ಅಲ್ಲಿಂದ ಇಳಿದು ಬಂದು ಕಟ್ಟಡದ ಮುಂದಿನ ಪ್ರಾಂಗಣದಲ್ಲಿ ನಿಂತುಕೊಂಡು ಅವಳಿ ಗೋಪುರಗಳನ್ನೇ ನೋಡತೊಡಗಿದೆವು. ಒಂದು ರೀತಿಯಲ್ಲಿ ತವರು/ಉಕ್ಕಿನ ಬಣ್ಣಹೊಂದಿರುವ ಕಟ್ಟಡದ ಮೇಲೆ ಚಂದ್ರನು ನಗುತ್ತಿದ್ದರೂ ಕಟ್ಟಡದ ಬೆಳಕಿನ ಮುಂದೆ ಅವನ ಮುಖ ಮಂಕಾದಂತೆ ಕಾಣಿಸುತ್ತಿತ್ತು. ಸುಮಾರು ಹೊತ್ತು ನಾವು ಆ ಕಟ್ಟಡದ ಕಡೆಗೆ ನೋಡುತ್ತಲೆ ನಿಂತಿದ್ದೆವು. ನಮ್ಮ ಸುತ್ತಲೂ ಮಂಗೋಲಿಯನ್ ಬಣ್ಣದ ತೆಳು ದೇಹಗಳ ಯುವ ಜೋಡಿಗಳು ಉಲ್ಲಾಸದ ಮಾತುಗಳಲ್ಲಿ ತೊಡಗಿಕೊಂಡಿದ್ದವು.
ಡಾ. ಎಂ. ವೆಂಕಟಸ್ವಾಮಿ ಮಲೇಷ್ಯಾ ಪ್ರವಾಸದ ಅನುಭವಗಳು ನಿಮ್ಮ ಓದಿಗೆ
ಒಂದು ಕಡೆ ಬಂಗಾಳ ಕೊಲ್ಲಿ, ಇನ್ನೊಂದು ಕಡೆ ಪೆಸಿಫಿಕ್ ಸಾಗರ. ಎರಡೂ ಸಾಗರಗಳಲ್ಲಿ ಎರಡು ಜೋಡಿ ಎಲೆಗಳಂತೆ ಬಿದ್ದುಕೊಂಡಿರುವ ಮಲೇಷ್ಯಾ ಬೆಂಕಿ ಕುಂಡದ ಮೇಲೆ ಬದುಕು ನಡೆಸುತ್ತಿದೆ. ಪೆಸಿಫಿಕ್ ಸಮುದ್ರದ ಬೆಂಕಿ ವಲಯವನ್ನು (ಫೈರ್ ಝೋನ್) ತನ್ನ ಸೆರಗಿನಲ್ಲಿ ಸಿಕ್ಕಿಸಿಕೊಂಡಿದೆ; ಅಂದರೆ ಈ ವಲಯ ಭೂಕಂಪನಗಳು ಮತ್ತು ಚಂಡಮಾರುತಗಳ ತವರೂರಾಗಿದೆ. ಮಲೇಷ್ಯಾ ಒಟ್ಟು 330,803 ಚ.ಕಿ.ಮೀ.ಗಳ ಭೂವಿಸ್ತೀರ್ಣ ಹೊಂದಿದ್ದು ಇದರ ಜನಸಂಖ್ಯೆ 33,200,000 (2023). 69.7% ಭೂಮಿಪುತ್ರ (57.3% ಮಲಯ ಮತ್ತು 12% ಸ್ಥಳೀಯ ಸಬಾಹ್, ಸರಹಾಕ್ ಮತ್ತು ಒರಾಂಗ್ ಅಸ್ಲಿಯ ಜನರು), 22.9% ಚೈನೀಸ್, 6.6% ಇಂಡಿಯನ್ಸ್ ಮತ್ತು 1% ಇತರರು. ಧರ್ಮಗಳ ವಿಷಯಕ್ಕೆ ಬಂದಾಗ 63.5 ಸುನ್ನಿ ಇಸ್ಲಾಮಿಗಳು, 18.7% ಬೌದ್ಧರು, 9.1% ಕ್ರಿಶ್ಚಿಯನ್ನರು 1% ಇತರರು ಮತ್ತು 1.8% ಯಾವುದೇ ಧರ್ಮ ಅಪ್ಪಿಕೊಳ್ಳದವರು ನೆಲೆಸಿದ್ದಾರೆ.
ಆಗ್ನೇಯ ಏಷ್ಯಾ ದೇಶವಾದ ಮಲೇಷ್ಯಾ ಫೆಡರಲ್ ಸಾಂವಿಧಾನಿಕ ರಾಜಪ್ರಭುತ್ವವು 13 ರಾಜ್ಯಗಳನ್ನು ಮತ್ತು ಮೂರು ಫೆಡರಲ್ ಪ್ರಾಂತ್ಯಗಳನ್ನು ಹೊಂದಿದೆ ಮತ್ತು ದಕ್ಷಿಣ ಚೀನಾ ಸಮುದ್ರದಲ್ಲಿ ಎರಡು ಪ್ರದೇಶಗಳಾಗಿ ವಿಂಗಡನೆಗೊಂಡಿದೆ: ಪೆನಿನ್ಸುಲಾರ್ ಮಲೇಷ್ಯಾ ಮತ್ತು ಬೋರ್ನಿಯೋದ ಪೂರ್ವ ಮಲೇಷ್ಯಾ. ಪೆನಿನ್ಸುಲಾರ್ ಮಲೇಷ್ಯಾ ಥೈಲ್ಯಾಂಡ್‌ನೊಂದಿಗೆ ಭೂಪ್ರದೇಶ ಮತ್ತು ಕಡಲನ್ನು; ಸಿಂಗಾಪುರ್, ವಿಯೆಟ್ನಾಂ ಮತ್ತು ಇಂಡೋನೇಷ್ಯಾದೊಂದಿಗೆ ಕಡಲ ಗಡಿಗಳನ್ನು ಹಂಚಿಕೊಂಡಿದೆ. ಪೂರ್ವ ಮಲೇಷ್ಯಾ ಬೊರ್ನಿಯೊ ಮತ್ತು ಇಂಡೋನೇಷ್ಯಾದೊಂದಿಗೆ ನೆಲ ಮತ್ತು ಕಡಲ ಗಡಿಗಳನ್ನು ಹಂಚಿಕೊಂಡಿದೆ, ಫಿಲಿಪೈನ್ಸ್ ಮತ್ತು ವಿಯೆಟ್ನಾಂ ಕೂಡ ಕಡಲ ಗಡಿಯನ್ನು ಹೊಂದಿದೆ.
ಕೌಲಾಲಂಪುರ್, ಮಲೇಷ್ಯಾ ರಾಜಧಾನಿಯಾಗಿದ್ದು ದೇಶದ ಅತಿದೊಡ್ಡ ನಗರ ಮತ್ತು ಫೆಡರಲ್ ಸರ್ಕಾರದ ಶಾಸಕಾಂಗ ಕೇಂದ್ರ ಸ್ಥಾನವಾಗಿದೆ ಮತ್ತು ಮಲೇಷ್ಯಾ ಜಗತ್ತಿನ 17 ಬಹುವೈವಿಧ್ಯಮಯ ದೇಶಗಳಲ್ಲಿ ಒಂದಾಗಿದೆ. ಮಲೇಷ್ಯಾ, ಮಲಯ ಸಾಮ್ರಾಜ್ಯಗಳಲ್ಲಿ ತನ್ನ ಮೂಲವನ್ನು ಹೊಂದಿದ್ದು 18ನೇ ಶತಮಾನದಿಂದ ಬ್ರಿಟಿಷ್ ಸಾಮ್ರಾಜ್ಯಕ್ಕೆ ಒಳಪಟ್ಟಿತ್ತು. ಜೊತೆಗೆ ಬ್ರಿಟಿಷ್ ಸ್ಟ್ರೈ ಸೆಟ್ಲಮೆಂಟ್ ಪ್ರೊಟೆಕ್ಟರೇಟ್ ಆಗಿತ್ತು. ಎರಡನೇ ವಿಶ್ವ ಮಹಾಯುದ್ಧದ ಕಾಲದಲ್ಲಿ ಬ್ರಿಟಿಷ್ ಮಲಯಾ ಮತ್ತು ಇತರ ಹತ್ತಿರದ ಬ್ರಿಟಿಷ್ ಅಮೆರಿಕನ್ ವಸಾಹತುಗಳನ್ನು ಜಪಾನ್ ಸಾಮ್ರಾಜ್ಯ ಆಕ್ರಮಿಸಿಕೊಂಡಿತು. 1946ರಲ್ಲಿ ಮಲಯನ್ ಯೂನಿಯನ್ ಆಗಿ ಏಕೀಕರಣಗೊಂಡ ನಂತರ 1948ರಲ್ಲಿ ಮಲಯಾ ಫೆಡರೇಷನ್ ಆಗಿ ಪುನಃರಚನೆಗೊಂಡಿತು. ಮಲೇಷ್ಯಾ ಕೊನೆಗೆ 1957ರಲ್ಲಿ ಸ್ವಾತಂತ್ರ್ಯವನ್ನು ಪಡೆದುಕೊಂಡಿತು. 1963ರಲ್ಲಿ ಬ್ರಿಟಿಷ್ ಕ್ರೌನ್ ವಸಾಹತುಗಳೊಂದಿಗೆ ಉತ್ತರ ಬೊರ್ನಿಯೊ, ಸರವಾಕ್ ಮತ್ತು ಸಿಂಗಾಪುರ್‌ದೊಂದಿಗೆ ಮಲೇಷ್ಯಾ ಪ್ರತ್ಯೇಕ ದೇಶವಾಯಿತು. ಆದರೆ 1965ರಲ್ಲಿ ಸಿಂಗಾಪುರವನ್ನು ಮಲಯಾ ಒಕ್ಕೂಟದಿಂದ ಹೊರಹಾಕಲಾಗಿ ಅದು ಪ್ರತ್ಯೇಕ ದೇಶವಾಯಿತು. ಮಲೇಷ್ಯಾದ ಹೊಸ ಕೈಗಾರಿಕರಣ ಆರ್ಥಿಕ ಮಾರುಕಟ್ಟೆಯನ್ನು ಹೊಂದಿದ್ದು ಆಗ್ನೇಯ ಏಷ್ಯಾದಲ್ಲಿ 5ನೇ ಮತ್ತು ವಿಶ್ವದಲ್ಲಿ 36ನೇ ಸ್ಥಾನ ಪಡೆದುಕೊಂಡಿದೆ.
ಸುಮಾರು 40 ಸಾವಿರ ವರ್ಷಗಳ ಪ್ರಾಚೀನ ಮಾನವನ ವಾಸಸ್ಥಾನ ಪುರಾವೆಗಳು ಈ ಪ್ರದೇಶಗಳಲ್ಲಿ ದೊರಕಿವೆ. ಮಲಯ ದ್ವೀಪಗಳ ಮೊದಲ ನಿವಾಸಿಗಳು ನೆಗ್ರಿಟೋಸ್ ಎಂದು ತಿಳಿಯಲಾಗಿದೆ. ನೆಗ್ರಿಟೋಸ್ ಎಂದರೆ ಪುಟ್ಟ ಕಪ್ಪು ದೇಹದ ವೈವಿಧ್ಯಮಯ ಜನಾಂಗೀಯ ಗುಂಪುಗಳು. ಈ ಪ್ರದೇಶಗಳು ಕ್ರಿ.ಪೂ.2000 ಮತ್ತು ಕ್ರಿ.ಶ.1000 ನಡುವೆ ಸಮುದ್ರಯಾನದ ಜೇಡ್/ಸಿಲ್ಕ್ ರಸ್ತೆಯಲ್ಲಿ ಭಾಗಿಯಾಗಿದ್ದವು. ಭಾರತ ಮತ್ತು ಚೀನಾದ ವ್ಯಾಪಾರಿಗಳು ಮತ್ತು ವಸಾಹತುಗಾರರು ಕ್ರಿ.ಶ. ಒಂದನೇ ಶತಮಾನಕ್ಕೆ ಮುಂಚೆಯೇ ಇಲ್ಲಿಗೆ ಆಗಮಿಸಿದ್ದರು, 2ನೇ ಮತ್ತು 3ನೇ ಶತಮಾನಗಳಲ್ಲಿ ವ್ಯಾಪಾರ ಬಂದರುಗಳು ಮತ್ತು ಕರಾವಳಿ ಪಟ್ಟಣಗಳು ಸ್ಥಾಪಿತಗೊಂಡವು.
1820ರ ಸುಮಾರಿಗೆ ಮಲಯ ಭಾಷೆಯಲ್ಲಿ `ಕೌಲಾ’ ಎಂಬುದು ಎರಡು ನದಿಗಳು ಒಟ್ಟುಗೂಡುವ ಸ್ಥಳವಾಗಿದ್ದು `ಲಂಪುರ್’ ಎಂದರೆ ಮಣ್ಣು, ಇವುಗಳಿಂದ ಕೌಲಾಲಂಪುರ ಹೆಸರು ಬಂದಿದೆ ಎನ್ನಲಾಗಿದೆ. ಈ ಪ್ರದೇಶ ತವರು (ಟಿನ್) ಉತ್ಪಾದಿಸುವ ಪ್ರಮುಖ ಬ್ರಿಟಿಷ್ ವಸಾಹತುವಾಗಿತ್ತು. ಇದಲ್ಲದೆ ಕೌಲಾಲಂಪುರ, ಗೊಂಬಾಕ್ ನದಿ ಮತ್ತು ಕ್ಲಾಂಗ್ ಪ್ರದೇಶದ ಸಂಗಮದಲ್ಲಿದ್ದು ಅದರಿಂದ ಕೌಲಾಲಂಪುರ ಹೆಸರು ಬಂದಿದೆ ಎನ್ನುವ ಮಾತೂ ಇದೆ. ಈ ತವರು ಗಣಿಗಳಲ್ಲಿ ಹೆಚ್ಚಾಗಿ ಚೀನಿಯರು ಕೆಲಸ ಮಾಡುತ್ತಿದ್ದರು. ಕಾಡಿನ ಮಧ್ಯ ಇದ್ದ ಈ ಹಳ್ಳಿಯ ಜನರು ಪದೇಪದೇ ಮಲೇರಿಯಾ ಕಾಯಿಲೆಗೆ ತುತ್ತಾಗುತ್ತಿದ್ದರು. ಆದರೂ ಆಂಪಾಂಗ್ ತವರು ಗಣಿಗಳಿಂದ ಯಶಸ್ವಿಯಾಗಿ 1859ರಲ್ಲಿ ಮೊದಲ ಬಾರಿಗೆ ತವರನ್ನು ರಫ್ತು ಮಾಡಲಾಯಿತು. ಆಗಲೆ ಆಂಪಾಂಗ್ ಹಳ್ಳಿಯ ಬಳಿ ಸುತಾನ್ ಪುಸಾ ಎಂಬಾತ ವ್ಯಾಪಾರ ಮಾಡುತ್ತಿದ್ದನು. ಲುಕಟ್‌ನ ಇಬ್ಬರು ವ್ಯಾಪಾರಿಗಳು, ಹಿಯು ಸಿವ್ ಮತ್ತು ಯಾಪ್ ಅಹ್ ಸ್ಝೆ, ಅಂಗಡಿಗಳನ್ನು ಸ್ಥಾಪಿಸಿ ತವರಿನ ಬದಲಿಗೆ ದಿನಸಿ ಸಾಮಾನುಗಳನ್ನು ಮಾರತೊಡಗಿದರು. ಮಲಯ ರಾಜರು, ಚೀನಿ ಸಮುದಾಯದ ನಾಯಕರನ್ನು ಮುಖ್ಯಸ್ಥರನ್ನಾಗಿ ನೇಮಿಸಿದರು. ಇದೇ ವೇಳೆ ಸುಮಾತ್ರಾದ ಮಿನಾಂಗ್ ಕಬೌಸ್‌ಗಳು ಈ ಪ್ರದೇಶದಲ್ಲಿ ತಂಬಾಕು ತೋಟಗಳನ್ನು ಬೆಳೆಸಿದರು.
1895ರಲ್ಲಿ ಅರ್ಧ ಕಿ.ಮೀ.ಗಳ ವಿಸ್ತರಣೆಯಲ್ಲಿದ್ದ ಹಳ್ಳಿ 1903ರ ವೇಳೆಗೆ 20 ಚ.ಕಿ.ಮೀ. ವಿಸ್ತರಣೆಗೊಂಡಿತು. 1948ರಲ್ಲಿ ಪುರಸಭೆಯಾದಾಗ ಅದು 100 ಚ.ಕಿ.ಮೀ. ವಿಸ್ತರಣೆಗೊಂಡು 1974ರಲ್ಲಿ 250 ಚ.ಕಿ.ಮೀ. ವಿಸ್ತರಣೆಗೊಂಡು ಫೆಡರಲ್ ಪ್ರಾಂತ್ಯವಾಯಿತು. ಇದೇವೇಳೆ ಕಾರು ಟೈರುಗಳ ರಬ್ಬರ್ ಉದ್ಯಮ ಅಭಿವೃದ್ಧಿ ಉತ್ಕರ್ಷಕ್ಕೆ ತಲುಪಿತು. ಚೀನಿ ಉದ್ಯಮಿಗಳು ಇದಕ್ಕೆ ಮುಖ್ಯ ಕಾರಣವಾದರು. ಹೊಸ ಕಂಪನಿಗಳು ಮತ್ತು ಕೈಗಾರಿಕೆಗಳು ಸ್ಥಾಪನೆಯಾಗುವುದರ ಜೊತೆಗೆ ಬೇರೆಡೆ ನೆಲೆಗೊಂಡಿದ್ದ ಹಲವಾರು ಕಂಪನಿಗಳು ಕೌಲಾಲಂಪುರದ ಕಡೆಗೆ ಧಾವಿಸಿ ಬಂದವು. ಎರಡನೇ ವಿಶ್ವ ಮಹಾಯುದ್ಧದಲ್ಲಿ ಜಪಾನ್ ಸೈನ್ಯ ಈ ಪಟ್ಟಣವನ್ನು ವಶಪಡಿಸಿಕೊಂಡಿತು. ಕೆಲವೇ ವಾರಗಳಲ್ಲಿ 5000 ಚೀನಿಯರನ್ನು ಕೊಂದುಹಾಕಿದರು. ಜಪಾನಿಯರು ಇದೇವೇಳೆ ಸಾವಿರಾರು ಭಾರತೀಯರನ್ನು ಹಿಡಿದುಕೊಂಡು ಬರ್ಮಾ ರೈಲ್ವೇಯಲ್ಲಿ ಕೆಲಸ ಮಾಡಲು ದೂಡಿದರು. ಕಾರ್ಖಾನೆಗಳಲ್ಲಿ ಅನೇಕ ಭಾರತೀಯರು ಸತ್ತರು. ಇದು 1945ರ ಆಗಸ್ಟ್ 15ರವರೆಗೂ ಮುಂದುವರಿದಿತ್ತು. ಅಮೆರಿಕ, ಹಿರೋಷಿಮಾ ನಾಗಸಾಕಿ ಮೇಲೆ ಬಾಂಬ್ ದಾಳಿ ನಡೆಸಿದ ನಂತರ ಈ ನರಕಯಾತನೆ ಮುಕ್ತಾಯಗೊಂಡಿತು. 1963ರಲ್ಲಿ ಮಲೇಷ್ಯಾ ರಚನೆಯಾದ ನಂತರ ಕೌಲಾಲಂಪುರ ರಾಜಧಾನಿಯಾಯಿತು. ಅದೇ ವರ್ಷ ಲೇಕ್ ಗಾರ್ಡನ್ಸ್ ಅಂಚಿನಲ್ಲಿ ಸಂಸತ್ ಸದನಗಳನ್ನು ಕಟ್ಟಲಾಯಿತು.
ಅಭಿವೃದ್ಧಿಯ ಸಂಕೇತ ಪೆಟ್ರಾನಾಸ್ ಅವಳಿ ಗೋಪುರಗಳು
ಪ್ರಸ್ತುತ ಕೌಲಾಲಂಪುರ ಸುಮಾರು 90 ಲಕ್ಷ ಜನಸಂಖ್ಯೆ ಹೊಂದಿದ್ದು ಗ್ರೇಟರ್ ಕೌಲಾಲಂಪುರವನ್ನು `ಕ್ಲಾಂಗ್ ವ್ಯಾಲಿ’ ಎಂದು ಕರೆಯಲಾಗುತ್ತದೆ. ಆಗ್ನೇಯ ಏಷ್ಯಾದಲ್ಲಿ ಸಿಂಗಾಪುರ, ಜಕಾರ್ತ, ಬ್ಯಾಂಕಾಕ್ ಮತ್ತು ಮನಿಲಾ ನಂತರದ ಅತಿದೊಡ್ಡ ವಾಣಿಜ್ಯ ನಗರವಾಗಿದೆ. ಕೌಲಾಲಂಪುರ ದೇಶದ ಸಾಂಸ್ಕೃತಿಕ, ಆರ್ಥಿಕ, ರಾಜಕೀಯ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತದೆ. ಉಭಯ ಸದನಗಳ ಸಂಸತ್ತುಗಳು ಇಲ್ಲಿ ನೆಲೆಸಿದ್ದು ಮಲೇಷ್ಯಾ ರಾಜನ ಅಧಿಕೃತ ನಿವಾಸವೂ ಇಲ್ಲೇ ಇದೆ. ಇದರ ಹೆಸರು `ಇಸ್ತಾನಾ ನೆಗರಾ’ (ರಾಷ್ಟ್ರೀಯ ಅರಮನೆ), ಮಲೇಷ್ಯಾ ದೊರೆ ಯಾಂಗ್ ಡಿ-ಪೆರ್ಟುವಾನ್ ಅಗೊಂಗ್‌ನ ಅಧಿಕೃತ ನಿವಾಸ ಇದಾಗಿದೆ. ಸಣ್ಣ ದಿಬ್ಬದ ಮೇಲೆ ವಿಶಾಲ ಉದ್ಯಾನದಲ್ಲಿ ಭವ್ಯವಾಗಿ ಕಾಣುವ ಅರಮನೆಯ ಹತ್ತಿರಕ್ಕೆ ಹೋದಾಗ ಯಾರನ್ನೂ ಹತ್ತಿರಕ್ಕೆ ಬಿಡಲಿಲ್ಲ. ಜನರು ದೂರದಿಂದಲೇ ಫೋಟೋಗಳನ್ನು ಹಿಡಿದುಕೊಳ್ಳತೊಡಗಿದರು. ದೂರದಿಂದಲೇ ಅರಮನೆಯ ಗೋಪುರಗಳು ಬಂಗಾರ ಬಣ್ಣದಿಂದ ಹೊಳೆಯುತ್ತಿದ್ದವು.
ಕೌಲಾಲಂಪುರವನ್ನು 1860ರ ದಶಕದ ಸುಮಾರಿಗೆ ಸುತ್ತಮುತ್ತಲಿನ ತವರ ಗಣಿಗಳ ಸೇವೆ ಮಾಡುವ ಪಟ್ಟಣವಾಗಿ ಅಭಿವೃದ್ಧಿಪಡಿಸಲಾಯಿತು. ಪ್ರಸ್ತುತ ಜಗತ್ತಿನ ಅತಿ ಹೆಚ್ಚು ಜನರು ಭೇಟಿ ನೀಡುವ ನಗರಗಳ ಪೈಕಿ ಕೌಲಾಲಂಪುರ 6ನೇ ಸ್ಥಾನ ಪಡೆದುಕೊಂಡಿದೆ. ಅದೇ ರೀತಿ ಜಗತ್ತಿನ ಅತಿದೊಡ್ಡ ಶಾಪಿಂಗ್ ಮಾಲುಗಳಲ್ಲಿ ಮೂರು ಮಾಲುಗಳನ್ನು ಹೊಂದಿದೆ. ಇತ್ತೀಚಿನ ದಶಕಗಳಲ್ಲಿ ಕ್ಷಿಪ್ರ ಅಭಿವೃದ್ಧಿ ಹೊಂದುತ್ತಿರುವುದರ ಜೊತೆಗೆ ಮಲೇಷ್ಯಾದ `ಪೆಟ್ರೋನಾಸ್ ಟವರ್ಸ್’ ಅವಳಿ ಗೋಪುರಗಳು ಪ್ರಸಿದ್ಧಿಯಾಗಿವೆ. ಈ ಕಟ್ಟಡ ಮಲೇಷ್ಯಾದ ಅಭಿವೃದ್ಧಿ ಸಂಕೇತವೂ ಆಗಿದೆ.
ಕೌಲಾಲಂಪುರದ ಮಧ್ಯಭಾಗದಲ್ಲಿ 1,489 ಅಡಿಗಳ ಎತ್ತರಕ್ಕೆ ಪೆಟ್ರೋನಾಸ್ ಅವಳಿ ಗೋಪುರಗಳು ನಿಂತಿವೆ. 88 ಅಂತಸ್ತುಗಳ ಈ ಗಗನಚುಂಬಿ ಗೋಪುರಗಳು 1998 ರಿಂದ 2004 ರವರೆಗೆ ಜಗತ್ತಿನ ಅತಿದೊಡ್ಡ ಎತ್ತರದ ಅವಳಿ ಗೋಪುರಗಳಾಗಿದ್ದವು. ಮಲೇಷ್ಯಾದಲ್ಲಿ ಅನೇಕ ಗಗನಚುಂಬಿ ಕಟ್ಟಡಗಳಿದ್ದು ಅವುಗಳಲ್ಲಿ 185 ಕಟ್ಟಡಗಳು 492 ಅಡಿಗಳಿಗಿಂತ ಎತ್ತರ, 67 ಕಟ್ಟಡಗಳು 656 ಅಡಿಗಳಿಗಿಂತ ಎತ್ತರ ಮತ್ತು 6 ಕಟ್ಟಡಗಳು 984 ಅಡಿಗಳಿಗಿಂತ ಎತ್ತರವಾಗಿವೆ. ಮೊದಲನೇಯದು `ಮೆರ್ಡೆಕಾ-118′, ಇದರ ಎತ್ತರ 2227 ಅಡಿಗಳು, ಎರಡನೇಯದು `ಎಕ್ಸೇಂಜ್-106′ ಇದರ ಎತ್ತರ 1488 ಅಡಿಗಳು ಮತ್ತು ಮೂರನೇಯದು `ಪೆಟ್ರೋನಾಸ್ ಗೋಪುರಗಳು’ ಇದರ ಎತ್ತರ 1482 ಅಡಿಗಳು.
ಈ ಅವಳಿ ಗೋಪುರಗಳ ರಚನೆ ಟ್ಯೂಬ್ ವಿನ್ಯಾಸದಲ್ಲಿ ಟ್ಯೂಬ್ ಆಗಿದ್ದು, ಇದನ್ನು ವಾಸ್ತುಶಿಲ್ಪಿ ಫಜ್ಲುರ್ ರೆಹಮಾನ್ ಖಾನ್ ರೂಪಿಸಿದರು. ಎಂಬತ್ತೆಂಟು ಅಂತಸ್ತುಗಳ ಗೋಪುರಗಳನ್ನು ಹೆಚ್ಚಾಗಿ ಬಲವರ್ಧಿತ ಕಾಂಕ್ರೀಟ್‌ನಿಂದ ನಿರ್ಮಿಸಲಾಗಿದೆ. ಉಕ್ಕು ಮತ್ತು ಗಾಜಿನಲ್ಲಿ ನಿರ್ಮಿಸಿರುವ ಗೋಪುರಗಳ ಮುಂಭಾಗ ಇಸ್ಲಾಮಿಕ್ ಕಲೆಯಲ್ಲಿ ಕಂಡುಬರುವ ಮಾದರಿಗಳನ್ನು ಹೋಲುವಂತೆ ವಿನ್ಯಾಸಗೊಳಿಸಲಾಗಿದ್ದು ಇದು ಮಲೇಷ್ಯಾದ ಮುಸ್ಲಿಂ ಧರ್ಮದ ಸಂಕೇತವಾಗಿದೆ. ಕಛೇರಿಗಳಿಗೆ ಸ್ಥಳಾವಕಾಶವನ್ನು ಒದಗಿಸಲು ಕಟ್ಟಡದಲ್ಲಿ ವೃತ್ತಾಕಾರದ ವಲಯಗಳನ್ನು ರಚಿಸಲಾಗಿದೆ, ಇದು ದೆಹಲಿಯ ಕುತುಬ್ ಮಿನಾರ್‌ನ ಕೆಳಗಿನ ಹಂತಗಳನ್ನು ಹೋಲುತ್ತದೆ. ಗೋಪುರಗಳನ್ನು ಅರ್ಜೆಂಟೀನಾ-ಅಮೆರಿಕನ್ ವಾಸ್ತುಶಿಲ್ಪಿ ಸೀಸರ್ ಪೆಲ್ಲಿ ವಿನ್ಯಾಸಗೊಳಿಸಿದ್ದಾರೆ. 1993ರಲ್ಲಿ ಉತ್ಖನನ ಪ್ರಾರಂಭಿಸಿ ನೆಲಮಟ್ಟದಿಂದ 200 ಅಡಿಗಳ ಆಳ ತೋಡಿ 1994 ಏಪ್ರಿಲ್ 1ರಂದು ನಿರ್ಮಾಣ ಕೆಲಸ ಆರಂಭಗೊಂಡು 1996 ಮಾರ್ಚ್ 1ರಂದು ಪೂರ್ಣಗೊಂಡಿತು. ನಂತರ ಸಿಬ್ಬಂದಿ ಮತ್ತು ಕಚೇರಿಗಳು ಶಿಫ್ಟ್ಆಗಿ 1999 ಆಗಸ್ಟ್ 31ರಂದು ಕಟ್ಟಡವನ್ನು ಅಧಿಕೃತವಾಗಿ ತೆರೆಯಲಾಯಿತು.
ಕಟ್ಟಡ ನಿರ್ಮಾಣ ಕೈಗೊಂಡಾಗ ನೆಲದ ತಳ ಶಿಥಿಲಗೊಂಡ ಸುಣ್ಣದ ಮೃದು ಶಿಲಾಬಂಡೆಗಳಿಂದ ಕೂಡಿತ್ತು. ಪರಿಣಾಮ 197 ರಿಂದ 374 ಅಡಿಗಳ ಆಳದ 104 ಕಾಂಕ್ರೀಟ್ ಸ್ತಂಭಗಳನ್ನು ನಿರ್ಮಿಸಲಾಯಿತು. ಕಾಂಕ್ರೀಟ್ ರಾಫ್ಟ್/ಪಿಲ್ಲರ್ ಅಡಿಪಾಯ ನಿರ್ಮಿಸಲು 470,000 ಚದರ ಅಡಿಗಳ ಕಾಂಕ್ರೀಟನ್ನು ಪ್ರತಿ ಗೋಪುರಕ್ಕೆ 54 ಗಂಟೆಗಳ ಕಾಲ ಸುರಿಯಲಾಯಿತು. ಪ್ರತಿ ರಾಫ್ಟ್ 15 ಅಡಿಗಳ ದಪ್ಪ ಮತ್ತು 35,800 ಟನ್ ತೂಗುತ್ತದೆ. ಕಟ್ಟಡದ ಅಡಿಪಾಯ ಮುಗಿಸಲು ಒಂದು ವರ್ಷ ತೆಗೆದುಕೊಂಡಿತು. ಎರಡು ಗೋಪುರಗಳ ನಡುವೆ 41-42ನೇ ಅಂತಸ್ತುಗಳ ಮಧ್ಯ ಸ್ಕೈಬ್ರಿಡ್ಜ್ಅನ್ನು ನಿರ್ಮಿಸಲಾಗಿದೆ. 8ನೇ ಅಂತಸ್ತಿನಿಂದ 82ನೇ ಅಂತಸ್ತಿನವರೆಗಿನ ಕೋಣೆಗಳನ್ನು ಕಛೇರಿಗಳಿಗೆ ಕೊಡಲಾಯಿತು. ಎಂಬತ್ಮೂರು (ಕೋಣೆ-1) ಮತ್ತು 86ನೇ (ವಿಶ್ರಾಂತಿ ಕೋಣೆ-2) ಅಂತಸ್ತಿನಲ್ಲಿ ವೀಕ್ಷಣಾ ಡೆಕ್‌ಗಳನ್ನು ನಿರ್ಮಿಸಲಾಯಿತು. ಎರಡೂ ಗೋಪುರಗಳಲ್ಲಿ ಒಟ್ಟು 560,000 ಚದರ ಮೀಟರುಗಳ ಸ್ಥಳವನ್ನು ನಿರ್ಮಿಸಲಾಯಿತು. ಅವಳಿ ಗೋಪುರಗಳ ಕೆಳಗೆ ಸೂರಿಯಾ ಕೆಎಲ್‌ಸಿಸಿ, ಶಾಪಿಂಗ್ ಮಾಲ್ ಮತ್ತು ಪೆಟ್ರೋನಾಸ್ ಫಿಲ್ಹಾರ್ಮೋನಿಕ್ ಆರ್ಕೆಸ್ಟ್ರಾ ಥಿಯೇಟರ್ ಕೂಡ ಇದೆ.
41-42ನೇ ಅಂತಸ್ತುಗಳ ಮಧ್ಯ ಸ್ಕೈಬ್ರಿಡ್ಜ್ ದಾಟುವಾಗ ಕಟ್ಟಡ ಅಲುಗಾಡುವ ಅನುಭವವಾಗಿ ಯಾವುದೋ ಅತ್ಯಾಧುನಿಕ ಉಕ್ಕಿನ ಗಣಿ ಸುರಂಗದಲ್ಲಿ ಹೋದಂತೆ ಭಾಸವಾಯಿತು, ಒಂದು ಹಂತದಲ್ಲಿ ಇಡೀ ಕಟ್ಟಡವೇ ಅಲುಗಾಡುವಂತೆ ಭಾಸವಾಯಿತು. ನಮ್ಮ ಗೈಡ್ ಈ ವಿಷಯವನ್ನು ಮೊದಲೇ ತಿಳಿಸಿದ್ದರಿಂದ ಸೇತುವೆ ಅಲುಗಾಡಿದರೂ ಧೈರ್ಯವಾಗಿಯೇ ಇದ್ದೆವು. ಬಲಹೀನ ಮನುಷ್ಯರು ಸ್ಕೈಬ್ರಿಡ್ಜ್ ದಾಟುವಾಗ ಖಂಡಿತ ಹೆದರಿಕೊಳ್ಳುವುದರಲ್ಲಿ ಸಂದೇಹವೇ ಇಲ್ಲ ಎನಿಸಿತು. ಇನ್ನು 83 ಮತ್ತು 86ನೇ ಅಂತಸ್ತುಗಳ ವೀಕ್ಷಣಾ ಡೆಕ್‌ಗಳಿಂದ ಸುತ್ತಲೂ ನೋಡಿದಾಗ ನಿಜವಾಗಿಯೂ ಮನುಷ್ಯನಾದವನು ಏನೆಲ್ಲ ಸೃಷ್ಟಿಸಬಲ್ಲ ಎನಿಸಿತು. ಅದೂ ಕೂಡ ನಾವು ಎತ್ತರದ ಡೆಕ್‌ಗಳಿಂದ ಕೆಳಗಿನ ನಗರವನ್ನು ನೋಡಿದಾಗ ಇಡೀ ನಗರದ ಗಗನಚುಂಬಿ ಕಟ್ಟಡಗಳು ಕುಬ್ಜವಾಗಿ ಮತ್ತು ರಸ್ತೆಗಳಲ್ಲಿ ಚಲಿಸುತ್ತಿದ್ದ ವಾಹನಗಳ ಬೆಳಕು ಯಾವುದೋ ಜಗತ್ತಿನಲ್ಲಿದ್ದಂತೆ ಭಾಸವಾಗುತ್ತಿತ್ತು. ಮನಸ್ಸಿನಲ್ಲಿ ಒಂದಷ್ಟು ಅಳುಕು ಮತ್ತು ಪುಳಕ ಒಟ್ಟಿಗೆ ಉದ್ಭವಿಸಿತ್ತು.
ಅಲ್ಲಿಂದ ಇಳಿದು ಬಂದು ಕಟ್ಟಡದ ಮುಂದಿನ ಪ್ರಾಂಗಣದಲ್ಲಿ ನಿಂತುಕೊಂಡು ಅವಳಿ ಗೋಪುರಗಳನ್ನೇ ನೋಡತೊಡಗಿದೆವು. ಒಂದು ರೀತಿಯಲ್ಲಿ ತವರು/ಉಕ್ಕಿನ ಬಣ್ಣಹೊಂದಿರುವ ಕಟ್ಟಡದ ಮೇಲೆ ಚಂದ್ರನು ನಗುತ್ತಿದ್ದರೂ ಕಟ್ಟಡದ ಬೆಳಕಿನ ಮುಂದೆ ಅವನ ಮುಖ ಮಂಕಾದಂತೆ ಕಾಣಿಸುತ್ತಿತ್ತು. ಸುಮಾರು ಹೊತ್ತು ನಾವು ಆ ಕಟ್ಟಡದ ಕಡೆಗೆ ನೋಡುತ್ತಲೆ ನಿಂತಿದ್ದೆವು. ನಮ್ಮ ಸುತ್ತಲೂ ಮಂಗೋಲಿಯನ್ ಬಣ್ಣದ ತೆಳು ದೇಹಗಳ ಯುವ ಜೋಡಿಗಳು ಉಲ್ಲಾಸದ ಮಾತುಗಳಲ್ಲಿ ತೊಡಗಿಕೊಂಡಿದ್ದವು. ಎಲ್ಲರ ಮುಖಗಳು ಆಕಾಶದ ಕಡೆಗೆ ಚಾಚಿ ನಿಂತಿದ್ದು ಆ ಅವಳಿ ಗೋಪುರಗಳು ಮತ್ತು ಚಂದ್ರನನ್ನು ತಮ್ಮತಮ್ಮ ಕ್ಯಾಮೆರಾಗಳಲ್ಲಿ ಸೆರೆಹಿಡಿಯಲು ತೊಡಗಿಕೊಂಡಿದ್ದರು. ಆದರೆ ಆ ಅವಳಿ ಗೋಪುರಗಳು ಪೂರ್ಣ ಪ್ರಮಾಣದಲ್ಲಿ ಕ್ಯಾಮೆರಾ ಕಣ್ಣುಗಳಲ್ಲಿ ಸೆರೆಯಾಗಲು ತಯಾರಿರಲಿಲ್ಲ. ಬೆಸ್ಟ್ ಎಂದರೆ ಕ್ಯಾಮೆರಾ ಉಲ್ಟಾಮಾಡಿ ಸೆಲ್ಫಿಗಳನ್ನು ಹಿಡಿದುಕೊಳ್ಳುವುದು. ಅಂತೂ ನಾವೆಲ್ಲರೂ ಒಲ್ಲದ ಮನಸ್ಸಿನಿಂದ ಆ ಅವಳಿ ಗೋಪುರಗಳನ್ನು ನೋಡುತ್ತಲೇ ಬಸ್ಸಿನ ಕಡೆಗೆ ನಡೆದೇಹೋದೆವು. ವಾಹನದಲ್ಲಿ ಕುಳಿತುಕೊಂಡು ವಾಹನ ಚಲಿಸುತ್ತಿರುವಾಗಲೂ ಆ ಗೋಪುರಗಳ ಕಡೆಗೆ ನೋಡುತ್ತಲೇ ಇದ್ದೆವು. ಭೂವಿಜ್ಞಾನಿಯಾದ ನನ್ನ ಒಳ ಮನಸ್ಸಿನಲ್ಲಿ ಭೂಕಂಪನಗಳು ಮತ್ತು ಚಂಡಮಾರುತಗಳನ್ನು ಸೆರಗಿನಲ್ಲೇ ಕಟ್ಟಿಕೊಂಡಿರುವ ಈ ವಲಯದಲ್ಲಿ ತೀವ್ರ ಭೂಕಂಪನಗಳು ಘಟಿಸಿದರೆ ಈ ಗಗನಚುಂಬಿ ಕಟ್ಟಡದ ಗತಿ ಏನಾಗುತ್ತದೆ? ಎನ್ನುವ ಪ್ರಶ್ನೆ ಹುಟ್ಟುಕೊಂಡಿತು.
ಗಣಿಯಲ್ಲಿ ನಿರ್ಮಿಸಿದ ಸನ್‌ವೇ ಲಗೂನ್ ಉದ್ಯಾನವನ
ಮಲೇಷ್ಯಾದ ಸೆಲಂಗೋರ್‌ನ ಸುಬಾಂಗ್ ಜಯದ ಸನ್‌ವೇ ನಗರದಲ್ಲಿರುವ ಈ ಮನರಂಜನಾ ಉದ್ಯಾನವನ್ನು 1993ರಲ್ಲಿ ಪ್ರಾರಂಭಿಸಲಾಯಿತು. 2010ರಲ್ಲಿ ಮೊದಲಬಾರಿಗೆ ಸರ್ಫ್ ಸಿಮ್ಯುಲೇಟರ್ ಮತ್ತು ಫ್ಲೋರೈಡರ್‌ಅನ್ನು ಸೇರಿಸಲಾಯಿತು. ನಂತರ ವಾಟರ್ ಪಾರ್ಕ್, ಅಮ್ಯೂಸ್ಮೆಂಟ್ ಪಾರ್ಕ್, ಸ್ಟ್ರೀಮ್ ಪಾರ್ಕ್-ಎಕ್ಸ್ಟ್ರೀಮ್ ಪಾರ್ಕ್, ನಿಕೆಲೋಡಿಯನ್ ಲಾಸ್ಟ್ ಲಗೂನ್ ಮತ್ತು ವೈಲ್ಡ್‌ಲೈಫ್ ಪಾರ್ಕ್ಸ್ ಅನ್ನು ಸೇರಿಸಲಾಯಿತು. ನಗರದ ಮಧ್ಯದಲ್ಲಿ ದೊಡ್ಡ ಗುಂಡಿಯಲ್ಲಿ ಈ ಉದ್ಯಾನವನ ಯಾಕಿದೆ ಎನ್ನುವ ಪ್ರಶ್ನೆ ನನ್ನನ್ನ ಕಾಡತೊಡಗಿತು. ಉದ್ಯಾನವನವನ್ನು ತೆರೆದ ಕಬ್ಬಿಣ ಅಥವಾ ವಜ್ರ ಗಣಿಗಳ ವೃತ್ತಾಕಾರ ರಸ್ತೆಗಳಲ್ಲಿ ನಿರ್ಮಿಸಿದಂತೆ ಕಾಣಿಸಿತು. ನಂತರ ತಿಳಿದ ವಿಷಯವೆಂದರೆ ನೆಲಮಟ್ಟದಿಂದ 150 ಅಡಿಗಳ ಆಳದವರೆಗಿನ ತೆರೆದ ತವರು (ಟಿನ್) ಗಣಿಗಳ 88 ಎಕರೆಗಳ ಗುಂಡಿಯಲ್ಲಿ ಈ ಉದ್ಯಾನವನವನ್ನು ನಿರ್ಮಿಸಿರುವುದಾಗಿ ತಿಳಿಯಿತು. ಈ ಗುಂಡಿಯಲ್ಲಿ ಒಂದಷ್ಟು ಮಣ್ಣುತುಂಬಿ ಮರಗಿಡಗಳನ್ನು ಬೆಳೆಸಿ ಉದ್ಯಾನವನವಾಗಿ ಅಭಿವೃದ್ಧಿ ಪಡಿಸಲಾಗಿದೆ. ಒಂದು ಪಾಳುಬಿದ್ದ ಗಣಿಯನ್ನು ಒಂದು ಆಕರ್ಷಕ ಮನೋರಂಜನಾ ಉದ್ಯಾನವನ/ಮನರಂಜನಾ ಪಾರ್ಕ್ ಮಾಡಿ ಹಣ ಮಾಡುತ್ತಿರುವುದು ನನಗಂತೂ ಆಶ್ಚರ್ಯದ ವಿಷಯವಾಗಿತ್ತು.
ನಾವೆಲ್ಲ ಪಾರ್ಕ್‌ನಲ್ಲಿ ಸಾಕಷ್ಟು ಸುತ್ತಾಡಿ ಕೊನೆಗೆ ನಮ್ಮ ಗೈಡ್ ಪ್ಯಾಕ್ ಮಾಡಿಕೊಟ್ಟಿದ್ದ ಲಂಚ್ ಪಾಕೆಟ್‌ಅನ್ನು ಒಂದು ತೆರೆದ ರೆಸ್ಟೋರೆಂಟ್ ಒಳಗೆ ಕುಳಿತುಕೊಂಡು ತಿಂದೆವು. ಅಲ್ಲೇ ಸ್ವಲ್ಪಹೊತ್ತು ಸುಧಾರಿಸಿಕೊಂಡು ಮತ್ತೆ ಒಂದಷ್ಟು ಸುತ್ತಾಡಿ ಸಾಯಂಕಾಲ ನಾಲ್ಕು ಗಂಟೆಗೆ ಹೊರಗೆ ಬಂದೆವು. ಈ ನಡುವೆ ಕೆಲವು ಜೋಡಿಗಳು ಒಂದು ಕಡೆ ಮರದ ದಿಮ್ಮಿಗಳ ಮೇಲೆ ಹಸಿರು ಹಿನ್ನೆಲೆಯಲ್ಲಿ ಕುಳಿತುಕೊಂಡು ಫೋಟೋ ಹಿಡಿಸಿಕೊಂಡವು. ನಾನೂ ಸುಶೀಲ ಅದೇ ರೀತಿ ಒಂದು ಫೋಟೊ ಹಿಡಿಸಿಕೊಂಡೆವು. ಫೋಟೋ ಹಿಡಿಯುವವನು ಸಂಕೇತ ಕೊಟ್ಟಿದ್ದೆ ಅಲ್ಲಿದ್ದ ಇನ್ನೊಬ್ಬ ಎರಡು ದೊಡ್ಡದೊಡ್ಡ ಕೊಕ್ಕುಗಳುಳ್ಳ ಬಣ್ಣಬಣ್ಣದ ಎರಡು ಹಾರ್ನ್‌ಬಿಲ್ ಹಕ್ಕಿಗಳನ್ನು ನಮ್ಮ ಭುಜಗಳ ಮೇಲೆ ಕುಳ್ಳಿರಿಸಿದ. ಕ್ಯಾಮೆರಾಮನ್ ಫೋಟೋ ಕ್ಲಿಕ್ ಮಾಡಿ ಓಕೆ ಎಂದಿದ್ದೆ ನಾವು ಎದ್ದು ಬಂದೆವು. ಹೊರಗೆ ಬಾಗಿಲಲ್ಲಿ ನಮಗೆ ಕೊಟ್ಟಿದ್ದ ರಸೀದಿಯನ್ನು ತೋರಿಸಿದಾಗ `ನಿಮಗೆ ಹಾರ್ನ್‌ಬಿಲ್ ಫೋಟೋ ಬೇಕೇ?’ ಎಂದು ಕೇಳಿದಾಗ ಸುಶೀಲ `ಬೇಕು ಬೇಕು’ ಎಂದಳು. ಐದೇ ನಿಮಿಷಗಳಲ್ಲಿ ಅಂಗಡಿಯವನು ಪೋಸ್ಟ್ ಕಾರ್ಡ್‌ಗಿಂತ ಸ್ವಲ್ಪ ದೊಡ್ಡದಾದ ಫೋಟೋ ಜೊತೆಗೆ ಪ್ಲಾಸ್ಟಿಕ್ ಪ್ರೇಮ್ ಒಂದು ಕೊಟ್ಟು 55 ರಿಂಗೆಟ್ ಕೊಡಿ ಎಂದ, 55 ರಿಂಗೆಟ್ ಎಂದರೆ ನಮ್ಮ 800 ರೂಪಾಯಿಗಳಿಗೆ ಸಮ. ಸುಶೀಲ ಮುಖ ಸಪ್ಪಗೆ ಮಾಡಿಕೊಂಡು ಹಣಕೊಟ್ಟಳು. ಬೆಂಗಳೂರಿನಲ್ಲಿ 50 ಇಲ್ಲ 100 ರೂಪಾಯಿಗಳನ್ನು ಕೊಟ್ಟಿದ್ದರೆ ಸಾಕಾಗಿತ್ತು.
ಜಗತ್ತಿನಲ್ಲಿ ಅನೇಕ ದೇಶಗಳು ದೊಡ್ಡದೊಡ್ಡ ಸ್ಮಾರಕಗಳನ್ನು, ಮನರಂಜನಾ ಉದ್ಯಾನವನಗಳನ್ನು ಮತ್ತು ವ್ಯಾಪಾರ ಮಳಿಗೆಗಳನ್ನು ನಿರ್ಮಿಸಿ ಪ್ರವಾಸಿಗರನ್ನು ತಮ್ಮ ದೇಶಗಳ ಕಡೆಗೆ ಸೆಳೆದುಕೊಂಡು ಹಣ ಮಾಡಿಕೊಳ್ಳುತ್ತಿದ್ದಾರೆ. ಆದರೆ ನಮ್ಮ ಜನರು ದೇವಸ್ಥಾನಗಳನ್ನು ನಿರ್ಮಿಸಿ ಯಾರೂ ಬರದಂತೆ ನೋಡಿಕೊಳ್ಳುತ್ತಿದ್ದಾರೆ. ಅನ್ಯಧರ್ಮದ ಜನರನ್ನು ಮತ್ತು ಹೊರದೇಶಿಗರನ್ನು ಸಹ ನಮ್ಮ ದೇವಸ್ಥಾನಗಳ ಒಳಗಡೆಗೆ ಬಿಟ್ಟುಕೊಳ್ಳುವುದಿಲ್ಲ. ಆಧುನಿಕ ಜಗತ್ತಿನಲ್ಲಿ ಇದಕ್ಕಿಂತ ವಿಪರ್ಯಾಸ ಇನ್ನೊಂದಿದೆಯೇ?
ಡಾ.ಎಂ.ವೆಂಕಟಸ್ವಾಮಿ ಮೂಲತಃ ಕೋಲಾರ ಜಿಲ್ಲೆ ಬಂಗಾರಪೇಟೆ ತಾಲ್ಲೂಕಿನ ಯರ್ರಗೊಂಡ ಬ್ಯಾಟರಾಯನಹಳ್ಳಿಯವರು. 1984ರಲ್ಲಿ ಲಕ್ನೋದಲ್ಲಿ ಭೂವಿಜ್ಞಾನಿಯಾಗಿ ಸೇರಿ, ಭಾರತೀಯ ಭೂವೈಜ್ಞಾನಿಕ ಸರ್ವೆಕ್ಷಣಾ ಇಲಾಖೆಯ (2015ರಲ್ಲಿ ನಾಗ್ಪುರದಲ್ಲಿ) ಮಹಾನಿರ್ದೇಶಕರಾಗಿ ನಿವೃತ್ತರಾಗಿದ್ದಾರೆ. ಕೆಲಕಾಲ ಕೆಜಿಎಫ್‍ನ ಎಲ್.ಐ.ಸಿ ಮತ್ತು ಮಧ್ಯಪ್ರದೇಶದ ಬಿಲಾಯ್‍ನಲ್ಲಿಯೂ ಕೆಲಸ ಮಾಡಿದ್ದಾರೆ.
3 ಕವನ ಸಂಕಲನಗಳು 3 ಪ್ರವಾಸ ಕಥೆಗಳು 2 ವೈಚಾರಿಕ ಕೃತಿಗಳು 8 ಕಾದಂಬರಿಗಳು, 8 ವಿಜ್ಞಾನ ಕೃತಿಗಳು ಮತ್ತು 2 ಇಂಗ್ಲಿಷ್ ಕೃತಿಗಳು ಸೇರಿದಂತೆ ಇವರ ಒಟ್ಟು 30 ಕೃತಿಗಳು ಪ್ರಕಟಗೊಂಡಿವೆ.