ಎಷ್ಟೋ ಜನ ಹೇಳ್ತಾರೆ ಮೂಡಿಗೆರೆ ಹ್ಯಾಂಡ್‌ಪೋಸ್ಟ್ ಅಂತಿದ್ದಂತೆ ಒಂಥರ ರೋಮಾಂಚನ ಆಗುತ್ತಂತೆ. ಏನೋ ಒಂತರ ಪುಳಕವಂತೆ. ಧರ್ಮಸ್ಥಳ, ಹೊರನಾಡು, ಶೃಂಗೇರಿಗೆ ಹೋಗುವ ಬಸ್ಸಲ್ಲಿ ಪ್ರಯಾಣಿಸುವಾಗ ‘ಮೂಡಿಗೆರೆ ಹ್ಯಾಂಡ್‌ಪೋಸ್ಟ್ ಬಂತು; ಇಳುಕೊಳ್ಳುವವರೆಲ್ಲಾ ಬನ್ನಿ’ ಅಂತ ಕಂಡಕ್ಟರ್ ಕೂಗು ಹಾಕುತ್ತಿದ್ದಂತೆ ಒಂದಷ್ಟು ಪ್ರಯಾಣಿಕರು ಕಿಟಕಿಯಾಚಿ ಮುಖಮಾಡುತ್ತಾರಂತೆ. ಯಾರಯಾರನ್ನೋ ನೋಡುವ ಆಸೆ. ಪ್ಯಾರನೋ, ಮಾರನೋ, ಮಂದಣ್ಣ ಅಥವಾ ಡಾ.ಕರ್ವಾಲೊ ಅಥವಾ ಕೋಬ್ರಾ ಕಾಳಪ್ಪನೇ ಕಾಣಸಿಗಬಹುದೆಂದು. ತೇಜಸ್ವಿ ಇಲ್ಲೇಲ್ಲಾದರೂ ಹೋಗ್ತಾ ಇರಬಹುದೇನೋ, ಆಕಸ್ಮಾತ್ ಕಂಡು ಇವರೂ ಅವರೂ ಗಲಿಬಿಲಿ ಆದ ಸಂದರ್ಭಗಳು ಉಂಟು.
ತೇಜಸ್ವಿ ಹತ್ತಿರಕ್ಕೆ ಬಂದು ಪರಿಚಯ ಮಾಡಿಕೊಂಡೆವೆಂಬ ಸಂತೃಪ್ತಿ. ಈ ಕಡೆಯಿಂದ ಅಂದರೆ ಮೂಡಿಗೆರೆಯಿಂದ ಹೋಗುವವರಿಗೆ ಹೀಗೆ. ಇನ್ನು ಆ ಕಡೆಯಿಂದ ಚಾರ್ಮಾಡಿ ಘಾಟಿನಲ್ಲಿ ಹದಿನಾಲ್ಕು ಹೇರ್ ಪಿನ್ ತಿರುವುಗಳಲ್ಲಿ ಸುತ್ತಿ ಬಳಸಿ ಹೊಟ್ಟೆ ತೊಳಸಿ ಹ್ಯಾಂಡ್‌ಪೋಸ್ಟ್ ಬಸ್ಸು ನಿಲ್ಲಿಸಕ್ಕೂ ಮುಂಚೆನೇ ಕಿಟಕಿಯಾಚೆ ಮುಖ ಹಾಕಿದ್ದಾಗ ತಲೆ ಕಲಾಯಿ ಮಾಡಿಸಿಕೊಂಡಿದ್ದ ಭಕ್ತ ಆಕಸ್ಮಾತ್ ಆ ಕಡೆ ಪಾಸ್ ಆದರೆ ಆ ಕತೆನೇ ಬೇರೆ.
ನಾನು ಇಲ್ಲಿ ಹುಟ್ಟಿ ಬೆಳೆದವಳಲ್ಲ. ತೇಜಸ್ವಿಯೂ ಅಷ್ಟೆ. ನಾವು ಇಲ್ಲಿಗೆ ಪರಕೀಯರೇ. ನಾನಂತೂ ನಮ್ಮ ಸೂರಿನ ಮೇಲಿನ ಆಕಾಶ ಮಾತ್ರ ನೋಡಿಕೊಂಡು ಬದುಕುವವಳು. ಆದರೆ ಮೂಡಿಗೆರೆ ಹ್ಯಾಂಡ್‌ಪೋಸ್ಟ್ ಅಂದರೆ ತೇಜಸ್ವಿ ಎಲ್ಲರ ಮನದಲ್ಲಿ. ಮೂಡಿಗೆರೆ ಒಂದು ಶ್ರೀಮಂತ ತಾಲೂಕು. ಇತ್ತೀಚೆಗೆ ಮೂಡಿಗೆರೆ ನೋಡಲು ಅನೇಕರಿಗೆ ಒಂದು ಕುಶಾಲು ಬಂದಿದೆ. ಇಲ್ಲಿಗೆ ಕೃಷಿವಿಜ್ಞಾನಿಗಳು ಬರ್ತಾರೆ ರೈತರ ಉದ್ಧಾರಕ್ಕಾಗಿ. ಹಾಗಾಗಿ ಕೃಷಿ ವಿಶ್ವವಿದ್ಯಾಲಯದ ರೀಜನಲ್ ರಿಸರ್ಚ್ ಸ್ಟೇಷನ್ ಇದೆ. ಇದಕ್ಕೆ ದೇಶದಲ್ಲೇ ಒಳ್ಳೆಯ ಹೆಸರು ಇದೆಯಂತೆ, ಉತ್ತಮವಾಗಿ ನಡೆಯುತ್ತಿದೆಯೆಂದು. (ಇದೇ ಹೀಗಿದ್ರೆ ಇನ್ನು ಬೇರೆ ಕೃಷಿ ಕೇಂದ್ರಗಳ ಪರಿಸ್ಥಿತಿ ಹೇಗೆ ಇರಬಹುದೆಂಬ ಅಸಮಾಧಾನ ಬೇರೆಯದೇ ಮಾತು) ತೋಟಗಾರಿಕೆ ಕಾಲೇಜೂ ಇದೆ. ದೇಶದ ನಾನಾ ಭಾಗಗಳಿಂದ ಬಂದಿರುವ ವಿದ್ಯಾರ್ಥಿಗಳೂ ಇದ್ದಾರಂತೆ. ಒಳ್ಳೆಯ ಲೈಬ್ರರಿಯೂ ಇದೆ. ಆದರೆ ಮೇಷ್ಟ್ರುಗಳು ಮಾತ್ರ ದೊಡ್ಡದೊಡ್ಡ ನಗರಗಳಲ್ಲಿರುವ ಕಾಲೇಜುಗಳಲ್ಲೇ ಪಾಠ ಹೇಳಲು ಪ್ರಿಫರ್ ಮಾಡ್ತಾರಂತೆ. ಪರಿಸರವಾದಿಗಳು ದಿಢೀರ್ ಪ್ರತ್ಯಕ್ಷ ಕಾಡು ಉಳಿಸಲು.
ಪ್ರಕೃತಿ ಪ್ರಿಯರ ಮೆಚ್ಚುಗೆ ತಾಣ. ಬೆಟ್ಟ ಗುಡ್ಡದಿಂದ ಕೂಡಿರುವ ನಾಡಿದು. ಚಾರಣಿಗರಿಗೆ ಚಾರ್ಮಾಡಿ ಘಾಟು ಕಾಶಿಯೇ ಸೈ. ವನ್ಯಜೀವಿ ಚಿತ್ರಗ್ರಾಹಕರಿಗೆ ಸ್ಟಾರ್ ಅಟ್ರ್ಯಾಕ್ಷನ್. ದೈವ ಭಕ್ತರಿಗೆ ಧರ್ಮಸ್ಥಳದ ಅಣ್ಣಪ್ಪ ಮತ್ತು ಮಂಜುನಾಥನ ಆಶೀರ್ವಾದ ಇದ್ದೇ ಇದೆ. ಹೀಗೆ ಹತ್ತಾರು ವಿಶೇಷತೆಯಿಂದಿರುವ ತಾಲೂಕು ಊರು ಮೂಡಿಗೆರೆ. ಇನ್ನು ಈ ಮಲೆನಾಡಿನ ಕಡೆಯ ಅಡುಗೆ ಊಟದ ರುಚಿಯಂತೂ ನೆನೆ ನೆನೆದು ಬರಬೇಕು ಹೋಂ ಸ್ಟೇಗೆ. ಕೋಳಿ ಸಾರು, ಕಡುಬಿನ ಊಟ ಉಂಡವರೇ ಬಲ್ಲರು ಅದರ ಸವಿರುಚಿ. ಒಬ್ಬರು ಜ್ಞಾನಿಗಳ ಅನಿಸಿಕೆ ಏನಪ್ಪಾಂದರೆ ಶ್ರುತಿ, ಸ್ವರ, ತಾಳ ಸರಿಯಿದ್ದ ಸಂಗೀತದ ಸವಿ, ಮೀನು ಸಾರು ಮತ್ತು ಅಕ್ಕಿರೊಟ್ಟಿ ತಿಂದಂತೆ (ಹೀಗೆಂದು ಸಂಗೀತ ಕಾಲೇಜಿನ ಪಠ್ಯಪುಸ್ತಕದಲ್ಲೇ ಓದ್ದಿದ್ದೀನಿ ನಾನು). ಇದು ಇಲ್ಲಿನ ವಾಡಿಕೆಯ ಬೆಳಗಿನ ತಿಂಡಿ ಅನೇಕರ ಮನೆಗಳಲ್ಲಿ.
ನನ್ನ ಮೈಸೂರಿನ ಗೆಳತಿ ಪದ್ಮಾಶ್ರೀರಾಂರು ನಮ್ಮ ಮನೆ ಹೊಕ್ಕ ಕೂಡಲೆ ಕಾಫಿ ಬೇಕಾ ಎಂದು ಕೇಳಿದರೆ ಸಾಕು ಕಾಫಿ ಕುಡಿಯಲೇಬೇಕೆನ್ನಿಸುತ್ತೆ ಎನ್ನುವರು. ಮೊನ್ನೆ ಒಬ್ಬರು ತೀರಾ ವ್ಯಾವಹಾರಿಕವಾದ ಕೆಲಸಕ್ಕಾಗಿ ಬೆಂಗಳೂರಿನಿಂದ ಬಂದವರು ‘ಕಾಫಿನೇ ಕೊಡಿಮ್ಮಾ ಹೋದ ಸಲ ಬಂದಾಗ ನಿಮ್ಮಲ್ಲಿನ ಕಾಫಿ ಕುಡಿದು ಹೋಗಿದ್ದು ಬೆಂಗಳೂರಿನ ಬಸ್‌ಸ್ಟ್ಯಾಂಡಿನಲ್ಲಿ ಇಳಿದಾಗಲೂ ನಾಲಗೆ ಮೇಲೆ ಅದರ ರುಚಿ ಹರಿದಾಡುತ್ತಿತ್ತು’ ಎಂದರು. ಹಿಂದೊಮ್ಮೆ ಕನ್ನೇಶ್ವರ ರಾಮ ಸಿನಿಮಾದ ಸ್ಕ್ರಿಪ್ಟ್ ತಯಾರಿಸಲು ‘ಗರಂ ಹವಾ’ ಖ್ಯಾತಿಯ ಶ್ರೀ ಎಂ.ಎಸ್.ಸತ್ಯುರವರು ಬೊಂಬಾಯಿಂದ ಬಂದವರು ನಮ್ಮಲ್ಲಿನ ಕಾಫಿ ಕುಡಿಯುತ್ತ ‘ದಿಸ್ ಈಸ್ ರಿಯಲ್ ಕಾಫಿ, ಐ ಸೇ!’ ಎಂದುಕೊಂಡೇ ಹೀರುತ್ತಿದ್ದರು.
ಇಷ್ಟೊಂದು ರುಚಿ ಕಾಫಿಯನ್ನು ಬೆಳಿಗ್ಗೆ ಎದ್ದಿದ್ದೆ ಕುಡಿದರೆ ದಿನವೆಲ್ಲಾ ಉತ್ಸಾಹದಿಂದಿರ್ತೀವಿ. ಇದನ್ನು ತಯಾರಿಸೋದು ಬಹಳ ಸುಲಭ. ಕಾಫಿ ಪರ್ಕ್ಯುಲೇಟರಿನಲ್ಲಿ ಡಿಕಾಕ್ಷನ್ ತಯಾರಿಸಿಕೊಳ್ಳಿ. ಸಕ್ಕರೆ ಅಮೂಲ್ಯ ಹಾಲಿನ ಪುಡಿ ಒಂದು ಮಗ್‌ನಲ್ಲಿ ಹಾಕಿ ಡಿಕಾಕ್ಷನ್ ಹಾಕಿ ಎತ್ತೆತ್ತಿ ಸುರಿದರೆ ರುಚಿರುಚಿ ಕಾಫಿ ಸಿದ್ಧ. ಇಂತಹ ಕಾಫಿ ಬೇಕೇ ನಮ್ಮ ನಾಡಿನ ಕಾಫಿ ತೋಟ ನೋಡ ಬನ್ನಿ. ದೊಡ್ಡ ಅತಿ ದೊಡ್ಡ ಅಂದರೆ ನೂರಿನ್ನೂರು ಎಕರೆ. ಚಿಕ್ಕದೆಂದರೆ ಹತ್ತಿಪ್ಪತ್ತು. ಎಕರೆ ತೋಟ ಇರುತ್ತೆ. ಒಂದು ಕಾಲದಲ್ಲಿ ತರುಣರಿಗೆ ಕಾಫಿ ತೋಟದವರ ಅಳಿಯನಾಗುವುದೇ ಹೆಬ್ಬಯಕೆ. ಅಥವಾ ಇವರ ಮನೆಯಂಗಳದಲ್ಲಿ ಬೆಳೆದ ಮಗಳನ್ನು ಸೊಸೆ ಮಾಡಿಕೊಳ್ಳುವುದೆಂದರೆ ಬಯಲು ಸೀಮೆ ಕಡೆಯವರಿಗೆ ಹಿರಿಹಿರಿ ಹಿಗ್ಗು. ಈಗ ಸ್ವಲ್ಪ ಪರಿಸ್ಥಿತಿ ಬದಲಾಯಿಸಿದೆ. ಎಲ್ಲರ ಆರ್ಥಿಕ ಸ್ಥಿತಿ ಬದಲಿಸಿದಂತೆ.
ಮುಳ್ಳಯ್ಯನ ಗಿರಿ ಚಂದ್ರದ್ರೋಣ ಪರ್ವತದ ತಪ್ಪಲಿನ (ಬಾಬಾ ಬುಡನ್‌ಗಿರಿ) ಕಡೆಯಿಂದಲೂ ಬೇಲೂರಿನ ಕಡೆಯಿಂದಲೂ ಮೂಡಿಗೆರೆಗೆ ಬಂದು ಹ್ಯಾಂಡ್‌ಪೋಸ್ಟ್‌ನಲ್ಲಿ ಹಾಯ್ದು ಕುದುರೆಮುಖ ತಲುಪುವವರೆಗೂ ಉದ್ದಕ್ಕೂ ಕಾಣಸಿಗುವುದು ಕಾಫಿತೋಟವೇ. ಸಾಮಾನ್ಯವಾಗಿ ಏಪ್ರಿಲ್, ಮೇನಲ್ಲಿ ಹೂವಿನ ಮಳೆ ಆಗುತ್ತೆ. ಈ ಮಳೆ ತೋಟದ ಮಾಲೀಕನನ್ನು ಆಡಿಸುತ್ತೆ ಕುಣಿಸುತ್ತೆ. ಒಳ್ಳೆ ಮಳೆ ಅಂದರೆ ಅಂದಾಜು ಒಂದು ಇಂಚು ಮಳೆಯಾದರೆ ಹೂ ಚೆನ್ನಾಗಿ ಅರಳುವ ನಿರೀಕ್ಷೆ ಇದ್ದರೂ ಸಾಕು, ಬ್ಯಾಂಕಿನ ಮುಂದೆ ಕ್ಯೂ ದೊಡ್ಡದಂತೆ, ಹೊಸ ಮಾಡಲ್ ಕಾರು ಕೊಳ್ಳಲೋ ಬದಲಿಸಲೋ ಹವಣಿಕೆಯಲ್ಲಿರುತ್ತಾರೆ. ಎಲ್ಲರಿಗೂ ಗೊತ್ತಿರುವ ವಿಷಯ ಮದುವೆ ಮಾರ್ಕೆಟ್ಟೂ ಕುದುರುತ್ತೆಂದು. ರಸ್ತೆಯಲ್ಲಿ ಸಿಕ್ಕಿದವರೆಲ್ಲಾ ನಿಮಗೆಷ್ಟಾತು ಮಳೆಯೆಂದು ವಿಚಾರ ವಿನಿಮಯ ಮಾಡಿಕೊಳ್ಳುವವರೆ.
ಈ ಹೂಮಳೆ ಬಂದು ಎಂಟು ಹತ್ತು ದಿನಗಳ ನಂತರ ಕಾಫಿ ಹೂ ಅರಳುತ್ತೆ. ಈಗ ನೋಡಿ ತೋಟದ ಗತ್ತೇ ಬೇರೆ. ಇದರ ಸೊಬಗು ಬಲು ಚೆಂದ. ಇಡೀ ನಾಡೇ ಸೊಬಗನ್ನು ಸೂಸುತ್ತಿರುತ್ತೆ. ಇದರ ಸುವಾಸನೆ ಹಿನ್ನೆಲೆ ತಂಬೂರಿ ಶ್ರುತಿಯಂತೆ ಎಲ್ಲೆಲ್ಲೂ ವಾತಾವರಣವೇ ಅದಾಗುತ್ತೆ. ಪಚೇಂದ್ರಿಯಕ್ಕೆ ಸಂತೋಷ ಕೊಡುತ್ತೆ. ಇದು ರಮಣೀಯ ದೃಶ್ಯ. ಕುವೆಂಪು ಅವರು ಹೇಳಿದಂತೆ ‘ಅದ್ಭುತ! ಹೂವಿನ ಚೆಲುವನ್ನು ಕಣ್ಣು ನೋಡಿ ಪೂರೈಸಲಾಗುವುದಿಲ್ಲ. ಹೂವಿನ ಕಡಲಿನ ಮಧ್ಯೆ ತೇಲಾಡಿ ಆ ಸೌಂದರ್ಯದಲ್ಲಿ ಓಲಾಡಿ ಆ ವೈಭವವನ್ನು ಅನುಭವಿಸಿಯೇ ಸವಿಯಬೇಕು!’ ಕಾಫಿ ಹೂ ಅರಳಿದಾಗ ಮುಂಜಾನೆಯಲ್ಲಿ ಮಧು ಹೀರಲು ಬರುವ ಜೇನಿನ ಜೇಂಕಾರಕ್ಕೆ ಓಂಕಾರವಾಗಿ ಬೇರೊಂದು ಲೋಕವೇ ತೆರೆದುಕೊಳ್ಳುತ್ತೆ. ಜೇನು ಮುತ್ತುವುದು ಪರಾಗ ಸ್ಪರ್ಶಕ್ಕೆ ಅತಿಮುಖ್ಯವಾದದ್ದು.
ಈ ಸಮಯದಲ್ಲೇನಾದರೂ ಬೆಳಿಗ್ಗೆ ಹೂವಿನ ಮೇಲೆ ಮಳೆ ಬಂತೆಂದರೆ ನಮಗೆ ಚಿಂತೆ ಆವರಿಸುವುದೇ ಸೈ. ಆ ವರ್ಷದ ಇಳುವರಿ ಕಡಿಮೆಯಾಗುತ್ತೆನ್ನುವುದು ನಮ್ಮ ಅನುಭವವೇ ಆಗಿದೆ. ಈ ಹೂವಿನ ಜೇನು ತೆಳ್ಳಗೆ ನೀರಿನಂತೆ ಇರುತ್ತೆ. ಹೂವಿನ ಗಾಢ ಪರಿಮಳವೂ ಇರುತ್ತೆ. ತಿನ್ನಲು ನೆಕ್ಕಲು ಬಲು ರುಚಿ. ಬನ್ನಿ ಒಮ್ಮೆಯಾದರೂ ಅನುಭವಿಸಿ ಆನಂದಿಸಿರಿ ಈ ಅದ್ಭುತವನ್ನು.
ಹಂಗೂ ಹಿಂಗೂ ತೇಜಸ್ವಿ ಇಂಗು ತಂದದ್ದು
ಕೆಲವೇ ಗಜಗಳ ಅಂತರದಲ್ಲಿ ಮೋಡದಿಂದುದುರುವ ಹೂವಿನ ಹನಿಗಳು ಏನೇನೇನೋ ವ್ಯತ್ಯಾಸಗಳನ್ನು ತರುತ್ತದೆ. ಒಬ್ಬರಿಗೆ ಒಳ್ಳೆಯ ಮಳೆಯಾದರೆ, ಪಕ್ಕದಲ್ಲೇ ಬೇಲಿಯಾಚೆಯವರು ಆಕಾಶದತ್ತಲೆ ಕಣ್ಣು ನೆಟ್ಟಿರುತ್ತಾರೆ. ಮೋಡ ಇಲ್ಲವಾ ನಿಟ್ಟುಸಿರೇ ಗತಿ. ಎಷ್ಟೋ ಬಾರಿ ಕರ್ರನೆ ಮೋಡ ಬಿರ್ರನೆ ಬಂದು, ಬಂತು ಮಳೆ ಅಂತ ಮನೆ ಪಕ್ಕದ ಕಟ್ಟೆ ಮೇಲೆ ನಿಂತು ನೋಡೋಣವೆಂದು ಓಡಿ ಬರುತ್ತಿದ್ದಂತೆ ಮೋಡವೂ ಓಡಿ ಹೊರಟೇ ಹೋಗುತ್ತೆ. ವಾರ ಹದಿನೈದುದಿನ ತಿಂಗಳು ಕಳೆದರೂ ಮೋಡ ಪತ್ತೆನೇ ಇರೋಲ್ಲ. ಆಗಿನ ನಿರಾಶೆ ಕೊಡಲಿ ಪೆಟ್ಟಿನಂತೆ. ಇದು ತಾಳ್ಮೆ ಕಲಿಸುತ್ತೆ. ಮತ್ತೆ ಹೂವಿನ ಮಳೆ ಬಂದು ಸಮಾಧಾನ ತರುತ್ತೆ. ಆದರೆ ಫಸಲಿನಲ್ಲಿ ವ್ಯತ್ಯಾಸವಾಗುತ್ತೆ.
ಹೂವರಳಿ ಒಂದು ವಾರ ಹದಿನೈದು ದಿನ ಕಳೆಯುವುದರಲ್ಲಿ ಈ ಕಾಫಿ ಪ್ಲಾಂಟರುಗಳು ಬಹಳ ಬಿಸ್ಸಿ ಆಗಿಬಿಡುತ್ತಾರೆ-ಬೇಡದೆ ಇರುವ ಎಂಗೇಜ್‍ಮೆಂಟುಗಳು, ಮದುವೆಮನೆ, ಬೀಗರೂಟ, ತಿಥಿ ಊಟ ಇತ್ಯಾದಿಗಳ ಸಂಭ್ರಮದಲ್ಲಿ. ಎಲ್ಲ ರೀತಿಯ ಶ್ರೀಮಂತಿಕೆಯ ಪ್ರದರ್ಶನ. ಅಂತಸ್ತು, ಐಶ್ವರ್ಯ ಗರ್ವಗಳ ಮೆರೆದಾಟ ಯಾವ ಎಗ್ಗೂ ಇಲ್ಲದೆ ನಡೆಯುತ್ತೆ. ಈ ಮೂಡಿಗೆರೆ ಒಂದು ವಿಚಿತ್ರ ‘ಊರು ಮಾರಾಯರ್ರೆ’. ಇಂಥ ಮಾತಿನ ಶೈಲಿ ಗಮನಿಸಿ ಏನೋ ಆತ್ಮೀಯತೆ ಅನ್ನಿಸೊಲ್ವೆ. ಈ ಊರಿನ ಪೇಟೆ ಅಂಗಡಿಯವರ ರೀತಿನೇ ಹಾಗೆ. ಕಳೆದ ವರ್ಷ ನಮ್ಮ ತೋಟದಲ್ಲಿ ಭರ್ಜರಿ ಮಾವಿನಕಾಯಿ ದೊಡ್ಡ ಸೈಜಿನವು ಹಿಡಿದಿತ್ತು. ಹೇಗೂ ಮಳೆಗಾಲಕ್ಕೂ ಬೇಕು. ಆಪ್ತರಿಗೂ ಕೊಡಲಿಕ್ಕಾಗುತ್ತೆಂದು ಹೆಚ್ಚಿಗೆನೇ ಉಪ್ಪಿನಕಾಯಿ ಹಾಕಿದ್ದೆ. ಆಂಧ್ರ ಬಗೆಯಂತೆ. ಒಗ್ಗರಣೆ ಬೇಕೆಂದು ನನ್ನವರಿಗೆ ಹೇಳಿ ಇಂಗು ತರಿಸಿಕೊಂಡೆ. ಯಾಕೋ ಚೆನ್ನಾಗಿಲ್ಲ ಅನಿಸಿತ್ತು.
ಒಳ್ಳೇದು ಕೊಡಿ ಮಾರಾಯ್ರೆ ಎಂದು ನಮ್ಮ ಮಾಮೂಲಿ ಮಾರ್ವಾಡಿ ದಿನಸಿ ಅಂಗಡಿಯಲ್ಲಿ ವಿಚಾರಿಸಿದ್ದಾರೆ ಇವರು. ಮುಂದಿನ ತಿರುವಿನಲ್ಲಿದ್ದ ಭಟ್ಟರ ಅಂಗಡಿಯಲ್ಲಿ ಇದೆಯೇ ಎಂದು ಕೇಳಿದ್ದಾರೆ. ಸ್ಟಾಕು ಖಾಲಿ ನಾಲ್ಕು ದಿನದಲ್ಲಿ ಕೋಡೋಣ ಅಂದರಂತೆ. ತುಸು ದೂರದಲ್ಲಿದ್ದ ಚೈತನ್ಯ ಭವನ ಹೋಟೆಲಿನವರನ್ನು ಕೇಳಿದಾಗ ಬೊಂಬಾಯಿಂದ ತರಿಸಿ ಕೊಡ್ತೇವೆಂದರು. ಇವರಿಗೆ ಖಾಲಿ ಕೈಯಲ್ಲಿ ಬಂದೆನಲ್ಲ ಎಂದು ಬೇಸರ. ನಾನು ಉಪ್ಪಿನಕಾಯಿಗೆ ಒಗ್ಗರಣೆ ಹಾಕುವುದೇ ಮರೆತೆ.
ಮಂದಿನವಾರ ಅರ್ಜೆಂಟ್‌ನಲ್ಲಿ ಪೋಸ್ಟಾಫೀಸು ಕೆಲಸ ಪೂರೈಸಲೆಂದು ಪೇಟೆ ಬೀದಿಗೆ ಸ್ಕೂಟರ್ ತಿರುಗಿಸಿದಾಗ ಕೈ ಚಪ್ಪಾಳೆ ತಟ್ಟಿದಂತಾಯಿತು. ವಿಚಾರಿಸಲಾಗಿ ಮಾರ್ವಾಡಿ ಅಂಗಡಿಯವರು ಒಳ್ಳೆ ಇಂಗು ಬಂದಿದೆ ಸಾರ್ ಅಂದರಂತೆ. ಅರ್ಜೆಂಟ್ ಕೆಲಸ ಪೂರೈಸಿ ಬರುತ್ತೇನೆಂದು ಹೇಳಿ ಇನ್ನೊಂದು ಸಣ್ಣ ತಿರುವು ತಗೊಳ್ಳುತ್ತಿದ್ದಂತೆ ‘ಸಾರ್’ ಎಂದು ಯಾರೋ ಕೂಗಿದಂತಾಯಿತು. ಇವನಿಗೆ ಹಿಂದಿನ ಉತ್ತರವೇ, ಚೈತನ್ಯ ಭವನದ ಮುಂದೆ ಹೋಗಬೇಕು. ಅವರು ಒಂದು ಜನ ನೇಮಿಸಿ ನಿಮಗೆ ಒಳ್ಳೆ ಇಂಗು ಬೊಂಬಾಯಿಂದ ಬಂದಿದೆ ಸಾರ್ ಎಂದರಂತೆ. ಇವನಿಗೆ ಉತ್ತರ ಹೇಳುವಷ್ಟರಲ್ಲಿ ಒಂದು ಪುಟ್ಟ ಹುಡುಗ ಓಡೋಡಿ ಬಂದು ಏದುಸಿರು ಬಿಡುತ್ತ ಸ್ಕೂಟರಿಗೆ ಅಡ್ಡಲಾಗಿ ನಿಂತು ನಮ್ಮಂಗಡಿಗೆ ಬರಬೇಕಂತೆ ಸಾರ್ ಒಳ್ಳೆ ಇಂಗು ಬಂದಿದೆ ಎಂದ. ಇವರು ನಕ್ಕು ಆಗಲಿ ಎಂದು ತಮ್ಮ ಕೆಲಸದತ್ತ ಹೊರಟರು. ಮನೆಗೆ ಇಂಗಿನ ಸರಕು ಬಂದು ಬಿತ್ತು. ಇಂಗು ತಿಂದ ಮುಖ ಮಾಡಬೇಕಾದವಳು ನಾನೋ ಅವರೋ ಗೊತ್ತಾಗಲಿಲ್ಲ. ಇಲ್ಲಿನ ಅಂಗಡಿಯವರೇ ಹೀಗೆ. ಅದಕ್ಕೇ ನಮಗೆ ಮೂಡಿಗೆರೆ ಅಂಗಡಿ ಬೀದಿ ಎಂದರೆ ಬಲು ಇಷ್ಟ.
ಈ ಪ್ಲಾಂಟರುಗಳ ಹಮ್ಮುಬಿಮ್ಮಿನ ಬಣ್ಣ ಮತ್ತು ತಾಲೂಕಿನ ಹಣ ಬೆಂಗಳೂರಿಗೆ ಹರಿದಷ್ಟೂ ಢಾಳಾಗಿ ಕಾಣುತ್ತೆ. ಇರಲಿ. ಇವರು ತಮ್ಮ ವ್ಯವಹಾರಕ್ಕೆ ಬ್ಯಾಂಕಿಗೆ, ತಾಲೂಕು ಆಫೀಸಿಗೆ ವಗೈರೆಗೆ ಮೂಡಿಗೆರೆ ಪೇಟೆಗೆ ಬರಬೇಕು. ಇಲ್ಲಿ ಸರ್ಕಾರಿ ನೌಕರರೆಲ್ಲ ಹೆಚ್ಚಾಗಿ ಹೊರ ಊರಿನವರೇ. ವರ್ಗವಾಗೋ ಅಥವಾ ಇನ್ನೇನಿಕ್ಕೊ ಒಂದಲ್ಲ ಒಂದಿನ ಊರು ಖಾಲಿ ಮಾಡುವವರೇ. ಆದರೂ ಒಂತರ ಗೌರವ ಅವರ ಬಗ್ಗೆ ಎಲ್ಲರಿಗೂ. ಜೂನ್ ಶುರುವಿಗೆ ಮುಂಚೆ ಜೀರ್ ಜೀರ್ ಎಂದು ಜೀರುಂಡೆ ಸದ್ದು ಮಾಡುತ್ತಲೇ ಇದ್ದು ಮಳೆ ಕರೆಯುತ್ತಿರುತ್ತವೆ. ‘ಮಳೆ ಬಿಲ್ಲು ಹಕ್ಕಿಗಳು’ ಕೂಗುತ್ತಾ ಹಾರುತ್ತಾ ಮಳೆ ಬರುವ ಮುನ್ಸೂಚನೆ ಕೊಡ್ತವೆ. ಆದರೂ ಈಗ ಬರುವ ಆರ್ದ್ರಾ ಮಳೆ ಆದ್ರೆ ಆಯ್ತು ಹೋದ್ರೆ ಹೋಯ್ತು. ಗುಡುಗು ಮಿಂಚು, ಸಿಡಿಲಬ್ಬರದಿಂದಾಗಿ ಎಷ್ಟೋ ಟಿವಿ, ಫ್ರಿಜ್ ಮಲಗಿ ಹೋಗಿರುತ್ತಂತೆ. ಸೋನೆ ಜಿಬಿರಿನ ಜಿಟಿಜಿಟಿ ಮಳೆಯ ನಿರೀಕ್ಷೆ ಎಲ್ಲರಲ್ಲಿ. ವಾರ ಕಳೆಯುವಷ್ಟರಲ್ಲಿ ಮಳೆ ಬಂದೇ ಬಿಡ್ತು ಅನ್ನಿ. ಅದಕ್ಕೆ ಹೊಂದಿಕೊಳ್ಳಲು ಒಂದೆರಡು ದಿನಬೇಕು.
ಏನೋ ಕಿರಿಕಿರಿ ಏನೊ ಅಸಹನೆ ಅದರ ಬಗ್ಗೆ. ಮಳೆ ಬರಲಿಲ್ಲವ ತಿರಗೋ ಚಟ ಮುಂದುವರಿಯುತ್ತೆ. ಅಷ್ಟರಲ್ಲಿ ಮೂಡಿಗೆರೆಯ ಮೇಲೊಂದು ಕಾಳಮೇಘ ಹೆಪ್ಪುಗಟ್ಟಿ ಮಳೆ ಸುರಿಸಲಿಕ್ಕೆ ಸಿದ್ಧ. ಪರಿಸರದಲ್ಲಿನ ಆಗುಹೋಗುಗಳ ರೂಪುರೇಶೆಯನ್ನು ತನ್ನ ಒಡಲೊಳಗೆ ಇಟ್ಟುಕೊಂಡು ತನ್ನ ಆರ್ಭಟ ತೋರಿಸುತ್ತೆ. ಜುಲೈ ಆಗಸ್ಟ್‌ದಲ್ಲಿನ ಈ ಪುರ್ನವಸು ಮಳೆ ‘ಹೆಣನ ಹೊರಗಿಡಲೂ ಬಿಡಲೊಲ್ಲ’ದಂತೆ. ಒಂದು ನಿಮಿಷವೂ ಪುರುಸೊತ್ತಿಲ್ಲದೆ ಹೊಯ್ಯುತ್ತೆ. ಇನ್ನು ರಿಪೇರಿ ಮಾಡಲು ಸಾಧ್ಯವೆ ಇಲ್ಲವೆಂಬಂತೆ, ಆಕಾಶ ತೂತು ಬಿತ್ತೋ ಏನೋ ಎಂಬಂತೆ. ಇದು ವರ್ಷದಲ್ಲಿನ ಅತ್ಯಧಿಕ ಮಳೆಯ ದಿನಗಳೆಂದು ಹೇಳಬಹುದು.
ಈಗ ನಮ್ಮ ಬದುಕಿನ ಚಿತ್ರಪಟದಲ್ಲಿ ದಿಢೀರ್ ಬದಲಾವಣೆ ಕಾಣುತ್ತೇವೆ. ದಿನದ ಇಪ್ಪತ್ತನಾಲ್ಕು ಗಂಟೆಯೂ ಸುರಿವ ಮಳೆ, ಸೂರ್ಯ ಕಾಣಸಿಗುವುದೇ ಇಲ್ಲ. ಜೊತೆಗೆ ಆಷಾಢದ ಗಾಳಿಯ ಬೀಸಿನ ಮಸಲತ್ತು ಹೇಳುವಂತಿಲ್ಲ. ರೊಯ್ಯೋ ಅಂತ ಸುರಿವ ಮಳೆ ಒಂದೈದು ನಿಮಿಷ ತೆಳ್ಳಗಾಗುತ್ತಿದ್ದಂತೆ ಇನ್ನೂ ಜೋರಾಗಿ ಮಳೆ ಹುಚ್ಚೇಳುತ್ತೆ. ಒಂದೇ ದಿನದಲ್ಲಿ ಹದಿನೆಂಟು ಇಂಚು ಮಳೆ ಬಂದಿರೋದನ್ನೂ ನಾನು ನೋಡಿರುವೆನು. ಐದಾರು ಇಂಚು ಬರುವುದು ಸರ್ವೇ ಸಾಮಾನ್ಯ. ಇಂತಹ ದೊಡ್ಡ ಮಳೆಗಳು ಇಲ್ಲಿ ಬಂದರಷ್ಟೇ ಅಲ್ಲಿ ನಮ್ಮ ದೊಡ್ಡ ದೊಡ್ಡ ಜಲಾಶಯಗಳು ತುಂಬುವುದು. ಈ ತರ ಭಾರೀ ಮಳೆಯಿಂದಾಗಿ ಇಲ್ಲೆಲ್ಲ ಹೆಂಚಿನ ಮನೆಗಳೇ. ಮಾಳಿಗೆ ಇಳಿಜಾರಾಗಿದ್ದು ಮಳೆ ನೀರು ಸುಲಭದಲ್ಲಿ ಹರಿದು ಹೋಗುತ್ತೆ. ಹಾಗಾಗಿ ನಗರದ ಸಮಸ್ಯೆ ನಮಗಿಲ್ಲ.
ನಮ್ಮ ಮನೆಯ ಸನಿಹದಲ್ಲೇ ನೂರಿನ್ನೂರು ವರ್ಷದಷ್ಟು ದೊಡ್ಡದೊಡ್ಡ ಮರಗಳಿವೆ. ಅವಕ್ಕೆ ತಾಗಿದಂತೆಯೇ ಹತ್ತಿಪ್ಪತ್ತು ವರ್ಷದ ಚಿಕ್ಕ ಮರಗಳಿವೆ. ಆಷಾಢ ಗಾಳಿ ಬೀಸುವ ಹೊಡೆತಕ್ಕೆ ಸಣ್ಣ ಮರಗಳು ಒಂದಕ್ಕೊಂದು ತಿಕ್ಕಿದಂತೆ ಯಾರೋ ರೋದನ ಮಾಡಿದಂತಿರುತ್ತೆ. ಯಾರಿಗೆ ಏನು ಸಂಕಷ್ಟ ಬಂದಿದೆಯೋ ಎಂದು ಗಾಬರಿಗೊಳಿಸುವ ಸದ್ದು. ಕಾಫಿ ಗಿಡಗಳಿಗೆ ನೆರಳಿಗಾಗಿ ಸಿಲ್ವರ್ ಗಿಡಗಳನ್ನು ಬೆಳೆಸಿರುತ್ತೇವೆ. ಇವು ಎತ್ತರೆತ್ತರಕ್ಕೆ ಬೆಳೆದಿರುತ್ತವೆ. ಇವು ಜೋರುಗಾಳಿಗೆ ನೆಲಮಟ್ಟಕ್ಕೆ ಬಿದ್ದು ಏಳುವ ದೃಶ್ಯ ಭೀಕರ ಮತ್ತು ಈ ರುದ್ರ ರಮಣೀಯ. ಆ ದೃಶ್ಯವನ್ನು ಮತ್ತೆ ಮತ್ತೆ ನೋಡಬೇಕೆನ್ನಿಸುತ್ತೆ. ರೆಂಬೆ ಕೊಂಬೆಗಳು ತಿರುಚಿ ತಿರುಚಿ ಬೀಳುತ್ತಿರುತ್ತೆ. ಮಳೆಯ ಭೋರ್ಗರೆತ ಹೆಚ್ಚುತ್ತಲೇ ಇರುತ್ತೆ. ಇದೇ ಮಲೆನಾಡಿನ ಮುಂಗಾರು. ಸಿನೆಮಾ ಮುಂಗಾರು ಮಳೆಯಂತಲ್ಲ. ಇಂತಹ ಗಾಳಿ ಮಳೆಯಿಂದಾಗಿ ಎಲ್ಲೆಲ್ಲೋ, ಎಲ್ಲೆಂದರಲ್ಲಿ ದೊಡ್ಡ ದೊಡ್ಡ ಮರಗಳು ಬೀಳುತ್ತಿರುತ್ತವೆ. ಆಗ ಕೆ.ಇ.ಬಿ. ಇಲಾಖೆಯವರಿಗೆ ಭರ್ತಿ ಕೆಲಸ ಮತ್ತು ಎಲ್ಲರ ಬೈಗಳಕ್ಕೆ ತುತ್ತಾಗುವ ಮೊದಲ ಇಲಾಖೆ. ಎಂಟ್ಹತ್ತು ದಿನವಾದರೂ ಇಂಟೀರಿಯರ್ ಗ್ರಾಮಗಳಲ್ಲಿ ಕರೆಂಟು ಇರೊಲ್ಲ. ಟೆಲಿಫೋನ್ ಸಂಪರ್ಕವೂ ಕಟ್. ಇಲ್ಲಿಗೆ ನಮ್ಮ ನಮ್ಮ ಸಂಪರ್ಕವೂ ಕಟ್.
ಮೂಡಿಗೆರೆಯ ಕಾರ್ಗಾಲದ ಮೋಡಿ
ಜುಲೈ ತಿಂಗಳ ಮಧ್ಯ ಭಾಗ, ಧೋ ಎಂದು ಒಂದೇ ಸಮ ಸುರಿಯುವ ಮಳೆ. ಬರ್ರೋ ಎಂದು ಬೀಸುವ ಗಾಳಿ. ಯಾಕಾದರೂ ಈ ಗಾಳಿ ಮಳೆ ಹೀಗೆ ಎಂದೆನಿಸುತ್ತೆ. ಕಣ್ಣಿಗೆ ನಿದ್ರೆ ಹತ್ತೊಲ್ಲ. ನಾಳೆ ಬೆಳಿಗ್ಗೆ ಏನೇನು ಕಷ್ಟಕಾರ್ಪಣ್ಯಗಳು ಕಾದಿವೆಯೋ ಎಂಬ ಕಾತುರತೆ. ಮನೆ ಹಿಂದೆ ಇರುವ ಕೆರೆ ತುಂಬಿ ಕಟ್ಟೆ ಏನಾದರು ಒಡೆದುಹೋದರೆ ದೇವರೇ ಗತಿ. ತೋಟಕ್ಕೆ ನೀರು ನುಗ್ಗಿ ಮುಂದಿನ ಫಸಲೂ ಕೈಕೊಡುತ್ತಲ್ಲ.. ಹೀಗೆ ಏನೇನೋ ಭಯ ಮಿಶ್ರಿತ ಗಾಬರಿ. ನಮ್ಮ ರೈಟ್ರು ಶಿವನ್ನಾದರೂ ಕರೆಯೋಣೆಂದರೆ ಗಾಳಿಮಳೆಗೆ ಎಷ್ಟು ಕೂಗು ಹಾಕಿದರೂ ಕೇಳಿಸೋಲ್ಲ. ಕೈ ಮೈಯೆಲ್ಲ ಮೆತ್ತಿಕೊಂಡ ಮಸಿಯಂತೆ ಕಗ್ಗತ್ತಲು ಬೇರೆ.
ಈಗ ಕೈ ಕಟ್ಟಿ ಕೂರುವ ಸಮಯವಲ್ಲೆಂದು ಮನಗಂಡು ಗಟ್ಟಿ ಗುಂಡಿಗೆಯ ತೇಜಸ್ವಿ ಎದ್ದು ಟಾರ್ಚು ತಗೊಂಡು ಹೊರಟೇ ಬಿಟ್ಟರು ಮಳೆಯಲ್ಲಿ. ಕೆರೆ ಸುತ್ತಾ ಬರ್ತಾರಂತೆ, ಕೆರೆ ತುಂಬಿದೆ. ಇನ್ನು ಹೀಗೇ ಮಳೆ ಸುರಿದು ಕೆರೆ ದಂಡೆ ಮೇಲೆ ನೀರು ಹೋದರೆ, ಕೆರೆ ತುಂಬುವುದಕ್ಕೂ ಮುಂಚೆ ನೀರು ಹರಿದು ಹೋಗಲಿಕ್ಕೆ ತೂಬಿನ ಕಡೆ ಬಂದು ಕಸಕಡ್ಡಿ ಹುಲ್ಲು ಬೆಳೆದಿರುವುದನ್ನು ಬಿಡಿಸಿ ಸರಿಪಡಿಸುವ ಹೊತ್ತಿಗೆ ಶಿವನೂ ಹಾರೆ ತಂದು ಕೈಹಾಕಿದ. ನೀರು ಸರಾಗ ಹರಿಯಲಿಕ್ಕಾಯಿತು.
ಇನ್ನೊಂದು ಬೆಳಗಿನ ಜಾವ ನಿದ್ದೆ ಒತ್ತರಿಸಿ ಬರುತ್ತಿದೆ. ಬೆಚ್ಚಿ ಬಿದ್ದು ಎದ್ದೆ. ಏನೋ ಸದ್ದು, ಏನೋ ಬೀಳುತ್ತಲೇ ಇರುವ ಸದ್ದು. ಏನೋ ಅಪಾಯ ಇದೆ ಎಂಬ ಹೆದರಿಕೆ. ಎದ್ದು ಹೋಗಿ ನೊಡೋಣೆಂದು ಬಾಗಿಲು ತೆಗೆದು ಮುಖ ಹೊರಗೆ ಹಾಕುತ್ತಿದ್ದಂತೆ ರೊಯ್ಯೋ ಅಂತ ಬೀಸಿದ ಗಾಳಿ ಮುಖವನ್ನೇ ದಬ್ಬಿತು. ರಪ್ಪಂತ ಬಡಿಯಿತು ಬಾಗಿಲು. ಎತ್ತರದಿಂದ ನೀರು ಬೀಳುವ ಸದ್ದು ಮನೆ ಪಕ್ಕದಲ್ಲೇ. ಮಳೆ ಚೂರು ಕಡಿಮೆಯಾಗಲೆಂದು ಕಾದೆ. ಮೆಲ್ಲನೆ ಬಾಗಿಲು ತೆಗೆದೆ. ವೆರಾಂಡ ಪೂರ್ತಿ ಗಾಳಿಗೆ ಬಂದು ಬಿದ್ದ ಎಲೆ ಕಸ ಮರದ ಗೆಲ್ಲುಗಳಿಂದ ತುಂಬಿತ್ತು. ಬೀಳುವ ನೀರಿನ ಸದ್ದು ತೀರ ಹತ್ತಿರದಲ್ಲೇ ಸ್ಪಷ್ಟವಾಗಿ.
ಇದರ ಕಾರಣ ಕಣ್ಣ ಮುಂದೆ ಬಂತು. ಪ್ರಕೃತಿಯದೇ ಒಂದು ನಿಯಮವಿರುತ್ತೆ. ಮನುಷ್ಯ ಅದಕ್ಕೆ ಹೊಂದಿಕೊಂಡು ಸರಿ ತೂಗಿಸಿಕೊಂಡು ಕೆಲಸ ಮಾಡಿದರೆ ಎಲ್ಲವೂ ಸುಸೂತ್ರ. ಇಲ್ಲದಿದ್ದಲ್ಲಿ ಅನಾಹುತ ಇದ್ದಿದ್ದೇ. ನಮ್ಮ ಬೇಲಿಗಂಟಿಕೊಂಡೇ ತೋಟಗಾರಿಕೆ ಕಾಲೇಜು ಇದೆ. ನಮ್ಮ ಬೇಲಿಯ ಪಕ್ಕ ಚರಂಡಿ ಹೊಡೆದಿರುತ್ತೇವೆ, ಮಳೆ ನೀರು ಹರಿದು ಹೋಗಲು. ಈ ಕಾಲೇಜಿನವರು ಆ ಗುಡ್ಡದ ಭಾಗದಲ್ಲಿ ಬುಲ್ಡೋಜರ್ ಹೊಡೆಸಿದ್ದರು. ನೆಲ ಸಮತಟ್ಟು ಮಾಡಿ ಗಿಡ ನೆಡಲು. ನಮ್ಮ ಚರಂಡಿ ಮುಚ್ಚಿ ಹೋಗಿ ಮಳೆನೀರು ಎರ್ರಾಬಿರ್ರಿ ನುಗ್ಗಿ ಆ ಇಳಿಜಾರಿನಲ್ಲಿ ಒಂದು ಜಲಪಾತವೇ ಸೃಷ್ಟಿಯಾಯಿತು. ಗುಡ್ಡದ ಇಳಿಜಾರಿನಲ್ಲಿ ಕಾಫಿ ತೋಟ, ಗುಡ್ಡದ ಕಣಿವೆ ಸಾಲುಗಳಲ್ಲಿ ಏಲಕ್ಕಿ ತೋಟ ಮಾಡಿರುತ್ತೇವೆ. ಜಲಪಾತದಿಂದಾಗಿ ಮಣ್ಣು ಕುಸಿದು, ಕಾಫಿ ಗಿಡಗಳು ಮಣ್ಣಾದವು. ಏಲಕ್ಕಿ ಗಿಡ ನೆಟ್ಟಿದ್ದ ಕುರುಹೂ ಇಲ್ಲವಾಗಿತ್ತು. ನಮ್ಮ ಕೆಲಸಗಾರರನ್ನೇ ಕರೆದುಕೊಂಡು ಹೋಗಿ ಆ ಚರಂಡಿಯನ್ನು ಸರಿಪಡಿಸಿಕೊಳ್ಳಬೇಕಾಯಿತು.
ಇನ್ನೊಂದು ಮಳೆಗಾಲ. ಮಳೆ ಕಡಿಮೆಯಾಗುತ್ತಲೇ ಇಲ್ಲ. ಎಷ್ಟೆಲ್ಲಾ ಅನಾಹುತವಾಗುತ್ತಿದೆ, ಏನು ಕತೆ? ತೋಟದ ಒಳಗೆ ಅಲ್ಲಲ್ಲಿ ದಾರಿ ಮಾಡಿರುತ್ತಾರೆ. ಕೆಲಸ ಮಾಡಲು ಅನುಕೂಲವಾಗುವ ದೃಷ್ಟಿಯಿಂದಲೂ ಮತ್ತು ಮಳೆ ನೀರು ಹರಿದು ಹೋಗಲು ಚರಂಡಿ ಮಾಡಬೇಕಾಗುತ್ತೆ. ಜೋರಾದ ಆಷಾಡ ಗಾಳಿಗೆ ಸಿಲ್ವರ್ ಮರಗಳು ಅಲ್ಲಾಡಿ ಮಣ್ಣು ಜಾಲಾಡಿ ಜರಡಿಯಂತಾಗಿರುತ್ತೇನೋ, ಬುಡದಲ್ಲಿ ಅಲ್ಲಲ್ಲಿ. ಜೋರು ಮಳೆಗೆ ನೀರು ನುಗ್ಗಿದ ಹೊಡೆತಕ್ಕೆ ಅಲ್ಲೊಂದು ಸಣ್ಣಕ್ಕೆ ಆದರೆ ಆಳವಾಗಿ ಕೊರಕಲು ಬಿದ್ದಿದೆ. ಅಲ್ಲಿ ಭೂಮಿಯ ತಳದ ಒಡಲಲ್ಲಿ ನೀರು ಹರಿಯುತ್ತಿದೆ. ಇದನ್ನು ಸರಿಪಡಿಸಲು ದೊಡ್ಡ ಮೊತ್ತದ ಖರ್ಚು, ಸರಿಪಡಿಸದಿದ್ದರೆ ಇನ್ನೂ ಅನಾಹುತ. ಮಳೆ ಬಿಡುವು ಕೊಡುವುದನ್ನೇ ಕಾದು ಆ ಕೊರಕಲು ತುಂಬಿಸಿದ್ದಾಯ್ತು. ಮೂರು ಟ್ರಾಕ್ಟರ್ ಲೋಡು ಗ್ರಾವೆಲ್ಲು ಮಣ್ಣೂ ಸಾಲದಾಯಿತು.
ಮಲೆನಾಡಿನ ಮುಂಗಾರೇ ಹೀಗೆ. ಒಂದಲ್ಲ ಒಂದು ಸಮಸ್ಯೆ ಇರುತ್ತೆ. ಮಳೆ ಇಷ್ಟಾದರೂ ತೋಟದ ಕೆಲಸ ನಡೆದೇ ನಡೆಯುತ್ತೆ. ಇಂತಹ ಮಳೆಯಲ್ಲೂ ಕೆಲಸಾನ? ಹೇಗಾದರೂ ಕೆಲಸ ಮಾಡುವರೆಂದು ಮೂಗು ಮುರಿಯುವಿರಾ? ಹ್ಹು. ಮಾಡದೆಯಿದ್ದರೆ ತೋಟ ಹಾಳು ಬೀಳುವ ಲೆಕ್ಕಾಚಾರ. ಮಳೆಗಾಲದಲ್ಲಿ ತೋಟದ ಕಾರ್ಮಿಕರ ಉಡುಪು ವಿಶಿಷ್ಟ. ಕಂಬಳಿಯನ್ನು ತಲೆಯ ಮೇಲಿಂದ ಇಳಿಬಿಟ್ಟು ಅದರ ಮತ್ತೊಂದು ತುದಿಯಿಂದ ಮೈ ಮುಚ್ಚುವಂತೆ ಕೊಪ್ಪೆಯ ಹಾಗೆ ಹೊದ್ದಿರುತ್ತಿದ್ದರು. ಹೆಂಗಸರು ಸೀರೆಯನ್ನು ಮಂಡಿ ಮೇಲಕ್ಕೆತ್ತಿ ಕಟ್ಟಿರುತ್ತಿದ್ದರು. ಮಳೆಗೆ ಒದ್ದೆಯಾಗದಂತೆ. ಹಾಗೆಯೇ ಕಳೆದ ವರ್ಷದ ಕಂಬಳಿ ಸೊಂಟಕ್ಕೆ ಮಿಡಿಯಂತೆ ಸುತ್ತಿರುತ್ತಿದ್ದರು. ಗಂಡಸರ ಉಡುಪು ಚಡ್ಡಿ ಅಥವ ಪಂಚೆ. ಅದೇ ರೀತಿ ಕಂಬಳಿ ಕೊಪ್ಪೆ. ಈ ಕಂಬಳಿಯನ್ನು ತೋಟದ ಸಾಹುಕಾರ್ರೇ ಮಳೆ ಶುರುವಾಗುತ್ತಿದ್ದಂತೆಯೇ ಕೊಡಬೇಕಾಗಿತ್ತು. ಇದಕ್ಕಾಗೇ ಬಂಡ್ಲುಗಟ್ಟಲೆ ಒರಟು ಕಂಬಳಿ ಮೂಡಿಗೆರೆ ಸೊಸೈಟಿಗೆ ಬಂದು ಬೀಳುತ್ತಿತ್ತು. ಈಗ ಪ್ಲಾಸ್ಟಿಕ್ಕು ಆವರಿಸಿದೆ.
ಇಂತಹ ಕಂಬಳಿ ನೇಯುವ ಉದ್ದಿಮೆಯೇ ಈಗ ಇಲ್ಲ. ನೇಯುತ್ತಿದ್ದವರು ಈಗ ಸಿಕ್ಕಿದ ಕೆಲಸಕ್ಕೆ ಹೋಗುವಂತಾಗಿದೆ. ತೋಟದ ಮಾಲೀಕನನ್ನು ಸಾಹುಕಾರ್ರೆ ಎಂದೇ ಆಳುಗಳು ಕರೆಯುತ್ತಿದ್ದರು. ಈ ಮಾಲೀಕ ಎಷ್ಟೇ ಸಾಲದ ಶೂಲಕ್ಕೆ ಸಿಕ್ಕಿಕೊಂಡಿದ್ದರೂ ಸಂಬಳ ಕೊಡಲು ಕಷ್ಟದಲ್ಲಿದ್ದರೂ ಸಾಹುಕಾರನೇ ಆಗಿರುತ್ತಿದ್ದ ಇವರ ಬಾಯಲ್ಲಿ. ಹಳೆಯ ತಲೆಮಾರಿಗಾಯಿತು ಈ ಪದ ಬಳಕೆ. ಈಗ ಎಲ್ಲರೂ ಸಾರ್ ಎಂದೇ ಕರೆಯುತ್ತಾರೆ. ಅಕ್ಷರಾಭ್ಯಾಸದ ತಿಳುವಳಿಕೆಯ ಪರಿಣಾಮ. ಕಂಬಳಿಗೆ ಬದಲಿಗೆ ದೊಡ್ಡ ದೊಡ್ಡ ಪ್ಲಾಸ್ಟಿಕ್ ಚೀಲಗಳನ್ನು ಕೊಡುತ್ತಾರೆ. ಅದನ್ನೇ ಕೊಪ್ಪೆಯ ಹಾಗೇ ಹಾಕಿಕೊಂಡು ತೋಟದಲ್ಲಿ ಕೆಲಸ ಮಾಡುತ್ತಾರೆ. ಒಂದು ಕತ್ತಿ, ಉದ್ದ ತಗಡು ಪ್ರತಿ ಆಳಿಗೂ ಕೊಡುತ್ತಾರೆ. ಈ ತಿಂಗಳಲ್ಲಿ ಸಾಮಾನ್ಯವಾಗಿ ತೋಟದಲ್ಲಿ ಬೆಳೆದ ಹಳು ತೆಗೆಯುವ ಕೆಲಸವಿರುತ್ತೆ. ಗಾಳಿ ಜೋರಿದ್ದಾಗ ಮರದ ಕೊಂಬೆ, ಗೆಲ್ಲುಗಳೂ ತುಂಡಾಗಿ ಬೀಳುವುದುಂಟು. ಆಗ ಅಪಾಯವೂ ಉಂಟು. ಅಂತಹ ದಿನಗಳಲ್ಲಿ ಒಂದೆರಡು ದಿನ ಮನೆಯಲ್ಲೇ ಕೂರುತ್ತಾರೆ. ಉಳಿದಂತೆ ಕೆಲಸಕ್ಕೆ ಬರಬೇಡಿರೆಂದರೂ ಬರುತ್ತಾರೆ. ಕೂತರೆ ಅವರ ಅನ್ನಕ್ಕೆ ಅವರೇ ಕಲ್ಲು ಹಾಕಿಕೊಂಡಂತೆ.
ಈ ಗಾಳಿ ಮಳೆ ಕಾಟ ಒಂದೆರಡಲ್ಲ. ಕಳ್ಳರೂ ಬೀಳುವುದುಂಟು. ಗಾಳಿ ಮಳೆ ಕತ್ತಲೆ ಒಳ್ಳೆಯ ಕಾಲ ಅವರಿಗೆ. ಗಾಳಿಯ ಅಬ್ಬರವಿದ್ದಾಗ ಇನ್ನೇನು ಜೊಂಪು ಹತ್ತಿದೆ. ಇನ್ನೂ ಜೋರಾಯಿತು ಮಳೆ ಗಾಳಿ, ನಮ್ಮ ಎರಡು ನಾಯಿಗಳು ಯಾರನ್ನೋ (ಗಾಳಿಯನ್ನೇ) ಅಟ್ಟಿಸಿಕೊಂಡು ಹೋಗುವಂತೆ ಬೊಗಳಿ ಓಡಿದ ಸದ್ದು. ಬರೀ ಮಳೆ ಗಾಳಿ. ಬೆಳಿಗ್ಗೆ ನೋಡಿದರೆ ಬಾಗಿಲಲ್ಲಿ ಇಟ್ಟಿದ್ದ ಎರಡು ಛತ್ರಿ ಇಲ್ಲ. ಒಂದೆರಡು ಸ್ಪ್ರಿಂಕ್ಲರ್ ಪೈಪೂ ಇಲ್ಲ. ಮಾರನೆ ದಿನ ಗೊತ್ತಾಯ್ತು ಆ ಕಡೆ ಪಕ್ಕದಲ್ಲೇ ತೋಟದಲ್ಲೇ ಕಳ್ಳರು ಜಾಂಡಾ ಹೂಡಿದ್ದಾರೆ. ನಾಲ್ಕು ಕಡೆ ಗೋಲು ಮಾಡಿಕೊಂಡು, ಬಾಳೆ ಮರ ತುಂಡಾಗಿ ಏಲಕ್ಕಿ ಗಿಡಗಳಿಗೆ ಕತ್ತಿ ಪ್ರಯೋಗ ಮಾಡಿದ ಒಂದು ಅಡಗು ತಾಣವಿದೆ. ಗಾಳಿ ಮಳೆಯಿಂದ ರಕ್ಷಣೆ ರಾತ್ರಿಗೆ.
ಇಂತದೇ ಮತ್ತೊಂದು ಕಗ್ಗತ್ತಲು ರಾತ್ರೆ. ಇನ್ನೂ ನಿದ್ದೆ ಬಂದಿಲ್ಲ. ಕಿಟಕಿಗೆ ಯಾರೋ ಟಾರ್ಚು ಬಿಡುತ್ತಿದ್ದಾರೆ. ಹೆದರಿ ನೀರಾದೆ. ಆ ಬೆಳಕು ಪಕ್ಕದ ಕಿಟಕಿಗೂ ಹೋಯ್ತು. ಇನ್ನೂ ಹೆದರಿಕೆ ಹೆಚ್ಚಾಯ್ತು. ಎದೆ ಡವಡವ ಗುಟ್ಟಿತು. ಎಲ್ಲಾ ಎದುರಿಸಬೇಕಲ್ಲಾ. ಗಟ್ಟಿ ಮನಸ್ಸು ಮಾಡಿ ಎದ್ದು ಕೂತೆ. ಟಾರ್ಚು ಬೆಳಕು ದೂರ ಸರಿಯಿತು. ಮೆಲ್ಲಕೆ ಎದ್ದು ನಿಂತೆ. ಇನ್ನೂ ದೂರ ದೂರ ಹೋಯಿತು ಬೆಳಕು. ಸುಸ್ತು ನಾನು. ಅಷ್ಟರಲ್ಲಿ ಜಗ್ ಜಗ್ ಬೆಳಕು ಹತ್ತಾರು ಆಯಿತು. ಅಯ್ಯೋ ಮಿಣುಕು ಹುಳವೇ!!
ಜಿಗಣೆ, ಅಣಬೆ, ಕಳಿಲೆ ಮತ್ತು ಅರಮರಳು ಉಪ್ಪಿನಕಾಯಿ
ಮೂಡಿಗೆರೆಯಲ್ಲಿ ಮಳೆಗಾಲವೆಂದರೆ ಕೇವಲ ಸುರಿಯುವ ಮಳೆಯಲ್ಲ. ಅದು ಒಂಟಿಕಾಲಿನ ಜಿಗಣೆಗಳ ಕಾಲ. ಮಟ್ಟಣಬೆ, ಮರದಣಬೆಗಳ ಕಾಲ. ಎಳೆಬಿದಿರು ಪಲ್ಯೆ, ಅರಮರಳು ಉಪ್ಪಿನಕಾಯಿಯ ಕಾಲ. ರಾಜೇಶ್ವರಿ ತೇಜಸ್ವಿ ಮಳೆಗಾಲದ ವೈಭವವನ್ನು ಇಲ್ಲಿ ಮುಂದುವರೆಸಿದ್ದಾರೆ. ತೇಜಸ್ವಿಯವರು ತೆಗೆದ ಅಪರೂಪದ ಛಾಯಾಚಿತ್ರಗಳೂ ಜೊತೆಗಿವೆ.
ನಮ್ಮಲ್ಲಿನ ಮಳೆಗಾಲದ ದೊಡ್ಡ ಇರುಸುಮುರುಸು ಜಿಗಣೆ ಕಾಟ. ನೀವು ಎಲ್ಲಾದರೂ ಓದಿರಬಹುದು ನೆಪೋಲಿಯನ್ ತನ್ನ ಬೆನ್ನಿಗೆ ಜಿಗಣೆ ಬಿಟ್ಟಕೊಳ್ಳುತ್ತಿದ್ದ ರಕ್ತ ಕಡಿಮೆ ಮಾಡಿಕೊಳ್ಳಲು. ಅಥವಾ ಇಲ್ಲೆಲ್ಲೋ ಅಸ್ಸಾಂನಲ್ಲಿ ಒಂದು ನಿರ್ದಿಷ್ಟ ಖಾಯಿಲಿಗೆ ಜಿಗಣೆ ಬಳಸುತ್ತಾರೆಂದು. ಇದು ಇಷ್ಟಿಷ್ಟೇ ಸೊಗಸು ನಿಮ್ಮ ಕಿವಿಗೆ ಬಿದ್ದಷ್ಟು. ಮೂಡಿಗೆರೆಯ ಜಿಗಣೆ ಕಾಟವೆ ಬೇರೆ.
ಇಲ್ಲಿ ಥಂಡಿ ಹೆಚ್ಚಾಗಿರುವೆಡೆ ಜಿಗಣೆ ಇರುತ್ತೆ ಮಳೆಗಾಲದಲ್ಲಿ. ಹಳ್ಳದ ಬದಿ ನೆರಳಿನಲ್ಲಿ ವರ್ಷಪೂರ್ತಿ ಇರಬಹುದು. ಮಳೆ ಹಿಡಿತಿದ್ದಂತೆ ಭೂಮಿಯಲ್ಲಿ ಎಲ್ಲಿ ಅಡಗಿ ಕುಳಿತಿರುತ್ತವೋ ಹೊರಗೆ ಬರುತ್ತವೆ. ನಮ್ಮ ಕಣ್ಣಿಗೆ ಕಾಣಸಿಗಬೇಕಾದರೆ ಅದನ್ನು ಹುಡುಕಿ ನೋಡಬೇಕು. ಅವು ಮಾತ್ರ ರಕ್ತದ ವಾಸನ ಹಿಡಿದೇ ಬಂದು ಕಚ್ಚುತ್ತವೆ. ಕಚ್ಚಿದಾಗ ಏನೊಂದು ಚೂರು ಗೊತ್ತೇ ಆಗುವುದಿಲ್ಲ. ರಕ್ತ ಹೀರಿ ಗೋಲಿಯಂತಾದ ಮೇಲೆ ಅದೇ ಉದುರುತ್ತೆ. ಕಚ್ಚಿದ ಜಾಗದಿಂದ ರಕ್ತ ಬರಲಿಕ್ಕಾಗುತ್ತೆ. ಮೂರುದಿನ ಅಲ್ಲಿ ತುರಿಕೆ .ಇದು ಎಲ್ಲೆಲ್ಲೋ ಮೈಮೇಲೆ ಹರಿದು ಕಚ್ಚುತ್ತವೆ. ಕಚ್ಚಿ ಹಿಡಿದಾಗ ಸುಲಭಕ್ಕೆ ಕೀಳಲು ಬರುವುದಿಲ್ಲ. ಮಾರನೆ ದಿನ ತೋಟಕ್ಕೆ ಹೋದರೆ ಹಿಂದೆ ಕಚ್ಚಿದ್ದ ಜಾಗದಲ್ಲೇ ಎರಡು ಬೇಕಾದರೂ ಕಚ್ಚಿ ರಕ್ತ ಹೀರುತ್ತೆ. ಒಂದಿಂಚು ಉದ್ದ, ತೆಳು ಕಪ್ಪು, ಬಾಯಿ ಬಾಲ ಒಟ್ಟಿಗೆ ಮಾಡಿಕೊಂಡು ಹೆಟ್ಟೆ ಮೇಲೆತ್ತಿ ಚಲಿಸುತ್ತವೆ. ವಾಸನೆ ಹಿಡಿದಾಗ ಒಂಟಿ ಕಾಲು. ತೋಟದ ಕೆಲಸಕ್ಕೆ ಹೊರಡುವಾಗ ಆಳುಗಳು ಕಾಲಿಗೆ ಸುಣ್ಣ ಹಚ್ಚಿಕೊಳ್ತಾರೆ.
ನಮ್ಮಲ್ಲಿನ ರಸ್ತೆ ಬದಿ ಮರ ಗಮನಿಸಿ, ಪೋಸ್ಟ್ ಆಫೀಸ್ ದಾರೀಲಿ ಹೋಗಿ, ಕಾಡಿನಲ್ಲಿ ತಿರುಗಾಡಿ ಎಲ್ಲ ಕಡೆ ಅಪರೂಪದ ಅನೇಕ ಬಗೆಯ ಆರ್ಕಿಡ್‌ಗಳು ಕಾಣಸಿಗುತ್ತವೆ. ನಮ್ಮ ಮನೆ ಮುಂದಿನ ಮತ್ತಿಮರ, ಗೋವಿಲ್ದು ಮರದ ಬುಡದಲ್ಲಿ ನಿಂತು ನೋಡಿದರೆ ಸಾಕು ಹತ್ತಾರು ಬಗೆಯ ಆರ್ಕಿಡ್‌ಗಳು ಕಾಣಬಹುದು. ಸರ್ವೇ ಸಾಮಾನ್ಯವಾದ್ದು ಸೀತಾಳೆ ಆರ್ಕಿಡ್.(ಆರ್ಕಿಡ್ ಅನ್ನುವುದಕ್ಕೇ ಸೀತಾಳೆ ಎಂದೂ ಹೇಳುವರು) ಇವು ಸಣ್ಣಸಣ್ಣ ಹೂವಿನ ದೊಡ್ಡ ಗೊಂಚಲು. ಸುವಾಸನೆ ಇರುತ್ತೆ. ಹೂ ಹತ್ತತ್ರ ಇರುವ ಗೊಂಚಲು ಒಂದು ಬಗೆ, ಬಿಡಿ ಬಿಡಿ ಹೂ ಇರುವ ಗೊಂಚಲು ಇನ್ನೊಂದು ಬಗೆಯದು. ಬಿಳಿವಯೊಲೆಟ್ ಮತ್ತು ಪಿಂಕ್ ಮಿಶ್ರಿತ ಬಣ್ಣ ಇರುತ್ತೆ. ನೋಡಲು ಬಲು ಚೆಂದ. ಒಂದು ಕಾಲದಲ್ಲಿ ಮದುವೆ ಹೆಣ್ಣಿಗೆ ಅಲಂಕರಿಸಲು ಈ ಹೂವು ಇರಲೇ ಬೇಕಿತ್ತಂತೆ. ಇನ್ನೊಂದು ಕತೆಯೂ ಇದೆ. ಹೆಣ್ಣು ಮಗಳು ತೌರೂರಿಂದ ಅತ್ತೆಮನೆಗೆ ಹೋಗುವಾಗ ಗಾಡಿಯಲ್ಲಿ ಹೋಗುತ್ತ ಕಟ್ಟಿದ ಹೂ ಬಿಡಿ ಬಿಡಿ ಗೊಂಚಲಂತೆ. ಅಲ್ಲಿಂದ ತೌರುಮನೆಗೆ ಬರುವಾಗ ಕಟ್ಟಿದ್ದು ವತ್ತಾಗಿರುವ ಗೊಂಚಲಂತೆ. ಎಷ್ಟು ದೂರ ಬಂದರೂ ದಾರಿ ಸಾಗದಂತಾಗುತ್ತಲ್ಲ ಅದಕ್ಕಿರಬಹುದೇನೋ ಈ ಕಲ್ಪನೆ!
ನರ್‌ವಿಲಯ, ಫಾಕ್ಸ್‌ಟೇಲ್ (ಸೀತಾಳೆ), ಸುಸಾನ ಆರ್ಕಿಡ್, ಡೌವ್ ಆರ್ಕಿಡ್, ಬೊಂಬಿನ ಆರ್ಕಿಡ್ ಇನ್ನೂ ಹತ್ತು ಹಲವಾರು. ಡೌವ್ ಆರ್ಕಿಡ್ ಹೂವು ಒಂದು ಬಿಳಿ ಪಾರಿವಾಳ ರೆಕ್ಕೆ ಬಿಚ್ಚಿ ಕೂತಂತೇ ಇರುತ್ತೆ. ಒಮ್ಮೆ ಒಬ್ಬರು ಪೋಲೆಂಡ್ ಮಹಿಳೆ ಕಲಾ ವಿಮರ್ಶಕಿ ಬೆಂಗಳೂರಿನಲ್ಲಿ ನೆಲೆಸಿರುವವರು ನಮ್ಮಲ್ಲಿಗೆ ಆರ್ಕಿಡ್ ನೋಡಲು ಬರಲೇ ಎಂದು ಫೋನಾಯಿಸಿದರು. ಮಾರನೆ ದಿನವೇ ಅವರ ಪರಿಚಿತ ಕನ್ನಡಿಗರೊಬ್ಬರನ್ನು(ಇವರು ತಮ್ಮ ಮನೆಯಲ್ಲಿ ವೈಲ್ಡ್ ಆರ್ಕಿಡ್ ಬೆಳೆಸಿರುವವರು) ಕರೆದುಕೊಂಡು ಬಂದೇ ಬಿಟ್ಟರು. ಸಣ್ಣಕ್ಕೆ ಮಳೆ ಬರುತ್ತಲೇ ಇದೆ. ಮನೆ ಸುತ್ತಮುತ್ತ ನೋಡಿ ಸಂತೋಷಗೊಂಡರು. ಆರ್ಕಿಡ್ ನೋಡಲು ತೋಟಕ್ಕೆ ತೆರಳಿದರು. ಜಿಗಣೆ ಬಗ್ಗೆ ಎಚ್ಚರಿಕೆ ಹೇಳಿ ಕಳಿಸಿದೆ. ತೋಟ ಎಲ್ಲ ತಿರುಗಿ ಸುಮಾರು ಬಗೆಯವು ನೋಡಿದೆನೆಂದು ಸಂತೋಷದಿಂದ ಮನೆಗೆ ಹಿಂದಿರುಗಿದರು. ಆ ಕಾಲದಲ್ಲಿ ಹೂವಿರಲಿಲ್ಲ. ಸಣ್ಣಕ್ಕೆ ಮಳೆ ಬರುತ್ತಲೇ ಇತ್ತು. ಅವರು ಛತ್ರಿಯನ್ನೂ ಒಯ್ದಿರಲಿಲ್ಲ. ಅವರ ಕುತ್ತಿಗೆ ಮೇಲೊಂದು ಜಿಗಣೆ ಕಚ್ಚಿ ಹಿಡಿದಿದ್ದನ್ನು ನಾನೇ ಕಿತ್ತು ತೆಗೆದೆ. ಅದನ್ನು ನೋಡಿ ನನಗೆ ನಗು ಬಂತು. ಅವರ ಬಿಳಿ ಚರ್ಮದ ಬಣ್ಣಕ್ಕೂ ಜಿಗಣೆ ಕಚ್ಚಿ ಮೈಯೆಲ್ಲ ರಕ್ತವರ್ಣ ಆಗಿತ್ತು. ಇದು ಯಾವ ಮಹಾಲೆಕ್ಕವೆಂದುಕೊಂಡು ಏನೇನೂ ಬೇಜಾರುಗೊಳ್ಳದೆ ಇಟ್ ಇಸ್ ಓಕೆ. ಅನ್ನುತ್ತಿದ್ದರು. ಜೊತೆಯವರಿಗೆ ಮಾತ್ರ ಏನೋ ಒಂದು ತರದ ಅನ್‌ಈಸಿನೆಸ್‌ನಿಂದ ಬರುವ ಸಣ್ಣ ಇರಿಟೇಶನ್. ಒಳ್ಳೆ ಊಟ ಹೊಡೆದು ವಂದನೆ ಹೇಳಿ ವಾಪಾಸಾದರು.
ಮೂಡಿಗೆರೆಯ ಎರಡನೆ ಅತಿಥಿ ಅಣಬೆ. ಇದು ಭುವಿ ಒಳಗೆ ಅಡಗಿಕೊಂಡಿರುವ ವಿಸ್ಮಯ. ಯಾವುದೋ ಮೋಡದಲ್ಲಿ ಎಲ್ಲೋ ಗುಡುಗಿದ ಎರಡು ದಿನದಲ್ಲಿ ನಮ್ಮ ಗುಡ್ಡದ ಮೇಲಿನ ಹುತ್ತದ ಮೇಲೇ ಹೆಗ್ಗಾಲ್ ಅಣಬೆ ಮೂಡುತೆಂದ್ರೆ ಏನು. ಇದು ಏಕೆ ಅಂದೀರಿ. ಇಲ್ಲಿನ ಸ್ಥಳೀಯ ಹಿಂದಿನವರು ಈ ಗುಡುಗು, ಅಣಬೆ ಏಳುವ ಜಾಗ ಡೈರೀಲಿ ಗುರ್ತು ಮಾಡಿಕೊಂಡಿರ್ತಾರಂತೆ. ಗುಡುಗಿದಾಗ ಹೋಗಿ ಅಣಬೆ ಎತ್ತಿಕೊಂಡು ಬರ್ತಾರಂತೆ. ಅಲ್ಲಲ್ಲಿ ತೋಟದಲ್ಲಿ ದರಗಿನ ಮಧ್ಯೆ ಗುಪ್ಪೆಗುಪ್ಪೆಯಾಗಿ ಬೆಳ್ಳಂ ಬೆಳ್ಳಗೆ ಮೊಗ್ಗು ಅರಳುವ ದರಗಣಬೆಯಂತೂ ಕಣ್ಣಿಗೆ ಹಬ್ಬ. ಇದನ್ನು ಎತ್ತಿ ಕುಕ್ಕೆಗೆ ತುಂಬಿಕೊಳ್ಳುವುದು ಇನ್ನೂ ಚೆಂದ. ಅಡುಗೆ ಮಾಡಿ ಉಂಡರೆ ಅದರ ಆಪ್ಯಾಯ ರುಚಿ ಮತ್ತೊಂದಿಲ್ಲ. ಸ್ವಚ್ಛ ಮಾಡುವುದು ಬೇಸರದ ಕೆಲಸವಾದರೂ ರುಚಿ ನೆನೆಸಿಕೊಂಡು ಬೇಸರನ ಅತ್ತಲಾಗಿ ಹಾಕ್ತೀವಿ, ಮನೆ ಮಂದಿಗೆಲ್ಲ ಗಮ್ಮತ್ತು ರುಚಿ. ಹುಲ್ಲಳಬಿ, ಮಟ್ಟಣಬೆ, ಮರದಣಬೆ ಇನ್ನೂ ಬಗೆ ಬಗೆಯವು.
ಇದೊಂದು ವಿಚಿತ್ರ ನೋಡಿ. ಮಳೆಗಾಲದಲ್ಲಿ ಅಣಬೆ ಎದ್ದಾಗ ಕುಕ್ಕೆ ತಗೊಂಡು, ಮಕ್ಕಳನ್ನು ಕಟ್ಟಿಕೊಂಡು, ತೋಟಕ್ಕೆ ಹೋಗಿ ಆಹ ಅಲ್ಲೊಂದು ಗುಂಪು! ಆಹ್ ಇಲ್ಲೊಂದೂ ಗುಪ್ಪೆ!ಯೆಂದು ಕುತೂಹಲ ಕೆರಳಿಸಿ, ಉತ್ಸಾಹ ತಣಿಸಿ ನಲಿಸುವ ಆಸಕ್ತಿಯುತ ತಿರುಗಾಟದಿಂದ ಇಂದು ವಿಮುಖರಾಗಿದ್ದೇವೆ. ವಿಧ್ಯಾಭ್ಯಾಸಕ್ಕೆಂದು ಎಲ್ಲೊ ಹೋಗಿರ್ತಾರೇನೋ ಮಕ್ಕಳು. ಆದರೆ ವಿದೇಶಿ ಮ್ಯಾಗ್‌ಜಿನ್‌ನಲ್ಲಿ ಮಕ್ಕಳು ಮರಿ ಕಟ್ಟಿಕೊಂಡು ಖುಷಿಯಿಂದ ಅಣಬೆ ಎತ್ತಲಿಕ್ಕೆ ಹೋಗುವ ಚಿತ್ರ ಮೊನ್ನೆಯಷ್ಟೇ ನೋಡಿದೆ. ಇಷ್ಟೇ ಅಲ್ಲ. ಆಂಗ್ಲ ಸಾಹಿತ್ಯದಲ್ಲೂ ಬರುತ್ತೆ. ಅಣಬೆ ಎತ್ತಲಿಕ್ಕೆ ಹೋದಾಗ-ಏನೇನೋ ಘಟನೆ ನಡೆಯುತ್ತೆ. ಇದು ನಮ್ಮಲ್ಲಿ ಇಲ್ಲ. ಬಹುಶಃ ಬೇರೆಯದೇ ಕಾರಣವಿರಬಹುದು. ಈಶ್ವರನ ಪೂಜೆಗೇ ಒಂದು ಹೂವಂತೆ, ದೇವರಿಗೆ ಮೂಲಂಗಿ ನೇವೇದ್ಯಕ್ಕಿಡುವಂತಿಲ್ಲ ಗೌರಿ ಅಮೇಧ್ಯವಂತೆ. ಅಣಬೆ ಅನೇಕರಿಗೆ ನಿಷಿದ್ಧ ಆಹಾರವಂತೆ. ಇದನ್ನು ಇಲ್ಲಿಗೆ ಬಿಡೋಣ. ತೋಟಗಾರಿಕೆ ಇಲಖೆಯವರು ಅಣಬೆ ಬೆಳೆಯುವುದನ್ನು ವೃದ್ಧಿಪಡಿಸುತ್ತಿದ್ದಾರೆ. ಬೆಳೆದರೆ ಹಣದ ಥೈಲಿ ನಿಮ್ಮ ಕೈಲಿ ಅಂತಾರೆ. ರೈತನಿಗೊಂದಿಷ್ಟು ಆಕರ್ಷಣೆ.
ಮಲೆನಾಡಿನ ಸ್ಪೆಷಲ್ ಕಳಿಲೆ(ಟೆಂಡರ್ ಬ್ಯಾಂಬೂ ಶೂಟ್) ಪಲ್ಯ, ಸಾರು. ಇದೂ ಮಳೆಗಾಲದಲ್ಲಿ ಮಾತ್ರ ಸಿಗುವಂತಹದ್ದು. ಮಳೆ ಹೆಚ್ಚುತ್ತಿದ್ದಂತೆ ಎಳೆ ಬಿದಿರು ತಲೆ ಎತ್ತುತ್ತವೆ. ಇದರ ಅಡುಗೆ ವಿಶಿಷ್ಟವಾದ ರುಚಿ. ಮಾತ್ರ ಇದನ್ನು ಹಸನು ಮಾಡುವುದು ಸ್ವಲ್ಪ ಹೆಚ್ಚಿನ ಕೆಲಸ ಹಿಡಿಸುತ್ತೆ. ಹಿಂದೆ, ಅಂದರೆ ಕುವೆಂಪು ಸಣ್ಣ ಬಾಲಕನಾಗಿದ್ದಾಗ ಅಷ್ಟು ಹಿಂದೆ ಈ ಕಳಿಲೆಯನ್ನು ಉಪ್ಪಿನಲ್ಲಿ ನೆನೆಸಿ ಜಾಡಿಯಲ್ಲಿ ಹಾಕಿ ಇಡುತ್ತಿದ್ದರಂತೆ. ಮಕ್ಕಳು ಯಾವಾಗಲಾದರೂ ಒಂದೊಂದು ಚೂರು ತಗೊಂಡು ಚೀಪುತ್ತಿದ್ದರಂತೆ. ಕಳಿಲೆ, ನಿಂಬೆಹಣ್ಣು ಮತ್ತು ಇಲ್ಲಿನ ಕಾಡಿನಲ್ಲಿ ಸಿಗುವ ಅರಮರಳುಕಾಯಿ ಗೊಂಚಲು ಸೇರಿಸಿ ಉಪ್ಪಿನಕಾಯಿ ಮಾಡಿದರೆ ಯಾವ ದೇಶದ ಮೂಲೆಯಲ್ಲಿದ್ದರೂ ನೆನೆಸಿಕೊಂಡರೇ ತಿನ್ನಬೇಕೆಂಬ ಆಸೆ ತರಿಸುತ್ತೆ. ಈಗೆಲ್ಲ ಭೂಮಿ ಕಂಡಲ್ಲಿ ಕಾಫಿಗಿಡ ನೆಡುವ ಭಾವನೆಯಿಂದಾಗಿ ಅರಮರಳು ಕಾಯಿ ಗಿಡಗಳಿಗೆ ಕತ್ತಿ ಪ್ರಯೋಗವೇ ಗತಿ.
ಕೇರೆ ಹಾವು, ನವಿಲು ಮತ್ತು ಮೂಡಿಗೆರೆ ಎಂಬ ಚಿಕ್ಕ ಊರು
ಇತ್ತೀಚೆಗೆ ಎಲ್ಲೆಡೆ ಆಗಿರುವಂತೆ ಇಲ್ಲಿಯೂ ನವಿಲುಗಳು ಹೆಚ್ಚಾಗಿ, ಅವು ಕೂಗುವ ಸದ್ದು ಸದಾ ಕೇಳುತ್ತಿರುತ್ತೆ. ಅಷ್ಟೇ ಅಲ್ಲ ಮನೆ ಪಕ್ಕದ ರಂಜದ ಮರದ ಮೇಲೆ ಎರಡು ಮೂರು ನವಿಲುಗಳು ಸಂಜೆ ಹೊತ್ತು ಬಂದು ಗೊತ್ತು ಕೂರುತ್ತವೆ. ಯಾವಾಗಲಾದರೂ ಒಂದೊಂದು ಸಲ ಗಂಡು ನವಿಲು ಉದ್ದಗರಿ ಬಿಚ್ಚಿಕೊಂಡು ಮನೆ ಹಿಂದಿನ ಅಂಗಳದಲ್ಲಿ ಓಡಾಡುವುದನ್ನು ನೋಡುತ್ತೇವೆ. ಅವು ಬಹಳ ಸೂಕ್ಷ್ಮ, ನಮ್ಮ ನೆರಳು ಅಲ್ಲಾಡಿದ್ದು ಗೊತ್ತಾದರೆ ಸಾಕು ನಡೆದುಕೊಂಡೇ ಹೋಗಿ ಕಾಡೊಳಗೆ ಮರೆಯಾಗುತ್ತವೆ.
ಇಲ್ಲಿ ಕಾಂಕ್ರೀಟ್ ಕಾಡು ಇಲ್ಲ. ಹಸಿರು ಕಾಡಿದೆ. ಹಾಗಾಗಿ ಹಾವುಗಳು ಇವೆ. ಮಳೆಗಾಲ ಮುಗಿದಿದೆ. ಚಳಿಗಾಲಕ್ಕೆ ಕಾಲಿಟ್ಟಿರುವೆವು. ಛಳಿ ಛಳಿ ಅಂತಿರಬೇಕಾದರೆ ಒಳ್ಳೆ ಬಿಸಿಲು ಚುರುಕಾದ ಬಿಸಿಲು ಬರುತ್ತೆ. ಈ ಬಿಸಿಲು ಕಾಯಿಸುವುದು ಹಾವಿಗೂ ಇಷ್ಟ. ಪೇಟೆಗೆ ಹೋಗೋಣೆಂದು ಬಾಗಿಲು ತೆಗೆದರೆ ತುಸುವೇ ದೂರದಲ್ಲಿ ಉದ್ದುದ್ದ ಹಾವು ಬಿಸಿಲಿಗೊರಗಿರುತ್ತೆ. ಜಂಘಾಬಲವೇ ಉಡುಗಿ ಹೋಗುತ್ತೆ. ಮನೆ ಪಕ್ಕ ಹಾವು ಅಂದರೆ ಏನು! ಸಾಮಾನ್ಯವಾಗಿ ಅದು ಕೇರೇ ಹಾವಾಗಿರುತ್ತೆ. ನಮ್ಮ ಸಪ್ಪಳ ತಿಳಿದು ಸೊಯ್ಯಂತ ವೇಗವಾಗಿ ಹರಿದು ಹೋಗುತ್ತೆ. ಕೇರೇ ಹಾವು ಅಂಥ ಅಪಾಯಕಾರಿ ಏನೂ ಅಲ್ಲ. ಆಗೊಮ್ಮೆ ಈಗೊಮ್ಮೆ ಕಟ್ಟ್ಹಾವೂ, ನಾಗರ ಹಾವೂ ನೋಡುತ್ತೇವೆ. ಯಾವಾಗಲಾದರೂ ಒಂದೊಂದು ಸಲ ಮನೆ ಒಳಗೂ ಬರುತ್ತವೆ. ಸಿಮೆಂಟು ನೆಲವಾಗಿರುವುದರಿಂದ ಅವಕ್ಕೆ ಹರಿದಾಡಲು ಕಷ್ಟ. ಅಲ್ಲದೆ ಮನೆ ನಾಯಿಗಳೂ ಇರುತ್ತವೆ. ಇನ್ನು ಮನೆ ಹಿಂಬಾಗದಲ್ಲಿ, ಕಣದಲ್ಲಿ ಬಟ್ಟಂ ಬೇಸಿಗೆಯಲ್ಲಿ ಜೋಡಿಹಾವು ಜಾಗರ ಆಡ್ತಿರುತ್ತವೆ. ಅದೂ ಎರಡು ಮೂರು ದಿವಸ, ಆಮೇಲೆ ನಾಪತ್ತೆ. ಹಾವುಗಳ ಬಗ್ಗೆ ನಮ್ಮ ಎಚ್ಚರಿಕೆ ನಮಗಿರಬೇಕು. ಪಕ್ಕದ ಕೆರೆಯಲ್ಲಿ ನೀರು ಹಾವು ಸಾಮಾನ್ಯ. ಗಿಡದ ಮೇಲೆ ಹಸಿರು ಹಾವು ಒಂದೊಂದು ಸಲ ಕಾಣಸಿಗುತ್ತೆ. ಈ ಹಸಿರು ಹಾವು ಬಂದು ಕಣ್ಣಿಗೇ ಕುಕ್ಕುತ್ತವೆ ಅಂತ ಹೇಳ್ತಾರಪ್ಪ! ಏನೋ ಗೊತ್ತಿಲ್ಲ. ಇಲ್ಲೆ ಮೊನ್ನೆ ಒಬ್ಬರು ರಸ್ತೆ ಮೇಲೆ ನಾಗರಹಾವು ಹೋಗಿತ್ತೆಂದು ತಪ್ಪಿಸಲು ಹೋಗಿ ಆಕ್ಸಿಡೆಂಟ್‌ಗೆ ಒಳಗಾದರು.
ಇನ್ನು ಮೂಡಿಗೆರೆ ಊರಿನ ಬಗ್ಗೆ. ಹಿಂದೆ ಇದೊಂದು ನಿರ್ಜನ ಕುಗ್ರಾಮ. ಯಾವಾಗಲೋ ಒಂದೊಂದು ಬಸ್ಸು ಬಂದು ಹೋಗುತ್ತಿದ್ದವು. ಪೇಟೆ ಬೀದಿಯಲ್ಲೂ ಸಹ ಕೇವಲ ನಾಲ್ಕಾರು ಜನ ಓಡಾಡುವುದು ಕಾಣುತ್ತಿತ್ತು. ಅಂದು ಅಲ್ಲಿ ಓಡಾಡುತ್ತಿದ್ದ ಗಂಡಸರು ಮಹಿಳೆಯರು (ಗೌಡರು, ಗೌಡತಿಯರು) ಇಂದು ಆಂಟಿಕ್ನಂತಾಗಿದ್ದಾರೆ. ಅಂದಿನ ಅವರ ವೇಷಭೂಷಣ ಈಗ ಎಲ್ಲೂ ಕಾಣಸಿಗಲಿಕ್ಕಿಲ್ಲ. ಮಂಡಿ ಮುಚ್ಚುವಷ್ಟು ಒಂಟಿ ಪಂಚೆ, ಬಿಳಿ ಶರ್ಟು, ಕರಿಕೋಟು, ತಲೆಮೇಲೆ ಸ್ವಲ್ಪ ಎಣ್ಣೆ ಹಿಡಿದಂತ ಕರಿಟೋಪಿ. ಶ್ರೀಮಂತ ಗಂಡಸರು ಶರ್ಟಿನೊಂದಿಗೆ ಒಂದು ಖಾಕಿ ಚಡ್ಡಿ. ತಲೆಯಮೇಲೆ ಕಪ್ಪು ಟೋಪಿ. ಹೆಂಗಸರು(ಒಕ್ಕಲಿಗರಲ್ಲಿ) ನೆರಿಗೆಗಳನ್ನು ಮುಂದೆ ಮಾಡಿ ಸೆರಗನ್ನು ಮಾತ್ರ ಕೊಡಗರಂತೆ ಉಡುತ್ತಿದ್ದರು. ಇದನ್ನು ಗೊಬ್ಬೆ ಸೀರೆ ಎಂದು ಕರೆಯುತ್ತಿದ್ದರು. ಅವರು ಧರಿಸುತ್ತಿದ್ದ ಆಭರಣಗಳು ಇಂದು ನೋಡಲಿಕ್ಕೂ ಕಾಣಸಿಗೋಲ್ಲ. ಏಳೆಂಟು ವರ್ಷಗಳ ಹಿಂದೆ ಗೌರಿಹಬ್ಬದಲ್ಲಿ ಬಳೆ ಕೊಳ್ಳಲಿಕ್ಕೆಂದು ಮೂಡಿಗೆರೆ ಎಂ.ಜಿ. ರಸ್ತೆ (ಪೇಟೆ ಬೀದಿ)ಗೆ ಹೋದೆ. ಅಲ್ಲೊಬ್ಬರು ಈ ಗೊಬ್ಬೆ ಸೀರೆ ಉಟ್ಟವರು ವಯಸ್ಸಾದ ಮಹಿಳೆ ಮೊಮ್ಮಕಳೊಟ್ಟಿಗೆ ಹೋಗುತ್ತಿದ್ದರು. ಅವರು ತುರುಬಿಗೆ ಕುಪ್ಪಿಗೆ ಸಿಕ್ಕಿಸಿಕೊಂಡಿದ್ದರು. ಮತ್ತು ಕಿವಿಗೆ ಹಾಕಿದ್ದ ಬುಗುಡಿಯಿಂದ ಬಂದ ಬಂಗಾರದ ಸರ ಕುಪ್ಪಿಗೆಗೆ ಸೇರಿಕೊಂಡಂತೆ ಇತ್ತು. ಮೆಲ್ಲಗೆ ಅವರ ಹಿಂದೆಯೇ ಒಂದಷ್ಟು ದೂರ ನಡೆದೆ. ಆ ಆಭರಣದ ಚೆಂದ ನೋಡಿದೆ. ಮನಸ್ಸಿಗೆ ಚೆಂದವಾಯಿತು. ಅಂದು ಇಂತಹ ಉಡಿಗೆ ತೊಡಿಗೆಯವರೇ ಪೇಟೆ ಬೀದಿಯಲ್ಲಿ ಕಾಣಸಿಗುತ್ತಿದ್ದರು.
ಆ ಕಾಲದಲ್ಲಿ ದೊಡ್ಡ ವಿಶಾಲವಾದ ಅಂಗಡಿಗಳಿದ್ದವು. ಅಂಗಡಿ ಮಧ್ಯದಲ್ಲಿ ಒಂದು ದಪ್ಪದಾರ ಇಳಿಬಿಟ್ಟಿರುತ್ತಿದ್ದರು. ಒಬ್ಬ ಬ್ಯಾರಿ ಅಥವಾ ಕಾಕಾ ಅಲ್ಲಿ ನಿಂತಿರುತ್ತಿದ್ದರು. ಸಣ್ಣ ಸಣ್ಣ ಹಲಗೆ ಕಪಾಟುಗಳನ್ನು ತೆಳ್ಳಗೆ ಇಳಿಜಾರಿನಂತೆ ಮಾಡಿ ಜೋಡಿಸಿಟ್ಟಿರುತ್ತಿದ್ದರು. ಈರುಳ್ಳಿ ಬೆಳ್ಳುಳ್ಳಿ, ಮಂಗಳೂರು ಕಾಫಿಬೆಲ್ಲ ವಗೈರೆ ದಿನಸಿ ಸಾಮಾನುಗಳನ್ನು ಅವುಗಳಲ್ಲಿ ತುಂಬಿಟ್ಟಿರುತ್ತಿದ್ದರು. ಕ್ರಮೇಣ ಎಲ್ಲವೂ ಬದಲಾಯಿತು. ಮೂಡಿಗೆರೆಯೂ ನಮ್ಮ ದೇಶದ ಎಲ್ಲಾ ಪೇಟೆಗಳಂತೆಯೇ ಅಂಗಡಿಗಳ ಊರಾಗಿದೆ. ಬೆಂಗಳೂರು ಅಂಗಡಿಗಳಂತೆಯೇ ಕಾಣುತ್ತಿದೆ. ಅಂಗಡಿಗೆ ಯಾವ ಸಮಯದಲ್ಲಿ ಹೋದರೂ ಜನರ ನೂಕು ನುಗ್ಗಲು ಇರುತ್ತೆ. ನಮ್ಮೂರಿನ ಬೇಕರಿ ಬಗ್ಗೆ ಒಂದು ಮಾತು. ಬೇಕರಿ ಟ್ರೈನಿಂಗ್ ಸೌಲಭ್ಯವಿರುವುದರಿಂದ ಇಂದಿನ ಯಾವ ಕುಗ್ರಾಮಕ್ಕೆ ಹೋದರೂ ಒಳ್ಳೆ ಬ್ರೆಡ್ಡು ಸಿಗುತ್ತೆ. ಆದರೆ ಮೂಡಿಗೆರೆ ಅಯ್ಯಂಗಾರ್ಸ್ ಬೇಕರಿ ಬ್ರೆಡ್ಡು ಮಾತ್ರ ಬೆಂಗಳೂರಿನ ಬ್ರೆಡ್ಡಿಗಿಂತಲೂ ಚೆನ್ನಾಗಿರುತ್ತೆಂದು ಎಲ್ಲರೂ ಹೊಗಳುವವರೆ.
ಈಗೆಲ್ಲ ನಮ್ಮ ರಸ್ತೆಗಳು ಬಹಳ ಹಾಳಾಗಿವೆ. ಎಲ್ಲ ರಸ್ತೆಗಳಂತೆ ಏನೇನೂ ಸರಿಯಿಲ್ಲ. ಅವು ಅಗಲ ಕಿರಿದಾಗಿ ಅಲ್ಲಲ್ಲೇ ರಸ್ತೆಯ ಮಧ್ಯದಲ್ಲಿ ಹೊಂಡದೋಪಾದಿಯಲ್ಲಿ ದೊಡ್ಡ ದೊಡ್ಡ ಗುಂಡಿಗಳು ಕಂಡು ಬರುತ್ತವೆ. ಇದು ಶ್ರೀಮಂತ ತಾಲ್ಲೂಕು. ಪ್ಲಾಂಟರ್ಸ್ ಕ್ರೇಜು ವಿಪರೀತ. ಪ್ಲಾಂಟರುಗಳಲ್ಲಿ ಒಂದೆರಡು ಕಾರು ಹೊಂದುವುದು ಸಾಮಾನ್ಯವಾಗುತ್ತಿದೆ. ಹಾಗಾಗಿ ವಾಹಗಳ ದಟ್ಟಣೆ ಹೆಚ್ಚಿದೆ. ರಿಪೇರಿ ವರ್ಕ್‌ಷಾಪುಗಳೂ ತಲೆಯೆತ್ತಿದೆ. ದಾರಿಯುದ್ದಕ್ಕೂ ನಿಂತಿರುವ ಮುರುಕಲು ವಾಹನಗಳ ದೆಸೆಯಿಂದ ಇಡೀ ಊರು ದೊಡ್ಡ ಗುಜರಿಯಂತೆ ಕಾಣುತ್ತಿದೆ.
ನಮ್ಮ ಮೂಡಿಗೆರೆ ಸಣ್ಣ ಊರು. ಜನ ಸಂಖ್ಯೆಯೂ ಅಷ್ಟಕ್ಕಷ್ಟೆ. ಅಂತಹದರಲ್ಲೂ ಪೇಟೆ ಬೀದಿಯಲ್ಲಿ ಸುಮಾರು ಚಿನ್ನಾಭರಣ ಅಂಗಡಿಗಳಿವೆ. ಹಾಗೂ ಇಲ್ಲಿ ದೊರೆಯುವ ಆಭರಣಗಳ ಮಾದರಿಗಳಂತೂ ಬಹಳ ವಿಶಿಷ್ಟ.
ಚಳಿ, ಕಾಫಿ ಪಿಕ್ಕಿಂಗ್ , ಪಲ್ಪರ್ ಮತ್ತು ಮೂಡಿಗೆರೆ
ಅಬ್ಬಬ್ಬ! ಮೂಡಿಗೆರೆ ಚಳಿಯೆಂದರೇ ನಡುಕ. ಎದೆಯ ಗೂಡನ್ನೂ ಸೀಳಿಕೊಂಡು ಹೊಕ್ಕುತ್ತೆ ಚಳಿ. ಈಗ ಬಿಸಿಲೂ ಚುರುಕು. ಚಳಿಯೂ ಜೋರು. ನಮ್ಮಲ್ಲಿ ಅಕ್ಟೋಬರ್‌ನಲ್ಲಿಯೂ ಒಂದೊಂದು ಮಳೆ ಬರುತ್ತೆ. ಮೋಡ ಇದ್ದಾಗ ಚಳಿ ಇರೋಲ್ಲ. ಈ ಸಮಯದಲ್ಲಿ ಯಾವತ್ತೋ ಒಂದೊಂದು ಸಲ ಈ ಫ್ರಾಸ್ಟ್ ಅಂತ ಟಿ.ವಿ.ಯಲ್ಲಿ ವಿದೇಶದಲ್ಲಿ ನೋಡ್ತೀವಲ್ಲ ಅಂತಹದ್ದು ತೆಳ್ಳಕೆ ಬೀಳುತ್ತೆ. ಇದು ನೋಡಲು ತುಂಬಾ ಸೊಗಸು. ಆದರೆ ಆಗ ವಿಪರೀತ ಥಂಡಿ. ಹೊರಗೆ ಹೋದರೆ ನಮ್ಮ ಮುಂದೆ ನಿಂತಿರೋವ್ರೆ ಕಾಣೋಲ್ಲ. ಗಿಡ ಮರಗಳೂ ಕಾಣಿಸೋಲ್ಲ. ಇದು ಸ್ವಲ್ಪ ಕಾಲ ಮಾತ್ರ ಇರುತ್ತೆ. ಒಂದು ಸಲ ನಮ್ಮ ಮಗಳನ್ನು ಶಾಲೆಗೆ ಬಿಡಲು ಮೂಡಿಗೆರೆಗೆ ಕಾರಿನ ದೀಪ ಹಚ್ಚಿಕೊಂಡೇ ನಾನು ಡ್ರೈವ್ ಮಾಡಬೇಕಾಯಿತು. ಊರೇ ಕಾಣ್ತಾ ಇಲ್ಲ. ಬಾಳ ಚಲೋ ಇರುತ್ತೆ ಆದರೆ ಬಾಳ ಥಂಡಿ. ಆಮೇಲೆ ಚಳಿ ಇನ್ನೂ ಜೋರಾಗುತ್ತೆ. ಬೆಳಿಗ್ಗೆ ಎದ್ದ ಕೂಡಲೆ ಪಾತ್ರೆ, ಪರಟಿ, ಡಬ್ಬಿ ಏನು ಮುಟ್ಟಿದರೂ ಫ್ರಿಡ್ಜ್ ಒಳಗೆ ಕೈ ಹಾಕಿದ ಹಾಗಾಗುತ್ತೆ. ನಲ್ಲಿ ನೀರಿಗೆ ಕೈ ಒಡ್ಡಿದರೆ ಹಾಗೇ ಕೈ ಹಿಂದಕ್ಕೆ ವಾಪಾಸು ಬರುತ್ತೆ. ಮೂಳೆ ನೋವು ಬರುವಷ್ಟು ಥಂಡಿ ನೀರು. ಹೊತ್ತು ಏರಿದರೂ ಚಳಿ ಇರುತ್ತೆ. ತರಗತಿಯಲ್ಲಿರುವ ಮಕ್ಕಳ ಹಲ್ಲು ಕಟಕಟ ಅಂತ ಒಬ್ಬರಾದ ಮೇಲೊಬ್ಬರು ಕಟಕಟಿಸೋದು ನಿಂತಮೇಲೆ ಪಾಠ ಶುರು ಮಾಡಲಿಕ್ಕಾಗೋದಂತೆ. ಇಂತಹ ಛಳಿ ಇದ್ದರೂ ಮೊನ್ನೆ ಚೆನ್ನೈನಲ್ಲಿ ಡಿಪ್ರೆಷನ್ ಬಂದ ಕೂಡಲೆ ಇಲ್ಲಿ ಮೋಡ ಕವಿಯಿತು. ಚಳಿ ಹೋಯಿತು. ನಾಲ್ಕೇ ದಿವಸ. ಮಳೆ ಮಾಯ. ಗಡಗಡ ನಡುಗಿಸಿತು ಚಳಿ ಮತ್ತೆ.
ಇಂತಹ ಚಳಿ ನವೆಂಬರಿನಿಂದ ಫೆಬ್ರವರಿ ಪೂರ್ತಿ ಇರುತ್ತೆ. ಆದರೆ ನಾಲ್ಕು ತಿಂಗಳೂ ಒಂದೇ ಸಮ ಇರೋಲ್ಲ. ಈ ಸಮಯಕ್ಕೆ ಸರಿಯಾಗಿ ಗಿಡಗಳಲ್ಲಿ ಕಾಫಿ ಹಣ್ಣಾಗಿ ಕೆಂಪಗೆ ಫಳಫಳ ಅಂತ ರೂಪಾಯಿ ಹೊಳೆಯುತ್ತಲಿರುತ್ತೆ. ಮಾಗಿಯ ಮೊದಲ ಅಧ್ಯಾಯ ಕಾಫಿಪಿಕ್ಕಿಂಗ್ ಶುರುವಾಗುತ್ತೆ. ಹಣ್ಣನ್ನೇ ಆರಿಸಿ ಬಿಡಿಸುವುದರಿಂದ ಪಿಕ್ಕಿಂಗ್ ಎನ್ನುವರು. ಇದು ಕಷ್ಟಕರವಲ್ಲದಿದ್ದರೂ ಹಣ್ಣು ಬಿಡಿಸಿ ಒಣಗಿಸಿ ಗೋಣಿ ಚೀಲ ತುಂಬಿಸಿ ಲಾರಿ ಲೋಡ್ ಮಾಡುವ ಹಂತಕ್ಕೆ ಬರಬೇಕಾದರೆ ದೊಡ್ಡ ಪ್ರೊಸೀಜರ್ ಇದೆ.
ಕಾಫಿ ಬೆಳೆಯನ್ನು ಅಗ್ರೋ ಇಂಡಸ್ಟ್ರಿ ಎಂದು ಪರಿಗಣಿಸಿದ್ದಾರೆ. ಕಾಫಿ ಮಾರ್ಕೆಟಿಂಗ್‌ದೇ ಬೇರೆ ಭಾಗ. ಹಿಂದೆ ಇದ್ದ ಮಾರ್ಕೆಟಿಂಗ್ ರೀತಿ ಇಂದಿನ ಎಫ್.ಎಸ್.ಕ್ಯೂ. ಮಾರಾಟದ ವ್ಯವಸ್ಥೆ ಬಗ್ಗೆ ಮತ್ತು ಕಾಫಿ ಕಾರ್ಮಿಕರ ಪರಿಸ್ಥಿತಿಯನ್ನು ಮುಂದೆ ನಾವು ತಿಳಿಯೋಣ. ಈಗ ಪಿಕ್ಕಿಂಗ್ ಮತ್ತು ಸಂಸ್ಕರಣೆ ನೋಡೋಣಂತೆ.
ಪಿಕ್ಕಿಂಗ್ ಶುರು ಮಾಡುವಷ್ಟರಲ್ಲಿ ಕಣವನ್ನು ಸಿದ್ಧಗೊಳಿಸಬೇಕಾಗುತ್ತದೆ. ಸಣ್ಣ ಬೆಳೆಗಾರರು ನೆಲದ ಮೇಲಿನ ಹುಲ್ಲು ಕಸ ತೆಗೆದು ಮಟ್ಟಸ ಮಾಡಿ ಸೆಗಣಿ ಸಾರಿಸಿ ಕಣ ಮಾಡಿಕೊಳ್ಳುತ್ತಾರೆ. ದೊಡ್ಡ ಬೆಳೆಗಾರರು ಹೆಂಚಿನ ಟೈಲ್ಸ್ ಕೂರಿಸಿ ಕಣ ಮಾಡಿಕೊಂಡಿರುತ್ತಾರೆ. ಕಾಫಿ ಕಾಯಿಗಳು ಒಟ್ಟಿಗೇ ಹಣ್ಣಿಗೆ ಬರುವುದಿಲ್ಲ. ಮೊದಲೆರಡು ಸುತ್ತಿನಲ್ಲಿ ಹಣ್ಣನ್ನು ಮಾತ್ರ ಬಿಡಿಸುವರು. ಆಳುಗಳು ಸೊಂಟಕ್ಕೆ ಒಂದು ಗೋಣಿ ಚೀಲವನ್ನು ಕಟ್ಟಿಕೊಂಡಿರುತ್ತಾರೆ. ಬಲಕ್ಕೆ ಅದರ ಬಾಯಿ ಬರುವಂತೆ. ಬರೀ ಹಣ್ಣುಗಳನ್ನೇ ಆಯ್ದು ಬಿಡಿಸಿ ಚೀಲದೊಳಕ್ಕೆ ಬಿಡುತ್ತಾರೆ. ಕೆಲಸದ ವೇಳೆ ಮುಗಿಯುತ್ತಿದ್ದಂತೆ ಹಣ್ಣನ್ನು ಕಣಕ್ಕೆ ತಂದನಂತರ ತೋಟದ ರೈಟ್ರು ಕೆ.ಜಿ. ಲೆಕ್ಕದಲ್ಲಿ ತೂಗಿ ಅಂದಂದೇ ಲೆಕ್ಕ ಬರೆದಿಡುವರು.
ಗ್ರಾಹಕರ ಬಳಕೆಗೆ ಸಿದ್ಧವಾಗಿ ಬರುವ ಕಾಫಿ ಬೀಜದಲ್ಲಿ ಪಾರ್ಚುಮೆಂಟು ಕಾಫಿ ಬೀಜ ಮತ್ತು ಚೆರ್ರಿ ಕಾಫಿ ಜೀಜವೆಂದು ಎರಡು ಬಗೆಗಳಿವೆ. ಕಾಫಿಹಣ್ಣಿನ ಸಿಪ್ಪೆಯನ್ನು ಬಿಡಿಸಿ ಸಂಸ್ಕರಿಸಿದ ಬೀಜವನ್ನು ಪಾರ್ಚಮೆಂಟ್ ಕಾಫಿ ಎನ್ನುವರು. ಈ ವೆರೈಟಿಗೆ ಹೆಚ್ಚು ಬೆಲೆ ಸಿಕ್ಕುತ್ತೆ. ಮತ್ತು ಹೆಚ್ಚು ರುಚಿಯೂ ಹೌದು. ಹಣ್ಣಿನ ಸಿಪ್ಪೆಯನ್ನು ಚಿದುಕಿಸುವ ಯಂತ್ರಕ್ಕೆ ಪಲ್ಪರ್ ಎನ್ನುವರು. ಕಣಕ್ಕೆ ತಂದ ಹಣ್ಣನ್ನು ಪಲ್ಪರ್ ಯಂತ್ರಕ್ಕೆ ನೀರಿನೊಟ್ಟಿಗೆ ಹಾಯಿಸುವರು. ಹೀಗೆ ಮಾಡಿದಾಗ ಸಿಪ್ಪೆ ಮತ್ತು ಬೀಜ ಬೇರ್ಪಡುತ್ತದೆ. ಈ ಸಿಪ್ಪೆಯನ್ನು ಸ್ವಲ್ಪ ಕಾಲದ ನಂತರ ಗೊಬ್ಬರವಾಗಿ ಉಪಯೋಗಿಸುತ್ತಾರೆ. ಸಿಪ್ಪೆಯಿಂದ ಬೇರ್ಪಟ್ಟ ಬೀಜವು ಲೋಳೆಯಿಂದ ಕೂಡಿರುತ್ತದೆ. ಅದನ್ನು ದೊಡ್ಡ ಸಿಮೆಂಟ್ ತೊಟ್ಟಿಯಲ್ಲಿ ಕೊಳೆಯಲು ಹಾಕಿರುತ್ತಾರೆ. ಎರಡು ದಿವಸದ ನಂತರ ಮತ್ತೆ ನೀರು ಹಾಯಿಸಿಕೊಂಡು ತುಳಿದು ಲೋಳೆ ಹೋಗುವಂತೆ ತೊಳೆದು ಕತ್ತ ಅಥವ ಪ್ಲಾಸ್ಟಿಕ್ ಶೀಟ್ ಮೇಲೆ ಹರಡಿ ಒಣಗಿಸುತ್ತಾರೆ. ಬಿಳಿ ಬಣ್ಣ ಮತ್ತು ಶುಚಿತ್ವವನ್ನು ಕಾಪಾಡಲಿಕ್ಕಾಗಿ ಕತ್ತದ ಮೇಲೆ ಒಣಹಾಕುತ್ತಾರೆ. ಹೀಗೆ ಸಂಸ್ಕರಣಾ ಘಟಕಗಳನ್ನು ದೊಡ್ಡ ಕಾಫಿ ತೋಟಗಳವರು ದೊಡ್ಡ ದೊಡ್ಡ ಎರಡು ಮೂರು ಸಿಮೆಂಟ್ ತೊಟ್ಟಿಗಳಿರುವ ಪಲ್ಪರ್ ಹೌಸ್ ಎಂದೇ ಕಟ್ಟಿಕೊಂಡಿರುತ್ತಾರೆ. ವಿದ್ಯುಚ್ಛಾಲಿತ ಯಂತ್ರವನ್ನು ಅಳವಡಿಸಿರುತ್ತಾರೆ. ಸಣ್ಣ ತೋಟದವರು ಉಪಯೋಗಿಸಲು ಕೈಯಿಂದ ಓಡಿಸುವ ಯಂತ್ರವೂ ಲಭ್ಯವಿದೆ. ಇದನ್ನು ಟಿಲ್ಲರ್‌ಗೆ ಅಳವಡಿಸಿಕೊಂಡೂ ಉಪಯೋಗಿಸುವರು.
ದೊಡ್ಡ ತೋಟದವರು ಕಾಫಿ ಪಲ್ಪ ಮಾಡಿದ ನಂತರ ಬರುವ ದುರ್ವಾಸನೆಯ ವಿಷಯುಕ್ತ ನೀರನ್ನು ನದಿಗಳಿಗೆ ಬಿಡುತ್ತಾರೆ. ಇದು ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ದೊಡ್ಡ ಮಟ್ಟದಲ್ಲಿ ನೀರು ಕಲುಷಿತಗೊಳ್ಳುತ್ತಿದೆ. ಇದನ್ನು ತಡೆಗಟ್ಟಲು ಅನೇಕ ವಿದಿs ವಿಧಾನಗಳನ್ನು, ಕಾನೂನುಗಳನ್ನೂ ಮಾಡಿದ್ದರೂ ತಡೆಗಟ್ಟುವುದು ಸಮರ್ಪಕವಾಗಿ ನಡೆಯುತ್ತಿಲ್ಲ. ಈಗ ಮಾಲಿನ್ಯ ನಿಯಂತ್ರಣ ಮಂಡಳಿಯವರು ಸ್ಕ್ವಾಡ್‌ಗಳನ್ನು ನೇಮಿಸಿ ಪಲ್ಪರ್ ಹೌಸ್‌ಗಳನ್ನು ಸೀಸ್ ಮಾಡುವ ಕ್ರಮವನ್ನೂ ತೆಗೆದುಕೊಳ್ಳುತ್ತಿದ್ದಾರೆ.
ಹಣ್ಣು ಬಿಡಿಸಿದ ನಂತರ ಉಳಿದ ಹಸಿರು ಕಾಯಿಗಳನ್ನು ಬಿಡಿಸಿ ತಂದು ಕಣದಲ್ಲಿ ಒಣಗಿಸುವರು. ಇದಕ್ಕೂ ನಿರ್ದಿsಷ್ಟವಾದ ತೂಕದ ನಿಯಮಾನುಸಾರವನ್ನೇ ಅನುಸರಿಸಲಾಗುತ್ತದೆ. ಅನಂತರ ಕಸಕಡ್ಡಿಧೂಳು ಇಲ್ಲದಂತೆ ಚೀಲ ತುಂಬಿ ಸಿದ್ಧಮಾಡುವರು. ಇದನ್ನು ಚೆರ್ರಿ ಕಾಫಿಯೆಂದು ವಿಂಗಡಿಸುವರು. ಈ ವೆರೈಟಿಯನ್ನು ಎರಡನೇ ದರ್ಜೆಯ ಕಾಫಿಯೆಂದು ವಿಂಗಡಿಸುವರು. ಇದರ ಬೆಲೆ ಪಾರ್ಚಮೆಂಟ್ ಕಾಫಿಯ ಅರ್ಧದಷ್ಟಕ್ಕೆ ನಿಗದಿsಗೊಳ್ಳುತ್ತದೆ. ಅದರಷ್ಟು ರುಚಿಯೂ ಬರುವುದಿಲ್ಲವೆಂದು ಹೇಳುವರು.
ಹಲವಾರು ವರ್ಷಗಳ ಹಿಂದಿನಿಂದ ಬಂದಿದ್ದ ಈ ಸಂಸ್ಕರಣಾ ವಿಧಾನದಲ್ಲಿಯೂ ಈವತ್ತಿನ ಟೆಕ್ನಾಲಜಿಯನ್ನು ಬಳಸಿಕೊಂಡು ಬದಲಾವಣೆ ಕಾಣುತ್ತೇವೆ. ಹಣ್ಣನ್ನು ಪಲ್ಪಮಾಡಿ ಎರಡುದಿನ ಕಳೆದ ನಂತರ ತೊಳೆಯುವ ಬದಲು ಇನ್‌ಸ್ಟೆಂಟೇನಿಯಸ್ ತೊಳೆಯುವ ಯಂತ್ರವನ್ನು ಬಳಸುತ್ತಾರೆ. ಬೀಜವನ್ನು ನೇರವಾಗಿ ಕಣದಲ್ಲಿ ಒಣಹಾಕಬಹುದು.
ಈ ಎರಡೂ ಬಗೆಯ ಕಾಫಿ ಬೀಜವನ್ನು ಅಳೆದು ಚೀಲಗಳಿಗೆ ತುಂಬಿ ಕಾಫಿ ಕ್ಯೂರಿಂಗ್ ಕಾರ್ಖಾನೆಗಳಿಗೆ ಕಳಿಸುತ್ತಾರೆ. ಇಲ್ಲಿ ಪ್ರತಿಯೊಬ್ಬರ ಕಾಫಿಯನ್ನೂ ಬೇರೆ ಬೇರೆಯಾಗಿ ಇಟ್ಟಿದ್ದು ಒಬ್ಬೊಬ್ಬರದಾಗಿ ಹಸನುಮಾಡಿ ವಿಂಗಡಿಸುವರು. ಇದು ಸಂಸ್ಕರಣಾ ಘಟಕದ ಒಂದು ವಿಹಂಗಮ ನೋಟ.
ಮೂಡಿಗೆರೆಯ ಮೂಡಿ ಚಂದ್ರ
ನಮ್ಮೂರಿನ ಚಂದ್ರ ಬಲು ಚಂದ. ಪೂರ್ಣಚಂದ್ರ ಮತ್ತೂ ಚಂದ. ನಗರದವರಂತೂ ನೋಡಿರಲಿಕ್ಕೇಯಿಲ್ಲ ಇಂತಹ ಚಂದ್ರನನ್ನೂ, ಆಹ್ಲಾದಕರವಾದ ಇಂತಹ ಆಕಾಶವನ್ನೂ. ನಾನಂತೂ ಮಲಗಿದ್ದವಳು ಎದ್ದೆದ್ದು ಮತ್ತೆಮತ್ತೆ ನೋಡುವೆನು ಪೂರ್ಣಚಂದ್ರನನ್ನು. ಉಳಿದಂತೆ ಅಡುಗೆ ಮಾಡುತ್ತಾ ಕಿಟಕಿ ಮೂಲಕ, ಮರದ ಕೊಂಬೆಗಳ ಸಂದಿಯಿಂದ ಬಾಗಿದ ಬೆಳ್ಳಿ ಕಡ್ಡಿಯಂತಿರುವನೋ ಅಥವಾ ಮುಕ್ಕಾದಂತವನೋ ನಮ್ಮನ್ನೇ ನೋಡುತ್ತಿರುವಂತೆ ಅನ್ನಿಸುತ್ತೆ. ಮನೆಯಲ್ಲಿರುವವರನ್ನೆಲ್ಲ ಕೂಗಿ ಕರೆದು ತೋರಿಸಿ ಹಂಚಿಕೊಳ್ಳುವಂತಾಗುತ್ತೆ. ಆಹ್ ಆ ದೃಶ್ಯ! ಎಷ್ಟು ಸಚ್ಛಕಾಡಿನ ಮಧ್ಯೆ ಇರುವ ಮೂಡಿಗೆರೆ! ಶುಭ ಆಕಾಶದಲ್ಲಿ ಮಿಂದ ಚಂದ್ರ ಧೂಳಿಲ್ಲ, ಸದ್ದಿಲ್ಲ, ಮೊದಲೇ ವಿದ್ಯುಚ್ಛಕ್ತಿಯ ಬೆಳಕಿಲ್ಲ ಅವನನ್ನೇ ಮಂಕಾಗಿಸಲು. ಈ ತಿಂಗಳುಗಳಲ್ಲಿ ಮಾತ್ರ ಈ ಸೌಭಾಗ್ಯ ನಮಗೆ. ಮಿಕ್ಕಂತೆಲ್ಲ ಮೋಡ ಅಥವ ಮಳೆ ಆರೆಂಟು ತಿಂಗಳುಗಳು. ಹೀಗೆ ರಾತ್ರಿ ಎದ್ದು ಚುಕ್ಕಿ ಚಂದ್ರಮನನ್ನು ನೋಡ ನೋಡುತ್ತಿದ್ದಂತೆ ಬಿಳಿ ತೆರೆಯ ಮಂಜು ಮುಸುಕುತ್ತೆ. ಇದು ಸ್ವಪ್ನ ಲೋಕಕ್ಕೇ ಕರೆದೊಯ್ಯುತ್ತೆ. ಎಲ್ಲ ಸ್ಪಷ್ಟ ಆದರೆ ಎಲ್ಲವೂ ಅಸ್ಪಷ್ಟ.
ಇದರಾಟ ನೋಡಿ. ನೋಡು ನೋಡುತ್ತಿದ್ದಂತೇ ಮಂಜು ಕರಗಿ ಹೋಗುತ್ತಾ ಹುಣ್ಣಿಮೆ ಚಂದ್ರ ಮಂಜಿನ ಪರದೆ ಮುಂದೆ ಪ್ರತ್ಯಕ್ಷ. ಸ್ಫಟಿಕದಷ್ಟು ಶುಭ್ರ ಆಕಾಶ! ಈಗ ನಮ್ಮ ಆತ್ಮೀಯರೊಡನೆಯೋ, ನಮ್ಮಲ್ಲೆ ಬೆಸೆದುಕೊಂಡು ಬದುಕುವ ಇನ್ನೊಂದು ಜೀವದೊಂದಿಗೋ ಹಾಗೇ ರಾತ್ರಿಯಲ್ಲಿ ಬಿಸಿಲಿನ ಬೆಳದಿಂಗಳ ರಾತ್ರಿಯಲ್ಲಿ ಕಾಫಿತೋಟದ ಮರದ ನೆರಳಿನಲ್ಲಿ ಅಡ್ಡಾಡಿದಾಗ ನಾವು ಎಲ್ಲಿಗೆ ಹೋದರಲ್ಲಿಗೆ ಬರುವನು – ಒಂದು ಮಧುರ ಗೀತೆಯ ಸುಮಧುರ ಪಂಕ್ತಿ ಸಂಕ್ತಿಯ ಹಾಗೆ. ಈ ರಾತ್ರಿಗೆ ನಾವು ಕಾಯಬೇಕು. ಕಡೇ ಪಕ್ಷ ಇದನ್ನು ಓದಿ. ಇದಕ್ಕೇನೂ ಕಾಯಬೇಕಾದ್ದಿಲ್ವೆಲ್ಲ.
ನಾವೊಂದಷ್ಟು ಪುಸ್ತಕ ಓದಿಕೊಂಡೋ ಮತ್ತೊಬ್ಬರ ಬಾಯಲ್ಲಿ ಕೇಳಿಯೋ ನಕ್ಷತ್ರಗಳ ಹೆಸರನ್ನಷ್ಟೇ ನೆನಪಿಟ್ಟುಕೊಂಡಿದ್ದರೂ ಸಾಕು, ಚುಕ್ಕಿ ಚಂದ್ರಮರು ಕುಣಿ ಕುಣಿಯುತ್ತ ನಮ್ಮನ್ನು ಸ್ವಾಗತಿಸುತ್ತಾರೆ. ಆಕಾಶ ವೀಕ್ಷಣೆಗೆ ಕಣ್ಣು ಅಲ್ಲಿಗೇ ಹೊರಳುತ್ತಿರುತ್ತೆ. ಆಕಾಶಗಂಗ(ಮಿಲ್ಕಿ ವೇ), ಶೂಟಿಂಗ್ ಸ್ಟಾರ್‍ಸ್, ಅಲ್ಡೆಬರಾನ್, ಸಿರಿಯಾಸ್, ಬೆಳ್ಳಿ ಶುಕ್ರಗ್ರಹ, ದೃವ ನಕ್ಷತ್ರ, ಸಪ್ತರ್ಷಿ ಮಂಡಲ ಯಾವುದಿರಬಹುದೆಂದು ನೋಡುವ, ಗುರುತಿಸಿ ತಿಳಿದುಕೊಳ್ಳುವ ತವಕ ಬರುತ್ತೆ. ಇನ್ನೂ ಒಂದು ಆಶ್ಚರ್ಯ ರಾತ್ರಿ ಮಲಗುವ ಮುಂಚೆ ಮನೆ ಹಿಂಭಾಗದಲ್ಲಿ ನೋಡಿದ ರಾಶಿ ಬೆಳಗಿನ ಜಾವ ಮಲಗುವ ಕೋಣೆ ಮುಂಭಾಗಕ್ಕೆ ಬಂದು ಮುಳುಗುತ್ತಿರುತ್ತೆ. ಆಕಾಶ ನೋಡುತ್ತಾ ಸಮಯದ ಪರಿವೆ ನಮ್ಮ ಅರಿವಿಗೇ ಬರೋಲ್ಲ. ಮನೆ ಒಳಗೆ ನಿಧಾನಕ್ಕೆ ಎದ್ದರಾಯಿತು ಅಂತಾಗುತ್ತೆ. ಇನ್ನಷ್ಟು ನೋಡುವ, ಇನ್ನಷ್ಟು ಗುರುತಿಸುವ ಇನ್ನಷ್ಟು ಓದಿ ತಿಳಿಯುವ ಉತ್ಕಟಾಕಾಂಕ್ಷೆ ಮೊಳಕೆ ಒಡೆಯುತ್ತೆ. ಇಂದಿನ ಮಕ್ಕಳಿಗೆ ನಗರಗಳಲ್ಲಿ ದೂರದ ಆಕಾಶ, ಮಿನುಗುವ ನಕ್ಷತ್ರ ನೋಡಲಿಕ್ಕೆ ಅವಕಾಶವಿದೆಯಾ? ಸಮಯವಿದೆಯಾ? ಒಮ್ಮೆ ನೋಡ ಬನ್ನಿ ಮಕ್ಕಳನ್ನೂ ಕಟ್ಟಿಕೊಂಡು ಬನ್ನಿ ಇಲ್ಲಿಗೆ.
ಈ ಮಾಗಿ ಮಾಸ ಸಂಭ್ರಮ ಉಕ್ಕಿಸುವಂತದ್ದು. ಮಳೆಗಾಲದ ಮಳೆಗೆ ನಲುಗಿದ ಹೂವಿನ ಗಿಡಗಳು ವಿಶ್ರಾಂತಿಯನ್ನು ಪಡೆದು ಈಗ ಬಿಸಿಲಿಗೆ ಚಿಗುರೊಡೆಯಲು ಸೂಕ್ತ ಸಮಯ. ಒಂದಷ್ಟು ಕೆಲಸ ನಡೆಸಬೇಕಷ್ಟೆ. ಕಳೆ ಕೀಳುವುದು, ಮಣ್ಣು ಬದಲಿಸುವುದು, ಗೊಬ್ಬರ ಕೊಡುವುದು ಇತ್ಯಾದಿ. ಇಲ್ಲಿ ಯಾವ ಹೂವಿನ ಗಿಡವನ್ನಾದರೂ ಚೆನ್ನಾಗಿ ಬೆಳೆಯಬಹುದಾದಂತ ಅಗತ್ಯ ವಾತಾವರಣವಿದೆ. ನಮ್ಮ ಶ್ರಮವೂ ಅಷ್ಟೇ ಅಗತ್ಯ. ಅಸಾಲಿಯ, ನಾಗಲಿಂಗ ಪುಷ್ಪ, ಪೀಕಾಕ್ ಜಿಂಜರ್(ನವಿಲು ಶುಂಠಿ) ಐರಿಸ್(ನೆಲಸಂಪಿಗೆ) ಬರ್ಡ್ ಆಫ್ ಪ್ಯಾರಡೈಸ್ (ಸ್ವರ್ಗದ ಹಕ್ಕಿ) ಮ್ಯಾಗ್‌ನೋಲಿಯಾ ಗ್ರ್ಯಾಂಡಿಫ್ಲೋರಾ, ಆಲ್‌ಪೇನಿಯನ್ ಜಾರಂಬೆಟ್, ಗುಲಾಬಿ, ಗೊರಂಟೆ, ಅಂಬಲಿಗೆ ಹೀಗೆ ಹಲವು ಹತ್ತು ಬಗೆಯವು. ಆದರೆ ಪರದೇಶದ ನನ್ನ ಪ್ರೀತಿಯ ಟ್ಯುಲಿಪ್ ಮಾತ್ರ ಎರಡೇ ಹೂ ಅರಳಿಸಿ ಮುಂದೆ ಬೆಳೆಯಲು ನಿರಾಕರಿಸಿತು. ನನ್ನಲ್ಲಿ ಕ್ಯಾಕ್‌ಟಸ್ ಜಾತಿಯ ಕುಡುಕನ ಕನಸು ಎಂಬ ಹೆಸರಿನ ಅಪರೂಪದ ಗಿಡವೊಂದಿದೆ. (ರಿಫ್‌ಸಾಲಿಸ್ ಸಾಲಿಕಾರ್‌ನಾಯಿಡ್ಸ್) ಸಣ್ಣ ಸಣ್ಣ ಬಾಟ್ಲ್(ಶೀಸೆ)ನಂತೆ ಕಾಣುವ ಹಸಿರು ಕಾಳಿನ ತುದಿಗೆ ಇನ್ನೊಂದು ಬಾಟ್ಲ್ ಅಂಟಿಕೊಂಡಂತೆ ಇರುವ ಸಸ್ಯ ಗಿಡಪೂರ್ತಿ ಒಂದಕ್ಕೊಂದು ಅಂಟಿಕೊಂಡಿರುವ ಶೀಸೆ. ಈ ಬಾಟಲುಗಳ ಉದ್ದ ಒಂದೆರಡು ಸೆಂಟಿಮೀಟರ್. ತುದಿಯಲ್ಲಿ ವರ್ಷಕ್ಕೊಂದು ಸಾರ್ತಿ ಹಳದಿ ಹೂ ಬಿಡುತ್ತೆ. ನೋಡಲು ಬಲುಚೆಂದ.
ದಟ್ಟವಾದ ಮಂಜು ಮುಸುಕಿದ ರಾತ್ರೆ ಕಳೆದು ಬೆಳಗಾದರೂ ಮಂಜು ಮುಸುಕಿರುತ್ತೆ. ಈ ಮಂಜು ಚಿಗುರೊಡೆದ ಹೂವಿನ ಗಿಡಗಳನ್ನು ತಂಪಾಗಿಸಿ ನಳನಳಿಸುವಂತೆ ಮಾಡುತ್ತೆ. ಅಂಗಳದಲ್ಲಿನ ಶಾದ್ವಲದ ಮೇಲಿನ ಮುತ್ತಿನ ಮಣಿ ಮಾಲೆಯನ್ನು ನೋಡವುದೇ ಸೊಗಸು. ಮಕ್ಕಳಿಗೆ ಮತ್ತು ಆಫೀಸುಗಳಿಗೆ ಹೋಗುವವರು ಮಂಜು ನೋಡಿದರೂ ಲೆಕ್ಕಿಸದಂತೆ ಬೆಚ್ಚನೆ ಉಡುಗೆ ತೊಟ್ಟು ತಮ್ಮ ತಮ್ಮ ಕೆಲಸಗಳತ್ತವೆ ಗಮನ. ಹೆಚ್ಚೆಂದರೆ ಏನು ಮಂಜು ಈವತ್ತು ಅಂತ ಒಂದು ಉದ್ಗಾರ. ಅದರೆ ತೋಟದ ಮನೆಯ ಹಿರಿಯರಿಗೆ ಬೇರೆಯದೇ ಲೆಕ್ಕಾಚಾರ ಹೊಳೆಯುತ್ತೆ. ಹೂವಿನ ಮಳೆ ದೂರಾಯ್ತೇನೋ ಒಳ್ಳೆದೇ ಆತು ಅಂದುಕೊಳ್ಳುವವರು. ಇನ್ನೂ ಕಾಫಿ ಕೊಯ್ಯಲು ಪೂರೈಸಿಲ್ವೆಲ್ಲ ಅದಕ್ಕೇ.
ಈ ತಿಂಗಳ ತೋಟದ ಕೆಲಸಗಾರರು ಓಡೋಡಿ ಬರ್‍ತಾರೆ ಕೆಲಸಕ್ಕೆ ಕಾಫಿ ಕೊಯ್ಯಲು, ಏನು ಮಂಜು ಸುರಿತಾಯ್ತೇ ಎಂದು ಒಬ್ಬರಿಗೊಬ್ಬರು ಮಾತನಾಡಿಕೊಳ್ಳುತ್ತಲೇ ಲಗುಬಗೆಯಿಂದ ಕೆಲಸಕ್ಕೆ ಓಡ್ತಾರೆ. ಹಾಜರಿಗೆ ಇಂತೆಷ್ಟೆಂದು ಕುಯ್ದರೆ ಉಳಿದದ್ದೆಲ್ಲ ಲಾಭಕ್ಕೆ. ಕೈ ಚುರುಕಾದರೆ ಲಾಭದ ದುಡ್ಡು ಹೆಚ್ಚು. (ಇಷ್ಟಾದರೂ ಕಾಫಿ ಕುಯ್ಯಲು ತೋಟಗಳಲ್ಲಿ ಆಳುಗಳೇ ಲಭ್ಯವಿಲ್ಲವೆನ್ನುವುದು ಇಂದಿನ ಎಲ್ಲ ಕಡೆಯ ಮಾತು)
ನಮ್ಮಲ್ಲಿ ಬೆಳೆಯುವ ಕಾಫಿಗಳಲ್ಲಿ ಅರೇಬಿಕಾ ಮತ್ತು ರೋಬಸ್ಟಾ ಎಂಬೆರಡು ತಳಿಗಳಿವೆ. ಇತ್ತೀಚೆಗೆ ಕಾವೇರಿ ಎಂಬ ಹೆಸ ತಳಿಯೂ ಸೇರ್ಪಡೆಯಾಗಿದೆ. ಮೊದಲಿಗೆ ಅರೇಬಿಕಾ ಕಾಫಿ ಕುಯ್ಯಲು ಬರುತ್ತೆ. ಈ ತಳಿಯ ಗಿಡಗಳು ಗಿಡ್ಡವಾಗಿರುವುದರಿಂದ ನೋಡಲು ಅಂದವಾಗಿರುತ್ತೆ. ಹಣ್ಣು ಕುಯ್ಯಲೂ ಕೊಂಚ ಸುಲಭ.
ರೊಬಸ್ಟಾ ಜಾತಿಯ ಗಿಡಗಳನ್ನು ಇಳಿಜಾರು ಪ್ರದೇಶಗಳಲ್ಲಿ ನೆಟ್ಟಿರುವುದಿಲ್ಲ. ಸ್ವಲ್ಪ ಸಮತಟ್ಟಾದ ಭೂ ಭಾಗಗಳಲ್ಲಿ ಬೆಳೆಯುತ್ತಾರೆ. ಈ ಗಿಡಗಳು ಒಡ್ಡೊಡ್ಡಾಗಿ ಬೆಳೆಯುವಂತ ಗಿಡಗಳು. ಬೀಜಗಳು ಗಾತ್ರದಲ್ಲಿ ಚಿಕ್ಕವು. ಸಾಮಾನ್ಯವಾಗಿ ಈ ತಳಿಯ ಬೀಜವನ್ನು ಚೆರ್ರಿಯಂತೆಯೇ ಒಣಗಿಸುವರು. ಪಾರ್ಚುಮೆಂಟು ಮಾಡುತ್ತರಾದರೂ ಕಡಿಮೆ. ಅರೇಬಿಕಾ ಪಾರ್ಚುಮೆಂಟ್ ಬೆಲೆಯ ಅರ್ಧದಷ್ಟು ಬೆಲೆ ರೊಬಸ್ಟಾ ಚೆರ್ರಿಗೆ. ಕೆಲವು ಪ್ರದೇಶಗಳಲ್ಲಿ ಇದೇ ಚೆನ್ನಾಗಿ ಬೆಳೆದು ಫಸಲು ಹೆಚ್ಚು ಕೊಡುವುದರಿಂದ ಇದನ್ನೇ ಬೆಳೆಯುತ್ತಾರೆ. ಅರೇಬಿಕಾ ಕಾಫಿಗಿಂತ ರೊಬಸ್ಟಾ ಕಾಫಿ ಬೆಳೆಯುವುದು ಸುಲಭ, ಕೆಲಸ ಕಡಿಮೆ, ಖರ್ಚೂ ಕಡಿಮೆ. ಈ ಕಾಫಿ ಎಲ್ಲಾದರೂ ಬೆಳೆಯಲಿ ಇದರ ರುಚಿ ಅರೇಬಿಕಾ ಕಾಫಿಗಿಂತ ಭಿನ್ನ. ಇದರಿಂದಾಗಿಯೇ ಇನ್‌ಸ್ಟೆಂಟ್ ಕಾಫಿ ತಯಾರಿಕೆಯಲ್ಲಿ ರೋಬಸ್ಟಾ ಕಾಫಿಯ ಬಳಕೆ ದಿನೇ ದಿನೇ ಹೆಚ್ಚುತ್ತಿದೆ.
ಯಾರೋ ಕುಯೆಂಪು ಅನ್ನೊರ ಮಗನಂತೆ
ಕಾಫಿ ಬೋರ್ಡಿನ ಅವಸಾನಕ್ಕೆ ಮೂಲ ಕಾರಣ ಸರ್ಕಾರ ಮತ್ತು ಕಾಫಿಮಂಡಳಿ ಆಡಳಿತ ವರ್ಗದ ಪ್ರತಿಗಾಮಿ ಧೋರಣೆ. ಕಾಫಿಯ ಈ ಪೂಲ್ ಮಾರುಕಟ್ಟೆ ವ್ಯವಸ್ಥೆಯನ್ನು ನಾಶ ಮಾಡಬೇಕೆನ್ನುವ ಕಂಪನಿ ತೋಟಗಳ ಮತ್ತು ದೊಡ್ಡ ಬೆಳೆಗಾರರ ಕುತಂತ್ರಕ್ಕೆ ವಿರುದ್ಧವಾಗಿ ಇಲ್ಲಿಯವರೆಗೂ ಕಾಫಿ ಬೋರ್ಡಿಗೆ ಬೆಂಬಲವಾಗಿ ನಿಂತಿದ್ದವರು ಸಣ್ಣ ಕಾಫಿ ಬೆಳೆಗಾರರು. ತಾವು ಬೆಳೆದ ಕಾಫಿಯನ್ನು ತಾವೇ ಮಾರಾಟ ಮಾಡುವ ದೇಶವಿದೇಶಗಳಿಗೆ ರಫ್ತು ಮಾಡುವ ಶಕ್ತಿ ಇಲ್ಲದ ಇವರು ಈ ವ್ಯವಹಾರವನ್ನು ಕಾಫಿಬೋರ್ಡು ಮಾಡಿದರೆ ಒಳ್ಳೆಯದೆಂದು ತೀರ್ಮಾನಿಸಿ ಕಾಫಿಬೋರ್ಡಿಗೆ ಬೆಂಬಲ ಕೊಟ್ಟಿದ್ದರು. ಆದರೆ ಬೋರ್ಡಿನ ಅವ್ಯವಹಾರದಿಂದಾಗಿ ಅಸಮಾಧಾನ ಶುರುವಾಯಿತು.
ಮೊದಲಿಗೆ ಕಾಫಿಬೋರ್ಡಿನವರು ಬೆಳೆಗಾರರಿಗೆ ಇನಿಷಿಯಲ್ ಪೇಮೆಂಟ್ ನಂತರ ಸಂದಾಯವಾಗಬೇಕಿದ್ದ ಹಣವನ್ನು ಸರಿಯಾಗಿ ಪಾವತಿಸದೆ ವಿಳಂಬ ಮಾಡುತ್ತಿದ್ದರು. ಎಷ್ಟೋ ವೇಳೆ ಪಾಯಿಂಟ್ ಡಿಕ್ಲೇರ್ ಮಾಡುವುದೇ ತಡಮಾಡುತ್ತಿದ್ದರು. ಕ್ಯೂರಿಂಗ್ ವರ್ಕ್ಸ್‌ಗಳಲ್ಲಿ ಕಾಫಿ ಕದ್ದು ಸಾಗಿಸಲ್ಪಟ್ಟಿತು. ಇದನ್ನು ಕಾಯಲು ನಿಯಮಿಸಿದ ವಿಜಿಲೆನ್ಸ್ ಸಿಬ್ಬಂಧಿಯವರೇ ಈ ಕೆಲಸ ಮಾಡತೊಡಗಿದರು. ಕಾಫಿಬೋರ್ಡಿನ ಕಾಫಿ ಡಿಪೋಗಳಿಂದ ಕಾಫಿ ನಾಪತ್ತೆಯಾಯ್ತು. ಬೆಳೆಗಾರರಿಗೆ ವಿತರಿಸಲೆಂದು ಕಾಫಿಬೋರ್ಡು ಪಾವತಿ ಮಾಡಿದ ಹಣವನ್ನೇ ಕ್ಯೂರಿಂಗ್ ವರ್ಕ್ಸ್‌ನವರು ದುರುಪಯೋಗ ಮಾಡಿಕೊಂಡರು. ಈವರೆಗೆ ಕಾಫಿ ಬೋರ್ಡಿಗೆ ಬೆಂಬಲ ಕೊಡುತ್ತಿದ್ದ ಸಣ್ಣ ಬೆಳೆಗಾರರು ಕಂಗಾಲಾಗಿ ಹೋದರು.
ಅಲ್ಲದೆ ಕಾಫಿ ಉತ್ಪಾದನೆ ದೇಶದ ಅಗತ್ಯಕ್ಕಿಂತ ಎಷ್ಟೋ ಪಟ್ಟು ಹೆಚ್ಚಾಗಿದೆ. ಇದೂ ಸಹ ಅನೇಕ ಹೊಸ ಸಮಸ್ಯೆಗಳನ್ನು ತಂದೊಡ್ಡಿತು. ಈವರೆಗೂ ಕೇವಲ ರಫ್ತಿನ ಮೇಲೆ ಗಮನ ಇರಿಸಿಕೊಂಡಿದ್ದ ಸರ್ಕಾರ ಮತ್ತು ಕಾಫಿಬೋರ್ಡು ಭಾರತದೊಳಗೆ ಕಾಫಿಯ ಆಂತರಿಕ ಬೇಡಿಕೆಯನ್ನು ಹೆಚ್ಚಿಸಲು ಹೋಗಲಿಲ್ಲ. ಮಧ್ಯವರ್ತಿಗಳಾದ ಕಾಫಿ ವ್ಯಾಪಾರಿಗಳಂತೂ ಮಾರಾಟವಾಗುತ್ತಿದ್ದ ಕಾಫಿಯಲ್ಲೇ ಬೇಕಾದಷ್ಟು ಲಾಭಗಳಿಸುತ್ತಿದ್ದರಿಂದ ಆಂತರಿಕ ಮಾರುಕಟ್ಟೆಯನ್ನು ಹೆಚ್ಚಿಸುವ ತೊಂದರೆಯನ್ನೇ ತಗೆದುಕೊಳ್ಳಲಿಲ್ಲ. ಇಷ್ಟು ಹೊತ್ತಿಗೆ ಇತರ ಖಾಸಗಿ ಸಂಸ್ಥೆಗಳಂತೆ ಕಾಫಿಬೋರ್ಡು ಚೈತನ್ಯಶೀಲ ಸಂಸ್ಥೆಯಾಗಿ ಉಳಿಯಲಿಲ್ಲ. ಕಾಫಿಬೋರ್ಡು ಮಧ್ಯವರ್ತಿಗಳ ಹಾವಳಿಯನ್ನೂ ತಪ್ಪಿಸಲಾಗದೆ ದಲ್ಲಾಳಿಗಳ ಕೈಗೊಂಬೆಯಂತೆ ವರ್ತಿಸಿತು. ಕಾಫಿ ಬೆಳೆಯನ್ನು ಬಿಟ್ಟರೆ ಎಲ್ಲಾ ಬೆಳೆಗಾರರು ತಮ್ಮ ಉತ್ಪಾದನೆಯನ್ನು ತಾವೇ ಮಾರಿಕೊಳ್ಳುತ್ತಿದ್ದರು. ಕಾಫಿ ಬೆಳೆಗಾರನು ಎದುರಿಸುತ್ತಿದ್ದ ಸಮಸ್ಯೆ ಮತ್ತು ಮುಂದೊದಗಬಹುದಾದ ಆಪತ್ತು ವಿಪತ್ತುಗಳನ್ನು ಚಿಂತಿಸಿ ೧೯೭೧ರಲ್ಲೇ ತೇಜಸ್ವಿಯು ತಾವು ಬೆಳೆದ ಕಾಫಿಯನ್ನು ಸಂತೆಯಲ್ಲಿ ಮಾರಿಕೊಳ್ಳುವೆನೆಂಬ ಹೇಳಿಕೆ ಕೊಟ್ಟು ಕಾಫಿ ಬೋರ್ಡಿನ ಬಗ್ಗೆ ಮೊಟ್ಟಮೊದಲ ಬಾರಿಗೆ ಸಿಡಿದೆದ್ದರು. ಆದರೆ ಬೆಳೆಗಾರರು ಅದರಲ್ಲೂ ಸಣ್ಣ ಬೆಳೆಗಾರರು ತಣ್ಣಗೇ ಮಲಗಿದ್ದರು.
ತರುವಾಯ ನಡೆದು ಬಂದ ದಾರಿ ಸುಧೀರ್ಘವಾದದ್ದು. ಸಮಾನ ಮನಸ್ಕರುಗಳು ಕೂಡಿ ದಕ್ಷಿಣ ಭಾರತದ ಬೆಳೆಗಾರರ ಒಕ್ಕೂಟ ಒಂದನ್ನು ಕಟ್ಟಿಕೊಂಡು ಹೋರಾಟ ಮಾಡಿದರು. ಬೆಳೆಗಾರರು ಎದುರಿಸುತ್ತಿರುವ ಸಮಸ್ಯೆಯನ್ನೆಲ್ಲ ಅರಿವಿಗೆ ಬರುವಂತೆ ಮಾಡಿದರು. ಚಳವಳಿಯೂ ನಡೆಯಿತು. ಇದೆಲ್ಲದರ ಪರಿಣಾಮವಾಗಿಯೂ ಮತ್ತು ಜಗತ್ತಿನಲ್ಲಾಗುತ್ತಿದ್ದ ಬದಲಾವಣೆಯೂ ಇರಬಹುದು. ಬೆಳೆಗಾರ ಈಗ ಅಥವಾ ಇನ್ನೆಂದೂ ಇಲ್ಲ ಎನ್ನುವ ಐತಿಹಾಸಿಕ ಸಂದರ್ಭಕ್ಕೆ ಬಂದಿದ್ದರು. ಅಂದು ಕೈಗೊಂಡ ದಿಟ್ಟ ನಿರ್ಧಾರ ಇಡೀ ಕಾಫಿ ಉದ್ಯಮವನ್ನೇ ಕ್ರಾಂತಿಕಾರಕವಾಗಿ ಬದಲಾಯಿಸಿತು. ೧೯೯೩ರಲ್ಲಿ ಮೊಟ್ಟಮೊದಲ ಬಾರಿಗೆ ಕಾಫಿ ಮುಕ್ತ ಮಾರುಕಟ್ಟೆಯನ್ನು ಎದುರಿಸಿತು. ಅಂದಿನ ವರ್ಷ ಬೆಳೆಗಾರನಿಗೆ ಹರ್ಷ ವರುಷವಾಯಿತು. ಈ ಹಿಂದೆ ಒಂದು ಮೂಟೆ ಕಾಫಿ ಬೀಜಕ್ಕೆ ಏಳುನೂರು ರೂಪಾಯಿಗಳಿಗೆ ಮಾರಾಟವಾಗುತ್ತಿತ್ತು. ಎಫ್.ಎಸ್.ಕ್ಯೂ.ನಿಂದಾಗಿ ಮೂಟೆಗೆ ಏಳುಸಾವಿರ ರೂಪಾಯಿಯನ್ನೂ ಮುಟ್ಟಿತು. ಆದರೆ ಸುಮಾರು ಬೆಳೆಗಾರರು ಒಂದೂವರೆ ಸಾವಿರ ರೂಪಾಯಿಗೆ ಏರಿದಾಗಲೆ ಹೆಚ್ಚಾಯಿತೆಂದು ಮಾರಿಕೊಂಡಿದ್ದರು. ಎಲ್ಲವನ್ನೂ ಬಹಳ ಸರಳೀಕರಿಸಿ ಹೇಳಿರುವೆನು.
ಎಲ್ಲೋ ಮೂಲೆಯೊಂದರ ಸಣ್ಣ ಕಾಫಿ ಶಾಪಿನಲ್ಲಿ ಒಬ್ಬ ಮಾಪಿಳ್ಳೆ ಮಾತನಾಡುತ್ತಿದ್ದನಂತೆ, ಯಾರೋ ಕುಯೆಂಪು ಅನ್ನೊರ ಮಗನಂತೆ ಇದನ್ನೆಲ್ಲ ಮಾಡಿದ್ದು. ಎಂಬುದನ್ನು ಬಹಳ ಸಂತೋಷದಿಂದ ನೆರೆಯ ತೋಟದವರು ಮನೆಗೆ ಬಂದು ಹೇಳಿ ಹೋಗಿದ್ದರು. ಕಾಫಿ ತೋಟಗಳು ಬಹುಜನಗಳಿಂದ ನಡೆಯಬೇಕಾದ ಕೆಲಸ, ಹಾಗೂ ವರ್ಷವೆಲ್ಲಾ ಕೆಲಸವಿರುತ್ತದೆ. ನಾನು ಐವತ್ತರ ದಶಕದಲ್ಲಿ ಇಂಟರ್‌ಮೀಡಿಯೆಟ್‌ನಲ್ಲಿ ಓದುವಾಗ ಎಕನಾಮಿಕ್ಸ್ ಪಠ್ಯಪುಸ್ತಕದಲ್ಲಿ ಓದಿದ್ದೆ ಕಾಫಿ ತೋಟಗಳನ್ನು ಅಗ್ಗದ ಕಾರ್ಮಿಕರು ಸಿಗುವ ಕಡೆ ಮಾಡುತ್ತಾರೆಂದು. ಅಂದರೆ, ಅವರು ಲಭ್ಯವಿದ್ದರೆ ಮಾತ್ರ ತೋಟ ಮಾಡಲು ಸಾಧ್ಯವಾಗುತ್ತೆಂದು. ಯಾವ ಕಾಲದಲ್ಲಿ ಆ ಪಠ್ಯ ಪುಸ್ತಕ ಸಿದ್ಧಮಾಡಿದ್ದರೋ ನಾಕಾಣೆ. ಅರವತ್ತರ ದಶಕದಲ್ಲಿ ನಾವು ತೋಟಮಾಡಲು ಬಂದಾಗ ಪಠ್ಯ ಪುಸ್ತಕದಲ್ಲಿನ ಮಾತಿಗೂ ಇಲ್ಲಿಗೂ ಬೇರೆಯದೇ ಅನುಭವವಾಯಿತು. ಇವತ್ತಿಗೆ ಇನ್ನೂ ಬದಲಾದ ಪರಿಸ್ಥಿತಿಯನ್ನು ನೋಡುತ್ತಿದ್ದೇವೆ.
ಎಪ್ಪತ್ತರ ದಶಕದಲ್ಲಿ ನನಗೆ ನೆನಪಿದ್ದಂತೆ ಅಂದಿನ ಕಾರ್ಮಿಕರು ಸಂತೆ ದಿನದ ರಜೆಯಲ್ಲಿ ತಲೆಗೆ ಎಣ್ಣೆ ಸುರಿದುಕೊಂಡು ಗಟ್ಟಿ ಬಾಚಿಕೊಂಡು ವಾರದ ಸಂತೆಗೆ ಹೋಗಿ ಬರುತ್ತಿದ್ದರು. ವಾರದಲ್ಲಿ ಒಂದೇ ದಿವಸ ತಲೆ ಕೂದಲು ಬಾಚಣಿಗೆ ಕಾಣುತ್ತಿದ್ದುದು. ಆದರೆ ಇಂದು ಸಂತೆ ದಿನ ಬ್ಯೂಟಿ ಪಾರ್ಲರಿಗೂ ಹೋಗುವರು. ಮೂಡಿಗೆರೆಯೆಂಬಂತ ಸಣ್ಣ ಊರಿನಲ್ಲಿ ಎಷ್ಟಿರಬಹುದು ಹೇಳಿ ಈ ಪಾರ್ಲರ್‌ಗಳು. ಹದಿಮೂರು! ಮುಂದಿನ ಸರ್ತಿ ನಾವು ಅಲ್ಲಿಗೆ ಒಂದು ನಿಮಿಷದ ಭೇಟಿ ಕೊಡೋಣಂತೆ. ಮರಗಸಿ ಮಾಡುವ ಗಂಡಾಳುಗಳು ಸೊಂಟದ ಪಟ್ಟಿಯಲ್ಲಿರುವ ಕೊಕ್ಕೆಗೆ ಕತ್ತಿ ಸಿಕ್ಕಿಸಿಕೊಂಡು ಉಡದಂತೆ ಸೊಯ್ಯೆಂದು ಸರಸರ ಮರಹತ್ತಿ ತುತ್ತ ತುದಿ ತಲುಪಿ ಮರದ ಬೇಡವಾದ ಕೊಂಬೆ ಗೆಲ್ಲುಗಳನ್ನು ಕಡಿಯುತ್ತಾ ಈ ಕೊಂಬೆಯಿಂದ ಆ ಕೊಂಬೆಗೆ ದಾಟಿಕೊಳ್ಳುವುದು ನೋಡಿದರೆ ಎದೆ ಝಲ್ಲೆನ್ನುತ್ತೆ. ಯಾವ ರಿಸ್ಕಿನಲ್ಲಿ ಕೆಲಸ ಮಾಡುತ್ತಾರೆ ಅವರು. ಹಿಂದೆಯೆಲ್ಲಾ ಪ್ರತಿ ತೋಟಗಳಲ್ಲಿ ಕೂಲಿ ಲೈನೆಂದು ನಾಲ್ಕು ಗೋಡೆ, ಒಂದು ಬಾಗಿಲು, ಮಾಡೆಂಬಂತೆ ತೋಟದ ಆಳುಗಳ ಮನೆ ಕಟ್ಟಿರುತ್ತಿದ್ದರು. ಈಗ ಅವೆಲ್ಲಾ ಖಾಲಿ. ಸರ್ಕಾರ ಕೊಟ್ಟಿರುವ ನಿವೇಶನದಲ್ಲಿ ಅವರವರ ಸ್ವಂತ ಮನೆ. ಅಷ್ಟೇ ಅಲ್ಲ ಅನೇಕರ ಮನೆಗಳಲ್ಲಿ ಬಣ್ಣದ ಟಿವಿ, ಮಿಕ್ಸಿ, ಸ್ಟೀಲ್ ಬೀರು ಇರುತ್ತೆ. ಎಲ್ಲರ ಮನೆಯಲ್ಲಿ ಫೋನೂ ಇರುತ್ತೆ. ನಮ್ಮ ತೋಟಕ್ಕೆ ಕೆಲಸಕ್ಕೆ ಬರುವವರೆಲ್ಲರ ಮಕ್ಕಳು ಎಸ್.ಎಸ್.ಎಲ್.ಸಿ.ಗೆ ಬಂದರು ಕೂತರು. ಕೆಲವರು ಡಿಗ್ರಿ ಓದುತ್ತಾರೆ. ಅಕ್ಷರ ತಬ್ಬುವಿಕೆಯಿಂದಾಗಿ ಅನೇಕ ಬದಲಾವಣೆಗಳಾಗುತ್ತಿವೆ. ಈ ತಲೆಮಾರಿನವರು ಯಾರೂ ತೋಟದ ಕೆಲಸಕ್ಕೆ ಬರಲೊಪ್ಪರು. ಕಡಿಮೆ ಸಂಬಳವಾದರೂ ಸೈ, ಕಡೇ ಪಕ್ಷ ಮೂಡಿಗೆರೆ ಬಟ್ಟೆಯಂಗಡಿಯಲ್ಲಿ ಸೇಲ್ಸ್ ಹುಡುಗಿ ಅನ್ನಿಸಿಕೊಳ್ಳಲಿಕ್ಕೆ ಇಷ್ಟಪಡುತ್ತಾಳೆ ಅಥವಾ ಬೆಂಗಳೂರಿಗೆ ಕೆಲಸ ಅರಸಿ ಹೊರಡುತ್ತಾಳೆ.
ಆನೆಗಳಿಗೆ ತೇಜಸ್ವಿ ತೋಟಾನೇ ಯಾಕೆ ಬೇಕಾಯ್ತು?
ಕಾಫಿಪ್ಲಾಂಟರುಗಳ ಹೆಣ್ಣುಮಕ್ಕಳು ಸಾಮಾನ್ಯವಾಗಿ ನೋಡಿದ ತಕ್ಷಣ ಚೆನ್ನಾಗಿದ್ದಾರೆ ಎಂದೆನಿಸಿಕೊಳ್ಳುತ್ತಾರೆ. ಅದೇನು ಜನಾಂಗೀಯ ಲಕ್ಷಣವೋ, ಜೀನ್ಸೋ ಅಥವಾ ಶ್ರೀಮಂತಿಕೆಯೋ ಕಾಣೆ. ಇವರಿಗೆಲ್ಲಾ ಹೆಚ್ಚಿನ ಸಂಪರ್ಕ ಬೆಂಗಳೂರು. ಯಾರಾದರೊಬ್ಬರು ನೆಂಟರು ಇದ್ದೆ ಇರ್ತಾರೆ ಅಲ್ಲಿ. ಅಥವಾ ಫ್ಲಾಟ್ ಇರುತ್ತೆ ಈಗೆಲ್ಲ. ಹೀಗೇ ವಿದ್ಯಾಭ್ಯಾಸನೂ ದೂರದೂರಿನಲ್ಲಿ. ಹಾಗಾಗಿ ಅಲ್ಲೆಲ್ಲ ಬ್ಯೂಟಿ ಪಾರ್ಲರಿಗೆ ಹೋಗೋದು, ನೀಟಾಗಿ ಕಾಣಿಸಿಕೊಳ್ಳೋದು ಅಂತ ನಾನು ತಿಳಿದಿರುವೆನು. ಹೆಚ್ಚಿನವರು ಸಹಜವಾಗೇ ಚೆನ್ನಾಗಿಯೂ ಇರುತ್ತಾರೆ. ಶಿವರಾತ್ರಿ ಕಳೆದು ಶಿವಶಿವ ಅಂತ ಚಳಿಬಿಟ್ಟು ಬಿಸಿಲಿಗೆ ಕಾಲಿಡುತ್ತಿದ್ದಂತೆ ತೋಟಕ್ಕೆ ಸ್ಪ್ರಿಂಕ್ಲರ್ ಹಾಕುವ ಯೋಚನೆ ಶುರುವಾಗುತ್ತೆ. ಹೀಗೆ ಒಂದು ಸಲ ಸ್ಪ್ರಿಂಕ್ಲರ್ ಜೆಟ್ಟು ತರಬೇಕಾಯ್ತು. ತೇಜಸ್ವಿ ಮತ್ತು ನಾನು ಕಾರಿನಲ್ಲಿ ಮೂಡಿಗೆರೆ ಅಂಗಡಿಗೆ ಹೋದೆವು. ಅಂಗಡಿಯವನು ಗೋದಾಮಿಗೆ ಹೋಗಿ ತರಬೇಕಾಗುತ್ತೆ ಸಾರ್, ಕಾಯುವಿರಾ ಎಂದು ಕೇಳಿದನು. ಆಯ್ತೆಂದರು ಇವರು. ಮಹಾರಾಯ ಎಷ್ಟು ಹೊತ್ತಾದರೂ ಬರಲಿಲ್ಲ. ದಾರಿಯಲ್ಲಿ ಹೋಗುವವರನ್ನು ನೋಡ್ತಾ ಕಾಲ ಕಳೆಯಬೇಕಾಯ್ತು. ಆಚೆ ಕಡೆ ಈಚೆಕಡೆಯ ಅಂಗಡಿಗಳನ್ನೂ ಸಹ ನಾನು ಗಮನಿಸಲಿಲ್ಲ. ಆಗ ಇವರು ಹೇಳಿದರು, ಆಗ್ಲಿಂದ ನೋಡ್ತಾಯಿದ್ದೀನಿ, ಆ ಎದುರುಗಡೆಯ ಶಾಪ್ ನೀಟಾಗಿ ಕಾಣಿಸಿ ಕೊಳ್ತಿದೆಯೆಲ್ಲ. ಒಂದೆರಡು ಹೂಕುಂಡಗನ್ನಿಟ್ಟಿದಾರೆಲ್ಲ ಅಲ್ಲಿಗೆ ಹುಡುಗಿಯರು, ಹೆಂಗಸರು, ಹೋಗ್ತಾರೆ ಬರ್ತಾರೆ ಯಾಕೆ? ಎಂದು. ನಾನು ತಿರುಗಿ ನೋಡಿದೆ, ಬ್ಯೂಟಿ ಪಾರ್ಲರ್ ಅಂತ ಬರ್‍ದಿದೆಯೆಲ್ಲ ಅದಕ್ಕೇ ಎಂದೆ. ಹೌದು ಅದು ಗೊತ್ತಾಗೇ ಕೇಳಿದ್ದು. ಆದರೆ ಅಲ್ಲಿಗೆ ಹೋಗಿ ಬಂದಮೇಲೂ ನಿನ್ನ ಹಾಗೆ ಕಾಣಿಸಿಕೊಳ್ತಾರಲ್ಲಂತ, ಸುರಸುಂದರಿಯರ ಹಾಗೆ ಕಾಣಿಸಿಕೊಳ್ತಾರೆಂದು ತಿಳಿದಿದ್ದೆಯೆಂದರು. ನಾನು ನಕ್ಕಿದೆ. ನಮ್ಮ ಕಲ್ಪನೆಯೇ! ಹಾಗೆ. ಅಷ್ಟರಲ್ಲಿ ಸ್ಪ್ರಿಂಕ್ಲರ್ ಜೆಟ್ಟು ಬಂದಿತು.
ಸುಮಾರು ಹದಿನೈದು ವರ್ಷಗಳಿಂದಲೂ ನಮ್ಮ ಮನೆ ಕೆಲಸ ಮತ್ತು ಹೂ ತೋಟದ ಕೆಲಸಕ್ಕೆ ನನಗೆ ಸಹಾಯ ಮಾಡುವವಳು ಒಬ್ಬಳಿದ್ದಾಳೆ. ಒಳ್ಳೆಯ ಹೆಂಗಸು. ನಗುತ್ತಾ ಕೆಲಸಮಾಡುವಳು. (ಇವಳ ಗಂಡ ಕುಡಿದು, ಕುಡಿದೇ ರಸ್ತೆಯಲ್ಲಿ ಬಿದ್ದು ಸತ್ತುಹೋಗಿ ಎಷ್ಟೋ ವರ್ಷಗಳಾಗಿದ್ದವು. ತೇಜಸ್ವಿಗೆ ಹೇರ್ ಕಟ್ ಮಾಡಲು ಕುಡಿದು ಕೊಂಡೇ ಮನೆಗೆ ಬರುತ್ತಿದ್ದ. ಹೀಗೆ ಕುಡಿದು ಬರಬೇಡಂತ ಹೇಳಿದರೆ, ಕುಡಿಯದಿದ್ದರೆ ಕೈನಡುಗುತ್ತೆ ಸ್ವಾಮಿ, ಕೂದಲು ಕತ್ತರಿಸುವ ಬದಲು ಕಿವಿ ಕಡೆಗೇ ಕೈ ಹೋಗುತ್ತೆ ಎನ್ನುತ್ತಿದ್ದನಂತೆ.) ಇವಳ ಹಿರೇಮಗಳಿಗೆ ಮದುವೆಯಾಗಿತ್ತು. ಒಂದು ದಿನ ನನ್ನಲ್ಲಿಗೆ ಬಂದು ಬ್ಯೂಟಿ ಪಾರ್ಲರ್ ಟ್ರೈನಿಂಗ್ ಆಗಿದೆ, ಪಾರ್ಲರ್ ತೆಗೆಯಲು ಸಹಾಯ ಮಾಡಿರೆಂದಳು. ತೆರೆದಳೂ ಕೂಡ. ನಾಲ್ಕಾರು ವರ್ಷಗಳಲ್ಲಿ ಬ್ಯಾಂಕಿನ ಸಾಲವನ್ನೂ ಪೂರೈಸಿದಳು. ಕಿರಿ ಮಗಳು ಬಿ.ಎ. ಡಿಗ್ರಿ ಪೂರೈಸಿ ಕಂಪ್ಯೂಟರ್ ಬೇಸಿಕ್ಸ್ ಕಲಿಬೇಕು ಒಂದು ಅರ್ಜಿ ಬರೆದುಕೊಡಿರೆಂದು ಕೇಳಿದಳು. ಆ ಫಾರಂನಲ್ಲಿ ಸುನಯನ ಕ್ಷತ್ರಿಯರೆಂದು ಬರೆದಿದ್ದಳು. ಇನ್ನೊಂದು ದಿನ ಇವಳ ಅಮ್ಮ ಸಪ್ಪೆ ಮೊರೆ ಹಾಕಿಕೊಂಡೇ ಕೆಲಸ ಮಾಡುತ್ತಿದ್ದಳು. ಯಾಕೆಂದು ವಿಚಾರಿಸಿದೆ. ನಡುಕಲು ಮಗಳಿಗೆ ಮದುವೆ ಮಾಡಲು ಹುಡುಗ ಸಿಕ್ಕುತ್ತಿಲ್ಲವಂತೆ, ಜಾತಿಯ ಹುಡುಗರು ಮೊದಲು ನಿರೀಕ್ಷಿಸುವುದು ಹುಡುಗಿಯರು ಬ್ಯೂಟಿ ಪಾರ್ಲರ್ ಕೆಲಸ ಕಲಿತಿರುವಳಾ ಎಂದು. ಎರಡನೆಯದು ಬಂಗಾರವಂತೆ. ಅಥವಾ ಬಂಗಾರ ಹೆಚ್ಚಿಗೆ ಕೊಟ್ಟರೆ ಆಕೆ ಕೆಲಸ ಕಲಿಯದಿದ್ದರೂ ಆಗುತ್ತೇನೋ. ಅದೇ ತಾನೇ. ಆ ಮಗಳು ಎಸ್.ಎಸ್.ಎಲ್.ಸಿ. ಮಾಡಿ ನಮ್ಮ ತೋಟದ ಕೆಲಸಕ್ಕೆ ಬರುತ್ತಿದ್ದಳು. ಅವಳಿಗೂ ಪಾರ್ಲರ್ ಕೆಲಸವನ್ನು ಕಲಿಸಲು ಹೇಳಿದೆ. ಕಲಿತಳು. ಮದುವೆಯೂ ಆಯಿತು. (ಅವಳಿಗೆ ಅವನ ಊರಿನಲ್ಲಿ ಪಾರ್ಲರ್ ತೆಗೆಯುವ ಹುನ್ನಾರವಂತೆ ಈಗ) ಮೂಡಿಗೆರೆಯೆಂಬ ಸಣ್ಣ ಊರಿನಲ್ಲಿ ಹದಿಮೂರು ಬ್ಯೂಟಿ ಪಾರ್ಲರ್‌ಗಳಿವೆಯಂತೆ! ಇವಳೇ ಸುದ್ದಿ ಕೊಟ್ಟವಳು.
ಒಂದು ದಿನ ಬೆಳಿಗ್ಗೆ ಎದ್ದ ಕೂಡಲೆ ನೋಡಿದರೆ ನಲ್ಲಿಯಲ್ಲಿ ನೀರಿಲ್ಲ. ಅರೆ ರಾತ್ರಿ ಮಲಗುವಾಗ ಇತ್ತು, ಈಗೇನಾಯ್ತು ಇದಕ್ಕೆ. ಬೇಸಿಗೆಯಲ್ಲಿ ಬಾವಿಯಲ್ಲಿ ಸ್ವಲ್ಪ ಮಟ್ಟಿಗೆ ನೀರು ಇಂಗಬಹುದು. ಆದರೂ ಇಲ್ಲ ಎನ್ನುವಂತಿಲ್ಲ. ಮಲೆನಾಡಿನಲ್ಲಿ ಎತ್ತರ, ಇಳಿಜಾರು ಮತ್ತು ತಗ್ಗು ಪ್ರದೇಶವಾದ್ದರಿಂದ ಸೈಫನ್ ಸಿಸ್ಟಂನಿಂದ ನೀರು ತಂದುಕೊಳ್ಳುತ್ತೇವೆ. ಅಂದರೆ ನೀರಿರುವ ಎತ್ತರ ಪ್ರದೇಶದಲ್ಲಿ ಅಚ್ಚುಕಟ್ಟಾಗಿ ಗುಂಡಿ ತೋಡಿ ಒಂದು ಬಾವಿಯಂತೆ ಮಾಡಿ ಅದಕ್ಕೆ ಒಂದು ಒಳ್ಳೆ ಪ್ಲಾಸ್ಟಿಕ್ ಪೈಪು ಇಟ್ಟರೆ ಸಾಕು. ತಗ್ಗಿನಲ್ಲಿರುವ ನಮ್ಮ ಮನೆಯ ಎಲ್ಲ ನಲ್ಲಿಗಳಲ್ಲೂ ನೀರು ಬರುತ್ತೆ. ಸ್ಪಟಿಕದಷ್ಟು ಸ್ವಚ್ಛವಾದ ನೀರು. ಗಾಜಿನ ಲೋಟಕ್ಕೆ ಹಾಕಿಟ್ಟರೆ ನೀರೇ ಕಾಣೊಲ್ಲ. ಚೆನೈಯಿಂದ ಬಂದಿದ್ದ ಬಾಟನಿಸ್ಟ್ ಒಬ್ಬರು ಹೇಳಿದರು ಅವರ ಊರಿನಲ್ಲಿ ಇಂತ ನೀರೇ ನೋಡಿಲ್ಲವಂತೆ. ನಲ್ಲಿ ನೀರಿಗೇನಾಯ್ತೆಂದು ಇವರು ಪೈಪು ಇಟ್ಟಲ್ಲೇ ನೋಡುತ್ತಾ ಹೊರಟರು. ದಟ್ಟವಾದ ಮಂಜು ಬೇರೆ ಬೀಳುತ್ತಿದೆ. ಕಿಟಕಿಯಿಂದ ನೋಡಿದರೆ ಇವರು ಕಾಣಿಸುತ್ತಿಲ್ಲ. ಅಷ್ಟು ಮಂಜು. ಅಲ್ಲಿ ನೋಡಿದರೆ ಗಟ್ಟಿ ಪ್ಲಾಸ್ಟಿಕ್ ಪೈಪುಗಳು ಚಪ್ಪಲ್ ಚೂರಾಗಿವೆ. ಯಾವ ಬಡ್ಡಿಮಗಂದೋ ಈ ಕೆಲಸ ಅಂತ ಬೈಕೊಳ್ಳುತ್ತಲೇ ಮುಂದೆ ಹೊಗಿರಬಹುದು ಇವರು. ಮುಂದೆ ಹೋದಂತೆ ಉಸುಕಿನ ಮಣ್ಣಲ್ಲಿ ನಾಲ್ಕು ನಾಲ್ಕು ಗುಂಡಿಗಳಿವೆ. ಅದರ ತುಂಬ ನೀರು. ಏನೋ ಗುಮಾನಿ. ಆದರೆ ನಂಬಲು ಕಷ್ಟ. ಇನ್ನೂ ಮುಂದೆ ಹೋದಾಗ ತಿಳೀತು ಕಾಡಾನೆ ಕೆಲಸ ಇದೆಲ್ಲ ಅಂತ. ಪೈಪನ್ನೆಲ್ಲಾ ಮೆಟ್ಟಿ ಲಟಲಟ ಮುರಿದಿದೆ. ಎಲ್ಲಿಂದ ಹಾದಿ ತಪ್ಪಿ ಬಂದಿತೊ ಗೊತ್ತಾಗಲಿಲ್ಲ. ಹೊಸ ಪೈಪುಗಳನ್ನು ತಂದು ಜೋಡಿಸಿಕೊಳ್ಳಬೇಕಾಯಿತು.
ಕೆಲ ಸಮಯದ ಹಿಂದೆ. ಬೆಳಿಗ್ಗೆ ಸ್ನಾನ ಮಾಡುತ್ತಿದ್ದೆ. ಅಮ್ಮಾ! ಅಮ್ಮಾ! ಒಂದೇ ಉಸಿರಿನಲ್ಲಿ ಏದುಸಿರು ಬಿಡುತ್ತಾ ನಮ್ಮ ಹೆಣ್ಣಾಳುಗಳು ಕೂಗಿಕೊಂಡು ಓಡೋಡಿ ಬಂದಂತಾಯಿತು. ಏದುಸಿರಿನ ಬಿಸಿ ಬಚ್ಚಲ ಮನೆಗೆ ತಟ್ಟುತ್ತಿದೆ. ಏನೋ ಅಪಾಯ ತಿಳಿದೆ. ಫೋನ್ ಒಂದೇ ಸಮನೆ ಹೊಡಕೊಳ್ಳುತ್ತಿದೆ. ನಿಮ್ಮ ಕೆಲಸಗಾರರನ್ನು ಆಚೆ ಕಡೆಯಿಂದ ಕರೆಸಿಕೊಳ್ಳಿ ಅರಣ್ಯ ಇಲಾಖೆಯವರ ಬೊಬ್ಬೆ! ಬೊಬ್ಬೆಯೋ ಬೊಬ್ಬೆ. ಕಾಡಾನೆ ಬಂದಿವೆ. ಎರಡು ಗಂಡು, ಒಂದು ಹೆಣ್ಣು. ಎಲ್ಲಿಂದ ಬಂದವು. ಏನ್ಸಮಾಚಾರ ಒಂದೂ ಗೊತ್ತಿಲ್ಲ. ಮನೆ ಪಕ್ಕಕ್ಕೇ ನಮ್ಮ ಆಳುಗಳು ಕೆಲಸಮಾಡುತ್ತಿದ್ದಲ್ಲೇ ಅವನ್ನು ನೋಡಿ ಹೆದರಿ ಬಿದ್ದು ಎದ್ದು ಬಂದಿದಾರೆ. ಫಾರೆಸ್ಟು ಗಾರ್ಡುಗಳ ಕೂಗಾಟ. ಅಲ್ಲಿ ಹೋಯ್ತು ಸಾರ್. ಇಲ್ಲಿ ಬಂತು ಸಾರ್ ಅಂತ. ನನಗೋ ಅವು ಇರುವಲ್ಲಿಗೇ ಹೋಗಿ ನೋಡಬೇಕೆನ್ನುವ ಆಸೆ. ಒಬ್ಬಳು ಆಳೂ ಜೊತೆಗೆ ಬರಲೊಪ್ಪರು. ಈ ಅಮ್ಮನಿಗ್ಯಾಕೆ ಇಷ್ಟು ಧೈರ್ಯ ಅಂತ ಮಾತಾಡ್ತಿದಾರೆ. ಅಂತೂ ಹೊಂಡ ಇಳಿದು ಏರಿಹತ್ತಿ, ಜಾರುವುದನ್ನೂ ಲೆಕ್ಕಿಸದೆ ಓಡೋಡಿ ಹೋದೆ ಅಕಸ್ಮಾತ್ ಅವು ಹೊರಟೋದ್ರೆ ಅಂತ. ಅಲ್ಲಿ ಗಾರ್ಡುಗಳು ಅಲ್ಲೆ ದೂರ ನಿಲ್ಲಿ ಅಂತ ಸದ್ದು ಮಾಡದೆ ನನಗೆ ಸನ್ನೆ ಮಾಡುತ್ತಿದ್ದಾರೆ. ಅಲ್ಲಿ ದಟ್ಟಕಾಡು ಬೇರೆ. ಮೂವತ್ತು ಗಜ ದೂರದಲ್ಲೇ ದೊಡ್ಡ ದೊಡ್ಡ ದಂತ ಇರುವ ಆನೆಗಳು ತೋಟದಲ್ಲಿನ ಹಲಸಿನ ಮರದ ಕೊಂಬೆಗಳನ್ನು ಸೀಳಿ ಹಣ್ಣು ಕಾಯಿ ಪಲ್ಟಾಯಿಸುತ್ತಿದ್ದವು. ಮರನೆಲ್ಲ ಜಗ್ಗಿಸಿ ಲಟಲಟ ಮುರಿಯುತ್ತಿದ್ದವು. ಆಹಾ! ಬೃಹದಾಕಾರದ ಪ್ರಾಣಿ! ಎಷ್ಟು ಸಂತೋಷವಾಯಿತು ಅಂತ. ಏನು ಸೃಷ್ಟಿಯಪ್ಪ! ಅಷ್ಟರಲ್ಲಿ ಹಿಂದೆಯಿಂದ ನಮ್ಮ ರೈಟ್ರು ಸರ ಸರ ಬಂದು ಅಯ್ಯಾವ್ರು ಕರಿತಾಯಿದಾರೆ ಬರಬೇಕಂತೆ ಎಂದ. ಅಸಮಾಧಾನದಿಂದಲೆ ಬೇಗ ಬೇಗ ಹಿಂದಿರುಗಿದೆ. ಆ ಕಣಿವೆ, ಆ ಕಡೆ ತುಂಬ ಇಳಿಜಾರು. ಚೂರು ಹೆಚ್ಚು ಕಡಿಮೆಯಾದರೆ ಜಾರಿ ಬೀಳೋದೇ ಸೈ. ಇಳಿಯುವಷ್ಟರಲ್ಲಿ ಆನೆ ಘೀಳಿಡುತ್ತಾ ನಾನು ನಿಂತಿದ್ದ ಕಡೆಯಿಂದಲೇ ಓಡಿ ಹೋಗಿದ್ದು ಹೂಂಕಾರದ ಸದ್ದಿನಲ್ಲೇ ತಿಳಿಯಿತು. ಇವರು ಸ್ಕೂಟರ್ ತಗೊಂಡು ಇನ್ನೊಂದು ಮಾರ್ಗದಲ್ಲಿ ಹೊರಟರು ಕ್ಯಾಮರಾ ಕಣ್ಣಿನಲ್ಲಿ ನೋಡಲು ಸಾಧ್ಯವೇ ಎಂದು. ಆ ದಿನ ಕೆಲಸಕ್ಕೆ ರಜೆ ಮತ್ತು ಆನೆಯ ಬಗ್ಗೆಯೇ ಮಾತು. ಮಿಂಚಿನ ವೇಗದಲ್ಲಿ ಪತ್ರಿಕಾ ಛಾಯಾಗ್ರಾಹಕರು ಬಂದರು. ದಟ್ಟ ಕಾಡಿನಿಂದಾಗಿ ಆನೆಗಳು ಕಾಣಲಿಲ್ಲವಂತೆ. ಆದರೆ ಬೇಲಿ ಬಳಿ ದಿಢೀರನೆ ಕಂಡರು. ಇವರನ್ನು ಕಂಡು ಆನೆ ಘೀಳಿಟ್ಟು ಅತ್ತಲಾಗಿ ಓಡಿದಕ್ಕೆ ಇವರು ಇತ್ತಲಾಗಿ ಹೆದರಿ, ಬಿದ್ದು ಸಣ್ಣಪುಟ್ಟ ಗಾಯಗಳಾಗಿ ಸುರಕ್ಷಿತವಾಗಿ ತೆರಳಿದರು. ಅರಣ್ಯ ಸಿಬ್ಬಂದಿಗಳು ಅವುಗಳನ್ನೇ ಹಿಂಬಾಲಿಸುತ್ತಾ ಸಾಗುತ್ತಾ ಹೊರಟರು. ಸಂಜೆ ಹೊತ್ತಿಗೆ ದೂರದ ಕಾಡಿನಲ್ಲಿ ಅವು ವಿರಮಿಸುತ್ತಿದುದನ್ನು ನಾವಿಬ್ಬರು ನಮ್ಮ ತೋಟದ ಬೇಲಿಯ ಹತ್ತಿರ ಮರ ಹತ್ತಿ ನಿಂತು ನೋಡಿದೆವು.
ಬನ್ನೇರುಘಟ್ಟದಿಂದ ತಪ್ಪಿಸಿಕೊಂಡವು ಚಿಕ್ಕಮಗಳೂರಿನ ಮುತ್ತೋಡಿ ಅಭಯಾರಣ್ಯ ತಲುಪಿದಾಗ ಅಲ್ಲಿನ ಆನೆಗಳ ಗುಂಪು ಇವನ್ನು ಸೇರಿಸಿಕೊಳ್ಳಲಿಲ್ಲವಂತೆ. ಹಾಗೇ ಪ್ರವಾಸ ಹೊರಟು ನಮ್ಮನ್ನು ವಿಚಾರಿಸಿಕೊಂಡು ಈ ಕಡೆಯಿಂದ ಹೊರಟ ಮೇಲೆ ಅರಣ್ಯ ಸಿಬ್ಬಂದಿಯವರು ಬನ್ನೇರುಘಟ್ಟವನ್ನು ತಲುಪಿಸಿದರಂತೆ. ಈ ಆನೆಗಳು ವಿಹರಿಸಲು ತೇಜಸ್ವಿ ತೋಟವನ್ನೇ ಏಕೆ ಆರಿಸಿಕೊಂಡವೋ ಗೊತ್ತಾಗಲಿಲ್ಲವೆಂದು ನಮ್ಮ ಬೇಲಿ ಪಕ್ಕದ ಕಾಲೇಜು ಹುಡುಗಿಯರು ನಗೆಯಾಡಿದರಂತೆ. ಕೃಷ್ಣೇಗೌಡನ ಆನೆಯಂತೂ ಅಲ್ಲ ಬಿಡಿ.
ಮೂಡಿಗೆರೆಯಲ್ಲಿ ತೇಜಸ್ವಿಯ ಜೊತೆ
ವರ್ಷ ಒಂದರಲ್ಲೇ ನೂರಿನ್ನೂರು ಇಂಚು ಮಳೆ ಸುರಿವ ನಮ್ಮ ಪ್ರದೇಶದಲ್ಲೇ ಬೇಸಿಗೆಯಲ್ಲಿ ಕುಡಿಯುವ ನೀರಿಗಾಗಿ ಜನ ಹಾಹಾಕಾರ ಅನುಭವಿಸುವಂತಾಗಿದೆ. ಹಾಗಾಗಿಯೇ ಮಳೆಕೊಯ್ಲು ಹೇಗೆ ಮಾಡಬಹುದು ಮತ್ತು ಏತಕ್ಕಾಗಿ ಎನ್ನುವುದೊಂದು ಕಾರ್ಯಕ್ರಮ ನಮ್ಮ ತೋಟದ ಪಕ್ಕದ ಪ್ರಾದೇಶಿಕ ಕೃಷಿ ಕೇಂದ್ರದಲ್ಲಿ ಏರ್ಪಡಿಸಿದ್ದರು. ನಾನು ಮನೆಯಿಂದ ಹೊರಗೆ ಹೋಗದೇ ಇರುವವಳು. ಕೇವಲ ಕುತೂಹಲಕ್ಕಾಗಿ ಆ ಸಭೆಗೆ ಹೋದೆನು. ಅಲ್ಲಿದ್ದವರೆಲ್ಲಾ ಸ್ಥಳೀಯರೇ. ಅಂದಿನ ಕಾರ್ಯಕ್ರಮ ಶುರು ಮಾಡುವ ಮುಂಚೆ ಸಭೆಯ ಮುಖ್ಯಸ್ಥರು ಒಂದು ಪ್ರಶ್ನೆ ಎತ್ತಿದರು. ಯಾರಲ್ಲಿ ವರ್ಷದ ಮುನ್ನೂರೈವತ್ತೈದು ದಿನವೂ ನೀರಿನ ಕೊರತೆಯಿಲ್ಲದವರು ಕೈ ಎತ್ತಿ ಎಂದರು. ಸುಮಾರು ಇನ್ನೂರೈವತ್ತು ಜನರಿದ್ದ ಇಡೀ ಸಭೆಗೆ ಕೈಯೆತ್ತಿದವಳು ನಾನೊಬ್ಬಳೇ. ಎಂತಹ ಬಿರು ಬೇಸಿಗೆಯಲ್ಲೂ ಬತ್ತದ, ಎಷ್ಟು ಧಾರಾಳವಾಗಿಯೂ ಉಪಯೋಗಿಲು ಸಿಕ್ಕುವಂತೊಂದು ಒರತೆ ನಮ್ಮ ತೋಟದಲ್ಲಿ ಕಾಡಿನೊಳಗೆ ಇದೆ ಎಂದು ಹೇಳಿದೆ. ಒಂದಾರೇಳು ತಿಂಗಳು ಜುಳು ಜುಳು ಹರಿವ ನೀರಿನ ಸದ್ದು ಕೇಳುತ್ತಲೇ ಇರುತ್ತೆ. ಹೇಳಬೇಕೆಂದರೆ ಇಂತಹ ಜಾಗ ಹುಡುಕಿಕೊಂಡೇ ನಾವು ನಮ್ಮ ಮನೆ ಕಟ್ಟಿಕೊಂಡೆವು. ಈ ಒರತೆ ಹುಟ್ಟುವ ಕಡೆ ಆಸುಪಾಸಿನಲ್ಲಿ ಮನುಷ್ಯನ ಸುಳಿವು ಇಲ್ಲದಂತೆಯೂ, ಅವನ ಯಾವ ವ್ಯವಹಾರವೂ ನಡೆಯದಂತೆ ನೋಡಿಕೊಂಡಿರುವೆವು. ಪ್ರಕೃತಿಯ ಒಡಲಿಗೆ ನಮ್ಮ ಕೈ ತಾಗೇ ಇಲ್ಲ. ಹಾಗಾಗಿಯೇ ಒರತೆ ಬತ್ತುವುದೇ ಇಲ್ಲ. ಇದೇ ಅದರ ಗುಟ್ಟು. ಈಗಾಗಲೇ ನಿಮಗೆ ಒಂದು ಝರಿಯ ಜಾಡಿನಲ್ಲಿ ನೆನಪಿಗೆ ಬಂದಿರಬಹುದು. ಎಲ್ಲಿ ಪ್ರಕೃತಿಯಲ್ಲಿ ಮನುಷ್ಯನ ಕೈವಾಡವಿರುತ್ತೋ ಅಲ್ಲಿ ಇದ್ದಿದ್ದೇ ಸ್ವಾಮಿ ಅಪಾಯ ಎನ್ನುವ ನಡಾವಳಿಕೆಯು ಇವತ್ತಿಗೆ ಎಲ್ಲರ ಅರಿವಿಗೆ ಬಂದಿರುವುದು.
ಮೂಡಿಗೆರೆಯಲ್ಲಿ ನೀವು ಎಲ್ಲೇ ಹೋಗಿ, ಎಲ್ಲೇ ತಿರುಗಾಡಿ ಅರಣ್ಯದ ಹಿನ್ನೆಲೆ ನಿಮ್ಮನ್ನು ಅನುಸರಿಸುತ್ತಲೇ ಇರುತ್ತೆ. ಕಾಡುತ್ತಲೇ ಇರುತ್ತೆ. ಈ ಅರಣ್ಯ ಏನಿರಬಹುದು. ಬಹಳ ನಿಗೂಢ. ಆ ನಿಗೂಢತೆಯ ರಹಸ್ಯದಲ್ಲಿ ಹೊಕ್ಕೋದು ಅಂದರೆ ಒಂಥರ ದಿವ್ಯತೆಗೆ ಎದುರಾದಂತೆ.
ನಾಲ್ಕುವರೆ ದಶಕಗಳ ಹಿಂದೆ ಮೊಟ್ಟಮೊದಲಬಾರಿಗೆ ಸ್ಕೂಟರ್‌ನಲ್ಲಿ ತೇಜಸ್ವಿ ಮತ್ತು ನಾನು ಬಾಬಾಬುಡನ್ ಗಿರಿಗೆ ಹೋದಾಗ ಅಲ್ಲಿನ ಸೃಷ್ಠಿ ವೈಭವದ ಸೌಂದರ್ಯ ನೋಡಿ ಬೆರಗಾಗಿ ಹೋದೆ! ಅಲೆ ಅಲೆಯಾದ ಗಿರಿ ಶಿಖರಪಂಕ್ತಿ. ಹಸಿರುಬಣ್ಣ, ನೀಲಿ ಬಣ್ಣ, ತರತರದ ಬಣ್ಣ ಬಿಚ್ಚಿಕೊಳ್ಳುವ ಬೆಟ್ಟದ ಸಾಲುಗಳು, ಅಲ್ಲಲ್ಲಿ ಬಣ್ಣ ಬಣ್ಣದ ಬಟ್ಟ ಬೋಳು ಗುಡ್ಡಗಳು. ಒಳ ಹೊಕ್ಕರೆ ಏನೇನು ತೋರಿಸುತ್ತೋ. ಏನೆಲ್ಲ ತೆರದುಕೊಂಡು ಕೊಡುತ್ತೊ ನಮ್ಮ ಮನದಾಳಕ್ಕೆ ತಕ್ಕಂತೆ. ಅಲ್ಲಿನ ಆಗಿನ ನಿರ್ಜನ ಪ್ರದೇಶವೇ ದಿವ್ಯವಾಗಿತ್ತು ಧ್ಯಾನಿಸುವಂತಿತ್ತು. ನಮಗಾಗಿ ಸೃಷ್ಟಿ ಇಂತಹುದೆಲ್ಲ ಕೊಟ್ಟಿದೆಯಲ್ಲ ಎಂದು ಕೃತಜ್ಞತೆಯ ಧನ್ಯತೆಯ ಭಾವ ತುಂಬಿತು. ಇದನ್ನೆಲ್ಲ ಕಾಪಾಡಿ ನೋಡಿಕೊಳ್ಳಬೇಕಾಗಿರುವುದು ನಾವು…? ಸಕಲೇಶಪುರದ ಕೆಂಪು ಹೊಳೆಗೆ ತೇಜಸ್ವಿ ಜೊತೆ ಫಿಷಿಂಗ್ಗೆ ಹೋದಾಗ ಮೂಖ ವಿಸ್ಮಿತಳಾದೆ. ಎಷ್ಟು ಸಮಾಧಾನದಲ್ಲಿ ಹರಿಯುತ್ತಾ ಇದೆ ನದಿ! ಹೊಳೆಯ ಆಚೆ ಕಡೆ ದಟ್ಟ ಅರಣ್ಯ. ಈಚೆ ಕಡೆ ದಂಡೆಯಲ್ಲಿ ಎಂತೆಂತಹ ಚೆಂದ ಚೆಂದವಾದ ಕಲ್ಲುಗಳು. ಬಣ್ಣ ಬಣ್ಣದವು. ದುಂಡಾಗಿರುವುವು. ಚಪ್ಪಟೆ ಚಂದ್ರಮನಂತವು, ದೋಣಿಯಂತವು, ಗೋಲಿಯಂತವು, ಚೆಂಡಿನಂತವು ನಮುನಮೂನೆಯವು. ಎಲ್ಲವೂ ಬಂಡೆಯೊಂದು ಸಿಟ್ಟಿನಿಂದ ಸಿಡಿಸಿದ ಚೂರುಗಳಂತೆ. ನದಿಯ ನೀರು ಹರಿದೂ ಹರಿದೂ ಸುಂದರ ಕಾಯ ಪಡೆದಂತವು. ಒಂದೊಂದು ಕಲ್ಲನ್ನೂ ಬಿಡಿ ಬಿಡಿಯಾಗಿ ನೋಡುವಾಸೆ! ಒಟ್ಟಾಗಿ ನೋಡುವಾಸೆ! ಜುಗಾರಿ ಕ್ರಾಸ್ ಒಳಹೊಕ್ಕು ಬಂದಂತಾಯಿತು.
ನಮ್ಮಲ್ಲಿನ ಕಾಡು ಉಷ್ಣವಲಯದ ನಿತ್ಯ ಹರಿದ್ವರ್ಣಕಾಡು. ಇದರ ವಿಶಿಷ್ಟತೆಯಿರೋದೆ ಇಲ್ಲಿ. ಇಲ್ಲಿ ತೇಜಸ್ವಿಯ ಮಾತುಗಳನ್ನೇ ಕೇಳಿ. ಇಲ್ಲಿ ಸಸ್ಯಗಳಿಗೆ ದೊರೆಯುವ ಮಳೆನೀರು ಮತ್ತು ಸೂರ್ಯನ ಶಾಖ ವಿಫುಲವಾದುದರಿಂದ ಇಲ್ಲಿ ಸಸ್ಯಗಳ ಬೆಳವಣಿಗೆಯ ವೇಗ ಮತ್ತು ವಿಕಾಸಗೊಳ್ಳುವ ವೇಗ ಹೆಚ್ಚು. ಈ ಎರಡು ಕಾರಣಗಳಿಂದಾಗಿ ಉಷ್ಣವಲಯದ ಕಾಡುಗಳು ಕೋನಿಫರಸ್ ಮರಗಳ ಕಾಡುಗಳಿಗಿಂತ ವೈವಿಧ್ಯಮಯವಾಗಿಯೂ ತೀರ ಸಂಕೀರ್ಣವಾಗಿಯೂ ರೂಪುಗೊಂಡಿವೆ. ಸಮಶೀತೋಷ್ಣವಲಯದ ಕಾಡುಗಳ ಸರಳತೆ ಎಂದರೆ ಕೆಲವೇ ಜಾತಿಯ ಮರಗಳ ಅಸ್ತಿತ್ವ ಅಲ್ಲಿನ ಕ್ರಿಮಿಕೀಟ ಪಶುಪಕ್ಷಿಗಳ ಸಂಬಂಧವನ್ನು ಸರಳವಾಗಿ ರೂಪಿಸಿದೆ. ಎಂದರೆ ಮರ, ಮರದ ಹಣ್ಣನ್ನು ಅವಲಂಬಿಸಿರುವ ಹಕ್ಕಿ ಆ ಹಕ್ಕಿಯ ಬೀಜ ಪ್ರಸಾರಕ್ಕೆ ಅವಲಂಬಿಸಿರುವ ಮರ, ಆ ಮರವನ್ನು ಅವಲಂಬಿಸಿರುವ ಪರತಂತ್ರ ಜೀವಿ ಆರ್ಕಿಡ್‌ಗಳು, ಫರ್ನಗಳು, ಆ ಮರದ ಎಲೆಯನ್ನೇ ಅವಲಂಬಿಸಿರುವ ಕ್ರಿಮಿ ಕೀಟಗಳು, ಆ ಕ್ರಿಮಿ ಕೀಟಗಳು ಎಲೆಯನ್ನು ಪರಿವರ್ತಿಸಿ ಮಾಡುವ ಗೊಬ್ಬರವನ್ನು ಅವಲಂಬಿಸಿರುವ ಮರ ಗಿಡಗಳು. ಹೀಗೆ ಕಾಡೊಳಗೆ ಒಂದು ಜೈವಿಕ ಕ್ರಿಯೆ ಮತ್ತೆ ಪುನಃ ಸೃಷ್ಟಿ ನಡೆಯುತ್ತಲೇ ಇರುತ್ತದೆ. ಇದನ್ನೇ ನಾವು ಜೀವ ವರ್ತುಲ ಎಂದು ಕರೆಯುತ್ತೇವೆ. ಇದು ಉಷ್ಣವಲಯದ ಕಾಡುಗಳ ವೈವಿಧ್ಯದ ದೆಸೆಯಿಂದ ತೀರ ಜಟಿಲವಾಗಿಯೂ, ಸಮಶೀತೋಷ್ಣವಲಯದ ಕಾಡುಗಳ ಏಕ ಮುಖತೆಯಿಂದ ಸರಳವಾಗಿಯೂ ಇರುತ್ತದೆ.
ಬೆಟ್ಟ, ಮಳೆ, ಕಾಡು, ನದಿ, ಕಟ್ಟೆ, ಪೈರು ಅನ್ನಕ್ಕೂ ನಮಗೂ ಇರುವ ಸಂಬಂಧಗಳನ್ನು ನಾವು ಮುಖ್ಯ ಎಂದು ಭಾವಿಸುವಾದಾದರೆ ಈ ಕಾಡೊಳಗಿನ ಮರ, ಎಲೆ, ಕ್ರಿಮಿ, ಕೀಟ, ಪಶುಪಕ್ಷಿಗಳ ಸಂಬಂಧವನ್ನು ನಾವು ಗೌರವಿಸಲೇಬೇಕು. ಇವೆಲ್ಲ ಒಂದು ಜೀವನ್ಮಯ ಕುಣಿಕೆಯ ಅವಿಭಾಜ್ಯ ಅಂಗಗಳಲ್ಲವೆ?
ಕಾಫಿ ಬೆಳೆಗಾರರು ತೋಟಗಳನ್ನು ವಿಸ್ತರಿಸುವುದಲ್ಲದೆ ಹೊರರಾಜ್ಯಗಳಿಂದ ಉದ್ಯೋಗಗಳನ್ನರಸಿ ಬರುವವರು- ಇದ್ದಿಲು ಸುಡಲು, ನಾಟ ಕೊಯ್ಯಲು, ಬಿದಿರು ಕಡಿದು ಲೋಡು ಮಾಡಲು ಬಂದವರೆಲ್ಲಾ ಕಾಡೊಳಗೆ ಹೂಡಿದ ತಮ್ಮ ತಾತ್ಕಾಲಿಕ, ಬಿಡಾರಗಳನ್ನೇ ಶಾಶ್ವತ ಮಾಡಿಕೊಂಡು ರಾಜಕೀಯ ಪಕ್ಷಗಳ ಆಶ್ರಯದಲ್ಲಿ ಓಟಿನ ಬಲದಿಂದ ಕುಳಿತು ಬಿಡುತ್ತಾರೆ. ಓಟಿನ ಬಲವಿಲ್ಲದ ಮರಗಳು ಕೇವಲ ನಾಟಾಗಳಾಗಿ ನೆಲಕ್ಕುರುಳುತ್ತವೆ. ಕಾಡಿನ ಪ್ರಾಣಿ ಸಮುದಾಯಗಳಿಗಂತೂ ಜನ ಬಾಹುಳ್ಯ ಮಾರಕ ಪರಿಣಾಮ ಉಂಟು ಮಾಡುತ್ತದೆ. ಇವರು ಕಾಡು ಮೃಗಗಳನ್ನು ನೇರವಾಗಿ ಕೊಲ್ಲದಿದ್ದರೂ ನಮ್ಮ ಕಂತ್ರಿನಾಯಿ, ಊರು ಕೋಳಿಗಳನ್ನು ಕಟ್ಟಿಕೊಂಡು ಕಾಡೊಳಗೆ ಕೆಮ್ಮುತ್ತಾ ಉಗಿಯುತ್ತಾ ಓಡಾಡಿ ಕಾಡು ಮೃಗಗಳ ಸಂತಾನಾಭಿವೃದ್ಧಿಗೆ ಬೇಕಾದ ಏಕಾಂತವನ್ನೇ ಹಾಳುಮಾಡಿದ್ದಾರೆ. ಸಾಕು ಪ್ರಾಣಿಗಳಂತೆಯೇ ಕಾಡು ಮೃಗಗಳೂ ಕೂಡ ಮನುಷ್ಯರ ಸಮ್ಮುಖದಲ್ಲೆ ಮರಿಹಾಕಿಕೊಂಡು ಬದುಕುವುದನ್ನು ಕಲಿಯಬೇಕಾಗಿದೆ. ನನ್ನ ಸರಣಿಯ ಸರದಿ ಮುಗಿಯುತ್ತ ಬಂದಿದೆ. ಹಾಗಾಗಿ ಇವರ ಈ ಮಾತುಗಳನ್ನೇ ಅರಹಲು ಇಚ್ಛಿಸಿದೆ ಇಲ್ಲಿ.
ತೇಜಸ್ವಿ ನೆನಪು ಮಧುರ
ನೆನಪುಗಳೇ ಹಾಗೆ ಮಧುರ. ಕಾಡುತ್ತಿರುತ್ತವೆ. ನನಗೆ ಈಗ ನಮ್ಮ ಬದುಕಿನ ಪುಟದ ನೆನಪುಗಳು ಒಂದು ಸುಮಧುರ ಯಾತನೆ. ಸಿಹಿ ಯಾತನೆ. ಕಾಡುತ್ತವೆ ನಿರಂತರವಾಗಿ. ಅದಕ್ಕಾಗಿಯೇ ನಿಮ್ಮೊಟ್ಟಿಗೆ ಒಂದು ಚೂರು ಹಂಚಿಕೊಳ್ಳುವಾಸೆ.
೧೯೬೧ ಇಸವಿಯಲ್ಲಿ ತೇಜಸ್ವಿ ಮತ್ತು ನಾನು ಎಂ.ಎ ಮಾಡಿದೆವು. ಮೈಸೂರು ಮಾನಸ ಗಂಗೋತ್ರಿಯಲ್ಲಿ. ತೇಜಸ್ವಿ ಕನ್ನಡ ಸಾಹಿತ್ಯದಲ್ಲಿ ಎಂ.ಎ ಮಾಡಿದರು. ನಾನು ತತ್ವಶಾಸ್ತ್ರದಲ್ಲಿ ಎಂ.ಎ ಮಾಡಿದೆ. ಎಂ.ಎ ಆದ ನಂತರ ನನ್ನವರಿಗೆ ಬೊಂಬಾಯಿಗೆ ಹೋಗಿ ಪಂಡಿತ ಹಲೀಂ ಜಾಫರ್ ಖಾನ್ ಅವರ ಶಿಷ್ಯರಾಗಿ ಸಿತಾರ್ ಕಲಿಯಬೇಕೆಂಬ ಅದಮ್ಯ ಬಯಕೆಯಿತ್ತು. ಮೈಸೂರಿಗೆ ಹಲೀಂರವರು ಸಿತಾರ್ ಕಛೇರಿ ಕೊಡಲು ಬಂದಾಗ ಪರಿಚಯವಾಗಿತ್ತು. ಹಲೀಂ ಇವರಲ್ಲಿದ್ದ ಪ್ರತಿಭೆಯನ್ನು ಗುರುತಿಸಿದ್ದರು. ಅವರು ತುಂಬಾ ಮಮತೆಯಿಂದ ಅವರಲ್ಲಿಗೆ ಕಲಿಯಲು ಬಾ ಎಂದೂ ಕರೆದಿದ್ದರು. ನಿನ್ನಂಥವನು ಸಾಧಾರಣ ಆಗೋದು ನನಗೆ ಹೊಟ್ಟೆ ಉರಿಯುತ್ತೆ. ಆರೇ ತಿಂಗಳೊಳಗೆ you can achieve technical perfection. ಆಮೇಲೆ ದೇವರ ಕೃಪೆ ಇದ್ದರೆ ನೀನೂ great ಆಗಬಹುದು ಎಂದಿದ್ದರು. ಹೀಗೆ ಇವರನ್ನು ಶಿಷ್ಯರನ್ನಾಗಿ ಸ್ವೀಕರಿಸಿದ್ದರೂ ಕೂಡ. ಅವರ ಆರ್ಶಿವಾದವೂ ಇತ್ತು. ಆದರೆ ಯಾಕೋ ಕಾಣೆ, ಇವರು ಇವರು ಬೊಂಬಾಯಿಗೆ ಹೋಗಿ ಕಲಿಯಲಾಗಲಿಲ್ಲ. ಯಾಕೆ ಹೋಗಲಿಲ್ಲ ಎನ್ನುವುದನ್ನು ಆಗ ನನಗೆ ಹೇಳಿದ್ದಿರಬಹುದು. ಸಂಪೂರ್ಣವಾಗಿ ಗೊತ್ತಿಲ್ಲವೆಂಬಂತೆ ಮರೆತು ಹೋಗಿದೆ. ಇವರು ಕಲಿತಿದ್ದಷ್ಟನ್ನು ಸ್ವ ಸಂತೋಷಕ್ಕೆ ನುಡಿಸಿಕೊಳ್ಳುತ್ತಿದ್ದರು. ಆ ದಿನ ಏಪ್ರಿಲ್ ಐದರಂದೂ ಮೊಮ್ಮಗಳು ವಿಹಾಳನ್ನು ಕೂರಿಸಿಕೊಂಡು ಸ್ವಲ್ಪ ಹೊತ್ತು ಸಿತಾರ್ ನುಡಿಸಿದ್ದರು. ಉತ್ತರಾದಿಯಲ್ಲಿ ಯಾವ ರಾಗ ತಾಳ ಯಾವ ಕಿರಾಣ ಘರಾಣಕ್ಕೆ ಸಂಬಂಧಪಟ್ಟಿದೆಂಬುದನ್ನು ನಿಮಿಷ ಮಾತ್ರದಲ್ಲಿ ಗುರುತಿಸುವಷ್ಟು ಇವರ ಕಿವಿ ಶುದ್ಧವಾಗಿತ್ತು, ಚುರುಕಾಗಿದ್ದರು. ಅಲ್ಲದೆ ಸಂಗೀತದ ಬಗ್ಗೆ ಹೆಚ್ಚಿಗೆ ವ್ಯಾಸಂಗ ಮಾಡಿ ಜ್ಞಾನ ಸಂಪತ್ತನ್ನೂ ಗಳಿಸಿಕೊಂಡಿದ್ದರು.
ನಮ್ಮ ಬದುಕಿನ ಈ ಹಂತದಲ್ಲಿ ಇವರು ಹೊಸ ಸಾಹಸಕ್ಕೆ ಕೈ ಹಾಕಿದ್ದು, ಅದರಲ್ಲಿ ಸಂಪೂರ್ಣ ತಮ್ಮನ್ನು ತೊಡಗಿಸಿಕೊಂಡಿದ್ದು ಅನೇಕರಿಗೆ ಗೊತ್ತಿರಲಿಕ್ಕಿಲ್ಲ. “ನಮ್ಮ ನಮ್ಮೊಳಗಿನ ಮಹಾ ತಮಸ್ಸಿನ ಗುಹೆಯಲ್ಲಿ ನಮ್ಮನ್ನು ನಮ್ಮತನವನ್ನು ತಡಕುವ ಭಯಂಕರ ಕೆಲಸ. ಮೊದಲಿಂದ ನನ್ನೊಳಗೊಂದು ಸಾಹಸಪ್ರಿಯತೆ ಇದೆ. ಬೆಂಕಿಯೊಡನೆ ಸರಸವಾಡುವ ಚಪಲ.” ಇವರೊಳಗಿನ ಒಳಗುದಿ ಇದು, ಈ ಒಳಗುದಿ ಹೊರಹೊಮ್ಮಿ ರೂಪಾಂತರಗೊಂಡ ರೂಪವೇ ಇವರು ಪ್ರೆಸ್ಸಿಗೆ ಕೈ ಹಚ್ಚಿದ್ದು.
ಮುದ್ರಣಾಲಯವನ್ನು ಶುರು ಹಚ್ಚಿದ್ದು ಬರೀ ಉತ್ಸಾಹೀ ತರುಣರ ಮನೋಹರ ಕಲ್ಪನೆಯ ಕೂಸಾಗಿರಲಿಲ್ಲ. ಇವರು ಸಂಪೂರ್ಣ ತಮ್ಮನ್ನು ಮುದ್ರಣಾಲಯದಲ್ಲಿ ತೊಡಗಿಸಿಕೊಂಡು ಕನ್ನಡಕ್ಕಾಗಿ ಅತ್ಯುತ್ತಮವಾದ illustrated weekly ಎಂಬಂತ ಮ್ಯಾಗಝಿನನ್ನು ತರಬೇಕೆಂಬ ಉತ್ಕಟಾಕಾಂಕ್ಷೆಯನ್ನು ಹೊಂದಿ ಅದಕ್ಕಾಗಿ ಕೆಲಸ ಕಾರ್ಯವನ್ನು ಮಾಡಿದರು. ಈ ವಿಷಯದಲ್ಲಿ ಅನೇಕರು ನಿರುತ್ತೇಜನಗೊಳಿಸುತ್ತಿದ್ದರಂತೆ. ಹಾಗಾಗಿ ರೊಚ್ಚಿನಿಂದ ಕೈ ಹಾಕಿ ಕೊನೆ ಮುಟ್ಟಿಸಿಯೇ ಬಿಡಬೇಕೆಂದು ಕಾರ್ಯ ಪ್ರವೃತ್ತರಾದರು. ಇವರೊಟ್ಟಿಗೆ ಕಡಿದಾಳು ಶಾಮಣ್ಣ ಜೊತೆಯಾಗಿ ಸುತ್ತೀ ಸುತ್ತೀ ಪ್ರೆಸ್ಸು ಮಿಷನ್‌ಗಳನ್ನು ನೋಡಿ ಬಂದರು. ಸುಂದರವಾದ ಹೈಡಲ್ ಬರ್ಗ್ ಅಚ್ಚು ಯಂತ್ರ ನೋಡಿ ೩೮,೦೦೦ ರೂ ಕೊಟ್ಟು ಕೊಂಡಿದ್ದೂ ಆಯಿತು. ಇದು ಮಹಾ ಆಟೋಮ್ಯಾಟಿಕ್ ಯಂತ್ರ. ತಂತಾನೆ ಕಾಗದ ಎತ್ತಿಕೊಂಡು ಹೋಗಿ ಮುದ್ರಿಸಿ ತಂದಿಡುತ್ತಿತ್ತು.
ಮಿಕ್ಕವೆಲ್ಲ ಗಂಟೆಗೆ ೭೦೦ ಆದರೆ ಇದು ಗಂಟೆಗೆ ೪೦೦೦ ಪ್ರತಿ ಎತ್ತುತ್ತಿತ್ತಂತೆ. ಈ ಯಂತ್ರದ ಕಾರ್ಯ ವೈಖರಿಯನ್ನು ನೆನೆನೆನೆದು ರೋಮಾಂಚನಗೊಳ್ಳುತ್ತಿದ್ದರು ತೇಜಸ್ವಿ. ಈ ಕಾರ್ಯ ರಂಗ ಜೀವನದೊಡನೆ ಮುಖಾ ಮುಖಿ ನಿಲ್ಲುವುದೆಂದರೆ ಭಯಂಕರ ಕುರುಕ್ಷೇತ್ರ ರಣರಂಗ ಎನ್ನುತ್ತಿದ್ದರು ಇವರು. ಎಷ್ಟೋ ಸಾರಿ ಕೆಟ್ಟೆನಲ್ಲಾ, ಯಾಕಾದರೂ ಇದಕ್ಕೆ ಕೈ ಹಾಕಿದೆನೋ ಎಂದು ಅಧೈರ್ಯ ಪಡುತ್ತಿದ್ದರು. ಕಾದಂಬರಿ ಬರೆಯಲಿಕ್ಕೆ ಕೂತರೆ ಒಂದು ಗೀರನ್ನೂ ಸಮಾಧಾನಕರವಾಗಿ ಎಳೆಯಲಾಗಲಿಲ್ಲವೆಂದು ಕಂಗಾಲಾಗುತ್ತಿದ್ದರು. ಹಾಳು ಸುತ್ತಲಿನ ವಾತಾವರಣ ಹೇಗೆ ಕೆಡುಕು ಮಾಡುತ್ತದೆ. ಇವೆಲ್ಲ ಹೊಸ ಹೊಸ ಅಗ್ನಿ ಪರೀಕ್ಷೆಗಳು ಜಗ್ಗುವ ಹಿಂಜರಿಯುವ ಪ್ರಶ್ನೆಯೇ ಇಲ್ಲ. ನಮ್ಮ ಜೀವಮಾನ ಪರ್ಯಂತದ ಪ್ರಶ್ನೆಗಳು ಇವೆಂದು ಸುಮ್ಮನಾಗುತ್ತಿದ್ದರು. ಹೀಗೆ ಮುದ್ರಣಾಲಯ ಇವರನ್ನು ಹಿಡಿದುಕೊಂಡು ಬಿಟ್ಟಿತ್ತು. ಮುದ್ರಣಾಲಯದ ಹೆಸರು ನೃಪತುಂಗ ಮುದ್ರಣಾಲಯ
ಈ ಸಮಯದಲ್ಲಿ ಒಂದು ವಿಚಿತ್ರ ಪ್ರಸಂಗ ನಡೆದದ್ದನ್ನು ತಿಳಿಸಲು ತಮಾಷೆ ಎನಿಸುತ್ತದೆ. ಶ್ರೀರಂಗಪಟ್ಟಣದ ಕೋರ್ಟಿನಲ್ಲಿ ಹಿಂದೊಮ್ಮೆ ಇವರು ಲೈಸೆನ್ಸು ಇಲ್ಲದೆ ಕಾರು ಬಿಡುತ್ತಿದ್ದರೆಂದು ಕೇಸು ಹಾಕಿದ್ದರಂತೆ ಇವರ ಮೇಲೆ. ನಿಷ್ಕಾರಣ ಕೇಸು ಹಾಕಿರುವರೆಂದು ತಿಳಿಸಲು ಲೈಸೆನ್ಸು ಸಮೇತ ಜಡ್ಜರ ಹತ್ತಿರ ಹೋದರಿವರು, ಆ ಜಡ್ಜರು ಏನ್ರೀ, ನಿಮ್ಮದೇನೋ ಅಂತರ್ಜಾತೀಯ ವಿವಾಹವಂತೆ, ಯಾರೋ ಲೈಯಿಶನ್ ಆಫೀಸರರ ತಂಗಿಯಂತಲೂ, ತಮ್ಮ ಜಾತಿಯವರೆಂದೂ ಕೇಳಿ ಬಲ್ಲೆ ಎಂದರಂತೆ.
“ನನಗೆ ಒಂದು ಸಾರಿ ನಖಶಿಖಾಂತ ಎಲ್ಲರ ಮೇಲೂ ರೇಗಿತು. ನಾನು ಅಂತರ್ಜಾತಿಯ ವಿವಾಹ ಮತ್ತು ಶಾಸ್ತ್ರಿಯ ವಿವಾಹ ಎಲ್ಲಕ್ಕೂ ವಿರೋಧವೆಂದೂ ವ್ಯಕ್ತಿಗಳ ಸಂಬಂಧವನ್ನುಳಿದು ಇನ್ಯಾವುದೇ ಪದಗಳನ್ನು ವಿವಾಹ ಸಂಬಂಧವಾಗಿ ಉಪಯೋಗಿಸುವುದೂ ಅಸಂಬದ್ಧ” ಎಂದು ಹೇಳಿದಂತೆ ಇವರು. ತಪ್ಪಾಗಿದ್ದರೆ ಕ್ಷಮಿಸಿ ಎಂದರಂತೆ. ಈ ಹಾಳು ಬೊಗಳೆ ಬಾಯಿಗಳನ್ನು ಅದುಮುವುದು ಹೇಗೋ, ದ್ರಾಬೆಗಳು ತಂದು. ವಿಚಿತ್ರ ಈ ಜಗತ್ತು, ಇದು ಇವರ ಪ್ರತಿಕ್ರಿಯೆ. ಆಗ ಇವರಿಗೆ ಇಪ್ಪತ್ನಾಲ್ಕು ವರ್ಷ ವಯಸ್ಸು.
ಈ ಪ್ರೆಸ್ಸಿನ ಕೆಲಸವೂ ನಮ್ಮ ಭವಿಷ್ಯ ನಿರ್ಧರಣ ಹೋರಾಟಕ್ಕೆ ಸಿದ್ದತೆಯಾಗಿತ್ತು. ಆದರೆ ಪ್ರೆಸ್ಸಿನಲ್ಲಿ ನಿಗದಿತ ವೇಳೆಗೆ ನಿರೀಕ್ಷಿತ ಮಟ್ಟದಲ್ಲಿ ಕೆಲಸ ಸಾಗುತ್ತಿರಲಿಲ್ಲವಾದಾಗ ಇವರ ಕನಸಾಗಿದ್ದ ಮ್ಯಾಗಝಿನನ್ನು ಹೊರಡಿಸಬೇಕೋ ಬೇಡವೋ ಎಂದು ಯೋಚನೆ ಹತ್ತಿತ್ತು. ಆಗ ಇವರು ಈ ದರಿದ್ರ ಕಾಷ್ಠ ವ್ಯಸನವೇಕೆನ್ನುತ್ತಿದ್ದರು.
“ಈ ನಿರಾಸೆಯಲ್ಲಿ ಈ ಕನ್‌ಪ್ಯೂಷನ್‌ಗೂ ಕರ್ತವ್ಯದ ಹುಡುಕಾಟಕ್ಕೂ ಒಂದು ನಿಲುಗಡೆ ಇದೆ. ಯಾವುದಕ್ಕೂ ಹೋರಾಡಲೇ ಬೇಕು. ಯೌವನವೇ ಹೋದ ನಂತರ ಬದುಕು ಭಯಾನಕ. ಹಲವರು ಅಥವಾ ಕೆಲವೇ ಮಹಾನ್ ವ್ಯಕ್ತಿಗಳು ತಮ್ಮ ನೂರನೇ ವರುಷದಲ್ಲಿ ಈ ಮುಪ್ಪಿನ ಭೂತದ ವಿರುದ್ದ ಹೋರಾಡಿದರು ಎಂತಲೇ ಅವರು ಮಹಾನ್ ವ್ಯಕ್ತಿಗಳು, ಆದರೆ ನನ್ನಲ್ಲಿ ಕೊಂಚವೂ ಸಹಕಾರ ಮನೋಭಾವನೆಯೇ ಉಳಿದಿಲ್ಲ. ನಾನು ಪ್ರೇಮಿಸಿದವಳನ್ನು ನಾನು ಮದುವೆಯಾಗುತ್ತೀನಿ ಅನ್ನುವುದರಿಂದ ಹಿಡಿದು ಸಹಕೆಲಸದವರ ಜೊತೆ ಜಗಳವಾಡುವುದರವರೆಗೂ ಏನೋ ಛಲ. ಹಮ್ಮುಅತಿರೇಖದ ಸ್ವತಂತ್ರ ಪ್ರವೃತ್ತಿ ಕಾಣುತ್ತಿದೆ” ಎಂದು ತಮ್ಮನ್ನು ವಿಮರ್ಶಿಸಿಕೊಳ್ಳುತ್ತಿದ್ದರು.
ಪ್ರೆಸ್ಸಿನ ಬಗ್ಗೆಯ ಇವರ ನಿರ್ಲಿಪ್ತತೆಯನ್ನು ಕೆಲವರು ಬೇಜವಾಬ್ದಾರಿತನವನ್ನಾಗಿ ಪರಿಭಾವಿಸಿದ್ದಿರಬಹುದು. ಆದರೆ ಇವರಿಗೆ ಸ್ವತಂತ್ರವಾಗಿ ತಮ್ಮ ಕಾಲಮೇಲೆ ನಿಲ್ಲಬೇಕೆನ್ನುವುದು ಗಟ್ಟಿಯಾಗುತ್ತಿತ್ತು. ಇಂತಹ ಸ್ಥಿತಿಯಲ್ಲಿ ಯಾವ ನಿರ್ಧಾರವನ್ನೂ ಕೈಕೊಳ್ಳಲಾರದೆ ದುರಂತಕ್ಕೆ ಗುರಿಯಾಗುವ ಹೆಮ್ಲೆಟ್ಟನಂತೆ ಅನೇಕಬಾರಿ ಭಾಸವಾಗುತ್ತದೆ ಎನ್ನುತ್ತಿದ್ದರು.
ಕೊಟ್ಟ ಕೊನೆಗೆ ಯಂತ್ರಾಗಾರ ಇವರಿಗೆ ಒಗ್ಗುವುದಿಲ್ಲವೆಂದು ನಿಶ್ಚಯಿಸಿ ಮಾರಿ ಬಿಡಲು ತೀರ್ಮಾನಕ್ಕೆ ಬರುತ್ತಾರೆ. ಅವರು ಪ್ರೆಸ್ಸಿನ ಬಗ್ಗೆ ಅಷ್ಟೊಂದು ಆತ್ಮೀಯವಾಗಿ ನೋಡಿಕೊಂಡು ವೃಥಾ ವ್ಯಾಮೋಹದಿಂದ ಅದಕ್ಕೆ ಗಂಟು ಬೀಳಲಿಲ್ಲ. ಅವರ ಬಗ್ಗೆಯ ದೊಡ್ಡ ಸಂಗತಿ ಅದು. ಈ ಹಂತದಲ್ಲಿ ಮುಂದೇನು? ಎಂದು ಯೋಚಿಸಿದಾಗ ಹೈಸ್ಕೂಲಿನಲ್ಲಾದರೂ ಪಾಠ ಹೇಳುತ್ತೇನೆ. ನನ್ನ ಜೀವನದ ದಿಕ್ಕೆ ಪರಿವರ್ತನೆಯಾಗಿ ಹೋದರೂ ಸರಿ ಎಂದುಕೊಳ್ಳುತ್ತಿದ್ದರು. ನನ್ನ ಮೂಲಭೂತವಾದ ನಂಬಿಕೆ ಶ್ರದ್ದೆಗಳನ್ನು ಮೌಲ್ಯಗಳನ್ನು ಪಣವಿಟ್ಟು ಕೆಲಸ ಮಾಡುವ ಕಾಲ ಸನ್ನಿಹಿತವಾಗಿದೆ. `ಆಡಿದ್ದನ್ನು ಮಾಡುವ ಅಪೂರ್ವ ಕೆಲಸ ಸಂದರ್ಭ ಯಾರಿಗೂ ಜೀವನದಲ್ಲಿ ಬರುವುದು ಕಷ್ಟ` ಇವರ ಮಾತು.
ಇವರು ಪ್ರೆಸ್ಸನ್ನು ಯಾಕೆ ಹಾಕಬಾರದು ಎಂದೊಂದು ಹೊಸ ಜೀವನೋತ್ಸಾಹದ ಚಿಲಿಮೆ ಚಿಮ್ಮಿಸಿದಾಗ ಆಗಷ್ಟೆ ಪರಿಚಯವಾಗಿದ್ದ ಹೆಸರು ಗಟ್ಟ ಹತ್ತಿರದ ಹಳ್ಳಿ ಬ್ಯಾತದಿಂದ ಬಂದು ಇಂಗ್ಲೀಷ್ ಎಂ.ಎ. ವ್ಯಾಸಂಗ ಮಾಡುತ್ತಿದ್ದ ಶ್ರೀ ಬಿ.ಎನ್.ಶ್ರೀರಾಮ್ ಇದೆಲ್ಲವನ್ನೂ ಕುತೂಹಲದಿಂದಲೇ ಬೆರಗಿನಿಂದಲೇ ಪರಿವೀಕ್ಷಕರಾಗಿಯೇ ಸಹ ಉದ್ಯೋಗಿಯಂತೆಯೇ ಇದ್ದವರು. ತೇಜಸ್ವಿ ಶಾಮಣ್ಣನೊಟ್ಟಿಗೆ ಎಲ್ಲ ಹಂತದ ಕೆಲಸದಲ್ಲಿ ಕೈಹಾಕಿ ಕೆಲಸ ಕಲಿತವರು. ಬಹುಶಃ ಅಂದು ಕಲಿತ ಪ್ರೆಸ್ಸಿನ ಕೆಲಸ ಪುಸ್ತಕ ಪ್ರಕಾಶನ ಮತ್ತು ಪ್ರೆಸ್ಸಿನ ಇಂದಿನ ಕೆಲಸಕ್ಕೆ ತಳಹದಿಯಾಯಿತೆಂದರೆ ಒಪ್ಪುವಂತ ಮಾತು. ಅಂದಿನ ತೇಜಸ್ವಿಯ ಅಭಿಪ್ರಾಯ ಪ್ರೆಸ್ಸಿನ ವಿವಿಧ ಹಂತದ ಕೆಲಸ ಅಂದರೆ ಮೊಳೆ ಜೋಡಿಸುವುದು, ಕಂಪೋಸಿಂಗ್, ಪ್ರಿಂಟಿಂಗ್ ಇತ್ಯಾದಿಗಳನ್ನು ತಾವುಗಳು ಕಲಿತು ಮಾಡಿ, ತಿಳಿದವರಾಗಬೇಕು, ಅದನ್ನು ಮಾಡುವ ಕೆಲಸಗಾರರೇ ಬೇರೆಯವರೇ ಆಗಿದ್ದರೂ ಕೂಡ.
ಹೈಡಲ್ ಬರ್ಗ್ ಪ್ರಿಂಟಿಂಗ್ ಮೆಷಿನ್ ರೋಲ್ಸ್ ರಾಯ್ಸ್ ಕಾರಿದ್ದಂತೆ. ಅಂದೊಂದು ಚಿನ್ನದಂತ ಯಂತ್ರವೆಂದು ಯಾವಾಗಲೂ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದರು. ಹಾಗಾಗಿಯೇ ೨೦೦೩ ಇಸವಿಯಲ್ಲಿ ನಮ್ಮ ಮಗಳು ಸುಸ್ಮಿತಾ ಅವಳ ಕೆಲಸದ ಸಂದರ್ಭದಲ್ಲಿ ಜರ್ಮನಿಗೆ ಹೋಗಿದ್ದಾಗ ಹೈಡಲ್ ಬರ್ಗ್ ನಗರಕ್ಕೆ ಭೇಟಿಕೊಟ್ಟಿದ್ದಳು. ನೃಪತುಂಗ ಮುದ್ರಣಾಲಯದ ಜವಾಬ್ದಾರಿ ಹೊತ್ತವರು ತೇಜಸ್ವಿ ಮತ್ತು ಶಾಮಣ್ಣ. ಊರೆಲ್ಲ ಸುತ್ತಾಡಿ ಹೆಚ್ಚಿನ ವಹಿವಾಟಿಗೆ ತೊಡಗಿಸಿಕೊಂಡಿದ್ದರು. ಹಾಗಾಗಿ ಹಗಲು ರಾತ್ರಿ ಕೈಮೈಯೆಲ್ಲ ಮಸಿ ಮಾಡಿಕೊಂಡು ಪ್ರೆಸ್ಸಿನಲ್ಲಿ ದುಡಿದರಾದರೂ ಕೆಲಸಗಳು ನಿಗದಿತ ವೇಳೆಯಲ್ಲಿ, ನಿರೀಕ್ಷಿತ ಮಟ್ಟದಲ್ಲಿ ಕಾರ್ಯ ಸಾಧನೆಯಾಗದಿದ್ದುದರಿಂದಲೋ ಸಹಚರರೊಂದಿಗೆ ಬಿರುನುಡಿಯ ಚಕಮಕಿಯೂ ನಡೆದಾಗ ಯಂತ್ರಗಾರ ಒಗ್ಗುವುದಿಲ್ಲವೆಂದು ಮನಸ್ಸು ಮಾಡಿದರೆನ್ನಬಹುದು. ವೃಥಾ ವ್ಯಾಮೋಹದಿಂದ ಅದಕ್ಕೆ ಗಂಟು ಬೀಳಲಿಲ್ಲ.
ಇದು ಇವರ ಪ್ರೆಸ್ಸಿನ ಬಗ್ಗೆ ಒಂದು ಆತ್ಮೀಯ ನೆನಪು. ಅಂದು ನನಗೆ ಬರೆದ ಇವರ ಕಾಗದಗಳ ಆಧಾರದಿಂದ.
ಸಾಕಾಗಿ ಹೋಗಿದ್ದ ಮೈಸೂರು ವಾಸ
ತಮ್ಮ ಪ್ರಾಣಪ್ರಿಯವಾದ ಸ್ವಾತಂತ್ರ್ಯವೇ ನಷ್ಟವಾಗಿ ಹೋಗುತ್ತದೆ ಎನಿಸಿದಾಗ ತೇಜಸ್ವಿ ಪ್ರೆಸ್ಸಿನಿಂದ ಹೊರಬಂದರು. ನಾವು ಬಯಸಿದಂತೆ ಬದುಕುವ ಸ್ವಾತಂತ್ರ್ಯ ಯಾವತ್ತೂ ಒಂದು ಭಯಾನಕ ಹೋರಾಟದ ಫಲವೇ ಹೊರತು ಸುಲಭಕ್ಕೆ ಸಿಕ್ಕೋದಲ್ಲಾಂತ ಕಂಡುಕೊಂಡರು.
ಈ ಮೈಸೂರಿನಿಂದ ಎಲ್ಲಿಗಾದರೂ ದೂರ ಹೋಗಬೇಕೆಂದಿದ್ದೆ. ಇಲ್ಲೇ ಉಳಿಯಬೇಕಾಯ್ತೇ ಎಂದು ಯೋಚನೆಯಾಗಿದೆ. ಏನಾಗಿದ್ದೇನೆ, ಏನಾಗ ಬೇಕೆಂದಿದ್ದೆ, ಏನಾಗಬೇಕೆಂದಿರುವೆ ಎಲ್ಲಾ ಮಾನಸಿಕ ತುಮುಲದಲ್ಲಿ ಸಿಕ್ಕಿಕೊಂಡಿದೆ. ಎಲ್ಲಕ್ಕಿಂತ ಮೊದಲು ನಾನು ಮೈಸೂರಿನ ಇದೇ ಮನೆ ಇದೇ ಬೀದಿ ಇದೇ ರಸ್ತೆ ಇದೇ ರೂಮುಗಳ ನಡುವೆ ಬಂಧಿಯಾಗಿರಬೇಕೆ ಎಂದು ಬಹಳ ಬೇಜಾರಾಗುತ್ತಿದೆ, ಕಾಲ ಇದಕ್ಕೊಂದು ಉತ್ತರ ಸಿದ್ದಪಡಿಸಿತೆಂದು ತೊಳಲಾಡತೊಡಗಿದರು.
ಇಂಥ ಸನ್ನಿವೇಶದಲ್ಲೇ ಕಾಫಿತೋಟ ಮಾಡಲು ನಿರ್ಧರಿಸಿದರು. ಅದೇ ಸಮಯದಲ್ಲಿ ಒಂದೆರಡು ಕಾಲೇಜುಗಳಲ್ಲಿ ಅಧ್ಯಾಪಕ ವೃತ್ತಿಯ ಕೆಲಸವು ಸಿಕ್ಕಿತ್ತು. ಅದನ್ನು ನಿರಾಕರಿಸಿದರು. ಕಾಫಿತೋಟ ಕೊಳ್ಳುವುದೂ ಸುಲಭದ್ದಾಗಿರಲಿಲ್ಲ. ಮುಖ್ಯವಾಗಿ ಕೈಯಲ್ಲೊಂದಷ್ಟು ಹಣವಿರಬೇಕಿತ್ತು. ಆದರೆ ಈಗಾಗಲೇ ಒಂದು ಉದ್ಯೋಗದ ಮೇಲೆ ಹಣ ಸುರಿದು ಕೊನೆ ಮುಟ್ಟಿಸದಿದ್ದ ಪರಿಣಾಮವೇ ಬೇರೆಯದಿತ್ತು. ದೇಹಿಯೆಂದು ಅಂಗಲಾಚುವಂತೆ ಮಾಡಿಕೊಂಡು ಬದುಕಿದರೆಷ್ಟು ಸತ್ತರೆಷ್ಟು, ಇದಲ್ಲದೆ ದುಡ್ಡಿನ ಹಂಗು ಕೊನೆಗೆ ಇವರು ಯಾವಳನ್ನು ಮದುವೆಯಾಗಬೇಕೆನ್ನುವವರೆಗೆ ವ್ಯಾಪಿಸುತ್ತದೆ. ಇದರಿಂದ ಅವರ ನಡುವೆ ಅಡ್ಡಬರುವರೆನ್ನುವುದಕ್ಕಿಂತ ಮಿಗಿಲಾಗಿ ಅವರ ಪ್ರಾಣಪ್ರಿಯವಾದ ಸ್ವಾತಂತ್ರ್ಯವೇ ನಷ್ಟವಾಗಿ ಹೋಗುತ್ತದೆಂದೂ ತಿಳಿದರು. ಪ್ರೆಸ್ಸು ಮ್ಯಾಗಝಿನೂ ಗಗನಕುಸುಮದಂತೆ ಬಲುದೂರದಲ್ಲಿ ಮಿನುಗಿ ಹೋಗಿದ್ದು ಇವರ ಪ್ರಜ್ಞೆಯ ಪರಧಿಯ ಮೇಲೆ ದಾಖಲಾದ ಅನುಭವ ಇವರನ್ನು ಕಂಗೆಡಿಸಿತ್ತು. ಡಿಗ್ರಿ ಮುಗಿಸಿ ಹತ್ತಿರತ್ತಿರ ನಾಲ್ಕು ವರ್ಷಗಳಾದರೂ ಹೊಟ್ಟೆಪಾಡಿಗಾಗಿ ದುಡಿಮೆ ಮಾಡಲಿಲ್ಲವೆಂದು ಕೊರಗುತ್ತಿದ್ದರು. ಕುಂಟನೋ, ಕುರುಡನೋ, ಹೆಳವನೋ ಆಗಿರುವವನಂತೆ ಇನ್ನೊಬ್ಬರಿಗೆ ಭಾರವಾಗಿ ಕುಳಿತಿರುವೆನಲ್ಲ ಎಂದು ಬೇಜಾರು ಮಾಡಿಕೊಳ್ಳುತ್ತಿದ್ದರು. ‘ನಿರುದ್ಯೋಗದ ಮುದ್ದೆಯಾಗಿ ಹೋಗಿದ್ದೇನೆ. ತೋಟ ಮಾಡಿಯೇ ತೀರುವೆ’ ಎಂದು ನಿರ್ಧರಿಸಿದರು.
ಇತ್ತಕಡೆ ನಾನು ನನ್ನ ಅಣ್ಣನ ತೋಟದಲ್ಲಿ ‘ಭೂತನ ಕಾಡಿನಲ್ಲಿ’ ತಾಯಿಯವರೊಟ್ಟಿಗೆ ಇದ್ದೆನು. ತೇಜಸ್ವಿಯ ನಿರೀಕ್ಷೆಯನ್ನೇ ಉದ್ಯೋಗವನ್ನಾಗಿಸಿಕೊಂಡಿದ್ದೆ. ಇದು ತುಂಬಾ ಅನಾರೋಗ್ಯಕರವಾದುದೆಂದು ಹೇಳುತ್ತಲೆ ಇದ್ದರು ಇವರು. ಮನೆಯ ಒಳಹೊರಗಿನ ಏಕಾಂತ ಗಾಢತೆ ಅಸಹನೀಯವಾಗುತ್ತಿತ್ತು. ಹಾಗಾಗಿ ನಿರಂತರವಾಗಿ ಇವರಿಗೆ ಒತ್ತಾಯಿಸುತ್ತಿರುತ್ತಿದ್ದೆ, ಪ್ರತಿ ಕಾಗದದಲ್ಲಿಯೂ ನನ್ನನ್ನು ಇಲ್ಲಿಂದ ಬೇಗ ಕರೆದೊಯ್ಯಿರೆಂದು. ಏನಾದರಾಗಲೆಂದು ಒಂದೆರಡು ಕಾಲೇಜು ಅಧ್ಯಾಪಕ ವೃತ್ತಿಗೆ ಅರ್ಜಿ ಹಾಕಿದೆ. ಅದು ನಿನ್ನ ಸ್ವಾತಂತ್ರ್ಯವೆಂದರು.
ಕೆಲ ಸಮಯದ ನಂತರ ತಿರುಪತಿ ಕಾಲೇಜಿನವರು ಅರ್ಜಿ ಆಹ್ವಾನಿಸಿದ್ದರಿಂದ ಅಲ್ಲಿಗೂ ಅರ್ಜಿ ಗುಜರಾಯಿಸಿದೆ. ಇವರಿಗೂ ಕಾಗದ ಬರೆದು ತಿಳಿಸಿದೆ. ನಿನ್ನನ್ನು ನಿಯಮಿಸಿದರೆ ನಾನೇ ತರಲೆ ಮಾಡೇ ಮಾಡುತ್ತೇನೆ. ಸ್ವಾತಂತ್ರ್ಯವನ್ನು ಇಷ್ಟೊಂದು ಪ್ರೇಮಿಸುವ ನಾನು ನಿನಗೇಕೇ ಈ ಥರ possessive ಆಗಿ ಗಲಾಟೆ ಮಾಡುತ್ತೇನೆ? ಬಹುಶ: loveನ ಪ್ರಕೃತಿಯೇ ಅಂಥದೋ ಏನೋ. ಏಕೆಂದರೆ ಹೀಗಲ್ಲದಿದ್ದರೆ ಪ್ರಪಂಚವೆಲ್ಲ ಹೊಟೇಲುಗಳು, ಸೂಳೆಯರು ಹಾಗೂ ಶಿಶು ಸಂವರ್ಧನ ಕೇಂದ್ರಗಳು ಮಾತ್ರವಾಗಿ ಉಳಿಯುತ್ತ ಇದ್ದವೋ ಏನೋ. ಆದರೂ ಅವಳ ಸ್ವಾತಂತ್ರ್ಯ ಅಥವಾ ಪ್ರೇಮ ಎರಡರಲ್ಲಿ ಒಂದನ್ನು ಆರಿಸಬೇಕಾಗಿ ಬಂದಾಗ ಹೆಣ್ಣು ಏನು ಮಾಡುವಳೆಂಬುದು ಸ್ವಾರಸ್ಯಕರ ವಿಷಯವೆಂದು ಉತ್ತರಿಸಿದರು.
ಅವತ್ತಿಗೆ ಇವರು ನನಗೆ ಹೀಗೆ ಬರೆದಿದ್ದರಾದರೂ ಎಂದು ಸ್ತ್ರೀಯು ಹೊರಗೆ ಹೋಗಿ ವೃತ್ತಿ ಪರಳಾಗುವುದರಲ್ಲಿ ಆಕ್ಷೇಪವಿರಲಿಲ್ಲ. ಸ್ತ್ರೀಯು ಆರ್ಥಿಕ ಸ್ವಾತಂತ್ರ್ಯ ಪಡೆದುಕೊಳ್ಳಬೇಕು. ಆಗಲೇ ಅವಳ ಉದ್ಧಾರನೂ ದೇಶದ ಉದ್ಧಾರವೂ ಆಗುತ್ತದೆನ್ನುತ್ತಿದ್ದರು. ನಮ್ಮಿಬ್ಬರು ಹೆಣ್ಣು ಮಕ್ಕಳೂ ಉದ್ಯೋಗದಲ್ಲಿದ್ದು ಅವರ ಸಾಧನೆಯನ್ನು ಹೆಮ್ಮೆಯಿಂದ ಗೌರವದಿಂದ ಗರ್ವದಿಂದ ಮೆಚ್ಚಿಕೊಳ್ಳುತ್ತಿದ್ದರು.
ಇಲ್ಲಿಗೆ ನಾನು ಹೊರಗೆ ಹೋಗಿ ಅಧ್ಯಾಪಕಳಾಗುವ ಬಯಕೆಯನ್ನು ತ್ಯಜಿಸಿದೆ. ಮೇಲಾಗಿ ನನಗೂ ಅಷ್ಟೇನೂ ಆಸಕ್ತಿಯೂ ಇರಲಿಲ್ಲ. ಮನೆಯಲ್ಲಿನ ಕೆಲಸ ಕಾರ್ಯಗಳಲ್ಲಿಯೇ ಪೂರ್ತಿಯಾಗಿ ತೊಡಗಿಸಿಕೊಂಡೆ. ನನ್ನ ತಾಯಿಯವರಿಗೆ ಹಸು ಸಾಕುವುದರಲ್ಲಿ ತುಂಬಾ ಆಸಕ್ತಿ ಆಸ್ಥೆ ಎರಡೂ ಇತ್ತು. ಹಾಗಾಗಿ ಜೆರ್ಸಿಯಂಥ ಸುಧಾರಿತ ಒಳ್ಳೆ ತಳಿಗಳ ಹೆಚ್ಚು ಹಾಲು ಕೊಡುವಂಥವನ್ನು ಸಾಕಿದ್ದರು. ಅವರೇ ಹಾಲು ಕರೆಯುತ್ತಿದ್ದರು. ಈಗ ನಾನು ಅವುಗಳ ಲಾಲನೆ ಪಾಲನೆಯತ್ತ ಗಮನ ಹರಿಸಿದೆ. ಅವುಗಳ ಮೈದಡವಿ ಹಿಂಡಿ ಕಲಗಚ್ಚು ನೀರು ಕುಡಿಸುವುದನ್ನು ಮಾಡತೊಡಗಿದೆ. ಹಾಲು ಕರೆಯುವುದನ್ನು ಕಲಿತೆ. ಹೊತ್ತಿಗೆ ಒಂದೇ ಹಸು ಎರಡುಸೇರು ಹಾಲು ಕರೆಯುತ್ತಿದುದನ್ನೂ ಸಂತೋಷದಿಂದ ಮಾಡುತ್ತಿದ್ದೆ.
ಈ ಸಂದರ್ಭದಲ್ಲಿ ಒಂದು ಅಚಾತುರ್ಯ ನಡೆಯಿತು. ನಮ್ಮಲ್ಲಿ ಗಿಡ್ಡ ಜಾತಿಯ ಸಣ್ಣ ಕೊಂಬಿನ ಕರಿ ಹಸುವೊಂದಿತ್ತು. ಹೆಚ್ಚಾಗೇ ಹಾಲು ಕೊಡುತ್ತಿತ್ತು. ಯಾವಾಗಲೂ ಅದರ ಹಿಂಗಾಲುಗಳನ್ನು ಕಟ್ಟಿಯೇ ಹಾಲು ಕರೆಯಬೇಕಿತ್ತು. ತಿಳಿ ಬಣ್ಣದ ಬಟ್ಟೆ ಹಾಕಿರುವ ಗಂಡಸರನ್ನು ಕಂಡರೇ ಅದಕ್ಕಾಗುತ್ತಿರಲಿಲ್ಲ. ತೇಜಸ್ವಿ ಬಿಳಿ ಜುಬ್ಬ ಪೈಜಾಮದ ಡ್ರೆಸ್ಸಿನವರು ಆಗ.
ನಮ್ಮ ದನದ ಕೊಟ್ಟಿಗೆಯ ಆಚೆಗೆ ಕಕ್ಕಸು ಮನೆ ಇದ್ದಿದ್ದು. ಐವತ್ತು ವರ್ಷಗಳ ಹಿಂದೆಯೇ ನಮ್ಮ ರಾಜ್ಯದಲ್ಲಿ ಗ್ರಾಮೀಣ ನೈರ್ಮಲ್ಯದ ಬಗ್ಗೆ ಹೆಚ್ಚಿನ ಗಮನವೇ ಕೊಟ್ಟಿದ್ದರು. ಅವತ್ತಿನ ಪ್ರೈಮರಿ ಹೆಲ್ತ್ ಸೆಂಟರ್ ನವರು ಬಿಟ್ಟಿಯಾಗಿ ಸಿಮೆಂಟ್ ಅಥವಾ ಕರಿ ಪೋರ್ ಸಿಲಿನ್ ಚಟ್ಟಿಯನ್ನು ( closet) ಹಂಚುತ್ತಿದ್ದರು. ಇದನ್ನು ನನ್ನ ಅಣ್ಣ ವಾಸು ಮೂಡಿಗೆರೆ ಸೆಂಟರ್‌ನಿಂದ ತಂದು ತಾನೇ ಒಂದು ಕಕ್ಕಸ್ಸು ಮನೆ ಕಟ್ಟಿದ್ದನು. ನಾಲ್ಕು ಕಂಬ ನೆಟ್ಟು ಕಂಬದಿಂದ ಕಂಬಕ್ಕೆ ಪರೋಟನ್ನು ಆಣಿಯಿಂದ ಜಡಿದಿದ್ದನು. ಗೋಡೆಗೆ ಬದಲಾಗಿ ನಮ್ಮ ಕಾಡಿನ ಮರದಲ್ಲಿಯೇ ಹಲಗೆ ಕುಯ್ಯಿಸಿ ಬಂದ ಪರೋಟ ಅದು. ಪರೋಟಿನ ಮಧ್ಯದ ಕಂಡಿಗೆ ಹಳೆ ಡಬ್ಬದ ತಗಡು ತಗಲಿಸಿದ್ದ ಮೊಳೆ ಹೊಡೆದು, ಅವನೇ ಕಾಂಕ್ರೀಟ್ ನೆಲ ಮಾಡಿದ್ದನು. ತಗಡಿನ ಬಾಗಿಲು, ನೀರಿಗೆ ಕೊರತೆಯಿರಲಿಲ್ಲ, ತುಸು ದೂರದಲ್ಲಿತ್ತು ಅದರ ಗುಂಡಿ, ಅದನ್ನೂ ಚೆನ್ನಾಗಿ ಕಲ್ಲಿನಿಂದ ಮುಚ್ಚಲಾಗಿತ್ತು. ಅಚ್ಚುಕಟ್ಟಾಗಿತ್ತು ಟಾಯಿಲೆಟ್ಟು. ತೇಜಸ್ವಿ ಮೊದಲ ಸಲ ನೋಡಿದಾಗ ನಕ್ಕಿದ್ದರು, ಇವರು ಅನುಕೂಲದಲ್ಲೇ ಅಚ್ಚುಕಟ್ಟಾಗಿ ಮಾಡಬಹುದೆಂದರು. ಏನನ್ನೂ. (ಇಲ್ಲಿಗೆ ಅವರು ಸರಿದಾಡಿದರೆ ಸಾಕು ದೂರದಿಂದಲೇ ಬುಸು-ಗುಡುತ್ತ ಅತ್ತಿಂದತ್ತ ಇತ್ತಿಂದತ್ತ ಗುಟುರು ಹಾಕುತ್ತ ರಂಪ ಮಾಡುತ್ತಿತ್ತು ಆ ದನ).
ಒಂದು ಸಲ ನನ್ನ ಅಮ್ಮ ಬೆಂಗಳೂರಿಗೆ ಹೋಗಿದ್ದರು. ಏನಾದರೂ ಸರಿ ಆ ದನದ ತಂಟೆಗೆ ಮಾತ್ರ ಹೋಗಬೇಡೆಂದು ಎಚ್ಚರಿಕೆಯನ್ನು ಕೊಟ್ಟಿದ್ದರು. ಅವತ್ತು ಸಂತೆ ದಿನ, ಮನೆಯಲ್ಲಿ ಯಾರು ಇರಲಿಲ್ಲ. ಆಳು ಹುಡುಗನೊಬ್ಬ ಕೆಳಗಡೆಯ ತಗ್ಗಿನ ಮೈದಾನದಲ್ಲಿ ಹುಲ್ಲು ಮೇಯಲು ಆ ಕರಿದನ ಕಟ್ಟಿ ಸಂತೆಗೆ ಹೊಂಟವ ದಿನ ಕತ್ತಲೆಗೆ ಸರಿತಾಯಿದ್ದರೂ ಬರಲೇ ಇಲ್ಲ. ಕೊಟ್ಟಿಗೆಗೆ ತಂದು ಕಟ್ಟೋಣೆಂದು ಹಗ್ಗ ಬಿಚ್ಚಿದೆ ನೋಡಿ, ಬುಸುಬುಸುಗುಡುತ್ತ ಗುಟುರು ಹಾಕುತ್ತ ನನ್ನನ್ನು ಉರುಳುರುಳಿಸಿ ಉರುಳುರುಳಿಸುತ್ತಾ ಕೊಂಬಿನಿಂದ ತಿವಿಯುತ್ತಿದೆ. ಆ ಕ್ಷಣದಲ್ಲಿ ಹೇಗೂ ಏಕೋ ನಮ್ಮ ತೋಟದ ರೈಟ್ರು ದೂರದಲ್ಲೇ ಪರಿಸ್ಥಿತಿ ಗಮನಿಸಿದವರು ಓಡಿ ಬಂದು ಏನನ್ನೂ ಲೆಕ್ಕಿಸಿದೆ ಮೂಗುದಾರ ಹಿಡಿದುಕೊಂಡರು. ಈಗ ಅವರನ್ನೂ ತಿವಿಯಿತು ಈ ದನ. ಆದರೂ ಗಟ್ಟಿಯಾಗಿ ಹಿಡಿದು ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದರು. ಮುಖ ಪೂರ್ತಿ ರಕ್ತದಲ್ಲಿ ಅದ್ದಂತೆ ಕಾಣುತ್ತಿದ್ದರವರು. ಚೂರು ತುಟಿ ಹರಿದಿತ್ತು, ನಾನು ಆಶ್ಚರ್ಯಕರ ರೀತಿಯಲ್ಲಿ ಏನೂ ಆಗದೆ ಪಾರಾಗಿದ್ದೆ. ಈ ಸಂಗತಿಯನ್ನು ಇವರಿಗೆ ಕಾಗದದಲ್ಲಿ ತಿಳಿಸಿದೆ.
“ಕತ್ತೆ, ಅದರ ತಂಟೆಗೆ ಹೋಗಬೇಡೆಂದರೂ ಯಾಕೆ ಹೋಗಿದ್ದೆ ? ಕೊಬ್ಬು ನಿನಗೆ, ಏನಾದರೂ ಇನ್ ವ್ಯಾಲಿಡ್ ಆಗಿದ್ದಿದ್ದರೆ ನಿನ್ನನ್ನು ತೊರೆದು ಪರಾರಿಯಾಗುತ್ತಿದ್ದೆ ನಾನು ಗೊತ್ತಾ” ಉತ್ತರದ ತುಂಬೆಲ್ಲ ಬೈಗುಳ, ಆಹ್ ಚೆನ್ನಾಗಿವೆ!ಎಂದು ನಕ್ಕಿದೆ.
`ಕಿವಿ` ಎಂಬ ನಾಯಿ
೧೯೬೫ ರ ಶುರುವಿನಲ್ಲಿ ತೇಜಸ್ವಿ ಒಂದು ನಾಯಿಮರಿ ಕಾಕರ್ ಸ್ಪಾನಿಯರ್ ಜಾತಿಯನ್ನು ಮೈಸೂರಿನಿಂದ ತರುವನೆಂದರು. ನಾನು ಕಂಗಾಲಾದೆ. ಜಾತಿ ನಾಯಿಗಳನ್ನು ಸಾಕುವುದು ಕಷ್ಟಕರವೆಂದೇ ಅಂದಿನ ನನ್ನ ತಿಳುವಳಿಕೆಯಾಗಿತ್ತು. ಮೈಸೂರಿನಿಂದ ಸ್ಕೂಟರ್‌ನಲ್ಲಿ ಬರುವಾಗ ಬಕೆಟ್ ಆಕಾರದ ನೀಲಿ ಬಣ್ಣದ ಸಣ್ಣ ಪ್ಲಾಸ್ಟಿಕ್ ಬುಟ್ಟಿಯೊಂದರಲ್ಲಿ ಚೂರು ತುಂಡು ಬಟ್ಟೆ ಹಾಕಿಟ್ಟು ನಾಯಿ ಮರಿ ಇಟ್ಟು ಕೊಂಡು ಬಂದರು. ಬುಟ್ಟಿಗೆ ಕಡ್ಡಿ ಕಡ್ಡಿ ಪಟ್ಟಿ ಇತ್ತು.
ಆಗಿನ್ನೂ ನಮಗೆ ಮದುವೆಯಾಗಿರಲಿಲ್ಲ. ನಮ್ಮ ಮನೆಯಲ್ಲಿ ಭೂತಕಾಡಿನಲ್ಲಿ ನಾಯಿ ಮರಿಗೆ ನನ್ನ ತಾಯಿ, ಅಣ್ಣ ಎಲ್ಲರಿಂದಲೂ ಕೆಂಪು ನೆಲಹಾಸಿನ ಸ್ವಾಗತವೇ ಸಿಕ್ಕಿತು. ಮರಿ ಬಿಳಿ ಬಿಳಿ ಮಂಜಿನ ಮುದ್ದೆಯಂತೆ ಕೆಂಪು ಕೆಂಪು ಹಂಡದಿಂದ ಬಹಳ ಮುದ್ದಾಗಿತ್ತು. ಕಿವಿ ಅಗಲವಾಗಿತ್ತು. ಅದಕ್ಕಿನ್ನೂ ಬೇಗ ಬೇಗ ಹೆಜ್ಜೆ ಹಾಕುವುದೂ ಬರುತ್ತಿರಲಿಲ್ಲ. ಅದನ್ನು ನೆಲದ ಮೇಲೆ ಬಿಡಲಿಕ್ಕೆ ಮನಸ್ಸಾಗುತ್ತಿರಲಿಲ್ಲ. ಹಸಿವಾಗಿತ್ತೇನೋ, ಆದರೂ ಅದು ಹಾಲು ಕುಡಿಯಲಿಲ್ಲ. ಅದಿನ್ನೂ ಕಣ್ಣೇ ಬಿಟ್ಟಿರಲಿಲ್ಲ. ಚೂರು ಚೂರು ಬಿಡಲಿಕ್ಕೆ ಪ್ರಯತ್ನಿಸುತ್ತಿತ್ತು. ರಾತ್ರಿಯೆಲ್ಲ ಕೈಕು ಕೈಕು ಕಯಿಕ್ಕೆಂದು ಒಂದೇ ಸಮನೆ ಕೂಗುತ್ತಿತ್ತು. ಮನೆಯಲ್ಲಿ ಯಾರಿಗೂ ನಿದ್ರೆಯಿಲ್ಲ. ಬೆಳಿಗ್ಗೆ ನಮ್ಮ ತಾಯಿ ಈ ನಾಯಿ ಮರಿಗಳು ಯಾವಾಗ್ಲೂ ಹೀಗೆ, ಒಂದು ನಾಲ್ಕು ದಿನ ಕಳೆದರೆ ಸರಿ ಹೋಗ್ತವೆ ಎಂದು ಅವರ ಕೆಲಸದ ಕಡೆಗೆ ಹೋದರು. ತೇಜಸ್ವಿಗೆ ಏನೋ ಒಂದು ತರ. ಮರಿ ಹಾಲು ಕುಡಿದಿರಲಿಲ್ಲ. ರಾತ್ರಿ ನಿದ್ದೆಯೂ ಇಲ್ಲ. ಪಾಪ ತಾಯಿ ಬಿಟ್ಟು ಬಂದಿದೆ. ಮೊಲೆಯುಣ್ಣುತಿದ್ದ ಮರಿ. ನೀನೇ ಚೀಪಿಸು ಎಂದರು. ಆಗಿನ ನನ್ನ ಮುಜುಗರ! ಹೇಗಿರಬೇಕು? ಆದರೆ ಕ್ಷಣ ಮಾತ್ರದಲ್ಲಿ ನಾಯಿಮರಿ ಪಚ್ಚ ಪಚ್ಚ ಸದ್ದು ಮಾಡಿತು. ಆನಂತರ ಫೀಡಿಂಗ್ ಬಾಟೆಲ್‌ನಲ್ಲಿ ಗಟಗಟ ಅಂತ ಒಂದೆರಡು ಸಲ ಹಾಲು ಕುಡಿಯಿತು. ಮತ್ತೆ ಲೋಟದಲ್ಲಿ ಕುಡಿಯಲು ಶುರು ಮಾಡಿತು. ಮರಿ ಮದ್ದಾಗಿ ಚೆನ್ನಾಗಿ ಬೆಳೆಯಿತು. ನಮ್ಮೆಲ್ಲರ ಆರೈಕೆಯಲ್ಲಿ. ಅದಕ್ಕೆ `ಕಿವಿ’ಎಂದು ಹೆಸರಿಟ್ಟೆವು. ಆಗೊಮ್ಮೆ ಉಲ್ಟ ಮಾಡಿ ಅಂದರೆ `ವಿಕಿ` ಎಂದು ಒಂದು ಸಲ ನಾನು ಕರೆದೆ. ಆಗ ತೇಜಸ್ವಿ `ಕಿವಿ’ ಎಂದೇ ಕರೆಯಬೇಕೆಂದು ಸ್ಟ್ರಿಕ್ಟ್ ಆಗಿ ಹೇಳಿದರು. ಕಿವಿ ಅನ್ನುವುದು ನ್ಯೂಜಿಲೆಂಡ್ ದೇಶದ ಒಂದು ಹಕ್ಕಿಯ ಹೆಸರು. ಬೂಟ್ ಪಾಲಿಶ್ ಡಬ್ಬಿಯ ಮೇಲೆ ಅದರ ಚಿತ್ರ ಇರುತ್ತೆ.
ಕನ್ನಡಿಗರ ಮನದಲ್ಲಿ ಕರ್ವಾಲೋ ಕಾದಂಬರಿಗೆ ವಿಶಿಷ್ಟ ಸ್ಥಾನವಿದ್ದಂತೆ `ಕಿವಿಯೂ’ ವಿಶಿಷ್ಠ ಸ್ಥಾನಗಳಿಸಿದೆ. ಹಾಗಾಗಿಯೇ ಇವನ್ನೆಲ್ಲ ಬರೆಯುವ ಆಸೆ. ಕರ್ವಾಲೋ ಕಾದಂಬರಿಯಲ್ಲಿ ಕಿವಿ ಕಣ್ಣು ಬಿಟ್ಟಕೂಡಲೇ ಕಂಡಿದ್ದು ಅವರ ತಂದೆ ತಾಯಿಯನ್ನಲ್ಲ ನನ್ನನ್ನೂ ನನ್ನ ಹೆಂಡತಿಯನ್ನು ಎಂದೇ ಬರೆದಿರುವವರು. ಇವತ್ತಿಗೂ ತರುಣ ಪೀಳಿಗೆ ಓದುಗರು ನಮ್ಮ ಮನೆಯಂಗಳದಲ್ಲಿ ನಿಂತಾಗ ದೂರದಲ್ಲೆಲ್ಲೋ ಒಕ್ಕಣ್ಣಿಟ್ಟುಕೊಂಡು `ಕಿವಿ` ನೋಡುವಾಸೆ. ಪ್ಯಾರನನ್ನು ಕಾಣುವ ಬಯಕೆಯಿಂದಲೇ ಸುತ್ತ ಮುತ್ತಲೆಲ್ಲ ಕಣ್ಣಾಡಿಸುತ್ತಿರುತ್ತಾರೆ. ವಯಸ್ಸಾದ ಕಿವಿ ೧೯೭೬ ರಲ್ಲಿ ಕಣ್ಣು ಮುಚ್ಚಿತು.
ಕಾಕರ್ ಸ್ಫಾನಿಯಲ್ ಜಾತಿ ನಾಯಿಗಳು ಹುಟ್ಟು ಶಿಕಾರಿ ನಾಯಿಗಳೆಂದು ಇವರು ಪುಸ್ತಕದಲ್ಲಿ ಓದಿ ತಿಳಿದಿದ್ದರಂತೆ. ಕಿವಿ ತುಂಬಾ ಪುಟ್ಟ ಮರಿಯಿದ್ದಾಗಲೇ ಸಣ್ಣ ಮೂಳೆ ಚೂರೊಂದು ಅದರ ಪಕ್ಕ ಇದ್ದರೆ ಹತ್ತಿರ ಯಾರೂ ಓಡಾಡುವಂತೆಯೇ ಇಲ್ಲ. ಎಲ್ಲರಿಗೂ ಗುರ್ರ್ ಎನ್ನುತ್ತಿತ್ತು. ಇನ್ನೊಂದು ಚೂರು ದೊಡ್ಡದಾದ ಮೇಲೆ ಇವರು ಹೆಗಲಿಗೆ ಕೋವಿ ಏರಿಸಿ ಅದನ್ನೂ ಕರೆದುಕೊಂಡು ಭೂತನ ಕಾಡಿನ ಕಾಡು ಅಲೆಯಲಿಕ್ಕೆ ಹೊರಡುತ್ತಿದ್ದರು. ಒಂದು ದಿನ ಕಿವಿ ನೆಲ ಮೂಸುತ್ತ ಮೂಸುತ್ತ ಅತ್ತಲಾಗಿ ಇತ್ತಲಾಗಿ ವಾಸನೆ ಹಿಡಿದೇ ಓಡಿದಾಗ ಕಾಡು ಕೋಳಿಯೊಂದು ಹಾರಿ ಮರದ ವೇಲೆ ಕೂತಿತಂತೆ. ನಿಂತ ಕಿವಿ ಬೊಗಳಿ ಬೊಗಳಿ ಸಾಕಾಯಿತಂತೆ. ಅಂದಿನಿಂದ ಕಾಡು ಕಾಡಲಿಕಾಯಿತು ಕಿವಿಗೂ ಯಜಮಾನನಿಗೂ ಒಟ್ಟಾಗೆ. ಇನ್ನೊಂದು ದಿನ ಹೀಗೇ ಹೋಗುತ್ತಿದ್ದಾಗ ಸಣ್ಣದನಿ ಏರಿಸಿ ಏರಿಸಿ ನಿಲ್ಲಿಸಿ ನಿಲ್ಲಿಸಿ ಕೂಗುತ್ತಾ ಬಹುದೂರ ಓಡುತ್ತಾ ಹೋದಾಗ ಸಣ್ಣ ಮಟ್ಟಿನಿಂದ ಮೊಲವೊಂದು ಚಂಗಂತ ಕುಪ್ಪಳಿಸ್ತಾ ಕುಪ್ಪಳಿಸ್ತಾ ಮಂಗ ಮಾಯ.
ನಾನು ಚಿತ್ರಕೂಟಕ್ಕೆ ಹೋದ ಹೊಸತು. ಮನೆ ಸಮೀಪದಲ್ಲೇ ದೊಡ್ಡ ದೊಡ್ಡ ಲಂಟಾಣ, ಜಿಗ್ಗು ಮಟ್ಟಿನೂ ಇತ್ತು. ಇದರೊಳಗೆ ಕಾಡು ಕುರಿ ಇರಲೇ ಬೇಕೆಂಬ ಕಾತರಿ. ಒಂದು ಅಂದಾಜಿನಲ್ಲಿ ಒಂದು ಮಟ್ಟಿನ ಪಕ್ಕ ನನ್ನನ್ನು ಚಲಿಸದೆ ನಿಲ್ಲಲು ಹೇಳಿದರು. ಇನ್ನೊಂದು ಕಡೆ ಅಲ್ಲೆ ಇವರು ಕೋವಿ ಹಿಡಿದು ನಿಂತರು. ಜಿಗ್ಗಿನ ಆಚೆ ಕಡೆ ತುದಿಯಿಂದ ನಮ್ಮ ತೋಟದ ರೈಟ್ರು ಕೃಷ್ಣಪ್ಪ `ಕಿವಿ’ ಕರೆದುಕೊಂಡು ಛೊ ಬಿಡುತ್ತಾ ಕೂಗುತ್ತಾ ತುಸು ದೂರ ಬರುವಷ್ಟರಲ್ಲೇ ಕಿವಿ ಕಯಿಕ್ ಕಯಿಕ್ಕೆಂದು ಬೊಗಳುತ್ತಾ ಕಾಡು ಕುರಿಯನ್ನೆಬ್ಬಿಸಿ ತೇಜಸ್ವಿಯಿದ್ದ ಕಡೆಗೇ ಕರೆದುಕೊಂಡು ಬಂತು. ಇವರು ಢಂ ಕೋವಿ ಸಿಡಿಸಿದರು. ನಿಮಿಷ ಮಾತ್ರದಲ್ಲಿ ಬಿತ್ತು ಕುರಿ. ಎದುರುಸಿರು ಬಿಡುತ್ತ ಕುರಿ ಮತ್ತು ಇವರ ಪಕ್ಕ ಬಂದು ನಿಂತು ಕಿವಿ. ಈ ಸನ್ನಿವೇಶದಲ್ಲಿ ತಾನು ಮಾಡಿದ ಶಿಕಾರಿ ಕುರಿಯನ್ನು ಯಾರೂ ಮುಟ್ಟಲಿಕ್ಕೆ ಬಿಡುತ್ತಿರಲಿಲ್ಲ. ಅದರ ಹಕ್ಕು ತೇಜಸ್ವಿಯೊಬ್ಬರಿಗೇ ಎನ್ನುವಂತೆ ನಡೆದುಕೊಳ್ಳುತ್ತಿತ್ತು. ಹೀಗೆ ಹೆಗಲಿಗೆ ಕೋವಿ ಏರಿಸಿ ಏಕಾಂಗಿಯಾಗಿ ಕಿವಿ ಜೊತೆ ಕಾಡು ತಿರುಗುವುದೇ ಇವರ ದೈನಂದಿನ ಚಟುವಟಿಕೆಯಾಯ್ತು, ಕಿವಿಯ ಸಂಗವೂ ಕಾರಣವಿರಬಹುದು.
ಚಿತ್ರಕೂಟದ ನಮ್ಮ ಮನೆಯಲ್ಲಿ ಜಗುಲಿಯಲ್ಲಿಟ್ಟಿದ್ದ (ಹಾಲ್‌ನಲ್ಲಿ) ಐದು ಬೆತ್ತದ ಕುರ್ಚಿಯಲ್ಲಿ ಕಿವಿಗೆ ಕೂರುವ ಸ್ವಾತಂತ್ರ್ಯವಿತ್ತು. ತನ್ನ ಪಾಡಿಗೆ ತಾನು ಕೂತಿರುತ್ತಿತ್ತು. ಯಾರಾದರೂ ವಿಸಿಟರ್ ಬಂದವರನ್ನು ಕೆಂಗಣ್ಣಿನಿಂದಲೇ ನೋಡುತ್ತಿತ್ತು. ನಾವು ಧೈರ್ಯ ಕೊಟ್ಟ ನಂತರವೇ ಬಂದವರು ಕೂರುತ್ತಿದ್ದುದು. ಮಾತನಾಡುತ್ತಾ ಆಕಸ್ಮಾತ್ `ಕಿವಿ`ಕೂತಿದ್ದ ಕುರ್ಚಿಗೆ ಕೈ ತಾಗಿದರೆ ಹೌಹಾರಿ ಬೀಳುತ್ತಿತ್ತು ಕಿವಿ. ಅವರು ಕಿವಿ ಎಂದು ಕರೆದರೂ ಕಿಡಿ ಕಾರುತ್ತಿತ್ತು.
ಆಗೆಲ್ಲ ಅಡುಗೆಗೂ ಸೌದೆ ಒಲೆಯೇ ಇದಿದ್ದು. ನಮ್ಮ ಮನೆಯಲ್ಲೂ ಕೋಡೋಲೆಯೂ ಇತ್ತು. ಬಿಡೋಲೆಯೂ ಇತ್ತು. ನಾನೆ ಹಾಗೆ ಹಾಕಿಸಿದ್ದೆ. ಹೊಗೆ ಕಂಡಿ ಇತ್ತಾದರೂ ಅಡುಗೆ ಮನೆಯೆಲ್ಲ ಹೊಗೆ ಮಯವಾಗಿರುತ್ತಿತ್ತು. ಈಗ ನೆನಸಿಕೊಂಡರೆ ಅಡುಗೆಮನೆಯಲ್ಲಿ ಸೌದೆ ಒಲೆಯೇ ಚೆನ್ನವೆನ್ನಿಸುತ್ತೆ ಮಲೆನಾಡಿಗೆ. ಬೆಳಗ್ಗಿನ ತಿಂಡಿಗೆ ಕೈಯಲ್ಲಿ ಅಕ್ಕಿ ರೊಟ್ಟಿ ತಟ್ಟಿ ಹೆಂಚಿಗೆ ಹಾಕಿ ಕೆಂಡದ ಮೇಲೆ ಸುಟ್ವ ರೊಟ್ಟಿ ರುಚಿ ತಿಂದವನೆ ಬಲ್ಲ. ಇವರು ಒಲೆ ಮುಂದೆ ಚಳಿ ಕಾಯಿಸುತ್ತಾ ತಿಂಡಿ ತಿನ್ನುತ್ತಿದ್ದರು. ರೊಟ್ಟಿ ಜೊತೆಗೆ ನೆಂಚಿ ಕೊಳ್ಳಲು ಚಟ್ನಿ ಅಥವಾ ಶಿಕಾರಿ ಮಾಡಿದ್ದ ಹಿಂದಿನ ದಿನದ ಭಕ್ಷ್ಯ ಉಳಿದಿದ್ದರೆ ಮತ್ತೂ ರುಚಿ. ಇಂತಹ ಸಮಯದಲ್ಲಿ ಸದ್ದಿಲ್ಲದೆ ತಲೆ ತಗ್ಗಿಸಿ ಕೊಂಡು ಕಿವಿ ಬಂದು ಇವರ ಪಕ್ಕದಲ್ಲಿ ಕೂತು ಬೆಂಕಿ ಕಾಯಿಸುತ್ತಿತ್ತು. ಅದಕ್ಕೂ ಒಂದು ರೊಟ್ಟಿ ತಟ್ಟುತ್ತಿದ್ದೆ. ಘನತೆಯಿಂದಲೇ ತನ್ನ ಸ್ಥಾನಮಾನ ಕಾಪಾಡಿಕೊಳ್ಳುತ್ತಿತ್ತು.
ಎರಡು ಮೂರು ವರ್ಷ ಕಳೆದ ನಂತರ ಈ ಒಲೆ ಹೊಗೆ ಮುದ್ದೆಯೆಂದು ಹೈದ್ರಾಬಾದು ಚೋಲಗೆ ಬದಲಾಯಿಸಿದೆವು. ಭೂತನಕಾಡಿನಲ್ಲಿ ಹಾಕಿದ್ದ ಮಾದರಿಯ ಅಳತೆ ಮೇರೆಗೆ ಇವರು ಸಿಮೆಂಟು ಕಾಂಕ್ರೀಟ್ ಮೂಲ್ಡ್ ಹಾಕಿಸಿ ಒಲೆ ಕಟ್ಟಿಸಿದರು. ಇದರಲ್ಲಿ ಮೂರು ಕೋಡೋಲೆ ಇತ್ತು. ಮೂರನೆಯದು ದೊಡ್ಡಪಾತ್ರೆಯಿಟ್ಟು ನೀರು ಕಾಯಿಸುವಂತದ್ದು ಈ ಒಲೆಯಲ್ಲಿ ಹೊಗೆ ಬರುತ್ತಿರಲಿಲ್ಲ. ಅಡುಗೆ ಆದ ಮೇಲೆ ದೊಡ್ಡ ಕೋಡೋಲೆಯಲ್ಲಿ ಕೇಕ್ ಬೇಯಿಸುತ್ತಿದ್ದೆ. ಅಲ್ಲದೆ ಕಾಡುಕುರಿ ಶಿಕಾರಿ ಆದಾಗ ನಾವೂ, ಗೆಳೆಯರೂ ತಿಂದುಳಿದ ಮಾಂಸವನ್ನು ಅದರಲ್ಲಿ ಒಣಗಿಸಿಡುತ್ತಿದ್ದೆ. ಆ ಒಣ ಮಾಂಸದ ರುಚಿ ಲಾರ ಇಂಗೆಲ್ಸ ಪುಸ್ತಕ ಓದಿದವರಿಗೆ ಗೊತ್ತು ಹೇಗೆ ಬಾಯಿ ನೀರೂರಿಸುತ್ತೆಂದು.
ಇನ್ನು ಊಟದ ಮೇಜಿನ ಮೇಲೆ `ಕಿವಿ` ನಮ್ಮ ಜೊತೆಯಲ್ಲೆ ಕೂರುತ್ತಿತ್ತು. ಎಲ್ಲಾ ಗುಡ್ ಮ್ಯಾನರ್ಸ್ ಅಳವಡಿಸಿಕೊಂಡಂತೆ ಊಟ ಮಾಡುತ್ತಿತ್ತು. ದೊಡ್ದ ಕಣ್ಣು ಬಿಡುತ್ತಾ ಬಾಯಿಯನ್ನು ತುಟಿಯಲ್ಲಿ ಸವರಿಕೊಳ್ಳುತ್ತ ನಾವು ಏಳುವವರೆಗೂ ಕುಳಿತ್ತಿರುತ್ತಿತ್ತು. ಆದರೆ ನಮ್ಮ ಜೊತೆಯಲ್ಲಿ ಕೂರಲು ನಾನು ಹೆಚ್ಚಿಗೆ ಆಸ್ಪದ ಕೊಡುತ್ತಿರಲಿಲ್ಲ.
ಒಂದು ದಿನ ಜಗಲಿಯಲ್ಲಿ ಕಿವಿ ಸುಮ್ಮನೆ ತೂಕಡಿಸುತ್ತ ಅರೆನಿದ್ರೆಯಲ್ಲಿತ್ತು. ಅಂಬೆಗಾಲಿಡುವ ಏನೂ ಅರಿಯದ ಮಗು ಸುಸ್ಮಿತಾ ಮೆಲ್ಲಕೆ ಕಿವಿಯನ್ನು ಸಮೀಪಿಸುತ್ತಿದ್ದಂತೆ ಗುರು ಗುಟ್ಟಲು ಶುರುಮಾಡಿತು. ಅಲ್ಲಿಯೇ ಕೂತಿದ್ದ ಇವರು ಕಿವಿಗೆ ಜೋರು ಮಾಡಿ ಒಂದು ಪೆಟ್ಟುಕೊಟ್ಟರು. ಆನಂತರ ಇವಳು ಇಳಿಬಿದ್ದ ಕಿವಿಯನ್ನು ಎಷ್ಟೆ ಎಳೆದರೂ ಬೇಜಾರಿನಿಂದ ಸಹಿಸಿಕೊಳ್ಳುವೆನೆಂಬಂತೆ ಸುಮ್ಮನಿದ್ದು ಬಿಡುತ್ತಿತ್ತು. ಅಥವಾ ಎದ್ದು ಹೊರ ಹೋಗುತ್ತಿತ್ತು. ಇನ್ನೆರಡು ವರ್ಷದ ನಂತರ ತಿಪ್ಪ ತಿಪ್ಪ ಹೆಜ್ಜೆಯಿಡುತ್ತಿದ್ದ ಈಶಾನ್ಯ ಮೆಲ್ಲಕೆ ಹೋಗಿ
ಕಿವಿಯ ಮಾರುದ್ದದ ಕಿವಿಗೇ ಜೋತು ಬಿದ್ದು ಜಗ್ಗಿಸಿ ಆಡುತ್ತಿದ್ದಳು. ಕಣ್ಣು ಮುಚ್ಚಿ ಎಲ್ಲವನ್ನೂ ಸಹಿಸಿಕೊಳ್ಳುತ್ತಿತ್ತು. ಕಿವಿಯ ಊಟೋಪಚಾರ, ಅದರ ಮೈ ಪೂರ್ತಿ ಬಾಚುವುದನ್ನು ನಾನು ನೋಡಿಕೊಂಡರೆ ಇವರು ಅದಕ್ಕೆ ಭರ್ಜರಿ ಸ್ನಾನ ಮಾಡಿಸುವುದು ಮತ್ತು ತಿರುಗಾಟದಲ್ಲಿ ಆಗುತ್ತಿದ್ದ ಎಲ್ಲ ತರದ ಗಾಯಗಳಿಗೆ ಇಲಾಜು ಮಾಡುತ್ತಿದ್ದರು. ಕಾಡಿನಲ್ಲಿ ನುಗ್ಗುವಾಗ ಹಿಸಿದ ಚರ್ಮಕ್ಕೆ ಹೊಲಿಗೆಯೂ ಹಾಕುತ್ತಿದ್ದರು. ಇವರ ಶ್ರುಶೂಷೆಗೆ ಸಂತೋಷದಿಂದ ಓಗೊಡುತ್ತಿತ್ತು.
ಐದು ವರ್ಷದ ಸುಸ್ಮಿತಾ ಮೂರು ವರ್ಷದ ಈಶಾನ್ಯೆ ಮತ್ತು ಕಿವಿಯನ್ನು ಜೀಪಿನಲ್ಲಿ ಕೂರಿಸಿಕೊಂಡು ತಿರುಗುವುದೆಂದರೆ ತೇಜಸ್ವಿಗೆ ಎಲ್ಲಿಲ್ಲದ ಸಂಭ್ರಮ. ಅದು ಜೀಪಿನ ಬಟ್ಟೆ ಟಾಪ್ ತೆಗೆದು ಹಾಕಿ ಈ ದೃಶ್ಯವನ್ನು ನೋಡಿರುವ ಮಂದಿಗೆಲ್ಲ ಖುಷಿ ಕೊಡುವಂತದ್ದು. ಆಗ ಶಾಲೆಗೆ ಹೋಗುತ್ತ ಇವರನ್ನು ನೋಡಿದ್ದ ಮಕ್ಕಳು ಈಗ ದೊಡ್ಡವರಾಗಿದ್ದಾರೆ ನೆನನೆನದು ಸಂತೋಷಿಸುತ್ತಾರೆ. ಮೂಡಿಗೆರೆಗೆ ಅದು ಇದು ಸಾಮಾನು ತರಲು ಹೋದಾಗ ಮಕ್ಕಳನ್ನು ಕಿವಿಯನ್ನು ಜೀಪಿನಲ್ಲೆ ಬಿಟ್ಟು ಇವರ ಪಾಡಿಗೆ ಇವರು ಹೋಗುವರು. ಆಗ ಜೀಪನ್ನು ಯಾರು ತಾಗಿಸಿಕೊಂಡು ಹೋಗುವಂತಿಲ್ಲ. ಆಕಸ್ಮಾತ್ ತಾಗಿಸಿದರೆ ಗುರ್ರೆಂದು ಹೌಹಾರಿ ಬೀಳುವುದು, ಮಕ್ಕಳ ಮೇಲೆ ಕಣ್ಣು ಹಾಕಿದರೆ ಚೇಷ್ಟೇ ಮಾಡಿದರೆ ಕೆಂಗಣ್ಣಿನಿಂದಲೇ ನೋಡುತ್ತ ನೋಡುತ್ತ ಗಬ್ಬಕ್ಕೆಂದು ಹಾರುತ್ತಿತ್ತು ಅವರ ಮೇಲೆ. ಹೀಗೆ ನಮ್ಮ ಜೀಪು, ಮಕ್ಕಳು, ಕಿವಿ ಪ್ರಖ್ಯಾತವಾಗಿ ದೂರದಿಂದಲೇ ನೋಡಿ ಸಂತೋಷ ಪಟ್ಟುಕೊಂಡು ಹೋಗುತ್ತಿದ್ದರು ಜನರು.
ಇನ್ನು ಅಣ್ಣ (ಕುವೆಂಪು) ಅಮ್ಮ ಕಲಾತಾರಿಣಿಯರು ನಮ್ಮಲ್ಲಿಗೆ ಬಂದಾಗ ಇದರ ವರ್ತನೆಯಲ್ಲಿ ಬೇರೆ ತರ, ಅವರನ್ನು ಮನೆಯವರೆಂದು ಒಪ್ಪಿಕೊಂಡರೂ ಚೂರು ದೂರದಲ್ಲೇ ಇರುತ್ತಿತ್ತು. ಇವರೆಲ್ಲ ವರಾಂಡದಲ್ಲಿ ಬಿಟ್ಟಿರುತ್ತಿದ್ದ ಚಪ್ಪಲಿ ಹಾಕಿಕೊಳ್ಳುವಾಗ ದುಂಡಕೆ ಕೆಂಪುಗಣ್ಣು ಮಾಡಿಕೊಂಡೇ ನೋಡುತ್ತಿತ್ತು ಬಿರು ಬಿರನೆ.
೧೯೭೬ ಕೊನೆಯಲ್ಲಿ ಮೂರು ನಾಲ್ಕು ದಿನ ಹುಷಾರಿಲ್ಲದೆ ಮಲಗಿಬಿಟ್ಟಿತ್ತು. ಅವತ್ತು ಜಯಪ್ರಕಾಶ್ ನಾರಾಯಣ್ ಮತ್ತು ಲೋಹಿಯಾ ಅವರ ಸಮಕಾಲೀನರಾದ ಠಾಕೂರ್ ದಾಸ್ ಭಂಗರ ಸಭೆ ಹಾಸನದಲ್ಲಿತ್ತು. ಇವರು ಆ ಸಭೆಗೆ ಹೋಗಿದ್ದಾಗ ನಮ್ಮೆಲ್ಲರ ನೆಚ್ಚಿನ ಮುದ್ದು ಕಿವಿ ಕೊನೆಯುಸಿರೆಳೆಯಿತು. ಸೊಗಸಾದ ಜೀವ, ಮಹತ್ತರದ ಜೀವನ.
ನೂರಡಿ ರಸ್ತೆಯ ಸಾಹಸಗಳು
ಶ್ರೀಯುತರಾದ ಪೂರ್ಣಚಂದ್ರ ತೇಜಸ್ವಿ, ಬಿ.ಎನ್.ಶ್ರೀರಾಂ, ಎನ್.ಡಿ. ಸುಂದರೇಶ್ ಮತ್ತು ಕಡಿದಾಳು ಶಾಮಣ್ಣ ಈ ನಾಲ್ವರು ಆಪ್ತ ಗೆಳೆಯರು ಕನ್ನಡಿಗರೆಲ್ಲರಿಗೂ ಚಿರಪರಿಚಿತರು. ಸುಂದರೇಶ್ ಮತ್ತು ಶಾಮಣ್ಣ ಮಲೆನಾಡಿನ ತೀರ್ಥಹಳ್ಳಿಯ ನಂಬ್ಳ, ಕಡಿದಾಳಿನವರಾದರೆ, ಶ್ರೀರಾಂ ಬಯಲು ಸೀಮೆ ಬೆಂಗಳೂರಿನ ಬ್ಯಾತದವರೆಂದೇ ಖ್ಯಾತರು, ಮತ್ತು ದೂರದೃಷ್ಠಿಯುಳ್ಳವರಾಗಿ ಗೆಳೆಯರಿಗೆಲ್ಲ ಅಂದು ಸಲಹೆಗಾರರಾಗಿ ಇದ್ದಂತೆಯೇ ಇಂದೂ ಇದ್ದಾರೆ. ಈ ನಾಲ್ವರೂ ಒಟ್ಟಿಗೇ ಸೇರಿ ರುಚಿ ರುಚಿ ತಿನಿಸು ಆಸ್ವಾಧಿಸುವಲ್ಲಿ ಒಬ್ಬರಿಗಿಂತ ಒಬ್ಬರು ಎತ್ತಿದ ಕೈ. ಹಾಗೆಯೇ ಒಟ್ಟಿಗೆ ಸೇರಿ ಚಿಂತನ ಶೀಲರಾಗಿದ್ದರು. ಅದರಂತೆ ‘ಪ್ರಗತಿ ಪರ ಪ್ರಯತ್ನದ ಫಲವಾಗಿ’ ಲಹರಿ ಬುದ್ಧಿ ಪ್ರಚಾರಯೋಜನೆಯನ್ನು ೧೯೬೪ ರಲ್ಲಿಯೇ ಶುರು ಮಾಡಿದ್ದರು. ಸುಂದರೇಶರು ವಾರ್ತಾ ಪತ್ರಿಕೆಯಲ್ಲಿ ಬರುತ್ತಿದ್ದ ಸಮಾಜದ ಒಳಿತು ಕೆಡುಕುಗಳ ಬಗ್ಗೆ ವಾಚಕರವಾಣಿಯಲ್ಲಿ ಖಾರವಾಗಿ ಪ್ರತಿಕ್ರಿಯಿಸುತ್ತಿದ್ದರು. ಇವರು ಜಮೀನ್ದಾರರ ಮಗನಿಗೆ ಸಿಕ್ಕುವ ಎಲ್ಲ ಸುಖಃ ಸಂತೋಷಗಳಿಗೆ ಒಡ್ಡಿಕೊಂಡಿದ್ದರಾದರೂ ಅದರ ಆಚೆಗೆ ಬಂದವರು. ಶ್ರೀ ಕೆ.ರಾಮದಾಸರು ನಿರಾಶ್ರಿತರಾಗಿ ಮೈಸೂರಿನಲ್ಲಿ ಸಿಕ್ಕಾಗ ಆಶ್ರಯ ಕೊಟ್ಟು ದಾರಿ ತೋರಿದವರು ಇವರೇ. ಇವರು ಸೊಗಸುಗಾರರು, ಯಾವಾಗಲೂ ಠಾಕು ಠೀಕಾದ ವೇಷಭೂಷಣಿಗರು. ತಲೆಗೆ (ಆಗ ನೆತ್ತಿ ಮೇಲೆ ಕೂದಲಿತ್ತು) ಸುಗಂಧದೆಣ್ಣೆ ಪೂಸಿಕೊಂಡು ಕಾಲೇಜಿನ ದಿನಗಳಲ್ಲಿ ತಿರುಗಾಡಿದವರು. ನಾನೇ ನೋಡಿದ್ದು ಇವರು ಸ್ನಾನವಾದ ಕೂಡಲೆ ತಲೆ ಬಾಚಿ ಆ ಟವಲ್ಲಿನ ಅಂಚಿನ ಕುಚ್ಚಿನಲ್ಲಿ ಬಾಚಣಿಗೆಯನ್ನು ಸ್ವಚ್ಛ ಮಾಡೇ ಇಡುತ್ತಿದ್ದರು. ಅಷ್ಟು ಶಿಸ್ತಿನವರು. ನವಿರಾಗಿ ನಾಲಗೆಯಿಂದ ತುಟಿ ಸವರಿಕೊಳ್ಳುತ್ತಿರುತ್ತಿದ್ದರು. ಹೀಗಾಗಿಯೇ ತೇಜಸ್ವಿಯು, “ನೀನೊಬ್ಬ ಬೊಂಬಾಯಿ ಸೂಳೆ ಕಣೋ” ಎಂದು ಹಾಸ್ಯ ಮಿಶ್ರಿತ ಬೈಗುಳ ಕೊಡುತ್ತಿದ್ದರು.
ಸುಂದರೇಶ್ ಒಂದು ದಿವಸ ಆಕಸ್ಮಿಕವಾಗಿ ಸಂಕಟಕ್ಕೆ ಸಿಲುಕಿ ಕೊಂಡರು. ಶ್ರೀರಾಂರ ಹೆಗ್ಗಳಿಕೆ ಏನಪ್ಪಾಂದ್ರೆ ಕೆಲವರನ್ನು ನೋಡನೋಡುತ್ತಿದ್ದಂತೆ ಅವರ ಜಾತಕ ಲಕ್ಷಣ ಹೇಳುವುದು. ತೇಜಸ್ವಿಗೆ ಯಾವಾಗಲೂ ಇದರ ಬಗ್ಗೆ ಮೆಚ್ಚುಗೆಯಿತ್ತು. ಲಕ್ಷಣವಂತೆಯಂತೆ ಕಂಡ ಹೆಂಗಸನ್ನು ಕೂಡಲೇ ಅವಲಕ್ಷಣದ ಸೂಚನೆ ಕೊಟ್ಟು ಬಿಡುತ್ತಿದ್ದರಂತೆ. ಯಾರನ್ನು ನೋಡಿದರೂ (ಹೆಂಗಸರು) ಹೀಗೆಳೆಯುವುದೇ ಎಂದು ಇವರನ್ನು ಗೆಳೆಯರು ಚುಡಾಯಿಸುತ್ತಿದ್ದರು. ಒಂದು ಸಂಜೆ ಗೀತಾ ಬುಕ್ ಸ್ಟಾಲ್ ಎದುರು ಹಳೆ ಬಸ್ ಸ್ಟಾಂಡ್ ಹತ್ತಿರ (ಈಗ ಅಲ್ಲಿನ ಬಿಲ್ಡಿಂಗ್ ಎಲ್ಲವೂ ಬದಲಾಗಿದೆ) ವಿಷ್ಣು ಭವನದಲ್ಲಿ ಸೊಗಸಾದ ಮಸಾಲೆ ದೋಸೆ ತಿಂದು ಈ ಇಬ್ಬರು ಗೆಳೆಯರು ಸುಂದರೇಶ್ ಮುಂದೆ ಶ್ರೀರಾಂ ಹಿಂದೆ ರಸ್ತೆ ದಾಟುತ್ತಿರಬೇಕಾದರೆ ನಡುವಯಸ್ಸಿನ ಹೆಂಗಸೊಬ್ಬಳು ಬಂದು ಲಪ್ಪೆಂದು ಬಿಗಿಯಾಗಿ ಸುಂದರೇಶ್ ಕೈ ಹಿಡಿದಳು. ಇಬ್ಬರು ಗೆಳೆಯರು ಅನಿರೀಕ್ಷಿತ ನಡವಳಿಕೆಯಿಂದ ತತ್ತರಿಸಿದರು. ಆಗ ಶ್ರೀರಾಂ ಅಕ್ಷರಶಃ ಅವಳ ಕೈ ಕಿತ್ತು ಹಾಕಿ ನೋಡಿದರೆ ಸುಂದರೇಶ್ ಮುಖವೆಲ್ಲ ಕೆಂಪೇರಿ ಬೆವರುತ್ತಿದ್ದರಂತೆ. ಅಲ್ಲದೆ ಸರ ಸರನೆ ರಸ್ತೆ ದಾಟುತ್ತಿದ್ದಾರೆ ! ಇದಕ್ಕೂ ಮೀರಿ “ನನ್ನ ಮರೆತು ಬಿಟ್ರಾ ಅಣ್ಣಾ” ಎಂದು ಬೊಬ್ಬಿಡುತ್ತಾ ಓಡೋಡಿ ಬಂದು ಅವಳು ಸಮೀಪಿಸುತ್ತಿದ್ದಾಳೆ. ಇದೇನೋ ವಿಚಿತ್ರ ಪ್ರಸಂಗವಿರಬೇಕೆಂದು ಅರಿತ ಶ್ರೀರಾಂ ಶೀಘ್ರ ಕಾರ್ಯೋನ್ಮುಖರಾದರು. ಅಲ್ಲೆ ಇದ್ದ ಮೈಸೂರು ಪ್ರಸಿದ್ದಿಯ ಟಾಂಗಾದಲ್ಲಿ ಸುಂದರೇಶನನ್ನು ಕೂರಿಸಿ ಸಾಗಹಾಕಿದರು. ಇವಳಾರವಳೆಂದು ಕುತೂಹಲದಿಂದ ನೋಡಿದರೆ ಇವಳೂ ನಾಪತ್ತೆ. ಕೂಡಲೇ ಬೇರೊಂದು ಟಾಂಗಾ ಹತ್ತಿ ಸುಂದರೇಶರ ಕ್ಷೇಮ ವಿಚಾರಿಸಲು ಹಾಸ್ಟಲ್ಲಿಗೆ ಹೋದರೆ ಅಲ್ಲಿ ಇಲ್ಲ. (ಸುಂದರೇಶ್ ಗಾಬರಿಯಾಗಿ ಓರಿಯಂಟಲ್ ಲೈಬ್ರರಿ ಹತ್ತಿರನೇ ಇಳಿದು ಕೊಂಡರಂತೆ, ಅವಳು ಹಾಸ್ಟಲಿಗೂ ವಕ್ಕರಿಸಿದರೆ ಅಂತೇನೋ!) ವಾರದ ಹಿಂದೆ ಉಳಿದುಕೊಂಡಿದ್ದ ರೂಮಿನಲ್ಲಿ ವಿಚಾರಿಸಿದರೆ ಅಲ್ಲೂ ಇಲ್ಲ. ರಾತ್ರಿಯಲ್ಲ ತಡಕಾಡಿದರೂ ಸುಂದರೇಶ ಸಿಗಲಿಲ್ಲ. ಗಾಬರಿ ಇನ್ನೂ ಹೆಚ್ಚಾಯಿತು. ಇದೇನೋ ನಿಗೂಢವಾದದ್ದೆಂದು ಕಂಗಾಲು, ಸುಂದರೇಶರವರು ನೂರಡಿ ರಸ್ತೆಯಲ್ಲಿನ ಒಂದು ಪ್ರಖ್ಯಾತ ಹೋಟೆಲಿನಲ್ಲಿ ಗಟ್ಟಿ ಚಟ್ನಿ ಇಡ್ಲಿ ಕೊಡುತ್ತಾನೆಂದು ಪ್ರತಿದಿನ ಖಾತರಿಯಾಗಿ ಅಲ್ಲಿಗೆ ತಿಂಡಿ ತಿನ್ನಲು ಬರುತ್ತಿದ್ದರೆಂದು ಹೋಗಿ ನೋಡಲಾಗಿ ಅಲ್ಲೂ ಬಂದಿಲ್ಲ. ಏನಾಗಿರಬಹುದೆಂದು ಕಣ್ಣು ಮುಚ್ಚಿ ಊಹಿಸಲೂ ಸಾಧ್ಯವಾಗಲಿಲ್ಲವಂತೆ ಶ್ರೀರಾಂಗೆ. ಚಿಂತಾಕ್ರಾಂತರಾಗಿ ಎರಡು ದಿನ ಪೂರ್ತಿ ತಿರುಗಾಡಿದ ನಂತರ ನೂರಡಿ ರಸ್ತೆಯಲ್ಲೆ ಸುಂದರೇಶ್ ಸಿಕ್ಕಿ ನಿಟ್ಟುಸಿರು ಬಿಟ್ಟರಂತೆ.
ಹಲವು ದಿನಗಳ ಹಿಂದೆಯಷ್ಟೇ ಈ ಸುಂದರೇಶ್ ಗಟ್ಟಿ ಚಟ್ನಿ ಇಡ್ಲಿ ತಿಂದು ಬೆಳಗಿನ ನಾಷ್ಟಾ ಮಾಡಿ ಹೊರಗೆ ಬಂದಾಗ ಶಿವಮೊಗ್ಗದವನಾದ ನಾರಾಯಣಮೂರ್ತಿಯೆಂಬ ಪೊಲೀಸ್ ಪೇದೆಯೊಬ್ಬ ತನ್ನ ಹೆಂಡತಿ ಎಂದು ತನ್ನ ಪಕ್ಕದಲ್ಲಿದ್ದವಳನ್ನು ಪರಿಚಯಿಸಿದನು. ಒಂದೇ ಊರಿನವರೆಂಬ ಸಲುಗೆ ಸಂತೋಷದಿಂದ ಸಲಾಂ ಮಾಡಿ ಮಾತುಕತೆಯಾಡಿ ಬೀಳ್ಕೊಟ್ಟಿದ್ದರಂತೆ ಸುಂದರೇಶ್. ವಾರ ಕಳೆಯುವಷ್ಟರಲ್ಲಿ ಸುಂದರೇಶ್ ಎಂದಿನಂತೆ ತಿಂಡಿ ತಿಂದು ಆಚೆ ಬಂದಾಗ ಅದೇ ಹೆಂಗಸು ಮೂರ್ಛೆ ಹೋದಂತಾದಳು. ಏನು ಬವಣೆಯೂ ಏನೋ ಎಂದು ಜೇಬಿನಲ್ಲಿದ್ದಷ್ಟು ಹಣ ಕೊಟ್ಟು ಸಹಾಯ ಮಾಡಿದರು. ಇನ್ನೊಂದು ವಾರ ಕಳೆಯುವಷ್ಟರಲ್ಲೇ ರಸ್ತೆ ದಾಟುವಾಗ ನಡೆದದ್ದು ಸ್ಪಷ್ಟವಾಗಿ ತಾನು ಬ್ಲಾಕ್ ಮೇಲಿಗೆ ಒಳಗಾಗುತ್ತಿರುವ ಲಕ್ಷಣಗಳ ಅರಿವಾಯಿತು. ಕೂಡಲೇ ಪೊಲೀಸ್ ಠಾಣೆಗೆ ಹೋದರು. ಅಲ್ಲಿ ಮತ್ತೊಬ್ಬ ಶಿವಮೊಗ್ಗದವರಾದ ಪೊಲೀಸ್ ಇನ್ಸ್‌ಪೆಕ್ಟರ್ ಕೂತಿದ್ದರು. ಅವರಿಗೆ ಈ ಪೇದೆಯ ಮರ್ಜಿಯಲ್ಲ ಗೊತ್ತಿದ್ದರಿಂದ ಕೂಡಲೇ ಕಾರ್ಯಪ್ರವೃತ್ತರಾಗಿ ಮೈಸೂರನ್ನೆಲ್ಲಾ ಜಾಲಾಡಿ ಆ ಪೇದೆಯನ್ನೂ ಹೆಂಡತಿಯೆಂಬ ಹೆಂಗಸನ್ನು ಪತ್ತೆ ಮಾಡಿಸಿದರಂತೆ. ಹೀಗೆ ತೊಂದರೆ ಹಿಂಸೆ ಕೊಡುವುದಿಲ್ಲವೆಂದು ಅವರಿಬ್ಬರ ಹತ್ತಿರ ಮುಚ್ಚಳಿಕೆ ಬರೆಸಿಕೊಂಡು ತಮ್ಮ ಹಾಸ್ಟೆಲ್ ರೂಮಿಗೆ ಹಿಂತಿರುಗಿದಾಗ ಸರಿರಾತ್ರಿ ಒಂದು ಘಂಟೆ ಕಳೆದಿತ್ತಂತೆ. ಈ ಎಲ್ಲ ವಿವರಣೆ ಹೇಳಿ ನಿರುಮ್ಮಳರಾದರಂತೆ ಸುಂದರೇಶ್.
ಈ ಪ್ರಸಂಗವನ್ನೇ ಆಧರಿಸಿ ತೇಜಸ್ವಿ ನಾಟಕ ರಚಿಸಲು ಸಿದ್ದರಾಗಿದ್ದರಂತೆ ಕೂಡ. ಕನ್ನಡಿಗರ ದುರಾದೃಷ್ಟದಿಂದ ಬರೆಯಲಿಲ್ಲವೆನ್ನುತ್ತಾರೆ ಶ್ರೀರಾಂರವರು.
‘ಚಿತ್ರಕೂಟದಲ್ಲಿ’ ನಮ್ಮ ಮದುವೆ ಸಿದ್ದತೆ ನಡೆಯುತ್ತಿದ್ದಾಗ ಈ ಆಪ್ತ ಗೆಳೆಯರು ಜಗ್ಗಿ ಜಗ್ಗಿ ಜಗ್ಗಿಸಿದ ಸಂಭ್ರಮಿಸಿದ ಕ್ಷಣಗಳ ನೆನಪಿನಾಳದಿಂದ ತೆಗೆದದ್ದು ಇವು.
ಕನಸಿನಮನೆಯ ಮುದ್ದುನಾಯಿಗಳು
ಕಾಡಿನ ಮಧ್ಯೆ ನಮ್ಮ ಕನಸಿನ ಮನೆ ಇರುವುದು. ಈ ಮನೆಯ ಕನಸಿನ ರಾಜಕುಮಾರ ಬೈ ಇಷ್ಟು ಬೇಗ ಹೇಳಬೇಕಿತ್ತೆ? ಬಿಡಿಸಲಾಗದ ಕಗ್ಗಂಟು ಇದೇ. ಈ ರಹಸ್ಯನೂ ತಗೊಂಡೇ ಹೋಗಿದ್ದಾರೆ. ನಾನೆಲ್ಲಿ ಹುಡುಕಿಕೊಂಡು ಬರಲಿ ಇವರನ್ನು?
ನಮ್ಮ ಮನೆಯ ಪಕ್ಕದಲ್ಲೇ ಒಂದು ಸಣ್ಣ ಹಳ್ಳ ಹರಿಯುತ್ತೆ. ಇದು ಹುಟ್ಟುವುದೇ ನಮ್ಮ ತೋಟದಲ್ಲಿ. ಇದರ ಜುಳುಜುಳು ಹರಿವ ನಿನಾದ ನಮ್ಮ ಕಿವಿಗೆ ಬೀಳಬೇಕೆಂದೇ ತಗ್ಗಿನಲ್ಲಿ ಹಳ್ಳದ ಪಕ್ಕದಲ್ಲಿ ಮನೆ ಕಟ್ಟಿಕೊಂಡೆವು. ಅಣ್ಣ (ಕುವೆಂಪು) ಇಲ್ಲಿಗೆ ಬಂದಾಗ ಈ ಸದ್ದು ಕೇಳಿಸಿಕೊಂಡು ಸಂತೋಷಪಡುತ್ತಿದ್ದರು. ಮನೆಯ ಹಾಲಿನ ನಾಲ್ಕು ಗೋಡೆಗೂ ದೊಡ್ಡದೊಡ್ಡ ಗಾಜಿನ ಕಿಟಕಿಗಳಿಂದ ಕನ್ನಡಿ ಹಾಲು ಆಗಿತ್ತು. ಅಲ್ಲಿ ಕುಳಿತು ಎದುರು ಪಶ್ಚಿಮಕ್ಕೆ ಗುಡ್ಡಕಾಡು ನೋಡುವುದಕ್ಕೆ ಬಹಳ ಸೊಗಸಾಗಿತ್ತು. ಈಗ ಆ ಕಡೆಯ ಮರಗಳೂ, ಬಿದಿರುಗಳೂ ದೊಡ್ಡದಾಗಿ ಬೆಳೆದು ಗುಡ್ಡ ಮರೆಯಾಗಿದೆ. ಆದರೆ ಗುಡ್ಡದ ತಳದಲ್ಲೇ ಇದೆಯೆಂಬಂತೆ ಅಲ್ಲೊಂದು ದೊಡ್ಡಕೆರೆ. ಮೂವತ್ತು ವರ್ಷದ ಹಿಂದೆ ನಾವೇ ನಿರ್ಮಿಸಿದ್ದು. ಈ ಕೆರೆ ನಿರಂತರ ಆಕರ್ಷಿಸುತ್ತೆ ನಮ್ಮನ್ನೂ, ಮಕ್ಕಳನ್ನೂ. ಕೆರೆಯ ತುಂಬ ಮೀನುಗಳು. ಮಂಡಕ್ಕಿ ಹಾಕಿದರೆ ಹತ್ತಿರಕ್ಕೆ ಬರುತ್ತವೆ. ಈ ಮೀನುಗಳನ್ನು ಹಿಡಿದು ಮೊಮ್ಮಗಳ ಕೈಲಿ ಮುಟ್ಟಿಸಿ ಮತ್ತೆ ಕೆರೆಗೆ ಬಿಡುತ್ತಿದ್ದರು. ಅಡುಗೆ ಮಾಡಲು ಎಂದೂ ಇವನ್ನು ಹಿಡಿಯುತ್ತಿರಲಿಲ್ಲ. ಈ ಕೆರೆಯಲ್ಲಿ ಎರಡು ನವಿಲು ಬಣ್ಣದ ಕೊರಳಿದ್ದ ಬಾತು ಕೋಳಿಗಳನ್ನು ಸಾಕಿದ್ದೆವು. ಪ್ರಕೃತಿ ಹೇಗೆ ಕಲಿಸುತ್ತೋ ಇವಕ್ಕೆ. ಇವೆರಡೂ ಜೋಡಿಯಾಗಿ ಒಂದೇ ಅಂತರದಲ್ಲಿ ಈಜುತ್ತಿದ್ದವೆಲ್ಲ. ಅದು ಹೇಗೆ. ಅವನ್ನು ನೋಡುತಿದ್ದರೆ ಕಣ್ಣಿಗೆ ಹಬ್ಬ.
ನಮ್ಮ ನಾಯಿ `ಕಿವಿ` ಕನ್ನಡ ಜಗತ್ತಿಗೇ ಪರಿಚಯ. ಅನೇಕ ವರುಷಗಳ ನನ್ನ ಅದರ ಗೆಳೆತನ ಅಲ್ಲಿ ಯಾರಿಗೂ ಸುಲಭವಾಗಿ ಅರ್ಥವಾಗದಂಥದಾಗಿತ್ತು. ಬೇಟೆಯಾಡುವುದರಲ್ಲಿ ಅದೊಂದು ನಿಸ್ಸೀಮ ನಾಯಿಯಾಗಿತ್ತು. ನನ್ನೊಡನೆ ಪುಟ್ಟ ಮರಿಯಾದಾಗಿನಿಂದ ಬೆಳೆದು ಬಂದು ಅದಕ್ಕೆ ನಡವಳಿಕೆಯ ಅರಿವು ಚೆನ್ನಾಗಿ ಪರಿಚಯವಿತ್ತು. ಹೆಚ್ಚು ಕಡಿಮೆ ಮಾತನ್ನು ಅಸ್ಪಷ್ಟವಾಗಿ ಅರ್ಥಮಾಡಿಕೊಳ್ಳುವಷ್ಟು ಕುಶಾಗ್ರಬುದ್ಧಿ ಬೆಳೆದಿತ್ತು. ನಮ್ಮ ಮನೆಯಲ್ಲಿ ಅದನ್ನು ಪ್ರಾಣಿ ಎಂದು ಯಾರೂ ಪರಿಗಣಿಸಿಯೇ ಇರಲಿಲ್ಲ ತೇಜಸ್ವಿ ಕರ್ವಾಲೋದಲ್ಲಿ `ಕಿವಿ` ಬಗ್ಗೆ ಹೇಳಿರುವ ಮಾತಿದು.
ಇಲ್ಲಿ ಮನೆ ಸುತ್ತ ಕಾಡಿರುವುದರಿಂದ ತರತರದ ಹಕ್ಕಿಗಳ ಉಲಿವು ನಿರಂತರ. ಬೆಳಿಗ್ಗೆ ಆರು ಗಂಟೆಗೇ ನನ್ನ ಲಾನ್ನಲ್ಲಿ ಕಳೆ ಕೀಳಲು ಶುರುಮಾಡಿದಾಗ ನನಗೆ ಕಿವಗಡಚಿಕ್ಕುವ ಸದ್ದು ಈ ಹಕ್ಕಿಗಳದ್ದು. ನಮ್ಮ ಸಹನಾಡಿಗಳಾಗಿ ಈ ಹಕ್ಕಿಗಳು ಇದ್ದರೂ `ಕಿವಿ` ಹೋದ ಮೇಲೆ ಸ್ಪಾನಿಯಲ್ ಜಾತಿ ನಾಯಿಯೇ ನಮ್ಮ ಒಡನಾಡಿಯಾಗಬೇಕೆನ್ನಿಸಿತು. ನಮ್ಮ ಮಕ್ಕಳು ಸುಸ್ಮಿತ ಮತ್ತು ಈಶಾನ್ಯೆ ಬೆಂಗಳೂರಿನಲ್ಲಿ ಕಾಕರ್ ಸ್ಪಾನಿಯಲ್ ನಾಯಿ ಮರಿಯೊಂದನ್ನು ಪತ್ತೆ ಹಚ್ಚಿದರು. ಕೊಂಡು ತಂದುಕೊಟ್ಟರು. ನಾಯಿಮರಿಗಳನ್ನು ಸಾಕುವಾಗ ಮಕ್ಕಳಂತೆಯೇ ನೋಡಿಕೊಳ್ಳಬೇಕು. ಆಗಲೇ ಪ್ರಾಣಿಗಳ ಬಗ್ಗೆ ಮಮತೆಯುಂಟಾಗುವುದು ಮತ್ತು ನಾಯಿಗಳೂ ನಮ್ಮ ಬದುಕಿನಲ್ಲಿ ಬೆಸೆಯುತ್ತವೆ. ಈ ನಾಯಿ ಮರಿಗೆ `ಮರಿ` ಎಂದು ಹೆಸರಿಟ್ಟರು ಇವರು. ಈ `ಮರಿ` ಬರುವ ಹೊತ್ತಿಗೆ ಇವರು ಶಿಕಾರಿಗೆ ಹೋಗುವುದನ್ನು ಸಂಪೂರ್ಣವಾಗಿ ತ್ಯಜಿಸಿದ್ದರು. ಹಾಗಾಗಿ ಇದು ಬೆಳೆದಿದ್ದೆ ಬೇರೆಯ ತೆರನಾಗಿ. ಒಂದು ರೀತಿಯ ಪೆಟ್ ಡಾಗ್. ನಮ್ಮೆಲ್ಲರ ಅಚ್ಚುಮೆಚ್ಚಿನ ನಾಯಿ ಮರಿಯಾಗಿತ್ತು. ಇವರೊಟ್ಟಿಗೆ ತಿರುಗಾಡಲಿಕ್ಕೆ ಸದಾ ಜೊತೆಯಲ್ಲಿ ಹೋಗುತ್ತಿತ್ತು.
ನಮ್ಮ ತೋಟದ ಪ್ರತಿಯೊಂದು ಕಾಫಿಗಿಡಗಳಿಗೂ ಇವರ ಸ್ಪರ್ಷವಿತ್ತೆಂದೇ ಹೇಳಬಹುದು. ಆರೈಕೆ ಮತ್ತು ಕೆಲಸದ ಬಗೆಗಿನ ನಿಗ ಎಲ್ಲವನ್ನೂ ಪೂರ್ಣವಾಗಿ ನಡೆಸುತ್ತಿದ್ದರು. ನಮ್ಮಲ್ಲಿ ಮಾರ್ಚ ತಿಂಗಳ ಸಮಯದಲ್ಲಿ ತೋಟಕ್ಕೆ ಸ್ಪ್ರಿಂಕ್‌ಲರ್ ಹಾಕುತ್ತಾರೆ. ಇವರು `ಮರಿ` ಜೊತೆ ಸ್ಪ್ರಿಂಕ್‌ಲರ್ ಜೋಡಿಸಿಲು ಹೋಗಿದ್ದಾಗ ನಮ್ಮ ಬೇಲಿ ಪಕ್ಕದ ದೊಡ್ಡ ಬಯಲಿನಲ್ಲಿ ಒಂದು ಕ್ರಿಕೆಟ್ ಮ್ಯಾಚು ನೆಡೆಯುತ್ತಿತ್ತು. ಮೂಡಿಗೆರೆ ಟೌನ್‌ರವರು ಅನೇಕ ಟೀಂಗಳನ್ನು ಕಟ್ಟಿಕೊಂಡು ಬಂದು ಇಲ್ಲಿ ಕ್ರಿಕೆಟ್ ಟೂರ್ನಮೆಂಟ್ ಭಾರೀ ಜೋರಾಗಿ ನಡೆಸುತ್ತಾರೆ. ಸಿಕ್ಸರ್ ಎತ್ತಿದಾಗ, ಬೌಂಡ್ರಿ ಹೊಡೆದಾಗ ಮೈಕಿನಲ್ಲಿ ಕೂಗಾಟವೂ ಜೋರು. ಮನೆವರೆಗೂ ಕೇಳಿಸುತ್ತಿತ್ತು. ಇವರು `ಮರಿ` ಜೊತೆ ಹೋಗಿದ್ದಾಗ `ಮರಿ` ಕ್ರಿಕೆಟ್ ಮೈದಾನಕ್ಕೆ ಹೋಗಿ ಯಾರೋ ಬೌಂಡ್ರಿಗೆ ಅಟ್ಟಿದ್ದ ಚೆಂಡನ್ನು ಫೀಲ್ಡರ್‌ಗಿಂತ ಮುಂಚೆ ಓಡಿಹೋಗಿ ಕಚ್ಚಿಕೊಂಡು ಕಾಡೊಳಗೆ ಚೆಂಡು ಬಚ್ಚಿಟ್ಟು, ಇವರ ಹತ್ತಿರ ಬಂದಿತು. ಮರಿಯ ಬಾಯಲ್ಲಿ ಚೆಂಡನ್ನು ನೋಡಿದ ಪ್ಲೇಯರ್‌ಗಳು `ಮರಿ` ಚೆಂಡು ಕಚ್ಚಿಕೊಂಡು ಹೋಯಿತೆಂದು ಅಟ್ಟಿಸಿಕೊಂಡು ಇವರ ಹತ್ತಿರ ಬಂದರು. ಚೆಂಡು ಎಷ್ಟು ಹುಡುಕಿದರೂ ಸಿಕ್ಕಲಿಲ್ಲ. ಚೆಂಡಿನ ದುಡ್ಡು ಮೂವತ್ತಾರು ರೂಪಾಯಿ ಕೊಟ್ಟು ಕಳಿಸಿದರು.
ಈ ಮರಿಗೆ ಮೂಡಿಗೆರೆಯಲ್ಲಿ ಏರ್ಪಡಿಸಿದ್ದ ಡಾಗ್ ಷೋಗೆ ಇವರಿಗೆ ಇಷ್ಟವಿಲ್ಲದಿದ್ದರೂ ನಮ್ಮ ಈಶಾನ್ಯೆ ಸಹಾಯದಿಂದ ಕರೆದೊಯ್ದಿದ್ದೆ. ಮೊದಲ ಬಹುಮಾನ ಪಡೆಯಿತು. ಈ `ಮರಿ` ಹನ್ನೆರಡು ವರುಷ ನಮಗೆ ಕಂಪನಿಕೊಟ್ಟು ತೀರಿಕೊಂಡಿತು. ಮತ್ತೆ ನಮ್ಮಿಬ್ಬರು ಮಕ್ಕಳು ಬೆಂಗಳೂರನೆಲ್ಲ ಜಾಲಾಡಿ ಯಾರೋ ಪಶುವೈದ್ಯರ ಮುಖಾಂತರ ಮರಿಯಂತದ್ದೇ ನಾಯಿಮರಿಯನ್ನು ಕೊಂಡು ತಂದು ಕೊಟ್ಟರು. ಈ ನಾಯಿ ಮರಿ ಯಾರೋ ಎಕ್ಸ್ ಸರ್ವಿಸ್‌ನವರ ಮನೆಯಿಂದ ಇನ್ನೇನು ಬೊಂಬಾಯಿಗೆ ವಿಮಾನದಲ್ಲಿ ಜಿಗಿಯಲು ಸಿದ್ಧವಾಗುತ್ತಿತ್ತು. ನಮ್ಮ ಮನೆಯ ಜೂನಿಯರ್ ಮರಿಯಾಯಿತು. ಬಹಳ ಮುದ್ದಾದ ಮರಿ. ಎಂತಹವರಿಗೂ ಇದರ ಜೊತೆ ಆಡಬೇಕೆನ್ನುವ ಆಸೆ ಹುಟ್ಟಿಸುತ್ತಿತ್ತು. ಹೊರಗಿನ ಮಕ್ಕಳು ಇದನ್ನು ನೋಡಲೆಂದೇ ಬರುತ್ತಿದ್ದರು. ತುಂಬಾ ಕಟ್ಟುಮಸ್ತಾಗಿ ಬೆಳೆಯಿತು. ಎಲ್ಲರ ಅಚ್ಚುಮಚ್ಚಿನ ಮರಿಯಾಯಿತು. ಇದೂ ನಮ್ಮ ಮಾತನ್ನು ಅಸ್ಪಷ್ಟವಾಗಿ ಅರ್ಥಮಾಡಿಕೊಳ್ಳುವುದು ಕಲಿಯಿತು. ಆದರೆ ಕೆಟ್ಟ ಚಾಳಿಯೊಂದನ್ನು ಬೆಳೆಸಿಕೊಂಡಿತು. ಯಾವಾಗಲೂ ತೋಟದಾಚೆಗೆ ಹೋಗಲು ಯತ್ನಿಸುತ್ತಿತ್ತು. ಈ ಜಾತಿ ನಾಯಿಗಳೆ ಹಾಗೆಂದು ಎಲ್ಲೊ ಒಂದು ಕಡೆ ಓದಿದ ನೆನಪು. ಒಂದು ದಿವಸ ಈ ಮರಿ ಪತ್ತೆನೇ ಇಲ್ಲ. ಎಲ್ಲಿ ಹುಡುಕಿದರೂ ಸಿಕ್ತಿಲ್ಲ. ಕೊನೆಗೆ ಸುದ್ದಿ ಬಂತು. ನಮ್ಮ ತೋಟದಿಂದ ತುಸುದೂರದಲ್ಲಿ ದಾರಿ ಮಧ್ಯೆ ನಿಂತಿತ್ತಂತೆ. ಒಂದು ಅಂಬಾಸಿಡರ್ ಕಾರಿನವರು ನಿಲ್ಲಿಸಿ ಬಾಗಿಲು ತೆಗೆದು ಹತ್ತು ಬಾ ಎನ್ನಲು ಹತ್ತಿಕೊಂಡು ಹೋಯಿತಂತೆ. ಅವರ ತೋಟದ ಮನೆಗೆ ಇವರು ಹೋಗಿ ಸ್ಕೂಟರ್ ಹತ್ತು ಬಾ ಎಂದರು. ಹತ್ತಿತು. ಕರೆದುಕೊಂಡು ಬಂದರು.
ಹೀಗಾಗಿಯೇ ಇವರ ಕಣ್ಣ ಮುಂದೆಯೇ ಇರುವಂತೆ ನೋಡಿಕೊಳ್ಳುತ್ತಿದ್ದರು. ಸ್ಕೂಟರ್ ಸ್ಟಾರ್ಟ್ ಮಾಡಿದ ಸದ್ದು ಕೇಳಿದ ಕೂಡಲೇ ಬರುವಂತೆ ಅಭ್ಯಾಸ ಮಾಡಿದ್ದರು. ಎಲ್ಲೇ ಇದ್ದರೂ ಯಾರಿಗಾದರೂ ಡಿಕ್ಕಿಕೊಟ್ಟರೂ ಮನುಷ್ಯರಿರಬಹುದು ಮರದ ತುಂಡಿರಬಹುದು ಒಂದೇ ಉಸಿರಿನಲ್ಲಿ ಓಡಿ ಬಂದು ಇವರನ್ನು ಸೇರಿಕೊಳ್ಳುತ್ತಿತ್ತು.
ಸಂಜೆ ಹೊತ್ತು ನನ್ನ ಜೊತೆಯಲ್ಲೇ ಮನೆ ಒಳಗೇ ಓಡಾಡಿಕೊಂಡಿರುತ್ತಿತ್ತು. ನಾನು ನಮ್ಮ ಹಾಸಿಗೆ ಮಾಡುವಾಗ ಮಲಗುವ ಕೋಣೆ ಒಳಗೆ ಬರದೆ ಬಾಗಿಲ ಪರದೆ ಮಧ್ಯೆ ಮುಖ ತೂರಿಸಿ ಪಿಳಿಪಿಳಿ ಕಣ್ಣು ಬಿಡುತ್ತಾ ನಾನು ಅತ್ತಿತ್ತ ಸರಿದಾಗ ಅದೂ ಮುಖ ಸರಿದಾಡಿಸುತ್ತಿತ್ತು. ಆಮೇಲೆ ಮಹಡಿ ಮೇಲೆ ಕಂಪ್ಯೂಟರ್ ಮುಂದೆ ಕೂತಿರುತ್ತಿದ್ದ ಇವರ ಪಕ್ಕದಲ್ಲಿ ಮೂಲಗಿಸುತ್ತಾ ಕುಳಿತಿರುತ್ತಿತ್ತು.
ಮೂರು ವರ್ಷದ್ದು ಮರಿ ತುಂಬ ಚೆನ್ನಗಾಯ್ತು. ಒಂದು ದಿನ ಎಷ್ಟು ಕರೆದರೂ ಬರಲೇ ಇಲ್ಲ. ಇವರು ಉದ್ವೇಗಗೊಂಡರು. ತಕ್ಷಣ ರಸ್ತೆಗೆ ಹೋಗಿರಬೇಕೆಂದೆಣಿಸಿ ಸ್ಕೂಟರ್ ಹತ್ತಿ ಹುಡುಕಿಕೊಂಡು ರಸ್ತೆಗೆ ಹೋದರು. ಈ ಮರಿ ತೋಟದ ಮೂಲೆಯಲ್ಲಿತ್ತೆಂದು ತೋರುತ್ತೆ. ಇವರನ್ನು ತಲುಪಬೇಕೆನ್ನುವ ಒಂದೇ ಉತ್ಕಟೆಯಲ್ಲಿ ಯಾವುದನ್ನೂ ಲೆಕ್ಕಿಸಿದೆ ರಸ್ತೆಗೆ ಮುನ್ನುಗಿತು. ಆಗ ಒಂದು ಲಾರಿ ಡಿಕ್ಕಿ ಹೊಡೆದು ಹೋಯಿತು. ಇವರು ಮರಿಯನ್ನು ಕೈಯಲ್ಲಿ ಎತ್ತಿಕೊಂಡರು. ಅಲ್ಲೇ ಕೊನೆ ಉಸಿರೆಳೆಯಿತು. ಮನೆಗೆ ತಂದರು. ನಮ್ಮ ರೈಟ್ರು ಶಿವ, ನಾನು ಅತ್ತೂ ಅತ್ತೂ ಸಾಕಾಯಿತು. ಇವರೇ ನಮ್ಮನ್ನು ಸಮಾಧಾನಮಾಡಬೇಕಾಯಿತು.
ಮರುದಿನ ನವೆಂಬರ್ ಫಸ್ಟ್, ಮೈಸೂರಿಗೆ ಹೋಗುವವರಿದ್ದೆವು. ಎಷ್ಟೋ ದೂರ ದಾರಿ ಸವೆಸಿದ್ದಾಗ ಅದು ಹೇಗೋ ಏನೋ ನಮ್ಮಿಬ್ಬರಿಗೂ ಒಂದೇ ಸಲ ಮರಿಯ ನೆನಪಾಯಿತು. ಇವರು ಕಾರು ಡ್ರೈವ್ ಮಾಡಕ್ಕಾಗ್ತಿಲ್ಲೆಂದು ಕಾರು ನಿಲ್ಲಿಸಿದರು. ನಾನು ಅಳುತ್ತಿದ್ದೆ.
ಮೈಸೂರಿನಿಂದ ಹಿಂತಿರುಗಿದಾಗ ತಿಳಿಯಿತು. ಎರಡು ಬಾತುಕೋಳಿಯನ್ನೂ ಯಾರೋ ಕದ್ದಿದ್ದರು. ನಮ್ಮ ಮಕ್ಕಳು ಮತ್ತೊಂದು ಮರಿ ತಂದುಕೊಡಲು ಸಿದ್ಧರಾದರು. ನಮಗೆ ವಯಸ್ಸಾಯಿತು. ನೋಡಿಕೊಳ್ಳುವುದು ಕಷ್ಟ. ಬೇಡೆಂದರು ಇವರು. ಲೋಕಲ್ ನಾಯಿಗಳನ್ನೇ ಸಾಕಿದ್ದೇವೆ ಈಗ.
ಕಾಲದ ಗಾಳಕ್ಕೆ ಸಿಕ್ಕ ಮೀನು
ತೇಜಸ್ವಿಗೆ, ಅಮ್ಮ ಅಣ್ಣ ನಮ್ಮ ತೋಟಕ್ಕೆ ಪದೇ ಪದೇ ಬರಲಿ ಎಂದು. ಕಾರಣಾಂತರದಿಂದ ಅಕಸ್ಮಾತ್ ಮೂರು ತಿಂಗಳು ಕಳೆದೂ ಬರಲಿಲ್ಲವಾದರೆ ಯಾರಿಗೇಂತ ನಾನು ಈ ತೋಟ ಮಾಡಬೇಕಿತ್ತು ಎಂದುಕೊಳ್ಳುತ್ತಿದ್ದರು. ಆಗೆಲ್ಲ ನಮ್ಮಲ್ಲಿ ಫೋನ್ ಇಲ್ಲದಿದ್ದ ಕಾಲ. ಹಾಗಾಗಿ ತಕ್ಷಣ ಕಾಗದ ಬರೆಯುತ್ತಿದ್ದರು.
ಅಮ್ಮ, ಅಣ್ಣ ಬರುತ್ತಾರೆಂದರೆ ನಮಗೆಲ್ಲಾ ಇನ್ನಿಲ್ಲದ ಸಂಭ್ರಮ. ಸುಸ್ಮಿತಾ ಈಶಾನ್ಯೆಯರಂತೂ ಅಜ್ಜಯ್ಯ ಅಜ್ಜಿ ಬರುವರೆಂಬ ಸುದ್ದಿ ಗೊತ್ತಾದ ಕೂಡಲೇ ಆಕಾಶಕ್ಕೇ ಹಾರಿ ಬೀಳುತ್ತಿದ್ದರು. ಅವರ ಮಮತೆ ಮಾತು ತುಂಬ ಸಿಹಿ. ಹೇರಳವಾಗಿ ಸಿಗುತ್ತಿತ್ತು ಮಕ್ಕಳಿಗೆ. ಜೊತೆಗೆ ಎಲ್ಲಿಗಾದರೂ ತಿರುಗಾಟಕ್ಕೆ ಹೋಗುವ ಸಂಭ್ರಮ. ಇನ್ನು ತಿಂಡಿ ತಿನಿಸು. ಅದುಬೇಕು. ಇದು ತಿನ್ನಿ. ಲೆಕ್ಕವಿಲ್ಲದಷ್ಟು. ಇವರಿಗೆ ಅಣ್ಣ ಬಂದಾಗ ಯಾವ್ಯಾವ ನದಿಗೆ ಮೀನು ಹಿಡಿಯಲು ಹೋಗಬೇಕು, ಎಲ್ಲೆಲ್ಲಿಯ ಗುಂಡಿಗೆ ಗಾಣ ಹಾಕಬೇಕು, ಏನು ಮೀನು ಸಿಗಬಹುದು ಲೆಕ್ಕಾಚಾರ ಹಾಕಿದ್ದೇ ಹಾಕಿದ್ದು. ಅಣ್ಣನವರಿಗೂ ಇವರಷ್ಟೇ ಉತ್ಸಾಹ. ವಯಸ್ಸಿದ್ದಿದ್ದರೆ ಇವರ ಜೊತೆಯಲ್ಲಿ ಹೊರಡುತ್ತಿದ್ದುದರಲ್ಲಿ ಅನುಮಾನವಿಲ್ಲ. ಎಲ್ಲವನ್ನೂ ವಿವರವಾಗಿ ಕೇಳಿಕೊಳ್ಳುತ್ತಿದ್ದರು. ಯಾವ ಗುಂಡಿಯಲ್ಲಿ ಹಿಡಿದೆ. ಏನು ಆಹಾರ ಹಾಕಿದ್ದೆ. ಎಷ್ಟೆಷ್ಟು ಸತಾಯಿಸ್ತು. ಯಾವ ಜಾತಿ ಮೀನು. ಎಷ್ಟು ತೂಕ ಹೀಗೆ, ಇತ್ಯಾದಿ.
ಇವರು ಮುಂಚೆಯೇ ಎಲ್ಲ ಸಲಕರಣೆ ಸಿದ್ಧ ಮಾಡಿಕೊಳ್ಳುತ್ತಿದ್ದರು. ತೋಟದಲ್ಲಿ ತಾವೇ ಅಗೆದು ಎರೆ ಹುಳು ತೆಗೆದಿಟ್ಟುಕೊಳ್ಳುತ್ತಿದ್ದರು. ಗಾಣ ಅಂದ್ರೆ ಉದ್ದನೆ ಫೈಬರ್ ಗ್ಲಾಸಿನ ಕೋಲುಗಳು ಫಿಷ್ಷಿಂಗ್ ರಾಡ್ ಇದಾವೆ ಎಂದು. ತುದಿಯಲ್ಲಿ ಟೇಪರಿಂಗ್ ಆಗಿರುತ್ತೆ ಸಣ್ಣಕ್ಕೆ. ಕೈ ಹಿಡಿಯುವಲ್ಲಿ ಸ್ವಲ್ಪ ದಪ್ಪಕ್ಕೆ ಇರುತ್ತೆ. ರಾಡ್ ತುದಿಗೆ ೪೦ ಎಂ.ಎಂ.ದು ನೈಲಾನ್ ದಾರ ಕಟ್ಟಿರುತ್ತಾರೆ. ಅವಕ್ಕೆ ಕೊಕ್ಕೆ ಅಂದರೆ ಗಾಣ ಕಟ್ಟಿರುತ್ತಾರೆ. ಇದಕ್ಕೆ ಕಟ್ಟುವ ಗಂಟುಗಳು ವಿಶಿಷ್ಟವಾದವು. ಸುಲಭಕ್ಕೆ ಬಿಚ್ಚಿಕೊಳ್ಳುವುದಿಲ್ಲ. ಎಷ್ಟು ತನ್ಮಯತೆಯಿಂದ ಈ ಗಂಟು ಹಾಕುತ್ತಿದ್ದರು ಇವರು! ನನಗೂ ಹೇಳಿಕೊಟ್ಟಿದ್ದರು. ಗಾಣಕ್ಕೆ ಎರೆಹುಳು ಅಥವಾ ಪುಡಿ ಮೀನು ಸುರಿದಿರುತ್ತಾರೆ. ಇದನ್ನು ಅನುಭವದಿಂದಲೂ ಅಂದಾಜಿನ ಮೇಲೂ ನದಿಯಲ್ಲಿ ಮೀನು ಸಿಗುವ ಗುಂಡಿ ಗೊತ್ತು ಮಾಡಿಕೊಂಡಿರುತ್ತಾರೆ. ಅಲ್ಲಿ ಗಾಣ ಹಾಕಿ ಕಾಯಬೇಕು.
ಇನ್ನೊಂದು ವಿಧಾನ. ಫೈಬರ್ ಗ್ಲಾಸ್ ಗಾಣದ ಕೋಲು ಇದೆ. ಇದಕ್ಕೆ ರಾಡ್ ಅಂಡ್ ರೀಲ್ ಎನ್ನುವರು. ಈ ರಾಡಿನ ಹಿಡಿಪಿನ ಹತ್ತಿರ ಒಂದು ರೀಲ್ ಫಿಕ್ಸ್ ಮಾಡಿರುತ್ತಾರೆ. ಇದಕ್ಕೆ ೪೦ಎಂ.ಎಂ. ನೈಲಾನ್ ದಾರ ಸುತ್ತಿರುತ್ತಾರೆ. ಈ ರಾಡ್ಗೆ ಅಲ್ಲಲ್ಲಿ ಸ್ಟೀಲ್ ಉಂಗುರ ಕೂರಿಸಿರುತ್ತಾರೆ. ಅದನ್ನು ಗೈಡ್ಸ್ ಅನ್ನುವರು ಇದರ ಮುಖಾಂತರ ದಾರ ತೂರಿಸುತ್ತಾರೆ. ದಾರದ ತುದಿಗೆ ೧೨ಸೆಂ.ನಷ್ಟು ಉದ್ದದ ೪೦ ಎಂ.ಎಂ.ಸ್ಟೀಲ್ ತಂತಿ ಕಟ್ಟಿರುತ್ತಾರೆ. ಈ ರೀತಿ ತುದಿ ಸುತ್ತಿ ಸಣ್ಣ ಗೋಲಿಯಷ್ಟು ದಪ್ಪದ ಸೀಸದ ತುಂಡು ತೂಕ್ಕಕ್ಕಾಗಿ ಕಟ್ಟಿರುತ್ತಾರೆ. ಸುತ್ತಿದ ತಂತಿಗೆ ಮತ್ತೊಂದು ೮ ಸೆಂ.ಉದ್ದದ ಸ್ಟೀಲ್ತಂತಿ ನೇತಾಡುವಂತೆ ಸುತ್ತಿರುತ್ತಾರೆ. ಈ ತಂತಿಗೆ ಆರೇಳು ಮುತ್ತಿನದೋ ಪ್ಲಾಸ್ಟಿಕ್‌ನದೋ ಮಣಿ ಪೋಣಿಸಿರುತ್ತಾರೆ. ಆಮೇಲೆ ಒಂದು ಚಮಚದಂತಿರುವ ಸ್ಟೀಲ್ ಸ್ಪಿನರ್ ಇದಕ್ಕೆ ಅಂಟಿಕೊಂಡಂತೆ ೨ ಸೆಂ.ಉದ್ದದ ಪ್ಲಾಸ್ಟಿಕ್ ಟ್ಯೂಬ್. ಅದರ ಮುಂದೆ ಮೂರು ಕೊಕ್ಕೆಯಿರುವ ಗಾಣ ಫಿಕ್ಸ್ ಆಗಿರುತ್ತದೆ.
ಈ ಸ್ಪಿನರ್ ಗಾಣಕ್ಕೆ ಯಾವ ಆಹಾರವನ್ನೂ ಸುರಿಯುವಂತಿಲ್ಲ. ಹರಿವ ನೀರಿಗೆ ಹಾಕುವ ಗಾಣ. ರೀಲ್ನಲ್ಲಿ ದಾರ ಸುತ್ತಿಕೊಂಡಿರುವುದರಿಂದ ಕೆರೆ ದಂಡೆಯಲ್ಲಿಯೋ ಹೊಳೆ ದಂಡೆಯಲ್ಲಿಯೋ ನಿಂತು ಎಷ್ಟು ದೂರಕೆ ಬೇಕಾದರೂ ಗಾಣವನ್ನು ಎಸೆಯಬಹುದು
ಅನಂತರ ರೀಲ್ಗೆ ದಾರ ವಾಪಾಸು ಸುತ್ತಿಕೊಂಡು ಬರುವಾಗ ಚಮಚದಂತಿರುವ ಸ್ಪಿನರ್ ಫಳ ಫಳ ಹೊಳೆಯುತ್ತ ಫ್ಯಾನ್ ಥರ ತಿರುತಿರು ತಿರುಗುತ್ತೆ. ಇದನ್ನು ಮೀನನ್ನು ಆಕರ್ಷಿಸುವ ಮಾಯೆ. ಮೀನು ಗಾಣ ಕಚ್ಚಲು ತಂತ್ರ.
ಈ ಸ್ಪಿನರ್ ಯುನಿಟ್ನ್ನು ಮೂವತ್ತು ವರ್ಷಗಳ ಹಿಂದೆ ನೂರಿಪ್ಪತ್ತು ರೂ.ಗೆ ಕೊಂಡು ತಂದಿದ್ದರು ತೇಜಸ್ವಿ. ಇಷ್ಟೊಂದು ದುಬಾರಿ ದುಡ್ಡು ತೆರಬೇಕೆಂಬುದೇ ಆಗಿನ ಯೋಚನೆ. ಅದನ್ನು ಸುಲಭಕ್ಕೆ ತಯಾರಿಸಬಹುದೆನ್ನುವ ತರ್ಕ. ಒಂದಿಡೀ ದಿನ ಅಕ್ಕಸಾಲಿಗನ ಪಕ್ಕದಲ್ಲಿ ಕೂತು ಒಂದು ಬೆಳ್ಳಿ ಸ್ಪಿನರ್ ಮಾಡಿಸಿದ್ರು. ಚೆನ್ನಾಗೇನೋ ಇತ್ತು. ಆದರೆ ಬೆಳ್ಳಿಯಾದ್ದರಿಂದ ದುಬಾರಿಯೇ ಆಯ್ತು. ಒಂದು ಉಪಾಯ ಮಾಡಿದ್ರು. ಮನೆ ಸ್ಟೀಲ್ ಚಮಚದಲ್ಲೇ ಯಾಕೆ ಮಾಡಬಾರದೆಂದು ಯೋಚನೆ ಹಾಕಿದರು. ಅಡುಗೆ ಮನೆಯಲ್ಲಿ ನಾನು ಬಳಸುತ್ತಿದ್ದ ಚಮಚ ಒಂದನ್ನು ತಗೊಂಡರು. ಹಿಡಿಪಿನ ಭಾಗ ಅಂದರೆ ಕಡ್ಡಿಭಾಗ ಕತ್ತರಿಸಿ ತೆಗೆದು ಹಾಕಿದರು. ಮುಂದಿನ ಭಾಗವನ್ನು ತಟ್ಟಿ ತಟ್ಟಿ ಚಪ್ಪಟೆ ಮಾಡಿದರು. ತುದಿಯಲ್ಲಿ ಒಂದು ತೂತನ್ನು ಮಾಡಿದರು. ಸ್ಟೀಲ್ ಆದ್ದರಿಂದ ತುಂಬ ಗಟ್ಟಿಯಾಗಿರುತ್ತೆ. ಹೆಚ್ಚಿನ ಶ್ರಮ ಬೇಕು. ಇದೊಂದು ಪಕ್ಕಾ ಸ್ಪಿನರ್ ಆಯ್ತು. ಕೇವಲ ಐದು ರೂಪಾಯಿ ಖರ್ಚಾಗಿದ್ದು ತಾವೇ ತಯಾರಿಸಿದ್ದು. ಅಷ್ಟು ಸುಲಭ ಬೆಲೆಯಲ್ಲಿ. ಅಂಗಡಿಯಲ್ಲಿ ಸಿಗುವ ಸ್ಪಿನರ್ ತಯಾರಕರಿಗೇ ಪಾಠ ಕಲಿಸಿದಂತಾಯಿತು. ಆದರೆ ಈ ಮಾತನ್ನು ಕೇಳಿರಿ.
ಅಮ್ಮ, ಅಣ್ಣ ಮನೆಗೆ ಬಂದಾಗ ಈ ಸ್ಪಿನರ್ ಬಗ್ಗೆ ಸವಿವರವಾಗಿ ಹೇಳಿದೆ. ಅಮ್ಮ ಬೆಚ್ಚಿ ಬಿದ್ದರು. `ಅಲ್ಲೇ, ನೀನು ಕುವೆಂಪು ಎಂದು ಕೆತ್ತಿಸಿದ್ದ ಚಮಚ ಕೊಟ್ಟು ಬಿಟ್ಟೆಯಾ`?. ಈ ಚಮಚಗಳನ್ನು ಚಿತ್ರಕೂಟದ ಮನೆಗೆ ಒಕ್ಕಲು ಬರುವಾಗ ಕುವೆಂಪು ಹೆಸರು ಹಾಕಿಸಿ ಅಮ್ಮ ತಂದಿಟ್ಟವು. ಆಗ ನನ್ನ ಪಜೀತಿ ಏನೆಂದು ಹೇಳಲಿ. ಇವರು ಕೇಳಿದ ಮೇಲೆ ಕೊಡದೇ ಇರುವುದು ಹೇಗೆ ಸಾಧ್ಯ. ತಮಾಷೆಯಾಗಿದೆ ಅಲ್ವೆ. ಅಮ್ಮನಿಗೆ ಕುವೆಂಪು ಮುಖ್ಯ ನನಗೆ ನನ್ನವರು ಮುಖ್ಯ.
ನಮ್ಮಲ್ಲಿ ಫಿಷ್ಷಿಂಗ್ನ್ನೂ ಹವ್ಯಾಸವಾಗಿ ಸ್ವೀಕರಿಸಿರುವರನ್ನು ಒಂದು ರೀತಿಯ ಅವಜ್ಞೆಯಿಂದಲೇ ಕಾಣುತ್ತಾರೆ. ನಾವು ಪ್ರಯಾಣಿಸುತ್ತಿರುವಾಗ ಕೆರೆ ಪಕ್ಕದಲ್ಲೊ, ನದಿ ಪಕ್ಕದಲ್ಲೋ ಗಾಣ ಹಾಕಿಕೊಂಡು ಕೂತವರವನ್ನು ನೋಡಿದಾಗ ಹೊಟ್ಟೆಪಾಡಿಗಾಗಿ ಎಂದುಕೊಳ್ಳುತ್ತೇವೆ. ಕೆಲವು ದೇಶಗಳಲ್ಲಿ ಇದನ್ನೊಂದು ಸ್ಪೊರ್ಟ್ಸ್ ಎಂದು ಪರಿಗಣಿಸಿರುವರು. ಸ್ಪರ್ಧೆಯನ್ನೂ ಏರ್ಪಡಿಸುವರಂತೆ. ಮಗಳು ಈಶಾನ್ಯೆ ವೃತ್ತಿ ನಿಮಿತ್ತ ಕ್ಯಾಲಿಫೋರ್ನಿಯಾಕ್ಕೆ ಒಂದು ನಾಲ್ಕು ದಿನಕ್ಕಾಗಿ ಹೋಗಿದ್ದಳು. ಅಲ್ಲಿ ಬೀಚಿನಲ್ಲಿ ತಿರುಗಾಡುತ್ತಿರುವಾಗ ತೇಜಸ್ವಿ ವಯಸ್ಸಿನವರೊಬ್ಬರು ಗಾಣ ಹಾಕಿಕೊಂಡು ಕೂತಿದ್ದರಂತೆ. ಇವರಂತೆಯೇ ಬಿಳಿಗಡ್ಡ, ಮಾಸಲು ಬಣ್ಣದ ಡೆಸ್ರು, ಅತ್ತಿತ್ತ ನೋಡುತ್ತಿಲ್ಲ. ಗಾಣ, ದಾರ, ನೀರು ಅವರು ಒಂದಾದಂತೆ. ಎಷ್ಟೋ ಹೊತ್ತು ಅವರನ್ನೇ ಗಮನಿಸುತ್ತಾ ಕೂತಳಂತೆ. ಗಾಣಕ್ಕೆ ಮೀನೂ ಸಿಕ್ಕಿಲ್ಲ. ಆದರೆ ದಾರನ ತೆಗೆ ತೆಗೆದು ಎಸೆಯೋದು ನಿಲ್ಲಲಿಲ್ಲ. ಹತ್ತಿರ ಹೋದರೆ ಅವರಿಗೆಲ್ಲಿ ತೊಂದರೆನೋ ಏನೋ. ಕೊನೆಗೆ ಕುತೂಹಲ ತಾಳಲಾರದೆ ಹೋಗಿ ಮಾತಾಡಿಸಿಯೇ ಬಿಟ್ಟಳಂತೆ. ಎಲ್ಲ ಅಣ್ಣನ ಅಪರಾವತಾರನೇ ಆಗಿದ್ದರು ಅವರು ಎಂದಳು. ಡಿಟ್ಟೋ ಅಣ್ಣನಂತೆ.
ಇವರು ಸ್ಪಿನರ್ ತಯಾರಿಸಲು ಒಂದು ಪಿಂಡಿ ೪೦ ಎಂ.ಎಂ.ದು ತಂತಿ, ರಾಶಿ ಮಣಿಗಳು ಬಣ್ಣ ಬಣ್ಣದವು, ಸೀಸದ ಫುಲ್ ಶೀಟ್ ತಂದಿಟ್ಟುಕೊಂಡಿದ್ದರು. ಇವರ ಸ್ವಭಾವೇ ಹಾಗೆ ಎಲ್ಲವೂ ರಾಶಿ ರಾಶಿ ಇರಬೇಕು. ತಿಂಡಿನೂ ಅಷ್ಟೆ. ಅಡುಗೆನೂ ಅಷ್ಟೆ. ಈಗ ಮೂರುವರ್ಷದ ಮೊಮ್ಮಗಳು ವಿಹಾ ಅವಳೇ ತಂತಿಯಲ್ಲಿ ಮಣಿ ಪೋಣಿಸಿದಳು. ತಂತಿ ಸುತ್ತಿ ಬ್ರೆಸ್‌ಲೆಟ್ ಮಾಡಿಕೊಟ್ಟೆ. ಎರಡೂ ಕೈಗೆ ಏರಿಸಿಕೊಂಡು ನೋಡಿಕೊಂಡಳು. ಆಗ ಇವರು ನೋಡಿದಂತಾಯಿತು ನನಗೆ.
ಕಾಲವೆಂಬ ಮಾಯೆಯೋ…. ಎಂಥಹ ಕ್ರೂರಿಯೋ…. ಏತಕ್ಕೋ?
ಉದಯರವಿಯಲ್ಲಿ ಬ್ರೇಕ್‌ಫಾಸ್ಟ್
ನಮ್ಮದು ಅಂತರ್ಜಾತಿ ಸಂಬಂಧ. ನಮ್ಮ ಮದುವೆಗೆ ಯಾರ ವಿರೋಧವಿಲ್ಲ. ಯಾರ ಅಡ್ಡಿಯಿಲ್ಲ. ಮೊದಲಾಗಿ ನಾವು ಸಮಾಜದ ರೀತಿನೀತಿಯನ್ನು ಲೆಕ್ಕಿಸಿದರೆ ತಾನೆ ಅದೆಲ್ಲ. ಎಲ್ಲೋ ಒಂದು ಕಡೆ ಇದೆಲ್ಲದರ ಆಚೆಗೆ ಎನ್ನುವ ಮನೋಧರ್ಮ ನಮ್ಮದು, ತತ್ವ. ಕುವೆಂಪುರವರ ಆದರ್ಶ ಎಲ್ಲರಿಗೂ ಗೊತ್ತಿದ್ದೇ! ಅಂತೆಯೆ ಇವರದ್ದೂ.
ನಮ್ಮ ಹತ್ತಿರ ಆಗ ಇದ್ದಿದ್ದು ಸ್ಕೂಟರ್ ವಾಹನವೊಂದೇ. ನಾವು ಸ್ಕೂಟರ್‌ನಲ್ಲೇ ಮೈಸೂರಿಗೆ ಹೋಗಿ ಬರುತ್ತಿದ್ದೆವು. ಶಿವಮೊಗ್ಗೆಗೂ ಅದರಲ್ಲೇ ಹೋಗಿ ಬರುತ್ತಿದ್ದೆವು. ಇದೇನು ಮಹಾ. ಸ್ನೇಹಿತರೊಂದಿಗೆ ಗೋವಾಕ್ಕೂ ಹೋಗಿ ಬಂದಿರುವರು. ನಾವು ಶಿವಮೊಗ್ಗೆಗೆ ಹೋಗುವಾಗ ಬಯಲು ಸೀಮೆ ಟಾರು ರಸ್ತೆಯಲ್ಲಿ ಹೋಗುತ್ತಲೇ ಇರಲಿಲ್ಲ. ಕಗ್ಗಾಡಿನ ದಾರಿ ಶಾಂತವೇರಿ, ಬಾಬಾಬುಡನ್‌ಗಿರಿ, ಕೆಮ್ಮಣ್ಣು ಗುಂಡಿ ದಾರಿಯಲ್ಲೇ ಹೋಗುತ್ತಿದ್ದುದು. ಚಂದ್ರದ್ರೋಣ ಪರ್ವತ ನಮ್ಮನ್ನು ಧ್ಯಾನದಲ್ಲಿ ಮುಳುಗಿಸುತ್ತಿತ್ತು. ಆಕಾಶದಾಚೆಗೆ ಕೊಂಡೊಯ್ಯುತ್ತಿತ್ತು. ಈಗ ಆ ಕಡೆ ಸುಳಿಯಲೂ ಮನಸ್ಸಾಗುವುದಿಲ್ಲ. ಕಾವಿ ಬಣ್ಣ ರಾಚಿದೆ. ನೆನೆಸಿಕೊಂಡರೆ ವ್ಯಥೆಯಾಗುತ್ತದೆ.
ಅಣ್ಣ ಅಂದರೆ ಕುವೆಂಪುರವರು ಎಂದೂ ನನ್ನ ತಂದೆಯವರ ಉದ್ಯೋಗವನ್ನಾಗಲಿ, ನನ್ನ ಜಾತಿಯನ್ನಾಗಲಿ ಕೇಳಲಿಲ್ಲ. ಆದರೆ ಒಂದು ಸಂದರ್ಭದಲ್ಲಿ ನನ್ನ ತಂದೆಯವರು ಇದ್ದ ಉದ್ಯೋಗವನ್ನು ಹೇಳಬೇಕಾಯಿತು.
ಹೀಗೆ ಒಂದು ಸಲ ಸ್ಕೂಟರ್‌ನಲ್ಲಿ ಮೈಸೂರಿಗೆ ಹೋದೆವು. ನನಗೆ ನೆನಪಿದ್ದಂತೆ ಉದಯರವಿ ಮನೆಯಲ್ಲಿ ಬೆಳಗ್ಗಿನ ತಿಂಡಿಗೆ ಬ್ರೆಡ್ಡು ಮತ್ತು ಮೊಟ್ಟೆ. ಎಷ್ಟೋ ವರ್ಷಗಳು ಇದೇ ತಿಂಡಿ. ನಾನು ಅಲ್ಲಿಗೆ ಹೋಗುವುದಕ್ಕೆ ಮುಂಚೆ ಎಷ್ಟೋ ವರ್ಷಗಳಿಂದಲೂ ಇದೇ ಅಭ್ಯಾಸವಂತೆ. ಕೆಲವರು ಇದನ್ನು ತಿಂಡಿಯಂತಲೇ ತಿಳಿಯುವುದಿಲ್ಲವಂತೆ. ನನಗೊ, ಇದು ಇಷ್ಟವಾದ ತಿಂಡಿನೇ. ಆದರೆ ಇದನ್ನು ತಿಂದ ಸ್ವಲ್ಪ ಹೊತ್ತಿಗೇ ಹೊಟ್ಟೆ ಚುರುಚುರು ಅನ್ನುತ್ತಿತ್ತು. ಅಷ್ಟೊಂದು ಹಸಿವು. ಬಹುಶಃ ಚಿಕ್ಕಂದಿನಿಂದ ನಮ್ಮಮ್ಮ ಹೆಚ್ಚಾಗಿ ತಿನ್ನಿಸಿ ದೊಡ್ಡ ಹೊಟ್ಟೆ ಮಾಡಿದ್ದಿರಲೂಬಹುದು ಕಾರಣ. ಇದನ್ನು ಗುಟ್ಟಾಗಿ ಇವರಿಗೆ ಹೇಳಿದ್ದೆ. ಬೇರೆ ಯಾರಿಗೂ ಹೇಳಿರಲಿಲ್ಲ .ಇಲ್ಲಿ ಮನೆಯಂಗಳದಲ್ಲಿ ನಾಲ್ಕಾರು ಸಪೋಟ ಮರಗಳಿದಾವೆ. ಬಲಿತವುಗಳನ್ನು ಅಮ್ಮ ಕೀಳಿಸಿ, ತಿಕ್ಕಿಸಿ, ತೊಳೆಸಿ ಸ್ಟೋರು ರೂಂನಲ್ಲಿ ಇಟ್ಟಿರುತ್ತಿದ್ದರು. ನನಗೆ ತಡೆಯಲಾರದಷ್ಟು ಹಸಿವಾದಾಗ ಸ್ಟೋರು ರೂಂನಲ್ಲಿ ಹಣ್ಣಾದ ಏಳೆಂಟು ಸಪೋಟ ಹಣ್ಣು ಸಿಪ್ಪೆಸಮೇತ ತಿಂದುಕೊಂಡು ಬಿಡುತ್ತಿದ್ದೆ. ಸಂಕೋಚ, ಇದನ್ನೂ ಯಾರಿಗೂ ಹೇಳಲಿಲ್ಲ. ತಾರಿಣಿಗೆ ಮದುವೆಯಾಗಿ ಅವರ ಚಿದಾನಂದ ಗೌಡರು ಬರುವವರೆಗೂ ಇದೇ ರೀತಿ. ಅವರು ಇಲ್ಲಿರಲು ಬಂದ ಮೇಲೆ ದಿನಾ ತಿಂಡಿ ಶುರುವಾಯಿತು. ಉಪ್ಪಿಟ್ಟು, ದೋಸೆ, ಆಪದೋಸೆ, ಅಪ್ಪೆ, ಇಡ್ಲಿ, ರೊಟ್ಟಿ ಇತ್ಯಾದಿ. ದಿನಕ್ಕೊಂದು ಬಗೆಯದು.
ನನ್ನೊಬ್ಬಳನ್ನು ಬಿಟ್ಟು ಇವರೆಲ್ಲರೂ ಮೊಟ್ಟೆಗೆ ಈರುಳ್ಳಿ, ಹಸಿರು ಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು, ಪುದೀನ ಇದ್ದರೆ ಹಾಕಿಕೊಂಡು ಪುಡಿಪುಡಿಯಂತೆ ಹುರುಕಲು ಮಾಡಿಕೊಂಡು ಬ್ರೆಡ್ಡಿನ ಜೊತೆ ತಿನ್ನುತ್ತಿದ್ದರು. ಅದೂ ಎರಡೇ ಕೆಂತೆ(ಸ್ಲೆ ಸ್). ಎಷ್ಟು ಬೇಕಾದರೂ ತಿನ್ನಬಹುದಿತ್ತು. ಆದರೆ ನಾನೊಬ್ಬಳೆ ಹೆಚ್ಚಾಗಿ ತಿಂದು ಹೊಟ್ಟೆಬಾಕಿ ಅಂತಾದರೆ ನನ್ನ ಮರ್ಯಾದೆ ಎಲ್ಲಿಗೆ ಹೋಗುತ್ತೆ ಹೇಳಿ. ಕಾಫಿ ಇರುತ್ತಿತ್ತು. ಅಣ್ಣನವರಂತೂ ಎರಡು ಲೋಟ ತುಂಬಾ ಬಿಸಿ ಕಾಫಿ ಕುಡಿಯುತ್ತಿದ್ದರು. ಒಂದೊಂದು ಗುಟುಕಿಗೂ ಬಾಯಿ ಚಪ್ಪರಿಸುತ್ತ ರುಚಿಯನ್ನು ಆಸ್ವಾದಿಸುತ್ತ ಕುಡಿಯುತ್ತಿದ್ದರು. ಅಮ್ಮ ಏನಾದರೂ ಮಾತು ಹೇಳುತ್ತಿದ್ದರು. ನಾನು ಉದಯರವಿಗೆ ಹೋದ ಶುರುವಿನಲ್ಲಿ ಅಮ್ಮ ಯಾವಾಗಲೂ ಶಿವಮೊಗ್ಗ ಮತ್ತು ಅವರ ತಮ್ಮಂದಿರು ಮಾಡಿದ ಶಿಕಾರಿ ಬಗ್ಗೆಯೇ ಮಾತಾಡಿದಂತಾಗುತ್ತಿತ್ತು. ಅಲ್ಲಿ ತೀರ ಹೊಸದಾಗಿದ್ದುದರಿಂದ ನನಗೆ ಹಾಗನ್ನಿಸುತ್ತಿತ್ತೇನೋ.
ಇವರೂ ಶಿವಮೊಗ್ಗೆಯಲ್ಲಿ ಇವರ ಮಾವಂದಿರ ಜೊತೆಯಲ್ಲೋ ಗೆಳೆಯರ ಜೊತೆಯಲ್ಲೋ ಶಿಕಾರಿಗೆ ಹೋದಾಗ ಹಂದಿ ಕೈಗೆ ಸಿಕ್ಕಿ ಸಾವಿನ ಬಳಿ ಹೋಗಿ ಬಂದದ್ದು, ಹೀಗೆ ಮಾತುಗಳು ನಡೆಯುತ್ತಿದ್ದವು. ಊಟದ ಮನೆ ಪಕ್ಕಕ್ಕೆ ಅಡುಗೆ ಮನೆ. ಗ್ಯಾಸ್ ಒಲೆ ಮೇಲೆ ಹಾಲಿಟ್ಟು ತಿಂಡಿಗೆ ಬರುತ್ತಿದ್ದೆವು. ಹೇಗೂ ಉಕ್ಕುವುದು ಗೊತ್ತಾಗುತ್ತೆ. ಹೋಗಿ ಆಫ್ ಮಾಡಿದರಾಯ್ತುಂತ. ಆದರೆ ಹಾಲು ಉಕ್ಕಿ ಚುಸ್‌ಸ್ ಎಂದು ಸದ್ದಾದಾಗ ನಾನು ತಾರಿಣಿ ಅಯ್ಯಯ್ಯೋ ಹಾಲು ಉಕ್ಕಿತು ಎಂದು ಓಡುತ್ತಿದ್ದೆವು. ಹಲವಾರು ಬಾರಿ ಹೀಗಾದಾಗ ಅಣ್ಣ ಹೇಳಿದರು, ಸಾಕು ಈ ನಿಮ್ಮ ನಾಟಕ ಎಲ್ಲ ಅಂತ. ಇದ್ದಕ್ಕಿದ್ದಂತೆ ಸೀರಿಯಸ್ಸಾಗಿ ಅವತ್ತಿನ ಸೆನ್‌ಸಿಟೀವ್ ಇಸ್ಯೂ ಬಗ್ಗೆ ಮಾತು ಹೊರಳುತ್ತಿತ್ತು. ಎಪ್ಪತ್ತರ ದಶಕದಲ್ಲಿ ಇವರು ಬರೆದ ಬ್ರಾಹ್ಮಣ ಯುವಕರಿಗೆ ಕವನದ ಬಗ್ಗೆ ಮಾತಾಡಿದ್ದೂ ನೆನಪಿದೆ. ಒಟ್ಟಿನಲ್ಲಿ ತಿಂಡಿ ಸೆಷನ್ ಚೆನ್ನಾಗಿರುತ್ತಿತ್ತು. ಎಲ್ಲವೂ ಸ್ಟ್ರೇಂಜ್ ಆಗಿರುತ್ತಿತ್ತು ನನಗೆ.
ಎಲ್ಲೋ ಹೋದೆ. ಎಲ್ಲಿಗೋ ಬಂದೆ. ಮೊಟ್ಟೆ ಪ್ರಕರಣಕ್ಕೆ ಬರ್ತೀನಿ. ನಾನು ಒಬ್ಬಳು ಮಾತ್ರ ಮೊಟ್ಟೆಯನ್ನು ಬಲ್ಸ್ ಐನಂತೆಯೇ ಅಂದರೆ ಎಗ್ ಫ್ರೈ ಮಾಡಿಕೊಂಡು ತಿನ್ನುತ್ತಿದ್ದೆ. ಇದು ನನಗೆ ಬಹು ಪ್ರಿಯವಾದದ್ದು. ಹೀಗೆ ತಿನ್ನುವಾಗ ಒಂದು ದಿನ ನಾದಿನಿ ತಾರಿಣಿ ಹೇಳಿದ್ರು. ನನಗೆ ಮಾತ್ರ ಈ ರೀತಿ ಹಸಿ ಬಿಸಿ ಬೇಯಿಸಿಕೊಂಡು ತಿನ್ನಕ್ಕಾಗೊಲ್ಲ ಅಂತ. ಸುತ್ತ ಬಿಳಿ ಮಧ್ಯೆ ಹಳದಿ ಸೂರ್ಯನಂತಿದ್ದ ಬಣ್ಣಕ್ಕೆ ಬೆರಗಾಗಿ ತಾರಿಣಿ ಮಗಳು ಪ್ರಾರ್ಥನೆ ಪುಟ್ಟವಳಿದ್ದಾಗ ಅತ್ತೆಮ್ಮ ತಿನ್ನುವಂತೆಯೇ ಬೇಕೆಂದು ಹಠ ಮಾಡಿ ಮಾಡಿಸಿಕೊಂಡು ತಿನ್ನುತ್ತಿದ್ದಳು. ತಾರಿಣಿಗೆ ಹೇಳಿದೆ ಬಹುಶಃ ಚಿಕ್ಕಂದಿನಿಂದಲೂ ಆ ರೀತಿ ತಿಂದು ನನಗೆ ಅಭ್ಯಾಸ. ನನಗೆ ಅದೇ ಇಷ್ಟವೆಂದೆ.
ಆಗ ತೇಜಸ್ವಿ, ‘ಹೂಂ, ಆ ಕಾಲದಲ್ಲಿ (ಅಂದರೆ ಆರು ದಶಕದ ಹಿಂದೆ) ಇವಳು ಚಿಕ್ಕಂದಿನಿಂದ ಮೊಟ್ಟೆ ತಿಂತಿದ್ಲು’ ಎಂದರು. ನನ್ನ ಸ್ವಾಭಿಮಾನಕ್ಕೆ ಸಿಟ್ಟೇರಿತು. ‘ಹೌದು. ನನ್ನ ತಂದೆಯವರು ನಾನು ಚಿಕ್ಕವಳಿದ್ದಾಗ ಅನಿಮಲ್ ಹಸ್‌ಬೆಂಡ್ರಿ ಡಿಪಾರ್ಟ್‌ಮೆಂಟಿನಲ್ಲಿ ಹೆಡ್ ಅಕೌಂಟೆಂಟ್ ಆಗಿದ್ರು. ಅದಕ್ಕೂ ಬಹಳ ಹಿಂದೆಯೇ ನಮ್ಮ ರಾಜ್ಯದಲ್ಲಿ ಇಲಾಖೆಯವರು ರೋಡ್ ಐಲೆಂಡ್ ರೆಡ್ ಮತ್ತು ವೈಟ್ ಲೆಗ್ ಹಾರನ್ ತಳಿಯ ಕೋಳಿಗಳನ್ನು ಪರಿಚಯಿಸಿದ್ದರು. ಆಗಲೆ ಈ ತಳಿ ಕೋಳಿಗಳನ್ನು ಸಾಕಲು ಅಭಿವೃದ್ಧಿಪಡಿಸಲು ವ್ಯವಸ್ಥೆಯನ್ನೂ ಮಾಡಿದ್ದರು. ಸರ್ಕಾರದ ಪ್ರಾಜೆಕ್ಟ್ ಇತ್ತು. ಹಾಗಾಗಿ ಆ ಇಲಾಖೆಯಲ್ಲಿ ಉತ್ಪತ್ತಿಯಾದ ಮೊಟ್ಟೆಯನ್ನು ಅಲ್ಲಿನ ನೌಕರರಿಗೆ ಮಾರುತ್ತಿದ್ದರು. ನಮ್ಮ ತಂದೆಯವರು ಕೊಂಡು ತರುತ್ತಿದ್ದರು. ಅಷ್ಟೇ ಅಲ್ಲದೆ ನಮ್ಮ ಮನೆಯಲ್ಲಿಯೂ ಇದ್ದ ಚಿಕ್ಕ ಅಂಗಳದಲ್ಲಿ ಅಲ್ಪಸ್ವಲ್ಪ ಜಾಗದಲ್ಲೇ ಮೆಶ್ ಹಾಕಿ ಆ ತಳಿಯ ಕೋಳಿಗಳನ್ನು ಸಾಕಿದ್ದೆವು. ಹಾಗಾಗಿ ಪ್ರತಿ ಶನಿವಾರ ಮೊಟ್ಟೆಯು ನಮ್ಮ ತಿಂಡಿಯೊಟ್ಟಿಗೆ ಇರುತ್ತಿತ್ತು’ ಎಂದೆ. ಜಂಬಕೊಚ್ಚಿದೆ. ಹ್ಞೂಂ. ಎಂದು ತುದಿಗಣ್ಣಿನಲ್ಲೇ ನನ್ನನ್ನು ನೋಡಿದರು. ಇವರು.
ಅಕ್ಕಿಮೂಟೆಯ ಒಳಗೆ ಬೀಸುಕಲ್ಲು
ತೇಜಸ್ವಿ ಮತ್ತು ಶಾಮಣ್ಣ ಆಪ್ತ ಗೆಳೆಯರು. ಇಬ್ಬರದೂ ವಿಶಿಷ್ಟವಾದ ವ್ಯಕ್ತಿತ್ವ. ವಿರುದ್ಧವಾದದ್ದು. ಮಾತ್ರ ನಗಿಸುವಲ್ಲಿ ಒಂದೇ. ಆದರೂ ಭಿನ್ನ. ಒಬ್ಬರ ಹೆಸರು ಹೇಳಿದ್ರೆ ಇನ್ನೊಬ್ರೂ ಅಲ್ಲಿರುತ್ತಾರೆ, ಅಲ್ಲಿಗೇ ಬರುತ್ತಾರೆ.
ಕಡಿದಾಳು ಶಾಮಣ್ಣ ನಾನು ಮಹಾರಾಜ ಕಾಲೇಜಿನಲ್ಲಿ III ಆನರ್ಸ್ ಓದುತ್ತಿದ್ದಾಗ ನನಗೆ ಪರಿಚಯ. ಆಗ ಶಾಮಣ್ಣ ಬಿ.ಎ.ನಲ್ಲಿ ಓದುತ್ತಿದ್ದರು. ಇವರ ತರಗತಿಯಲ್ಲಿ ಒಬ್ಬಳು ಹುಡುಗಿ ಸುಮನ್ ದೇಶಪಾಂಡೆ ಅಂತ ಇದ್ದಳು. ಇವಳು ಬೆಳ್ಳಗೆ, ತೆಳ್ಳಗೆ, ಕುಳ್ಳಗೆ, ನಗುತ್ತ ಇರುತ್ತಿದ್ದಳು. ಎರಡು ಜಡೆಯವಳು. ಯಾವಾಗ್ಲೂ ಬಿಳಿ ಸೀರೆ ಉಡುತ್ತಿದ್ದಳು. ಈ ಸೀರೆ ಅಷ್ಟೊಂದು ಬೆಳ್ಳಕ್ಕೆ ಇರುತ್ತಿರಲಿಲ್ಲ. ಅದಕ್ಕೆ ಶಾಮಣ್ಣ ಹೇಳ್ತಿದ್ದರಂತೆ, ಅಂತ ತೇಜಸ್ವಿ ಹೇಳೋರು, `ಇವಳು ಸೀರೆಗೆ ಟಿನೋಪಾಲು ಹಾಕುವ ಬದಲು ಅವಳೇ ನೆಕ್ಕಿಕೊಳ್ಳುವಳೋ ಏನೋ. ಅದಕ್ಕೇ ಅವಳು ಬಿಳ್ಚಿ, ಸೀರೆ ಮಬ್ಬು` ಎಂದು. ಹೀಗೆ ಶಾಮಣ್ಣನವರ ನಗೆ ಚಟಾಕಿ ಇರುತ್ತಿತ್ತು.
ತೇಜಸ್ವಿ ಯಾವಾಗ್ಲೂ ಶಾಮಣ್ಣನ ಜೋಕು ಹೇಳಿ ನಗುತ್ತಿದ್ರು. ನಮಗೂ ನಗಿಸೋವ್ರು. ಮಾತ್ರ ಶಾಮಣ್ಣನ ನೆಚ್ಚಿಕೊಂಡ್ರೆ ಆಗೊಲ್ಲ ಅನ್ನೋವ್ರು. ಶಾಮಣ್ಣಂಗೂ ಮದ್ವೆ ಆಯ್ತು. ಅವರ ಹೆಂಡ್ತಿ ಶ್ರೀದೇವಿ, ಇವ್ರೂ ಪರಸ್ಪರ ಪ್ರೀತಿಸಿ ಮಂತ್ರಮಾಂಗಲ್ಯ ರೀತಿಯಲ್ಲೇ ಮದುವೆ ಆದ್ರು. ಶ್ರೀದೇವಿ ನನ್ನ ಆಪ್ತ ಗೆಳತಿಯಾದರು. ಇವರೂ ಜಮೀನು ಮಾಡಿದರು. ನಾವು ಹೊಸ ಸಂಸಾರ ಹೂಡಿದಾಗ ಕಷ್ಟಪಟ್ಟಂತೆ, ಇವರಿಗೂ ಕಷ್ಟ ಇತ್ತು. ಇವರದ್ದು ಒಂದು ಗುಡಿಸಲು ಮನೆಯಾಗಿತ್ತು. ಸೊಳ್ಳೆಕಾಟ ವಿಪರೀತ. ಸೊಳ್ಳೆಪರದೆ ಇಲ್ಲದೆ ಮಲಗುವಂತೆಯೇ ಇಲ್ಲ. ಒಂದು ದಿವಸ ಪರದೆ ಮೇಲೆ ಏನೋ ಬಿದ್ದಂತೆ. ನೋಡಿದ್ರೆ ಹಾವು. ಹೀಗೆ ಏನೇನೋ ಸಮಸ್ಯೆ. ಎಲ್ಲವನ್ನೂ ನಗುತ್ತಲೇ ಸ್ವೀಕರಿಸಿದವರು ಶಾಮಣ್ಣ ಮತ್ತು ಶ್ರೀದೇವಿ. ನಾವು ಅವರ ಮನೆಗೆ ಹೋಗೋದು, ಅವರು ನಮ್ಮ ಮನೆಗೆ ಬರೋದು. ನಮ್ಮ ನಮ್ಮ ಕಷ್ಟಸುಖ ಹಂಚಿಕೊಳ್ಳೋದು. ಬಾಳ ಸಂತೋಷದ ದಿನಗಳು ಅವು.
ಒಂದು ಸಲ ಹೀಗೆ ಹೋಗಿದ್ದೀವಿ ಶ್ರೀದೇವಿ ಮನೆಗೆ. ಇವರ ಮನೆಗೆ ಯಾವಾಗಲೂ ಜನ ಬರುವವರೇ. ಊರಿನವರು, ಪರ ಊರಿನವರು, ದೂರದೂರಿನವರು, ರೈತರು, ಮದುವೆ ಮಾಡಿಸಿ ಅಂತ ಕೇಳಿಕೊಂಡು ಬರುವವರು. ಹೀಗೇ. ಕಷ್ಟಸುಖ ಹಂಚಿಕೊಳ್ಳಕ್ಕೆ, ಕೊಡಕ್ಕೆ ಬರುವವರೇ ಹೆಚ್ಚು. ನಾವು ಅಲ್ಲಿಗೆ ಹೋದಾಗ ನಾಲ್ಕು ಜನ ವರಾಂಡದಲ್ಲಿ ಕೂತು ಮಾತಾಡ್ತಾ ಇದ್ರು. ಅವರ ಮುದ್ದಿನ ನಾಯಿಯೂ ಅಲ್ಲೆ ಸುತ್ತು ಹೊಡ್ಕಂಡು ಪವಡಿಸಿತ್ತು. ಆಗ ಒಂದೆರಡು ಸಲ ಯಾರೋ, `ನಾಯಿಗೆ ಹೊಟ್ಟೆಕೆಟ್ಟದೇನೊ, ಕೆಟ್ಟನಾಥ` ಎಂದರು. ಎಲ್ಲರೂ ನಾಯಿ ಮೇಲೆ ಹಾಕುವವರೇ. ನಾನು ಒಳಗಡೆನೆ ಇದ್ದೆ, ಕೇಳಿಸುತ್ತಿತ್ತು. ಇನ್ನೊಂದು ಸ್ವಲ್ಪ ಹೊತ್ತಾದ ಮೇಲೆ ನಾಯಿ ಎದ್ದು ಹೋಯಿತು. ಶಾಮಣ್ಣ ಹೇಳಿದ್ರು, `ಈಗ ಗೊತ್ತಾಗುತ್ತೆ ಯಾರ ಹೊಟ್ಟೆ ಕೆಟ್ಟಿದೆಂತ`. ಹೀಗೆ ಶಾಮಣ್ಣವ್ರು.
ಇಂತಹ ಸಮಯಗಳಲ್ಲೇ ಈ ಗೆಳೆಯ ವೃಂದ ಒಟ್ಟಿಗೆ ಸೇರಿದಾಗ ಪ್ರಚಲಿತ ರಾಜಕೀಯ ವಿದ್ಯಮಾನ, ಸಾಹಿತ್ಯದ ಗತಿ ಸ್ಥಿತಿ, ಸಾಮಾಜಿಕ ಆಗುಹೋಗು ಇತ್ಯಾದಿ ಬಗ್ಗೆ ಚರ್ಚೆ ನಡೆಯುತ್ತಿದ್ದವು. ಮತ್ತು ಹೇಗೆ ಬದಲಾವಣೆ ತರಬೇಕೆಂಬುದರ ಬಗ್ಗೆಯೂ ಮಾತು ನಡೆಯುತ್ತಿತ್ತು. ದಕ್ಷಿಣ ಭಾರತದ ಬೆಳೆಗಾರರ ಒಕ್ಕೂಟವನ್ನು ಮೂಡಿಗೆರೆಯಲ್ಲಿ ಹುಟ್ಟು ಹಾಕಿದವರು ಈ ಬಳಗವೇ.
ತೇಜಸ್ವಿಗೆ ಕೆಲಸ ಮಾಡಿ ಬೇಜಾರಾದ್ರೆ ಶಾಮಣ್ಣನವರ ಜಮೀನಿಗೆ ಹೋಗಿ ಬರೋಣ ನಡಿ ಅನ್ನೋರು. ಅವರ ಜಮೀನು ಇರೋದು ಭದ್ರಾವತಿ ಆಚೆ ಹೊಳೆಹೊನ್ನೂರು ಅಂತ. ಭತ್ತದ ಗದ್ದೆ, ಅಡಿಕೆ, ಕಬ್ಬು ಇತ್ಯಾದಿ ಇವರ ಬೆಳೆ. ಅಲ್ಲಿಗೆ ಹೋಗೋದು ಅಂದ್ರೆ ನಮಗೆ ಎಲ್ಲಿಲ್ಲದ ಸಂಭ್ರಮ. ಶಾಮಣ್ಣ ಶ್ರೀದೇವಿಗೂ ಅಷ್ಟೆ. ಹೋದವರು ಒಂದಿನ ಉಳಿದೇ ಬರುತ್ತಿದ್ದೆವು. ಅವರ ಮನೆಗೆ ಹೋದವರು ಎಲ್ಲರೂ ಹಾಗೇನೇ. ಅಷ್ಟೊಂದು ಅತಿಥಿ ಸತ್ಕಾರ, ಉಪಚಾರ.
ಒಂದು ಸಲ ನಾವು ಹೋದ ಕೂಡ್ಲೆ ಶ್ರೀದೇವಿ ಅಕ್ಕಿ ನೆನೆಸಿಟ್ಟಾಯ್ತು. (ಮನೆಗೆ ಯಾರು ಹೋದರೂ ಶ್ರೀದೇವಿ ಪಡುವ ಸಂಭ್ರಮ ನಾವು ನೋಡಿ ಕಲಿಬೇಕು.) ಮಾತಾಡ್ತಾ ಸಂಜೆ ಆಗೇ ಹೋಯ್ತು. ನೋಡ್ತಿದ್ದಂತೆ ಶ್ರೀದೇವಿ ಅಕ್ಕಿ ಬೀಸೂ ಆಯ್ತು. ಸ್ಯಾವಿಗೆಗೆ ಹಿಟ್ಟು ತೊಳೆಸಲು ನೀರಿಟ್ಟೂ ಆಯ್ತು. ಎಲ್ಲಾ ಆ ಸಣ್ಣ ಅಂಗೈ ಅಗಲ ಬೀಸೋ ಕಲ್ಲಿನ ಮಹಿಮೆ ಎಂದೆಣಿಸಿದೆ ನಾನು. ಆ ಬೀಸೋ ಕಲ್ಲಿನ ಬಗ್ಗೆ ವಿವರಣೆ ಕೇಳಿದೆ. ಯಾವ ಊರಿನದು, ಎಷ್ಟು ಹಣ, ನನಗೂ ತರಿಸಿಕೊಡಲು ಸಾಧ್ಯವಾ, ನನಗೊಂದು ಅಂತಹುದು ಬೇಕೇಬೇಕೆಂದೆ. ಹೊಸ ಉತ್ಸಾಹ ಸಂತೋಷ ಒಂದು ಬಂತು ನನಗೆ. ಸ್ಯಾವಿಗೆ ಅಡಿಗೆ ತಿಂದುಂಡು ಸಂಭ್ರಮಿಸಿದೆವು. ಮಾರನೆ ದಿನ ತೋಟಕ್ಕೆ ಹಿಂದಿರುಗಿದೆವು.
ಎಷ್ಟೋ ಸಮಯ ಕಳೆಯಿತು. ನಾನು ಮನಸ್ಸಿನಲ್ಲಿಯೇ ಗುಣಾಕಾರ, ಭಾಗಕಾರ ಹಾಕ್ತಿದ್ದೆ. ಯಾವತ್ತು ಬೀಸೋ ಕಲ್ಲು ಬರುತ್ತೆ. ಯಾವುತ್ತು ನಾವು ಹೋಗಿ ತರುವುದು. ಹೀಗೆ…. ಒಂದು ದಿವಸ ಮಾಮೂಲಿ ಹೊರಟಂತೆ ಹೊರಟೆವು ಅವರ ಜಮೀನಿಗೆ. ಶಾಮಣ್ಣ, ಅವರ ಅಡಿಕೆ ಗಿಡಗಳ ಸಮಸ್ಯೆ ತೋಡಿಕೊಂಡರು. ಅಗ್ರಿಕಲ್ಚರ್ ಇಲಾಖೆಯವರು ಬಂದೂ ಬಂದೂ ಹೊಗೋದು, ಸಮಸ್ಯೆ ಪರಿಹಾರವಾಗದೆ ಇರೋದು. ಬೇರೆ ಬೇರೆ ಚರ್ಚೆನೂ ಮಾಡಿದರು ಶಾಮಣ್ಣ ಮತ್ತು ತೇಜಸ್ವಿ. ಆ ಸೀಜನ್‌ನಲ್ಲಿ ಮಾಡಿಸಿದ ಮಂತ್ರಮಾಂಗಲ್ಯದ ಬಗ್ಗೆಗೂ ಮಾತು ಹೋಯಿತು. ಆ ಮದುವೆ ದಿಬ್ಬಣದಲ್ಲಿ ನಡೆದ ಜಗಳ, ತಾಳಿಕಟ್ಟಕ್ಕೆ ಬಿಡೋಲ್ಲ ಅಂದಿದ್ದು, ಕುಕ್ಕೆ ಸಾಮಾನು ಬರ್ಲಿ ಅಂದಿದ್ದು, ಏನೇನೋ ಹೇಳ್ಕೊಂಡು ಅವರಿಬ್ಬರು ನಗೋವ್ರು. ಇದೆಲ್ಲದರ ಪಾತ್ರದಾರಿಯಾಗದೆ ದೂರದಲ್ಲಿ ನಿಂತು ನೋಡಿದಾಗ ಇದೇನು ಅಪಹಾಸ್ಯವೋ ಏನೋ. ಅನ್ನಿಸುತ್ತೆ.
ಊಟ ಉಪಚಾರವಾದ ಮೇಲೆ ನಾನು ಶ್ರೀದೇವಿ ಜೊತೆ ಅಡುಗೆ ಮನೆ ಸೇರಿದೆ. ನೋಡ್ತೀನಿ ಬಿಸೋಕಲ್ಲು ಒಂದು ಸಿದ್ಧವಾಗಿದೆ! ಒಮ್ಮೆಗೇ ನಾವಿಬ್ಬರು ಮಿಂಚಿನ ಸಂಚಾರವಾದಂತೆ ಕಾರ್ಯಪ್ರವೃತ್ತರಾದೆವು. ಇಬ್ಬರಿಗೂ ಒಂದೇಸಲ ಒಟ್ಟಿಗೇ ಪರಿಸ್ಥಿತಿಯ ಬಗ್ಗೆ ಜ್ಞಾನೋದಯವಾಯಿತು. ತೇಜಸ್ವಿಗೆ ಕಲ್ಲು ಗೋಚರಿಸದಂತೆ ಗೊತ್ತಾಗದಂತೆ ನಮ್ಮ ಮನೆಗೆ ಸಾಗಿಸುವುದಾದರೂ ಹೇಗೆ. ಇವರಿಗೆ ನಾನು ಕಂಡಕಂಡ ಸಾಮಾನು ತಗೊಂಡು ಮನೆಯಲ್ಲಿ ಅಡಕಿಕೊಳ್ಳುವುದು ಕಂಡರೇ ಆಗುತ್ತಿರಲಿಲ್ಲ.
ಶ್ರೀದೇವಿ ಒಂದು ಉಪಾಯ ಮಾಡಿದರು. ಹದಿನೈದು ಕೆ.ಜಿ. ಅಕ್ಕಿ ಅವರು ಬೆಳೆದಿದ್ದು. ಒಂದು ಗೋಣಿ ಚೀಲಕ್ಕೆ ಹಾಕಿ ಅದರೊಟ್ಟಿಗೆ ಬೀಸೋ ಕಲ್ಲು ಹಾಕಿದರಾಯಿತೆಂದರು. ನಮ್ಮ ಉಪಾಯಕ್ಕೆ ನಾವೇ ಮೆಚ್ಚಿಕೊಂಡೆವು. ಮಾತ್ರ ಕೆಲಸದ ಆಳಿನ ಕೈಯಲ್ಲೇ ಇಳಿಸಿಕೊಳ್ಳಬೇಕೆಂದು ಕಟ್ಟೆಚ್ಚರ ಕೊಟ್ಟರು ಶ್ರೀದೇವಿ. ಆಯ್ತೆಂದೆ.
ನಮ್ಮ ತೋಟ ತಲುಪುವ ಹೊತ್ತಿಗೆ ಸಂಜೆಯಾಗಿತ್ತು. ಒಂದು ಕ್ಷಣ ಕಳೆದರೆ ಕತ್ತಲೆ ಇಳಿಯುತ್ತೆ. ಕೆಲಸದಾಳನ್ನು ಕರೆಯುವೆನೆಂದು ಎಷ್ಟು ಹೇಳಿದರೂ ಇವರು ಕೇಳಬೇಕಲ್ಲ. ಶ್ರೀದೇವಿ ಕೊಟ್ಟ ಎಚ್ಚರಿಕೆ ಮಾತು ಗಾಳಿಗೆ ಹೋಯಿತು. `ಏನು ಮಹಾ ಹದಿನೈದು ಕೆ.ಜಿ. ಅಕ್ಕಿ ಹೊರಕ್ಕೆ ನನ್ನ ಕೈಲಾಗುವುದಿಲ್ಲವ` ಎಂದು ಹಠಕ್ಕೆ ಬಿದ್ದಂತೆ ಹೆಗಲ ಮೇಲೆ ಹೊತ್ತೇಬಿಟ್ಟರು. ನಮ್ಮ ಕಾರು ಶೆಡ್ಡಿನಿಂದ ಅಡಿಗೆ ಸ್ಟೋರ್ ರೂಂಗೆ ತುಸುದೂರನೇ. ಮೆಟ್ಟಿಲು ಬೇರೆ ಇಳಿಬೇಕು. ನನಗೋ ಹೆದರಿಕೆ. `ಅಕ್ಕಿ ಮೂಟೆ ಅಂತಿಯಾ ಮಣಬಾರ ಇದೆ` ಎನ್ನುತ್ತಾ ಮೂಟೆ ಇಳಿಸಿದರು ತೇಜಸ್ವಿ. ಬೈಸಿಕೊಳ್ಳಬೇಕೆಂದು ಹೆದರಿ ಏನೂ ಮಾತಾಡಲಿಲ್ಲ ನಾನು. ಆದರೂ ಅವರು ಬೆಳೆದ ಅಕ್ಕಿ ಎಂದೆ. ಬೇರೆ ಕಡೆ ಗಮನ ಸೆಳೆಯಲು. ಆದರೆ ಪಾಪ ಅನ್ನಿಸಿತು. ಮನ ಕರಗಿತು. ಅಯ್ಯೊ ಅಂದುಕೊಂಡೆ. ಸದ್ಯ ಇವರ ಕೈಮೈ ಉಳುಕಲಿಲ್ಲ.
ಬೆಳಿಗ್ಗೆ ಮುಂಚೆ ಎದ್ದು ಅಕ್ಕಿ ನೆನೆಸಿಟ್ಟೆ. ಹೊಸ ಉಮೇದು ಬಂದಿತ್ತು. ಅಕ್ಕಿ ಬೀಸಿದೆ. ಶ್ಯಾವಿಗೆ ಮಾಡುವ ಆಸೆ. ರಟ್ಟೆಯೆಲ್ಲ ನೋವು ಬಂತು. ಜ್ವರ ಬಂದಂತಾಯಿತು. ಅಭ್ಯಾಸ ಮತ್ತು ಕೈಚಳಕ ಇಲ್ಲದಿದ್ದರೆ ಇದಾಗದ ಕೆಲಸವೆಂಬುದು ತಿಳೀತು. ಮತ್ತೆಂದಿಗೂ ಬೀಸಲೇ ಇಲ್ಲ.
ಅಟ್ಟ ಸೇರಿತು ಬೀಸೋ ಕಲ್ಲು. ಎಷ್ಟೋ ವರ್ಷ ಕಳೆದ ಮೇಲೆ ಸೂರಿನಿಂದ ಮಳೆನೀರು ಸುರಿವ ಜಾಗದಲ್ಲಿ ಇಟ್ಟಾಗ ಇವರು ಇದೆಲ್ಲಿತ್ತೆಂದು ಕೇಳಿದರು. ಎಲ್ಲವನ್ನೂ ಹೇಳಿ ನಕ್ಕಿದ್ದೆ. `ನೋಡು, ನೀವು ಹೆಂಗಸರ ಬುದ್ಧಿಯೆಂತದು` ಎಂದು ಅವರೂ ನಕ್ಕರು. ಮುಂದೆ ಶ್ರೀದೇವಿ ಸಿಕ್ಕಾಗ ಇದನ್ನೆಲ್ಲ ಹೇಳಿದೆ. `ಪಾಪ` ಎಂದರು ಅವರೂ. ಇಬ್ಬರೂ ನಕ್ಕೆವು. ಇದನ್ನು ಮರೆತೆನೆಂದರೆ ಹ್ಯಾಂಗ ಮರೆಯಲಿ.
ಯಂತ್ರವೂ, ರಿಪೇರಿ ಡ್ರೆಸ್ಸೂ
ಯಾರೋ ಇಬ್ಬರು ನಮ್ಮ ಕಾರ್‌ಶೆಡ್ಡಿನಲ್ಲಿ ಏನನ್ನೋ ನೋಡ ಬಯಸುವಂತೆ ಹುಡುಕಾಡುತ್ತಿದ್ದರು. ಯಾರಿವರು? ನನ್ನ ಅನುಮತಿ ಇಲ್ಲದೆ ಹೀಗೆ ತಿರುಗಾಡುತ್ತಿರುವರು ಎಂದುಕೊಂಡೆ. ಅಷ್ಟರಲ್ಲಿ ಆ ಮಹಿಳೆ ಬಂದರು ಮನೆಗೆ.
ಇವರಿಬ್ಬರು ಮೊಟ್ಟಮೊದಲಿಗೆ ತೇಜಸ್ವಿಯನ್ನು ಓದಿಕೊಂಡಿದ್ದೇ ಅಣ್ಣನ ನೆನಪಿನಲ್ಲಂತೆ. ಆನಂತರ ಇವರ ಎಲ್ಲ ಪುಸ್ತಕ ಓದಿದವರು.ಇವರಿಬ್ಬರೂ ನನಗೆ ಥ್ಯಾಂಕ್ಸ್ ಹೇಳಿದರು. ಶಿವಮೊಗ್ಗೆಯಲ್ಲಿ ಆಕೆಯ ಮಾವ ಸ್ಕೂಟರ್ ಇಟ್ಟುಕೊಂಡಿದ್ದಾರಂತೆ. ಅದರ ಬಗ್ಗೆ ತುಂಬ ಪ್ರೀತಿ ಅವರಿಗೆ. ಅಗೌರವ ಇವರಿಗೆ. ಮನೆ ಪಕ್ಕ ಕರಿ ಎಣ್ಣೆ ಬಿದ್ದು ಗಲೀಜು ಎಬ್ಬಿಸುತ್ತದೆಂದು. ಆದರೆ ಅಣ್ಣನ ನೆನಪು ಓದಿದ ನಂತರ ಸರಿಯಾದ ಸ್ಥಾನಮಾನ ಕೊಟ್ಟಿರುವರಂತೆ. ಈಗ ಸ್ಕೂಟರಿನ ಬಗ್ಗೆ ಹೆಮ್ಮೆ. ಮಾವನಿಗೆ ಸಮಾಧಾನ.
ನಾನು ಚಿಕ್ಕಂದಿನಲ್ಲಿ ನನ್ನ ಅಣ್ಣ ಯಂತ್ರಗಳನ್ನು ಮಿಲಿ ಮಿಲಿ ಮಾಡೋದನ್ನು ನೋಡಿದ್ದೆ. ಅದರ ಬಗ್ಗೆ ನನ್ನ ಗಮನ ಅಷ್ಟಕಷ್ಟೆ. ಗಂಡಸರು ಹಾಗೆ, ಹೆಂಗಸರು ಹೀಗೆ ಎಂದು ಕೊಳ್ಳುತ್ತಿದ್ದೆ. ತೇಜಸ್ವಿಗೆ ಯಂತ್ರಗಳ ಬಗ್ಗೆ ಇಷ್ಟೊಂದು ಆಸಕ್ತಿಯಿರುವುದನ್ನು ನೋಡಿ ನನಗೆ ಆಶ್ಚರ್ಯ! ಸಾಹಿತಿಗಳು, ಸಂಗೀತಾಸಕ್ತರು, ದೊಡ್ಡಮನುಷ್ಯರು ಇವರು ಇಷ್ಟೊಂದು ವಿಶಿಷ್ಟ ಇದು ಹೇಗೆ?
೧೯೬೫ರಲ್ಲಿ ಇವರು ಕಾಡು ಕೊಂಡು ಚಿತ್ರಕೂಟ ತೋಟ ಮಾಡಿದಾಗ ಮನೆಗೆ ನೀರಿನ ವ್ಯವಸ್ಥೆ ಮಾಡಬೇಕಿತ್ತು. ನೀರಿನ ಆಸರೆ ಇದ್ದದ್ದು ಸುಮಾರು ಸಾವಿರ ಅಡಿಗೂ ಮಿಗಿಲಾದ ದೂರದಲ್ಲಿ. ಹೊಂಡದಲ್ಲಿ ಹರಿಯುತ್ತಿದ್ದ ಒಂದು ಝರಿ ಮಾತ್ರ. ಮನೆಗೆ ನೀರನ್ನು ಮುಟ್ಟಿಸಲು ವಿದ್ಯುಚ್ಚಕ್ತಿಯಾಗಲಿ, ಎಂಜಿನ್ ಪಂಪಿನಿಂದಾಗಲಿ ನೀರು ಹರಿಸುವ ಸಾಹಸಕ್ಕೆ ಕೈಹಾಕಲಿಲ್ಲ. ಬದಲಿಗೆ ಹೈಡ್ರಾಂ ಟೆಕ್ನಾಲಜಿಯನ್ನು ಉಪಯೋಗಿಸಿಕೊಂಡರು. ಹೈಡ್ರಾಲಿಕ್ ರಾಮ್ ಅಥವಾ ಹೈಡ್ರಾಂ ಎನ್ನುವುದು ಎಲೆಕ್ಟ್ರಿಕ್ ಅಥವಾ ಎಂಜಿನ್ ಶಕ್ತಿ ಬಳಸದೆ (ಹೊರಗಡೆಯೇ ತಿರುಗುಶಕ್ತಿ ಇಲ್ಲದೆ) ನೀರು ಎತ್ತಿಕೊಡುವ ಸಾಧನ. ರಾಮ್ ಅಂದರೆ ಒತ್ತಡದಲ್ಲಿ ಹೊಡೆಯುವುದು ಎಂದು ಅರ್ಥೈಸಬಹುದು. ಈ ಸಾಧನವು ಯಾವ ನಿರ್ವಹಣಾ ಚಾರ್ಜೂ ಕೇಳದೆ (ಅಂದರೆ ವಿದ್ಯುಚ್ಚಕ್ತಿ, ಪೆಟ್ರೋಲ್, ಡೀಸಲ್ ಚಾರ್ಜು) ಕೇಳದೆ ನಿರಂತರವಾಗಿ ಗುಲಾಮನಂತೆ ಮಾತಾಡದೆ ಕೆಲಸಮಾಡುತ್ತದೆ.
೧೯೬೬ರಲ್ಲಿ ನಮ್ಮ ಮದುವೆಯ ಸಮಯದಲ್ಲಿ ದಿನ ಬಳಕೆಗೆ ನೀರಿನ ಅಗತ್ಯ ಹೆಚ್ಚಾಗಿದ್ದುದರಿಂದ ಹೈಡ್ರಾಂ ಹತ್ತಿರದ ಅಣೆಕಟ್ಟೆಯ ಹತ್ತಿರ ಇವರ ಸ್ಕೂಟರ್ ನಿಲ್ಲಿಸಿ ಅದರ ಹಿಂದಿನ ಚಕ್ರಕ್ಕೇ ಬೆಲ್ಟ್ ಅಳವಡಿಸಿದ ಒಂದು ಸಣ್ಣ ಪಂಪ್ ಮುಖಾಂತರವೇ, ಅಳವಡಿಸಿದ ೧೨೦೦ಅಡಿ ಜಿ.ಐ. ಪೈಪ್ ಮುಖಾಂತರ ಮನೆ ನೀರಿನ ದೊಡ್ಡ ಟ್ಯಾಂಕ್‌ಗೆ ನೀರು ತುಂಬಿಸಿದ್ದರು. ಅಣ್ಣ(ಕುವೆಂಪು)ರಿಗೆ ಇದೆಲ್ಲ ಅಚ್ಚರಿ! ಸ್ಥಳಾವಕಾಶವಿಲ್ಲದಿರುವುದರಿಂದ ಹಾಗೂ ತುಂಬಾ ಟೆಕ್ನಿಕಲ್ ಆಗಿರುವುದರಿಂದ ಓದುಗನ ಆಸಕ್ತಿ ಬಗ್ಗೆ ಹೇಗೋ ಎನ್ನಿಸಿ, ಇಲ್ಲಿ ಹೈಡ್ರಾಂ ಬಗ್ಗೆ ವಿವರವಾಗಿ ಬರೆಯುತ್ತಿಲ್ಲ.
ಇವರ ಗೆಳೆಯ ಎನ್.ಡಿ.ಸುಂದರೇಶ್‌ರ ಮದುವೆ ಮಾತುಕತೆಯಾಗಬೇಕಿತ್ತು. ಇವರು ಶೋಭಾ ರವರನ್ನು ಪ್ರೀತಿಸಿದ್ದರು. ಇವರಿಬ್ಬರೂ ಡಿಗ್ರಿ ಪೂರೈಸಿದ ನಂತರ ಮನೆಯವರು ಇವರ ಮದುವೆಗೆ ತುಸು ಸಮಸ್ಯೆ ಒಡ್ಡಿದರು. ಟಸ್‌ಪುಸ್ ಮಾತು. ಬೇರೆ ವಿರೋಧವೇನಿಲ್ಲ. ಆ ಸಮಯದಲ್ಲಿ ಶಾಮಣ್ಣ ಶ್ರೀದೇವಿ ನಮ್ಮ ತೋಟಕ್ಕೆ ಬಂದಿದ್ದರು. ಎರಡನೇ ವರ್ಲ್ಡ್ ವಾರ್‌ನಲ್ಲಿ ಉಪಯೋಗಿಸಿದ ಹಳೇ ಜೀಪು ಆಗ ನಮ್ಮ ವಾಹನ. ಅದರಲ್ಲಿ ನಾವು ನಾಲ್ಕು ಮಂದಿ ಹೊರಟೆವು. ಶಿವಮೊಗ್ಗೆಗೆ(ಈ ಸುಂದರೇಶ್ ಜಮೀನು ಕೊಂಡು ಅಶೋಕನಗರ, ಭದ್ರಾವತಿಯಲ್ಲಿ ಸೆಟ್ಲ್ ಆದರು. ಮುಂದೆ ಇವರೇ ರೈತ ಮುಖಂಡರಾದವರು.)
ನಲವತ್ತು ಮೈಲಿ ಹೋಗಿ ಚಿಕ್ಕಮಗಳೂರು ತಲುಪುವಷ್ಟರಲ್ಲಿ ಜೀಪು ಕೆಟ್ಟಿತು. ಜೀಪು ಕೊಂಡ ಹೊಸತು. ಇನ್ನೂ ರಿಪೇರಿ ಮಾಡಲು ಇವರು ಕೈ ಹಾಕಿರಲಿಲ್ಲ. ಗ್ಯಾರೇಜಿಗೆ ಬಿಟ್ಟರು. ಅರ್ಜೆಂಟ್ ರಿಪೇರಿ ಆಗಬೇಕಿರುವುದನ್ನೂ ಹೇಳಿಕೊಂಡರು. ಗ್ಯಾರೇಜಿನವ ಬಾನೆಟ್ ಎತ್ತಿ ನೋಡಿದ. ಏನೇನೋ ತಿಣುಕಿದರೂ ಸ್ಟಾರ್ಟ್ ಆಗುತ್ತಿಲ್ಲ. ಇವರೂ ಕೈ ಹಾಕಿದರು. ಗಡಿಬಿಡಿ, ಶಾಮಣ್ಣ ಅತ್ಲಾಗೆ ನೋಡ್ತಾರೆ, ಇತ್ಲಾಗೆ ನೋಡ್ತಾರೆ. ಇವರಿಬ್ಬರಿಲ್ಲದೆ ಮದುವೆ ಬಗ್ಗೆ ಏನು ನಿರ್ಧಾರವಾಗುತ್ತೋ ಎಂಬ ಒತ್ತಡ ಬೇರೆ. ನಾನು ಶ್ರೀದೇವಿ ಕಣ್‌ಕಣ್ ಬಿಡೋದು. ಇಡೀ ದಿನ ಹೀಗೇ ಕಳೆಯಿತು. ಅಲ್ಲೇ ಗ್ಯಾರೇಜಿನ ಹತ್ತಿರದಲ್ಲೇ ಹೊಟೇಲೊಂದರಲ್ಲಿ ರೂಮು ಹಿಡಿದೆವು. ಸಿಕ್ಕಿದ್ದು ಒಂದೇ ಸಣ್ಣ ರೂಮು. ಅದರಲ್ಲೇ ನಾಲ್ವರೂ ಅಡಕಿಕೊಂಡು ಮಲಗಿದೆವು. ಬೆಳಿಗ್ಗೆ ಹೇಗೋ ಜೀಪು ಸ್ಟಾರ್ಟ್ ಮಾಡಿದ ಗ್ಯಾರೇಜಿನವ. ಅಲ್ಲಿಂದ ತರೀಕೆರೆ ತಲುಪಿವ ಹೊತ್ತಿಗೆ ಜೀಪು ಮತ್ತೆ ನಿಂತೇ ಹೊಯ್ತು. ನಾವು ಶಿವಮೊಗ್ಗ ಬಸ್ಸು ಹಿಡಿದೆವು. ಇವರು ಮಾತ್ರ ಜೀಪಿನಲ್ಲೇ. ಶಿವಮೊಗ್ಗೆಯಿಂದ ಮೆಕ್ಯಾನಿಕ್ ಹೋದ. ರಿಪೇರಿ ಮಾಡಿಕೊಂಡು ಜೀಪು ತಂದರು. ಕಳ್ಳ ಬಡ್ಡೀ ಮಗ ಚಿಕ್ಕಮಗಳೂರಿನವನಿಗೆ ಏನೂ ಗೊತ್ತಿಲ್ಲದೆ ಸತಾಯಿಸಿದನೆಂದು ಬೈದುಕೊಂಡರು ತೇಜಸ್ವಿ. ಇಗ್ನಿಶನ್ ಟೈಮಿಂಗ್ ತೊಂದರೆಯಿಂದ ಇದೆಲ್ಲ ಪಜೀತಿ ಆಯ್ತಂತೆ.
ಇಲ್ಲಿಂದ ಮುಂದೇ ಇವರೇ ಇಡೀ ಇಂಜಿನ್ ಡೌನ್ ಮಾಡುತ್ತಿದ್ದರು. ಜೀಪಿನ ಕೆಳಗೆ ಅಡ್ಡಡ್ಡ ಮಲಗಿಕೊಂಡು ರಿಪೇರಿ ಮಾಡುತ್ತಿದ್ದರು. ಕೈಮೈಯೆಲ್ಲಾ ಮಸಿಮಯವಾಗುತ್ತಿತ್ತು. ಆಗಿನ ಇವರ ಡ್ರೆಸ್ ಬಗ್ಗೆ ಓದಿಕೊಂಡರೆ ಚೆನ್ನ. ನಮ್ಮ ಮನೆಯಲ್ಲಿ ನನಗೊಬ್ಬಳು ಸಹಾಯಕಿ ಅನೇಕ ವರ್ಷಗಳಿಂದ ಇರುವಳು. ದೇವಕಿಯೆಂದು. ಬಹಳ ಶುಭ್ರವಾಗಿ ಬಟ್ಟೆ ಒಗೆಯುವಳು. ಎಷ್ಟು ಶುಭ್ರವೆಂದರೆ ನಮ್ಮ ಮಕ್ಕಳ ಚೂಡಿದಾರದಲ್ಲಿನ ಹೂಗಳು ಮಾಯ. ಇವರ ಅಂಗಿಗಳ ಗುಂಡಿಗಳೇ ಮಾಯ. ಹಾಗೆ ಜಪ್ಪುತ್ತಾಳೆ. ಇದೆಲ್ಲ ಇವರಿಗೆ ರೇಜಿಗೆ.
ಜೀಪ್ ರಿಪೇರಿ ಮಾಡುವಾಗಂತ ನಿಕ್ಕರ್ ಅನ್ನು ಇವರೇ ಸಿದ್ಧಪಡಿಸಿಕೊಂಡಿದ್ದರು. ಇವರು ಜೀನ್ಸ್ ಟ್ರೌಸರ್ಗೆ ಮೋಹಿತರಾಗುವ ಮುಂಚೆ ವೆಲ್‌ವೆಟ್ ಕಾಡ್ರಾ ಟ್ರೌಸರ್ ಹಾಕುತ್ತಿದ್ದರು. ಈ ಟ್ರೌಸರ್‌ಗಳನ್ನು ಸಯ್ಯಾಜಿ ರಾವ್ ಸರ್ಕಲ್, ಮೈಸೂರಿನ ಹತ್ತಿರದ ದರ್ಜಿ ಕೈಲಿ ಹೊಲೆಸಿಕೊಳ್ಳುತ್ತಿದ್ದರು. ದರ್ಜಿಗಳ ಸಹವಾಸವೆಂದರೆ ರೇಜಿಗೆ. ಅವರುಗಳು ಹೊಲೆದು ಕೊಡುವುದು ಒಪ್ಪಿಗೆಯಾಗುತ್ತಲೇ ಇರಲಿಲ್ಲ. ಎಲ್ಲೋ ಬಿಗಿ, ಎಲ್ಲೋ ಸಡಿಲ. ಅದಕ್ಕೆ ತಕ್ಕ ಹಾಗೆ ಮೈ ಆಡಿಸುವುದು, ಭುಜ ಕುಣಿಸುವುದು ಅಭ್ಯಾಸವಾಗುತ್ತೆನ್ನುವುದು ಇವರ ಮತ. ಇದು ಹೌದೂ ಸಹ. ಎರಡೆರಡು ಸಲ ಅಲ್‌ಟ್ರೇಷನ್ಗೆಂದು ದರ್ಜಿ ಅಂಗಡಿಗೆ ತಿರುಗುವುದು ಇನ್ನೂ ಬೇಸರ. ಒಮ್ಮೆ ದರ್ಜಿಗೆ ನೀನು ಮೆಟ್ಟು ಹೊಲಿಯಲಿಕ್ಕೇ ಲಾಯಕ್ಕೆಂದು ಬೈದು ಬಟ್ಟೆ ಹಿಂತೆಗೆದುಕೊಳ್ಳದೆ ಬಂದಿದ್ದರು. (ಇವರದ್ದು ದೊಡ್ಡ ಸೈಜು ಬೇರೆ) ಮುಂದೆ ಸರಿ ಅಳತೆಯ ರೆಡಿಮೇಡ್ ಜೀನ್ಸ್ ಸಿಕ್ಕಿತು. ಒಳ್ಳೆ ಅಂಗಿಗಳೂ ದೊರೆತವು. ಎಲ್ಲೋ ಇರುವ ಈ ದರ್ಜಿ ಹೇಗೆ ಇಷ್ಟು ಪರ್ಫಕ್ಟ್ ಆಗಿ ಹೊಲೆಯುವನೆಂದು ಸೋಜಿಗಪಡುತ್ತಿದ್ದರು. ವೆಲ್‌ವೆಟ್ ಕಾಡ್ರಾ ಟ್ರೌಸರ್‌ಗಳು ನವೆದಂತೆನಿಸಿದಾಗ ನಿಕ್ಕರ್ ಅಳತೆಗೆ ಕತ್ತರಿಸುತ್ತಿದ್ದರು. ನನ್ನ ಸಹಾಯಕಿಯ ಒಗೆತದಿಂದ ಗುಂಡಿ, ಹೊಲಿಗೆ ಮಾಯವಾಗುತ್ತಿತ್ತು. ನಾನು ಸರಿ ಮಾಡಿಡುತ್ತಿದ್ದೆ. ಮತ್ತೂ ಹೋಗುತ್ತಿದ್ದವು. ಇದಕ್ಕೆ ಇವರು ಒಂದುಪಾಯ ಮಾಡಿದರು. ಮೀನಿನ ಗಾಳಕ್ಕೆ ಬಳಸುತ್ತಿದ್ದ ತೆಳ್ಳನೆ ನೈಲಾನ್ ದಾರದಲ್ಲಿ ಗುಂಡಿಗಳನ್ನು ಹೊಲೆದು, ಕತ್ತರಿಸಿದ ಭಾಗವನ್ನು ಅದೇ ದಾರದಲ್ಲಿ ಹೆಮ್ಮಿಂಗ್ ಮಾಡುತ್ತಿದ್ದರು. ಹೊಲಿಗೆ ಸ್ವಲ್ಪ ಒರಟೊರಟಾಗಿರುತ್ತಿತ್ತು. ಇನ್ನೂ ಒಂಚೂರು ಮುಂದೆ ಹೋಗಿ ಹೇಗೂ ರಿಪೇರಿಗೆ ತಾನೆ ನಿಕ್ಕರ್ ಒಗೆಯಲಿಕ್ಕೇ ಹಾಕುತ್ತಿರಲಿಲ್ಲ. ಪ್ರೊಫೆಷನಲ್ ಮೆಕ್ಯಾನಿಕ್ಸ್‌ಗಳಂತೆ ನಿಕ್ಕರ್ ಎಣ್ಣೆ ಹಿಡಿದಂತೆನ್ನಿಸಿದಾಗ ಬಚ್ಚಲ ಒಲೆಗೆ ಹಾಕುತ್ತಿದ್ದರು.
ಒಂದು ಸಲ ಕವಿತಾ ಲಂಕೇಶ್ ಮತ್ತು ಗೌರಿ ಲಂಕೇಶ್ ಮನೆಗೆ ಬರುತ್ತೇವೆಂದು ತಿಳಿಸಿದರು. ಕಿರಗೂರಿನ ಗಯ್ಯಾಳಿಗಳು ಸಿನೆಮಾ ಮಾಡುವುದರ ಬಗ್ಗೆ ಮಾತಾಡಬೇಕೆಂದು. ಅವತ್ತು ನನ್ನ ಮಹಾರಾಜ ಮಿಕ್ಸಿ, ಕೆಲಸ ಮಾಡುತ್ತಿದ್ದಾಗ ಕರ್ಕಶ ಸದ್ದಿನೊಂದಿಗೆ ಗಕ್ಕನೆ ನಿಂತು ಹೋಯಿತು. ಮಹಡಿ ಮೇಲೆ ಕಂಪ್ಯೂಟರಿನ ಮುಂದೆ ಕೂತು ಕೆಲಸ ಮಾಡುತ್ತಿದ್ದ ಇವರಿಗೆ ಆ ಕರ್ಕಶ ಸದ್ದಿನಿಂದಲೇ ಗೊತ್ತಾಗಿತ್ತು ಎಲ್ಲ. ಮಲಗಲು ಇವರು ಕೆಳಗೆ ಬಂದಾಗ ಸರಿರಾತ್ರಿ ಹನ್ನೆರಡೂವರೆ ಗಂಟೆ. ಆಗ ಮಿಕ್ಸಿಯನ್ನು ಬಿಚ್ಚಿ ನೋಡಿದ್ದಾರೆ. ಮೋಟಾರಿನಲ್ಲಿ ತೊಂದರೆ ಇರಬಹುದೆಂದು. ಕಾರ್ಬನ್ ಬ್ರಷ್‌ನಲ್ಲಿ ದೂಳು ಕೂತಿತ್ತಂತೆ. ಎಮರಿ ಪೇಪರ್(ಉಪ್ಪು ಕಾಗದ)ದಲ್ಲಿ ತಿಕ್ಕಿ ಕ್ಲೀನ್ ಮಾಡಿ ಹಾಕಿದ್ರು. ಕಾಂಟಾಕ್ಟ್ ಸರಿಯಾಗುವಂತೆ ಮಾಡಬೇಕಿತ್ತು. ಜೋಡಿಸಲು ನನ್ನ ಸಹಾಯ ತಗೊಂಡರು. ನನಗೆ ನಾಳೆಯ ವಿಶೇಷ ಅಡುಗೆಗೆ ತೊಂದರೆಯಾಗಬಾರದೆಂದು ಈ ಪರಿ ಕೆಲಸ ಇವರದು. (ಪ್ರಿಯ ಓದುಗ ಮಹಾಶಯರೆ, ಇವರಿಗೆ ಹೆಂಡತಿ ಮೇಲೆ ಪ್ರೀತಿ ಕಾಳಜಿ ಹೀಗೆ ವ್ಯಕ್ತವೇ ಎಂದು ಪ್ರತಿಕ್ರಿಯಿಸಬೇಡಿ. ಇಲ್ಲಿ ಇವರು ಯಂತ್ರಕ್ಕೆ ಪ್ರತಿಕ್ರಯಿಸುತ್ತಿದುದ್ದನ್ನು ಗಮನಿಸಿ)
ಕಾರಿನಲ್ಲಿ ಕೇರಳದ ಕಣ್ಣೂರಿಗೆ ಮಕ್ಕಳೊಟ್ಟಿಗೆ ಹೊರಟೆವು. ಅಪರೂಪದ ಗಿಡಗಳ, ಬೀಜಗಳ ಕಲೆಕ್ಷನ್‌ಗಾಗಿ. ಅಲ್ಲಿನ ವಿಶ್ವವಿದ್ಯಾಲಯದ ತೋಟಗಾರಿಕೆ ನೊಡೋಣೆಂದು, ಜೊತೆಯಲ್ಲಿ ಪ್ಲ್ಯಾಂಟ್ ಪೆಥಾಲಜಿಸ್ಟ್‌ರಾದ ಡಾ.ಚಂದ್ರಶೇಖರ್ ಮತ್ತು ಗೆಳೆಯ ರೀತು ಸ್ಕೂಟರಿನಲ್ಲಿ ಬಂದಿದ್ದರು. ಅವರ ಸಂಸಾರ ಕಾರಿನಲ್ಲಿ ನಮ್ಮೊಟ್ಟಿಗೆ. ಒಂದು ದೊಡ್ಡ ಎತ್ತರದ ಮರದ ಬೀಜ ಥೇಟ್ ಬೆಕ್ಕಿನ ಬಾಲದಂತೆಯೇ ನನ್ನ ಅದೃಷ್ಟಕ್ಕೆ ಸಿಕ್ಕಿ ವಿಸ್ಮಯವಾಯಿತು. ವಾಪಾಸು ಬರುವಾಗ ಮಟಮಟ ಮಧ್ಯಾಹ್ನ. ರಣರಣ ಬಿಸಿಲು, ಊರಾಚೆ, ದಾರಿ ಮಧ್ಯೆ ಕಾರು ನಿಂತಿತು. ನಾನು ನಿರ್ಯೋಚನೆಯಿಂದಿದ್ದೆ. ಇವರು ರಿಪೇರಿ ಮಾಡುವರೆಂಬ ಧೈರ್ಯ. ಉಳಿದವರಿಗೆ ಕಳವಳ. ಇವರು ಕಾರಿನಿಂದಿಳಿದು ಬಾನೆಟ್ಟು ತೆಗೆದರು. ಒಂದು ಕಡೆಯಿಂದ ಎಲ್ಲವನ್ನೂ ಸೂಕ್ಷ್ಮವಾಗಿ ಪರಿಶೀಲಿಸಿದರು. ಪೆಟ್ರೋಲ್ ಕಸ ಬಂದಿರಬಹುದೆಂಬ ಅನುಮಾನ ಇತ್ತು. ಅದು ಸರಿಯಾಗೇ ಫ್ಲೋ ಆಗುತ್ತಿತ್ತು. ಪಾಯಿಂಟ್ ಸೆಟ್ ಬಿಚ್ಚಿಕೊಂಡರು. ಅದನ್ನು ಉಜ್ಜಿ ಕ್ಲೀನ್ ಮಾಡಿ ಗ್ಯಾಪ್ ಅಡ್ಜಸ್ಟಮೆಂಟ್ ಮಾಡಿ ಹಾಕಿದರು. ಕೂಡಲೆ ಸ್ಟಾರ್ಟ್ ಆಯ್ತು. ಇವರು ಯಂತ್ರದ ಕಾರ್ಯ ವಿಧಾನದ ಮೂಲ ತತ್ವಗಳನ್ನು ಅರ್ಥ ಮಾಡಿಕೊಳ್ಳುತ್ತಿದ್ದರು. ಯಂತ್ರ ರಿಪೇರಿ ಮಾಡಬೇಕಾದರೆ ಯಂತ್ರ ವೈದ್ಯರಾಗಬೇಕೆನ್ನುತ್ತಿದ್ದರು.
ನಾನು ಕಾರ್ ಡ್ರೈವ್ ಮಾಡುವುದು ಕಲಿತ ಹೊಸತರಲ್ಲಿ ನನ್ನ ತಪ್ಪುಗಳನ್ನು ತಿದ್ದುವಾಗ(ಸ್ವಲ್ಪ ಬೈಗಳದ ಜೊತೆಗೆ) ಆಯಾ ಭಾಗಗಳು ನನ್ನ ತಪ್ಪಿನಿಂದ ವೇರ್ ಔಟ್ ಆಗುವುದನ್ನೂ ತಿಳಿಸಿಕೊಡುತ್ತಿದ್ದರು. ಅಷ್ಟು ಪರಿಪೂರ್ಣತೆ ಅವರಲ್ಲಿತ್ತು. ಇವರು ಒಳ್ಳೆಯ ಚಾಲಕರೂ ಕೂಡ. ಒಂದೇ ಒಂದು ಆಕ್ಸಿಡೆಂಟ್ ಮಾಡಿರಲಿಲ್ಲ. ಅಷ್ಟೇ ಅಲ್ಲ, ಡ್ರೈವ್ ಮಾಡ್ತ ಮಾಡ್ತಾನೆ ಪುಟ್ಟ ಪುಟ್ಟ ಬಟೇರ ಮರಿಗಳು ಸಣ್ಣ ಪೊದರಿನಲ್ಲಿ ಮರೆಯಾಗಿ ಕಣ್ತಪ್ಪಿಸುವುದು ಇವರ ಕಣ್ಣಿಗೆ ಬೀಳುತ್ತಿತ್ತು. ಕೂಡಲೆ ರಿವರ್ಸ್ ಗೇರಿಗೆ ಹಾಕುತ್ತಿದ್ದರು. ಆ ಬಟೇರಗಳನ್ನು ನೋಡಿದ ಬಳಿಕವೇ ಮುಂದೆ ಸಾಗುತ್ತಿದ್ದುದು. ಇನ್ನೊಂದು ಸಲ, ನಾವು ಮಕ್ಕಳೊಟ್ಟಿಗೆ ದಾಂಡೇಲಿಗೆ ಹೋಗಿದ್ದೆವು. ಡ್ರೈವ್ ಮಾಡ್ತಾನೆ ದೊಡ್ಡಮರದ ತುಟ್ಟ ತುದಿಯಲ್ಲಿದ್ದ ಬಣ್ಣಬಣ್ಣದ ಹಾರ್ನ್‌ಬಿಲ್(ದೊಡ್ಡ ಮಂಗಾಟೆ ಹಕ್ಕಿ) ಗುರುತಿಸಿದರು. ಕಾರು ನಿಲ್ಲಿಸಿ ನಮಗೆಲ್ಲ ತೋರಿಸಿದರು. ಅಂತಹ ಚುರುಕು ಕಣ್ಣು! ಅಂತಹ ಜೀವನಾಸಕ್ತಿ! ಇಂತಹ ಲೆಕ್ಕವಿಲ್ಲದಷ್ಟು ಇವರಲ್ಲಿ.
ದಿ ಒಡೆಸ್ಸಾ ಫೈಲ್ ಬೈ ಫೆಡ್ರಿಕ್ ಫೊರ್ಸಿತ್ ಪುಸ್ತಕವನ್ನು ಇವರು ಓದಿದ್ದರು. ಸಿನೆಮಾವನ್ನೂ ನೋಡಿದ್ದರು. ಇದರಲ್ಲಿ ಒಬ್ಬ ಹುಡುಗನನ್ನು ಕೊಲ್ಲಲು ನಾಜಿ ಕಡೆಯವರು ಆದೇಶ ಕೊಟ್ಟಿರುತ್ತಾರೆ. ಅದಕ್ಕಾಗಿ ಅವನ ಕಾರಿನಲ್ಲಿ ಬಾಂಬ್ ಇಟ್ಟು, ಸರ್ಕ್ಯೂಟ್ ಪೂರ್ಣಗೊಂಡು ಅದು ಸಿಡಿಯಲು ಎರಡು ಕಾಂಟ್ಯಾಕ್ಟ್‌ಗಳನ್ನು ಕಾರಿನ ಶಾಕ್‌ಅಬ್‌ಸಾರ್ಬರ್ ಕಾಯಿಲ್ ಸ್ಪ್ರಿಂಗ್‌ಗಳ ಮಧ್ಯೆ ಇಟ್ಟಿರುತ್ತಾರೆ. ಕಾಂಟ್ಯಾಕ್ಟ್ ಬರದೆ ಬಾಂಬು ಸಿಡಿಯುವುದಿಲ್ಲ. ಅದು ಇಂಗ್ಲಿಷ್ ಕಾರು ಆಗಿತ್ತು. ಅದಕ್ಕೆ ಸಾಫ್ಟ್ ಸ್ಪ್ರಿಂಗ್ ಹಾಕಿರುತ್ತಾರೆ. ಆದರೂ ದಾರಿ ಮಧ್ಯೆ ಅಡ್ಡ ಬಿದ್ದ ಮರವನ್ನು ದಾಟಿಸುವಾಗ ಜಂಪ್ ಆಗಿ ಬಾಂಬ್ ಸಿಡಿಯುತ್ತೆ. ತೇಜಸ್ವಿ ಇದನ್ನೆಲ್ಲ ಕೂಲಂಕುಷವಾಗಿ ಗಮನಿಸುತ್ತಿದ್ದರು. ಇವರು ಹೇಳುತ್ತಿದ್ದುದು, ಕನ್ನಡದ ಬರಹಗಾರರು ಈ ರೀತಿಯಾಗಿ ವಿವರವಾಗಿ ತಿಳಿದು ಬರೆದರೆ ಒಳ್ಳೆಯದೆನ್ನುತ್ತಿದ್ದರು.
ಅತಿಥಿಗಳು ಮತ್ತು ಹಠಯೋಗ
ತೇಜಸ್ವಿ ಇದ್ದಾಗ ನಮ್ಮ ಮನೆಗೆ ಮಂದಿ ಬರುವವರು ಬಹಳವಿದ್ದರು. (ಈಗಲೂ ಬರುವರು) ಬಸ್ಸಿನಲ್ಲಿ ಶೈಕ್ಷಣಿಕ ಪ್ರವಾಸಕ್ಕಾಗಿ ಈ ಕಡೆಗೆ ಬಂದು ಹೋಗುವವರು ಮೂಡಿಗೆರೆ ಹ್ಯಾಂಡ್ ಪೋಸ್ಟು ತೇಜಸ್ವಿ ಮನೆಗೆ ಬರಲೇಬೇಕು, ಹೋಗಲೇಬೇಕೆಂದು ಹಠಕ್ಕೆ ಬಿದ್ದಂತೆ ಬಂದು ಇವರನ್ನು ಮಾತಾಡಿಸಿಕೊಂಡು ಹೋಗುತ್ತಿದ್ದರು. ದೂರದೂರಿನಿಂದ ಜಾಣ ಜಾಣೆಯರು ಬಂದು ವಿದ್ಯಾರ್ಥಿಗಳಾಗಿ ಇವರ ಸುತ್ತ ಕೂತು ಪ್ರಶ್ನೆಗಳನ್ನು ಹಾಕಿ ಉತ್ತರ ಪಡೆದು ಧನ್ಯರಾಗಿ ಹೋಗುತ್ತಿದ್ದರು. ಅದೆಷ್ಟು ಚೆನ್ನಾಗಿ ವಿಚಾರ ವಿನಿಮಯವಾಗುತ್ತಿತ್ತು ಛೆ! ಅವನ್ನು ರೆಕಾರ್ಡು ಮಾಡಿಕೊಳ್ಳಲಿಲ್ಲವೆ, ಪರಿತಪಿಸುವಂತಾಗುತ್ತಿದೆ ಈಗ. ಇವರೊಂದಿಗಿನ ಮಾತು ಬರೀ ಸಾಹಿತ್ಯಕ್ಕೇ ಮಾತ್ರ ಮೀಸಲಾಗಿರುತ್ತಿರಲಿಲ್ಲ.
ದೂರದ ಗುಲ್ಬರ್ಗಾದಿಂದ ವೃದ್ಧ ರೈತರ ಗುಂಪೊಂದು ಬಂದು ಇವರಲ್ಲಿ ಕೃಷಿ ಬಗ್ಗೆ, ಬೇಸಾಯದ ಬಗ್ಗೆ ಚರ್ಚೆ ಮಾಡಿದ್ದರು. ಅವರ ಕಷ್ಟ, ನಷ್ಟ, ಅನುಭವಗಳನ್ನು ಇವರಲ್ಲಿ ನಿವೇದಿಸಿಕೊಂಡಿದ್ದರು. ಬೇಸಾಯವನ್ನು ಹೇಗೆ ಸುಧಾರಿಸಿಕೊಳ್ಳಬೇಕೆಂದು ಕೇಳಿದ್ದರು. ಪಾಪ! ವೃದ್ಧರು, ಅನುಭವದಿಂದ ಮಾಗಿದವರು. ಇವರು ನಿರ್ಗಮಿಸಿದಾಗ ಎರಡೆರಡು ಸಲ ಫೋನು ಮಾಡಿಕೊಂಡು `ಅಮ್ಮಾರೆ, ನಿಮ್ಮ ಹಿಂದೆ ನಾವಿದ್ದೇವೆ. ನಮಗೆ ನಿಮ್ಮದೇ ಚಿಂತಿ ಆಗತೈತಿ ಎಂದು ಹೇಳಿದರೆಲ್ಲ. ನನಗೆ ಕಣ್ಣೀರಿಡುವಂತಾಗುತ್ತೆ`. ಅಂದು ಅವರು ಬಿಸಿಲಲ್ಲಿ ಬಂದಾಗ ದಣಿವಾಗಿದ್ದರು. ಆಗ ನಾನು ಕೊಟ್ಟ ಮಜ್ಜಿಗೆ ನೀರು, ನಿಂಬೆ ಪಾನಕವನ್ನೂ ಫೋನಿನಲ್ಲಿಯೂ ನೆನೆಯುವರೆಂದರೆ, ಧನ್ಯಾತ್ಮರುಗಳು ಅವರು! ರೈತರು!
ಕಳೆದ ವರ್ಷ ಮಾರ್ಚ್ ಮಧ್ಯದಲ್ಲಿ ಒಂದು ನಾಲ್ಕು ಜನ ಮಂಗಳೂರಿನ ಕಡೆಯವರು ಬಂದಿದ್ದರು. ಇವರೆಲ್ಲ ಮನಶಾಸ್ತ್ರಜ್ಞರು. ಸೈಕ್ಯಾಟ್ರಿಸ್ಟರು. ಇವರೊಟ್ಟಿಗೆ ಮಾತಾಡುವುದೇ ಆಶ್ಚರ್ಯವೆಂಬಂತೆ, ಪುಣ್ಯವೆಂಬಂತೆ ಮಾತಾಡುತ್ತಿದ್ದರು. ಜೊತೆಯಲ್ಲಿ ನಿಂತು ಫೋಟೋ ತೆಗೆಸಿಕೊಂಡರು. ಸಾರ್ ಹತ್ತೊಂಬತ್ತು ವರ್ಷದವರೆಂಬಂತೆ ಕಾಣುವರೆನ್ನುತ್ತ ಇಪ್ಪತ್ತೈದು ವರ್ಷ ಹತ್ತಿರದ ತರುಣಿ ಲಕ್ಚರರ್ ಒಬ್ಬರು ಪಕ್ಕದಲ್ಲಿ ನಿಂತು ಫೋಟೋ ತೆಗೆಸಿಕೊಂಡರು. ಆಮೇಲೆ ಅವರೆಲ್ಲ ಒಟ್ಟಿಗೇ ಕೇಳಿದರು ನಿಮಗೆ ವಯಸ್ಸೆಷ್ಟಾಯಿತು ಸಾರ್? `ವರ್ಷಗಳಿಗೇನ್ರೀ ಉರುಳುತ್ತಿರುತ್ತೆ. ನನಗೆ ಅದು ಮುಖ್ಯವೇ ಅಲ್ಲ. ನಮ್ಮ ಬದುಕು ಅರ್ಥಪೂರ್ಣವಾಗಿರಬೇಕು. ಅದು ಮುಖ್ಯ. ನನಗನ್ನಿಸುತ್ತೆ ನಾನು ಬಾಳ ಹಿಂದೆ ಹುಟ್ಟಿಕೊಂಡು ಬಿಟ್ಟಿದ್ದೇನೆ. ಇನ್ನೂ ನಿಖರವಾಗಿ ಬೇಕಾದರೆ ಇವಳನ್ನು ಕೇಳಿ ಇವಳು ಹೇಳುತ್ತಾಳೆಂದರು`. ಇದು ಇವರ ಧಾಟಿ ಮತ್ತು ಧೋರಣೆ.
ಯಾವುದೋ ಊರಿನಿಂದ ಒಬ್ಬ ಪಿ.ಯು.ಸಿ. ಹುಡುಗ ಬಂದ. `ಅಮ್ಮ, ತೇಜಸ್ವಿ ಸರ್ ಒಂದು ನಕ್ಷತ್ರವಿದ್ದಂತೆ. ನಕ್ಷತ್ರವನ್ನು ನೋಡಿ ಸಮಾಧಾನ ಮಾಡಿಕೊಳ್ಳಿ` ಎಂದು ಸಂತೈಸಿದನು. ಪ್ರತಿ ದಿನ ನೆನಪಾಗುವನು ಈ ಹುಡುಗ. ಹೀಗೆ ಬರುವವರು. ಹೋಗುವವರು. ನಿರಂತರ ನಿರುತ್ತರಕ್ಕೆ.
ಹಠಯೋಗ
ಇವರಿಗೆ ಬೇಗ ಕೋಪ ಬರುತ್ತಂತೆ ಎನ್ನುವರು ಹಲವರು. ಬಹಳ ಅಂದರೆ ಬಹಳ ಒಂದೈವತ್ತು ವರ್ಷದ ಹಿಂದೆ ನನಗೆ ಒಂದು ಕಾಗದ ಪೂರ್ತಿ ಬೈದೇ ಬರೆದಿದ್ದರು ಇವರು. ಆದರೂ ಆಗಲೂ ಅದು ಕೋಪ ಅಂತನ್ನಿಸಲಿಲ್ಲ ನನಗೆ.
ಮೊನ್ನೆ ಮೊನ್ನೆ ಮಗಳು ಈಶಾನ್ಯೆಗೆ ಒಂದು ಇ-ಮೈಲ್ ಬಂದಿತ್ತಂತೆ. ನಿಮ್ಮ ತಂದೆ ಕೈಯಲ್ಲಿ ಅತಿ ಹೆಚ್ಚು ಬೈಸಿಕೊಂಡವರು ಯಾರಾದರೂ ನಿಮಗೆ ಗೊತ್ತೆ? ಒಂದು ಸ್ವಲ್ಪ ಬೇಜಾರು ನೋವಿನಿಂದಲೇ ಇದನ್ನು ನನಗೆ ಹೇಳಿದಳು ಫೋನಿನಲ್ಲಿ.
ಹೀಗೊಂದು ಘಟನೆ. ನಮ್ಮ ಮನೆ ಅಂಗಳದಲ್ಲಿ ಒಂದು ಕರಿಬೇವಿನ ಮರ ಇದೆ. ಇದರ ಪಕ್ಕಕ್ಕೇ ಒಂದು ಕೆಂಡಸಂಪಿಗೆ ಮರ ಇದೆ. ನಾನೇ ನೆಟ್ಟು ಬೆಳಸಿದ್ದು. ಈ ಮರದ ತುಂಬ ಹೂ ಬಿಡುತ್ತೆ. ಆಮೇಲೆ ಕಾಯಾಗಿ, ಕಾಯಿಸಿಡಿದು, ಕೆಂಡದಂತ ಕೆಂಪು ಬೀಜ ಕಾಣಕ್ಕಾದಾಗ, ಬೀಜ ತಿನ್ನಕ್ಕೆ ನಾನಾ ಬಗೆಯ ಹಕ್ಕಿಗಳು ಮುಗಿ ಬೀಳ್ತವೆ. ಪಿಕಳಾರ, ಮಂಗಾಟೆ ಹಕ್ಕಿ, ಗಿಣಿ, ಕಾಗೆ, ಮಲಬಾರ್ ಟ್ರೋಜನ್ ಇತ್ಯಾದಿ ಪಕ್ಷಿಗಳು. ಈ ಹಕ್ಕಿಗಳು ಬರೋದನ್ನು ನೋಡಿ ಇವರೂ ಒಂದು ಸಲ ಬೀಜ ನೆಕ್ಕಿ ನೋಡಿದರು. ಕಹೀ ಅಂದರೆ ಕಹೀ ಅಂತೆ. ಇವರ ಕಹಿ ಮುಖ ನೋಡಕ್ಕಾಗಲಿಲ್ಲ.
ಒಂದು ಸಂಜೆ ಅಲ್ಲೇ ಪಕ್ಕದ ಸಿಟ್‌ಔಟ್ನಲ್ಲಿ ನಾವಿಬ್ಬರೂ ಕೂತಿದ್ದೆವು. ಹತ್ತಿರದ ಕೆರೆ ಮಧ್ಯೆ ಬಂಡೆಮೇಲೆ ಎರಡು ದೊಡ್ಡ ಕಳ್ಳ ಆಮೆಗಳು ಸಂಜೆ ಬಿಸಿಲಿಗೆ ಮೈಯೊಡ್ಡಿದ್ದವು. ಅಲ್ಲಿಗೇ ಎರಡು ನೀರು ಕೊಕ್ಕರೆ ಹಾರಿ ಬಂದು ಕೂತವು. ಮನೆ ಪಕ್ಕ ಒಂದು ಕೆರೆ, ಆ ಕೆರೆ ಮಧ್ಯೆ ಇಂಥ ಜೀವಿಗಳ ಇರುವಿಕೆ. ಇಂಥ ಪರಿಸರ ಯಾರನ್ನಾದರೂ ಆಕರ್ಷಿಸುತ್ತೆ. ನಮ್ಮ ಗಮನವೆಲ್ಲ ಅತ್ತಲೆ. ಆದರೆ ಚಿಟುಕಿ ಹಾಕಿ ಕಣ್ಣು ಮಿಟುಕಿಸಿ ಸೆಳೆಯಿತು ಬೇರೆಡೆಗೆ ನಮ್ಮ ಗಮನವನ್ನು. ಒಂದು ಚೂರು ದೊಡ್ಡ ಗಾತ್ರದ ಹಕ್ಕಿ ಸಂಪಿಗೆ ಮರಕ್ಕೆ ವಕ್ಕರಿಸಿತ್ತು. ಕೆಂಡದ ಉಂಡೆಯಂತಹ ಕೆಂಪು ಹಕ್ಕಿ. ಕೊರಳೆಲ್ಲ ಕಡುನೀಲಿ, ತಿಳಿ ಹಳದಿ ಅಂಚು ಅದಕ್ಕೆ. ಪುಕ್ಕ ಚೂರು ಉದ್ದ. ಎಂತಹ ಸೊಬಗು! ಇದೇ ಮಲಬಾರ್ ಟ್ರೋಜನ್ ಹಕ್ಕಿ. ಒಂದು ಎಲೆ ಅದರ ಕಣ್ಣಿಗೆ ಅಡ್ಡ. ಹಕ್ಕಿ ಕೂತೇ ಇದೆ. ಬೀಜಕ್ಕೆ ಕೊಕ್ಕು ತಾಗಿಸಲೇ ಇಲ್ಲ. ಕೊಕ್ಕನ್ನು ಚೂಪಾಗಿ ಮಾಡಿಕೊಂಡಿದೆ. ಇದೆಂತಹ ಸೊಂಬೇರಿ ಹಕ್ಕಿ. ಅಂದುಕೊಂಡು ನನ್ನ ಕೈ ಪೊಸಿಷನ್ ಬದಲಿಸಿದೆ. ಹಕ್ಕಿ ಹಾರೇ ಹೋಯಿತು. ನಿನ್ನಿಂದ ಸುಖ ಇಲ್ಲ ಮಾರಾಯ್ತಿ ಎಂದರು ಇವರು. ಬೆಳಕು ಮಬ್ಬಾಗಕ್ಕಾಗಿತ್ತು. ಸೂರ್ಯ ರಂಗು ಚೆಲ್ಲುತ್ತ ಮನೆ ಕಡೆ ಹೊರಟಿದ್ದ.
ಈ ಮಲಬಾರ್ ಟ್ರೋಜನ್ ಹಕ್ಕಿ ಮಲೆನಾಡಿನ ಹಕ್ಕಿ. ಆದರೆ ಕಾಣಸಿಗುವುದು ಬಲು ಅಪರೂಪ. ಯಾವಾಗಲೋ ಒಂದೊಂದು ಸಲ ಕಾಣಸಿಗುತ್ತೆ. ಮರುದಿನ ಸಂಪಿಗೆ ಬೀಜ ತಿನ್ನಲು ಈ ಹಕ್ಕಿ ಬಂದೇ ಬರುತ್ತೆಂದು ಖಾತರಿಯಾಗಿತ್ತು ತೇಜಸ್ವಿಗೆ. ಕರಿಬೇವು ಮರದ ಬುಡದಲ್ಲಿ ಹೈಡ್ನು ಸ್ಥಾಪಿಸಿಕೊಂಡರು. ಕ್ಯಾಮರಾ ಮತ್ತು ಕೂರಲು ಸ್ಟೂಲ್ನೊಂದಿಗೆ ಮರೆಯೊಳಗೆ ಮರೆಯಾದರು. ಹಕ್ಕಿಗಾಗಿ ಕಾದು ಕೂತರು. ಇವರು ಹೀಗೆ ಮರೆಯಲ್ಲಿ ಕೂತಾಗ ನಮ್ಮ ತೋಟದ ಕೆಲಸಗಾರರು ಅಲ್ಲಿ ಹತ್ತಿರದಲ್ಲಿ ಯಾರೂ ಸುಳಿದಾಡುವಂತೆಯೇ ಇರಲಿಲ್ಲ. ಕಟ್ಟಪ್ಪಣೆ, ನನಗೂ ಅದು ಅನ್ವಯ. ನಾನು ಚೂರು ಉತ್ಸಾಹದಲ್ಲಿ ಒಳಗಿನಿಂದಲೇ ಬಗ್ಗಿಬಗ್ಗಿ ನೋಡೋದು ಮಾಡ್ತಿದ್ದೆ. ಒಂದ್ಸಲ ಎಲ್ಲ ಮರೆತು, ಪೆದ್ದು ಪೆದ್ದಾಗಿ ಬಂತಾ? ಕೇಳಿದೆ. ನಿನ್ನ ತಲೆ ಎಂದರು. ಇನ್ನೂ ಬಂದಿಲ್ಲಂತ ಗೊತ್ತಾಯ್ತಲ್ಲ, ಮನೆ ಒಳಗಿನ ಕೆಲಸಕ್ಕೆ ಹೋದೆ.
ಬೆಳಿಗ್ಗೆ ಕಳೆಯುತ್ತಿದೆ. ಇವರು ತಿಂಡಿಗೂ ಬಂದಿಲ್ಲ. ಒಂದು ಸಲ ಹೀಗೆ ಕೂತರೆಂದರೆ ಕಾಲ, ಹೆಸರು, ಕುಲ, ಗೋತ್ರ ಎಲ್ಲ ಮರತಂತೆಯೇ ಇವರು. ಇದೊಂದು ಹಠಯೋಗವೇ ಸೈ. ಹಕ್ಕಿ ಫೊಟೋ ತೆಗೆಯೋವರೆಗೂ ಕಾಯೊದೇ ಸೈ. ಹಕ್ಕಿ ಬಂದಿರಬಹುದೇನೋ ಅಂದುಕೊಂಡೇ ನಾನು ಕೆಲಸ ಮಾಡಿಕೊಳ್ಳುತ್ತಿದ್ದೆ. ಹಕ್ಕಿ ಬಂದರೂ ಅದರ ಭಾವನೆಗಳ ಫೋಟೋ ತೆಗೆಯಕ್ಕೆ ಸಿಗಬೇಕಲ್ಲ. ಒಂದು ಮರದ ಕೊಂಬೆ ಮೇಲೆ ಕೂತಿರುವ ಬಣ್ಣ ಬಣ್ಣ ರೆಕ್ಕೆ ಪುಕ್ಕ ಕಾಣುವ ಹಾಗೆ ಚಿತ್ರ ತೆಗೆಯಬಹುದು. ಆದರೆ ಅದರ ಭಾವನೆಯನ್ನು ಸೆರೆ ಹಿಡಿಯುವುದು ಕಷ್ಟದ ಕೆಲಸ. ಅದಕ್ಕಾಗಿ ಕಾಯಬೇಕು. ಏಕಾಗ್ರತೆ ಬೇಕು. ತಾಳ್ಮೆ ಬೇಕು. ಮುಖ್ಯವಾಗಿ ಹಕ್ಕಿ ಬಗ್ಗೆ ತಿಳಿದಿರಬೇಕು. ಇದಕ್ಕಾಗಿ ಇವರು ಜೀವನ ಪೂರ್ತಿ ಮುಡಿಪಾಗಿಟ್ಟವರು.
ನನ್ನ ಅಡುಗೆ ಕೆಲಸ ಪೂರೈಸಿತು. ಒಗ್ಗರಣೆಗೆ ಕರಿಬೇವಿನ ಸೊಪ್ಪು ಬೇಕಿತ್ತು. ಎಲ್ಲ ಮರೆತು, ಮರದಿಂದ ಕಿತ್ತು ತರಲು ನೆಟ್ಟಗೆ ಹೋದೆ. ಮರಕ್ಕೆ ಕೈ ಹಾಕಿದೆ. `ಜ್ಞಾನವಿಲ್ಲದ ಹೆಂಗಸು. ನಿನಗೇನಾಗಿದೆಯೆ ಇವತ್ತು`. ಮರೆಯೊಳಗಿಂದ ಅಬ್ಬರಿಸಿದರು. ಬೆಚ್ಚಿಬಿದ್ದೆ ನಾನು. ಅಲ್ಲೆಲ್ಲೋ ಕೆಂಪು ಹಕ್ಕಿ ಸರಿದಾಡಿದಂತಾಯಿತು. ಪೆಚ್ಚಾದೆ. ನನ್ನಿಂದ ಇಂತಹ ಅಚಾತುರ್ಯವಾಯಿತೆ. ಅಲ್ಲೆ ನಿಂತೆ. ಮರೆಯೊಳಗಿಂದ ಹೊರಬಂದರು ಇವರು. ಬೆನ್ನು ನೆಟ್ಟಗೆ ಮಾಡಕಾಗ್ತಿಲ್ಲ ಇವರಿಗೆ. ಕಾಲೂ ಬಗ್ಗಿದೆ. ಒಂದು ವಾರ ಇದೇ ಸ್ಟೈಲ್ನಲ್ಲಿ ಇದ್ದರು ನೋವು ಅನುಭವಿಸುತ್ತ. ಸಂಕಟವಾಯಿತು ನನಗೆ. ಅಡ್ಡ ಬಂದೆನೆಲ್ಲ ಅಂದುಕೊಂಡೆ. ಹಕ್ಕಿ ಹಾರಿ ಹೋಯಿತೇ. ದುಃಖವಾಯಿತು.
ಇದೇನಿದು!! ಸಂತೆ, ಕೋವಿ
ಬೆಳಿಗ್ಗೆ ಮುಂಚೆ ಒಬ್ಬ ಪತ್ರಕರ್ತರು ಇವರಿಗೆ ಫೋನ್ ಮಾಡಿದರು.
‘ನಾಳೆ ನಿಮ್ಮ ಮನೆಗೆ ಬರಲೆ ಸಾರ್!’
‘ಯಾಕೆ?’
‘ಸುಮ್ಮನೆ ನಿಮ್ಮನ್ನು ಮಾತಾಡಿಸಿಕೊಂಡು ಬರಲೆಂದು.’
‘ಹಾಗಾದರೆ ಬರಬೇಡ ಮಾರಾಯ.’
‘ಇಲ್ಲ ಸರ್, ನಿಮ್ಮನ್ನು ಪತ್ರಿಕೆಗಾಗಿ ಒಂದು ಸಂದರ್ಶನ ಮಾಡಬೇಕಿತ್ತು. ಬರಲೇ ಬೇಕಾಗಿದೆ ಸರ್.’
‘ಹೋಗಲಿ ಬಾ ಮಾರಾಯ.’
ಇವರಿಗೆ ಯಾರು ಬಂದರೂ ತಾಪತ್ರಯ ಅನ್ನಿಸಲಿಕ್ಕಾಗಿತ್ತು. ಸುಖಾಸುಮ್ಮನೆ ಮಾತನಾಡುವುದು ಏಕೆ? ಎಂದು. ಈ ಪತ್ರಕರ್ತನು ಮಾರನೆದಿನ ಬಂದನು. ಪೇಪರ್ ಪೆನ್ನು ಹಿಡಿದುಕೊಂಡಿದ್ದನು. ಏನೇನೋ ಮಾತನಾಡಿದ, ಪ್ರಶ್ನೆ ಶುರುಮಾಡಿದ. ಕಾನೂರು ಹೆಗ್ಗಡತಿ ಬಗ್ಗೆಯೆಂದು ತೋರುತ್ತೆ. ಮೊದಲನೆಯ ಪ್ರಶ್ನೆಗೇ ತಿಳಿಯಿತು ಇವನು ಏನೆಂಬುದು. “‘ಕಾನೂರು ಸುಬ್ಬಮ್ಮ ಹೆಗ್ಗಡತಿ’ ಓದುರುವಿಯೇನಯ್ಯ.” ಇವರು ಕೇಳಿದರು. ‘ಇಲ್ಲ ಸರ್.’ ‘ಮತ್ತೆ? ನಾನು ಹೇಳಿದ್ದನ್ನು ನೀನು ಗ್ರಹಿಸುವುದಾದರೂ ಎಷ್ಟನ್ನು? ಹೇಗೆ? ನೀನು ಏನು ಬರೆಯಬಲ್ಲೆ? ಮೇಲಿನವರು ನಾಲ್ಕು ಪ್ರಶ್ನೆ ಹೇಳಿರುವುದನ್ನು ಬರೆದುಕೊಂಡು ಬಂದು ಸಂದರ್ಶನ ಮಾಡ್ತಿಯಾ ನೀನು. ಮೊದಲು ಪುಸ್ತಕ ಓದಿಕೊಂಡು ಬಾ. ಈಗ ಹೊರಡು’ ಎಂದರು. ತಾಳ್ಮೆಗೆಟ್ಟು ಹೇಳಿದರು. ಹೀಗೆ….
ಇವರು ಅತೀ ಸೂಕ್ಷ್ಮಮತಿಗಳು. ‘ಇಂಪರ್ಫೆಕ್ಷನ್’ ಕಂಡರೆ ಸಹಿಸಕ್ಕಾಗುತ್ತಿರಲಿಲ್ಲ. ಯಾವುದನ್ನೂ ತೀವ್ರವಾಗಿ ಅನುಭವಿಸುತ್ತಿದ್ದವರು. ತೀವ್ರವಾಗಿ ಜೀವಿಸುತ್ತಿದ್ದವರು. ಹಾಗಾಗಿಯೇ ಇವರ ವ್ಯಕ್ತಿತ್ವ ಅಷ್ಟೊಂದು ‘ಕಲರ್‌ಫುಲ್’ ಆಗಿದ್ದುದ್ದು. ಇವರ ಮನಸ್ಸು ಎಷ್ಟು ಸೂಕ್ಷ್ಮವಾಗಿತ್ತೋ ದೇಹವೂ ಅಷ್ಟೆ ಇತ್ತೆನ್ನುವುದಕ್ಕೆ ಇಲ್ಲಿ ಎರಡು ಘಟನೆಗಳನ್ನು ಸಂಕ್ಷಿಪ್ತವಾಗಿ ಹೇಳಲು ಪ್ರಯತ್ನಿಸುವೆನು.
ಸುಮಾರು ಹದಿನೈದು ವರ್ಷಗಳ ಹಿಂದೆ ನನಗೆ ‘ಸಯಾಟಿಕ’ ಎಂಬುದೊಂದು ಬಂದಿತ್ತು. ಅಂದರೆ ತೊಡೆ ಸಂದಿಯಲ್ಲಿನ ನೋವು. ನಾನು ಸೂರ್ಯ ನಮಸ್ಕಾರವನ್ನು ಅತಿಯಾಗಿ ಮಾಡಿ ಆ ನೋವು ತಂದುಕೊಂಡಿದ್ದೆ. ಆಗ ಕೂರಲಿಕ್ಕೂ ಆಗದೆ ನಿಲ್ಲಲಿಕ್ಕೂ ಆಗದಂತೆ ನೋವು ತೀವ್ರವಾಗಿತ್ತು. ಬೆಂಗಳೂರಿಗೆ ವೈದ್ಯರಲ್ಲಿಗೆ ಹೋಗಲೇಬೇಕಾಯಿತು. ಇವರ ಭಾವನವರಾದ ಆರ್ಥೊಪಿಡಿಕ್ ಸರ್ಜನ್‌ರಾದ ಡಾ.ಸುರೇಂದ್ರರವರಲ್ಲಿಗೆ ಹೋದೆವು. ಇವರ ಶ್ರೀಮತಿ, ತೇಜಸ್ವಿ ತಂಗಿಯಾದ ಇಂದುಕಲಾರವರಂತೂ ಅಣ್ಣ ತೇಜಸ್ವಿ ಮತ್ತು ನನ್ನನ್ನು ಅತ್ಯಂತ ಸಂಭ್ರಮದಿಂದ ಬರಮಾಡಿಕೊಂಡರು. ಅವರ ಮಕ್ಕಳಾದ ತಮಾಲಾ ಮತ್ತು ಶಾದ್ವಲಾ ಹೇಳಿದರು, ತಮ್ಮ ಮನೆಗೆ ಯಾರೋ ಒಬ್ಬ ರಾಜಕುಮಾರನನ್ನು ಬರಮಾಡಿಕೊಳ್ಳಲು ಅಮ್ಮ ಓಡಾಡುತ್ತ ಸಿದ್ಧತೆ ಮಾಡಿಕೊಂಡರಂತೆ. ಆದರೆ ರಾಜಕುಮಾರನ ಜೊತೆ ಒಬ್ಬರು ಕುಂಟುತ್ತ ಬಂದಿಳಿದರೆಂದರು.
ತಪಾಸಣೆ ನಡೆಯಿತು. ತೊಂದರೆ ಏನೂ ಇಲ್ಲೆಂದರು. ಫಿಸಿಯೋ ಥೆರಪಿ ತಗೊಂಡರೆ ಎಲ್ಲವೂ ಸರಿಹೋಗುತ್ತೆಂದು ಡಾ.ಸುರೇಂದ್ರ ಹೇಳಿದರು. ‘ಆಂಟಿಬಯೋಟಿಕ್’ ಮಾತ್ರೆಯನ್ನೂ ಕೊಟ್ಟರು. ಅಲ್ಲಿ ಒಂದು ದಿನವಿದ್ದು ಹೊರಟೆವು. ಹೊರಟು ಚೂರು ದೂರ ಸರಿಯುತ್ತಿದ್ದಂತೆ ಇವರು ಬೇರೆ ಮಾರ್ಗ ಹಿಡಿದರು. ಆ ಕ್ಷಣಕ್ಕೆ ನನಗೆ ಏನೂ ಗೊತ್ತಾಗಲಿಲ್ಲ.
ನನಗೆ ವಿಪರೀತ ಕಾಲುನೋವಾದ್ದರಿಂದ ಯಾರದೋ ಮುಖಾಂತರ ‘ಆಕ್ಯೂಪ್ರೆಷರ್’ ಪುಸ್ತಕ ಪಡೆದು ಓದಿಕೊಂಡಿದ್ದರಂತೆ. ಆ ವೈದ್ಯ ಮಹಾಶಯರು ಬೆಂಗಳೂರಿನಲ್ಲಿ ವೈದ್ಯಕೀಯ ಉಪಚಾರ ಕೊಡುವರೆಂದು ಮಾಹಿತಿ ಪಡೆದುಕೊಂಡಿದ್ದರು. ನೇರವಾಗಿ ಕಾರನ್ನು ಅಲ್ಲಿಗೇ ತಗೊಂಡ್ಹೋಗಿ ನಿಲ್ಲಿಸಿದರು. ಒಂದು ಕಿರಿದಾದ ರಸ್ತೆಯಲ್ಲಿದ್ದುದು(ಗಲ್ಲಿಯಲ್ಲಿ) ಈ ಕ್ಲಿನಿಕ್. ಇಲ್ಲೂ ಸಾಲುಗಟ್ಟಿಕೊಂಡು ನಿಂತಿವೆ ಕಾರುಗಳು! ದುಬೈಯಿಂದ ಈ ವೈದ್ಯಕೀಯ ಉಪಚಾರಕ್ಕೆಂದೇ ಬಂದವರೂ ಇದ್ದಾರೆ!
ವೈದ್ಯರು ನನ್ನನ್ನು ಪರೀಕ್ಷಿಸಿದರು. ಅದ್ಯಾವುದೋ ನರಗಳನ್ನು ಒತ್ತಿದರು. ಏನೂ ಆಗಿಲ್ಲವೆಂದೂ ಇನ್ನೊಂದು ಸಲ ‘ಅಕ್ಯೂಪ್ರೆಷರ್’ ಮಾಡಿಸಿಕೊಂಡರೆ ಸಂಪೂರ್ಣ ವಾಸಿಯಾಗುವುದೆಂದರು. ಈಗ ಇವರು ವೈದ್ಯರಿಗೆ ಪ್ರಶ್ನೆಗಳನ್ನು ಹಾಕಿದರು. ಸಂತೋಷದಿಂದಲೇ ಅವರು ಉತ್ತರಕೊಟ್ಟರು. ‘ಡೌಟ್ಸ್’ ನಿವಾರಣೆಯಾದಂತೆ ಕಂಡರು. ಎಲ್ಲಾ ಸರಿ ಅದು ಹೇಗೆ ನರ ಒತ್ತಿ ಗೊತ್ತು ಮಾಡಿಕೊಳ್ಳುವಿರಿ ಡಾಕ್ಟರೇ ಎಂದು ಕೇಳಿದರು. ಬನ್ನಿ ಸಾರ್, ಇಲ್ಲಿ ಕುಳಿತುಕೊಳ್ಳಿ. ಬೆನ್ನಿನ ಕಡೆ ನಿಮ್ಮ ಅಂಗಿ ಎತ್ತಿ, ನಿಮಗೆ ಗೊತ್ತು ಪಡಿಸುವೆನೆಂದರು. ಇವರ ಬೆನ್ನಿನ ಮಧ್ಯದಲ್ಲಿ ಯಾವುದೋ ನರ ಮುಟ್ಟಿದರು. ಒತ್ತಿದರು ನೋಡಿ, ತಕ್ಷಣ ಯಾರೋ ಅವರನ್ನು ದೂಕಿದಂತೆ ದೂರಕ್ಕೆ ಚಿಮ್ಮಲ್ಪಟ್ಟರು. (ಸ್ವಲ್ಪ ಹೆಚ್ಚಾಗಿ ಶಾಕ್ ಹೊಡೆದಾಗ ಕರೆಂಟು ನಮ್ಮನ್ನು ದೂಕುತ್ತೆಲ್ಲ ಹಾಗೆ) ಅವರ ಆಶ್ಚರ್ಯಕ್ಕೆ ಮಿಗಿಲಿಲ್ಲದಂತಾಯ್ತು. ಸಾರ್, ಇಷ್ಟೊಂದು ಸೂಕ್ಷ್ಮವಾಗಿರುವವರನ್ನು ಇದುವರೆಗೂ ನಾನು ನೋಡಿಯೇ ಇರಲಿಲ್ಲ. ಇದೇನಿದು ಸಾರ್ ಎಂದು ಹೇಳುತ್ತಾ ಇವರಿಗೆ ಬೇಗ ಕೋಪ ಬರುತ್ತಮ್ಮ? ಕೇಳಿದರು ನನ್ನ ಕಡೆ ತಿರುಗಿ. ನಾವಿಬ್ಬರೂ ನಕ್ಕೆವು.
ಆ ವೈದ್ಯರಿಗೆ ಇವರು ಯಾರು? ಏನು? ಎತ್ತ? ತಿಳಿದುಕೊಳ್ಳುವ ಬಗ್ಗೆ ಆಸಕ್ತಿಯಿರಲಿಲ್ಲ. ಕೇಳಲೂ ಇಲ್ಲ. ಆದರೆ ನಿಮ್ಮ ಜೀವನದಲ್ಲಿ ತುಂಬ ತುಂಬಾ ಒಳ್ಳೆಯದಾಗಲಿ ಒಳ್ಳೆಯದಾಗುತ್ತೆ ಸಾರ್ ಎಂದು ಅತೀ ಉತ್ಸಾಹದಿಂದ ಸಂತೋಷದಿಂದ ‘ವಿಶ್’ ಮಾಡಿ ಇವರನ್ನು ಬೀಳ್ಕೊಟ್ಟರು.ಕೆಲವೇ ದಿನದಲ್ಲಿ ಪತ್ರಿಕೆಯಲ್ಲಿ ಓದಿದೆ. ಅಂತರಾಷ್ಟ್ರೀಯ ‘ಆಕ್ಯೂಪ್ರೆಷರ್’ ಸಮ್ಮೇಳನಕ್ಕೆ ಆ ವೈದ್ಯರೇ ಅಧ್ಯಕ್ಷರಾಗಿದ್ದರು(ಅವರ ಹೆಸರನ್ನು ಮರೆತಿರುವೆನು).
ಇನ್ನೊಂದು ಬಗೆಯ ಆಶ್ಚರ್ಯವನ್ನು ತಿಳಿಸುವೆನು. ೨೦೦೦ನೇ ಇಸವಿ. ಇವರು ತೂಕ ಇಳಿಸಿಕೊಳ್ಳಬೇಕಿತ್ತು. ಪ್ರಕೃತಿ ಚಿಕಿತ್ಸಾಲಯ ‘ಶಾಂತಿವನ’ ಉಜಿರೆಗೆ ಹೋದೆವು. ಈ ಚಿಕಿತ್ಸಾಲಯದ ಒಳಗೂ ಹೊರಗೂ ತುಂಬ ಸೊಗಸಾಗಿದೆ. ‘ಮನಸ್ಸಿಗೆ ಶಾಂತಿ ದೊರಕುವ ಸ್ಥಳ’ವಾಗಿದೆ. ಇಲ್ಲಿನ ಮುಖ್ಯಸ್ಥರಾದ ಡಾ.ರುದ್ರಪ್ಪನವರು, ವೈದ್ಯರು, ಸಹಾಯಕರು ಸಮರ್ಪಕವಾಗಿಯೂ ಚೇತೋಹಾರಿಯಾಗಿಯೂ ಸೇವೆಯಲ್ಲಿ ನಿರತರಾಗಿರುವರೆಂದರೆ ಉತ್ಪ್ರೇಕ್ಷೆಯ ಮಾತಲ್ಲ. ಆಡಳಿತ ವರ್ಗವೂ ಹಾಗೆಯೇ.
ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಶ್ರೀ ವೀರೇಂದ್ರ ಹೆಗ್ಗಡೆಯವರು ಪತ್ನಿ ಪುತ್ರಿ ಸಮೇತರಾಗಿ ಇವರಲ್ಲಿಗೆ ಬಂದು ಕ್ಷೇಮ ಸಮಾಚಾರ ವಿಚಾರಿಸಿದರು. ಶುಭಕೋರಿದರು. ಸಂತೋಷವೆನ್ನಿ. ಅಲ್ಲಿನ ಆನೆಯೂ ಬಂದು ಸೊಂಡಿಲನ್ನು ನನ್ನ ಕೈಯಲ್ಲಿರಿಸಿ ನಾನು ಪುಳಕಿತಳಾಗಿದ್ದು ಮರೆಯಲಾಗದ್ದು. ಸಂತೋಷ.
ಇವರು ವಾರದೊಳಗೆ ಏಳು ಕೆ.ಜಿ. ತೂಕವನ್ನು ಇಳಿಸಿಕೊಂಡಿದ್ದರು. ಅಲ್ಲಿ ವಾರ್ಡು ರೌಂಡಿಗೆ ನಾಗಾಲ್ಯಾಂಡಿನ ವೈದ್ಯರೊಬ್ಬರು ಬರುತ್ತಿದ್ದರು. ಅವರ ರಾಜ್ಯದ ಬಗ್ಗೆ ವಿಚಾರ ವಿನಿಮಯ ಮಾಡಿಕೊಳ್ಳುತ್ತಿದ್ದರು ಇವರೊಟ್ಟಿಗೆ. ನಾಯಿ ಅವರ ಆಹಾರದಲ್ಲಿ ಸೇರಿದೆಯಂತೆ. ಅದರ ‘ಡೆಲಿಕೆಸಿ’ ಬಗ್ಗೆ ಮಾತಾಡಿದರು. ಅದರ ಭಾನುವಾರದ ರುಚಿ ನೆನೆದು ಬಾಯಿ ಚಪ್ಪರಿಸಿದರು.
ಈ ಸಮಯದಲ್ಲಿ ಇವರು ಸಣ್ಣಕೆ ಭುಜ ನೋವುತ್ತೆಂದರು. ವಾರ್ಡು ರೌಂಡಿಗೆ ಬರುತ್ತಿದ್ದ ‘ಹೌಸ್ ಸರ್ಜೆನ್ಸಿ’ ಮಾಡುತ್ತಿದ್ದ ಡಾ.ವಿನಯರವರಿಗೆ ತಿಳಿಸಿದರು. ಇವರು ಉತ್ಸಾಹಿ ತರುಣಿ, ಶ್ರದ್ಧೆ ಮೈವೆತ್ತಂತೆ, ಸಂಗೀತದಲ್ಲಿ ಅಮಿತ ಆಸಕ್ತಿ. ಸುಶ್ರಾವ್ಯವಾಗಿ ಹಾಡಬಲ್ಲವರು. ಸಾರ್, ತಮಗೆ ಭುಜಕ್ಕೆ ‘ಆಕ್ಯೂಪಂಕ್ಚರ್’ ಪ್ರಯೋಗ ಮಾಡಿದರೆ ಹೇಗೆ? ಇವರ ಮುಂದಿಟ್ಟರು, ಈ ಸಲಹೆಯನ್ನು. ಅದೂ ನಡೆಯಲಿ ಎಂದರು ಇವರು.
‘ಸ್ಟರ್‌ಲೈಸ್ಡ್’ ಸೂಜಿಗಳನ್ನು ತಂದುಕೊಂಡು ಬಂದರು ರೂಮಿಗೆ ಡಾ.ವಿನಯ. ಭುಜ ಪರೀಕ್ಷಿಸಿದರು. ಆ ಸೂಜಿಗಳನ್ನು ಭುಜದ ಸರಿಯಾದ ಪಾಯಿಂಟ್ ನೋಡಿಕೊಂಡೇ ಚುಚ್ಚಬೇಕಂತೆ. ಅದರ ಬಗ್ಗೆ ವ್ಯಾಸಂಗ ಮಾಡಿದವರು. ಅನುಭವವೂ ತಕ್ಕಮಟ್ಟಿಗೆ. ಎಡ ಭುಜಕ್ಕೆ ಒಂದು ಸೂಜಿ ಚುಚ್ಚಿದರು. ಸೂಜಿ ಗಟ್ಟಿಯಾಗಿ ಚುಚ್ಚಿಕೊಳ್ಳುವುದಂತೆ. ಹಿಡಿದು ಕೊಳ್ಳುವುದಂತೆ. ಆದರೆ ನಿಮಿಷ ಮಾತ್ರದಲ್ಲಿ ಆ ಸೂಜಿ ಟಂಗಂತ ಹಾರಿಬಿತ್ತು. ರೂಮಿನ ಮೂಲೆಗೆ ಬಿತ್ತು. ರೂಮು ಸಾಕಷ್ಟು ದೊಡ್ಡದಿತ್ತು. ಡಾಕ್ಟರು ಬೆಪ್ಪಾಗಿ ಹೋದರು. ಇದರ ಬಗ್ಗೆ ಎಷ್ಟೊ ಪುಸ್ತಕಗಳನ್ನು ಓದಿರುವೆನು. ಚೀನೀ ಪುಸ್ತಕವನ್ನೂ ಓದಿಕೊಂಡಿರುವೆನು. ಬಹಳ ಅಪರೂಪಕ್ಕೆ ಹೀಗಾಗಬಹುದೆಂದಿರುವರು. ಇದುವರೆಗೂ ಕಂಡಿರಲಿಲ್ಲ. ಕೇಳಿರಲಿಲ್ಲ. ಈಗ ಕಣ್ಣಲ್ಲೇ ನೋಡಿದೆ. ನನ್ನ ಕಣ್ಣನ್ನೇ ನಂಬಕ್ಕಾಗುತ್ತಿಲ್ಲ ಸಾರ್, ಎಂದರು. ಇನ್ನೊಂದು ‘ಸ್ಟರ್‌ಲೈಸ್ಡ್’ ಸೂಜಿ ತಗೊಂಡರು. ಬಲಭುಜಕ್ಕೆ ಚುಚ್ಚಿದರು. ಈ ಸೂಜಿಯೂ ಟಂಗಂತ ಇನ್ನೊಂದು ಮೂಲೆಗೆ ಹಾರಿಬಿತ್ತು. ಮತ್ತೂ ಆಶ್ಚರ್ಯಪಟ್ಟರು. ಇದು ಸೋಜಿಗವಲ್ಲದೆ ಮತ್ತೇನೆಂದರು. ಮರುದಿನ ಮತ್ತೆ ಪ್ರಯತ್ನ ನಡೆಸಿದರು. ಅಷ್ಟರಲ್ಲಿ ನೋವು ಕಡಿಮೆಯಾಗಿತ್ತು. ಇದರ ಕಾರಣಕ್ಕೆ ವಿವರಣೆ ಕೊಡಲು ಸಾಕಷ್ಟು ಅನುಭವವಾಗಬೇಕಿತ್ತೇನೋ ಅವರಿಗೆ.
ಹೇಗಿದೆ ಆಶ್ಚರ್ಯ! ಇವರ ಮನಸ್ಸಿನ ಪ್ರಕೃತಿ ದೇಹದ ಪ್ರಕೃತಿ ಬರೀ ವಿಸ್ಮಯವೇ! ನನಗೆ. ಕಣ್ಣ ಮುಂದೆ ಎರಡೂ ಚಿತ್ರಗಳು ಇವೆ. ಕಾಡುತ್ತಿವೆ.
ಸಂತೆ, ಕೋವಿ
ನಾನು ಮೂಡಿಗೆರೆ ಸಂತೆಗೆ ಯಾವಾಗಲೋ ಒಂದೆರಡು ಸಲ ಹೋಗಿರುವೆನು. ಅದೂ ಈಶಾನ್ಯೆ ಸ್ಕೂಲಿಗೆ ಹತ್ತಿರವಿದೆಯೆಂದು. ‘ಫ್ರೆಶ್’ ತರಕಾರಿ ಸಿಕ್ಕುತ್ತೆಂದು. ಒಟ್ಟಿನಲ್ಲಿ ಒಂದು ತಿರುಗಾಟ ಅಂತ ಅಷ್ಟೆ. ಇವರಿಗೆ ಸಂತೆಗೆ ಹೋಗೋದು ಏನೇನೂ ಇಷ್ಟವಿರುತ್ತಿರಲಿಲ್ಲ. ಆದರೆ ಇದ್ದಕ್ಕಿದ್ದಂತೆ ಸಂತೆಗೆ ಹೋಗಿ ಬರ್‍ತೀನಿ ಅಂತ ಒಂದು ಬ್ಯಾಗ್ ಹಿಡಿಕೊಂಡು ಹೋಗೋರು. ಅಲ್ಲಿ ಅದೆಂತೆಂಥ ಮೀನುಗಳು ಇರ್‍ತವೆ ಅಂತ! ನೋಡ್ತನೇ ಇರಬೇಕು! ಅನ್ನಿಸುತ್ತೆ ಅಂತಿದ್ರು. ಕಳೆದ ರಜೆಯಲ್ಲಿ ಮೊಮ್ಮಗಳು ಪುಟಾಣಿ ವಿಹಾ ಯಾರದೋ ಜೊತೆಯಲ್ಲಿ ಸಂತೆಗೆ ಹೋದವಳು ಅವಳೂ ಹಾಗೆ ‘ತ್ರಿಲ್’ ಆಗಿದ್ದಳಂತೆ. ಮೀನಿನಂಗಡಿಯಿಂದ ಬರಕ್ಕೇ ಒಪ್ಪಲಿಲ್ಲವಂತೆ.
ಇವರ ಸಂತೆ ಪ್ರಬಂಧ ಓದುತ್ತಿದ್ದೆ. ಮೀನಿನಂಗಡಿಯ ಆಕರ್ಷಣೆಯೇ ಹಾಗೆ. ‘ಸಂತೆಯಲ್ಲಿ ಏಡಿಗಳ ರಾಶಿಯೇ ಇತ್ತು. ಶಾರ್ಕುಗಳು, ಕಡಲ್ಗುದರೆಯ ಪುಟ್ಟ ಮರಿ, ಥ್ರಾಶರ್ ಶಾರ್ಕಿನ ಮರಿ ಇನ್ನೂ ಎಂತೆಂಥವೋ. ಕಸದಲ್ಲಿ ಬೇರೆ ಬೇರೆಯವೂ ಕಾಣ್ತವೆ. ಆದರೆ ಕಸದಲ್ಲಿ ಕೈಹಾಕಿ ಹುಡುಕುವುದು ಗೌರವತರುವ ಕೆಲಸವಲ್ಲ ಅಂತ ಸುಮ್ಮನಾದೆ. ಅವನ್ನೆಲ್ಲಾ ಚೆನ್ನಾಗಿ ನೋಡಿ ಬಂದೆ. ಯಾರೂ ಅಲ್ಲಿ ಇಲ್ಲದಿದ್ದರೆ ಅಷ್ಟನ್ನೂ ಮನೆಗೆ ಒಯ್ಯುತಿದ್ದೇನೋ ಏನೋ’ ಅಂತ ಹೇಳಿದ್ದಾರೆ.
ಇವನ್ನೆಲ್ಲ ಸಂತೆಯಲ್ಲಿ ನೋಡಿಕೊಂಡು ಬರುವಾಗ ಅಲ್ಲೊಂದು ಗುಂಪು ಜನ. ನೂಕು ನುಗ್ಗಲು. ಆ ನೂಕಾಟದಲ್ಲಿ ನುಗ್ಗೋದಾದರೂ ಹೇಗೆ. ಸಂತೆ ಎಂದರೆ ಕಿಕ್ಕಿರಿದ ಜನ ಇಕ್ಕಿರಿದ ಜಾಗ ತಾನೆ. ನೂಕಾಟ ಯಾಕಿರಬಹುದು ಎಂದು ಕುತ್ತಿಗೆ ಉದ್ದಮಾಡಿ ನಿಗ್ಗರಿಸಿ ನೋಡಿದರಂತೆ. ಸ್ಕೂಟರ್ ನಿಧಾನ ಮಾಡಲೇಬೇಕಾಯ್ತು ದಾರಿಯಿಲ್ಲದ ಪ್ರಯುಕ್ತ. ಇವರನ್ನು ಗುಂಪಿನಲ್ಲಿ ಗಮನಿಸಿದ ಒಬ್ಬಾತ ಪುಸಕ್ಕನೆ ನುಗ್ಗಿ ಬಂದು ಇವರ ಬ್ಯಾಗಿಗೆ ಒಂದು ಚೀಟಿ ತುರುಕಿ ಹೋದ.
ಮನೆಗೆ ಬಂದವರು ಬಾ ಇಲ್ಲಿ ಎಂದು ಕರೆದರು. ಓದು ಈ ಚೀಟಿ ಎಂದು ಕೊಟ್ಟರು. ಅಲ್ಲೊಬ್ಬ ವೈದ್ಯ ಮಹಾಶಯ ಮನುಷ್ಯರ ನೆರಳಿಗೆ ‘ಟ್ರೀಟ್‌ಮೆಂಟ್’ ಕೊಡುತ್ತಿದ್ದನಂತೆ. ಅವರಿಗೆ ಚಿಕ್ಕಮಗಳೂರಿನಲ್ಲಿ ಸನ್ಮಾನವಂತೆ. ಅವರನ್ನು ನೋಡಲು ನೂಕು ನುಗ್ಗಲಾಟ ಸಂತೆಯಲ್ಲಿ. ಎಷ್ಟು ನಿಜ, ಎಷ್ಟು ಸುಳ್ಳು, ವಾಸಿಯಾಗುವುದಾದರೂ ಹೇಗೆ. ಇಂಥವರಿಗೂ ರೋಗಿಗಳ ನುಗ್ಗಾಟವಿರುತ್ತೆಲ್ಲ ಅಂದರು. ಮಾರನೆಯ ದಿನದ ಪತ್ರಿಕೆ ನೋಡಿ ಇನ್ನೂ ಕುತೂಹಲ, ಆಶ್ಚರ್ಯ, ಆ ವೈದ್ಯ ಮಹಾಶಯನಿಗೆ ಕೊಟ್ಟ ಸನ್ಮಾನದ ಬಗ್ಗೆ, ಪತ್ರಿಕೆಯಲ್ಲಿ ದೊಡ್ಡದಾಗಿ ವರದಿಯಾಗಿದೆ!
ಈ ಇಂತಹ ಕುತೂಹಲನೇ ಇವರಿಗೆ ಸ್ವಲ್ಪ ಆರೋಗ್ಯ ಎಡವಟ್ಟು ಮಾಡಿತು. ಒಂದು ದಿನ ಮನೆ ಹತ್ತಿರದವರೊಬ್ಬರು, ಪರಿಚಯದವರು ಬಂದರು. ಅವರು ಒಳ್ಳೆಯವರೇ. ಯಾವುದೋ ಒಂದು ವಿದೇಶಿ ಕಂಪನಿಯವರು ತರಬೇತು ಕೊಟ್ಟಿರುವರೆಂದೂ, ತಾವು ಅನೇಕರಿಗೆ ಪ್ರಯೋಗ ಮಾಡಿರುವರೆಂದೂ ಹೇಳಿಕೊಂಡ. ಅದೇನು ಮಾರಾಯ ವಿವರವಾಗಿ ಹೇಳು ಎಂದರು. ಮಲೇಶಿಯಾ ಕಾಡುಕೋಣನ ಕೊಂಬಲ್ಲಿ ಮಸಾಜು ಮಾಡುವುದು. ಎಣ್ಣೆ ಕೆನಡಾದಲ್ಲಿ ತಯಾರಿಸಿದ್ದು. ಮೈಯೆಲ್ಲ ಮಸಾಜು ಮಾಡಿದರೆ ಆರೋಗ್ಯ ವೃದ್ಧಿಸುತ್ತೆ ಎಂದರು. ನಿಮಗೂ ತಿಕ್ಕಿಕೊಡುತ್ತೇನೆಂದರು. ಅಷ್ಟೆ ತಾನೆ ತಿಕ್ಕು. ನಾಳೆ ಬಾ ಎಂದರು. ಈ ಮಹಾಶಯ ತಿಕ್ಕಿ ಹೋಗುವಾಗಷ್ಟೇ ನನಗೆ ಗೊತ್ತಾದದ್ದು ಅವನು ಬಂದದ್ದು. ಮಧ್ಯ ರಾತ್ರಿ ಎಚ್ಚರಗೊಂಡು ರಾಜೇಶ್ವರಿ ನನಗೆ ಮೈಯೆಲ್ಲ ಉರಿ ಎಂದರು. ಅಲ್ಲಿಂದ ತಿಳಿಯಿತು ತಿಕ್ಕಿದ್ದು ‘ಅಲರ್ಜಿ’ ಆಗಿದೆಯೆಂದು. ಈ ಅಲರ್ಜಿಯಿಂದ ವೈದ್ಯರಲ್ಲಿಗೆ ಹೋಗಲೇಬೇಕಾಯಿತು. ಬೆಂಗಳೂರಿಗೆ ಹೋದೆವು.
ಏನೇನೋ ಟೆಸ್ಟ್‌ಗಳಾದವು. ಏನೇನೋ ಉಪಚಾರಗಳಾದವು. ಔಷಧಿಕೊಳ್ಳಬೇಕಾಯಿತು. ಅಳಿಯ ದೀಪಕ್ ಅಂಗಡಿಗೆ ಕರೆದುಕೊಂಡು ಹೋದರು. ಔಷಧಿ ಅಂಗಡಿ ಸಿಕ್ಕಿತು. ಅಲ್ಲಿ ‘ಪಾರ್ಕಿಂಗ್’ ಜಾಗವಿಲ್ಲದ್ದರಿಂದ ಸಣ್ಣ ರಸ್ತೆಗೆ ತಿರುಗಿಸಿ ನಿಲ್ಲಿಸಿದರು. ಇಬ್ಬರೂ ಇಳಿದು ಹೋದರು.
ಕಾರಿನಲ್ಲಿ ಕುಳಿತವಳು, ಆಚೆ ಕಡೆ ಮನೆ ಈಚೆ ಕಡೆ ಮನೆ ನೋಡುತ್ತ ಕೂತೆ. ಜನಗಳು ರಸ್ತೆಯಲ್ಲಿ ಓಡಾಡುವುದನ್ನು ಗಮನಿಸಲು ಖುಷಿಯೆನಿಸಿತು. ಅಷ್ಟರಲ್ಲಿ ಪಕ್ಕದಲ್ಲಿನ ಸಣ್ಣಮನೆಯ ಬಾಗಿಲು ಧಡಾರೆಂದು ತೆರೆದುಕೊಂಡಿತು. ಒಬ್ಬಳು ಮಧ್ಯ ವಯಸ್ಕ ಹೆಂಗಸು ಮತ್ತು ಒಂದು ಪುಟ್ಟ ಮಗು ಹೊರಗೆ ಬಂದರು. ಮಗುವಿಗೆ ಹೆಜ್ಜೆ ಹಾಕಲು ಬರುತ್ತಿರಲಿಲ್ಲ. ಅಷ್ಟು ಪುಟ್ಟದು. ತಾಯಿ ಕೈಯಲ್ಲಿ ಪುಟ್ಟ ತಟ್ಟೆ. ಒಂದೆರಡು ತುತ್ತು ಊಟ ಕೊಟ್ಟಳು. ಮಗುವನ್ನು ಎತ್ತಿಕೊಂಡು ಉಣ್ಣಿಸಲು ಕೈ ಹಾಕಿದಳು. ಅಷ್ಟರಲ್ಲಿ ಸುಮಾರು ಇಪ್ಪತ್ತನಾಲ್ಕು ಇಪ್ಪತೈದು ವಯಸ್ಸಿನ ಹುಡುಗ ಬಂದ. ತಮ್ಮನಿರಬಹುದು, ಮೈದುನ ಇರಬಹುದು. ಅವನ ಕೈಯಲ್ಲೊಂದು ಕೋವಿಯಿತ್ತು. ಆಟದ ಕೋವಿಯಾದರೂ ದೊಡ್ಡದಾಗೇಯಿತ್ತು. ತಮಿಳು ಮಾತನಾಡುತ್ತಿದ್ದರು ಆ ಹುಡುಗ ಆ ತಾಯಿ. ಕೋವಿಯನ್ನು ಹುಡುಗ ಮಗುವಿಗೆ ಹೊಟ್ಟೆಗೆ ಹಣೆಗೆ ತಿವಿದೂ ತಿವಿದೂ ಮಾತನಾಡಿಸುತ್ತಿದ್ದ. ತಿವಿದಾಗ ಢಂ ಎನ್ನುತ್ತಿದ್ದನು. ಢಂ ಎಂದಾಗ ಕಿಲಕಿಲ ನಗುತ್ತಿತ್ತು ಮಗು. ಬೇಗ ಬೇಗ ಊಟ ಸಾಗುತ್ತಿತ್ತು.
ಈ ದೃಶ್ಯ ಕಂಡಾಗ ನನಗೆ ಒಂದು ರೀತಿಯ ಘಾಸಿಯಾಯಿತು. ಆ ಮಗು ಅಷ್ಟು ಪುಟ್ಟ ಮಗುವಾದರೂ ಅದರ ಪ್ರಜ್ಞೆಯಲ್ಲಿ ನಾನಾ ತರದ ಭಾವನೆಗಳು ಮೂಡುತ್ತಿರುತ್ತದೆ. ದಾಖಲಾಗುತ್ತಿರುತ್ತದೆ. ಹೀಗೆ ಮಾಡುವುದು ಸರಿಯೇ? ಹೀಗೆ ಯೋಚನೆ ಮಾಡುತ್ತ ನಾನು ಶ್ರೀಲಂಕಾಗೆ ಹೋಗಿ ಬಂದೆ. ಆಮೇಲೆ ರಷ್ಯಾ, ಚೀನಾ, ರುಮೇನಿಯಾ ದೇಶಗಳು ನೆನಪಾದವು. ಈ ದೇಶಗಳಲ್ಲಿ ಮಕ್ಕಳನ್ನು ತೀರಾ ಎಳವೆಯಲ್ಲಿಯೇ ಜಿಮಿನಾಸ್ಟಿಕ್ಸ್ ತರಬೇತಿಗೆ ಕರೆದೊಯ್ಯುವರಂತೆ. ಅಂತೆಯೇ ಈ ದೇಶದವರೇ ಒಲಂಪಿಕ್ಸ್‌ನಲ್ಲಿ ಮೊದಲ ಚಿನ್ನ ಗೆಲ್ಲುವುದು. ರುಮೇನಿಯಾ ದೇಶದ ಜಗತ್ ವಿಖ್ಯಾತ ನಾಡಿಯಾ ಯಾರಿಗೆ ತಾನೆ ಗೊತ್ತಿಲ್ಲ. ಮೊಟ್ಟಮೊದಲ ಬಾರಿಗೆ ಇವಳು ಹತ್ತಕ್ಕೆ ಹತ್ತು ಅಂಕಗಳನ್ನು ಪಡೆದು ಗೆದ್ದ ಪ್ರದರ್ಶನ ಕಣ್ಣ ಮುಂದೆ ಸುಳಿಯಿತು.
ಅಷ್ಟರಲ್ಲಿ ತೇಜಸ್ವಿ ಮತ್ತು ದೀಪಕ್ ಹಿಂತಿರುಗಿ ಬಂದು ಕಾರು ಹತ್ತಿಕೊಂಡರು. ತೇಜಸ್ವಿ ಕೈಯಲ್ಲಿ ನೀಲಿ ಬಣ್ಣದ ಕುಪ್ಪಿಯಿತ್ತು. ನೀಲಿ ನೀರು ಇದ್ದಂತಿತ್ತು. ಅದೇನೆಂದು ನನಗೆ ತಿಳಿಯಲಿಲ್ಲ. ನೋಡು ಇದನ್ನು ಎಂದು ನನ್ನ ಕೈಗಿತ್ತರು. ನಾನು ಸ್ವಲ್ಪ ಮುಂಚೆ ನೋಡಿದ ದೃಶ್ಯವನ್ನು ಹೇಳಲಿಕ್ಕೆ ಹತ್ತಿದೆ. ಅದು ಆಟವೇ ಇರಬಹುದು. ಮಗುವಿನ ಮನಸ್ಸಿನ ಮೇಲೆ ಎಂತಹ ವಾಹಕವಾಗಿ ರೂಪಿಸಬಹುದಲ್ಲವ ಎಂದೆ. ಇವರು ಮೌನವಾದರು. ಅಷ್ಟರಲ್ಲಿ ಸರ್ಕಲ್ಲಿನ ಪೋಲೀಸ್ ಸೀಟಿ ಊದಿದ. ಸ್ಪರ್ದೆಗಿಳಿದಂತೆ ಸ್ಪೀಡಿನಲ್ಲಿ ನಾವು ಮುಂದೆ ಚಲಿಸಲೇಬೇಕಿತ್ತು.
ನಾನೊಂದು ಕನಸ ಕಂಡೆ!
“ಎಲ್ಲರಿಗೂ ಆಯಾ ವಯಸ್ಸಿನಲ್ಲಿ ಬರಬೇಕಾದ ಖಾಯಿಲೆಗಳು ಬಂದೇ ಹೋಗಬೇಕೆನ್ನುವುದು ಒಂದು ವಿಧಿ ನಿಯಮವೋ ಏನೋ”- ತೇಜಸ್ವಿಯವರ ‘ಸುವರ್ಣ ಸ್ವಪ್ನ’ ಕಥೆ ಶುರುವಾಗುವುದೇ ಈ ಮಾತಿನಿಂದ.
ನಾನು ಸಣ್ಣವಳಿದ್ದಾಗ ಲಂಗದ ಹುಡುಗಿಯಾಗಿದ್ದಾಗ ನನ್ನ ಕೋಣೆಯಲ್ಲಿ ಖುರ್ಚಿಯಲ್ಲಿ ಕೂತು ದಿನದ ಪಾಠ ಓದಿಕೊಳ್ಳುತ್ತಿದ್ದೆ. ಜೋರಾಗಿ ಓದಿಕೊಳ್ಳುವ ಅಭ್ಯಾಸ. ಸ್ವಲ್ಪ ಹೊತ್ತಿನಲ್ಲೆ ತಲೆ ಮೆಲ್ಲಕೆ ಮೇಜಿಗೆ ಆನಿಸುತ್ತಿತ್ತು. ಶುರು ಸುವರ್ಣ ಸ್ವಪ್ನ -‘ಆಕಾಶಕ್ಕೇ ಉಯ್ಯಾಲೆ ಹಾಕಿದಂತೆ. ಆ ಉಯ್ಯಾಲೆ ಮೇಲೆ ಸರಸ್ವತಿ ಕೂತಿರುವಳು. ರಾಜಾರವಿವರ್ಮರ ಸರಸ್ವತಿಯ ರೂಪ. ಈ ಸರಸ್ವತಿಯ ಕೈಯಲ್ಲಿ ಯಾರೋ ವೀಣೆ ಕೊಟ್ಟಂತೆ- ವೀಣೆ ಹಿಡಿಯುವಳು. ಈ ವೀಣೆ ನಾನಾದರೆ ಎಂದುಕೊಳ್ಳುತ್ತಿದ್ದೆ’. ಈ ಸ್ವಪ್ನ ಕಂಡನಂತರ ಅಪ್ಪಅಮ್ಮನಿಗೆ ಕೇಳಿಸಲೆಂದು ಮತ್ತೊಮ್ಮೆ ಜೋರಾಗಿ ಚರಿತ್ರೆನೋ, ಭೂಗೋಳನೋ, ಕನ್ನಡನೋ ಯಾವುದೋ ಒಂದು ಪಾಠ ಓದಿಕೊಳ್ಳುತ್ತಿದ್ದೆ. ಅಷ್ಟೊತ್ತಿಗೆ ಊಟದ ಸಮಯವಾಯಿತೆಂದು ಎದ್ದು ಹೋಗುತ್ತಿದ್ದೆ.
ಒಂದೂರಿನ ಹುಡುಗ ಕನಸಿಗೆ ಬರುವವರೆಗೂ ವೀಣೆ ಕನಸೇ ನಾನು ಕಾಣುತ್ತಿದ್ದುದು. ಚೂರು ದೊಡ್ಡವಳಾದಂತೆ ನನಗೆ ವೀಣೆ ಕಲಿಯುವ ಆಸೆ ಬಹಳವಿತ್ತು. ಆದರೆ ಕಲಿಯಲಾಗಲಿಲ್ಲ. ಈ ಕನಸೇ ಬರಲು ಕಾರಣ ಒಂದಿತ್ತು- ಆಗ ನಲವತ್ತರ ದಶಕ. ನಾನು ಲಂಗದ ಹುಡುಗಿಯಾಗಿದ್ದಾಗ. ನಮ್ಮ ಮನೆ ಬೆಂಗಳೂರಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಚಾಮರಾಜಪೇಟೆಗೆ ಹತ್ತಿರವೇ ಇತ್ತು. ನನ್ನ ತಾಯಿಯವರು ವಾರಕೊಮ್ಮೆ ಅಥವಾ ಹದಿನೈದು ದಿನಕೊಮ್ಮೆಯಾದರೂ ಈ ಪರಿಷತ್ತಿಗೆ ಹೋಗಿಬರುತ್ತಿದ್ದರು. ನನ್ನನ್ನೂ ಕರೆದುಕೊಂಡು ಹೋಗುತ್ತಿದ್ದರು ಜೊತೆಗಿರಲೆಂದು. ಆವತ್ತಿಗೆ ಆ ರಸ್ತೆಗಳಲ್ಲಿ ಜನವೇ ಓಡಾಡುತ್ತಿರಲಿಲ್ಲ.
ಪರಿಷತ್ತಿನ ಎದುರು ಕಾಂಪೌಂಡಿನಲ್ಲಿ ಮಕ್ಕಳ ಕೂಟ ಇತ್ತು. ಜಾರೋ ಬಂಡೆ, ಉಯ್ಯಾಲೆ, ಟಕ್ಕಟಿಕ್ಕಿ ಎಲ್ಲ ಇತ್ತು. ಇದನ್ನೆಲ್ಲ ನೋಡಿಕೊಂಡೇ ಹೋಗುತ್ತಿದ್ದೆ. ಒಂದು ದಿನವೂ ಜಾರಲಿಲ್ಲ ಆ ಜಾರೋ ಬಂಡೆಮೇಲೆ. ಎಷ್ಟು ಚೆಂದ! ಅಂದುಕೊಂಡೇ ಹೋಗುತ್ತಿದ್ದೆ.
ಪರಿಷತ್ತಿನ ಗೇಟು ತಲುಪುತ್ತಿದ್ದಂತೆ ಏನೋ ಒಂದು ಭೀತಿ ಮಿಶ್ರಿತ ಗೌರವ ಬರುತ್ತಿತ್ತು. ಒಳ ಹೊಕ್ಕುತ್ತಿದ್ದಂತೆ ಎಲ್ಲ ಮೌನ. ತಾಯಿಯವರು ನಡೆದ ಸಪ್ಪಳ ಸದ್ದು ಆಗದಂತೆ ಮೆಟ್ಟಿಲು ಹತ್ತುತ್ತಿದ್ದರು. ಅಂತೆಯೇ ನಾನು. ಒಳ ಹೊಕ್ಕಿದಾಗ ಮೌನ ಹೃದಯ ತಟ್ಟುತ್ತಿತ್ತು. ದೊಡ್ಡ ಬಾಗಿಲು ದೊಡ್ಡ ಹಾಲ್. ಸಾಲಾಗಿ ದೊಡ್ಡ ಮನುಷ್ಯರ ಫೋಟೋಗಳನ್ನು ತೂಗು ಹಾಕಿದ್ದರು. ಎಷ್ಟೋ ವರ್ಷಗಳನಂತರ ಅವರು ಯಾರುಯಾರೆಂದು ತಿಳಿಯಿತು.
ಆ ದೊಡ್ಡ ಹಾಲಿನ ಮಧ್ಯೆ ಒಂದು ಕಡೆ, ಗೋಡೆ ಪಕ್ಕ ಜಮಖಾನ ಹಾಸಿರುತ್ತಿದ್ದರು. ಒಬ್ಬಳು ತರುಣಿ ಸಾಮಾನ್ಯ ಎತ್ತರ, ಗುಂಗುರು ಮುಂಗುರುಳು, ಮೋಟು ಜಡೆ, ಕಪ್ಪು ಫ್ರೇಂನ ಕನ್ನಡಕ, ಬಿಳಿ ಮುಖ, ಬಿಳಿ ಸೀರೆಯುಡುಗೆಯವರು ಚಟುವಟಿಕೆಯಿಂದ ಓಡಾಡುತ್ತಿದ್ದರು. (ಅವರು ಬನಶಂಕರಿಯೆಂದೂ ಪರಿಷತ್ತಿನ ಕಾರ್ಯದರ್ಶಿಯೆಂದೂ ನಾನು ದೊಡ್ಡವಳಾದ ಮೇಲೆ ತಿಳಿಯಿತು.) ಅಲ್ಲಿ ಒಂದು ಹತ್ತಿಪ್ಪತ್ತು ಮಹಿಳೆಯರು ಸೇರುತ್ತಿದ್ದರು. ಬ್ರಾಹ್ಮಣರೆಂದು ತೋರುತ್ತದೆ. ಎಣ್ಣೆ ಹಾಕಿ ಒತ್ತಿ ಬಾಚಿ ತುರುಬು ಹಾಕಿರುತ್ತಿದ್ದರು. ಕಚ್ಚೆ ಸೀರೆಯುಟ್ಟವರೂ ಇರುತ್ತಿದ್ದರು. ಬಹಳ ಗಂಭೀರವಾಗಿ ಮಾತಾಡುತ್ತಿರುತ್ತಿದ್ದರು. ನನಗೆ ಗೌರವ ಹುಟ್ಟುತ್ತಿತ್ತು. ಭಯವೂ ಆಗುತ್ತಿತ್ತು, ಅವರನ್ನೆಲ್ಲ ನೋಡಿದಾಗ. ನಾವು ಒಳಹೊಕ್ಕಾಗ ಬನ್ನಿಯಮ್ಮ ಕುಳಿತುಕೊಳ್ಳಿ ಎಂದು ಸ್ವಾಗತಿಸುತ್ತಿದ್ದರು. ಸದ್ದಿಲ್ಲದೆ ಕುಳಿತುಕೊಳ್ಳುತ್ತಿದ್ದರು ನನ್ನ ಅಮ್ಮ. ಪಕ್ಕದಲ್ಲಿ ನಾನು. ಅಮ್ಮ ಮಾತಾಡಿದ್ದೇ ನೆನಪಿಲ್ಲ. ಬಹುಶಃ ಅಂಜಿಕೆ. ಅನೇಕರಿಗೆ ಇಂಗ್ಲಿಷು ಗೊತ್ತಿದ್ದರೂ ಮಾತಾಡಲು ಹಿಂಜರಿಕೆ ಆಗುವಂತೆ. ಅವರೂ ಯಾರೂ ಹೆಚ್ಚಿಗೆ ಮಾತಾಡಿಸುತ್ತಿರಲಿಲ್ಲ. ಇದೆಲ್ಲ ಆವತ್ತು ಆ ಪುಟ್ಟ ಲಂಗದ ಹುಡುಗಿಯಾಗಿ ಗ್ರಹಿಸಿದ್ದು. ಆ ನೆನಪಿನಿಂದಲೇ ಬರೆಯುತ್ತಿರುವೆನು.ಆ ಮಹಿಳೆಯರು ಏನೇನೋ ಸಾಹಿತ್ಯದ ಬಗ್ಗೆ ಮಾತುಕತೆ ನಡೆಸುತ್ತಿದ್ದರು. ಜೈಮಿನಿ ಭಾರತವೋ, ರಾಮಾಯಣವೋ ಒಂದೂ ಗೊತ್ತಾಗಿರಲಿಲ್ಲ. ಒಂದೊಂದು ವಾರ ವೀಣಾ ವಾದನವಿರುತ್ತಿತ್ತು. ಯಾರೋ ಒಬ್ಬರು ವೀಣೆ ತಂದಿಡುತ್ತಿದ್ದರು. ಈ ವೀಣೆಯೇ ನನಗೆ ಕನಸು ಹಚ್ಚಿದ್ದು.
ಈವತ್ತಿಗೂ ‘ಉದಯರವಿ’ ಒಳಹೊಕ್ಕಿದರೆ ಮಂದಿರದ ಗಂಟೆಯ ಅಲೆ ಅಲೆ ಅಲೆ ರಿಂಗಣಿಸುತ್ತಲೇ ಇರುವಂತೆ ಭಾಸವಾಗುತ್ತದೆ. ‘ರಾಮಾಯಣ ದರ್ಶನಂ’ನ ಭವ್ಯತೆ ಧನ್ಯತೆ ರೂಪುಗೊಂಡಿರುವುದನ್ನೂ ಇಲ್ಲಿ ಕಾಣುತ್ತೇವೆ. ನಾವು ಎಲ್ಲೇ ಹೋಗಲಿ ಯಾವುದೇ ಮನೆಗೆ ಹೋಗಿ ಬರಲಿ ಇಲ್ಲಿ ಹೊಕ್ಕಿದ ಕೂಡಲೆ ದೊಡ್ಡ ನೆಮ್ಮದಿ! ಇನ್ನೆಲ್ಲೂ ಸಿಕ್ಕದ್ದು ಇಲ್ಲಿ ಸಿಕ್ಕಿತು! ಅನ್ನುವ ಭಾವನೆ. ಈ ಮನೆ ಬಾಗಿಲು, ಕಿಟಕಿ, ಹಜಾರ, ಇಲ್ಲಿನ ಗಾಳಿ, ಫೋಟೊಗಳು ಎಲ್ಲವೂ ಹಾಗೆಯೇ. ಪ್ರತ್ಯಕ್ಷ ದರ್ಶಿಗಳು. ಈ ಮನೆಯೇ ಹಾಗೆ ‘ಚೆಂದ’.
ಈ ಮನೆಯ ಇಬ್ಬರು ಸರಸ್ವತಿ ಸುಪುತ್ರರ ನಡುವೆ ನಾನು ಬದುಕಿದ್ದು ನನ್ನ ದೊಡ್ಡ ಹೆಮ್ಮೆ. ಇದು ಯಾವುದೋ ಒಂದು ವಿಶಿಷ್ಟ ಸಂದರ್ಭದ ಮಧ್ಯೆ ನಡುವೆ ನಡೆದ ಒಂದು ಅಸಾಮಾನ್ಯ ಘಟನೆ ಎಂದುಕೊಳ್ಳುತ್ತೇನೆ. ಸಾಧಾರಣವಾದ್ದೆಂದು ಅನ್ನಿಸುವುದಿಲ್ಲ ನನಗೆ. ಒಬ್ಬರು ಆಸ್ತಿಕರು ಇನ್ನೊಬ್ಬರು ನಾಸ್ತಿಕರು ಅಂತ ಹೇಳುವರು. ಇಬ್ಬರೂ ಸತ್ಯಾರ್ಥಿಗಳು. ಇಬ್ಬರೂ ಬದುಕನ್ನು ಅರ್ಥಪೂರ್ಣವಾಗಿಸಿಕೊಂಡವರು.
ಕುವೆಂಪು ಮಲೆನಾಡಿನಿಂದ ಕಾಡಿನಿಂದ ನಗರಕ್ಕೆ ಹೋದವರು. ತೇಜಸ್ವಿ ನಾಡಿನಿಂದ ನಗರದಿಂದ ಕಾಡಿಗೆ ಬಂದವರು. ‘ಕಾಡು ತೇಜಸ್ವಿಯನ್ನು ರೂಪಿಸಿತು!’ ಮೊಟ್ಟ ಮೊದಲಬಾರಿಗೆ ನಾನು ಈ ಮಾತನ್ನು ಒತ್ತುಕೊಟ್ಟು ಹೇಳಬಯಸುವೆನು. ಹೇಗೆ ರೂಪಿಸಿತು ಎಂದು ಕೇಳುವಿರಾ? ನೀವು ನೋಡಿದಂತೆ, ನನಗೆ ಹೇಳಲಿಕ್ಕೆ ಬಾರದಂತೆ. ಇವರು ತಮ್ಮ ಬದುಕನ್ನು ತೆರೆತೆರೆದುಕೊಂಡಂತೆಲ್ಲಾ ಅದು ರೂಪಿಸುತ್ತಾ ಹೋಯಿತು. ವಿಚಿತ್ರ! ಇವರು ಜಗತ್ತನ್ನು ವೀಕ್ಷಿಸಿದ ಪರಿಯನ್ನು ನೋಡ ನೋಡುತ್ತಿದ್ದಂತೆ ರೂಪಿಸುತ್ತಾ ಹೋಯಿತು. ಇಲ್ಲೆಲ್ಲೋ ಒಂದೆಳೆ ಕಂಡಂತಾಯಿತೆ. ಹೌದಾ. ಓಕೆ! ಈ ಎಳೆಯನ್ನು ನಾವು ಹಿಡಿಯಬೇಕು. ಹಿಡಿದುಕೊಳ್ಳಬೇಕು…. ಮುಂದುವರಿಯಬೇಕು….
೧೯೬೧ರಲ್ಲಿ ಕಾಡು ಮತ್ತು ಇವರ ಬದುಕು ಬೆಸೆದುಕೊಂಡಿತು. ಅಲ್ಲಿಂದ ಶುರುವಾಯಿತು ಎಲ್ಲ. ‘ಒಂದು ವಿಧಿ ನಿಯಮದಂತೆ’ ಕಾಡು ನಿಗೂಢ. ಈ ನಿಗೂಢವನ್ನು ಅರಸಿ ಭೇದಿಸಲಿಕ್ಕೆ ಇವರು ಹೊರಟಾಗ ಧಕ್ಕಿದ್ದು ಅದರ ರಹಸ್ಯ. ಕರ್ವಾಲೋ, ಚಿದಂಬರ ರಹಸ್ಯವಿರಬಹುದು. ಇಕಾಲಿಜಿಯಂತ ಆದರ್ಶ! ಇರಬಹುದು.
ನನ್ನ ತೌರಿನ ಕಾಡು ‘ಭೂತನ ಕಾಡು’ ದಟ್ಟ ಅಡವಿ. ಸೂರ್ಯ ಭೂಮಿಗೇ ತಾಗುತ್ತಿರಲಿಲ್ಲ. ಆಗ, ನೋಡಿದವರ ನೆತ್ತಿ ಕದಡುವಂತಿದೆ ಎನ್ನುತ್ತಿದ್ದರು ತೇಜಸ್ವಿ. ಈ ಅಡವಿಯಲ್ಲಿ ಕಾಡೆಮ್ಮೆ ಸಾಲು, ಕಾಡುಕುರಿ, ಕಾಡುಹಂದಿ, ಕಬ್ಬೆಕ್ಕು, ಹಾರು ಬೆಕ್ಕು, ಮುಳ್ಳುಹಂದಿ, ಚಿಪ್ಪಿಗ, ಮೊಲ, ನವಿಲು, ನರಿ, ಬಾವಲಿ ಇವೇ ಮೊದಲಾದವುಗಳನ್ನು ನೋಡಿ ನಿಬ್ಬೆರಗಾಗಿದ್ದರು ತೇಜಸ್ವಿ. ನಮಗೂ ಬೆರಗಾಯಿತು ಅದರ ಪರಿವೆ ಬಂದು.
ಈಗ ಎಲ್ಲ ಕಡೆ ಕೃಷಿ ಮಾಡಿ ಕಾಡು ಪ್ರಾಣಿಗಳ ವಾಸಯೋಗ್ಯ ಜಾಗವಾದರೂ ಎಲ್ಲಿ? ನರಿ ಕೂಗು ಕೇಳುತ್ತೆ ಅದೂ ಕಡಿಮೆ. ನವಿಲಿನ ಕೇಕೆ ಮನೆ ಪಕ್ಕದಲೇ ಕೇಳುತ್ತೆ. ಬೆಚ್ಚಿ ಬೀಳುವಷ್ಟು ಕರ್ಕಶವಾಗಿರುತ್ತೆ.
ಅಲ್ಲಿ ಎರಡು ದೊಡ್ಡ ದೊಡ್ಡ ದೂಪದ ಮರಗಳಿದ್ದವು. ತೇಜಸ್ವಿಯಂತೂ ಆ ಕಾಡಿನಲ್ಲೇ ವಾಸ. ಕಿವಿ ಸಂಗಡ, ಕೋವಿ ಹಿಡಿದು ಇಂಚಿಂಚು ಕಾಡಿನ ಬಗ್ಗೆ ‘ಅರಿವು’ ಮಾಡಿಕೊಳ್ಳುತ್ತ ಠಳಾಯಿಸಿರುತ್ತಿದ್ದರು. ಒಂದು ದಿನ ಮರ ಕೊಯ್ಯುವ ಕಾಂಟ್ರ್ಯಾಕ್ಟಿನವರು ಒಂದು ದೂಪದ ಮರಕ್ಕೆ ಕೊಡಲಿ ಕಾಣಿಸಿದರು. ತೇಜಸ್ವಿ ಮರುಗಿದರು. ಎಂತಹ ಪ್ರಮಾದವಾಯಿತೆಂದರು.
ಆ ಮರದ ಹಣ್ಣನ್ನು ತಿನ್ನಲು ಗುಮ್ಮಾಡಲು ಹಕ್ಕಿಗಳು ಬರುತ್ತಿದ್ದವು. ಇವು ದೊಡ್ಡ ಗಾತ್ರದ ಹಕ್ಕಿಗಳು. ಹಣ್ಣುಗಳೂ ಅಷ್ಟೆ. ಗುಮ್ಮಾಡಲು ಹಕ್ಕಿಗಳ ಕರುಳುಗಳು ಆ ಹಣ್ಣನ್ನು ತಿಂದು ಜೀರ್ಣಿಸಿಕೊಳ್ಳುವಂತೆ ರಚನೆಯಾಗಿರುತ್ತೆ. ‘ಎವಲ್ಯೂಷನ್’ನಲ್ಲಿ ಹಾಗೆ ಆಗುತ್ತಾ ಬಂದಿರುತ್ತೆ. ಮರವೇ ಇಲ್ಲದ ಮೇಲೆ ಅವಕ್ಕೆ ಆಹಾರವಾದರೂ ಎಲ್ಲಿ ಸಿಗಬೇಕು. ಇದು ಹಕ್ಕಿಯ ಉಳಿವಿಕೆಗೆ ಧಕ್ಕೆಯಲ್ಲವೆ. ತೇಜಸ್ವಿ ಹೇಳುತ್ತಿದ್ದರು.
ಇದೊಂದು ಪಕ್ಷಿಯ ಬಗ್ಗೆ ಮಾತ್ರ ಈ ಮಾತು ಮಾತಲ್ಲ. ಸರ್ವ ಚರಾಚರ ಜೀವಿಗಳಿಗೂ ಅನ್ವಯಿಸುತ್ತದೆ ಎನ್ನುವ ಸತ್ಯವನ್ನು ಅರಿವನ್ನು ಕಂಡುಕೊಂಡಿದ್ದರು. ಸರ್ವರಿಗೆ ಸಮಪಾಲು ಸರ್ವರಿಗೆ ಸಮಬಾಳು ಎನ್ನುವ ಅರಿವು ಕೇವಲ ಮನುಷ್ಯನಿಗೆ ಮಾತ್ರ ಅನ್ವಯಿಸುವುದಂತದಲ್ಲ. ಈ ಅರಿವಿನ ಜ್ಞಾನ ದೊಡ್ಡದಾದಂತೆಲ್ಲ ವಿಸ್ತಾರವೂ ತೆರೆದುಕೊಳ್ಳುತ್ತ ಹೋಗುತ್ತೆ. ತುದಿ ಮುಟ್ಟಿದೆವು. ತಲುಪಿದೆವು ಎನ್ನುವಂತೆಯೇ ಇಲ್ಲ. ಎಲ್ಲೆಯೇ ಇಲ್ಲ. ಇವನ್ನು ಇವರು ನಿರಂತರವಾಗಿ ಚಿಂತಿಸುತ್ತಿದ್ದರು. ಅನುಭವದಿಂದ ಬಂದ ಅರಿವಾಗಿತ್ತು. ಈವತ್ತಿಗೆ ಇಕಾಲಜಿ ನಮ್ಮ ಕಣ್ಣ ಮುಂದಿರುವ ದೊಡ್ಡ ಆದರ್ಶವೆನ್ನುತ್ತಿದ್ದರು. ಬಹಳ ಸಂಕ್ಷಿಪ್ತವಾಗಿ ಹೇಳಿರುವೆನು. ಎಲ್ಲವೂ ಸುಸ್ಪಷ್ಟವೆನ್ನಿಸುತ್ತೆ ನನಗೆ.
೨೦೦೭ ಏಪ್ರಿಲ್‌ನಲ್ಲಿ ಇವರು ನನಗೆ ಹೇಳಿದರು, ಈ ತುದಿಯಲ್ಲಿ ನಿಂತು ಹಿಂದಕ್ಕೆ ನೋಡಿದರೆ, ಏನೆಲ್ಲ ನಡೆಯಿತು. ಎಲ್ಲವೂ ಆಶ್ಚರ್ಯವೇ!…. ಎಂದರು.
ಇಷ್ಟ ಬೇಗ ಆ ಆಶ್ಚರ್ಯಕ್ಕೆ ತೆರೆ ಬೀಳುತ್ತೆಂದು ನಾನು ತಿಳಿದಿರಲಿಲ್ಲ. ತೆರೆ ಬಿದ್ದಿದೆ. ಇನ್ನು ಕನಸಾದರೂ ಎಲ್ಲಿಯದು?…. ನನಗೆ. ಒಬ್ಬಂಟಿಯಾಗಿದ್ದೇನೆ ಎನ್ನಿಸುತ್ತಿತ್ತು. ಓದುಗ ಮಹಾಶಯರು ನನ್ನೊಟ್ಟಿಗೆ ಇರುವರಂತೆನ್ನಿಸುವಂತೆ ಮಾಡಿದ ಕೆಂಡಸಂಪಿಗೆಗೆ ನನ್ನ ನೂರು ನಮೋನಮಃ
ಲೇಖಕರಾಗಿ ಅಪರಿಚಿತರಾಗಿದ್ದ ಶ್ರೀಮತಿ ರಾಜೇಶ್ವರಿಯವರು ಪೂರ್ಣಚಂದ್ರ ತೇಜಸ್ವಿಯವರ ಪತ್ನಿ. ಕೆಂಡಸಂಪಿಗೆಯ ಮೂಲಕ ತಮ್ಮ ಊರಿನ ಬದುಕಿನ ಚಿತ್ರ ಕಟ್ಟಿಕೊಡುತ್ತಿದ್ದಾರೆ.