಸಕ್ಕೆ ಹೋಗಲು ತಡಾ ಆಗೋದಿಲ್ಲವೇ? ಬೇಗ ಹೋಗಬೇಕು ನಡೀ ಅಂತ ದೇವಿಂದ್ರ ಒತ್ತಾಯಿಸಿದಾಗ,
“ಅಲ್ಲಿ ನೋಡು ಅಂತ ಆ ಚಪ್ಪಲಿ ಕಡೆ ಕೈ ಮಾಡಿ ತೋರಿಸಿದ. ಆಗ ಆತನೂ ಗಾಬರಿಯಾಗಿ “ಇದು ಮಾರೂತಿಯ ಚಪ್ಪಲಿ ಅಲ್ಲವೇ?” ಅಂತ ಕುತೂಹಲದಿಂದ ಪ್ರಶ್ನಿಸಿದ.
“ಹೌದು ಇಂತಹ ಚಪ್ಪಲಿ ಮಾರೂತಿಗೆ ಬಿಟ್ಟು ಮತ್ಯಾರು ಹಾಕೋಳ್ತಾರೆ? ಆತನ ಚಪ್ಪಲಿ ಎಲ್ಲೇ ಇದ್ದರೂ ಗುರುತು ಸಿಗ್ತಾವೆ, ಎಲ್ಲಕ್ಕಿಂತ ಭಿನ್ನವಾಗಿರ್ತಾವೆ” ಅಂತ ಪಂಪಾಪತಿ ವಾಸ್ತವ ನುಡಿದಾಗ “ಇದು ಒಂದೇ ಕಾಣಸ್ತಿದೆ ಇದರ ಜೊತೆಗಿನ ಇನ್ನೊಂದು ಚಪ್ಪಲಿ ಎಲ್ಲಿ ?” ಅಂತ ದೇವಿಂದ್ರ ಮರು ಪ್ರಶ್ನಿಸಿದ.
“ಅಲ್ಲೇ ಎಲ್ಲಿಯಾದರು ಇದ್ದಿರಬೇಕು, ಚಪ್ಪಲಿ ಒಂದು ಬಿಟ್ಟು ಮತ್ತೊಂದಿರಲು ಸಾಧ್ಯವೇ? ಸರಿಯಾಗಿ ಹುಡುಕು” ಅಂತ ಹೇಳಿದಾಗ ದೇವಿಂದ್ರ ಸುತ್ತಲೂ ಕಣ್ಣು ಹಾಯಿಸಿ ನೋಡಿದ ಆದರೆ ಇನ್ನೊಂದು ಚಪ್ಪಲಿ ಎಲ್ಲಿಯೂ ಕಾಣದಿದ್ದಾಗ “ಕಾಣಸ್ತಿಲ್ಲ” ಅಂತ ಜೋರು ದನಿಯಲ್ಲಿ ಹೇಳಿದ.
“ಇದು ಇನ್ನೂ ಹೊಚ್ಚ ಹೊಸದು, ಹಳೆಯದಾಗಿದ್ದರೆ, ಹರಿದು ಹೋಗಿದ್ದರೆ ಮಾರೂತಿ ಬೇಕಂತಲೇ ಎಸೆದಿದ್ದಾನೆ ಅಂತ ತಿಳಿಯಬಹುದು. ಆತ ಮೊನ್ನೆ ಊರ ಜಾತ್ರೆ ಇದ್ದಾಗಲೇ ಹೊಸ ಚಪ್ಪಲಿ ಖರೀದಿಸಿ ತಂದಿದ್ದಾನೆ. ಕಾನ್ಪೂರಿ ಚಪ್ಪಲಿ, ಇವು ಎಲ್ಲಾ ಅಂಗಡಿಯಲ್ಲೂ ಸಿಗೋದಿಲ್ಲ. ಕೆಲವೇ ಕೆಲವು ಅಂಗಡಿಯಲ್ಲಿ ಸಿಗ್ತಾವೆ ಯಾವ ಅಂಗಡಿಯಲ್ಲಿ ಸಿಗ್ತಾವೋ ಅಲ್ಲೇ ಹೋಗಿ ಖರೀದಿಸಿ ತರ್ತಾನೆ. ಇದೊಂದೇ ಅನಾಥವಾಗಿ ಬಿದ್ದಿದೆ ಅಂದ್ರೆ ಏನಂತ ತಿಳಿಯೋದು?” ಅಂತ ಪಂಪಾಪತಿ ಗಂಭೀರವಾಗಿ ಪ್ರಶ್ನಿಸಿದ.
ಇಂತಹ ಚಪ್ಪಲಿನೇ ಯಾಕೆ ಹಾಕೊಳ್ಳತಿ ಅಂತ ನಾನೂ ಒಮ್ಮೆ ಮಾರೂತಿಗೆ ಕೇಳಿದ್ದೆ “ಇವು ಅಸಲೀ ಚರ್ಮದ ಚಪ್ಪಲಿ ಪಾದಗಳಿಗೆ ತಂಪು ಕೊಡ್ತಾವೆ. ಸುಂದರವಾಗಿ ಕಾಣಸ್ತಾವೆ ಎಂದಿದ್ದ” ಅಂತ ದೇವಿಂದ್ರ ನೆನಪಿಸಿದ. ಒಂದೇ ಚಪ್ಪಲಿ ಬಿಟ್ಟು ಆತ ಎಲ್ಲಿಗೆ ಹೋಗಿರಬೇಕು? ಹೊಲದ ಕಡೆ ಹೋದರೆ, ಒಂದೇ ಯಾಕೆ ಬಿಟ್ಟು ಹೋಗ್ತಾನೆ, ಒಮ್ಮೆಯೂ ಈ ರೀತಿ ಮಾಡಿದವನಲ್ಲ. ಚಪ್ಪಲಿ ಅಂದರೆ ಆತನಿಗೆ ಪಂಚಪ್ರಾಣ. ಮೊದಲೇ ಇದು ಬೇಸಿಗೆ ಕಾಲ. ಯಾರಾದರು ಬರೀಗಾಲಲ್ಲಿ ಹೋಗ್ತಾರಾ? ಅಂತ ಪಂಪಾಪತಿ ಪ್ರಶ್ನಿಸಿ ಶೂನ್ಯ ದಿಟ್ಟಿಸಿದ.
“ನಾನೂ ಸುಮಾರು ವರ್ಷಗಳಿಂದ ನೋಡ್ತಾ ಬಂದೀನಿ… ಮಾರೂತಿ ಎಲ್ಲೇ ಕುಳಿತರು ಆತನ ನಿಗಾ ಚಪ್ಪಲಿ ಕಡೆಗೇ ಇರ್ತಾದೆ. ಚಪ್ಪಲಿ ಅಂದ್ರೆ ಅಷ್ಟೊಂದು ಕಾಳಜೀ ಮಾಡ್ತಾನೆ. ಆದರೆ ಯಾಕೆ ಬಿಟ್ಟು ಹೋದ ಅಂತ ನನಗೂ ಗೊತ್ತಾಗ್ತಿಲ್ಲ” ಅಂತ ದೇವಿಂದ್ರನೂ ಯೋಚಿಸಿದ.
ಮಾರೂತಿಯ ಈ ಚಪ್ಪಲಿ ಒಂದೇ ಇದೆ ಅಂದರೆ ಇದರರ್ಥ ಆತನಿಗೆ ಏನೋ ಅಪಾಯವಾಗಿರಬೇಕು ಇಲ್ಲವೇ ಆತ ಯಾವುದೋ ಸಮಸ್ಯೆಗೆ ಸಿಲುಕಿರಬೇಕು ಅಂತ ಪಂಪಾಪತಿ ಮುಖ ಸಪ್ಪಗೆ ಮಾಡಿ ಹೇಳಿದ. ಆಗ ದೇವಿಂದ್ರನಿಗೂ ಗಾಬರಿಯಾಗಿ ಪಂಪಾಪತಿಯ ಮುಖ ನೋಡತೊಡಗಿದ. ಅದೇ ಸಮಯ ಇನ್ನೊಬ್ಬ ಸಂಗಡಿಗ ರಾಜೇಂದ್ರ ಹಾಜರಾಗಿ
“ಮಾರೂತಿ ಎಂದಾದರು ಸಮಸ್ಯೆಗೆ ಸಿಲಕ್ತಾನಾ? ಅವನಷ್ಟು ಬುದ್ಧಿವಂತ ನಮ್ಮೂರಾಗೇ ಯಾರೂ ಇಲ್ಲ. ಅಕ್ಷರ ಜ್ಞಾನ ಕಡಿಮೆ ಇದ್ದರೂ ಆತನಲ್ಲಿ ಲೋಕಜ್ಞಾನ ಹೆಚ್ಚಾಗಿದೆ. ಆತನ ಒಂದು ಚಪ್ಪಲಿ ನೋಡಿ ಇಷ್ಟೆಲ್ಲ ಅನುಮಾನ ಪಡೋದು ಸರಿಯಲ್ಲ. ಮೊದಲೇ ಚರ್ಮದ ಚಪ್ಪಲಿ. ಇದರ ವಾಸನೆಗೆ ಯಾವುದೋ ಬೀದಿ ನಾಯಿ ಬಾಯಲ್ಲಿ ಹಿಡಿದು ತಂದು ಬಿಟ್ಟಿರಬೇಕು ಇದರಲ್ಲೇನು ಅಂಥಹ ವಿಶೇಷತೆಯಿದೆ? ಸುಮ್ಮನೆ ಏನೇನೋ ಯೋಚನೆ ಮಾಡ್ತೀರಲ್ಲ” ಅಂತ ಸಮಜಾಯಿಶಿ ನೀಡಲು ಮುಂದಾದ.
“ನೀನು ಏನೇ ಹೇಳು; ನನಗೆ ಅನುಮಾನ ಬರ್ತಿದೆ. ಆತ ಒಮ್ಮೆಯೂ ಚಪ್ಪಲಿ ಕಳೆದುಕೊಂಡವನಲ್ಲ. ರಾತ್ರಿ ಮಲಗುವಾಗಲೂ ಆತ ಮನೆಯಂಗಳದಲ್ಲಿ ಬಿಡೋದಿಲ್ಲ. ಒಂದು ಸುರಕ್ಷಿತ ಜಾಗದಲ್ಲೇ ಇಟ್ಟಿರುತ್ತಾನೆ. ಯಾವ ಬೀದಿ ನಾಯಿಯ ಬಾಯಿಗೂ ಆತನ ಚಪ್ಪಲಿ ಸಿಗೋದಿಲ್ಲ ಅಂತ ಪಂಪಾಪತಿ ವಾಸ್ತವ ಹೇಳಿ ತನ್ನ ಮಾತು ಸಮರ್ಥಿಕೊಂಡ.
ಮಾರೂತಿ ತನ್ನ ಚಪ್ಪಲಿಗಳಿಗೆ ಆಗಾಗ ಪಾಲೀಶ ಮಾಡಿಸ್ತಾನೆ. ಪೂರ್ತಿ ಒಂದು ವರ್ಷ ಹಾಕಿಕೊಂಡು ಸವೆಸಿದ ನಂತರವೇ ಹೊಸ ಚಪ್ಪಲಿ ತರ್ತಾನೆ. ಮೊನ್ನೆ ಊರ ಜಾತ್ರೆಗೆ ಬಟ್ಟೆಯ ಜೊತೆ ಚಪ್ಪಲಿಯೂ ತಂದಿದ್ದಾನೆ ಅಂತ ದೇವಿಂದ್ರ ನೆನಪಿಸಿದ.
ಮಾರೂತಿ ಮುಂಜಾನೆ ನಡು ಊರ ಕಟ್ಟೆ ಕಡೆಗೂ ಬಂದಿಲ್ಲ. ಹೋಟಲ್ ಕಡೆಗೂ ಬಂದಿಲ್ಲ. ಆತನ ಈ ಅನಾಥ ಚಪ್ಪಲಿ ನೋಡಿದಾಗಿನಿಂದ ನನ್ನ ಮನಸ್ಸಿಗೆ ಸಮಾಧಾನವೇ ಇಲ್ಲದಂತಾಗಿದೆ. ಕೆಲಸಕ್ಕೆ ಹೋಗಲೂ ಮನಸ್ಸಾಗುತ್ತಿಲ್ಲ ಅಂತ ಪಂಪಾಪತಿ ಹೇಳಿದಾಗ ಆತನಿಗೋಸ್ಕರ ಇವತ್ತು ನಾವು ಕೆಲಸಾ ಬಿಟ್ಟರೂ ಪರವಾಗಿಲ್ಲ ನಮಗೆ ನಮ್ಮ ಗೆಳೆಯನ ಸುರಕ್ಷತೆ ಮುಖ್ಯ ಅಂತ ದೇವಿಂದ್ರನೂ ದನಿಗೂಡಿಸಿದ. ಇವರ ಮಾತು ರಾಜೇಂದ್ರನಿಗೆ ಯೋಚಿಸುವಂತೆ ಮಾಡಿತು.
ದಾರಿಗೆ ಹೋಗಿ ಬರುವವರಿಗೂ ಈ ವಿಷಯ ಗೊತ್ತಾಗಿ ಅವರೆಲ್ಲ ಜಮಾಯಿಸಿದರು. ಆ ಚಪ್ಪಲಿ ಕಡೆ ನೋಡುತ್ತಾ ಆತಂಕ, ಅನುಮಾನ ಹೊರ ಹಾಕತೊಡಗಿದರು.
“ಈ ಚಪ್ಪಲಿಯ ಬಗ್ಗೆ ಸಂಶಯ ನಿವಾರಣೆ ಆಗ್ಬೇಕಾದರೆ ಮೊದಲು ಮಾರೂತಿಯ ಮನೆಗೆ ಹೋಗಿ ವಿಚಾರಿಸಬೇಕು ಆಗ ಎಲ್ಲಾ ವಿಷಯ ತಾನೇ ಗೊತ್ತಾಗ್ತದೆ. ಸುಮ್ಮನೆ ಹಾದಿ ಮೇಲೆ ನಿಂತು ಚರ್ಚೆ ಮಾಡಿದರೆ ಯಾವದೂ ಗೊತ್ತಾಗೋದಿಲ್ಲ” ಅಂತ ಕೆಲವರು ಸಲಹೆ ನೀಡಿದರು. ಆಗ ಪಂಪಾಪತಿ ನೇರವಾಗಿ ಮಾರೂತಿಯ ಮನೆಗೆ ಬಂದು ನೋಡಿದ, ಆದರೆ ಆತನ ಮನೆಯಲ್ಲಿ ಯಾರೂ ಇರಲಿಲ್ಲ ಹೊರಗೀಲಿ ಹಾಕಲಾಗಿತ್ತು. ಅಕ್ಕ ಪಕ್ಕದ ಮನೆಯಲ್ಲೂ ಯಾರೂ ಕಾಣಲಿಲ್ಲ. ಇದೇನಿದು ಮನೆಯಲ್ಲಿ ಯಾರೂ ಇಲ್ಲ. ಬಹುಶಃ ಏನೋ ಅಪಾಯವಾಗಿದೆ ಅಂತ ಸಂಶಯ ಬಲವಾಯಿತು. ಆದರೆ ಯಾವುದೇ ಖಚಿತ ಮಾಹಿತಿ ಗೊತ್ತಾಗಲಿಲ್ಲ. ಬಂದ ದಾರಿಗೆ ಸುಂಕವಿಲ್ಲದೆ ವಾಪಸ್ಸಾಗಿ ಇಡೀ ದಿನ ಸಂಗಡಿಗರ ಜೊತೆ ಯೋಚನೆಯಲ್ಲಿ ಮುಳುಗಿದ.
ಆ ಊರು ಸಣ್ಣದಾದರು ಜನ ಪರಸ್ಪರ ಪ್ರೀತಿ ವಿಶ್ವಾಸದಿಂದ ಬದುಕುತಿದ್ದರು. ಯಾವುದೇ ಶುಭ ಅಶುಭ ಕಾರ್ಯವಿದ್ದರೂ ತಮ್ಮ ವೈಯಕ್ತಿಕ ಕೆಲಸ ಬದಿಗಿಟ್ಟು ಸಹಕಾರ ತೋರುತಿದ್ದರು. ಸಾಮಾಜಿಕ ಧಾರ್ಮಿಕ ಯಾವುದೇ ಕಾರ್ಯವಿದ್ದರೂ ಮಾರೂತಿ ಎಲ್ಲರಿಗಿಂತ ಮೊದಲೇ ಹಾಜರಾಗಿ ಸಹಾಯ ಸಹಕಾರ ನೀಡುತ್ತಿದ್ದ. ಆತನ ಸೇವಾ ಮನೋಭಾವ ನೋಡಿ “ಹತ್ತು ಜನರ ಕೆಲಸಾ ಮಾರೂತಿ ಒಬ್ಬನೇ ಮಾಡ್ತಾನೆ” ಅಂತ ಅನೇಕರು ಆಗಾಗ ಮಾರೂತಿಯ ಗುಣಗಾನ ಮಾಡುತಿದ್ದರು. ಅವನಿಗೆ ಹಿರಿಯರಿಂದ ಬಂದ ಜಮೀನು ಕೂಡ ಇತ್ತು. ಅದರಲ್ಲೇ ಕಷ್ಟ ಪಟ್ಟು ಕೆಲಸ ಮಾಡಿ ದವಸ ಧಾನ್ಯ ಬೆಳೆದು ಕೈತುಂಬ ಆದಾಯ ಪಡೆಯುತ್ತಿದ್ದ. ಚಿಕ್ಕ ಚೊಕ್ಕ ಕುಟುಂಬ. ದೊಡ್ಡ ಮಗಳ ಮದುವೆ ಮಾಡಿಕೊಟ್ಟಿದ್ದ. ಸಣ್ಣ ಮಗ ಯಶವಂತನಿಗೆ ಸರಿಯಾಗಿ ಓದಿಸಿದ್ದ. ಆತ ಪದವಿ ಮುಗಿಸಿದ ನಂತರ ನೌಕರಿ ಸಿಗುವ ತನಕ ಬೇರೆ ಕಡೆ ಕೆಲಸ ಮಾಡೋದು ಬೇಡ; ನಮ್ಮ ಹೊಲದಲ್ಲೇ ಕೆಲಸಾ ಮಾಡಿದರೆ ಅಪ್ಪನಿಗೂ ಸಹಾಯ ಮಾಡಿದಂತಾಗುತ್ತದೆ ಅಂತ ಊರಿಗೆ ವಾಪಸ್ಸಾಗಿ ಅಪ್ಪನ ಕೆಲಸ ತಾನೇ ಮಾಡತೊಡಗಿದ. ಮಗ ಕೆಲಸಾ ಮಾಡಲು ಶುರು ಮಾಡಿದ ಮೇಲೆ ಮಾರೂತಿಗೂ ಬಿಡುವು ಸಿಕ್ಕಂತಾಯಿತು. ನನ್ನ ಮಗ ನನಗಿಂತ ಛೊಲೋ ಕೆಲಸಾ ಮಾಡ್ತಾನೆ. ಸಧ್ಯ ಯಾವ ಚಿಂತೆಯೂ ಇಲ್ಲ ಅಂತ ಎಲ್ಲರ ಮುಂದೆ ಹೇಳಿ ಖುಷಿಪಡುತಿದ್ದ. ಸರೋಜಮ್ಮ ಕೂಡ ಮಾರೂತಿಗೆ ತಕ್ಕ ಹೆಂಡತಿಯಾಗಿದ್ದಳು. ಅವಳು ಮುಂಜಾನೆ ಮನೆಗೆಲಸ ಮುಗಿಸಿ ಹೊಲದ ಕಡೆ ಹೋಗುತಿದ್ದಳು. ಗಂಡ ಮಕ್ಕಳು ಮನೆ ಸಂಸಾರ ಅಂತ ಸದಾ ಕಾಳಜಿ ತೋರುತಿದ್ದಳು. ಅವಳ ಕೆಲಸ ಕಾರ್ಯ ನೋಡಿ ಊರು ಕೇರಿ ಅಕ್ಕ ಪಕ್ಕದವರೆಲ್ಲ ತಾರೀಫ ಮಾಡುತಿದ್ದರು.
“ನಾನೂ ಸುಮಾರು ವರ್ಷಗಳಿಂದ ನೋಡ್ತಾ ಬಂದೀನಿ… ಮಾರೂತಿ ಎಲ್ಲೇ ಕುಳಿತರು ಆತನ ನಿಗಾ ಚಪ್ಪಲಿ ಕಡೆಗೇ ಇರ್ತಾದೆ. ಚಪ್ಪಲಿ ಅಂದ್ರೆ ಅಷ್ಟೊಂದು ಕಾಳಜೀ ಮಾಡ್ತಾನೆ. ಆದರೆ ಯಾಕೆ ಬಿಟ್ಟು ಹೋದ ಅಂತ ನನಗೂ ಗೊತ್ತಾಗ್ತಿಲ್ಲ” ಅಂತ ದೇವಿಂದ್ರನೂ ಯೋಚಿಸಿದ.
ಮಾರೂತಿ ಮುಂಜಾನೆ ಊಟ ಮುಗಿಸಿ, ಇಸ್ತ್ರಿ ಮಾಡಿದ ಖಡಕ್ ಬಟ್ಟೆ ತೊಟ್ಟು ಹೆಗಲ ಮೇಲೆ ಶಲ್ಯ ಹಾಕೊಂಡು ಧೊತರ ಚುಂಗು ಕೈಯಲ್ಲಿ ಹಿಡಿದು ಮನೆಯಿಂದ ಹೊರಡುತ್ತಿದ್ದ. ಆತನ ಚಪ್ಪಲಿಯ ಸದ್ದು ಕೇಳಿ ಮಾರೂತಿ ಬರ್ತಿದ್ದಾನೆ ಅಂತ ಆತನಿಗೆ ನೋಡದೆಯೂ ಜನ ಗುರುತಿಸುತ್ತಿದ್ದರು.
ಹೋಟಲ್ ಕಿರಾಣಿ ಅಂಗಡಿ ಗುಡಿ ಗುಂಡಾರದ ಮುಂದೆ ಕುಳಿತವರಿಗೆ ಮಾರೂತಿ ಮಾತಾಡಿಸಿಯೇ ಮುಂದೆ ಸಾಗುತಿದ್ದ. ನೇರವಾಗಿ ನಡು ಊರ ಕಟ್ಟೆಗೆ ಬಂದು ಕೂಡುತಿದ್ದ. ಅಲ್ಲಿ ಸಮವಯಸ್ಸಿನ ಗೆಳೆಯರು ಬಂದು ಸೇರುತಿದ್ದರು. ಅವರೆಲ್ಲ ಇವನ ಮಾತು ಕೇಳಲು ಉತ್ಸುಕರಾಗುತ್ತಿದ್ದರು.
ಊರಲ್ಲಿ ಮದುವೆ, ನೆಂಟಸ್ಥನ ಮತ್ತಿತರ ಯಾವುದೇ ಕಾರ್ಯವಿದ್ದರೂ ಮಾರೂತಿಗೆ ಬಿಟ್ಟು ಯಾರೂ ಯಾವದೂ ಮಾಡುತ್ತಿರಲಿಲ್ಲ. ಊರಿಗೆ ಬೀಗರು ನೆಂಟರು, ಬಂದರೂ ಮೊದಲು ಮಾರೂತಿಗೇ ಕೇಳುತಿದ್ದರು. ಅವರು ಬಂದಿದ್ದು ಗೊತ್ತಾದರೆ ಸಾಕು ಮಾರೂತಿ ತಕ್ಷಣ ಅವರ ಬಳಿ ಬಂದು ಅವರಿಗೆ ಮನೆಗೆ ಕರೆದುಕೊಂಡ ಹೋಗಿ ಚಹಾ ಕುಡಿಸಿ, ಕುಶಲೋಪರಿ ವಿಚಾರಿಸಿಯೇ ಕಳಿಸುತಿದ್ದ.
ಸಣ್ಣವರಿರಲಿ ದೊಡ್ಡವರಿರಲಿ ಎಲ್ಲರ ಜೊತೆ ಮಾರೂತಿ ನಗುನಗುತ್ತಲೇ ಮಾತಾಡುತಿದ್ದ. ಇವನು ಒಂದಿನ ಕಾಣದಿದ್ದರೆ ಅನೇಕರು ಒಂದೇ ಸವನೆ ಚಡಪಡಿಸಿ ಮಾರೂತಿ ನಮ್ಮ ಜೊತೆಗಿದ್ದರೆ ಹೊತ್ತು ಹೋದದ್ದೇ ಗೊತ್ತಾಗೋದಿಲ್ಲ ಅಂತ ಹೇಳುತಿದ್ದರು.
ಮಾರೂತಿ ಉದಾರಿಯೂ ಆಗಿದ್ದ. ಕೈ ಖರ್ಚು ಮಾಡಿಕೊಳ್ಳಲು ಹಿಂದೆ ಮುಂದೆ ನೋಡುವವನಲ್ಲ. ಹೋಟಲಿನಲ್ಲಿ ಚಹಾ ಕುಡಿಯಲು ಕುಳಿತರೆ ಸಾಕು ಅಕ್ಕ ಪಕ್ಕ ಕುಳಿತವರಿಗೂ ಚಹಾ ಕೊಡಿಸಿ ತಾನೇ ಬಿಲ್ ಚುಕ್ತಾ ಮಾಡುತಿದ್ದ. ಹಣದ ಅಡಚಣೆ ಇದ್ದವರು ಇವನ ಹತ್ತಿರ ಬಂದು ಸಹಾಯ ಕೇಳುತಿದ್ದರು. ಆಗ ತನ್ನ ಕೈಲಾದ ಸಹಾಯ ಮಾಡುತ್ತಿದ್ದ. ಮಾರೂತಿ ಯಾವಾಗಲೂ ಹಾಸ್ಯ ವಿನೋದ ಮಾಡುತ್ತಾ ಎಲ್ಲರ ಜೊತೆ ಖುಷಿ ಖುಷಿಯಾಗಿ ಕಾಲ ಕಳೆಯುತಿದ್ದ.
ಸಧ್ಯ ಮಾರೂತಿ ಕಾಣದೇ ಇರುವದು ಆತನ ಒಂದು ಚಪ್ಪಲಿ ಹಾದಿ ಬದಿ ಅನಾಥವಾಗಿ ಬಿದ್ದಿದ್ದು ಇಡೀ ಊರಿಗೇ ಗಾಬರಿಗೊಳಿಸಿತು. ಯಾರಿಗೂ ಸಮಾಧಾನವೇ ಇಲ್ಲದಂತಾಯಿತು. ಪೋಲೀಸ್ ಕಂಪ್ಲೇಂಟ್ ಕೊಡಬೇಕು ಅಂತ ಕೆಲವರು ಸೂಚಿಸಿದರೆ ಇಲ್ಲ ಇವತ್ತು ಸಾಯಂಕಾಲದವರೆಗೆ ನೋಡೋಣ, ಆತ ಬರದಿದ್ದರೆ ನಾಳೆ ಕಂಪ್ಲೇಂಟ್ ಕೊಡೋಣ ಅಂತ ಇನ್ನೂ ಕೆಲವರು ಸಲಹೆ ನೀಡಿದರು. ಆತನ ದಾರಿ ಕಾಯುತ್ತಾ ಅನೇಕರು ಯೋಚನೆಯಲ್ಲಿ ಮುಳುಗಿದರು.
ಸಾಯಂಕಾಲ ಏಳುಗಂಟೆ ಸುಮಾರಿಗೆ ಮಾರೂತಿ ಬಸ್ ಇಳಿದು ಊರಿನ ಮುಖ್ಯ ರಸ್ತೆ ಸೀಳಿಕೊಂಡು ಮನೆ ಕಡೆ ಬರುತಿದ್ದ. ಹೊಟೆಲ್ ಕಿರಾಣಿ ಅಂಗಡಿ ಗುಡಿಗುಂಡಾರದ ಮುಂದೆ ಕುಳಿತವರು ಗಾಬರಿಯಾಗಿ ಒಮ್ಮಲೇ ಎದ್ದು ನಿಂತು ಮಾರೂತಿಯ ಕಡೆ ಕುತೂಹಲದಿಂದ ನೋಡಿ ತಮ್ಮ ತಮ್ಮಲ್ಲೇ ಗುಸುಗುಸು ಚರ್ಚೆ ಆರಂಭಿಸಿದರು.
ಮನೆಗೆ ಹೋಗುತಿದ್ದವನಿಗೆ ಪಂಪಾಪತಿ ತಡೆದು ನಿಲ್ಲಿಸಿ,
“ನಾವೆಲ್ಲ ನಿನ್ನ ಸಲುವಾಗಿ ಎಷ್ಟು ಗಾಬರಿಯಾಗಿದ್ದೇವು ಗೊತ್ತಾ? ಊರಿಗೆ ಹೋಗೋದಿದ್ದರೆ ಒಂದು ಮಾತು ಹೇಳಿ ಹೋಗಬೇಕಿತ್ತು. ನಾವೇನು ನಿನ್ನ ಜೊತೆ ಬರ್ತಿದ್ದೆವಾ?” ಅಂತ ಕೋಪಗೊಂಡು ಜೋರು ದನಿಯಲ್ಲಿ ಪ್ರಶ್ನಿಸಿದ. ಆಗ ಮಾರೂತಿ ಗಲಿಬಿಲಿಗೊಂಡು ಆತನ ಮುಖ ಪ್ರಶ್ನಾರ್ಥಕವಾಗಿ ನೋಡತೊಡಗಿದ.
“ನೀನು ಚಪ್ಪಲಿ ಹಾದಿಯಲ್ಲಿ ಬಿಟ್ಟು ಹೋಗಿದ್ದು ನಮಗೆಲ್ಲ ಅನುಮಾನಕ್ಕೆ ಕಾರಣವಾಯಿತು. ನಿನಗೇನೋ ಅನಾಹುತವಾಗಿದೆ ಅಂತ ಗಾಬರಿಯಾಗಿದ್ದೆವು” ಅಂತ ದೇವಿಂದ್ರನೂ ದನಿಗೂಡಿಸಿದ. ಆಗ ಮಾರೂತಿ ಸ್ವಲ್ಪ ಸುಧಾರಿಸಿಕೊಂಡು,
“ನಾನು ಮುಂಜಾನೆ ಹೊಲದ ಕಡೆ ಹೋಗುವಾಗ ಪಕ್ಕದೂರಿನ ಜನ ದೇವರಿಗೆ ಪಾದಯಾತ್ರೆ ಹೊರಟಿದ್ದರು. ಅವರ ಜೊತೆ ನಾನೂ ಹೋಗಬೇಕು, ಮನೆಯಲ್ಲಿ ನನ್ನ ಹೆಂಡತಿ ಮಗ ಇಬ್ಬರೂ ಊರಿಗೆ ಹೋಗಿದ್ದಾರೆ, ನಾನೊಬ್ಬನೇ ಇದ್ದು ಏನು ಮಾಡೋದು ಅಂತ ಅವರ ಜೊತೆ ಹೋಗಲು ನಿರ್ಧರಿಸಿದೆ. ಯಾವ ಪಾದಯಾತ್ರಿಗಳ ಕಾಲಲ್ಲೂ ಚಪ್ಪಲಿ ಇರಲಿಲ್ಲ. ಅವರೆಲ್ಲ ಬರಿಗಾಲಲ್ಲೇ ಹೋಗುತಿದ್ದರು. ಅವರ ಜೊತೆ ನಾನೊಬ್ಬನೇ ಚಪ್ಪಲಿ ಹಾಕೊಂಡು ಹೋದರೆ ಸರಿ
ಇರೋದಿಲ್ಲ. ಪಾದಯಾತ್ರೆ ಮುಗಿಸಿ ವಾಪಸ್ ಬಂದ ಮೇಲೆ ಪುನಃ ಹಾಕಿಕೊಂಡರಾಯಿತು ಅಂತ ಒಂದು ಕಡೆ ಮುಚ್ಚಿಟ್ಟು ಹೋಗಿದ್ದೆ” ಅಂತ ಹಕೀಕತ ಬಿಚ್ಚಿಟ್ಟ. ಮಾರೂತಿಯ ಮಾತು ಎಲ್ಲರಿಗೂ ಆಶ್ಚರ್ಯ ಮೂಡಿಸಿತು.
“ನೀನು ಮುಚ್ಚಿಟ್ಟು ಹೋದ ಚಪ್ಪಲಿಗಳಲ್ಲಿ ಒಂದು ಚಪ್ಪಲಿ ಹೇಗೋ ಹಾದಿಬದಿ ಬಿದ್ದು ಇಷ್ಟೆಲ್ಲ ಗೊಂದಲ ಗಾಬರಿಗೆ ಕಾರಣವಾಯಿತು. ಒಟ್ಟಾರೆ ನೀನು ಸುರಕ್ಷಿತವಾಗಿದ್ದಿಯಲ್ಲ ಅಷ್ಟೇ ಸಾಕು” ಅಂತ ಜನ ಪರಸ್ಪರ ನಿಟ್ಟುಸಿರುಬಿಟ್ಟರು. ವಿಷಯ ಮಾರೂತಿಗೂ ಆಶ್ಚರ್ಯ ಮೂಡಿಸಿತು. ಮುಗುಳ್ನಗು ಬೀರುತ್ತಾ ಮನೆ ಕಡೆ ಹೆಜ್ಜೆಹಾಕಿದ!