ಎರಡು ನಿಮಿಷಗಳ ಕಾಲ ಕೂರಾ ಅವಳನ್ನು ನಮ್ಮೊಡನೆ ಮಾತನಾಡಲು ಬಿಡಲೇ ಇಲ್ಲ. ಅವಳ ಮೇಲೆ ಹತ್ತುವುದು, ಅವಳ ಸುತ್ತ ಸುತ್ತುವುದು, ಅವಳ ಕೆನ್ನೆಯನ್ನು ನೆಕ್ಕುವುದು.. ಎಲ್ಲ ಮಾಡುತ್ತಿದ್ದ. ಒಳಗೆ ಬಂದಾಗ ಆಕೆ ಅವನಿಗೆ ಒಂದೆರಡು ಟ್ರೀಟಿನ ತುಂಡುಗಳನ್ನು ಕೊಟ್ಟಿದ್ದಳು. ಇದೆಲ್ಲ ಅವಳನ್ನು ಒಲಿಸಲಿಕ್ಕೆ ಮತ್ತು ಇನ್ನೆರಡು ತುಂಡುಗಳನ್ನು ಪಡೆಯಲಿಕ್ಕೆ ಎಂದು ನಮಗೆ ಗೊತ್ತಿತ್ತು. ನಿಧಾನವಾಗಿ ಆಕೆ ನಮ್ಮೊಡನೆ ಮಾತನಾಡುತ್ತ ನಾಯಿಗಳ ಆರೋಗ್ಯದ ಬಗ್ಗೆ ವಿವರಿಸತೊಡಗಿದಳು. ಆದರೆ ಕೂರಾನನ್ನು ಹಿಡಿದು ಒಂದೆಡೆ ಕೂರಿಸಿ ಬ್ರಷನ್ನು ಅವನ ಬಾಯಿಯೊಳಗೆ ತುರುಕಿ ಹಲ್ಲುಜ್ಜುವುದು ಎಷ್ಟು ಸಾಹಸದ ಕೆಲಸ ಎಂದು ಅವಳಿಗೆ ಹೇಳಲಿಲ್ಲ.
ಸಂಜೋತಾ ಪುರೋಹಿತ ಬರೆಯುವ “ಕೂರಾಪುರಾಣ” ಸರಣಿಯ ನಾಲ್ಕನೆಯ ಕಂತು
ಕೂರಾನ ಮೊದಲ ವ್ಯಾಕ್ಸಿನ್ ಅನುಭವ
ಚಿಕ್ಕವಳಿದ್ದಾಗ ಪೊಲಿಯೋ ಲಸಿಕೆ ತೆಗೆದುಕೊಳ್ಳುತ್ತಿದ್ದ ನೆನಪಿದೆ ನನಗೆ. ಎರಡು ಹನಿ ನಾಲಿಗೆಯ ಮೇಲೆ ಇಳಿದಾಗ ಆ ಕಹಿಮಿಶ್ರಿತ ಒಗರು ದ್ರವ ಗಂಟಲನ್ನು ಸವರಿಕೊಂಡು ಇಡೀ ದೇಹವನ್ನು ಝುಮ್ ಎನ್ನಿಸುತ್ತಿದ್ದ ಆ ಎರಡು ಕ್ಷಣಗಳು ಬೇಗ ಕಳೆದು ಹೋಗಲಿ ಎನ್ನಿಸುತ್ತಿದ್ದ ದಿನಗಳವು. ಬೇಗ ದೊಡ್ಡವರಾಗಿ ಬಿಟ್ಟರೆ ಪೊಲಿಯೋ ಲಸಿಕೆ ತೆಗೆದುಕೊಳ್ಳುವ ಹಿಂಸೆಯಿರುವುದಿಲ್ಲ ಎಂದುಕೊಳ್ಳುತ್ತಿದ್ದ ಆ ಬಾಲ್ಯದ ಹುಡುಗಿಗೆ ದೊಡ್ಡವಳಾದ ಮೇಲೆ ಏನೆಲ್ಲ ಕಷ್ಟಗಳು ಬರಬಹುದು ಎಂದು ಗೊತ್ತಿದ್ದರೆ ಪ್ರತಿ ದಿನವೂ ಪೊಲಿಯೋ ಲಸಿಕೆ ತೆಗೆದುಕೊಳ್ಳಲು ಅಡ್ಡಿಯಿಲ್ಲ ಎನ್ನುತ್ತಿದ್ದಳೇನೋ.. ಎಷ್ಟು ಮುಗ್ಧ ದಿನಗಳವು.
ಮನುಷ್ಯರಿಗಷ್ಟೇ ಅಲ್ಲ ಸ್ವಾಮಿ ಈ ಲಸಿಕೆಯ ಗೋಳು. ನಾಯಿಗಳಿಗೂ ತಹರೇವಾರಿ ಲಸಿಕೆಗಳಿರುತ್ತವೆ ಮತ್ತು ಅವುಗಳನ್ನು ಕಡ್ಡಾಯವಾಗಿ ಕೊಡಲೇಬೇಕು ಎಂದು ನಮಗೆ ಗೊತ್ತಾಗಿದ್ದು ಕೂರಾ ಮನೆಗೆ ಬಂದಾಗ. ಪಾರ್ಕಿನಲ್ಲಿ ಪರಿಚಯವಾದ ಪ್ರಾಣಿ ಪೋಷಕರು ಹೊಸ ನಾಯಿಯನ್ನು ತಂದಿದ್ದೇವೆ ಎಂದಾಗ ಮೊದಲು ಕೇಳುತ್ತಿದ್ದುದೇ ಲಸಿಕೆಯ ಪ್ರಶ್ನೆ. ಅಕಸ್ಮಾತ ಬೇರೆ ನಾಯಿಗಳು ಕಚ್ಚಿ, ಅಥವಾ ಸೋಂಕಾಗಿ ದೊಡ್ಡ ಸಮಸ್ಯೆಯಾಗದಿರಲಿ ಎಂಬುದು ಅವರ ಕಾಳಜಿಯಾಗಿತ್ತು. ಕೂರಾನಿಗು ಲಸಿಕೆ ಕೊಡಬೇಕು ಎಂದುಕೊಂಡು ಇಂಟರನೆಟ್ಟಿನಲ್ಲಿ ಹುಡುಕತೊಡಗಿದಾಗ ರೆಬೀಸ್, ಡಿಸಟೆಂಪರ್, ಹಿಪಟೈಟಿಸ್, ಪರ್ವೋವೈರಸ್ ಈ ನಾಲ್ಕು ಲಸಿಕೆಗಳು ಎಲ್ಲ ನಾಯಿಗಳಿಗು ಕಡ್ಡಾಯ ಎಂದು ತಿಳಿಯಿತು. ಇದರ ಮೇಲೆ ಹೆಚ್ಚಿನ ಆರೈಕೆಗೆ ಕೊಡಿಸುವಂತಹ ವ್ಯಾಕ್ಸಿನುಗಳು. ಇತರೆ ನಾಯಿಗಳ ಸಂಪರ್ಕದಲ್ಲಿ ಹೆಚ್ಚಾಗಿ ಬರುತ್ತಿದ್ದರೆ ಬಾರ್ಡಟೆಲ್ಲಾ ವ್ಯಾಕ್ಸಿನ್, ಹೇನು ತಿಗಣೆಗಳಂತಹ ರಕ್ತ ಹೀರುವ ಕ್ರಿಮಿಗಳಿಂದ ಉಂಟಾಗುವ ಲೈಮ್ ರೋಗವನ್ನು ತಡೆಗಟ್ಟುವಂತಹ ವ್ಯಾಕ್ಸಿನ್, ಹೀಗೆ ನಾಯಿ ಬೆಳೆಯುವ ವಾತಾವರಣಕ್ಕೆ ತಕ್ಕಂತೆ ಕೊಡಬಹುದಾದಂತಹ ಒಂದಿಷ್ಟು ವ್ಯಾಕ್ಸಿನ್ನುಗಳಿವೆ ಎಂದು ತಿಳಿಯಿತು. ಈ ವ್ಯಾಕ್ಸಿನ್ನುಗಳನ್ನು ಕೊಡುವಂತಹ ಆಸ್ಪತ್ರೆಯನ್ನು ಹುಡುಕಬೇಕಲ್ಲ.. ಅಮೇರಿಕದ ವೈದ್ಯಕೀಯ ಪದ್ಧತಿ ಮನುಷ್ಯರಿಗೆ ಸಹ ಎಟುಕದಂತಿರುವಾಗ ನಾಯಿಗಳ ವೈದ್ಯಕೀಯ ಖರ್ಚು ಬಹಳವೇ ಇರುತ್ತದೆ ಎಂದು ನಮಗೆ ಸಣ್ಣ ಅಂದಾಜಿತ್ತು.
ಅದು ನಿಜವಾಯಿತು. ಕಡ್ಡಾಯವಾಗಿ ಕೊಡಬೇಕಾದ ವ್ಯಾಕ್ಸಿನ್ನುಗಳನ್ನಷ್ಟೇ ಪರಿಗಣಿಸಿದರೂ ಬಿಲ್ಲು ಸುಮಾರು ಒಂದು ಸಾವಿರ ಡಾಲರಿನವರೆಗೆ ಬರುತ್ತಿತ್ತು. ಅಂದರೆ ಎಂಬತ್ತು ಸಾವಿರ ರೂಪಾಯಿಗಳ ಲೆಕ್ಕ. ಅಮೇರಿಕಾಕ್ಕೆ ಬಂದು ಸುಮಾರು ವರ್ಷಗಳಾದರು ಡಾಲರಿನಿಂದ ರೂಪಾಯಿಗೆ ಪರಿವರ್ತಿಸಿ ಹೋ ಎಂದು ಉದ್ಘರಿಸುವ ಅಭ್ಯಾಸ ಇನ್ನೂ ಹೋಗಿಲ್ಲ. ಬಹುಶಃ ಅದು ಹೋಗುವುದೂ ಇಲ್ಲವೇನೋ.. ಆದರೇನು ಮಾಡುವುದು ಕೂರಾನಿಗೆ ವ್ಯಾಕ್ಸಿನ್ ಕೊಡಲೇಬೇಕಿತ್ತು. ಯಾಕೆಂದರೆ ಅಮೇರಿಕಾದಲ್ಲಿ ನಾಯಿಗಳಿಗೆ ವ್ಯಾಕ್ಸಿನೇಷನ್ ಬಹಳ ಮುಖ್ಯ. ಇಲ್ಲದೇ ಹೋದಲ್ಲಿ ಹೊರಗೆ ಜನಗಳ ಮಧ್ಯದಲ್ಲಿ, ಮಕ್ಕಳ ಹತ್ತಿರವೆಲ್ಲ ಕರೆದುಕೊಂಡು ಹೋಗಲಿಕ್ಕೆ ಆಗುವುದಿಲ್ಲ. ಅದೂ ಅಲ್ಲದೇ ಅವನ ಆರೋಗ್ಯಕ್ಕೆ ಸಂಬಂಧಪಟ್ಟದ್ದಾಗಿದ್ದರಿಂದ ನಾವು ಆದಷ್ಟು ಬೇಗ ಅವನನ್ನು ನಾಯಿಗಳ ಆಸ್ಪತ್ರೆ ಇಲ್ಲಿ ಕರೆಯುವ ಹಾಗೆ ವೆಟ್ ಬಳಿ ಕರೆದುಕೊಂಡು ಹೋಗುವ ನಿರ್ಧಾರ ಮಾಡಿದೆವು. ಮನೆಯ ಹತ್ತಿರವೇ ಇದ್ದ ಆಸ್ಪತ್ರೆ ಇದ್ದುದರಲ್ಲಿಯೇ ಕಡಿಮೆ ದರ ತೋರಿಸುತ್ತಿತ್ತು. ಅಪಾಯಿಂಟ್ಮೆಂಟಿಗೆಂದು ಕರೆ ಮಾಡಿ ಕೂರಾ ಕಂಚಿಬೈಲ್ ಎಂದು ಅವನ ಹೆಸರನ್ನು ದಾಖಲಿಸಿ ಒಂದು ಸುಮಹೂರ್ತದ ದಿನ ನಿಗದಿ ಮಾಡಿದೆವು.
ನಾಯಿಗಳ ಆಸ್ಪತ್ರೆಯೆಂದರೆ ಹೇಗಿದ್ದೀತು.. ನನಗಂತು ಅದರ ಕಲ್ಪನೆ ಇರಲಿಲ್ಲ. ನಿಗದಿತ ದಿನದಂದು ನಾವು ಕೂರಾನನ್ನು ಕರೆದುಕೊಂಡು ಮುಂದೆ ನಡೆಯಬಹುದಾದ ವಿದ್ಯಮಾನಗಳ ಬಗ್ಗೆ ನಮ್ಮದೇ ಕಲ್ಪನೆಗಳನ್ನು ಹೆಣೆಯುತ್ತ ಹೋದೆವು. ಮನೆಯಿಂದ ಹತ್ತೇ ನಿಮಿಷದ ದಾರಿ. ಅದೊಂದು ಪುಟ್ಟ ಕಟ್ಟಡ. ಬರ್ಗರ್, ಫ್ರೈಸ್ ಎಂದೆಲ್ಲ ಘಮಘಮಿಸುವ ತಿಂಡಿಗಳ ರೆಸ್ಟೋರೆಂಟ್ ಅಥವಾ ಚೆಂದದ ಹುಡುಗಿಯರು ಬಂದು ತಮ್ಮ ಕೂದಲಿಗೆ, ಉಗುರುಗಳಿಗೆ ಬಣ್ಣ ಬಳಿದುಕೊಂಡು ಹೋಗುವುದನ್ನು ನೋಡುವ ಸಲೋನ್ ಆಗಬೇಕಾಗಿದ್ದ ಅದು ತಪ್ಪಿ ನಾಯಿಯ ಆಸ್ಪತ್ರೆ ಆಯಿತೇನೋ ಎಂಬಂತೆ ಅಂತಹದೇ ಕಟ್ಟಡಗಳ ಮಧ್ಯದಲ್ಲಿತ್ತು. ಈ ನಾಯಿಗಳಿಗೆ ವಾಸನೆ ಬಹಳ ಬೇಗ ಗೊತ್ತಾಗುತ್ತದೆ. ಅದರಲ್ಲೂ ಬೇರೆ ನಾಯಿಗಳ ವಾಸನೆಯನ್ನು ದಾರಿಯಲ್ಲಿ ಅವು ಹಾದು ಹೋದ ಹೆಜ್ಜೆಗಳ ಮೂಲಕವೇ ಕಂಡು ಹಿಡಿದು ಅದು ಗಂಡೋ ಹೆಣ್ಣೋ ಎಂದೆಲ್ಲ ಕಂಡು ಹಿಡಿಯುವ ಬುದ್ಧಿಯಿರುತ್ತದೆ. ಆ ಕಟ್ಟಡದ ಬಾಗಿಲಿನ ಹತ್ತಿರ ಹೋದಾಗಲೇ ಕೂರಾನಿಗೆ ಅಲ್ಲಿ ಬಂದು ಹೋದ ಅಸಂಖ್ಯ ನಾಯಿಗಳ ವಾಸನೆ ಬಂದಿತೇನೋ ಕುಣಿದಾಡಲು ಶುರು ಮಾಡಿದ. ಹಗ್ಗದಿಂದ ಅವನನ್ನು ಹಿಡಿಯುವುದು ಕಷ್ಟವಾಗುವಷ್ಟು ಉದ್ವೇಗ. ಒಳಗೇನಾಗಲಿದೆ ಎಂದು ಇನ್ನೂ ಗೊತ್ತಾಗಿರಲಿಲ್ಲ ಅವನಿಗೆ.
ಅಮೇರಿಕಾಕ್ಕೆ ಬಂದು ಸುಮಾರು ವರ್ಷಗಳಾದರು ಡಾಲರಿನಿಂದ ರೂಪಾಯಿಗೆ ಪರಿವರ್ತಿಸಿ ಹೋ ಎಂದು ಉದ್ಘರಿಸುವ ಅಭ್ಯಾಸ ಇನ್ನೂ ಹೋಗಿಲ್ಲ. ಬಹುಶಃ ಅದು ಹೋಗುವುದೂ ಇಲ್ಲವೇನೋ.. ಆದರೇನು ಮಾಡುವುದು ಕೂರಾನಿಗೆ ವ್ಯಾಕ್ಸಿನ್ ಕೊಡಲೇಬೇಕಿತ್ತು. ಯಾಕೆಂದರೆ ಅಮೇರಿಕಾದಲ್ಲಿ ನಾಯಿಗಳಿಗೆ ವ್ಯಾಕ್ಸಿನೇಷನ್ ಬಹಳ ಮುಖ್ಯ.
ಒಳಗೆ ಹೋದ ಮೇಲೆ ತಮ್ಮ ನಾಯಿಗಳನ್ನು ಕರೆದುಕೊಂಡು ಬಂದಿದ್ದ ಒಂದಿಷ್ಟು ಜನ ತಮ್ಮ ಸರದಿಗಾಗಿ ಕಾಯುತ್ತ ಕುಳಿತಿದ್ದರು. ದೊಡ್ಡ, ಸಣ್ಣ, ಮಧ್ಯಮ ಗಾತ್ರದ ನಾಯಿಗಳೆಲ್ಲ ಇದ್ದವು. ಕೂರಾನ ಪ್ರಪಂಚ ಈಗಷ್ಟೇ ತೆರೆದುಕೊಳ್ಳುತ್ತಿತ್ತು. ಪ್ರಪಂಚದಲ್ಲಿ ಬೇರೆ ನಾಯಿಗಳೂ, ಮನುಷ್ಯರೂ ಇರುತ್ತಾರೆ ಎಂದು ಅವನಿಗೆ ಅರ್ಥವಾಗುತ್ತಿದ್ದ ಹೊತ್ತು. ಯಾವುದೇ ನಾಯಿಯನ್ನು ಕಂಡರೂ ಅದನ್ನು ಮಾತನಾಡಿಸಬೇಕು, ಅದರ ಜೊತೆ ಆಟವಾಡಬೇಕು ಎಂದು ಅವನಲ್ಲಿ ಉತ್ಸಾಹ ಪುಟಿಯುತ್ತಿರುತ್ತದೆ. ಅಷ್ಟೊಂದು ಉದ್ವಿಗ್ನತೆಯನ್ನು ತಡೆಯಲು ಆಗದೇ ಸೂಸು ಮಾಡಿಕೊಳ್ಳುವಷ್ಟು ಸಣ್ಣದಿತ್ತು ಆಗ. ಕೌಂಟರಿನಲ್ಲಿ ಕೂರಾನ ಹೆಸರನ್ನು ಹೇಳಿದಾಗ ಆಕೆ ಅವನನ್ನು ಚೆಕ್ ಇನ್ ಮಾಡಿ ಮುಂದಿನ ಕೈಂಕರ್ಯಗಳನ್ನು ಪಾಲಿಸತೊಡಗಿದಳು. ಅಲ್ಲಿಯೇ ಒಂದು ಉದ್ದನೆಯ ವೇಟ್ ಮಷಿನ್ ಇತ್ತು. ಅದರ ಮೇಲೆ ಕೂರಾನನ್ನು ನಿಲ್ಲಿಸಿ ಎಂದಳು. ಇವನೋ ಏನು ಮಾಡಿದರೂ ಅದರ ಮೇಲೆ ನಿಲ್ಲಲೊಲ್ಲ. ಹತ್ತಿದ ತಕ್ಷಣ ಮತ್ತೆ ಇಳಿದು ಬಿಡುವವ. ನಮಗಿದ್ದ ಬುದ್ಧಿವಂತಿಕೆಯನ್ನೆಲ್ಲ ಉಪಯೋಗಿಸಿ ಅವನನ್ನು ಅದರ ಮೇಲೆ ನಿಲ್ಲಿಸುವ ಹೊತ್ತಿಗೆ ಕಪ್ಪೆಯನ್ನು ತಕ್ಕಡಿಗೆ ಹಾಕಿದಂತಾಗಿತ್ತು. ಅದೂ ಅಲ್ಲದೇ ಅಲ್ಲಿ ಕುಳಿತಿದ್ದವರ ಕಣ್ಣಲ್ಲಿ ‘ನಾಯಿಗೆ ಸರಿಯಾದ ತರಬೇತಿ ನೀಡದ ಪಾಲಕರು’ ಎಂದು ಸಣ್ಣವರಾಗುತ್ತಿದ್ದೆವೇನೋ ಎಂಬ ಮುಜುಗರ. ಅವನು ಅದರ ಮೇಲೆ ನಿಂತಾಗ ಮಷಿನ್ ತೋರಿಸಿದ ಸಂಖ್ಯೆಯನ್ನು ಆಕೆ ಬರೆದುಕೊಂಡಳು. ನಂತರ ವೈದ್ಯರು ಕರೆಯುವವರೆಗು ಕಾಯಿರಿ ಎಂದು ಹೇಳಿ ಮತ್ತೆ ತನ್ನ ಕೆಲಸಕ್ಕೆ ತೊಡಗಿದಳು.
ಆಸ್ಪತ್ರೆಯಲ್ಲಿ ವೈದ್ಯರು ಇನ್ನೇನು ಕರೆಯುತ್ತಾರೆ ಎಂದು ಕಾಯುವಾಗ ಸಮಯ ಮುಂದಕ್ಕೆ ಸರಿಯುತ್ತಿಲ್ಲವೇನೋ ಎನ್ನುವಷ್ಟು ನಿಧಾನವಾಗಿ ಓಡುತ್ತದೆ. ಅಲ್ಲಿರುವ ಗೋಡೆಗಳ ಮೇಲೆ ಅಂಟಿಸಿದ್ದ ನಾಯಿಗಳ ಬಗೆಗಿನ ಮಾಹಿತಿಗಳನ್ನೆಲ್ಲ ಓದಿದೆವು. ಅವುಗಳಿಗೆ ಹಾಕಬೇಕಾದ ಉತ್ತಮ ಆಹಾರ, ಹಲ್ಲುಗಳ ರಕ್ಷಣೆ, ಸ್ವಚ್ಛವಾಗಿಡುವ ಬಗೆ, ಹೆಚ್ಚು ವರ್ಷಗಳ ಕಾಲ ಬಾಳಬೇಕೆಂದರೆ ಕೊಡಬೇಕಾದ ಆರೈಕೆ.. ಎಲ್ಲವೂ ಇತ್ತು. ನಾವೆಷ್ಟು ಬೆಪ್ಪರ ಹಾಗೆ ಅತ್ತಿತ್ತ ನೋಡುತ್ತ ಕೂತಿದ್ದೆವೋ ಅಷ್ಟೇ ಬೆಪ್ಪಾಗಿ ಕೂರಾ ಅಲ್ಲಿದ್ದ ನಾಯಿಗಳನ್ನು ನೋಡುತ್ತ ಇದು ಯಾಕೆ ತನಗಿಂತ ದೊಡ್ಡದಿದೆ, ಇದು ಯಾಕೆ ತನ್ನ ಬಳಿ ಆಟವಾಡಲು ಬರದೇ ಆ ಮನುಷ್ಯನ ಪಕ್ಕದಲ್ಲೇ ಕೂತಿದೆ ಎಂದೆಲ್ಲ ಯೋಚಿಸುತ್ತ ಅತ್ತಿತ್ತ ಮೂಸುತ್ತ ನಿಂತಿದ್ದ. ಕೊನೆಗೂ ನಮಗೆ ಕರೆ ಬಂತು. ಎದ್ದು ಒಳಗೆ ಹೋದಾಗ ನಮ್ಮನ್ನು ಬರಮಾಡಿಕೊಂಡಿದ್ದು ಬಿಳಿಯ ಕೋಟು ತೊಟ್ಟ, ಕಪ್ಪು ಫ್ರೇಮಿನ ಕನ್ನಡಕದ ಮುಖದ ತುಂಬ ನಗು ತುಂಬಿಕೊಂಡಿದ್ದ ವೈದ್ಯೆ. ಅವಳ ಮೈ ಮೇಲಿದ್ದ ಸಾವಿರಾರು ಸಣ್ಣ ಕೂದಲು ಬೆಳಗಿನಿಂದ ಅವಳು ಅವಿರತಳಾಗಿ ದುಡಿಯುತ್ತಿದ್ದುದ್ದನ್ನು ಮತ್ತು ನಾಯಿಗಳ ಮೇಲಿನ ಅವಳ ಪ್ರೇಮವನ್ನು ಸಾರುತ್ತಿದ್ದವು. ಅವಳನ್ನು ಕಂಡೊಡನೆ ಕೂರಾ ಎರಡು ಕಾಲುಗಳನ್ನೆತ್ತಿ ಅವಳನ್ನು ಹತ್ತಲು ಹೋದ. ಹೌ ಟು ಸ್ಟಾಪ್ ಯುವರ್ ಡಾಗ್ ಫ್ರಾಮ್ ಜಂಪಿಂಗ್ ಆನ್ ದ ಪೀಪಲ್ ಎಂದು ನಾವು ಇಂಟರನೆಟ್ಟಿನಲ್ಲಿ ಹುಡುಕಿ ಅವರು ಹೇಳಿದಂತಹ ತರಬೇತಿಗಳನ್ನು ಕೂರಾನಿಗೆ ಕೊಟ್ಟಿದ್ದರೂ ಅದು ಸಫಲವಾಗಿರಲಿಲ್ಲ. ಆಕೆ ಮಾತ್ರ ಬಹಳ ಪ್ರೀತಿಯಿಂದ ಅವನನ್ನು ಬರಮಾಡಿಕೊಂಡು ‘ಯೂ ಆರ್ ಸೋ ಕ್ಯೂಟ್’ ಎನ್ನುತ್ತ ಮಂಡಿಯೂರಿ ಕುಳಿತು ಅವನ ಕಿವಿಗಳನ್ನು, ಹೊಟ್ಟೆಯನ್ನು ಉಜ್ಜುತ್ತ ಅವನನ್ನು ತನ್ನತ್ತ ಸೆಳೆದುಕೊಂಡಳು. ನಿಮ್ಮ ನಾಯಿ ಬಹಳ ಮುದ್ದಾಗಿದೆ ಎಂದಾಗಲೆಲ್ಲ ನಮಗೆ ಮೋಡದ ನಡುವೆ ತೇಲಿ ಹೋಗುತ್ತಿರುವಷ್ಟೇ ಸಂತಸವಾಗುತ್ತದೆ.
ಒಳಗೆ ಅವಳ ಆಫೀಸಿಗೆ ಕರೆದುಕೊಂಡು ಹೋದಳು. ಎರಡು ನಿಮಿಷಗಳ ಕಾಲ ಕೂರಾ ಅವಳನ್ನು ನಮ್ಮೊಡನೆ ಮಾತನಾಡಲು ಬಿಡಲೇ ಇಲ್ಲ. ಅವಳ ಮೇಲೆ ಹತ್ತುವುದು, ಅವಳ ಸುತ್ತ ಸುತ್ತುವುದು, ಅವಳ ಕೆನ್ನೆಯನ್ನು ನೆಕ್ಕುವುದು.. ಎಲ್ಲ ಮಾಡುತ್ತಿದ್ದ. ಒಳಗೆ ಬಂದಾಗ ಆಕೆ ಅವನಿಗೆ ಒಂದೆರಡು ಟ್ರೀಟಿನ ತುಂಡುಗಳನ್ನು ಕೊಟ್ಟಿದ್ದಳು. ಇದೆಲ್ಲ ಅವಳನ್ನು ಒಲಿಸಲಿಕ್ಕೆ ಮತ್ತು ಇನ್ನೆರಡು ತುಂಡುಗಳನ್ನು ಪಡೆಯಲಿಕ್ಕೆ ಎಂದು ನಮಗೆ ಗೊತ್ತಿತ್ತು. ನಿಧಾನವಾಗಿ ಆಕೆ ನಮ್ಮೊಡನೆ ಮಾತನಾಡುತ್ತ ನಾಯಿಗಳ ಆರೋಗ್ಯದ ಬಗ್ಗೆ ವಿವರಿಸತೊಡಗಿದಳು. ಅವನಿಗೆ ಹಲ್ಲು ಉಜ್ಜುತ್ತೀರಾ ಎಂದು ಕೇಳಿದಳು. ಯುಟ್ಯೂಬ್ ನೋಡಿ ನಾವು ಪೇಸ್ಟು ಮತ್ತು ಅವನದ್ದೇ ಬ್ರಷ್ ಅನ್ನು ತಂದಿದ್ದೆವು. ಆದರೆ ಕೂರಾನನ್ನು ಹಿಡಿದು ಒಂದೆಡೆ ಕೂರಿಸಿ ಬ್ರಷನ್ನು ಅವನ ಬಾಯಿಯೊಳಗೆ ತುರುಕಿ ಹಲ್ಲುಜ್ಜುವುದು ಎಷ್ಟು ಸಾಹಸದ ಕೆಲಸ ಎಂದು ಅವಳಿಗೆ ಹೇಳಲಿಲ್ಲ. ಪೇಸ್ಟಿನಲ್ಲಿದ್ದ ಪುದೀನಾ ರುಚಿ ಅವನಿಗೆ ಇಷ್ಟವಾಗಲಿಲ್ಲ ಎಂದೆವು. ಹಲ್ಲುಜ್ಜದೇ ಇದ್ದರೆ ಏನೇನೆಲ್ಲ ತೊಂದರೆಯಾಗಬಹುದು ಎಂದಾಕೆ ವಿವರಿಸಿದಳು. ಪ್ರತಿ ಎರಡ್ಮೂರು ದಿನಕ್ಕೊಮ್ಮೆ ಸ್ನಾನ ಮಾಡಿಸುತ್ತಿದ್ದೆವು. ಹಾಗೆ ಮಾಡಿದರೆ ನಾಯಿಗಳ ಚರ್ಮ ಒಣಗಿದಂತಾಗಿ ಚರ್ಮಕ್ಕೆ ಸಂಬಂಧಿತ ಅಲರ್ಜಿಗಳು ಶುರುವಾಗಬಹುದು, ತಿಂಗಳಿಗೊಮ್ಮೆ ಮಾಡಿಸಿದರೆ ಸಾಕು ಎಂದಳು. ಸ್ಪೆಷಲ್ ಶಾಂಪೂ ಸಿಗುತ್ತದೆ ಎಂದು ಯಾವುದೋ ಬ್ರ್ಯಾಂಡಿನ ಹೆಸರು ಹೇಳಿದಳು. ಈ ತಿಂಗಳ ಅವಧಿಯಲ್ಲಿ ವಾಸನೆ ಬರದಂತೆ ಪರಫ್ಯೂಮಿನಂತಹ ಸ್ಪ್ರೇ ಸಿಗುತ್ತದೆ ಅದನ್ನು ಬಳಸಿ ಎಂದಳು. ಒಂದಾದ ಮೇಲೊಂದರಂತೆ ದಕ್ಕುತ್ತಿದ್ದ ಈ ಹೊಸ ಮಾಹಿತಿಗಳನ್ನು ನೆನಪಿನಲ್ಲಿಟ್ಟುಕೊಳ್ಳಲು ಯತ್ನಿಸುತ್ತಿದ್ದೆವು. ಮಾತನಾಡುತ್ತಲೇ ಆಕೆ ಅವನ ಹೃದಯದ ಭಾಗ, ಹೊಟ್ಟೆಯ ಭಾಗ ಇತ್ಯಾದಿಗಳನ್ನು ಪರೀಕ್ಷಿಸಿ ಆರೋಗ್ಯವಾಗಿದ್ದಾನೆ ಎಂದಳು.
ಕೊನೆಗೂ ಆ ಸಮಯ ಬಂತು. ಕೂರಾನಿಗೆ ವ್ಯಾಕ್ಸಿನ್ ಕೊಡುವ ಸಮಯ. ನಿಮಗೆ ನೋಡಲು ಆಗುತ್ತದೆಯೇ ಎಂದು ಕೇಳಿದಾಗ ಅಂತಹದ್ದೇನು ಮಾಡಬಹುದು ಎಂದು ಅರೆಕ್ಷಣ ನಮಗೆ ಚಿಂತೆಯಾಯಿತು. ಏನೇ ಆಗಲಿ ನಮ್ಮ ಮುಂದೆಯೇ ಮಾಡಿ ಎಂದು ಹೇಳಿದಾಗ ಒಳಗೆ ಹೋದಳು. ಕೂರಾ ಮಾತ್ರ ಇದರ ಬಗ್ಗೆ ಕಿಂಚಿತ್ತು ಸುಳಿವಿಲ್ಲದೇ ಆಕೆ ಒಳಗೆ ಹೋದದ್ದು ತನಗೆ ಟ್ರೀಟಿನ ತುಂಡುಗಳನ್ನು ತರಲೇನೋ ಎಂಬಂತೆ ಅವಳು ಹೋದ ದಿಕ್ಕಿನಲ್ಲೇ ಆಸೆಯಿಂದ ನೋಡುತ್ತ ಕೂತಿದ್ದ. ಕೆಲ ಸಮಯದ ನಂತರ ಇನ್ನೊಬ್ಬಳ ಜೊತೆಗೆ ಬಂದ ಆ ವೈದ್ಯೆಯ ಕೈಯ್ಯಲ್ಲಿ ಸೂಜಿಗಳಿದ್ದವು. ಇನ್ನೊಬ್ಬಳ ಕೈಯ್ಯಲ್ಲಿ ಉದ್ದನೆಯ ಚಮಚದಲ್ಲಿ ಚೀಸ್ ತರಹ ಕಾಣಿಸುತ್ತಿದ್ದ ಏನೋ ಒಂದಿತ್ತು. ಆಕೆ ಅದನ್ನು ಕೂರಾನಿಗೆ ತಿನ್ನಿಸಲೆಂದು ಕೆಳಗೆ ಕೂತಳು. ಇವನಿಗೋ ಆಗಲೇ ಜೊಲ್ಲು ಶುರುವಾಗಿತ್ತು. ಕಣ್ಣು ಮುಚ್ಚಿ ನೆಕ್ಕಲು ಶುರು ಮಾಡಿದ. ಹಿಂದಿನಿಂದ ವೈದ್ಯೆ ತಾನು ತಂದಿದ್ದ ಸೂಜಿಗಳನ್ನು ಕೂರಾನಿಗೆ ಚುಚ್ಚಿದಳು. ಅತ್ತ ಅವನು ನೆಕ್ಕುತ್ತಿದ್ದ ಚೀಸ್ ಮುಗಿಯುವ ಹೊತ್ತಿಗೆ ಇತ್ತ ಇಂಜೆಕ್ಷನ್ ಕೊಡುವ ಕೆಲಸವೂ ಮುಗಿದಿತ್ತು. ‘ಆಲ್ ಡನ್, ಗುಡ್ ಬಾಯ್’ ಎನ್ನುತ್ತ ಆಕೆ ಕೂರಾನಿಗೆ ಮತ್ತೆರಡು ಟ್ರೀಟಿನ ತುಂಡುಗಳನ್ನು ಕೊಟ್ಟಳು. ತನಗಾದ ಅನ್ಯಾಯದ ಅರಿವಿಲ್ಲದ ಕೂರಾ ಅವುಗಳನ್ನು ಒಂದೇ ಗುಟುಕ್ಕಿಗೆ ಗುಳುಂ ಮಾಡಿದ್ದ.
(ಮುಂದುವರೆಯುತ್ತದೆ..)
(ಹಿಂದಿನ ಕಂತು: ‘ನಮ್ಮದು’ ಎಂದುಕೊಂಡಕೂಡಲೇ ಆಪ್ತವಾಗಿಬಿಡುವ ಮಾಯೆ ಪ್ರೀತಿಯೇ?)
ಸಂಜೋತಾ ಪುರೋಹಿತ ಮೂಲತಃ ಧಾರವಾಡದವರು. ಸದ್ಯಕ್ಕೆ ಅಮೆರಿಕಾದ ಸ್ಯಾನ್ ಫ್ರಾನ್ಸಿಸ್ಕೋನಲ್ಲಿ ವಾಸವಾಗಿದ್ದಾರೆ. ಇಂಜಿನಿಯರ್ ಆಗಿರುವ ಇವರು ಕತೆಗಾರ್ತಿಯೂ ಹೌದು. ಇವರ ಪ್ರವಾಸದ ಅಂಕಣಗಳು ಪತ್ರಿಕೆಯಲ್ಲಿ ಪ್ರಕಟವಾಗುತ್ತಿವೆ. ‘ಸಂಜೀವಿನಿ’ ಇವರ ಪ್ರಕಟಿತ ಕಾದಂಬರಿ.