ಹೊಸ ಬಡಾವಣೆಗೆ ವಾಸಕ್ಕೆ ಬಂದವರಿಗೆ ಯಾವ್ಯಾವ ಬಗೆಯಲ್ಲಿ ಇಲಿ ಕಾಟಕೊಡುತ್ತದೆ ಅನ್ನೋ ವೈವಿಧ್ಯಗಳ ಪರಿಚಯ ಮಾಮೂಲು. ನಮ್ಮೂರುಗಳಲ್ಲಾದರೆ ಒಂದು ಬೆಕ್ಕು ಸಾಕಿದರೆ ಆಯಿತು. ಇಲಿಕಾಟ ತಪ್ಪಿತು ಅಂತನೇ ಅರ್ಥ. ಆದರೆ ನಗರದಲ್ಲಿ ಬೆಕ್ಕು ಸಾಕೋದು ಅಂದರೆ ಸಂನ್ಯಾಸಿ ಸಂಸಾರದಂತೆ. ಎಲ್ಲವನ್ನೂ ಬಿಟ್ಟ ಸನ್ಯಾಸಿಯೊಬ್ಬ ತನ್ನ ಲಂಗೋಟಿನ ಇಲಿ ಕಡಿಯುತ್ತದೆ ಅಂತ ಬೆಕ್ಕು ಸಾಕೋಕೆ ಹೋಗಿ ಇಲ್ಲದ ತಾಪತ್ರಯ ಮೈಮೇಲೆಳಕೊಂಡನಂತೆ. ಅದೇಕತೆ ಯಾರಿಗೆ ಬೇಕು?
ಡಾ. ಚಂದ್ರಮತಿ ಸೋಂದಾ ಬರೆಯುವ “ಮಾತು ಮಂದಲಿಗೆ” ಸರಣಿಯ ಹದಿನೇಳನೆಯ ಕಂತಿನಲ್ಲಿ ಹಲವು ಮನೆಗಳ “ನಿಲಯದ ಅತಿಥಿಗಳ” ಕುರಿತ ಬರಹ ನಿಮ್ಮ ಓದಿಗೆ
ಅಷ್ಟೈಶ್ವರ್ಯ ಎಂದಮೇಲೆ ಎಲ್ಲರ ಮನೆಯದೂ ಒಂದೇ ಅಲ್ವಾ? ಎಂದುಕೊಳ್ಳಬೇಡಿ. ನಮ್ಮನೆಯದು ಬಹಳ ಸ್ಪೆಶಲ್. ಆಮೇಲೆ ನಿಮಗೆ ಗೊತ್ತಾಗುತ್ತೆ ಏನು ಅಂತ.
ನಾವು ಈ ಬಡಾವಣೆಗೆ ಬಂದಾಗ ಸರಿಯಾದ ರಸ್ತೆಯೇ ಇರಲಿಲ್ಲ ಅಂದಮೇಲೆ ಇನ್ಯಾವ ಸೌಲಭ್ಯಗಳು ಇರಲು ಸಾಧ್ಯ. ಒಂದು ರಸ್ತೆಯಲ್ಲಿ ಮೂರೋ ನಾಲಕ್ಕೋ ಮನೆಗಳಿದ್ದರೆ ಅದೇ ಹೆಚ್ಚು. ಬಡಾವಣೆಯ ಮನೆಗಳೆಲ್ಲ ಸೇರಿದರೂ ನೂರು ಮನೆ ದಾಟಿರಲಿಲ್ಲ. ದೂರದೂರದಲ್ಲಿ ಅಲ್ಲಿ ಇಲ್ಲಿ ಮನೆಗಳಿದ್ದವು. ಹಾಗಾಗಿ, ರಾತ್ರಿ ಒಂದು ಕಾವಲು ಸಮಿತಿ ಮಾಡಿಕೊಂಡು ಬಡಾವಣೆಯನ್ನು ಪಾಳಿಯಲ್ಲಿ ಗಂಡಸರು ಕಾಯುತ್ತಿದ್ದರು. ಕಳ್ಳರು, ಕಾಕರನ್ನು ಕಾಯಬಹುದು. ಸರಿಸೃಪಗಳನ್ನು ಕಾಯುವುದು ಹೇಗೆ? ಅವುಗಳದೇ ಕಾರುಬಾರು. ನಾಗರಹಾವು ನೋಡಿದೆ ಎನ್ನುವ ಸುದ್ದಿ ಆಗಾಗ ಹರಿದಾಡುತ್ತಿತ್ತು. ಒಂದಿನ ಶಾಲೆಗೆ ಹೋಗುವ ಅವಸರದಲ್ಲಿ ಜೋಶಿಯವರು ತಮ್ಮ ಸ್ಕೂಟರ್ ತೆಗೆಯುತ್ತಿದ್ದರು. ಸ್ಕೂಟರಿನ ಫುಟ್‌ರೆಸ್ಟ್‌ನಿಂದ ಒಂದು ಹಾವಿನ ಮರಿ ಪುಳಕ್ಕಂತ ಕೆಳಗೆ ಬಿದ್ದು ಹರದುಕೊಂಡು ಹೋಯಿತು. ಹಿಂದಿನ ದಿನ ಯಾರೋ ಹೇಳಿದ್ದರು `ನಿಮ್ಮನೆ ಗೇಟಿನ ಹತ್ತಿರ ಹಾವಿನಮರಿ ಹೋಗೋದನ್ನ ನೋಡ್ದೆ’ ಅಂತ. ಎಷ್ಟೇ ಹುಡುಕಿದ್ರೂ ಕಂಡಿರಲಿಲ್ಲ.
ಇದು ನಮ್ಮನೆಯ ಕತೆಯಷ್ಟೆ ಅಲ್ಲ. ನಮ್ಮ ಬಡಾವಣೆಯಲ್ಲಿ ಆಗಾಗ ಯಾರ‍್ಯಾರದೋ ಮನೆಯಲ್ಲಿ ನಾಗರ ದರ್ಶನವಾಗುತ್ತಿತ್ತು. ಅವರೆಲ್ಲ `ಸ್ನೇಕ್ ಶ್ಯಾಂಗೆ ಫೋನ್ ಮಾಡಬೇಕಿತ್ತು ಸರ್’ ಅಂತ ಬೆಳಗು, ಸಂಜೆ, ರಾತ್ರಿ ಎನ್ನುವ ಭೇದವಿಲ್ಲದೆ ನಮ್ಮನೆಗೆ ಬರುತ್ತಿದ್ದರು. ಪಾಪ! ಅವರಾದರೂ ಏನು ಮಾಡಲು ಸಾಧ್ಯ? ನಮ್ಮನೆಯ ಹೊರತಾಗಿ ಸುತ್ತಮುತ್ತಲಲ್ಲಿ ಮತ್ಯಾರ ಮನೆಯಲ್ಲೂ ಫೋನಿರಲಿಲ್ಲ. `ಇವೆಲ್ಲ ಹಿಂದೆ ಹೊಲಗಳಾಗಿದ್ವು. ಅವುಗಳಿದ್ದ ಜಾಗ, ನಾವೀಗ ಒತ್ತುವರಿ ಮಾಡ್ಕೊಂಡಿದೇವೆ. ಪಾಪ! ಅವು ಮತ್ತೆಲ್ಲಿಗೆ ಹೋಗ್ಬೇಕು, ಬರ್ತಾವೆ’ ಎನ್ನುವ ಮಾತುಗಳು ಹರಿದಾಡುತ್ತಿದ್ದವು. ಬಡಾವಣೆ ಬೆಳೆದ ಮೇಲೂ ಒಮ್ಮೊಮ್ಮೆ ನಾಗರ ದರ್ಶನ ತಪ್ಪಲಿಲ್ಲ. ಒಂದು ಸಂಜೆ ನಾನು ಕಂಪೂಟರ್ ಮುಂದೆ ಕುಳಿತಿರುವಾಗ ನಮ್ಮತ್ತೆ ಗಾಬರಿಯಿಂದ `ಚಂದ್ರಮತಿ’ ಅಂತ ಕೂಗಿದರು. ಅಡಿಗೆ ಮನೆಯಿಂದ ಅವರ ದನಿ ಬಂದಿತ್ತು. ಒಳಗೆ ಓಡಿದೆ. ಸುಮಾರು ಒಂದಡಿ ಉದ್ದದ ನಾಗರಮರಿ ನಿಧಾನವಾಗಿ ತೆವಳುತ್ತ ಅಡಿಗೆ ಮನೆಯನ್ನು ಪ್ರವೇಶಿಸುತ್ತಿತ್ತು. ಜೋಶಿಯವರು ಇರಲಿಲ್ಲ. ಪೊರಕೆಯಿಂದ ದೂಡಿ ಅದನ್ನು ಹೊರಹಾಕಿದೆ. ಮನೆಯ ಒಳಭಾಗದಲ್ಲಿ ಹೊಸಿಲು ಇಲ್ಲದುದು ಸಹಾಯವಾಯಿತು. ಆದರೂ ಹೆಬ್ಬಾಗಿಲ ಹೊಸಿಲಿಂದ ಹೊರಗೆ ತಳ್ಳಿದೆ. ಅಲ್ಲೆಲ್ಲೂ ಅದು ಕಾಣಲೇ ಇಲ್ಲ. ಕತ್ತಲೆಯಲ್ಲಿ ತಪ್ಪಿಸಿಕೊಂಡು ಹೋಯಿತು. ಬ್ಯಾಟರಿ ಹಿಡಿದು ಪಾಟಿನ ಸಂದಿಯಲ್ಲಿ ಇರಬಹುದೆಂದು ನೋಡುವಾಗ ಪಕ್ಕದ ಮನೆಗೆ ಬಂದಿದ್ದ ನೆಂಟರು `ಹುಷಾರು ಮೇಡಂ. ಕಚ್ಚಿಬಿಟ್ಟರೆ’ ಎಂದು ಆತಂಕ ವ್ಯಕ್ತಪಡಿಸಿದರು. ಮಲೆನಾಡಿನಲ್ಲಿ ಹುಟ್ಟಿ ಬೆಳೆದವರಿಗೆ ಇವೆಲ್ಲ ಮಾಮೂಲು. ಹಾವು, ಚೇಳು, ಹುಲ್ಲುಸಾರಂಗ, ಉಂಬಳ ಎಂದು ಹೆದರಿದರೆ ಮಳೆಗಾಲ ಪೂರ್ತಿ ಮನೆಯಾಚೆ ಹೋಗದೆ ಮನೆಯೊಳಗೆ ಬಂಧಿಯಾಗಬೇಕಾಗುತ್ತದೆ. ಮೂರ್ನಾಕು ದಿನಗಳ ನಂತರ ಅದು ಮತ್ತೆ ಶೌಚಾಲಯದಲ್ಲಿ ಪ್ರತ್ಯಕ್ಷವಾಯಿತು. ಅದನ್ನು ಕವರಿನಲ್ಲಿ ತುಂಬಿಕೊಂಡು ಹೋಗಿ ಬಯಲಲ್ಲಿ ಬಿಟ್ಟುಬರುವ ಕೆಲಸವನ್ನು ಜೋಶಿಯವರು ಮಾಡಿದರು. ಕಳೆದ ವರ್ಷ ಸಾಕ್ಸಿನ ಒಳಗೆ ಒಂದು ಪುಟ್ಟ ನಾಗರ. ಪಾಪ! ಅದಕ್ಕೆ ನಮ್ಮನ್ನು ಬಿಟ್ಟುಹೋಗಲಿಕ್ಕೆ ಇಷ್ಟನೇ ಇಲ್ಲ ಅನಿಸುತ್ತೆ.
ಇನ್ನು ಇಲಿಕಾಟ ಯಾರಿಗೆ ಗೊತ್ತಿಲ್ಲ ಹೇಳಿ. ಹಳ್ಳಿಯಾದ್ರೂ ಅಷ್ಟೆ, ಪ್ಯಾಟೆಯಾದ್ರೂ ಅಷ್ಟೆ. ಅವು ಸರ್ವವ್ಯಾಪಿ. ಅದರಲ್ಲಿಯೂ ಹೊಸ ಬಡಾವಣೆಗೆ ವಾಸಕ್ಕೆ ಬಂದವರಿಗೆ ಯಾವ್ಯಾವ ಬಗೆಯಲ್ಲಿ ಇಲಿ ಕಾಟಕೊಡುತ್ತದೆ ಅನ್ನೋ ವೈವಿಧ್ಯಗಳ ಪರಿಚಯ ಮಾಮೂಲು. ನಮ್ಮೂರುಗಳಲ್ಲಾದರೆ ಒಂದು ಬೆಕ್ಕು ಸಾಕಿದರೆ ಆಯಿತು. ಇಲಿಕಾಟ ತಪ್ಪಿತು ಅಂತನೇ ಅರ್ಥ. ಆದರೆ ನಗರದಲ್ಲಿ ಬೆಕ್ಕು ಸಾಕೋದು ಅಂದರೆ ಸಂನ್ಯಾಸಿ ಸಂಸಾರದಂತೆ. ಎಲ್ಲವನ್ನೂ ಬಿಟ್ಟ ಸನ್ಯಾಸಿಯೊಬ್ಬ ತನ್ನ ಲಂಗೋಟಿನ ಇಲಿ ಕಡಿಯುತ್ತದೆ ಅಂತ ಬೆಕ್ಕು ಸಾಕೋಕೆ ಹೋಗಿ ಇಲ್ಲದ ತಾಪತ್ರಯ ಮೈಮೇಲೆಳಕೊಂಡನಂತೆ. ಅದೇಕತೆ ಯಾರಿಗೆ ಬೇಕು? ಹಗಲು ಎಲ್ಲೂ ಕಾಣಿಸದೆ ಇದ್ದರೂ ರಾತ್ರಿಯಾಯಿತು ಅಂದರೆ ಇಲಿ ದಾಂಧಲೆ. ತೊಳೆಯಲಿಕ್ಕೆ ಹಾಕಿದ ಪಾತ್ರೆ ಬೆಳಗ್ಗೆ ನೋಡುವಷ್ಟರಲ್ಲಿ ಚೆಲ್ಲಾಪಿಲ್ಲಿ. ಪಾಟಲ್ಲಿ ಬೆಳೆದಿದ್ದ ತರಕಾರಿಗಳು ಹರೋಹರ. ಕೆಲವೊಮ್ಮ ತೊಳೆದು ಒಣಗಿಸಿದ ಬಟ್ಟೆಗಳ ನಡುವೆ ತರಾವರಿ ನಕ್ಷೆಗಳು. ಇಲಿಕಾಟ ತಡೆಯಲಾರದೆ ಇಲ್ಲಿಗೆ ಬಂದ ಹೊಸತರಲ್ಲಿ ಪಟ್ಟಪಾಡು ಅಷ್ಟಿಷ್ಟಲ್ಲ. ಅವು ಮನೆಯೊಳಗೆ ಬಂದು ದಾಂಧಲೆ ಮಾಡುವುದೇ ರಾತ್ರಿ ಸರಿಹೊತ್ತಿನಲ್ಲಿ. ಆರಾಮವಾಗಿ ನಿದ್ದೆ ಮಾಡುತ್ತಿದ್ದ ನಮ್ಮ ನಿದ್ದೆಗೆಡಿಸಿದ್ದಲ್ಲದೆ ಅವನ್ನು ಓಡಿಸಲು ಹೋದರೆ ಅವು ನಮ್ಮ ತಾಳ್ಮೆ ಪರೀಕ್ಷಿಸೋದಂತು ನಿಜ. ಬಚ್ಚಲು ಮನೆಯಿಂದ ಓಡಿಸಿದರೆ, ಜಗಲಿ ಸೋಫಾದ ಕೆಳಗೆ ಅವಿತುಕೊಳ್ಳುತ್ತವೆ. ಅಲ್ಲಿಂದ ಸಾಗಹಾಕಲು ನೋಡಿದರೆ ಅಡಿಗೆಮನೆ ಫ್ರಿಜ್ಜಿನ ಅಡಿಯಲ್ಲಿ ಆಶ್ರಯ ಪಡೆಯುತ್ತವೆ. ಕೆಲವೊಮ್ಮೆ ಕರ್ಟನ್ ಬಾಕ್ಸಿನ ಮೇಲೆ ಕುಳಿತು ನಮ್ಮ ಕಡೆ ನೋಡಿ ಕಣ್ಣುಮಿಟುಕಿಸುತ್ತವೆ, `ನೋಡಿದ್ರಾ ನಮ್ಮನ್ನ ಓಡಿಸೋದು ಅಷ್ಟು ಸುಲಭವಲ್ಲʼ ಅಂತ.
ಈಗ ನಾವು ಅದಕ್ಕೆ ಬೇರೆಯೇ ಆದ ಉಪಾಯ ಮಾಡುತ್ತಿದ್ದೇವೆ. ಇಲಿಬೋನನ್ನು ಇಟ್ಟು ಅದನ್ನು ಹಿಡಿದು ದೂರ ತಗೊಂಡು ಹೋಗಿ ಬಿಟ್ಟುಬರೋದು. ಬೋನಿಗೂ ಅವು ಸುಲಭಕ್ಕೆ ಬೀಳುವುದಿಲ್ಲ. ಕೊಬ್ಬರಿ ಸುಟ್ಟು ಒಳಗೆ ಕಟ್ಟಿದರೆ ಬೀಳಬಹುದೆನ್ನುವ ನಮ್ಮ ತರ್ಕ ಫಲಿಸಲೇ ಇಲ್ಲ. ಕರಿದ ತಿಂಡಿಯೇ ಆಗಬೇಕು. ಉಪಾಯವಿಲ್ಲದೆ ಒಗ್ಗರಣೆ ಸೌಟಿನಲ್ಲಿ ಎಣ್ಣೆಕಾಯಿಸಿ ಕಲಸಿದ ಗೋಧಿಹಿಟ್ಟನ್ನು ಅದರಲ್ಲಿ ಬಿಟ್ಟು ಕರಿದು ಇಟ್ಟರೆ ಅದರ ವಾಸನೆಗೆ ಬೋನಿಗೆ ಬೀಳುತ್ತವೆ. ಈಗೀಗ ತಿಂಗಳಿಗೆ ಮೂರೋ, ನಾಲಕ್ಕೋ ಬಾರಿ ನಮ್ಮನೆಯಲ್ಲಿ ಹೀಗೆ ಕರಿಯಲೇಬೇಕಾದ ಪರಿಸ್ಥಿತಿ. ಮೊದಲೆಲ್ಲ ಹೇಳುತ್ತಿದ್ದೆವು ಮನೆಯಲ್ಲಿ ಎಣ್ಣೆಬಾಣಲೆ ಇಡೋದು ತೀರ ವಿರಳ ಅಂತ. ಈಗಲೂ ಬಾಣಲೆ ಇಡೋದು ಅಪರೂಪವೇ ಅನ್ನಿ. ಆದರೆ ಬೋನಿನ ಒಂದು ತಾಪತ್ರಯ ಅಂದರೆ ಅಕ್ಕಪಕ್ಕದವರು `ನಿಮ್ಮ ಇಲಿಬೋನು ಒಂದು ದಿನದಮಟ್ಟಿಗೆ ಕೊಟ್ಟಿರಿ, ನಮ್ಮನೆಗೆ ಇಲಿ ಬಂದಿದೆ’ ಅಂದಾಗ ಕೊಡದೆ ಇರಲಿಕ್ಕೆ ಹೀಗೆ ಸಾಧ್ಯ? ಹೀಗೆ ಹೋದ ಬೋನು ತಿರುಗಿ ಬಂದೇಬರುತ್ತದೆ ಎನ್ನುವ ಯಾವ ಗ್ಯಾರಂಟಿಯೂ ಇಲ್ಲ.
ಒಂದಿನ ಯಾವುದೋ ಪುಸ್ತಕ ಹುಡುಕಲಿಕ್ಕೆ ಅಂತ ಮಹಡಿ ಮೇಲೆ ಹೋದ ಜೋಶಿಯವರು ಅಲ್ಲಿಂದ ಜೋರಾಗಿ ನನ್ನನ್ನು ಕರೆದರು. ಎದ್ನೋ ಬಿದ್ನೋ ಅಂತ ಹೋದರೆ ಏಣಿಮೇಲೆ ಹತ್ತಿನಿಂತಿದ್ದ ಅವರು `ನೋಡಿಲ್ಲಿ’ ಎಂದರು. ನೋಡಿದ್ದು ಏನನ್ನ? ಹತ್ತಿಪ್ಪತ್ತು ಸಾವಿರ ಗೊದ್ದಗಳು ತಮ್ಮ ಪುಸ್ತಕ ಪ್ರೀತಿಯನ್ನು ನಮ್ಮ ಪುಸ್ತಕಗಳ ಮೇಲೆ ತೋರಿಸುತ್ತಿವೆ. ಒಂದು ಕ್ಷಣ ದಂಗಾಯಿತು. ಏನ್ಮಾಡೋದು ಅಂತ ಇಬ್ಬರಿಗೂ ತೋಚಲಿಲ್ಲ. ಮೇಲಿನ ಬೀರುವಿನಲ್ಲಿದ್ದ ಪುಸ್ತಕಗಳನ್ನು ಕೆಳಗಿಳಿಸಿ, ಬಿಸಿಲಿಗೆ ಹಾಕಿದೆವು. ಪುಸ್ತಕವಿಟ್ಟಿದ್ದ ಕಪಾಟನ್ನು ಎರಡು ಮೂರು ಸುತ್ತು ಒರೆಸಿ ಮತ್ತೆ ಅವುಗಳನ್ನು ಸ್ವಸ್ಥಾನಕ್ಕೆ ಸೇರಿಸುವಷ್ಟರಲ್ಲಿ ನಮಗೆ ತ್ರಾಣವೇ ಉಳಿದಿರಲಿಲ್ಲ. ಆದರೂ ಪುಸ್ತಕಗಳ ಮೇಲಿನ ಪ್ರೀತಿಗೆ ಕೆಳಗಿನ ರೂಮಿನಲ್ಲಿಟ್ಟಿರುವ ಪುಸ್ತಕಗಳ ಕತೆ ಏನಾಗಿದೆ ಅಂತ ನೋಡಿ ನಮ್ಮ ತಲೆ ಕೆಡೋದೊಂದು ಬಾಕಿ. ಮಕ್ಕಳು, ಮೊಮ್ಮಕ್ಕಳು, ಮರಿಮಕ್ಕಳ ಸಮೇತ ಗೊದ್ದಗಳು ಅಲ್ಲಿ ವಿಶ್ರಾಂತಿ ಪಡೆಯುತ್ತಿದ್ದವು. ನಾವು ಬಾಗಿಲು ತೆರೆದಿದ್ದು ಅವಕ್ಕೆ ಹಿತವಾದಂತೆ ಕಾಣಲಿಲ್ಲ. `ಹೋದ್ಯಾ ಪಿಶಾಚಿ ಅಂದ್ರೆ ಬಂದೆ ಗವಾಕ್ಷೀಲಿ’ ಅನ್ನೋಹಾಗೆ ದಂಡುದಳವಾಯಿ ಸಮೇತ ಅವು ನಮ್ಮಮೇಲೆ ಆಕ್ರಮಣ ಮಾಡಿದವು. ಬೇರೆ ದಾರಿ ಇಲ್ಲದೆ ಕೆಳಗಿನಿಂದ ಮೇಲೆ ಪುಸ್ತಕಗಳನ್ನು ಹೊತ್ತೊಯ್ದು ಬಿಸಿಲಿಗೆ ಹಾಕಲೇಬೇಕಾಯ್ತು. ಅಷ್ಟಾದರೂ ಅವುಗಳು ಮೂಡಿಸಿದ ಕಲೆಗಳು ಹಾಗೇ ಕುಳಿತಿವೆ.
ನಾಲ್ಕೈದು ವರ್ಷ ಗೊದ್ದಗಳು ನಮಗೆ ತೊಂದರೆ ಕೊಡಲಿಲ್ಲ. ಎರಡು ವರ್ಷದ ಹಿಂದೆ ರಾತ್ರಿ ಮಹಡಿಗೆ ಮಲಗಲು ಹೋದ ಮೊಮ್ಮಗ `ಅಜ್ಜ’ ಅಂತ ಜೋರಾಗಿ ಕರೆದ. ಇಬ್ಬರೂ ಓಡಿದೆವು.(ಈ ವಯಸ್ಸಿನಲ್ಲಿ ಓಡೋದಾ!) ರೂಮು ಮತ್ತು ಹಾಲಿನ ತುಂಬ ಗೊದ್ದಗಳ ಮೆರವಣಿಗೆ. ಅರ್ಧರಾತ್ರಿವರೆಗೆ ಜಾಗರಣೆ. ಮೂಲಹುಡುಕಿ ಹೊರಟರೆ ಬಟ್ಟೆ ಮಡಚಿಟ್ಟಿದ್ದ ಕಪಾಟಿನಲ್ಲಿ ಅವುಗಳ ಆಶ್ರಯತಾಣ. `ಇಶ್ ನಂಗಂತೂ ಇದರಲ್ಲಿದ್ದ ಬಟ್ಟೆಗಳು ಬ್ಯಾಡವೇ ಬ್ಯಾಡ’ ಅಂತ ಮೊಮ್ಮಗನ ಉವಾಚ. ಆಲ್ಬಂ, ಕೆಲವು ಕಾಗದ ಪತ್ರಗಳಿದ್ದ ಕೆಳಗಿನ ಡ್ರಾ ಎಳೆದರೆ ಲಕ್ಷೋಪಲಕ್ಷವಾಗಿ ಹೊರಬಂದ ಗೊದ್ದಗಳನ್ನು ಕಂಡು ನಮಗೆ ಒಂದು ಕ್ಷಣ ದಿಗಿಲು. ಮಾರನೆಯ ದಿನವೆಲ್ಲ ಸ್ವಚ್ಛತಾ ಅಭಿಯಾನ. ಅಷ್ಟಕ್ಕೆ ಮುಗಿಯಲಿಲ್ಲ. ಬಣ್ಣದವನನ್ನು ಕರೆತಂದು ಕಪಾಟಿನ ಸಂಧಿಮೂಲೆಗಳಿಗೆಲ್ಲ ಅವನ ಸಲಹೆಯಂತೆ ಯಾವುದೋ ರಾಸಾಯನಿಕ ಬೆರೆಸಿ ಬಣ್ಣಬಳಿಸಬೇಕಾಯಿತು. ಆ ವಾಸನೆ ಹೋಗಲಿಕ್ಕೆ ವಾರಾನುಗಟ್ಟಲೆ ಅತ್ತ ಹೋಗುವುದನ್ನು ಬ್ಯಾನ್ ಮಾಡಬೇಕಾಯಿತು.
ನಮ್ಮ ಸ್ನೇಹಿತರೊಬ್ಬರು ಯಾವಾಗಲೂ ಹೇಳ್ತಿರುತ್ತಾರೆ. `ಸ್ವಂತಮನೆ ಸಹವಾಸ ಯಾಕೆ ಬೇಕು? ಬಾಡಿಗೆ ಮನೆಯಲ್ಲಿರೋದು ನಿರಾಳ’ ಅಂತ. ಈ ಮಾತು ನೂರಕ್ಕೆ ನೂರು ಸತ್ಯ ಅನ್ನುವ ಅನುಭವ ನಮ್ಮದೂ ಹೌದು. ಯಾಕೆ ಗೊತ್ತಾ? ನಾವು ಮನೆ ಕಟ್ಟಿಸಿದಾಗ ಅಡಿಗೆಮನೆಯಲ್ಲಿ ವಸ್ತುಗಳನ್ನು ಇಡಲಿಕ್ಕೆ ಮಾಡಿದ ಕಲ್ಲು/ಮರದ ಕಪಾಟುಗಳಿಗೆ ಬಾಗಿಲು ಮಾಡದೆ ಹಾಗೆ ಬಿಟ್ಟಿದ್ದೆವು. ಆಮೇಲೆ ಅಡಿಗೆಕಟ್ಟೆ ಕೆಳಭಾಗವೂ ಸೇರಿದಂತೆ ಎಲ್ಲವಕ್ಕೂ ಆಧುನಿಕಸ್ಪರ್ಶ ನೀಡಿದೆವು. ಸದ್ಯ ಧೂಳಿನಿಂದ ಬಚಾವಾದೆವು ಎಂದು ಬೀಗಿದ್ದೂ ಆಯಿತು. ಒಂದಿನ ಪಾತ್ರೆ ತೆಗೆಯುವಾಗ ಹಲಗೆ ಮುರಿದುಬಿತ್ತು. ಗಾಬರಿಯಾಯಿತು. ಬಂದ ಅತಿಥಿಗಳಿಗೆ ಚಹಾಕೊಟ್ಟು ಮಾತಾಡಿ ಕಳಿಸಿದ್ದೂ ಆಯಿತು. ಆಮೇಲೆ ನಿಧಾನವಾಗಿ ಪರಿಶೀಲಿಸಿದರೆ ಒರಲೆ (ಗೆದ್ದಲು) ಸೈನ್ಯಗಳು ಸದ್ದಿಲ್ಲದೆ ಆ ಭಾಗದ ಮರಗಳನ್ನು ತಿಂದುಹಾಕಿದ್ದವು. ಲಕ್ಷಾಂತರ ಖರ್ಚುಮಾಡಿ ಆರೆಂಟು ವರ್ಷ ಕಳೆದಿರಬಹುದು. ಅರ್ಧಭಾಗ ಮುಕ್ಕಾಗಿತ್ತು. ಅದನ್ನೆಲ್ಲ ಚೊಕ್ಕಗೊಳಿಸಿದೆವು. ಗೆದ್ದಲಿನಿಂದ ಪಾರಾಗುವ ಬಗ್ಗೆ ಘನಘೋರ ಚರ್ಚೆ ನಡೆಯಿತು. ಜೇಬಿಗೆ ಭಾರವಾಗುವ ಸಲಹೆಗಳು ಸಾಕಷ್ಟು ಬಂದವು. `ನಿವೃತ್ತರಿಗೆ ಉಳಿಸಿದ ಹಣವೇ ಗಳಿಸಿದ ಹಣ’ ಎನ್ನುವ ಅರಿವಿದ್ದರೂ ಉಪಾಯ ಕಾಣದೆ ಅಡಿಗೆಕಟ್ಟೆಯ ಕೆಳಗಿನ ಹಿಂಭಾಗದ ಗೋಡೆಗೂ ಕಡಿಮೆ ಬೆಲೆಯ ಸಿರಾಮಿಕ್ ಕಲ್ಲನ್ನು ಕೂರಿಸಿ ಮತ್ತೆ ಎಲ್ಲವನ್ನು ಸಿದ್ಧಗೊಳಿಸಿಕೊಡುವವರನ್ನು ಹುಡುಕಲು ತೀರ್ಮಾನಿಸಿದೆವು. ಮನೆ ಕಟ್ಟುತ್ತೇವೆ ಎಂದರೆ ಜನ ಸಿಗುತ್ತಾರೆ, ರಿಪೇರಿ ಕೆಲಸ ಎಂದರೆ ಯಾರಿಗೂ ಪುರಸೊತ್ತೇ ಇರುವುದಿಲ್ಲ. ದೊಡ್ಡಕೆಲಸ ಎಂದು ಹೇಳಿದ್ದರಿಂದ ಜನ ಸಿಕ್ಕರು. ನಮ್ಮ ಶ್ರಮ ತಾಳ್ಮೆ ದುಡ್ಡು ಅಂತ ಲೆಕ್ಕಹಾಕದೆ ಮಾಡಿಸಿದ್ದಾಯಿತು.
ಮಲೆನಾಡಿನಲ್ಲಿ ಹುಟ್ಟಿ ಬೆಳೆದವರಿಗೆ ಇವೆಲ್ಲ ಮಾಮೂಲು. ಹಾವು, ಚೇಳು, ಹುಲ್ಲುಸಾರಂಗ, ಉಂಬಳ ಎಂದು ಹೆದರಿದರೆ ಮಳೆಗಾಲ ಪೂರ್ತಿ ಮನೆಯಾಚೆ ಹೋಗದೆ ಮನೆಯೊಳಗೆ ಬಂಧಿಯಾಗಬೇಕಾಗುತ್ತದೆ. ಮೂರ್ನಾಕು ದಿನಗಳ ನಂತರ ಅದು ಮತ್ತೆ ಶೌಚಾಲಯದಲ್ಲಿ ಪ್ರತ್ಯಕ್ಷವಾಯಿತು. ಅದನ್ನು ಕವರಿನಲ್ಲಿ ತುಂಬಿಕೊಂಡು ಹೋಗಿ ಬಯಲಲ್ಲಿ ಬಿಟ್ಟುಬರುವ ಕೆಲಸವನ್ನು ಜೋಶಿಯವರು ಮಾಡಿದರು.
ನಾನು ಕೆಲವೊಮ್ಮೆ ಹಾಡುವುದಿದೆ. `ಅಲ್ಲೂ ಇರುವೆ ಇಲ್ಲೂ ಇರುವೆ ಎಲ್ಲಕಡೆ ನಾ ತುಂಬಿರುವೆ’ ಅಂತ. ನಿಮಗೂ ಅರ್ಥ ಆಗಿರಬೇಕಲ್ಲ. ದೇವರೊಬ್ಬನನ್ನು ಬಿಟ್ಟರೆ ಇರುವೆ ಮಾತ್ರ ಸರ್ವವ್ಯಾಪಿ. ಪಾಪದ್ದು ಇರುವೆ ಏನುಮಾಡಕ್ಕೆ ಸಾಧ್ಯ? ಅಂತೀರಾ? ಸ್ವಲ್ಪ ಕೇಳಿಸಿಕೊಳ್ಳಿ. ಹಾಲು, ಮೊಸರು ತುಪ್ಪ ಅಂತ ಜಿಡ್ಡಿನ ಪದಾರ್ಥಗಳನ್ನು ಜೋಪಾನ ಮಾಡಿದರೆ ಸಾಕು. ಸಕ್ಕರೆ, ಬೆಲ್ಲ, ಸಿಹಿತಿಂಡಿಗಳ ಸುತ್ತ ಲಕ್ಷ್ಮಣರೇಖೆ ಎಳೆದು ಇಟ್ಟರಾಯಿತು ಅಷ್ಟೆ ಅಂತ ನಾನೂ ಅಂದ್ಕೊಂಡಿದ್ದೆ. ನಾವು ಚಿಕ್ಕವರಿದ್ದಾಗ ನಮ್ಮ ಹಳ್ಳಿಕಡೆ ಇರುವೆ ಗೊದ್ದಗಳ ಉಪಟಳ ತಪ್ಪಿಸೋಕೆ `ಸಿಕ್ಕ’ ಅಂತ ಮಾಡತಿದ್ರು. ಸಿಕ್ಕ ಅಂದ್ರೆ ನೆಲವು ಅಂತಾರಲ್ಲ ಅದು. ಮನೆಯ ಜಂತಿಗೆ ಹಗ್ಗಕಟ್ಟಿ ಕೆಲವೊಮ್ಮೆ ಕಬ್ಬಿಣದ ಕೊಕ್ಕೆ ಮಾಡಿ ಅದಕ್ಕೆ ಗೋಣಿನಾರು ಅಥವಾ ಸೆಣಬಿನಲ್ಲಿ ನೇಯ್ದು ಸಿಂಬಿ ತರಹ ಮಾಡಿದ್ದನ್ನು ನೇತುಹಾಕೋರು. ಅದರಲ್ಲಿ ಇವನ್ನೆಲ್ಲ ಇಡುತ್ತಿದ್ದರು. ಈ ಕಾಲಕ್ಕೇನು ಗೋಪಿಕೆಯರು ಬೆಣ್ಣೆ ಇಡುತ್ತಿದ್ದುದೇ ಅದರಲ್ಲಿ ಅಲ್ವಾ? ಆದರೂ ಕೃಷ್ಣ ಮಡಕೆ ಮೇಲೆ ಮಡಕೆ ಇಟ್ಟು ಹತ್ತಿ ಅದನ್ನು ಕದಿಯುತ್ತಿದ್ದನಂತೆ. ಆಧುನಿಕ ಮನೆಯಲ್ಲಿ ಸಿಕ್ಕ ಇಟ್ಟುಕೊಳ್ಳೋದಾದರೂ ಹೇಗೆ? ಸಂಜೆ ಚಹಾ ಮಾಡಲು ಹೋದರೆ ಬೆಳಗ್ಗೆ ಕಾಯಿಸಿಟ್ಟ ಹಾಲಲ್ಲಿ ಇರುವೆಗಳು ಈಜುತ್ತಿದ್ದರೆ ಹೇಗಾಗಬೇಡ? ಅದರಲ್ಲೂ ಮನೆಗೆ ಯಾರಾದರೂ ಬಂದಾಗ? ಇನ್ನೇನು ಮಾಡೋದು? ನೀರಿನ ಪಾತ್ರೆಯಲ್ಲಿ ಹಾಲಿನ ಪಾತ್ರೆ ಇಟ್ಟು ಜೋಪಾನ ಮಾಡೋದು. ಇಷ್ಟೇ ಆದರೆ ಓಕೆ.
ನಮ್ಮನೆ ಹಿಂಬಾಗಿಲಲ್ಲಿ ಮರದ ಪುಡಿ ಉದುರಿದ್ದು ಕಾಣಿಸಿತು. ಅರೆ, ಗೆದ್ದಲು ಇಲ್ಲಿಗೂ ಬಂತಾ? ಸಾಧಾರಣವಾಗಿ ಹಲಸಿನ ಮರನ ಗೆದ್ದಲು ತಿನ್ನಲ್ಲ ಅನ್ನುವ ಮಾತಿದೆ. ಪ್ಯಾಟೆಯ ಹಸುಗಳ ಹಾಗೆ ಇವೂ ಕೂಡ ಎಲ್ಲವನ್ನು ತಿಂತಾವೆ ಅಂತ ಮಾತಾಡಿಕೊಂಡೆವು. ನಮ್ಮನೆ ಎದುರಿನಲ್ಲಿ ಒಂದು ಬೇವಿನ ಗಿಡ ಹಾಕಿದ್ದೆವು. ಗೆದ್ದಲು ತಿನ್ನುವುದಿಲ್ಲ ಅಂತ ಕೆಲವರು ಮನೆಬಾಗಿಲನ್ನು ಬೇವಿನ ಮರದಲ್ಲಿ ಮಾಡಿಸುತ್ತಾರೆ. ಆದರೆ ನಮ್ಮ ಬೇವಿನ ಗಿಡದ ಬುಡದಿಂದ ಸುಮಾರು ಮೂರಡಿವರೆಗೆ ಗೆದ್ದಲು ಸುತ್ತುವರಿದಿದ್ದವು. ಗೆದ್ದಲಿಗೆ ಅಂತ ತುಸು ಗೆಮಾಕ್ಸಿನ್ ಪೌಡರ್ ತಂದು ಹಾಕಿದೆವು. ಆಗಾಗ ಇರುವೆಗಳು ಓಡಾಡುವುದು ಕಂಡರೂ `ಇರುವೆ ತಾನೆ’ ಅಂತ ಸುಮ್ಮನಿದ್ದೆವು. ಒಂದಿಷ್ಟು ದಿನ ಕಳೆದ ಮೇಲೆ ಬಚ್ಚಲುಮನೆ, ಶೌಚಾಲಯಗಳಲ್ಲಿ ಎರೆಹುಳು ಬರಲಿಕ್ಕೆ ಶುರುಮಾಡಿದವು. ದಿನಾ ಬೆಳಗ್ಗೆ ಅವುಗಳನ್ನು ತೆಗೆದುಹಾಕುವ ಕೆಲಸ. ಎಲ್ಲಿಂದ ಬರ್ತಿವೆ ಅನ್ನೋದೆ ಗೊತ್ತಾಗಲಿಲ್ಲ. ರಾತ್ರಿ ಮಲಗುವಾಗ ಅಲ್ಲೆಲ್ಲ ಫಿನಾಯಿಲ್ ಹಾಕುವ ಕಾರ್ಯಕ್ರಮ. ಹಗಲೆಲ್ಲ ಅದರ ವಾಸನೆ. `ಈಗೀಗ ಈ ಹುಳಹುಪ್ಪಟೆಗಳ ಹಾವಳಿ ಸಾಕಾಗೋಯ್ತು. ಇದನ್ನು ಬಾಡಿಗೆಗೆ ಕೊಟ್ಟು ಎಲ್ಲಾದರೂ ಅಪಾರ್ಟ್ಮೆಂಟಿಗೆ ಹೋಗೋದೆ ಸುಖ’ ಅನ್ನೋ ಹಂತಕ್ಕೆ ಬಂದೆವು. `ಶನಿಗೆ ಹೆದರಿ ಹುತ್ತಹೊಕ್ಕು ಹಾವು ಕಡಿದು ಸತ್ತರಂತೆ’ ಅನ್ನೋ ಗಾದೆ ನೆನಪಾಗಿ ಸುಮ್ಮನಾದೆವು. ಒಂದಿನ ಇದಕ್ಕಿದ್ದಂತೆ ಹಿಂಬಾಗಿಲ ಬಾಗಿಲ ಪಟ್ಟಿಯಿಂದ ಸೈನಿಕರಂತೆ ಒಂದರ ಹಿಂದೆ ಒಂದು ಎರೆಹುಳುಗಳು ಹೊರಬಿದ್ದವು. ಮೂರ್ಸಂಜೆ ಹೊತ್ತು. ಗುಡಿಸಿ ಹೊರಹಾಕುವುದರಲ್ಲಿ ಸಾಕಾಯಿತು. ಮತ್ತೆ ಬೂದಿಯ ಸಿಂಪರಣೆ. ಮರದ ಕೆಲಸ ಮಾಡುವವನಿಗಾಗಿ ಹುಡುಕಾಟ. ಕೆಳಗಿನಿಂದ ಸುಮಾರು ಒಂದಡಿಯಷ್ಟು ಬಾಗಿಲಪಟ್ಟಿಯನ್ನು ಇರುವೆಗಳು ಆಪೋಶನ ಮಾಡಿದ್ದವು. ಆ ಜಾಗದಲ್ಲಿ ಎರೆಹುಳುಗಳ ವಾಸ್ತವ್ಯ. ಪಟ್ಟಿಕತ್ತರಿಸಿ ತೆಗೆದು ತನ್ನ ಕೆಲಸ ಮುಗಿಯಿತೆಂದು ಮರದ ಕೆಲಸಗಾರ ತನ್ನ ಹತಾರೆ ತೆಗೆದುಕೊಂಡು ಹೋದಮೇಲೆ ಗಾರೆಯವನನ್ನು ಕರೆತರುವ ಕೆಲಸ. ಅವನದು ಮುಗಿಯಿತು. ಗೋಡೆ, ಬಾಗಿಲಿಗೆ ಬಣ್ಣ ಹಚ್ಚದಿದ್ದರೆ ಹೇಗೆ? ಹಾಗೂ ಹೀಗೂ ಬಣ್ಣದವನ ಕೆಲಸವೂ ಮುಗಿಯಿತು. ಅಷ್ಟರಲ್ಲಿ ನಾವು ಸುಸ್ತೋಸುಸ್ತು.
ಹುಟ್ಟಿ ಬೆಳೆದಿದ್ದು ಮಲೆನಾಡಿನಲ್ಲೇ ಆದರೂ ನನಗೆ ಈಗೀಗ ಮಳೆಗಾಲ ಎಂದರೆ ಅಲರ್ಜಿ. ಒಂದೇ ಸಮನೆ ಮಳೆ ಬಂದರೆ ಪರವಾಗಿಲ್ಲ. ಮಳೆ, ಬಿಸಿಲು ಅಂತ ಆಯಿತು ಅಂದರೆ ಕಂಬಳಿಹುಳುಗಳ ಹಾವಳಿ. ನಾವು ಇಲ್ಲಿಗೆ ಬಂದ ಹೊಸತು. ಶಾಲೆಯ ಯೂನಿಫಾರ್ಮ್ ಹಾಕಿಕೊಂಡ ಮಗಳು `ಅಮ್ಮಾ, ಮೈಯೆಲ್ಲ ಕಡಿತಿದೆ’ ಎಂದಳು. `ಎಲ್ಲಿ ತೋರಿಸು’ ಅಂದೆ. ಬೆನ್ನಮೇಲೆಲ್ಲ ಸಣ್ಣ ಸಣ್ಣ ಪಿತ್ತಗಂಧಿಯಂಥ ಬೊಕ್ಕೆ. ಅವಳ ಲಂಗ ತೆಗೆದು ಕುಡುಗಿದರೆ ಸಣ್ಣ ಕಂಬಳಿಹುಳು. ಎರಡ್ಮೂರು ವಾರ ಇದೇ ಕತೆ. ಬಟ್ಟೆ ಒಣಹಾಕುವುದು ಎಲ್ಲಿ? ಕಂಪೌಂಡಿಗೆ ಒರಗುವಾಗ ಕಂಬಳಿ ಹುಳುಗಳಿವೆಯಾ ಅಂತ ಗಮನಿಸಬೇಕು. ಗಿಡಗಳ ಗತಿ ಏನಾಯ್ತು ಅನ್ನುವ ಚಿಂತೆ. ಸುಮ್ಮನೆ ಮೈ ತುರಸಿದರೂ ಕಂಬಳಿಹುಳ ತಾಗಿರಬಹುದು ಎನ್ನುವ ಸಂಶಯ. ಮಳೆ ಬಂತು, ಸೆಖೆ ಕಡಿಮೆಯಾಯ್ತು ಎನ್ನುವ ನಿರಾಳಕ್ಕೆ ಕೊಕ್ಕೆ. ಕಂಬಳಿಹುಳುವಿನ ಕಿರಿಕಿರಿ ನನಗೆ ಹೊಸತಲ್ಲ. ನಮ್ಮೂರಲ್ಲಿ ಪ್ರತಿ ಮಳೆಗಾಲದಲ್ಲೂ ಇದನ್ನು ಅನುಭವಿಸಿದ್ದು ಈಗಲೂ ನೆನಪಿದೆ. ನಾವು ಕಂಬಳಿಹುಳು ಎಲ್ಲೋ ತಾಗಿದೆ ಅಂತ ಅಮ್ಮನ ಹತ್ತಿರ ಹೇಳಿದರೆ `ಕಂಬಳಿ ಹಾಕಿ ಉಜ್ಜು’ ಅನ್ನೋರು. ಇಲ್ಲದಿದ್ದರೆ ವಿಭೂತಿ ಹಚ್ಚಿ ಉಜ್ಜಬೇಕಿತ್ತು. ಆಗ ಇದೂ ಬದುಕಿನ ಭಾಗವಾಗಿತ್ತು.
ಈಗ ಕೆಲವು ವರ್ಷಗಳಿಂದ ಮೈಸೂರಿನಲ್ಲಿ ಹಿಸುಕು (ಬಸವನಹುಳು)ಗಳ ಹಾವಳಿ. ಒಂದಿನ ಮಳೆ ಹೊಯ್ದರೆ ಸಾಕು. ಕೆಲವು ಬಡಾವಣೆಗಳಲ್ಲಿ ಅವುಗಳ ಉಪಟಳ ವಿಪರೀತ. ನಮ್ಮನೆಯ ಪಕ್ಕದ ಖಾಲಿ ನಿವೇಶನ ಹಾವು, ಇಲಿಗಳಿಂದ ಹಿಡಿದು ಇರುವೆವರೆಗೆ ಎಲ್ಲ ಕ್ರಿಮಿ-ಕೀಟ, ಹುಳುಹುಪ್ಪಟೆಗಳಿಗೆ ಆಶ್ರಯತಾಣ. ಮೊದಲ ಬಾರಿ ತಣ್ಣಗೆ ಏನೋ ಕಾಲಿಗೆ ತಾಗಿದಾಗ ಗಾಬರಿಯಾಗಿ `ಏನೋ ಕಾಲಿಗೆ ತಾಗ್ತು’ ಅಂತ ಕೂಗಿದ್ದೆ. ನೋಡಿದರೆ ಅತ್ಯಂತ ಅಸಹ್ಯಪಡುವ ಹುಳು. ಚಿಕ್ಕವಯಸ್ಸಿನಲ್ಲಿ ಮಳೆಗಾಲದಲ್ಲಿ ಜಪ್ಪಯ್ಯ ಅಂದರೂ ತೋಟಕ್ಕೆ ಹೋಗುತ್ತಿರಲಿಲ್ಲ. ತೋಟದಲ್ಲಿ ಎಲ್ಲಿ ಕಾಲಿಟ್ಟರೂ ಅದು ಕಾಲಿಗೆ ತಾಗುತ್ತದೆ ಎನ್ನುವ ಭಯ, ಅದಕ್ಕೂ ಹೆಚ್ಚಾಗಿ ಅಸಹ್ಯ. ಮನೆಹತ್ತಿರ ಕಾಣುತ್ತಿರಲಿಲ್ಲ. ಆದರೆ ಊಟದ ಬಾಳೆ ಸೋಸುವಾಗ ಎಚ್ಚರಿಕೆಯಿಂದ ನೋಡಬೇಕಿತ್ತು. ಓದಕ್ಕೆ ಅಂತ ಮೈಸೂರಿಗೆ ಬಂದ ಮೇಲೆ ಅದರ ಗೊಡವೆಯೇ ಇರಲಿಲ್ಲ. ಈಗ ಇದ್ದಕ್ಕಿದ್ದಂತೆ ಪ್ರತ್ಯಕ್ಷ. ಬೆಳಗ್ಗೆ ಎದ್ದ ಕೂಡಲೇ ಹಿತ್ಲಕಡೆ ಹರಿದಾಡುತ್ತಿರೋ ಅವನ್ನು ತೆಗೆದು ಹಾಕುವ ಕೆಲಸ. ಸುಮ್ಮನೆ ತೆಗೆದು ಹಾಕಿದರೆ ಮತ್ತೆ ಮತ್ತೆ ಬರುತ್ತವೆ. ಹಾಗಾಗಿ ಅವಕ್ಕೆ ಮುಕ್ತಿನೀಡಲೇಬೇಕು. ಮೊದಲು ಒಂದು ಮೊರಕ್ಕೆ ಹಾಕಿ ಉಪ್ಪು ಸುರಿಯುತ್ತಿದ್ದೆವು. ಆಮೇಲೆ ಯಾರೋ ಹೇಳಿದರು, ಸುಮ್ಮನೆ ಉಪ್ಪಿನ ಖರ್ಚು ಯಾಕೆ ಅಂತ. ಬೂದಿ ಹಾಕಿದರೆ ಕ್ಷಣದಲ್ಲಿ ಹರೋಹರ. ಸಂಜೆಹೊತ್ತಿಗೆ ಕಂಪೌಂಡು, ಗೋಡೆಗಳ ಮೇಲೆಲ್ಲ ಹರಿದಾಡುವ ಅವನ್ನು ತೆಗೆದು ಚೊಕ್ಕಮಾಡಬೇಕು. ಬೆಳಗ್ಗೆ ಮತ್ತೆ ಅದೇ ಕೆಲಸ. ಮನೆ ಹೊರಗೆ ಹರಿದಾಡಿದರೆ ಹೇಗೋ ಸಹಿಸಬಹುದು. ಕೆಲವೊಮ್ಮೆ ಅವು ನಮ್ಮ ಕಣ್ತಪ್ಪಿಸಿ ಗೃಹಪ್ರವೇಶ ಮಾಡಿಬಿಡುತ್ತವೆ. ತೊಂದರೆ ಏನಪ್ಪ ಅಂದ್ರೆ ಅವು ಹೋದ ಜಾಗವೆಲ್ಲ ಲೋಳೆ. ಚೊಕ್ಕ ಮಾಡುವ ತಲೆನೋವು. ಇಂತಿಪ್ಪ ಹುಳುಗಳ ವಿಷಯ `ನಿಮ್ಮನೆ ಕಂಪೌಂಡ್ ಒಳಗೂ ಬರುತ್ವಾ?’ ಅಂತಲೋ `ನಿಮ್ಮನೆದೂ ಇದೇ ಕತೆನಾ?’ ಅಂತಲೋ ಸಂಭಾಷಣೆಯ ಭಾಗವಾಗುವುದೂ ಇದೆ.
ಇಷ್ಟೆನಾ? ಅಂತ ಹುಬ್ಬೇರಿಸಬೇಡಿ. ನಿಲಯ ಕಲಾವಿದರಾಗಿ ಜಿರಲೆ, ಸೊಳ್ಳೆಗಳೂ ಅತಿಥಿ ಕಲಾವಿದರಾಗಿ ಜೇಡ, ಜಾಲ, ಹಲ್ಲಿಗಳೂ ವಿಜೃಂಭಿಸುವುದು ಇದ್ದೇ ಇದೆ. ಭೂಮಿ ನಮ್ಮದೊಂದೇನಾ? ಪಶು-ಪಕ್ಷಿಗಳು, ಕ್ರಿಮಿ-ಕೀಟಾದಿಗಳು, ಸರಿಸೃಪಗಳು ಸೇರಿದಂತೆ ಕೋಟ್ಯಂತರ ಜೀವಿಗಳಿಗೂ ಆಶ್ರಯ ತಾಣ ಹೌದು ತಾನೆ?
ಡಾ. ಚಂದ್ರಮತಿ ಸೋಂದಾ ಅವರಿಗೆ ಸಾಹಿತ್ಯದಲ್ಲಿ ಆಸಕ್ತಿ. ‘ಮೈಸೂರು ಮಿತ್ರ’ದಲ್ಲಿ ಬರೆದ ಇವರ ಅಂಕಣಗಳು ಆರು ಸಂಕಲನಗಳಲ್ಲಿ ಪ್ರಕಟವಾಗಿವೆ. ಮಹಿಳಾಪರ ಚಿಂತನೆ ಅವರ ಆದ್ಯತೆ.