ಇದೊಂದು ಕಾರು ಎಲ್ಲಾರ ಕಣ್ಗೂ ಬಿತ್ತು. ಪುಸುಕ್ ಅಂತ ಕಾರು ಕೇಳೋಕೆ ಶುರು ಆತು. ದಾಕ್ಷಿಣ್ಯ ಬ್ಯಾರೆ.‌ ಕೊಡದಿದ್ರೆ ಕೆಲ್ಸ‌ ಮಾಡದೆ ಸತಾಯಿಸ್ತಾರೆ. ಒಳ್ಳೆ ಪೀಕಲಾಟ ಆಯ್ತು. ಥತ್ ತೇರಿಕೆ ಯಾಕಾನಾ ಕಾರು ಅಂತ ಆಸೆ ಬಿದ್ನೋ… ಯಾಕೆ ಬೇಕಿತ್ತು ಈ ಉಸಾಬರಿ ಅಂತ ಬ್ಯಾಸ್ರ ಬಂದೋತು ಅಪ್ಪಂಗೆ. ಕಾರೂ ಪುಗ್ಸಟ್ಟೆ ಕೊಡಾದಲ್ದೆ, ಪೆಟ್ರೋಲ್ ಹಾಕ್ಸಿ, ಡ್ರೈವರ್ ಇಕ್ಕಿ ಕಳ್ಸೋದು ಬ್ಯಾರೆ. ಅದೋ ಬಿಳೇ ಆನೆ. ಒಂದ್ಸಲ ಸರ್ಕಲ್ ಇನ್ಸ್ಪೆಕ್ಟರ್ ಒಬ್ಬರು ಮೈಸೂರಿಗೆ ತಕಂಡೋಗವ್ರೆ. ಯರ್ರಾಬಿರ್ರಿ ಓಡ್ಸಿ ಕಾರು ಕೆಟ್ಟೋಗದೆ. ಅಲ್ಲೇ ಬಿಟ್ಟು ಹೊಂಟು ಬರಾದೆ ಆಸಾಮಿ?
ಸುಮಾ ಸತೀಶ್ “ರಂಗಿನ ರಾಟೆ” ಸರಣಿಯಲ್ಲಿ ಹೊಸ ಬರಹ ಇಲ್ಲಿದೆ

ಅಪ್ಪ ಬೇಸಾಯ ವಹಿಸ್ಕೊಂಡ ಮ್ಯಾಗೆ ವಸಿ ವಸಿ ಬದಲಾಗ್ತಾ ಬಂತೊ. ಹುಡುಗು ರಕ್ತ, ಬೇಸಾಯದಾಗೆ ಬಂದಿರೋ ಹೊಸಾ ನಮೂನಿಗಳ್ನ‌ ನಮ್ಮೂರಾಗೂ ತಕಂಬರಾಕೆ (ತರಲು) ಜೀವ ಕುಣೀತಿತ್ತು. ಅಪ್ಪ ಹಾಕಿದ ಆಲದಮರ ಬಿಟ್ಟು ಬ್ಯಾರೆ ಯೋಸ್ನೆ ಮಾಡಾಕ್ ಸುರು ಆತು. ತಾತ ಆಲೇ ಮೆತ್ತಗಾಗಿತ್ತು. ಯೋನಾರಾ ಮಾಡ್ಕಾ ಅಂಬ್ತ ಯೋಳಿ ರಾಮಾ ಕಿಶ್ಣಾ ಅಂಬ್ತ ಮನ್ಯಾಗೆ ಇತ್ತು.

ಸೀಮೆಜಾಲಿ ಬೇಲಿ

ಮೊದ್ಲು ಹೊಲುದ್ ಸುತ್ತೂರ ಇದ್ದ ಬೇಲಿ ಬ್ಯಾರೆ ಹಾಕುಸ್ತು ಅಪ್ಪ.‌ ತಾತ ಹಿಂದೂಪುರದಿಂದ ಸೀಮೆಜಾಲಿ ಬೀಜ ತಕಂಡ್ ಬಂದು ಹೊಲುದ್ ಸುತ್ತೂರ ಬೇಲಿಗೆ ಅಂತ ಹಾಕ್ಸಿತ್ತು. ಅವೋ ಅತ್ಲಾಕಡೆ ನಾಕೈದು ಅಡಿ, ಇತ್ಲಾ ಕಡೀಕ್ ನಾಕೈದು ಅಡಿ ಹರಡಿಕೊಂಡು ಸ್ಯಾನೆ ಜಾಗ ವೇಸ್ಟ್ ಆಗ್ತಾ ಐತೆ ಅಂತ ಅಪ್ಪನ ಆಂಬೋಣ. ಅದ್ರಾಗೂ ಈ ಜಾಲಿಮರ ಐತಲ್ಲ, ಐನಾತೀದು. ಅದ್ರ ಮುಳ್ಳು ಏಸು ವಿಷಾ ಅಂದ್ರೆ, ತರಚ್ಕೊಂಡ್ರೆ, ಚುಚ್ಕೊಂಡ್ರೆ ವಸಿ ಊತ ಬರ್ತಿತ್ತು. ಮೂರು ದಿಸಾ ಕಳುದ್ರೂ ನೋಯ್ತಿತ್ತು. ಆದ್ರೂ ಇಂತಾ ಖತರ್ನಾಕ್ ಜಾಲೀ ಗಿಡ್ವೂ ನಮ್ ಜನುಗುಳ್ ಕೈಯಾಗೆ ತಪ್ಪುಸ್ಕೊಣಾಕ್ ಆಗ್ತಿರ್ಲಿಲ್ಲ. ಅವ್ರು ಅದುಕ್ಕಿಂತ ಐನಾತೀ ಇದ್ರು. ಹೊಲುದ್ ಅತ್ಲಾಕಡೇಗೂ ಚಾಚ್ಕೊಂಡಿರ್ತಿತ್ತಲ್ಲ, ಮೆಲ್ಲುಕೆ ಅದ್ನ ಕತ್ತರಿಸ್ಕೊಂಡು ತಕೊಂಡೋಗೋರು. ಈ ಜಾಲಿಕಂಟಿ ಒಲೇಗಾಕುದ್ರೆ ಸ್ಯಾನೆ ಕಾವು ಕೊಡ್ತಿತ್ತು. ಅಡ್ಗೆ ಬ್ಯಾಗ್ನೆ ಆಗ್ತಿತ್ತು. ಆವಾಗ ಹೊಲ್ದಾಗೆ ಸಿಕ್ತಿದ್ದ ಎಲ್ಲಾನೂ ಕೆಲ್ಸಕ್ಕೆ ಬರ್ತಿತ್ತೋ, ಯಾವ್ದೂ ಯೇಸ್ಟ್ (ವೇಸ್ಟ್) ಆಗ್ತಿರ್ಲಿಲ್ಲ. ಕಬ್ಬು ಕಟಾವು ಮಾಡಿದ್ ಮ್ಯಾಗೆ ಕೆಳಗಿನ ಗಂಟುಗಳು ಒಲೆಗಾಗ್ತಿದ್ವು. ಆಲೆಮನ್ಯಾಗಿನ್ ಸಿಪ್ಪೆ ಸೈತ ಬಿಸಾಡ್ತಿರಲಿಲ್ಲ. ಜ್ವಾಳದ ಸೊಸಿಯಾಗೆ ತೆನೆ ಕುಯ್ದ ಮ್ಯಾಗೆ ಮ್ಯಾಗ್ಳ ದಂಟು, ಎಲೆ ಜೀವದನಕ್ಕೆ ಹಾಕೋರು.‌ ಕೆಳುಗ್ಲ ಬೇರು ಒಣುಗ್ಸಿ ಒಲೇಗಾಕೋರು. ಆಗ ಅಡ್ಗೇ ಒಲೇಗೂ ಬೇಕಿತ್ತು. ನೀರೊಲೆಗೂ ಬೇಕಿತ್ತು. ಒಂದು ಕಡ್ಡೀನೂ ಬಿಸಾಡ್ದೆ ನಾಜೋಕಾಗಿ ಕ್ಯಾಮೆ ನಡೀತಿತ್ತು. ಈಗ ಹಳ್ ಹಳ್ಳೀನಾಗೂ ಗ್ಯಾಸೊಲೆ ಬಂದೈತೆ. ಅಡುಗೇನೂ ಅದ್ರಾಗೆ, ನೀರ್ ಕಾಸೋದೂ ಅದ್ರಾಗೆ. ಇಂಗಾಗಿ ಈಗ ಜಾಲಿಕಂಟಿ, ಕಬ್ಬಿನ ಸಿಪ್ಪೆ ಜ್ವಾಳದ ಬೇರು ಕೇಳೋರೇ ಗತಿ ಇಲ್ದಾಗೈತೆ.

ಅಪ್ಪುನ‌ ಕಾಲ್ದಾಗೆ ಈ ಸೀಮೆಜಾಲಿ ಬೇಲಿ ಕತೆ ಕಡ್ಡೀ ತಕಂಡೋಗಿ ಗುಡ್ಡಾ ಮಾಡಿದಂಗೆ ಆಗಿತ್ತು. ಅಪ್ಪ ಏನ್ ಮಾಡ್ತು, ಅದ್ನೆಲ್ಲ ಕಿತ್ತಾಕಿ, ಕಲ್ಲಿನ‌ ಗೂಟ ನೆಟ್ಟು, ಕಬ್ಬಿಣದ್ದು ಮುಳ್ಳಿನ ತಂತಿ ಬೇಲಿ ಸುತ್ತಿಸಿದ್ರು. ಇತ್ಲಾಗೆ ಜಾಗ್ವೂ ವೇಸ್ಟಾಗಾಕಿಲ್ಲ. ಕೊನೇಗಂಟ ಗೇಯ್ಮೆ ಮಾಡ್ಬೋದಿತ್ತು. ಅತ್ಲಾಗೆ ಜನ್ವೂ, ದನ್ವೂ ಒಳೀಕ್ ಬರಾಕಾಗ್ತಿರ್ಲಿಲ್ಲ.

ಬೋರ್ ಬಂತು, ಮೋಟ್ರು ಬಂತು

ಮೊದ್ಲು ಬಾವಿ ತೋಡ್ಸಿ, ಅದ್ರಾಗಿಂದ ಎರಡು ಜೊತೆ ಎತ್ತು ಮಡಿಕ್ಕೊಂಡು ಕಪಿಲೆ ಹೊಡೆದು ಬೇಸಾಯ ಮಾಡ್ತಿದ್ರು. ಮೂರ್ ನಾಕೆಕರೆ ಹೊಲ ಕಪೀಲೇನಾಗೆ ಮಾಡ್ತಿದ್ರು. ಎಂಗೂ ಅರ್ಧ ಹೊಲ ಮಾತ್ರ ಗೇಯ್ಮೆ ಆಗ್ತಿತ್ತು. ಒಂದು ಬೆಳೆ ಬಂದ್‌ ಮ್ಯಾಕೆ ಭೂಮ್ ತಾಯ್ಗೆ ವಸಿ ಉಸಿರಾಡಾಕೆ ಟೇಮು ಕೊಡ್ತಿದ್ರು. ಒಂದು ಮೂರ್ನಾಕು ತಿಂಗಳ ತನ ಆ ಜಾಗ್ದಾಗೆ ಖಾಲಿ ಬಿಟ್ಟು ಆಮ್ಯಾಕೆ ಉಕ್ಕೆ‌ ಮಾಡಿ ಜಮೀನು ಹದ ಮಾಡಿ ನಾಟಿ ಮಾಡ್ತಿದ್ರು. ಅದಾದ್ ಮ್ಯಾಗೆ ಇನ್ನೊಂದು ಜಾಗ್ದಾಗೆ ಬೇಸಾಯ ನಡೀತಿತ್ತು. ಇಂಗಾಗಿ ಕಪಿಲೆ ಮೇಂಟೇನ್‌ ಆಗ್ತಿತ್ತು. ಬರ್ ಬರ್ತಾ ಆಳು ಸಿಗೋದೂ ಕಷ್ಟ ಇತ್ತು. ದನ ಮೇಯಿಸೋರೂ ಸಿಕ್ತಿರಲಿಲ್ಲ. ಎರಡು ಜೊತೆ ಎತ್ತು ಸಾಕೋ ಬದ್ಲಿ ಬೋರ್ ಹಾಕ್ಸೀರು. ಬರೇ ತೊಂಬತ್ತು ಅಡೀಗೆ ಗಂಗಮ್ಮ ತಾಯಿ ಭೋರಂತ ಬಂದ್ಲು. ಮೂರಿಂಚಿನ್ ಪೈಪು ತುಂಬಾ ನೀರು ಬರ್ತಿತ್ತು. ನಮ್ಗೂ ದಂಡಿಯಾಗಿ, ಬ್ಯಾರೆಯೋರ್ ಹೊಲುಕ್ಕೂ ನೀರ್ ಬಿಡ್ತಿದ್ರು. ನಮ್ಗಾಗಿ ಹದಿನೈದು ಇಪ್ಪತ್ತು ಎಕರೇಗೆ ನೀರು ಬಿಟ್ಟು ಮೂರ್ನೇ ಒಂದ್ ಭಾಗಾ ಬೆಳೆ ತಕಂಬತಿದ್ರು.

ಟಿಲ್ಲರ್ ಬಂತು

ಒಂದು ಸಲ ಕಬ್ಬಿನ ಬೆಳೇಲಿ ಲಾಭಾ‌ ಚೆಂದಾಗಿ ಬಂತು. ಆಗಿನ ಕಾಲುಕ್ಕೆ 10000 ದುಡ್ಡು ಬಂತು. ಅದ್ರಾಗೆ 8000 ಟಿಲ್ಲರ್ ತಂದ್ರು. ನಮ್ಗಂತೂ ಖುಶೀನೋ ಖುಶಿ. ವಿಮಡಗಾನಹಳ್ಳಿ, ತೆರಿಯೂರು ಗಳ್ಗೆ ಜಾತ್ರೆಗೆ ಎತ್ತಿನ ಗಾಡೀಲಿ ಹೋಗ್ತಿದ್ವಿ. ಈಗ ಟಿಲ್ಲರ್‌ನಾಗೆ ಜುಮ್ ಅಂತ ಹೋಗ್ಬೋದು ಅಂತ ಖುಶಿ. ಇದು ಒಂತರಾ ನಾಕೈದು ಕೆಲ್ಸಕ್ಕೆ ಉಪ್ಯೋಗುಕ್ಕೆ ಬರ್ತಿತ್ತು. ಕೊಡಿಗೇನಹಳ್ಳ ಇಂದ ಗೊಬ್ಬರ ತರಾಕೆ, ನಮಿಗೆ ಪ್ರಯಾಣುಕ್ಕೆ, ಹೊಲಾ ಗೇಯಾಕೆ, ಸರಕು ತರಾಕೆ ಇದೇ ರಾಮಬಾಣ, ಎಲ್ಲಾದುಕ್ಕೂ ಮದ್ದು.

ಕೊಡಿಗೇನಹಳ್ಳೀಗೆ ಸಿನಿಮಾಗೆ ಹೋಗಿದ್ದು

ಈ ಟಿಲ್ಲರ್ ನಾಗೆ ಕೆಳೀಕ್ಕೆ ಹಾಸಿಗೆ ಹಾಕಿ, ಮ್ಯಾಕೆ ದುಪ್ಪಟಿ ಹಾಕಿ( ಬೆಡ್ ಶೀಟ್) ಬಿಳೇ ಪಂಚೆ ಹಾಸಿ ಕೂಕೊಮ್ತಿದ್ವಿ. ಇಂಗೇ ಬೇಡರ ಕಣ್ಣಪ್ಪ ಸಿನಿಮಾ ಕೊಡಿಗೇನಹಳ್ಳಿ ಟೆಂಟಿನಾಗಿ ಬಂದಿತ್ತು. ಅದು ಎಷ್ಟನೆ ದಪಾನೋ ಗೊತ್ತಿಲ್ಲ.‌ ಒಂದ್ ಸಲ ಸತಿ ಸಾವಿತ್ರಿ ಸಿನಿಮಾಗೆ ಎತ್ತಿನ ಗಾಡಿ ಕಟ್ಟಿಕೊಂಡು ಹೋಗಿದ್ವಿ. ಈ ಸತಿ ಟಿಲ್ಲರ್ ನಾಗೆ ಹೋಗಿದ್ದು ನಮ್ಗೆ ಮೆರೆಯೋಕೆ ಚೆಂದಾಗಿತ್ತು.

ಉಕ್ಕೆ ಮಾಡೋದು

ಬೇಸಿಗೆ ಕಾಲದಾಗೆ ನೆಲ ಒಣುಕ್ಕೊಂಡು ಹೋಗಿರ್ತಿತ್ತು. ಅದುಕ್ಕೆ ಸ್ವಲ್ಪ ನೀರು ಬಿಟ್ಟು, ಮೆತ್ತುಗ್ ಮಾಡಿ ಟಿಲ್ಲರ್ ನಾಗೆ ಮಣ್ಣು ಅಡಿಮೇಲು ಮಾಡಿ ಕಲಾಕಿದ್ರೆ (ಕಲಸಿದರೆ) ಮಣ್ಣು ಹದ ಆಗ್ತಿತ್ತು.

ಗದ್ದೆ ಗೇಯೋದು

ಮಳೆಗಾಲ್ದಾಗೆ ಮಳೆ ನೀರು ಸೇರ್ಕೊಂಡು ಮಣ್ಣು ಕೆಸರು ನೀರು ಆಗಿರ್ತಿತ್ತು. ಟಿಲ್ಲರ್‌ಗೆ ಗದ್ದೆ ಮಡಕೆ ಹಾಕ್ಕೊಂಡು (ಕಬ್ಬಿಣುದ್ ರಾಡ್) ‌ಮಣ್ಣು ನೀರು ಕಲಾಕಿ ಅಡಿ ಮೇಲ್ ಮಾಡಿದ್ರೆ ನಾಟಿ ಮಾಡಾಕೆ ರೆಡಿ ಆಗ್ತಿತ್ತು.‌

ಒಂದು ಟಿಲ್ಲರ್ ನಾಕೈದು ಜೊತೆ ಎತ್ತು ಇದ್ದಂಗೆ. ಎತ್ತು ಮೇಂಟೇನ್ ಮಾಡೋದು, ಮೇಯಿಸೋಕೆ, ನೋಡ್ಕಣಾಕೆ ಆಳುಗಳೂ ಮಿಗಿಲುತ್ತಿದ್ವು. ಆರಾಮಾಗಿ ಹತ್ತೆಕರೆ ಬೇಸಾಯ ಆಗೋಗ್ತಿತ್ತು.‌ ಅಬ್ಬಬ್ಬ ಅಂದ್ರೆ ಒಂದು ಎಕರೆ ಗದ್ದೆ ಗೇಯೋಕೆ ಐದು ಲೀಟ್ರು ಡೀಸೆಲ್‌ ಬೇಕಾಗ್ತಿತ್ತು. ಗದ್ದೆ ಗೇಯೋಕೆ ಮಾತ್ರ ಜಾಸ್ತಿ. ಪ್ರಯಾಣುಕ್ಕೆ ಆಸೊಂದು ಬೇಕಿರ್ಲಿಲ್ಲ. ಖಾಲಿ ನೆಲ್ದಾಗೆ ಸುಮ್ಕೆ ಹೋಗಾಕೆ ಜಾಸ್ತಿ ಡೀಸೆಲ್ ಕುಡೀತಿರಲಿಲ್ಲ.

ಕಾರು ಬಂತು ಕಾಸು ಹೋಯ್ತು ಡುಂ ಡುಂ

ನಮ್ಮಪ್ಪುಂಗೆ ಕಾರು ತಕೋಬೇಕೂಂತ ಸ್ಯಾನೆ ಖಾಯಿಷ್ (ಆಸೆ) ಇತ್ತು. ದೊಡ್ಡಮಾಲೂರು ಕೆರೆ ಹತ್ರ ಇರೋ ಜಮೀನಿನಾಗೆ ಕೆರೆ ನೀರು ಬಳ್ಸಿ ಬರೇ ಕಬ್ಬು ಬೆಳಿಯೋಕೆ ಆಗ್ತಿತ್ತು. ಆಮ್ಯಾಕೆ ನೀರು ಸಿಗ್ದೆ ಜಮೀನು ಮಾರಿದ್ರು.‌ ಆ ದುಡ್ನಾಗೆ ಕಾರು ತಕಂಡ್ರೆ ಹೆಂಗೆ ಎಂತ ಓಡಾಡಿದ್ರು.‌ ಬೆಂಗ್ಳೂರಾಗೆ ಕಂಟೋನ್ಮೆಂಟ್‌ನಲ್ಲಿ ಬ್ರಾಡ್‌ವೇ ಹೋಟೆಲ್ ಅಂತಾ ಇತ್ತಂತೆ. ಅಲ್ಲಿ ಹೈದ್ರಾಬಾದಿನ‌ ಮುಸಲ್ಮಾನರೊಬ್ಬರು ಒಂದು ಕ್ಯಾಡಿಲಾಕ್ ಕಾರು ಶೋಗೆ (show) ಇಟ್ಟಿದ್ರಂತೆ.‌ ಅದು ಹೈದ್ರಾಬಾದಿನ ನಿಜಾಮರ ಕಾಲದ ಕಾರಂತೆ. 40000 ಬೆಲೆ. ವಿದೇಶದ ಕಾರಲ್ವೇ ಉದ್ದೂಕಿತ್ತು. ನೋಡಾಕೆ ಚೆಂದ ಬೇರೆ. ಮನಿಕ್ಕೊಂಡೋಗೋ ಅಂಗೆ ಇತ್ತಂತೆ. ಆದ್ರೆ ಅಷ್ಟು ದುಡ್ಡಿರಲಿಲ್ಲ. ಅರ್ಧ ದುಡ್ಡಾಕಿ ಅವರ ಸ್ನೇಹಿತನ ಜೊತೆ ಸೇರಿ ತಕಂಡ್ರು. ಸರಿ ಕಾರೇನೋ ಬತ್ತು. ಒಂದೆರಡು ಸತಿ ಮನೆಯವರನ್ನ ಕರ್ಕೊಂಡು ಮನೆ ದ್ಯಾವ್ರು ನಂಜನಗೂಡಿಗೆ, ಮೈಸೂರು ಸುತ್ತಾ ಮುತ್ತಾ ಟೂರು ಹೊಡ್ಕೊಂಡು ಬಂದಿದ್ದೆ ಭಾಗ್ಯ. ಆಮ್ಯಾಕೆ ಕಾರು ಮನ್ಯಾಗಿದ್ರೆ ಅಲ್ವೆ ತಿರ್ಗೋದು. ರಾಜಕೀಯದಾಗೆ ಕೆಲಸ ಆಗ್ಬೇಕಾದ್ರೆ ಅಧಿಕಾರಿಗಳ್ನ ಹಿಡೀಬೇಕಿತ್ತು. ಆಗ್ಲೂ ಅಧಿಕಾರಿಗ್ಳು ಲಂಚ ರುಷುವತ್ತಿಲ್ದೆ ಕೆಲ್ಸ ಮಾಡ್ ಕೊಟ್ಟಾರೆ? ಇದೊಂದು ಕಾರು ಎಲ್ಲಾರ ಕಣ್ಗೂ ಬಿತ್ತು. ಪುಸುಕ್ ಅಂತ ಕಾರು ಕೇಳೋಕೆ ಶುರು ಆತು. ಮೈಸೂರಿಗೆ ಹೋಗ್ಬೇಕಿತ್ತು, ಟೂರ್ ಹೋಗ್ಬೇಕಿತ್ತು, ನಂಟರ ಮನೆಗೆ ಹಿಂಗೇ ನೆಪಗಳು. ದಾಕ್ಷಿಣ್ಯ ಬ್ಯಾರೆ.‌ ಕೊಡದಿದ್ರೆ ಕೆಲ್ಸ‌ ಮಾಡದೆ ಸತಾಯಿಸ್ತಾರೆ. ಒಳ್ಳೆ ಪೀಕಲಾಟ ಆಯ್ತು. ಥತ್ ತೇರಿಕೆ ಯಾಕಾನಾ ಕಾರು ಅಂತ ಆಸೆ ಬಿದ್ನೋ… ಯಾಕೆ ಬೇಕಿತ್ತು ಈ ಉಸಾಬರಿ ಅಂತ ಬ್ಯಾಸ್ರ ಬಂದೋತು ಅಪ್ಪಂಗೆ. ಕಾರೂ ಪುಗ್ಸಟ್ಟೆ ಕೊಡಾದಲ್ದೆ, ಪೆಟ್ರೋಲ್ ಹಾಕ್ಸಿ, ಡ್ರೈವರ್ ಇಕ್ಕಿ ಕಳ್ಸೋದು ಬ್ಯಾರೆ. ಅದೋ ಬಿಳೇ ಆನೆ. ಒಂದು ಲೀಟ್ರು ಪೆಟ್ರೊಲ್ ನಾಗೆ ಬರೇ ಐದು ಕಿಲೋಮೀಟ್ರು ಮುಂದೋಗ್ತಿತ್ತು. ಆಗ ಪೆಟ್ರೋಲು ಮೂರೂವರೆ ರೂಪಾಯಿತ್ತು. ಇವ್ರ ಮುಂಡಾ ಮೋಚ್ತು ಅಂತಾ ಬೈಕೊಂಡಾನಾ ಕಳ್ಸಬೇಕಿತ್ತು.

ಒಂದ್ಸಲ ಸರ್ಕಲ್ ಇನ್ಸ್ಪೆಕ್ಟರ್ ಒಬ್ಬರು ಮೈಸೂರಿಗೆ ತಕಂಡೋಗವ್ರೆ. ಯರ್ರಾಬಿರ್ರಿ ಓಡ್ಸಿ ಕಾರು ಕೆಟ್ಟೋಗದೆ. ಅಲ್ಲೇ ಬಿಟ್ಟು ಹೊಂಟು ಬರಾದೆ ಆಸಾಮಿ?

ತಿರ್ಗಾ ಅಪ್ಪ ಅಲ್ಲೀಗಂಟ ಹೋಗಿ ರಿಪೇರಿ ಮಾಡ್ಸಿದ್ರು. ಸ್ಯಾನೆ‌ ಹೊಡ್ತಾ ಬಿತ್ತು. ತೆಗ್ ತೆಗಿ, ಇದು ನಮ್ಮಂತೋರ್ಗಲ್ಲ ಅಂಬ್ತ ಮಾರಾಕಿದ್ರು. ಅದೂ ಬರೇ 20000 ಬಂತು. ಅದ್ರಾಗೂ ಸ್ನೇಹಿತ ಬ್ಯಾರೆ ನಾಕೈದು ಸಾವ್ರ ಟೋಪಿ ಹಾಕ್ದ. ಅಲ್ಲಿಗೆ ಸಾಲಾ ಸೋಲಾ ಆಯ್ತು. ಕಾರಿನ ಆಸೆಗೂ ಬೆಂಕಿ ಬಿತ್ತು. ಪೀಡೆ ತೊಲುಗ್ತು ಅಂತ ಉಸ್ರು ಬಿಟ್ರು. ಕಾರೂ ಹೋಯ್ತು, ಕಾಸೂ ಹೋಯ್ತು ಡುಂ ಡುಂ ಅನ್ನಂಗೆ ಆಯ್ತು.

ಕುರಿ ಗೊಬ್ಬರ

ತಾತನ ಕಾಲದಾಗೆ ಸ್ಯಾನೆ ಬೇಸಾಯ ಇರಲಿಲ್ಲ. ಅಪ್ಪ ತರಾವರಿ ಬೆಳೆ ಶುರು ಮಾಡಿದ್ರು.‌ ಆಗೆಲ್ಲಾ ಹೊಲ್ದಾಗಿನ್ ಗೊಬ್ಬರದ ಗುಂಡೀನಾಗಿಂದೇ ಸರೋಗ್ತಿತ್ತು.‌ ಆದ್ರೆ ಅಪ್ಪನ ಕಾಲ್ದಾಗೆ ಸಾಲ್ತಿರ್ಲಿಲ್ಲ. ತಿಪ್ಪೆ ಗೊಬ್ಬರ ತಕಂತಿದ್ರು. ಮುನ್ನೂರು ನಾನೂರು ರೂಪಾಯಿಗೆ ಒಂದು ತಿಪ್ಪೆ. ಅದು ಐದೋ ಹತ್ತೋ ಗಾಡೀನಷ್ಟು ಇರ್ತಿತ್ತು.‌ ಮಾಮೂಲಿ ಗೊಬ್ಬರ (ಕೊಂಡ್ಕೊಂಡು ಬಂದಿರೋದು) ಸ್ವಲ್ಪ ಹಾಕ್ತಿದ್ರು. ಕುರಿ ಗೊಬ್ಬರ ಹಾಕ್ತಿದ್ರು. ಕುರಿ ಗೊಬ್ಬರದ ಕತೆ ಚೆಂದಾಗೈತೆ.‌ ಕುರಿ ಮೇಯಿಸೋರ್ ತಾವ ಮಾತುಕತೆ ಮಾಡ್ಕಂತಿದ್ರು. ಒಂದು ಎಕರೆಗೆ ಸಾವಿರ ಕುರಿ ಕಳ್ಸತಿದ್ರು. ಖಾಲಿ ನೆಲದಾಗೆ ಅವುನ್ನ ಹಾಕಿ, ಸುತ್ತೂರ ತಡಿಕೆ ಕಟ್ಟಿ ರಾತ್ರೆ ಎಲ್ಲಾ ಬಿಡ್ತಿದ್ರು. ಅವು ಅಲ್ಲೇ ಗಂಜಲ ಹೊಯ್ದು, ಪಿಚಿಕೆ ಹಾಕ್ತಿದ್ವು. ಬೆಳಗ್ಗೇ ಎದ್ದೇಟ್ಗೆ ಕುರುಬರು ಕುರಿ ಹೊಡ್ಕೊಂಡು ಹೋಗ್ತಿದ್ರು. ತಿರ್ಗಾ ರಾತ್ರಿ ತಂದು ಬಿಡೋರು. ಇಂಗೇ ನಾಕು ರಾತ್ರಿ ಮಾಡೀರೆ ಒಂದು ಎಕರೇಗೆ ಒಳ್ಳೆ ಗೊಬ್ಬರ. ಆರಾಮಾಗಿ ಬೆಳೆ ತೆಗೀತಿದ್ರು.‌ ನಾಕು ರಾತ್ರಿ ಆದ್ ಮ್ಯಾಕೆ ಇನ್ನೊಂದು ಎಕರೇಗೆ ಕುರಿ ಹೊಡೀತಿದ್ರು. ಅವ್ರಿಗೆ ಊಟ ಕೊಟ್ಟು ಕಾಸು ಕೊಡ್ತಿದ್ರು. ಕುರಿಮಂದೆ ಕಟ್ಟಿರೋರು ಇಂಗೇ ಇದುನ್ನೂ ಮಾಡ್ಕೊಂಡು ನಾಕು ಕಾಸು ಕಾಣ್ತಿದ್ರು.

ಅಡಕೆ ಮರ

ಅಪ್ಪ ಸುಮಾರು 130 ಅಡಕೆ ಮರ ಹಾಕಿದ್ರು. ಒಂದು ಮರಕ್ಕೆ ಎರಡು ಕೆಜಿ ಅಡಕೇನಾರಾ ಸಿಗ್ತಿತ್ತು. ಒಂದೊರ್ಸ ಸ್ವಂತ ಅಡಿಕೆ ಮಾಡಿದ್ರು. ಆಮ್ಯಾಕೆ ಕಟ್ಟು ಅಂದ್ರೆ ಗುತ್ತಿಗೆ ಕೊಟ್ಟಿದ್ರು. ಅವರೆ ಬಂದು ಕಿತ್ಕೊಂಡು ಹೋಗಿ ಅಡಿಕೆ ಮಾಡ್ಕಂತಿದ್ರು.

ತೆಂಗಿನಮರ

ಒಂದು ನಲವತ್ತು ಇದ್ವು. ಎಳನೀರೆ ಜಾಸ್ತಿ ಕೊಚ್ಚುತಿದ್ರು. ಊರಿಗೆ ಯಾರಾನಾ ಆಫ಼ೀಸರ್ರುಗಳು ಬರ್ಲಿ ನಮ್ ತ್ವಾಟದ ಎಳನೀರೆ ಬೇಕಿತ್ತು. ಜೊತೆಗೆ ಎಲ್ಲಾರ್ಗೂ ಕಾಯಿ ಬೇರೆ ಕೊಡಬೇಕಿತ್ತು. ಹಬ್ಬ ಗಿಬ್ಬ ಬಂದ್ರೆ ಕೆಲಸದೋರ್ಗೆ, ಬಡವರು ಯಾರಾನಾ ಕೇಳ್ಕೊಂಡು ಬಂದ್ರೆ ಅವ್ರಿಗೆ, ಬ್ರಾಂಬ್ರಿಗೆ ಖಾಲಿ ಆಗ್ತಿತ್ತು. ಒಂದು ಸಣ್ಣ ಕಿಸುಗಾಯಿ ದೆಕ್ಲೂ ಮಾರಾಕಾಗ್ತಿರ್ಲಿಲ್ಲ.

ಅಕ್ಕಿ

ಗಂಗಸಾಲ ಅಕ್ಕಿ‌ ಅಂತ ಬೆಳೀತಿದ್ರು. ನಾನು ಅದುನ್ನ ಘಂ ಸಾಲ ಅಂತಿದ್ದೆ. ಕೆಂಪುಕೆ ಬುಡ್ಡಕೆ ಇರ್ತಿತ್ತು. ಅಷ್ಟು ದೂರುಕ್ಕೇ ವಾಸ್ನೆ ಘಂ ಅಂತಿತ್ತು. ಅದುನ್ನ ದೀಪಾವಳಿ ಹಬ್ಬದಾಗೆ ಕಜ್ಜಾಯ ಮಾಡಾಕೆ ಜಾಸ್ತಿ ಬಳ್ಸತಿದ್ರು. ಸಕತ್ತಾಗಿರ್ತಿತ್ತು ಕಜ್ಜಾಯ‌‌. ಗಂಗಸಾಲ ಅಕ್ಕೀನ ನೆನೆಸಿ, ಚೆನ್ನಾಗಿ ಕಾಯಿ, ಬೆಲ್ಲ ಯಾಲಕ್ಕಿ ಹಾಕ್ಕೊಂಡು ತಿಂದ್ರೆ ಸ್ವರ್ಗ ಕೆಳೀಕ್ ಬರ್ತಿತ್ತು. ತಿಂದ್ ಮ್ಯಾಗೆ ವಾಸ್ನೆ ನೋಡ್ಕಂಡ್ರೆ ಕೈ ಸತ ಘಂ‌ ಅಂತಿತ್ತು.

ರಾಗಿ ಬೆಳೀತಿದ್ವಿ. ಬತ್ತ ಬೆಳೀತಿದ್ರು. ಬತ್ತದಾಗೆ‌ ಮೊದ್ಲು ಆಲುಬ್ಬಲು ಅಂತ ಬೆಳೀತಿದ್ರು. ಸ್ವಲ್ಪ ದಪ್ಪ ಇರ್ತಿತ್ತು. ಅದು ಹಿಟ್ಟಿಗೆ, ಆಳುಗಳಿಗೆ ಕೊಡಾಕೆ, ನಿತ್ಯ ಬಳಸಾಕೆ ಆಗ್ತಿತ್ತು. ಅದೂ ಒಳ್ಳೆ ಅಕ್ಕೀನೇಯಾ. ಆದ್ರೆ ಮಾರ್ಕೆಟ್‌ನಾಗೆ ಬೆಲೆ ಕಮ್ಮಿ. ಅದ್ಕೆ ಕೊಯಮತ್ತೂರು ಸಣ್ಣ ಅಂತ ಬೆಳೀತಿದ್ರು. ಸಣ್ಣಕೆ ಸೂಜಿ ತರ ಇರ್ತಿತ್ತು. ಒಂದಷ್ಟು ದಿನ ಜೀರಿಗೆ ಸಾಲು ಅಂತ ಬರ್ತಿತ್ತು. ಅದೂ ಸಣ್ಣಗೆ ಜೀರಿಗೆ ತರ ಇರ್ತಿತ್ತು. ಇಂಗೇ ಮೂರೋ ನಾಕೋ ರಕಮು(ರೀತಿ) ಬಂದೋದ್ವು. ಜಯಾ ಅಂತ ಬೆಳೀತಿದ್ವಿ. ಸಾಮಾನ್ಯುಕ್ಕೆ ಎಲ್ಲ ಬತ್ತದ ಸೊಸಿ ಎರಡೂವರೆ ಅಡಿ ಉದ್ದಕಿದ್ರೆ, ಇದು ಬರೇ ಒಂದಡಿ ಅಷ್ಟೇ ಇರ್ತಿತ್ತು. ಅದೂ ಇಳುವರೀನೂ ಜಾಸ್ತಿ. ಬ್ಯಾರೇವು ಹತ್ತು ಕ್ವಿಂಟಾಲ್ ಕೊಡೋ ಕಡೆ ಇದು ಇಪ್ಪತ್ತು ಕೊಡ್ತಿತ್ತು.‌ ಸ್ವಲ್ಪ ದಪ್ಪ. ಅವಲಕ್ಕಿ‌ ಮಾಡಾಕೆ ಜಾಸ್ತಿ ಬಳಸ್ತಿದ್ರು. ಮದ್ವೆ ಮುಂಜಿ ಆದ್ರೆ, ಸ್ವಂತಕ್ಕೆ ಬಳಸೋಕೆ ಮಾತ್ರ ಅವಲಕ್ಕಿ ಮಾಡುಸ್ತಿದ್ರು.

ತಾತ ಮಾಡ್ತಿದ್ದ ಹೊಗೆಸೊಪ್ಪಿನ ಬೆಳೆ ಒಂದೆರಡು ದಪ ಅಷ್ಟೆ ಮಾಡ್ದಿದ್ರು ಅಪ್ಪ. ಸರ್ಕಾರದ ನಿಯಮಗಳು ಸ್ಯಾನೆ ಬಿಗಿಯಾಯ್ತು. ಹೊಗೆಸೊಪ್ಪಿನ ಮಂಡಿ ಹಾಕಾಕೆ ಆಳುಗಳು ಸಿಗ್ತಿರಲಿಲ್ಲ. ಅದುನ್ನ ನಿಲ್ಲಿಸಿ ಬಿಟ್ರು.

ದಂಟೋ ತೊಲೇನೋ

ಒಂದು ಸತಿ ದಂಟಿನ ಸೊಪ್ಪು ಹಾಕಿದ್ರು. ಅದು ನಮ್ ತಾತ ಹಿಂದೂಪುರದಿಂದ ಬೀಜ ತಂದಿದ್ದು. ನಮ್ ಹೊಲ್ದಾಗೆ ಮಣ್ಣೂ ಚೆಂದಾಗಿತ್ತು. ಒಳ್ಳೆ ಗೊಬ್ಬರಾನೂ ಇತ್ತು. ಆದ್ರೂ ಆ ದಂಟು ಬಲು ಇಚಿತ್ರ(ವಿಚಿತ್ರ)ವಾಗಿ ಬೆಳೀತಿತ್ತು.‌ ಮನುಸುರಿಗಿಂತ ಉದ್ದೂಕೆ ಅಂದ್ರೆ ಏಳೋ ಎಂಟೋ ಅಡಿ ಉದ್ದೂಕೆ, ತೊಲೇನೋ ಏನೋ ಅನ್ನಂಗೆ ದಪ್ಪುಕೆ ಇರ್ತಿತ್ತು. ಒಂದು ದಂಟು ಅಲ್ಲ ಅರ್ಧವೂ ಅಲ್ಲ ಕಾಲು ದಂಟು ಹಾಕೀರೆ ಒಂದು ದೊಡ್ಡ ಕೊಳದಪ್ಪಲೆ ಗೊಜ್ಜು ಓಡೋಗ್ತಿತ್ತು. ಎಲ್ರೂ ಬಂದು ತಕಂಡೊಯ್ತಿದ್ರು. ನಂಟರು ಇವತ್ತೂ ನೆನುಸ್ಕಂತಾರೆ ಆಪಾಟಿ ದಂಟು ಎಲ್ಲೂ ಕಂಡಿಲ್ಲ. ಪ್ರಪಂಚದ ವಿಚಿತ್ರಗಳಲ್ಲಿ ಅದೂ ಒಂದು ಅಂತಿದ್ರು. ಒಂದು ಗೋಣೀ ಚೀಲದಾಗೆ ನಾಕು ದಂಟು ಹಾಕಿ ತುಮಕೂರಿನ ಅತ್ತೆ ಮನೇಗೆ ಕಳ್ಸುದ್ರೆ ಬೀದೀಗೆಲ್ಲಾ ಹಂಚ್ತಿದ್ರಂತೆ. ಅಷ್ಟು ದಪ್ಪ ಇರ್ತಿತ್ತಲ್ಲ, ಬಲ್ತೋಗದೇನೋ ಅಂದ್ರೆ ಅದೂ ಇಲ್ವಂತೆ. ಎಷ್ಟು ಎಳೇದೂ ಅಂದ್ರೆ ಬೆಣ್ಣೆ ಅಂಗೆ ಕರಗೋಗ್ತಿತ್ತಂತೆ. ಒಂದು ಮೂರು ಬೆಳೆ ಅಂಗೆ ಬಂದ ಮೇಲೆ‌ ಮುಗಿದೋಯ್ತು.‌ ಮತ್ತೆ ಅಂತಾ ಬೀಜ ಸಿಗಲಿಲ್ಲ. ಆಗ ಊರ್ನೋರ್ಗೆಲ್ಲಾ ಮಂಕರಿ ಮಂಕರಿ ದಂಟು ಕೊಡ್ತಿದ್ರಂತೆ.

ಆಗ ಹೊಲಾ ನೋಡ್ಕಣಾಕೆ ಹನುಮಂತಪ್ಪ ಅಂತಿದ್ದ. ಆವಪ್ಪನೂ ತರಕಾರಿ ಪರಕಾರಿ ಚೆಂದಾಕಿ ಬೆಳೀತಿದ್ದ. ತರಕಾರಿ, ಸೊಪ್ಪು ಮನೇಗೆ ಮಾತ್ರ ಬೆಳೀತಿದ್ವಿ. ಮಾರಾಕಲ್ಲ. ಸೌತೆಕಾಯಿ, ಮೆಣಸಿನಕಾಯಿ, ಬದನೆಕಾಯಿ, ಬೀನಿಸ್ (ಬೀನ್ಸ್), ಕ್ಯಾರೆಟ್ಟು, ಎಲ್ಲಾ ಹಾಕ್ತಿದ್ದ. ಒಂದು ಕಿತ ಕಲ್ಲಂಗಡಿ ಹಣ್ಣು ಹಾಕಿದ್ದ. ಅದೂ ಕೂಡ ದೊಡ್ಡದಾಗಿತ್ತು. ಸ್ಯಾನೆ ಸೀಗಿತ್ತು. ಜೀವದನಕ್ಕೆ ಅಂತ ಅಗಸೆ ಸೊಪ್ಪು, ಸ್ಯಾಡೆ ಸೊಪ್ಪು ಹಾಕ್ಸಿದ್ರು.

ರಾಶಿ ರಾಶಿ ಹೂವಿನ ಗಿಡಗಳು, ಅದೂ ತರಾವರಿ ಇದ್ವು. ಯಾರ್ಯಾರೋ ಬಂದು ಪೂಜೇಗೇಂತ ಕಿತ್ಕೊಂಡು ಹೋಗ್ತಿದ್ರು. ಗಣೇಶ ಹೂವು, ಶಂಕ, ಚೆಂಡು, ಪಟಿಕ, ಚಿಂತಾಮಣಿ ಚೆಂಡು, ಕಣಗಿಲೆ, ಮಲ್ಲಿಗೆ, ಕಾಕಡ, ಕನಕಾಂಬರ, ಟೇಬಲ್ ರೋಜಾ, ಮೈಸೂರು ಮಲ್ಲಿಗೆ…. ಇಂಗೆ. ಅಡಿಕೆ ತೋಟದಾಗೆ ಇಳೇದೆಲೆ ಬಳ್ಳಿ ಹಬ್ಬಿಸಿತ್ತು.

ಟೊಮ್ಯಾಟೊ ಕತೆ

ಈಗಿನ್ ತರಾನೇಯಾ ಆಗ್ಲೂ ಈ ಬಡ್ಡೀಮಗಂದು ಟೊಮ್ಯಾಟೊ ಆಟಾ ಆಡಿಸ್ತಿತ್ತು. ಒಂದು ದಪ ಆಕಾಸುಕ್ಕೆ ಏಣಿ ಹಾಕೀರೆ ಇನ್ನೊಂದು ಸತಿ ಪಾತಾಳುಕ್ಕೆ ನೆಗುದ್ ಬಿದ್ದು ನೆಲ್ಲೀಕಾಯಾಗ್ತಿತ್ತು. ಒಂದ್ ಸತಿ ಸಿಕ್ಕಾಪಟ್ಟೆ ರೈಟು ಬಂತು. ತಕಾ ಅಪ್ಪಾನೂ ಬೆಳೆದ್ರು. ಬೆಳೆ ಕೈಗೆ ಬರಾ ಹೊತ್ಗೆ ರೈಟು ಡಮಾರ್ ಆಯ್ತು. ಐದು ಪೈಸೇಗೆ ಕೆಜಿ. ಮಂಕರಿ ಮಂಕರಿ ಊರ್ನಾಗೆಲ್ಲಾ ಹಂಚಿದ್ದಾತು.‌ ಆಳುಗಳಿಗಾರಾ ಕೀಳಾಕೆ ಕಾಸು ಕೊಡಬೇಕಲ್ಲ. ಕೊನೀಗೆ ಅಪ್ಪ ಯಾರಿಗೆ ಬೇಕೋ ನೀವೇ ಬಂದು ಕಿತ್ಕೊಂಡು ಹೋಗಿ ಅಂತ ಬುಟ್ರು. ಜನ ತೋಟಕ್ಕೆ ನುಗ್ಗಿ ಕೊಯ್ಕೋ ಹೋಗಿದ್ದು ಇನ್ನಾ ನೆಪ್ಪೈತೆ.‌

ಆಲೆಮನೆ

ಈಗ್ಲೂ ನಾನು ಹೊಲ ನೆಪ್ಪು ಮಾಡಿಕೊಂಡ್ರೆ ಮೊದ್ಲು ಕಣ್‌ಮುಂದ್ಕೆ ಬರೋದು ಆಲೇಮನೇನೇಯಾ.‌ ಆಲೆಮನೆ ಇಟ್ರೆ ಅಪ್ಪ ರಾತ್ರಿ ಎಲ್ಲಾ ಅಲ್ಲೇ ಇರ್ತಿದ್ರು. ರಾತ್ರಿ ಚಳೀಗೆ ಕಂಬಳಿ ಹೊಚ್ಕೊಂಡು ಕೆಲಸ ಮಾಡ್ತಿದ್ರು. ಆಳುಗಳಿಗೆ ಬಲು ಖುಷಿ. ಶಂಕ್ರಪ್ಪಣ್ಣಯ್ಯನೂ ನಮ್ ಜೊತ್ಯಾಗೆ ನಿದ್ ಗೆಟ್ಟು ಕೆಲಸ ಮಾಡ್ತೈತೆ ಅಂತ ಅವ್ರೂ ಜೋರ್ ಜೋರಾಗಿ ಕೆಲಸ ಮಾಡ್ತಿದ್ರು. ಇಂಗೇ ಜಮೀನಿಗೆ ನೀರು ಬಿಡಾಕಿರಲಿ, ಗೇಯ್ಮೆ ಮಾಡಾಕಿರಲಿ ಅಪ್ಪನೂ ಪಂಚೆ ಎತ್ತಿಕಟ್ಟಿ, ತಲೆಗೊಂದು ಟವಲ್ ಸುತ್ತಿ ‌ಆಳುಗಳ ಜೊತೆ ನಿಂತು ಬಿಡ್ತಿದ್ರು. ಯಜಮಾನನೂ ಕೆಲಸಕ್ಕಿಳಿದ್ರೆ ಆಳುಗಳು‌ ಖುಶೀಲಿ ಕೆಲ್ಸ ಮಾಡ್ತಾರೆ ಅಂತ ನಂಬಿದ್ರು ಅಪ್ಪ.

ಆಲೆಮನೇಲಿ ಕಬ್ಬಿನಗಾಣಕ್ಕೆ ಎತ್ತುಗಳನ್ನು‌ ಕಟ್ಟುತ್ತಿದ್ರು. ಎತ್ತುಗಳು ಸುತ್ತುತ್ತಿದ್ರೆ ಕಬ್ಬಿನಾಲು ಬಾನೀಲಿ ಬಂದು ಬೀಳ್ತಿತ್ತು. ಮೊದ್ಲು ಮೊದ್ಲು ಮಣ್ಣಿನ ಬಾನಿ ಇರ್ತಿತ್ತು. ಆಮ್ಯಾಕೆ ಡಬ್ಬಾರೇಖಿಂದು ಡ್ರಮ್ ತರ ಇರ್ತಿತ್ತು. ‌ಒಂದು ಬಾನಿ ಅಂದ್ರೆ ದೊಡ್ಡ ಎಂಟು ಡಬರಿಗೆ ಹಾಲು ಇರ್ತಿತ್ತು. ಅಷ್ಟು ತುಂಬಿದ ಮ್ಯಾಲೆ ಕೊಪ್ಪರಿಗೇಗೆ ಹಾಕಿ ಕಾಯ್ಸೋದು. ಮೂರು ಗಂಟೆ ಬೇಕಿತ್ತು. ಒಂದು ಒಬ್ಬೆ ಬೆಲ್ಲ ಅಚ್ಚಿಗೆ ಹೊಯ್ಯೋಕೆ. ತಣ್ಣಗಾದ್ ಮ್ಯಾಗೆ ಬೆಲ್ಲ ಸಿಗ್ತಿತ್ತು. ಅಷ್ಟು ಹಾಲಿಗೆ ಮೂವತ್ತು ಮೂವತ್ತೈದು ಕೆಜಿ ಬೆಲ್ಲ ಬರ್ತಿತ್ತು.

ಬೆಳೆ ಏನೋ‌ ಚೆನ್ನಾಗಿ ಬರ್ತಿತ್ತು. ಅದ್ರೆ ಅಪ್ಪನ ಕೈಯಾಗೆ ಕಾಸು ನಿಲ್ತಿರಲಿಲ್ಲ. ಜನಗಳಿಗೆ ಖರ್ಚು ಮಾಡಾದ್ರಾಗೆ ಸರೋಗ್ತಿತ್ತು. ಜೊತೆಗೆ ಬೆಳೇನೂ ಬಡಬಗ್ಗರಿಗೆ, ಆಳುಗಳಿಗೆ, ಅಧಿಕಾರಿಗಳಿಗೆ ಒಂದು ಭಾಗ ಹೋಗ್ತಿತ್ತು. ಬೊಗಸೆ ತುಂಬಾ ನೀರು ತುಂಬಿಕೊಂಡ್ರೆ ತೂತಿನ ದಸೀಲಿ ಸೋರಿ, ಬಾಯಿಗೆ ಬರಾಷ್ಟೊತ್ತಿಗೆ ಸಿಗೋದು ತುಸಾ ಅಂದಂಗೆ ಆಗ್ತಿತ್ತು.

ಕಾರು ಮಾತ್ರಾನೆ ಅಪ್ಪ ತಗೊಂಡ ಐಷಾರಾಮಿ ಸಾಮಾನು. ಇನ್ಯಾವುದೂ ಇರಲಿಲ್ಲ. ಅದೂ ಯಾವ ಟೇಮಿನಾಗೆ ಮನಸಿಗೆ ಬಂತೋ, ಬರೀ ನುಕ್ಸಾನು.(ಲಾಸು) ಮನೇಗೆಂತ ಏನೂ ಸಾಮಾನಿರ್ಲಿಲ್ಲ.‌ ಒಂದು ಟೇಪ್ ರೆಕಾರ್ಡರ್ ಇದ್ದಿದ್ದು ಬಿಟ್ರೆ ಏನೂ ಇರಲಿಲ್ಲ. ಆದ್ರೂ ನಾವು ತುಂಬಾ ಖುಷಿಯಾಗಿದ್ವಿ. ಅಪ್ಪನೂ ಅಷ್ಟೇ. ಹೋಯ್ತು ಅಂತ ಅಂದುಕೊಳ್ತಾನೆ ಇರಲಿಲ್ಲ. ಯಾರ ಹಣೇಲಿ ಬರ್ದಿರುತ್ತೋ ಅವ್ರೇ ತಿಂತಾರೆ ಅಂತಿದ್ರು.