ನಾನೂ ಹೊರಡಲು ಸಿದ್ಧಳಾದಾಗ ನನ್ನ ಕೈಯನ್ನು ಮೃದುವಾಗಿ ಹಿಡಿದುಕೊಂಡ. ಪುಟ್ಟ ಹಸುಳೆ ತನ್ನ ತಾಯಿಯ ಬೆರಳು ಹಿಡಿದಂತ ಅನುಭವವಾಯಿತು. ನಾನು ಮುಖ್ಯ ಶಿಕ್ಷಕರನ್ನು ಸರ್, ನನಗೇಕೋ ಬರಲು ಮನಸ್ಸಿಲ್ಲ. ನೀವೆಲ್ಲ ಹೋಗಿ ಬನ್ನಿ ನಾನು ಸಂಜೆವರೆಗೂ ಇಲ್ಲೇ ಇವನೊಂದಿಗೆ ಇದ್ದು ಮನೆಗೆ ಹೋಗುವೆ ಎಂದೆ. ಶಿಕ್ಷಕರು ಆಗಲ್ಲ ಮೇಡಂ. ಹೆಣ್ಣು ಮಕ್ಕಳು ಪ್ರವಾಸ ಬರುತ್ತಿರುವುದರಿಂದ ಮಹಿಳಾ ಶಿಕ್ಷಕಿ ಬರಲೇಬೇಕು ಇಲ್ಲದಿದ್ದರೆ ಪೋಷಕರ ಪ್ರಶ್ನೆಗಳಿಗೆ ನಾನು ಉತ್ತರಿಸಬೇಕಾಗುತ್ತದೆ. ನಾವೆಲ್ಲ ಬೇರೆಯವರ ಬಾಯಿಗೆ ಎಲೆ ಅಡಿಕೆ ಆಗುವುದು ಬೇಡ. ಜೊತೆಗೆ ಜವಾಬ್ದಾರಿಯು ಅಷ್ಟೇ ಇದೆ… ಬನ್ನಿ ಅವನು ಹುಷಾರಾಗುತ್ತಾನೆ ಎನ್ನುತ್ತಾ ಹೊರ ನಡೆದರು.
ಅನುಸೂಯ ಯತೀಶ್ “ಬೆಳೆಯುವ ಮೊಳಕೆ” ಸರಣಿ ನಿಮ್ಮ ಓದಿಗೆ

ಮಾರನೇ ದಿನ ಬೆಳಗಿನ ಜಾವ ಐದು ಗಂಟೆಗೆ ಸರಿಯಾಗಿ ಪ್ರವಾಸ ಹೊರಡಬೇಕಿತ್ತು. ಶೈಕ್ಷಣಿಕ ಪ್ರವಾಸಕ್ಕೆ ಬುಕ್ ಮಾಡಲಾಗಿದ್ದ ಸರ್ಕಾರಿ ಬಸ್ಸು ಆಗಲೇ ಬಂದು ವಿದ್ಯಾರ್ಥಿಗಳನ್ನು ತುಂಬಿಕೊಳ್ಳಲು ಕಾಯುತ್ತಿತ್ತು. ಅದೇ ಊರಿನ ಮಕ್ಕಳನ್ನು ಅಂದು ಬೆಳಗಿನ ಜಾವ ಬಸ್ ಹೊರಡುವ ಮುನ್ನ ಶಾಲೆಗೆ ಕರೆತರಬೇಕೆಂದು ಶೈಕ್ಷಣಿಕ ಪ್ರವಾಸ ಕುರಿತಂತೆ ನಡೆಸಿದ ಎಸ್ ಡಿ ಎಂ ಸಿ ಸಭೆಯಲ್ಲಿ ಚರ್ಚಿಸಲಾಗಿತ್ತು. ಇನ್ನು ಅಕ್ಕಪಕ್ಕದ ಊರುಗಳಿಂದ ಬರುವ ಮಕ್ಕಳನ್ನು ಹಿಂದಿನ ದಿನ ರಾತ್ರಿ ಶಾಲೆಗೆ ಕರೆಸಿಕೊಂಡು ರಾತ್ರಿ ಊಟದ ವ್ಯವಸ್ಥೆಯನ್ನು ಮಾಡಲಾಗಿತ್ತು. ಶಾಲೆಯಲ್ಲಿ ಉಳಿದುಕೊಳ್ಳಲು ಎಲ್ಲ ಅನುಕೂಲಗಳನ್ನು ಕಲ್ಪಿಸಲಾಗಿತ್ತು‌. ಅದು ಎಚ್‌ಪಿಎಸ್ ಶಾಲೆಯಾಗಿದ್ದರಿಂದ ಹಿರಿಯ ತರಗತಿಯ ಹೆಣ್ಣು ಮಕ್ಕಳು ಇರುವುದರಿಂದ ಮಹಿಳಾ ಶಿಕ್ಷಕಿಯರು ಹಿಂದಿನ ದಿನವೇ ಶಾಲೆಯಲ್ಲಿ ಹೆಣ್ಣು ಮಕ್ಕಳೊಂದಿಗೆ ತಂಗಬೇಕೆಂದು ಮುಖ್ಯ ಶಿಕ್ಷಕರ ಹುಕುಂ ಜಾರಿಯಾಗಿತ್ತು. ಮಕ್ಕಳ ಜೊತೆ ಬೋಧನೇತರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವ ಅವಕಾಶವನ್ನು ನಾನೆಂದು ಮಿಸ್ ಮಾಡಿಕೊಳ್ಳಲಾರೆ. ಹಾಗಾಗಿ ಹಿಂದಿನ ರಾತ್ರಿ ನಾನು ಶಾಲೆಯಲ್ಲಿ ಉಳಿದುಕೊಂಡು ತಡರಾತ್ರಿಯವರೆಗೂ ಮಕ್ಕಳೊಂದಿಗೆ ಹರಟೆ ಹೊಡೆಯುತ್ತಾ ಒಂದಷ್ಟು ನಕ್ಕು ನಲಿದೆವು. ಮೊಬೈಲ್ ಅಲಾರಂ ಇಟ್ಟುಕೊಂಡು ಬೇಗನೆ ಏಳಲು ಆಗಿನ್ನು ಮೊಬೈಲ್‌ಗಳ ಕಾರು ಬಾರು ಅಷ್ಟೊಂದು ಇರಲಿಲ್ಲ.

ತಡವಾಗಿ ಮಲಗಿದ್ದರಿಂದ ಬೆಳಗಿನ ಜಾವ ತಣ್ಣನೆಯ ಗಾಳಿಯ ಜೋಗುಳಕ್ಕೆ ನಿದ್ರಾದೇವಿ‌ ಎಲ್ಲಿಲ್ಲದಂತೆ ನಮ್ಮನ್ನೆಲ್ಲ ಆವರಿಸಿಬಿಟ್ಟಿದ್ದಳು. ಮುಖ್ಯ ಶಿಕ್ಷಕರು ತುಂಬಾ ಶಿಸ್ತು ಹಾಗೂ ಜವಾಬ್ದಾರಿಯುತ ವ್ಯಕ್ತಿ. ನಾವೆಲ್ಲ ಮರೆತು ಮಲಗಿದ್ದೇವೆ ಎಂದು ಅರಿತು ಅವರು ದಡಬಡನೆ ಧಾವಿಸಿ ಬಂದು ಬಾಗಿಲು ಬಡಿಯುತ್ತಾ “ರೀ ಮೇಡಂ, ಏಳ್ರಿ…. ಇದು ನಿಮ್ಮ ಮನೆಯಲ್ಲ. ಇಲ್ಲಿ ನಿಮ್ಮ ಅತ್ತೆ ಶಾರದಮ್ಮ ಇಲ್ಲ. ತಿಂಡಿ ಕಾಫಿ ಮಾಡಿ ನಿಮ್ಮನೆಬ್ಬಿಸಲು” ಎಂದು ಕೂಗುತ್ತಾ ಬೇಗ ಸಿದ್ಧರಾಗಲು ತಿಳಿಸಿ ಹೊರಟರು.

ಪ್ರವಾಸ ಹೊರಡುವ ಆ ಕ್ಷಣಗಳು ನಿಜಕ್ಕೂ ಅತಿ ಸಂಭ್ರಮ ಎನಿಸುತ್ತವೆ. ಮಕ್ಕಳ ಪಟ್ಟಿ ತಯಾರಿಸುವುದು, ಗುಂಪು ಮಾಡುವುದು, ನಾಯಕರ ಆಯ್ಕೆ ಮಾಡುವುದು, ಅವರಿಗೆ ಜವಾಬ್ದಾರಿಗಳನ್ನು ಹಂಚುವುದು, ಪ್ರವಾಸ ಹೋದಾಗ ಅಲ್ಲಿ ಹೇಗೆ ವರ್ತಿಸಬೇಕು? ಏನೆಲ್ಲ ಗಮನಿಸಬೇಕು? ಎಂಬುದನ್ನು ಕುರಿತು ಮಕ್ಕಳಿಗೆ ಸಲಹೆ ಸೂಚನೆ ನೀಡುವುದು. ಹಣದ ಲೆಕ್ಕಾಚಾರ ಇವೆಲ್ಲ ಮನಸ್ಸಿಗೆ ಮುದ ನೀಡುತ್ತವೆ. ಟೂರ್ ಸೆಕ್ರೆಟರಿ ಇದನ್ನೆಲ್ಲ ನಿಭಾಯಿಸುವ ಉಸ್ತುವಾರಿ ‌ಹೊತ್ತಿರುತ್ತಾರಾದರೂ ಮಕ್ಕಳ ಹಿತದೃಷ್ಟಿಯಿಂದ ಎಲ್ಲಾ ಶಿಕ್ಷಕರಿಗೂ ಅಷ್ಟೇ ಪಾಲು ಇರುತ್ತದೆ. ಇದು ಮಕ್ಕಳ ಸುರಕ್ಷತೆಯ ಕೆಲಸವಾಗಿದ್ದರಿಂದ ಯಾರೊಬ್ಬರೂ ಈ ಜವಾಬ್ದಾರಿಗಳಿಂದ ನುಣುಚಿಕೊಳ್ಳಲು ಸಾಧ್ಯವಾಗದು.

ಮಕ್ಕಳಿಗೆ ಮತ್ತೊಂದು ರೀತಿಯ ಸಂಭ್ರಮ. ಬಸ್ಸಿನಲ್ಲಿ ಯಾವ ಸೀಟಿನಲ್ಲಿ ಕೂರುವುದು, ಯಾವ ಗೆಳೆಯ ಅಥವಾ ಗೆಳತಿಯರೊಂದಿಗೆ ಸೀಟು ಹಂಚಿಕೊಳ್ಳುವುದು, ಬಸ್ಸಿನಲ್ಲಿ ಕಿಟಕಿ ಪಕ್ಕ ಕೂತು ಪ್ರಕೃತಿಯನ್ನು ಹೇಗೆ ಸಂಭ್ರಮಿಸುವುದು, ಯಾವ ಡೈಲಾಗ್ ಹೊಡೆದು, ಯಾವ ಜೋಕ್ ಹೇಳಿ, ಯಾವ ಹಾಡು ಹಾಡಿ ಎಲ್ಲರನ್ನು ರಂಜಿಸುವುದು ಎಂದು ಮನದೊಳಗೆ ಗುಣಿತ ಹಾಕುತ್ತಿರುತ್ತಾರೆ.

ಡ್ರೈವರ್ ಬೇಗನೇ ಎದ್ದು ಸ್ನಾನ ಮುಗಿಸಿ ಕೆಂಪು ಬಸ್ಸಿಗೂ ಸ್ನಾನ ಮಾಡಿಸಿ ಖಾಕಿ ಯೂನಿಫಾರ್ಮ್ ಧರಿಸಿ ಶಿಸ್ತಿನಿಂದ ಬಸ್ಸನ್ನೇರಿ ತನ್ನ ಸೀಟಿನಲ್ಲಿ ಕುಳಿತು ಪೋಂ ಪೋಂ ಎಂದು ಹಾರ್ನ್ ಮಾಡಿದರು. ಬಸ್ ಶಬ್ದ ಕಿವಿಗೆ ಬಿದ್ದೊಡನೆ ಮಕ್ಕಳೆಲ್ಲ ಬೇಗ ಬೇಗನೆ ತಮ್ಮ ಬ್ಯಾಗುಗಳನ್ನು ಹೆಗಲಿಗೆ ಏರಿಸಿಕೊಂಡು ತಮ್ಮ ತಮ್ಮ ಗುಂಪಿನ ನಾಯಕರೊಂದಿಗೆ ಇರುವೆಗಳ ಸಾಲಿನಂತೆ ನಿಂತರು. ಮಕ್ಕಳ ಅಂತಹ ಶಿಸ್ತು ಉತ್ಸಾಹವನ್ನು ನೋಡೋದು ಕಂಗಳಿಗೆ ಹಬ್ಬ. ಇನ್ನು ಅದೇ ಊರಿನ ಮಕ್ಕಳನ್ನು ಪೋಷಕರು ಕರೆತಂದರು. ನಾವು ಪ್ರವಾಸ ಹೊರಟಿರುವ ಮಕ್ಕಳ ಪಟ್ಟಿ ಪರಿಶೀಲಿಸಿದಾಗ ಆಲ್ಮೋಸ್ಟ್ ಎಲ್ಲ ಮಕ್ಕಳು ಸಮಯಕ್ಕೆ ಸರಿಯಾಗಿ ಹಾಜರಾಗಿದ್ದರು. ಆದರೆ ಆರನೆ ತರಗತಿ ಸತೀಶ್ ಎಂಬ ವಿದ್ಯಾರ್ಥಿ ಕಾಣಲಿಲ್ಲ. ಅವನು ನನ್ನ ಪ್ರೀತಿ ಪಾತ್ರ ಮಗು. ಅವನ ಮೇಲೆ ನನಗೆ ಎಲ್ಲಿಲ್ಲದ ಒಲವು. ಗಮನಿಸಬೇಕಾದ ಅಂಶ ಎಂದರೆ, ಶಿಕ್ಷಕರಿಗೆ ತಮ್ಮೆಲ್ಲ ವಿದ್ಯಾರ್ಥಿಗಳ ಮೇಲು ಒಂದೇ ಭಾವನೆ ಇರುತ್ತದೆ. ಎಲ್ಲರನ್ನೂ ಸಮಾನವಾಗಿಯೇ ಕಾಣುತ್ತೇವೆ. ಆದರೂ ಕೆಲವು ಮಕ್ಕಳು ಇದೆಲ್ಲವನ್ನು ಮೀರಿ ಶಿಕ್ಷಕರ ಮನದೊಳಗೆ ಅಲುಗಾಡದೆ ಬಿಗಿಯಾಗಿ ಕೂತು ಬಿಡುತ್ತಾರೆ. ಅದು ಅವರ ಓದಿನ ಕಾರಣವೋ, ಅವರ ಗುಣ ಸ್ವಭಾವದ ಪ್ರಯುಕ್ತವೋ ಹೇಳಲಾಗುವುದಿಲ್ಲ. ನನಗೂ ಇವನ ಮೇಲೆ ಇಂತಹ ರೀತಿಯ ಒಂದು ಆಕರ್ಷಣೆ. ಸತೀಶ ಓದಿನಲ್ಲಿ ತುಂಬಾ ಮುಂದು. ಅಕ್ಷರಗಳನ್ನ ಅತಿ ದುಂಡಾಗಿ ಮುದ್ರಿತ ಅಕ್ಷರಗಳಂತೆ ಬರೆಯುತ್ತಿದ್ದನು. ಇನ್ನು ವಿಜ್ಞಾನದ ಚಿತ್ರಗಳನ್ನಂತೂ ಸುಂದರವಾಗಿ ಬಿಡಿಸುತ್ತಿದ್ದ. ನನಗೆ ಏನಾದರೂ ಬೇರೆ ಕೆಲಸಗಳಿದ್ದಾಗ ಇತರ ಮಕ್ಕಳಿಗೆ ವಿಜ್ಞಾನ ಪಠ್ಯದಲ್ಲಿರುವ ಚಿತ್ರಗಳನ್ನು ಬರೆಯಲು ಅಭ್ಯಾಸ ಮಾಡಿಸು ಅಥವಾ ವಿಜ್ಞಾನ ಆಲ್ಬಮ್‌ನ ಪ್ರಾಜೆಕ್ಟ್ ಮಾಡಿಸು ಎಂದು ಹೇಳುತ್ತಿದೆ. ಅದೆಷ್ಟು ಅಚ್ಚುಕಟ್ಟಾಗಿ ಕೊಟ್ಟ ಜವಾಬ್ದಾರಿ ನಿಭಾಯಿಸುತ್ತಿದ್ದ ಎಂದರೆ ನನಗೊಂದು ಹೆಮ್ಮೆಯ ಭಾವ ಹಾಗೂ ಅಚ್ಚರಿಯನ್ನುಂಟು ಮಾಡುತ್ತಿತ್ತು.

ಹಿಂದಿನ ದಿನ ಅವನು ಪ್ರವಾಸದ ಬಗ್ಗೆ ಅದೆಷ್ಟು ಚರ್ಚೆ ಮಾಡಿದ್ದ ಈಗೇನಾಯ್ತು. ಅಷ್ಟೊಂದು ಖುಷಿಯಿಂದ ಎಲ್ಲರಿಗಿಂತ ಮೊದಲು ಟೂರ್‌ಗೆ ಹೆಸರು ದಾಖಲಿಸಿದವನು. ಈಗ ಕಾಣುತ್ತಿಲ್ಲ ಏಕೆ? ಏನಾಗಿರಬಹುದು! ಎಂದು ಮನಸ್ಸು ಯೋಚಿಸುತ್ತಿತ್ತು. ಅಷ್ಟರಲ್ಲಿ ಅವರ ಅಮ್ಮನ ಮೊಗದರ್ಶನವಾಯಿತು. ಆಗ ನನ್ನ ಮುಖದ ಮೇಲೆ ಸಮಾಧಾನದ ಛಾಯೆಯೊಂದು ಮೂಡಿ ಅವರೆಡೆಗೆ ಮುಗುಳು ನಗೆ ಬೀರಿ ಎಲ್ಲಿ ನಿಮ್ಮ ಮಗ ಸತೀ? ಬೇಗ ಬರಲು ಹೇಳಿ ತಡವಾಗುತ್ತದೆ ಎಂದೆ. ಆಗ ಅವರ ಕಣ್ಣಲ್ಲಿ ಜಳಜಳನೆ ಕಣ್ಣೀರು ಸುರಿಯತೊಡಗಿತು. ನನಗೇಕೋ ಗಾಬರಿಯಾಯಿತು. ಯಾಕಮ್ಮ ಅಳುತ್ತೀರಿ ಏನಾಯಿತು ಸತೀಗೆ ಎಂದೆ. “ನಾಳೆ ಬೆಳಗ್ಗೆ ಪ್ರವಾಸ ಹೋಗಬೇಕು, ನಾಳೆ ಸ್ನಾನ ಮಾಡಲು ತಡವಾಗುತ್ತದೆ ಎಂದು ನಿನ್ನೆ ಸಂಜೆ ನಾವು ಕೆಲಸದಿಂದ ಮನೆಗೆ ಬರುವಷ್ಟರಲ್ಲಿ ಅವನೇ ಸೌದೆ ಹಾಕಿ ಒಲೆ ಹಚ್ಚಿ ನೀರು ಕಾಯಿಸಿದ್ದಾನೆ. ಹೆಚ್ಚು ಸೌದೆ ಉರಿಸಿ ನೀರು ಕುದಿಯುವಷ್ಟು ಕಾದಿದೆ. ಇವನು ಅದನ್ನು ಗಮನಿಸಿಲ್ಲ. ಮೈ ಮೇಲೆ ಸುರಿದುಕೊಂಡಿದ್ದಾನೆ. ಅದೃಷ್ಟವಶಾತ್ ಬಿಸಿಗೆ ಕೈ ಜಾರಿ ಜಗ್ ಕೆಳಗೆ ಬಿದ್ದಿದೆ. ಆದರೂ ಬೀಳುವಾಗ ಎದೆಯ ಮೇಲೆ ಸ್ವಲ್ಪ ನೀರು ಬಿದ್ದು ಚರ್ಮ ಸುಟ್ಟಿದೆ. ರಾತ್ರಿಯೇ ಮೀನೆಣ್ಣೆ ಹಚ್ಚಿದ್ದೇವೆ”ಎನ್ನುತ್ತಾ ನೀವು ಟೂರು ಹೋಗಿ ಬನ್ನಿ ಅಂದರು. ನಿಜಕ್ಕೂ ಇದನ್ನು ಕೇಳಿ ನಮಗೆಲ್ಲ ತುಂಬಾ ನೋವಾಯಿತು. ಅತಿ ಬುದ್ಧಿವಂತ ಮಕ್ಕಳು ಕೆಲವೊಮ್ಮೆ ಏಕೆ ಹೀಗೆ ದಡ್ಡತನ ಪ್ರದರ್ಶನ ತೋರಿಸುತ್ತಾರೆ ಅನಿಸಿತು. ಹಿಂದಿನ ದಿನ ಮುಖ್ಯ ಶಿಕ್ಷಕರು ಅದೆಷ್ಟು ಸಲಹೆ ಸೂಚನೆಗಳನ್ನು ಕೊಟ್ಟಿದ್ದರು. ಆದರೂ ಇಂತಹ ಅವಘಡಗಳು ಮಕ್ಕಳನ್ನು ಬಿಡುವುದೇ ಇಲ್ಲ ಎಂದು ನೆನೆದು ಬೇಸರವಾಯಿತು.

ಆ ಮಾತನ್ನು ಕೇಳಿದ ನಂತರ ಅವನನ್ನು ನೋಡದೆ ಬಸ್ ಏರಲು ಮನಸ್ಸಾಗಲಿಲ್ಲ. ನಾನು ಮತ್ತು ಮುಖ್ಯ ಶಿಕ್ಷಕರು ಅವರ ಮನೆಗೆ ಹೋದೆವು. ನಮ್ಮನ್ನು ನೋಡಿ ಗೊಳೋ ಎಂದು ಬಿಕ್ಕಿ ಬಿಕ್ಕಿ ಅತ್ತುಬಿಟ್ಟನು ಹುಡುಗ. ಅವನಿಗೆ ತಾನು ಸುಟ್ಟುಕೊಂಡ ಗಾಯದ ನೋವಿಗಿಂತ ನಮ್ಮ ಜೊತೆ ಬರಲಾಗಲಿಲ್ಲ ಎಂಬ ದುಃಖವೇ ಅತಿಯಾಗಿ ಕಾಡುತ್ತಿತ್ತು. ಈಗ ಹೇಗಿದ್ದೀಯಾ ಸತೀಶ‌ ಎಂದೆ. ಎಂತಹ ಕೆಲಸ ಮಾಡಿಕೊಂಡೆ ಪುಟ್ಟ?

ಗಾಯ ಸ್ವಲ್ಪವೇ ಆಯ್ತು ಸರಿ. ಹೆಚ್ಚು ‌ಆಗಿದ್ದರೆ ಏನ್ ಗತಿ, ನೀನು ಎಷ್ಟು ಜಾಣ ಹುಡುಗ‌. ಹೀಗೆ ಬೇಜವಾಬ್ದಾರಿತನ ಮಾಡೋದಾ? ಎಂದೆ. ನನ್ನೆಡೆ ಕುಡಿ ನೋಟ ಬೀರಿ ಮಿಸ್ ನಾನು ಬರ್ತೀನಿ, ಪ್ಲೀಸ್ ನನ್ನ ಬಿಟ್ಟು ಹೋಗಬೇಡಿ ಎಂದನು. ಅವನ ಕಣ್ಣಲ್ಲಿ ತುಂಬಿದ ನೀರನ್ನು ಕಂಡು ನನಗೆ ಕರುಳು ಕಿತ್ತು ಬರುವಂತ ಸಂಕಟವಾಯಿತು. ಆಗ ಮುಖ್ಯ ಶಿಕ್ಷಕರು “ಈಗ ಬೇಡ ಸತೀಶ, ನೀನು ಸುಧಾರಿಸಿಕೋ. ಜನವರಿಯಲ್ಲಿ ನಿನಗಾಗಿ ಮತ್ತೊಮ್ಮೆ ಹೊರ ಸಂಚಾರ ಏರ್ಪಡಿಸುತ್ತೇನೆ. ಆಗ ನಮ್ಮ ಜೊತೆ ಬರುವೆಯಂತೆ. ಈಗ ಮೊದಲು ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದುಕೋ” ಎಂದು ಅವನನ್ನು ಸಮಾಧಾನ ಮಾಡಿ ನಾವಿನ್ನು ಹೊರಡುತ್ತೇವೆ ಎಂದು ಎದ್ದರು. ನಾನೂ ಹೊರಡಲು ಸಿದ್ಧಳಾದಾಗ ನನ್ನ ಕೈಯನ್ನು ಮೃದುವಾಗಿ ಹಿಡಿದುಕೊಂಡ. ಪುಟ್ಟ ಹಸುಳೆ ತನ್ನ ತಾಯಿಯ ಬೆರಳು ಹಿಡಿದಂತ ಅನುಭವವಾಯಿತು. ಎದೆಯೊಳಗೆ ನೂರು ಜ್ವಾಲೆಗಳು ಉರಿದಷ್ಟು ಸಂಕಟವಾಯಿತು. ನಾನು ಮುಖ್ಯ ಶಿಕ್ಷಕರನ್ನು ಸರ್, ನನಗೇಕೋ ಬರಲು ಮನಸ್ಸಿಲ್ಲ. ನೀವೆಲ್ಲ ಹೋಗಿ ಬನ್ನಿ ನಾನು ಸಂಜೆವರೆಗೂ ಇಲ್ಲೇ ಇವನೊಂದಿಗೆ ಇದ್ದು ಮನೆಗೆ ಹೋಗುವೆ ಎಂದೆ. ಶಿಕ್ಷಕರು ಆಗಲ್ಲ ಮೇಡಂ. ಹೆಣ್ಣು ಮಕ್ಕಳು ಪ್ರವಾಸ ಬರುತ್ತಿರುವುದರಿಂದ ಮಹಿಳಾ ಶಿಕ್ಷಕಿ ಬರಲೇಬೇಕು ಇಲ್ಲದಿದ್ದರೆ ಪೋಷಕರ ಪ್ರಶ್ನೆಗಳಿಗೆ ನಾನು ಉತ್ತರಿಸಬೇಕಾಗುತ್ತದೆ. ನಾವೆಲ್ಲ ಬೇರೆಯವರ ಬಾಯಿಗೆ ಎಲೆ ಅಡಿಕೆ ಆಗುವುದು ಬೇಡ. ಜೊತೆಗೆ ಜವಾಬ್ದಾರಿಯು ಅಷ್ಟೇ ಇದೆ… ಬನ್ನಿ ಅವನು ಹುಷಾರಾಗುತ್ತಾನೆ ಎನ್ನುತ್ತಾ ಹೊರ ನಡೆದರು. ಬೇರೆ ದಾರಿ ಕಾಣದೆ ನಾನು ಅವರನ್ನು ಹಿಂಬಾಲಿಸಿದೆ. ಭಾರವಾದ ಮನಸ್ಸನ್ನು ಹೊತ್ತುಕೊಂಡು ಮಡುಗಟ್ಟಿದ ದುಃಖ ಭಾವದಲ್ಲಿ ಬಸ್ ಏರಿ ಕೂತೆ.

ಅವನದೇ ಗುಂಗಿನಲ್ಲಿ ಮುಳುಗಿ ನಿದ್ರೆಗೆ ಜಾರಿದ್ದ ನನಗೆ ತಿಂಡಿ ತಿನ್ನಲು ಬಸ್ ನಿಲ್ಲಿಸಿದಾಗಲೇ ಎಚ್ಚರವಾಗಿದ್ದು. ಮೈಸೂರು ಪ್ರವಾಸದ ಮಧ್ಯದಲ್ಲಿ ಒಮ್ಮೆ ನಿಲ್ಲಿಸಿ ತಿಂಡಿ ಮುಗಿಸಿ ಮತ್ತೆ ಹೊರಟೆವು. ಮಕ್ಕಳೆಲ್ಲ ಸಪ್ಪೆ ಮೋರೆ ಹಾಕಿ ಕುಳಿತಿದ್ದನ್ನು ನೋಡಿ ಶಿಕ್ಷಕರೊಬ್ಬರು ಜಾನಪದ ಗೀತೆ ಕ್ಯಾಸೆಟ್ ಹಾಕಿದರು. ಅದೆಲ್ಲಿತ್ತೋ ಆ ಮಕ್ಕಳಿಗೆ ಎನರ್ಜಿ. ಆ ಹಾಡುಗಳಿಗೆ ಕುಣಿದು ಕುಪ್ಪಳಿಸಿದರು. ಅದು ನಮ್ಮ ಜನಪದ ಸಾಹಿತ್ಯಕ್ಕೆ ಇರುವ ತಾಕತ್ತು.

*****

ಬಸ್ ಪ್ರಯಾಣ ಕೆಲವು ಮಕ್ಕಳಿಗೆ ಆಗಿ ಬರೋಲ್ಲ. ವಾಂತಿ ಹಾಗೂ ತಲೆ ಸುತ್ತು ಬರುತ್ತದೆ. ಪ್ರವಾಸ ಹೋಗುವ ಮುನ್ನ ವೈದ್ಯರನ್ನು ಸಂಪರ್ಕಿಸಿ ಜ್ವರ, ತಲೆನೋವು, ಹೊಟ್ಟೆ ನೋವು, ಭೇದಿ, ವಾಂತಿ ಸೇರಿದಂತೆ ಕೆಲವು ಸಾಮಾನ್ಯ ಕಾಯಿಲೆಗಳಿಗೆ ಔಷಧಿ ಪಡೆದು ತಂದಿರುತ್ತೇವೆ.

ಪ್ರವಾಸ ಹೊರಡುವ ಹಿಂದಿನ ದಿನ ಮಕ್ಕಳಿಗೆಲ್ಲ ಎಣ್ಣೆ ಪದಾರ್ಥ ತಿನ್ನಬಾರದು, ಕರಿದ ತಿಂಡಿ ತರಬಾರದು, ಗ್ಯಾಸ್ಟ್ರಿಕ್ ಇರುವ ಆಹಾರ ಸೇವಿಸಬಾರದು ಎಂಬೆಲ್ಲ ಸಲಹೆ ಸೂಚನೆಗಳನ್ನು ಬುಟ್ಟಿಗಟ್ಟಲೆ ನೀಡಿರುತ್ತೇವೆ.

ಬಸ್ ಹತ್ತಿದ ಮೇಲೆ ಕೆಲವು ಮಕ್ಕಳಿಗೆ ವಾಂತಿ ಮಾತ್ರೆ ತಿಂದರೂ ಉಪಯೋಗಕ್ಕೆ ಬಾರದು. ಅಂತಹ ಮಕ್ಕಳನ್ನು ಎಡಗಡೆ ಕಿಟಕಿಯ ಪಕ್ಕ ಕೂರಿಸುತ್ತೇವೆ. ತಲೆ ಹೊರಗೆ ಹಾಕದೆ ಜಾಗೃತೆಯಿಂದ ವಾಂತಿ ಮಾಡಲು ಹೇಳುತ್ತೇವೆ. ಆದರೆ ಹೆಚ್ಚು ಮಕ್ಕಳಿಗೆ ಇದೇ ಪರಿಸ್ಥಿತಿ ಆದಾಗ ಎಲ್ಲರಿಗೂ ಕಿಟಕಿಯನ್ನು ಒದಗಿಸಲು ಸಾಧ್ಯವಾಗದು. ಆಗ ಕವರ್ ಮೊರೆ ಹೋಗಬೇಕಾಗುತ್ತದೆ.

ನಮ್ಮನ್ನು ನೋಡಿ ಗೊಳೋ ಎಂದು ಬಿಕ್ಕಿ ಬಿಕ್ಕಿ ಅತ್ತುಬಿಟ್ಟನು ಹುಡುಗ. ಅವನಿಗೆ ತಾನು ಸುಟ್ಟುಕೊಂಡ ಗಾಯದ ನೋವಿಗಿಂತ ನಮ್ಮ ಜೊತೆ ಬರಲಾಗಲಿಲ್ಲ ಎಂಬ ದುಃಖವೇ ಅತಿಯಾಗಿ ಕಾಡುತ್ತಿತ್ತು. ಈಗ ಹೇಗಿದ್ದೀಯಾ ಸತೀಶ‌ ಎಂದೆ. ಎಂತಹ ಕೆಲಸ ಮಾಡಿಕೊಂಡೆ ಪುಟ್ಟ?

ನಾವು ಕುಳಿತ ಬಸ್ ಮುಂದೆ ಮುಂದೆ ಚಲಿಸುತ್ತಿತ್ತು. ವೇಗವೇನು ಅತಿ ಇರಲಿಲ್ಲ. ಶಾಲಾ ಮಕ್ಕಳ ಪ್ರವಾಸ ಅಂದಾಗ ಡ್ರೈವರ್‌ಗಳು ಎಚ್ಚರಿಕೆಯಿಂದ ಚಾಲನೆ ಮಾಡುತ್ತಾರೆ. ಜೊತೆಗೆ ವೇಗ ನಿಯಂತ್ರಕ ಬೇರೆ ಅಳವಡಿಸಿರುತ್ತಾರೆ. ಆದರೂ ಸುಮಾರು ಮಕ್ಕಳು ವಾಂತಿ ಮಾಡಲು ಶುರು ಮಾಡಿದರು. ಆಗ ಶಿಕ್ಷಕರು ತಂದಿದ್ದ ಕವರ್‌ಗಳನ್ನು ಮಕ್ಕಳಿಗೆ ನೀಡಿ ಇದರಲ್ಲಿ ವಾಂತಿ ಮಾಡಿ ಚೆಲ್ಲಲು ಹೇಳಿದರು. ಒಬ್ಬ ಹುಡುಗ ಸರ್ ವಾಂತಿ ಬರುತ್ತಿದೆ ಎಂದ. ತಕ್ಷಣ ಅವರು ಹೋಗಿ ಅವನಿಗೆ ಕವರು ನೀಡಿ “ಹಿಂದೆ ಯಾರೂ ಕೂಗಿದ್ದು…” ಅಂತ ಅಲ್ಲಿಗೆ ಹೋದರು. ಅಲ್ಲಿ ಹೋಗಿ ಬಂದರೂ ಇವನು ವಾಂತಿ ಮಾಡಿದ ಕವರನ್ನು ಕೈಯಲ್ಲಿ ಇಟ್ಟುಕೊಂಡಿದ್ದ. ಅದನ್ನು ನೋಡಿ ಶಿಕ್ಷಕರು “ಅಯ್ಯೋ! ನಿನ್ನ, ಅದೇನ್ ಪಾಯಸನಾ? ನೀನು ಕೈಯಲ್ಲಿ ಹಾಗೆ ಹಿಡ್ಕೊಂಡು ವಾಸನೆ ಕುಡಿಯೋಕೆ? ಕವರ್ ಆಚೆ ಎಸೆಯೋ” ಅಂದ್ರು. ತಕ್ಷಣ ಅವನು ಗಾಬರಿಯಿಂದ ಹಿಂದೆ ಬರುವ ವಾಹನಗಳನ್ನು ಗಮನಿಸದೆ ಎಸೆದೆ ಬಿಟ್ಟ. ಪಕ್ಕದಲ್ಲಿ ಬರುತ್ತಿದ್ದ ಕಾರ್ ಮೇಲೆ ಬಿದ್ದು, ಕಿಟಕಿ ತೆರೆದಿದ್ದರಿಂದ ಕಾರಿನೊಳಗೆ ಎರಚಿತು. ಆ ಕಾರಿನವರು ನೋಡಲು ಒಳ್ಳೆಯ ವಿದ್ಯಾವಂತರಂತೆ ಕಾಣುತ್ತಿದ್ದರು. ತಕ್ಷಣ ಬಸ್ಸನ್ನು ಹಿಂಬಾಲಿಸಿಕೊಂಡು ಬಂದು ಅಡ್ಡ ಹಾಕಿದರು. ಆಗ ಮುಖ್ಯ ಶಿಕ್ಷಕರು ಇತರ ಶಿಕ್ಷಕರು ಇಳಿದು ಹೋಗಿ ಅವರಿಗೆ ಸಮಾಧಾನ ಮಾಡುವಷ್ಟರಲ್ಲಿ ಸಾಕು ಸಾಕಾಯಿತು. ನೀವೆಂಥ ಟೀಚರ್ಸ್, ಮಕ್ಕಳಿಗೆ ಇದೇನಾ ಕಲ್ಸಿರೋದು? ಅಂತೆಲ್ಲ ಸಹಸ್ರನಾಮಾವಳಿ ಹಾಡಿದರು. ಅವರ ಮನವೊಲಿಸಿ ಸಮಾಧಾನ ಮಾಡಿ ಕಳಿಸಿ ಬಸ್ ಹತ್ತುವಷ್ಟರಲ್ಲಿ ಹೈರಾಣಾಗಿ ಹೋಗಿದ್ದರು. ಏನು ಮಾಡುವುದು ವಾಂತಿಗೆ ಕಾರಿನ ಮೇಲೆ ಮಾಡಬಾರದು ಅಂತ ಹೇಳಿಕೊಟ್ಟ ಪಾಠ ಅರ್ಥವಾಗುವುದಿಲ್ಲ.

ಆ ದಿನ ಸಂಜೆ ಮೈಸೂರಿನ ಕೆಆರ್‌ಎಸ್ ಸಂಗೀತ ಕಾರಂಜಿ ನೋಡಲು ಹೋಗಿದ್ದೆವು‌. ಅಂದು ಸಂಜೆ ನಡೆಯಲಿರುವ ಕಾರ್ಯಕ್ರಮವಾದ್ದರಿಂದ ನಿಗದಿತ ವೇಳೆಗೆ ಸರಿಯಾಗಿ ಅಲ್ಲಿಗೆ ಹೋದೆವು. ಕಲರ್‌ಫುಲ್, ಬ್ಯೂಟಿಫುಲ್ ಕಾರಂಜಿ ಜೊತೆಗೆ ಸಂಗೀತವು ಸೇರಿದರೆ ಕೇಳಬೇಕೇ… ಕಣ್ಣು ಕಿವಿಗಳಿಗೆ ಮಹದಾನಂದ. ಅಂತು ಮಕ್ಕಳು ಬಹುವಾಗಿ ಅದನ್ನ ಎಂಜಾಯ್ ಮಾಡಿದರು.

ಅಷ್ಟರಲ್ಲಿ ಹೆಣ್ಣು ಮಕ್ಕಳು‌ ವಾಶ್ ರೂಮ್‌ಗೆ ಹೋಗಬೇಕು ಮಿಸ್ ಅಂದರು. ಪ್ರವಾಸದ ಕೊನೆಯ ಸ್ಥಳವು ಅದೇ ಆಗಿದ್ದರಿಂದ ಸರಿ ಬನ್ನಿ ಮಕ್ಕಳೆಲ್ಲರೂ ಒಮ್ಮೆ ಶೌಚಕ್ಕೆ ಹೋಗಿ ಬರೋಣ ಅಂತ ಶೌಚಾಲಯದ ಕಡೆ ಹೆಜ್ಜೆ ಹಾಕಿದೆವು. ಶೌಚಾಲಯದ ಸಿಬ್ಬಂದಿ ನಮ್ಮನ್ನು ತಡೆದು ಪೇ ಮಾಡಿ ಯೂಸ್ ಮಾಡಿ ಲೆಕ್ಕ ಕೊಡಿ ಅಂದನು. ಸರಿ ಮಕ್ಕಳೇ, ನೀವು ಹೋಗಿ ಬನ್ನಿ ಅಂತ ನಾನು ದುಡ್ಡು ತೆಗೆದು ಎಷ್ಟು ಸರ್ ಅಂದೆ ಒಂದಕ್ಕಾದರೆ (ಮೂತ್ರ ವಿಸರ್ಜನೆ) ಎರಡು ರೂಪಾಯಿ, ಎರಡಕ್ಕಾದರೆ (ಮಲವಿಸರ್ಜನೆ) ಐದು ರೂಪಾಯಿ ಎಂದರು. ಅಷ್ಟರಲ್ಲಿ ಏದುಸಿರು ಬಿಡುತ್ತಾ ಓಡಿ ಬಂದ ಬೇರೆ ಶಾಲೆಯ ಬಾಲಕರಿಬ್ಬರೂ ನಮ್ಮ ಮಾತನ್ನು ಕೇಳಿಸಿಕೊಂಡು “ಅಣ್ಣಾ ಅಣ್ಣಾ ಒಂದಕ್ಕೆ ಎರಡು ರೂಪಾಯಿ, ಎರಡಕ್ಕೆ ಐದು ರೂಪಾಯಿ… ಆದ್ರೆ ಬರಿ ತೊಳ್ಕೊಳಕ್ ಎಷ್ಟ್ ಅಣ್ಣಾ” ಅಂದ್ರು. ಈ ಮಾತು ಕೇಳಿದ್ದೇ ತಡ ಅಲ್ಲಿದ್ದ ಮಕ್ಕಳೆಲ್ಲ ಬಿದ್ದು ಬಿದ್ದು ನಕ್ಕರು. ಆದರೆ ಆ ಮಕ್ಕಳಿಗೆ ಇದರ ಯಾವ ಪರಿವೆಯು ಇರಲಿಲ್ಲ. ಸದ್ಯಕ್ಕೆ ಅವರಿಗೆ ತೊಳೆದುಕೊಳ್ಳುವ ತರಾತುರಿಯಷ್ಟೇ ಉದ್ದೇಶವಾಗಿತ್ತು.

ಆಗ ಶೌಚಾಲಯದ ಸಿಬ್ಬಂದಿ ಅವನನ್ನ ಹಿಡಿದುಕೊಂಡು “ಏನಣ್ಣಾ ಅಂದೆ! ಬರೆ ತೊಳ್ಕೊಳ್ಳಕ್ಕೆ ಎಷ್ಟಣ್ಣಾ ಅಂದಾ? ಹಾಗಾದರೇ ಎಡೆಯನ್ನು ಎಲ್ಲಿ ಮಡಗಿ ಬಂದಪ್ಪ” ಅಂದಾಗ ಆ ಹುಡುಗರು ಶೋ ಗಿಡಗಳು ಇರುವ ಪೊದೆಯೊಂದನ್ನು ತೋರಿಸಿದರು. ಕರೆಯಪ್ಪ ನಿಮ್ಮೆಷ್ಟ್ರುನಾ… ಎಲ್ಲಿದ್ದಾರೆ? ಆ ಮಹಾನುಭಾವರು. ನಿಮ್ಮನ್ನು ಪೊದೆಗೆ ಬಿಟ್ಟು ಅವರು ಏನು ಮಾಡುತ್ತಿದ್ದಾರೆ ನೋಡಿ ಪಾವನ ಆಗೋಣ” ಅಂದ್ರು. ಆ ಹುಡುಗ ನಂಬರ್ ಹೇಳಿದ. ನಾನೇ ನನ್ನ ಕೀಪ್ಯಾಡ್ ಮೊಬೈಲ್‌ನಿಂದ ಡಯಲ್ ಮಾಡಿ ವಿಷಯ ತಿಳಿಸಿದೆ. ತಕ್ಷಣ ಆತಂಕಗೊಂಡ ಶಿಕ್ಷಕರು ಗಾಬರಿಯಿಂದ ಏನಾಯಿತು ಎಂದು ಓಡಿ ಬಂದರು. ಮಕ್ಕಳ ಮೇಲೆ ಅಷ್ಟೇನೂ ಕೋಪಗೊಳ್ಳದ ಸಿಬ್ಬಂದಿ ಮೇಷ್ಟ್ರನ್ನ ನೋಡಿದ ಕೂಡಲೇ ಆವೇಶಭರಿತರಾಗಿ “ನಿಮ್ಮ ಹುಡುಗರು ಪಾರ್ಕನ್ನೆಲ್ಲಾ ಗಬ್ಬೆಬ್ಬಿಸಿ ಬಂದವರೇ. ನೀವು ನಿಂತು ಮಜಾ ತಗೋತಿದ್ದೀರಾ? ಉದ್ಯಾನವನ ಎಲ್ಲ ಹಾಳ್ ಮಾಡ್ತೀರಾ… ನಿಮಗೆಲ್ಲಾ ಅದ್ಯಾರು ಮೇಷ್ಟ್ರು ಕೆಲಸ ಕೊಟ್ಟರು?” ಎಂದು ಕೂಗಾಡಿದರು.

ಮಕ್ಕಳಿಗೇನೋ ತಿಳಿಯಲ್ಲ. ಎರ್ರಾಬಿರ್ರಿ ತಿಂದ್ಬಿಟ್ಟಿರುತ್ತವೆ. ನಿಮಗೆ ಬುದ್ಧಿ ಬೇಡವೇನ್ರಿ. ನೀವು ಮೇಲಿಂದ ಮೇಲೆ ತುಂಬಿಸಿದ್ಮೇಲೆ ಎಲ್ಲಾದರೂ ಶೌಚಾಲಯ ಇರುವ ಕಡೆ ನಿಲ್ಲಿಸಿ ತುಂಬಿಸಿದ್ದನ್ನು ಖಾಲಿ ಮಾಡಿಸಬೇಕು.. ಜೋರು ಜೋರಾಗಿ ಕೂಗಾಡಿದರು. ಪಾಪ ಮೇಷ್ಟ್ರು ಏನೇನೋ ಸಬೂಬು ಕೊಟ್ಟು ಮಕ್ಕಳನ್ನು ಕರೆದುಕೊಂಡು ‌ಹೋದರು.

ಬಸ್ ಕಡೆ ಹೊರಟು ಬಂದೆವು. ಅಲ್ಲಿ ಮತ್ತೊಂದು ಅವಘಡ ನಡಿತಿತ್ತು. ಉತ್ತರ ಕರ್ನಾಟಕದ ಪ್ರವಾಸಕ್ಕೆ ಬಂದಿದ್ದ ಬಸ್‌ನಲ್ಲಿ ಜೋರಾಗಿ ಕೂಗಾಟ ನಡೆಯುತ್ತಿತ್ತು. ಇದೇನು ಅಂತ ವಿಚಾರಿಸಿದರೆ ಬಸ್ ಹತ್ತಿಸಿ, ತಲೆ ಎಣಿಸಿ, ಹಾಜರಿ ತಗೊಂಡು, ಸೀಟಿನಲ್ಲಿ ಕೂರಿಸಿದ ಹುಡುಗನೊಬ್ಬ ಬಸ್ ಇಳಿಯುವಾಗ ಕಾಣುತ್ತಿಲ್ಲ. ಎಲ್ಲಾ ಶಿಕ್ಷಕರು ಆ ಮಗುವಿನ ಹುಡುಕಾಟದಲ್ಲಿ ಸಂಜೆಯ ತಂಪಿನಲ್ಲೂ ಬೆವರ ಸ್ನಾನ ಮಾಡಿದ್ದಾರೆ. ಮತ್ತೊಂದೆಡೆ ಆ ಹುಡುಗನ ಅಕ್ಕನ ರಂಪಾಟ ವಾತಾವರಣವನ್ನು ತುಂಬಾ ಗಂಭೀರಗೊಳಿಸಿದವು. ಎಲ್ಲಿ ಹೋದ? ಹೇಗೆ ಹೋದ? ಅಂತ ಎಲ್ಲರ ಮೊಗದಲ್ಲೂ ಆತಂಕ. ಬಸ್ಸು ಹತ್ತಿ ಬಸ್ಸನ್ನೆಲ್ಲಾ ಜಾಲಾಡುತ್ತಿದ್ದ ಶಿಕ್ಷಕರು ಕೊನೆಯಲ್ಲಿ ಮುಗ್ಗರಿಸಿ ಬಸ್ ಕಂಬಿಗೆ ಹೊಡೆದುಕೊಂಡು ಹಣೆಯಲ್ಲಿ ರಕ್ತ ಸಣ್ಣಗೆ ಸುರಿಯತೊಡಗಿತು. ಆಗ ಏನು ಎಡವಿದೆ ಅಂತ ಬಗ್ಗಿ ನೋಡುತ್ತಾರೆ ಕಾಣೆಯಾಗಿದ್ದ ಹುಡುಗ ಬಸ್ ಹಿಂದೆ ಹೋಗಿ ಸೀಟಿನ ಕೆಳಗೆ ಮಲಗಿಬಿಟ್ಟಿದ್ದಾನೆ. ಯಾರಿಗೂ ಕಂಡಿರಲ್ಲ. ಅವನನ್ನು ಕಂಡದ್ದೇ ಶಿಕ್ಷಕರ ಮೊಗದಲ್ಲಿ ಮೂಡಿದ ಸಂತೋಷ ರಕ್ತ ಸುರಿಯುತ್ತಿರುವ ಅವರ ಹಣೆಯ ನೋವಿಗೇ ಗೇಟ್ ಪಾಸ್ ನೀಡಿತ್ತು.

ಮತ್ತೊಂದು ವರ್ಷ ಶ್ರವಣಬೆಳಗೊಳದ ಗೊಮ್ಮಟೇಶ್ವರ ಬೆಟ್ಟಕ್ಕೆ ಪ್ರವಾಸ ಹೋಗಿದ್ದೆವು. ಅಲ್ಲಿ ತುಂಬಾ ಬಿಸಿಲು ಇದ್ದಿದ್ದರಿಂದ ಬೆಳಗೊಳ ಬೆಟ್ಟ ಏರಲು ಕಾಲಿಗೆ ಸಾಕ್ಸ್ ಮತ್ತು ಟೋಪಿ ಕೊಂಡುಕೊಳ್ಳುವುದಾಗಿ ಮಕ್ಕಳೆಲ್ಲ ಹೇಳಿದರು. “ಮಕ್ಕಳು ಏನಾದರೂ ಕೇಳಿದರೆ ಕೊಡಿಸಿ ಮೇಡಂ” ಎಂದು ಪೋಷಕರು ಮೊದಲೇ ದುಡ್ಡು ನೀಡಿದ್ದರು. ಮಕ್ಕಳೆಲ್ಲ ಅಂಗಡಿಗಳ ಬಳಿ ಜಮಾಯಿಸಿದರು. ತಮಗೆ ಇಷ್ಟವಾದ ಡಿಸೈನ್‌ನ ಟೋಪಿಗಳನ್ನು ಸಾಕ್ಸ್‌ಗಳನ್ನು ಆಯ್ಕೆ ಮಾಡಿಕೊಂಡಿರು. ಸರಿ ನಾನು ಅವರಿಗೆಲ್ಲ ಅವರೆಲ್ಲರ ಖರ್ಚು ಲೆಕ್ಕ ಹಾಕಿ ಅಂಗಡಿಯವನಿಗೆ ಹಣ ನೀಡಲು ಹೋದರೆ, ಅಂಗಡಿ ಮಾಲೀಕ ಇನ್ನೂ 300 ರೂಪಾಯಿ ಕೇಳಿದ. ನನಗೆ ಕೋಪ ನೆತ್ತಿಗೇರಿತು. ಏನ್ರೀ, ಪ್ರವಾಸಿ ಸ್ಥಳ ಅನ್ನುವ ನೆಪದಲ್ಲಿ ಪ್ರವಾಸಿಗರನ್ನು ಸುಲಿಗೆ ಮಾಡುತ್ತೀರಾ? ನಮಗೂ ಈಗ ಅನಿವಾರ್ಯ ಅಂತ ಖರೀದಿ ಮಾಡುತ್ತೇವೆ. ಅದು ಸಾಲದು ಅಂತ ನಮ್ಮ ಮಕ್ಕಳಿಗೆ ಮೋಸ ಮಾಡ್ತೀರಾ? ನಮಗೆ ಲೆಕ್ಕ ಬರಲ್ಲ ಅನ್ಕೊಂಡಿದ್ದೀರಾ? ನಿಮ್ಮಂತವರಿಗೆ ಅದೆಷ್ಟು ಲೆಕ್ಕ ಕಲ್ಸಿದ್ದೀನಿ ನಾನು ಸರ್ವಿಸ್‌ನಲ್ಲಿ ಗೊತ್ತಾ? ಅಂತ ರೇಗಿದೆ.

ಆ ವ್ಯಾಪಾರಿ ತುಂಬಾ ತಾಳ್ಮೆಯಿಂದ “ನೋಡಿ ಮೇಡಂ, ಈ ಮಕ್ಕಳದು 400 ರೂಪಾಯಿ, ಮೊದಲು ಒಂದು ಬ್ಯಾಚು ಹೋಯಿತಲ್ಲಾ ಅವರು ಖರೀದಿಸಿದ್ದು 300 ರೂಪಾಯಿ, ಒಟ್ಟು 700 ರೂಪಾಯಿ ಕೊಡಿ. ನಾನು ಯಾಕೆ ಸುಳ್ಳು ಹೇಳಲಿ” ಎಂದ. ನಾನು ತಕ್ಷಣ ಯಾವ ಬ್ಯಾಚು ಹೋಯಿತು? ಎಂದು ಗಮನಿಸಿದೆ. ನಮ್ಮೆಲ್ಲ ಮಕ್ಕಳು ಇಲ್ಲೇ ಇದ್ದಾರೆ ನೋಡಿ ಅಂದೆ. ಆಗತಾನೇ ಬೆಟ್ಟ ಏರುತ್ತಿದ್ದ ಆ ಮಕ್ಕಳನ್ನು ತೋರಿಸಿ ಅವರು “ನಮ್ಮ ಮಿಸ್ಸ್ ಇವರು ಅಂತ, ನಿಮ್ಮನ್ನು ತೋರಿಸಿ ಅವರೇ ದುಡ್ಡು ಕೊಡುತ್ತಾರೆ” ಅಂತ ಹೇಳಿ ಹೋದರು. “ನಿಮ್ಮ ಜೊತೆ ನಿಮ್ಮ ಮಕ್ಕಳ ಜೊತೆ ಮಾತನಾಡುತ್ತಿದ್ದನ್ನು ನಾನೇ ನೋಡಿರುವೆ ಮೇಡಮ್” ಎಂದು ಸಮಜಾಯಿಷಿ ಕೊಟ್ಟನು. ಅದು ಡಿಸೆಂಬರ್ ತಿಂಗಳಾದ್ದರಿಂದ ಬಹುತೇಕ ಎಲ್ಲಾ ಶಾಲೆಗಳ ಮಕ್ಕಳು ಪ್ರವಾಸ ಬರುತ್ತಾರೆ. ಅಲ್ಲಿ ಯಾರು ಅಂತ ಗುರುತಿಸುವುದು? ಬೆಟ್ಟ ಹತ್ತುವವರ ಅವರ ಸಾಲು ಇರುವೆಯಂತೆ ಕಾಣುತ್ತಿದೆ. ಯಾರು ಎಂದು ಸರಿಯಾಗಿ ಗುರುತಿಸಲಾಗಲಿಲ್ಲ… ನಾನಾಗ ನೆನಪಿಸಿಕೊಂಡೆ.

ಹೌದು ಯಾರೋ ಕೆಲವು ಮಕ್ಕಳು ನನ್ನ ಜೊತೆ ಮಾತಾಡಿದರು. ಮಿಸ್ ನಿಮ್ಮದು ಯಾವೂರು? ಏನೇನು ನೋಡಿ ಬಂದಿರಿ? ಮುಂದೆ ಎಲ್ಲಿ ಹೋಗುತ್ತೀರಿ? ಅಂತೆಲ್ಲ ವಿಚಾರಿಸಿದರು. ಟೀಚರ್ ಬುದ್ಧಿಯೆಲ್ಲಿ ಹೋಗುತ್ತೆ, ಮಕ್ಕಳ ಕಂಡ್ರೆ ಬಾಯಿ ತೆರೆದು ಇತಿಹಾಸದ ವರದಿ ಒಪ್ಪಿಸಿಬಿಡುತ್ತೇವೆ. ಅವರು ನನ್ನ ಹಾಗೂ ನನ್ನ ಮಕ್ಕಳ ಜೊತೆಗೂ ತುಂಬಾ ಸಲೀಸಾಗಿ ಮಾತನಾಡಿ ಅಂಗಡಿಯವನಿಗೆ ನಮ್ಮನ್ನು ತೋರಿಸಿ ಅವರೇ ನಮ್ಮ ಮಿಸ್ ಅವರು ಕೊಡುತ್ತಾರೆ ಎಂದು ಹೇಳಿ ವ್ಯಾಪಾರಿಗೆ ಕಾಗೆ ಹಾರಿಸಿ ನನಗೂ ನನ್ನ ಮಕ್ಕಳಿಗೂ ಚಳ್ಳೆಹಣ್ಣು ತಿನ್ನಿಸಿ ಅಲ್ಲಿಂದ ಕಾಲ್ ಕಿತ್ತಿದ್ದರು.

ನಾನು ಏನಪ್ಪಾ ಹೀಗೆ? ನಮ್ಮ ಮಕ್ಕಳು ಟೀಚರ್‌ಗೆ ಮಣ್ಣು ಮುಕ್ಕಿಸುತ್ತಾರೆ… ಅಂತ ಪೆಚ್ಚು ಮೋರೆ ಹಾಕಿ ಅಂಗಡಿಯವನಿಗೆ ತುಂಬಾ ಕನ್ವಿನ್ಸ್ ಮಾಡಲು ಪ್ರಯತ್ನಿಸಿದೆ. ಆದರೆ ಅವನು ವಿತಂಡವಾದ ಮಾಡುತ್ತಾ ಬಾಕಿ ಮೊತ್ತ ಕೊಡಲೇಬೇಕೆಂದು ಪಟ್ಟು ಹಿಡಿದ. ಸರಿ ಬೇರೆ ವಿಧಿ ಇಲ್ಲದೆ ಹೋಗಲಿ ಬಿಡು ಎಂದು ಹಣವನ್ನು ಕೊಟ್ಟು ಬೆಟ್ಟ ಹತ್ತಿದೆ. ಅಲ್ಲಿ ಬೆಟ್ಟದ ಮೇಲೆ ಆ ಮಕ್ಕಳು ಕಂಡರು. ನಮ್ಮ ಹುಡುಗರು ಓಡಿಬಂದು “ಮಿಸ್ ಆ ಮಕ್ಕಳು ಇಲ್ಲೇ ಇದ್ದಾರೆ. ಬೇಗ ಬನ್ನಿ” ಅಂದ್ರು ನಾನಾಗಲೇ ಆ ವಿಷಯ ಮರೆತಿದ್ದೆ. ಆದರೆ ನಮ್ಮ ಮಕ್ಕಳು ಅಷ್ಟಕ್ಕೆ ಸುಮ್ಮನೆ ಬಿಡ್ತಾರಾ? ನಮಗೆ ಮಾತ್ರ ತಪ್ಪು ಮಾಡಬಾರದು ಅಂತ ಬುದ್ಧಿ ಹೇಳ್ತೀರಾ ಟೀಚರ್ ನೀವು, ನಾವು ತಪ್ಪು ಮಾಡಿದರೆ “ಮಕ್ಕಳೇ, ತಪ್ಪು ಮಾಡಬಾರದು ಅಂತೀರಾ” ಎಂದರು. ಈಗ ಅವರು ಮಾಡಿದ ತಪ್ಪಿಗೆ ಅವರಿಗೆ ಒಂದು ಅವಕಾಶ ಕೊಡೋಣ. ಅವರೂ ಮಕ್ಕಳೇ ಅಲ್ವಾ, ನಿಮ್ಮ ಹಾಗೇ ಎಂದು ಸಮಾಧಾನ ಮಾಡುತ್ತಾ, ಹೋಗಲಿ ಬಿಡಿ ನಮ್ಮ ಹಣದಲ್ಲಿ ಟೋಪಿ ಹಾಕಿಕೊಳ್ಳಲಿ ಎಂದೆ. ಮಕ್ಕಳ ಗುಂಪಿನಿಂದ ಯಾರೋ ಹುಡುಗನೊಬ್ಬ “ಅವರು ಟೋಪಿ ಹಾಕಿಸಿಕೊಳ್ಳಲಿಲ್ಲ ಮಿಸ್. ನಿಮಗೆ ಟೋಪಿ ಹಾಕಿದರು.” ಅಂತ ನಕ್ಕಂತಾಯಿತು. ನಾನಿದನ್ನು ಗಮನಿಸಿಯೂ ಗಮನಿಸದಂತೆ ಮೌನಿಯಾಗಿದ್ದೆ. ನಾನು ಆ ಮಕ್ಕಳನ್ನು ಕೂಗುವುದು, ಅವರು ತಾವು ತಪ್ಪಿಸಿಕೊಳ್ಳಲು ಹೋಗಿ ಭಯದಿಂದ ಕಾಲು ಜಾರಿ ಎತ್ತರದ ಬೆಟ್ಟದ ಮೇಲಿಂದ ಕೆಳಗೆ ಬಿದ್ದರೆ ಅನ್ನುವ ಆತಂಕ ಮತ್ತು ಕಾಳಜಿ ನನ್ನದಾಗಿತ್ತು. ಮಕ್ಕಳ ತಪ್ಪಿಗೆ ಬುದ್ಧಿ ಹೇಳುವ ಜಾಗ ಮತ್ತು ಸಮಯ ಎರಡಕ್ಕೂ ಇದು ಸಕಾಲವಲ್ಲವೆಂದು ಅರಿತ ನಾನು ತೆಪ್ಪಗೆ ಬೆಟ್ಟದಿಂದ ಕೆಳಗೆ ಇಳಿದೆ.

ಇನ್ನೇನು ಬಸ್ಸು ಹತ್ತಬೇಕು ಆ ಹುಡುಗನನ್ನು ಕಂಡು ನಾನು ಅವನ ಬಳಿ ಹೋಗಿ “ನೀನು ಮಾಡಿದ್ದು ಸರೀನಾ?” ಅಂದೆ. ಸಾರಿ ಮಿಸ್ ಟೋಪಿ ಬೇಕಿತ್ತು, ಕಾಲು ಸುಡುತ್ತಿತ್ತು, ಕಾಸು ಇರಲಿಲ್ಲ. ಹೀಗೆ ಉಪಾಯ ಮಾಡಿದೆ ಅಂದೆ. ಅಪಾಯ ಬಂದಾಗ ಉಪಾಯ ಮಾಡು ಅಂತ ಪಾಠವೇ ಇದೆಯಲ್ಲಾ ಮಿಸ್ ಎಂದು ಅದೆಷ್ಟು ಗಟ್ಟಿಯಾಗಿ ‌ಹೇಳಿದ ಎಂದರೇ ತಾನು ಮಾಡಿದ್ದು ತಪ್ಪು ಎಂಬ ಕನಿಷ್ಠ ಭಾವವೂ ಅವನಲ್ಲಿ ಕಾಣಲಿಲ್ಲ. ತನ್ನ ತಪ್ಪನ್ನು ಸರಿ ಎಂದೇ ಸಮರ್ಥಿಸಿಕೊಂಡನು. ಎಷ್ಟೊಂದು ಮಾತನಾಡುತ್ತಿಯೋ ಕಂದಾ, ಉಪಾಯ ಅಲ್ಲ…. ಇದು ಮೋಸ ಅನ್ನುವರು. ಒಬ್ಬರನ್ನು ಯಾಮಾರಿಸಿ ಪಡೆಯುವುದು ದೊಡ್ಡ ತಪ್ಪು. ಇನ್ನು ಮುಂದೆ ಹೀಗೆ ಮಾಡಬಾರದು ಅಂತ ಹೇಳಿ ನಮ್ಮ ಬಸ್ ಕಡೆ ಹೊರಟೆ.

ಹಾಗೆ ಮುಂದೆ ಹೊರಟದ್ದೇ ಯಾರೋ ಸೆರಗನ್ನು ಹಿಡಿದು ಎಳೆದಂತೆ ಆಯಿತು. ಹಿಂದಿರುಗಿ ನೋಡಿದಾಗ, ಆ ಹುಡುಗ ಸೆರಗು ಹಿಡಿದು ಸಾರಿ ಮಿಸ್, ನೀವು ತುಂಬಾ ಬೈತೀರಾ ಅಂದುಕೊಂಡಿದ್ದೆ. ನೀವು ಇಷ್ಟು ಸುಲಭವಾಗಿ ಬಿಡುತ್ತೀರಾ ಅಂದುಕೊಂಡಿರಲಿಲ್ಲಾ ಎಂದನು. ಅವನನ್ನು ಒಮ್ಮೆ ತಬ್ಬಿ ನೀನೀಗ ಗುಡ್ ಬಾಯ್ ಆದೆ ನೋಡು ಎನ್ನುತ್ತಾ… ಬೈಯ್ಯುವುದು ಯಾರೊಬ್ಬರ ಉದ್ದೇಶ ಆಗಿರುವುದಿಲ್ಲ ಪುಟ್ಟ. ಮಕ್ಕಳು‌ ಸರಿ ದಾರಿಯಲ್ಲಿ ಸಾಗಿ ಚಂದದ ಬದುಕು ಕಟ್ಟಿಕೊಳ್ಳಲಿ ಎನ್ನುವುದಷ್ಟೇ ಶಿಕ್ಷಕರ ಗುರಿ ಎಂದೆ. ಇನ್ಯಾವತ್ತೂ ಹೀಗೆ ಮಾಡಬೇಡ ಎಂದು ಬುದ್ಧಿ ಹೇಳಿ ಬ್ಯಾಗಿನಿಂದ ಚೊಕೊಲೆಟ್ ತೆಗೆದು ಅವನಿಗೆ ನೀಡಿದೆ. ಅವನ ಮೊಗದಲ್ಲಿ ಅದೆಂತಹ ಸಂಭ್ರಮ ಕಾಣಿಸಿತು ಎಂದರೇ ಅಂಬರದ ತಾರೆಗಳೆಲ್ಲಾ ಇವನು ಮೊಗದಲ್ಲೆ ಮಿನುಗಿದಂತಾಯಿತು. ಅಂತೂ ಬುದ್ಧಿ ಹೇಳಿದ ಸಮಾಧಾನವು ನನ್ನದಾಯಿತು. ಅವಕಾಶ ಸಿಕ್ಕಲ್ಲೆಲ್ಲ ಸಿಕ್ಕ ಸಿಕ್ಕವರಿಗೆಲ್ಲ ಬೋಧನೆ ಮಾಡುತ್ತಿರುತ್ತೇವೆ. ಇದು ನಮ್ಮ ವೃತ್ತಿಯ ಪ್ರಭಾವವು ಇರಬಹುದು ಅಥವಾ ಕಳಕಳಿಯು ಇರಬಹುದು. ಸಾಮಾಜಿಕ ಜವಾಬ್ದಾರಿಯು ಅದರ ಹೊರತಲ್ಲ.

*****

ಮತ್ತೊಂದು ಘಟನೆ ಹೇಳುತ್ತೇನೆ ಕೇಳಿ; ಒಮ್ಮೆ ಧರ್ಮಸ್ಥಳ, ಹೊರನಾಡು, ಶೃಂಗೇರಿ ಕಡೆ ಪ್ರವಾಸ ಹೋಗಿದ್ದೆವು. ಹೊರನಾಡಿನಲ್ಲಿ ಮಕ್ಕಳನ್ನೆಲ್ಲ ಸಾಲು ಮಾಡಿಸಿ ದೇವಿ ದರ್ಶನಕ್ಕೆ ಹೋದೆವು. ಅಂದು ಅಲ್ಲಿನ ಪ್ರವಾಸಿಗಳ ಸಂಖ್ಯೆ ಅಧಿಕವಾಗಿತ್ತು. ನೂರಾರು ಮಕ್ಕಳು ಇದ್ದಾಗ ಅವರನ್ನು ಪಹರೆ ನಡೆಸುವುದು ಶಿಕ್ಷಕರುಗಳಿಗೆ ಅತಿ ದೊಡ್ಡ ಸವಾಲು. ಮಕ್ಕಳಿಗೆ ನಾವು ತರಗತಿಯಲ್ಲಿ ಏನೇ ನೀತಿ ಬೋಧನೆ ಮಾಡಿ ಕರೆತಂದಿದ್ದರೂ ಕೆಲವೊಮ್ಮೆ ಮಕ್ಕಳು ಹುಡುಗಾಟಿಕೆ‌ ಬುದ್ಧಿ ಬಿಡೋದೇ ಇಲ್ಲ. ಅದಕ್ಕೇ ಅವರನ್ನು ಮಕ್ಕಳು ಅನ್ನೋದು. ಇಂತಿಷ್ಟು ಮಕ್ಕಳಿಗೆ ಒಬ್ಬ ಶಿಕ್ಷಕರೆಂದು ನೇಮಿಸಿಕೊಳ್ಳಲಾಗಿತ್ತು. ನಾವು ಸಾಲಿನಲ್ಲಿ ಹಿಂದೆ ಇದ್ದೆವು. ಮುಂದೆ ಸ್ವಲ್ಪ ಗ್ಯಾಪ್ ಕಂಡಾಗ ನಮ್ಮ ಶಾಲೆಯ ಎರಡು ಗಂಡು ಮಕ್ಕಳು ಸುಮಾರು ಐವತ್ತು ಅರವತ್ತು ಮಕ್ಕಳನ್ನು ದಾಟಿ ಮುಂದೆ ನುಗ್ಗಿ ಹೋಗಿಬಿಟ್ರು. ಬೇರೆ ಮಕ್ಕಳ ಜೊತೆ ಸೇರಿ ತಪ್ಪಿಸಿಕೊಂಡು ಬಿಡುತ್ತವೆ ಎಂಬ ಆತಂಕದಲ್ಲಿ ನನ್ನ ಜೊತೆಗಿದ್ದ ಮಕ್ಕಳನ್ನು ಹಿಂದೆ ಇದ್ದ ಶಿಕ್ಷಕರ ಜವಾಬ್ದಾರಿಗೆ ನೀಡಿ ಹಗ್ಗದಡಿ ನುಗ್ಗಿ ನಾನು ಕೂಡ ಅವರು ಹೋದ ದಾರಿಯಲ್ಲಿ ಚಲಿಸಿ ಆ ಮಕ್ಕಳನ್ನು ಸೇರಿಕೊಂಡೆ.‌ ಅದನ್ನು ಅಲ್ಲಿರುವ ಸೆಕ್ಯುರಿಟಿ ಗಾರ್ಡ್ ನೋಡಿದರು. ನಾನಿರುವಲ್ಲಿಗೆ ಬಂದು “ಏನ್ರೀ ನೀವೆಂತ ಟೀಚರ್? ಸರದಿಯನ್ನು ಅನುಸರಿಸುವುದು ನಿಮಗೆ ಗೊತ್ತಿಲ್ವಾ? ನೀವೆಲ್ಲ ಶಾಲೆಯಲ್ಲಿ ಅದೇನು ಕಲಿಸ್ತೀರಾ? ನಿಮಗೆ ರೂಲ್ಸ್ ಗೊತ್ತಿಲ್ಲ ಪಾಪ ಆ ಮಕ್ಕಳು ಏನು ಕಲಿತಾವೋ ನಿಮ್ಮಿಂದ? ನಿಮಗೆ ಕಾಯುವ ತಾಳ್ಮೆ ಇಲ್ಲ. ನಿಮಗೆ ದರ್ಶನ ಬೇರೆ ಕೇಡು?” ಎಂದು ಒಂದೇ ಉಸಿರಿನಲ್ಲಿ ಒದರ ತೊಡಗಿದರು. ಆದರೂ ನಾನೂ ಮನುಷ್ಯಳಲ್ಲವೇ. ಸಮಾಜದ ಪರಿವೆಯಿಂದ ಒಮ್ಮೆ ಕತ್ತೆತ್ತಿ ಸುತ್ತಲೂ ನೋಡಿದೆ. ಅಲ್ಲಿದ್ದ ಭಕ್ತರೆಲ್ಲ ಪೂಜಾರಿ ಇಂದ ದೇವರಿಗೆ ಆದ ಅರ್ಚನೆಗಿಂತಲೂ, ಗಾರ್ಡ್‌ನಿಂದ ನನಗೆ ಆದ ಅಭಿಷೇಕವನ್ನೇ ಎಂಜಾಯ್ ಮಾಡುತ್ತಿದ್ದರೆ. ಅವರ ನೋಟ ಹೇಗಿತ್ತೆಂದರೆ ಎಂದೂ ನೋಡದ ಅಪರೂಪದ ಪ್ರಾಣಿಯನ್ನ ಕಣ್ಣು ಮಿಟುಕಿಸದೆ ನೋಡುತ್ತಿದ್ದಾರೇನೋ ಎನಿಸಿತು. ನಾನು ಒಬ್ಬ ಟೀಚರ್ ಆಗಿ ನಿಯಮ ಮುರಿದು ಇಷ್ಟು ಜನರ ಮುಂದೆ ತಲೆತಗ್ಗಿಸುವ ಅವಮಾನ ಕಾಡಿತು. ಪಾಪ ನಾನು ಬೈಯ್ಯಿಸಿಕೊಂಡಿದ್ದಕ್ಕೆ ನಮ್ಮ ಮಕ್ಕಳಿಗೂ ತುಂಬಾ ನೋವಾಯಿತು. ಮಿಸ್ ಸಾರಿ ಮಿಸ್ ಗೊತ್ತಾಗಲಿಲ್ಲ. ಜಾಗ ಖಾಲಿ ಇದೆ ಅಂತ ನುಗ್ಗಿ ಬಿಟ್ಟೋ ಅಂದ್ರು. ಪರವಾಗಿಲ್ಲ ಮಕ್ಳ, ಈಗ ಸಮಾಧಾನ ಮಾಡ್ಕೊಳ್ಳಿ. ನೋಡಿ ಇಂದು ನೀವು ಮಾಡಿದ ತಪ್ಪಿನಿಂದ ನಾನು ತಲೆತಗ್ಗಿಸುವಂತೆ ಆಯ್ತು. ನಾನು ಮಾಡಿದ ತಪ್ಪಿನಿಂದ ಇಡೀ ಶಿಕ್ಷಕ ಸಮುದಾಯ ದೂರಿಗೆ ಗುರಿಯಾಯಿತು. ನಮ್ಮ ಬದುಕು ಒಂದು ಮುತ್ತಿನ ಹಾರದಂತೆ ಎಲ್ಲ ಮುತ್ತುಗಳು ಕ್ರಮಬದ್ಧವಾಗಿ ಜೋಡಿಸಲ್ಪಟ್ಟಾಗ ಅದಕ್ಕೊಂದು ಶೋಭೆ ಲಭಿಸುತ್ತದೆ. ಒಂದು ಮಣಿ ಸಿಡಿದರೂ ಹೇಗೆ ಅದರ ಅಂದ ಕೆಡುತ್ತದೆಯೋ ಹಾಗೆ, ನಾವು ಯಾರೋ ಒಬ್ಬರು ತಪ್ಪು ಮಾಡಿದರು ನಿಯಮಗಳು ಕಳಚಿ ಸಾಮಾಜಿಕ ಬದುಕಿನ ಹಾರದ ಚಂದ ತಪ್ಪಿ ಸಮಾಜದ ಮುಂದೆ ನಾವು ಹೀಗೆ ಬೆತ್ತಲಾಗಿ ನಿಲ್ಲಬೇಕಾಗುತ್ತದೆ. ಎಂದು ಬುದ್ಧಿ ಹೇಳಿದೆ‌. ಪಾಪ ಅವಕ್ಕೆ ಏನು ಅರ್ಥವಾಯಿತೋ ಇಲ್ಲವೋ ನನ್ನನ್ನೇ ಪಿಳಿಪಿಳಿ ಕಣ್ಣು ಬಿಡುತ್ತಾ ನೋಡುತ್ತಿದ್ದವು.

ಇಂತಹ ಲೆಕ್ಕವಿಲ್ಲದಷ್ಟು ಅನುಭವಗಳು ಪ್ರವಾಸದಲ್ಲಿ ನನಗೂ ಮತ್ತು ವೃತ್ತಿ ಬಾಂಧವರೆಲ್ಲರಿಗೂ ಆಗುತ್ತಿರುತ್ತವೆ. ಕೆಲವರು ಹೇಳುತ್ತಾರೆ. “ಈ ಮೇಷ್ಟ್ರುಗಳು ಬಿಟ್ಟಿ ಟೂರ್ ಹೋಗಲು ಪ್ರತಿ ವರ್ಷ ಟೂರು ಮಾಡುತ್ತಾರೆ” ಅಂತ. ಆದರೆ ಸತ್ಯ ಸಂಗತಿ ಎಂದರೆ ಮೇಷ್ಟ್ರುಗಳು ಮಕ್ಕಳಿಗಿಂತ ಹೆಚ್ಚು ಹಣ ಖರ್ಚು ಮಾಡುತ್ತಾರೆ. ಇತ್ತೀಚಿನ ದಿನಗಳಲ್ಲಿ ಬಸ್ ದರ, ಪ್ರವೇಶ ಶುಲ್ಕ, ಊಟ, ವಸತಿ, ಔಷಧ ಅಂತ ದುಬಾರಿ ಖರ್ಚು ಬರುತ್ತವೆ. ಅಷ್ಟು ಹಣವನ್ನು ಸರ್ಕಾರಿ ಶಾಲಾ ಮಕ್ಕಳಿಂದ ಪಡೆಯಲಾಗುವುದಿಲ್ಲ. ಹಾಗಾಗಿ ಮಕ್ಕಳಿಂದ ಒಂದಿಷ್ಟು ನಿಗದಿತ ಮೊತ್ತವನ್ನ ವಸೂಲಿ ಮಾಡಿ, ಉಳಿದ ಹಣವನ್ನು ಶಿಕ್ಷಕರುಗಳೆಲ್ಲರೂ ಸೇರಿ ಹಂಚಿಕೊಂಡು ಬರಿಸುತ್ತೇವೆ ಎನ್ನುವುದೇ ಸತ್ಯ ಸಂಗತಿ. ಶೈಕ್ಷಣಿಕ ಪ್ರವಾಸ ಅಗತ್ಯವಿದೆಯ ಅಂತಾನೂ ಕೆಲವರು ಮೂಗು ಮುರಿಯುತ್ತಾರೆ. ಖಂಡಿತ ಇದೆ. ಪ್ರತಿನಿತ್ಯ ಶಾಲಾ ಕೊಠಡಿ, ಕಪ್ಪು ಹಲಗೆ, ಹೋಂ ವರ್ಕ್, ಕ್ಲಾಸ್, ಪುಸ್ತಕ, ಪೆನ್ನುಗಳ ಒಡನಾಟದಲ್ಲಿ ಕಲಿಯುವ ಮಕ್ಕಳಿಗೆ, ಹೊಸ ಹೊಸ ಆಯಾಮಗಳ ಕಲಿಕೆಗೆ ತೆರೆದುಕೊಳ್ಳಲು ಅನುವು ಮಾಡಿಕೊಡುವುದು ಶಿಕ್ಷಣದ ಪ್ರಧಾನ ಆಶಯವೂ ಹೌದು. ಆ ನಿಟ್ಟಿನಲ್ಲಿ ಪ್ರವಾಸ ಪ್ರಮುಖವಾದದ್ದು.

ಶೈಕ್ಷಣಿಕ ಪ್ರವಾಸ ಎಂಬುದು ಶಾಲಾ ಜೀವನದ ಅತಿ ವಿಶೇಷ ಚಟುವಟಿಕೆ. ವರ್ಷವಿಡಿ ನಾಲ್ಕು ಗೋಡೆಗಳ ನಡುವೆ ಬಂಧಿಯಾಗಿರುವ ಮಕ್ಕಳಿಗೆ ಹೊರ ಜಗತ್ತಿನ ಅರಿವು ಮೂಡಿಸಲು, ನವ ನವೀನ ಸ್ಥಳಗಳನ್ನು ನೋಡಲು, ಮನೋರಂಜನೆ ಪಡೆಯಲು, ಪರಿಸರದೊಂದಿಗೆ ಒಳಗೊಳ್ಳಲು, ಇತಿಹಾಸ ಪುರಾಣ ಕಲೆ ಸಂಸ್ಕೃತಿಗಳನ್ನ ತಿಳಿಯಲು, ಹೊರ ಪ್ರಪಂಚದ ವಿಸ್ಮಯಗಳನ್ನು ವೀಕ್ಷಿಸಲು ಪ್ರವಾಸಗಳು ಬಹಳ ಮುಖ್ಯ ಅಂತ. ಪ್ರವಾಸದ ಅನುಭವಗಳನ್ನು ಶಿಕ್ಷಕರು ವೃತ್ತಿ ಬದುಕಿನದ್ದುಕ್ಕೂ ಅನುಭವಿಸಿರುತ್ತಾರೆ. ಇವೆಲ್ಲವೂ ಸಿಹಿಯಾಗಿರುತ್ತದೆ ಎಂದೇನೂ ಅಲ್ಲಾ. ಯುಗಾದಿಯ ಬೇವು ಬೆಲ್ಲದಂತೆ ಸಮಾನವಾಗಿ ಸ್ವೀಕರಿಸುತ್ತಾ ಮುನ್ನಡೆಯುತ್ತೇವೆ. ಅದು ನಮ್ಮ ಶಿಕ್ಷಕರ ಜವಾಬ್ದಾರಿಯು ಹೌದು. ಶಿಕ್ಷಕರ ಭಾವ ಕೋಶದಲ್ಲಿ ಇಂತಹ ಅಸಂಖ್ಯ ಅವಿಸ್ಮರಣೀಯ ಘಟನೆಗಳು ದಾಖಲಾಗಿರುತ್ತವೆ. ಇಂತಹ ಅನುಭವಗಳು ಶಿಕ್ಷಕರಿಗೆ ವೃತ್ತಿ ಮತ್ತು ಮಕ್ಕಳು ನೀಡಿದಂತಹ ಅತಿ ದೊಡ್ಡ ಬಂಡವಾಳ ಎಂದರೆ ತಪ್ಪಲ್ಲ. ಈ ಬಂಡವಾಳ ನಿಜಕ್ಕೂ ವರ್ಣಾನಾತೀತ.