ನನ್ನ ಮುಖ ಅವರ ಖುಷಿಗೆ ಸಾಕ್ಷಿ ಹಾಕುತ್ತಿತ್ತು. ಯಾಕೆ? ಮಿಸ್ ಲೇಟ್ ಆಯ್ತು ಅಂದರು. ಬಸ್ ಸಿಗ್ಲಿಲ್ಲ ಕಣ್ರೋ ಅಂದೆ. ಅದು ಸರಿ ಇದುವರೆಗೂ ನೀವು ಏನು ಮಾಡುತ್ತಿದ್ದೀರಿ ಅಂದಾಗ ಒಬ್ಬರ ಮುಖವನ್ನು ಒಬ್ಬರು ನೋಡಿಕೊಂಡರು. ಏನೂ ಇಲ್ಲ ಮಿಸ್ ಕನ್ನಡ ಪಾಠ ಓದುತ್ತಿದ್ದೋ ಅಂದರು. ನನಗೆ ಯಾಕೋ ನಿಮ್ಮ ಮುಖ ನೋಡಿದರೆ ಸುಳ್ಳು ಹೇಳುತ್ತಿದ್ದೀರಾ ಅನಿಸುತ್ತಿದೆ. ಬೇರೆ ಏನು ಮಾಡಿದ್ದೀರಾ? ಏನು ಮಾಡಿದಿರಿ? ಅಂದಾಗ ಮಿಸ್ ನಾವು ಮಾಡೋದೆಲ್ಲ ನಿಮಗೆ ಹೇಗೆ ಗೊತ್ತಾಗುತ್ತೆ ಅಂದರು.
ಅನುಸೂಯ ಯತೀಶ್ “ಬೆಳೆಯುವ ಮೊಳಕೆ” ಸರಣಿ ನಿಮ್ಮ ಓದಿಗೆ

ಅಂದು ನಾನು ಶಾಲೆಗೆ ಸ್ವಲ್ಪ ತಡವಾಗಿ ಹೋದೆ. ನಾನು ಪ್ರಯಾಣಿಸುತ್ತಿದ್ದ ಬಸ್ಸು ಪಂಚರ್ ಆಗಿದ್ದೆ ಇದಕ್ಕೆಲ್ಲ ಕಾರಣ. ಬಹು ಆತಂಕದಿಂದಲೇ ಒಂದೇ ಉಸಿರಿಗೆ ದಡಬಡನೆ ಹೆಜ್ಜೆ ಹಾಕುತ್ತ ಶಾಲೆ ಕಡೆಗೆ ನಡೆಯತೊಡಗಿದೆ. ಯಾವ ಮಕ್ಕಳು ಏನು ತೊಂದರೆ ಮಾಡಿಕೊಂಡರೋ, ಕ್ಲಾಸಿನ ಒಳಗೆ ಹೋದರೋ? ಇಲ್ಲವೋ? ಬಿಸಿಲಿನಲ್ಲಿ ಆಡುತ್ತಿದ್ದಾರೆಯೋ? ಹುಡುಗಾಟಿಕೆಯ ಮಕ್ಕಳು ಪರಸ್ಪರ ಜಗಳ ಮಾಡಿಕೊಂಡು ಏನಾದರೂ ಅಪಾಯ ಮಾಡಿಕೊಂಡಿರಬಹುದಾ? ಇಂತಹ ಹತ್ತು ಹಲವು ನಕಾರಾತ್ಮಕ ಯೋಚನೆಗಳು ಬಿಟ್ಟುಬಿಡದೆ ಕಾಡುತ್ತಿದ್ದವು. ಅದರೊಳಗೆ ಮುಳುಗಿದ್ದ ನನ್ನ ಹೆಜ್ಜೆಗಳು ಬಿರುಸುಗೊಂಡು ಇಪ್ಪತ್ತು ನಿಮಿಷ ನಡೆದು ಹೋಗುವ ದಾರಿಯನ್ನು ಹತ್ತೆ ನಿಮಿಷದಲ್ಲಿ ಕ್ರಮಿಸಿಬಿಟ್ಟಿದ್ದೆ. ನನ್ನ ಈ ಆತಂಕಕ್ಕೆ ಕಾರಣವಿಲ್ಲದಿರದು. ನಿತ್ಯ ಮಕ್ಕಳ ಒಡನಾಟದಲ್ಲಿ ಇರುವ ನನಗೆ ಅವರ ಪ್ರತಿ ಆಟ, ತುಂಟಾಟ ಸಹಜವಾಗಿ ತಿಳಿದಿರುತ್ತದೆ. ನಾವು ತರಗತಿಯಲ್ಲಿ ಇರುವಾಗಲೇ ಮಿಸ್ ಇವನು ಗಿಂಡಿದ ನೋಡಿ, ಮಿಸ್ ಅವನು ಹೊಡೀತಾನೆ, ಇವನು ಬೈದ ಮಿಸ್, ಇವನು ನನ್ನನ್ನು ಚೂಪಾದ ಪೆನ್ಸಿಲ್‌ನಿಂದ ಚುಚ್ಚಿದ, ಇವನಿಗೆ ಹೊಡೀರಿ ಮಿಸ್ ಎನ್ನುವ ಹಲವಾರು ಕಂಪ್ಲೇಂಟ್‌ಗಳ ಸರಮಾಲೆಯನ್ನೇ ನೋಡುವ ನಮಗೆ ಮಕ್ಕಳ ಬಗ್ಗೆ, ಅವರ ಸುರಕ್ಷತೆಯ ಬಗ್ಗೆ ಆತಂಕ ಆಗದೇ ಇರದು. ಅದೇ ಮನಸ್ಥಿತಿಯಿಂದ ಶಾಲಾ ಆವರಣದೊಳಗೆ ಕಾಲಿಟ್ಟೆನು.

ಯಾಕೆ ಅಳುತ್ತೀಯಾ ಪುಟ್ಟ? ಪಾಠ ಅರ್ಥವಾಗಲಿಲ್ಲವಾ, ಏನಾದರೂ ಡೌಟ್ ಇದೆಯಾ? ಹೊಟ್ಟೆ ನೋವಾ, ಜ್ವರ ಬಂದಿದೆಯಾ, ಅಮ್ಮ ಸಮಯಕ್ಕೆ ಸರಿಯಾಗಿ ತಿಂಡಿ ಕೊಡಲಿಲ್ಲವೇ? ಶಾಲೆ ಬೇಡ ಹೊಲಕ್ಕೆ ಬಾ ಅಂತ ಅಪ್ಪ ಹೊಡೆದರೆ? ಅದೇನೆ ಇರಲಿ ನನಗೆ ಹೇಳು. ನಾನು ನಿನಗೆ ನ್ಯಾಯ ಕೊಡಿಸುವೆ ಎಂಬ ಶಬ್ದ ನನ್ನ ಕಿವಿಗಳ ಮೇಲೆ ಬಿದ್ದಿತು. ಶಾಲೆಗೆ ಯಾರು ಬಂದಿರಬಹುದು? ಏನ್ ಸಮಾಚಾರ? ತರಗತಿ ಇಷ್ಟು ಪಿನ್ ಡ್ರಾಪ್ ಸೈಲೆನ್ಸ್ ಇದೆಯಲ್ಲ ಎಂದು ತುಂಬಾ ಅಚ್ಚರಿಯಿಂದ ಕೊಠಡಿಯೊಳಗೆ ತೆರಳಬೇಕು ಎನ್ನುವಷ್ಟರಲ್ಲಿ, ಮತ್ತೆ ಕೇಳಿಸಿದ ಮಾತುಗಳು ನನ್ನನ್ನು ನಿಂತಲ್ಲೇ ಚಲಿಸಿದಂತೆ ಕಟ್ಟಿ ಹಾಕಿದವು. ಮತ್ತಷ್ಟು ಕುತೂಹಲ ಭರಿತಳಾದೆ. “ಸಾರಿ ಮಿಸ್ ರಾತ್ರಿ ಅಪ್ಪ ಕುಡಿದು ಬಂದು ಗಲಾಟೆ ಮಾಡಿದರು, ಸರಿಯಾಗಿ ನಿದ್ದೆ ಮಾಡಿಲ್ಲ. ಅದಕ್ಕೆ ತರಗತಿಯಲ್ಲಿ ತೂಕಳಿಕೆ ಬಂದು ಆಕಳಿಸಿದೆ. ಅದಕ್ಕೆ ಕ್ಲಾಸ್‌ನಲ್ಲಿ ನಿದ್ದೆ ಮಾಡುತ್ತಾನೆ ಅಂತ ಫ್ರೆಂಡ್ಸ್‌ಗಳೆಲ್ಲ ನಗುತ್ತಾರೆ” ಅಂದನು.

“ಅವನಿನ್ನು ಚಿಕ್ಕವನು, ನೀವು ಹೀಗೆಲ್ಲ ಅವನನ್ನ ರೇಗಿಸಬಾರದು” ಎಂದು ಮೇಷ್ಟ್ರು ಆಗಿದ್ದ ಆ ಹುಡುಗ ಬುದ್ಧಿ ಹೇಳಿದನು. ಅಷ್ಟರಲ್ಲಿ ಮತ್ತೊಬ್ಬ ಹುಡುಗಿ ಎದ್ದು “ನಿನ್ನ ಸಮಯ ಮುಗಿಯಿತು ಬಾ, ನೀನು ಕೂರು. ಈಗ ನನ್ನ ಸರದಿ ನಾನು ನಮ್ಮ ಮಾಸ್ತರ ಕಥೆ ಹೇಳಿ ನಿಮ್ಮನ್ನೆಲ್ಲ ರಂಜಿಸುತ್ತೇನೆ” ಎನ್ನುತ್ತಾ ಬೋರ್ಡ್ ಕಡೆಗೆ ಧಾವಿಸಿದಳು.

ಮಕ್ಕಳೇ ನಾನು ನಿಮಗೆಲ್ಲ ಕಥೆ ಹೇಳ್ತೀನಿ ಆಯ್ತಾ? ಖುಷಿಯಲ್ವಾ ನಿಮಗೆ ಅಂದಾಗ ತುಂಬಾ ಖುಷಿ ಇದೆ ಎಂದರು. ಮಕ್ಕಳೇ ಎಲ್ಲರೂ ಒಮ್ಮೆ ಚಪ್ಪಾಳೆ ತಟ್ಟಿ, ಕೈಗಳನ್ನು ಮೇಲೆತ್ತಿ, ಕೆಳಗೆ ಇಳಿಸಿ, ಪಟಾಪಟ್ ಅಂತ ಬೆರಳುಗಳ ಗೆರೆ ಎಣಿಸಿ, ಈಗ ಬೆರಳುಗಳನ್ನು ಮಡಚಿ, ಮತ್ತೆ ಬಿಡಿ, ಕಣ್ಣು ಗುಡ್ಡೆಗಳನ್ನು ನಾನು ಚಲಿಸುವ ಕಡೆಗೆ ಹೊರಳಿಸಿ, ಈಗ ನಿಮ್ಮ ದೃಷ್ಟಿಯೆಲ್ಲ ನನ್ನ ಮುಖದ ಕಡೆ ಬರಲಿ. ನನ್ನ ಬಾಯನ್ನು ಗಮನಿಸಿ. ವೆರಿ ಗುಡ್ ಮಕ್ಕಳ, ತುಂಬಾ ಚೆನ್ನಾಗಿ ವಾರ್ಮ್ ಅಪ್ ಮಾಡಿದಿರಿ. ಈಗ ಕಥೆ ಹೇಳಲಾ ಅಂದಾಗ ಆ ಮಕ್ಕಳ ಲವಲವಿಕೆ ಕಂಡು ನನ್ನನ್ನೇ ನಾ ಮರೆತು ಹೋದೆ. ಅವಳು ಹೇಳುವ ಕಥೆಯನ್ನು ನಾನೇ ಮಕ್ಕಳಿಗಿಂತ ಅತಿ ಹೆಚ್ಚು ಕುತೂಹಲದಿಂದ ಕೇಳಿದೆ.

ನೋಡಿ ಮಕ್ಕಳೆ, “ಗುಂಡ ಅಂತ ಒಬ್ಬ ಹುಡುಗ ಇದ್ದ. ಅವನು ತುಂಬಾ ಜಾಣನಾಗಿದ್ದ. ಶಾಲೆಗೆ ವೇಳೆಗೆ ಸರಿಯಾಗಿ ಹೋಗುತ್ತಿದ್ದ. ಮೇಷ್ಟ್ರು ಮಾಡಿದ ಪಾಠವನ್ನು ಚಾಚು ತಪ್ಪದೇ ಓದುತ್ತಿದ್ದ. ಅವನ ಶಿಸ್ತು ಬುದ್ಧಿವಂತಿಕೆ ನೋಡಿ ಅವನನ್ನು ತರಗತಿ ನಾಯಕನನ್ನಾಗಿ ಮಾಡಿದ್ದರು. ಒಂದು ದಿನ ತರಗತಿಯಲ್ಲಿ ಹೀಗಾಯ್ತು. ಇಬ್ಬರು ಹುಡುಗರು ಪರಸ್ಪರ ಜಗಳ ಮಾಡಿಕೊಂಡರು. ‌ ಕೋಪದಿಂದ ತಮ್ಮ ಕೈಲಿದ್ದ ಪೆನ್ಸಿಲ್‌ಗಳಿಂದ ಒಬ್ಬರ ಕಣ್ಣಿಗೆ ಮತ್ತೊಬ್ಬರು ತಿವಿದರು. ಇಬ್ಬರು ಕಣ್ಣುಗಳಿಗೂ ಪೆಟ್ಟು ಆಯ್ತು. ಆ ವೇಳೆಗೆ ಅಲ್ಲಿಗೆ ಬಂದ ಶಿಕ್ಷಕರು ಇಬ್ಬರನ್ನು ತಕ್ಷಣ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿದರು. ಆದರೆ ಕಣ್ಣಿಗೆ ತುಂಬಾ ಪೆಟ್ಟಾಗಿದ್ದು ಇನ್ನು ಮುಂದೆ ಅವರ ಕಣ್ಣುಗಳು ಕಾಣುವುದಿಲ್ಲ ಅಂತ ಡಾಕ್ಟರ್ ಹೇಳಿದರು. ಆಗ ಮಕ್ಕಳಿಗೆ ತಮ್ಮ ತಪ್ಪಿನ ಅರಿವಾಯಿತು. ಇನ್ನು ಮುಂದೆ ಹೀಗೆ ಮಾಡುವುದಿಲ್ಲ ಇನ್ನು ಒಂದೇ ಕಣ್ಣಲ್ಲಿ ಬದುಕಬೇಕು ಎಂದು ಅಳಲಾರಂಭಿಸಿದರು ಎಂದು ಮೇಷ್ಟ್ರು ಪಾತ್ರ ಮಾಡಿದ ಹುಡುಗ ಕತೆಯನ್ನು ಮಧ್ಯದಲ್ಲಿ ನಿಲ್ಲಿಸಿ ನೀರು ಕುಡಿಯಲಾರಂಭಿಸಿದ. ಅವನ ಕಂಗಳು ಒದ್ದೆಯಾಗಿದ್ದವು. ನೋಡಿ ಮಕ್ಕಳೆ ಆ ಹುಡುಗರಿಬ್ಬರೂ ಸಣ್ಣ ತಪ್ಪಿನಿಂದ ಕಣ್ಣುಗಳನ್ನು ಕಳೆದುಕೊಂಡರು. ನಾವು ಯಾವತ್ತೂ ಹೀಗೆ ಜಗಳ ಮಾಡಿಕೊಳ್ಳಬಾರದೆಂದು ಅವರವರೆ ಮಾತನಾಡಿಕೊಳ್ಳುತ್ತಾ ತುಂಬಾ ಗಂಭೀರವಾಗಿ ದುಃಖಿಸುತ್ತಿದ್ದರು. ಆಗ ನೀರು ಕುಡಿದ ಮೇಲೆ ಮೇಷ್ಟ್ರು ಪಾತ್ರದಾರಿ ಹುಡುಗಿ ಕಥೆ ಮುಂದುವರೆಸಿದನು.

ನನ್ನ ಗೆಳೆಯರಿಗೆ ಹೀಗೆ ಆಗಬಾರದಿತ್ತು. ನಾನು ತರಗತಿ ನಾಯಕ ನಾನೆಂದು ಹೀಗೆ ಆಗಲು ಬಿಡುವುದಿಲ್ಲ. ಶಾಲೆಗೆ ರಜೆ ಹಾಕಲಾರೆ ಎಂದು ಗುಂಡ ಜೋರಾಗಿ ಕನವರಿಸುತ್ತಿದ್ದ. ಇದನ್ನು ಕಂಡ ಅವರ ಅಮ್ಮ “ಏಳು ಗುಂಡಾ ಶಾಲೆಗೆ ತಡವಾಯಿತು. ಹೇಳು, ಹಗಲು ಕನಸು ಕಾಣ್ತಿಯಾ ಎಂದಾಗಲೇ ಗುಂಡನಿಗೆ ತಾನು ಇದುವರೆಗೂ ಕಂಡಿದ್ದು ಕನಸು ಎಂದು ಅರಿವಾಯಿತು. ಅಂದು ಶಾಲೆಗೆ ಬಂದ ಗುಂಡ ತನ್ನ ಕನಸನ್ನು ತನ್ನ ಗೆಳೆಯ ಗೆಳತಿಯರಿಗೂ ಹೇಳಿದ. ಎಲ್ಲರೂ ನಾವೆಂದು ಜಗಳ ಮಾಡಿಕೊಳ್ಳಬಾರದೆಂದು ತೀರ್ಮಾನಿಸಿದರು. ಅಲ್ಲಿಗೆ ಈ ಕಥೆ ಮುಗಿಯಿತು ಎಂದಾಗ ನನ್ನ ತರಗತಿಯಲ್ಲಿದ್ದ ಮಕ್ಕಳೆಲ್ಲ ತುಂಬಾ ಚೆನ್ನಾಗಿ ಗುಂಪಿನಿಂದ ಹೊರ ಬಂದಿದ್ದ ಆಗ ಗಡಿಯಾರ ನೋಡಿದೆ. ಸಮಯ 11:30. ಆದರೂ ಒಳಗೆ ಹೋಗಿ ಮಕ್ಕಳ ಉತ್ಸಾಹಕ್ಕೆ ತಣ್ಣೀರೆರಚಲು ಮನಸ್ಸಾಗಲಿಲ್ಲ. ನೋಡೆ ಬಿಡೋಣ… ಇವತ್ತು ನನ್ನ ಮಕ್ಕಳೆ ನನ್ನ ಕೆಲಸವನ್ನು ಇಷ್ಟು ಹೆಚ್ಚುಕಟ್ಟಾಗಿ ಮಾಡುತ್ತಿರುವಾಗ ನಾನು ಒಳನುಗ್ಗಿ ಅವರ ಕ್ರಿಯೇಟಿವಿಟಿಯನ್ನು ಆಕ್ರಮಣವನ್ನು ನೋಡುವ ಅವಕಾಶ ಕಳೆದುಕೊಳ್ಳಬಾರದೆಂದು ನಿರ್ಧರಿಸಿ ಅಲ್ಲೇ ಕೂತುಬಿಟ್ಟೆ. ಅಷ್ಟರಲ್ಲಿ ಅಡುಗೆ ಸಿಬ್ಬಂದಿಯ ಆಗಮನವಾಯಿತು. ಅವರು ನನ್ನ ಮಾತನಾಡಿಸಿ ಎಲ್ಲಾ ಹಾಳು ಮಾಡಿ ಬಿಡುತ್ತಾರೆಂದು ಎಚ್ಚೆತ್ತ ನಾನು ಬೆರಳಿನಿಂದ ಸನ್ನೆ ಮಾಡಿ ಮಾತನಾಡದಂತೆ ಹೋಗಲು ಸೂಚಿಸಿದೆ. ಒಳಹೋದ ಆಂಟಿ “ನಿಮ್ಮ ಮಿಸ್ಸು ಎಲ್ರೋ. ನೀವೆಲ್ಲ ಏನು ಮಾಡುತ್ತಿದ್ದೀರಾ?” ಎಂದರು. ಆಂಟಿ ಇವತ್ತು ಮಿಸ್ ಬಂದಿಲ್ಲ ಬಸ್ ಸಿಕ್ಕಿಲ್ಲ ಅನ್ಸುತ್ತೆ ಅದಕ್ಕೆ ನಾವು ಮಿಸ್ ಆಟ ಆಡುತ್ತಿದ್ದೇವೆ. ಮಿಸ್‌ಗೆ ಹೇಳಬೇಡಿ ಆಂಟಿ, ಪ್ಲೀಸ್, ಎಂದು ಹೋಗದಿದ್ದರೂ ಶಾಲಾ ಮಕ್ಕಳನ್ನು ತನ್ನ ಮಕ್ಕಳಂತೆ ಕಾಣುವ ಸಹೃದಯ ಆಂಟಿ ಅಡುಗೆ ಕೋಣೆಗೆ ತೆರಳಿದರು. ಮಕ್ಕಳ ಪಾಠದ ಆಟ ಮುಂದುವರೆದಿತ್ತು.

ಆಗ ಒಂದು ಹುಡುಗಿ ಮತ್ತು ಹುಡುಗ ಬೋರ್ಡ್ ಬಳಿ ಹೋದರು. ಇವರಿಬ್ಬರಿಗೂ ಹೋಗಿ ಏನು ಮಾಡಬಹುದು ಎಂದು ನಾನು ಕಣ್ಣು ಮಿಟುಕಿಸದೆ ನೋಡಿದೆ. ಮೇಷ್ಟ್ರು ಪಾತ್ರಧಾರಿ ಹುಡುಗಿ ಮಕ್ಕಳಿಗೆ ಆಟದ ನಿಯಮಗಳನ್ನು ತಿಳಿಸಿದರು. ಯಾರಿಗೆಲ್ಲ ಮಗ್ಗಿ ಕಷ್ಟ, ನನ್ನ ಕಡೆ ಬನ್ನಿ. ಯಾರಿಗೆಲ್ಲ ಮಗ್ಗಿ ಇಷ್ಟ, ಅವರು ಮೇಷ್ಟ್ರು ಕಡೆ ಹೋಗಿ ಎಂದಳು. ಮಕ್ಕಳೆಲ್ಲ ಅವರವರ ಇಷ್ಟದ ಮೇಲೆ ಎರಡು ಗುಂಪುಗಳ ಆದರೂ ಮಕ್ಕಳೇ ನೀವೀಗ ಆಟ ಆಡೋಣ ಎಂದು ಮಕ್ಕಳ ಎರಡು ಗುಂಪುಗಳನ್ನು ಮಾಡಿದರು. ಪಾಠಕ್ಕೆ ಇಷ್ಟ ಕಷ್ಟ ಮಾಡಿ ನೋಡಿ ಅನ್ನುವವರಿಗೆ ಉಳಿಸಿರುವ ಒಂದು ಸಲ ಮಗ್ಗಿಯನ್ನು ಕಲಿಸಬೇಕು. ಯಾರು ಯಾವ ವಿಧಾನವನ್ನಾದರೂ ಬಳಸಿಕೊಳ್ಳಬಹುದು ಎನ್ನುವುದೇ ತಡ ಎಲ್ಲರು ಮಗ್ಗಿಯ “ಇಷ್ಟ ಮತ್ತು ಕಷ್ಟದ ಆಟ” ಶುರು ಮಾಡಿದರು. ಎಷ್ಟರಮಟ್ಟಿಗೆ ಪಾಠ ಕಲಿಯುತ್ತಿದ್ದಾರೆ ಎಂದರೆ ನಾನೇನು ಇಷ್ಟು ದಿನ ಮಾಡಿದ್ದು ನನಗಿಂತ ಈ ಮಕ್ಕಳ ಗಣಿತ ಚೆನ್ನಾಗಿ ಕಲಿಸುತ್ತಾರೆಂದು ಹೆಮ್ಮೆಯಾಯಿತು. ನೀಡಿದ ಸಮಯ ಮುಗಿಯಿತು‌, ಮಕ್ಕಳು ಹೇಳಿದರು, ಮಕ್ಕಳು ಇಷ್ಟದ ಗುಂಪು ಸೇರಿಕೊಂಡರು. ಒಬ್ಬ ಹುಡುಗ ಹಾಗೆ ಉಳಿದ. ಆಗ ಟೀಚರ್ ಪಾತ್ರಧಾರಿ ಹುಡುಗಿ “ನೀನು ಯೋಚನೆ ಮಾಡಬೇಡ. ನಿನಗೆ ನಾವೆಲ್ಲ ಸೇರಿ ಮಗ್ಗಿ ಕಲಿಸುತೀವಿ” ಎಂದಳು. ನಿಜಕ್ಕೂ ಆ ದಿನ ನನ್ನ ವೃತ್ತಿ ಬದುಕಿನ ಅವಿಸ್ಮರಣೀಯ ದಿನವಾಯಿತು. ಅಷ್ಟು ದಿನ ಪ್ರಾಮಾಣಿಕವಾಗಿ ದುಡಿದಿದ್ದು ಸಾರ್ಥಕವಾಯಿತು ಎನಿಸಿತು. ಗೊಂಬೆ ಆಟ, ಅಪ್ಪ ಅಮ್ಮ ಆಟ ಆಡುವ ವಯಸ್ಸಿನ ಮಕ್ಕಳು ಟೀಚರ್ ಸ್ಟೂಡೆಂಟ್ ಆಟ ಆಡುವುದನ್ನು ಕಂಡು ನನ್ನ ಕಂಗಳು ಧನ್ಯವಾದವು.

ಊಟಕ್ಕೆ ಸಮಯವಾಗುತ್ತಿರುವುದನು ಗಮನಿಸಿದ ನಾನು ಇನ್ನು ತಡ ಮಾಡುವುದು ಬೇಡವೆಂದು ತರಗತಿ ಒಳಗೆ ಪ್ರವೇಶಿಸಿದೆ. ಅದುವರೆಗೂ ಪಾಠ ಮಾಡುತ್ತಿದ್ದ ಪಾಠ ಕೇಳುತ್ತಿದ್ದ ಮಕ್ಕಳೆಲ್ಲ ಗಂಭೀರವಾದರು. ತಮ್ಮ ಜಾಗಗಳಿಗೆ ಹೋಗಿ ಏನು ತಿಳಿಯದಂತೆ, ಏನು ಆಗಿಲ್ಲವೇನೋ ಎಂಬ ಭಾವದಲ್ಲಿ ಕೂತರು. ಉಮ್ಮಳಿಸಿ ಬರುವ ನಗುವನ್ನು ನಿಯಂತ್ರಿಸಿಕೊಂಡರು. ನನ್ನ ಮುಖ ಅವರ ಖುಷಿಗೆ ಸಾಕ್ಷಿ ಹಾಕುತ್ತಿತ್ತು. ಯಾಕೆ? ಮಿಸ್ ಲೇಟ್ ಆಯ್ತು ಅಂದರು. ಬಸ್ ಸಿಗ್ಲಿಲ್ಲ ಕಣ್ರೋ ಅಂದೆ. ಅದು ಸರಿ ಇದುವರೆಗೂ ನೀವು ಏನು ಮಾಡುತ್ತಿದ್ದೀರಿ ಅಂದಾಗ ಒಬ್ಬರ ಮುಖವನ್ನು ಒಬ್ಬರು ನೋಡಿಕೊಂಡರು. ಏನೂ ಇಲ್ಲ ಮಿಸ್ ಕನ್ನಡ ಪಾಠ ಓದುತ್ತಿದ್ದೋ ಅಂದರು. ನನಗೆ ಯಾಕೋ ನಿಮ್ಮ ಮುಖ ನೋಡಿದರೆ ಸುಳ್ಳು ಹೇಳುತ್ತಿದ್ದೀರಾ ಅನಿಸುತ್ತಿದೆ. ಬೇರೆ ಏನು ಮಾಡಿದ್ದೀರಾ? ಏನು ಮಾಡಿದಿರಿ? ಅಂದಾಗ ಮಿಸ್ ನಾವು ಮಾಡೋದೆಲ್ಲ ನಿಮಗೆ ಹೇಗೆ ಗೊತ್ತಾಗುತ್ತೆ ಅಂದರು. ನಾವು ಹೇಳದಿದ್ದರೂ ಹೇಗೋ ಕಂಡುಹಿಡಿದು ಬಿಡ್ತೀರಾ ಎಂದರು. ತಕ್ಷಣ ಒಬ್ಬ ಹುಡುಗ ನಾನು ಮಾತನಾಡಿದ್ದನ್ನು ನೀವು ಹೇಗೆ ಕಂಡು ಹಿಡಿದಿರಿ ನೋಡಿ. ಹಾಗೆ ಮಿಸ್ಸೂನು ಅಂದನು. ಮಿಸ್‌ಗೆ ಗೊತ್ತಾಯ್ತು. ಅಂತ ಎಲ್ಲಾ ಹುಡುಗರು ಅಯ್ಯೋ ಎಂದು ಕಿರುಚಿದರು.

ನಾನು ಬೆಳಗ್ಗೆ ಬಂದೆ. ನೀವು ಪಾಠ ಮಾಡುತ್ತಿದ್ದುದ್ದನ್ನು ಕಂಡು ಖುಷಿಯಾಗಿ ಹಾಗೆ ನೋಡುತ್ತಾ ಹೊರಗೆ ನಿಂತೆನು ಅಂದಾಗ ಬಿಸಿಲಲ್ಲಿ ಹಾಗೆ ನಿಂತಿದ್ರಾ? ಛತ್ರಿನಾದರೂ ಹಿಡ್ಕೋಬೇಕಾಗಿತ್ತು ಮಿಸ್ ಅಂದಾಗ ನಿಜಕ್ಕೂ ಇಂತಹ ಮುದ್ದು ಮಕ್ಕಳ ಪ್ರೀತಿ ಪಡೆಯುವ ಭಾಗ್ಯ ನನಗೆ ಈ ಶಿಕ್ಷಕ ವೃತ್ತಿ ಕೊಟ್ಟಿರುವುದಕ್ಕೆ ಖುಷಿ ಆಯ್ತು. ಇಂತಹ ಮತ್ತಷ್ಟು ಕಾರ್ಯಗಳನ್ನು ಮಾಡಲು ಪ್ರೇರೇಪಿಸಿದೆ. ಅಡಿಗೆ ಸಿಬ್ಬಂದಿ ಕರೆದು ಪಾಯಸ ಮಾಡಿ ಎಂದೆನು. ಅಂಗಡಿ ಬಾಗಲು ಮುಚ್ಚಿದೆ ಟೀಚರ್, ಬೆಲ್ಲ ಇಲ್ಲ ಎಂದರು. ಖುಷಿಯನ್ನು ಆಚರಿಸಲು ಪಾಯಸವೇ ಬೇಕು ಅಂತೇನಿಲ್ಲ. ಬೀರುವಿನಲ್ಲಿದ್ದ ಚಾಕಲೇಟ್‌ಗಳನ್ನು ಮಕ್ಕಳಿಗೆ ಕೊಟ್ಟು ನಾನು ತಿಂದೆ. ನನ್ನ ಪ್ರಕಾರ ನನಗೆ ಅಂದೇ ಶಿಕ್ಷಕರ ದಿನ ಎನಿಸಿತು.