ಚಲುವರಾಜನ ತಮ್ಮ ಚಂದ್ರ ಹಾಸ್ಟಲಲ್ಲೆ ಇದ್ದ. ಇನ್ನು ಚಿಕ್ಕವನು. ಬಾರೋ ಎಂದು ಕರೆದೊಯ್ದು ಎಲ್ಲ ಕ್ಲೀನ್ ಮಾಡಿಸಿದೆ. ಆ ಬ್ಯಾಗಲ್ಲಿದ್ದ ಅಕ್ಕಿ ಎಂತಾವು ನೋಡು ಎಂದೆ. ಯೋಗ್ಯ ಇದ್ದರೆ ಕೊಂಡೊಯ್ಯುವ ಎನಿಸಿತ್ತು. ಕಲ್ಲು ಮಿಶ್ರತ ಹುಳು ಹಿಡಿದ ಬೂಸ್ಲು ನುಚ್ಚಕ್ಕಿಯಾಗಿದ್ದವು. ಆ ನಾಯಿಗೆ ಇದನ್ನು ಬೇಯಿಸಿ ಹಾಕುತ್ತಿದ್ದರೆ ಈ ಪ್ರಾಧ್ಯಾಪಕರು.. ‘ನೀನೂ ಅದನ್ನೆ ಊಟ ಮಾಡಪ್ಪ’ ಎಂದಿದ್ದನಲ್ಲ ಮಹಾಶಯ! ಆ ನಾಯಿ ಮನೆ ಬಿಟ್ಟು ಹೋಗಿರುವುದರಲ್ಲಿ ನಮ್ಮ ಪಾಲು ಎಷ್ಟಿದೆಯೊ ಏನೊ!
ಮೊಗಳ್ಳಿ ಗಣೇಶ್ ಬರೆಯುವ ಆತ್ಮಕತೆ ‘ನನ್ನ ಅನಂತ ಅಸ್ಪೃಶ್ಯ ಆಕಾಶ’ ಸರಣಿಯ 32ನೇಯ ಕಂತು.
ಹಾಗೆ ಬೆಟ್ಟಕ್ಕೆ ಟ್ರಿಪ್ ಹೋಗುವ ಮುನ್ನವೆ ಗುರುಗಳು ಸೂಚನೆ ನೀಡಿದ್ದರು. ಹುಡುಗಿಯರಿದ್ದಾರೆ… ಜೋಪಾನ. ಏನಾದರೂ ಆದರೆ ನನ್ನ ತಲೆಗೆ ಬರುತ್ತದೆ ಎಂದು ಹೇಳಿದ್ದರು. ನನ್ನ ಜೊತೆಗಿದ್ದ ಜೂನಿಯರ್ ಮಂಗಗಳ ಬಗ್ಗೆ ಅವರಿಗೆ ಆತಂಕವಿತ್ತು. ಎಚ್ಚರ ವಹಿಸಲೇಬೇಕಿತ್ತು. ಬಸ್ಸಿನ ಡ್ರೈವರ್‌ನ ಕಣ್ಣುಗಳು ಸದಾ ಕುಡಿದು ಅಮಲು ತುಂಬಿದಂತಿದ್ದವು. ಕೇಡಿಗ ಎನ್ನುತ್ತಿದ್ದರು ಅವನನ್ನು. ಚಂಗನೆ ನೆಗೆದು ಜಿಗಿದು ಹಾರಿದಂತೆ ಬೆಟ್ಟಗುಡ್ಡ ಬಂಡೆಗಳ ಏರುತ್ತ ನುಗ್ಗಿದರು ಗೆಳೆಯರು. ಅವರಲ್ಲಿ ಒಬ್ಬಳು ಅಬ್ನಾರ್ಮಲ್ ಇದ್ದಳು. ಹೊರ ಜಗತ್ತಿನ ಯಾವ ಅರಿವೂ ಅವಳಿಗೆ ಇರಲಿಲ್ಲ. ಸ್ಕೂಟರಲ್ಲಿ ಮಕ್ಕಳನ್ನು ಶಾಲೆಗೆ ಕರೆತಂದು ಬಿಟ್ಟಂತೆ ಅವಳ ತಂದೆ ಕರೆತಂದು ಬಿಟ್ಟು ಕರೆದುಕೊಂಡು ಹೋಗುತ್ತಿದ್ದ. ದೇಹ ಅಗತ್ಯ ಮೀರಿ ಬೆಳೆದಿತ್ತು. ವೇದಾವತಿ ಅವಳ ಹೆಸರು. ಬ್ರಾಹ್ಮಣ ಕುಟುಂಬದವಳು. ಅತಿಯಾದ ಅವಲಂಬಿ ಅವಳು.
ಬೆಟ್ಟದ ಕೆಳಗೆ ಒಬ್ಬಳೇ ನಿಂತಿದ್ದಳು ಗಾಭರಿಯಾಗಿ. ಹಿಂತಿರುಗಿ ನೋಡಿ, ಬಾ ಎಂದು ಕೈ ಬೀಸಿ ಕರೆದೆ. ಬಿಟ್ಟು ಹೋಗುವಂತಿರಲಿಲ್ಲ. ಇಳಿದು ಹೋಗಿ, ‘ಮೇಲತ್ತಿ ಬಾ’ ಎಂದು ಒತ್ತಾಯಿಸಿದೆ. ‘ಆಗಲ್ಲ’ ಎಂದಳು. ‘ಆಗುತ್ತೆ; ಕಾಲು ಕಿತ್ತು ಮೇಲಿಡು’ ಎಂದು ಕೈ ಹಿಡಿದು ಎಳೆದೆ. ಅವರಾಗಲೆ ಸಾಕಷ್ಟು ಎತ್ತರ ಏರಿದ್ದರು. ‘ಬನ್ನೀ’ ಎಂದು ಕೂಗುತ್ತಿದ್ದರು. ತೆವಳುವಂತೆ ನಡೆಯುವುದು ಉಂಟೇ… ಭಾಗಶಃ ಅಷ್ಟು ಎತ್ತರದ ಬೆಟ್ಟದ ತುದಿಯನ್ನು ಆಕೆ ಕಂಡೇ ಇರಲಿಲ್ಲವೇನೊ! ‘ಧೈರ್ಯವಾಗಿರೂ… ಯಾಕೆ ಭಯಾ… ಬೆಟ್ಟದ ಮೇಲೆ ದೇವರಿದ್ದಾನೆ. ಬಾ ಕೈ ಮುಗಿದು ಬರೋಣ’ ಎಂದು ಒತ್ತಾಸೆ ನೀಡಿದೆ. ಕೂತುಬಿಟ್ಟಳು. ಅವಳ ಸ್ಥಿತಿ ಅರ್ಥವಾಗಿತ್ತು. ಇಡೀ ದೇಹ ನಡುಗುತ್ತಿತ್ತು. ಬೆವರುತ್ತಿದ್ದಳು. ಮಾತೂ ಹೊರಡುತ್ತಿರಲಿಲ್ಲ. ಅವಳು ನೀರು ಬೇಕು ಎಂದಳು. ಕುಡಿಸಿದೆ. ಮುಂದೆ ಬಿಟ್ಟುಕೊಂಡು ನಡೆಸಿದೆ ಕೊರಕಲು ದಾರಿಯಲ್ಲಿ. ಕೊಂಚ ನಡೆದಳು. ಆಸೆ ಅವಳಿಗೆ ಮೇಲೇರಲು! ಆದರೆ ಆಗುತ್ತಿಲ್ಲ. ಬಂಡೆಯ ಮೇಲತ್ತಿ ತಿರುವು ತೆಗೆದುಕೊಳ್ಳಬೇಕಿತ್ತು. ನೋಡಿದೆಯಾ; ಆಗಲೆ ಎಷ್ಟು ಮೇಲೆ ಬಂದೆವೆಂದು… ಟ್ರೈ ಮಾಡು… ಅಲ್ಲಿ ತೊಡೆ ನಡುಕನ ಬಂಡೆ ಇದೆ. ಎತ್ತರವಾದ ಕೋಡುಗಲ್ಲು. ಅದನ್ನೇರಿ ನಿಂತು ಮೇಲಿಂದ ತೇಲಿ ಬರುವ ಗಾಳಿಯ ನೀನು ಉಸಿರಾಡಬೇಕು. ಆ ಎತ್ತರದಿಂದ ಭೂಮಿಯನ್ನು ವಿಹಂಗಮವಾಗಿ ಕಾಣಬೇಕು ಎಂದು ನಗಾಡಿದೆ. ನಗಲು ಆಗುತ್ತಿರಲಿಲ್ಲ ಅವಳಿಗೆ. ಕಣ್ಣ ತುಂಬ ದಿಗಿಲೊ ದಿಗಿಲು. ಕಣ್ಣು ತೆರೆಯಲು ಅಂಜುತ್ತಿದ್ದಳು. ‘ಕೆಳಗೆ ನೋಡಲು ಭಯವಾಗುತ್ತೆ; ನನ್ನ ಇಲ್ಲೆ ಬಿಟ್ಟು ಬಿಡಿ’ ಎಂದು ತೂರಾಡುತ್ತ ಕೂತಳು. ಸುಧಾರಿಸಿಕೊ ಎಂದು ಉತ್ತೇಜಿಸಿದೆ. ‘ನೀನು ಮುಂದೆ ನಡೆ; ನಾನು ಹಿಂದೆ ಹಿಡಿದುಕೊಳ್ಳುವೆ’ ಎಂದು ನಿಲ್ಲಿಸಿದೆ. ಪ್ರಯತ್ನಿಸಿದಳು. ಅವಳು ಬಗ್ಗಿ ಕೈ ಊರಿಕೊಂಡು ಎಡವುತ್ತ ಕೊಂಚ ಕಠಿಣವಾದ ದಾರಿಯ ಹತ್ತಿದಳು. ಅಲ್ಲಿ ಜೋರಾಗಿ ಗಾಳಿ ಬೀಸುತ್ತಿತ್ತು. ಅದರ ಅಂದಾಜೆ ಅವಳಿಗೆ ಇರಲಿಲ್ಲ. ಕೊಂಚ ಜಾರಿದಳು. ಸೊಂಟವ ಹಿಡಿದುಕೊಂಡೆ. ಏದುಸಿರು ಬಿಡುತ್ತಿದ್ದಳು. ಮತ್ತೆ ಬಗ್ಗಿ ಮುಂದೆ ತೆವಳುತ್ತ ಸಾಗುವಂತೆ ಸುಮಾರು ದಪ್ಪನೆಯ ಬಂಡೆಯ ಅಪ್ಪಿ ಹಿಡಿದಂತೆ ತೆವಳಿದಳು.
ಅಷ್ಟೇ ಅವಳಲ್ಲಿದ್ದ ಶಕ್ತಿ. ತಬಕ್ಕನೆ ಜಾರಿದಳು. ಹಿಂದೆ ಇದ್ದ ನಾನು ಅವಳ ಹಿಂಬದಿಯ ಕುಂಡಿಗಳ ಒತ್ತಿ ತಡೆದೆನಾದರೂ ನನ್ನನ್ನೂ ತಳ್ಳಿಕೊಂಡು ಉರುಳಿದಳು. ಇಬ್ಬರೂ ಬಿದ್ದಿದ್ದೆವು. ನನಗೆ ಏನೂ ಆಗಿರಲಿಲ್ಲ. ಅವಳ ಮುಂಗೈ ಕಾಲುಗಳು ತರಚಿದ್ದವು. ಅಷ್ಟಕ್ಕೇ ಜೀವ ಹೋದಂತೆ ಚೀರಿಕೊಂಡಳು. ಗೆಳೆಯರಾಗಲೇ ಬೆಟ್ಟದ ತುದಿಯಲ್ಲಿದ್ದರು. ‘ಏನದು ನಿಮ್ಮ ಚಿನ್ನಾಟ ಕಳ್ಳಾಟ’ ಎಂದು ಕೇಕೆ ಹಾಕಿ ಅವರು ನಕ್ಕಂತೆ ಕೇಳಿಸಿತು. ನನ್ನ ಮೇಲೆಯೆ ಬಿದ್ದಿದ್ದಳು. ತುಂಬಿದ ಮೈಯ್ಯವಳ ಮೃದು ದೇಹದಿಂದ ನನಗೆ ನೋವಾಗಿರಲಿಲ್ಲ. ಗಡಗಡನೆ ನಡುಗುತ್ತ ಅಳತೊಡಗಿದಳು. ಸಂತೈಸಿ ಬಂಡೆಗೆ ಒರಗಿಸಿ ಕೂರಿಸಿದೆ. ಕುಕ್ಕುರುಗಾಲಲ್ಲಿ ಕೂತಳು. ಹೆಬ್ಬೆರಳಿಗಾದ ಪೆಟ್ಟ ನೋಡಿಕೊಳ್ಳುತ್ತಾ. ಗಮನಿಸಿದೆ. ಬಟ್ಟೆಯ ಮೇಲೆ ಗಮನ ಇರಲಿಲ್ಲ. ಅವಳ ಒಳ ಉಡುಪು ಕಾಣುತ್ತಿತ್ತು. ಕುರ್ತ ಜಾರಿದ ರಭಸಕ್ಕೆ ಹರಿದು ಹೋಗಿತ್ತು. ಸರಿಯಾಗಿ ಕೂರಿಸಿ ಬಟ್ಟೆ ಎಳೆದೆ.
ಮಗುವಿನಂತಾಗಿದ್ದಳು. ಕೆಳಗೆ ಹೋಗುವುದು ಕೂಡ ಇವಳಿಗಾಗದೇನೊ ಎಂದು ನಾನು ಚಿಂತಿತನಾದೆ. ಸುಧಾರಿಸಿಕೊಂಡಳು. ಸಧ್ಯ ಕೆಳಗಿಳಿದಳು. ಬಸ್ಸಿನಲ್ಲಿ ಕೂರಿಸಿದೆ. ಆ ಡ್ರೈವರ್ ಕೆಟ್ಟ ಕೂತೂಹಲದಲ್ಲಿ ಏನಾಯ್ತು ಎಂದು ಹತ್ತಿರ ಬಂದು ವಿಚಾರಿಸಿದ. ‘ಈಕೆಗೆ ಹತ್ತಲು ಕಷ್ಟ’ ಎಂದೆ. ಹಾಗಾದ್ರೆ ಇಲ್ಲೆ ಇರ್ಲಿ ನೀವು ಮೇಲೆ ಹೋಗಿ. ನಾನು ನೋಡ್ಕೊತಿನಿ… ಪಾಪ; ನಿಮಗೆ ಯಾಕೆ ಕಷ್ಟ ಹೋಗಿ ಹೋಗಿ ಎಂದು ಒತ್ತಾಯಿಸುವ ಅವನ ದನಿಯಲ್ಲೆ ಮೃಗ ವರ್ತನೆ ಸ್ಪಷ್ಟವಾಗಿ ಕಂಡಿತು. ನೀನು ಮೊದಲು ಅತ್ತ ಹೋಗು. ನಿನ್ನ ಕೆಲಸ ನೀನು ಮಾಡೋಗು. ನನಗೆ ಗೊತ್ತಿದೆ ಎಲ್ಲಾ ಎಂದು ರೇಗಿದೆ. ‘ಒಹೋ ಎಲ್ಲಾ ನೀವೇ ಮಾಡ್ಕೋತಿರಾ.. ಮಾಡ್ಕಳಿ ಮಾಡ್ಕಳಿ ಎಂದು ಹಲ್ಕಾದನಿಯಲ್ಲಿ ಅತ್ತ ಹೋದ. ನಾನಿಲ್ಲಿ ಹೀಗೆ ಇವಳ ಒಂಟಿಯಾಗಿ ಬಿಟ್ಟು ಹೋದರೆ ಏನಾಗುತ್ತದೆ ಎಂದು ನಿಖರವಾಗಿ ಊಹಿಸಿದ್ದೆ. ಚಾಕ್ಲೇಟ್ ಕೊಟ್ಟೆ. ಬಹಳ ಖುಷಿಯಾಗಿ ತಿಂದಳು. ದೊಡ್ಡವರ ನಡವಳಿಕೆಯೆ ಅವಳಿಗೆ ಇರಲಿಲ್ಲ. ಹೊರ ಜಗತ್ತೇ ಅವಳಿಗೆ ಭೀತಿಯಾಗಿತ್ತು. ಆ ಬಸ್ಸಿನ ಕಿಟಕಿಯಲ್ಲಿ ಮಾತ್ರ ಬೆಟ್ಟವ ನೋಡಿ ಆನಂದಿಸುತ್ತಿದ್ದಳು. ಆ ಟ್ರಿಪ್ ನನಗಂತು ಕಿರಿಕಿರಿ ಮಾಡಿತ್ತು. ಹಿಂತಿರುಗಿದ್ದರು ಮಿತ್ರರು. ಜೀಶಂಪ ಮಠಕ್ಕೆ ಹೋಗಿದ್ದರು. ಅವರ ಜೀರಳ್ಳಿಗೆ ಬಂದಿದ್ದೆವು. ಅವರ ಮನೆಯಲ್ಲಿ ನಾಟಿಕೋಳಿ ಸಾರು ಮುದ್ದೆ ಅನ್ನವ ಎಲ್ಲರೂ ಚೆನ್ನಾಗಿ ಸವಿದೆವು. ಆ ವೇದಾವತಿಗೆ ಮೊಸರನ್ನ ನೀಡಿದ್ದರು. ಅದನ್ನು ಕೂಡ ಅವಳು ಚೆಲ್ಲಿಕೊಂಡು ಮಕ್ಕಳಂತೆ ತಿಂದಿದ್ದಳು.
ಆ ಮರುದಿನ ಮೈಸೂರಿಗೆ ಹಿಂತಿರುಗಿದ್ದೆವು. ಅವಳ ಜೋಪಾನ ಮಾಡುವಲ್ಲಿ ಸುಸ್ತಾಗಿದ್ದೆ. ಅವಳನ್ನು ಮನೆ ತಲುಪಿಸಿದ್ದರು. ಜೂನಿಯರ್ ಆಗಿದ್ದ ಚಲುವರಾಜನ ಜೊತೆ ಮಾತಾಡಿದ್ದೆ ಅವಳ ಬಗ್ಗೆ. ಅವನು ಹುಟ್ಟಿನಿಂದ ದಲಿತನಾದರೂ ಬೆಳವಣಿಗೆಯಿಂದ ಬ್ರಾಹ್ಮಣ ಆಗಿ ಬಿಟ್ಟಿದ್ದ. ಆಕೆಯ ತಂದೆ ತಾಯಂದಿರು ಅವನಿಗೆ ಗೊತ್ತಿದ್ದರು. ಬಾರೊ ಅವರ ಮನೆಗೆ ಹೋಗಿ ಬರುವ ಎಂದು ಕರೆದೆ. ಮನೆ ವಿಳಾಸ ಅವನಿಗೆ ಗೊತ್ತಿತ್ತು. ಬಾರಣ್ಣ ಹೋಗೋಣ ಎಂದಿದ್ದ. ನೋಡಿ ದಂಗಾದೆ. ಆ ಮನೆಯ ಒಳಗೆ ಅವಳು ಲಕಲಕಾಲಕಾ ಎಂದು ನಲಿದು ನರ್ತಿಸಿ ಗಾನ ಗೈಯ್ಯುವಂತೆ ಮಾತಾಡಿ ಒಡಾಡಿದ್ದನ್ನು ಕಂಡು; ಇದೇನು ಮಾಯೆ ಎಂದು ಅರಿಯದಾದೆ. ಒಬ್ಬ ಸಮರ್ಥ ಗೃಹಿಣಿಯಂತೆ ವರ್ತಿಸುತ್ತಿದ್ದಳು. ಪಾನಕ ತಂದು ಕೊಟ್ಟಳು. ಕೂತು ಲೋಕಾರೂಢಿಯ ಮಾತಾಡಿದಳು. ಭಾಗಶಃ ಅವಳ ತಾಯಂತೆಯೆ ಅನುಕರಿಸುತ್ತಿದ್ದಳು. ಮನೆಯೆಂಬ ಪಂಜರವ ಬಿಟ್ಟು ಹೊರಬಂದಿರಲೇ ಇಲ್ಲ ಅವಳು. ಅಹಾ! ದೇವರೇ, ಈ ಹೆಣ್ಣು ಮಕ್ಕಳಿಗೆ ಎಷ್ಟೊಂದು ಚೆಂದದ ಗೃಹಶೋಭೆ ಪಂಜರವ ಕೊಟ್ಟುಬಿಟ್ಟಿದ್ದೀಯಲ್ಲಾ.. ಎಂದು ಒಳಗೇ ಉದ್ಗರಿಸಿದೆ. ಅದಕ್ಕೇ ಅವಳು ಗೃಹಿಣಿ. ಪಂಜರದ ಗಿಣಿ.. ಮನೆಯ ಗೋಡೆಯ ಮೇಲಿನ ಹಂಸ ಪಕ್ಷಿ.. ಹೆಚ್ಚು ಹೊತ್ತು ನಿಲ್ಲಲು ಆಗಲಿಲ್ಲ. ಎದ್ದು ಬಂದಿದ್ದೆವು. ಯಾವ ಯಾವ ಪಂಜರದಲ್ಲಿ ಎಂತೆಂತಹ ಮುದ್ದಿನ ಮುತ್ತಿನ ಗಿಳಿಗಳೊ! ಆ ಹಳ್ಳಿಯ ಕಪ್ಪು ಚೆಲುವೆ ನೆನಪಾದಳು. ಅವಳ ಮೇಲೆ ಮನಸಾಯಿತೇನಣ್ಣಾ ಎಂದು ಕೇಳಿದ್ದ ಚೆಲುವ. ಉತ್ತರಿಸಲಿಲ್ಲ. ಮಾತೇ ಬರಲಿಲ್ಲ. ನಾನು ಸುಳ್ಳನೇ… ಕಲ್ಪನೆಯ ಪ್ರಣಯರಾಜನೇ… ಹುಡುಗಿಯರ ಬಗ್ಗೆ ಇಷ್ಟು ಕರಗುವ ನಾನು ಯಾಕೆ ಅವರಾಗಿದ್ದು ಅವರೇ ಹತ್ತಿರ ಬಂದು ಹಿಡಿದುಕೊಂಡರು ಮುತ್ತಿಕ್ಕಲಾರೆ! ಸತ್ಯ ಹರಿಶ್ಚಂದ್ರನ ನಾಟಕವೇ ನನ್ನದು ಎಂದು ಮನಸ್ಸು ಹಿಂದೆ ಸಾಗಿ ಆ ಸಾವಿತ್ರಿಯ ಮುಂದೆ ತಟಸ್ಥವಾಗಿ ನಿಂತುಬಿಟ್ಟಿತು. ಇಷ್ಟೊಂದು ಚಿಟ್ಟೆಗಳು; ಹೂಗಳು ಮಕರಂದ ಗಳಿಗೆಗಳು.. ಅವಳನ್ನು ಮತ್ತೆ ನೋಡಲು ಸಾಧ್ಯವಿಲ್ಲವೇನೊ ಎಂದು ಚೆಲುವೆಯರ ಮಳೆಯಲ್ಲಿ ತೋಯುತ್ತಿದ್ದಂತೆಯೆ ತಾಯಿಯ ನೆರಳೇ ನನ್ನ ಮುಂದೆ ಸಾಗಿದಂತಾಯಿತು.
ಅಪರೂಪಕ್ಕೆ ಹಳೆಯ ಗೆಳೆಯರು ಸಿಗುತ್ತಿದ್ದರು. ಬಂಜಗೆರೆ ಕ್ರಾಂತಿಯ ಕನ್ನೆಯ ಜೊತೆ ಹೋರಾಟಕ್ಕೆ ಹೊರಟು ಹೋಗಿದ್ದ. ಕರ್ನಾಟಕ ವಿಮೋಚನಾ ರಂಗವ ಕಟ್ಟಿದ್ದ. ಸಾಕಷ್ಟು ಬಿಸಿ ಮುಟ್ಟಿಸಿದ್ದ ವ್ಯವಸ್ಥೆಗೆ ಅವನನ್ನು ಬಂಧಿಸಿ ಕೈಗೆ ಕೋಳ ಬಿಗಿದಿದ್ದ ಸುದ್ದಿ ಓದಿ ನನಗೂ ಹೀಗೆ ಆಗುತ್ತಿತ್ತೇನೋ ಎಂದು ಕಂಪಿಸಿದೆ. ಒಂದು ದಿನ ಬೆಳಿಗ್ಗೆಯೆ ನನ್ನ ಕೊಠಡಿಗೆ ಬಂದಿದ್ದ. ದಣಿದು ಬಡವಾಗಿದ್ದ. ಮಧುಮೇಹ ತೀವ್ರವಾಗಿ ಅವನನ್ನು ಬಾದಿಸಿತ್ತು. ತೊಡೆಗೆ ಇನ್ಸುಲಿನ್ ತೆಗೆದುಕೊಂಡ. ನನ್ನ ಎದೆಗೆ ಸೂಜಿ ಚುಚ್ಚಿದಂತಾಗಿತ್ತು. ನೆರೂಡನ ಪ್ರಭಾವದಲ್ಲಿ ಕವಿತೆ ಬರೆಯುತ್ತಿದ್ದ ಬಂಜಗೆರೆ ಆಳವಾದ ಒಳನೋಟಗಳ ಅದ್ಭುತ ಮಾತುಗಾರನಾಗಿದ್ದ. ನನ್ನ ಕಷ್ಟ ಸುಖ ವಿಚಾರಿಸಿ ನೋಡಿಕೊಂಡು ಹೋಗಲು ಬೆಂಗಳೂರಿನಿಂದ ಬಂದಿದ್ದ. ಅವತ್ತು ಆ ಯಾವುದಾವುದೊ ಕಿರಿಕಿರಿಗಳಿಂದ ಜೆಪಿಯನ್ನು ಸರಿಯಾಗಿ ನಡೆಸಿಕೊಳ್ಳಲು ಆಗಿರಲಿಲ್ಲ. ಅವನ ಉತ್ತರವೆ ಬೇರೆ. ಬೇಸರ ಮಾಡಿಕೊಂಡಿರಲಿಲ್ಲ. ಹಳೆಯದನ್ನೆಲ್ಲ ಮರೆತುಬಿಟ್ಟಿದ್ದಾನೆ. ಅಹಂಕಾರ ಬಂದುಬಿಟ್ಟಿದೆ ಎಂದು ಕೆಲವರು ಬೆನ್ನ ಹಿಂದೆ ಜರಿಯುತ್ತಿದ್ದರು. ತರಗತಿಗೆ ಅಪರೂಪಕ್ಕೆ ಹಾಜರಾಗುತ್ತಿದ್ದೆ. ಆ ಗಾದೆ ಪ್ರಾಧ್ಯಾಪಕರ ಕಾಟ ನನಗೆ ತಪ್ಪಿರಲಿಲ್ಲ. ಅವರನ್ನು ಗೇಲಿ ಮಾಡುವುದನ್ನು ನಾನು ಬಿಟ್ಟಿರಲಿಲ್ಲ. ದಿನ ಕಳೆದಂತೆ ಕಾಸ್ಕರ್ ಸಲಿಗೆ ಪಡೆದು ಹೇಯ್ ಕೊರಮ ಫಿಶ್ ಎನ್ನುತ್ತಿದ್ದಳು. ನಾನು ಕೂಡ…. ಯು ಸಸಿಲು ಫಿಶ್…. ‘ಯೂ ಡಾನ್ಸೇಡ್ ಇನ್ ಮೈ ಮೈಂಡ್’ ಎಂದು ತಮಾಷೆ ಮಾಡಿಕೊಳ್ಳುತ್ತಿದ್ದೆವು.
ಗಾದೆ ಪ್ರಾಧ್ಯಾಪಕರು ಪ್ರತಿ ವರ್ಷ ತಮ್ಮ ಊರಿನ ಜಾತ್ರೆಗೆ ಹೋಗಿ ತಲೆಮುಡಿಕೊಟ್ಟು ಗಡದ್ದಾಗಿ ಸಂಸಾರ ಸಮೇತ ಹಬ್ಬ ಮಾಡಿ ಬರುವುದು ಕಡ್ಡಾಯವಾಗಿತ್ತು. ಆಗ ಮನೆಯಲ್ಲಿ ತಮ್ಮ ಶಿಷ್ಯರಲ್ಲಿ ಯಾರಾದರೂ ಒಬ್ಬರನ್ನು ಇರಿಸಲೇಬೇಕಿತ್ತು. ಪ್ರಾಧ್ಯಾಪಕರ ಸಾಲು ನಿವಾಸಗಳು. ಆರಾಮಾಗಿ ಇರಬಹುದಲ್ಲ ಎನಿಸಿತು. ಕರೆದು ಹೇಳಿದರು. ‘ನೋಡಯ್ಯ ರಾಜನಂತಿರಬಹುದು. ಸದ್ಯಕ್ಕೆ ಈ ಮನೆ ನಿನ್ನದು ಹದಿನೈದು ದಿನ ರಜೆ ಹಾಕಿ ಊರಿಗೆ ಜಾತ್ರೆಗೆ ಮನೆಯವರೆಲ್ಲ ಹೋಗ್ತಾ ಇದೀವಿ. ಹಾಯಾಗಿ ಇರಯ್ಯ’ ಎಂದರು. ಸಖತ್ ಖುಷಿಯಾಗಿತ್ತು. ಅವರು ಹೊರಡುವ ದಿನ ಬಂತು. ಯಾವುದೊ ಲಡಾಸು ಅಂಬಾಸಿಡರ್ ಕಾರನ್ನು ಬಾಡಿಗೆಗೆ ತಂದಿದ್ದರು. ಆ ಪ್ರಾಧ್ಯಾಪಕರಿಗೊ, ಸೈಕಲನ್ನು ತುಳಿಯಲೂ ಬರುತ್ತಿರಲಿಲ್ಲ. ಒಂಥರಾ ಗಾಂಧಿ ಕಾಲಿನ ಬರಿಗಾಲ ಯಾತ್ರಿಕರು. ಬಾಯಿ ತುಂಬಾ ಗಾದೆಗಳೆ… ಮಾತು ಮಾತಿಗೂ ಗಾದೆಯಲ್ಲಿ ಉತ್ತರಿಸುತ್ತಿದ್ದರು. ಗಾಡಿ ಹತ್ತಿ ಕೂತರು. ಬಾಗಿಲಿನಲ್ಲಿಟ್ಟಿದ್ದ ದೊಡ್ಡ ಲಗೇಜನೆಲ್ಲಾ ಡಿಕ್ಕಿಗೆ ಹಾಕಿದೆ. ಅವರ ಹೆಂಡತಿ ಖಡಕ್ಕಾದ ತಾಯಿ. ಅವರ ಮಗಳು ಇಂದ್ರಾ ನಗರಿಯಿಂದ ಬಂದಿದ್ದ ದೇವಕನ್ನಿಕೆಯಂತಿದ್ದಳು.. ಅವಳು ತಿರುಗಿಯೂ ನನ್ನನ್ನು ನೋಡಲಿಲ್ಲ. ಆಯ್ತು ನಾನೇ ನಿನ್ನ ನೋಡುವೆ… ನನ್ನ ದೃಷ್ಟಿಯ ನೀನು ತಡೆಯಬಲ್ಲೆಯಾ ಎಂದು ಅವಳು ಅತ್ತ ಇತ್ತ ತಿರುಗಿ ಬಗ್ಗಿ ಬಾಗಿ ನಡಿದಾಡುವಾಗಲೆಲ್ಲಾ ಅವಳ ದೇವ ದೇಹವನ್ನು ಕಣ್ತುಂಬಿಕೊಂಡಿದ್ದೆ. ಗುರುಗಳಿಗೆ ಮನದಲ್ಲೇ ವಂದಿಸಿದೆ. ಕೂತು ಬಗ್ಗಿ ಬಿಗಿಯಾದ ಚಪ್ಪಲಿಗಳ ಹಾಕಿಕೊಳ್ಳುತ್ತಿದ್ದಳು. ಅವಳ ಎದೆಗೂಡು ದರ್ಶನವಾಗಿತ್ತು. ಸಾಕು ಬಿಡು ಇಷ್ಟೇ.. ಕಲ್ಪನೆಯಲ್ಲಿ ಬೇಕಾದಷ್ಟು ಭಾವಿಸಬಹುದು ಎಂದು ಅವರ ಕಳಿಸಿಕೊಡಲು ಮುಂದಾದೆ.
ಮರೆತಿದ್ದ ಅವರು ‘ಅರೇ; ಮುಖ್ಯವಾದ್ದನ್ನೆ ನಿನಗೆ ಹೇಳಿರಲಿಲ್ಲ… ಇವಳು ನಮ್ಮ ರಾಣಿ. ಎಲ್ಲೂ ಹೋಗಲ್ಲ. ಗಲಾಟೆ ಮಾಡಲ್ಲ. ಗಲೀಜು ಇಲ್ಲವೇ ಇಲ್ಲ. ಟೈಮ್ ಸರಿಯಾಗಿ ಊಟ ಹಾಕಿದ್ರೆ ಸಾಕು…. ಇಲ್ಲಿ ನೋಡು ಈ ಸೀಮೆ ಎಣ್ಣೆ ಸ್ಟೌ ಇಲ್ಲೇ ಇದೆ. ಅಕ್ಕಿ ನುಚ್ಚು ಇದೆ ಭಾಗದಲ್ಲಿವೆ. ಇದೇ ಅನ್ನದ ಪಾತ್ರೆ. ಬೇಯಿಸಿ ಮೊಸರು ಕಲಸಿ ಹಾಕು…. ತಿನ್ನುತ್ತೆ. ಇಬ್ಬರು ಆರಾಮಗಿ ಇರಬಹುದು…ʼ ಎಂದ ಕೂಡಲೆ ಆಗಲ್ಲ ಸಾರ್ ಎಂದು ಬಂದಿದ್ದ ಮಾತು ತಡೆದುಕೊಂಡಿದ್ದೆ. ನಾಯಿ ಸಹವಾಸ ಎಂದರೆ ನನಗಂತೂ ವಿಪರೀತ ಕಿರಿಕಿರಿ. ಅದಕ್ಕೆ ಅನ್ನ ಮಾಡಿ ಹಾಕಬೇಕಂತೆ.. ಅದಕ್ಕೆ ಸ್ನಾನ ಮಾಡಿಸಬೇಕಂತೆ… ಛೇ ಇದು ಶೋಷಣೆ.. ನಾನು ಯಾರು? ಎಂತಹವನು? ಸಾಕೇತ್ ರಾಜನ ಜೊತೆ ನಕ್ಸಲ್ ಹೋರಾಟ ಮಾಡಿ ಪ್ರಾಣಾರ್ಪಣೆಗೆ ಸಿದ್ಧನಾಗಿದ್ದವನು… ಈಗ ಈ ಕಜ್ಜಿ ನಾಯಿಯನ್ನು ಕಾಪಾಡುವ ಸ್ಥಿತಿಗೆ ಬಂದಿದೆ… ಮೊದಲೇ ಗೊತ್ತಾಗಲಿಲ್ಲವಲ್ಲ ಎಂದುಕೊಂಡು. ಎಂತೆಂತೋ ಹುಲಿ ಸಿಂಹಗಳನ್ನೇ ಎದುರಿಸಿರುವೆ ಈ ನಾಯಿ ನನಗೆ ಒಂದು ಲೆಕ್ಕವೇ ಎಂದು ಸಮ್ಮತಿಸಿದೆ. ‘ಹೇ ರಾಣಿ; ಇವನು ನನ್ನ ಸ್ಟೂಡೆಂಟು… ನಿನ್ನಂತೆಯೆ ನಿಯತ್ತಿನವನು. ಥ್ಯಾಂಕ್ಸ್ ಕೊಡು ಇವನಿಗೆʼ ಎಂದು ಬಲವಂತವಾಗಿ ಅದರ ಬಲಗಾಲ ಎತ್ತಿ ನನ್ನ ಕೈಗಿತ್ತು ‘ಟಾಟಾ ಬರ್ತೀನಿ ರಾಣೀ ರಾಣೀ ಓ ನನ್ನ ರಾಣಿ ನೊಂದುಕೋಬೇಡಾ’ ಎಂದು ಕಾರು ಹತ್ತಿದರು. ಒಂದಷ್ಟು ದೂರ ಕಾರನ್ನು ಹಿಂಬಾಲಿಸಿ ಓಡಿತ್ತು. ಹಿಂತಿರುಗಿ ಬಂದಿತ್ತು.
ಮನೆಯೊಳಕ್ಕೆ ಹೋಗಿ ವಿವರವಾಗಿ ನೋಡಿದೆ. ಪೆಚ್ಚಾದೆ. ಇಡೀ ದೊಡ್ಡ ಮನೆಯ ಎಲ್ಲಾ ರೂಮುಗಳಿಗೆ ಬೀಗ ಹಾಕಿದ್ದರು. ಸಕ್ಕತ್ ಅಪ್ಸೆಟ್ ಆದೆ. ಒಳಗಿನ ಟಾಯ್ಲೆಟ್ ರೂಮು ಸ್ನಾನದ ಮನೆಗೂ ಬೀಗ ಹಾಕಿದ್ದರು. ಕೇವಲ ಮುಂಬಾಗಿಲ ಹಾಲ್ ಮಾತ್ರ ಖಾಲಿ ಇತ್ತು. ಓಹೋ! ಕೈತೋಟಕ್ಕೆ ನೀರು ಕುಡಿಸಬೇಕಂತೆ… ಹಿಂಭಾಗಕ್ಕೆ ಹೋದೆ. ಒಂದು ಮಾವಿನ ಮರ ಇತ್ತು. ದೊಡ್ಡದಲ್ಲ. ಸಾಕಷ್ಟು ಕಾಯಿ ಬಿಟ್ಟಿತ್ತು. ಹಣ್ಣಿಗೆ ಬಂದಿದ್ದವ. ಆಚೆ ಮೂಲೆಯಲ್ಲಿ ಸಕ್ಕತ್ ಆಲದ ಮರ. ತುಂಬ ಹಣ್ಣು ಬಿಟ್ಟಿದ್ದವು. ಅವುಗಳ ಬಗ್ಗೆ ನನಗೇನು ಆಸಕ್ತಿ ಇರಲಿಲ್ಲ. ಸಂಜೆ ಬರೋಣ ಎಂದು ಹಿಂತಿರುಗಿದೆ.
ಆಗ ತಾನೆ ಸ್ವಾಮಿ ಆನಂದ ಪರಿಚಯ ಆಗಿದ್ದ. ಸಮಾಜಶಾಸ್ತ್ರ ಎಂ. ಎ. ಮಾಡುತ್ತಿದ್ದ. ಅಜಾನುಬಾಹು. ಅವನ ಇಡೀ ವ್ಯಕ್ತಿತ್ವವೇ ಅಜ್ಜಿ ಕಾಲದ ಒಂದು ಗುಡಾಣದಂತಿತ್ತು. ಅದರೊಳಗೆ ಎಲ್ಲ ತರದ್ದು ಸಿಗುತ್ತಿತ್ತು. ಮೈತುಂಬ ನಗುತ್ತಿದ್ದ. ಜೀವ ತೆಗೆದಿಡು ಎಂದರೆ ಒಪ್ಪಿಕೊಳ್ಳುತ್ತಿದ್ದ. ಎಂತಹ ನರಸತ್ತವರಲ್ಲೂ ಏನೋ ಒಂದು ಜೀವನೋತ್ಸಾಹ ಬಿತ್ತುತ್ತಿದ್ದ. ಅದ್ಭುತ ಪಾಕ ಪ್ರವೀಣ. ಕ್ಯಾಂಟೀನಿನಲ್ಲಿ ಸಿಕ್ಕಿದ್ದ. ಆಗ ಅವನು ಲಂಕೇಶ್ ಪತ್ರಿಕೆಯ ವರದಿಗಾರನಾಗಿದ್ದ. ಅನೇಕ ರಾಜಕಾರಣಿಗಳು ಅಧಿಕಾರಿಗಳು ಉಚ್ಚೆಉಯ್ದುಕೊಂಡು ನಡುಗುವಂತಹ ತನಿಖಾವರದಿಗಳ ಪ್ರಕಟಿಸಿ ಪ್ರಖ್ಯಾತನೊ, ಕುಖ್ಯಾತನೊ ಆಗಿದ್ದ. ಆದರೆ ನನಗಂತು ಪ್ರಾಣ ಮಿತ್ರನಾಗಿದ್ದ. ಎಲ್ಲ ಹಳೆಯ ಗೆಳೆಯರು ಹೊರಟ ನಂತರ ಆನಂದ ಸಿಕ್ಕಿದ್ದ. ಹೆಸರಿಗೆ ತಕ್ಕಂತಿದ್ದ. ಸದಾ ಬುದ್ಧಾನಂದದಲ್ಲಿ ಇದ್ದ. ಎಷ್ಟೇ ಕಷ್ಟ ಬಂದರೂ ಬಾಹುಬಲಿಯಂತೆ ವೈರಾಗ್ಯ ಭಾವದಲ್ಲಿ ತನ್ನೊಳಗೆ ತಾನಿರುತ್ತಿದ್ದ.
‘ನೋಡ್ಲಾ ಆನಂದ ಆ ಗಾದೆ ಮಾನವ ನನಗೆ ಟೋಪಿ ಹಾಕಿ ನಾಯಿ ಕಾಯ್ಕಂದು ಮನೆ ನೋಡ್ಕೊಂಡು ಹಿಂದೆ ಮುಂದೆ ಕಸ ಗುಡಿಸ್ಕಂದು ಸುಖವಾಗಿರು ಅಂತ ಹೇಳಿ ವಂಟೋದ್ನಲ್ಲೊ; ಈಗ ನಾನೇನೊ ಮಾಡ್ಲಿ’ ಎಂದು ನೋವು ತೋಡಿಕೊಂಡೆ.‘ಅದಾ ಅಮೆಕೆ ಬಗೆಹರಿಸ್ತೀನಿ; ಕ್ಲಾಸ್ಗೆ ವೋಗಿರು ಸಾಯಂಕಾಲ ಬತೀನಿ… ಏನಾರಾ ಮಾಡ್ಮಾ’ ಎಂದು ಅವನೂ ತನ್ನ ವಿಭಾಗದತ್ತ ನಡೆದ. ಆನಂದ ಬಹಳ ಕಾಮಿಕ್ ಆಗಿ ದಂಡಿಸುತ್ತಿದ್ದ. ನನ್ನದೂ ಅದೇ ಬುದ್ಧಿ. ವಿಚಿತ್ರ ಶಿಕ್ಷೆಯ ಕ್ರಮ. ಬೇಗ ಹೊತ್ತು ಮುಳುಗಿತ್ತು. ಆನಂದ ಬಂದ. ಬಾರೋ ಹೋಗೋಣ ಎಂದ. ಹೋದೆವು. ಹತ್ತಿರದಲ್ಲೆ ಇದ್ದವು ಪ್ರಾಧ್ಯಾಪಕರ ಕ್ವಾಟ್ರಸ್‌ಗಳು. ಗೇಟ್ ತೆಗೆದ ಕೂಡಲೆ ಆ ನಾಯಿ ರಾಜು ನಿರುತ್ಸಾಹ ಹಾಗೂ ಅನುಮಾನದಿಂದ ಬರಮಾಡಿಕೊಂಡಿತು. ಓಹೋ; ಇದೇನೊ ನಾಯಿ ರಾಜ; ಇದಕ್ಕೇ ತಾನೆ ನೀನು ಅನ್ನ ಮಾಡಿ ಮೊಸರಲ್ಲಿ ಕಲಸಿ ಮಗುಗೆ ತಿನ್ನಿಸೋ ತರ ಉಣ್ಣಿಸಬೇಕಿರೋದು ಎಂದು. ಹೂಂ ಕಣೋ; ಯಂತ ಗತಿ ಬಂತು ನೋಡು ಎನ್ನುತ್ತಾ; ಅತ್ತ ಹೋಗಿ ಬಿದ್ಕೊ; ನಿನಗೆ ಅನ್ನ ಹಾಕೋಕೆ ಇನ್ನೂ ಟೈಮ್ ಇದೆ ಎಂದು ಗದರಿದೆ. ಮೂಲೆಗೆ ಹೋಗಿ ಕೂತು ನಮ್ಮ ಇಂಚಿಂಚೂ ನಡತೆ ಸ್ವಭಾವ ದನಿಯನ್ನು ಗಮನಿಸುತ್ತಿತ್ತು. ಹೇ ನಾವು ಇವತ್ತು ಇಲ್ಲೆ ಪಾರ್ಟಿ ಮಾಡೋಣ ಕಣೋ ಎಂದ ಆನಂದ. ಅದೇ ತಾನೇ ನಮಗೆ ಬೇಕಾದದ್ದು ಅಲ್ಲೇ ಒಂದು ಬಾರ್ ಅಂಡ್ ರೆಸ್ಟೋರೆಂಟ್ ಇಲವಾಲ ರಸ್ತೆಯಲ್ಲಿತ್ತು. ತಕ್ಷಣವೇ ಬೇಕಾದದ್ದೆಲ್ಲವನ್ನು ಆನಂದ ತಂದಿದ್ದ. ಅವನ ಸತ್ಕಾರಕ್ಕೆ ಚಿತ್ತಾಗಿ ಎಷ್ಟೋ ಜನ ಉರುಳಿದ್ದನ್ನು ನಾನು ಕಂಡಿದ್ದೆ. ಉಪಚರಿಸಿ ಅಕ್ಕರೆಯಲ್ಲಿ ಮುಳುಗಿಸಿಬಿಡುತ್ತಿದ್ದ. ಶುರುಮಾಡಿದೆವು.
ಅವರ ಮಗಳು ಇಂದ್ರಾ ನಗರಿಯಿಂದ ಬಂದಿದ್ದ ದೇವಕನ್ನಿಕೆಯಂತಿದ್ದಳು.. ಅವಳು ತಿರುಗಿಯೂ ನನ್ನನ್ನು ನೋಡಲಿಲ್ಲ. ಆಯ್ತು ನಾನೇ ನಿನ್ನ ನೋಡುವೆ… ನನ್ನ ದೃಷ್ಟಿಯ ನೀನು ತಡೆಯಬಲ್ಲೆಯಾ ಎಂದು ಅವಳು ಅತ್ತ ಇತ್ತ ತಿರುಗಿ ಬಗ್ಗಿ ಬಾಗಿ ನಡಿದಾಡುವಾಗಲೆಲ್ಲಾ ಅವಳ ದೇವ ದೇಹವನ್ನು ಕಣ್ತುಂಬಿಕೊಂಡಿದ್ದೆ.
ಬಿಯರ್ ಬಾಟಲಿಗಳ ಖಾಲಿ ಮಾಡಿದೆವು. ತರಾವರಿ ನಾನ್‌ವೆಜ್. ಮೂಳೆಗಳನೆಲ್ಲ ಹಾಕಿ ತಿನ್ನಿಸಿದೆವು. ಬಹಳ ಸಂತೋಷ ಪಟ್ಟಿತು. ಪಾರ್ಟಿಯ ಅಮಲಲ್ಲಿ ಎಲ್ಲೆಡೆ ಕೊಠಡಿಗಳಿಗೆ ಬೀಗ ಹಾಕಿರುವುದನ್ನು ಆತ ಗಮನಿಸಿಯೇ ಇರಲಿಲ್ಲ. ಸಿಟ್ಟಾಯಿತು. ಲಫಂಗ ಪ್ರಾಧ್ಯಾಪಕ ಹಾಸ್ಕೊಳೋದಿಕ್ಕೆ ಹೊದ್ದುಕೊಳ್ಳೊದಕೆ ಒಂದು ಚಾಪೆ, ಬೆಡ್ಸೀಟೇ ಇಟ್ಟಿಲ್ಲವಲ್ಲೋ… ನಿನ್ನನ್ನೂ ಆ ನಾಯಿ ಜೊತೆ ಮಲಿಕತನೆ ಅನ್ಕಂಡಿದ್ನೆ ಆ ಲೋಫರ್’ ಎಂದು ಸಿಟ್ಟಾದ. ಪ್ರಯಾನ ಆಕಿದರೆ ಲಡ್ಕಾ ಲಡ್ಕಾ ಬಡ್ಕಾ ಗಿಡ್ಕಾ ಅನ್ನೊ ರಿದಮಿಕ್ ಸೌಂಡಲ್ಲಿ ಆ ಗತ ಕಾಲದ ಪ್ಯಾನ್ ಮೂರನೆ ಸುತ್ತಿಗೆ ಇಟ್ಟರೂ ತನ್ನಿಂದ ಆಗೋದು ಇಷ್ಟೇ ಎಂದು ಮುನಿಸಿಕೊಂಡಿತು. ಸೊಳ್ಳೆ ಕಾಟ. ನಾಯಿ ಬಾಗಿಲಲ್ಲೆ ಇತ್ತು. ಮೂಲೆಯಲ್ಲಿ ಒಂದು ಹರಕಲು ಕಂಬಳಿ ಇತ್ತು. ಅದರ ಮೇಲೆ ಮಲಗಲು ಕಾತರಿಸುತಿತ್ತು. ಬಿರಿಯಾನಿಯನ್ನು ನಮಗಿಂತ ಚೆನ್ನಾಗಿ ತಿಂದಿತ್ತು.
‘ಆನಂದಾ; ಯೀ ನಾಯಿಗೆ ಯಾಕೊ ಮೋಸ ಮಾಡ್ಬೇಕೂ… ಇದ್ಕೂ ಸ್ವಲ್ಪ ಕಾಕ್‌ಟೇಲ್ ಕುಡಿಸೋಣ ಕಣೋ… ಬೆಳಗಾನ ಕಳ್ಳರ ಮೇಲೆ ಅವಾಜಾಕ್ತ ಇರ್ಲೀ… ಪಾಪ ಕಜ್ಜಿ ನಾಯಿ! ಇದಕ್ಕೂ ಕೊಂಚ ಕಿಕ್ಕಾಗ್ಲಿ’
‘ಲೋ ಸಕತ್ ಐಡಿಯಾ ಕೊಟ್ಟೆಕಲಾ.. ಇದ್ಕೆ ಕುಡಿಸ್ಲೆಬೇಕು ಕಲಾ… ತಕಬಾಲ. ತೊಡೆ ಮಧ್ಯೆ ಹಿಡ್ಕಂದು ಬಾಯ ಅಗುಲಿಸ್ತೀನಿ… ನೀನು ಕುಡಿಸ್ಲಾ’
‘ಒಕೇ… ಕಚ್ಚೀತು ಜೋಪಾನಾ…’
‘ತಕಬಾಲಲೊ… ಗಾಬರಿ ಮಾಡಿದ್ರೆ ಅದುರ ಬಾಯ್ಕೆ ಇಸುದು ಅತ್ತಗೊಂದು ಇತ್ತಗೊಂದು ಬಿಸಾಕ್ತಿನಿ ಕಲಾ’
ಬಾಯಿಗೆ ಒಂದು ಗ್ಲಾಸ್ ವಿಸ್ಕಿ ಬಿಯರ್ ಬಿಟ್ಟೆ. ಕೊಸರಾಡಿತು. ಬಿಗಿ ಹಿಡಿದಿದ್ದ ಅದು ಕುಡಿಯಲೆ ಬೇಕಿತ್ತು. ಅದರ ಹೊಟ್ಟೆಗೆ ನಾಲ್ಕು ನೈಂಟಿ ಪೆಗ್ ಹಾಕಿದ್ದೆವು. ಕಕ್ಕಲಿಲ್ಲ. ತಕೊ ಎಂದು ಒಳ್ಳೊಳ್ಳೆ ಮಾಂಸದ ಪೀಸುಗಳ ಆನಂದ ಅದರ ಬಾಯಿಗೆ ಹಾಕಿ ತಿನಿಸಿದ. ಅದು ಆದಿ ಮಾನವನ ಕಾಲದಿಂದಲೇ ನಿಮ್ಮ ಪೂರ್ವಿಕರಿಂದ ಕಲಿತಿದ್ದೇ… ‘ಇವ್ನು ಇದ್ದಾನಲ್ಲ ನನ್ನ ಓನರ್ರು ಯಾವಾಗ್ಲು ನಶ್ಯ ತಕಳನು… ಒಂದಿನುವಾದ್ರು ಇಂತಾ ಉಪಚಾರ ಮಾಡಿದ್ನೇ… ಸದ್ಯ ನೀವು ಬಂದ್ರಿ; ಅಷ್ಟೇ ಸಾಕು’ ಎಂದು ಬಾಲವನ್ನು ರೊಯ ರೊಯ್ಯನೆ ನುಲಿದು ಬಾಯಗಲಿಸಿ ಏನೇನೊ ಸದ್ದುಗಳ ಹೊರಡಿಸಿ ಕುಸಾಲಾಯಿತು. ಬಂದು ಬಂದು ನನ್ನ ಮುಖವನ್ನೇ ನೆಕ್ಕಲು ಮುಂದಾಗುತ್ತಿತ್ತು. ಕಿರಿಕಿರಿಯಾಯಿತು. ಸಿಗರೇಟು ಸೇದುತ್ತಿದ್ದೆ. ಧಂ ಎಳೆದು ಹೊಗೆಯ ಅದರ ಮೂಗಿಗೆ ಉಫ್ ಎಂದು ತೂರಿದೆ. ಮೊದಲೇ ತೂರಾಡುತ್ತಿತ್ತು. ಆ ಹೊಗೆ ಅದರ ಹೊಳ್ಳೆಗಳಿಗೆ ನುಗ್ಗಿ ಗಂಟಲಿಗೆ ಏನೊ ಆಗಿ ಕಕ್ಕಿಕೊಂಡಿತು. ಅಂತರ ಕಾಯ್ದುಕೊಂಡಿತು. ತಡವಾಗಿತ್ತು. ಅಲ್ಲೆ ಮನೆ ಮುಂದೆ ಮೂತ್ರ ವಿಸರ್ಜಿಸಿದೆವು.
ಅಷ್ಟರಲ್ಲಿ ನಾಯಿ ಒಳಗೆ ಹೋಗಿ ಆ ಕಂಬಳಿಯಲ್ಲಿ ಹಾಯಾಗಿ ಮುದುರಿ ಮಲಗಿತ್ತು. ‘ಹೇಯ್ ಈ ನಾಯಿನೂ ನಮ್ಮ ಜೊತೆ ಮಲಗಲು ಬಂದಿದೆಯಲ್ಲೊ… ಕಳ್ಸೋ ಆಚೆಗೆ’ ಎಂದೆ. ‘ಹೋಗ್ಲಿ ಬಿಡ್ಲಾ… ಫುಲ್ ಎಣ್ಣೆ ವಡ್ದು ಮಬ್ಬಾಗದೆ. ಅದುರ್ಪಾಡ್ಗೆ ಅತ್ತಾಗಿ ಬಿದ್ಕತದೆ’ ಎಂದ ಆನಂದ. ‘ಥೂ; ಚಿಗಟ ಅವೆ ಕಲಾ; ಅದು ಬ್ಯಾರೆ ಕಜ್ಜಿ ನಾಯೀ… ನಾಯಿ ಕಜ್ಜಿ ಬಾರೀ ಡೇಂಜರ್’ ಎಂದು ಆಕ್ಷೇಪಿಸಿದೆ. ಆಚೆಗೆ ಕಳಿಸಲು ಮುಂದಾದ. ‘ಹೇಯ್; ಇದು ನನ್ನ ಪರ್ಮನೆಂಟ್ ಜಾಗ. ನೀನು ಯಾರೊ ಟೆಂಪರರಿ. ಬೊಗುಳಬಾರ್ದು ಅನ್ಕಂದಿದ್ದೆ. ನನ್ನ ಆಚ್ಕೆ ಆಕಿರಾ… ನಾನು ತಿರುಗಿ ಬಿದ್ರೆ ನೀವೇ ಆಚ್ಗೆ ವೋಗ್‍ಬೇಕಾಯ್ತದೆ’ ಎಂಬಂತೆ ಗುರಾಯಿಸಿತು.
ನಮಗೆ ತಲೆ ಕೆಟ್ಟಿತ್ತು. ಹಾಸಿ ಹೊದೆಯಲು ಏನು ಇಲ್ಲವಲ್ಲಾ ಎಂದು ಹುಡುಕಿದೆವು. ವಿಶಾಲ ಕಿಟಕಿಗಳಿಗೆ ಕರ್ಟೇನ್ ಹಾಕಿದ್ದರು. ಬಿಚ್ಚಿ ಹಾಸಿ ತಲೆ ದಿಂಬು ಮಾಡಿ ಹೊದ್ದುಕೊಂಡೆವು. ಆ ನಾಯಿಗೆ ಎಣ್ಣೆ ಏಟಿನಿಂದ ಏನೇನೊ ಆಗಿತ್ತು. ಅದರ ಹೊಟ್ಟೆಯಲ್ಲಿ ಗುಡುಗು ಬಿರುಗಾಳಿ ಎದ್ದಂತಿದ್ದವು. ಇದ್ದಕ್ಕಿದ್ದಂತೆ ಜೋರಾಗಿ ಬೊಗಳುವುದು; ಊಳಿಡುವುದು; ನಾವಿಬ್ಬರೂ ಹೇಯ್, ಸದ್ದೂ ಎಂದು ಗದರಿಸಿ ಎಚ್ಚರಿಸುವುದು ನಡದೇ ಇತ್ತು. ನಿಶೆಯೇರಿದ್ದ ಅದರ ಕೆಂಗಣ್ಣುಗಳಿಗೆ ಯಾವ ಭೂತ ಪ್ರೇತಗಳು ಒಟ್ಟಾಗಿ ನುಗ್ಗಿ ಬಂದಿದ್ದವೊ… ಒಮ್ಮೊಮ್ಮೆ ಎದ್ದು ನಿಂತು ದಾಳಿಗೆ ಇಳಿದಂತೆ ನಮ್ಮ ಕಾಲ ಬುಡದಲ್ಲೆ ನಿಂತು ಭೀಕರವಾಗಿ ಬೊಗಳತೊಡಗಿತು. ಈ ನಾಯಿಗೆ ‘ನಾವೇ ಪಿಶಾಚಿತರ ಕಾಣ್ತಿದ್ದೀವೇನೊ’ ಎಂದು ಆನಂದನ ಕೇಳಿದೆ. ‘ಎಣ್ಣೆ ತಕತಲ್ಲಾ; ಹುಚ್ಚು ಹಿಡೀತೇನೊ’ ಎಂದು ಎದ್ದು ಕೂತ. ಅದರ ಆರ್ಭಟ ತಗ್ಗಿಸಲು ನಾವು ಅದನ್ನು ಹೊರ ಹಾಕಲೇಬೇಕಿತ್ತು. ಆದರೆ ಅದು ಅಷ್ಟು ಸುಲಭ ಇರಲಿಲ್ಲ. ನಮಗೇ ಅಪಾಯವಿತ್ತು. ಮಧ್ಯರಾತ್ರಿ ಆಗಿತ್ತು. ಅದು ಯುದ್ಧ ಸಾರಿತ್ತು. ಅಕ್ಕ ಪಕ್ಕದ ಮನೆಯವರು ಲೈಟು ಹಾಕಿ ಕಾಂಪೌಂಡ್ ಬಳಿ ಬಂದು ಏನಾಯ್ತು ಎಂದು ವಿಚಾರಿಸಿ ನಮ್ಮನ್ನೇ ಕಳ್ಳರು ಎಂಬಂತೆ ಅನುಮಾನ ಪಟ್ಟರು. ಕೊಂಚ ನಾಯಿ ಸುಧಾರಿಸಿಕೊಂಡಿತು. ಹಳ್ಳಿಯ ಬಾಲ್ಯದಲ್ಲಿ ಕುಡುಕರ ವಿಭಿನ್ನ ಸ್ವಭಾವಗಳ ಕಂಡಿದ್ದ ನನಗೆ ಈ ನಾಯಿ ಹಿಂದಿನ ಜನ್ಮದಲ್ಲಿ ಹೆಂಡತಿಯ ಕಾಟದಿಂದ ಕುಡಿದು ಜಗಳಾಡಿ ರಂಪಾಟ ಮಾಡಿ ಅತ್ತು ಕರೆದು ಗೋಳು ಮಾಡುವ ಮನುಷ್ಯನೇ ಆಗಿದ್ದನೇನೊ ಎನಿಸಿತು. ಈಗದು ಗೊಳೊ ಎಂದು ರಾಗ ತೆಗೆದು ಅಳುವವರಂತೆ ನಮ್ಮ ಮುಂದೆ ಕಾಲು ನೀಡಿ ಕೂತು ರೋಧಿಸುತ್ತಿತ್ತು.
‘ಲೋ; ಇದ್ಕೆ ಇನ್ನೂ ಒಂದು ನೈಂಟಿ ಎಣ್ಣೆ ಬೇಕೇನೊ ಕಣೋ… ಕುಡಿಸಿ ಬಿಟ್ಟರೆ ನಿದ್ದೆ ಬಂದು ಮಲಗುತ್ತದೆ’ ಎಂದೆ. ‘ಯಸ್ ಕಲಾ, ನಾನಿಡ್ಕತಿನಿ ನೀನಾಕುಬುಡ್ಲಾ’ ಎಂದ. ಅರೆ! ಅದು ತಂತಾನೆ ಬಾಯಗಲಿಸಿತು. ಒಂದು ಬಾಟ್ಲಿ ವಿಸ್ಕಿಯನ್ನೆ ಸುರಿದು ಬಿಟ್ಟ. ಕುಡಿದೇ ಬಿಟ್ಟಿತು. ಊರೂರ ಎಲ್ಲ ನಾಯಿಗಳಿಗು ಕುಡಿಸೋದನ್ನು ಕಲಿಸಿದರೆ; ಇವುಗಳ ಮೆಯಿಂಟೇನ್ ಮಾಡೋಕಾಗ್ದೆ ಪಾನ ನಿಷೇಧ ಕಾಯ್ದೆ ಜಾರಿ ಆಯ್ತಿತ್ತೇನೊ ಕಲಾ ಆನಂದ’ ಎಂದೆ. ‘ಸುಮ್ನಿರ್ಲ ಲೋ, ಅಂಗೇನಾರ ಆಗಿದ್ರೆ ಯೀ ಭೂಲೋಕ್ದೆಲಿ ಒಂದೆ ಒಂದು ನಾಯಿನು ಇರ್ತಿರ್ಲಿಲ್ಲ. ನಿರ್ವಂಶ ಮಾಡ್ಬುರುರು ಕುಡುಕ್ರು! ಎಂದು ಲೈಟ್ ಆನ್ ಮಾಡಿ ಏನ್ಮಾಡನೆ ಎಂದು ಅಂದಾಜು ಮಾಡಿದ. ಜಗಳಕ್ಕೆ ಕಾಲು ಕೆರೆದು ನಿಲ್ಲುವ ಥೇಟ್ ಕುಡುಕನಂತೆ ವರ್ತಿಸಿತು. ಎಷ್ಟೇ ಆಗಲಿ ಮೊದಲಿಗೆ ಆದಿ ಮಾನವನಿಗೆ ಸ್ನೇಹಿತ ಆಗಿದ್ದೇ ನಾಯಿ ತಾನೇ… ‘ಬಾ ಬಾ ತ್ಚೋ ತ್ಚೋ ಹೇ ರಾಮೂ ಅಲ್ಲ ಅಲ್ಲಾ ರಾಜು ರಾಜೂ; ಕೂಲ್ ಡೌನ್. ಇಲ್ಲಾ ಅಂದ್ರೆ ಎತ್ತಿ ಆಚ್ಗೆ ಬಿಸಾಕ್ಬುಡ್ತೀನಿ’ ಎಂದು ಸಮೀಪ ಹೋದ ಆನಂದ. ತೂರಾಡಿ ಕಾಲ ಸಂದಿಯಿಂದ ನನ್ನತ್ತ ನುಗ್ಗಿತು. ಎಗರಾಟ ಇನ್ನಷ್ಟು ಜೋರಾಯಿತು. ಪಕ್ಕದ ಮನೆಯವರು ಬಂದು; ಆ ನಾಯಿಗೆ ಯಾಕ್ರೀ ಹಾಗೆ ಬಡೀತಿದ್ದೀರಿ ಎಂದು ಆಕ್ಷೇಪಿಸಿದರು. ‘ರೀ ನಮ್ಮ ಕಷ್ಟ ನಮಗೆ… ನಿಮದೊಂದು ರಗಳೆ ಹೋಗ್ರಿ ಹೋಗ್ರೀ’ ಎಂದೆ. ಸ್ವಾಮಿ ಹೊರ ಬಂದ. ಬನೀನು ಕೂಡ ಆಕಿರಲಿಲ್ಲ. ಒಂದು ಚಡ್ಡಿ ಅಷ್ಟೇ… ‘ಏನೀಗಾ… ಹಲ್ಲೋ; ಬನ್ರಿ ಇಲ್ಲೀ… ನಮ್ಮ ನಾಯಿ ಯೆಂಗಾರ ಬೊಗುಳ್ಕತದೆ. ಚೆನ್ನಾಗಿ ಬಾಡ ತಿನ್ಸಿವಿ. ವಟ್ಟೆ ತುಂಬ ಮೂಳೆ ಒತ್ತುತಾ ಅವೇ… ಅದ್ರು ಕಷ್ಟ ಅದ್ಕೆ; ನಮ್ಮ ಕಷ್ಟ ನಮಗೆ.. ಇದ್ರೆಲಿ ನಿಮ್ಮ ಕಷ್ಟ ಏನ್ರೀ’ ಎಂದ. ಅವರು ಮಾಂಸಹಾರಿ ಆಗಿರಲಿಲ್ಲ. ಸದ್ದಿಲ್ಲದೆ ಬೇಗ ಒಳಗೆ ಹೋಗಿ ಚಿಲಕ ಹಾಕಿ ಲೈಟ್ ಆಫ್ ಮಾಡಿ ಕತ್ತಲಲ್ಲಿ ಕಿಟಕಿ ಬಳಿ ಗಮನಿಸುತ್ತಾ ನಿಂತರು. ನಮಗೆ ಗೊತ್ತಾಯಿತು. ನಾವು ಸೋತು ಹೋದೆವು ಅದರ ಬಾಯಿಗೆ. ಒಮ್ಮೆಗೇ ಸುಮ್ಮನಾಗಿ ನಿಶ್ಯಬ್ದದ ಪರಾಕಾಷ್ಟೆ ತಲುಪುತ್ತಿದ್ದಂತೆಯೇ ಮನೆ ಒಳಗೇ ಗುಡುಗಿದಂತೆ ಬೊವ್ವೋ ಎಂದು ಅಬ್ಬರಿಸಿ ಅಲೆ ಅಲೆಯಾಗಿ ಬೊಗಳಿ ಬೊಗಳಿ ಕೂಗಾಡಿ ಊಳಿಟ್ಟು ತೆಪ್ಪಗಾಗುತ್ತಿತ್ತು. ಹುಚ್ಚು ಹಿಡಿದಿದ್ದು ಕಚ್ಚಿದರೆ ಹದಿನಾರು ಇಂಜಕ್ಷನ್‍ಗಳ ಹೊಕ್ಕುಳ ಸುತ್ತ ಚುಚ್ಚಿಸಿಕೊಳ್ಳುವುದು ಎಂಗಪ್ಪಾ ಎಂದು ಚಿಂತೆಯಾಯಿತು.
‘ಹುಚ್ಚಿಡ್ದಿಲ್ಲ ಕಲಾ… ಫುಲ್ ಎಣ್ಣೆ ಎಪೇಟ್… ಅರ್ಚಕಂದು ಕಿರುಚ್ಕಂದು ಬಿದ್ದಿರ್ಲಿಬಿಡ್ಲಾ’ ಎಂದು ಉಪೇಕ್ಷಿಸಿದ. ವಿಧಿ ಇರಲಿಲ್ಲ. ಕಣ್ಣು ಮುಚ್ಚಿರಲಿಲ್ಲ. ಆ ಗಾದೆಗಳ ಗಾರುಡಿಗನ ಈ ನಾಯಿ ನಮ್ಮನ್ನು ಇಟ್ಟಾಡಿಸುತ್ತಿದೆಯಲ್ಲಾ… ಆ ಪ್ರಾಧ್ಯಾಪಕನಿಗೇ ತಕ್ಕ ಶಿಕ್ಷೆ ವಿಧಿಸಬೇಕು ಎಂದು ತೀರ್ಮಾನಿಸಿದೆ. ಹದಿನೈದು ದಿನಗಳ ತನಕ ಇದರ ಜೊತೆ ಬದುಕಬೇಕಲ್ಲಾ… ಯಾವ ಜನ್ಮದಲ್ಲಿ ಏನಾಗಿ ಇದಕ್ಕೆ ಕಾಟ ಕೊಟ್ಟಿದ್ದೆನೊ… ನೂರು ಪಟ್ಟು ದಂಡಹಾಕಿ ತೀರಿಸಿಕೊಳ್ಳುತ್ತಿದೆಯಲ್ಲಾ; ಬೆಳಿಗ್ಗೆ ಆಗಲಿ, ಆಗ ಇದಕ್ಕೆ ಇದೆ ಮಾರಿಹಬ್ಬ ಎಂದುಕೊಂಡೆ. ಥತ್! ರಾಮ ರಾಮಾ ಪುರಪುರನೆ ಉಚ್ಚಿಕೊಂಡಿತು. ಅಸಾಧ್ಯ ವಾಸನೆ. ಸತ್ತೇ ಹೋಗುತ್ತೇವೆ ಬೆಳಿಗ್ಗೆ ವೇಳೆಗೆ ಎನಿಸಿ ಆ ನಾಯನ್ನು ಅಲ್ಲೆ ಬಿಟ್ಟು ಎದ್ದು ಇಬ್ಬರೂ ಹೊರ ಬಂದು ಬೀಗ ಹಾಕಿಕೊಂಡು ಹಾಸ್ಟೆಲಿಗೆ ಅವೇಳೆಯಲ್ಲಿ ಹಿಂತಿರುಗಿ ನಮ್ಮ ಕೊಠಡಿಯಲ್ಲಿ ಮಲಗಿದಾಗ ನಿದ್ದೆ ಬಂದಿತ್ತು. ಮರುದಿನ ಆನಂದ ಕೈ ಮುಗಿದಿದ್ದ. ‘ಆಗುದಿಲ್ಲ ಕನಪ್ಪಾ… ಅಹಹಾ!. ಅಪ್ಪಾ ನಿನ್ನ ಗುರುಗಳು, ಅವರ ನಾಯಿ ಸಹವಾಸ ಮಾತ್ರ ಏಳು ಜನ್ಮಕ್ಕೂ ಬೇಡ ಎಂದು ಹೊರಟು ಹೋಗಿದ್ದ. ನನ್ನ ಕರ್ಮಕ್ಕೆ ಹೋಗಿ ನಾಯಿಯನ್ನು ಹೊರಕ್ಕೆ ಬಿಡಬೇಕಿತ್ತು. ಬೇಗ ಸ್ನಾನ ಮಾಡಿ ಹೋಗಿ ಬಾಗಿಲ ತೆಗೆದಿದ್ದೆ. ವಿಪರೀತ ಗಬ್ಬು. ಅಲ್ಲೆ ಬೀಗ ಜಡಿದು ಕಲ್ಪವಲ್ಲಿಗೆ ಹೋಗಿ ಟಿಫಿನ್ ಮಾಡಿ ರೇಜಿಗೆಯ ಭಾವದಲ್ಲಿ ಡಿಪಾರ್ಟ್‍ಮೆಂಟಿಗೆ ಬಂದಿದ್ದೆ. ಆ ದಿನ ತರಗತಿಗಳು ಇರಲಿಲ್ಲ. ಲೈಬ್ರರಿಗೆ ಹೋದೆ. ಬೇವಿನಕಟ್ಟಿ ಮರೆತೇ ಹೋಗಿದ್ದ. ಸಿಕ್ಕರೂ ಅಷ್ಟಕ್ಕೆ ಅಷ್ಟೇ… ನನ್ನ ಸ್ನೇಹಿತರ ಬಳಗ ವಿಜ್ಞಾನ ಪದವಿ ಮಾಡುವ ಗೆಳೆಯರ ಜೊತೆ ವಿಸ್ತರಿಸಿಕೊಂಡಿತ್ತು. ಆನಂದ ಬಂದ ಮೇಲಂತು ಯಾರ್ಯಾರೊ ಹೊಸಬರು ಬೆಸುಗೆ ಆಗಿದ್ದರು. ಆ ನಾಯಿ ಅಲ್ಲಲ್ಲಿ ಕಾಣುತಿತ್ತು. ಗಂಡು ನಾಯಿಗಳು ಅದಕ್ಕಾಗಿ ವೀರಾವೇಶದಿಂದ ಹೋರಾಡುತ್ತಿದ್ದವು. ಯಾಕೊ ನನಗೆ ನಾಯಿಗಳ ಕಚ್ಚಾಟ ಎಂದರೆ ಬಹಳ ಪ್ರೀತಿ. ಅವು ಯಾವ ಯಾವ ಬಗೆಯಲ್ಲಿ ಯಾವ ಸಂದರ್ಭಗಳಲ್ಲಿ ಕಾಲಮಾನಗಳಲ್ಲಿ ರಮಾರಮಿಯಾಗಿ ಹೋರಾಡಿ ಆ ಕೂಡಲೇ ಸ್ಥಳದಲ್ಲೆ ಯುದ್ಧ ಮುಗಿಸುತ್ತವೆ ಎಂಬುದನ್ನು ಗಾಢವಾಗಿ ಅರಿತಿದ್ದೆ. ಯಾರಾದರು ಆ ಬಗ್ಗೆ ಪಿಎಚ್‌ಡಿ ಮಾಡು ಎಂದರೆ ಒಂದು ತಿಂಗಳಲ್ಲೆ ಬರೆದು ಬಿಸಾಕುತಿದ್ದೆ. ಅದನ್ನು ನೆನೆದಂತೆಯೆ ವಿನೋದ ಲಹರಿ ತೇಲಿ ಬಂತು.
‘ನಾಯಿ ಕದನ: ಬಹುಮುಖಿ ಅಧ್ಯಯನ’ ಎಂದು ಶೀರ್ಷಿಕೆಯ ಬರೆದೆ. ನನ್ನ ಹಲವು ಗೆಳೆಯರು ಪಿಎಚ್.ಡಿ ಮಾಡುತ್ತಿದ್ದ ತರಾವರಿ ಅವತಾರಗಳ ಬಲ್ಲವನಾಗಿದ್ದೆ. ‘ಅಧ್ಯಯನದ ಉದ್ದೇಶ ವ್ಯಾಪ್ತಿ ವಿಧಾನ ಮಹತ್ವ’ ಎಂದು ಒಂದು ಅಧ್ಯಾಯ ಮಾಡಿದೆ. ‘ಅಧ್ಯಯನದ ಈ ವರೆಗಿನ ಸಮೀಕ್ಷೆ, ಅಧ್ಯಯನದ ಪೂರ್ವ ಪರಿಕಲ್ಪನೆಗಳು’ ಎಂದು ಮತ್ತೊಂದು ಚಾಪ್ಟರ್ ಮಾಡಿದೆ. ‘ನಾಯಿಗಳ ಕದನ ಮತ್ತು ಬದುಕಿನ ಹೋರಾಟ’ ಎಂದು ಮುಖ್ಯ ಅಧ್ಯಾಯವ ವಿಸ್ತರಿಸಿದೆ. ‘ನಾಯಿಗಳ ಕದನ ತಂತ್ರಗಳು ಸಂದರ್ಭಗಳು ಕೌಶಲ್ಯಗಳು ಮಾರ್ಗೋಪಾಯಗಳು’ ಎಂದು ಅದೇ ಅಧ್ಯಾಯವನ್ನು ವಿಂಗಡಿಸಿದೆ. ‘ನಾಯಿಗಳ ವಾಸದ ನೆಲೆಗಳು; ಮನುಷ್ಯರ ಸಾಮಾಜಿಕ ಸಂಬಂಧಗಳು’ ಎಂಬ ಇನ್ನೊಂದು ತೌಲನಿಕ ಅಧ್ಯಾಯ ಬೆಳೆಸಿದೆ. ‘ಪ್ರಮುಖ ಶ್ವಾನ ಕ್ರಾಂತಿಗಳು, ಸಂಘಟನೆಗಳು, ಒಪ್ಪಂದಗಳು, ಸಂಘರ್ಷಗಳು’ ಎಂಬ ಅಧ್ಯಾಯದಲ್ಲಿ ಆಗುತ್ತಿರುವ ಬದಲಾವಣೆಗಳು ಮತ್ತು ಶ್ವಾನ ಸಂವೃದ್ಧಿಯ ಯೋಜನೆಗಳು ಸಂಗತಿಗಳ ಸೇರಿಸಿಕೊಂಡೆ. ಅಂತಿಮವಾಗಿ ನಾಯಿಗಳ ಕದನದಲ್ಲಿ ಆಗುತ್ತಿರುವ ಆರ್ಥಿಕ, ರಾಜಕೀಯ, ಸಾಮಾಜಿಕ ಹಾಗೂ ಗಡಿ ಸಂಬಂಧಿ ಪಲ್ಲಟಗಳ ಚರ್ಚಿಸಿ ಅಧ್ಯಯನದ ಫಲಿತಗಳಿಗೆ ಬಂದು ಪರಿಸಮಾಪ್ತಿ ಮಾಡಿದೆ. ಆಗತಾನೆ ನನಗೆ ಆಕಸ್ಮಿಕವಾಗಿ ಜೋಗನ್ ಶಂಕರ್ ಎಂಬ ಸಮಾಜಶಾಸ್ತ್ರ ಅಧ್ಯಯನದ ಪ್ರಾಧ್ಯಾಪಕರು ಪರಿಚಯವಾಗಿದ್ದರು. ನನ್ನ ಬಗ್ಗೆ ಅವರಿಗೆ ಗೊತ್ತಿತ್ತು. ಆ ನಾಯಿ ಅದೇ ಕಲ್ಪವಲ್ಲಿಯ ಹೊಂಗೆ ಮರದ ಕೆಳಗೆ ನನ್ನ ಕಡೆಯೆ ನೋಡುತ್ತ ಗಂಡು ನಾಯಿಗಳ ನಡುವೆ ರಾಣಿಯಂತೆ ಗಮನ ಸೆಳೆದಿತ್ತು. ಅಲ್ಲೇ ಕೂತು ಡೈರಿಯಲ್ಲಿ ಸಿನಾಪ್ಸಿಸ್ ಹಾಕಿದ್ದೆ. ಅವರಿಗೆ ತೋರಿದೆ. ಬಿದ್ದು ಬಿದ್ದು ನಕ್ಕು ಕಣ್ಣು ಒರೆಸಿಕೊಂಡು; ‘ಚಹಾ ಕುಡಿಯೋಣು ರೀ’ ಎಂದು ಸಿಗರೇಟು ಹಚ್ಚಿದರು.
ನಗುತ್ತಲೆ ಇದ್ದರು. ‘ಒಂದು ಒಳ್ಳೇ ನಾಟಕ ಬರೀಬಹುದೂ ರೀ.. ಥೀಸೀಸ್ ಮಾಡ್ತಿನಿ ಅಂದ್ರೆ ಅದೂ ಆಗುತ್ತೆ.. ಸಖತ್ ಡೈಮೆನ್ ಇದ್ದಾವ್ರೀ.. ಕೊಡ್ರೀ ಇದಾ. ಯಾರಿಗಾದ್ರು ಕೊಟ್ಟು ಪಿಎಚ್.ಡಿ ಮಾಡಿಸ್ತೀನಿ. ‘ನಾಯಿ’ ಎಂಬ ಪದ ಬಿಟ್ಟು ಬೇರೆ ಏನಾದರೂ ವಿಷಯ ಇಟ್ಟು ಡೀಪಾಗಿ ರೀಸರ್ಚ್ ಮಾಡಬಹುದೂರೀ’ ಎಂದು ವಿಸ್ತರಿಸುತ್ತ ಹೋಗಿ ಮನುಷ್ಯರೂ ನಾಯಿಗಳ ತರಾನೇ ಬಿಹೇವ್ ಮಾಡ್ತಾವ್ರೀ.. ಈ ನಾಯಿಗಳೊ ಈ ಮನಷ್ಯರ ಜೊತೆ ಸೇರಿ ಅವೂ ಬಾರೀ ಬೆರ್ಕೀ ಪಾಲಿಟಿಕ್ಸ್ ಮಾಡ್ತಾವೆ ರೀ.. ತಾಳ್ರೀ; ನನ್ನ ಪ್ರೆಂಡು ಬೆಂಗಳೂರು ಯೂನಿವರ್ಸಿಟಿಯಲ್ಲಿ ಸೈಕಾಲಜಿ ವಿಭಾಗದಲ್ಲಿ ಇದ್ದಾನೆ. ಅವನಿಗೆ ಇದೇ ಟಾಪಿಕ್ನ ಸಜೆಸ್ಟ್ ಮಾಡ್ತಿನೀ.. ಇಂತಾವು ಬಾರೀ ಆಗಿದ್ದಾವ್ರೀ; ಚಿಂಪಾಂಜಿ, ಗೋರಿಲ್ಲಾ, ಬಬೂನ್‌ಗಳ ಬಗ್ಗೆ ಸಾಕಷ್ಟು ಸಂಶೋಧನೆನಾ ಇದೇ ಪ್ಯಾಟರ್ನ್‍ನಲ್ಲಿ ಮಾಡಿದ್ದಾರ್ರೀ.. ಅವುಗಳ ಅಧ್ಯಯನದ ಪರಿಣಾಮದಿಂದಲೆ ಈ ಮನುಷ್ಯರ ವರ್ತನೆಗಳ ಮೂಲ ಅರ್ಥ ಆಗಿರೋದು’ ಎಂದು ಗಹನವಾದ ವಿಚಾರಗಳತ್ತ ವಾಲಿದರು. ನನಗೊ; ಅದೊಂದು ವಿಡಂಬನೆಯಾಗಿತ್ತಷ್ಟೇ.. ಅತ್ತ ನೋಡಿದರೆ ಆ ಹೆಣ್ಣು ನಾಯಿ ಎದ್ದು ಹೋಗುತಿತ್ತು. ಅಲ್ಲಲ್ಲಿ ಬಿದ್ದಿದ್ದ ಗಂಡು ನಾಯಿಗಳು ಅದರ ಹಿಂದೆ ದೌಡಾಯಿಸಿದವು. ಜೋಗನ್ ಪಾಠ ಮಾಡಲು ತಮ್ಮ ಲಟಾಸು ಲೂನಾದಲ್ಲಿ ಗುಬ್ಬಿಯಂತೆ ಹಾರಿ ಹೋಗಿದ್ದರು. ದೇವದಾಸಿ ಹೆಣ್ಣು ಮಕ್ಕಳ ಬಗ್ಗೆ ಅಪಾರ ಕಾಳಜಿಯ ಬೃಹತ್ ಅಧ್ಯಯನವ ಅವರು ಮಾಡಿದ್ದರು.
ನವಿಲು ರಸ್ತೆಯಲ್ಲಿ ಮಂದ ನಡಿಗೆಯಲ್ಲಿ ಲೈಬ್ರರಿಗೆ ಬಂದೆ. ಆ ನಾಯಿ ಹಾಗೆ ಹೇಸಿಗೆ ಮಾಡಿತ್ತು. ಅಲ್ಲಿ ಇನ್ನೇನು ಫಜೀತಿ ಆಗಿದೆಯೊ ಎಂದು ಮನಸ್ಸಿಗೆ ರೇಜಿಗೆ ಆಯಿತು. ಪುಸ್ತಕ ತೆಗೆದುಕೊಂಡು ರೂಮಿಗೆ ಬಂದೆ. ಚಲುವರಾಜನ ತಮ್ಮ ಚಂದ್ರ ಹಾಸ್ಟಲಲ್ಲೆ ಇದ್ದ. ಇನ್ನು ಚಿಕ್ಕವನು. ಬಾರೋ ಎಂದು ಕರೆದೊಯ್ದು ಎಲ್ಲ ಕ್ಲೀನ್ ಮಾಡಿಸಿದೆ. ಆ ಬ್ಯಾಗಲ್ಲಿದ್ದ ಅಕ್ಕಿ ಎಂತಾವು ನೋಡು ಎಂದೆ. ಯೋಗ್ಯ ಇದ್ದರೆ ಕೊಂಡೊಯ್ಯುವ ಎನಿಸಿತ್ತು. ಕಲ್ಲು ಮಿಶ್ರತ ಹುಳು ಹಿಡಿದ ಬೂಸ್ಲು ನುಚ್ಚಕ್ಕಿಯಾಗಿದ್ದವು. ಆ ನಾಯಿಗೆ ಇದನ್ನು ಬೇಯಿಸಿ ಹಾಕುತ್ತಿದ್ದರೆ ಈ ಪ್ರಾಧ್ಯಾಪಕರು.. ‘ನೀನೂ ಅದನ್ನೆ ಊಟ ಮಾಡಪ್ಪ’ ಎಂದಿದ್ದನಲ್ಲ ಮಹಾಶಯ! ಆ ನಾಯಿ ಮನೆ ಬಿಟ್ಟು ಹೋಗಿರುವುದರಲ್ಲಿ ನಮ್ಮ ಪಾಲು ಎಷ್ಟಿದೆಯೊ ಏನೊ! ಅದು ಬೇರೆ ವಿಚಾರ. ಆದರೆ ಅದರಿಂದ ಆ ನಾಯಿಗೇ ಹೆಚ್ಚು ಲಾಭ ಆಗಿದೆ. ರಾಣಿಯ ಸ್ಥಾನ ಸಿಕ್ಕಿದೆ. ಅದು ಮತ್ತೆ ಇಲ್ಲಿಗೆ ಹಿಂತಿರುಗಿ ಬರುವುದಿಲ್ಲ. ಎಂತಹ ಬಲಿಷ್ಟ ನಾಯಿಗಳು ತಾ ಮುಂದು ನಾ ಮುಂದು ಎಂದು ಅದರ ಸೇವೆಗೆ ರಕ್ಷಣೆಗೆ ಹಿಂದೆ ಮುಂದೆ ನಿಂತಿರುವಾಗ ಈ ದರಿದ್ರ ಪ್ರಾಧ್ಯಾಪಕರ ಮನೆಯ ಸುಖ ಯಾಕಕ್ಕಾಗಿ ಅದಕ್ಕೆ ಬೇಕಾಗಿದೆ.. ನಾನು ಒಳ್ಳೆಯದನ್ನೆ ಮಾಡಿರುವೆ ಎಂದು ಬೆನ್ನು ತಟ್ಟಿಕೊಂಡೆ. ಅದರಲ್ಲಿ ಆ ಪ್ರಾಧ್ಯಾಪಕರ ಮೇಲಿನ ಸಿಟ್ಟು ಸುಪ್ತವಾಗಿತ್ತು. ಅವರ ಮನೆಯ ಹಿಂದೆ ಇದ್ದ ಮಾವಿನ ಮರದ ಸಾಕಷ್ಟು ಕಾಯಿಗಳನ್ನು ಚಂದ್ರನಿಗೆ ಹೇಳಿ ಕೀಳಿಸಿ ಮೂರು ಚೀಲಕ್ಕೆ ತುಂಬಿಸಿದೆ. ಆತ ಹತ್ತಿರದಲ್ಲೇ ಇದ್ದ ಹಾಸ್ಟಲಿಗೆ ಹೊತ್ತೊಯ್ದಿದ್ದ. ಆ ದಿನವೆ ಹಾಸ್ಟಲಿನ ಗೆಳೆಯರಿಗೆ ಅವನ್ನೆಲ್ಲ ಹಂಚಿಸಿ ಬಿಟ್ಟಿದ್ದೆ.
ಪರೀಕ್ಷೆಯ ಸಮಯ ಹತ್ತಿರವಾಗಿತ್ತು. ಅದಕ್ಕಾಗಿ ಅಷ್ಟೆಲ್ಲ ಓದಬೇಕಿರಲಿಲ್ಲ. ನಿರ್ಲಕ್ಷ್ಯ ಮಾಡುವಂತಿರಲಿಲ್ಲ. ಎಲ್ಲ ಸಂಗತಿಗಳನ್ನು ತುಂಬಿಕೊಂಡಿದ್ದೆ. ಆಗಾಗ ಗಾದೆ ಪ್ರಾಧ್ಯಾಪಕರು ಮೂತಿ ಸೊಟ್ಟ ಮಾಡಿ ಹಳಿಯುತ್ತಿದ್ದರು. ‘ಮಾಡ್ತಿನಿ ನೋಡ್ಕೋ.. ಸಮಯ ಬರುತ್ತೇ; ಆಗ ಮಾಡ್ತಿನಿ.. ನನ್ನ ನಾಯಿಯ ಎಂಗಾನ ಮಾಡಿ ಕರ್ಕಂಡು ಒಂದು ಮನೆಗೆ ಬಿಟ್ಟೆಯೊ ಸರೀ.. ಇಲ್ಲಾ ಅಂದ್ರೆ ನಿನ್ನುನ್ನೆ ನಾಯಿ ಜಾಗ್ದೆಲಿ ಕಟ್ಟಾಕ್ತಿನಿ’ ಎಂದಿದ್ದರು. ‘ಸದ್ಯ; ಅಷ್ಟು ಮಾಡಿ ಸಾರ್. ನಿಮ್ಮ ಮಗಳೆ ತಾನೆ ನಾಯಿಗೆ ಅನ್ನಾ ಹಾಕೋದೂ.. ಅಂತಾ ಚೆಂದ ಅವಳೆ ಅವಳು. ಅವಳ ಪ್ರೀತಿಯ ನಾಯಾಗಿ ಇದ್ದುಬಿಡುವೆ’ ಎಂದು ಮನದಲ್ಲೆ ಹೇಳಿಕೊಂಡು ನಗಾಡಿದೆ. ‘ನಗೋದಲ್ಲಾ.. ನಿನ್ಗೆ ಗೊತ್ತಾಯ್ತಾ ಇಲ್ಲಾ.. ನನ್ನೆಂಡ್ತಿ ನಾಯಿ ಇಲ್ಲಾ ಅಂತಾ ಎಷ್ಟು ಬೈಯ್ತಾವಳೆ ಅಂತಾ.. ನನ್ನ ಮಗಳು ಅಳೋದೊಂದು ಬಾಕಿ ಇದೇ.. ಮುಠಾಳಾ; ನನ್ನ ನಾಯಿಯ ಬೀದಿ ಪಾಲು ಮಾಡಿ ಬಿಟ್ಟೆಯಲ್ಲೋ.. ತಿರುಬೋಕಿ ನಾಯಿಗಳ ಜೊತೆ ಅಡ್ಡಾಡ್ತಿದೆಯಲ್ಲೊ. ನಿನ್ನಂತವರ ನಂಬಿ ಮನೆಗೆ ಬಿಟ್ಕಂಡ್ರೆ ಆಗುದು ಇಂಗೇ ನೋಡು..’ ಎಂದು ಕ್ಯಾಂಟೀನಿನ ಬಳಿ ಹಿಡಿದು ನಿಲ್ಲಿಸಿ ಸರೀಕರಿಗೆ ಒಪ್ಪಿಸಿ ‘ಪಾಪಿ’ ಎಂದು ಹೊರಟು ಹೋಗಿದ್ದರು. ನನಗೇನು ನೋವಾಗಲಿಲ್ಲಾ.. ‘ಹೇ’ ಪಪ್ಪೀ ಪಪ್ಪೀ ಕಮಾನ್ ಮೈ ಪಾಪೀ’ ಎಂದು ಅವರ ಮಗಳೆ ನನ್ನನ್ನು ಒಂದು ನಾಯಿ ಎಂದು ಭಾವಿಸಿ ಮುದ್ದಿನಿಂದ ಕರೆದಂತಾಗಿ ಒಳಗೊಳಗೆ ನಕ್ಕಿದ್ದೆ. ‘ಯೋ; ಆನಂದಾ; ಅವಯ್ಯ ಬಾರಿ ಅವುಮಾನ ಮಾಡ್ತನೆ ಕಲಾ.. ನಾನೆಂಗ್ಲ ಆ ನಾಯಿ ವಾಪಸ್ಸು ಅವರಿಗೆ ತಲುಪ್ಸುಕಾದದು’ ಎಂದಿದ್ದೆ. ‘ಸುಮ್ನಿರ್ಲಾ ಅಣ್ಣಾ.. ಅವುನ್ಗೆ ಒಂದು ಜರ್ಮನ್ ಶೆಫರ್ಡ್ ನಾಯಿನೆ ತಕ ಬಂದು ಕೊಟ್ಬುಡುಮಾ’ ಎಂದು ಗಹಗಹಿಸಿ ಆನಂದ ನಕ್ಕಿದ್ದ.
ಹುಡುಗಾಟಿಕೆಯಲ್ಲೆ ಕಾಲ ವ್ಯಯ ಆಗುತ್ತಿದೆ ಎನಿಸಿತು. ನೂರ್ಕಾಲ ಬದುಕಿ ಸಾಧಿಸಬೇಕಾದ್ದು ಏನೂ ಇಲ್ಲವಲ್ಲಾ. ಈಗಲಾದರೂ ಒಂದಿಷ್ಟು ಲವಲವಿಕೆಯಿಂದ ಮಜವಾಗಿದ್ದು ಒಂದು ದಿನ ಸತ್ತು ಹೋಗುವ ಎಂಬ ಭಾವದಲ್ಲಿದ್ದೆ. ಯಾಕೊ ಊರಿಗೆ ಹೋಗಿ ನೋಡಿ ಬರಬೇಕು ಎನಿಸಿತ್ತು. ಮತ್ತೆ ಆ ನರಕಕ್ಕೆ ಹೋಗುವುದೇ.. ಆ ಹುಡುಗಿ ಮರೆತು ಹೋದಳೇ.. ಟೆಂಟಿನಲ್ಲಿ ಎರಡು ಕನಸು ಸಿನಿಮಾ ನೋಡಿದ್ದೇ.. ಮುಂಗೋಳಿ ತನಕ ಆ ಹತ್ತಿ ಮರದ ತಳದಲ್ಲೆ ಒಬ್ಬರಿಗೊಬ್ಬರು ಅಪ್ಪಿ ಹಿಡಿದುಕೊಂಡಿದ್ದಿರೀ.. ನೆನಪಾಗಲಿಲ್ಲವೇ ಎಂದು ಆತ್ಮ ಕೇಳಿತು. ಮನಸ್ಸು ಬೆಚ್ಚಗಾಯಿತು. ಏನು ಉಪಯೋಗ? ನೀನು ಯಾರನ್ನು ಮುಟ್ಟುವುದೇ ಇಲ್ಲವಲ್ಲಾ. ಹೆಣ್ಣನ್ನು ಹೇಗೆ ಮುಟ್ಟುವುದು ಎಂದು ಕವಿಯಾಗಿ ಲಹರಿಯಲ್ಲಿ ತೇಲುವೆ! ಈವರೆಗೆ ಒಬ್ಬಳೇ ಒಬ್ಬಳನ್ನಾದರು ಬೆತ್ತಲೆಯಾಗಿ ಕಂಡಿರುವೆಯಾ ಎಂದು ಕೆಣಕಿತು ಮನ. ನೋಡಿದ್ದೇನಲ್ಲಾ ಆ ಅತ್ತೆಯರು ಆ ಅಮರಾವತಿ ಅವರು ನನ್ನ ಮುಂದೆಯೆ ಸ್ನಾನ ಮಾಡಿದ್ದಾರಲ್ಲಾ. ಸ್ವತಃ ನನ್ನ ತಾಯಿ ಬೆನ್ನ ನಾನೆ ತೀಡಿ ತೊಳೆದು ತಲೆ ಮೇಲೆ ಬಿಸಿ ನೀರ ಉಯ್ದಿರುವೆನಲ್ಲಾ… ಅದು ಬೇರೆ. ಪ್ರಾಯಕ್ಕೆ ಬಂದಾಗ ನೋಡಿಲ್ಲವಲ್ಲಾ. ಎಂದಿತು ಮತ್ತೆ. ನೋಡದೆ ಕಣ್ಣು ಮುಚ್ಚಿದರೆ ಏನು ತಾನೆ ಮಹಾನಷ್ಟ? ನೀನು ಹುಟ್ಟಿದ್ದೇ ಒಬ್ಬರು ನೋಡಿದ್ದರಿಂದ. ನೀನು ಸಾಯಬೇಕಾದರೂ ಅದನ್ನ ನೋಡಿಯೇ… ಹಾಗೆಯೇ ನೀನು ಮತ್ತೆ ಹುಟ್ಟುವುದು ಹೆಣ್ಣನ್ನು ಬೆತ್ತಲೆಯಾಗಿ ಕಾಣುವುದರಿಂದ. ಯಾಕೆ ನನ್ನ ತಲೆ ಕೆಡಿಸುವೆ ಮನವೇ.. ನೋಡುವುದ ನಾನಿನ್ನು ಕಲಿತಿಲ್ಲ ಎಂದುಕೊಂಡೆ. ನೋಡಿ ಕಲಿಯುವಂತದಲ್ಲ ಅದು. ಮಾಡಿ ತಿಳಿಯುವಂತದು ಎಂದಿತು ಮನ.
ಆ ನಡುವೆ ‘ಸೆಲೆಕ್ಟೆಡ್ ಪೊಯೆಮ್ಸ್ ಆಫ್ ಕೀಟ್ಸ್’ ಪದ್ಯಗಳ ಓದಿದ್ದೆ. ಅವನಿಗಿಂತ ಮೊದಲಿದ್ದ ಬೈರನ್, ಪಿ. ಬಿ. ಶೆಲ್ಲಿ’ ನೆನಪಾದರು. ಅತ್ಯಂತ ಚಿಕ್ಕ ವಯಸ್ಸಿನಲ್ಲೆ ಜಾನ್ ಕೀಟ್ಸ್ ಪ್ರೇಮ ಕಾವ್ಯದ ಅಮರ ಚರಣಗಳ ಪ್ರಗಾಥಗಳ ಬರೆದು ಬಿಟ್ಟಿದ್ದನಲ್ಲಾ… ಹೆಣ್ಣಿನ್ನು ಬೆತ್ತಲೆಯಾಗಿ ನೋಡಬಹುದು; ಆದರೆ ಅವಳ ಅಂತರಂಗದ ಚೆಲುವನ್ನು ಕಾಣಲು ಬೇಕಾದ ದೃಷ್ಟಿ ನನಗೆ ಇದೆಯೇ ಎಂದು ಕೇಳಿಕೊಂಡು ಏನೊ ದುಃಖ ನಿಟ್ಟುಸಿರಾಗಿ ಹೊರ ಹೊಮ್ಮುತ್ತಿತ್ತು. ಅವನ ಒಡ್ ಟು ಎ ನೈಟಿಂಗೇಲ್ ಕವಿತೆಯನ್ನು ಈ ಜಗತ್ತು ಅದೆಷ್ಟು ಸಾರಿ ಓದಿಕೊಂಡಿದೆಯೊ… ಅದನ್ನು ವ್ಯಾಖ್ಯಾನಿಸುವ ಸಾಮರ್ಥ್ಯ ನನಗೆ ಇರಲಿಲ್ಲ. ಅವನು ಯಾವ ಒಬ್ಬ ಅಮರ ಪ್ರೇಮದ ಕವಿ… ಸರಿಯಾಗಿ ಮೊದಲು ತನ್ನ ಕ್ಯಾನ್ಸರಿಗೆ ಮದ್ದು ಕಂಡುಕೊಳ್ಳಲಿ! ಆ ಮೇಲೆ ಬದುಕಿದ್ದರೆ ಪ್ರಣಯ ಪ್ರಗಾಥವ ಗೀಚಲಿ ಎಂದು ಕೀಟ್ಸ್‌ನ ಬಗ್ಗೆ ವ್ಯಂಗ್ಯ ಆಡಿದ್ದರಂತಲ್ಲಾ… ನನ್ನದೂ ಹೆಚ್ಚು ಕಡಿಮೆ ಅಂತದೇ ದೀನ ಸ್ಥಿತಿಯಾಗಿತ್ತು. ಸಾವು ಬಡತನ ಒಂಟಿತನಗಳಲ್ಲಿ ತನ್ನ ಇಪ್ಪತ್ತನಾಲ್ಕನೇ ವಯಸ್ಸಿಗೆ ಖಾಯಿಲೆಯಿಂದ ಸತ್ತುಹೋಗುತ್ತಾನೆ. ಅವನ ಅಮರ ಪ್ರೇಮ ಪ್ರಾರ್ಥನೆ… ಅದರ ದಿವ್ಯತೆ…. ಸದಾ ಮನುಷ್ಯನ ಆತ್ಮದಲ್ಲಿ ಪ್ರತಿಫಲಿಸಿ ಪ್ರತಿಧ್ವನಿಸುವ ಅವನ ಪ್ರಗಾಥಗಳು ಪ್ರಭಾವಿಸಿದ್ದವು. ಪ್ರೇಮ ಅಮರವೋ; ದುಃಖ ಅಮರವೊ. ಅವನು ನಕ್ಕಿದ್ದು ಒಂದು ಅರೆಗಳಿಗೆ. ಅತ್ತಿದ್ದು ಅನವರತ… ಆದರೂ ವಸಂತ ಋತು ಬಂದ ಕೂಡಲೆ ಪ್ರಣಯ ಪಕ್ಷಿಗಳೆಲ್ಲ ಹಾರಿ ಬರುತ್ತವೆ ಆಕಾಶದ ಆಚೆ ತುದಿಯ ದಿಗಂತದಿಂದ ಈಚೆ ತೀರದ ಅಂಚಿಗೆ. ವಿಶ್ವಾಸವೇ ಹೀಗೆ ಎಂದುಕೊಂಡೆ. ನಶ್ವರತೆಯೂ ಶೂನ್ಯವೇ… ಶೂನ್ಯತೆಯೇ ಅಮರತ್ವ… ಹೇಗೇಗೊ ವಿಚಾರ ಮಾಡಿದೆ.
ಸಾವಿತ್ರಿಯ ಮನಸ್ಸು ಬಯಸಿತು. ಆ ಕ್ರೂರ ಜಂತು ಅಪ್ಪ ನಕ್ಕಂತಾಯಿತು. ಎಲಾ! ಇವನ; ನನ್ನ ಮನಸ್ಸಿಗೆ ಬಂದು ಇಣುಕಿ ನೋಡಿದನೇ… ಈಗ ಏನು ಮಾಡುತ್ತಿರುವನೊ! ಸಮಯ ನೋಡಿಕೊಂಡೆ. ರಾತ್ರಿ ಎರಡು ಗಂಟೆ ಇಪ್ಪತ್ತು ಸೆಕೆಂಡುಗಳು ಅಂತಹ ಏಕಾಂತದ ನಿರುಮ್ಮಳ ಇರುಳಲ್ಲಿ ನನ್ನ ಮನಸ್ಸಿಗೆ ರೆಕ್ಕೆ ಬಂದು ಆಕಾಶವನ್ನು ಸುತ್ತಿ ಹಾಕಿ ಬರುವ ಎಂಬಂತೆ ನಭಕ್ಕೆ ಏರಿ ಬಿಡುತ್ತಿತ್ತು. ಬೆಳದಿಂಗಳ ಅಂಬರದ ಅಂಗಳ. ಅಲ್ಲೊಂದು ಚೆಂದಿರನ ದಿಬ್ಬ. ಅದರ ಮೇಲೊಂದು ಜೋಡಿ ಹಕ್ಕಿ ಕೂತು ಮಾತನಾಡುತ್ತಿದ್ದವು. ಮೆಲ್ಲಗೆ ಗಾಳಿಯಾಗಿ ಸುಳಿದು ರೆಂಬೆ ಮೂಲೆಯಲ್ಲಿ ಕಾಣದಂತೆ ಕೂತೆ. ಆಲಿಸಿದೆ. ಘನವಾದ ಪ್ರಶ್ನೆಯ ಹೆಣ್ಣು ಹಕ್ಕಿ ತನ್ನ ಪ್ರಿಯಕರನಿಗೆ ಕೇಳಿತು. ಆಕಾಶದ ಮೌನಕ್ಕೆ ಭಂಗವಾಗದಿರಲಿ ಎಂಬಂತೆ ಪಿಸುದನಿಯಲ್ಲಿ ನುಡಿಯುತ್ತಿದ್ದವು.
‘ಈ ಮನುಷ್ಯರ ಲೋಕದಲ್ಲಿ ಯಾಕೆ ಇಷ್ಟೊಂದು ಹಿಂಸೆ’
‘ಅವರು ತಪ್ಪು ಮಾಡುವುದಕ್ಕಾಗಿಯೆ ಹುಟ್ಟಿದ್ದೀವಿ ಎಂದು ನಂಬಿರುವುದರಿಂದ’
‘ಅವರು ದೇವರ ಮುಂದೆ ಪಶ್ಚಾತ್ತಾಪ ಪಡುತ್ತಾರಲ್ಲಾʼ
‘ಪಶ್ಚಾತ್ತಾಪವೆ ಅವರಿಗೆ ಹಿತ, ಹಾಗಾಗಿ ತಪ್ಪು ಮಾಡುತ್ತಲೆ ಇರುತ್ತಾರೆ’
‘…………………… ……………….. ………………………….’
‘ತಪ್ಪು ಎಂದರೆ ಯಾವುದು’
‘ಸರಿ ಎಂದು ನಂಬಿರುವುದು’
‘ಸರಿತಪ್ಪು ಎರಡಕ್ಕೂ ಅರ್ಥ ಒಂದೆಯೆ’
‘ಹೌದು! ದೇವರ ಜೊತೆಗೇ ದೆವ್ವವೂ ಬಂದಿದೆ’
‘ಹಾಗಾದರೆ ನಾಳೆ ಈ ಲೋಕದ ಗತಿ ಏನು’
‘ಲಯದಿಂದ ಬಯಲಾಗುವುದು; ಬಯಲಿಂದ ಆಲಯವಾಗುವುದು’
‘ತಿಳಿಯಲಿಲ್ಲ ದ್ವಂದ್ವವಾಯಿತು ಬಿಂಬ’
‘ದಿಂಬದಿಂದ ಬಿಂಬವಾಯಿತೊ; ಬಿಂಬದೊಳಗೆ ದಿಂಬವೊ’
‘ಯಾರೊ ನಮ್ಮ ಮಾತನ್ನು ಅಲಿಸುತ್ತಿದ್ದಾರೆ…’
‘ಯಾರೂ ಮನುಷ್ಯರೇ… ಹೌದು ಮನುಷ್ಯ ಬಹಳ ವಾಸನೆಯವರು’
ಮಾಯವಾಗಿ ಹಾರಿ ಹೋದವು ಜೋಡಿ ಹಕ್ಕಿಗಳು. ಎಚ್ಚರವಾಯಿತು. ನಾನೆಲ್ಲಿದ್ದೆ? ಕನಸ್ಸಿನಲ್ಲಿ ತಾನೆ! ಮನುಷ್ಯ ಕನಸ್ಸಿನಲ್ಲೆ ಒಂದು ಬಗೆ; ನನಸಿನಲ್ಲೆ ಇನ್ನೊಂದು ರೀತಿ…
ಏನಿದು ವಿಚಿತ್ರ ಎನಿಸಿತು. ಆ ಸಾಕೇತ್ ನೆತ್ತರನ್ನೆ ಸುವಾಸನೆ ಎಂದುಕೊಂಡಿದ್ದನೇ? ಹಾಗಾದರೆ ಈ ಹಿಂಸೆ, ಈ ಕೇಡು ಈ ನರಕದ ಬಗ್ಗೆ ಅನಾದಿಯಿಂದಲು ಮನುಷ್ಯರ ಒಳಗೆ ಕರುಣೆಯೂ ಸಾಗಿ ಬಂದಿದೆಯಲ್ಲಾ… ಈ ದಿಂಬ ಹೆಣ್ಣೇ; ಅದರ ಬಿಂಬ ಗಂಡೇ… ಇಲ್ಲ ಇಲ್ಲಾ ಗಂಡೇ ಬಿಂಬ ಇರಬೇಕು. ಕೈಗೆಟುಕದ ವಿಚಾರಗಳಲ್ಲಿ ಮುಳುಗಿದ್ದೆ. ದೇಹ ಒಟ್ಟಿನಲ್ಲಿ ನಿಸರ್ಗದ ನೆರಳಲ್ಲವೇ… ನಿಸರ್ಗವೂ ನೆರಳೇ ಆಗಿದ್ದರೆ… ವಿಷಯವಾಗಿ ಆಸೆಯಾಗಿ ವಾಸನೆಯಿಂದ ಬಂದಿದ್ದರೆ; ಆಗ ಈ ಲೋಕವನ್ನು ಏನೆಂದು ಕರೆಯುವುದು? ಪ್ರಕೃತಿ, ಪುರುಷ ಎರಡೂ ಬೆರೆತ ಛಾಯೆಗಳು. ನೆರಳು ಕಂಡದ್ದು ಕಣ್ಣಿಂದಲೊ ಪ್ರಜ್ಞೆಯಿಂದಲೊ! ಆಕಾರ ನಿರಾಕಾರವಾಗುತ್ತದೆ ಯಾಕೆ? ಆಕಾರವು ಭ್ರಮೆಯೇ… ಎಲ್ಲ ಆಕೃತಿಗಳೂ ನಮ್ಮ ಕಣ್ಣಿಗೆ ಕಾಣುವುದಿಲ್ಲವಲ್ಲಾ… ಕೆಲವು ಮಾತ್ರ ಯಾಕೆ ಕಾಣುತ್ತವೆ. ಶೂನ್ಯ ಕಾಯ ಎಂದರೆ ಆಕಾಶ ತಾನೆ? ಈ ಶೂನ್ಯವು ಅಪರಿಮಿತ ಅಸ್ಪೃಶ್ಯವಾಗಿದೆಯಲ್ಲಾ… ಮುಟ್ಟಿಸಿಕೊಳ್ಳಲು ಸಾಧ್ಯವೇ ಗಗನವಾ? ನನ್ನನ್ನು ನಾನು ಮೋಹಿಸುತ್ತಾ ಬಂದಿರುವುದರಿಂದಲೆ ಈ ನರಕ ಈ ಸ್ವರ್ಗಗಳ ಛಾಯೆಗಳು ಸದಾ ನೆತ್ತಿಯಲ್ಲಿ ಮಿಳ್ಳಾಡುವುದು. ಯಾರು ಯಾರನ್ನು ಇಲ್ಲಿ ಅಂತಿಮವಾಗಿ ಮುಟ್ಟಿಸಿಕೊಳ್ಳದೆ ಅಸ್ಪೃಶ್ಯರಾಗಿಯೇ ಅಳಿಯುತ್ತಾರೆ. ನಾನು ಮಾತ್ರ ಅವರು ಮಾತ್ರ ಅಸ್ಪೃಶ್ಯರಲ್ಲ… ಇಲ್ಲಿ ಎಲ್ಲರೂ ಅಸ್ಪೃಶ್ಯರೇ… ಅಂಥಾದ್ದರಲ್ಲಿ ದೇವರನ್ನು ಮುಟ್ಟಿಸಿಕೊಂಡಿರುವೆ… ದೇವ ಮಾನವರು ನಾವು ಎಂದು ತನ್ನ ಎಚ್ಚರವನ್ನು ತಾನೇ ತಿಂದುಕೊಂಡು ವಾಸನೆಯಲ್ಲೇ ಕಳೆದು ಹೋಗುವರಲ್ಲಾ….
ಅವತ್ತು ಆ ದೇವರ ಪರಿಸೆಯಲ್ಲಿ ತಾತನ ಹಿಡಿದು ಕಟ್ಟಿಹಾಕಿ ಬಡಿದಿದ್ದರು! ದೇವರ ಹೆಸರಲ್ಲಿ ಎಷ್ಟೊಂದು ಕಗ್ಗೊಲೇ… ಆ ಪರಿಸೆ ಬೇಡ ಎಂದರೆ.. ಅಲ್ಲಿ ಆ ಹಿಂಸೆಯೆ ಇರುವುದಿಲ್ಲ. ಆಕಾರಗಳೆ ಕಾಣುವುದಿಲ್ಲ. ಸಂತೆ ಕಟ್ಟಿದಾಗ ಅಹಾ! ಎಷ್ಟೊಂದು ವಿಷಯಗಳ ವ್ಯಾಪಾರ! ಅದು ತಾತ್ಕಾಲಿಕ; ಮುಗಿದ ಮೇಲೆ ಉಳಿಯುವುದು ಅದೇ ಖಾಲಿ ಖಾಲಿ ಶೂನ್ಯ ಸಂತೆ. ಗದ್ದಲವಿಲ್ಲ, ಹಾದರವಿಲ್ಲ ಹಿಂಸೆಯಿಲ್ಲ, ದುರಾಸೆಯ ವ್ಯಾಪಾರವೇ ನಡೆಯುವುದಿಲ್ಲ, ಇದೆಂತೆಹ ಮಾನವ ಪಾಡು ನಮ್ಮದು ಎಂದು ವಿಚಾರದಲ್ಲಿ ಮುಳಗಿದ್ದೆ. ಹಾಗಾದರೆ ಈ ವಿಶ್ವವನ್ನು ಏನೆಂದು ಕರೆಯುವುದು? ಅದರಲ್ಲಿ ನನ್ನ ಅಸ್ತಿತ್ವ ಏನು ಎಂದು ಕೇಳಿಕೊಂಡೆ. ಇದು ಅನಂತ ಸಮಯ… ಕಾಲಾತೀತ ಕಾಲ ಚಲನೆ ಅಷ್ಟೇ ಎಂದುಕೊಂಡೆ ಹೌದೇ… ಹೇಗೆ? ಹುಟ್ಟಿದ ಪ್ರತಿಯೊಂದೂ ಇಲ್ಲಿ ಕಾಲಾನುಸಾರ ಚಲಿಸುತ್ತದೆ. ಅದರ ನಿಯಮ ಮೀರಿ ಮೆರೆದಾಡಿದರೂ ಎಲ್ಲವನ್ನೂ ಕಾಲ ತನ್ನ ಚಲನೆಯ ನಿಯಮದಲ್ಲೆ ನಿಯಂತ್ರಿಸಿಕೊಂಡಿರುತ್ತದೆ. ಆ ಜೋಡಿ ಹಕ್ಕಿಗಳು ಮತ್ತೆ ಆ ಚಂದ್ರದಿಬ್ಬದ ಮರದ ಕೊಂಬೆಗೆ ಬಂದು ನನ್ನ ಮನದೊಳಗೆ ಕೂತಿದ್ದವು. ಹೆಣ್ಣು ಹಕ್ಕಿ ಕೇಳಿತು…
‘ಈ ಕಾಲ ಚಲನೆ ಯಾರದು’
‘ಆಕಾಶಗಳ ಆಕಾಶಗಳದು. ಆಕಾಶದ ಅಪರಿಮಿತ ಆಕಾಶಗಳಲ್ಲಿ ಯಾವುದೊ ಒಂದು ಚಲನೆ ಈ ಮನುಷ್ಯರದು. ಅಖಂಡ ಚಲನೆ ಅವರಿಗೆ ಗೊತ್ತಿಲ್ಲ’
‘ಯಾಕೆ ಬೇಕು ಚಲನೆ’
‘ಒಂದು ಯಕಶ್ಚಿತ್ ಚಲನೆಯ ಸಂಕೋಲೆಯಿಂದ ಬಿಡಿಸಿಕೊಳ್ಳಲು ಅದು ನಿಮಿತ್ತ ಅಪರಿಮಿತ ಕಾಲದಲ್ಲಿ ಚಲನೆ ಒಂದು ಅಣುಕ್ಷಣ ಅಷ್ಟೇ… ತ್ರಿಕಾಲ ಅಷ್ಟೇ ಅಲ್ಲಾ… ಅಗಣಿತ ತಾರಾಗಣಗಳ ಕಾಲ ಯಾನದಲ್ಲಿ ಮನುಷ್ಯರು ಈ ತನಕ ಸಾಗಿ ಬಂದಿರುವುದು ಒಂದು ಗಳಿಗೆ ಒಂದು ಕಣ ಮಾತ್ರ.
‘ಚಲನೆ ಎಂದರೆ ಏನು?’
‘ನಮ್ಮ ನಮ್ಮ ಗಳಿಗೆಗಳ ಮಿತಿಗಳನ್ನು ರೂಪಾಂತರಗೊಳಿಸುವುದೇ ಚಲನೆ’
‘ಈ ವಿಶ್ವ ಅತೀತವೇ ಪರಿಪೂರ್ಣವೇ’
‘ಇಲ್ಲಿ ಯಾವುದು ಪೂರ್ಣ ಅಲ್ಲ; ಆದರೆ ಪೂರ್ಣತೆಯತ್ತ ಚಲನೆ ಮಾತ್ರ’
‘ಸಾವಿನಲ್ಲು ಚಲನೆ ಇದೆಯೇ’
‘ಸಾವಿನಲ್ಲಿ ಅಷ್ಟೇ ಅಲ್ಲಾ; ಅಮರತ್ವ ಎಂದು ಧ್ಯಾನಿಸುತ್ತಾ ಕೂಡಿರುತ್ತಾರಲ್ಲಾ ಅವರಲ್ಲು ಬೇರೆ ಬೇರೆ ಚಲನೆಗಳಿವೆ. ಸಮಾಧಿ ಸ್ಥಿತಿಯಲ್ಲಿ ವೇಗವಾದ ಧ್ಯಾನ ಚಲನೆ ಇದೆ. ಅಳಿವ ಅಸ್ತಿಪಂಜರ ಪಂಚ ಭೂತಗಳಲ್ಲಿ ತತ್‌ಕ್ಷಣವೆ ಲೀನವಾಗಲು ಮುಂದಾಗುತ್ತದೆ. ಹಾಗಾಗಿ ಸಾವು ಎಂದರೆ ಚಲನೆಯ ಒಂದು ಸಂಕೊಲೆಯಿಂದ ವಿಮೋಚನೆ ಪಡೆದು ಬೇರೆ ಬೇರೆ ಅವಸ್ಥೆಗಳತ್ತ ತೆವಳುವ ಶಿಶುವಾಗುತ್ತದೆ.’
‘ಮಗುವಿನ ನಿದ್ದೆಯ ಚಲನೆ ಎಂತಾದ್ದು’
‘ಅದು ನಾಕದ ನಲಿವಿನ ಚಲನೆ… ಕಾಯದಿಂದ ಕಾಯವಾಗಿರುವ ವಿಸ್ಮಯ ಚಲನೆ… ಸೃಷ್ಠಿಯ ತಾಯಿಯ ಚಲನೆಯಲ್ಲಿ ಮಗುವಿನ ಚಲನೆ ಸಾಗುತ್ತಾ ತುಂಡಾಗುವ ಚಲನೆ.’
ಒಹ್! ನಾನು ಯೋಗಿಯಾಗಬಹುದು! ಈ ಬಿಂಬ? ಎಂಬುದು ಮುಗಿದು ಬಿಡಲಿ ಆ ಮೇಲೆ ಮಾದೇಶ್ವರನ ಬೆಟ್ಟಕ್ಕೆ ಹೋಗಿಬಿಡಬಹುದು. ಅಲ್ಲಿನ ಗಾಯಕರ ಹಿಂದೆ ಊರೂರು ಸುತ್ತಿ ಭಿಕ್ಷೆ ಬೇಡಿ ಮಠ ಸೇರಿ ಶಿವನ ಪಾದ ಸೇರಬಹುದು ಎಂದು ನಿಟ್ಟುಸಿರು ಬಿಟ್ಟೆ. ಪ್ರಾಧ್ಯಾಪಕರ ಆ ನಾಯಿ ಯಾವ ಚಲನೆಯಲ್ಲಿತ್ತೊ ಏನೋ? ಆ ನಾಯಿಗೆ ಒಂದು ದಾರಿ ಸಿಕ್ಕರೆ ಸಾಕು ಎಂದು ಅದರ ಚಿಂತೆಯನ್ನು ಮರೆತೆ.
ಕಥೆಗಾರ, ಕವಿ ಮತ್ತು ಕಾದಂಬರಿಕಾರ. ಹಂಪಿ ಕನ್ನಡ ವಿಶ್ವವಿದ್ಯಾಲಯದ ಜಾನಪದ ಅಧ್ಯಯನ ವಿಭಾಗದಲ್ಲಿ ಪ್ರಾಧ್ಯಾಪಕರಾಗಿದ್ದಾರೆ.
ಕಥೆ ಬಹಳ ಚೆನ್ನಾಗಿ ಮೂಡಿಬಂದಿದೆ.. ಓದಿಸಿಕೊಂಡು ಹೋಯಿತು
ನಾಯಿಯ ಪ್ರಸಂಗ್ ಬಹಳ ಮಜವಾಗಿತ್ತು ನಗು ತಡೆಯಲಾಗುತ್ತಿಲ್ಲ.
ಸಾಮಾಜಿಕ ತಾರತಮ್ಯ , ಅಸ್ಪ್ರಶ್ಯತೆ , ಬಡತನದ ಸಂಘರ್ಷ , ಹಾಗು ಮುಂದುವರಿದ ಜಾತಿಯ ದಬ್ಬಾಳಿಕೆಗಳನ್ನ ಹಾಸ್ಯ ಲೇಪಿತವಾಗಿ ರಸದೂಟದಂತೆ ಬಡಿಸಿಟ್ಟಿರುವದಕ್ಕೆ ಅನಂತ ನಮಸ್ಕಾರಗಳು . ಹೀಗೆಯೇ ಮುಂದುವರಿಸಿ ….ಉರುಕೊಳ್ಳುವರಿಗೆ ಇನ್ನಷ್ಟು ಉರಿಸಿ