ಆ ಹುಡುಗನನ್ನ ಎಬ್ಬಿಸಿ ಯಾಕೋ ನಿನ್ನ ತಂಗಿ ಶಾಲೆಗೆ ಬಂದಿಲ್ಲ? ಎಂದಾಗ ಇಂದು ಮನೆಯಲ್ಲಿ ಬಟ್ಟೆ ಒಗೆಯುವ ಕೆಲಸ ಇತ್ತು. ಅದಕ್ಕೆ ಅಮ್ಮ ರಜೆ ಹಾಕಿಸಿದ್ದಾರೆ ಮಿಸ್ ಎಂದನು. ನೀನು ಮಾತ್ರ ಶಾಲೆಗೆ ಬಂದಿದ್ದೀಯಾ? ನೀನು ಬಟ್ಟೆ ಒಗೆಯಲು ಹೋಗಲಿಲ್ಲವೇನು? ಎಂದು ಕೇಳಿದ್ದಕ್ಕೆ “ನಾನು ಹುಡುಗ ಮಿಸ್, ಬಟ್ಟೆ ತೊಳೆಯಲು ಹೋದರೆ ಯಾರಾದರೂ ನಗುತ್ತಾರೆ ಅಷ್ಟೇ” ಎಂದವನು, ಈ ಮಿಸ್‌ಗೆ ಅಷ್ಟು ಗೊತ್ತಿಲ್ಲವಾ? ಎಂಬ ಭಾವದಲ್ಲಿ ಗೆಳೆಯರೊಂದಿಗೆ ಮುಸಿಮುಸಿ ನಗಲಾರಂಭಿಸಿದ್ದ. ನನ್ನ ಮನಸ್ಸು ಈ ಲಿಂಗ ತಾರತಮ್ಯದ ಭಾವವನ್ನು ಕಂಡು ಖೇದಗೊಂಡಿತು.
ಅನುಸೂಯ ಯತೀಶ್ “ಬೆಳೆಯುವ ಮೊಳಕೆ” ಸರಣಿ ನಿಮ್ಮ ಓದಿಗೆ
ಅದು ಹಾಜರಾತಿ ಹಾಕುತ್ತಿದ್ದೆ. ಒಂದೇ ಮನೆಯ ಅವಳಿ ಮಕ್ಕಳು ಅದೇ ತರಗತಿಯಲ್ಲಿ ಓದುತ್ತಿದ್ದರು. ಒಂದು ಮಗು ಗಂಡು, ಮತ್ತೊಂದು ಮಗು ಹೆಣ್ಣು. ಗಂಡು ಹುಡುಗ ಶಾಲೆಗೆ ಹಾಜರಾಗಿದ್ದರೇ ಹೆಣ್ಣು ಮಗಳು ಶಾಲೆಗೆ ಗೈರು ಹಾಜರಾಗಿದ್ದಳು. ಆ ಹುಡುಗನನ್ನ ಎಬ್ಬಿಸಿ ಯಾಕೋ ನಿನ್ನ ತಂಗಿ ಶಾಲೆಗೆ ಬಂದಿಲ್ಲ? ಎಂದಾಗ ಇಂದು ಮನೆಯಲ್ಲಿ ಬಟ್ಟೆ ಒಗೆಯುವ ಕೆಲಸ ಇತ್ತು. ಅದಕ್ಕೆ ಅಮ್ಮ ರಜೆ ಹಾಕಿಸಿದ್ದಾರೆ ಮಿಸ್ ಎಂದನು. ನೀನು ಮಾತ್ರ ಶಾಲೆಗೆ ಬಂದಿದ್ದೀಯಾ? ನೀನು ಬಟ್ಟೆ ಒಗೆಯಲು ಹೋಗಲಿಲ್ಲವೇನು? ಎಂದು ಕೇಳಿದ್ದಕ್ಕೆ “ನಾನು ಹುಡುಗ ಮಿಸ್, ಬಟ್ಟೆ ತೊಳೆಯಲು ಹೋದರೆ ಯಾರಾದರೂ ನಗುತ್ತಾರೆ ಅಷ್ಟೇ” ಎಂದವನು, ಈ ಮಿಸ್‌ಗೆ ಅಷ್ಟು ಗೊತ್ತಿಲ್ಲವಾ? ಎಂಬ ಭಾವದಲ್ಲಿ ಗೆಳೆಯರೊಂದಿಗೆ ಮುಸಿಮುಸಿ ನಗಲಾರಂಭಿಸಿದ್ದ. ನನ್ನ ಮನಸ್ಸು ಈ ಲಿಂಗ ತಾರತಮ್ಯದ ಭಾವವನ್ನು ಕಂಡು ಖೇದಗೊಂಡಿತು. ಅಂತಹ ಅನೇಕ ಸನ್ನಿವೇಶಗಳನ್ನು ಮೆಲುಕು ಹಾಕಿತು. ಶಾಲೆಯಲ್ಲಿ ನಡೆಯುವ ರಾಷ್ಟ್ರೀಯ ಹಬ್ಬಗಳು, ಮಾಸಿಕ ದಿನಾಚರಣೆಗಳು, ಅಥವಾ ಇತರ ಯಾವುದೇ ಕಾರ್ಯಕ್ರಮ ಮಾಡಿದರೂ ಜವಾಬ್ದಾರಿ ಹಂಚಲು ಹೋಗುವ ಶಿಕ್ಷಕರಿಗೆ ಎದುರಾಗುವ ಮೊದಲ ಸವಾಲು ನಾವು ಹುಡುಗರು, ನಾವು ಆ ಕೆಲಸ ಮಾಡುವುದಿಲ್ಲ. ಇದು ಹುಡುಗಿಯರ ಕೆಲಸ ಹುಡುಗಿಯರೇ ಮಾಡಲಿ ಎಂಬ ಅಂಶಗಳು ಸಾಮಾನ್ಯವಾಗಿ ಕಂಡುಬರುತ್ತವೆ. ಕ್ರೀಡಾಂಗಣಕ್ಕೆ ಕರೆದೋಯ್ದಾಗಲು ಗಂಡು ಮಕ್ಕಳು ಆಯ್ಕೆ ಮಾಡಿಕೊಳ್ಳುವ ಆಟಗಳೇ ಬೇರೆ, ಹುಡುಗಿಯರ ಆಟಗಳೇ ಬೇರೆ ಎನಿಸುತ್ತವೆ. ಇದಕ್ಕೆ ಕಾರಣವೇನು? ಮಕ್ಕಳು ಯಾಕೆ ಹೀಗೆ? ಎಂದು ಬೇಸರ ಮೂಡುತ್ತದೆ.
ಇದೆಲ್ಲ ಬೇರೆ ಬೇರೆ ಸ್ವರೂಪದಲ್ಲಿ ಹೆಣ್ಣಿನ ಮೇಲೆ ಆಗುತ್ತಿರುವ ಲಿಂಗ ತಾರತಮ್ಯಗಳು. ಅವಳು ಸಾಮಾಜಿಕವಾಗಿ, ಧಾರ್ಮಿಕವಾಗಿ, ಶೈಕ್ಷಣಿಕವಾಗಿ, ರಾಜಕೀಯವಾಗಿ, ಕೌಟುಂಬಿಕವಾಗಿ, ಆರ್ಥಿಕವಾಗಿಯೂ ಕೂಡ ಎಲ್ಲಾ ಕ್ಷೇತ್ರಗಳಲ್ಲಿ ಬೇಧಕ್ಕೆ ಒಳಗಾಗುತ್ತಾಳೆ. ಪುರುಷ ಪ್ರಧಾನ ಸಮಾಜದಿಂದ ತಿರಸ್ಕಾರದ ಬುತ್ತಿಯನ್ನೇ ಉಣ್ಣುತ್ತಾಳೆ.
ಹೆಣ್ಣು ಮಕ್ಕಳು ಅತಿ ಹೆಚ್ಚು ಲಿಂಗ ತಾರತಮ್ಯಕ್ಕೆ ಒಳಗಾಗುವುದು ಕುಟುಂಬದಲ್ಲಿ ಮತ್ತು ಸಮುದಾಯಗಳಲ್ಲಿ. ಇದನ್ನು ಬದಲಾಯಿಸುವುದು ಅಷ್ಟು ಸುಲಭವಲ್ಲ. ಲಿಂಗ ತಾರತಮ್ಯ ಇಂದು ನೆನ್ನೆಯದಲ್ಲ. ಅಥವಾ ನಮ್ಮ ನೆಲದ ಸಮಸ್ಯೆ ಮಾತ್ರವಲ್ಲ. ಹೆಣ್ಣು ಎಂದರೆ ನಿರ್ಲಕ್ಷ್ಯ ಧೋರಣೆ ತೋರುವ ಸಂಪ್ರದಾಯ ಪುರಾತನವಾದುದ್ದು. ಇದೊಂದು ಜಾಗತಿಕ ಸಮಸ್ಯೆ ಕೂಡ. ಆದರೂ ಒಬ್ಬ ಶಿಕ್ಷಕಿಯಾಗಿ ಮೇಲಾಗಿ ನಾನು ಒಬ್ಬ ಹೆಣ್ಣಾಗಿ ಏನಾದರೂ ಮಾಡಿ ನಮ್ಮ ಶಾಲಾ ಮಕ್ಕಳ ಪೋಷಕರಿಗೆ ಲಿಂಗ ತಾರತಮ್ಯದ ಕುರಿತು ಜಾಗೃತಿ ಮೂಡಿಸಬೇಕೆಂದು ತೀರ್ಮಾನಿಸಿದೆ. ಇದಕ್ಕೆ ನಾನು ಬಳಸಿಕೊಂಡ ವೇದಿಕೆ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ.
ಅಂದು ನಮ್ಮ ಪೋಷಕರೆಲ್ಲರೂ ಶಾಲೆಗೆ ಹಾಜರಾಗಿದ್ದರು. ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಂದು ಲಿಂಗ ತಾರತಮ್ಯದ ಕುರಿತು ಮಕ್ಕಳಲ್ಲಿ ಮತ್ತು ಪೋಷಕರಲ್ಲಿ ಅರಿವು ಮೂಡಿಸಲು ಯೋಜನೆಯೊಂದನು ಸಿದ್ಧಪಡಿಸಿಕೊಂಡಿದ್ದೆ. ಮಕ್ಕಳನ್ನು ಮೂರು ಗುಂಪು ಮಾಡಿ ಅವರ ಮನೆಯ ಹಿರಿಯರ ಸಹಾಯದಿಂದ ಮಾಹಿತಿ ಸಂಗ್ರಹಿಸಿಕೊಂಡು ಬರಲು ತಿಳಿಸಿದೆ. ಆಮೇಲೆ ಈ ಅಂಶಗಳನ್ನು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ವೇದಿಕೆಯಲ್ಲಿ ಆಯಾ ಗುಂಪಿನ ನಾಯಕರು ಮಂಡಿಸಿದರು.
ಮೊದಲನೇ ಗುಂಪಿನವರು “ಹೆಣ್ಣು ಗಂಡುಗಳ ನಡುವೆ ಇರುವ ವ್ಯತ್ಯಾಸಗಳನ್ನು” ಪಟ್ಟಿ ಮಾಡಿಕೊಂಡು ಬಂದಿದ್ದರು. ಅದರ ಪ್ರಮುಖ ಅಂಶಗಳು ಹೀಗಿದ್ದವು. ಗಂಡಿಗೆ ಎಲ್ಲಿ ಬೇಕಾದರೂ, ಯಾವಾಗ ಬೇಕಾದರೂ ಓಡಾಡುವ ಸ್ವಾತಂತ್ರ್ಯವಿದೆ; ಆದರೆ ಹೆಣ್ಣಿಗೆ ನಿರ್ಬಂಧವಿದೆ. ಹೆಣ್ಣು ಮನೆ ಒಳಗೆ ಕೆಲಸ ಮಾಡುತ್ತಾಳೆ, ಗಂಡು ಮನೆಯ ಹೊರಗೆ ಕೆಲಸ ಮಾಡುತ್ತಾನೆ. ಗಂಡು ತನಗೆ ದುಃಖ ಆಗಲಿ ಸಂತೋಷ ಆಗಲಿ ಹೊರ ಜಗತ್ತಿಗೆ ಕಾಣುವಂತೆ ಪ್ರಕಟಿಸುವುದಿಲ್ಲ. ಹೆಣ್ಣು ಅಂತಹ ಭಾವನಾತ್ಮಕ ಸಂದರ್ಭಗಳಲ್ಲಿ ಜೋರಾಗಿ ಅತ್ತು ಹಗುರಾಗುತ್ತಾಳೆ. ಗಂಡಿಗೆ ಕೋಪ ಹೆಚ್ಚು ಹೆಣ್ಣಿಗೆ ತಾಳ್ಮೆ ಹಾಗೂ ಸಹನೆ ಹೆಚ್ಚು. ಗಂಡಿಗೆ ಗಿಡ್ಡ ಕೂದಲು ಹೆಣ್ಣು ಜಡೆ ಹಾಕುತ್ತಾಳೆ. ಗಂಡಿಗೆ ಮೀಸೆ ಇದೆ ಆದರೆ ಹೆಣ್ಣಿಗೆ ಇಲ್ಲ. ಹೆಣ್ಣು ಮುಟ್ಟಾಗುವಳು, ಗಂಡು ಮುಟ್ಟಾಗುವುದಿಲ್ಲ. ಇಂತಹ ಅನೇಕ ಅಂಶಗಳನ್ನು ತಮ್ಮ ಮನೆಯ ಹಿರಿಯರಿಂದಲೇ ಕೇಳಿ ಪಟ್ಟಿ ಮಾಡಿಕೊಂಡು ಬಂದಿದ್ದರು. ಇವೆಲ್ಲವನ್ನ ತದೇಕಚಿತ್ತದಿಂದ ಸಭೆಯು ಆಲಿಸಿತು.
ಎರಡನೇ ಗುಂಪಿನವರು “ಹೆಣ್ಣಿನ ಬಗ್ಗೆ ಸಮಾಜದಲ್ಲಿ ಇರುವ ಮನೋಭಾವ” ಸ್ನೇಹಿತರೊಂದಿಗೆ ಕುಟುಂಬದ ಸದಸ್ಯರೊಂದಿಗೆ ಚರ್ಚಿಸಿ ಅದನ್ನು ಬಿತ್ತರಪಡಿಸಲು ವೇದಿಕೆ ಮೇಲೆ ಹಾಜರಾಗಿದ್ದರು. ಆ ಗುಂಪಿನ ನಾಯಕ ಈ ಕೆಳಗಿನಂತೆ ವಿಚಾರಗಳನ್ನ ಅಭಿವ್ಯಕ್ತಪಡಿಸುತ್ತಾ ಹೋದ. “ಏನು ಮತ್ತೆ ಹೆಣ್ಣು ಮಗು ಹುಟ್ಟಿತೆ! ದರಿದ್ರ,” “ಹೆಣ್ಣು ಎಷ್ಟು ಓದಿದರು ಅಡುಗೆ ಮಾಡೋದು, ಪಾತ್ರೆ ತೊಳೆಯುವುದು ತಪ್ಪದು”, “ಓದಿದ್ದು ಸಾಕು ಅವಳಿಗೆ ಮದುವೆ ಮಾಡಿ ಕಳಿಸು, ಮಗನನ್ನು ಮಾತ್ರ ಶಾಲೆಗೆ ಕಳಿಸು”, “ಹೆಣ್ಣು ಇದ್ದರೆ ಸೆರಗಲ್ಲಿ ಕೆಂಡ ಇದ್ದಂತೆ”, “ಗಂಡು ಮಕ್ಕಳಿಗೆ ಹೆಚ್ಚಿನ ಊಟ ಹಾಗೂ ಹಾಲು ಕೊಡು, ಹೆಣ್ಣಿಗೆ ಅವೆಲ್ಲ ಬೇಡ” “ಗಂಡು ಮಗ ಓದಿಕೊಳ್ಳಲಿ, ಮಗಳು ಮನೆ ಕೆಲಸ ಮಾಡಿಕೊಳ್ಳಲಿ”, “ಗಂಡು ಮಗು ಆಡಲು ಹೋಗಲಿ, ಹೆಣ್ಣು ಮಗಳು ಮನೆ ಒಳಗೆ ಇರಲಿ, ಗಂಡುಬೀರಿಯಂತೆ ಹೊರಗೆ ಸುತ್ತಬಾರದು” ಎಂದು ಹೇಳಿ ಎಲ್ಲರೊಳಗೆ ಪ್ರಶ್ನೆಯೊಂದನ್ನು ಹುಟ್ಟು ಹಾಕಿ ವೇದಿಕೆಯಿಂದ ಇಳಿದನು. ಇಂತಹ ಅಂಶಗಳು ಪ್ರತಿದಿನ ಪೋಷಕರು ಪಾಲಿಸುತ್ತಾರಾದರು ಅದನ್ನ ವೇದಿಕೆಯ ಮೇಲೆ ಸವಾಲುಗಳಂತೆ ಚರ್ಚಿಸಿದಾಗ ಪೋಷಕರಿಗೂ ಒಂದಷ್ಟು ಸಂಕೋಚ ನಾಚಿಕೆಯಾಯಿತು. ಇವೆಲ್ಲ ನಾವೇ ಆಚರಿಸುವ ಕ್ರಮಗಳಲ್ಲವೇ ಎಂದು ಆತ್ಮವಿಮರ್ಶೆ ಕೂಡ ಮಾಡಿಕೊಂಡಿದ್ದು ಅವರ ಮುಖದಲ್ಲಿ ಎದ್ದು ಕಾಣುತ್ತಿತ್ತು.
ಇನ್ನು ಮೂರನೇ ಗುಂಪಿನವರು ಹೆಣ್ಣಿನ ಮೇಲೆ ಆಗುವ ಸಾಮಾಜಿಕ ಶೋಷಣೆಯನ್ನು ಅಭಿನಯದ ಮೂಲಕ ಪ್ರದರ್ಶಿಸಿದರು. “ಹೆಣ್ಣನ್ನು ಓದಿಸಿದ್ದು ತಪ್ಪಾಯಿತು ಅದಕ್ಕೆ ಈಗ ಅವಳಿಗೆ ಜಂಭ ಬಂದಿದೆ”, “ಹೆಣ್ಣು ಮಗು ಹೆತ್ತಿದ್ದಾಳೆ ತವರಿಗೆ ಕಳಿಸು ಗಂಡನಿಗೆ ಇನ್ನೊಂದು ಮದುವೆ ಮಾಡು”, “ಗಂಡ ಕುಡಿದು ಬರುತ್ತಾನೆ ಅದಕ್ಕೆ ಇವಳೇ ಕಾರಣ. ಇವಳು ನೆಟ್ಟಗಿದ್ದರೆ ಗಂಡ ಯಾಕೆ ಕುಡಿಯುತ್ತಿದ್ದ”, “ಅವಳು ವರದಕ್ಷಿಣೆ ತಂದಿಲ್ಲ ಬೆಂಕಿ ಹಚ್ಚು”, “ಗಂಡನನ್ನು ಬಿಟ್ಟು ಬಂದು ತವರು ಮನೆ ಸೇರಿದ್ದಾಳೆ ನಾಚಿಕೆಯಾಗಬೇಕು”, “ಕಡಿಮೆ ವಯಸ್ಸಿಗೆ ಮದುವೆಯಾಗಿತ್ತು. ಹೆರಿಗೆ ಸಮಯದಲ್ಲಿ ಸತ್ತು ಹೋದಳು” ಇಂತಹ ಅನೇಕ ಅಂಶಗಳನ್ನು ಒಳಗೊಂಡಂತಹ ವಿಚಾರಗಳನ್ನ ಏಕ ಪಾತ್ರಾಭಿನಯದ ಮೂಲಕ ತೋರಿಸಿದರು.
ಕೊನೆಯ ಗುಂಪಿನವರು “ಗಂಡು ಮತ್ತು ಹೆಣ್ಣು ಮಕ್ಕಳು ಇಬ್ಬರು ಕೆಲಸಗಳನ್ನು ಹಂಚಿಕೊಂಡೆ ಮಾಡುತ್ತಾರೆ. ಆದರೆ ಹೊರಗೆ ಹೋಗಿ ದುಡಿಯುವ ಗಂಡು ಮಾತ್ರ ಶ್ರಮ ಜೀವಿಯಂತೆ ಕಾಣುತ್ತಾನೆ. ಹೆಣ್ಣಿನ ಸಂಬಳವಿಲ್ಲದ ದುಡಿಮೆ ಯಾರಿಗೂ ಕಾಣಿಸದು. ಹೆಣ್ಣು ದಿನ ನಿತ್ಯ ಏನೆಲ್ಲ ಕೆಲಸಗಳನ್ನು ಮಾಡುತ್ತಾಳೆ, ಎಷ್ಟೆಲ್ಲಾ ಮಾನಸಿಕವಾಗಿ ದೈಹಿಕವಾಗಿ ನೋವನ್ನು ಅನುಭವಿಸುತ್ತಾಳೆ ಎಂಬುದನ್ನ ಈ ಮಕ್ಕಳು ಸಂವಾದ ನಡೆಸಿದರು.
ಮಕ್ಕಳು ಈ ಪ್ರಧಾನ ಅಂಶಗಳನ್ನು ಮಂಡಿಸಿದ ನಂತರ ಎಲ್ಲರಿಂದಲೂ ಚಪ್ಪಾಳೆ ಬರುತ್ತಿದ್ದಂತೆ ನಾನು ಎದ್ದುನಿಂತೆ. ಈಗಾಗಲೇ ಮುಖ್ಯ ಶಿಕ್ಷಕರು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ವಿಶೇಷತೆಗಳನ್ನು ಮಕ್ಕಳಿಗೆ ಪೋಷಕರಿಗೆ ಅರ್ಥೈಸಿದ್ದರು. ನೋಡಿ ಪೋಷಕರೇ ಇದುವರೆಗೂ ಈ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ವಿಶೇಷತೆಗಳನ್ನು ತಿಳಿದಿರಿ. ಮಕ್ಕಳು ಕೂಡ ಮಹಿಳೆಯರ ಸಮಸ್ಯೆಗಳು ಹಾಗೂ ಅವರ ವಿಶೇಷತೆಗಳನ್ನು ಮತ್ತು ಅವರ ಸಾಧನೆಗಳನ್ನು ಕೇಳಿದಿರಿ. ಅವುಗಳಲ್ಲಿನ ಕೆಲವು ಅಂಶಗಳನ್ನು ನಾವೀಗ ಚರ್ಚಿಸೋಣ. ಅದುವೆ ಮಹಿಳಾ ದಿನಾಚರಣೆಯ ಆದ್ಯತೆ. ಇದುವರೆಗೂ ನೀವು ಕೇಳಿದ ಅಂಶಗಳೆಲ್ಲ ನೀವೇ ಹೇಳಿದವು. ಹೆಣ್ಣು ಗಂಡಿನ ನಡುವಿನ ವ್ಯತ್ಯಾಸ ನೋಡಿದಾಗ ಕೆಲವು ದೈಹಿಕವಾದವುಗಳು. ಮತ್ತೆ ಕೆಲವು ಸಾಮಾಜಿಕವಾಗಿ ಅನುಸರಿಸಿಕೊಂಡು ಬಂದ ಕಟ್ಟು ಕಟ್ಟಳೆಗಳು. ಇವೆಲ್ಲವೂ ಸರಿ ಎಂದು ಹೇಳಲು ಆಗದು, ದೈಹಿಕ ವ್ಯತ್ಯಾಸಗಳು ಸೃಷ್ಟಿಯ ವಿಶೇಷತೆಗಳು. ಅವುಗಳನ್ನು ನಾವು ಬದಲಾಯಿಸಲು ಸಾಧ್ಯವಿಲ್ಲ. ಆದರೆ ಸಾಮಾಜಿಕ ವಿಚಾರಗಳನ್ನ ಬದಲಾಯಿಸುವ ಅವಕಾಶ ಮತ್ತು ಅಗತ್ಯ ಎರಡು ಇದೆ. ಹಿಂದಿನಿಂದ ನಡೆದುಕೊಂಡು ಬಂದ ಸಂಪ್ರದಾಯಗಳನ್ನು ನಾವು ಪಾಲಿಸಲೇಬೇಕೆಂದಿಲ್ಲ. ಕಾಲಕ್ಕೆ ಅನುಗುಣವಾಗಿ ಬದಲಾವಣೆಯ ಅಗತ್ಯವಿದೆ. ಹೆಣ್ಣನ್ನ ಕೇವಲ ನಾಲ್ಕು ಗೋಡೆಯ ನಡುವೆ ಬಂಧಿಸಿ ಇಡುವುದು ತರವಲ್ಲ. ಅವಳಿಗೆ ಕಾನೂನಿನಲ್ಲಿ ಸಮಾನತೆ ಇದೆ. ಅದು ಸಾಮಾಜಿಕವಾಗಿ ಕೂಡ ಅವಳಿಗೆ ಧಕ್ಕಬೇಕು. ಅವಳನ್ನು ಓದಿಸಿದರೆ ಗಂಡಿಗೆ ಸಮಾನವಾಗಿ ನಿಲ್ಲಬಲ್ಲಳು. ಅವಳಿಗೆ ಆ ಅವಕಾಶ ನೀಡಿ ಸ್ವಾತಂತ್ರ್ಯ ಸ್ವಾಭಿಮಾನದ ಬದುಕು ಕಟ್ಟಿಕೊಡಿ. ಗಗನ ಯಾತ್ರೆ ಮಾಡುವಷ್ಟು ಸಶಕ್ತರಾದ ಹೆಣ್ಣನ್ನ ಅಡುಗೆ ಕೋಣೆಗೆ ಮಾತ್ರ ಬಂಧಿಸಬೇಡಿ. ಯಾರಿಗೆ ಗೊತ್ತು; ಮುಂದೆ ಒಂದು ದಿನ ನಿಮ್ಮ ಮಗಳು ದೊಡ್ಡ ಸಾಧಕಳಾಗಬಹುದು ಎಂದು ಹುರಿದುಂಬಿಸಿದೆ.
ಮುಟ್ಟಾದ ನಂತರ ಹೆಣ್ಣು ಮಕ್ಕಳನ್ನು ಶಾಲೆಗೆ ಕಳುಹಿಸದೇ ಮದುವೆ ಮಾಡುವುದು ತಪ್ಪಲ್ಲವೇ? ಮುಟ್ಟು ಅನ್ನುವುದು ಹೆಣ್ಣಿಗೆ ಮಗು ಪಡೆಯಲು ಸೃಷ್ಟಿ ನೀಡಿರುವ ವರ. ಮಕ್ಕಳು ಮುಟ್ಟಾದಾಗೆಲ್ಲಾ ನೀವು ಆ ಮಡಿ ಮೈಲಿಗೆಯ ನೆಪದಲ್ಲಿ ಮನೆಯಲ್ಲಿ ಕೂಡಿ ಹಾಕುತ್ತೀರಿ. ದೈಹಿಕವಾಗಿ ಮಾನಸಿಕವಾಗಿ ಅವಳನ್ನು ಶೋಷಿಸುತ್ತಿದ್ದೀರಿ. ಇವೆಲ್ಲ ಬದಲಾಗಬೇಕು ಎನ್ನುತ್ತಾ ಇಂತಹ ಅನೇಕ ಸವಾಲುಗಳನ್ನು ಮೆಟ್ಟಿ ನಿಂತು ವಿಶ್ವದ ಗಮನ ಸೆಳೆದ ಅನೇಕ ಸಾಧಕ ಹೆಣ್ಣು ಮಕ್ಕಳ ವೀರಗಾಥೆಯನ್ನು ಹೇಳಿದೆ.
ಬಾಲ್ಯದಲ್ಲಿ ಮದುವೆ ಮಾಡುತ್ತೀರಿ. ಹೆರಿಗೆ ಸಮಯದಲ್ಲಿ ಏನಾದರೂ ಜೀವಹಾನಿಯಾದರೆ, ನಿಮ್ಮದೇ ಮಗಳು ತಾನೇ ಪ್ರಾಣ ಕಳೆದುಕೊಳ್ಳುವುದು. ಎಂದಾಗ ಬಾಯಿ ಬಿಟ್ಟು ಯಾರು ಏನು ಹೇಳದಿದ್ದರೂ ಅವರೆಲ್ಲರ ಮುಖದ ಭಾವ ಹೌದು ಎಂದು ಸಾರುತಿತ್ತು. ಚಿಕ್ಕ ವಯಸ್ಸಿಗೆ ಮಗಳ ದೇಹ ಬುದ್ಧಿ ಎರಡು ಬೆಳೆದಿರುವುದಿಲ್ಲ. ನೀವು ಬಾಲ್ಯ ವಿವಾಹ ಮಾಡಿದರೆ ಆಕೆಗೆ ಗಂಡನೊಂದಿಗೆ ಹೊಂದಿಕೊಂಡು ಬದುಕಲು ಸಾಧ್ಯವಿಲ್ಲ. ಅದೇ ರೀತಿ ಜಾಣ್ಮೆಯಿಂದ ಕುಟುಂಬವನ್ನು ನಿರ್ವಹಿಸುವುದು ಆಗದು. ಇದರಿಂದ ಸಂಸಾರದಲ್ಲಿ ಬಿರುಕು ಮೂಡುತ್ತದೆ. ಅಂತಹ ಬದುಕು ನಿಮ್ಮ ಮಗಳದಾಗಬೇಕೆ? ಬೇಡ ಎನ್ನುವುದಾದರೆ 18 ವರ್ಷ ತುಂಬುವವರೆಗೂ ಯಾವುದೇ ಕಾರಣಕ್ಕೂ ಮಗಳಿಗೆ ಮದುವೆ ಮಾಡಬೇಡಿ.
ಕಾನೂನುಬಾಹಿರವಾಗಿ ಬಾಲ್ಯವಿವಾಹ ಮಾಡಿದಾಗ ವರದಕ್ಷಿಣೆಗಾಗಿ ಗಂಡನಿಂದ ಕಿರುಕುಳ ದೊರೆತರೂ ಕಾನೂನು ಹೋರಾಟ ಮಾಡಲು ಕಷ್ಟವಾಗುತ್ತದೆ ಎಂದು ನಾನು ಹೇಳುತ್ತಿದ್ದಂತೆ ಪೋಷಕರು ಹೌದೌದು ಎಂದು ಗುನುಗಿದರು. ನಿಜ ಮಿಸ್ ಇವೆಲ್ಲ ಟಿ.ವಿ. ಯಲ್ಲಿ ಮಾತ್ರ ನಡೆಯುತ್ತವೆಂದುಕೊಂಡಿದ್ದೆವು. ಈಗ ನಮ್ಮ ಅಕ್ಕ ಪಕ್ಕವೇ ನಡಿಯುತ್ತಿವೆ ಎಂದು ಆತಂಕ ತೋರಿದರು. ನಾವು ಈಗೆಲ್ಲ ಬುದ್ಧಿವಂತರಾಗಿದ್ದೇವೆ. ನಮ್ಮ ಹೆಣ್ಣು ಮಕ್ಕಳನ್ನು ಶಾಲೆಗೆ ಕಳಿಸುತ್ತಿದ್ದೇವೆ. ಓದು ಮುಗಿಸಿಯೇ ಮದುವೆ ಮಾಡುವುದು ಅಂದರು. ನಾನು ಇದು ನಿಜಕ್ಕೂ ಹೆಮ್ಮೆ ಪಡುವ ವಿಷಯ ಎಂದು ಅವರನ್ನೆಲ್ಲ ಧನ್ಯತೆಯಿಂದ ನೋಡಿದೆ. ಮಕ್ಕಳ ಮೇಲೆ ಇಷ್ಟೆಲ್ಲ ಪ್ರೀತಿ ಪ್ರೇಮ ಇರುವ ನೀವು ಮನೆಯಲ್ಲಿ ಮಗಳನ್ನು ಕಡೆಗಣಿಸಬೇಡಿ. ಮಗನಿಗೊಂದು ಮಗಳಿಗೊಂದು ನಿಯಮ ಪಾಲಿಸುವುದನ್ನು ಬಿಡಿ ಅಂದಾಗ, ನಾವೇನು ಮಾಡಿದ್ದೇವೆ? ಎಂಬ ಪೋಷಕರ ಪ್ರಶ್ನೆಯ ಬಾಣ ಪಟ್ಟನೆ ಹಾರಿ ಬಂದು ನನ್ನ ಕಿವಿಗೆ ರಾಚಿತು.
ನೀವು ಏನು ಮಾಡಿಲ್ಲ. ಮಾಡಲುಬಾರದು. ಗಂಡು ಮಗನಿಗೆ ಹೇಗೆ ಸ್ವಾತಂತ್ರ್ಯ ನೀಡುತ್ತಿರೋ ಹಾಗೆ ಮಗಳಿಗೂ ನೀಡಿ. ಮಗನ ಜೊತೆ ಮಗಳು ಸೈಕಲ್ ತುಳಿಯಲಿ. ಅವಳು ಕ್ರಿಕೆಟ್, ಲಗೋರಿ, ಮರಕೋತಿ ಆಟ ಆಡಲಿ. ಮಗ ಮಾಡುವ ಕೆಲಸಗಳೆಲ್ಲವನ್ನು ಮಗಳು ಮಾಡಲಿ. ಮಗಳು ಮಾಡುವ ಕೆಲಸಗಳನ್ನು ಮಗನು ಮಾಡಲಿ. ಅವನು ನೀರು ತರಲಿ, ಕಸ ಗುಡಿಸಲಿ, ಇದರಲ್ಲಿ ಯಾವುದೇ ತಪ್ಪು ಇಲ್ಲ. ಇಂದು ಎಷ್ಟೋ ಜನ ಮಹಿಳೆಯರು ಉದ್ಯೋಗಸ್ಥರಾಗಿದ್ದಾರೆ. ಆಗ ಮನೆಯಲ್ಲಿ ಪುರುಷ ಸಹಾಯ ಮಾಡದಿದ್ದರೆ ಹೆಣ್ಣೊಬ್ಬಳು ಹೊರಗೂ ದುಡಿದು ಮನೆ ಒಳಗೂ ದುಡಿದು ಹೇಗೆ ಬದುಕು ನಿರ್ವಹಿಸುತ್ತಾಳೆ? ಅಂತಹ ಸಂದರ್ಭದಲ್ಲಿ ಗಂಡು ಹೆಣ್ಣಿನ ಕೆಲಸಗಳಲ್ಲಿ ಕೈಜೋಡಿಸಬೇಕು. ಅವೆಲ್ಲ ಬಾಲ್ಯದಿಂದಲೇ ಮಕ್ಕಳಿಗೆ ಕಲಿಸಬೇಕು. ಎಂದಿಗೂ ಮಗನೊಂದಿಗೆ ಮಗಳನ್ನು ಹೋಲಿಕೆ ಮಾಡಬೇಡಿ. ಅವನ ಮುಂದೆ ಇವಳನ್ನು ತುಚ್ಛವಾಗಿ ಕಾಣಬೇಡಿ. ಮಗಳ ಜೊತೆ ಹೊಂದಿಕೊಂಡು ಪ್ರೀತಿಯಿಂದ ಇರಲು ಅವನಿಗೂ ಕಲಿಸಿ. ಅವಳಿಗೂ ನಾನು ಅಣ್ಣ ತಮ್ಮನಷ್ಟೇ ಮನೆಯಲ್ಲಿ ಸಮಾನಳು ಎಂಬ ಭಾವ ಮೂಡಲಿ. ಆಗ ಅವಳಲ್ಲಿ ಆತ್ಮವಿಶ್ವಾಸ ಮೂಡುತ್ತದೆ ಎಂಬ ವಿಚಾರಗಳನ್ನ ಸಭೆಗೆ ಅರ್ಥ ಮಾಡಿಸಿದೆನು.
ಅಂದು ನಮ್ಮ ಪೋಷಕರ ಧನಾತ್ಮಕ ಚಿಂತನೆ ಹಾಗೂ ಸಕಾರಾತ್ಮಕ ಮಾತುಗಳನ್ನು ಕೇಳಿ ಹೆಮ್ಮೆ ಹಾಗೂ ಖುಷಿಯೂ ಆಯಿತು. ಇಷ್ಟು ವರ್ಷಗಳಲ್ಲಿ ನಾನು ಆಚರಿಸಿದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಗಳಲ್ಲಿ ಈ ವರ್ಷ ನನಗೆ ಅತಿ ಹೆಚ್ಚು ತೃಪ್ತಿ ಕೊಟ್ಟಿತು.
ಅನುಸೂಯ ಯತೀಶ್ ಅವರು ಇತಿಹಾಸ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು ವೃತ್ತಿಯಲ್ಲಿ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿದ್ದಾರೆ. ಕಥೆ ಕವನ ಗಜಲ್ ಸೇರಿದಂತೆ ವಿವಿಧ ಪ್ರಕಾರಗಳಲ್ಲಿ ಬರೆಯುವ ಇವರ ಮೆಚ್ಚಿನ ಆದ್ಯತೆ ವಿಮರ್ಶೆಯಾಗಿದೆ. ಈಗಾಗಲೆ ಅನುಸೂಯ ಯತೀಶ್ ಅವರು ‘ಕೃತಿ ಮಂಥನ’, ‘ನುಡಿಸಖ್ಯ’, ‘ಕಾವ್ಯ ದರ್ಪಣ’ ಎಂಬ ಮೂರು ವಿಮರ್ಶಾ ಸಂಕಲನಗಳನ್ನು ಪ್ರಕಟಿಸಿದ್ದಾರೆ.