ಹಬ್ಬದ ದಿನ, ಕತ್ತಲೇರುತ್ತಿದ್ದಂತೆ ಮನೆ ತುಂಬಾ ಜನ. ಎಷ್ಟೆಂದರೆ, ೧೩ ಮನೆ ದಾಯ್ ಆಟಕ್ಕೆ ಬೇಕಾಗುವಷ್ಟು ಕೈ, ಮತ್ತೆ ಅವರಿಗೆ ಬೇಕಾದಂತೆ, ಕಾಫಿ ಚಾ ಮಾಡಲಿಕ್ಕೆ, ಹೊರಗಡೆ ನಿಲ್ಲುತ್ತಿದ್ದ ಮಂಡಕ್ಕಿ ಗಾಡಿಯಿಂದ ಮಸಾಲೆ ಮಂಡಕ್ಕಿ ತಂದು ಕೊಡೋಕೆ, ಮತ್ತೆ, ದೊಡ್ಡ-ದೊಡ್ಡ ಗಣಪತಿಗಳ ಮೆರವಣಿಗೆ ಬಂದಾಗ ಅವರಿಗೆ ಹೇಳಲಿಕ್ಕೆ ಬೇಕಾದಷ್ಟು ಜನ. ದಾಯ್ ಆಟದ ಮಂದಿ ಪಳಗಿದ ಕೈಗಳಾದ್ದರಿಂದ, ನಮ್ಮಂತ ಮಕ್ಕಳು ಒಂದೋ ಆಟಕ್ಕುಂಟು ಲೆಕ್ಕಕಿಲ್ಲ ಅಥವಾ ಅರ್ಜೆಂಟಿಗೆ ಒಂದಿಷ್ಟು ನಿಮಿಷ ಬೇಕಾದಾಗ ಕವಡೆಯ ಕರಡಿಗೆ ಮಗಚುವ ಕೈ. ಉಳಿದ ಸಮಯದಲ್ಲಿ, ಮಂಡಕ್ಕಿ-ಸೋಡಾ ಮಜಾ ಮಾಡುತ್ತಾ, ಗಣಪತಿಗಳ ಟ್ರಾಕ್ಟರ್ ಜೊತೆಗೆ, ತಿನ್ನುತ್ತಿದ ಮಂಡಕ್ಕಿ ಪ್ಯಾಕೇಟಿನ ಲೆಕ್ಕ ಇಡುವದು ನಮ್ಮ ಕೆಲಸ. ಗಣೇಶ ಹಬ್ಬದ ನೆನಪುಗಳಿಗೆ ಅಕ್ಷರ ರೂಪ ನೀಡಿದ್ದಾರೆ ಮುರಳಿ ಹತ್ವಾರ್.‌ 

 

ನೆನಪುಗಳೇ ಹಾಗೆ. ಒಮ್ಮೆ ತಲೆಯೊಳಗೆ ಕುಳಿತರೆ ಆಯಿತು, ಹೊಸತೆಲ್ಲವನ್ನು ಅವುಗಳ ಕನ್ನಡಕದಲ್ಲೇ ನೋಡುವಂತೆ ಒತ್ತಾಯಿಸುತ್ತವೆ. ಅದರಲ್ಲೂ, ಬೆಳೆಯುವ ವಯಸ್ಸಿನಲ್ಲಿ, ಕುತೂಹಲವೋ ಆಸಕ್ತಿಯೋ ತುಂಬಿಸಿಕೊಂಡ ನೆನಪುಗಳಂತೂ ತಮ್ಮ ಅಳತೆಗೋಲಲ್ಲಿ ಪಾಸಾದ ಹೊಸ ನೆನಪುಗಳಿಗಷ್ಟೇ ಸಂಭ್ರಮದ ಜಾಗ ಕೊಡೋದು. ಹಾಗೆ ನಿತ್ಯದ ಪಯಣದಲ್ಲಿ ಸೇರಿಕೊಂಡ ನೆನಪುಗಳು, ಹೆಚ್ಚು ಹೆಚ್ಚು ನಿನ್ನೆಗಳು ಕಳೆದಂತೆ ಪದರ ಪದರಗಳ ಸಿಹಿ ಸೋನಪಾಪಡಿಯಂತೊ, ಅಥವಾ ಕಹಿ ಹಾಗಲಕಾಯಿ ಉಪ್ಪಿನಕಾಯಿಯಂತೋ ನೆನಪಿನ ಜಾಡಿಯಲ್ಲಿ ಶೇಖರವಾಗುತ್ತವೆ. ಅವು ಅವುಗಳಿಷ್ಟದಂತೆ ಆಗಾಗ ಕಣ್ಮುಂದೆ ಬಂದು ಕುಣಿಯುತ್ತವೆ, ಕಿವಿಗಳನ್ನ ಕೊರೆಯುತ್ತವೆ: ಕೆಲವೊಮ್ಮೆ ಒಂಟಿ ಸಲಗದಂತೆ; ಕೆಲವೊಮ್ಮೆ ವಿಸರ್ಜನೆಗೆ ಹೊರಟ ಗಣಪತಿಗಳ ಮೆರವಣಿಗೆಯಂತೆ.

ಗಣಪತಿ ಎಂದಾಗ ನೆನಪಿಗೆ ಬರೋದು, ಬಳ್ಳಾರಿ ಮುನಿಸಿಪಲ್ ಸ್ಕೂಲ್ ಮೈದಾನದಲ್ಲಿ ಕೇಳಿದ ಭದ್ರಗಿರಿ ಅಚ್ಯುತದಾಸರ ಹರಿಕಥೆ. ಅವರ ಕಂಚಿನ ಕಂಠದ ಏರಿಳಿತದ ಲಯದಲ್ಲಿ ಭೀಮ-ಅರ್ಜುನರ ಅಹಂಕಾರ ಕಟ್ಟು ಹಾಕಿದ ಕೃಷ್ಣ ಗಾರುಡಿಯ ಕಥೆ, ಕೇಳಿ ಮೂವತ್ತು-ಮೂವತ್ತೈದು ವರ್ಷಗಳಾದರೂ, ನೆನಪಿನ ಅಂಗಳದಲ್ಲಿ ಇನ್ನೂ ಹೂಬಿಡುತ್ತ, ಮತ್ತೆ ಮತ್ತೆ ಚಿಗುರುವ ಬಳ್ಳಿ ಅದು. ಅವರ ಕಥೆಗಳಲ್ಲಿ ಹೇಳಿದ, ದಾಸರು ಮಳೆ ಬರುತ್ತೆ ಎಂದು ಹೇಳಿದರೆಂದು ಮೋಡದ ಕುರುಹಿಲ್ಲದಿದ್ದರೂ ಕೊಡೆ ತಂದ ಬಾಲಕನೊಬ್ಬನ ಗಟ್ಟಿ ನಂಬಿಕೆ, ಅದಕ್ಕೆ ತಕ್ಕಂತೆ ಮಳೆ ಸುರಿದ ಕಥೆಯೊಂದು ನಿನ್ನೆಯಷ್ಟೇ ಕೇಳಿದಷ್ಟು ಹಸಿಯಾಗಿ ನೆನಪಿನ ಕುಡಿಕೆಯಲ್ಲಿ ಕುಳಿತಿದೆ. ಅವರ ಹರಿಕಥೆಗಳ ಸುತ್ತ, ಆ ವಾರವಿಡೀ ನಡೆಯುತ್ತಿದ್ದ ತರತರದ ಕಾರ್ಯಕ್ರಮಗಳಿಗೆ ಉತ್ಸಾಹದಿಂದ, ಬೇರಾವುದೇ ಒತ್ತಾಯವಿಲ್ಲದೇ, ಸೇರುತ್ತಿದ್ದ ಸಾವಿರಾರು ಜನ, ಆ ಜಂಗುಳಿಯಲ್ಲಿ ಮನೆಯವರೊಟ್ಟಿಗೋ, ಗೆಳೆಯರೊಟ್ಟಿಗೋ ಹಾಕಿದ ಹೆಜ್ಜೆಗಳ ಸದ್ದು ಇನ್ನೂ ಕೇಳಿಸುತ್ತಿದೆ.

ಆ ಕಾಲದ ಎಲ್ಲ ಗಣಪತಿಗಳ ಲೆಕ್ಕವಿಟ್ಟಿವೆ ಆ ಹೆಜ್ಜೆಗಳು. ಮುನಿಸಿಪಲ್ ಮೈದಾನದ ಪಕ್ಕದ ಸೆಂಟೆನರಿ ಹಾಲಿನ ದೊಡ್ಡ ಗಣಪನಿಂದ ಹಿಡಿದು, ಸಣ್ಣ ಮಾರ್ಕೆಟ್, ದೊಡ್ಡ ಮಾರ್ಕೆಟ್, ಮೇದಾರ ಓಣಿ, ಕುಂಬಾರ ಓಣಿ, ಗೌಳಿ ಹಟ್ಟಿ, ಸಿಂಧಿಗಿ ಕಂಪೌಂಡ್, ತೇರು ಬೀದಿ, ಕಾಳಮ್ಮ ಬೀದಿ… ಹೀಗೆ ಪೆಂಡಾಲಿನಿಂದ ಪೆಂಡಾಲಿಗೆ ಓಡುತ್ತಿದ್ದ, ಅಲ್ಲಿ ಯಾವ ದಿನ ಯಾವ ಕಾರ್ಯಕ್ರಮವಿದೆ, ಎಷ್ಟು ಹೊತ್ತಿಗೆ ಏನೇನು ಎಲ್ಲ ಪಟ್ಟಿ ಮಾಡುತ್ತಾ, ಆ ಪೆಂಡಾಲಿನಲ್ಲಿ ಕೊಡುತ್ತಿದ್ದ ಸಿಹಿ ಹಿಟ್ಟು ಇಲ್ಲ ಗುಗ್ಗರಿ ತಿನ್ನುತ್ತಾ ಮುಂದೋಡುವುದು, ಸಂಜೆಯ ಹೊತ್ತಿಗೆ ಆ ಪಟ್ಟಿಯನ್ನ ಮನೆಯವರಿಗೆ ತಲುಪಿಸಿ ಅವರೊಟ್ಟಿಗೆ ಯಾವ ಕಾರ್ಯಕ್ರಮಕ್ಕೆ ಹೋಗುವದು, ಗೆಳೆಯರೊಟ್ಟಿಗೆ ಯಾವ ಕಾರ್ಯಕ್ರಮಕ್ಕೆ ಹೋಗುವದು ಎನ್ನುವ ‘ನೆಗೋಷಿಯೇಷನ್’ ಮಾಡಿಕೊಂಡರೆ ಹಬ್ಬದ ಡೈರಿ ಫುಲ್.

ಆ ದಶಕವೇ ಹಾಗೆ. ಬೆರೆತು ಬೆಳೆಯುವ ಸಮಯ. ಮುಖ-ಮುಖ ಭೇಟಿ ಆದರಷ್ಟೇ ಮಾತು, ಆಟ. ಟಿವಿ ಇದ್ದವರ ಮನೆಯಲ್ಲೂ ಒಂದೇ ಚಾನೆಲ್. ಮಕ್ಕಳಿಗಂತೂ, ಆಟ ಆಡಬೇಕಿದ್ದರೆ, ಪಕ್ಕದ ಮನೆಯ ಬಾಗಿಲು ತಟ್ಟಿ ಓದಲು ಅರೆಮನಸ್ಸಿನಿಂದ ಕುಳಿತ ಗೆಳೆಯನನ್ನ ಕರೆಯುವದು ಬಿಟ್ಟರೆ ಬೇರೆ ದಾರಿಯಿಲ್ಲ. ಹಾಗೆ ಎರಡು ಮೂರು ಮಂದಿ ಸೇರಿ ಮಾಡುವ ಗದ್ದಲ ಬೀದಿಯ ಮನೆ ಮನೆ ಬಾಗಿಲು ತಟ್ಟಿ ಮಕ್ಕಳೆಲ್ಲ ಹೊರಗೆ, ಮತ್ತೆ ಮನೆ ನೆನಪಾಗುತ್ತಿದ್ದದ್ದು ಕತ್ತಲು ಬೆಳೆದ ಮೇಲೆ. ಅದರಲ್ಲೂ ಹಬ್ಬಗಳ ರಜೆ ಎಂದರೆ ಮಜವೋ ಮಜ! ಗಣಪತಿಯ ಹಬ್ಬ ಬಂದರಂತೂ ಇನ್ನೂ ಹೆಚ್ಚಿನ ಮಜಾ. ಬೀದಿ ಬೀದಿ ಸುತ್ತಲು ಅವನದೇ ಪರ್ಮಿಷನ್!

ಎಲ್ಲ ಬೀದಿಯ ಗಣಪತಿಗಳಿಗಿಂತ, ಕಾಳಮ್ಮ ಬೀದಿಯ ಗಣಪ ಸ್ವಲ್ಪ ಮನಸಿಗೆ ಹತ್ತಿರ. ನಮ್ಮ ಸ್ಕೂಲ್ ಹತ್ತಿರವಿದ್ದುದು ಒಂದು ಕಾರಣವಾದರೆ, ಆ ವಿನಾಯಕನನ್ನ ಕಟ್ಟುವ ‘ಅಣ್ಣಂದಿರ’ ತಮ್ಮಂದಿರು ಕ್ಲಾಸಿನಲ್ಲಿದ್ದುದು ಮುಖ್ಯ ಕಾರಣ. ಹಬ್ಬಕ್ಕೆ ಸುಮಾರು ಮೊದಲೇ ಶುರುವಾಗುತ್ತಿತ್ತು ‘ಲೀಕ್ಸು’: ‘ಜೇಡಿ ಮಣ್ಣು ತಂದವ್ರೆ’, ‘ ಈ ಸಲ ಕ್ರಿಕೆಟ್ ಗಣಪ, ಗ್ಯಾರಂಟಿ’, ‘ಇಲ್ಲಲೇ, ಸಿದ್ದಿ-ಬುದ್ದಿ ಗಣಪ, ನಂಗ್ ಗೊತ್ ಲೇ’…. ಆಗಾಗ ಇನ್ನೂ ರೂಪು ತಾಳುತ್ತಿರುವ ಗಣಪನ ಸೀಕ್ರೆಟ್ ದರ್ಶನದ ಅವಕಾಶ ಬೇರೆ. ನೆನಪಿನಲ್ಲಿ ಉಳಿಯದೆ ಇನ್ನೇನು.

ಅವರ ಕಥೆಗಳಲ್ಲಿ ಹೇಳಿದ, ದಾಸರು ಮಳೆ ಬರುತ್ತೆ ಎಂದು ಹೇಳಿದರೆಂದು ಮೋಡದ ಕುರುಹಿಲ್ಲದಿದ್ದರೂ ಕೊಡೆ ತಂದ ಬಾಲಕನೊಬ್ಬನ ಗಟ್ಟಿ ನಂಬಿಕೆ, ಅದಕ್ಕೆ ತಕ್ಕಂತೆ ಮಳೆ ಸುರಿದ ಕಥೆಯೊಂದು ನಿನ್ನೆಯಷ್ಟೇ ಕೇಳಿದಷ್ಟು ಹಸಿಯಾಗಿ ನೆನಪಿನ ಕುಡಿಕೆಯಲ್ಲಿ ಕುಳಿತಿದೆ. ಅವರ ಹರಿಕಥೆಗಳ ಸುತ್ತ, ಆ ವಾರವಿಡೀ ನಡೆಯುತ್ತಿದ್ದ ತರತರದ ಕಾರ್ಯಕ್ರಮಗಳಿಗೆ ಉತ್ಸಾಹದಿಂದ, ಬೇರಾವುದೇ ಒತ್ತಾಯವಿಲ್ಲದೇ, ಸೇರುತ್ತಿದ್ದ ಸಾವಿರಾರು ಜನ, ಆ ಜಂಗುಳಿಯಲ್ಲಿ ಮನೆಯವರೊಟ್ಟಿಗೋ, ಗೆಳೆಯರೊಟ್ಟಿಗೋ ಹಾಕಿದ ಹೆಜ್ಜೆಗಳ ಸದ್ದು ಇನ್ನೂ ಕೇಳಿಸುತ್ತಿದೆ.

ಸಂಜೆಯ ಕಾರ್ಯಕ್ರಮಗಳಲ್ಲಿ, ‘ಸ್ಟೇಟ್ ಲೆವೆಲ್’ ಹಾಡು, ಹರಿಕಥೆ, ಡಾನ್ಸ್ ಎಲ್ಲ ಮುನಿಸಿಪಲ್ ಮೈದಾನದಲ್ಲಿ. ಸಣ್ಣ ಸ್ಟೇಜುಗಳ ಪೆಂಡಾಲುಗಳಲ್ಲಿ ಒಂದೋ ಉತ್ತರ ಕರ್ನಾಟಕದ ಉದಯೋನ್ಮುಖ ಗಾಯಕರ ಜಾನಪದ ಹಾಡು, ಇಲ್ಲ ಲೋಕಲ್ ಹುಡುಗರ ಹಾಡು, ಡ್ಯಾನ್ಸು. ಆಗ ಕೇಳಿದ, ‘ಕುದುರೆಯ ತಂದೀವ್ನಿ, ಜೀನಾವ ಬಿಗಿದಿವ್ನಿ…’ ತಾಯಿ ಸತ್ತಮೇಲೆ ತವರಿಗೆ ಎಂದೂ ಹೋಗಬಾರದವ್ವ….’, ‘ಕಲಿತ್ತ ಹುಡುಗಿ ಕುದುರಿ ನಡಿಗಿ…’ ಹಾಡುಗಳು ಇನ್ನೂ ಆಗಾಗ ಪ್ರಸಾರ ಆಗುತ್ತಿರುತ್ತವೆ ನನ್ನ ನೆನಪಿನ ರೇಡಿಯೋದಲ್ಲಿ.

ಆ ಸ್ಟೇಜುಗಳಲ್ಲಷ್ಟೇ ಆಗ ನೋಡಲು ಸಿಗುತ್ತಿದ್ದದ್ದು ತರತರದ ‘ಬ್ರೇಕು’ ಡಾನ್ಸುಗಳು. ಮಿಥುನ್ ಚಕ್ರವರ್ತಿಯ ಡಿಸ್ಕೊ ಡಾನ್ಸ್ ಹಾಡುಗಳು; ಮೈಕೆಲ್ ಜಾಕ್ಸನ್ನನ ಈಗಲೂ ಅರ್ಥವಾಗದ ಹಾಡುಗಳಿಗೆ ಅವನ ಅವತಾರವೆಂದುಕೊಂಡು ಕುಣಿಯುತ್ತಿದ್ದ ಬಾಲಕರು, ಯುವಕರು ಈಗಲೂ ನೆನಪಿನ ತೆರೆಯ ಮೇಲೆ ಕುಣಿದು ಚಪ್ಪಾಳೆ ಗಿಟ್ಟಿಸಿಕೊಳ್ಳುತ್ತಾರೆ.

ಈ ಕಾರ್ಯಕ್ರಮಗಳೆಲ್ಲ ಹೆಚ್ಚು ಪೆಂಡಾಲಿನಲ್ಲಿ ಐದು ದಿನಗಳಷ್ಟೇ ಇರುತ್ತಿದ್ದದ್ದು. ಐದನೇ ರಾತ್ರಿ ವಿಸರ್ಜನೆ, ವಿಜೃಂಭಣೆಯ ಮೆರವಣಿಗೆಯಲ್ಲಿ. ನೂರಾರು ಗಣಪತಿಗಳು, ತೇರು ಬೀದಿಯ ಮೊದಲಿಗೆ ಸೇರಿ, ಆ ಬೀದಿಯ ಅಂಗಡಿ, ದೇವಸ್ಥಾನ, ಚರ್ಚು, ಮಸೀದಿಗಳ ದಾಟಿ, ಮೋತಿ ಸರ್ಕಲ್ಲಿನಲ್ಲಿ ಬೆಂಗಳೂರು ರೋಡಿಗೆ ತಿರುಗಿ, ಮೂರ್ನಾಕು ಕಿಲೋಮೀಟರ್ ದೂರದ ತುಂಗಭದ್ರೆಯ ದೊಡ್ಡ ಕಾಲುವೆಗೆ ಗಣಪತಿಯನ್ನ ಒಪ್ಪಿಸೋದು ಆ ಮೆರವಣಿಗೆಯ ಕೊನೆ. ಸಂಜೆಗೆ ಶುರುವಾಗುವ ಮೆರವಣಿಗೆ ಮುಗಿಯುವದು ಮುಂಜಾವಿಗೆ ಹತ್ತಿರಕ್ಕೆ. ನಮ್ಮ ಮನೆ ಮೋತಿ ಸರ್ಕಲ್ಲಿನ ತಿರುವಿನಲ್ಲಿ ಇದ್ದದರಿಂದ ಅದೊಂದು ವಾಂಟೇಜ್ ಪಾಯಿಂಟ್ ನಮ್ಮ ಹತ್ತಿರದವರಿಗೆ.

ಆ ದಿನ, ಕತ್ತಲೇರುತ್ತಿದ್ದಂತೆ ಮನೆ ತುಂಬಾ ಜನ. ಎಷ್ಟೆಂದರೆ, ೧೩ ಮನೆ ದಾಯ್ ಆಟಕ್ಕೆ ಬೇಕಾಗುವಷ್ಟು ಕೈ, ಮತ್ತೆ ಅವರಿಗೆ ಬೇಕಾದಂತೆ, ಕಾಫಿ ಚಾ ಮಾಡಲಿಕ್ಕೆ, ಹೊರಗಡೆ ನಿಲ್ಲುತ್ತಿದ್ದ ಮಂಡಕ್ಕಿ ಗಾಡಿಯಿಂದ ಮಸಾಲೆ ಮಂಡಕ್ಕಿ ತಂದು ಕೊಡೋಕೆ, ಮತ್ತೆ, ದೊಡ್ಡ-ದೊಡ್ಡ ಗಣಪತಿಗಳ ಮೆರವಣಿಗೆ ಬಂದಾಗ ಅವರಿಗೆ ಹೇಳಲಿಕ್ಕೆ ಬೇಕಾದಷ್ಟು ಜನ. ದಾಯ್ ಆಟದ ಮಂದಿ ಪಳಗಿದ ಕೈಗಳಾದ್ದರಿಂದ, ನಮ್ಮಂತ ಮಕ್ಕಳು ಒಂದೋ ಆಟಕ್ಕುಂಟು ಲೆಕ್ಕಕಿಲ್ಲ ಅಥವಾ ಅರ್ಜೆಂಟಿಗೆ ಒಂದಿಷ್ಟು ನಿಮಿಷ ಬೇಕಾದಾಗ ಕವಡೆಯ ಕರಡಿಗೆ ಮಗಚುವ ಕೈ. ಉಳಿದ ಸಮಯದಲ್ಲಿ, ಮಂಡಕ್ಕಿ-ಸೋಡಾ ಮಜಾ ಮಾಡುತ್ತಾ, ಗಣಪತಿಗಳ ಟ್ರಾಕ್ಟರ್ ಜೊತೆಗೆ, ತಿನ್ನುತ್ತಿದ ಮಂಡಕ್ಕಿ ಪ್ಯಾಕೇಟಿನ ಲೆಕ್ಕ ಇಡುವದು ನಮ್ಮ ಕೆಲಸ.

ಹದಿಮೂರು ಮನೆಯ ದಾಯ್ ಆಟಕ್ಕೆ, ಮನೆಗೆ ಮೂರು ಕೈ. ಕೈ ತುಂಬುವಷ್ಟು ಕವಡೆಯಾದ್ದರಿಂದ ದಾಳ ಉರುಳಿಸಲು ಒಂದು ಕರಡಿಗೆ. ಮೊದಮೊದಲು ಕೈ ಬೇಗ ಬೇಗ ಬದಲಿಸುತ್ತಾ ಮನೆಯ ಕಾಯಿಗಳನ್ನ ಹೊರಡಿಸುತ್ತವೆ. ಆ ಕಾಯಿಗಳು ಇನ್ನೊಬ್ಬರನ್ನು ಹೊಡೆಯದೆ ಹಣ್ಣಾಗಲು ಸಾಧ್ಯವಿಲ್ಲದ ಕಾರಣ, ಹೊಡೆಯುವ ಆಟ ಒಂದಿಷ್ಟು ಸುತ್ತಿನಲ್ಲಿ ಶುರುವಾಗುತ್ತದೆ. ಪಳಗಿದ ಕೈಗಳಿಗೆ ಶಕ್ತಿ, ಉತ್ಸಾಹ ಉಕ್ಕುವದು ಆಗಲೇ. ‘ನಾಲ್ಕ್ ಹಾಕಿ’, ‘ ಹೊಡಿ, ಬಿಡ್ಬೇಡ ಹಣ್ ಆಪ್ಕೆ’, ‘ಹ್ವಾಯ್, ತುಂಬಾ ಗೆರ್ಚ್ ಬೇಡಿ’…. ಹೀಗೆ ಕೈಯಿಂದ ಕೈ ಗೆ ಸಾಗುವ ಕವಡೆಗಳ ರಿದಮ್, ಆಟ ರಂಗೇರಿದಂತೆ ತಾರಕ್ಕೇರುವ ಆ ಕೈಗಂಟಿದ ಗಂಟಲುಗಳ ದನಿ, ಹೊರಗಿನ ಮೆರವಣಿಗೆಯ ವಾಲಗ, ಬ್ಯಾಂಡು, ಅದಕ್ಕೆ ಕುಣಿಯುವ ಜನ, ಅದನ್ನು ನೋಡುತ್ತಾ, ಬಾಯೊಳಿಳಿದ ಮಂಡಕ್ಕಿಯ ಖಾರಕ್ಕೆ ಸುರಿಯುತ್ತಿದ್ದ ಕಣ್ಣು ಮೂಗುಗಳನ್ನು ಒರೆಸಿಕೊಳ್ಳುತ್ತ ಕಳೆಯುತ್ತಿದ್ದ ರಾತ್ರಿಗಳು, ಆಗಾಗ ನೆನಪಿನ ತೆರೆಯಲ್ಲಿ 4D ಸಿನೆಮಾ ರೂಪದಲ್ಲಿ ಮೂಡುತ್ತವೆ. ಸ್ವಲ್ಪ ನಗುವಿನ ಜೊತೆಗೆ ಒಂದಿಷ್ಟು ಪ್ರಶೆಗಳನ್ನ ಬಿಟ್ಟು ಹೋಗುತ್ತವೆ.

ಮತ್ತೆ ಸಿಕ್ಕಬಲ್ಲುದೆ ಆ ಹಬ್ಬಗಳ ಸಮಯ, ಹಳ್ಳಿಗಳೆಲ್ಲ ನಗರಗಳಾಗಿ, ಮನೆಗಳೆಲ್ಲ ಪೆಟ್ಟಿಗೆಗಳಾಗಿ, ನಮಗೂ ನಾವು ಸಿಕ್ಕದಷ್ಟು ಮೊಬೈಲಿನಲ್ಲಿ ಕಳೆದು ಹೋಗಿರುವ ಈ ದಿನಗಳಲ್ಲಿ? ಆಸೆಯ ಕೈಗಳ ಲೆಕ್ಕಾಚಾರದ ಕವಡೆಯಾಟದಲ್ಲಿ ಊರೂರೇ ದಾಯ್ ಆಟದ ಮನೆಗಳಾಗಿ; ದೇವರೂ, ಹಬ್ಬಗಳೂ ಕಾಯಿಗಳಾಗಿ, ಹೊಡಿ-ಬಡಿ ಆಟದಲ್ಲಿ ಒಂದಿಷ್ಟು ಹಣ್ಣಾಗಿ, ಒಂದಿಷ್ಟು ಸುಣ್ಣವಾಗಿ ಸುತ್ತುತ್ತಿರುವ ಈ ಕಾಲದಲ್ಲಿ, ಹಳೆಯ ಕೌಟುಂಬಿಕ ಸಿನೆಮಾವೊಂದರ ಸೆಟ್ಟೊಂದನ್ನು ಮತ್ತೆ ಕಟ್ಟಿ ಅದೇ ಸಿನಿಮಾ ಶೂಟಿಂಗಿನ ಬಯಕೆಯೇ ಅರ್ಥವಿಲ್ಲದ, ಮೌಲ್ಯವಿಲ್ಲದ ಆಲೋಚನೆ ಎನ್ನುವದು ಮನದೊಳಗಿನ ಸಿನಿಕನ ವಾದ. ಅಥವಾ, ಆ ಆಲೋಚನೆಗಳ ದ್ವಂದ್ವತೆ ಹಳೆಯ ನೆನಪುಗಳ ದೋಷವಷ್ಟೆಯೇ?

ಮೊಬೈಲಿನ ಸಣ್ಣ-ದೊಡ್ಡ ಬೀದಿಗಳಲ್ಲಿ, ಹತ್ತು ಹಲವು ರೂಪದಲ್ಲಿ ಈ ಕಾಲದ ಜನ; ಹೀಗೆ ಜನ ಸೇರುತ್ತಿದ್ದರೂ, ನಿಜವೆನಿಸುವ ಆಪ್ತತೆ ಕಳೆದುಹೋಗಿದೆ ಎನ್ನಿಸುತ್ತಿದೆ. ಕಳೆದುಹೋಗಿರುವ ಆ ಆಪ್ತತೆಯನ್ನ ಮತ್ತೆ ಹುಟ್ಟಿಸಿ, ಬೆಳೆಸಿ; ಗಣಪತಿಗಳ ಕುಳ್ಳಿರಿಸಿ, ಮೆರೆಸಿ, ಮೆರವಣಿಗೆ ಮಾಡಿಸಿ, ಹಳೆಯ ನೆನಪುಗಳು ಮೆಚ್ಚಿ, ಒಂದು ವೇಳೆ ಮೆಚ್ಚದಿದ್ದರೆ ಕೊಚ್ಚಿ ಹೋಗುವಷ್ಟು, ಹೊಸ ನೆನಪುಗಳು ಮೂಡಿಸುವ ಗಾರುಡಿಯೊಬ್ಬ ಎಲ್ಲಿಂದಾದರೂ , app ನಿಂದಾದರೂ ಅಡ್ಡಿಯಿಲ್ಲ – ಹಾರಿಬಂದು, ಬರುವದು ತಡವಾದರೆ, ಬರುವವರೆಗೆ, ಬರುವರೆಂಬ ನಂಬಿಕೆಯ ಕೊಡೆ ಜೊತೆಯಲ್ಲೇ ಇಟ್ಟುಕೊಳ್ಳುವಷ್ಟು ನೆನಪಿನ ಮನೆಯಲ್ಲಿ ಜಾಗ ಇರಲಿ…

ಹೀಗೆ ಓಡುತ್ತಿದ್ದ ಆಲೋಚನೆಯ ಲಯದ ತಾಳಕ್ಕೆ, ಹಳೆಯ ನೆನಪಿನ ಜ್ಯೂಕ್ ಬಾಕ್ಸ್ ಹಾಡೊಂದನ್ನು ಹುಡುಕಿಕೊಟ್ಟಿತು:

ಗಜಮುಖನೆ ಗಣಪತಿಯೇ ನಿನಗೆ ವಂದನೆ
ನಂಬಿದವರ ಪಾಲಿನ ಕಲ್ಪತರು ನೀನೆ….

ನಂಬೋಣ ಅಲ್ಲವೇ.