ಮಕ್ಕಳನ್ನು ಅಮೆರಿಕೆಯಲ್ಲಿ ಹೇಗೆ ಬೆಳೆಸಬೇಕು ಅನ್ನುವುದಕ್ಕೆ ಹಲವಾರು ಟಿಪ್ಸ್‌ಗಳನ್ನು ಅವತ್ತು ಅವರ ಬಳಿ ಕೇಳಿ ತಿಳಿದುಕೊಂಡೆ. ನನಗೆ ಆ ದೇಶದಲ್ಲಿ ಇರುವ ಇರಾದೆ ಇರಲಿಲ್ಲವಾದರೂ ಅಕಸ್ಮಾತ್ತಾಗಿ ಇರುವ ಪ್ರಸಂಗ ಬಂದುಬಿಟ್ಟರೆ ಎಂಬ ಭಯಕ್ಕೆ ಹಾಗೆ ಕೆಲ ವಿಷಯಗಳನ್ನು ಕೇಳಿ ಇಟ್ಟುಕೊಂಡಿದ್ದೆ! ಮುಂದೊಮ್ಮೆ ಅವರ ಮನೆಗೂ ನಮ್ಮನ್ನು ಊಟಕ್ಕೆ ಕರೆದಿದ್ದರು. ಆಗಲೂ ಕೂಡ ಅವರ ಮಗಳು ನಮ್ಮೆಲ್ಲರ ಜೊತೆಗೆ ಬೆರೆತು ಹರಟೆ ಹೊಡೆದಿದ್ದು ನಮಗೆ ತುಂಬಾ ಖುಷಿ ಕೊಟ್ಟಿತ್ತು. ನನ್ನ ಮಗಳೇನಾದರೂ ಅಮೆರಿಕೆಯಲ್ಲಿ ಬೆಳೆದರೆ ನಿಮ್ಮ ಮಗಳ ತರಹ ಬೆಳೆಯಬೇಕು ಎಂಬ ನನ್ನಆಸೆಯನ್ನು ಮುರಳಿ ಅವರ ಎದುರು ನಾನು ಹೇಳಿದ್ದೆ.
ಗುರುಪ್ರಸಾದ ಕುರ್ತಕೋಟಿ ಬರೆಯುವ “ಅಮೆರಿಕದಲ್ಲಿ ಕುರ್ತಕೋಟಿ” ಸರಣಿಯ ಇಪ್ಪತ್ತೆಂಟನೆಯ ಬರಹ

“ಏನಾದರೂ ಅನಾಹುತ ಆಗಿಬಿಟ್ಟಿದ್ರೆ” ಎಂಬ ಒಂದು ಹುಳ ಮನಸ್ಸನ್ನು ಕೊರೆಯತೊಡಗಿದರೆ ಅದರಿಂದ ಬೇಗನೆ ಹೊರಬರುವುದು ಬಲು ಕಷ್ಟ. ನಾವು ಶಾಲೆಗೆ ಹೋಗುತ್ತಿದ್ದ ಸಮಯದಲ್ಲಿ ಮೊಬೈಲ್ ಬಿಡಿ, ಸಾದಾ ಫೋನ್ ಕೂಡ ಇರಲಿಲ್ಲ. ಆಗ ಯಾರು ಎಲ್ಲೆ ಹೋದರೂ ಅವರು ಕ್ಷೇಮವಾಗಿದ್ದಾರೆ ಎಂಬ ನಂಬಿಕೆ ಇರುತ್ತಿತ್ತು. ಈಗ ಹೊಸ ತಂತ್ರಜ್ಞಾನ ಬಂದ ಮೇಲೆ ನಮ್ಮ ಆತಂಕಗಳಿಗೆ ಕೊನೆಯೇ ಇಲ್ಲ. ಮೊಬೈಲ್ ಫೋನ್ ರಿಂಗ್ ಆಗ್ತಿದೆ, ಆದರೆ ಆಸಾಮಿ ಎತ್ತುತ್ತಿಲ್ಲ ಅಂದರೂ ಚಿಂತೆ; “ಫೋನ್ ಬಂದ್ ಆಗಿದೆ” ಅಂದರೂ ಚಿಂತೆ; “ನೆಟ್ವರ್ಕ್‌ನಿಂದ ಹೊರಗೆ ಇದ್ದಾರೆ” ಅಂದರೆ ಇನ್ನೊಂದು ಬಗೆಯ ಚಿಂತೆ! ನನ್ನ ಅಪ್ಪ ಭಾರತದಿಂದ ನನ್ನ ಅಮೆರಿಕೆಯ ನಂಬರ್‌ಗೆ ಫೋನ್ ಮಾಡುತ್ತಿದ್ದರು.

ಹಾಗೆ ಮಾಡಿದಾಗ, ಯಾವುದೋ ಕಾರಣದಿಂದ ನಾನು ಅವರ ಕರೆಯನ್ನು ಸ್ವೀಕರಿಸಿಲ್ಲ ಅಂದಾಗ ಚಿಂತೆಗೆ ಒಳಗಾಗಿ ಬಿಟ್ಟುಬಿಡದೆ ಫೋನ್ ಮಾಡೋರು. ಎಷ್ಟೋ ಸಲ ಅವರು ಹಾಗೆ ಫೋನ್ ಮಾಡಿದಾಗ ನಾನು ಮೀಟಿಂಗಿನಲ್ಲಿ ಇರುತ್ತಿದ್ದೆ. ಕೂಡಲೇ ಅವರಿಗೆ ಉತ್ತರಿಸಲು ಸಾಧ್ಯ ಆಗುತ್ತಿರಲಿಲ್ಲ. ಇದರಿಂದ ಅವರು ಇನ್ನೂ ಗಾಬರಿ ಆಗುತ್ತಿದ್ದರು. ನಮ್ಮಿಂದ ಅಷ್ಟು ದೂರವಿರುತ್ತಿದ್ದ ಅವರಿಗೆ ಸಹಜವಾಗಿ ನಮ್ಮ ಬಗ್ಗೆ ಕಾಳಜಿ ಇರುತ್ತಿತ್ತು. ಹೀಗಾಗಿ ದಿನಕ್ಕೆ ಕನಿಷ್ಟ ಎರಡು ಸಲವಾದರೂ ನಾವೇ ಅವರಿಗೆ ಕರೆ ಮಾಡಲು ಶುರು ಮಾಡಿದೆವು. ನನಗೆ ಮಾಡಲು ಸಾಧ್ಯ ಆಗಿಲ್ಲವೆಂದರೂ ಆಶಾ ಅಪ್ಪನಿಗೆ ಕರೆ ಮಾಡಿ ಮಾತಾಡುತ್ತಿದ್ದಳು. ಹೀಗಾಗಿ ಅವರೂ ಕೂಡ ನಿಶ್ಚಿಂತೆಯಾಗಿ ಇರುತ್ತಿದ್ದರು. ಅಷ್ಟಾದರೂ ಒಮ್ಮೊಮ್ಮೆ ನಮ್ಮಿಬ್ಬರಿಗೂ ಕರೆ ಮಾಡಲು ಸಾಧ್ಯ ಆಗಿಲ್ಲದ ಸಂದರ್ಭಗಳಲ್ಲಿ ಮತ್ತೆ ಅಪ್ಪನ ಮಿಸ್ ಕಾಲ್‌ಗಳು ಬರಲು ಶುರು ಆಗುತ್ತಿದ್ದವು!

ಅವತ್ತು ನನ್ನ ಪರಿಸ್ಥಿತಿಯೂ ಅಪ್ಪನ ಹಾಗೆಯೇ ಆಗಿತ್ತು! ಅಪ್ಪ ಅಮ್ಮ ಯಾಕೆ ಹೀಗೆ ಮಾಡುತ್ತಾರೆ ಅಂತ ತಿಳಿಯುವುದು ನಾವು ಅಪ್ಪ ಅಮ್ಮ ಆದಾಗಲೇ ಅಲ್ಲವೇ? ಅವತ್ತು tornado ಬಂದಾಗ ಮಗಳು ಶಾಲೆಯಲ್ಲಿ ಇದ್ದವಳು ಎಲ್ಲಾದರೂ ಅದರ ಸುಳಿಗೆ ಸಿಕ್ಕಿಹಾಕಿಕೊಂಡಳೋ ಎಂಬ ಚಿಂತೆಯ ಜೊತೆಗೆ ಆಶಾನೂ ಫೋನ್ ಎತ್ತುತ್ತಿಲ್ಲ, ಅವಳಿಗೆ ಏನಾದರೂ ಆಗಿಬಿಟ್ಟಿದೆಯೇ ಎಂಬ ಕೆಟ್ಟ ಯೋಚನೆಗಳು ಒಟ್ಟಿಗೆ ನನ್ನನ್ನು ಕಾಡತೊಡಗಿದವು.

ಅಂತೂ ಮುಂದೆ ಕೆಲವೇ ನಿಮಿಷಗಳಲ್ಲಿ ಸುಂಟರಗಾಳಿಯ ಆರ್ಭಟ ಕಡಿಮೆಯಾಗಿ ನಮಗೆಲ್ಲರಿಗೂ ಮನೆಗೆ ಹೋಗಲು ಅನುಮತಿ ಕೊಟ್ಟರು. ನಾನು ಕೂಡಲೇ ಕಾರ್‌ನಲ್ಲಿ ದೌಡಾಯಿಸಿ, ಹತ್ತು ನಿಮಿಷದಲ್ಲಿ ಮನೆಯಲ್ಲಿದ್ದೆ. ಆಶಾ ಅದಾಗಲೇ ಮಗಳನ್ನು ಶಾಲೆಯಿಂದ ಕರೆದುಕೊಂಡು ಬಂದಿದ್ದನ್ನು ನೋಡಿ ನಿಟ್ಟುಸಿರು ಬಿಟ್ಟೆ. ಫೋನ್ ಯಾಕೆ ಎತ್ತಲಿಲ್ಲ ಅಂತ ಕೋಪದಿಂದಲೇ ಕೇಳಿದೆ. ಅವಳಿಗೆ ಕೂಡ ಸುಂಟರಗಾಳಿಯ ಅನುಭವ ಹೊಸದು. ಸೈರನ್ ಕೂಗುತ್ತಲೇ ಲಗುಬಗೆಯಿಂದ ಸುರಕ್ಷಿತ ಸ್ಥಳಕ್ಕೆ ಹೋದಾಗ ಫೋನ್ ಮನೆಯಲ್ಲಿಯೇ ಮರೆತು ಹೋಗಿದ್ದಳಂತೆ. ಹೀಗಾಗಿ ನಾನು ಕರೆ ಮಾಡಿದಾಗ ಅವಳಿಗೆ ಉತ್ತರಿಸಲು ಸಾಧ್ಯ ಆಗಿರಲಿಲ್ಲ. ಒಟ್ಟಿನಲ್ಲಿ ಅವತ್ತು ಮೂವರೂ ಬೇರೆ ಬೇರೆ ಕಡೆಗೆ ಇದ್ದರೂ ಸುರಕ್ಷಿತವಾಗಿ ಇದ್ದೆವಲ್ಲ ಅಂತ ಖುಷಿಯಾಗಿತ್ತು. ನಡಿ ಇವತ್ತು ಪಾರ್ಟಿ ಮಾಡೋಣ ಅಂದೆ. ಆಶಾ ಕೆಂಗಣ್ಣು ಬಿಟ್ಟಳು! ನಾವು ಅಮೆರಿಕೆಯಲ್ಲಿ ಮಾಡುವ ಪಾರ್ಟಿಗಳು ಬರಿ ಚಹಾ ಕುಡಿಯುವುದು ಆಗಿರಲಿಲ್ಲವಲ್ಲ! ಒಟ್ಟಿನಲ್ಲಿ ಗುಂಡು ಹೊಡೆಯಲು ಗಂಡಿಗೆ ಒಂದು ನೆಪ ಬೇಕು! ಕಾಡಿ ಬೇಡಿ ಒಂದೆರಡು ಟಿನ್ ಬಿಯರ್ ಕುಡಿಯಲು ಪರವಾನಿಗೆ ಸಿಕ್ಕಿತಾದರೂ ಮನೆಯಲ್ಲಿ ಇದ್ದ ಸಂಗ್ರಹ ಖಾಲಿಯಾಗಿತ್ತು. ಒಮ್ಮೆ ಕುಡಿಯಬೇಕು ಅಂತ ನಿರ್ಧಾರ ಮಾಡಿದ ಮೇಲೆ ಅದು ಇಲ್ಲ ಅಂದರೆ ಎಷ್ಟೊಂದು ಕಸಿವಿಸಿ ಆಗುತ್ತೆ. ಕೂಡಲೇ ನನ್ನ ಪ್ಲಾನ್ B ತಯಾರಿತ್ತು. ನಡಿ ಮಂಜುನ ಮನಿಗೆ ಹೋಗಿ ಬರೋಣ ಅಂದೆ. ಮಂಜು ಅಲ್ಲಿ ಇರುವಷ್ಟೂ ದಿವಸ ನನಗೆ ತುಂಬಾ ಆಪ್ತನಾಗಿದ್ದ. ಅವನ ಮನೆಗೆ ಬಲು ಸಲಿಗೆಯಿಂದ ಹೋಗಿ ಗಂಟೆಗಟ್ಟಲೆ ಹರಟೆ ಹೊಡೆದು, ಊಟ ಮಾಡಿ ಬರುವಷ್ಟು ನಾವಿಬ್ಬರೂ ಒಬ್ಬರನ್ನೊಬ್ಬರು ಹಚ್ಚಿಕೊಂಡಿದ್ದೆವು. ಅವನ ಮನೆಯಲ್ಲಿ ಯಾವಾಗಲೂ ಸ್ಟಾಕ್ ಕೂಡ ಇರುತ್ತಿತ್ತು. ಅವನ ಮನೆ ಕೂಡ ಹತ್ತಿರದಲ್ಲೇ ಇತ್ತು. ಅವನ ಹೆಂಡತಿ ಮಗಳು ಕೂಡ ಆಶಾ ಹಾಗೂ ಪರಿಧಿಯನ್ನು ತುಂಬಾ ಹಚ್ಚಿಕೊಂಡಿದ್ದರು. ಹೀಗಾಗಿ ಅವನ ಮನೆಗೆ ಹೋಗುವ ವಿಷಯದಲ್ಲಿ ಆಶಾಳಿಗೆ ಯಾವುದೇ ತಕರಾರು ಇರಲಿಲ್ಲ. ಆಗಾಗ ಕುಡಿಯುವ ವಿಷಯದಲ್ಲಿ ಆಕ್ಷೇಪ ಮಾಡುತ್ತಿದ್ದಳಾದರೂ ಕೆಲವು ಸಲ ಹೀಗೆ ಬಿಟ್ಟುಬಿಡುತ್ತಿದ್ದಳು! ಅವತ್ತೂ ಕೂಡ ಅವನ ಮನೆಯಲ್ಲಿ ಹರಟೆ ಹೊಡೆದು ಮುಗಿಸುವ ಹೊತ್ತಿಗೆ ನಡುರಾತ್ರಿ ಆಗಿತ್ತು. ಮರುದಿನ ವಾರಾಂತ್ಯ ಆಗಿದ್ದರಿಂದ ಅಲ್ಲಿಯೇ ಮಲಗಿದೆವು. “ಇವತ್ತೂ ಇಲ್ಲೆ ಇರಿ ಗುರಣ್ಣ” ಅಂತ ಮಂಜು ಪ್ರೀತಿಯಿಂದ ಒತ್ತಾಯಿಸಿದನಾದರೂ ನಾವು ವಾಪಸ್ಸು ಮನೆಗೆ ಬಂದೆವು. ಯಾಕೆಂದರೆ ಅವತ್ತು ಒಬ್ಬರನ್ನು ಮನೆಗೆ ಊಟಕ್ಕೆ ಕರೆದಿದ್ದೆವು.

ಅಲ್ಲಿ ಇರುವವರೆಗೆ ಅವಕಾಶ ಸಿಕ್ಕಾಗಲೆಲ್ಲ ಒಂದು ಕುಟುಂಬದವರನ್ನು ಅಥವಾ ಒಟ್ಟಿಗೆ ಒಂದಿಷ್ಟು ಜನರನ್ನು ಊಟಕ್ಕೆ ಕರೆಯುತ್ತಿದ್ದೆವು. ತುಂಬಾ ಖುಷಿಯಿಂದಲೇ ಓಮಾಹಾದ ಕನ್ನಡಿಗರು ನಮ್ಮ ಆಹ್ವಾನ ಸ್ವೀಕರಿಸಿ ನಮ್ಮ ಮನೆಗೆ ಊಟಕ್ಕೆ ಬರುತ್ತಿದ್ದರು. ಆಶಾ ಕೂಡ ಖುಷಿಯಿಂದಲೇ ತರತರಹದ ಭಕ್ಷ್ಯಗಳನ್ನು ಮಾಡಿ ಹಾಕುತ್ತಿದ್ದಳು. ನಾನೂ ಕೂಡ ಖುಷಿಯಿಂದಲೇ ಅವಳು ಮಾಡಿದ್ದನ್ನು ತಿಂದು ತೇಗುತ್ತಿದ್ದೆ! ಇದೆಲ್ಲದ್ದರ ಜತೆಗೆ ಹಲವು ವರ್ಷಗಳಿಂದ ಅಲ್ಲಿ ವಾಸವಿದ್ದ ಭಾರತೀಯರ ಜನಜೀವನದ ಸವಿ ಕೂಡ ನಮಗೆ ದಕ್ಕುತ್ತಿತ್ತು.

ಅವತ್ತು ನಮ್ಮ ಮನೆಗೆ ಊಟಕ್ಕೆ ಬಂದಿದ್ದ ಕನ್ನಡದ ಅತಿಥಿಗಳು ಮುರಳಿ ಹಾಗೂ ಅವರ ಪತ್ನಿ. ಅವರು ಅಮೆರಿಕೆಗೆ ಬಂದು ಈಗಾಗಲೇ ತುಂಬಾ ವರ್ಷಗಳಾಗಿದ್ದವು. ಅವರಿಗೂ ಒಬ್ಬಳು ಮಗಳು ಇದ್ದಳು. ಅವಳಾಗಲೇ ಹೈ ಸ್ಕೂಲ್‌ಗೆ ಹೋಗುತ್ತಿದ್ದಳು. ಹದಿಹರೆಯದ ಮಕ್ಕಳನ್ನು ಅಮೆರಿಕೆಯಂತಹ ದೇಶದಲ್ಲಿ ಬೆಳೆಸುವುದು ಹೇಗೆ ಎಂಬುದನ್ನು ಅವರನ್ನು ನೋಡಿ ಕಲಿಯಬೇಕು! ಭಾರತೀಯ ಸಂಸ್ಕೃತಿಯ ಹಿನ್ನೆಲೆಯಲ್ಲಿ ಬೆಳೆದಂತಹ ನಮ್ಮಂತಹ ಪೋಷಕರಿಗೆ ಅದೊಂದು ದೊಡ್ಡ ಸವಾಲು. ನಾವೇ ಈಗಾಗಲೇ ಅರ್ಧಂಬರ್ಧ ಭಾರತೀಯರಾಗಿದ್ದು ಮಕ್ಕಳಿಗೆ ಹಾಗಿರು ಹೀಗಿರು ಅಂತ ಹೇಳುವುದು ತಂತಿಯ ಮೇಲೆ ನಡೆದಷ್ಟೇ ದೊಡ್ಡ ಸರ್ಕಸ್! ಅಲ್ಲಿನ ಹೊಡೆಯುವುದು ಇರಲಿ, ಸ್ವಲ್ಪ ಬೈದರೂ ಕೂಡ ಮಕ್ಕಳು ಮನೆಗೆ ಪೊಲೀಸರನ್ನೆ ಕರೆಸಿಬಿಡುತ್ತಾರೆ. ಅಂತಹ ವಾತಾವರಣದಲ್ಲಿ ಅವರು ತಮ್ಮ ಮಗಳನ್ನು ತುಂಬಾ ಚೆನ್ನಾಗಿ ಬೆಳೆಸಿದ್ದರು. ಅಪ್ಪನ ಸ್ನೇಹಿತರು ಬಂದಾಗ ಅವರ ಹಾಗೂ ಅವರ ಮಕ್ಕಳ ಜೊತೆಗೆ ಚೆನ್ನಾಗಿ ಮಾತಾಡುತ್ತಿದ್ದಳು. ಅಲ್ಲಿನ ಮನೆಗಳಲ್ಲಿ ಅವಳಂತೆ ಇದ್ದ ಮಕ್ಕಳನ್ನು ನೋಡಿದ್ದು ತುಂಬಾ ಕಡಿಮೆ. ಅವರು ಅವಳಿಗೆ ಬೇಕಾದ ಸ್ವಾತಂತ್ರ್ಯವನ್ನು ಕೊಡುವುದರ ಜೊತೆಗೆ ತಮ್ಮ ನಿರೀಕ್ಷೆಗಳನ್ನೂ ಅವಳಿಗೆ ಮನವರಿಕೆ ಮಾಡಿಕೊಟ್ಟಿದ್ದರು. ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಅವಳು ಭಾರತೀಯ ಸಾಂಪ್ರದಾಯಿಕ ಉಡುಗೆ ತೊಟ್ಟು ಭಾಗವಹಿಸುತ್ತಿದ್ದಳು. ಸಹಜವಾಗಿ ಎಲ್ಲರೊಂದಿಗೆ ಬೆರೆಯುತ್ತಿದ್ದಳು. ಕರ್ನಾಟಕ ಸಂಗೀತವನ್ನು ಕಲಿಯುತ್ತಿದ್ದಳು, ಚೆಂದವಾಗಿ ವಯೋಲೀನ್‌ನಂತೆಯೇ ಕಾಣುತ್ತಿದ್ದ ಚಲೋಹ (Cello) ಎಂಬ ವಾದ್ಯವೊಂದನ್ನು ಕೂಡ ನುಡಿಸುತ್ತಿದ್ದಳು. ಅವಳು ಭಾರತೀಯ ಹಾಗೂ ಅಮೆರಿಕ ಸಂಸ್ಕೃತಿಯ ಅದ್ಭುತವಾದ ಹಾಗೂ ಸಹ್ಯವಾದ ಸಮ್ಮಿಳಿತ ಆಗಿದ್ದಳು ಅಂತ ನನ್ನ ಭಾವನೆ.

ಮಕ್ಕಳನ್ನು ಅಮೆರಿಕೆಯಲ್ಲಿ ಹೇಗೆ ಬೆಳೆಸಬೇಕು ಅನ್ನುವುದಕ್ಕೆ ಹಲವಾರು ಟಿಪ್ಸ್‌ಗಳನ್ನು ಅವತ್ತು ಅವರ ಬಳಿ ಕೇಳಿ ತಿಳಿದುಕೊಂಡೆ. ನನಗೆ ಆ ದೇಶದಲ್ಲಿ ಇರುವ ಇರಾದೆ ಇರಲಿಲ್ಲವಾದರೂ ಅಕಸ್ಮಾತ್ತಾಗಿ ಇರುವ ಪ್ರಸಂಗ ಬಂದುಬಿಟ್ಟರೆ ಎಂಬ ಭಯಕ್ಕೆ ಹಾಗೆ ಕೆಲ ವಿಷಯಗಳನ್ನು ಕೇಳಿ ಇಟ್ಟುಕೊಂಡಿದ್ದೆ! ಮುಂದೊಮ್ಮೆ ಅವರ ಮನೆಗೂ ನಮ್ಮನ್ನು ಊಟಕ್ಕೆ ಕರೆದಿದ್ದರು. ಆಗಲೂ ಕೂಡ ಅವರ ಮಗಳು ನಮ್ಮೆಲ್ಲರ ಜೊತೆಗೆ ಬೆರೆತು ಹರಟೆ ಹೊಡೆದಿದ್ದು ನಮಗೆ ತುಂಬಾ ಖುಷಿ ಕೊಟ್ಟಿತ್ತು. ನನ್ನ ಮಗಳೇನಾದರೂ ಅಮೆರಿಕೆಯಲ್ಲಿ ಬೆಳೆದರೆ ನಿಮ್ಮ ಮಗಳ ತರಹ ಬೆಳೆಯಬೇಕು ಎಂಬ ನನ್ನಆಸೆಯನ್ನು ಮುರಳಿ ಅವರ ಎದುರು ನಾನು ಹೇಳಿದ್ದೆ.

ನಾವು ತುಂಬಾ ಸಲ ಪೂರ್ವಗ್ರಹ ಪೀಡಿತರಾಗಿರುತ್ತೇವೆ. ಅಮೆರಿಕೆ ಅಂದರೆ ಹೀಗೆ, ಅಲ್ಲಿನ ಮಕ್ಕಳು ಹಾಗೆ, ದೊಡ್ಡವರು ಹೀಗೆ.. ಅಂತೇನೇನೋ ತಪ್ಪು ಗ್ರಹಿಕೆಗಳು ಇದ್ದೆ ಇರುತ್ತವೆ. ಅಂತಹ ತಪ್ಪು ಕಲ್ಪನೆಗಳು ಒಳ್ಳೆಯದರ ಬಗ್ಗೆಯೂ ಅಥವಾ ಕೆಟ್ಟದರ ಬಗ್ಗೆಯೂ ಇದ್ದೀತು. ಅಲ್ಲಿಗೆ ಹೋಗಿ ಇದ್ದು ಅಲ್ಲಿನವರ ಜೊತೆಗೆ ಒಡನಾಟ ಮಾಡಿದಾಗಲೇ ನಮ್ಮ ಮನಸ್ಸಿನಿಂದ ಆ ಪರದೆಯನ್ನು ಸರಿಸಬಹುದು. ಹಾಗೆ ನನಗಿದ್ದ ಇನ್ನೊಂದು ಕಲ್ಪನೆ, ಅಮೆರಿಕನ್ನರು ಯಾರೊಂದಿಗೂ ಅಷ್ಟು ಸುಲಭವಾಗಿ ಬೆರೆಯಲಿಕ್ಕಿಲ್ಲ ಎಂಬುದಾಗಿತ್ತು. ಅದನ್ನು ಪರೀಕ್ಷಿಸಲೋ ಎಂಬಂತೆ ನನ್ನ ಮ್ಯಾನೇಜರ್ ಆಗಿದ್ದ ರಾನ್‌ನನ್ನು ಒಮ್ಮೆ ಮನೆಗೆ ಊಟಕ್ಕೆ ಕರೆಯೋಣವೆ ಅಂತ ಆಶಾಳಿಗೆ ಕೇಳಿದೆ. ಅವಳೂ ಹೂಂ ಅಂದಳು. ರಾನ್‌ಗೆ ಹೇಳಿದಾಗ ಅವನೂ ಬರುತ್ತೇವೆ ಅಂತ ಹೇಳಿದ. ತನ್ನ ಹೆಂಡತಿ ಜಿನಾಳನ್ನು ಕರೆದುಕೊಂಡು ಒಂದು ಸಂಜೆ ಹೇಳಿದ ಸಮಯಕ್ಕೆ ಸರಿಯಾಗಿ ಬಂದೇಬಿಟ್ಟ!

ಅವರು ನಮ್ಮ ಭಾರತೀಯ ಆಹಾರವನ್ನು ಇಷ್ಟಪಡುತ್ತಾರೋ ಇಲ್ಲವೋ ಎಂಬ ಹಿಂಜರಿಕೆಯೊಂದಿಗೆ ಮಾಡಿದ್ದ ಹಲವು ಪದಾರ್ಥಗಳನ್ನು ಅವರಿಬ್ಬರೂ ಇಷ್ಟ ಪಟ್ಟು ತಿಂದರು. ದೋಸೆ ಅವರಿಗೆ ತುಂಬಾ ಇಷ್ಟವಾಯ್ತು. ಎಷ್ಟೋ ವರ್ಷಗಳ ಪರಿಚಯವೇನೋ ಎಂಬಂತೆ ನಮ್ಮ ಜೊತೆಗೆ ಹರಟೆ ಹೊಡೆದರು. ಅವನು ಚಿಕ್ಕವನಿದ್ದಾಗ ಅವರ ಕುಟುಂಬದವರು ಕೂಡ ಮೊದಲು ಕೂಡಿಯೇ ಇರುತ್ತಿದ್ದರಂತೆ. ಅವನ ಅಪ್ಪ ಮಾಡುತ್ತಿದ್ದ ಬ್ರೆಡ್ ತುಂಬಾ ಪ್ರಸಿದ್ಧವಾಗಿತ್ತು ಅಂತ ತನ್ನ ಗತ ವೈಭವವನ್ನು ನೆನಪಿಸಿಕೊಂಡ. ಅವನಿಗೆ ವಯಸ್ಸಿಗೆ ಬಂದ ಒಬ್ಬ ಮಗ ಹಾಗೂ ಮಗಳು ಇದ್ದರು. ಇಬ್ಬರೂ ಇವರ ಜೊತೆಗೆ ಇದ್ದರಂತೆ! ಅದನ್ನು ಕೇಳಿ, ಅಮೆರಿಕೆಯಲ್ಲಿ ಹೀಗೂ ಉಂಟೆ ಅಂತ ನಾನು ಅಚ್ಚರಿಪಟ್ಟೆ. ಮಗಳು ಕೂಡ ಕೆಲಸ ಮಾಡುತ್ತಿದ್ದಾಳೆ, ಕುಟುಂಬ ನಿರ್ವಹಣೆಗೆ ನನಗೆ ಸಹಾಯ ಮಾಡುತ್ತಾಳೆ ಅಂತ ಅವನು ಹೇಳಿದ್ದು ಕೇಳಿ ಇನ್ನೂ ವಿಚಿತ್ರ ಅನಿಸಿತ್ತು. ನಮ್ಮ ಮನೆಗೂ ಒಂದು ಸಲ ಬನ್ನಿ, ನಿಮಗೆ ಆಹ್ವಾನ ನೀಡುತ್ತೇನೆ ಅಂತಲೂ ರಾನ್ ಹೇಳಿದ. ಅವನು ಹಾಗೆಯೇ ಔಪಚಾರಿಕವಾಗಿ ಹೇಳಿರಬಹುದು ಅಂತಲೇ ನಾನು ಅಂದುಕೊಂಡೆ. ಯಾಕೆಂದರೆ ಅಮೆರಿಕನ್ನರು ನಮ್ಮ ಹಾಗೆ ತಮ್ಮ ಮನೆಗೆ ಯಾರನ್ನೂ ಕರೆಯುವುದಿಲ್ಲ ಅಂತ ಒಮ್ಮೆ ಚಂದ್ರು ಹೇಳಿದ್ದು ನೆನಪಿತ್ತು. ಅವನು ಕರೆಯಲಿ ಅಂತ ನಾವು ಬಯಸಿಯೂ ಇರಲಿಲ್ಲ. ಆದರೆ ನನಗೆ ಇನ್ನಷ್ಟು ಅಚ್ಚರಿಗೊಳಿಸಲೋ ಎಂಬಂತೆ ಮುಂದೆ ಬರುವ ಹಬ್ಬಕ್ಕೆ ತಮ್ಮ ಮನೆಗೆ ನಮ್ಮನ್ನೆಲ್ಲ ಆಹ್ವಾನಿಸಿದ್ದ ರಾನ್! ನಾನು ಹಬ್ಬ ಯಾವಾಗ ಬಂದೀತು ಅಂತ ಕಾಯುತ್ತಿದ್ದೆ. ಯಾಕೆಂದರೆ ಮೊಟ್ಟ ಮೊದಲ ಬಾರಿಗೆ ಅಮೆರಿಕಾದವರೊಬ್ಬರ ಮನೆಗೆ ಊಟಕ್ಕೆ ಹೋಗುವ, ಅವರ ಮನೆಯನ್ನು ನೋಡುವ, ಅವರೊಡನೆ ಒಡನಾಡುವ ಬಂಗಾರದಂತಹ ಅವಕಾಶ ಅದಾಗಿತ್ತು..

(ಮುಂದುವರಿಯುವುದು…)
(ಹಿಂದಿನ ಕಂತು: ಬದುಕು ಮತ್ತು ಸುಂಟರಗಾಳಿ)