ಈಗೀಗ ರಾಕ್ವಿಲಾಳಿಗೆ ತನಗೆ ಆರೋಗ್ಯ ಅಷ್ಟು ಸರಿ ಇಲ್ಲ ಎನ್ನುವುದರ ಅರಿವಾಗುತ್ತದೆ. ಕೆಲಸದ ಒತ್ತಡದಿಂದ ಉಂಟಾದ ಶಕ್ತಿಯ ಕೊರತೆ. ಇದರಿಂದ ಒಮ್ಮೊಮ್ಮೆ ಅವಳು ತಲೆನೋವು ಬಂದು, ಸರಿರಾತ್ರಿಯಲ್ಲಿ ಎದ್ದು, ತನ್ನಷ್ಟಕ್ಕೆ ಗುಳಿಗೆಗಳನ್ನು ನುಂಗುತ್ತಾಳೆ. ಸಣ್ಣ ಬೆಳಕಿನ ಸುತ್ತ ಆವರಿಸಿರುವ ಕತ್ತಲು ಅವಳ ತಲೆಭಾರಕ್ಕೆ ರೂಪಕವಾಗುತ್ತದೆ. ಹೀಗವಳು ಆಗಾಗ ಗುಳಿಗೆ ನುಂಗುತ್ತಾಳೆ. ತನ್ನ ದೇಹದ ಶಕ್ತಿ, ಸಮಯದೊಂದಿಗೆ ಓಡಿ ಸರಿದೂಗುವ ತನ್ನ ನರಗಳ ಶಕ್ತಿ, ಮುಂಚಿನಂತಿಲ್ಲ, ಕುಗ್ಗುತ್ತಿದೆ ಎನ್ನುವುದನ್ನು ಒಪ್ಪಿಕೊಳ್ಳದ ಮನಸ್ಸು ಅವಳದು.
ಎ.ಎನ್. ಪ್ರಸನ್ನ ಬರೆಯುವ ‘ಲೋಕ ಸಿನಿಮಾ ಟಾಕೀಸ್‌’ನಲ್ಲಿ ಚಿಲಿಯ ʻದ ಮೇಡ್‌ʼ ಸಿನಿಮಾದ ವಿಶ್ಲೇಷಣೆ

 

ಲ್ಯಾಟಿನ್‌ ಅಮೆರಿಕ ದೇಶಗಳಲ್ಲೊಂದಾದ ಚಿಲಿಯಲ್ಲಿ ಚಲನಚಿತ್ರಕ್ಕೆ ಸಂಬಂಧಿಸಿದಂತೆ ಸಾಕಷ್ಟು ಬೆಳವಣಿಗೆ ಸಾಧ್ಯವಾದದ್ದು 21ನೇ ಶತಮಾನದಲ್ಲಿ. ಅದಕ್ಕೆ ಮುಂಚಿನ ದಶಕಗಳಲ್ಲಿ 1973ರಿಂದ 88ರ ತನಕ ಸರ್ವಾಧಿಕಾರ ಆಳ್ವಿಕೆಗೆ ಒಳಗಾಗಿ ಈ ದಿಕ್ಕಿನಲ್ಲಿ ಗಮನಾರ್ಹವಾದ ಪ್ರಗತಿ ಸಾಧ್ಯವಾಗಿರಲಿಲ್ಲ. ಅನಂತರ ಕ್ರಮೇಣ ಅಭಿವೃದ್ಧಿಗೊಂಡಿತು. 2000ರ ಸಿಲ್ವಿಯೋ ಕೈಜಿ ನ ʻಕಾರೊನೇಷನ್‌ʼ ಅನೇಕ ಅಂತರಾಷ್ಟ್ರೀಯ ಪ್ರಶಸ್ತಿಗಳನ್ನು ಗಳಿಸಿತು. ದೇಶದ ರಾಷ್ಟ್ರೀಯ ಕಲಾ ಸಂಸ್ಥೆ ಫಾಂಡಾರ್ಟ್‌ಗೆ ಇನ್ನಷ್ಟು ಬೆಂಬಲ ಒದಗಿ 2008ರ ಪ್ಯಾಬ್ಲೋ ಟೋನಿ ಮಾನೆರೋ ಮತ್ತು 2010ರ ಮಾತಿಯಾಸ್‌ ಬಿಜೆಯ ʻದ ಲೈಫ್‌ ಆಫ್‌ ಫಿಶ್ʼ ಆಸ್ಕರ್‌ ಚಿತ್ರೋತ್ಸವದಲ್ಲಿ ಅತ್ಯುತ್ತಮ ವಿದೇಶಿ ಚಿತ್ರಕ್ಕೆ ಸ್ಪರ್ಧಿಸಿದವು. 2013ರ ಸೆಬಸ್ಟಿಯನ್‌ ಲೆಲೊನ ʻಗ್ಲೋರಿಯಾʼ ಮುಂಬೈ ಚಿತ್ರೋತ್ಸವದಲ್ಲಿ ಅತ್ಯುತ್ತಮ ಚಿತ್ರ ಪ್ರಶಸ್ತಿ ಗಳಿಸಿತು. ಚಿಲಿಯ ಪ್ರಖ್ಯಾತ ಚಿತ್ರಗಳಲ್ಲೊಂದಾದ ಸೆಬಸ್ಟಿಯನ್‌ ಸಿಲ್ವಾ ನಿರ್ದೇಶನದ 2009ರ ʻದ ಮೇಡ್‌ʼ ಸನ್‌ಡಾನ್ಸ್‌ ಚಿತ್ರೋತ್ಸವದಲ್ಲಿ ಗ್ರಾಂಡ್‌ ಜ್ಯೂರಿ ಅವಾರ್ಡ್‌ ಅಲ್ಲದೆ ಹಲವಾರು ಅಂತರರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದಿದೆ.

ಅದೊಂದು ನಗರವೊಂದರಲ್ಲಿ ಓಡಾಡುವ ರಸ್ತೆಯಲ್ಲಿಯೇ ಇರುವ ಶ್ರೀಮಂತರ ಮನೆ. ಅಲ್ಲಿ ಆ ದಿನ ಅವರ ಸಂಭ್ರಮಕ್ಕೆ ಮಿತಿಯಿಲ್ಲ. ಕಾರಣ ಅವರ ಮನೆಯ ಕೆಲಸದಾಕೆಯ ಹುಟ್ಟುಹಬ್ಬದ ಆಚರಣೆ. ಕೆಲಸದಾಕೆ ರಾಕ್ವೆಲ್ ಆ ಮನೆಯಲ್ಲಿ ಇಪ್ಪತ್ತೊಂದು ವರ್ಷಗಳಿಂದ ದುಡಿಯುತ್ತಿದ್ದಾಳೆ. ಅವಳಿಗೆ ಮನೆಯೊಡತಿ ಪಿಲರ್ ಬಗ್ಗೆ ಅತೀವ ವಿಶ್ವಾಸ. ಮಕ್ಕಳು ಕ್ಯಾಮಿಲಾ ಮತ್ತಿತರರು ಅವಳೆದುರಲ್ಲಿ ಬೆಳೆದದ್ದು. ಕ್ಯಾಮಿಲಾ ಒಂದು ವರ್ಷದ ಕೂಸು ಅವಳು ಆ ಮನೆಗೆ ಕೆಲಸಕ್ಕೆ ಹೋದಾಗ. ಈಗವಳು ರಾಕ್ವೆಲ್ ಹರೆಯ ಕಳೆದ, ಸಾಮಾನ್ಯ ಎತ್ತರದ, ಅಷ್ಟೇನೂ ಸ್ಥೂಲವಲ್ಲದ ನಲವತ್ತರ ನಡುವಿನ, ದೊಡ್ಡ ಕಣ್ಣುಗಳ ಹೆಂಗಸು. ಆಕೆಗೆ ಮನೆಯ ಆವರಣದಲ್ಲಿಯೇ ವಾಸವಾಗಿರಲು ಬಾತ್‌ ರೂಮ್‌ ಇರುವ ರೂಮು.

ಚಿತ್ರ ತೆರೆದುಕೊಳ್ಳುವುದೇ ವಿಶೇಷ ದಿನದ ದೃಶ್ಯದಿಂದ. ಮನೆಯಲ್ಲಿ ಅಲ್ಲಲ್ಲಿ ಇಳಿಬಿದ್ದ ಲೈಟಿಂಗ್‌ ಸೆಟ್‌ ಬಲ್ಬುಗಳ ಸೊಗಸು. ಮನೆಯವರಲ್ಲಿ ಪುಟಿದೆದ್ದ ಚಟುವಟಿಕೆ. ಅಂದಿನ ವಿಶೇಷದ ಊಟದ ಪರಿಕರಗಳನ್ನು ಸಿದ್ಧಪಡಿಸುತ್ತ ಮನೆಯೊಡತಿ ಪಿಲರ್ ಗೆಲುವಿನಿಂದ ಅತ್ತಿತ್ತ ಓಡಾಡಿ ಉಳಿದವರನ್ನು ಹುರಿದುಂಬಿಸುತ್ತಿದ್ದರೆ ರಾಕ್ವೆಲ್‌ ಗೆ ಮುಜುಗರ. ಅವಳಿಗೆ ಆ ಮನೆಯಲ್ಲಿ ಮನಸ್ಸಿಟ್ಟು ಕೆಲಸ ಮಾಡುವುದಷ್ಟೇ ಗೊತ್ತು. ಮೂಲೆಮೂಲೆಗಳಲ್ಲಿ ಏನಿದೆ ಗೊತ್ತು, ಮನೆಯಲ್ಲಿನ ಇತರ ಕೆಲಸಗಳ ಜೊತೆ ಮನೆಯಲ್ಲಿನ ಒಬ್ಬಬ್ಬರಿಗೂ ಬೇಕಾದ ಅಗತ್ಯಗಳನ್ನು ಅರಿತಾಕೆ. ಜೊತೆಗೆ ಬಟ್ಟೆಬರೆ ಇತ್ಯಾದಿ ಸಲಕರಣೆಗಳನ್ನು ಒದಗಿಸಿಕೊಡುವ ಕೆಲಸ ಅವಳದು. ಆದರೆ ತನ್ನದೇ ಹುಟ್ಟುಹಬ್ಬದಲ್ಲಿ ಪಾಲ್ಗೊಳ್ಳಲು ಮನಸ್ಸು ಒಪ್ಪುತ್ತಿಲ್ಲ; ಹಿಂಜರಿಕೆ. ಅವರೆಲ್ಲ ಸಂಭ್ರಮಿಸುತ್ತಿದ್ದರೆ ಅವಳು ಇನ್ನೊಂದು ರೂಮಿನಲ್ಲಿ ಕುಳಿತು ಕೆಲಸ ಮಾಡುತ್ತ ಅವರಾಡುವ ಮಾತುಗಳನ್ನು ಕೇಳಿಸಿಕೊಳ್ಳುತ್ತಾಳೆ.

ಅವಳಿಗೆ ಅವರ ಸಂಭ್ರಮ ಇಷ್ಟವೇ ಇಲ್ಲ ಎಂದು ಅರ್ಥವಲ್ಲ. ಸಂಭ್ರಮ ಬೇಕು. ಮನೆಯಾಕೆ, ಅವಳ ಮಕ್ಕಳೆಲ್ಲರೂ ಸೇರಿದಂತೆ ಹಾರಿ ಕುಣಿದು, ನಲಿಯುವುದನ್ನು ಅವಳು ನೋಡಬೇಕು, ಅನುಭವಿಸಬೇಕು. ಆದರೆ ತನ್ನ ಕಾರಣದಿಂದಲ್ಲ. ಜೊತೆಗೆ ತಾನು ಅಂಥದೊಂದು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದೇ ..ಎಂದು ಪ್ರಶ್ನಿಸಿಕೊಳ್ಳುತ್ತಾಳೆ.

(ಸೆಬಸ್ಟಿಯನ್‌ ಸಿಲ್ವಾ)

ಈ ಭಾವನೆ ಬಂದ ಕೂಡಲೆ ಅವಳಿಗೆ ತನ್ನ ಮತ್ತು ಅವನ ನಡುವೆ ಇರುವ ಅಂತರದ ಅರಿವು ಜಾಗೃತವಾಗುತ್ತದೆ. ಇದರಿಂದ ಅವಳ ಮೈಯಲ್ಲಿ ಇನ್ನಷ್ಟು ಬಿಗಿತ. ಅದರ ಪ್ರತಿಫಲನದಂತೆ ಅವಳ, ಮುಖ, ಕಣ್ಣುಗಳು ಸ್ವಲ್ಪ ಅತ್ತಿತ್ತ ಹೊರಳುತ್ತವಷ್ಟೆ. ತಾನು ಎರಡು ದಶಕಗಳಿಗಿಂತಲೂ ಹೆಚ್ಚು ಕಾಲ ಅವರ ಮನೆಯಲ್ಲಿ ಇರುವುದು ನಿಜ. ಅವರೆಲ್ಲರ ಹೀರೋ, ಅವರೆಲ್ಲರ ಅನಿಸಿಕೆಗಳು, ಆಸೆ ಆಶೋತ್ತರಗಳನ್ನು ಅವಳು ಬಲ್ಲವಳು. ಅವರೊಂದಿಗೆ ಸೇರಿ ಅವಳು ಹರ್ಷ ಪಟ್ಟಿದ್ದೂ ಉಂಟು. ಆದರೆ ಅವರ ಹರ್ಷದಲ್ಲಿ ಪಾಲ್ಗೊಂಡಿದ್ದಳಷ್ಟೆ. ಅದಕ್ಕೆ ಪ್ರತ್ಯೇಕತೆ ಇದೆ. ಈಗಿನದು ತನಗಾಗಿ ಹರ್ಷ. ಇವೆರಡರ ನೆಲೆಗಳು ಬೇರೆಬೇರೆ ಎಂಬ ಸ್ಪಷ್ಟ ಅರಿವು ಅವಳಿಗೆ. ಅವರು ತನಗೆ ಕೆಲಸ ಕೊಟ್ಟವರು, ಅವರ ಮನೆಯಲ್ಲಿಯೇ ಇದ್ದು, ಅವರಿಂದ ಸವಲತ್ತು ಪಡೆದಿದ್ದೇನೆ. ತನ್ನ ಅವರ ನಡುವೆ ಕಾಣದ ಗೆರೆ ಇದೆ. ತನ್ನ ಜೀವನದ ಚೌಕಟ್ಟು ಬೇರೆ, ಅವರದು ಬೇರೆ. ಇದರ ಹೊರತಾಗಿ ಅವರೆಲ್ಲರೊಡನೆ ಮಿಳಿತಗೊಂಡು ನಲಿದಿದ್ದಕ್ಕೆ ಲೆಕ್ಕವುಂಟೇ ಎಂಬ ನಿಲುವು ಅವಳದು.

ಗಾಂಭೀರ್ಯ ತುಳುಕುವ ಅವಳು ಮುಖವನ್ನು ಗಂಟು ಹಾಕುವ ಬಗೆಯಲ್ಲಿ ಕಾಣುವ ಅವಳು ಮನೆಗೆಲಸವನ್ನು ಸಂತೋಷದಿಂದ ಮಾಡುತ್ತಿದ್ದಳೋ ಇಲ್ಲವೋ ಎಂಬ ಅನುಮಾನ ಪ್ರಾರಂಭದಲ್ಲಿ ನಮಗಾಗುವುದೂ ಸಹಜವೆ. ಆದರೆ ಅದು ಅವಳು ಕಾರ್ಯನಿರ್ವಹಿಸುವ ರೀತಿ. ತನ್ನೊಳಗಿನ ಎಲ್ಲವನ್ನೂ ಒಟ್ಟಾಗಿಸಿ ದುಡಿಯುವ ಪ್ರಕ್ರಿಯೆಯಲ್ಲಿನ ಮುಖಚಹರೆ ಅವಳದು. ಬೆಳಿಗ್ಗೆ ಎಲ್ಲರಿಗಿಂತಲೂ ಮೊದಲು ಎದ್ದು ಕೆಲಸವನ್ನು ವಿಂಗಡಿಸಿಕೊಂಡು ಒಂದೊಂದು ಕೆಲಸವನ್ನು ಚೊಕ್ಕವಾಗಿ ಮಾಡುತ್ತ, ಅಗತ್ಯ ರೀತಿಯಲ್ಲಿ ಪೂರೈಸುವ ಅಭ್ಯಾಸ ಅವಳಿಗೆ. ಗೋಡೆ ಮೇಲಿನ ಗಡಿಯಾರದ ನಿಮಿಷಗಳ ಓಟಕ್ಕೆ ತಕ್ಕ ಹಾಗೆ ಕ್ರಮಬದ್ಧ ಕೆಲಸ.

ಈಗೀಗ ರಾಕ್ವಿಲಾಳಿಗೆ ತನಗೆ ಆರೋಗ್ಯ ಅಷ್ಟು ಸರಿ ಇಲ್ಲ ಎನ್ನುವುದರ ಅರಿವಾಗುತ್ತದೆ. ಕೆಲಸದ ಒತ್ತಡದಿಂದ ಉಂಟಾದ ಶಕ್ತಿಯ ಕೊರತೆ. ಇದರಿಂದ ಒಮ್ಮೊಮ್ಮೆ ಅವಳು ತಲೆನೋವು ಬಂದು, ಸರಿರಾತ್ರಿಯಲ್ಲಿ ಎದ್ದು, ತನ್ನಷ್ಟಕ್ಕೆ ಗುಳಿಗೆಗಳನ್ನು ನುಂಗುತ್ತಾಳೆ. ಸಣ್ಣ ಬೆಳಕಿನ ಸುತ್ತ ಆವರಿಸಿರುವ ಕತ್ತಲು ಅವಳ ತಲೆಭಾರಕ್ಕೆ ರೂಪಕವಾಗುತ್ತದೆ. ಹೀಗವಳು ಆಗಾಗ ಗುಳಿಗೆ ನುಂಗುತ್ತಾಳೆ. ತನ್ನ ದೇಹದ ಶಕ್ತಿ, ಸಮಯದೊಂದಿಗೆ ಓಡಿ ಸರಿದೂಗುವ ತನ್ನ ನರಗಳ ಶಕ್ತಿ, ಮುಂಚಿನಂತಿಲ್ಲ, ಕುಗ್ಗುತ್ತಿದೆ ಎನ್ನುವುದನ್ನು ಒಪ್ಪಿಕೊಳ್ಳದ ಮನಸ್ಸು ಅವಳದು. ಯಾವುದನ್ನೂ ಲೆಕ್ಕಿಸದೆ ಎಂದಿನಂತೆ ಮನೆಗೆಲಸದಲ್ಲಿ ಪ್ರವೃತ್ತಳಾಗುವುದನ್ನು ರೂಢಿಸಿಕೊಳ್ಳುತ್ತಾಳೆ. ಇದಾವುದೂ ಮನೆಯವರ ನೋಟಕ್ಕೆ ಬೀಳುವುದಿಲ್ಲ.

ಅಂದಿನ ವಿಶೇಷದ ಊಟದ ಪರಿಕರಗಳನ್ನು ಸಿದ್ಧಪಡಿಸುತ್ತ ಮನೆಯೊಡತಿ ಪಿಲರ್ ಗೆಲುವಿನಿಂದ ಅತ್ತಿತ್ತ ಓಡಾಡಿ ಉಳಿದವರನ್ನು ಹುರಿದುಂಬಿಸುತ್ತಿದ್ದರೆ ರಾಕ್ವೆಲ್‌ ಗೆ ಮುಜುಗರ. ಅವಳಿಗೆ ಆ ಮನೆಯಲ್ಲಿ ಮನಸ್ಸಿಟ್ಟು ಕೆಲಸ ಮಾಡುವುದಷ್ಟೇ ಗೊತ್ತು.

ಅದೊಂದು ದಿನ ಅವಳು ಇದ್ದಕ್ಕಿದ್ದಂತೆ ಬಿದ್ದು ಬಿಡುತ್ತಾಳೆ. ಆಗಲೇ ಮನೆಯವರಿಗೆ ಗಾಬರಿಯಾಗುತ್ತದೆ. ಎಲ್ಲರೂ ಒಟ್ಟಾಗಿ ಸೇರಿ ಅವಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಾರೆ. ಮನೆಯಾಕೆ ಪಿಲರ್‌ ಮತ್ತು ಕ್ಯಾಮಿಲಾಗೆ ರಾಕ್ವೆಲ್‌ಳ ದೈಹಿಕ ಸಾಮರ್ಥ್ಯ ಕುಗ್ಗುತ್ತಿದೆ ಎನ್ನುವುದರ ಅರಿವಾಗುತ್ತದೆ.

ರಾಕ್ವೆಲ್ಲಳನ್ನು ತಾವು ಉಪೇಕ್ಷಿಸುತ್ತಿದ್ದೇವೆ, ಅವಳ ದೈಹಿಕ ಸಾಮರ್ಥ್ಯದ ಪರಿವಿಲ್ಲದೆ ಅವಳನ್ನು ದುಡಿಸುತ್ತಿದ್ದೇವೆ ಎನ್ನುವುದು ಅರಿವಾಗುತ್ತದೆ. ಪಿಲರ್‌ ತಡ ಮಾಡುವುದಿಲ್ಲ. ರಾಕ್ವೆಲ್‌ಳ ಸಹಾಯಕ್ಕೆಂದು ಒಬ್ಬಳನ್ನು ಗೊತ್ತುಮಾಡುತ್ತಾರೆ. ಇದನ್ನು ರಾಕ್ವೆಲ್‌ಗೆ ಸಹಿಸಲು ಸಾಧ್ಯವಾಗುವುದಿಲ್ಲ. ʻನಂಗೆ ಹೇಳ್ದೆ… ನಿಂಗೆ ಜೊತೆಗಿರ್ಲಿ ಅಂತ ಕರ್ಕೊಂಡು ಬಂದ್ರೆ ಯಾರೊಪ್ತಾರೆ..ʼ ಎಂದು ತನಗೆ ತಿಳಿಸದೆ ಹೀಗೆ ಮಾಡಿದ್ದಾರೆ ಎನ್ನುವುದು ಅವಳ ಅಸಮಾಧಾನ ಒಂದು ಭಾಗ. ಇನ್ನೊಂದು ಇದು ತನ್ನ ದೈಹಿಕ ಶಕ್ತಿಯ ಸೋಲು ಎನ್ನುವುದು ಟಾಂ, ಟಾಂ ಮಾಡಿದಂತೆ ಎಂದು. ಒಂದಿಷ್ಟೂ ಮಾತನಾಡದೆ ಬಂದವಳ ಮುಖವನ್ನೂ ಸರಿಯಾಗಿ ನೋಡದೆ ಒಂದಿಷ್ಟೂ ಸಹಕಾರ ನೀಡದೆ ಬಂದವಳು ಬೇಸರಪಟ್ಟುಕೊಂಡು ಹೋಗುವಂತೆ ಮಾಡುತ್ತಾಳೆ.

ಆದರೆ ಪಿಲರ್‌ ಸುಮ್ಮನಿರುವುದಿಲ್ಲ. ಅವಳು ತಕ್ಷಣವೇ ಮರ್ಸಿಡಿಸ್ ಎಂಬ ತರುಣಿಯನ್ನು ರಾಕ್ವೆಲ್‌ಗೆ ಸಹಾಯ ಮಾಡಲು ಒದಗಿಸುತ್ತಾರೆ ಆದರೆ ರಾಕ್ವೆಲ್‌ಗೆ ಇದನ್ನು ಸಹಿಸುವುದು ಸಾಧ್ಯವಾಗುವುದಿಲ್ಲ. ಮನೆಗೆಲಸಕ್ಕೆ ಸಂಬಂಧಪಟ್ಟ ಹಾಗೆ ಅದು ತನ್ನ ಪೂರ್ಣ ಅಧಿಕಾರ ಎಂದು ಅವಳು ಭಾವಿಸುತ್ತಾಳೆ. ತನ್ನ ಪ್ರಭುತ್ವದ ಆವರಣದಲ್ಲಿ ಬೇರೊಬ್ಬರಿಗೆ ಕಿಂಚಿತ್ತೂ ಅವಕಾಶವಿಲ್ಲ ಎಂದು ಅವಳ ತೀರ್ಮಾನ. ಬೇರೆಯವರು ಬರುವುದೆಂದರೇನು?… ಹಾಗೆಯೇ ಅವಳು ಮರ್ಸಿಡೆಸ್ ಬಗ್ಗೆ ಪೂರ್ಣ ಅಸಹಕಾರ ವ್ಯಕ್ತಪಡಿಸುವಂತೆ ನಡೆದುಕೊಳ್ಳುತ್ತ, ಅವಳು ಮಾಡುವ ಕೆಲಸಕ್ಕೆ ಹೆಚ್ಚು ಅಡೆತಡೆಗಳನ್ನು ಉಂಟುಮಾಡುತ್ತ, ಮರ್ಸಿಡೆಸ್ ಗೆ ಕೆಲಸದ ವಿಷಯದಲ್ಲಿ ಬೇಸರ ಹುಟ್ಟುವಂತೆ ಮಾಡುತ್ತಾಳೆ. ಮರ್ಸಿಡೆಸ್ ಬಂದ ಒಂದೇ ತಿಂಗಳಲ್ಲಿ ವಾಪಸ್ಸು ಹೋಗುತ್ತಾಳೆ. ರಾಕ್ವೆಲ್, “ನೋಡಿ ಹೇಗೆ ಮಾಡ್ದೆ….” ಎಂದು ನಸುನಗು ತೂರುತ್ತಾಳೆ.

ಇಂಥ ನಸುನಗು ಅವಳ ಗಡುಸು ಮುಖದಲ್ಲಿ ಕಾಣಿಸುವುದು ಅಪರೂಪವೇನಲ್ಲ. ಆದರದು ಪಿಲರ್‌ ಸಂಸಾರಕ್ಕೆ ಸಂಬಂಧಪಟ್ಟ ವಿಷಯಗಳಲ್ಲಿ ಮಾತ್ರ. ಮರ್ಸಿಡೆಸ್‌ ಹೋದ ನಂತರ ಬೇಡದ ಅಡಚಣೆ ನಿವಾರಣೆಯಾಯಿತು ಎಂದುಕೊಂಡು ರಾಕ್ವೆಲ್ ಮೊದಲಿನಂತೆಯೇ ಎಲ್ಲರೊಡನೆ ಬೆರೆತು ತನ್ನ ಕೆಲಸ ಮುಂದುವರಿಸುತ್ತಾಳೆ. ಆದರದು ಅಲ್ಪ ಕಾಲ. ಮತ್ತೊಮ್ಮೆ ಅವಳಿಗೆ ಅದೇ ಬಗೆಯ ದೈಹಿಕ ಅಸಾಮರ್ಥ್ಯ ಉಂಟಾಗಿ ಪ್ರಜ್ಞೆ ತಪ್ಪಿ ಬಿದ್ದುಬಿಡುತ್ತಾಳೆ. ಮನೆಯವರಿಗೆಲ್ಲ ದೊಡ್ಡ ಆಘಾತ. ಎಲ್ಲರೂ ಸೇರಿ ಅವಳನ್ನು ತಕ್ಷಣವೇ ಆಸ್ಪತ್ರೆಗೆ ಸಾಗಿಸುತ್ತಾರೆ.

ಆಗ ಮನೆಯಾಕೆಗೆ ಸಂದರ್ಭದ ಅರಿವಾಗುತ್ತದೆ. ತುರ್ತಿನ ಅಗತ್ಯವೇನು ಎನ್ನುವುದು ತಿಳಿಯುತ್ತದೆ. ಆಕೆ ರಾಕ್ವೆಲ್ ಈ ಹಿಂದಿನಂತೆ ಮಾಡಲಾರಳು ಎಂದು ಅವಳಿಗೆ ಬಲವಂತದಿಂದ ಮನವರಿಕೆ ಮಾಡಿ, ಅವಳಿಗೆ ಸಹಾಯ ಮಾಡಲೆಂದು ಮೂರನೆಯವಳಾದ ಲೂಸಿಯನ್ನು ನೇಮಕ ಮಾಡುತ್ತಾರೆ. ʻಯಾರು ಬಂದು ಏನು ಮಾಡ್ತಾರೆ ನೋಡ್ತೀನಿʼ ಎಂದು ರಾಕ್ವೆಲ್ ತನ್ನ ಹಿಡಿದ ದಾರಿಯನ್ನು ಬಿಡುವುದಿಲ್ಲ. ಅವಳು ಲೂಸಿಯ ಮುಖಕ್ಕೆ ಮುಖಕೊಟ್ಟು ಮಾತನಾಡುವುದು ಕಡಿಮೆ. ನೋಡಿದಾಗ ಕೂಡ ‘ಇಷ್ಟವಿಲ್ಲ’ ಎನ್ನುವ ಸ್ಪಷ್ಟ ಸೂಚನೆ ಅವಳ ಮುಖದಲ್ಲಿ. ಲೂಸಿಗೆ ಪ್ರಾರಂಭದಲ್ಲಿ ಇದೇಕೆ ಹೀಗೆ ಎಂದು ಪ್ರಶ್ನೆ ಮಾಡಿಕೊಳ್ಳುತ್ತಾ, ʻಏನಾದ್ರಾಗ್ಲಿ ಅವಳು ಹತ್ತಿರ ಬರಬಾರದು..ʼ ಎನ್ನುವುದು ರಾಕ್ವೆಲ್‌ಳ ಹಟವಾದರೆ, ಲೂಸಿ ಅದನ್ನು ಸವಾಲಿನಂತೆ ಸ್ವೀಕರಿಸಿ ತನ್ನ ಮೂಲ ಸ್ವಭಾವಕ್ಕೆ ಅನುಗುಣವಾಗಿ ಸೋಲನ್ನು ಒಪ್ಪಿಕೊಳ್ಳುವುದಿಲ್ಲ. ಅದಕ್ಕಿಂತ ಹೆಚ್ಚಾಗಿ ಅವಳು ಮಾಡುತ್ತಿದ್ದ ಅಡತಡೆಗಳನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ.

ಇದು ಹಂತ ಹಂತವಾಗಿ ಬೆಳೆದು ಲೂಸಿಯ ಮೂಲ ಸ್ವಭಾವದಲ್ಲಿ, ಪ್ರಾಮಾಣಿಕತೆಯಲ್ಲಿ, ಮನುಷ್ಯರು ಮನುಷ್ಯರೊಡನೆ ಬೆರೆಯುವ ಮತ್ತು ಅಂತಃಕರಣ ಉಂಟುಮಾಡುವ ಅವಳ ಕ್ರಿಯೆಗಳಿಂದ, ʻಇವಳೇನಿವಳು ಬೇರೆ ಥರ ಇದಾಳಲ್ಲ…ʼ ಎಂದು ಅಚ್ಚರಿಗೊಂಡು ಅವಳಿಂದ ಪ್ರಭಾವಿತಳಾಗುತ್ತಾಳೆ ರಾಕ್ವೆಲ್. ಸ್ವಲ್ಪ ದಿನಗಳಲ್ಲಿಯೇ ಅವಳು ತನ್ನ ಹೆಡಮುರಿಗೆಗಟ್ಟಿದ ತನ್ನ ಮಾನಸಿಕ ಸ್ಥಿತಿಯನ್ನು ಸಡಿಲಗೊಳಿಸಿ‌, ಅತ್ತಿತ್ತ ಕುತೂಹಲದಿಂದ ನೋಡುವಂತಾಗುತ್ತಾಳೆ. ಆಗ ಅವಳಿಗೆ ನಿಜವಾಗಿಯೂ ಮನಸ್ಸನ್ನು ಸಡಿಲಗೊಳಿಸಿದರೆ ಉಂಟಾಗುವ ಸಂತೋಷವೆಷ್ಟು ಎನ್ನುವುದರ ಅರಿವಾಗುತ್ತದೆ. ಲೂಸಿಗೆ ರಾಕ್ವೆಲ್ ಳಲ್ಲಿ ಉಂಟಾದ ಬದಲಾವಣೆ ತಕ್ಷಣಕ್ಕೆ ತಿಳಿದು ಅವಳು ಹೆಚ್ಚು ಹೆಚ್ಚು ಹುಮ್ಮಸ್ಸಿನಿಂದ, ಉಮೇದಿನಿಂದ, ನಿಂತಲ್ಲಿ ಕುಳಿತಲ್ಲಿ ಪುಟಿಯುವಂತೆ ಕೆಲಸ ಮಾಡುತ್ತಲೇ ಹರ್ಷವನ್ನು ಹಂಚುತ್ತಾಳೆ. ಎಲ್ಲರನ್ನೂ ಒಳಗೊಳ್ಳುವ ಬಗೆಯನ್ನು ತೋರಿಸಿಕೊಡುತ್ತಾಳೆ.

ರಾಕ್ವೆಲ್‌ಳಲ್ಲಿ ಉಂಟಾದ ಬದಲಾವಣೆ ಮನೆಯಲ್ಲಿನ ಇತರರಿಗೂ ತಿಳಿಯುತ್ತದೆ. ಮನೆಯೊಡತಿ ಪಿಲರ್ ಗಿಂತ ಹೆಚ್ಚಾಗಿ ಏರುವಯಸ್ಸಿನ ಕ್ಯಾಮಿಲಾ ಮತ್ತು ಇತರರು ಉತ್ಸಾಹದ ಗಳಿಗೆಗಳಲ್ಲಿ ಭಾಗವಹಿಸುತ್ತಾರೆ. ಇದೆಲ್ಲವನ್ನು ಇನ್ನಷ್ಟು ಮತ್ತಷ್ಟು ನೋಡುವ ಪ್ರಕ್ರಿಯೆಯಲ್ಲಿ ಹೊಸ ಜಗತ್ತು ತೆರೆದುಕೊಂಡ ಹಾಗೆ ಭಾಸವಾಗುತ್ತದೆ ರಾಕ್ವೆಲ್‌ಳಿಗೆ. ಕಳೆದ ವರ್ಷಗಳಲ್ಲಿ ತಾನು ಏಕಾಂಗಿಯಾಗಿ ನಿರ್ವಹಿಸುತ್ತಿದ್ದ ವಾತಾವರಣದಲ್ಲಿ, ಈ ಗೆಲುವು ಉತ್ಸಾಹಗಳು ತುಂಬಿದ ಬೇರೊಂದು ಶಕ್ತಿ ಪ್ರವೇಶ ಮಾಡಿ, ಅದರಿಂದ ಉಂಟಾದ ಬದಲಾವಣೆಯಿಂದ ಅವಳಿಗೆ ಬೆರಗೋ ಬೆರಗು. ತಾನು ಇಪ್ಪತ್ತು ವರ್ಷಗಳಿಗಿಂತ ಹೆಚ್ಚು ಕಾಲ ಇಡೀ ಮನೆಯಲ್ಲಿ ತನ್ನದೇ ರೀತಿಯಲ್ಲಿ ಕೆಲಸ ನಿರ್ವಹಿಸುತ್ತ, ತಾನೇ ಹಾಕಿಕೊಂಡ ಚೌಕಟ್ಟಿನಲ್ಲಿ ಕೆಲಸಗಳನ್ನು ಚೊಕ್ಕವಾಗಿ ನಿರ್ವಹಿಸುತ್ತ, ಮನೆಯವರೆಲ್ಲರ ಪ್ರೀತಿಗೆ ಪಾತ್ರವಾದದ್ದು ಅವರ ಅಪೇಕ್ಷೆಗಳನ್ನು ಪೂರೈಸುತ್ತ ಸಂತೋಷಪಟ್ಟದ್ದು ನಿಜವಲ್ಲವೇ, ಎಂದುಕೊಂಡರೆ, ನಿಜಕ್ಕೂ ಹೌದು, ನಿಜ ಎನಿಸುತ್ತದೆ ಅವಳಿಗೆ. ಆದರೆ ಅದೆಲ್ಲವೂ ಈಗ ಕಳೆದುಹೋದದ್ದು. ಅದು ಇನ್ನು ಬದಲಾಗುವ ಕಾಲ ಬಂದಿದೆ ಎನ್ನುವುದನ್ನು ಬೇರೆ ರೀತಿಯಲ್ಲಿ ತನ್ನ ದೇಹ ಹೇಳಿದೆ.

ಇಷ್ಟು ಕಾಲ ಒಂಟಿಯಾಗಿ, ತನ್ನಷ್ಟಕ್ಕೇ ತಾನು ಎಲ್ಲದಕ್ಕೂ ಹೊಣೆ ಎಂಬ ರೀತಿಯಲ್ಲಿ ಕಾರ್ಯ ನಿರ್ವಹಿಸಿದಷ್ಟೇ ಅಲ್ಲದೆ ಹೊರಗೆ ಇರುವ ಪ್ರಪಂಚದ ಕಡೆಗೆ, ಹೊಸ ಬಗೆಯ ಸಂತೋಷಕ್ಕೆ, ಮನುಷ್ಯರ ಅಂತರಾಳಗಳಲ್ಲಿ ಹುದುಗಿರುವ ಅಂತಃಕರಣಕ್ಕೆ, ಪ್ರೀತಿಗೆ ಅವಕಾಶ ಮಾಡಿಕೊಡಲಿಲ್ಲವಲ್ಲ ಎನ್ನುವುದು ಥಟ್ಟನೆ ಅವಳಿಗೆ ಅರಿವಾಗುತ್ತದೆ. ಹಾಗೆಂದೇ ಅವಳು ಜಿಡ್ಡುಗಟ್ಟಿದ ಮನಸ್ಸು ಮತ್ತು ಬಿಗಿಯಾದ ಸ್ನಾಯುಗಳ ಮುಖಚಹರೆಯನ್ನು ತಕ್ಕಮಟ್ಟಿಗೆ ಬದಲಿಸಿ ನಡೆದುಕೊಳ್ಳಲು ಪ್ರಾರಂಭಿಸುತ್ತಾಳೆ. ಹೀಗೆ ಮಾಡಿದಾಗಲೇ ಅವಳಿಗೆ ಲೂಸಿ ಎಂಬ ವ್ಯಕ್ತಿಯ ವ್ಯಕ್ತಿತ್ವದ ಹಿರಿಮೆ ಅರಿವಾಗುತ್ತದೆ. ಅವಳೊಡನೆ ನಿಗರ್ವದಿಂದ, ಎಲ್ಲ ಬಿಗಿತಗಳನ್ನು ಬಿಟ್ಟು ನಡೆದುಕೊಳ್ಳುತ್ತಾಳೆ.

ಆಗಲೇ ಲೂಸಿ ರಾಕ್ವೆಲ್‌ಳನ್ನು ಬೇರೆ ಊರಿನಲ್ಲಿರುವ ತನ್ನ ಹತ್ತಿರದ ಸಂಬಂಧಿಯ ಮನೆಗೆ ಕರೆದುಕೊಂಡು ಹೋಗುತ್ತಾಳೆ. ಅಲ್ಲಿ ಅವಳು ನಕ್ಕು ನಲಿದ ನಂತರ, ರಾಕ್ವೆಲ್‌ಗೆ ಅವಳ ಜೀವನದಲ್ಲಿ ಈ ತನಕ ಕಂಡರಿಯದ, ಅದರ ಅನುಭವದ ಸೋಂಕೂ ಇಲ್ಲದ ಘಟನೆ ಜರುಗುತ್ತದೆ. ಪ್ರಾರಂಭದಲ್ಲಿ ಅರೆಮನಸ್ಸಿನಲ್ಲಿರುವಂತೆ ಕಾಣುವ ಅವಳು ನಂತರ ಬದಲಾಗಿ ಲೂಸಿಯ ಸಂಬಂಧಿಯನ್ನು ಕೂಡುತ್ತಾಳೆ. ಮಾರನೆಯ ದಿನದಿಂದಲೇ ಈ ಮೊದಲಿಗಿಂತ ಹೆಚ್ಚು ಚಟುವಟಿಕೆಯಿಂದ ಕಾಣುವ ರಾಕ್ವೆಲ್‌ಳನ್ನು ನೋಡಿ ಅದಕ್ಕೆ ಕಾರಣವನ್ನು ಊಹಿಸಿದವಳಂತೆ ಕೇಳಿ, ರಾಕ್ವೆಲ್‌ಳ ಜೊತೆ ತಾನೂ ನಗುತ್ತಾಳೆ. ರಾಕ್ವೆಲ್‌ಗೆ ಇಡೀ ಜೀವನದಲ್ಲಿ ಕಂಡಿಲ್ಲದಂಥ ಅನುಭವ ಉಂಟಾಗಲು ಏರ್ಪಾಡು ಮಾಡಿದವಳು ಲೂಸಿಯೇ ಎಂದು ನಮಗೆ ಅರಿವಾದಾಗ ಅಚ್ಚರಿ ಉಂಟಾಗುವುದು ಸಹಜ ತಾನೇ?

ರಾಕ್ವೆಲ್‌ಗೆ ಈ ಮೊದಲು ತನ್ನದೇ ಹುಟ್ಟುಹಬ್ಬದಲ್ಲಿ ಸಂಕೋಚ, ಮುಜುಗರ ಮುಂತಾದ ಅಹಿತ ಭಾವನೆಗಳು ಮುತ್ತಿ ಅವಳ ಮನಸ್ಸನ್ನು ಬಿಗಿಯಾಗಿ ಹಿಡಿದಿಟ್ಟಿದ್ದರೆ ಈಗ ಅವಳಿಗೆ ಹೊಸ ಹುಟ್ಟು. ಅದನ್ನು ಬಿಚ್ಚು ಮನಸ್ಸಿನಿಂದ ನೆರವೇರಿಸಿದ ಲೂಸಿಯ ಬಗ್ಗೆ ಇನ್ನಿಲ್ಲದಷ್ಟು ಪ್ರೀತಿ. ಅವಳೊಡನೆ ಹಾಡಿ ಕುಣಿಯುತ್ತಾಳೆ. ತನ್ನಲ್ಲೇ ವೃತ್ತ ನಿರ್ಮಿಸಿಕೊಂಡು, ಸೀಮಿತ ಪ್ರಪಂಚದಲ್ಲಿಯೇ ವಿಹರಿಸುತ್ತ ಇದ್ದದ್ದನ್ನು ತನ್ನ ಮನಸ್ಸಿನಿಂದ ಕಿತ್ತು ಹಾಕಿ, ಬಳಿಗೆ ಸುಳಿದ ಎಲ್ಲ ಚೆಲುವನ್ನು, ಬೆಳ್ಳಿ ಬೆಳಕನ್ನು, ತಿಳಿಗಾಳಿಯನ್ನು, ಜೀವರಸ ಮಿಡಿಯುವ ಉಲ್ಲಾಸವನ್ನು, ಸುತ್ತಲಿನ ಎಲ್ಲರಲ್ಲಿನ ವಯಸ್ಸಿನ ಉತ್ಸಾಹವನ್ನು, ವಿಸ್ತಾರ ಹರಡಿದ ಮನಸ್ಸಿನಿಂದ ಸ್ವೀಕರಿಸಿ ಮುಕ್ತವಾಗಿ ನಗುತ್ತಾಳೆ. ಎಲ್ಲರಲ್ಲೂ ನಗು ಉಕ್ಕಿಸುತ್ತಾಳೆ. ಎಲ್ಲರಿಂದ ಎಲ್ಲ ವಿಧದ ಸಂತೋಷ ಪಡೆಯುತ್ತಾಳೆ, ಎಲ್ಲರಿಗೂ ಹಂಚುತ್ತಾಳೆ.

ತನ್ನನ್ನು ತಾನು ಸಾಧ್ಯವಾದಷ್ಟೂ ಬಿಟ್ಟುಕೊಡುವುದರ ಮೂಲಕ, ಇನ್ನೊಬ್ಬರಲ್ಲಿ ಬೆರೆಯುವುದರ ಮೂಲಕ, ಸಂತೋಷ ಹಂಚಿಕೊಳ್ಳುವುದರ ಮೂಲಕ, ಲಭಿಸುವ ಸಂತೋಷದ ಮಟ್ಟದ ಅರಿವಾದಾಗ ರಾಕ್ವೆಲ್ ಸುಮ್ಮನೆ ಕಣ್ಣರಳಿರಿಸಿದ್ದುಂಟು. ಆಗ ಅವಳು ಸುಮ್ಮನೆ ಕುಳಿತುಕೊಳ್ಳುವುದಿಲ್ಲ. ಇಡೀ ಜಗತ್ತಿನಲ್ಲಿ ತಾನು ಇಷ್ಟು ದಿನ ಕಾಣದ ಸಂತೋಷದ ಎಳೆಗಳನ್ನು ಹಿಡಿಹಿಡಿದು ಆಸ್ವಾದಿಸುತ್ತೇನೆ ಎಂಬ ತುರ್ತಿನಿಂದ ಓಡಾಡುತ್ತಾ ಎಲ್ಲವನ್ನೂ ಎಲ್ಲರನ್ನೂ ಸೇರಿಕೊಳ್ಳುವ ಆಹ್ವಾನಿಸುವ ಮನಸ್ಥಿತಿಯಲ್ಲಿರುತ್ತಾಳೆ.