ಸುಜಾತಾ ಚಿಂತಿಸುತ್ತಾ ‘ಅಲ್ಲಾ ನಾವು ನೋಡಿದ ಎಲ್ಲಾ ಸ್ಕೂಟರ್‌ಗಳೂ ಈಗಾಗಲೇ ಜನರ ಬಳಿ ಇವೆ. ಹೊಸ ಮಾಡೆಲ್ಗಳು ಯಾವುವೂ ಕಾಣುತ್ತಿಲ್ಲʼ ಎಂದಳು. ಈಗ ಸುಸ್ತಾಗುವ ಸರದಿ ರಮೇಶನದು. ಅವನು ಅವಳು ರೋಡಿನಲ್ಲಿ ಸ್ಕೂಟರ್ ಗುರುತಿಸಿ ಹೆಸರಿಸಿದಾಗೊಮ್ಮೆ ಅವನ ಅರ್ಥೈಸಿಕೊಂಡದ್ದೇ ಬೇರೆಯಾಗಿತ್ತು, ಆದರೆ ಹೆಂಡತಿಯ ತಲೆಯಲ್ಲಿದ್ದ ವಿಚಾರವೇ ಬೇರೆಯಾಗಿತ್ತು.
ಮಹಮ್ಮದ್ ರಫೀಕ್ ಕೊಟ್ಟೂರು ಬರೆದ ಹಾಸ್ಯ ಲೇಖನ ನಿಮ್ಮ ಓದಿಗೆ
ಕೊಟ್ಟೂರಿನಿಂದ ಹೆಂಡತಿ, ಮಗಳನ್ನು ಕರೆದುಕೊಂಡು ಹೊಸಪೇಟೆಗೆ ಬರುವಷ್ಟರಲ್ಲಿ ಒಂಬತ್ತು ಗಂಟೆ. ಹೆಂಡತಿಯ ಸ್ಕೂಟರ್ ಡಿಮ್ಯಾಂಡು ಸುಮಾರು ವರ್ಷಗಳಿಂದ ಇತ್ತು. ಆದರೆ ಕಾರು, ಮನೆ, ಬಂಗಾರ ಹೀಗೆ ಏನೇನೋ ಸಕಾರಣಗಳನ್ನು ಹೇಳಿಕೊಳ್ಳುತ್ತಾ ಕೆಲವು ವರ್ಷಗಳನ್ನು ತಳ್ಳಿಯಾಗಿತ್ತು. ಈಗ ಯಾವ ಕಾರಣವೂ ಉಳಿದಿಲ್ಲದ್ದರಿಂದ ಕೊಡಿಸಲೇಬೇಕಾದ ಅನಿವಾರ್ಯತೆ ರಮೇಶನಿಗೆ ಇತ್ತು. ಪೆಟ್ರೋಲ್ ಖರ್ಚಾದರೂ ಉಳಿಯುವಂತೆ ಎಲೆಕ್ಟ್ರಿಕ್ ಸ್ಕೂಟರ್ ತೆಗೆದುಕೊಂಡರಾಯಿತು ಎಂಬ ಸಲಹೆಯನ್ನು ರಮೇಶ ಹೆಂಡತಿ ಸುಜಾತಾ ಮುಂದಿಟ್ಟರೆ ಮೊದಲು ಒಪ್ಪಿಕೊಂಡಳು. ಆದರೆ ತವರು ಮನೆಯ ‘ಹೆಣ್ಣು ಕೊಟ್ಟ ಮಾವ ಕಣ್ಣು ಕೊಟ್ಟ ದೇವ್ರುʼ ಮತ್ತು ಸಾರಾ ಜಮಾನಾ ಏಕ್ ತರಫ್ ತೋ ಜೋರು ಕಾ ಭಾಯಿ ಏಕ್ ತರಫ್ ಎನ್ನುವಂತಿದ್ದ ಹೆಂಡತಿಯ ತಮ್ಮ ಕಾರ್ತೀಕ್ ಸುಜಾತಾಳ ಕಿವಿಯಲ್ಲಿ ಎಲೆಕ್ಟ್ರಿಕ್ ಸ್ಕೂಟರ್‌ಗಳು ಬೆಂಕಿ ಹತ್ತಿಕೊಳ್ಳುತ್ತವೆ ಬೇಡ ಎಂದು ಊದಿದ್ದರಿಂದ ರಮೇಶ ಏನೇ ತಿಪ್ಪರಲಾಗ ಹಾಕಿದರೂ ಸುಜಾತಾ ಒಪ್ಪಿಕೊಳ್ಳುವ ಸ್ಥಿತಿಯಲ್ಲಿರಲಿಲ್ಲ. ಹಾಗಾಗಿ ಹೆಂಡತಿ ಮಗಳ ಮೆರವಣಿಗೆಯೊಂದಿಗೆ ಸ್ಕೂಟರ್‌ಗಳ ಶೋ ರೂಮ್‌ಗಳಿಗೆ ಭೇಟಿ ಕೊಡುವ ಪೂರ್ವ ನಿಗದಿತ ಕಾರ್ಯಕ್ರಮದಂತೆ ಹೊಸಪೇಟೆಗೆ ಬಂದಿದ್ದ.
ಹೊಸಪೇಟೆಯ ನ್ಯಾಷನಲ್ ಕಾಲೇಜಿನ ಹಿಂಭಾಗದಲ್ಲಿದ್ದ ಸಹೋದ್ಯೋಗಿಯೊಬ್ಬರ ಬೈಕನ್ನು ಪಡೆದು ಶೋರೂಂಗಳ ದಂಡಯಾತ್ರೆಯನ್ನು ಆರಂಭಿಸಿದ. ಹಳೆಯ ಸ್ಕೂಟರಿನಲ್ಲಿಯೇ ಕೆಲಸ ಸಾಗುತ್ತಿರುವ ಈ ಸಂದರ್ಭದಲ್ಲಿ ಒಂದು ಲಕ್ಷ ರೂಪಾಯಿಗಳನ್ನು ಈ ಹೊಸ ಸ್ಕೂಟರಿಗೆ ಇಡಬೇಕಲ್ಲ ಎಂಬ ನೋವು ರಮೇಶನ ಮನಸ್ಸಿನಲ್ಲಿ ಕೊರೆಯುತ್ತಿತ್ತು.
ಹೀರೋ ಶೋರೂಂ, ಹೊಂಡಾ ಶೋರೂಂ, ಸುಜುಕಿ ಶೋರೂಂ, ತನ್ನ ಸಮಾಧಾನಕ್ಕೆ ಕೆಲವು ಎಲೆಕ್ಟ್ರಿಕ್ ಶೋ ರೂಂ ಎಂದು ಹಂಡ್ರೆಡ್ ಬೆಡ್ ಹಾಸ್ಪಿಟಲ್ ರೋಡ್ ಎರಡೂ ಬದಿಗಳಲ್ಲಿದ್ದ, ಊರಿನ ಅಲ್ಲಲ್ಲಿ ಹರಡಿಕೊಂಡಿದ್ದ ಎಲ್ಲಾ ಶೋರೂಂಗಳಿಗೆ ಭೇಟಿ ಮಾಡಿಸಿದ. ಹೊರಗೆ ಬಂದಾಗೊಮ್ಮೆ ಸುಜಾತಾ ಶೋ ರೂಂನಲ್ಲಿ ನೋಡಿದ ಬೈಕ್‌ಗಳನ್ನು ಗುರುತಿಸಿ ‘ಅದೋ ನಾವು ನೋಡಿದ ಆಕ್ಟೀವಾ, ಅದೋ ನಾವು ನೋಡಿದ ಫ್ಯಾಸಿನೋ..ʼ ಹೀಗೆ ಹೊರಗೆ ಬಂದಾಗೊಮ್ಮೆ ತೋರು ಬೆರಳಿನಿಂದ ತೋರಿಸುತ್ತಾ ಹೆಸರಿಸುತ್ತಿದ್ದಳು. ರಮೇಶ ಬಹುಶಃ ಸ್ಕೂಟರುಗಳನ್ನು ನೋಡಿ ಬಂದಿದ್ದರಿಂದ ಗುರುತಿಸುತ್ತಿರಬಹುದೆಂದುಕೊಂಡಿದ್ದ. ಹನ್ನೊಂದು ಗಂಟೆಯ ತನಕ ಅಲೆದಾಡಿದ್ದಾಯಿತು. ಸುಜಾತಾ ಫೈನಲ್ ಮಾಡಲಿಲ್ಲ. ಆದರೆ ಪ್ರತಿ ಬಾರಿ ಶೋ ರೂಂನಿಂದ ಹೊರ ಬಂದಾಗ ರೋಡಿನ ಹೊರಗೆ ಪಾರ್ಕ್ ಮಾಡಿದ ಸ್ಕೂಟರ್‌ಗಳಲ್ಲಿ ತಾನು ನೋಡಿ ಬಂದ ಸ್ಕೂಟರ್ ಹುಡುಕುತ್ತಿದ್ದಳು. ಇನ್ನು ನೋಡುವ ಯಾವ ಶೋ ರೂಂ ಉಳಿದಿಲ್ಲವೆಂದು ಕೊನೆಗೆ ಸುಸ್ತಾಗಿ ಜ್ಯೂಸ್ ಕುಡಿಯುತ್ತಾ ವಿಷಯವನ್ನು ಚರ್ಚಿಸಿದರಾಯಿತು ಎಂದು ಅಂಬೇಡ್ಕರ್ ಸರ್ಕಲ್ಲಿನಲ್ಲಿದ್ದ ಜೂಸ್ ಅಂಗಡಿಗೆ ಕರೆದುಕೊಂಡು ಬಂದ. ಮಗಳ ಬೇಡಿಕೆಯಂತೆ ಮೂವರಿಗೂ ಆಪಲ್ ಜ್ಯೂಸ್ ಆರ್ಡರ್ ಮಾಡಿದ. ಸುಜಾತಾ ಕಡೆ ತಿರುಗಿ ಕೇಳಿದ ‘ನೋಡು ದಿಟ್ಟಿಸಿ ನೋಡಿದ್ರೆ ಮನೆ ಹೆಂಡ್ತಿ ಕುಲ್ಡಿ ಅನ್ನಂಗ ನೋಡ್ತಾ ಹೋದ್ರ ಯಾವ್ದೂ ತೊಗೊಳಲ್ಲ.. ಹೇಳು ಯಾವ ಸ್ಕೂಟರ್ ಇಷ್ಟವಾಯಿತು, ಫೈನಲ್ ಮಾಡಿದರೆ ಹೋಗಿ ಬುಕ್ ಮಾಡಿ ಬಂದು ಬಿಡೋಣಾʼ ಎಂದ. ಸುಜಾತಾ ಚಿಂತಿಸುತ್ತಾ ‘ಅಲ್ಲಾ ನಾವು ನೋಡಿದ ಎಲ್ಲಾ ಸ್ಕೂಟರ್‌ಗಳೂ ಈಗಾಗಲೇ ಜನರ ಬಳಿ ಇವೆ. ಹೊಸ ಮಾಡೆಲ್ಗಳು ಯಾವುವೂ ಕಾಣುತ್ತಿಲ್ಲʼ ಎಂದಳು. ಈಗ ಸುಸ್ತಾಗುವ ಸರದಿ ರಮೇಶನದು. ಅವನು ಅವಳು ರೋಡಿನಲ್ಲಿ ಸ್ಕೂಟರ್ ಗುರುತಿಸಿ ಹೆಸರಿಸಿದಾಗೊಮ್ಮೆ ಅವನ ಅರ್ಥೈಸಿಕೊಂಡದ್ದೇ ಬೇರೆಯಾಗಿತ್ತು, ಆದರೆ ಹೆಂಡತಿಯ ತಲೆಯಲ್ಲಿದ್ದ ವಿಚಾರವೇ ಬೇರೆಯಾಗಿತ್ತು. ‘ಅಯ್ಯೋ ಮಹಾ ತಾಯಿ ಸ್ಕೂಟರ್ ಅಂದ್ರೇನು ಸೀರೆ ಅನ್ಕೊಂಡಿದೀಯಾ ನೀನು ಬೇಕೆಂದಾಗ ಹೊಸ ಮಾಡೆಲ್ ಮಾರುಕಟ್ಟೆಗೆ ಬರಲು, ಒಂದು ಮಾಡೆಲ್ ಮಾರ್ಕೆಟ್ಟಿಗೆ ಬಂದ ನಂತರ ಮತ್ತೆ ಹೊಸ ಮಾಡೆಲ್‌ಗಳು ಬರಬೇಕಾದರೆ ಎರಡು ಮೂರು ವರುಷಗಳೇ ಬೇಕಾಗುತ್ತವೆ, ನೀನು ಹೂಂ ಅನ್ನೋದಾದರೆ ಹೊಸ ಮಾಡೆಲ್ ಬರೋವರೆಗೂ ಕಾಯೋಣʼ ಎಂದು ಕತ್ತಲಲ್ಲಿಯೇ ಬಾಣ ಹೊಡೆದ ರಮೇಶ.
ಬೀಸೋ ದೊಣ್ಣೆ ತಪ್ಪಿಸಿಕೊಂಡರೆ ನೂರು ವರ್ಷ ಆಯುಷ್ಯ ಎಂಬಂತೆ ರಮೇಶನ ಬಾಣ ನಾಟಿತ್ತು. ‘ಮುಂದಿನ ವರುಷ ಹೊಸ ಮಾಡೆಲ್ ಬಂದ ನಂತರ ತೆಗೆದುಕೊಂಡರಾಯಿತು, ನಡೀರಿ ಹೋಗೋಣʼ ಎನ್ನುವುದೊಂದೇ ರಮೇಶ ಒಳಗೊಳಗೇ ಖುಷಿಯಾದ. ಆದರೆ ಅದನ್ನು ತೋರ್ಪಡಿಸದೆ ನೀನೆಂಗ ಹೇಳ್ತಿಯೋ ಹಂಗೆ. ಹೆಂಗೂ ಮಧ್ಯಾಹ್ನ.. ಪಕ್ಕದಲ್ಲೇ ಹೊಸ ರೆಸ್ಟೋರೆಂಟ್ ಓಪನ್ ಆಗಿದೆ ಊಟ ಮಾಡಿ ಹೋಗೋಣ ಎಂದ ಸುಜಾತಾ ತಲೆಯಾಡಿಸಿದಳು.