‘ಮತ್ತೆ ಮಳೆ ಹುಯ್ಯುತಿದೆ ಎಲ್ಲ ನೆನಪಾಗುತಿದೆ…’ ಎಂದು ಬರೆದಿದ್ದ ಡಾ. ಯು.ಆರ್.ಅನಂತಮೂರ್ತಿಯವರ ಭಾಲ್ಯಕಾಲ ಲೋಕದ ಹಲವು ಪರಿಮಳಗಳು ಇದೀಗ ಕೆಂಡಸಂಪಿಗೆಯಲ್ಲಿ ಮೂಡಿ ಬರುತ್ತಿವೆ. ಅನಂತಮೂರ್ತಿಯವರ ಹಿಂದೆ ಬೆಂಬಿಡದೆ ನಡೆದು, ಅವರನ್ನು ದಿನಗಟ್ಟಲೆ ಮಾತನಾಡಿಸಿ ಆ ಮಾತುಗಳನ್ನು ಅಕ್ಷರಕ್ಕಿಳಿಸಿದ್ದಾರೆ ಪತ್ರಕರ್ತ ಎನ್.ಎ.ಎಂ.ಇಸ್ಮಾಯಿಲ್. ತೀರ್ಥಹಳ್ಳಿ ಆಗುಂಬೆ ರಸ್ತೆಯಲ್ಲಿ ಬರುವ ತೂದೂರು ಎಂಬ ಹಳ್ಳಿಯ ಬಳಿಯ ಕೆರೆಕೊಪ್ಪದ ಕಾಡಿನ ನಡುವಿನ ಒಂಟಿಮನೆಯಲ್ಲಿ ಬಾಲ್ಯವನ್ನು ಕಳೆದ ಅನಂತಮೂರ್ತಿ ಆ ಕಾಲದ ಮಲೆನಾಡಿನ ತಮ್ಮ ಕಡು ಬಡತನದ ಅಪರಿಮಿತ ವ್ಯಾಮೋಹಗಳ ದಿನಗಳನ್ನು ಇಲ್ಲಿ ಬಿಚ್ಚಿಟ್ಟಿದ್ದಾರೆ..
೧.ದಾಳಿಂಬೆ ರಾಕ್ಷಸನ ಕಥೆ
ನನ್ನ ತುಂಬಾ ಹಿಂದಿನ ನೆನಪು ಅಂದರೆ ನಾವು ಕೆರೆಕೊಪ್ಪ ಎಂಬ ಊರಿನಲ್ಲಿ ಇದ್ದದ್ದು. ತೀರ್ಥಹಳ್ಳಿಯಿಂದ ಆಗುಂಬೆ ಕೆಡೆಗೆ 23-24 ಕಿಲೋಮೀಟರ್ ಹೋದರೆ ತೂದೂರು ಸಿಗುತ್ತದೆ. ಆಗೆಲ್ಲಾ ಟಾರ್ ರಸ್ತೆ ಇರಲಿಲ್ಲ. ಆ ಕಾಲದಲ್ಲಿ ಜಲ್ಲಿ ಕಲ್ಲಿನ ರಸ್ತೆಯೇ ದೊಡ್ಡ ರಸ್ತೆ. ಈ ರಸ್ತೆಯಲ್ಲಿ ತೂದೂರಿನವರೆಗೂ ಬಂದು ಅಲ್ಲಿಂದ ಕಾಲು ಹಾದಿಯಲ್ಲಿ ಕಾಡಿನ ಒಳಗೆ ಹೋದರೆ ಕಾಡಿನ ಮಧ್ಯೆ ಕೆರೆಕೊಪ್ಪ ಅಂತ ಒಂದು ಮನೆ ಇತ್ತು. ಆ ಮನೆಗೆ ಮತ್ತೆ ನಾನು ಹೋಗಿ ನೋಡಿದ್ದೇನೆ. ಈಗ ಕಾಡೂ ಇಲ್ಲ. ಆ ಮನೆಯೂ ಹಾಗೆ ಇಲ್ಲ.
ಈ ನಮ್ಮ ಮನೆಯ ಎದುರು ಒಂದು ದಾಳಿಂಬೆ ಗಿಡ ಇತ್ತು. ನಮ್ಮ ಮನೆಗೆ ಆಗೀಗ ಬರುತ್ತಿದ್ದವರೊಬ್ಬರು ದಾಳಿಂಬೆ ರಾಕ್ಷಸನ ಕಥೆ ಹೇಳುತ್ತಿದ್ದರು. ದಾಳಿಂಬೆ ರಾಕ್ಷಸ ಅಂತ ಒಬ್ಬ ಇದ್ದನಂತೆ. ಅವನೊಂದು ದಾಳಿಂಬೆ ಗಿಡದ ಬುಡದಲ್ಲಿ ಕಾವಲು ಕುಳಿತಿರುತ್ತಿದ್ದನಂತೆ. ಈ ದಾಳಿಂಬೆ ಗಿಡದಲ್ಲಿ ಒಂದೇ ಒಂದು ಹಣ್ಣು. ಗರ್ಭಿಣಿ ರಾಜಕುಮಾರಿಯೊಬ್ಬಳಿಗೆ ಈ ಮರದ ಹಣ್ಣು ತಿನ್ನಬೇಕು ಎಂಬ ಆಸೆಯಾಗುತ್ತದೆ. ಗರ್ಭಿಣಿಯ ಬಯಕೆಯನ್ನು ತೀರಿಸಲು ಏಳು ಸಮುದ್ರ ದಾಟಿ ಒಂದು ಕಾಡಿಗೆ ಹೋದರೆ ಅಲ್ಲೊಂದು ದಾಳಿಂಬೆ ಗಿಡವಿದೆ. ಅದರಲ್ಲೊಂದೇ ಒಂದು ಹಣ್ಣಿದೆ ಅದನ್ನು ತರಬೇಕು ಎಂದು ರಾಜಕುಮಾರನಿಗೆ ಗೊತ್ತಾಗುತ್ತೆ. ದಾಳಿಂಬೆ ಹಣ್ಣನ್ನು ಕಿತ್ತು ತರುವುದಕ್ಕಾಗಿ ಆ ರಾಜಕುಮಾರ ರಾಕ್ಷಸನಿಗೆ ಏನೋ ಮಾಡಿ ನಿದ್ರೆ ಬರಿಸುತ್ತಾನೆ. ರಾಕ್ಷಸ ನಿದ್ದೆ ಹೋದಾಗ ದಾಳಿಂಬೆ ಹಣ್ಣನ್ನು ಕಿತ್ತು ಏಳು ಸಮುದ್ರ ದಾಟಿ ಬಂದು ರಾಜಕುಮಾರಿ ಬಯಕೆ ಪೂರೈಸುತ್ತಾನೆ.
ಈ ಕಥೆಯನ್ನು ಹೇಳುವವರು ದಾಳಿಂಬೆ ಒಯ್ಯಲು ಬರುವ ರಾಜಕುಮಾರನಿಗೆ ಅನೇಕ ಅಡಚಣೆಗಳನ್ನು ಸೃಷ್ಟಿಸುತ್ತಿದ್ದರು. ನನಗೀಗ ಆ ಅಡಚಣೆಗಳೆಲ್ಲಾ ಮರೆತು ಹೋಗಿವೆ. ಪ್ರತೀ ಸಾರಿ ಕಥೆ ಕೇಳುವಾಗಲೂ ಯಾವುದಾದರೊಂದು ಹೊಸ ಅಡಚಣೆ ಸೇರಿಕೊಳ್ಳುತ್ತಿತ್ತು. ನನ್ನ ಕುತೂಹಲ ಇದ್ದಿದ್ದು ಅದರ ಮೇಲೆ. ದಾಳಿಂಬೆ ಹಣ್ಣು ಸಿಗದಂತೆ ಅವನಿಗೆ ಯಾವ ಅಡ್ಡಿ ಎದುರಾಗುತ್ತೆ ಎಂಬುದನ್ನು ತಿಳಿಯಲು ನಾನು ಕಾಯುತ್ತಿದ್ದೆ. ದಾಳಿಂಬೆ ಹಣ್ಣು ರಾಜಕುಮಾರನಿಗೆ ಸಿಗಬೇಕು, ಆದರೆ ಅದು ಸುಲಭವಾಗಿ ಸಿಗಬಾರದು!
ನಾವು ಕತೆಗಾರರಾಗುವಾಗ ಮೊದಲು ಕಲಿಯುವುದೇ ಇದನ್ನು- ದಾಳಿಂಬೆ ಹಣ್ಣು ಸಿಗಬೇಕು, ಆದರೆ ಅದು ಸುಲಭವಾಗಿ ಸಿಗಬಾರದು- ತುಂಬಾ ಜನ ಕತೆಗಳನ್ನು ಬೆಳೆಸುವುದೇ ಹೀಗೆ. ನನಗೆ ಈ ದಾಳಿಂಬೆ ರಾಕ್ಷಸನ ಕಥೆ ಕೇಳಿದ ನಂತರ ನಮ್ಮ ದಾಳಿಂಬೆ ಗಿಡವೇ ಆ ರಾಕ್ಷಸ ಕಾವಲು ಕುಳಿತಿರುವ ಗಿಡ ಅನ್ನಿಸುತ್ತಿತ್ತು. ಅಂದರೆ ಪುರಾಣಕ್ಕೂ ವಾಸ್ತವಕ್ಕೂ ನಡುವಿನ ವ್ಯತ್ಯಾಸ ಬಾಲ್ಯದಲ್ಲಿ ಕಾಣೆಯಾಗಿಬಿಟ್ಟಿರುತ್ತೆ. ಬಾಲ್ಯದಲ್ಲಿ ಕಂಡಿದ್ದೆಲ್ಲಾ ಪುರಾಣದಲ್ಲಿ ಕೇಳಿದ ಹಾಗೆಯೇ ಇರುತ್ತೆ. ಹಾಗೇನೇ ಪುರಾಣದಲ್ಲಿ ಕೇಳಿದ್ದೆಲ್ಲಾ ನಿಜವಾಗಿ ನಡೆದ ಹಾಗೆ ಇರುತ್ತೆ. ಇಲ್ಲಿ ವಾಸ್ತವ ಮತ್ತು ಪುರಾಣದ ಅಂತರವೇ ಇರುವುದಿಲ್ಲ. ಬಹಳ ಒಳ್ಳೆಯ ಸಾಹಿತ್ಯ ಕೃತಿಯನ್ನು ಓದಿದಾಗಲೂ ನಾವು ಈ ಅಂತರವನ್ನು ಮೀರಿಬಿಟ್ಟಿರುತ್ತೇವೆ. ಇದಕ್ಕೊಂದು ಹೊಸ ಸಾಹಿತ್ಯ ಸಿದ್ಧಾಂತವನ್ನೇ ಮಾಡಿಬಿಡಬಹುದು.
ಎಲ್ಲಾ ಸತ್ಯಗಳನ್ನು ನಾವು ನೋಡುವುದು ಸಾಹಿತ್ಯದ ಕಿಟಕಿಯ ಮುಖಾಂತರ. ಈ ಕಿಟಕಿಯಲ್ಲಿ ನೋಡುವ ಕ್ರಿಯೆಯಲ್ಲಿ ಕಿಟಕಿಯ ಹೊರಗಿನದ್ದು ಕಾಣಿಸುವಂತೆಯೇ ಆ ಕಿಟಕಿಯ ಅಂಚೂ ಕಾಣಿಸುತ್ತದೆ. ಒಳ್ಳೆಯ ಸಾಹಿತ್ಯ ಕೃತಿ ಅನ್ನೋದು ಕಿಟಕಿಯ ಹೊರಗಿನದ್ದನ್ನು ತೋರುತ್ತಲೇ ಕಿಟಕಿಯ ಅಸ್ತಿತ್ವನ್ನೂ ತೋರಿಸುವಂಥದ್ದು. ಬಹಳ ಒಳ್ಳೆಯ ಸಿನಿಮಾದ ಸಂದರ್ಭದಲ್ಲೂ ಇದು ನಿಜ.
ನನ್ನ ಬಾಲ್ಯದ ನೆನಪುಗಳಲ್ಲಿ ಅತ್ಯಂತ ಹಳೆಯದ್ದು ಅಂದರೆ ಈ ದಾಳಿಂಬೆ ಗಿಡ.
ನಾವು ಕತೆಗಾರರಾಗುವಾಗ ಮೊದಲು ಕಲಿಯುವುದೇ ಇದನ್ನು- ದಾಳಿಂಬೆ ಹಣ್ಣು ಸಿಗಬೇಕು, ಆದರೆ ಅದು ಸುಲಭವಾಗಿ ಸಿಗಬಾರದು- ತುಂಬಾ ಜನ ಕತೆಗಳನ್ನು ಬೆಳೆಸುವುದೇ ಹೀಗೆ. ನನಗೆ ಈ ದಾಳಿಂಬೆ ರಾಕ್ಷಸನ ಕಥೆ ಕೇಳಿದ ನಂತರ ನಮ್ಮ ದಾಳಿಂಬೆ ಗಿಡವೇ ಆ ರಾಕ್ಷಸ ಕಾವಲು ಕುಳಿತಿರುವ ಗಿಡ ಅನ್ನಿಸುತ್ತಿತ್ತು. ಅಂದರೆ ಪುರಾಣಕ್ಕೂ ವಾಸ್ತವಕ್ಕೂ ನಡುವಿನ ವ್ಯತ್ಯಾಸ ಬಾಲ್ಯದಲ್ಲಿ ಕಾಣೆಯಾಗಿಬಿಟ್ಟಿರುತ್ತೆ. ಬಾಲ್ಯದಲ್ಲಿ ಕಂಡಿದ್ದೆಲ್ಲಾ ಪುರಾಣದಲ್ಲಿ ಕೇಳಿದ ಹಾಗೆಯೇ ಇರುತ್ತೆ. ಹಾಗೇನೇ ಪುರಾಣದಲ್ಲಿ ಕೇಳಿದ್ದೆಲ್ಲಾ ನಿಜವಾಗಿ ನಡೆದ ಹಾಗೆ ಇರುತ್ತೆ. ಇಲ್ಲಿ ವಾಸ್ತವ ಮತ್ತು ಪುರಾಣದ ಅಂತರವೇ ಇರುವುದಿಲ್ಲ. ಬಹಳ ಒಳ್ಳೆಯ ಸಾಹಿತ್ಯ ಕೃತಿಯನ್ನು ಓದಿದಾಗಲೂ ನಾವು ಈ ಅಂತರವನ್ನು ಮೀರಿಬಿಟ್ಟಿರುತ್ತೇವೆ. ಇದಕ್ಕೊಂದು ಹೊಸ ಸಾಹಿತ್ಯ ಸಿದ್ಧಾಂತವನ್ನೇ ಮಾಡಿಬಿಡಬಹುದು.
೨. ಅಬ್ಬಕ್ಕನ್ನ ಗುಬ್ಬಕ್ಕ ಕಚ್ಕೊಂಡೋಯ್ತು
ನಮ್ಮ ಮನೆಗೆ ಅಬ್ಬಕ್ಕ ಎಂಬ ಹೆಂಗಸು ಕೆಲಸಕ್ಕೆ ಬರುತ್ತಿದ್ದಳು. ಅವಳನ್ನು ಕಂಡರೆ ನನಗೆ ಬಹಳ ಇಷ್ಟ. ಇದಕ್ಕೆ ಇದ್ದ ಕಾರಣ ಆಕೆಯೂ ಕಥೆಗಳನ್ನು ಹೇಳುತ್ತಿದ್ದಳು. ಆಕೆ ನಮ್ಮ ಮನೆಗೆ ಬಂದು ಮುಸುರೆ ತಿಕ್ಕಿ ನನ್ನ ಅಮ್ಮನ ಹತ್ತಿರ ಸುಖ-ದುಃಖ ಎಲ್ಲಾ ಮಾತನಾಡಿ ನಮ್ಮಲ್ಲಿ ಉಳಿದಿದ್ದ ಪದಾರ್ಥವನ್ನು ತಗೊಂಡು ಹೋಗುತ್ತಿದ್ದಳು. ಕೆಲವೊಮ್ಮೆ ದಾರಿಯಲ್ಲಿ ಬರುವಾಗ ಸಿಕ್ಕ ದಂಟು, ಸೊಪ್ಪು ಇಲ್ಲವೇ ನಮಗೆ ಸ್ನಾನಕ್ಕೆ ಬೇಕಾದ ಮತ್ತಿ ಸೊಪ್ಪನ್ನೋ ಆಕೆಯೇ ನಮ್ಮ ಮನೆಗೆ ತಂದುಕೊಡುತ್ತಿದ್ದಳು. ಇಷ್ಟು ಸಾಮಾನ್ಯವಾದ ಅಬ್ಬಕ್ಕನಿಗೆ ಎರಡು ಮಕ್ಕಳು. ಎರಡೂ ಕಂಕುಳಲ್ಲಿ ಎರಡು ಮಕ್ಕಳನ್ನು ಎತ್ತಿಕೊಂಡು ಬರುತ್ತಿದ್ದಳು.
ಅಬ್ಬಕ್ಕ ನನ್ನ ಮಟ್ಟಿಗೆ ಪುರಾಣ ಸದೃಶ ವ್ಯಕ್ತಿ. ಒಂದೊಂದು ರಾತ್ರಿ ಅವಳಿಗೆ ಮೈಮೇಲೆ ಬರುತ್ತಿತ್ತು. ಅಬ್ಬಕ್ಕನಿಗೆ ಮೈಮೇಲೆ ಬರುವ ರಾತ್ರಿಗಳಲ್ಲಿ ಆ ಹಳ್ಳಿಯ ಸುತ್ತಮುತ್ತಲಿನ ಎಲ್ಲರೂ ಹಣ್ಣು ಕಾಯಿ ತೆಗೆದುಕೊಂಡು, ನಿಮಿತ್ತ ಕೇಳುವುದಕ್ಕೆಂದು ಬರುತ್ತಿದ್ದರು. ಅಬ್ಬಕ್ಕ ತಲೆಕೂದಲೆಲ್ಲಾ ಕೆದರಿಕೊಂಡು ಇಷ್ಟು ಕುಂಕುಮ-ಅರಿಶಿನ ಬಳಿದುಕೊಂಡಿರುತ್ತಿದ್ದಳು. ಅದು ನಿತ್ಯ ನೋಡುವ ಅಬ್ಬಕ್ಕನೇ ಅಲ್ಲ. ಕಣ್ಣೆಲ್ಲೋ ನೆಟ್ಟಿರೋದು. ಏನಾದರೂ ಪ್ರಶ್ನೆ ಕೇಳಿದರೆ ಅದಕ್ಕೆ ಉತ್ತರಗಳನ್ನು ಹೇಳುತ್ತಿದ್ದಳು. ಬಾಯಲ್ಲಿ ವಿಚಿತ್ರ ಸದ್ದು ಮಾಡಿಕೊಂಡು ಎರಡು ಕೈಯಲ್ಲೂ ಅಡಿಕೆ ಸಿಂಗಾರವನ್ನು ಹಿಡಿದುಕೊಂಡು ಅದನ್ನು ಆಡಿಸುತ್ತಾ ಭವಿಷ್ಯವನ್ನು ಹೇಳುತ್ತಿದ್ದಳು. ನಮ್ಮ ಅಜ್ಜಯ್ಯ ಅವಳನ್ನು ನೋಡಲು ಹೋಗುವಾಗ ಒಂದೊಂದು ಸಾರಿ ನನ್ನನ್ನೂ ಕರೆದುಕೊಂಡು ಹೋಗುತ್ತಿದ್ದರು. ಇಂಥ ಹೊತ್ತಲ್ಲಿ ನಮ್ಮ ಅಜ್ಜಯ್ಯನಿಗೂ ಅವಳು ಅಬ್ಬಕ್ಕ ಅಲ್ಲ. ಅವಳು ದೇವಿ. ಮೈಮೇಲಿನದ್ದು ಇಳಿದುಹೋದ ನಂತರ ಆಕೆ ಮುಂಚಿನ ಅಬ್ಬಕ್ಕ. ಈ ನಿತ್ಯದ ಅಬ್ಬಕ್ಕ ದೇವಿಯೂ ಆಗುತ್ತಾಳಲ್ಲಾ ಅನ್ನೋದು ನನಗೊಂದು ವಿಚಿತ್ರದಂತೆ ಕಾಣಿಸುತ್ತಿತ್ತು. ಅವಳು ನಮ್ಮ ಮನೆಗೆ ಬಂದಾಗ ಸತ್ಯದ ಅಬ್ಬಕ್ಕ ಆಗದೆ ನಿತ್ಯದ ಅಬ್ಬಕ್ಕನೇ ಆಗಿರುತ್ತಿದ್ದಳು.
ಕನ್ನಡ ಭಾಷೆಯಲ್ಲಿ ನಾನು ಆಡಿದ ಮೊದಲನೇ ನುಡಿ ಯಾವುದು ಅನ್ನೋದನ್ನು ನನ್ನ ಅಮ್ಮ ನನ್ನ ಸಂಬಂಧದವರು ನೆನಪು ಮಾಡುತ್ತಾ ಇದ್ದುದರಿಂದ ನನಗೂ ನೆನಪಿದೆ. ನಾವು ನೆನಪು ಎಂದು ಹೇಳುವಾಗ ಅದು ವ್ಯಕ್ತಿಗತವಾದುದಲ್ಲ. ನಮ್ಮ ನೆನಪುಗಳೂ ಕೂಡಾ ನಮ್ಮ ಮೇಲೆ ಬಹಳ ಪ್ರೀತಿ ಉಳ್ಳವರು ಆಗಾಗ ನೆನಪು ಮಾಡುತ್ತಾ ಇದ್ದುದರಿಂದ ಅವು ನಮ್ಮ ನೆನಪಿನಲ್ಲೂ ಉಳಿದಿರುತ್ತವೆ. ವೇದಗಳೂ ಉಳಿದದ್ದು ಹೀಗೆಯೇ. ಅದರ ಮೇಲೆ ಪ್ರೀತಿ ಉಳ್ಳವರು ನೆನಪಿಸುತ್ತಾ ಹೋದರು. ಇದು ಬೈಬಲ್ ಬಗ್ಗೆಯೂ ನಿಜ. ಕುರಾನ್ ಬಗ್ಗೆಯೂ ನಿಜ. ಎಲ್ಲವೂ ಕೂಡ ಹೀಗೆ ಸತತವಾಗಿ ನೆನಪು ಮಾಡಿಕೊಳ್ಳುವುದರಿಂದ ಪೂರ್ವದ ನೆನಪಾಗಿ ಉಳಿದಿವೆ.
ನನಗೆ ಬಹಳ ಕ್ಷುಲ್ಲಕವಾದ ವಾಕ್ಯದ ಸಾತತ್ಯ ಇದೆ. ಒಂದು ಸಾರಿ ಅಬ್ಬಕ್ಕ ನಮ್ಮ ಮನೆಗೆ ಬಂದಾಗ ನಾನು ಅವಳ ಬಗ್ಗೆ ತಮಾಷೆ ಮಾತಾಡಿದೆನಂತೆ. ಅದೇನಂದರೆ ‘ಅಬ್ಬಕ್ಕನ್ನ ಗುಬ್ಬಕ್ಕ ಕಚ್ಕೊಂಡೋಯ್ತು’. ಈಗ ನೋಡಿದರೆ ಅದೇನು ಬಹಳ ದೊಡ್ಡ ವಾಕ್ಯವಲ್ಲ. ಆದರೆ ನಮ್ಮ ಅಮ್ಮ ‘ನೋಡು, ನಮ್ಮ ಅನಂತು ‘ಅಬ್ಬಕ್ಕನ್ನ ಗುಬ್ಬಕ್ಕ ಕಚ್ಕೊಂಡೋಯ್ತು’ ಅಂದ.’. ಇಲ್ಲೊಂದು ಪ್ರಾಸವಿದೆ. ಅಬ್ಬಕ್ಕ-ಗುಬ್ಬಕ್ಕ. ಅದನ್ನು ಹೇಳುವಾಗ ಅಬ್ಬಕ್ಕನ್ನ ಗುಬ್ಬಕ್ಕ ಕಚ್ಚೊಂಡೋ….ಯ್ತು. ಹೋ….ಯ್ತು ಎಂದು ದೀರ್ಘವನ್ನು ಮತ್ತಷ್ಟು ದೀರ್ಘವಾಗಿಸುವುದರಲ್ಲಿ ಹೋಗುವ ಒಂದು ಕ್ರಿಯೆಯೂ ಇದೆ.
ಇದನ್ನು ಅಮ್ಮ ಅನಂತು ಹೀಗಂದ ಎಂದು ಅಜ್ಜನಿಗೆ ಹೇಳುತ್ತಿದ್ದಳು. ಅವರ ಅಕ್ಕನಿಗೆ ಹೇಳುತ್ತಿದ್ದಳು. ಅವರ ಅಮ್ಮನಿಗೂ ಹೇಳುತ್ತಿದ್ದಳು. ಇದನ್ನೆಲ್ಲಾ ನಾನೂ ಕೇಳಿಸಿಕೊಳ್ಳುತ್ತಿದ್ದೆ. ಹಾಗೇನೇ ಮೊನ್ನೆ ಮೊನ್ನೆ ಅವಳು ಸಾಯುವ ತನಕವೂ ಅನಂತು ಚಿಕ್ಕವನಿರುವಾಗ ಹೀಗಂದಿದ್ದ ಎಂದು ಹೇಳುತ್ತಲೇ ಇದ್ದಳು. ನಾನು ಬರೆದಿದ್ದನ್ನೇನೂ ನನ್ನಮ್ಮ ಓದಿರಲಿಲ್ಲ. ಆದರೆ ನನ್ನೆಲ್ಲಾ ಸಾಹಿತ್ಯ ಕೃತಿಗಳ ಉಗಮವನ್ನು ‘ಅಬ್ಬಕ್ಕನ್ನ ಗುಬ್ಬಕ್ಕ ಕಚ್ಕೊಂಡೋಯ್ತು’ವಿನಲ್ಲಿ ಆಕೆಗೆ ಕಾಣಿಸುತ್ತಿತ್ತು. ಆಮೇಲೆ ಇನ್ನೊಂದೇನು ವಿಚಿತ್ರ ಅಂದರೆ ಅಬ್ಬಕ್ಕ ಬಹಳ ದಪ್ಪವಾಗಿದ್ದ ಹೆಂಗಸು. ಎರಡು ಮಕ್ಕಳನ್ನೂ ಹೆತ್ತಿದ್ದಳು. ಗುಬ್ಬಕ್ಕ ಬಲು ಸಣ್ಣದು. ಇಂಥಾ ಅಬ್ಬಕ್ಕನನ್ನು ಒಂದು ಗುಬ್ಬಕ್ಕ ಕಚ್ಚಿಕೊಂಡು ಹೋಗೋದೇ?
ಇದು ನನ್ನ ನೆನಪಿನಲ್ಲಿ ಉಳಿದಿರುವ ಸಂಗತಿ. ಇದೆಲ್ಲಾ ಯಾರಿಗೂ ಮಿಸ್ಟರಿ ಅನ್ನಿಸಬೇಕಾಗಿಲ್ಲ. ಆದರೆ ನನಗೆ ಈ ವಾಕ್ಯ ರಚನೆಗಳಲ್ಲೇ ಮಿಸ್ಟರಿ ಕಾಣಿಸುತ್ತದೆ. ಇದೆಲ್ಲಾ ನನಗೆ ತಿಳುವಳಿಕೆ ಬಂದ ಮೇಲೆ ನಾನೇ ವಿಶ್ಲೇಷಿಸಿ ತಿಳಿದುಕೊಂಡ ಸಂಗತಿಗಳು. ಈ ತರಹದ್ದೆಲ್ಲಾ ತಿಳಿಯಲುತೊಡಗಿದರೆ ಅದನ್ನು ಹೇಳುವುದರಲ್ಲಿ ಇರುವ ಸಂತೋಷ ಮಾಯವಾಗಿ ತಿಳಿಯುವುದರ ಸಂತೋಷವೇ ಹೆಚ್ಚಾಗಿಬಿಡುತ್ತದೆ.
ನಾನು ಬರೆದಿದ್ದನ್ನೇನೂ ನನ್ನಮ್ಮ ಓದಿರಲಿಲ್ಲ. ಆದರೆ ನನ್ನೆಲ್ಲಾ ಸಾಹಿತ್ಯ ಕೃತಿಗಳ ಉಗಮವನ್ನು ‘ಅಬ್ಬಕ್ಕನ್ನ ಗುಬ್ಬಕ್ಕ ಕಚ್ಕೊಂಡೋಯ್ತು’ವಿನಲ್ಲಿ ಆಕೆಗೆ ಕಾಣಿಸುತ್ತಿತ್ತು. ಆಮೇಲೆ ಇನ್ನೊಂದೇನು ವಿಚಿತ್ರ ಅಂದರೆ ಅಬ್ಬಕ್ಕ ಬಹಳ ದಪ್ಪವಾಗಿದ್ದ ಹೆಂಗಸು. ಎರಡು ಮಕ್ಕಳನ್ನೂ ಹೆತ್ತಿದ್ದಳು. ಗುಬ್ಬಕ್ಕ ಬಲು ಸಣ್ಣದು. ಇಂಥಾ ಅಬ್ಬಕ್ಕನನ್ನು ಒಂದು ಗುಬ್ಬಕ್ಕ ಕಚ್ಚಿಕೊಂಡು ಹೋಗೋದೇ?
೩.ಕುಂಟಕಾಲು ಕೃಷ್ಣಪ್ಪಯ್ಯ, ಕ್ರಾಪು ಮತ್ತು ಜುಟ್ಟು
ಕೆರೆಕೊಪ್ಪದ ಮನೆಯಲ್ಲಿದ್ದಾಗಲೇ ನನಗೆ ಅಕ್ಷರಾಭ್ಯಾಸ ಪ್ರಾರಂಭವಾಗಿದ್ದು. ಇದು ನನಗೀಗ ನೆನಪಾಗುತ್ತಿದೆ. ಆಗ ಸ್ಕೂಲ್ ಹತ್ತಿರ ಇರಲಿಲ್ಲ. ಹಬ್ಬದ ದಿನ ಅದು. ಒಂದು ಮಂತ್ರ ಇದೆ ಸರಸ್ವತಿ ನಮಸ್ತುಭ್ಯಂ ವರದೇ ಕಾಮರೂಪಿಣಿ ಅಕ್ಷರಾಭ್ಯಾಸಂ ಕರಿಷ್ಯಾಮಿ ಸಿದ್ಧಿರ್ಭವತು ಮೇ ಸದಾ. ಎಂದು ಹೇಳಿ ನಮ್ಮಮ್ಮ ನನ್ನನ್ನು ನೆಲದಲ್ಲಿ ಮರಳು ಹರಡಿ ಕೂರಿಸಿ ಬೆರಳನ್ನು ಹಿಡಿದುಕೊಂಡು ಅ ಎಂಬ ಅಕ್ಷರವನ್ನು ಬರೆಯಿಸಿದ್ದಳು.
ಮಕ್ಕಳಾಗಿದ್ದಾಗ ಮರಳಲ್ಲಿ ಆಡುವುದೂ ಸಂತೋಷದ ವಿಷಯ. ನಿತ್ಯ ನಾನು ಆ ಮರಳ ಮೇಲೆ ಬರೆಯುತ್ತಿದ್ದೆ. ನಾನು ಅಕ್ಷರಗಳನ್ನೆಲ್ಲಾ ಕಲಿತದ್ದೇ ಹೀಗೆ. ಕಂಪ್ಯೂಟರ್ ಕೂಡಾ ಆ ಮರಳಿನಿಂದಲೇ ಬಂದಿರೋದು ಅನ್ನುತ್ತಾರಲ್ಲ…. ಆದ್ದರಿಂದ ಅವತ್ತು ನಾನು ಮರಳಲ್ಲಿ ಅಕ್ಷರಗಳನ್ನು ಬರೆಯುತ್ತಿದ್ದುದಕ್ಕೂ ಈಗ ಕಂಪ್ಯೂಟರ್ ನಲ್ಲಿ ಟೈಪ್ ಮಾಡುವುದಕ್ಕೂ ಒಂದು ತರಹದ ಸಂಬಂಧ ಇದೆ. ಎರಡೂ ಮರಳಿನಿಂದಲೇ ಬಂದಿರೋದು.
ಅಕ್ಷರ ಕಲಿತ ಮೇಲೆ ಒಬ್ಬರು ಮೇಷ್ಟ್ರು ಬೇಕಲ್ಲ. ಅದು ಯಾವುದೋ ಸ್ಕೂಲಿಗೆ ಹೋಗುವ ಮೇಷ್ಟ್ರನ್ನು ತಂದು ನನಗೂ ಮೇಷ್ಟ್ರು ಮಾಡಿದರು. ಅವರದ್ದು ಕುಂಟು ಕಾಲು. ಅವರ ಮೇಲೆ ನನಗೆ ಇನ್ನಿಲ್ಲದ ಸಿಟ್ಟು. ಯಾಕೆಂದರೆ ಅವರು ನನಗೆ ಪಾಠ ಹೇಳಿಕೊಡುವಾಗ ನೀಡುತ್ತಿದ್ದ ಶಿಕ್ಷೆ. ಹಾಗಾಗಿ ಅವರು ಮನೆಗೆ ಬಂದಾಗ ಕೃಷ್ಣಪ್ಪಯ್ಯ ಬಂದರೋ ಎಂದೋ ಮೇಷ್ಟ್ರು ಬಂದರು ಎಂದೋ ಯಾವತ್ತೂ ಹೇಳುತ್ತಿರಲಿಲ್ಲ. ಕುಂಟುಕಾಲು ಕೃಷ್ಣಪ್ಪಯ್ಯ ಬಂದ ಎನ್ನುತ್ತಿದ್ದೆ. ಇದನ್ನು ಕೇಳಿದರೆ ನಮ್ಮ ಅಜ್ಜಯ್ಯನಿಗೆ ಸಿಟ್ಟು ಬರುತ್ತಿತ್ತು. ಅದು ಸಹಜ ಕೂಡಾ. ಆಗ ನಾನಿನ್ನೂ ಐದೋ ಆರೋ ವರ್ಷದ ಬಾಲಕ. ಹಿರಿಯರೊಬ್ಬರನ್ನು ಅವರ ಅಂಗವೈಕಲ್ಯವನ್ನು ಅಣಕಿಸಿ ಏಕವಚನದಲ್ಲಿ ಕರೆದರೆ ಯಾರಿಗೆ ಸಿಟ್ಟು ಬರುವುದಿಲ್ಲ. ಆದರೆ ನಮ್ಮ ಅಮ್ಮನಿಗೆ ಮಾತ್ರ ಸಹಾನುಭೂತಿ ಇರೋದು. ಹಾಗಾಗಿ ಈ ಬಗೆಯ ಪದಪ್ರಯೋಗವೆಲ್ಲಾ ಅಮ್ಮನ ಬಳಿ ಮಾತನಾಡುವಾಗ ಬಳಕೆಯಾಗುತ್ತಿತ್ತು.
ಕೃಷ್ಣಪ್ಪಯ್ಯ ಬರುವಾಗಲೇ ಒಂದು ಬೆತ್ತ ತಂದಿರುತ್ತಿದ್ದರು. ನಾನು ಅವರು ಹೇಳಿಕೊಟ್ಟದ್ದನ್ನು ಕಲೀಬೇಕಿತ್ತು. ಅದೇನು ಕಲಿತೆ ಎಂಬುದು ಮರೆತು ಹೋಗಿದೆ. ಆದರೆ ಕೃಷ್ಣಪ್ಪಯ್ಯ ಮಾತ್ರ ನೆನಪಿದಾರೆ.
ನನಗೆ ಚೌಲ ಆಗಿದ್ದು ನೆನಪಿದೆ. ಮೊಟ್ಟ ಮೊದಲನೇ ಸಾರಿ ಮಕ್ಕಳ ಕೂದಲನ್ನು ಕತ್ತರಿಸುವುದಕ್ಕೆ ಚೌಲ ಎನ್ನುತ್ತಾರೆ. ಚೌಲ ಕರ್ಮ ಆಗುವವರೆಗೂ ಮಕ್ಕಳು ಕೂದಲನ್ನು ಕತ್ತರಿಸದೆ ಉದ್ದಕ್ಕೆ ಬಿಟ್ಟುಕೊಂಡಿರುತ್ತಾರೆ. ಅಕ್ಷರಾಭ್ಯಾಸ ಆಗುವುದಕ್ಕೆ ಮೊದಲು ಇಲ್ಲವೇ ನಂತರ ಸುಮಾರು ಐದಾರು ವರ್ಷದ ಹೊತ್ತಿಗೆ ಈ ಚೌಲ ಕರ್ಮ ಮಾಡುತ್ತಾರೆ. ಇದು ನನಗೆ ನೆನಪಿದೆ. ಆಗೆಲ್ಲಾ ನಮ್ಮ ಮನೆಗಳಿಗೇ ಕ್ಷೌರಿಕರು ಬರುತ್ತಿದ್ದರು. ನನ್ನ ಚೌಲ ಕರ್ಮಕ್ಕೆ ಬರಬೇಕಾಗಿದ್ದ ಕ್ಷೌರಿಕ ಶುಭ್ರವಾದ ಬಿಳಿ ಬಟ್ಟೆ ಧರಿಸುತ್ತಿದ್ದ ಎಂದು ನೆನಪು. ಅವನಿಗೊಂದು ಕ್ರಾಪ್ ಕೂಡಾ ಇತ್ತು.
ಆ ಕಾಲದಲ್ಲಿ ಯಾರಾದರೂ ಕ್ರಾಪ್ ಬಿಟ್ಟಿದ್ದರೆ ಅವರಿಗೂ ನಗರಕ್ಕೂ ಯಾವುದೋ ಸಂಬಂಧವಿದೆ ಎಂದರ್ಥ. ಕ್ರಾಪಿಗೆ ಈಗ ಯಾವ ಅರ್ಥವೂ ಇಲ್ಲ. ಹಿಂದೆ ಇದಕ್ಕೆ ಬಹಳ ದೊಡ್ಡ ಸಾಂಕೇತಿಕ ಅರ್ಥವಿತ್ತು. ಅದನ್ನು ಮೊದಲು ಗ್ರಹಿಸಿದವರು ಅಡಿಗರು. ‘ಕ್ರಾಪು ತಲೆಯು ನವೀನ ಜಗದ ಯುಗದ ಕೇತನ’ ಅಂತ ಅವರು ಬರೀತಾರೆ. ಬ್ರಾಹ್ಮಣ ಹುಡುಗರಿಗೆ ಕ್ರಾಪು ತಲೆ ಒಂದು ಬಾವುಟವೇ ಸರಿ. ಯಾಕೆಂದರೆ ಕ್ರಾಪು ಬಿಟ್ಟರೆ ಅವನೆಲ್ಲೋ ಸ್ವಲ್ಪ ಬ್ರಾಹ್ಮಣಿಕೆಯಿಂದ ದೂರವಾಗುತ್ತಿದ್ದಾನೆ, ಮಡಿವಂತಿಕೆಯಿಂದ ದೂರವಾಗುತ್ತಿದ್ದಾನೆ ಎಂದರ್ಥ.
ನಮ್ಮ ಹಳ್ಳಿಯಲ್ಲಿರುವವರೆಲ್ಲಾ ಸಾಮಾನ್ಯವಾಗಿ ಜುಟ್ಟು ಬಿಟ್ಟವರು. ಆದರೆ ಕ್ಷೌರಿಕ ಮಾತ್ರ ಕ್ರಾಪು ಬಿಟ್ಟಿದ್ದ. ನನ್ನ ಚೌಲಕ್ಕೆ ಅವನೇ ಬೇಕು ಅಂತ ನಾನು ಹಟ ಮಾಡಿದ್ದು ನನಗೆ ಚೆನ್ನಾಗಿ ನೆನಪಿದೆ. ಅತ್ತೂ ಕರೆದು ಇನ್ಯಾರನ್ನಾದರೂ ಕರೆದರೆ ಅವನ ಹತ್ತಿರ ಚೌಲ ಮಾಡಿಸಿಕೊಳ್ಳುವುದಿಲ್ಲ ಎಂದು ಹಠ ಮಾಡಿದ್ದೆ. ಕೊನೆಗೂ ಅವನೇ ಬಂದ. ಚೌಲ ಆಯಿತು. ಕ್ರಾಪ್ ಬಿಡಿಸಿಕೊಂಡೆ.
ನನ್ನ ಅಪ್ಪ ಕೂಡಾ ಕ್ರಾಪು ಜುಟ್ಟಿನ ಮಧ್ಯೆ ಹೋರಾಡುತ್ತಿದ್ದವರು. ನಮ್ಮ ಅಜ್ಜ ವೈದಿಕ ಬ್ರಾಹ್ಮಣ. ಅವರು ಅಲ್ಲಿ ಇಲ್ಲಿ ಹೋಮ, ಹವನ, ಹಬ್ಬ ಮಾಡಿಸುತ್ತಾ ಇಲ್ಲವೇ ಸತ್ಯನಾರಾಯಣ ಪೂಜೆ ಮಾಡಿಸುವುದು, ವ್ರತ ಮಾಡಿಸುವುದಕ್ಕೆಲ್ಲಾ ಹೋಗುತ್ತಿದ್ದರು. ಅವರು ಅಂಗಿಯನ್ನೂ ಹಾಕುತ್ತಿರಲಿಲ್ಲ. ಅವರು ಒಂದು ವಸ್ತ್ರ ಹೊದ್ದುಕೊಳ್ಳುತ್ತಿದ್ದರು. ನನ್ನ ಅಪ್ಪ ಲೌಕಿಕ ಬ್ರಾಹ್ಮಣರು. ಲೌಕಿಕ ಬ್ರಾಹ್ಮಣರು ಅಂದರೆ ಇವರು ಶುಭಾಶುಭ ಸಂದರ್ಭಗಳಿಗೆಲ್ಲಾ ಪುರೋಹಿತರೊಬ್ಬರನ್ನು ಕರೆಯಿಸಿಕೊಳ್ಳಬೇಕೇ ಹೊರತು ಅವರೇ ಪುರೋಹಿತರಲ್ಲ. ಲೌಕಿಕ ಬ್ರಾಹ್ಮಣರಾಗಿಬಿಟ್ಟಿದ್ದ ಅಪ್ಪ ಕ್ರಾಪ್ ಮಾಡಿಸಿಕೊಂಡಿದ್ದರು. ಇದೆಂಥಾ ಕ್ರಾಪ್ ಅಂದರೆ ಇದರ ಮರೆಯಲ್ಲೇ ಒಂದು ಸಣ್ಣ ಜುಟ್ಟೂ ಇರುತ್ತಿತ್ತು.
ನಾನು ನನ್ನ ಅಪ್ಪನ ಬೆಳವಣಿಗೆಯನ್ನು ನೋಡುವುದು ಈ ಕ್ರಾಪು ಜುಟ್ಟುಗಳ ಸಂಕೇತದಲ್ಲಿ. ಒಮ್ಮೊಮ್ಮೆ ಜುಟ್ಟು ದೊಡ್ಡದಾಗುತ್ತಿತ್ತು. ಒಮ್ಮೊಮ್ಮೆ ಕ್ರಾಪು ದೊಡ್ಡದಾಗುತ್ತಿತ್ತು. ಅವರ ಆಲೋಚನಾ ಕ್ರಮದ ಬದಲಾವಣೆಗಳು ಈ ಜುಟ್ಟು-ಕ್ರಾಪುಗಳಲ್ಲಿ ಯಾವುದು ದೊಡ್ಡದಾಗುತ್ತಿದೆ ಎಂಬುದರಲ್ಲಿ ಗೊತ್ತಾಗುತ್ತಿತ್ತು. ನನ್ನ ಹಾಗೆ ಬ್ರಾಹ್ಮಣರ ಕುಲದಲ್ಲೇ ಹುಟ್ಟಿ ಬಂದವನಿಗೆ ಹೊರಗಡೇ ಇಲ್ಲದಿದ್ದರೂ ಒಳಗಡೆ ಒಂದು ಜುಟ್ಟಿರುತ್ತೆ. ನಾನು ನನ್ನ ಒಳಜುಟ್ಟನ್ನು ಹುಡುಕುತ್ತಲೇ ಇರುತ್ತೇನೆ. ಅದು ಇನ್ನೂ ಎಲ್ಲಾದರೂ ಉಳಿದುಕೊಂಡಿರಬಹುದೇ ಎಂದು….
ಇವೆಲ್ಲಾ ಸಾಮಾನ್ಯವಾಗಿರುವಂಥದ್ದು. ಆದರೆ ಒಬ್ಬ ಬರಹಗಾರನಿಗೆ ಮುಖ್ಯವಾದುದರಿಂದ ನಾನಿದನ್ನು ಹೇಳುತ್ತಿದ್ದೇನೆ. ನಮ್ಮ ಅಪ್ಪನಲ್ಲೂ ಒಂದು ಮುಚ್ಚಿಟ್ಟುಕೊಂಡ ಕ್ರಾಪು ಹಾಗೇ ಮುಚ್ಚಿಟ್ಟುಕೊಂಡ ಜುಟ್ಟಿತ್ತು. ಆದರೆ ಅಜ್ಜನಿಗೆ ಜುಟ್ಟು ಮಾತ್ರ ಇತ್ತು.
ಆ ಕಾಲದಲ್ಲಿ ಯಾರಾದರೂ ಕ್ರಾಪ್ ಬಿಟ್ಟಿದ್ದರೆ ಅವರಿಗೂ ನಗರಕ್ಕೂ ಯಾವುದೋ ಸಂಬಂಧವಿದೆ ಎಂದರ್ಥ. ಕ್ರಾಪಿಗೆ ಈಗ ಯಾವ ಅರ್ಥವೂ ಇಲ್ಲ. ಹಿಂದೆ ಇದಕ್ಕೆ ಬಹಳ ದೊಡ್ಡ ಸಾಂಕೇತಿಕ ಅರ್ಥವಿತ್ತು. ಅದನ್ನು ಮೊದಲು ಗ್ರಹಿಸಿದವರು ಅಡಿಗರು. ‘ಕ್ರಾಪು ತಲೆಯು ನವೀನ ಜಗದ ಯುಗದ ಕೇತನ’ ಅಂತ ಅವರು ಬರೀತಾರೆ. ಬ್ರಾಹ್ಮಣ ಹುಡುಗರಿಗೆ ಕ್ರಾಪು ತಲೆ ಒಂದು ಬಾವುಟವೇ ಸರಿ. ಯಾಕೆಂದರೆ ಕ್ರಾಪು ಬಿಟ್ಟರೆ ಅವನೆಲ್ಲೋ ಸ್ವಲ್ಪ ಬ್ರಾಹ್ಮಣಿಕೆಯಿಂದ ದೂರವಾಗುತ್ತಿದ್ದಾನೆ, ಮಡಿವಂತಿಕೆಯಿಂದ ದೂರವಾಗುತ್ತಿದ್ದಾನೆ ಎಂದರ್ಥ.
೪. ಶ್ಯಾನುಭೋಗರ ಕ್ಷೌರ ಮತ್ತು ರಾವು ಬಿಡಿಸಿದ್ದು
ನಮ್ಮ ಅಪ್ಪ ಶಾನುಭೋಗರು. ಶ್ಯಾನುಭೋಗಿಕೆಗಾಗಿ ಬೇರೆ ಬೇರೆ ಊರುಗಳಲ್ಲಿ ಓಡಾಡಬೇಕಾಗಿ ಬರೋದು. ಅವರ ಬಗ್ಗೆ ಇರುವ ನನ್ನ ಅತ್ಯಂತ ಹಳೆಯ ನೆನಪು ಯಾವುದು ಎಂದರೆ ಅವರೊಂದು ರೂಲು ದೊಣ್ಣೆ ಹಿಡಿದುಕೊಂಡು ಲೆಕ್ಕ ಬರೆಯುವ ಉದ್ದನೆಯ ಕಾಗದವನ್ನು ಅದರ ಕೆಳಗೆ ಇಟ್ಟುಕೊಂಡು ದೊಣ್ಣೆಯನ್ನು ತಿರುಗಿಸುತ್ತಾ ಖಾಲಿ ಕಾಗದದ ಮೇಲೆ ಗೆರೆಗಳನ್ನು ಎಳೆಯುತ್ತಿರುವುದು. ಅವರ ಕೈಲಿದ್ದ ಆ ರೂಲ್ ದೊಣ್ಣೆ ಅವರ ಅಧಿಕಾರದ ಸಂಕೇತವಾಗಿಯೂ ಕಾಣಿಸುತ್ತಿತ್ತು. ಎಲ್ಲಿ ರೂಲ್ ದೊಣ್ಣೆ ತಗೊಂಬಾ ಎಂದು ಅವರಂದರೆ ನಾವು ಅದನ್ನು ತೆಗೆದುಕೊಂಡು ಹೋಗಿ ಕೊಡಬೇಕಾಗಿತ್ತು.
ನಮ್ಮ ಅಪ್ಪ ಆಧುನಿಕರಾಗಿದ್ದರು ಎಂಬುದಕ್ಕೆ ಮತ್ತೊಂದು ಸಂಕೇತ ಏನು ಎಂದರೆ ಅವರು ಮುಖ ಕ್ಷೌರವನ್ನು ಬೇರೆಯವರ ಹತ್ತಿರ ಮಾಡಿಸುತ್ತಿರಲಿಲ್ಲ. ತಾವೇ ಮುಖ ಕ್ಷೌರ ಮಾಡಿಕೊಳ್ಳುತ್ತಿದ್ದರು. ಇದಕ್ಕೆ ಅವರ ಹತ್ತಿರ ಒಂದು ಹತಾರ ಇತ್ತು. ಅದೊಂದು ಬೆಲ್ಟ್. ಇದನ್ನು ಕಾಲಿನ ಬೆರಳಿಗೆ ಹಾಕಿಕೊಂಡು ರೇಜರನ್ನು ಆ ಬೆಲ್ಟಿನ ಒಳಗೆ ಮೇಲೆ ಕೆಳಗೆ ಜಾರಿಸುತ್ತಿದ್ದರು. ಆಗ ಅದು ಹರಿತವಾಗುತ್ತಿತ್ತು. ನಮ್ಮಪ್ಪ ಕ್ಷೌರಕ್ಕೆ ಕುಳಿತರೆ ನಾವೆಲ್ಲಾ ಅವರ ಸುತ್ತ ನೆರೆಯುತ್ತಿದ್ದೆವು. ನಾವಷ್ಟೇ ಯಾಕೆ ಹಳ್ಳಿಯವರಿಗೂ ಇದೊಂದು ಕುತೂಹಲಕರ ಸಂಗತಿ. ಹಾಗಾಗಿ ಅವರೂ ಬಂದು ಬಿಡುತ್ತಿದ್ದರು.
ರೇಜರ್ ಹರಿತ ಮಾಡಿದ ಮೇಲೆ ಮುಖದ ತುಂಬಾ ಸೋಪಿನ ಬುರುಗು ಹಚ್ಚಿಕೊಂಡು ಒಂದು ಕನ್ನಡಿಯನ್ನು ಕೈಯಲ್ಲಿ ಹಿಡಿದುಕೊಂಡು ತಮ್ಮ ಕ್ಷೌರ ಕರ್ಮ ಆರಂಭಿಸುತ್ತಿದ್ದರು. ಆಗ ನಮ್ಮ ಮನೆಯಲ್ಲಿ ಇದ್ದದ್ದು ಅದೊಂದೇ ಕನ್ನಡಿ. ಆಗೆಲ್ಲಾ ಹೀಗೆಯೇ. ಮನೆಗೆ ಒಂದೊಂದೇ ಕನ್ನಡಿಗಳು. ಒಂದೊಂದು ಸಾರಿ ಮಾತ್ರ ಗೋಡೆಗೆ ಅಂಟಿಸಿರುವ ಸಣ್ಣ ಕನ್ನಡಿಗಳು ಇರುತ್ತಿದ್ದವು. ಊಟ ಆದ ಮೇಲೆ ಅಕ್ಷತೆ ಇಟ್ಟುಕೊಳ್ಳುವಾಗ ಅದನ್ನು ನೋಡಿಕೊಳ್ಳುವುದಕ್ಕೆ ಅನುಕೂಲವಾಗುವಂತೆ ಇವನ್ನು ಇಟ್ಟಿರಲಾಗುತ್ತದೆ. ಹೆಂಗಸರು ಕುಂಕುಮ ಇಟ್ಟುಕೊಳ್ಳಲೂ ಇವನ್ನೇ ಬಳಸುತ್ತಾರೆ. ನಮ್ಮಪ್ಪನ ಹೆಗ್ಗಳಿಕೆ ಏನೂ ಅಂದರೆ ಅವರಲ್ಲಿ ಕೈಯಲ್ಲಿ ಹಿಡಿದುಕೊಳ್ಳುವಂಥ ಒಂದು ಕನ್ನಡಿ ಇತ್ತು ಎಂಬುದು.
ಇದು ಅವರಿಗೆ ಎಲ್ಲಿಂದ ಬಂತು ಎನ್ನುವುದಕ್ಕೆ ಒಂದು ಇತಿಹಾಸವಿದೆ. ಅವರು ಇದ್ದ ಹಳ್ಳಿಯಲ್ಲಿ ಅವರ ಅಪ್ಪನಿಗೆ ಅಂದರೆ ನಮ್ಮ ಅಜ್ಜನಿಗೆ ಗೊತ್ತಾಗದ ಹಾಗೆ ಯಾರು ಯಾರ ಹತ್ತಿರವೋ ಇಂಗ್ಲಿಷ್ ಪುಸ್ತಕಗಳನ್ನು ತರಿಸಿಕೊಂಡು ಗುಪ್ತವಾಗಿ ಲಂಡನ್ ಮೆಟ್ರಿಕ್ಯುಲೇಶನ್ ಪಾಸು ಮಾಡಿಕೊಂಡಿದ್ದರು. ದಿಲ್ಲಿಗೆ ಹೋಗಿ, ಬನಾರಸಿಗೆ ಹೋಗಿ, ಅಲ್ಲೇ ಕಾಶಿಯಲ್ಲಿ ಸ್ವಲ್ಪ ದಿನ ಇದ್ದು ಆಮೇಲೆ ರೈಲ್ವೇ ಸ್ಟೇಷನ್ ಮಾಸ್ಟರ್ ಆಗಿದ್ದರು. ಈ ಕೆಲಸವನ್ನು ಅವರಿಗೆ ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ ಏಕೆಂದರೆ ಅವರಿಗೊಂದು ಜ್ವರ ಗೆಡ್ಡೆಯಿತ್ತು. ಮಲೆನಾಡಿನವರಿಗೆಲ್ಲಾ ಆ ಕಾಲದಲ್ಲಿ ಜ್ವರದ ಗೆಡ್ಡೆಗಳು ಸಾಮಾನ್ಯ. ಆ ಸಮಯದಲ್ಲೇ ಅಪ್ಪ ಈ ಕನ್ನಡಿ, ರೇಜರ್ ಇತ್ಯಾದಿಗಳನ್ನೆಲ್ಲಾ ಸಂಪಾದಿಸಿದ್ದೂ ಅವುಗಳನ್ನು ಬಳಸಲು ಅಭ್ಯಾಸ ಮಾಡಿಕೊಂಡಿದ್ದು. ಅವರ ಹತ್ತಿರ ಒಂದು ಕ್ಯಾಮೆರಾ ಕೂಡಾ ಇತ್ತು. ಬಾಕ್ಸ್ ಕ್ಯಾಮೆರಾ. ಒಂದು ರೀತಿಯಲ್ಲಿ ನಮ್ಮ ಅಪ್ಪನೇ ಮೊದಲು ಆಧುನಿಕತೆಯನ್ನು ನಮ್ಮ ಹಳ್ಳಿಗೆ ತಂದದ್ದು.
ಇನ್ನೊಂದು ಬಾಲ್ಯದ ದಟ್ಟವಾದ ನೆನಪು ನನ್ನ ತಮ್ಮನೊಬ್ಬನದ್ದು. ನನಗೆ ವೆಂಕಟೇಶಮೂರ್ತಿ ಎಂಬ ತಮ್ಮನೊಬ್ಬನಿದ್ದ. ನನಗಿಂತ ಎರಡೇ ವರ್ಷ ಚಿಕ್ಕವನು. ಅವನಿಗೆ ಆಗೀಗ ಮೂರ್ಛೆ ಬರುತ್ತಿತ್ತು. ಒಂದು ಸಾರಿ ಹೀಗೆ ಮೂರ್ಛೆ ಹೋದವನಿಗೆ ಎಚ್ಚರ ಆಗಲೇ ಇಲ್ಲ. ನಮ್ಮ ಹಳ್ಳಿಯಿಂದ ಸ್ವಲ್ಪದೂರದಲ್ಲಿ ಒಬ್ಬರು ಪೋಸ್ಟ್ ಮಾಸ್ಟರ್ ಇದ್ದರು. ನಮ್ಮ ಹಳ್ಳಿಯಿಂದ ನಾಲ್ಕು ಕಿಲೋಮೀಟರ್ ಕಾಡಿನಲ್ಲೇ ಹೋದರೆ ಅಲ್ಲೊಂದು ಪೋಸ್ಟಾಫೀಸು. ದಿನಕ್ಕೊಂದು ಸಾರಿ ಆ ದಾರಿಯಲ್ಲಿ ಬರುವ ಬಸ್ ಪೋಸ್ಟ್ ಬ್ಯಾಗ್ ತರುತ್ತಿತ್ತು. ಈ ಬ್ಯಾಗನ್ನು ಪೋಸ್ಟ್ ಮಾಸ್ಟರು ಬಿಚ್ಚುವ ಹೊತ್ತಿಗೆ ಕಾಗದಕ್ಕಾಗಿ ಕಾಯುತ್ತಿದ್ದ ಜನರೆಲ್ಲಾ ಅಲ್ಲಿ ಸೇರುತ್ತಿದ್ದರು.
ಈ ಪೋಸ್ಟ್ ಮಾಸ್ಟರ್ ಸ್ವಲ್ಪ ಮಂತ್ರ-ಗಿಂತ್ರ ಎಲ್ಲಾ ಹೇಳುತ್ತಿದ್ದರು. ನಮ್ಮ ಅಪ್ಪ ಹೋಗಿ ಅವರನ್ನು ಕರೆದುಕೊಂಡು ಬಂದರು. ಅವರು ಬಂದು ನಮ್ಮ ಅಪ್ಪ ಅಮ್ಮನ ಜತೆ…. ಇಟ್ಟುಕೊಂಡು ಮೃತ್ಯುಂಜಯ ಜಪ ಮಾಡಿದರು. ಮೃತ್ಯುಂಜಯ ಜಪವನ್ನು ಅವರು ಹಗಲೂ ರಾತ್ರಿ ಊಟ ನಿದ್ರೆ ಮಾಡದೇ ಮಾಡಿದರು. ಇದರಿಂದ ಅವರು ಪೋಸ್ಟ್ ಮಾಸ್ಟರ್ ಕೆಲಸವನ್ನೇ ಕಳೆದುಕೊಂಡರು. ಅಂದರೆ ಪೋಸ್ಟ್ ಬ್ಯಾಗ್ ಬರುವಾಗ ಅವರಲ್ಲಿ ಇರದೇ ಅದೇ ಹಗರಣವಾಗಿಬಿಟ್ಟಿತು. ಈ ಸತತ ಮೃತ್ಯುಂಜಯ ಜಪ ಮಾಡುತ್ತಲೇ ಅವರು ಒಂದು ಬಳೆಯ ಓಡನ್ನು ಸಣ್ಣ ದೀಪದಲ್ಲಿ ಕಾಯಿಸಿ ನನ್ನ ತಮ್ಮನ ದೇಹಕ್ಕೆ ತಗುಲಿಸುತ್ತಿದ್ದರು. ಇದೂ ಒಂದು ಔಷಧ. ಹೀಗೆ ಅವನ ಕೈತುಂಬಾ ಸುಟ್ಟಿದ್ದರು. ಕೊನೆಗೆ ಅವನಿಗೆ ಎಚ್ಚರವಾಯಿತು.
ಈ ನನ್ನ ತಮ್ಮ ಬಹಳ ವಿಚಿತ್ರವಾದವನು. ಅವನು ಜೀರಿಗೆ ಮೆಣಸಿನಕಾಯಿಯನ್ನು ಕಚ ಕಚ ಅಗಿದು ನುಂಗಿಬಿಡುತ್ತಿದ್ದ. ಇದಕ್ಕೆ ಸಂಬಂಧಿಸಿದ ಪಂಥಗಳಲ್ಲಿ ಭಾಗವಹಿಸಿ ದುಡ್ಡು ಗೆಲ್ಲುತ್ತಿದ್ದ. ಅವನಿಗೆ ಖಾರವೇ ಆಗುತ್ತಿರಲಿಲ್ಲ. ಅವನಿಗೆ ನಮ್ಮಲ್ಲಿ ರಾವು ಎನ್ನುವ ಒಂದು ಮಕ್ಕಳ ಕಾಯಿಲೆ ಇತ್ತು. ಈ ರಾವು ಬಂದವರು ಸಿಕ್ಕಾಪಟ್ಟೆ ತಿನ್ನುತ್ತಾರೆ. ನನ್ನ ತಮ್ಮ ಏನು ಕೊಟ್ಟರೂ ತಿಂದೂ ತಿಂದೂ ತಿನ್ನಲು ಕೊಡುವವರಿಗೆ ಭಯ ಹುಟ್ಟಿಸುತ್ತಿದ್ದ. ಊಟಕ್ಕೆ ಕುಳಿತರೆ ಏಳುತ್ತಲೇ ಇರಲಿಲ್ಲ. ಮನೆಯವರೆಲ್ಲಾ ಇವನಿಗೆ ರಾವು ಬಾಧಿಸಿದೆ. ಅದನ್ನು ಬಿಡಿಸಬೇಕು ಎಂದು ತೀರ್ಮಾನಿಸಿದರು.
ನನಗೆ ಆಶ್ಚರ್ಯ ಹುಟ್ಟಿಸಿದ ಒಂದು ವಿಚಾರ ಅಂದರೆ ಈ ರಾವು ಬಿಡಿಸುವ ಕ್ರಿಯೆಯ ವರ್ಣನೆ ದೇವನೂರು ಮಹಾದೇವರ ಒಂದು ಕತೆಯಲ್ಲಿಯೂ ಇದೆ. ಒಬ್ಬ ಬ್ರಾಹ್ಮಣನಿಗೂ ದಲಿತನಿಗೂ ಸಾಮಾನ್ಯವಾದ ಆಚರಣೆಗಳಿವು. ಇಲ್ಲಿ ರಾವು ಬಿಡಿಸುವ ಹಬ್ಬವನ್ನು ನೆನಪಿಸಿಕೊಳ್ಳುತ್ತೇನೆ. ನಾವೆಲ್ಲಾ ಊಟಕ್ಕೆ ಕೂತಿದ್ದೇವೆ. ಎರಡು ಮೂರು ಸಾಲು. ವೆಂಕಟೇಶನಿಗೆ ಬಡಿಸಿದರೂ ಬಡಿಸಿದರು ತಿಂದ, ತಿಂದ ಕೊನೆಗೆ ಸಾಕು ಎನ್ನುವುದಕ್ಕೆ ಶುರು ಮಾಡಿದ. ಇಲ್ಲ, ತಿನ್ನು. ತಿನ್ನಲೇ ಬೇಕು ನೀನು ಹಠ ಮಾಡಿ ಅವನಿಗೆ ವಾಂತಿಯಾಗುವ ತನಕ ತಿನ್ನಿಸುವುದು ಆಗ ರಾವು ಬಿಡುತ್ತೆ ಎನ್ನುವುದು ನಂಬಿಕೆ. ಈ ರಾವು ಬಿಡಿಸುವ ಕ್ರಿಯೆ ನೆನಪಾದಗಲೆಲ್ಲಾ ನಮಗೆ ಬಡಿದಿರುವ ಆಧುನಿಕತೆಯ ರಾವೂ ಜ್ಞಾಪಕಕ್ಕೆ ಬರುತ್ತೆ. ಅದು ಬೇಕು, ಇದು ಬೇಕು, ಆ ಗ್ಯಾಡ್ಜೆಟ್ ಬೇಕು, ಈ ಗ್ಯಾಡ್ಜೆಟ್ ಬೇಕು, ಅಮೆರಿಕ ಬೇಕು ಹೀಗೆ, ಈ ರಾವಿದೆಯಲ್ಲಾ ಇದು ಬಿಡುತ್ತೆ ಅಂದ್ಕೊಂಡಿದ್ದೀನಿ. ರಾವು ಬಿಡಿಸುವ ಕ್ರಿಯೆಯಂತೆಯೇ ಅತಿಯಾದಾಗ ಅದು ಬಿಟ್ಟುಹೋಗುತ್ತೆ. ವೆಂಕಟೇಶನಿಗೆ ಹಾಗೆ ತಿನ್ನಿಸಿದ ಮೇಲೆ ಅವನು ಸರಿಯಾಗಿಬಿಟ್ಟ.
ಈ ನನ್ನ ತಮ್ಮ ಬಹಳ ವಿಚಿತ್ರವಾದವನು. ಅವನು ಜೀರಿಗೆ ಮೆಣಸಿನಕಾಯಿಯನ್ನು ಕಚ ಕಚ ಅಗಿದು ನುಂಗಿಬಿಡುತ್ತಿದ್ದ. ಇದಕ್ಕೆ ಸಂಬಂಧಿಸಿದ ಪಂಥಗಳಲ್ಲಿ ಭಾಗವಹಿಸಿ ದುಡ್ಡು ಗೆಲ್ಲುತ್ತಿದ್ದ. ಅವನಿಗೆ ಖಾರವೇ ಆಗುತ್ತಿರಲಿಲ್ಲ. ಅವನಿಗೆ ನಮ್ಮಲ್ಲಿ ರಾವು ಎನ್ನುವ ಒಂದು ಮಕ್ಕಳ ಕಾಯಿಲೆ ಇತ್ತು. ಈ ರಾವು ಬಂದವರು ಸಿಕ್ಕಾಪಟ್ಟೆ ತಿನ್ನುತ್ತಾರೆ. ನನ್ನ ತಮ್ಮ ಏನು ಕೊಟ್ಟರೂ ತಿಂದೂ ತಿಂದೂ ತಿನ್ನಲು ಕೊಡುವವರಿಗೆ ಭಯ ಹುಟ್ಟಿಸುತ್ತಿದ್ದ.
೫.ತಮ್ಮನ ಸಾವೆಂಬ ನೋವು
ನನ್ನ ತಮ್ಮ ವೆಂಕಟೇಶ ಬಹಳ ಬುದ್ಧಿವಂತನಾದ. ಗಣಿತದಲ್ಲಿ ಬಹಳ ಚತುರ. ನನ್ನ ಜತೆ ಹಾಸನಕ್ಕೆ ಬಂದು ಇಂಜಿನಿಯರಿಂಗ್ ಮಾಡಿದ. ಅಲ್ಲಿಂದ ಕೊಚ್ಚಿನ್ ಗೆ ಹೋದ. ಅಲ್ಲಿಂದ ನನಗೊಂದು ಕಾಗದ ಬರೆದು ನನಗೆ ಕಲ್ಕತ್ತಾದಲ್ಲೊಂದು ಕೆಲಸ ಸಿಕ್ಕಿದೆ. ಅಲ್ಲಿಗೆ ಹೋಗಬೇಕು. ನನಗೊಂದಿಷ್ಟು ದುಡ್ಡು ಕಳುಹಿಸು ಎಂದು ಕೇಳಿದ್ದ. ನಾನು ಕಳುಹಿಸುವುದಕ್ಕೆಂದು ಸಿದ್ಧನಾಗಿದ್ದೆ. ಅವನ ಮುಂದಿನ ಕಾಗದಕ್ಕೆಂದು ನಾನು ಕಾಯುತ್ತಿದ್ದರೆ ಕಾಗದದ ಬದಲಿಗೆ ಒಂದು ಟೆಲಿಗ್ರಾಂ ಬಂತು-ವೆಂಕಟೇಶ ಸತ್ತು ಹೋದ!
ನನ್ನ ಬಾಲ್ಯದಿಂದ ಬಂದ ಎಲ್ಲವನ್ನೂ ನೆನಪು ಮಾಡುವ ಘಟನೆ ಎಂದರೆ ನನ್ನ ತಮ್ಮ ದಿಢೀರ್ ಎಂದು ಸತ್ತದ್ದು. ಅವನು ಸತ್ತು ಹೋದ ಸುದ್ದಿ ಬಂದ ಮರುದಿನವೇ ನನ್ನ ಸೋದರ ಮಾವನ ಮದುವೆ. ಗೋಣಿಬೀಡು ಎಂಬ ಊರಿನಲ್ಲಿ ನಡೆಯುವ ಈ ಮದುವೆಗಾಗಿ ನನ್ನ ಅಪ್ಪ ಅಮ್ಮ ಎಲ್ಲಾ ಬಂದಿದ್ದರು. ನಾನು ಹಾಸನದಲ್ಲಿ ಲೆಕ್ಚರರ್ ಆಗಿದ್ದೆ. ಗೋಣಿಬೀಡಿಗೆ ಹೋಗಿ ಮದುವೆ ನಿಲ್ಲಿಸಬೇಕು. ಆ ಮೇಲೆ ಕೊಚ್ಚಿನ್ ಗೆ ಹೋಗಿ ನನ್ನ ತಮ್ಮನ ಮೃತದೇಹದ ವಿಲೇವಾರಿ ಮಾಡಬೇಕು.
ನನ್ನ ಹಾಸನದ ಮನೆಯಲ್ಲಿ ಸಣ್ಣ ಅಕ್ವೇರಿಯಂನಲ್ಲಿ ಮೀನು ಸಾಕುತ್ತಿದ್ದೆ. ತಮ್ಮ ಸತ್ತ ಟೆಲಿಗ್ರಾಂ ಬಂದಾಗ ಈ ಮೀನುಗಳ ಎದುರೇ ಇದ್ದೆ. ಆ ಮೀನುಗಳೆಲ್ಲಾ ಜೀವಂತವಾಗಿ ಓಡಾಡುತ್ತಿರುವಾಗ ನನ್ನ ತಮ್ಮ ಸತ್ತು ಹೋಗಿದ್ದ ಸುದ್ದಿಯ ಜತೆ ನಾನು ಕುಳಿತಿದ್ದೆ. ಇದೊಂದು ವಿಚಿತ್ರ. ಯಾರಾದರೂ ಸತ್ತಾಗ ಒಂದು ಇರುವೆ ಕೂಡಾ ಬದುಕಿರುವುದು ನಮಗೆ ಕಾಣಿಸತೊಡಗುತ್ತದೆ. ಅದನ್ನು ನೋಡಿದಾಗ ಈ ಇರುವೆ ಬದುಕಿದೆ, ಆದರೆ ನಾನು ಪ್ರೀತಿಸುವವನೊಬ್ಬ ಇಲ್ಲ ಅನ್ನಿಸತೊಡಗುತ್ತದೆ.
ಈ ದಿನಗಳಲ್ಲಿ ಎಸ್ತರ್ ನನ್ನ ವಿದ್ಯಾರ್ಥಿಯಾಗಿದ್ದಳು. ನಾವಿಬ್ಬರೂ ಮದುವೆಯಾಗಬೇಕೆಂದು ನಿರ್ಧರಿಸಿದ್ದೆವು. ಆದರೆ ಯಾರಿಗೂ ಗೊತ್ತಾಗದೇ ಇರುವಂತೆ ನೋಡಿಕೊಳ್ಳಲು ಪ್ರಯತ್ನಿಸಿದ್ದೆವು. ಇದಕ್ಕಿದ್ದ ಕಾರಣ ಸರಳ. ಇದು ಬಯಲಾದರೆ ಹುಡುಗರು ಗಲಾಟೆ ಮಾಡುತ್ತಾರೆ ಎಂಬ ನಮ್ಮ ಭಯ. ನನ್ನ ತಮ್ಮನ ಸಾವಿನ ಸುದ್ದಿ ಬಂದ ದಿನ ನಮ್ಮ ಮನೆಗೆ ಬಂದ ಎಸ್ತರ್ ಸುದ್ದಿ ಕೇಳಿ ನನ್ನನ್ನು ಆಲಿಂಗಿಸಿಕೊಂಡಳು. ಆ ಕ್ಷಣವೇ ನಾನವಳನ್ನು ಮದುವೆಯಾಗುತ್ತೇನೆ ಎಂಬುದು ಖಚಿತವಾಯಿತು. ಯಾಕೆಂದರೆ ಆ ಸಂದರ್ಭದಲ್ಲಿ ಎಲ್ಲಾ ಮರೆತಳಲ್ಲಾ. ಒಂದು ರೀತಿಯ ಅಪೂರ್ವವಾದ ಜೆನ್ವಿನ್‌ನೆಸ್ ವ್ಯಕ್ತವಾಯಿತಲ್ಲ…
ನಾನೆದ್ದು ಗೋಣಿಬೀಡಿಗೆ ಹೋದೆ. ಅಲ್ಲೆಲ್ಲಾ ಮದುವೆಗೆ ಸೇರಿದ್ದರು. ‘ವೆಂಕಟೇಶನಿಗೆ ಬಹಳ ಹುಶಾರಿಲ್ಲ. ಕೊಚ್ಚಿನ್ ಗೆ ಹೋಗಬೇಕು. ಮದುವೆಯನ್ನು ಮುಂದೆ ಹಾಕಿ’ ಎಂದೆ. ಅಷ್ಟು ಹೊತ್ತಿಗೇ ಹಲವರಿಗೆ ನಾನು ಸತ್ಯವನ್ನು ಮುಚ್ಚಿಡುತ್ತಿದ್ದೇನೆ ಎಂದು ಗೊತ್ತಾಯಿತು. ನಾನು ಯಾರನ್ನೋ ಕರೆದುಕೊಂಡು ಕೊಚ್ಚಿನ್ ಗೆ ಹೋದೆ. ಹೋಗಿ ನೋಡಿದಾಗ ವೆಂಕಟೇಶನಿಗೆ ಟೈಫಾಯ್ಡ್ ಆಗಿತ್ತು ಎಂದು ತಿಳಿಯಿತು. ಅದರ ಬಗ್ಗೆ ಅವನದ್ದು ನಿರ್ಲಕ್ಷ್ಯ. ತಾನು ಕಲ್ಕತ್ತಾಕ್ಕೆ ಹೋಗುತ್ತಿದ್ದೇನೆಂದು ಗೆಳೆಯರಿಗೆಲ್ಲಾ ಒಂದು ಪಾರ್ಟಿ ಕೊಟ್ಟಿದ್ದಾನೆ. ಎಲ್ಲರೂ ಚೆನ್ನಾಗಿ ತಿಂದಿದ್ದಾರೆ. ಆ ಕಾಲದಲ್ಲಿ ನಾನು ಬಿಯರ್ ಕುಡಿಯುತ್ತಿದ್ದೆನಾದ್ದರಿಂದ ಅವನೂ ಕುಡಿದಿರಬಹುದು ಎಂದುಕೊಳ್ಳುತ್ತೇನೆ. ಇದರಿಂದೆಲ್ಲಾ ಅವನಿಗೆ ನಂಜಾಗಿ ಅವನ ಪ್ರಾಣವೇ ಎರವಾಗಿದೆ.
ಅವನು ಬದುಕಿನ ಬೇರೆ ಯಾವುದೋ ಒಂದು ದಾರಿಯಲ್ಲಿದ್ದ. ಯಾಕೆಂದರೆ ಅವನ ಟ್ರಂಕ್ ತಂದೆನಲ್ಲಾ ಅದರಲ್ಲಿ ಸಿಕ್ಕ ಕಾಗದಗಳನ್ನು ನೋಡಿದ ಮೇಲೆ ಅವನೊಂದು ಹುಡುಗಿಯನ್ನು ಪ್ರೀತಿಸುತ್ತಿದ್ದ ಎಂಬುದು ಗೊತ್ತಾಯಿತು. ನಾನು ಹೇಗೆ ಜಾತಿಯಿಂದ ಹೊರಗೆ ಮದುವೆಯಾದೆನೋ ಹಾಗೆಯೇ ಅವನೂ ಜಾತಿಯಿಂದ ಹೊರಗೇ ಮದುವೆಯಾಗುತ್ತಿದ್ದ. ಅದನ್ನು ನಾನು ಯಾವತ್ತೂ ನಮ್ಮ ಅಮ್ಮನಿಗೆ ಹೇಳಲಿಕ್ಕೇ ಹೋಗಲಿಲ್ಲ. ಈಗ ನನ್ನ ಅಮ್ಮ ಇಲ್ಲದೇ ಇರುವುದರಿಂದ ಧೈರ್ಯವಾಗಿ ಹೇಳಬಹುದಷ್ಟೇ. ನಾನು ಹೀಗಾದ ಮೇಲೆ ಉಳಿದ ಮಕ್ಕಳಾದರೂ ಸರಿಯಾಗಿದ್ದಾರೆ ಎಂದು ತಿಳಿದುಕೊಂಡಿದ್ದ ಅವಳ ನಂಬಿಕೆಯನ್ನು ಹಾಳು ಮಾಡಬಾರದು ಎಂದು ಈ ವಿವರವನ್ನು ಹೇಳಿರಲಿಲ್ಲ.
ವೆಂಕಟೇಶನ ಟ್ರಂಕ್ ನಲ್ಲಿ ಆ ಹುಡುಗಿ ಬರೆದ ಕಾಗದಗಳೆಲ್ಲಾ ಇದ್ದವು. ಕೊಚ್ಚಿನ್ ನಲ್ಲೇ ಇವುಗಳನ್ನು ನೋಡಿದೆನಾದರೂ ನಾನು ಆ ಹುಡುಗಿಯನ್ನು ನೋಡಲು ಹೋಗಲಿಲ್ಲ. ಸುಮ್ಮನೇ ಬಂದು ಬಿಟ್ಟೆ. ಆಕೆ ಕೂಡಾ ಅವನ ಅಂತಿಮ ದರ್ಶನಕ್ಕೆ ಬರಲಿಲ್ಲ. ನಮ್ಮ ಅಪ್ಪನೂ ಜತೆಗೆ ಕೊಚ್ಚಿನ್ ಗೆ ಬಂದಿದ್ದರು. ಅಲ್ಲೇ ಅಂತ್ಯ ಕ್ರಿಯೆಗಳನ್ನು ನಡೆಸಿದೆವು. ಆ ಮೇಲೆ ಹಿಂದಕ್ಕೆ ಬಂದೆವು. ಅಪ್ಪ ಮಂಕಾಗಿಬಿಟ್ಟಿದ್ದರು.
ಈ ದಿನಗಳಲ್ಲಿ ಎಸ್ತರ್ ನನ್ನ ವಿದ್ಯಾರ್ಥಿಯಾಗಿದ್ದಳು. ನಾವಿಬ್ಬರೂ ಮದುವೆಯಾಗಬೇಕೆಂದು ನಿರ್ಧರಿಸಿದ್ದೆವು. ಆದರೆ ಯಾರಿಗೂ ಗೊತ್ತಾಗದೇ ಇರುವಂತೆ ನೋಡಿಕೊಳ್ಳಲು ಪ್ರಯತ್ನಿಸಿದ್ದೆವು. ಇದಕ್ಕಿದ್ದ ಕಾರಣ ಸರಳ. ಇದು ಬಯಲಾದರೆ ಹುಡುಗರು ಗಲಾಟೆ ಮಾಡುತ್ತಾರೆ ಎಂಬ ನಮ್ಮ ಭಯ. ನನ್ನ ತಮ್ಮನ ಸಾವಿನ ಸುದ್ದಿ ಬಂದ ದಿನ ನಮ್ಮ ಮನೆಗೆ ಬಂದ ಎಸ್ತರ್ ಸುದ್ದಿ ಕೇಳಿ ನನ್ನನ್ನು ಆಲಿಂಗಿಸಿಕೊಂಡಳು. ಆ ಕ್ಷಣವೇ ನಾನವಳನ್ನು ಮದುವೆಯಾಗುತ್ತೇನೆ ಎಂಬುದು ಖಚಿತವಾಯಿತು
೬. ಅಜ್ಜ, ಅಣ್ಣಪ್ಪನಾಯಕ ಮತ್ತು ನನ್ನ ಕ್ರಾಪು ತಲೆ
ವೆಂಕಟೇಶನ ಬದುಕನ್ನು ನಮ್ಮ ಅಜ್ಜನ ಬದುಕಿನ ಜತೆಗೆ ಹೋಲಿಸಿದರೆ ಬಹಳ ಸಾಮ್ಯತೆಗಳು ಕಾಣಿಸುತ್ತವೆ. ನಮ್ಮ ಅಜ್ಜನೂ ಒಂದು ಕಾಲದಲ್ಲಿ ಮನೆ ಬಿಟ್ಟು ಕೇರಳಕ್ಕೆ ಹೋದವರು. ಅವರ ತಾಯಿಯನ್ನು ಸಂಬಂಧಿಕರ್ಯಾರೋ ಸರಿಯಾಗಿ ನೋಡಿಕೊಳ್ಳಲಿಲ್ಲ ಎಂದು ಸಿಟ್ಟು ಮಾಡಿಕೊಂಡು ಒಂದು ಚೀಲ ಹುಣಸೇಹಣ್ಣನ್ನು ಹೊತ್ತುಕೊಂಡು ಅದನ್ನು ಮಾರುತ್ತಾ ಕೇರಳ ತಲುಪಿ ರಾಜಾ ರವಿವರ್ಮ ಇದ್ದ ಮನೆಗೆ ಹೋಗಿದ್ದರಂತೆ. ಅಲ್ಲಿ ಹೋಗಿ ಬಾಗಿಲು ತಟ್ಟಿದಾಗ ಯಾರೋ ಬಾಗಿಲು ತೆರೆದರಂತೆ. ರವಿವರ್ಮ ಹುಡುಗ ಚೆನ್ನಾಗಿದ್ದಾನೆ ಎಂದು ದೀಪಧಾರಿಯ ಕೆಲಸ ಕೊಟ್ಟನಂತೆ. ಅವನು ಚಿತ್ರ ಬರೆಯುವಾಗ ದೀಪ ಹಿಡಿದು ನಿಲ್ಲುವುದು ನನ್ನ ಅಜ್ಜನ ಕೆಲಸವಾಗಿತ್ತಂತೆ. ನನ್ನ ಅಜ್ಜ ಬ್ರಾಹ್ಮಣರು ಎಂದು ಗೊತ್ತಾದ ಮೇಲೆ ಪುರೋಹಿತರಾಗಿ ಕೆಲಸ ಮಾಡಲು ಬೇಕಿರುವ ವಿದ್ಯೆಯನ್ನೂ ಕಲಿಯಲು ಅವಕಾಶ ಮಾಡಿಕೊಟ್ಟು ಪುರೋಹಿತರನ್ನಾಗಿ ಮಾಡಿದರಂತೆ. ಅಲ್ಲಿ ಜಾನಕಿ ಎಂಬಾಕೆಯನ್ನು ನನ್ನ ಅಜ್ಜ ಕೂಡಿಕೆ ಮಾಡಿಕೊಂಡು ಆಕೆಯಿಂದ ಒಂದು ಮಗುವಾಗಿತ್ತಂತೆ. ನನ್ನ ಅಜ್ಜಿಯನ್ನು ಮದುವೆ ಮಾಡಿಸಿದ್ದೂ ಈಕೆಯೇ ಅಂತೆ. ನನ್ನ ಅಜ್ಜ ಈಕೆಯನ್ನು ಮ್ಯಾಜಿಸ್ಟ್ರೇಟರ ಮಗಳು ಎಂದು ಹೊಗಳುತ್ತಿದ್ದರು.
ನಮ್ಮ ವೆಂಕಟೇಶನೂ ಬದುಕಿದ್ದರೆ ನಮ್ಮ ಅಜ್ಜ ಮಾಡಿದ ಕೆಲಸವನ್ನೇ ಕೇರಳದಲ್ಲಿ ಮಾಡುತ್ತಿದ್ದ ಅನಿಸುತ್ತದೆ.
ನಾವು ದೊಡ್ಡವರಾಗುತ್ತಿದ್ದಂತೆ ನಮ್ಮ ಅಪ್ಪ ಕೆರೆಕೊಪ್ಪ ಬಿಟ್ಟು ಬೇಗವಳ್ಳಿ ಎಂಬ ಊರಿಗೆ ಬಂದರು. ಇದು ಕೆರಕೊಪ್ಪಕ್ಕಿಂತ ದೊಡ್ಡ ಊರು. ನಾವು ಸ್ಕೂಲಿಗೆ ಹೋಗುವುದಕ್ಕೂ ಅನುಕೂಲವಾಗುತ್ತಿತ್ತು. ಅಲ್ಲಿಯೂ ಶಾನುಬೋಗಿಕೆಯನ್ನು ಮುಂದುವರಿಸಿದರು. ಆಗ ಅನೇಕ ರೀತಿಯ ಅನುಭವಗಳು ನನಗಾದುವು. ಒಬ್ಬ ಶಾನುಭೋಗ ಆಗಿದ್ದರೆ ಆತ ಹಳ್ಳಿಯಲ್ಲಿ ಬಹಳ ಮುಖ್ಯ ವ್ಯಕ್ತಿ. ಇನ್ನೊಬ್ಬ ಮುಖ್ಯ ವ್ಯಕ್ತಿ ಪಟೇಲ. ಆ ಊರಿನ ಪಟೇಲರು ಅಣ್ಣಪ್ಪ ನಾಯಕ ಎಂಬವರು. ಅಣ್ಣಪ್ಪ ನಾಯಕ ಒಂದು ಕೇಕೆ ಹಾಕಿದರೆ ಅದು ಮೈಲುಗಟ್ಟಲೆ ಸುತ್ತಳತೆಯಲ್ಲಿ ಕೇಳಿಸುತ್ತಿತ್ತು. ಅಣ್ಣಪ್ಪ ನಾಯಕ ತನ್ನ ಅಧಿಕಾರವನ್ನು ಸ್ಥಾಪಿಸಿದ್ದೇ ಈ ಕೇಕೆಯ ಮೂಲಕ ಎನಿಸುತ್ತದೆ. ಈ ಅಣ್ಣಪ್ಪ ನಾಯಕ ಈಡಿಗ ಜಾತಿಯವರು. ಶಾನುಬೋಗರಾಗಿದ್ದ ನಮ್ಮ ಅಪ್ಪ ಮತ್ತು ಅಣ್ಣಪ್ಪನಾಯಕರ ಮಧ್ಯೆ ಬಹಳ ಒಳ್ಳೆಯ ಹೊಂದಾಣಿಕೆ ಇತ್ತು. ವರ್ಷಕ್ಕೊಮ್ಮೆ ಜಮಾ ಬಂದಿ ನಡೆಯೋದು. ಈ ಜಮಾ ಬಂದಿ ಅಂದರೆ ನಮ್ಮ ಅಮ್ಮನಿಗೆ ಪತ್ರೊಡೆ ಮಾಡುವ ಕೆಲಸ. ಊರಿನಲ್ಲಿ ಎಲ್ಲೆಲ್ಲಿ ಕೆಸುವಿನ ಸೊಪ್ಪಿದೆ ಎಂದು ಹುಡುಕಿ. ಅದನ್ನು ಹೆಚ್ಚಿ ಅದಕ್ಕೆ ಬೇಕಾದ ಪದಾರ್ಥ ಎಲ್ಲಾ ಹಾಕಿ ಬೇರೇ ಹೆಂಗಸರನ್ನೂ ಸೇರಿಸಿ ಜಮಾ ಬಂದಿಗೆ ಸೇರಿದ ನೂರಾರು ಜನರಿಗೆ ತಿನ್ನಲು ಸಾಕಾಗುವಷ್ಟು ಪತ್ರೊಡೆ ಮಾಡುತ್ತಿದ್ದರು.
ಜಮಾಬಂದಿ ಅಂದರೆ ಒಂದು ರೀತಿ ಅಸೆಂಬ್ಲಿ ಇದ್ದ ಹಾಗೆ. ಅಮಲ್ದಾರರೂ ಬರುತ್ತಿದ್ದರು. ಅಮಲ್ದಾರರು ಅಂದರೆ ಇರೋ ಚಿತ್ರ ಏನು ಅಂದರೆ ಆ ಪಿಕ್ ಹ್ಯಾಟ್. ಬಿಸಿಲಿಗೆ ಅಂತ ಹಾಕಿಕೊಳ್ಳುವ ಹ್ಯಾಟ್ ಅದು. ಹಿಂದೆ ಎಲ್ಲರೂ ಅಂದರೆ ಬ್ರಿಟಿಷರೂ ಅದನ್ನು ಹಾಕಿಕೊಳ್ಳುತ್ತಿದ್ದರು. ಆ ಕಾಲದಲ್ಲಿ ನನಗಿದ್ದ ದೊಡ್ಡ ಆಸೆ ಏನಪ್ಪಾ ಅಂದರೆ ಅಂಥಾ ಹ್ಯಾಟ್ ಹಾಕಿಕೊಳ್ಳುವ ಮನುಷ್ಯ ನಾನಾಗಬೇಕು ಅನ್ನೋದು. ಆಗ ಅಮ್ಮ ನೀನೇನಾಗುತ್ತೀಯ ಎಂದು ಕೇಳಿದರೆ ಅಮಲ್ದಾರನಾಗ್ತೀನಿ ಎಂದು ಉತ್ತರ ಕೊಡುತ್ತಿದ್ದೆ.
ಅಮಲ್ದಾರರ ಉಪಸ್ಥಿತಿಯಲ್ಲಿ ಈ ಜಮಾಬಂದಿ ನಡೆಯುತ್ತಿತ್ತು. ನಮ್ಮ ಅಪ್ಪ ಲೆಕ್ಕದಲ್ಲಿ ಬಹಳ ಜೋರು. ಅವರು ಸ್ವತಃ ಓದಿ ಓದಿ ಅಸ್ಟ್ರಾನಮಿಯನ್ನೂ ಅರ್ಥ ಮಾಡಿಕೊಳ್ಳುತ್ತಿದ್ದರು. ಅವರು ನಕ್ಷತ್ರಗಳ ಚಲನೆಯ ವೈಜ್ಞಾನಿಕ ವಿವರಗಳನ್ನೂ ತಿಳಿದಿದ್ದರು. ಇದು ಕೇವಲ ಪಂಚಾಂಗ ವಾಚನದಿಂದ ಸಿದ್ಧಿಸಿದ ವಿದ್ಯೆಯಲ್ಲ. ಅವರು ಪಂಚಾಂಗದ ತಪ್ಪುಗಳನ್ನು ಕಂಡು ಹಿಡಿಯುವಷ್ಟು ಈ ವಿದ್ಯೆಯನ್ನು ಅರಿತಿದ್ದರು. ಫ್ರಾನ್ಸ್ ನಿಂದ ನಕ್ಷತ್ರಾದಿ ಗ್ರಹಗಳ ಚಲನೆಯ ವಿವರ ತರಿಸಿಕೊಂಡು, ಆಧುನಿಕ ಪಂಚಾಂಗಗಳನ್ನು ಪರಾಮರ್ಶಿಸಿ ಗ್ರಹಣದ ಸಮಯವನ್ನು ಸರಿಯಾಗಿ ಗಣಿಸುತ್ತಿದ್ದರು. ಇದನ್ನವರು ಉಳಿದ ಬ್ರಾಹ್ಮಣರಿಗೆ ಹೇಳುತ್ತಿದ್ದುದೂ ಚೆನ್ನಾಗಿಯೇ ಇರುತ್ತಿತ್ತು – ‘ನಿಮ್ಮ ಧರ್ಮಕಾರ್ಯಕ್ಕೆಲ್ಲಾ ನಿಮ್ಮ ನಿಮ್ಮ ಪಂಚಾಂಗವನ್ನೇ ಇಟ್ಟುಕೊಳ್ಳಿ. ನಿಜ ಬೇಕೆನಿಸಿದರೆ ಆಧುನಿಕ ಪಂಚಾಂಗ ನೋಡಿ’. ಕಾಲಾನುಕಾಲದಲ್ಲಿ ಆದ ಅನೇಕ ಬದಲಾವಣೆಗಳನ್ನು ಒಳಗೊಳ್ಳುವುದರಲ್ಲಿ ನಮ್ಮ ಜ್ಯೋತಿಷ್ಯಾಸ್ತ್ರ ಸೋತಿದೆ. ಇದನ್ನವರು ಅರಿತಿದ್ದರು.
ನಮ್ಮಪ್ಪನ ಹಾಗೆಯೇ ಆಧುನಿಕವಾಗಿ ಯೋಚನೆ ಮಾಡಿ ಪಂಚಾಂಗದಲ್ಲಿ ತಿದ್ದುಪಡಿಗಳನ್ನು ಪ್ರಸ್ತಾಪಿಸಿದವರೊಬ್ಬರ ಕಥೆಯನ್ನು ಆಮೇಲೆ ಕೇಳಿದೆ. ಅವರು ಗೋಕರ್ಣದವರು. ಅವರು ಪಂಚಾಂಗದಲ್ಲಿ ಸೂಚಿಸಲಾಗಿರುವ ಕೆಲವು ವಿದ್ಯಮಾನಗಳನ್ನು ತೋರಿಸಿ ಇವೆಲ್ಲಾ ಹೀಗೆ ನಡೆಯುವುದಿಲ್ಲ ಎಂದು ವಾದಿಸಿ ಅವುಗಳ ನಿಜವಾದ ಸಮಯವನ್ನು ಸೂಚಿಸುವ ಪಂಚಾಂಗವನ್ನು ಮಾಡಿ ಅವರು ಮಠದಿಂದ ಬಹಿಷ್ಕೃತರಾಗಿಬಿಟ್ಟರಂತೆ. ನಮ್ಮ ಪಂಚಾಂಗವನ್ನು ಇವನು ಹಾಳು ಮಾಡಿದ ಎಂದು ಮಠದವರು ಬಹಿಷ್ಕಾರ ಹಾಕಿದ್ದರಂತೆ. ಅವರನ್ನು ನಾನು ಗೋಕರ್ಣದಲ್ಲಿ ನಮ್ಮಪ್ಪನ ಶ್ರಾದ್ಧ ನಡೆಸುವ ಸಂದರ್ಭದಲ್ಲಿ ಭೇಟಿಯಾದೆ.
ನನಗೆ ಚೌಲ ಆಗಿದ್ದು ನೆನಪಿದೆ. ಮೊಟ್ಟ ಮೊದಲನೇ ಸಾರಿ ಮಕ್ಕಳ ಕೂದಲನ್ನು ಕತ್ತರಿಸುವುದಕ್ಕೆ ಚೌಲ ಎನ್ನುತ್ತಾರೆ. ಚೌಲ ಕರ್ಮ ಆಗುವವರೆಗೂ ಮಕ್ಕಳು ಕೂದಲನ್ನು ಕತ್ತರಿಸದೆ ಉದ್ದಕ್ಕೆ ಬಿಟ್ಟುಕೊಂಡಿರುತ್ತಾರೆ. ಅಕ್ಷರಾಭ್ಯಾಸ ಆಗುವುದಕ್ಕೆ ಮೊದಲು ಇಲ್ಲವೇ ನಂತರ ಸುಮಾರು ಐದಾರು ವರ್ಷದ ಹೊತ್ತಿಗೆ ಈ ಚೌಲ ಕರ್ಮ ಮಾಡುತ್ತಾರೆ. ಇದು ನನಗೆ ನೆನಪಿದೆ. ಆಗೆಲ್ಲಾ ನಮ್ಮ ಮನೆಗಳಿಗೇ ಕ್ಷೌರಿಕರು ಬರುತ್ತಿದ್ದರು. ನನ್ನ ಚೌಲ ಕರ್ಮಕ್ಕೆ ಬರಬೇಕಾಗಿದ್ದ ಕ್ಷೌರಿಕ ಶುಭ್ರವಾದ ಬಿಳಿ ಬಟ್ಟೆ ಧರಿಸುತ್ತಿದ್ದ ಎಂದು ನೆನಪು. ಅವನಿಗೊಂದು ಕ್ರಾಪ್ ಕೂಡಾ ಇತ್ತು.
ಆ ಕಾಲದಲ್ಲಿ ಯಾರಾದರೂ ಕ್ರಾಪ್ ಬಿಟ್ಟಿದ್ದರೆ ಅವರಿಗೂ ನಗರಕ್ಕೂ ಯಾವುದೋ ಸಂಬಂಧವಿದೆ ಎಂದರ್ಥ. ಕ್ರಾಪಿಗೆ ಈಗ ಯಾವ ಅರ್ಥವೂ ಇಲ್ಲ. ಹಿಂದೆ ಇದಕ್ಕೆ ಬಹಳ ದೊಡ್ಡ ಸಾಂಕೇತಿಕ ಅರ್ಥವಿತ್ತು. ಅದನ್ನು ಮೊದಲು ಗ್ರಹಿಸಿದವರು ಅಡಿಗರು. ‘ಕ್ರಾಪು ತಲೆಯು ನವೀನ ಜಗದ ಯುಗದ ಕೇತನ’ ಅಂತ ಅವರು ಬರೀತಾರೆ. ಬ್ರಾಹ್ಮಣ ಹುಡುಗರಿಗೆ ಕ್ರಾಪು ತಲೆ ಒಂದು ಬಾವುಟವೇ ಸರಿ. ಯಾಕೆಂದರೆ ಕ್ರಾಪು ಬಿಟ್ಟರೆ ಅವನೆಲ್ಲೋ ಸ್ವಲ್ಪ ಬ್ರಾಹ್ಮಣಿಕೆಯಿಂದ ದೂರವಾಗುತ್ತಿದ್ದಾನೆ, ಮಡಿವಂತಿಕೆಯಿಂದ ದೂರವಾಗುತ್ತಿದ್ದಾನೆ ಎಂದರ್ಥ.
ನಮ್ಮ ಹಳ್ಳಿಯಲ್ಲಿರುವವರೆಲ್ಲಾ ಸಾಮಾನ್ಯವಾಗಿ ಜುಟ್ಟು ಬಿಟ್ಟವರು. ಆದರೆ ಕ್ಷೌರಿಕ ಮಾತ್ರ ಕ್ರಾಪು ಬಿಟ್ಟಿದ್ದ. ನನ್ನ ಚೌಲಕ್ಕೆ ಅವನೇ ಬೇಕು ಅಂತ ನಾನು ಹಟ ಮಾಡಿದ್ದು ನನಗೆ ಚೆನ್ನಾಗಿ ನೆನಪಿದೆ. ಅತ್ತೂ ಕರೆದು ಇನ್ಯಾರನ್ನಾದರೂ ಕರೆದರೆ ಅವನ ಹತ್ತಿರ ಚೌಲ ಮಾಡಿಸಿಕೊಳ್ಳುವುದಿಲ್ಲ ಎಂದು ಹಠ ಮಾಡಿದ್ದೆ. ಕೊನೆಗೂ ಅವನೇ ಬಂದ. ಚೌಲ ಆಯಿತು. ಕ್ರಾಪ್ ಬಿಡಿಸಿಕೊಂಡೆ.
ನನ್ನ ಅಪ್ಪ ಕೂಡಾ ಕ್ರಾಪು ಜುಟ್ಟಿನ ಮಧ್ಯೆ ಹೋರಾಡುತ್ತಿದ್ದವರು. ನಮ್ಮ ಅಜ್ಜ ವೈದಿಕ ಬ್ರಾಹ್ಮಣ. ಅವರು ಅಲ್ಲಿ ಇಲ್ಲಿ ಹೋಮ, ಹವನ, ಹಬ್ಬ ಮಾಡಿಸುತ್ತಾ ಇಲ್ಲವೇ ಸತ್ಯನಾರಾಯಣ ಪೂಜೆ ಮಾಡಿಸುವುದು, ವ್ರತ ಮಾಡಿಸುವುದಕ್ಕೆಲ್ಲಾ ಹೋಗುತ್ತಿದ್ದರು. ಅವರು ಅಂಗಿಯನ್ನೂ ಹಾಕುತ್ತಿರಲಿಲ್ಲ. ಅವರು ಒಂದು ವಸ್ತ್ರ ಹೊದ್ದುಕೊಳ್ಳುತ್ತಿದ್ದರು. ನನ್ನ ಅಪ್ಪ ಲೌಕಿಕ ಬ್ರಾಹ್ಮಣರು. ಲೌಕಿಕ ಬ್ರಾಹ್ಮಣರು ಅಂದರೆ ಇವರು ಶುಭಾಶುಭ ಸಂದರ್ಭಗಳಿಗೆಲ್ಲಾ ಪುರೋಹಿತರೊಬ್ಬರನ್ನು ಕರೆಯಿಸಿಕೊಳ್ಳಬೇಕೇ ಹೊರತು ಅವರೇ ಪುರೋಹಿತರಲ್ಲ. ಲೌಕಿಕ ಬ್ರಾಹ್ಮಣರಾಗಿಬಿಟ್ಟಿದ್ದ ಅಪ್ಪ ಕ್ರಾಪ್ ಮಾಡಿಸಿಕೊಂಡಿದ್ದರು. ಇದೆಂಥಾ ಕ್ರಾಪ್ ಅಂದರೆ ಇದರ ಮರೆಯಲ್ಲೇ ಒಂದು ಸಣ್ಣ ಜುಟ್ಟೂ ಇರುತ್ತಿತ್ತು.
ನಾನು ನನ್ನ ಅಪ್ಪನ ಬೆಳವಣಿಗೆಯನ್ನು ನೋಡುವುದು ಈ ಕ್ರಾಪು ಜುಟ್ಟುಗಳ ಸಂಕೇತದಲ್ಲಿ. ಒಮ್ಮೊಮ್ಮೆ ಜುಟ್ಟು ದೊಡ್ಡದಾಗುತ್ತಿತ್ತು. ಒಮ್ಮೊಮ್ಮೆ ಕ್ರಾಪು ದೊಡ್ಡದಾಗುತ್ತಿತ್ತು. ಅವರ ಆಲೋಚನಾ ಕ್ರಮದ ಬದಲಾವಣೆಗಳು ಈ ಜುಟ್ಟು-ಕ್ರಾಪುಗಳಲ್ಲಿ ಯಾವುದು ದೊಡ್ಡದಾಗುತ್ತಿದೆ ಎಂಬುದರಲ್ಲಿ ಗೊತ್ತಾಗುತ್ತಿತ್ತು. ನನ್ನ ಹಾಗೆ ಬ್ರಾಹ್ಮಣರ ಕುಲದಲ್ಲೇ ಹುಟ್ಟಿ ಬಂದವನಿಗೆ ಹೊರಗಡೇ ಇಲ್ಲದಿದ್ದರೂ ಒಳಗಡೆ ಒಂದು ಜುಟ್ಟಿರುತ್ತೆ. ನಾನು ನನ್ನ ಒಳಜುಟ್ಟನ್ನು ಹುಡುಕುತ್ತಲೇ ಇರುತ್ತೇನೆ. ಅದು ಇನ್ನೂ ಎಲ್ಲಾದರೂ ಉಳಿದುಕೊಂಡಿರಬಹುದೇ ಎಂದು….
ಇವೆಲ್ಲಾ ಸಾಮಾನ್ಯವಾಗಿರುವಂಥದ್ದು. ಆದರೆ ಒಬ್ಬ ಬರಹಗಾರನಿಗೆ ಮುಖ್ಯವಾದುದರಿಂದ ನಾನಿದನ್ನು ಹೇಳುತ್ತಿದ್ದೇನೆ. ನಮ್ಮ ಅಪ್ಪನಲ್ಲೂ ಒಂದು ಮುಚ್ಚಿಟ್ಟುಕೊಂಡ ಕ್ರಾಪು ಹಾಗೇ ಮುಚ್ಚಿಟ್ಟುಕೊಂಡ ಜುಟ್ಟಿತ್ತು. ಆದರೆ ಅಜ್ಜನಿಗೆ ಜುಟ್ಟು ಮಾತ್ರ ಇತ್ತು.
ಆ ಕಾಲದಲ್ಲಿ ಯಾರಾದರೂ ಕ್ರಾಪ್ ಬಿಟ್ಟಿದ್ದರೆ ಅವರಿಗೂ ನಗರಕ್ಕೂ ಯಾವುದೋ ಸಂಬಂಧವಿದೆ ಎಂದರ್ಥ. ಕ್ರಾಪಿಗೆ ಈಗ ಯಾವ ಅರ್ಥವೂ ಇಲ್ಲ. ಹಿಂದೆ ಇದಕ್ಕೆ ಬಹಳ ದೊಡ್ಡ ಸಾಂಕೇತಿಕ ಅರ್ಥವಿತ್ತು. ಅದನ್ನು ಮೊದಲು ಗ್ರಹಿಸಿದವರು ಅಡಿಗರು. ‘ಕ್ರಾಪು ತಲೆಯು ನವೀನ ಜಗದ ಯುಗದ ಕೇತನ’ ಅಂತ ಅವರು ಬರೀತಾರೆ. ಬ್ರಾಹ್ಮಣ ಹುಡುಗರಿಗೆ ಕ್ರಾಪು ತಲೆ ಒಂದು ಬಾವುಟವೇ ಸರಿ. ಯಾಕೆಂದರೆ ಕ್ರಾಪು ಬಿಟ್ಟರೆ ಅವನೆಲ್ಲೋ ಸ್ವಲ್ಪ ಬ್ರಾಹ್ಮಣಿಕೆಯಿಂದ ದೂರವಾಗುತ್ತಿದ್ದಾನೆ, ಮಡಿವಂತಿಕೆಯಿಂದ ದೂರವಾಗುತ್ತಿದ್ದಾನೆ ಎಂದರ್ಥ.
೭. ಅಪ್ಪನ ಇಸ್ಪೀಟು ಎಲೆಗಳು
ನನ್ನ ಅಜ್ಜ ಚಿಕ್ಕಮಗಳೂರು ಜಿಲ್ಲೆಯ ಗೋಣಿಬೀಡಿನಲ್ಲಿರುವ ಸುಬ್ರಹ್ಮಣ್ಯ ದೇವಸ್ಥಾನದ ಅರ್ಚಕರಾಗಿದ್ದರು. ನನ್ನ ಅಜ್ಜನಿಗೆ ಪೂಜೆಯಲ್ಲಿ ಸಹಾಯ ಮಾಡುತ್ತಾ ನನ್ನ ಅಪ್ಪ ಬೆಳೆದರು.
ಈ ದೇವಸ್ಥಾನಕ್ಕೆ ಮೂಡಿಗೆರೆ, ಚಿಕ್ಕಮಗಳೂರುಗಳಿಂದೆಲ್ಲಾ ಭಕ್ತಾದಿಗಳು ಬರುತ್ತಿದ್ದರು. ಈ ಭಕ್ತಾದಿಗಳ ಮೂಲಕವೇ ನನ್ನ ಅಪ್ಪ ಕದ್ದು ಮುಚ್ಚಿ ಇಂಗ್ಲಿಷ್ ಪುಸ್ತಕಗಳನ್ನು ತರಿಸಿಕೊಳ್ಳುತ್ತಿದ್ದರು. ಈ ಪುಸ್ತಕಗಳನ್ನು ಓದಿ ಅವರು ಅರ್ಚಕ ವೃತ್ತಿಯಲ್ಲಿರುತ್ತಲೇ ಲಂಡನ್ ಮೆಟ್ರಿಕ್ಯುಲೇಶನ್ ಪರೀಕ್ಷೆ ಪಾಸಾದರು. ಆ ದಿನದ ಕೆಲವು ಘಟನೆಗಳನ್ನು ನಾನು ನನ್ನ ಅಜ್ಜನ ಬಾಯಿಂದ ಮತ್ತು ಅಪ್ಪನ ಬಾಯಿಂದ ಕೇಳಿದ್ದೇನೆ. ಕೆಲವನ್ನು ನನಗೆ ಅಪ್ಪನ ಗೆಳೆಯರು ಹೇಳಿದ್ದರು.
ಅಪ್ಪ ಗುಟ್ಟಾಗಿ ಲಂಡನ್ ಮೆಟ್ರಿಕ್ಯುಲೇಷನ್ ಪಾಸ್ ಮಾಡಿದ್ದರ ಹಿಂದೆಯೇ ಅವರಿಗೆ ಮದುವೆಯಾಯಿತು. ಮದುವೆಯ ನಂತರ ಅಪ್ಪ ಗೋಣಿಬೀಡು ಬಿಟ್ಟು ಕಾಶಿಗೆ ಹೋದರು. ಆ ಕಾಲದಲ್ಲಿ ಹುಡುಗಿಯರಿಗೆ ಮೈನೆರೆಯುವ ಮೊದಲೇ ಮದುವೆ ಮಾಡಿಬಿಡುತ್ತಿದ್ದರು. ಅವರು ಋತುಮತಿಯರಾಗುವ ತನಕವೂ ತವರು ಮನೆಯಲ್ಲೇ ಇರುತ್ತಿದ್ದರು. ಹೀಗಾಗಿ ಅಪ್ಪನಿಗೆ ಕಾಶಿಗೆ ಹೋಗುವುದಕ್ಕೆ ಮದುವೆ ಅಡ್ಡಿಯಾಗಲಿಲ್ಲ.
ಕಾಶಿಯಲ್ಲಿ ಒಂದು ಛತ್ರದಲ್ಲಿ ಉಳಿದುಕೊಂಡು ದಾಸೋಹದ ಅನ್ನದಲ್ಲೇ ಹೊಟ್ಟೆ ತುಂಬಿಸಿಕೊಂಡು ಬ್ರಾಹ್ಮಣ್ಯಕ್ಕೆ ಅಗತ್ಯವಾದ ಮಂತ್ರ ಮುಂತಾದುವುಗಳನ್ನು ಕಲಿತುಕೊಂಡರು. ಈ ಕಾಲದಲ್ಲಿ ಅಪ್ಪನಿಗೊಬ್ಬ ಗೆಳೆಯನಿದ್ದ. ಆತನೂ ಅಪ್ಪನಂತೆಯೇ ಊರು ಬಿಟ್ಟು ಕಾಶಿಗೆ ಬಂದಾತ. ಈತ ಕಾಶಿ ಬಿಟ್ಟ ಮೇಲೆ ಪೊಲೀಸ್ ಕಾನ್ಸ್‌ಟೇಬಲ್ ಆಗಿದ್ದಾನೆ ಎಂದು ಅಪ್ಪ ಹೇಳುತ್ತಿದ್ದರು. ಎಷ್ಟೋ ವರ್ಷದ ನಂತರ ಈತನನ್ನು ನಾನು ನೋಡಿದೆ. ಆ ಕಾಲದಲ್ಲಿ ಪೊಲೀಸರು ತೊಡುತ್ತಿದ್ದ ಚಡ್ಡಿಯಲ್ಲಿ ಆತನನ್ನು ನೋಡಿದಾಗ ನನ್ನ ಅಪ್ಪನೂ ಈತನೂ ಒಂದು ಕಾಲದಲ್ಲಿ ಗೆಳೆಯರಾಗಿದ್ದವರೇ ಎಂಬ ಸಂಶಯವೂ ಕಾಡಿತ್ತು.
ಕಾಶಿಯಲ್ಲಿದ್ದ ನನ್ನ ಅಪ್ಪ ಆಮೇಲೆ ದೆಹಲಿಗೆ ಬಂದರಂತೆ. ಆದರೆ ಅವರು ತಮ್ಮ ದೆಹಲಿ ದಿನಗಳ ಕತೆಯನ್ನು ಯಾವತ್ತೂ ಹೇಳಿರಲಿಲ್ಲ. ಆದರೆ ಆಗೀಗ ಭಾರತ ವಿಭಜನೆಯ ಮಾತು ಬಂದಾಗ ‘ನಾನು ದಿಲ್ಲಿಯಲ್ಲಿದ್ದಾಗ ಜಿನ್ನಾ ತನ್ನ ಮನೆಯ ಎದುರು ನಿಂತು ಹಲ್ಲುಜ್ಜಿಕೊಳ್ಳುತ್ತಿದ್ದಾಗ ನೋಡುತ್ತಿದ್ದೆ’ ಎನ್ನುತ್ತಿದ್ದರು. ಅಪ್ಪನ ಮನೋಲೋಕದಲ್ಲಿ ಮನೆಯ ಹೊರಗೆ ನಿಂತು ಬೀದಿಯಲ್ಲಿ ಹೋಗುವವರಿಗೂ ಕಾಣುವಂತೆ ಹಲ್ಲುಜ್ಜಿಕೊಳ್ಳುವುದೆಂದರೆ ಅಸಂಸ್ಕೃತವಾದದ್ದು. ಅದನ್ನು ಅಪ್ಪ ಜಿನ್ನಾಗೆ ಅನ್ವಯಿಸಿ ಹೇಳುತ್ತಿದ್ದರು. ಅಪ್ಪ ಜಿನ್ನಾನನ್ನು ಈ ಸ್ಥಿತಿಯಲ್ಲಿ ನೋಡಿದ್ದರೇ ಎಂಬ ವಿಷಯದಲ್ಲಿ ನನಗೀಗಲೂ ಅನುಮಾನಗಳಿವೆ. ಏಕೆಂದರೆ ಜಿನ್ನಾ ಹೀಗಿರಲು ಸಾಧ್ಯವಿರಲಿಲ್ಲ. ಸಾಕಷ್ಟು ಶ್ರೀಮಂತನೂ ಅತ್ಯಂತ ಆಧುನಿಕನೂ ಆಗಿದ್ದ ಜಿನ್ನಾ ಮನೆಯ ಹೊರಗೆ ನಿಂತು ಹಲ್ಲುಜ್ಜುವುದನ್ನು ಕಲ್ಪಿಸಿಕೊಳ್ಳುವುದೂ ಕಷ್ಟವೇ. ಅದೇನೇ ಇದ್ದರೂ ನನ್ನ ಅಪ್ಪನ ದೃಷ್ಟಿಯಲ್ಲಿ ಮಾತ್ರ ಜಿನ್ನಾ ಇದ್ದದ್ದು ಹಾಗೆ.
ನನ್ನ ಅಪ್ಪ ಸಂಪೂರ್ಣವಾಗಿ ಆಟೋ ಡೈಡಾಕ್ಟ್. ಇಂಗ್ಲಿಷ್ ನಲ್ಲಿ ಆಟೋ ಡೈಡಾಕ್ಟ್ ಅಂದರೆ ಶಾಲೆಗೆ ಹೋಗದೇ ಕಲಿತವನು ಎಂದರ್ಥ. ನನ್ನ ಅಪ್ಪನೂ ಶಾಲೆಗೆ ಹೋಗದೇ ಕಲಿತ ಸ್ವಾಧ್ಯಾಯಿ. ಅವರು ಕೊನೆಯ ತನಕವೂ ಹಾಗೆಯೇ ಇದ್ದರು.
ನನ್ನ ಅಪ್ಪನಿಗೆ ಇಸ್ಪೀಟ್ ಆಡುವ ಹುಚ್ಚು ಬಹಳ. ಅಪ್ಪ ತೀರಿಕೊಂಡ ಮೇಲೆ ಅವರ ಗೆಳೆಯರೊಬ್ಬರು ಅವರ ಇಸ್ಪೀಟ್ ಹುಚ್ಚಿನ ಕುರಿತ ಒಂದು ಕತೆ ಹೇಳಿದ್ದರು. ಇದು ನಡೆದದ್ದು ನನ್ನ ಅಜ್ಜ ಗೋಣಿಬೀಡಿನಲ್ಲಿ ಅರ್ಚಕರಾಗಿದ್ದ ದಿನಗಳಲ್ಲಿ. ಗೋಣಿಬೀಡಿನ ಸುಬ್ರಹ್ಮಣ್ಯ ದೇವಸ್ಥಾನದ ಬದಿಯಲ್ಲೇ ಒಂದು ನದಿ ಇದೆ. ನದಿ ದಂಡೆಯಲ್ಲೊಂದು ಅಶ್ವತ್ಥದ ಮರವಿದೆ. ಅದರ ಕೆಳಗೆ ಕುಳಿತು ನನ್ನ ಅಪ್ಪ ಅವರ ಗೆಳೆಯರೊಂದಿಗೆ ಇಸ್ಪೀಟ್ ಆಡುತ್ತಿದ್ದರಂತೆ. ಹೀಗೆ ಒಂದು ದಿನ ಇಸ್ಪೀಟಿನ ಗುಂಗಿನಲ್ಲಿ ಮುಳುಗಿದ್ದಾಗ ನಡೆದ ಘಟನೆಯನ್ನು ಅಪ್ಪನ ಗೆಳೆಯರು ವಿವರಿಸಿದ್ದು ಹೀಗೆ…
”ನಾವೆಲ್ಲಾ ಕೂತು ಟ್ವೆಂಟಿ ಎಯ್ಟ್ ಆಡುತ್ತಿದ್ದೆವು, ಟ್ವೆಂಟಿ ಎಯ್ಟ್ ಎಂದರೆ ರಮ್ಮಿಯಂತೆ ಬರೇ ಅದೃಷ್ಟದ ಆಟ ಅಲ್ಲ. ಪ್ರತಿಯೊಬ್ಬರ ಮುಖವನ್ನೂ ಗಮನಿಸಿ ಅವರ ಕೈಯಲ್ಲಿ ಏನು ಎಲೆ ಇರಬಹುದು ಎಂಬುದನ್ನು ಊಹಿಸಿ ನಮ್ಮ ಕೈಯಲ್ಲಿರುವ ಎಲೆಯನ್ನು ಕೆಳಗೆ ಬಿಡಬೇಕು. ನಿಮ್ಮ ಅಪ್ಪ ಹೀಗೆ ಕೆಳಗೆ ಬಿಡಬೇಕಾದ ಎಲೆ ಯಾವುದೆಂಬ ಯೋಚನೆಯಲ್ಲಿದ್ದಾಗ ಒಬ್ಬ ಹುಡುಗ ಓಡಿ ಬಂದು ‘ಮೂಡಿಗೆರೆ ಸಾಹುಕಾರರು ಪೂಜೆ ಮಾಡಿಸುವುದಕ್ಕೆ ಬಂದಿದ್ದಾರೆ’ ಎಂದ.”
“ಅವತ್ತು ನಿಮ್ಮ ಅಜ್ಜ ಇರಲಿಲ್ಲ. ಬ್ರಾಹ್ಮಣಾರ್ಥಕ್ಕೆ ಹಳ್ಳಿಗೆ ಹೋಗಿದ್ದರು. ಪೂಜೆಯ ಕೆಲಸ ಅವತ್ತು ನಿಮ್ಮಪ್ಪನದ್ದೇ. ಇಸ್ಪೀಟ್ ಆಡುತ್ತಿದ್ದ ಅವರು ಎಲೆಯನ್ನು ಕೆಳಗಿಟ್ಟು ಉಟ್ಟ ಪಂಚೆಯನ್ನು ಎತ್ತಿ ಕಟ್ಟಿ ಓಡಿದರು. ಸ್ನಾನ ಮಾಡದೆ ಮೈಲಿಗೆಯಲ್ಲೇ ದೇವಸ್ಥಾನದೊಳಕ್ಕೆ ನುಗ್ಗಿ ಸುಬ್ರಹ್ಮಣ್ಯ ಸ್ವಾಮಿಗೆ ಅರ್ಚನೆ ಮಾಡಿ ಹೊರಬಂದು ಮತ್ತೆ ಆಟಕ್ಕೆ ಕುಳಿತರು.”
ಈ ಕತೆಯ ಅಂತ್ಯವನ್ನು ಅದ್ಭುತವೊಂದರ ವರ್ಣನೆಯಂತೆ ಹೇಳಿದ್ದರು. ”ನಿಮ್ಮ ಅಜ್ಜ ಬಂದು ದೇವಸ್ಥಾನದೊಳಕ್ಕೆ ಹೋದರೆ ಅಲ್ಲೊಂದು ಹಾವು ಹೆಡೆಬಿಚ್ಚಿ ನಿಂತಿತ್ತು.”.
ನನ್ನ ಅಪ್ಪ ಸುಬ್ರಹ್ಮಣ್ಯ ಸ್ವಾಮಿಗೆ ಮೈಲಿಗೆಯಲ್ಲಿ ಪೂಜೆ ಮಾಡಿದ್ದರಿಂದ ಹೀಗಾಯಿತು ಎಂದು ಅವರ ಗೆಳೆಯ ಹೇಳಿದರು. ಈ ಕತೆಯನ್ನು ಅವರ ಗೆಳೆಯರ ಬಾಯಲ್ಲಷ್ಟೇ ಕೇಳಿದನೇ ಹೊರತು ಅಪ್ಪನ ಬಾಯಿಂದ ಈ ಘಟನೆಗೆ ಸಂಬಂಧಿಸಿದ ಯಾವ ಸಣ್ಣ ಸೂಚನೆಗಳೂ ಹೊರಬಂದಿರಲಿಲ್ಲ. ಈ ಕತೆ ಗೋಣಿಬೀಡಿನ ಸುಬ್ರಹ್ಮಣ್ಯ ಸ್ವಾಮಿಯ ಮಹಿಮೆಯನ್ನು ಹೇಳುವುದಕ್ಕೆ ಎಲ್ಲರೂ ಬಳಸುತ್ತಿದ್ದ ಕತೆ. ನನಗೆ ಇದರಲ್ಲಿ ಮುಖ್ಯವಾಗಿದ್ದು ನನ್ನ ಅಪ್ಪ ಮೈಲಿಗೆಯಲ್ಲಿ ಹೋಗಿ ಅಲ್ಲಿ ಪೂಜೆ ಮಾಡಿದ್ದು ಮತ್ತು ಅವರಿಗೆ ಇದ್ದ ಇಸ್ಪೀಟಿನ ಹುಚ್ಚಿನ ತೀವ್ರತೆ.
ಅಪ್ಪನ ಇಸ್ಪೀಟ್ ಆಟದ ಹುಚ್ಚಿಗೆ ಸಂಬಂಧಿಸಿದ ಮತ್ತೊಂದು ಕಥೆ ಇದೆ. ನನ್ನ ತಾಯಿಯನ್ನು ಅವರು ಮದುವೆಯಾದ ನಂತರ ನಡೆದದ್ದು. ಇಸ್ಪೀಟ್ ಆಡುತ್ತಿರುವಾಗಲೇ ಅವರು ವಾಲ್ಟರ್ ಸ್ಕಾಟ್ ನ ‘ಐವಾನ್ ಹೋ’ ಎಂಬ ಪುಸ್ತಕವನ್ನೂ ಓದುತ್ತಿದ್ದರು. ಈ ಕತೆಯಲ್ಲಿ ಬಹಳ ಸಾವುಗಳು ಸಂಭವಿಸುತ್ತವೆ. ಈ ಸಾವುಗಳ ಗುಂಗಿನಲ್ಲಿ ಮುಳುಗಿರುವಾಗ ಅಪ್ಪನ ಜತೆ ಇಸ್ಪೀಟ್ ಆಡುತ್ತಿದ್ದ ಅವರ ಸ್ನೇಹಿತರೊಬ್ಬರು ಅಲ್ಲಿಯೇ ಕುಸಿದು ಬಿದ್ದು ಸತ್ತು ಹೋಗಿಬಿಟ್ಟರಂತೆ. ಈ ಘಟನೆ ಅಪ್ಪನ ಮನಸ್ಸಿನ ಮೇಲೆ ಗಾಢವಾದ ಪರಿಣಾಮ ಬೀರಿತ್ತು. ಇದು ನೆನಪಾದಾಗಲೆಲ್ಲಾ ಅವರಿಗೆ ಮಂಕು ಕವಿಯುತ್ತಿತ್ತು. ಅಥವಾ ಈಗ ಮನೋವೈಜ್ಞಾನಿಕವಾಗಿ ವಿವರಿಸಲಾಗುವ ಖಿನ್ನತೆ ಅವರನ್ನು ಆವರಿಸುತ್ತಿತ್ತು. ಹೀಗೆ ಅವರಿಗೆ ಮಂಕು ಕವಿದಾಗಲೆಲ್ಲಾ ಅವರನ್ನು ಬಾವಿ ಕಟ್ಟೆಯಲ್ಲಿ ಕೂರಿಸಿ ನೀರು ಸೇದಿ ಸೇದಿ ಅವರ ತಲೆಗೆ ಸುರಿಯಬೇಕಾಗುತ್ತಿತ್ತೆಂದು ಅಮ್ಮ ಹೇಳುತ್ತಿದ್ದರು. ಅಪ್ಪನಿಗೆ ಹೀಗಾದಾಗ ಅವರು ಪೀಪಲ್ಸ್ ಬ್ಯಾಂಕ್ ನಲ್ಲಿ ಕೆಲಸ ಮಾಡುತ್ತಿದ್ದರು. ತಮ್ಮ ಖಿನ್ನತೆಯ ಕಾರಣದಿಂದ ಅವರು ಬಹಳ ದಿನ ಕೆಲಸಕ್ಕೆ ಹೋಗಿರಲಿಲ್ಲವಂತೆ. ತಲೆಯ ಮೇಲೆ ನೀರು ಸುರಿದದ್ದಕ್ಕೋ ಅಮ್ಮನ ಹರಕೆಗಳ ಕಾರಣಕ್ಕೋ ಅಪ್ಪ ಚೇತರಿಸಿಕೊಂಡರು.
ನಾನು ಗಣಿತ ಕಲಿಯಬೇಕು ಎಂಬುದು ಅಪ್ಪನ ಆಸೆ ಮತ್ತು ಒತ್ತಾಯಗಳೆರಡೂ ಆಗಿದ್ದವು. ಆದರೆ ನನಗೆ ಸಾಹಿತ್ಯ ಓದಬೇಕು ಎಂಬ ಆಸೆ. ಕೊನೆಗೆ ನಾನು ಸಾಹಿತ್ಯ ಓದುವುದನ್ನು ಅಪ್ಪ ಒಪ್ಪಿಕೊಂಡರು. ಆದರೆ ಈ ಒಪ್ಪಿಗೆಗೆ ಅವರದ್ದೊಂದು ಷರತ್ತು ಇತ್ತು. ಅದು ನಾನು ಯಾವತ್ತೂ ವಾಲ್ಟರ್ ಸ್ಕಾಟ್ ನ ಐವಾನ್ ಹೋ ಓದಬಾರದು ಎಂಬುದು!
ಅಪ್ಪನ ಇಸ್ಪೀಟ್ ಆಟದ ಹುಚ್ಚಿಗೆ ಸಂಬಂಧಿಸಿದ ಮತ್ತೊಂದು ಕಥೆ ಇದೆ. ನನ್ನ ತಾಯಿಯನ್ನು ಅವರು ಮದುವೆಯಾದ ನಂತರ ನಡೆದದ್ದು. ಇಸ್ಪೀಟ್ ಆಡುತ್ತಿರುವಾಗಲೇ ಅವರು ವಾಲ್ಟರ್ ಸ್ಕಾಟ್ ನ ‘ಐವಾನ್ ಹೋ’ ಎಂಬ ಪುಸ್ತಕವನ್ನೂ ಓದುತ್ತಿದ್ದರು. ಈ ಕತೆಯಲ್ಲಿ ಬಹಳ ಸಾವುಗಳು ಸಂಭವಿಸುತ್ತವೆ. ಈ ಸಾವುಗಳ ಗುಂಗಿನಲ್ಲಿ ಮುಳುಗಿರುವಾಗ ಅಪ್ಪನ ಜತೆ ಇಸ್ಪೀಟ್ ಆಡುತ್ತಿದ್ದ ಅವರ ಸ್ನೇಹಿತರೊಬ್ಬರು ಅಲ್ಲಿಯೇ ಕುಸಿದು ಬಿದ್ದು ಸತ್ತು ಹೋಗಿಬಿಟ್ಟರಂತೆ. ಈ ಘಟನೆ ಅಪ್ಪನ ಮನಸ್ಸಿನ ಮೇಲೆ ಗಾಢವಾದ ಪರಿಣಾಮ ಬೀರಿತ್ತು. ಇದು ನೆನಪಾದಾಗಲೆಲ್ಲಾ ಅವರಿಗೆ ಮಂಕು ಕವಿಯುತ್ತಿತ್ತು.
೮. ಕಾಲಲ್ಲಿ ಚಕ್ರ ಉದರದಲ್ಲಿ ಗೆಡ್ಡೆ
ಇನ್ನೊಂದು ನನಗೆ ನೆನಪಿರುವ, ಅವರು ಹೇಳುತ್ತಿದ್ದ ಘಟನೆಯೆಂದರೆ ಅವರು ದೆಹಲಿಯಲ್ಲಿ ಇನ್ಯಾವುದೋ ಒಂದು ಪರೀಕ್ಷೆ ಪಾಸಾಗಿ ರೈಲ್ವೇ ಸ್ಟೇಷನ್ ಮಾಸ್ಟರ್ ಕೆಲಸಕ್ಕೆ ಆಯ್ಕೆಯಾದದ್ದು. ಆದರೆ ಅವರ ಹೊಟ್ಟೆಯಲ್ಲಿದ್ದ ಜ್ವರಗೆಡ್ಡೆಯಿಂದಾಗಿ ಅವರಿಗೆ ಈ ಕೆಲಸ ಸಿಗಲಿಲ್ಲ. ಆ ಕಾಲದಲ್ಲಿ ಮಲೆನಾಡಿನ ಎಲ್ಲರಲ್ಲೂ ಒಂದು ಜ್ವರಗೆಡ್ಡೆ ಇರುತ್ತಿತ್ತು. ಇದೆಷ್ಟು ಸಹಜವಾಗಿ ವಿಷಯವಾಗಿತ್ತೆಂದರೆ ಗಂಡಸೆರಲ್ಲಾ ಹೊಟ್ಟೆಯೊಳಗೊಂದು ಜ್ವರಗೆಡ್ಡೆ ಇಟ್ಟುಕೊಂಡು ಬಸುರಿ ಹೆಂಗಸರಂತೆ ಕಾಣಿಸುತ್ತಿದ್ದರೂ ಗೆಡ್ಡೆ ಇದ್ದವರಿಗೂ ಅದನ್ನು ನೋಡುವವರಿಗೂ ಇದರ ಇರುವಿಕೆಯೇ ಗೊತ್ತಾಗುತ್ತಿರಲಿಲ್ಲ. ನಮ್ಮೂರಲ್ಲಿ ಆಗ ಗಂಡಸರೂ ನಡೆದು ಬರುವ ಹೊತ್ತಿನಲ್ಲಿ ಬಸುರಿ ಹೆಂಗಸರಂತೆ ಕಾಣಿಸುತ್ತಿದ್ದ ದಿನಗಳವು. ಈ ಗೆಡ್ಡೆಗೆ ಕಾರಣವಾಗುತ್ತಿದ್ದ ಮಲೇರಿಯಾವನ್ನು ಭಾರೀ ಜ್ವರ ಎನ್ನತ್ತಿದ್ದರು. ಇದು ನಾಲ್ಕು ದಿವಸಗಳಿಗೊಮ್ಮೆ ಬರುವ ಜ್ವರ. ಈ ಜ್ವರವನ್ನೂ ಆ ಕಾಲದವರು ಬಹಳ ಸಹಜವಾಗಿ ಸ್ವೀಕರಿಸಿಬಿಟ್ಟಿದ್ದರು. ಯಾರನ್ನಾದರೂ ಕೆಲಸಕ್ಕೆ ಅಥವಾ ಮತ್ಯಾವುದಕ್ಕೋ ಹೋಗಿ ಕರೆದರೆ ಅವರು ತಮಗೆ ಜ್ವರ ಬರುವ ದಿನವಾಗಿದ್ದರೆ ‘ಅವತ್ತು ನನಗೆ ಜ್ವರ ಬರುತ್ತದೆ. ನಾನು ಬರುವುದಿಲ್ಲ’ ಎನ್ನುತ್ತಿದ್ದರು. ಭಾರೀ ಜ್ವರ ಬರುವುದೆಂದರೆ ಒಂದು ಪೂರ್ವ ನಿಗದಿತ ಭೇಟಿಯಂತೆ!
ನನ್ನ ಅಪ್ಪನಿಗೆ ರೈಲ್ವೇ ಸ್ಟೇಷನ್ ಮಾಸ್ಟರ್ ಕೆಲಸೇ ಸಿಗದೇ ಇದ್ದುದರಿಂದಲೋ ಏನೋ ಅವರು ಮತ್ತೆ ಗೋಣಿಬೀಡಿಗೇ ಬಂದರು. ಬಂದು ಇಲ್ಲಿ ಪೂಜೆ ಮಾಡುವ ಬದಲಿಗೆ ಪೋಸ್ಟ್ ಮಾಸ್ಟರ್ ಆದರು. ಆ ಮೇಲೆ ಅದನ್ನೂ ಬಿಟ್ಟು ಮುಂಬೈಗೆ ಹೋಗಿ ಅಕೌಂಟೆಂಟ್ ಆಗಿದ್ದರು. ಅದನ್ನೂ ಬಿಟ್ಟು ಮತ್ತೇನೋ ಕೆಲಸ ಮಾಡಿದರು. ಇದರ ಬಗ್ಗೆ ನನ್ನ ಅಜ್ಜ ಆಗಾಗ ಹೇಳುತ್ತಿದ್ದರು. ‘ನನ್ನ ಪಾದದಲ್ಲಿ ಚಕ್ರವಿದೆ. ನಿನ್ನ ಅಪ್ಪನ ಪಾದದಲ್ಲೂ ಒಂದು ಚಕ್ರವಿದೆ. ಅದು ನಿಂತಲ್ಲಿ ನಿಲ್ಲುವುದಕ್ಕೆ ಬಿಡುವುದಿಲ್ಲ. ನಮ್ಮನ್ನು ಓಡಾಡಿಸುತ್ತಲೇ ಇರುತ್ತದೆ.’ ಈ ಚಕ್ರ ನನ್ನ ಪಾದದಲ್ಲೂ ಇದೆ ಎಂಬುದು ಅಪ್ಪನ ಭಾವನೆಯಾಗಿತ್ತು. ‘ನೀನೂ ಬಹಳ ಓಡಾಡುತ್ತೀಯ’ ಎನ್ನುತ್ತಿದ್ದರು. ಈ ದೃಷ್ಟಿಯಲ್ಲಿ ನಾವೆಲ್ಲಾ ಚಕ್ರಧಾರಿಗಳು-ಕೈಯಲ್ಲಲ್ಲ ಕಾಲಿನಲ್ಲಿ!
ನನ್ನ ಅಪ್ಪನಿಗೊಂದು ಸ್ವಂತದ ಸಾಹಿತ್ಯ ಲೋಕವಿತ್ತು. ಇದರಲ್ಲಿ ಗೋಲ್ಡ್ ಸ್ಮಿತ್ ಮಹಾ ಲೇಖಕನೇ ಹೊರತು ಷೇಕ್ಸ್‌ಪಿಯರ್ ಅಲ್ಲ. ಗೋಲ್ಡ್ ಸ್ಮಿತ್ ಬರೆದ ವಿಕಾರ್ ವೇಕ್ ಫೀಲ್ಡ್ ಅವರ ದೃಷ್ಟಿಯಲ್ಲಿ ಮಹತ್ಕೃತಿ. ಬಹುಶಃ ಒಂದು ಕಾಲ ಘಟ್ಟದಲ್ಲಿ ಬಹಳಷ್ಟು ಮಂದಿ ಹೀಗೆಯೇ ಚಿಂತಿಸುತ್ತಿದ್ದರು ಎನಿಸುತ್ತದೆ. ಕುವೆಂಪು ಅವರಿಗೂ ಷೇಕ್ಸ್‌ಪಿಯರ್‌ಗಿಂತ ವರ್ಡ್ಸ್ ವರ್ತ್ ಮಹತ್ವದ ಕವಿ. ಏಕೆಂದರೆ ಅವರ ದೃಷ್ಟಿಯಲ್ಲಿ ವರ್ಡ್ಸ್ ವರ್ತ್ ದಾರ್ಶನಿಕ ಕವಿಯಾಗಿದ್ದರೆ ಷೇಕ್ಸ್‌ಪಿಯರ್ ಕೇವಲ ಸಂತೆಯ ಕವಿ.
ಅಪ್ಪ ಇಂಗ್ಲಿಷನ್ನು ತಾವೇ ಓದಿ ಕಲಿತವರು. ಇಂಗ್ಲಿಷ್‌ನ ಕುರಿತ ಅವರ ಆಸಕ್ತಿಗಳೂ ಕೂಡಾ ಕುತೂಹಲ ಹುಟ್ಟಿಸುವಂಥವು. ಅವರಿಗೆ ಪೀರಿಯಾಡಿಕ್ ಸೆನ್ಟೆನ್ಸ್‌ಗಳೆಂದರೆ ಇಷ್ಟ. ಈ ಪೀರಿಯಾಡಿಕ್ ಸೆನ್‌ಟೆನ್ಸ್‌ಗಳೆಂದರೆ ಅವು ಇಡೀ ಪುಟವನ್ನೂ ವ್ಯಾಪಿಸಿಕೊಂಡಿರಬಹುದು. ಡಾಕ್ಟರ್ ಜಾನ್ಸನ್‌ನ ಇಂಗ್ಲಿಷ್ ಹೀಗೇ ಇರುತ್ತಿತ್ತು. ಗೋಲ್ಡ್ ಸ್ಮಿತ್‌ನ ಇಂಗ್ಲಿಷ್ ಕೂಡಾ ಹೀಗೇ ಇರುತ್ತಿತ್ತು. ಎಡ್ಮಂಡ್ ಬರ್ಕ್‌ನ ಇಂಗ್ಲಿಷ್ ಕೂಡಾ ಇದೇ ಬಗೆಯದ್ದು. ಅವನ ಭಾಷಣವೊಂದನ್ನು ಅಪ್ಪ ನನಗೆ ಬಾಯಿಪಾಠ ಮಾಡಿಸಿದ್ದರು.
ಈ ಎಡ್ಮಂಡ್ ಬರ್ಕ್‌ಗೆ ಭಾರತದ ಇತಿಹಾಸದಲ್ಲೂ ಒಂದು ಸ್ಥಾನವಿದೆ. ಭಾರತದ ಗವರ್ನರ್ ಜನರಲ್ ಆಗಿದ್ದ ವಾರನ್ ಹೇಸ್ಟಿಂಗ್ಸ್‌ನ ಮೇಲಿದ್ದ ಆರೋಪಗಳ ಕುರಿತು ಇಂಗ್ಲೆಂಡ್‌ನ ಸಂಸತ್ತು ಒಂದು ವಿಚಾರಣೆ ನಡೆಸಿತು. ಬ್ರಿಟಿಷ್ ಆಧಿಪತ್ಯವನ್ನು ಸ್ಥಾಪಿಸುವುದಕ್ಕೆ ವಾರನ್ ಹೇಸ್ಟಿಂಗ್ಸ್ ಬಳಸಿದ ತಂತ್ರಗಳು ಮತ್ತು ಭ್ರಷ್ಟ ವಿಧಾನಗಳಿಗೆ ಸಂಬಂಧಿಸಿದ ಆರೋಪಗಳಿವೆ. ಇವನಿಗೂ ಮೊದಲಿದ್ದ ರಾಬರ್ಟ್ ಕ್ಲೈವ್ ಹಲವು ಕ್ರೂರ ಮತ್ತು ಭ್ರಷ್ಟ ವಿಧಾನಗಳನ್ನು ಬಳಸಿದ್ದ. ಆದರೆ ಈತನ ಕೃತ್ಯಗಳನ್ನು ಅದೇಕೋ ಬ್ರಿಟಿಷ್ ಪಾರ್ಲಿಮೆಂಟ್ ಗಂಭೀರವಾಗಿ ಪರಿಗಣಿಸಿರಲಿಲ್ಲ. ಆದರೆ ವಾರನ್ ಹೇಸ್ಟಿಂಗ್ಸ್‌ಗೆ ಅಂಥ ಅದೃಷ್ಟವಿರಲಿಲ್ಲ. ಆ ಕಾಲದ ಪ್ರಮುಖ ರಾಜಕೀಯ ಸಿದ್ಧಾಂತಿ ಹಾಗೂ ಭಾಷಣಕಾರ ಎಡ್ಮಂಡ್ ಬರ್ಕ್‌ನ ಕಣ್ಣಿಗೆ ವಾರನ್ ಹೇಸ್ಟಿಂಗ್ಸ್ ಭ್ರಷ್ಟತೆಗಳು ಕಾಣಿಸಿದ್ದವು. ಆತ ವಾರನ್ ಹೇಸ್ಟಿಂಗ್ಸ್‌ಗೆ ಛೀಮಾರಿ ಹಾಕಬೇಕೆಂದು ವಾದಿಸಿದ. ಕೊನೆಗೆ ಹೌಸ್ ಕಾಮನ್ಸ್ ಇದಕ್ಕೆ ಒಪ್ಪಿಗೆ ನೀಡಿತು. ಹೌಸ್ ಆಫ್ ಲಾರ್ಡ್ಸ್‌ನಲ್ಲಿ ಈ ವಿಚಾರಣೆ ಆರು ವರ್ಷಗಳ ಕಾಲ ನಡೆಯಿತು. ಎಡ್ಮಂಡ್ ಬರ್ಕ್ ಈ ವಿಚಾರಣೆಯ ಪ್ರವರ್ತಕನಾಗಿದ್ದ.
ಅಪ್ಪನಿಗೆ ಇಂಗ್ಲೆಂಡ್ ಅಂದರೆ ಬಹಳ ಗೌರವ. ತಮ್ಮ ಸಾಮ್ರಾಜ್ಯವನ್ನು ವಿಸ್ತರಿಸಿದವನನ್ನೇ ಶಿಕ್ಷಿಸಲು ಅವರು ಹಿಂದೆಗೆಯಲಿಲ್ಲ ಎಂಬುದು ಅವರಿಗೆ ಇಂಗ್ಲೆಂಡ್ ನ ಮೇಲಿದ್ದ ಗೌರವ ಮತ್ತಷ್ಟು ಹೆಚ್ಚಿಸಿತ್ತು. ಇದರಿಂದಾಗಿಯೋ ಏನೋ ಅವರು ಎಡ್ಮಂಡ್ ಬರ್ಕ್ ಭಾಷಣ ಅವರಿಗೆ ಬಹಳ ಇಷ್ಟ. ಅವರ ಇಂಗ್ಲಿಷ್ ಕಲಿಕೆ ಕೂಡಾ ಬಾಯಿಪಾಠಾಧಾರಿತವಾಗಿತ್ತು. ಹಾಗಾಗಿ ನನ್ನನ್ನೂ ಈ ಭಾಷಣವನ್ನು ಬಾಯಿಪಾಠ ಮಾಡು ಎಂದು ಒತ್ತಾಯಿಸುತ್ತಿದ್ದರು. ನಾನು ಎಸ್ಎಸ್ಎಲ್‌ಸಿ ಮುಗಿಸುವ ಮೊದಲೇ ಎಡ್ಮಂಡ್ ಬರ್ಕ್‌ನ ಭಾಷಣವನ್ನು ಬಾಯಿ ಪಾಠ ಮಾಡಿದ್ದೆ. ನನಗೆ ಉಪನಯನ ಆದ ಮೇಲೆ ಪುರುಷಸೂಕ್ತವನ್ನು ಬಾಯಿಪಾಠ ಮಾಡುವುದಕ್ಕೆ ಇದ್ದ ಒತ್ತಡಕ್ಕಿಂತಲೂ ಹೆಚ್ಚಿನ ಒತ್ತಡವನ್ನು ಅಪ್ಪ ಎಡ್ಮಂಡ್ ಬರ್ಕ್‌ನ ಭಾಷಣವನ್ನು ಬಾಯಿಪಾಠ ಮಾಡಲು ಹೇರಿದ್ದರು. ಇಂಗ್ಲಿಷ್ ಉಚ್ಚಾರಣೆಯ ಬಗಗೆ ಏನೂ ತಿಳಿಯದ ನಾನು ಎಡ್ಮಂಡ್ ಬರ್ಕ್‌ನ ಭಾಷಣವನ್ನೂ ಪುರುಷಸೂಕ್ತದ ಶ್ಲೋಕಗಳ ಧಾಟಿಯಲ್ಲೇ ಹೇಳುತ್ತಿದ್ದೆ.
ಇಷ್ಟೆಲ್ಲಾ ಇಂಗ್ಲಿಷ್ ಗೊತ್ತಿದ್ದರೂ ಅವರಿಗೆ ಇಂಗ್ಲಿಷ್‌ನ ಉಚ್ಚಾರಣೆಯ ಕುರಿತು ಏನೇನೂ ತಿಳಿದಿರಲಿಲ್ಲ. ಆದರೆ ಅವರ ಬರವಣಿಗೆಯನ್ನು ನೋಡಿದರೆ ಅವರಿಗೆ ಉಚ್ಚಾರಣೆಯ ಬಗ್ಗೆ ಏನು ತಿಳಿದಿರಲಾರದೆಂದು ಯಾರೂ ಭಾವಿಸುವಂತೆ ಇರಲಿಲ್ಲ. ಅವರ ವಾಕ್ಯಗಳೆಲ್ಲವೂ ವಿಶ್ಲೇಷಣೆಗೆ ಒಳಪಡಿಸುವಂಥವು. ಈಗಲೂ ಇಂಗ್ಲಿಷ್ ಕಲಿಯುವ ವಿದ್ಯಾರ್ಥಿಗಳಿಗೆ ಹೀಗೆ ವಾಕ್ಯಗಳನ್ನು ವಿಶ್ಲೇಷಿಸುತ್ತಾರೆ. ಒಂದು ವಾಕ್ಯದಲ್ಲಿರುವ noun clause, adverbial ಮತ್ತು adjectival clausesಗಳನ್ನು ತೋರಿಸಿಕೊಡುವ ಕೆಲಸವಿದು. ನಮಗೆಲ್ಲಾ noun clauseಗೂ adjectival clauseಗಳಿಗೆ ವ್ಯತ್ಯಾಸ ತಿಳಿಯದೆ ಒದ್ದಾಡುತ್ತಿದ್ದುದೂ ಉಂಟು. Parenthesis ಅದನ್ನು ಪ್ರತ್ಯೇಕವಾಗಿ ವಿವರಿಸಬೇಕಿತ್ತು. ಇವನ್ನೆಲ್ಲಾ ಹೇಗೆ ಗುರುತಿಸುವುದೆಂದು ಅಪ್ಪ ಹೇಳಿಕೊಡುತ್ತಿದ್ದರು. ಆದರೆ ಉಚ್ಚಾರಣೆಯ ಬಗ್ಗೆ ಮಾತ್ರ ಏನೂ ಗೊತ್ತಿರಲಿಲ್ಲ.
ಈ ಉಚ್ಚಾರಣೆಯ ಅರಿವಿಲ್ಲದೇ ಇದ್ದುದರಿಂದ ಅವರ ಬಾಯಿಂದ ವಿಚಿತ್ರ ಪದಗಳು ಹೊರಬೀಳುತ್ತಿದ್ದವು. ನಾನು ಕಾಲೇಜು ಸೇರಿದ್ದ ದಿನಗಳಲ್ಲಿ ನಡೆದ ಘಟನೆಯೊಂದಿದೆ. ಆಗ ಅವರಿಗೆ ಮೂತ್ರಬಾಧೆ ಆರಂಭವಾಯಿತು. ಇದನ್ನು ಸರಿಪಡಿಸಿಕೊಳ್ಳಲು ಸಣ್ಣ ಶಸ್ತ್ರಚಿಕಿತ್ಸೆಯನ್ನು ಮಾಡಿಸಿಕೊಂಡರು. ಇದನ್ನು ವಿವರಿಸಲು ಅವರು ನಾನು ಸರ್ಕಮ್ ಸ್ಕಿಷನ್ ಮಾಡಿಸಿಕೊಂಡೆ ಎಂದರು. ಕಾಲೇಜಿಗೆ ಹೋಗುತ್ತಿದ್ದ ನಾನು ಅದು ಹಾಗಲ್ಲ ಸರ್ಕಮ್ ಸಿಷನ್ (circumcision)ಎಂದರೆ ಅವರು ಒಪ್ಪಲೇ ಇಲ್ಲ. ಕೊನೆಗೆ ಡಿಕ್ಷನರಿ ತಂದಿಟ್ಟುಕೊಂಡು ಅವರಿಗೆ ವಿವರಿಸಬೇಕಾಯಿತು. ಆಮೇಲಿನಿಂದ ಅವರು ಪ್ರಜ್ಞಾಪೂರ್ವಕವಾಗಿ ಈ ಪದವನ್ನು ಉಚ್ಚರಿಸುತ್ತಿದ್ದರು.
ನನ್ನ ಅಪ್ಪನಿಗೊಂದು ಸ್ವಂತದ ಸಾಹಿತ್ಯ ಲೋಕವಿತ್ತು. ಇದರಲ್ಲಿ ಗೋಲ್ಡ್ ಸ್ಮಿತ್ ಮಹಾ ಲೇಖಕನೇ ಹೊರತು ಷೇಕ್ಸ್‌ಪಿಯರ್ ಅಲ್ಲ. ಗೋಲ್ಡ್ ಸ್ಮಿತ್ ಬರೆದ ವಿಕಾರ್ ವೇಕ್ ಫೀಲ್ಡ್ ಅವರ ದೃಷ್ಟಿಯಲ್ಲಿ ಮಹತ್ಕೃತಿ. ಬಹುಶಃ ಒಂದು ಕಾಲ ಘಟ್ಟದಲ್ಲಿ ಬಹಳಷ್ಟು ಮಂದಿ ಹೀಗೆಯೇ ಚಿಂತಿಸುತ್ತಿದ್ದರು ಎನಿಸುತ್ತದೆ. ಕುವೆಂಪು ಅವರಿಗೂ ಷೇಕ್ಸ್‌ಪಿಯರ್‌ಗಿಂತ ವರ್ಡ್ಸ್ ವರ್ತ್ ಮಹತ್ವದ ಕವಿ. ಏಕೆಂದರೆ ಅವರ ದೃಷ್ಟಿಯಲ್ಲಿ ವರ್ಡ್ಸ್ ವರ್ತ್ ದಾರ್ಶನಿಕ ಕವಿಯಾಗಿದ್ದರೆ ಷೇಕ್ಸ್‌ಪಿಯರ್ ಕೇವಲ ಸಂತೆಯ ಕವಿ.
೯. ಅಪ್ಪನ ದೆಸೆಯಿಂದ ಆಚಾರ್ಯನಾಗಲಿಲ್ಲ
ಅಪ್ಪ ಗಟ್ಟಿ ಧೋರಣೆಗಳನ್ನು ಹೊಂದಿದ್ದ ಮನುಷ್ಯ. ಇವುಗಳ ವಿರುದ್ಧ ಮಾತನಾಡಿದರೆ ಅವರಿಂದ ಏಟು ತಿನ್ನಬೇಕಾಗುತ್ತಿತ್ತು. ರಷ್ಯಾದ ಝಾರ್ ಗಳ ವಿಷಯಕ್ಕೆ ಸಂಬಂಧಿಸಿದಂತೆ ವಾದಿಸಿದ್ದಕ್ಕೆ ಅವರೊಮ್ಮೆ ನನಗೆ ಹೊಡೆದಿದ್ದರು. ಇದು ನಾನು ಚಿಕ್ಕವಾಗಿದ್ದಾಗಲೇನೂ ಅಲ್ಲ. ನನಗೆ ಗೋಪಾಲಗೌಡರಂಥವರೆಲ್ಲಾ ಗೆಳೆಯರಾದ ಮೇಲೆ ನಡೆದ ಘಟನೆ ಇದು.
ಆಗ ನನಗೆ ಶಂಕರನಾರಾಯಣ ಎಂಬ ಒಬ್ಬ ಗೆಳೆಯನಿದ್ದ. ನನ್ನ ‘ಸಂಸ್ಕಾರ’ ಪುಸ್ತಕವನ್ನು ನಾನು ಅವನಿಗೇ ಅರ್ಪಿಸಿದ್ದೇನೆ. ಗೋಪಾಲಗೌಡರೂ ಕೂಡಾ ಆಗ ನನ್ನ ಗೆಳೆಯರು. ನಾವು ಶಿವಮೊಗ್ಗದಲ್ಲಿದ್ದೆವು. ಈ ದಿನಗಳಲ್ಲಿ ಶಂಕರನಾರಾಯಣ, ಗೋಪಾಲಗೌಡರು ನಮ್ಮ ಮನೆಯಲ್ಲಿ ಊಟಕ್ಕೆ ಸೇರುತ್ತಿದ್ದುದು ಬಹಳ ಸಾಮಾನ್ಯ. ಒಂದು ದಿನ ನಾವೆಲ್ಲಾ ಒಟ್ಟಿಗೆ ಊಟಕ್ಕೆ ಕುಳಿತಿದ್ದೆವು. ಅಪ್ಪ ಕೂಡಾ ನಮ್ಮ ಜತೆಗೇ ಊಟಕ್ಕೆ ಕುಳಿತಿದ್ದರು. ಮಾತಿನ ಮಧ್ಯೆ ಅದು ಹೇಗೋ ರಷ್ಯಾದ ವಿಷಯ ಬಂತು.
‘ರಷ್ಯಾದಲ್ಲಿ ಕ್ರಾಂತಿಯಾಗಿದ್ದು ಒಂದು ಘೋರ ಅಪರಾಧ’ ಎಂದು ನಮ್ಮ ಅಪ್ಪ ವಾದಿಸುತ್ತಿದ್ದರು. ನಾನು ‘ಇದು ಹಾಗಲ್ಲ ಅಪ್ಪಯ್ಯ. ಅಲ್ಲಿ ಬಹಳ ನೀಚರಾಗಿದ್ದ ಝಾರ್ ದೊರೆಗಳಿದ್ದರು. ಅವರ ಆಡಳಿತದಿಂದಾಗಿ ಬೇಸತ್ತ ಜನ ಕ್ರಾಂತಿಯನ್ನು ಮಾಡಿದರು’ ಎಂದು ನಾನು ಓದಿದ ಪಾಠವನ್ನು ಅವರಿಗೆ ಒಪ್ಪಿಸಿದೆ. ಆದರೆ ಅವರು ರಷ್ಯಾದಲ್ಲಿ ಕ್ರಾಂತಿಯಾದದ್ದು ಸರಿಯಲ್ಲ ಎಂಬ ವಾದವನ್ನು ಮುಂದುವರಿಸಿದರು. ನಾನೂ ಅಷ್ಟೇ, ಕಲಿತದ್ದನ್ನೆಲ್ಲಾ ನೆನಪಿಸಿಕೊಂಡು ರಷ್ಯಾದ ಕ್ರಾಂತಿ ಸರಿ ಎಂಬ ವಾದವನ್ನು ಬೆಳೆಸುತ್ತಾ ಹೋದೆ. ವಾದ ಬೆಳೆಯುತ್ತಾ ಹೋದಂತೆ ಅಪ್ಪನಿಗೆ ತಾನು ಸೋಲುತ್ತೇನೆ ಅನ್ನಿಸತೊಡಗಿತೇನೋ. ಅವರು ತಮ್ಮ ಎಂಜಲು ಕೈಯಲ್ಲಿ ನನ್ನ ಕಪಾಳಕ್ಕೆ ಹೊಡೆದು ‘ರಷ್ಯಾದಲ್ಲಿ ಕ್ರಾಂತಿಯಾದದ್ದು ತಪ್ಪು’ ಎಂದರು.
‘ಎಂಜಲು ಕೈಯಲ್ಲಿ ನನಗೆ ಹೊಡೆದರೆ ಅಲ್ಲಿ ಕ್ರಾಂತಿಯಾದದ್ದು ಸರಿಯೋ ತಪ್ಪೋ ಎಂಬುದು ನಿರ್ಧಾರವಾಗುವುದಿಲ್ಲ’ ಎಂದು ನಾನು ಹೇಳಿದೆ. ಇದನ್ನು ಕೇಳಿ ಅಲ್ಲಿದ್ದವರೆಲ್ಲಾ ನಕ್ಕು ಬಿಟ್ಟರು. ಅಪ್ಪನಿಗೆ ಬಹಳ ನಾಚಿಕೆಯಾಯಿತು. ಇದಾದ ಮೇಲೆ ಅವರು ಯಾವ್ಯಾವುದೋ ಚರಿತ್ರೆಯ ಪುಸ್ತಕಗಳನ್ನು ತಂದು ಓದಿ ರಷ್ಯಾದ ಕ್ರಾಂತಿಯ ಬಗ್ಗೆ ಇನ್ನಷ್ಟು ತಿಳಿದುಕೊಂಡರು. ಒಂದು ದಿನ ಅವರು ಎಲ್ಲರ ಎದುರಿಗೇ ‘ನೀನು ಅವತ್ತು ಹೇಳಿದ್ದು ಕರೆಕ್ಟ್, ಅಲ್ಲಿ ಕ್ರಾಂತಿಯಾಗಬೇಕಿದ್ದು ಸಹಜವೇ ಆಗಿತ್ತು’ ಎಂದು ಒಪ್ಪಿಕೊಂಡರು.
ಅಪ್ಪ ತನ್ನ ಕಾಲಕ್ಕೆ ಬಹಳ ಆಧುನಿಕ. ನಾನು ಹೊಸ ವಿಚಾರಗಳಿಗೆ ತೆರೆದುಕೊಳ್ಳುತ್ತಿದ್ದ ಹೊತ್ತಿನಲ್ಲೇ ಅವರೂ ಅವೇ ವಿಚಾರಗಳಿಗೆ ತಮ್ಮನ್ನು ಮುಕ್ತವಾಗಿಟ್ಟುಕೊಂಡಿದ್ದರು. ಹೀಗೆ ಓದಿಕೊಳ್ಳುತ್ತಲೇ ಅವರೂ ಗಾಂಧಿವಾದಿಯೂ ಆಗಿಬಿಟ್ಟರು. ಆದರೆ ಆಸ್ತಿಯ ಹಕ್ಕು ಮುಂತಾದುವುಗಳಿಗೆ ಸಂಬಂಧಿಸಿದಂತೆ ಮಾತ್ರ ಅಪ್ಪನದ್ದು ಆಕಾಲದ ಶಾನುಬೋಗರ ನಿಲುವೇ.
ಅಪ್ಪನಿಗೆ ರಾಜಾಗೋಪಾಲಾಚಾರಿ ಎಂದರೆ ಬಹಳ ಇಷ್ಟ. ಅವರು ಬಹಳ ಬುದ್ಧಿವಂತರು, ಗಾಂಧೀಜಿಗೆ ಬೀಗರಾಗಿದ್ದವರು, ಒಂದು ಅಂತರ್ ಜಾತೀಯ ವಿವಾಹವನ್ನು ಮಾಡಿದ್ದವರು ಹೀಗೆ ಅಪ್ಪನ ಇಷ್ಟಕ್ಕೆ ಹಲವು ಕಾರಣಗಳು. ಜತೆಗೆ ಅಪ್ಪನಿಗೂ ಅವರ ಹೆಸರೇ ಇತ್ತು. ರಾಜಗೋಪಾಲಾಚಾರಿಯವರು ತಳೆದಿದ್ದ ಸಂಪ್ರದಾಯ ವಿರೋಧಿ ನಿಲುವುಗಳಿಗೂ ವೇದದಲ್ಲಿ ಪುರಾವೆಯಿದೆ ಎಂದು ತೋರಿಸಿಕೊಡಲು ಅಪ್ಪ ಸದಾ ಮುಂದಾಗುತ್ತಿದ್ದರು.
ಅಪ್ಪನ ಯೋಚನಾ ವಿಧಾನವನ್ನು ಈಗ ಅರ್ಥ ಮಾಡಿಕೊಳ್ಳಲು ಹೊರಟರೆ ನನಗೆ ನೆನಪಾಗುವುದು ಬಂಗಾಳದ ಈಶ್ವರಚಂದ್ರ ವಿದ್ಯಾಸಾಗರರು. ಅವರೂ ಅಷ್ಟೇ ಮೈಮೇಲೆ ಅಂಗಿ ಹಾಕಿಕೊಳ್ಳದ ಬ್ರಾಹ್ಮಣರು. ಆದರೆ ಅವರು ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ವಾದಿಸಿದವರು. ಬದಲಾಗುತ್ತಾ ಆಗುತ್ತಾ ಮನುಸ್ಮೃತಿಗಿಂತ ಪರಾಶರ ಸ್ಮೃತಿಯೇ ಒಳ್ಳೆಯದು ಮತ್ತು ಹೆಚ್ಚು ಮಾನವೀಯವಾಗಿರುವಂಥದ್ದು ಎಂದು ಬರೆಯಲು ಹೊರಟವರು. ಈ ಕೆಲಸಕ್ಕೆ ಕೈ ಹಾಕುವ ಮೊದಲೇ ಅವರಿಗೆ ಎಲ್ಲಾ ಬ್ರಾಹ್ಮಣರೂ ತಮ್ಮನ್ನು ವಿರೋಧಿಸುತ್ತಾರೆ ಎಂಬುದು ಗೊತ್ತಿತ್ತು. ಆದರೂ ಅವರು ತಮ್ಮ ತಂದೆಯ ಬಳಿ ಹೋಗಿ ಮನುಸ್ಮೃತಿಯ ಕುರಿತ ತಮ್ಮ ಆಲೋಚನೆಗಳನ್ನು ವಿವರಿಸಿ ‘ಇದನ್ನು ಬರೆಯಬೇಕೆಂದಿದ್ದೇನೆ. ತಮ್ಮ ಅನುಮತಿ ಬೇಕು’ ಎಂದು ಕೇಳಿದರು.
ವಿದ್ಯಾಸಾಗರರ ತಂದೆ ‘ನಾನು ಅನುಮತಿ ಕೊಡದಿದ್ದರೆ ಏನು ಮಾಡುತ್ತೀಯಾ?’ ಎಂದು ಕೇಳಿದರು. ಅದಕ್ಕೆ ವಿದ್ಯಾಸಾಗರರು ಹೇಳಿದ್ದು ಹೀಗೆ ‘ನಿಮ್ಮ ಸಾವಿನ ನಂತರ ಬರೆಯುತ್ತೇನೆ.’
ವಿದ್ಯಾಸಾಗರರ ತಂದೆ ಇದಕ್ಕೆ ‘ಅಷ್ಟೆಲ್ಲಾ ಕಾಯುವ ಅಗತ್ಯವಿಲ್ಲ. ನೀನಿಗಲೇ ಬರೆಯಬಹುದು’ ಎಂದು ಅನುಮತಿ ಕೊಟ್ಟರಂತೆ.
ನನ್ನ ಅಪ್ಪನೂ ಇಂಥದ್ದೇ ಕಾಲದಲ್ಲಿ ಬದುಕಿದ್ದವರು. ಅವರಿಗೆ ಸಂಸ್ಕೃತ ಎಂದರೆ ಬಹಳ ಪ್ರೀತಿ. ಆಧುನಿಕವಾದ ಎಲ್ಲವಕ್ಕೂ ಅದರಲ್ಲೊಂದು ಪುರಾವೆಯಿಂದ ನಂಬಿಕೆಯೂ ಜತೆಗಿತ್ತು. ಹಾಗೆಯೇ ಇಂಗ್ಲಿಷ್ ಎಂದರೂ ಪ್ರೀತಿ, ಇಂಗ್ಲಿಷ್ ಜನರ ಮೇಲೂ ಅವರಿಗೆ ಬಹಳ ಪ್ರೀತಿ, ಜತೆಗೆ ಗಾಂಧೀಜಿ ಎಂದರೆ ಇಷ್ಟ.
ಈ ಎಲ್ಲವುಗಳ ಜತೆಗೆ ಆಸ್ತಿ ಹಕ್ಕು ಹೋಗಬಾರದೆಂದು ಅವರು ಬಲವಾಗಿ ಪ್ರತಿಪಾದಿಸುತ್ತಿದ್ದರು. ಇದನ್ನು ಕಾನೂನಿನ ಪುಸ್ತಕಗಳಲ್ಲಿ ಹುಡುಕಿ ಸಾಬೀತು ಮಾಡುವುದು ಅವರ ಗಂಭೀರ ಹವ್ಯಾಸಗಳಲ್ಲಿ ಒಂದು. ಇದನ್ನು ಅವರೆಷ್ಟು ಗಂಭೀರವಾಗಿ ಮಾಡುತ್ತಿದ್ದರೆಂದರೆ ಶಿವಮೊಗ್ಗದಲ್ಲಿ ಆ ಕಾಲದಲ್ಲಿದ್ದ ಎಲ್ಲಾ ವಕೀಲರಿಗಿಂತ ಹೆಚ್ಚಾಗಿ ಅವರು ಆಸ್ತಿ ಹಕ್ಕಿನ ಬಗ್ಗೆ ತಿಳಿದುಕೊಂಡಿದ್ದರು. ಈ ಕಾರಣದಿಂದಾಗಿಯೇ ಎಲ್ಲಾ ಜಮೀನ್ದಾರರೂ ನಮ್ಮ ಮನೆಗೆ ಬಂದು ಅಪ್ಪನ ಹತ್ತಿರ ಕಾನೂನು ಸಲಹೆ ಪಡೆಯುತ್ತಿದ್ದರು. ಅವರಲ್ಲಿದ್ದ ಭಾರತೀಯ ಸಂವಿಧಾನದ ಪ್ರತೀ ಹಾಳೆಯ ಬದಿಯಲ್ಲೂ ಅವರು ಬರೆದ ಅಭಿಪ್ರಾಯಗಳಿವೆ.
ನಾನೊಬ್ಬ ಗಣಿತಜ್ಞನಾಗಬೇಕೆಂಬ ಆಸೆ ಅಪ್ಪನಿಗಿತ್ತು ಎಂದು ಮೊದಲೇ ಹೇಳಿದ್ದೆ. ಅವರ ಈ ಆಸೆಗೆ ಒಂದು ಕಾರಣವಿತ್ತು. ಅಪ್ಪನಿಗೆ ಇದ್ದ ಹುಚ್ಚುಗಳಲ್ಲಿ ಮುಖ್ಯವಾದುದು ಆಕಾಶದ ಹುಚ್ಚು. ರಾತ್ರಿ ಅಂಗಳದಲ್ಲಿ ಅಂಗಾತ ಮಲಗಿ ನಕ್ಷತ್ರಗಳ ಸಂಚಾರವನ್ನು ಗುರುತಿಸುವುದಕ್ಕೆ ಪ್ರಯತ್ನಿಸುತ್ತಿದ್ದರು. ಮೊದಲಿಗೆ ಪಂಚಾಂಗವನ್ನೇ ಆಧಾರವಾಗಿಟ್ಟುಕೊಂಡು ಎಲ್ಲವನ್ನೂ ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದ ಅವರು ಕೊನೆಕೊನೆಗೆ ಪಂಚಾಂಗ ಗಣಿತವನ್ನೇ ಕಲಿತು ತಾವೇ ಪಂಚಾಂಗ ರಚನೆಗೆ ಸಿದ್ಧರಾಗಿದ್ದರು.
ಪಂಚಾಂಗದಲ್ಲಿ ಒದಗಿಸಲಾಗುವ ಗ್ರಹಣದ ದಿನಾಂಕಕ್ಕೂ ನಿಜವಾದ ಗ್ರಹಣದ ದಿನಕ್ಕೂ ಇರುವ ವ್ಯತ್ಯಾಸ ಅವರನ್ನು ಬಹಳ ಕಾಡಿತ್ತು. ‘ನಮ್ಮ ಪೂರ್ವಿಕರು ಮಾಡಿದ ಲೆಕ್ಕಾಚಾರಗಳೆಲ್ಲಾ ಈಗ ತಪ್ಪಿವೆ. ಅವನ್ನು ಸರಿಪಡಿಸಿಕೊಳ್ಳಬೇಕು’ ಎನ್ನುತ್ತಿದ್ದ ಅವರು ಫ್ರಾನ್ಸ್ ಗೆ ಕಾಗದ ಬರೆದು ಆಕಾಶ ಕಾಯಗಳ ವರ್ತಮಾನದ ಚಲನೆಯನ್ನು ತಿಳಿಸುವ ಪುಸ್ತಕಗಳನ್ನು ತರಿಸಿಕೊಂಡು ತಮ್ಮದೇ ಆದ ಲೆಕ್ಕಾಚಾರಗಳನ್ನು ಮಾಡುತ್ತಿದ್ದರು. ಅವರ ತಲೆಯಲ್ಲಿ ಸದಾ ಎರಡು ಪಂಚಾಂಗಗಳಿರುತ್ತಿದ್ದವು. ಒಂದು ವೈಜ್ಞಾನಿಕ ಪಂಚಾಂಗವಾದರೆ ಮತ್ತೊಂದು ಸಾಂಪ್ರದಾಯಿಕ ಪಂಚಾಂಗ.
ಅಪ್ಪ ಇಂಗ್ಲಿಷ್ ನಲ್ಲೇ ಸಹಿ ಮಾಡುತ್ತಿದ್ದರು. ಅವರಿಗೆ ನ್ಯೂಮರಾಲಜಿಯಲ್ಲಿ ಬಹಳ ನಂಬಿಕೆ. ಯಾವ ಅಕ್ಷರಕ್ಕೆ ಎಷ್ಟು ಮೌಲ್ಯ ಎಂದು ಲೆಕ್ಕ ಹಾಕಿ ಹೆಸರನ್ನು ಯು. ಪಿ. ರಾಜಗೋಪಾಲಾಚಾರ್ ಎಂದೇ ಬರೆಯುತ್ತಿದ್ದರೇ ಹೊರತು ರಾಜಗೋಪಾಲಾಚಾರ್ಯ ಎಂದು ಬರೆಯುತ್ತಿರಲಿಲ್ಲ. ಅವರು ನ್ಯೂಮರಾಲಜಿಯ ಮೂಲಕ ತಮ್ಮ ಹೆಸರಿನಲ್ಲೇ ಆಂಗ್ಲೀಕರಣಗೊಂಡಿದ್ದರು. ಸಂಪ್ರದಾಯದಂತೆ ನನ್ನ ಹೆಸರು ಅನಂತಮೂರ್ತಿ ಆಚಾರ್ಯ ಆಗಬೇಕಾಗಿತ್ತು. ಆದರೆ ಅಪ್ಪನೇ ಆಚಾರ್ಯ ಬೇಡ ಎಂದು ತೀರ್ಮಾನಿಸಿ ನನ್ನ ಹೆಸರನ್ನು ಅನಂತಮೂರ್ತಿ ಎಂದು ಇಟ್ಟಿದ್ದರು.
ಅಪ್ಪ ಹೀಗೆ ಸದಾ ಹೊಸತಾದುದಕ್ಕೆ ತಮ್ಮನ್ನು ಒಡ್ಡಿಕೊಳ್ಳುತ್ತಲೇ ಇದ್ದರು. ಅವರು ಸಾಯುವ ಹೊತ್ತಿನಲ್ಲೂ ಹೀಗೆಯೇ ಇದ್ದರು. ನಾನಾಗ ಇಂಗ್ಲೆಂಡ್ ನಿಂದ ಬಂದಿದ್ದೆ. ಬಹಳ ಅಸೌಖ್ಯದಿಂದ ಹಾಸಿಗೆಯಲ್ಲೇ ಇದ್ದರು. ನನ್ನನ್ನು ಕಂಡವರೇ ತನ್ನ ದೈಹಿಕ ನೋವುಗಳ ಬಗ್ಗೆ ಹೇಳಿದರು. ಈ ಮಾತುಗಳು ಮುಗಿಯುತ್ತಿದ್ದಂತೇ ಅವರು ‘ಜಯಪ್ರಕಾಶ್ ನಾರಾಯಣ್ ಏನು ಹೇಳಿದ್ದಾರೆ ಗೊತ್ತಾ?’ ಎಂದು ರಾಜಕಾರಣದ ಮಾತನಾಡಲು ಆರಂಭಿಸಿದರು.
ಅಪ್ಪನ ಕೊನೆಯ ದಿನಗಳಲ್ಲಿ ಅವರ ಬಳಿ ಸದಾ ಎರಡು ಪುಸ್ತಕಗಳಿರುತ್ತಿದ್ದವು. ಒಂದು ಪೆಂಗ್ವಿನ್ ಪ್ರಕಾಶನ ಸಂಸ್ಥೆ ಹೊರತಂದ ಹ್ಯೂಮನ್ ಬಾಡಿ ಅಂಡ್ ಇಟ್ಸ್ ಏಲ್ ಮೆಂಟ್ಸ್ ಎಂಬ ಪುಸ್ತಕ. ಮತ್ತೊಂದು ಪಂಚಾಂಗ. ಮೊದಲನೇ ಪುಸ್ತಕ ನೋಡಿ ತನ್ನ ದೇಹದಲ್ಲಿ ಏನಾಗುತ್ತಿದೆ ಎಂಬುದನ್ನು ತಿಳಿದುಕೊಳ್ಳಲು ಅವರು ಪ್ರಯತ್ನಿಸುತ್ತಿದ್ದರು. ಪಂಚಾಂಗ ನೋಡಿ ತನ್ನ ಮೃತ್ಯುವಿಗೆ ಇದು ಒಳ್ಳೆಯ ನಕ್ಷತ್ರವೋ ಅಲ್ಲವೋ ಎಂದು ತಿಳಿದುಕೊಳ್ಳುತ್ತಿದ್ದರು. ನಾನು ಅವರನ್ನು ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿಗೆ ಕರೆದುಕೊಂಡು ಹೋಗುತ್ತೇನೆ ಎಂದಾಗ ಅವರು ‘ನನಗೆ ಈ ಕೆಲವು ದಿನಗಳಲ್ಲಿ ಮೃತ್ಯುಯೋಗವಿದೆ. ಅದು ಮುಗಿದ ಮೇಲೆ ಕರೆದುಕೊಂಡು ಹೋಗು. ನನಗೆ ಆಸ್ಪತ್ರೆಯಲ್ಲಿ ಸಾಯುವುದಕ್ಕೆ ಇಷ್ಟವಿಲ್ಲ’ ಎಂದಿದ್ದರು.
ಅಪ್ಪನಿಗೆ ಇದ್ದ ಹುಚ್ಚುಗಳಲ್ಲಿ ಮುಖ್ಯವಾದುದು ಆಕಾಶದ ಹುಚ್ಚು. ರಾತ್ರಿ ಅಂಗಳದಲ್ಲಿ ಅಂಗಾತ ಮಲಗಿ ನಕ್ಷತ್ರಗಳ ಸಂಚಾರವನ್ನು ಗುರುತಿಸುವುದಕ್ಕೆ ಪ್ರಯತ್ನಿಸುತ್ತಿದ್ದರು. ಮೊದಲಿಗೆ ಪಂಚಾಂಗವನ್ನೇ ಆಧಾರವಾಗಿಟ್ಟುಕೊಂಡು ಎಲ್ಲವನ್ನೂ ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದ ಅವರು ಕೊನೆಕೊನೆಗೆ ಪಂಚಾಂಗ ಗಣಿತವನ್ನೇ ಕಲಿತು ತಾವೇ ಪಂಚಾಂಗ ರಚನೆಗೆ ಸಿದ್ಧರಾಗಿದ್ದರು.
ಅಪ್ಪ ಆಧುನಿಕತೆಗೆ ಮುಗ್ಧವಾಗಿ ಸ್ಪಂದಿಸುತ್ತಿದ್ದರು ಎಂದು ಈಗ ಅನ್ನಿಸುತ್ತದೆ. ಆಕಾಶ ಮತ್ತು ಬೆಕ್ಕು ಕಥೆ ಬರೆಯುವಾಗ ಈ ವಿವರಗಳೆಲ್ಲಾ ನನ್ನ ಮನಸ್ಸಿನಲ್ಲಿ ಇತ್ತು. ಅದರಲ್ಲಿರುವ ಕೆಲವು ಘಟನೆಗಳು ನನ್ನ ಅಪ್ಪನ ಜೀವನದಿಂದಲೇ ಬಂದಿವೆ. ಅಪ್ಪ ಸಾಯುವುದಕ್ಕೆ ಸ್ವಲ್ಪ ಮೊದಲು ನಮ್ಮ ಮನೆಯ ಅಟ್ಟದ ಮೇಲೆ ಒಂದು ಬೆಕ್ಕು ಮರಿ ಹಾಕಿತ್ತು. ಅದು ಸದ್ದು ಮಾಡುತ್ತಾ ಇರುತ್ತಿತ್ತು. ನನ್ನ ತಮ್ಮ ಗುರುರಾಜ ಅಟ್ಟಕ್ಕೆ ಹತ್ತಿ ಬೆಕ್ಕನ್ನು ಅಲ್ಲಿಂದ ಓಡಿಸಲು ಪ್ರಯತ್ನಿಸುತ್ತಿದ್ದಾಗ ಅಪ್ಪ ‘ಪಾಪ ಕಣೋ, ಅದನ್ನು ಅಲ್ಲೇ ಬಿಡು. ಮರಿ ಹಾಕಿದೆ’ ಅಂದ ಕೆಲವೇ ಕ್ಷಣದಲ್ಲಿ ಪ್ರಾಣಬಿಟ್ಟರು. ಮರಿ ಹಾಕಿದ ಬೆಕ್ಕನ್ನು ಅಟ್ಟದಲ್ಲೇ ಉಳಿಸಲು ಹೇಳಿದ್ದೇ ಅವರ ಕೊನೆಯ ಮಾತು.
(ಮುಂದುವರಿಯುವುದು)
ಮೂಲತಃ ಹಾಸನ ಜಿಲ್ಲೆ ಸಕಲೇಶಪುರ ತಾಲ್ಲೂಕು ನಲ್ಲೂರಿನವರು. ಈಗ ಹೊಟ್ಟೆಪಾಡಿಗಾಗಿ ಬೆಂಗಳೂರಿನಲ್ಲಿ ಪತ್ರಕರ್ತ. ಸಾಹಿತ್ಯ, ವಿಜ್ಞಾನ, ಸಿನೆಮಾ, ಅಂತರ್ಜಾಲ, ಧರ್ಮ ಮತ್ತು ರಾಜಕೀಯದ ಕುರಿತು ಖಚಿತವಾಗಿ ಬರೆಯಬಲ್ಲವರು.