ಔಟೂಂದ್ರೆ ಅಂಗೇ ಕಣ್ ಬುಟ್ಟು ನೋಡಿ, ದಿಟ್ವಾಗ್ಲೂ ಔಟೇನಾ ಎಂಗೆ ಅಂಬ್ತ ತಿಳ್ಕಂಡೇ ಕಾಲು ಪಕ್ಕುಕ್ಕೆ ಮಡಗ್ಬೇಕು. ಎದುರ್ನವೇನಾರಾ ಸುಮ್ ಸುಮ್ಕೆ ಯೋಳಿ ಕಿಸೀತಾವಾ ಅಂಬ್ತ ಮೊದ್ಲು ಅವ್ರ ಮಕ ನೋಡೀವು. ಆಮ್ಯಾಕೆ ಕಾಲು ಗೆರೆ ಮ್ಯಾಗೆ ಮಡಗೈತಾ ಅಂಬ್ತ ಕಂಡ್ಕಂಡು ಆಚೀಕ್ ಬರಾದು. ಅದೆಂತದು ಅಮ್ಮಾಟೇ ಅಂದ್ರೆ ಅದು ಆಮ್ ಐ ರೈಟ್ ಅಂಬ್ತ ಇಂಗ್ಲಿಷ್ ನಾಗೆ ಕ್ಯೋಳೋದು. ಆ ಪದ ನಮ್ ಕಿವ್ಯಾಗೆ ತಗ್ಲಾಕ್ಕೊಂಡು ಬಾಯಾಗೆ ಸಿಕ್ಕಿ ನರುಳ್ತಾ ಅಮ್ಮಾಟೇ ಆಗಿತ್ತು!!
ಸುಮಾ ಸತೀಶ್ “ರಂಗಿನ ರಾಟೆ” ಸರಣಿಯಲ್ಲಿ ಅವರ ಬಾಲ್ಯದ ಆಟಗಳನ್ನು ಕುರಿತು ಬರೆದಿದ್ದಾರೆ
ಹುಡುಗ್ರಾದಾಗ ನಮ್ ಆಟುಗ್ಳು ಬೇಜಾನ್ ಮಜಾ ಇದ್ವು. ಒಂದು ತುಂಡು ಪೇಪ್ರು, ಹಂಚಿಕಡ್ಡಿ, ಕಳ್ಳೇಬೀಜ, ಹುಣ್ಸೇ ಬೀಜ, ರಸ್ತೆ ಮ್ಯಾಗ್ಳ ಕಲ್ಲು, ಒಡ್ದಿರಾ ಬಳೇ ಚೂರು, ಬೋಕಿ ಪಿಂಚುಗ್ಳು ಗೂಡ(ಸಹ) ನಮ್ ಆಟುದ್ ಸಾಮಾನೇಯಾ. ಏಸು ಜೋಪಾನ್ವಾಗಿ ಮಡಿಕ್ಕಂತಿದ್ವಿ.
ಸಿಗ್ರೇಟ್ ಪಾಕೀಟು
ಸಿಗ್ರೇಟ್ ಪಾಕೀಟ್ ಮ್ಯಾಗ್ಳದ್ದು ರಟ್ಟು ಕತ್ತರ್ಸಿ ಇಟ್ಟುಕಮ್ತಿದ್ವಿ. ರಟ್ಟುಗಳ್ನ ಒಂದ್ರ ಬೆನ್ನಿಗೆ ಒಂದು ಜೋಡಿಸಿ ಗುಡ್ಲು, ತ್ರಿಕೋನ, ಚೌಕಾಕಾರ ಮಾಡಿ ನಿಲ್ಲುಸ್ತಿದ್ವಿ. ಒಂದ್ ಕಿತ ತುದೀಗ್ಳುದ್ನ ಮೆಲ್ಲುಕೆ ದಬ್ಬೀರೆ ದಪದಪಾಂತ ಎಲ್ಲಾ ಬಿದ್ದೋಗೋದು. ಒಂದು ಗಂಟೆ ಕುಂತು ಪಡಸಾಲೇನಾಗೆ ಒಂದಾಳುದ್ದ ಜೋಡ್ಸಾಕೆ ಒಂದು ಗಂಟೆ ತಕಂತಿದ್ವಿ. ಜೋಡ್ಸಾವಾಗ ಮಧ್ಯದಾಗೆ ಬಿದ್ದು ಬಿದ್ದು ಹೋಗ್ತಿತ್ತಲ್ಲ ಅದ್ಕೇಯಾ ಬಲ್ ಜ್ವಾಪಾನ್ವಾಗಿ ಮೆಲ್ಲುಕೆ ಜೋಡ್ಸಾದು. ಬೀಳ್ಸಾಕೆ ಮಾತ್ರ ವೊಂದೇ ಸೆಕೆಂಡು. ಆದ್ರೂ ಅದ್ರಾಗೆ ಎಂತದೋ ಕುಸಿ. ಇಬ್ರೂ ಮೂವ್ರೂ ಕೂಡಿ ಆಡ್ತಿದ್ವಿ. ಒಬ್ರ ತಾವೇ ಆಸೋಂದು ರಟ್ಟು ಎಲ್ಲಿದ್ದಾತು. ಅಲ್ಗೂ ನಾಯಂಗೆ ಬೀದ್ ಬೀದಿ ಸುತ್ಗಂಡು ಹುಡೀಕ್ಕಾ ಬತ್ತಿದ್ವಿ. ಪ್ರಾಣೇಶಪ್ಪುನ್ ಅಂಗಡೀ ತಾವ್ಕೆ, ಆದಿನಾರಾಯಣಪ್ಪುನ್ ಅಂಗ್ಡಿ ತಾವ್ಕೆ ಹೋಗಿ ಗಿಂಜಕಣಾದು(ಗೋಗರೆಯೋದು). ನಾವ್ ನಿಂತು ಗಿಂಜಾ ಆಟುಕ್ಕೆ ಅಂಗ್ಡಿ ತಾವ ನಿಂತು ಬೀಡಿ ಸಿಗ್ರೇಟು ಕಾಸೋರು ಪಾಪಾಂತ ಕೊಡೋರು. ಅವ್ರು ಬಿಸಾಕಿರೋವ್ನೂ ಆರುಸ್ಕಂತಿದ್ವಿ. ಅಂಗಡಿಯೋರೂ ಕುಸೀಲಿದ್ರೆ ಯಾಸೆಟ್ಗೆ ಹೋಗ್ಲಿ ಅಂತಾವ ಹಳೆ ಬೆಂಕಿಪಟ್ನ, ಕಾಲಿ ಸಿಗ್ರೇಟ್ ಪಾಕೀಟು ಕೊಡಾರು. ಒಂದಾ ಎಲ್ಡಾ ಮಿಕ್ಕಿದ್ರೆ ಬ್ಯಾರೇದ್ರಾಗೆ ತುರುಕಿ ಕೊಡ್ತಿದ್ರು. ಹೊಸ್ದೋ ಹಳೇದೋ ಎಲ್ಲಾ ಕೂಡಾಕ್ಕಮ್ತಿದ್ವಿ.
ಬೆಂಕಿ ಪಟ್ನದ್ ಕಾಲ್ಡಾಟ
ಇದ್ರಾಗೆ ಪಾಪರ್ ಆಟ ಆಡ್ತಿದ್ವಿ. ಬೆಂಕಿ ಪಟ್ನದ ರಟ್ಟಿನ್ ಮ್ಯಾಗೆ ಬ್ಯಾರೆ ಬ್ಯಾರೆ ಚಿತ್ರ ಇರ್ತಿತ್ತಲ್ಲ. ಅದ್ನ ಕತ್ರಿಸಿ ಕೂಡಿಕ್ಕಂತಿದ್ವಿ. ಎಲ್ಲಾರ ತಾವಿರೋ ರಟ್ಟು ಎಣಿಸಾದು. ಕಮ್ಮಿ ಯಾರ್ ತಾವ ಇರತೈತೋ ಎಲ್ರೂ ಅಷ್ಟೇ ಕಾಲ್ಡು(ರಟ್ಟು) ಹಾಕಿ ಆಟ ಸುರು ಮಾಡ್ತಿದ್ವಿ. ಒಂತರುಕ್ಕೆ ಕೇರಂ ಇದ್ದಂಗೆ. ಆಡಾದು ಬ್ಯಾರೆ ಬುಡಿ. ಎಲ್ಲಾ ಕಾಲ್ಡು ಚೆಂದಾಕಿ ಕಲ್ಸಿ(ಮಿಕ್ಸ್ ಮಾಡಿ) ಎಲ್ಲಾರ್ಗೂ ಹಂಚಾದು. ಒಬ್ಬೊಬ್ರು ಒನ್ನೊಂದು ಕಾಲ್ಡ್ನ ಹಾಕ್ಬೇಕು. ಹಾಕಾವಾಗ ಮೊದ್ಲಿನೋರು ಯಾವ ಚಿತ್ರ ಕೆಳೀಕ್ಕೆ ಬಿಟ್ಟಿರ್ತಾರೋ ಅದೇ ಚಿತ್ರವಾ ಯಾರ್ ಹಾಕ್ತಾರೋ ಅವುರ್ಗೇ ಓಸೂ ಕಾಲ್ಡು ಸಿಗ್ತಿತ್ತು. ಅಂಗಂತ ಮಧ್ಯದಾಗಿರಾ ಕಾಲ್ಡ್ನ ಹಾಕಂಗಿಲ್ಲ. ಮ್ಯಾಕೆ ಯಾವ್ದಿರ್ತತೋ ಅದ್ನೇ ಹಾಕ್ಬೇಕು. ಒನ್ನೊಂದು ಕಿತ ಅಂದಾಜು ಮಾಡ್ಕಂಡು ಎಲ್ಲಾರ್ ಕಣ್ ಕಟ್ಟಿ ಮೋಸಾನೂ ಮಾಡ್ತಿದ್ವಿ. ಆಸ್ನೂ ಬಾಚ್ಕಣಾವಾಗ ಏನ್ ಕುಸೀನೋ ಕುಸಿ. ಮೋಸ ಮಾಡಾವಾಗ ಒನ್ನೊಂದು ಕಿತ ಉಲ್ಟಾ ಹೊಡ್ದು ಪಾಪರ್ ಆಗ್ತಿದ್ದಿದ್ದೂ ದಿಟವೇಯಾ.
ಬಳೆ ಚೂರಿನ್ ಸೆಟ್ಟಾಟ
ಬಳೇ ಏನಾರಾ ಒಡ್ದೋದ್ರೆ ಅದ್ರಾಗೆ ನಾಕೋ ಆರೋ ಚೂರು ಮಾಡಿ ಮಡಿಕ್ಕಂತಿದ್ವಿ. ಒನ್ನೊಂದು ಚಿಕ್ದೂ, ದೊಡ್ದೂ ಆಗ್ತಿತ್ತು. ಆದ್ರೂ ನಡೀತಿತ್ತು. ಅವುನ್ನ ಬೆಂಕಿ ಪೆಟ್ಗ್ಯಾಗೆ ಮಡಿಕ್ಕಂತಿದ್ವಿ. ಇವಾಗ್ನಂಗೆ ಕವರ್ರು ಪವರ್ರ್ರು ಇರ್ನಿಲ್ಲ. ಒಂದೇ ಬಣ್ದವು ಇದ್ರೂ ಡಿಜೈನು ಬ್ಯಾರೇ ಇದ್ರೆ ಆತು. ನಾಕು ಜನ ಆರು ಜನ ಕೂಡಿ ಆಡಾದು. ಎಲ್ಲಾರ್ಗೂ ಸಮನಾಗಿ ಬಳೆ ಚೂರು ಹಂಚಾದು. ಹಂಚೋವ್ರು ಕಣ್ ಮುಚ್ಕಂಡು ಎಲ್ಲಾ ಕಲ್ಸಿ ಹಂಚ್ತಿದ್ರು. ಎಲ್ಲ ಬಣ್ಣದವೂ ಎಲ್ಡೊ ಮೂರೋ ಬತ್ತಿದ್ವು. ನಾಕರ ಸೆಟ್ ಆದ್ರೆ ಒಂದೇ ಬಣ್ದವು ನಾಕು ಸಿಗ್ಬೇಕು. ಆರರ ಸೆಟ್ ಆದ್ರೆ ಆರಾರು ಚೂರು ಒಂದೇ ಬಣ್ದವು ಇರ್ಬೇಕು. ಇದೂ ಇಸ್ಪೀಟು ಆಟ್ದಂಗೆ. ನಮ್ಗೆ ಬ್ಯಾಡ್ವಾದ್ದು ಬಳೆ ಚೂರ್ನ ಬಿಡಾದು. ಬೇಕಿದ್ದನ್ನ ತಕಳಾದು. ಆವಾಗ ಉಳ್ದೋರು ನಮ್ಗೆ ಯಾವ್ದು ಬೇಕೂಂತ ಅಂದಾಜು ಮಾಡ್ಕಂಡು ಆ ಬಣ್ಣದ ಚೂರ್ನ ಬಿಡ್ತಾಲೇ ಇರ್ಲಿಲ್ಲ. ಇಂಗೇ ಒಬ್ಬೊಬ್ರೂ ನಾಕು ಸೆಟ್ ಅಥವಾ ಆರು ಸೆಟ್ ಮಾಡ್ಬೇಕು. ಇಸ್ಪೀಟ್ನಂಗೆ ಒಬ್ಬರ್ದು ಮುಗುದ್ರೆ ಆಟ ನಿಲ್ತಿರ್ಲಿಲ್ಲ. ಮುಂದ್ವರೀತಿತ್ತು. ಕೊನೀಗೆ ಯಾರಾನಾ ಒಬ್ರೇ ಸೋಲ್ತಿದ್ರು. ಯಾರ್ದಾನಾ ಮನೀಯಾಗೆ ಸೇರ್ಕಂಡು ಆಡ್ತಿದ್ವಿ. ತುಂಬಾ ಚೆಂದಾಕಿರಾ ಡಿಜೈನ್ ಆದ್ರೆ ಆಟುಕ್ಕೆ ಬೇಕೂಂತ್ಲೇ ಒನ್ನೊಂದು ಕಿತ ಬಳೆ ಒಡೀತಿದ್ದಿದ್ದೂ ನಿಜ್ವೇ. ಒಂದು ಬಳೆ ಆದ್ರೆ ಮಸ್ತ್ ಆಗ್ತಿತ್ತು.
ಹುಣ್ಸೇ ಪಿತ್ತ
ಹುಣ್ಸೇ ಪಿತ್ತ ಕಲೇ ಹಾಕಾದ್ರಾಗೆ ಪೈಪೋಟಿ. ಸ್ಯಾನೆ ಆಟ್ಗುಳು ಆಡಾಕೆ ಬ್ಯಾಕಿತ್ತು. ಹುಣ್ಸೇ ಹಣ್ಣು ಬಡ್ದಾಗ ಪಿತ್ತ(ಬೀಜ) ಆರ್ಸಿ ಇಟ್ಗಂತಿದ್ವಿ. ಅವುನ್ನ ಕಿಲೀನ್ ಮಾಡಿ ಬಿಸುಲ್ಗಾಕಿ ಎತ್ತಿಟ್ಗಂಡ್ರೆ ಆತು.
ಉರುಬಾಟ ಹುಣ್ಸೇ ಪಿತ್ತ ಗುಡ್ಡೆ ಮಾಡೋದು. ಮೂರು ದಪ ಜೋರಾಗಿ ಬಾಯಿಂದ ಉರುಬೋದು. ಗುಡ್ಡೆಗ್ಳಿಂದ ಸ್ಯಾನೆ ಬೀಜ ಆಚೆ ಚೆದ್ರುದ್ರೆ ನಾವು ಬದುಕ್ಕಂಡ್ವಿ. ಚೆದುರಿದ್ ಬೀಜ್ಗ್ಳ ಇನ್ನೊಂದು ಬೀಜುಕ್ಕೆ ತಗುಲ್ದಂಗೆ ಈಚಿಕ್ ಎಳೀಬೇಕು. ಏಸು ಬೀಜ ಎಳೀತಾರೋ ಆಸೂ ಅವುರ್ದೇ. ಅಕಸ್ಮಾತ್ ಬ್ಯಾರೆಹ್ ಬೀಜುಕ್ಕೆ ತಗುಲ್ತೋ ಸೋತಂಗೆ. ತಿರ್ಗಾ ಎದ್ರಿಗಿರೋರ್ ಸರ್ದಿ. ಅವ್ರು ಉರುಬ್ತಿದ್ರು. ಇದು ಒಂತರಾ ಆಟವಾದ್ರೆ ಇನ್ನೊಂದು ಗುರಿ ಇಟ್ಟಾಡೋ ಆಟ.
ಉದ್ದನೆ ಉಗ್ರು ಕೆಲ್ಸುಕ್ಕೆ ಬತ್ತಿತ್ತು
ಈ ಆಟ್ದಾಗೂ ಪಿತ್ತ ಗುಡ್ಡೆ ಹಾಕಿ ಉರುಬೋದು. ಆದ್ರೆ ಎಲ್ಡು ಬೀಜ್ವ ಒಂದುಕ್ಕೊಂದು ಗುರಿ ಇಕ್ಕಿ ಹೊಡೀಬೇಕು. ತಗುಲುದ್ರೆ ಎರಡೂ ಬೀಜ ನಮ್ದೇ. ತಗುಲ್ದಿದ್ರೆ, ಎಲ್ಡೆಲ್ಡು ಬೀಜುಕ್ಕೆ ತಗ್ಲೀರೆ ಅಥ್ವಾ ಗುರಿ ಇಕ್ಕಿರಾ ಬೀಜ್ವಲ್ದೆ ಬ್ಯಾರೆ ಬೀಜುಕ್ಕೆ ತಗುಲಿದ್ರೆ ಸೋತಂಗೆ. ಎಲ್ಡೂ ಬೀಜದ್ ಮಧ್ಯೆ ಬೆಟ್ಟಾಗೆ ಗೆರೆ ಎಳೀಬೇಕು. ಆಗ್ಲೂ ಬೆಟ್ಟು ಬೀಜುಕ್ಕೆ ತಗಲಂಗಿಲ್ಲ. ನಾವು ಈ ಆಟುಕ್ಕೇಂತಾನೆ ಉಗ್ರು ಬೆಳಿಸ್ಕಂತಿದ್ವಿ. ಉಗ್ರಾಗೆ ಗೀಚೋದು. ಆಗ ಬೀಜ ಅಲ್ಲಾಡಂಗಿಲ್ಲ. ಕಿರು ಬೆಳ್ಳಿನ್ ಉಗ್ರು ಬೆಳ್ಸೋದು. ಇಸ್ಕೂಲಾಗೆ ಮೇಷ್ಟ್ರು ಕಣ್ಗೆ ಕಾಣ್ದಂಗೆ ಬಚ್ಚಿಟ್ಕಂಡು ಅಡ್ಡಾಡೋದು.
ರತ್ತೋ ರತ್ತೋ
ಆಕಡೆ ಒಬ್ರು ಈಕಡೆ ಒಬ್ರು ಬಾಳೆಕಂಬದ ತರುಕ್ಕೆ ನಿಂತು ಎಲ್ಡೂ ಕೈ ಮ್ಯಾಕೆತ್ತಿ ತೋರ್ಣದ ತರ ಜೋಡಿಸೋದು. ಕೈದಸೀಲಿ ಒಬ್ಬರ ಹಿಂದ್ಲೊಬ್ಬರು ಅಂಗಿ ಹಿಡ್ಕಂಡು ಚುಕುಬುಕು ರೈಲಿನ ತರ ಬರೋರು. ಪದ್ಯ ಯೋಳ್ಕಂತಾ ಬಾಳೆ ಕಂಬ ಆಗಿರೋರು ಒಬ್ಬೊಬ್ಬರ್ನೇ ಮುಂದು ಬಿಡೋರು. ರತ್ತೋ ರತ್ತೋ ರಾವಿನ ಮಗಳೆ(ರಾಯನ ಮಗಳೆ ಅಂತ್ಲೂ ಯೋಳ್ತಿದ್ವಿ.) ಬಿತ್ತೋ ಬಿತ್ತೋ ಭೀಮನ ಮಗಳೆ ಹದಿನಾರೆಮ್ಮೆ ಕಾಸಾಲಾರೆ ಬೈಟ್ ಗುಬ್ಬಿ ಬಾಳೆ ಕಂಬ ಕುಕ್ಕರ ಬಸವಿ ಕೂರ್ ಬಸವಿ ಅಮ್ತ ಯೋಳ್ತಾ ಕೈ ಕೆಳೀಕ್ ಇಳ್ಸಿ ಒಬ್ಬುರ್ನ ಹಿಡ್ಕಣಾರು. ಎಲ್ಡೂ ಬಾಳೆಕಂಬ ಒನ್ನೊಂದು ಪಾಲ್ಟಿ(ಪಾರ್ಟಿ). ಬ್ಯಾರೆ ಹೆಸ್ರು ಇಕ್ಕಂಬಾರು. ಕನಕಾಂಬ್ರ, ಕಾಕಡಾ ಅಂತ್ಲೋ, ಮಾವಿನಕಾಯಿ ಚೇಪೇಕಾಯಿ ಅಂತ್ಲೋ, ಸಿನಿಮಾ ಹೆಸ್ರೋ ಯಾತುರ್ದೋ ಒಂದು ಮಡಿಕ್ಕಳಾರು. ಸಿಗಾಕ್ಕಂಡೋರ್ಗೆ ಕ್ಯೋಳೋರು, ನಿಂಗೆ ಕಾಕಡಾ ಬೇಕಾ ಕನಕಾಂಬ್ರ ಬೇಕಾ ಅಂಬ್ತ. ಅವ್ರು ಕಾಕಡಾ ಅಂದ್ರೆ ಕಾಕಡಾ ಹೂವಿನ್ ಪಾಲ್ಟಿ. ಇಂಗೇ ಎಲ್ರೂ ಔಟಾಗಾ ಹೊತ್ಗೆ ಆಕಡೆ ವಸೀ ಜನ ಈಕಡೆ ವಸೀ ಜನ ಸೇರ್ಕಂಡು ಎಲ್ಡು ಪಾಲ್ಟಿ ಆಗಾದು. ಅದಾದ್ ಮ್ಯಾಗೆ ನಿಜ್ವಾದ ಆಟ ಸುರು ಆಗ್ತಿತ್ತು. ಕುಂಟು ಮುಟ್ಟಿಸಾಟ ಅಥ್ವಾ ಓಡು ಮುಟ್ಟಿಸಾಟ ಆಡಾಕೆ ಎಲ್ಡು ಪಾಲ್ಟಿ ಬೇಕಲ್ಲ ಅದುಕ್ಕೆ ಈ ತರಾ ಭಾಗ ಮಾಡ್ಕಂತಿದ್ವಿ.
ಕುಂಟು ಮುಟ್ಟಿಸಾಟ
ನಾನೂ ತೆಂಗಿನ್ ಮರದಂಗೆ ಇದ್ದೆ. ಅಂಗಾಗಿ ಕುಂಟಾವಾಗ ದೂರ್ ದೂರ್ಕೆ ಹೆಜ್ಜೆ ಇಕ್ಕಾವೆ. ಆಹಾ ಬಂದು ಬುಟ್ಲು ನೋಡು ಮಾರಾಣಿ ಬಾರ್ ಕಾಲ್ ಹಾಕ್ಕಂಡು ಅಂಬ್ತ ಗೆಳತೀರು ಗೋಳು ಹಾಕ್ಕಣಾರು. ಕುಂಟಾದ್ರಾಗೆ ನನ್ ಇಬ್ರು ಗೆಣತೀರು ಗೀತಾ ಮತ್ತೆ ವನಜಾಕ್ಷೀರು ಸ್ಯಾನೆ ಜೋರಿದ್ರು. ಏಸು ಕುಂಟುದ್ರೂ ಸುಸ್ತೇ ಬೀಳ್ತಿರ್ಲಿಲ್ಲ. ಅಂಗಾಗಿ ಇಬ್ರೂ ಒನ್ನೊಂದು ಗುಂಪಿಗೆ ನಾಯಕೀರು. ನಾವೂ ರತ್ತೋ ರತ್ತೋ ಯೋಳ್ಕಂಡು ಯಾವ್ದೋ ಒಂದು ಗುಂಪಿನಾಗೆ ಸೇರ್ಕಂತಿದ್ವು. ಜೋರಾಗಿ ಕುಂಟ್ಕಂಡು ಬಂದು ನಮ್ಮುನ್ನ ಅಟ್ಟಾಡುಸ್ಕಂಡು ಹಿಡ್ಯಾರು. ಅವ್ರು ಕುಂಟೀರೂ ಸುಸ್ತಾಗ್ತಿರ್ಲಿಲ್ಲ. ನಾವು ಓಡೋಡಿ ಸುಸ್ತು ಬಿದ್ದು ಔಟಾಗ್ತಿದ್ದಿದ್ದೇ ಸ್ಯಾನೆ ದಪ.
ಕುಂಟಾ ಬಿಲ್ಲೆ- ಅಮ್ಮಾಟೇ
ಕುಂಟಾ ಬಿಲ್ಲೆ ದಿನಾ ಸಂಜೀ ಆಡಾ ಕಾಯಂ ಆಟ. ಅದುಕ್ಕೇಂತ್ಲೇ ನೋಡಾಕೆ ಚೆಂದಾಕಿರಾ ಬಚ್ಚಾ ಹುಡೀಕ್ಕಂಡು ಬರಾವೆ. ಕೆಂಪುದು ಕರೀದು ಬೋಕಿ ಪಿಂಚಿನಾಗೆ(ಮಡಕೆ ಚೂರು)ಬಿಲ್ಲೆ ತರಾ ಮಾಡ್ಕಂಡು ನೈಸಾಗಿ ಉಜ್ಜಿ ಮಡಿಕ್ಕಂತಿದ್ವಿ.
ಆಟ್ದಾಗೆ ಎಂಟು ಮನೆ ಇರ್ತಿದ್ವು. ಕೊನೇ ಎಲ್ಡು ಮನೆಗ್ಳು ಕುಂಟೋದು ನಿಲ್ಸಿ ಕಾಲು ಕೆಳೀಕ್ ಬುಟ್ಟು ಬುಟ್ಟು ಆರಾಮಾಗಿರಾಕೆ. ಎಲ್ಲಾ ಮನೆಗ್ಳಾಗೆ ಬಚ್ಚಾ ಎಸ್ದು ಕುಂಟಿ ಮುಗಿದ್ ಮ್ಯಾಗೆ ಅಂಗೈ ಮೇಲೆ ಬಚ್ಚಾ ಇಟ್ಟು, ಮುಂಗೈ ಮ್ಯಾಗಿಟ್ಕಂಡು, ಮುಂಗಾಲಿನ್ ಮ್ಯಾಲಿಟ್ಕಂಡು, ನೆತ್ತಿ ಮ್ಯಾಕಿಟ್ಟುಕಂಡು ಹೋಗ್ಬೇಕಿತ್ತು. ಆಗ ನಮ್ ಎದುರಾಳೀಗೆ ನಡ್ಕಂಡೋ ಕುಂಟ್ಕಂಡೋ ಅಂಬ್ತ ಕೇಳಿ, ಹೋಗ್ಬೇಕಿತ್ತು. ಅವ್ರು ನಮ್ ಬಗ್ಗೆ ಪಿರೂತಿ ಇರಾರಾದ್ರೆ ಯಾಸೆಟ್ಗೆ ನಡ್ಕಂಡು ಹೋಗು ಅತ್ಲಾಗೆ ಅಂಬಾರು. ಇಲ್ಲದೀರೆ ಕುಂಟ್ಕಂಡು ವಾಗಮ್ಮಿ ಅಂಬೋರೇಯಾ. ಇವೆಲ್ಲಾ ಮುಗುದ್ ಮ್ಯಾಕೆ ಬಚ್ಚಾನಾ ಮನೆಗ್ಳಾಚೆ ಮೆಲ್ಲುಕೆ ಎಸ್ದು ಕಣ್ಣು ಮುಚ್ಕಂಡು ವಾಗ್ಬೇಕಿತ್ತು. ಆಗೇನಾರ ಕಾಲು ಗೆರೆ ಮ್ಯಾಗಿಟ್ರೆ ಔಟೇಯಾ. ಕಾಲ್ನ ಮೊದುಲ್ನೇ ಮನ್ಯಾಗಿಟ್ಟು ಅಮ್ಮಾಟೇ ಅಂಬ್ತ ಕ್ಯೋಳ್‌ಬೇಕು. ಅವ್ರು ಹೂ ಅಂದ್ರೆ ಮುಂದ್ಲ ಮನೇಗೆ ಹೋಗೋದು. ಔಟೂಂದ್ರೆ ಅಂಗೇ ಕಣ್ ಬುಟ್ಟು ನೋಡಿ, ದಿಟ್ವಾಗ್ಲೂ ಔಟೇನಾ ಎಂಗೆ ಅಂಬ್ತ ತಿಳ್ಕಂಡೇ ಕಾಲು ಪಕ್ಕುಕ್ಕೆ ಮಡಗ್ಬೇಕು. ಎದುರ್ನವೇನಾರಾ ಸುಮ್ ಸುಮ್ಕೆ ಯೋಳಿ ಕಿಸೀತಾವಾ ಅಂಬ್ತ ಮೊದ್ಲು ಅವ್ರ ಮಕ ನೋಡೀವು. ಆಮ್ಯಾಕೆ ಕಾಲು ಗೆರೆ ಮ್ಯಾಗೆ ಮಡಗೈತಾ ಅಂಬ್ತ ಕಂಡ್ಕಂಡು ಆಚೀಕ್ ಬರಾದು. ಅದೆಂತದು ಅಮ್ಮಾಟೇ ಅಂದ್ರೆ ಅದು ಆಮ್ ಐ ರೈಟ್ ಅಂಬ್ತ ಇಂಗ್ಲಿಷ್ ನಾಗೆ ಕ್ಯೋಳೋದು. ಆ ಪದ ನಮ್ ಕಿವ್ಯಾಗೆ ತಗ್ಲಾಕ್ಕೊಂಡು ಬಾಯಾಗೆ ಸಿಕ್ಕಿ ನರುಳ್ತಾ ಅಮ್ಮಾಟೇ ಆಗಿತ್ತು!! ನಾವೂ ಅಮ್ಮಾಟೇನೆ ಕರೆಟ್ಟು ಅನ್ಕಾ ಬಿಟ್ಟಿದ್ವಿ. ನಾನು ಹೈಸ್ಕೂಲ್ಗೆ ತುಮಕೂರಿಗೆ ಬಂದ್ ಮ್ಯಾಗೇನೆ ಅದು ಅಮ್ಮಾಟೇ ಅಲ್ಲ, ಆಮ್ ಐ ರೈಟು ಅಂಬ್ತ ತಿಳ್ದಿದ್ದು! ಎಲ್ಲಾ ಮನೆಗ್ಳಾಗೂ ಕಾಲು ಇಕ್ಕಿ ಸರ್ಯಾಗಿದ್ರೆ ಕೊನೆ ಮನೆಯಾಗೆ ಕಣ್ಣು ಬಿಟ್ಟಿ ಬಚ್ಚಾ ಎಲ್ಲೈತೆ ನೋಡೋದು. ಅದ್ರ ಮ್ಯಾಗೇ ಕಾಲು ಇಕ್ಕಬೇಕಿತ್ತು. ಅದೇನಾರಾ ನಾವು ಎಸ್ಯಾವಾಗ ದೂರ ಬಿದ್ದಿದ್ರೆ ಅದ್ರ ಮ್ಯಾಗೆ ಎಗ್ರಾಕಾಗ್ದೆ ನೆಗುದ್ರೂ ಪಕ್ಕಕ್ಕೆ ಬೀಳ್ತಿದ್ವಿ. ತಿರ್ಗಾ ಆಡ್ಬೇಕಿತ್ತು.
ಉಪ್ಪುಪ್ಪು ಕಡ್ಡಿ, ಊದು ಕಡ್ಡಿ
ಮನೆ ಮುಂದ್ಲ ಮಣ್ಣಾಗೆ ಆಡ್ತಿದ್ವಿ. ಇಬ್ಬರು ಆಡಾ ಆಟ. ನಾಕು ಜನ್ವಿದ್ರೆ ಎಲ್ಡು ಜನ ಒಂದು ಗುಂಪು ಮಾಡ್ಕ್ಯಂಡು ಆಡೀವು. ಎದ್ರಾ ಬದ್ರಾ ಕುಂತು ಒಂದು ಕಾಲು ಮಡಚಿ, ಇನ್ನೊಂದು ಕಾಲು ಎದೂರ್ಗೆ ಚಾಚಿ ಕುಂತ್ಕಂತೀವಿ. ಎದ್ರಿರಾರೂ ಅಂಗೇ ಕುಂತ್ಕಂತಿದ್ರು. ನಾವು ಎಡಗಾಲು ಚಾಚೀರೆ ಅವ್ರೂ ಎಡಗಾಲೇ ಚಾಚೋರು. ಮಣ್ಣಾಗೆ ಒಂದು ಗುಡ್ಡೆ ಮಾಡಿ ಅದ್ನ ಉದ್ದೂಕೆ ಸವರ್ಸೋದು. ಒಂದು ಮೊಳದುದ್ದ ಮಾಡೋದು. ಅದು ಓಸುದ್ದದ ಸಣ್ಣ ಗುಡ್ಡೆ. ಅದ್ನ ಮಾಡಾವಾಗ ನಮ್ ಕೈಯಾಗ್ಳ ಅಂಚೀಕಡ್ಡೀನೋ, ಉರ್ಸಿ ಬಿಸಾಕಿರಾ ಬೆಂಕಿ ಕಡ್ಡೀನೋ ಎದುರ್ನೋರ್ಗೆ ಯಾಮಾರಿಸಿ ಅವ್ರ ಕಣ್ ಮುಂದೇನೆ ಆ ಉದ್ದಕಿರಾ ಗುಡ್ಡೆನಾಗೆ ಎಲ್ಲೋ ಒಂದು ಕಡೆ ಬಚ್ಚಿಕ್ಕಬೇಕು. ಉಪ್ಪುಪ್ಪು ಕಡ್ಡಿ, ಊದುಗಡ್ಡಿ ಉದ್ದುದ್ ಗುಡ್ಡದಾಗೆಲ್ಲೈತೆ ಎಲ್ಲೈತೆ ಅಂಬ್ತ ರಾಗ್ವಾಗಿ ಕೇಳೋದು. ಎದ್ರುನೋರು ಕಣ್ ಅಗ್ಲ ಮಾಡ್ಕಂಡು ನಾವು ಬಚ್ಚಿಕಾದ್ನ ನೋಡ್ಕಂಡು ಅಂದಾಜಿನ್ ಮ್ಯಾಗೆ ಎಲ್ಡೂ ಕೈ ಜೋಡ್ಸಿ ಟಪ್ ಅಂಬ್ತ ಮಣ್ಣಿನ ದಿಬ್ಬದ ಮ್ಯಾಗೆ ಅದುಮೋರು. ಆಸಗ್ಲ ಜಾಗ್ವ ಗೆರೆ ಎಳ್ದು ಗುರುತು ಮಾಡೀವು. ಕೈ ತೆಗ್ದು ಕಡ್ಡಿ ಅಲ್ಲೈತಾ ಅಂಬ್ತ ಹುಡುಕೋರು. ಸಿಕ್ರೆ ಅವುರ್ಗೆ ಒಂದು ಪಾಯಿಂಟು. ಸಿಗ್ದಿದ್ರೆ ನಮ್ಗೊಂದು ಪಾಯಿಂಟು. ರಾತ್ರಿ ಹೊತ್ನಾಗೆ ಉಂಡು ಆದ್ ಮ್ಯಾಗೆ ಜನ ನಮ್ ಮನಿ ಅಂಗಳದಾಗೆ ಕುಂತ್ಕಣಾರು. ನಾವೂ ಸಣ್ಣ ಹೈಕ್ಳು ಅಲ್ಲೇ ಮಣ್ಣಾಗೆ ಆಡೀವು. ನಮ್ಗೆ ನಿದ್ದೆ ಬರಾಗಂಟ ಬೀದಿ ದೀಪುದ್ ಮಿಣಿಕಿನಾಗೆ ಆಡೋದು. ಆಸೊತ್ನಲ್ಲಿ ಆಡೀರೆ ಕತ್ಲಾಗೆ ನಾವು ಬಚ್ಚಿಕ್ಕಾದೂ ಕಾಣಾಕಿಲ್ಲ. ಇಬ್ಬುರ್ಗೂ ಸಲೀಸಾಗಿ ಪಾಯಿಂಟ್ ಗೋಳು ಬರಾವು. ಆಡಾಡಿ ಬ್ಯಾಸ್ರಾದ್ರೆ ಹೋಗಿ ಮನಿಕ್ಕಳಾದು. ಹಿರೇರು ಮಾತು ಮುಗಿಯಾಗಂಟ ಅಂದ್ರೆ ಊರಿನ್ ಸುದ್ದಿ, ದೇಶುದ್ ಸುದ್ದಿ, ಪರ್ಪಂಚದ ಸುದ್ದಿ, ಎಲ್ಲಾ ಪೇಪರ್ನಾಗೆ ಬಂದಿರಾದು, ರೇಡಿಯೋನಾಗೆ ಬಂದಿರಾದು, ಕಿವಿಗ್ಳ ಮ್ಯಾಗೆ ಬಿದ್ದಿರಾದು ಎಲ್ಲಾದ್ಕೂವೆ ಉಪ್ಪು ಕಾರ ಬೆರ್ಸಿ ಮಾತಾಡ್ಕಂಡು ಎದ್ದೋಗೋರು.
ಕಳ್ಳ ಪೋಲೀಸು
ಕುಂತು ಆಡಾ ಆಟುಗ್ಳೂ ಬೇಜಾನ್ ಇದ್ವು. ಅದ್ರಾಗೆ ಇದೂ ಒಂದು. ರಪ್(ರಫ಼್) ನೋಟ್ನಾಗೆ ಎಲ್ಡು ಹಾಳೆ ಕಿತ್ರೆ ಆಯ್ತು. ಒಂದ್ರಾಗೆ ಜನ ನೋಡ್ಕಂಡು ನಾಕೋ ಆರೋ ಎಂಟೋ ಭಾಗ ಮಾಡ್ಬೇಕು. ಇನ್ನೊಂದ್ರಾಗೆ ಪಾಯಿಂಟು ಬರ್ಕಳಾದು. ರಾಜ ರಾಣಿ ಕಳ್ಳ ಪೋಲೀಸು ಕಾಯಂ ಇರ್ಬೈಕು. ನಾಕು ಜನ್ವಂತೂ ಇರ್ಲಿಕ್ಕೇ ಬೇಕು. ಆರಿದ್ರೆ ಮಂತ್ರಿ ಸೇನಾಧಿಪತಿ. ಎಂಟಿದ್ರೆ ಕಂತ್ರಿ ಸೈನಿಕ. ಕಳ್ಳುಂಗೆ ಸೊನ್ನೆ. ಕಂತ್ರೀಗೆ ನೂರು. ಸೈನಿಕುಂಗೆ ಐನೂರು. ಸೇನಾಧಿಪತಿಗೆ ಸಾವ್ರ. ಮಂತ್ರಿಗೆ ಎಲ್ಡು ಸಾವ್ರ. ರಾಣೀಗೆ ಐದ್ ಸಾವ್ರ. ರಾಜುಂಗೆ ಹತ್ ಸಾವ್ರ. ಈ ಪೋಲೀಸಪ್ಪ ಮದ್ಯದಾಗೆ ಎಂಗೆ ನುಸುಳ್ಕಂಡ ಗೊತ್ತಿಲ್ಲ. ಸೈನಿಕನೆ ಕಳ್ಳನ್ನ ಇಡೀಬೌದಿತ್ತು. ಮದ್ಯದಾಗಿರಾ ಕಂತ್ರಿ ನನ್ ಮಕ್ಳನ್ನ ನೆಪ್ಪಿನಾಗಿಟ್ಕಂಡು ಕಂತ್ರಿ ಅಂಬ್ತಾನೂ ಸೇರ್ಸಿರಾದು ಸರ್ಯೇ ಸರಿ. ಒಂದು ಪೇಜು ತುಂಬಾಗಂಟ ಆಡೀವು. ಆಮ್ಯಾಕೆ ಎಲ್ಲಾ ಲೆಕ್ಕಾಚಾರ ಮಾಡಿ ಪಸ್ಟು, ಸೆಕೆಂಡು, ತಲ್ಡು ಅಂಬ್ತ ಯೋಳಿ ಮುಗುಸ್ತಿದ್ವಿ.
ಚುಕ್ಕಿ ಆಟ
ಇದ್ನ ಎಚ್ಗೇ ಇಸ್ಕೂಲಾಗೇ ಆಡ್ತಿದ್ವು. ಒಬ್ರು ಮೇಷ್ಟ್ರು ಬರ್ದಿದ್ರೆ, ಇನ್ನೊಬ್ರು ಬಂದು ಅವ್ರು ಮಾಡಿದ್ ಪಾಠ ಓದ್ಕಳಿ ಅಂಬ್ತ ಯೋಳ್ತಿದ್ರು. ನಾವೂ ತಲೇಯಾ ಮ್ಯಾಗ್ಲಿಂದ ಕೆಳೀಕ್ಕೆ ಸುತ್ತೂರ ಆಡ್ಸಿದ್ರೆ ಅವ್ರೂ ಹೋಗೋರು. ನಾವು ರಪ್ ಬುಕ್ಕಿನಾಗೆ ಚುಕ್ಕಿ ಇಕ್ಕಿ ಸುರು ಮಾಡೀವಿ. ಗೆರೆ ಎಳ್ಕಂಬ್ತಾ ಎಳ್ಕಂಬ್ತಾ, ನಮ್‌ನಮ್ ಜಾಗ ಅಂತಾವಾ ಚೌಕ ಪೂರ್ತಿ ಮಾಡ್ಕಂಡು ಇನಿಷಿಯಲ್ಲು ಬರ್ಕಂತಿದ್ವಿ. ಇದೂ ಒಂತರುಕ್ಕೆ ದೊಡ್ಡೋರ ಆಟವೇ ಸೈ. ಬೆಳೀತಾ ಬೆಳೀತಾ ಎಲ್ಲನೂ ನಮ್ದೇಯಾ ಅಂಬ್ತ ಹೆಸ್ರು ಬರ್ಕಂಡು ಬಾಚಿ ಗುಡ್ಡೆ ಹಾಕ್ಕಣಾ ಬುದ್ದೀಗೆ ಮದ್ಲ ಮೆಟ್ಲು. ಅರೀದ ವಯಸ್ನಾಗೇ ಇದೆಲ್ಲಾ ಕಲೀತಾ ಹೋಗ್ತೀವೇನೋ. ಒನ್ನೊಂದು ಆಟ್ದಾಗೂ ಇಂತಾ ಇಸೇಸಗ್ಳು ಇದ್ದೆ ಇರ್ತವೆ. ಒಳ್ಳೆ ಪಾಠವೂ ಇರ್ತೈತೆ. ಇಂತಾವೂ ಇರ್ತವೆ. ಆಟುಗ್ಳೂ ಎಂಗೆ ಪಾಟುಗ್ಳಾಗ್ತವೆ ಅಂಬೋದು ತಿಳ್ಕಂಡ್ರೆ ಮಾತ್ರಾ ತಿಳ್ಯಾಂತದ್ದು.
ಮೇಷ್ಟ್ರು ಬಂದೇಟ್ಗೇ ಬುಕ್ಕು ಮುಚ್ಚಿಕ್ಕಿ, ಕೆಳೀಕ್ಕಿರಾ ಪಾಠದ ಬುಕ್ನ ಮ್ಯಾಕಿಟ್ಕಂಡು ಜೋರಾಗಿ ಉರು ಹೊಡ್ಯಾದು. ಒನ್ನೊಂದು ಕಿತ ಚುಕ್ಕಿ ಆಟ ಕೊನೇ ಘಟ್ದಾಗೆ ನಿಂತಿರ್ತದೆ. ಇನ್ನೇನು ಹತ್ತೋ ಇಪ್ಪತ್ತೋ ಮನೆಗ್ಳು ಬಾಕಿ ಇರ್ತವೆ. ನಮ್ಗೂ ಜೀವ ಮುಲುಮುಲು ಅಂತೈತೆ. ತಡ್ಯಾಕಾಗಾಕಿಲ್ಲ. ಮೇಷ್ಟ್ರು ಪಾಠ ಮಾಡ್ತಿದ್ರೂವೆ, ಪಾಠ ಕೇಳೋರಂಗೆ ಅವ್ರ ಮಕಾನೇ ನೋಡ್ತಾ ಮಳ್ಳೀರಂಗೆ ನಾವು ಪಕ್ಕ ಪಕ್ಕದಾಗೆ ಕುಂತು ಚುಕ್ಕಿ ಆಟ ಮುಗುಸ್ತಿದ್ವಿ.
ಚಕ್ಕಾಬಾರ
ಸಾಮಾನ್ಯವಾಗಿ ದಿನಾ ಆಡ್ತಿರ್ಲಿಲ್ಲ. ಸನಿವಾರ ಬಾನುವಾರ್ವೇ ಆಡ್ತಿದ್ದಿದ್ದು. ಇದೊಂತರಾ ನಮ್ಗೆ ಊರಿನ ಶ್ರೇಷ್ಠ ಆಟಾ ಆಗಿತ್ತು. ನಮ್ಗೆ ಸರ್ಯಾಗಿ ಬತ್ತಿರ್ಲಿಲ್ಲ. ದೊಡ್ಡೋರೂ ಸೇರ್ಕಣಾರು. ನಮ್ಮುಮ್ಮುಂಗೆ ಬೋ ಇಷ್ಟ. ಅಂಗೇ ಎಲ್ಲಾರ ಮನೆಯಾಗ್ಳ ಅಕ್ಕಂದ್ರು, ಅಣ್ಣಂದ್ರು ಸೇರ್ಕಣಾರು. ನಮ್ಮಮ್ಮನೂ ಸೇರ್ಕಂತಿತ್ತು. ನಾವು ಚಳ್ಳೆ ಪಿಳ್ಳೆಗ್ಳು ಜೋಡಿ ಆಟೇಯಾ. ಆಟ್ವೆಲ್ಲಾ ಅವುರ್ದೇ. ಚಪ್ಪಾಳೆ ಹೊಡ್ಕಂತಾ, ಕುಸೀಲಿಂದ ಕಿರ್ಚಾಡಾದಷ್ಟೆ ನಮ್ ಪಾಲ್ಗೆ. ನಾವ್ ನಾವೇ ಆಡೀರೆ ಐದು ಮನೆಗ್ಳುದ್ದು ಆಡ್ತಿದ್ವಿ. ಈ ಐನಾತಿಗ್ಳೆಲ್ಲಾ ಸೇರೀರೆ ಏಳು ಮನೇದೂ ಒಪ್ಪುತ್ತಾನೇ ಇರ್ಲಿಲ್ಲ ಅಂತೀನಿ. ಒಂಬತ್ತು ಮನೇದ್ಕೂ ಒನ್ನೊಂದ್ ಕಿತ ಊಹೂ. ಹನ್ನೊಂದು ಮನೇದು ಆಡೋರು. ಬೆಳಗ್ಗೆ ನಾಷ್ಟಾ ಮಾಡಿ ಅಡ್ಗೆ ಮಾಡ್ ಬಿಸಾಕಿ ಕುಂತ್ರೆ, ನಡು ಮದ್ಯಾನ್ನವಾದ್ರೂ ಇಲ್ಲ. ಊಟುದ್ ಟೇಮು ದಾಟಿದ್ರೂ ಇಲ್ಲ. ಅದೂ ಒಂದೇ ಆಟ್ವೇಯಾ. ಎಲ್ರೂ ಚೆಂದಾಗಿ ಆಡೋರೇಯಾ. ಅವ್ರ ಕಾಯಿ ಇವ್ರು ಒಡ್ದಾಕೋದು, ಇವ್ರುದ್ದು ಅವ್ರು. ಇಂಗೇ ಒಡ್ಕಂತಾ ಹಣ್ಣೆ ಮಾಡ್ಕಣ್ದೆ ಮುಗೀತ್ಲೇ ಇರ್ಲಿಲ್ಲ. ನಾವೂ ನೋಡಾಗಂಟ ನೋಡಿ, ಬ್ಯಾಸ್ರಾಗಿ, ಆಕುಳ್ಸಿ, ಕ್ಯಾಕುರ್ಸಿ ಥೋತ್ತೇರೀಕೆ ವಾಗತ್ಲಾಗೆ ಅನ್ ಕಂಡಿ, ಸಣ್ಣವೆಲ್ಲಾ ಎದ್ದು ಬ್ಯಾರೆ ಆಡ್ತಿದ್ವಿ. ನಮ್ದು ಮುಗಿದ್ರೂ ಅವ್ರು ಆಡ್ತಾನೇ ಇರ್ತಿದ್ರು. ಇದುಕ್ಕೆ ಒಂದು ಕಾರ್ಣ ಇತ್ತು. ದೊಡ್ಡೋರೆಲ್ಲಾ ಕವಡೇನಾಗೆ ಆಡ್ತಿದ್ರು. ಆ ಕವಡೇನಾ ಏಸು ಚೆಂದಾಗಿ ಹಿಡ್ಕಂಬಾರು ಅಂದ್ರೆ ಅಂಗೈಯಾಗೆ ಎಲ್ಲಾ ಪೇರಿಸ್ಕಣಾರು(ಜೋಡಿಸಿಕೊಳ್ಳೋದು) ಅದೂ ಕೈಯಾಗೆ ಅಲ್ಲಾಡುಸ್ಕಂಡೇ ಒಂದೇ ಸೆಕೆಂಡಿನಾಗೆ. ಒಂದು ಕವಡೇಯಾ ತೋರು ಬೆಟ್ಟು ಎಬ್ಬೆಟ್ಟಿನಾಗೆ ಇಡ್ಕಂಡು ನಿಧಾನುಕ್ಕೆ ನೆಲುದ್ ಮ್ಯಾಕಿಟ್ರೆ ಐದೂ ಆರೇಯಾ ಬೀಳ್ತಿದ್ದಿದ್ದು. ಒಂಬತ್ತು ಮನೇದಾದ್ರೆ ಏಳು ಏಂಟೇಯಾ. ಹನ್ನೊಂದು ಮನೇದಾದ್ರೆ ಒಂಬತ್ತು ಹತ್ತೇಯಾ ಬೀಳ್ತಿದ್ದಿದ್ದು. ಆಟ್ದಾಗೆ ಎಲ್ರೂ ಶಕುನಿಗ್ಳೆ. ಇನ್ನಾ ಆಟ ಮುಗ್ಯಾದೆಂಗೆ?? ನಾವೂ ಮದ್ಯಾನುದ್ದು ಉಂಡು ಆಟಾಡಾಕೆ ಅಂತ ಹೊಂಟೋಗ್ತಿದ್ವಿ. ಏನಾರಾ ಮಾಡ್ಕಳಿ ಅಂತಾವಾ. ಬೆಳುಗ್ಗೆ ಹನ್ನೊಂದು ಗಂಟೇನಾಗಾ ಸುರು ಆದ್ರೆ ಮಧ್ಯಾನ ಮೂರ್ನಾಕು ಗಂಟೆ ಆದ್ರೂ ಮುಗೀತಾಲೇ ಇರ್ಲಿಲ್ಲ. ಯಾರಾದ್ರೂ ಉಗ್ದು ಏಳ್ಸೋಗಂಟಾ ಅಂಗೇ ಕುಂತಿರ್ತಿದ್ರು.
ನಾವು ಸಣ್ಣೈಕ್ಳು ಕವಡೇನಾಗೆ ಆಡ್ತಿರಲಿಲ್ಲ. ನಮ್ಗೆ ಕವಡೆ ಹಿಡ್ಕಂಬಾಕೇ ಬರ್ತಿರ್ಲಿಲ್ಲ. ಸಣ್ಣ ಕೈಯಾಗೆ ಅವು ಸರ್ಯಾಗಿ ನಿಲ್ತಾಲೂ ಇರ್ಲಿಲ್ಲ. ನಾವು ಹುಣಿಸೆ ಪಿತ್ತವ ಚೆಂದಾಕಿ ಬಂಡೆ ಮ್ಯಾಗಾಕಿ ಗಸಗಸಾಂತ ಉಜ್ಜೀ ಉಜ್ಜೀ ಅರ್ಧ ಮಾಡ್ಕಂತಿದ್ವಿ. ಅದ್ರಾಗೇ ನಮ್ದು ಆಟ. ಚಕ್ಕಾ(ನಾಕು) ಬಾರಾ(ಎಂಟು) ಬೀಳ್ತಿದ್ದಿದ್ದೂ ಬೋ ಅಪ್ರೂಪ್ವೇಯಾ. ಸುಮ್ಕೆ ಎಸ್ಯಾದು. ಅವು ಬಿದ್ದಂಗೇ ನಮ್ ಆಟ್ವೂ ಕುಂಟುಕಂಡೇ ವಾಗ್ತಿತ್ತು. ಆಟದಾಗೆ ನಮ್ ಕಾಯಿಗ್ಳೂಂತ ನಾವ್ ಮಡಿಕ್ಕಂತಿದ್ದದ್ದು ಕಡ್ಲೆ ಬ್ಯಾಳೆ, ಕಳ್ಳೆ ಬೀಜ, ಕಳ್ಳೆ ಪಪ್ಪು, ಹುಣಿಸೆ ಪಿತ್ತ, ಬಳೆ ಚೂರು, ಗುಲಗಂಜಿ ಬೀಜ, ಕವಡೆ, ಕಪ್ಪೆಚಿಪ್ಪು, ಶಂಕು (ಜಯಮಂಗಲಿ ನದೀ ತಾವ ಹೋದಾಗ ಆರ್ಸಿಗಂಡು ಬತ್ತಿದ್ವಿ.) ನೈಸುಕಿರಾ ಗುಂಡು ಕಲ್ಲು ಇವೇಯಾ. ಕಳ್ಳೆಬೀಜ ಕಳ್ಳೆಪಪ್ನ ಜೀವ ನಿಲ್ದೆ ಹಣ್ಣಾದೇಟ್ಗೆ ಬಾಯಾಗಾಕ್ಕಾಣಾದು. ಒನ್ನೊಂದು ಕಿತ ಎದ್ರುನೋರ್ಗೂ ಆಸೆಯಾಗಿ, ಕಾಯ್ತಾ ಕುಂತಿದ್ದು, ನಮ್ಗೆ ಹಣ್ಣಾಗಾಕೆ ಏಸು ಬೇಕೋ ಆಸು ಬಿದ್ದೇಟ್ಗೆ ಅವ್ರೆ ಹಣ್ಣಿನ ಮನೆಗೆ ಒಂದು ಕಿತ ಮುಟ್ಸಿ, ಬಾಯಾಗಾಕ್ಕಣಾರು. ಅದ್ಕೂ ಜಗ್ಳ ಕಾಯ್ತಿದ್ವಿ. ನಿನ್ ಮನೆ ಕಾಯ್ವಾಗಾ ಅಂತ ಬಯ್ಕಂಡು ಮುಂದ್ಕೆ ಆಡ್ತಿದ್ವಿ.
ಸುಮಾ ಸತೀಶ್ ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಚಿಕ್ಕಮಾಲೂರು ಗ್ರಾಮದವರು. ಬರವಣಿಗೆಯ ಜೊತೆಗೆ ಸಾಹಿತ್ಯ ಸಂಘಟನೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಕಿರುನಾಟಕಗಳ ರಚನೆ, ನಿರ್ದೇಶನ ಮತ್ತು ಅಭಿನಯ ಜೊತೆಗೆ ಏಕಪಾತ್ರಾಭಿನಯ ಇವರ ಹವ್ಯಾಸ. ಮಿರ್ಚಿ ಮಸಾಲೆ ಮತ್ತು ಇತರೆ ನಗೆ ನಾಟಕಗಳು , ಅವನಿ ( ಕವನ ಸಂಕಲನ), ವಚನ ಸಿರಿ (ಆಧುನಿಕ ವಚನಗಳು), ಹಾದಿಯಲ್ಲಿನ ಮುಳ್ಳುಗಳು ( ವೈಚಾರಿಕ ಲೇಖನ ಸಂಕಲನ), ಬಳಗ ಬಳ್ಳಿಯ ಸುತ್ತ (ಸಂ. ಕೃತಿ), ಶೂನ್ಯದಿಂದ ಸಿಂಹಾಸನದವರೆಗೆ ( ವ್ಯಕ್ತಿ ಚಿತ್ರಣ), ಭಾವಯಾನ ( ಸಂ. ಕೃತಿ), ಮನನ – ಮಂಥನ ( ವಿಮರ್ಶಾ ಬರೆಹಗಳು), ವಿಹಾರ (ಆಧುನಿಕ ವಚನಗಳು), ಕರ್ನಾಟಕದ ಅನನ್ಯ ಸಾಧಕಿಯರು ಭಾಗ 6 (ಡಾ. ಎಚ್. ಗಿರಿಜಮ್ಮನವರ ಬದುಕು – ಬರೆಹ) ಇವರ ಪ್ರಕಟಿತ ಕೃತಿಗಳು.