ಮನುಷ್ಯತ್ವಕ್ಕೆ ಸಮಾನಾಗುವ ಮಾರ್ಕ್ಸ್ ಆಗಲಿ, ಮಧ್ವಾಚಾರ್ಯ ಆಗಲಿ ಅವರಿಗೆ ಬೇರೆಯಾಗಿ ಕಾಣುವುದಿಲ್ಲ. ಅದ್ವೈತವು ಅಂತಿಮ ಸತ್ಯವಾದರೆ ದ್ವೈತವು ದೈನಂದಿನ ವಾಸ್ತವವಾಗಿದೆ. ಅಂತಿಮ ಸತ್ಯಕ್ಕೆ ಶರಣಾಗುವುದು ಕಷ್ಟಕರವಾದುದಲ್ಲ. ಆದರೆ ದೈನಂದಿನ ವಾಸ್ತವದ ಮಧ್ಯೆ ಒಳ್ಳೆಯತನವನ್ನು ಹೆಚ್ಚಿಸುವುದು ಕಷ್ಟದ ಕೆಲಸ. ದೇವರು ಬೇರೆ, ಮನುಷ್ಯರು ಬೇರೆ ಎಂದು ಮಧ್ವಾಚಾರ್ಯರು ಹೇಳಿದರು. ಮಾರ್ಕ್ಸ್ ದೇವರ ಹಂಗಿಲ್ಲದೆ ಮನುಷ್ಯರೊಳಗೆ ಕೇವಲ ಮನುಷ್ಯನನ್ನು ಹುಡುಕುವುದಕ್ಕಾಗಿ ಶ್ರಮಿಸಿದರು.
ರಂಜಾನ್ ದರ್ಗಾ ಬರೆಯುವ ಆತ್ಮಕತೆ ʻನೆನಪಾದಾಗಲೆಲ್ಲʼ ಸರಣಿಯ 73ನೇ ಕಂತು ನಿಮ್ಮ ಓದಿಗೆ
ಸುಬ್ಬಣ್ಣ ರಂಗನಾಥ ಎಕ್ಕುಂಡಿ (20.01.1923 – 20.08.1995)
ಇಂದು ಅಸ್ತಿತ್ವದಲ್ಲಿ ಇಲ್ಲದ ಸೋವಿಯತ್ ದೇಶದ ಕವಿ ರಸೂಲ್ ಗಮ್ಜತೊವ್ ಗೋರಿಗಲ್ಲೊಂದನ್ನು ತೋರಿಸಿ ಹೀಗೆ ಹೇಳುತ್ತಾರೆ.
“ಇಲ್ಲಿ ನಮಸ್ಕರಿಸು
ಇವರು ಮಠಾಧೀಶರಾಗಿರಲಿಲ್ಲ.
ಚಕ್ರವರ್ತಿಯಾಗಿದ್ದಿಲ್ಲ
ಕೇವಲ ಮನುಷ್ಯರಾಗಿದ್ದರು.”
ಕೇವಲ ಅಂದರೆ ಪವಿತ್ರ ಮನುಷ್ಯರಾಗಿ ಬದುಕುವುದು ಬಹಳ ಕಷ್ಟದ ಕೆಲಸ. ನಮ್ಮ ಕವಿ ಸು.ರಂ. ಎಕ್ಕುಂಡಿ ಅವರು ಕೇವಲ ಮನುಷ್ಯರಾಗಿ ಬದುಕಿ, ಬದುಕುವ ದಾರಿಯನ್ನು ತೋರಿಸಿಕೊಟ್ಟು ಹೋದರು.
ಅವರು ಕೊನೆಯವರೆಗೂ ಪ್ರಜ್ಞಾಪೂರ್ಣವಾದ ಮುಗ್ಧತೆಯನ್ನು ಉಳಿಸಿಕೊಂಡವರಾಗಿದ್ದರು. ಅಂತೆಯೆ ಅವರ ನಗು ಮಗುವಿನ ಮುಗ್ಧತೆಯನ್ನು ಸಾಕಾರಗೊಳಿಸುತ್ತಿತ್ತು. ಅವರ ಮಾತಿನಲ್ಲಿ ಅಂತಃಕರಣ ಉಕ್ಕುತ್ತಿತ್ತು. ಕರುಣೆ, ಪ್ರೀತಿ, ಅನುಕಂಪ ಮತ್ತು ನಿಸ್ವಾರ್ಥ ಮೋಹದ ಕೊರತೆಯಿಂದ ಈ ಸಂಪನ್ನ ಪೃಥ್ವಿ ಬಳಲುತ್ತಿದೆ ಎಂಬುದನ್ನು ಅವರು ಅನುಭವದೊಂದಿಗೆ ಅರಿತಿದ್ದರು. ಹೀಗಾಗಿ ದೈನಂದಿನ ಬದುಕಿನ ಸಂಕಷ್ಟಗಳ ಮುಳ್ಳುಗಳ ಮಧ್ಯೆಯೂ ಈ ಲೋಕವನ್ನು ಮತ್ತು ಲೋಗರನ್ನು ಮುಗುಳ್ನಗುವ ಹೂವಿನಂತೆ, ಸ್ವಚ್ಛಂದ ಹಾರಾಡುವ ಹಕ್ಕಿಯಂತೆ ಕಂಡರು. ಅವರ ಕಾಣ್ಕೆಯ ಗುರಿ ಮನುಷ್ಯತ್ವ ಆಗಿತ್ತು. ಅವರ ಮಾತುಗಳನ್ನು ಕೇಳುವಾಗಲೆಲ್ಲ ನಿಗೂಢ ಪಕ್ಷಿಯೊಂದು ಮನುಷ್ಯಪ್ರೀತಿಗಾಗಿ ಹಲಬುವಂತೆ ಭಾಸವಾಗುತ್ತಿತ್ತು. ಆ ಧ್ವನಿ, ಆ ನಗು, ಆ ನಡಿಗೆ ನಮಗೆ ಸವಾಲಾಗಿ ನಿಲ್ಲುತ್ತಿದ್ದವು. ಆಗ ನಮ್ಮೊಳಗಿನ ಕೇವಲ ಮನುಷ್ಯ ಜಾಗೃತನಾಗುತ್ತಿದ್ದ.
1981ರ ಒಂದು ದಿನ ಮಾನಸಗಂಗೋತ್ರಿಯ ವಿದ್ಯಾರ್ಥಿ ನಿಲಯದ ನನ್ನ ಕೋಣೆಯನ್ನು ಹುಡುಕಿಕೊಂಡು ಸು.ರಂ. ಎಕ್ಕುಂಡಿ ಅವರು ಬಂದರು. ಅವರು ಕಾಲು ಎಳೆಯುತ್ತ ಬರುತ್ತಿದ್ದರು. ಅವರ ಕೈಯಲ್ಲಿ “ಪ್ರತಿಬಿಂಬಗಳು” ಕವನ ಸಂಕಲನವಿತ್ತು. ಮಾನವ ಘನತೆಗಾಗಿ ಹಾತೊರೆದ ಸೋವಿಯತ್ ಕವಿಗಳ ಕವನಗಳನ್ನು ಅವರು ಅನುವಾದಿಸಿ “ಪ್ರತಿಬಿಂಬಗಳು” ಕವನ ಸಂಕಲನ ಸಿದ್ಧಪಡಿಸಿದ್ದರು. ಆ ಸಂಕಲನದೊಂದಿಗೆ ಬಂದ ಅವರು ಪ್ರೀತಿಯಿಂದ ನನ್ನನ್ನು ಮುಟ್ಟಿದರು. ನನ್ನ “ಕಾವ್ಯ ಬಂತು ಬೀದಿಗೆ” ಬಗ್ಗೆ ಸಂತಸ ವ್ಯಕ್ತಪಡಿಸಿದರು. “ಪ್ರತಿಬಿಂಬಗಳು” ನಮ್ಮ ಆಶಯವನ್ನೇ ವ್ಯಕ್ತಪಡಿಸುತ್ತವೆ ಎಂದು ಹೇಳಿ ನನಗೆ ಕೊಟ್ಟರು. ಮಾನವ ಘನತೆಯನ್ನು ಕಾಪಾಡುವುದೇ ನಮ್ಮೆಲ್ಲರ ಬಹುಮುಖ್ಯ ಜವಾಬ್ದಾರಿ ಎಂದು ಅವರು ಅಂದು ನನಗೆ ಹೇಳಿದ್ದು ನನ್ನ ಹೃದಯದ ಮಿಡಿತದೊಂದಿಗೆ ಒಂದಾಗಿ ಹೋಗಿದೆ.
ಬಹಳ ವರ್ಷಗಳ ನಂತರ ಅವರು ಬೆಂಗಳೂರಿನಲ್ಲಿ ಸಿಕ್ಕಾಗ ದಕ್ಷಿಣ ಆಫ್ರಿಕಾದ ಕ್ರಾಂತಿಕಾರಿಗಳ ಬಗ್ಗೆ ಬರೆಯುವ ಬಯಕೆ ವ್ಯಕ್ತಪಡಿಸಿದರು. ದಕ್ಷಿಣ ಆಫ್ರಿಕಾದ ಆಫ್ರಿಕನ್ ನ್ಯಾಷನಲ್ ಕಾಂಗ್ರೆಸ್ ಪಕ್ಷದ “ಸೆಚೆಬಾ” ಪತ್ರಿಕೆಯ ಅನೇಕ ಪ್ರತಿಗಳನ್ನು ಅವರಿಗೆ ಕೊಟ್ಟೆ. ಅವರಿಗೆ ನಿಧಿ ಸಿಕ್ಕಿದಷ್ಟು ಸಂತಸವಾಯಿತು.
ವಿಶ್ವದ ಕ್ರಾಂತಿಕಾರಿಗಳ ಕುರಿತು ಅವರು ಕೆಂಬಾವುಟದಲ್ಲಿ ಬರೆದ ಲೇಖನಗಳು ಅವರ ಅಂತಃಕರಣದ ಪ್ರತೀಕವಾಗಿವೆ. ನವಕರ್ನಾಟಕ ಪಬ್ಲಿಕೇಷನ್‌ಗಾಗಿ ಸಿ.ವಿ. ಆನಂದ್ ಅವರೊಂದಿಗೆ ಅವುಗಳ ಸಂಪಾದನೆ ಮಾಡಿಕೊಟ್ಟೆ. ಆ “ಪಂಜುಗಳು” ಪುಸ್ತಕ 1998ರಲ್ಲಿ ಪ್ರಥಮ ಮುದ್ರಣ ಕಂಡಿತು. ಇಂದಿಗೂ ಎಡಪಂಥೀಯರಿಗೆ ಮತ್ತು ಇತರೆ ಮಾನವತಾವಾದಿಗಳಿಗೆ ಅದು ಮಾರ್ಗದರ್ಶಿ ಪುಸ್ತಕವಾಗಿದೆ. ಅದಕ್ಕೆ ಬರೆದ ಮುನ್ನುಡಿ ನನಗೆ ನೆನಪಾಗುತ್ತಲೇ ಇರುತ್ತದೆ.
ಕ್ಯೂಬದ ಕ್ರಾಂತಿಕಾರಿ ಜೀಸಸ್ ಗೆಯೊಲ್ ಬೊಲಿವಿಯಾದಲ್ಲಿ ಹೋರಾಡುವ ವೇಳೆ ತನ್ನ ಮಗನ ನಾಲ್ಕನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಕಳಿಸಿದ ಶುಭಾಶಯ ಪತ್ರದ ಕೆಲ ಸಾಲುಗಳನ್ನು ಎಕ್ಕುಂಡಿಯವರು ಆಪ್ತವಾಗಿ ಕನ್ನಡಮಯ ಮಾಡಿದ್ದಾರೆ. ಕೆಲ ಸಾಲುಗಳು ಹೀಗಿವೆ:
ನೀನು ಎಂದೆಂದಿಗೂ ಪ್ರಾಮಾಣಿಕ, ದಯಾಳು, ಹಾಗೂ ಸತ್ಯವಂತನಾಗಿರು.
ಎಷ್ಟೇ ಕಹಿ ಪ್ರಸಂಗ ಬಂದರೂ ಋಜುಮಾರ್ಗ ಬಿಡಬೇಡ.
ನಿನ್ನದು ಸರಿಯಾದ ತೀರ್ಮಾನವಿದ್ದರೆ ಅದಕ್ಕೆ ದೃಢವಾಗಿ ಅಂಟಿಕೊ.
ಟೀಕೆ ಟಿಪ್ಪಣಿಗಳನ್ನು ಕೇಳಿಕೊ; ಇನ್ನೊಬ್ಬರು ಹೇಳಿದ್ದಕ್ಕೆಲ್ಲ ಕವಲೆತ್ತಿನಂತೆ ತಲೆ ಹಾಕಬೇಡ.
ಯಾರ ಯಜಮಾನಿಕೆಗೂ ತಲೆಯೊಡ್ಡಬೇಡ.
ಕ್ಷಣಕ್ಷಣಕ್ಕೂ ನಿನ್ನನ್ನು ನೀನೇ ಪರೀಕ್ಷಿಸಿಕೊ.
ನಿನ್ನನ್ನು ನೀನೇ ವಿಮರ್ಶಿಸು.
ನಿನ್ನ ತಾಯ್ನಾಡು ಹೆಮ್ಮೆ ಪಡುವ ಮಗನಾಗು.
ಒಬ್ಬ ಕ್ರಾಂತಿಕಾರಿಯಾಗು, ಒಬ್ಬ ಕಮ್ಯುನಿಸ್ಟ್ ಆಗು.
ಇದೇ “ಪಂಜುಗಳು” ಪುಸ್ತಕದಲ್ಲಿ ಗೇಬ್ರಿಯಲ್ ಮಿಸ್ತ್ರಾಲಿ ಎಂಬ ಚಿಲಿಯ ಪ್ರಾಥಮಿಕ ಶಾಲಾ ಶಿಕ್ಷಕಿಯ ಕುರಿತು ಒಂದು ಲೇಖನವಿದೆ. “ಅವಳಲ್ಲಿ ಅದು ಹೇಗೋ ಪೃಥ್ವಿಗಿದ್ದಂತೆ ಅನಾದಿ ಕಾಲದ ಮಾತೃತ್ವದ ವಾತ್ಸಲ್ಯ ತುಂಬಿ ತುಳುಕುತ್ತಿತ್ತು. ಅದನ್ನು ಅಭಿವ್ಯಕ್ತಿಗೊಳಿಸುವ ಅಸಾಮಾನ್ಯ ಕಾವ್ಯ ಪ್ರತಿಭೆಯೂ ಇತ್ತು” ಎಂದು ಎಕ್ಕುಂಡಿಯವರು ಭಾವಪೂರ್ಣವಾಗಿ ಹೇಳಿದ್ದಾರೆ.
ಮಿಸ್ತ್ರಾಲಿ 15ನೇ ವರ್ಷದಲ್ಲಿ ಶಿಕ್ಷಕಿಯಾದಳು. ಕಷ್ಟದ ಜೀವನ ನಡೆಸಿ ತನಗೆ ಪ್ರಿಯವಾದ ಶಿಕ್ಷಕ ವೃತ್ತಿಯನ್ನೇ ಆಯ್ಕೆ ಮಾಡಿಕೊಂಡಳು. ಆರ್ಥಿಕ ದುಃಸ್ಥಿತಿಯಿಂದ ಬೇಸತ್ತ ಆಕೆಯ ಪ್ರಿಯಕರ ಆತ್ಮಹತ್ಯೆ ಮಾಡಿಕೊಂಡ. ಆ ದುಃಖ ಮಿಸ್ತ್ರಾಲಿಯ ಬದುಕಲ್ಲಿ ಕಾವ್ಯವಾಗಿ ಹರಿಯಿತು. ಆಕೆ ತನ್ನ ಕಾವ್ಯದ ಮೂಲಕ ಸ್ಪ್ಯಾನಿಷ್ ಭಾಷೆಯನ್ನು ಶ್ರೀಮಂತಗೊಳಿಸಿದಳು. ಅವಳ ಕಾವ್ಯ ಪ್ರತಿಭೆಗೆ ನೊಬೆಲ್ ಪ್ರಶಸ್ತಿಯೂ ಸಿಕ್ಕಿತು. ಪ್ರಾಥಮಿಕ ಶಾಲಾ ಶಿಕ್ಷಕಿಯೊಬ್ಬಳು ನೊಬೆಲ್ ಪ್ರಶಸ್ತಿ ಪಡೆದದ್ದು ಅನನ್ಯವಾದುದು. ಆದರೆ ಆ ಪ್ರಶಸ್ತಿ ಅವಳ ಭಾವಪೂರ್ಣತೆಗೆ ಎಂದೂ ಭಂಗ ತರಲಿಲ್ಲ.
ಅವಳು “ಮಕ್ಕಳಿಗೆ” ಎಂಬ ಕವನದಲ್ಲಿ ಹೀಗೆ ಭಾವಪೂರ್ಣವಾಗಿ ಬರೆದಿದ್ದಾಳೆ:
“ಶಾಲೆಯ ಗೋಡೆಯಲ್ಲಿ
ನಾ ಇಟ್ಟಂಗಿಯಾದರೆ
ಬಹಳ ವೇದನೆ ಆದೀತು ನನಗೆ.
ಏಕೆಂದರೆ ಬೆಳಗಿನ ಜಾವದಲ್ಲಿ
ನಾ ಹಾಡಲಾರೆ ನಿಮ್ಮೊಂದಿಗೆ.”
ಎಕ್ಕುಂಡಿಯವರ ಈ ಅನುವಾದಿತ ಕವಿತೆ ಓದುವಾಗಲೆಲ್ಲ ನನ್ನ ಕಣ್ಣುಗಳು ತೇವಗೊಳ್ಳುತ್ತವೆ. ಇತರರಂತೆ ಗೇಬ್ರಿಯಲ್ ಮಿಸ್ತ್ರಾಲಿ ಕೂಡ ಸತ್ತಳು. “ಹಾಡಿ ಸಂತೋಷಪಡಿಸಿದ ಈ ಚೇತನವನ್ನು ಕಾಲವು ಮೌನದ ಮಹಾಸೌಧದಲ್ಲಿ ಒಂದು ಇಟ್ಟಂಗಿಯಾಗಿಸಿತು” ಎಂದು ಎಕ್ಕುಂಡಿಯವರು ಮರುಗಿದ್ದಾರೆ.
ತೊಂಬತ್ತರ ದಶಕದ ಪೂರ್ವಾರ್ಧದಲ್ಲಿ ನಾನು ಕಾರವಾರದಲ್ಲಿ ಪ್ರಜಾವಾಣಿಯ ಬಾತ್ಮೀದಾರನಾಗಿದ್ದಾಗ, ಮತ್ತೆ ಅವರ ಮಾತು ಕೇಳುವ ಭಾಗ್ಯ ನನಗೆ ಲಭಿಸಿತು. ಮಂಚಿಕೇರಿಯ ಗೆಳೆಯರು ಈ ಅವಕಾಶ ಕಲ್ಪಿಸಿದ್ದರು. ಪ್ರೀತಿ ಮತ್ತು ಸಮಾನತೆಯ ಕುರಿತು ಅವರು ಕಳಕಳಿಯಿಂದ ಮಾತನಾಡಿದರು. ಆರ್ಥಿಕ ಸಂಕಷ್ಟಗಳ ಮಧ್ಯೆ ಕೂಡ ವಿಶಾಲ ನಿಸರ್ಗ ಮತ್ತು ಆತ್ಮಸಂಬಂಧಗಳ ಮಧ್ಯೆ ಸುಖವನರಿಯಲು ಸಾಧ್ಯ ಎಂಬುದು ಅವರ ಮಾತಿನ ತಿರುಳಾಗಿತ್ತು.
ಅವರು ಕಲಿಸಿದ ಬಂಕಿಕೊಡ್ಲ ಶಾಲೆಯನ್ನು ನೊಡಿದ್ದೇನೆ. ಗೋಕರ್ಣ ಬಳಿಯ ಬಂಕಿಕೊಡ್ಲ ಗ್ರಾಮ ನಮ್ಮ ಸಾಹಿತ್ಯ ಮತ್ತು ವಿಜ್ಞಾನ ಕ್ಷೇತ್ರಗಳಿಗೆ ಮೇಧಾವಿಗಳನ್ನು ಕೊಟ್ಟಿದೆ. ಬುದ್ಧಿವಂತರ ಗ್ರಾಮವೆಂದು ಹೆಸರಾದ ಬಂಕಿಕೊಡ್ಲ ಅನೇಕ ಬುದ್ಧಿಮಾಂದ್ಯರನ್ನು ತನ್ನ ಮಡಿಲಲ್ಲೇ ಇಟ್ಟುಕೊಂಡಿದೆ. ಸುತ್ತೆಲ್ಲ ಮುಕ್ರಿಗಳು, ಆಗೇರರು, ಹಾಲಕ್ಕಿ ಮಕ್ಕಳು ಮತ್ತು ಮೀನುಗಾರರು ಕಷ್ಟದ ಜೀವನ ಸಾಗಿಸುತ್ತಾರೆ. ಸಹಜ ಮುಗ್ಧತೆಯಿಂದಾಗಿ ಅವರೆಲ್ಲರ ಮನಸ್ಸು ಕೂಡ ಇನ್ನೂ ಕಹಿಯಾಗಿಲ್ಲ. ಅವರ ಹಾಡುಗಳಲ್ಲಿ ಮತ್ತು ಕುಣಿತಗಳಲ್ಲಿ ಜೀವನಪ್ರೀತಿ ತುಂಬಿಕೊಂಡಿದೆ. ಅವರ ಬದುಕಿನಲ್ಲಿ ನಮ್ಮ ಪ್ರೀತಿಯ ಕವಿ ಸು.ರಂ. ಎಕ್ಕುಂಡಿ ಅವರ ಕಾವ್ಯದ ಬೇರುಗಳಿವೆ.
ಮನುಷ್ಯತ್ವಕ್ಕೆ ಸಮಾನಾಗುವ ಮಾರ್ಕ್ಸ್ ಆಗಲಿ, ಮಧ್ವಾಚಾರ್ಯ ಆಗಲಿ ಅವರಿಗೆ ಬೇರೆಯಾಗಿ ಕಾಣುವುದಿಲ್ಲ. ಅದ್ವೈತವು ಅಂತಿಮ ಸತ್ಯವಾದರೆ ದ್ವೈತವು ದೈನಂದಿನ ವಾಸ್ತವವಾಗಿದೆ. ಅಂತಿಮ ಸತ್ಯಕ್ಕೆ ಶರಣಾಗುವುದು ಕಷ್ಟಕರವಾದುದಲ್ಲ. ಆದರೆ ದೈನಂದಿನ ವಾಸ್ತವದ ಮಧ್ಯೆ ಒಳ್ಳೆಯತನವನ್ನು ಹೆಚ್ಚಿಸುವುದು ಕಷ್ಟದ ಕೆಲಸ.
ಆರ್ಥಿಕ ದುಃಸ್ಥಿತಿಯಿಂದ ಬೇಸತ್ತ ಆಕೆಯ ಪ್ರಿಯಕರ ಆತ್ಮಹತ್ಯೆ ಮಾಡಿಕೊಂಡ. ಆ ದುಃಖ ಮಿಸ್ತ್ರಾಲಿಯ ಬದುಕಲ್ಲಿ ಕಾವ್ಯವಾಗಿ ಹರಿಯಿತು. ಆಕೆ ತನ್ನ ಕಾವ್ಯದ ಮೂಲಕ ಸ್ಪ್ಯಾನಿಷ್ ಭಾಷೆಯನ್ನು ಶ್ರೀಮಂತಗೊಳಿಸಿದಳು. ಅವಳ ಕಾವ್ಯ ಪ್ರತಿಭೆಗೆ ನೊಬೆಲ್ ಪ್ರಶಸ್ತಿಯೂ ಸಿಕ್ಕಿತು. ಪ್ರಾಥಮಿಕ ಶಾಲಾ ಶಿಕ್ಷಕಿಯೊಬ್ಬಳು ನೊಬೆಲ್ ಪ್ರಶಸ್ತಿ ಪಡೆದದ್ದು ಅನನ್ಯವಾದುದು. ಆದರೆ ಆ ಪ್ರಶಸ್ತಿ ಅವಳ ಭಾವಪೂರ್ಣತೆಗೆ ಎಂದೂ ಭಂಗ ತರಲಿಲ್ಲ.
ದೇವರು ಬೇರೆ, ಮನುಷ್ಯರು ಬೇರೆ ಎಂದು ಮಧ್ವಾಚಾರ್ಯರು ಹೇಳಿದರು. ಮಾರ್ಕ್ಸ್ ದೇವರ ಹಂಗಿಲ್ಲದೆ ಮನುಷ್ಯರೊಳಗೆ ಕೇವಲ ಮನುಷ್ಯನನ್ನು ಹುಡುಕುವುದಕ್ಕಾಗಿ ಶ್ರಮಿಸಿದರು. ಸು.ರಂ. ಎಕ್ಕುಂಡಿಯವರು ದೇವರಿಂದ ಬೇರೆಯಾದ ಮನುಷ್ಯರೊಳಗಿನ ಕೇವಲ ಮನುಷ್ಯನನ್ನು ಹುಡುಕಲು ಇಡೀ ಜೀವನ ಸವೆಸಿದರು.
ಪ್ರೀತಿಯ ಮುಂದೆ ಮಾಧ್ವನೂ ಅಷ್ಟೇ ಮಾರ್ಕ್ಸ್‌ನೂ ಅಷ್ಟೇ ಕೊನೆಗೆ ಉಳಿಯುವುದು ಅಂತಃಕರಣವೊಂದೇ. ಇದೇ ನಮ್ಮ ಎಕ್ಕುಂಡಿಯವರನ್ನು ನೆನೆಯುವ ಪರಿ.
“ಬಕುಲದ ಹೂವುಗಳು” ಎಕ್ಕುಂಡಿಯವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ತಂದುಕೊಟ್ಟ ಕವನ ಸಂಕಲನ. ಅಂಕೋಲೆಯ ಬಸ್ ನಿಲ್ದಾಣದಲ್ಲಿ ಹೂವಾಡಗಿತ್ತಿಯರು; ಮುತ್ತು ಪೋಣಿಸಿದಂತೆ ಕಾಣುವ ಬಕುಲದ ಮಾಲೆ ಮಾರುವ ದೃಶ್ಯ ನೆನಪಾದಾಗಲೆಲ್ಲ ನನ್ನ ಹೃದಯ ತುಂಬಿ ಬರುತ್ತದೆ. ಪುಟ್ಟ ಪುಟ್ಟ ಬಕುಲದ ಹೂಗಳು ಒಣಗಿದರೂ ಪರಿಮಳ ಸೂಸುವುದನ್ನು ಮರೆಯುವುದಿಲ್ಲ. ಸು.ರಂ. ಎಕ್ಕುಂಡಿಯವರು ಮನುಷ್ಯರೂಪಿ ಬಕುಲದ ಹೂವೇ ಆಗಿದ್ದರಲ್ಲವೆ?
1996ರಲ್ಲೇ ಅವರ “ಗೋದಿಯ ತೆನೆಗಳು” ಕವನಸಂಕಲನಕ್ಕೆ ಮುನ್ನುಡಿ ಮತ್ತು ಹಿನ್ನುಡಿ ಬರೆದಿದ್ದೆ. “ಪಂಜುಗಳು” ಮತ್ತು “ಗೋದಿಯ ತೆನೆಗಳು” ಅವರು ಜೀವಂತವಿದ್ದಾಗಲೇ ಪ್ರಕಟವಾಗಿದ್ದರೆ ಎಷ್ಟೊಂದು ಖುಷಿ ಪಡುತ್ತಿದ್ದರು ಎಂದು ಯಾರಿಗಾದರೂ ಅನಿಸದೆ ಇರದು.
“ನನಗೆ ತಿಳಿದಿರಲಿಲ್ಲ ನನ್ನ ಯೋಚನೆಗಳೇ
ಹೊಳೆಯ ದಾಟಿಸಿದವು ನಾವೆಯಾಗಿ,
ಚೈತ್ರದಲ್ಲಿ ಅವುಗಳೇ ಹರ್ಷ ನೀಡಿದವು
ಮರ ಮರದ ಕೊಂಬೆಯಲಿ ಹೂಗಳಾಗಿ.”
ಎಂದು ಹಾಡಿದ ಕವಿ “ನಲಿವುಗಳ ನೋವುಗಳ ತೋರಣ ತೂಗಿ” ಯುಗಾದಿ ಬಂದಿದೆ ಎಂದು ಕೂಗಿ ಹೇಳಿದ್ದಾರೆ. ನೋವು ನಲಿವುಗಳ ಮಧ್ಯೆ ಬದುಕು ಕಂಡಿದ್ದಾರೆ. ಈ ಕಾಣ್ಕೆಯೆ ಅವರ ಗೋದಿ ತೆನಗಳ ಸಾರವಾಗಿದೆ.
“ಮಾನವರ ಪ್ರಿಯ ಧ್ವನಿಯು
ಕೇಳುವವರೆಗೂ ನಿಲ್ಲದೆ ಮುನ್ನಡೆ”
ಎಂದು ಸಹೃದಯರ ಒಳಗಿವಿಯಲ್ಲಿ ಉಸುರಿಹೋದ ಕವಿ ತಮ್ಮ ಕನಸುಗಳ ಮೂಲಕ ಜೀವಂತವಾಗೇ ಇದ್ದಾರೆ.
“ಗೋದಿಯ ತೆನೆಗಳು” ಕವನ ಸಂಕಲನ ನಮ್ಮ ಪ್ರೀತಿ ಸ್ನೇಹಗಳ ಹಸಿವು ಹಿಂಗಿಸುವಲ್ಲಿ ಸಫಲವಾಗುತ್ತದೆ. ಅವರ ಸಾರ್ಥಕ ಬದುಕು ಮಾನವತೆಯನ್ನು ಮಿಡಿಯುತ್ತಲೇ ಇರುತ್ತದೆ.
ಅವರ “ಹಸಿವು” ಎಂಬ ಮಿನಿಗವನ ನಮ್ಮ ಮನದಲ್ಲಿ ಜೀವಕಾರುಣ್ಯದ ಮಹಾಕಾವ್ಯವಾಗಿ ಹರಿಯುತ್ತಲೇ ಇರುತ್ತದೆ. ಆ ಕವನದ ಎಂಟು ಸಾಲುಗಳು ಹೀಗಿವೆ:
“ಸೂರ್ಯ ಹೇಗಿದ್ದಾನೆ ಗೊತ್ತೇ ನಿನಗೆ?
ಉರಿಯ ಬಿಳಿರೊಟ್ಟಿಯಂತಿರುವ ನಮಗೆ.
ಚಂದ್ರ ಹೇಗಿದ್ದಾನೆ ಗೊತ್ತೇ ನಿನಗೆ?
ಹಾಲಿನ ರೊಟ್ಟಿಯಂತಿರುವ ನಮಗೆ.
ಸೂರೆಗೊಂಡಿಹ ತಾರೆ ಗೊತ್ತೇ ನಿಮಗೆ?
ಕೊಳೆಗೇರಿಗಳ ಕಡಲೆಪುರಿಯು ನಮಗೆ.
ಹೌದು ಮಗು ನೀನು ಹೇಳಿದ್ದು ನಿಜವು
ಮಕ್ಕಳಿಗೆ ಎಂದಿಗೂ ಅಷ್ಟು ಹಸಿವು.
ಅನುಭವ, ಅನುಭಾವಗಳ ಹಿನ್ನೆಲೆಯಲ್ಲಿ ಸ್ನೇಹ, ಪ್ರೀತಿ ಮತ್ತು ಅಂತಃಕರಣಗಳಿಂದ ಕೂಡಿದ ಮಧುರಕವಿ ಸು.ರಂ. ಎಕ್ಕುಂಡಿ ಅವರು ಕೊನೆಗೆ ನಮಗಾಗಿ ಗೋದಿಯ ತೆನೆಗಳನ್ನು ಬಿಟ್ಟುಹೋದುದು ಹೃದಯಸ್ಪರ್ಶಿಯಾಗಿದೆ.
“ಬೆಂಗಾಡಿಗೂ ಒಂದು ಹೃದಯವಿದೆ. ಇಲ್ಲಿಯೂ ಉಂಟು ವಾತ್ಸಲ್ಯ ಸೃಷ್ಟಿ” ಎಂದು ನಮಗೆಲ್ಲ ಭರವಸೆ ನೀಡಿ ತಿರುಗು ಬರದ ದಾರಿ ಹಿಡಿದು ದೂರ ಬಹುದೂರ ಹೋಗಿದ್ದಾರೆ.
“ಮೋಹಗಳ ಜೊತೆಯಲ್ಲಿ ಲೋಭಗಳ
ಕರಗಿಸಿರಿ, ಮೋಹಗಳ ಕರಗಿಸಿರಿ
ಬೆಂಕಿಯಲ್ಲಿ ಎರಕ ಹೊಯ್ಯಿರಿ ಮತ್ತೆ
ಕರುಣೆಯಲಿ, ಸಹನೆಯಲಿ, ಒಲುಮೆಯಲಿ
ಆಗ ನಾನಿರುವೆನಲ್ಲಿ.”
ಎಂದು ಹೇಳಿದ ಕವಿ ಸು.ರಂ. ಎಕ್ಕುಂಡಿಯವರು ಹೀಗೆ ಸದಾ ನಮ್ಮೊಡನೇ ಇರುವಂಥವರು.
ಕನ್ನಡದ ಹಿರಿಯ ಲೇಖಕರು ಮತ್ತು ಪತ್ರಕರ್ತರು. ಬಂಡಾಯ ಕಾವ್ಯದ ಮುಂಚೂಣಿಯಲ್ಲಿದ್ದವರು. ವಿಜಾಪುರ ಮೂಲದ ಇವರು ಧಾರವಾಡ ನಿವಾಸಿಗಳು. ಕಾವ್ಯ ಬಂತು ಬೀದಿಗೆ (ಕಾವ್ಯ -೧೯೭೮), ಹೊಕ್ಕಳಲ್ಲಿ ಹೂವಿದೆ (ಕಾವ್ಯ), ಸಾಹಿತ್ಯ ಮತ್ತು ಸಮಾಜ, ಅಮೃತ ಮತ್ತು ವಿಷ, ನೆಲ್ಸನ್ ಮಂಡೇಲಾ, ಮೂರ್ತ ಮತ್ತು ಅಮೂರ್ತ, ಸೌಹಾರ್ದ ಸೌರಭ, ಅಹಿಂದ ಏಕೆ? ಬಸವಣ್ಣನವರ ದೇವರು, ವಚನ ಬೆಳಕು, ಬಸವ ಧರ್ಮದ ವಿಶ್ವಸಂದೇಶ, ಬಸವಪ್ರಜ್ಞೆ, ನಡೆ ನುಡಿ ಸಿದ್ಧಾಂತ, ಲಿಂಗವ ಪೂಜಿಸಿ ಫಲವೇನಯ್ಯಾ, ಜಾತಿ ವ್ಯವಸ್ಥೆಗೆ ಸವಾಲಾದ ಶರಣರು, ಶರಣರ ಸಮಗ್ರ ಕ್ರಾಂತಿ, ಬಸವಣ್ಣ ಮತ್ತು ಅಂಬೇಡ್ಕರ್, ಬಸವಣ್ಣ ಏಕೆ ಬೇಕು?, ಲಿಂಗವಂತ ಧರ್ಮದಲ್ಲಿ ಏನುಂಟು ಏನಿಲ್ಲ?, ದಾಸೋಹ ಜ್ಞಾನಿ ನುಲಿಯ ಚಂದಯ್ಯ (ಸಂಶೋಧನೆ) ಮುಂತಾದವು ಅವರ ಪ್ರಕಟಿತ ಕೃತಿಗಳಾಗಿವೆ. ಕರ್ನಾಟಕ ಸರ್ಕಾರದ ರಾಷ್ಟ್ರೀಯ ಬಸವ ಪುರಸ್ಕಾರ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಮಾಧ್ಯಮ ಅಕಾಡೆಮಿ ಗೌರವ ಪ್ರಶಸ್ತಿ ಮುಂತಾದ ೫೨ ಪ್ರಶಸ್ತಿಗಳಿಗೆ ಭಾಜನರಾದ ರಂಜಾನ್ ದರ್ಗಾ ಅವರು ಬಂಡಾಯ ಸಾಹಿತ್ಯ ಪರಂಪರೆಯ ಶಕ್ತಿಶಾಲಿ ಕವಿಗಳಲ್ಲಿ ಒಬ್ಬರು. ಅಮೆರಿಕಾ, ನೆದರ್ಲ್ಯಾಂಡ್ಸ್, ಲೆಬನಾನ್, ಕೆನಡಾ, ಫ್ರಾನ್ಸ್, ಆಸ್ಟ್ರೇಲಿಯಾ ಸೇರಿದಂತೆ ಇನ್ನೂ ಹಲವು ದೇಶಗಳಲ್ಲಿ ಶರಣ ಸಂಸ್ಕೃತಿ, ಶಾಂತಿ ಮತ್ತು ಮಾನವ ಏಕತೆ ಕುರಿತು ಉಪನ್ಯಾಸ ನೀಡಿದ್ದಾರೆ.
ಎಕ್ಕುಂಡಿಯವರು ಅವರ ಕವಿತೆಗಳ ಮೂಲಕ ಸದಾ ಜೀವಂತವಾಗಿದ್ದಾರೆ. ಮನುಷ್ಯನೊಳಗಿನ ಮನುಷ್ಯನನ್ನು ಹುಡುಕಲು ಇಡೀ ಜೀವಮಾನ ಸವೆಸಿದರು . ನಿಜ. ಅವರೊಬ್ಬ ಮನುಷ್ಯರೂಪಿ ಬಕುಲದ ಹೂವೇ! ಒಳ್ಳೆಯ ಬರಹ. . …ವಿದ್ಯಾ ಭರತನಹಳ್ಳಿ