ಆತ ಗುಹೆಯೊಳಗೆ ಬೀಳುತ್ತಿರಬೇಕಾದರೆ, ಬಾಲ್ಯದಲ್ಲಿ ನದಿಯ ನೀರಿಗೆ ಹಾರಿ, ಆನಂತರ ಈಜಲು ಅಸಾಧ್ಯವೆನಿಸಿ ಕಡೆಗೆ ಕುಟ್ಟನ್ ಬಂದು ಮೇಲೆತ್ತಿ ಕರೆದುಕೊಂಡು ಹೋಗುವ ದೃಶ್ಯವ ಹೊಲಿಯಲಾಗಿದೆ. ಹೀಗೆ ದೃಶ್ಯವೊಂದರ ಹಿಂದೆ ಅವಿತಿರುವ ಸನ್ನಿವೇಶ, ಭಾವವ ಬಣ್ಣಿಸುವ ಈ ಪ್ರಯೋಗ ಚಿತ್ರದ ಮೆಚ್ಚಿನ ಅಂಶಗಳಲ್ಲೊಂದು. ನೀರಿನ ಚಲನೆಗೆ ಅಡ್ಡಲಾಗಿ ಮಲಗುವುದು, ತನ್ನ ವಾಹನದ ತುಂಬಾ ಚೆಲ್ಲಿದ ಪದಾರ್ಥಗಳು, ಬಾಗಿಲಿನ ಅಂಚಿನಲ್ಲಿ ಅಂಟಿದ ಉಗುಳು ಕಲೆಯನ್ನು ಆಸ್ಥೆಯಿಂದ ತೆಗೆದು ಸ್ವಚ್ಛಗೊಳಿಸುವ ರಥದ ಕಡೆಗಿನ ಚಾಲಕನ ಪ್ರೇಮ ಹೀಗೆ ಬದುಕಿನ ಮೌಲ್ಯಗಳ ಬಗ್ಗೆ ಕಥೆಯು ಮೌನವಾಗಿಯೇ ಮಾತನಾಡುತ್ತದೆ.
ರಾಮ್ ಪ್ರಕಾಶ್ ರೈ ಕೆ. ಬರೆಯುವ “ಸಿನಿ ಪನೋರಮಾ” ಸರಣಿಯಲ್ಲಿ ಮಲಯಾಳಂನ ‘ಮಂಜುಮ್ಮೆಲ್ ಬಾಯ್ಸ್ ‘ಸಿನಿಮಾದ ವಿಶ್ಲೇಷಣೆ

ರಕ್ತ ಸಂಬಂಧಗಳ, ಮೀರಿದ ಬಂಧವಿದು
ಯಾವ ಬಿಂದುವಿನಲ್ಲಿ ಸಂಧಿಸಿಹುದು
ಚಾಚಿ ತೋಳುಗಳನ್ನು ಬಿಗಿದಪ್ಪಿಕೊಳ್ಳುವುದು
ನಮ್ಮ ಪ್ರತಿ ನೋವನ್ನು, ತನ್ನದೆಂದು
ಕೈಯ ಹಿಡಿದು ಹೆಜ್ಜೆ ಬೆಸೆದು
ಮುಂದೆ ಮುಂದೆ ನಡೆವ ಎಂದು
-ಕವಿರಾಜ್

(ಚಿದಂಬರಂ)

ಸ್ನೇಹವೆಂದರೆ ಆಗಸದ ಮೇಲೆ ಅಂಟಿದ ಚಂದಿರನಂತೆ. ಧರೆಯಲ್ಲಿ ವಿಲೀನವಾಗುವ ಮಳೆಯ ಹನಿಗಳಂತೆ. ನಸುಕನ್ನು ಆವರಿಸುವ ಕನಸಿನಂತೆ. ಚಿತ್ರಗಳು ಸೆರೆ ಹಿಡಿದ ಬಣ್ಣಗಳಂತೆ. ಗಡಿ ರೇಖೆಗಳ ಹಂಗಿಲ್ಲದ, ತಿರು ತಿರುಗಿ ಸೇರುವ ನದಿಯಂತೆಯೇ ಸ್ನೇಹ. ಇಲ್ಲಿ ಸ್ವಾರ್ಥ, ನಾಟಕೀಯತೆಗೆ ಜಾಗವಿಲ್ಲ. ಹಲವು ದೇಹಗಳಿದ್ದರೂ ಆತ್ಮ ಮಾತ್ರ ಒಂದೇ. ಅಭಿಪ್ರಾಯಗಳು, ಇಷ್ಟ ಕಷ್ಟಗಳು, ನೋವು ನಲಿವುಗಳು, ಆಸ್ತಿ ಅಂತಸ್ತುಗಳು ಹೀಗೆ ಹಲವು ವಿಚಾರಗಳಲ್ಲಿ ಅಸಮತೋಲನ ಇರಬಹುದು. ಆದರೆ, ಗೆಳೆತನವೆಂದು ಬಂದಾಗ ಅವೆಲ್ಲವೂ ಚಿಪ್ಪಿನೊಳಗೆ ಸೇರಿಕೊಳ್ಳುತ್ತದೆ. ತೀವ್ರ ವಾಗ್ವಾದಗಳು, ನೃತ್ಯದ ಮಧ್ಯೆ ಕಳೆದು ಹೋಗುತ್ತದೆ. ನೋವು ನಗುವಿನ ಮುಂದೆ ಮಾಯವಾಗುತ್ತದೆ. ಹೀಗೆ, ಸ್ನೇಹವೆಂದರೆ ಬಯಸದೆ ಸಿಗುವ ಉಡುಗೊರೆ. ಅವಘಡಗಳಿಗೆ ನಲುಗದ ಕಟ್ಟಡ. ಅಂತಹುದೇ ಒಂದು ಸುಂದರ ಬಂಧದ ಸುತ್ತ ಹೆಣೆದ ಕಥಾ ಹಂದರವೇ ‘ಮಂಜುಮ್ಮೆಲ್ ಬಾಯ್ಸ್ ‘.

ಅದು ಕೇರಳದ ಕೊಚ್ಚಿಯ ಮಂಜುಮ್ಮೆಲ್ ಎಂಬ ಪ್ರದೇಶ. ಅಲ್ಲೊಂದಿಷ್ಟು ಯುವ ಗೆಳೆಯರು. ಸ್ನೇಹಕ್ಕೆ ಅನ್ವರ್ಥ. ಮದುವೆಯ ರಾತ್ರಿ, ಸುರೆಯ ಮತ್ತಿನಲ್ಲಿ ನೃತ್ಯ ಮಾಡುವುದು, ಇನ್ನೊಂದು ಗುಂಪಿನೊಡನೆ ಕಾಲು ಕೆರೆದು ಜಗಳ ಮಾಡುವುದು ಹೀಗೆ ಒಂಥರಾ ತೇಜಸ್ವಿಯವರ ಕಥೆಗಳಲ್ಲಿ ಬರುವ ಊರ ಯುವಕರ ರೀತಿಯದೆ ಬದುಕು. ಹಗ್ಗ ಜಗ್ಗಾಟದಲ್ಲಿ ಗೆಲುವಿಗೆ ಸತತವಾಗಿ ಪ್ರಯತ್ನಿಸಿ, ಕೊನೆಗೆ ಹಗ್ಗವನ್ನು ಕೈ ಬಿಟ್ಟ ತಂಡವದು. ಹೀಗೆ ದಿನಗಳನ್ನು ನೂಕುತ್ತಿರುವಾಗಲೇ, ಅವರೆಲ್ಲರಿಗೆ ಪ್ರವಾಸಕ್ಕೆ ತೆರಳಬೇಕೆಂಬ ಮನಸ್ಸಾಗುತ್ತದೆ. ಮಾಮೂಲು ಎಂಬಂತೆ ‘ಗೋವಾ’ದ ನಾಮ ಜಪವಾದರೂ ಕೊನೆಯಲ್ಲಿ ‘ಕೊಡೈಕೆನಾಲ್’ ಅಂತಿಮಗೊಳ್ಳುತ್ತದೆ. ಕೆಂಪು ಮೈಯ ಕ್ವಾಲಿಸ್ ಕಾರು ಹೊಟ್ಟೆ ಬಿರಿಯುವಷ್ಟು ಜನರ ಹೊತ್ತು ‘ಕೊಡೈಕೆನಾಲ್’ನತ್ತ ಹೆಜ್ಜೆ ಹಾಕುತ್ತದೆ. ಅಲ್ಲಿನ ಪರಿಸರ, ಪ್ರಕೃತಿ ವೀಕ್ಷಿಸುವ ಮುನ್ನ ಅಂಗಡಿ ಮುಂಗಟ್ಟುಗಳ ಸುತ್ತಿ ಕೊಡಕೆನಾಲ್‌ನಲ್ಲೇ ‘ಗುಣಾ ಗುಹೆ’ಯಲ್ಲಿ ಚಿತ್ರಿಸಲ್ಪಟ್ಟ ಕಮಲ ಹಾಸನ್ ಅಭಿನಯದ ‘ಕಣ್ಮಣಿ ಅಂಬೋದು ಕಾದಲನ್’ ಹಾಡಿನ ಸಿಡಿಯ ಖರೀದಿಸಿ ಕೇಳುತ್ತ ಸ್ಥಳ ದರ್ಶನ ಮಾಡುತ್ತಾರೆ. ಇನ್ನೇನೂ ತಿರುಗಿ ಹೋಗುವ ಸಮಯ ಎಂದಾಗ ‘ಗುಣಾ ಗುಹೆ’ಯತ್ತ ಸಾಗೋಣ ಎಂಬ ಸಲಹೆ ಬರುತ್ತದೆ. ಅದರಂತೆ ಗೆಳೆಯರೆಲ್ಲರೂ ಅತ್ತ ಸಾಗುತ್ತಾರೆ. ಪ್ರಕೃತಿಯ ಅನೂಹ್ಯತೆ, ಸೊಬಗಿನ ರಹಸ್ಯದ ಪ್ರತಿನಿಧಿಯಂತೆ ಕಾಣುವ ಆ ಗುಹೆಯತ್ತ ಸಾಗಲು ಅನುಮತಿ ನಿಷೇಧಿಸಿದ್ದರೂ, ಮಂಜುಮ್ಮೆಲ್ ಗೆಳೆಯರ ಬಳಗ ಅತ್ತ ದಾಪುಗಾಲಿಡುತ್ತದೆ. ಕಲ್ಲು ತನ್ನ ಮೈಯ ಕೆರೆದುಕೊಂಡು ಅಲ್ಲಲ್ಲಿ ಮಾಡಿರುವ ಗಾಯಗಳಂತೆ ಕಾಣುವ ಆಳ ಕಂದಕಗಳು, ತಲೆಯೆತ್ತಿ ನಿಂತ ಸಿಪಾಯಿಯಂತೆ ಕಾಣುವ ಶಿಲೆಯ ಸಾಲು, ಅಲ್ಲಲ್ಲಿ ದಣಿದು ಮಲಗಿದ ನೀರ ಗುಂಪು, ಪೂರ್ಣ ಒಳ ಪ್ರವೇಶಿಸಲು ಅನುಮತಿ ನಿರಾಕರಣೆಗೊಂಡು ಚೂರು ಪಾರು ನುಗ್ಗುವ ಬೆಳಕು ಹೀಗೆ ವಿಸ್ಮಯದ ತಾಣವದು. ಮಂಜುಮ್ಮೆಲ್ ಹುಡುಗರಿಗೆ ಈ ಅನುಭವ ತಾಜಾ ಆದುದರಿಂದ, ಮೈಯೆಲ್ಲಲ್ಲಾ ರೋಮಾಂಚನ, ಆನಂದದ ಕಲರವ. ಈ ಮೊದಲು ಅಲ್ಲಿಗೆ ಬಂದಿದ್ದ ತಂಡಗಳ ಹೆಸರು ಕಲ್ಲಿನಲ್ಲಿ ಮೂಡಿದ್ದು ಕಂಡು ಅವರೂ ತಮ್ಮ ತಂಡದ ಹೆಸರನ್ನೂ ದಾಖಲಿಸಬೇಕು ಎಂದು ಅಲ್ಲೆಲ್ಲೋ ಬಿಟ್ಟು ಹೋಗಿದ್ದ ಹಳದಿ ಬಣ್ಣದ ಡಬ್ಬ ತೆರೆದು ‘ಮಂಜುಮ್ಮೆಲ್ ಬಾಯ್ಸ್’ ಎಂದು ಬರೆಯುತ್ತಾರೆ. ನಿಜವಾದ ಪ್ರಸಂಗ ಆಗ ಶುರುವಾಗುತ್ತದೆ. ಬಳಗದ ಸದಸ್ಯ ಸುಭಾಷ್ ಮಾತನಾಡುತ್ತ ಮುಂದೆ ಬರಬೇಕಾದರೆ, ಎಲೆಗಳ ಒಳಗೆ ಮುಚ್ಚಿದ್ದ ಬಲು ಆಳವಾದ ಗುಹೆಯೊಳಗೆ ಬಿದ್ದುಬಿಡುತ್ತಾನೆ. ಗೆಳೆಯರೆಲ್ಲರೂ ಈ ಹಠಾತ್ ಅವಘಡದಿಂದ ತತ್ತರಿಸುತ್ತಾರೆ. ಪೋಲಿಸು, ಫಾರೆಸ್ಟ್ ಗಾರ್ಡ್, ಸಮೀಪವಾಸಿಗಳು, ಅಂಗಡಿಯ ಜನರುಗಳೆಲ್ಲರಿಗೂ ಸುದ್ದಿ ಮುಟ್ಟಿಸುತ್ತಾರೆ. ಅಷ್ಟು ಹೊತ್ತಿಗೆ ಆಗಸದ ಗರ್ಭ ಸೀಳಿ ಭೂಮಿ ನಲುಗುವಂತೆ ಮಳೆ ತಾಂಡವ ನೃತ್ಯವನ್ನು ಆರಂಭಿಸುತ್ತದೆ. ಸಲಿಲ ಹರಿದು ಸುಭಾಷ್ ಒಳ ಜಾರಿದ ಗುಹೆಯೊಳಗೆ ನುಗ್ಗಲು ಆರಂಭಿಸುತ್ತದೆ. ಆಗ ಗೆಳೆಯರೆಲ್ಲರೂ ಜೊತೆಯಾಗಿ ಬಂದು ನೀರಿನ ಹರಿತಕ್ಕೆ ತಡೆಯಾಗಿ ತಮ್ಮ ದೇಹವನ್ನಿಡುತ್ತಾರೆ. ಮುಂದೆ, ಈ ಅವಘಡ ಸುದ್ದಿಯಾಗುತ್ತದೆ. ಅಗ್ನಿಶಾಮಕ ದಳದ ಕಾರ್ಯಾಚರಣೆ ಆರಂಭಗೊಳ್ಳುತ್ತದೆ. ಆದರೆ ಯಾವ ಅಧಿಕಾರಿಯೂ ಹಗ್ಗದ ಸಹಾಯದಿಂದ ಆ ಗುಹೆಯೊಳಗೆ ಇಳಿಯಲು ಇಚ್ಚಿಸುವುದಿಲ್ಲ. ಕಾರಣವಿದೆ. ಆ ಗುಹೆಗೆ ‘ಡೆವಿಲ್ಸ್ ಕಿಚನ್ ‘ ಎಂದು ಹೆಸರು.

900 ft ಆಳ. ಪೋಲಿಸು ದಾಖಲೆಗಳ ಪ್ರಕಾರ ಒಟ್ಟು 13 ಜನ ಅದರೊಳಗೆ ಸಿಲುಕಿಕೊಂಡು ನಾಪತ್ತೆಯಾಗಿದ್ದಾರೆ. ಕೇಂದ್ರದ ಮಂತ್ರಿಯ ಮೊಮ್ಮಗನೂ ಸೇರಿದಂತೆ, ಅವರೊಂದು ಮೂಳೆಯ ಭಾಗವೂ ಸಿಕ್ಕಿಲ್ಲ. ಎಂತಹ ಸಾಹಸಿಗನಿಗೂ ನಿಲುಕದ, ಕೈಗೆಟುಕದ ಹುಳಿ ದ್ರಾಕ್ಷಿಯದು. ಮುಂದೆ ಕಮಲ್ ಹಾಸನ್ ಚಿತ್ರ ‘ಗುಣಾ’ ಚಿತ್ರೀಕರಣಗೊಂಡು ಆ ಗುಹೆಗೆ ‘ಗುಣಾ ಗುಹೆ’ ಎಂಬ ಹೆಸರು ಬರುತ್ತದೆ. ಅಂತಹ ಗುಹೆಯೊಳಗೆ ಸಾಗಲು ಯಾರೂ ಧೈರ್ಯ ಮಾಡದೇ ಇದ್ದಾಗ, ಗೆಳೆಯ ಕುಟ್ಟನ್ ತಾನು ಹೋಗುವೆನೆಂದು ಮುಂದೆ ಬರುತ್ತಾನೆ. ಆಮ್ಲಜನಕದ ಕೊರತೆ, ಕಲ್ಲುಗಳ ಭಯಾನಕ ಜೋಡಣೆಯ ಮಧ್ಯೆ ಸಾಗಿ, ಪವಾಡದ ಸದೃಶವೆಂಬಂತೆ ರಕ್ತದಲ್ಲಿ ಅದ್ದಿದ ಸುಭಾಷನನ್ನು ಹೊತ್ತು ತರುತ್ತಾನೆ. ಹಗ್ಗ ಜಗ್ಗಾಟದಲ್ಲಿ ಪರಿಣಿತರಾದ ಗೆಳೆಯರು ಹಗ್ಗ ಎಳೆಯಲು ತೋಳು ನೀಡುತ್ತಾರೆ. ಹೀಗೆ, ಅಡೆತಡೆಗಳು ಸಾವಿರವಿರಲಿ, ಅಪನಂಬಿಕೆಗಳು ಚಕ್ಕಳ ಬಕ್ಕಳ ಹಾಕಿ ಕುಳಿತುಕೊಳ್ಳಲಿ, ಸ್ನೇಹಕ್ಕೆ ಪೂರ್ಣವಿರಾಮವೆಂಬುದು ಪದಕೋಶದಲ್ಲೇ ಇಲ್ಲ ಎಂದು ಸಾರುವ ಕಥೆಯೇ ‘ಮಂಜುಮ್ಮೆಲ್ ಬಾಯ್ಸ್’.

ಇದು ನೈಜ ಘಟನಾಧಾರಿತ ಚಿತ್ರ. ಸಾಮಾನ್ಯವಾಗಿ ನಡೆದ ಘಟನೆಯ ಆಧರಿಸಿದ ಚಿತ್ರಗಳು ಮನರಂಜನೆಯ ಧಾಟಿಯಲ್ಲಿ ಪ್ರೇಕ್ಷಕರಿಗೆ ತಲುಪಲು ಕಷ್ಟ ಸಾಧ್ಯವೆನಿಸುತ್ತದೆ. ಅದರೆ ಈ ಚಿತ್ರದ ಕಥೆ ಸರಳವೆನಿಸಿದರೂ, ಚಿತ್ರಕತೆಯ ಶೈಲಿ ನೋಡುಗನನ್ನು ಮುಂದೇನು ಎಂಬ ಕುತೂಹಲದ ಗುಹೆಯೊಳಗೆ ತಳ್ಳುವಂತೆ ಮಾಡುತ್ತದೆ. ಚಿತ್ರದ ಟ್ರೀಟ್‌ಮೆಂಟ್ ಅದೆಷ್ಟು ಸೊಗಸು ಎಂದರೆ, ಸುಭಾಷ್ ಗುಹೆಯೊಳಗೆ ಬಿದ್ದ ನಂತರ ಸ್ನೇಹಿತರೆಲ್ಲರೂ ಆತನನ್ನು ಕರೆಯುತ್ತಿರುವಾಗ, ಆತನ ಕೇಳದ ದನಿಗೆ ಪೂರಕವವೆಂಬಂತೆ, ಆತ ತನ್ನ ಸಣ್ಣ ವಯಸ್ಸಿನಲ್ಲಿ ಕಣ್ಣ ಮುಚ್ಚಾಲೆ ಆಡಬೇಕಾದರೆ ಟಾರಿನ ಡಬ್ಬಿಯ ಒಳಗೆ ಅವಿತು ಗೆಳೆಯರಿಗೆ ದಿಗಿಲು ಉಂಟಾದ ದೃಶ್ಯವನ್ನು ಜೋಡಿಸಲಾಗಿದೆ. ಆತ ಗುಹೆಯೊಳಗೆ ಬೀಳುತ್ತಿರಬೇಕಾದರೆ, ಬಾಲ್ಯದಲ್ಲಿ ನದಿಯ ನೀರಿಗೆ ಹಾರಿ, ಆನಂತರ ಈಜಲು ಅಸಾಧ್ಯವೆನಿಸಿ ಕಡೆಗೆ ಕುಟ್ಟನ್ ಬಂದು ಮೇಲೆತ್ತಿ ಕರೆದುಕೊಂಡು ಹೋಗುವ ದೃಶ್ಯವ ಹೊಲಿಯಲಾಗಿದೆ. ಹೀಗೆ ದೃಶ್ಯವೊಂದರ ಹಿಂದೆ ಅವಿತಿರುವ ಸನ್ನಿವೇಶ, ಭಾವವ ಬಣ್ಣಿಸುವ ಈ ಪ್ರಯೋಗ ಚಿತ್ರದ ಮೆಚ್ಚಿನ ಅಂಶಗಳಲ್ಲೊಂದು. ನೀರಿನ ಚಲನೆಗೆ ಅಡ್ಡಲಾಗಿ ಮಲಗುವುದು, ತನ್ನ ವಾಹನದ ತುಂಬಾ ಚೆಲ್ಲಿದ ಪದಾರ್ಥಗಳು, ಬಾಗಿಲಿನ ಅಂಚಿನಲ್ಲಿ ಅಂಟಿದ ಉಗುಳು ಕಲೆಯನ್ನು ಆಸ್ಥೆಯಿಂದ ತೆಗೆದು ಸ್ವಚ್ಛಗೊಳಿಸುವ ರಥದ ಕಡೆಗಿನ ಚಾಲಕನ ಪ್ರೇಮ ಹೀಗೆ ಬದುಕಿನ ಮೌಲ್ಯಗಳ ಬಗ್ಗೆ ಕಥೆಯು ಮೌನವಾಗಿಯೇ ಮಾತನಾಡುತ್ತದೆ. ತನ್ನ ಗೆಳೆಯನನ್ನು ಮರಣದ ಬಾಯಿಯಿಂದ, ತನ್ನ ಜೀವದ ಆಸೆಯ ತೊರೆದು ರಕ್ಷಿಸಿದರೂ ಆತನ ಸ್ಥಿತಿಗೆ ಕುಟ್ಟನ್ ಕಾರಣವೆಂದು ಸುಭಾಷ್‌ನ ತಾಯಿ ಕುಟ್ಟನ್‌ಗೆ ವಾಚಾಮಗೋಚರ ಬೈದರೂ, ನಾನು ಎಂಬ ಭಾವವನ್ನು ಪ್ರದರ್ಶಿಸದೆ ಸುಮ್ಮನೆ ನಿಂತು, ನಾವು ಎಂಬ ನಿಲುವಿನ ಧಾರಕ ಎನಿಸಿಕೊಳ್ಳುತ್ತಾನೆ ಕುಟ್ಟನ್. ಮುಖ್ಯವಾಗಿ, ಕಣ್ಮಣಿ ಹಾಡು, ಕಮಲ್ ಹಾಸನ್ ಗಂಭೀರ ದನಿಯಲ್ಲಿ ಮೂಡುವ ಸಾಲುಗಳು, ಇಳಯರಾಜರ ಸಂಗೀತ, ಎಸ್ ಜಾನಕಿಯವರ ಕಂಠದಲ್ಲಿ ನಲಿಯುವ ಸಾಲುಗಳು, ಪ್ರೇಮ ಗೀತೆಯೊಂದು ಸ್ನೇಹದ ರೂಪಕವಾಗಿ ಮೂಡಿದ್ದೇ ಈ ಕಥಾನಕದ ಹೆಗ್ಗುರುತು.

ಸರಳ ಎಳೆಯಿರುವ ಕಥಾನಕಕ್ಕೆ, ಕುತೂಹಲ ಬೆರೆಸಿದ ಚಿತ್ರಕಥೆಯ ರಚಿಸಿದ್ದರಿಂದಲೇ, ಚಿದಂಬರಂ ಅವರ ಅಡುಗೆ ಸಮೂಹವನ್ನೇ ಆಕರ್ಷಿಸಲು ಕಾರಣವಾಯಿತು. ಕ್ಯಾಮೆರಾ ಹಿಡಿದ ಶೈಜು ಖಾಲಿದ್ ಕೈಗಳ ಕೊಡುಗೆಯೂ ಅಷ್ಟೇ ಇದೆ. ಬಾಸ್ಕೆಟ್ ಬಾಲ್ ಆಟಗಾರರಂತೆ ಎತ್ತರದ ಮರದ ಸಾಲುಗಳ ಮಧ್ಯೆ, ಗರಗಸದಿಂದ ಕೊಯ್ದು ನಿಲ್ಲಿಸಿರುವ ಶಿಲೆಗಳ ಸಮೂಹ, ಓಡಿ ಬರುವ ಮಳೆಯ ರಾಶಿ, ಅವಸರದಿ ಎದ್ದು ಓಟ ಕೀಳುವ ಬಾವಲಿಗಳ ಪಡೆ ಇತ್ಯಾದಿಗಳ ತೋರಿಸಿದ ಪರಿಯೇ ರಮಣೀಯ. ಇನ್ನು ಎಂದೂ ಅಭಿನಯ ಮಾಡದ ‘ಸೊಬಿನ್ ಶಾಹಿರ್’ ಗೆ ಶ್ರೀನಾಥ್ ಭಾಸಿ, ಬಾಲು ವರ್ಗಿಸ್, ಗಣಪತಿ ಪೊದುವಾಳ್ ಮುಂತಾದವರು ಸಹಕರಿಸಿದ್ದಾರೆ. ಒಟ್ಟಾರೆಯಾಗಿ, ಬಣ್ಣದಿಂದ ಭಾವದವರೆಗೆ ಕಾಡುವ, ಕಣ್ಣುಗಳ ದಾಟಿ ನೆಲೆಯಾಗುವ, ಮನಸ್ಸು ಪ್ರಾರ್ಥಿಸುವಂತೆ ಆರ್ದ್ರಗೊಳಿಸುವ, ಅನುಗಾಲವೂ ಆವರಿಸಿಕೊಳ್ಳುವ ಕಥೆಯೇ ‘ಮಂಜುಮ್ಮೆಲ್ ಬಾಯ್ಸ್ ‘.

ಮುಗಿಸುವ ಮುನ್ನ :
‘ತೊರೆದು ಜೀವಿಸಬಹುದೇ ಹರಿ ನಿನ್ನ ಚರಣವನು’ ಎಂಬಂತೆಯೇ ಸ್ನೇಹವ ತೊರೆದು ಬದುಕುವುದು ಒಂದು ರೀತಿ ದೊಡ್ಡ ಸಂಖ್ಯೆಯಿಂದ ಶೂನ್ಯದತ್ತ ಸಾಗಿದಂತೆಯೇ. ಏಕೆಂದರೆ ತಂಗಾಳಿ -ಬಿರುಗಾಳಿಯ ನಡುವೆ ಸಿಲುಕಿ ಸದಾ ಪತರಗುಟ್ಟುವ ಬದುಕಿಗೆ ಭರವಸೆಯೇ ಸ್ನೇಹ. ಅಳುವಿಗೆ ಕರವಸ್ತ್ರವಾಗಲು, ನಗುವಿಗೆ ಕೆನ್ನೆ ಅರಳಿಸಲು, ನೋವಿಗೆ ಹೆಗಲಾಗಲು, ನಲಿವಿಗೆ ಸಂಭ್ರಮಿಸಲು ಸ್ನೇಹಿತರು ಅವಶ್ಯಕ. ಬಹುಷಃ, ಮನುಷ್ಯ ಬಿಡುಗಡೆಗೊಂಡ ನಂತರ ಜೈಲು ಸೇರುವುದು ಸ್ನೇಹದ ವಿಚಾರದಲ್ಲಿ ಮಾತ್ರವಲ್ಲವೇ?……