ಕೊಟ್ಟಿಗೆಯಲ್ಲಿ ಯಾವುದಾದರೂ ಹಸು ಕರು ಹಾಕಿದರೆ ಮನೆಯಲ್ಲಿ ಬಾಣಂತಿ ಇದ್ದಷ್ಟೇ ಮುತುವರ್ಜಿ ವಹಿಸಬೇಕು. ಹಸುವಿಗೆ ಖಾರ ಮಾಡಿ ತಿನ್ನಿಸುವುದು, ಪುಟ್ಟ ಕರು ಗಟ್ಟಿಯಾಗುವವರೆಗೂ ಮನೆಯೊಳಗೆ ಸ್ವಲ್ಪ ಬೆಚ್ಚಗಿನ ಸ್ಥಳದಲ್ಲಿ ಇರಿಸಿ ಹಾಲುಣಿಸಲಷ್ಟೇ ತಾಯಿಯ ಬಳಿ ಕರೆದೊಯ್ಯವುದು ಮಾಡುತ್ತಾರೆ. ಕರುವಿಗೆ ಜೀರ್ಣಿಸಿಕೊಳ್ಳಲು ಸಾಧ್ಯವಾಗುವಷ್ಟೇ ಹಾಲು ಕುಡಿಸಬೇಕು. ಅಜೀರ್ಣವಾದರೆ ಅಪಾಯವೆಂದು ಎಚ್ಚರಿಕೆ ವಹಿಸುತ್ತಾರೆ. ಹಸು ಕರುಗಳಿಗೆ ಮೈ ತೊಳೆಸಿ ಸ್ವಚ್ಛ ಜಾಗದಲ್ಲಿ ಮಲಗಲು ಬಿಡುತ್ತಾರೆ.
ಭವ್ಯ ಟಿ.ಎಸ್. ಬರೆಯುವ “ಮಲೆನಾಡಿನ ಹಾಡು-ಪಾಡು” ಸರಣಿ ನಿಮ್ಮ ಓದಿಗೆ
ಅಮ್ಮನ ಬೆಳಗು ಕಣ್ತೆರೆಯುವುದು ಹಸುಕರುಗಳ ಸಾಂಗತ್ಯದಲ್ಲಿ. ಮನೆ ಕೆಲಸ ಸಾಕಷ್ಟು ಇರುತ್ತದೆ. ಜೊತೆಗೆ ಕಾಡುವ ಮಂಡಿ, ಸೊಂಟ ನೋವು. ಈಗಲೂ ಬೇಕೇನಮ್ಮ ನಿನಗೆ ಈ ಹಸುಕರುಗಳನ್ನು ಸಾಕುವ ಕೆಲಸ ಎಂದೇನಾದರೂ ಸಲಹೆ ಕೊಟ್ಟರೆ ಬೆಳಿಗ್ಗೆ ಎದ್ದೊಡನೆ ಈ ಹಸುಗಳ ಮುಖ ನೋಡಿ, ಕೊಟ್ಟಿಗೆ ಸ್ವಚ್ಛ ಮಾಡಿ, ಹಸುಗಳ ಹಸಿವು ನೀಗಿಸಿ, ಹಾಲು ಕರೆದು ತಂದರೆ ನನ್ನ ಮನಸ್ಸಿಗೆ ನೆಮ್ಮದಿ ಅಂದಳು ಅಮ್ಮ. ಇವುಗಳಿಲ್ಲದೇ ಇದ್ದರೆ ನಮಗೆ ಬೆಳಗಿನ ಕೆಲಸವನ್ನು ಕಳೆದುಕೊಂಡ ಖಾಲಿತನ ಎನ್ನುತ್ತಾರೆ ಅಪ್ಪಾಜಿ. ಮನೆಯ ಕೊಟ್ಟಿಗೆಯಲ್ಲಿ ಮುದ್ದು ಕರುಗಳು ಜನಿಸಿದಾಗ ಮೊಮ್ಮಕ್ಕಳು ಹುಟ್ಟಿದ ಸಂಭ್ರಮ ಇಬ್ಬರಿಗೂ… ಮುಂಜಾನೆಯ ತಂಪು ಗಾಳಿಗೆ ಹೊದ್ದು ಆರಾಮಾಗಿ ಮಲಗಲು ಪರಿತಪಿಸುವ ನಮಗೆ ದಿನವಿಡೀ ಜಡತನ ಕಾಡುತ್ತದೆ.
ಬೆಳಗಿನಿಂದ ರಾತ್ರಿ ಮಲಗುವವರೆಗೂ ಉತ್ಸಾಹಿಗಳಾಗಿರುವ ಅಮ್ಮ ಅಪ್ಪನ ಚೈತನ್ಯದ ಮೂಲ ಬೆಳಗಿನ ಈ ಸಂತಸದಾಯಕ ಕೆಲಸ. ಮನಸ್ಸಿಗೆ ಎಷ್ಟೇ ಬೇಸರವಿದ್ದರೂ ಗೋವುಗಳ ಆರೈಕೆಯಲ್ಲಿ ಎಲ್ಲಾ ಮರೆತು ಆನಂದಿಸುತ್ತಾರೆ. ಆಗಾಗ ಅವುಗಳಿಗೆ ಕಾಡುವ ವ್ಯಾಧಿಗಳಿಗೆ ಜೋಪಾನವಾಗಿ ಚಿಕಿತ್ಸೆ ಮಾಡಬೇಕಾಗುತ್ತದೆ. ಕೈ ಮೀರಿದ ಸಂದರ್ಭದಲ್ಲಿ ಸಾವು ನೋವು ಉಂಟಾಗುತ್ತಿರುತ್ತದೆ. ಪ್ರೀತಿಯ ಹಸು ಕರುಗಳು ತೀರಿ ಹೋದಾಗ ಬಹಳ ದಿನ ಆ ನೋವಿನಲ್ಲಿ ಮರಗುತ್ತಾರೆ. ಸ್ವಲ್ಪವೂ ಹಿಂಜರಿಯದೆ ಮತ್ತೆ ಹಸು ಪಾಲನೆಯ ಕಾಯಕವನ್ನು ಮುಂದುವರಿಸುತ್ತಾರೆ. ರೈತರ ಬದುಕಿನ ಅವಿಭಾಜ್ಯ ಅಂಗಗಳಾದ ಗೋವುಗಳನ್ನು ಪೂಜಿಸುವುದು ನಮ್ಮ ಸಂಪ್ರದಾಯ. ಈ ಪೂಜೆಗಿಂತಲೂ ನಿಷ್ಕಲ್ಮಶವಾಗಿ ಅವುಗಳನ್ನು ಒಡಲ ಕುಡಿಗಳಂತೆ ಜತನದಿಂದ ಕಾಪಾಡಿಕೊಂಡು ಬರುವ ಅವರ ಮನದ ಭಾವ ಅದೆಷ್ಟು ನಿರ್ಮಲವಾದದ್ದು.
ಮಲೆನಾಡಿನ ಎಲ್ಲಾ ಮನೆಗಳಲ್ಲೂ ದನಕರುಗಳು ಇದ್ದೇ ಇರುತ್ತವೆ. ಮೊದಲೆಲ್ಲಾ ಅಂಗಡಿ ಹಾಲು ಕೊಳ್ಳುವ ಪದ್ಧತಿಯೇ ಇಲ್ಲಿ ಇರಲಿಲ್ಲ. ಕೊಟ್ಟಿಗೆಯಲ್ಲಿ ಸಾಕಷ್ಟು ಹಸುಗಳಿದ್ದು, ಹಾಲು, ಮೊಸರು, ಬೆಣ್ಣೆ, ತುಪ್ಪಕ್ಕೆ ಯಾವುದೇ ಕೊರತೆ ಇರಲಿಲ್ಲ. ಇದನ್ನು ಮಲೆನಾಡಿನ ಜನರು ಕರಾವು ಎನ್ನುತ್ತಾರೆ. ಕರಾವಿರೋ ಮನೇಲಿ ಕಾಯ್ಲೆ ಕಸಾಲೆ ಕಡ್ಮೆ ಅಂತಾರೆ. ಬೆಳಿಗ್ಗೆ ಎದ್ದೊಡನೆ ಈಗಷ್ಟೇ ಕರೆದು ತಂದ ಹಾಲು ತಂಬಿಗೆ ತುಂಬಾ ನೊರೆನೊರೆಯಾಗಿ ತುಂಬಿರುತ್ತದೆ. ಇದನ್ನು ಕಾಯಿಸುವಾಗ ಹೊಮ್ಮುವ ಸುವಾಸನೆ, ಕೆನೆಗಟ್ಟುವವರೆಗೂ ಕಾಸಿ ಕೆಳಗಿಳಿಸಿ, ಬಿಸಿ ಕಾಫಿಗೆ ಬೆರೆಸಿ ಕುಡಿಯುವುದು ಪ್ರತಿ ಬೆಳಗಿನ ದಿನಚರಿ. ಪುಟ್ಟ ಕಂದಮ್ಮಗಳಿಗೆ ಈ ಹಾಲು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
ಮನೆಯಲ್ಲಿ ಸಾಕುವ ಈ ನಾಟಿ ಹಸುಗಳಿಗೆ ಮಲೆನಾಡು ಗಿಡ್ಡ ಎನ್ನುತ್ತಾರೆ. ತೀರಾ ದಪ್ಪವೂ ಅಲ್ಲದ, ತೀರಾ ಸಣಕಲು ಅಲ್ಲದ ಮಧ್ಯಮ ಮೈ ಕಟ್ಟಿನ ತಳಿಗಳಿವು. ಬೆಳಿಗ್ಗೆ ಮನೆಯಲ್ಲಿ ಕೊಡುವ ಅಕ್ಕಚ್ಚು ಕುಡಿದು ಮೇಯಲು ತೆರಳುತ್ತವೆ. ಮುಸ್ಸಂಜೆ ತಾವಾಗಿಯೇ ಕೊಟ್ಟಿಗೆಗೆ ಬರುತ್ತವೆ. ಎರಡೂ ಹೊತ್ತು ಹಾಲು ಕೊಡುತ್ತವೆ. ಮನೆಯಲ್ಲಿ ಉಳಿದ ಅನ್ನ ಮತ್ತಿತರ ಆಹಾರ ಪದಾರ್ಥಗಳು, ತರಕಾರಿ, ಹಣ್ಣಿನ ಸಿಪ್ಪೆ, ಅಕ್ಕಿ ತೊಳೆದ ನೀರು ಎಲ್ಲವನ್ನೂ ಸೇರಿಸಿ ಕೊಡುವುದೇ ಅಕ್ಕಚ್ಚು. ಇನ್ನೂ ಇವು ಮೇಯಲು ಹೋದಾಗ ಹಲವು ಬಗೆಯ ಹಸಿರು ಸೊಪ್ಪುಗಳು, ಹುಲ್ಲನ್ನು ತಿನ್ನುತ್ತವೆ. ಹಾಲಿನ ಪ್ರಮಾಣ ಹೆಚ್ಚಲೆಂದು ಹಿಂಡಿ, ಬೂಸಾ ಕೂಡ ಕೊಡುತ್ತಾರೆ. ತೋಟಗಳಲ್ಲಿ ಯಥೇಚ್ಛವಾಗಿ ಬೆಳೆದಿರುವ ಹಸಿರು ಹುಲ್ಲನ್ನು ಕತ್ತರಿಸಿ ತಂದು ಕೊಡುತ್ತಾರೆ. ಕೊಟ್ಟಿಗೆಯಲ್ಲಿ ಕರುಗಳು ಇರುವಾಗ ಹಸಿಹುಲ್ಲು ಇರಲೇಬೇಕು. ಗದ್ದೆಕೊಯ್ಲಿನ ನಂತರ ಒಣಹುಲ್ಲನ್ನು ಕೊಟ್ಟಿಗೆಯ ಅಟ್ಟದಲ್ಲಿ ಸಂಗ್ರಹಿಸಿಟ್ಟಿರುತ್ತಾರೆ. ಅತಿ ಮಳೆಯ ದಿನಗಳಲ್ಲಿ ಕೊಟ್ಟಿಗೆಯಲ್ಲೇ ಕಟ್ಟಬೇಕಾದಾಗ ಈ ಹುಲ್ಲೇ ಇವುಗಳ ಆಹಾರ. ಮಳೆಗಾಲದಲ್ಲಿ ಅಕ್ಕಚ್ಚಿನ ಒಲೆ ಮಾಡಿ ಗಂಜಿ ಬೇಯಿಸಿ ಕೊಡುತ್ತಾರೆ.

ರೈತಾಪಿ ಜನರಿಗೆ ಹಸು ಸಾಕಾಣಿಕೆ ಅನಿವಾರ್ಯ ಮತ್ತು ಅತ್ಯಗತ್ಯ. ಗೊಬ್ಬರಕ್ಕಾಗಿಯೇ ಹಸುಗಳನ್ನು ಸಾಕಬೇಕಾಗುತ್ತದೆ. ಇಲ್ಲವಾದರೆ ದುಬಾರಿ ಬೆಲೆ ಕೊಟ್ಟು ಗೊಬ್ಬರ ಖರೀದಿಸಬೇಕಾಗುತ್ತದೆ. ಯಾವುದೇ ರಾಸಾಯನಿಕಗಳಿಲ್ಲದ ಸತ್ತ್ವಯುತ ಗೊಬ್ಬರ ಇದಾಗಿದೆ.
ಬಾಲ್ಯದಿಂದಲೂ ನಮ್ಮ ಮನೆಯ ಕೊಟ್ಟಿಗೆಯಲ್ಲಿ ಹಸುಗಳ ಒಡನಾಟದೊಂದಿಗೆ ಬೆಳೆದವಳು ನಾನು. ಅಪ್ಪ, ಅಮ್ಮ ನಿತ್ಯ ಮಾಡುವ ಕೊಟ್ಟಿಗೆಯ ಕೆಲಸಗಳು ಅವರಿಗೆ ಬೆಳಗಿನ ಉತ್ತಮ ವ್ಯಾಯಾಮದಂತೆ. ಕೊಟ್ಟಿಗೆ ಸ್ವಚ್ಛಗೊಳಿಸುವುದು, ಅಕ್ಕಚ್ಚು, ಹುಲ್ಲು ಕೊಟ್ಟು ಹಾಲು ಕರೆಯುವುದು, ಹಸಿ ಹುಲ್ಲು ಕೊಯ್ದು ತರುವುದು ಹೀಗೆ ಯಾವುದೇ ಯೋಗ, ಜಿಮ್ಗೂ ಮೀರಿದ ದೈಹಿಕ ಶ್ರಮ ಉಂಟಾಗುವುದರಿಂದ ಆರೋಗ್ಯವೂ ವೃದ್ಧಿಸುತ್ತದೆ. ಇನ್ನೂ ಮನೆಯಲ್ಲಿ ಹಾಲು, ಮೊಸರು, ಬೆಣ್ಣೆ, ತುಪ್ಪವಿದ್ದರೆ ಅದಕ್ಕಿಂತ ಸುಖ ಬೇರೇನಿದೆ.
ಅಮ್ಮ ಪ್ರತಿರಾತ್ರಿ ಮಲಗುವ ಮುನ್ನ ತಪ್ಪದೇ ಒಂದು ಉದ್ದದ ಲೋಟದ ತುಂಬಾ ಬಿಸಿಹಾಲನ್ನು ಕುಡಿಯಲು ಕೊಡುತ್ತಿದ್ದಳು. ಇದರಿಂದ ಒಳ್ಳೆಯ ನಿದ್ರೆ ಬರುತಿತ್ತು. ಈಗಲೂ ಮಲಗುವ ಮುನ್ನ ಸ್ವಲ್ಪ ಹಾಲು ಕುಡಿದರೆ ಸೊಂಪಾದ ಅನುಭವ. ಬಾಲ್ಯದ ರೂಢಿ ಮನದೊಳಗೆ ಹಾಸುಹೊಕ್ಕಾಗಿದೆ. ನಮ್ಮ ಮನೆಯ ಹಾಲು, ತುಪ್ಪಕ್ಕೆ ತುಂಬಾ ಬೇಡಿಕೆಯಿತ್ತು. ಅಮ್ಮ ಒಳ್ಳೆಯ ಹಾಲು, ತುಪ್ಪ ಕೊಡುತ್ತಾಳೆಂದು ಅಕ್ಕಪಕ್ಕದವರು ಕೇಳಿ ಕೊಳ್ಳುತ್ತಿದ್ದರು. ಅಮ್ಮನ ಸಣ್ಣಪುಟ್ಟ ಖರ್ಚುಗಳಿಗಲ್ಲದೆ ಎಷ್ಟೋ ಸಲ ನಮ್ಮ ಓದಿಗೂ ಈ ಕರಾವಿನ ಸಂಪಾದನೆ ಉಪಯೋಗವಾಗುತ್ತಿತ್ತು.
ಕೊಟ್ಟಿಗೆಯಲ್ಲಿ ಯಾವುದಾದರೂ ಹಸು ಕರು ಹಾಕಿದರೆ ಮನೆಯಲ್ಲಿ ಬಾಣಂತಿ ಇದ್ದಷ್ಟೇ ಮುತುವರ್ಜಿ ವಹಿಸಬೇಕು. ಹಸುವಿಗೆ ಖಾರ ಮಾಡಿ ತಿನ್ನಿಸುವುದು, ಪುಟ್ಟ ಕರು ಗಟ್ಟಿಯಾಗುವವರೆಗೂ ಮನೆಯೊಳಗೆ ಸ್ವಲ್ಪ ಬೆಚ್ಚಗಿನ ಸ್ಥಳದಲ್ಲಿ ಇರಿಸಿ ಹಾಲುಣಿಸಲಷ್ಟೇ ತಾಯಿಯ ಬಳಿ ಕರೆದೊಯ್ಯವುದು ಮಾಡುತ್ತಾರೆ. ಕರುವಿಗೆ ಜೀರ್ಣಿಸಿಕೊಳ್ಳಲು ಸಾಧ್ಯವಾಗುವಷ್ಟೇ ಹಾಲು ಕುಡಿಸಬೇಕು. ಅಜೀರ್ಣವಾದರೆ ಅಪಾಯವೆಂದು ಎಚ್ಚರಿಕೆ ವಹಿಸುತ್ತಾರೆ. ಹಸು ಕರುಗಳಿಗೆ ಮೈ ತೊಳೆಸಿ ಸ್ವಚ್ಛ ಜಾಗದಲ್ಲಿ ಮಲಗಲು ಬಿಡುತ್ತಾರೆ.
ಈ ಹಾಲು ಕೊಡುವ ಹಸುಗಳು ಅಮ್ಮನ ವಾಸನೆ ಗ್ರಹಿಸಬಲ್ಲವು. ಅಮ್ಮನಲ್ಲದೆ ಬೇರೆಯವರು ಹಾಲು ಕರೆದರೆ ತಕರಾರು ತೆಗೆಯುತ್ತವೆ. ಅಮ್ಮ ಈ ಹಸು ಕರುಗಳಿಗೆ ಅವುಗಳ ಗುಣ ಸ್ವಭಾವ, ಹುಟ್ಟಿದ ದಿನಕ್ಕೆ ಅನುಸಾರವಾಗಿ ಕೆಂಪಿ, ಗೌರಿ, ಕವ್ಲಿ, ಸೀತೆ, ಭಾನು ಹೀಗೆ ಹೆಸರಿಡಿದು ಕರೆಯುತ್ತ, ಅವುಗಳ ಮೌನದೊಂದಿಗೆ ಸಂಭಾಷಣೆ ನಡೆಸಬಲ್ಲಳು. ಅವಳ ಹೊಗಳಿಕೆ, ಅಕ್ಕರೆ, ಗದರಿಕೆ ಎಲ್ಲವನ್ನೂ ಅವು ಅರ್ಥೈಸಿಕೊಳ್ಳಬಲ್ಲವು. ಈ ಅನುಬಂಧವೇ ಅತ್ಯಂತ ಅಪ್ಯಾಯಮಾನ.

ಇತ್ತೀಚೆಗೆ ಹಸುಸಾಕಾಣಿಕೆ ಮಲೆನಾಡಿನಲ್ಲಿಯೂ ಕಡಿಮೆಯಾಗುತ್ತಿದೆ. ಈ ಅಂಗಡಿ ಹಾಲು ಮನೆ ಹಾಲಂಗೆ ಒದಗೋದೇ ಇಲ್ಲ, ಒಂದ್ಸಲ ಕಾಪಿ ಕಾಸೋದ್ರೊಳ್ಗೆ ಕಾಲಿ ಆತಾದೆ. ಏನೇ ಹೇಳಿ ಕರಾವಿಲ್ಲದಿರ ಮನೆ ಮನೆಯಲ್ಲಾ ಅಂತ ಗೊಣಗುತ್ತಲೇ ಪಾಕೇಟ್ ಹಾಲನ್ನು ಖರೀದಿಸುತ್ತಿದ್ದಾರೆ. ಆದರೆ ಹಳ್ಳಿ ಹಾಲು ಯಾರ ಮನೇಲಾದ್ರೂ ಸಿಗ್ತದ ಹುಡುಕ್ ತಾರೆ. ಹಸು ಕರುಗಳಿದ್ದರೆ ಮೈ ತುಂಬಾ ಕೆಲಸ, ಮನೆ ಬಿಟ್ಟು ಹೊರಗೆ ಹೋಗೋ ಹಾಗಿಲ್ಲ, ಕರು ಹಾಕಿದಾಗ ಜೋಪಾನ ಮಾಡೋಕಾಗಲ್ಲ… ಹೀಗೆ ಏನೇನೋ ಕಾರಣದಿಂದ ಹಸು ಸಾಕೋದನ್ನ ಬಿಡ್ತಾ ಇದಾರೆ. ಮನೆಯಲ್ಲಿ ಗೋವಿದ್ದರೆ ಮುಕ್ಕೋಟಿ ದೇವತೆಗಳಿದ್ದಂತೆ, ಹಾಲು ಸೊಂಪಾಗಿದ್ದರೆ ಮನೆಮಂದಿ ಗಟ್ಟಿಯಾಗಿ ಇರ್ತಾರೆ ಎಂಬ ನಂಬಿಕೆ ಹಾಗೆ ಉಳಿಯಲಿ. ಗೋಮಾತೆಯ ಸಾಂಗತ್ಯ ಮಲೆನಾಡಿನ ಜನರಿಗೆ ಸದಾ ದೊರಕುವಂತಾಗಲಿ. ಮನೆಯ ಅವಿಭಾಜ್ಯ ಅಂಗವಾದ ಕೊಟ್ಟಿಗೆಗಳು ಇಲ್ಲದಿರುವ ದಿನ ಬಾರದಿರಲಿ….


ಮಲೆನಾಡಿನ ರೈತಾಪಿ ಜನರ ನಿತ್ಯ ಜೀವನದ ಆತ್ಮೀಯ ಬರಹ. ಓದಲು ಖುಷಿಯಾಯ್ತು. ಧನ್ಯವಾದ.