ಆ ಮೂವರು ಮಕ್ಕಳು ನಮ್ಮ ಶಾಲೆಯಲ್ಲಿ ಹೋಮ್ ವರ್ಕ್ ಮಾಡದೇ ಬರುವ ಶುದ್ಧ ಸೋಂಬೇರಿಗಳು. ಇವರದು ಮುಗಿಯದ ಅನುದಿನದ ಕಥೆ. ಅವರನ್ನ ನಿತ್ಯ ಹೀಗೆ ಕಾರಣಗಳನ್ನು ಹುಡುಕಿ ವಹಿಸಿಕೊಳ್ಳುತ್ತಾ ಮಕ್ಕಳ ಭವಿಷ್ಯಕ್ಕೆ ಕಲ್ಲು ಹಾಕುತ್ತಿರುವ ವ್ಯಾಮೋಹಿ ಅಮ್ಮಂದಿರು ಅವರು ಎಂದರು. ಈ ಮಾತು ಕೇಳಿ ನನ್ನ ಕೈಗೆ ಸಿಕ್ಕಂತಾಗಿದ್ದ ಆಕಾಶ ತಲೆ ಮೇಲೆ ಅಪ್ಪಳಿಸಿದಂತಾಯಿತು. ಅದೆಷ್ಟು ಬೇಜವಾಬ್ದಾರಿ ತಂದೆ ತಾಯಿಗಳು. ಎಷ್ಟು ನಾಟಕ ಮಾಡಿ ನನ್ನನ್ನು ಎಷ್ಟು ಸುಲಭವಾಗಿ ಬಕ್ರ ಮಾಡಿಬಿಟ್ಟರು ಎನಿಸಿತು.
ಅನುಸೂಯ ಯತೀಶ್ “ಬೆಳೆಯುವ ಮೊಳಕೆ” ಸರಣಿಯಲ್ಲಿ ಮಕ್ಕಳಿಗೆ ಹೋಮ್‌ವರ್ಕ್‌ ನೀಡುವ ಕುರಿತ ಬರಹ ನಿಮ್ಮ ಓದಿಗೆ

ಶಾಲಾ ಪ್ರಾರ್ಥನಾ ಸಮಯಕ್ಕೆ ಲಘು ಬಗೆಯಿಂದ ಬಂದ ಪೋಷಕರೊಬ್ಬರು ಮೇಡಂ “ನನ್ನ ಮಗ ಹೋಮ್ ವರ್ಕ್ ಮಾಡಿಲ್ಲ ಅಂದರೆ ರಾತ್ರಿ ಪೂರ್ತಿ ನಿದ್ದೇನೆ ಮಾಡಲ್ಲ” ಅಂದರು. ಆ ಮಾತು ಕೇಳಿ ನನಗೆ ಮುಗಿಲೇ ಕೈಗೆಟುಕಿದಷ್ಟು ಖುಷಿಯಾಯಿತು. ಇಂತಹ ಮಕ್ಕಳನ್ನು ಕಂಡರೆ ಶಿಕ್ಷಕರಿಗೆ ಎಲ್ಲಿಲ್ಲದ ಸಂಭ್ರಮ. ಒಂದು ಕ್ಷಣ ನನ್ನ ಮನವು ಪ್ಯಾರಾಚೂಟ್‌ನಂತೆ ಮೇಲೆ ಮೇಲೆ ಏರಿದ ಫೀಲ್ ಆಯ್ತು. ನನ್ನ ಖುಷಿಯನ್ನು ವ್ಯಕ್ತಪಡಿಸಲು ಎರಡು ತುಟಿಗಳನ್ನ ಉತ್ತರಕ್ಕೊಂದು, ದಕ್ಷಿಣಕ್ಕೊಂದು ಹಿಗ್ಗಿಸಿ ನಗಲು ಬಾಯಿ ತೆರೆಯಬೇಕು ಎನ್ನುವಷ್ಟರಲ್ಲಿ ರಪ್ ಅಂತ ಬಂದ ಇನ್ನೊಂದು ಮಾತು ಮೊರದಗಲ ತೆರೆದ ಬಾಯನ್ನು ಗಬಕ್ಕನೆ ಮುಚ್ಚಿಸಿತು.

ಅವರ ಜೊತೆ ಬಂದಿದ್ದ ಮತ್ತೊಬ್ಬ ಹೆಂಗಸು “ಅಯ್ಯೋ ಮೇಡಂ, ಅವರ ಕಥೆ ಏನು ಕೇಳುತ್ತೀರಿ? ಇಲ್ಲಿ ನನ್ನ ಮಗನ ಕಥೆ ಕೇಳಿ. ಅವನಿಗೆ ನೀವು ಹೋಮ್ ವರ್ಕ್ ಕೊಟ್ಟರೆ ಅದನ್ನು ಮಾಡಿ ಮುಗಿಸದ ಹೊರತು ನೀರನ್ನೂ ಸಹ ಕುಡಿಯುವುದಿಲ್ಲ. ತಟ್ಟೆಯಲ್ಲಿ ಹಾಕಿಟ್ಟ ಊಟ ಐಸ್ ಬಾಕ್ಸ್ ಇಂದ ತೆಗೆದ ಹಾಗಿರುತ್ತೆ” ಎಂದರು. ಈ ಹುಡುಗನಿಗೆ ಓದಿನ ಮೇಲಿನ ಆಸಕ್ತಿ ಕಂಡು ನನ್ನ ಖುಷಿಗೆ ಮತ್ತಷ್ಟು ರೆಕ್ಕೆ ಮೂಡಿದವು. ನೋಡಿ ಅಮ್ಮ, ಮಕ್ಕಳ ಕಲಿಕೆ ಬಗ್ಗೆ ಪೋಷಕರ ಬಾಯಿಂದ ಈ ರೀತಿ ಮಾತು ಕೇಳುವುದಕ್ಕಿಂತ ಸಾರ್ಥಕ ಭಾವ ಶಿಕ್ಷಕರಿಗೆ ಮತ್ತೊಂದಿಲ್ಲ. ನಿಮ್ಮಂತಹ ಜವಾಬ್ದಾರಿ ಪೋಷಕರು ಇದ್ದು ಶಿಕ್ಷಕರೊಂದಿಗೆ ಮಕ್ಕಳ ಕಲಿಕೆ ಬಗ್ಗೆ ಇಷ್ಟು ಕೈ ಜೋಡಿಸಿದರೆ ಸಾಕು ನಾವು ಏನು ಬೇಕಾದರೂ ಸಾಧಿಸಬಹುದು. ನೀವು ನಮ್ಮ ಹೆಮ್ಮೆ ಎಂದು ಬೀಗಿದೆ.

ನನ್ನ ಈ ಬಿಗುಮಾನಕ್ಕೆ ಮತ್ತಷ್ಟು ಮಸಾಲೆ ಹಾಕಿ ಪುಷ್ಟಿ ತುಂಬಿದವರು ಅವರಿಬ್ಬರ ಜೊತೆ ಬಂದಿದ್ದ ಮತ್ತೊಬ್ಬ ಪೋಷಕಿ. ನಾವು ದುಡಿಯೋದು ಯಾರಿಗೆ ಹೇಳಿ ಮೇಡಂ? ಈ ಮಕ್ಕಳಿಗೆ ತಾನೇ? ಇವರೆಲ್ಲ ಓದಿ ಚೆನ್ನಾಗಿ ಬದುಕು ಕಟ್ಟಿಕೊಳ್ಳಲಿ ಅಂತಾನೆ ನಮ್ಮ ಆಸೆ. ಅದಕ್ಕೆ ನಾನು ಮಗಳಿಂದ ಏನೂ ಕೆಲಸ ಮಾಡಿಸುವುದಿಲ್ಲ. ಬರಿ ಓದಿಕೊಳ್ಳುವುದಷ್ಟೇ ಕೆಲಸ ಅಂದಾಗ ನನಗೆ ನಿಜಕ್ಕೂ ನಮ್ಮ ಸರ್ಕಾರಿ ಶಾಲೆಗಳ ಶೈಕ್ಷಣಿಕ ಪ್ರಗತಿಗೆ ಇವರೆಲ್ಲ ದಾರಿ ದೀಪಗಳಂತೆ ಕಂಡರು. ನಾನಂತೂ ಹುಟ್ಟು ಹಬ್ಬದ ಸಿಂಗಾರಕ್ಕೆ ಊದಿ ಹಿಗ್ಗಿದ್ದ ಬಲೂನುಗಳಂತೆ ಉಬ್ಬಿ ಹೋದೆ. ಅವರೆಲ್ಲರ ಕಡೆ ಆತ್ಮೀಯ ನೋಟ ಒಂದನ್ನು ಬೀರಿ, ನನಗೆ ಪ್ರಾರ್ಥನೆಗೆ ಸಮಯವಾಗುತ್ತಿದೆ, ನೀವಿನ್ನು ಹೊರಡಿ ಎನ್ನುತ್ತಾ ಒಂದು ಹೆಜ್ಜೆ ಮುಂದೆ ಇಡಬೇಕು ಎನ್ನುವಷ್ಟರಲ್ಲಿ “ಮೇಡಂ ಏನೋ ಹೇಳುವುದಿತ್ತು” ಅಂದಾಗ ಮುಂದೆ ಇಡಲು ತೆಗೆದ ಹೆಜ್ಜೆ ಹಾಗೆ ಹಿಮ್ಮುಖವಾಗಿ ಚಲಿಸಿತು‌. ಹೌದಾ ಹೇಳಿ ಅಮ್ಮ ಏನ್ ಸಮಾಚಾರ? ಅಂದೆ.

ಏನಿಲ್ಲ ಮೇಡಂ ಮೊನ್ನೆ ಊರಲ್ಲಿ ಜಾತ್ರೆ ಇತ್ತು. ಈ ಮಕ್ಕಳನ್ನು ಕರೆದುಕೊಂಡು ಹೋಗಿದ್ದೆವು. ಅದಕ್ಕೆ ಇವತ್ತು ಹೋಂವರ್ಕ್ ಮಾಡಿಲ್ಲ. ಅವರಿಗೇನು ಬೈಬೇಡಿ, ಹೊಡಿಬೇಡಿ ಅಂದರು. ನಾವೇಕೆ ಹೊಡಿತೀವಿ, “ನಾವು ಶಿಕ್ಷಕರು ಶಿಕ್ಷೆ ನೀಡುವವರಲ್ಲಾ” ಎನ್ನುತ್ತಾ, “ಅಯ್ಯೋ ಪರವಾಗಿಲ್ಲ ಬಿಡಿ ಅಮ್ಮ, ನೀವು ನಿಮ್ಮ ಮಕ್ಕಳ ಬಗ್ಗೆ ಇಷ್ಟೆಲ್ಲ ಹೇಳಿದ್ದೀರಾ, ಒಂದು ದಿನ ಹೋಂವರ್ಕ್ ಮಾಡಿಲ್ಲ ಅಂದ್ರೆ ಏನು ನಷ್ಟ ಇಲ್ಲ. ನಾಳೆ ಮಾಡಿದರೆ ಆಯ್ತು” ಎಂದೆ. ನನ್ನ ಮಾತು ಕೇಳಿಸಿಕೊಂಡ ಮೂವರು ಹೆಂಗಸರು ಬಾಳ ಒಳ್ಳೆಯ ಮಿಸ್ ಇವರು ಎಂದು ಹೊಗಳುತ್ತಾ ‌ಹೋದಾಗ ಉಬ್ಬದ ಜೀವ ಯಾವುದಿದೆ ಹೇಳಿ. ನಾನೂ ಅದರ ಹೊರತಲ್ಲ ಎನಿಸಿತು.

ನಮ್ಮೆಲ್ಲರ ಸಂಭಾಷಣೆಯನ್ನು ಕೇಳಿಸಿಕೊಂಡ ಶಿಕ್ಷಕಿಯೊಬ್ಬರು ಪ್ರಾರ್ಥನಾ ಬಯಲಿಗೆ ಹೋಗಲು ನನ್ನೊಂದಿಗೆ ಹೆಜ್ಜೆ ಹಾಕುತ್ತಾ ನೀವು ನೆನ್ನೆ ತಾನೆ ನಮ್ಮ ಶಾಲೆಗೆ ಬಂದಿದ್ದೀರಿ, ನಿಮಗೆ ಈ ಮೂವರು ಮಹಾತಾಯಂದಿರ ಬಗ್ಗೆ ಗೊತ್ತಿಲ್ಲ ಮೇಡಂ. ಅವರ ಸುಳ್ಳು ಕುಂಟು ನೆಪಗಳನ್ನು ಕೇಳಿ ಕೇಳಿ ರೋಸಿ ಹೋಗಿದ್ದೇವೆ. ನಾವ್ಯಾರು ಅವರ ಮಾತಿಗೆ ಸೊಪ್ಪು ಹಾಕುವುದಿಲ್ಲ. ಅದಕ್ಕೆ ಇವತ್ತು ನೀವು ಸಿಕ್ಕಿದಿರಿ. ನಿಮಗೆ ಚೆನ್ನಾಗಿ ಪುಂಗಿ ಓದಿದರು. ಕೋಲೆ ಬಸವನ ಥರ ನೀವು ತಲೆ ಆಡಿಸಿ ಅವರು ನಯವಾಗಿ ತೋಡಿದ ಗುಂಡಿಗೆ ದಬಕ್ಕನೆ ಬಿದ್ದಿರಿ. ಆ ಮೂವರು ಮಕ್ಕಳು ನಮ್ಮ ಶಾಲೆಯಲ್ಲಿ ಹೋಮ್ ವರ್ಕ್ ಮಾಡದೇ ಬರುವ ಶುದ್ಧ ಸೋಂಬೇರಿಗಳು. ಇವರದು ಮುಗಿಯದ ಅನುದಿನದ ಕಥೆ. ಅವರನ್ನ ನಿತ್ಯ ಹೀಗೆ ಕಾರಣಗಳನ್ನು ಹುಡುಕಿ ವಹಿಸಿಕೊಳ್ಳುತ್ತಾ ಮಕ್ಕಳ ಭವಿಷ್ಯಕ್ಕೆ ಕಲ್ಲು ಹಾಕುತ್ತಿರುವ ವ್ಯಾಮೋಹಿ ಅಮ್ಮಂದಿರು ಅವರು ಎಂದರು. ಈ ಮಾತು ಕೇಳಿ ನನ್ನ ಕೈಗೆ ಸಿಕ್ಕಂತಾಗಿದ್ದ ಆಕಾಶ ತಲೆ ಮೇಲೆ ಅಪ್ಪಳಿಸಿದಂತಾಯಿತು. ಅದೆಷ್ಟು ಬೇಜವಾಬ್ದಾರಿ ತಂದೆ ತಾಯಿಗಳು. ಎಷ್ಟು ನಾಟಕ ಮಾಡಿ ನನ್ನನ್ನು ಎಷ್ಟು ಸುಲಭವಾಗಿ ಬಕ್ರ ಮಾಡಿಬಿಟ್ಟರು ಎನಿಸಿತು.

ಹೋಂವರ್ಕ್ ಅನ್ನೋದು ಮಕ್ಕಳಿಗೆ ಶಿಕ್ಷೆಯಲ್ಲಾ. ಹೋಂವರ್ಕ್ ಮಾಡುವುದರಿಂದ ಮಕ್ಕಳು ಏನು ಸವೆದು ಹೋಗ್ತಾರಾ? ಯಾಕೆ ಪೋಷಕರು ಈ ರೀತಿಯ ಅತಿಯಾದ ಮುದ್ದಿನಿಂದ ಮಕ್ಕಳನ್ನು ಹಾಳು ಮಾಡುತ್ತಾರೆ‌. ಹೋಮ್ ವರ್ಕ್ ನ ಆಶಯವಾದರು ಏನು? ಮಕ್ಕಳು ಶಾಲೆಯಲ್ಲಿ ಕಲಿತ ಪಾಠವನ್ನು ಮನೆಯಲ್ಲಿ ಮತ್ತಷ್ಟು ಪುನರ್ಬಲನ ಮಾಡಿಕೊಂಡು, ಕಲಿಕೆಯನ್ನು ದೃಢಪಡಿಸಿಕೊಳ್ಳಲು ತಾನೆ ನಾವು ನೀಡುವುದು. ಅದು ಮಕ್ಕಳಿಗೆ ಶಿಕ್ಷೆಯಾಗುತ್ತದೆಯೇ? ಹೀಗೆ ನನ್ನೊಳಗೆ ನಾನು ಹಲವು ಪ್ರಶ್ನೆಗಳನ್ನ ಹಾಕಿಕೊಂಡು ಪ್ರಾರ್ಥನಾ ಬಯಲು ಸೇರಿದೆ.

ಇದು ಒಂದು ನಿದರ್ಶನ ಅಷ್ಟೆ. ಇಂತಹ ಹತ್ತಾರು ಅನುಭವಗಳು ಶಿಕ್ಷಕರಿಗೆ ಆಗುತ್ತವೆ. ಈಗಿನ ಹೋಮ್ ವರ್ಕ್‌ ಶೈಲಿಗೂ ನಾವು ಓದುವಾಗ್ಯೂ‌ ಸಾಕಷ್ಟು ವ್ಯತ್ಯಾಸಗಳಿವೆ. ಆಗೆಲ್ಲ 2 ಸಲ ಗುಣಿತಾಕ್ಷರ, 5 ಸಲ ಸಂಖ್ಯೆಗಳು, 5 ಸಲ ಒತ್ತಕ್ಷರಗಳನ್ನು ಬರೆಯಿರಿ ಎಂದು ಮೇಷ್ಟ್ರು ಬಾಯಲ್ಲಿ ಹೇಳೋರು. ನಾವದನ್ನ ಮನಸ್ಸಿನಲ್ಲಿ ಇಟ್ಟುಕೊಂಡು ಬರೆದುಕೊಂಡು ಹೋಗುತ್ತಿದ್ದೆವು. ಹಾಗೆಲ್ಲ ಈಗಿನಂತೆ ಹೋಮ್ ವರ್ಕ್ ಡೈರಿ ಇರಲಿಲ್ಲ. ಮೇಷ್ಟ್ರು ಬಾಯಿ ಮತ್ತು ಮಕ್ಕಳ ಜವಾಬ್ದಾರಿ ಅಷ್ಟೇ ಡೈರಿ ಅಂತೆ ಕೆಲಸ ಮಾಡುತ್ತಿತ್ತು. ಅಂದು ಅದೆಷ್ಟು ಹೋಮ್ ವರ್ಕ್ ಕೊಡುತ್ತಿದ್ದರು ಎಂದರೆ ಇಡೀ ರಾತ್ರಿ ಕೂತು ಬರೆದರೂ ಮುಗಿಯದಷ್ಟು. ಬರೆದು ಬೇಜಾರಾಗಿ ದೇವರ ಮೇಲೆ ಭಾರ ಹಾಕಿ ಶಾಲೆಗೆ ಹೋಗುತ್ತಿದ್ದೋ. ಹೋದವರು ಸುಮ್ಮನೆ ಇರುತ್ತಿದ್ದೆವಾ? ದೇವರೇ ದೇವರೇ ಇವತ್ತು ನಮ್ಮ ಮೇಷ್ಟ್ರು ಬಸ್ ಬರದಿರಲಿ, ಅವರ ಸೈಕಲ್ ಪಂಚರ್ ಆಗಲಿ, ಸಂಬಂಧಿಕರಿಗೆ ಯಾರಿಗಾದರೂ ಏನಾದರೂ ಆಗಲಿ ಅಂತೆಲ್ಲ ದೇವರಿಗೆ ಹರಕೆ ಹೊರುತ್ತಿದ್ದೆವು. ಮೇಷ್ಟ್ರು ಅವರ ರಜೆ ಪಡೆದರಂತೂ ದೇವರೇ ನಮ್ಮ ಕೋರಿಕೆಗೆ ವರ ಕೊಟ್ಟ ಎಂದು ಕುಣಿದು ಕುಪ್ಪಳಿಸುತ್ತಿದ್ದೆವು. ಅಪ್ಪಿ ತಪ್ಪಿ ನಮ್ಮ ಕೋರಿಕೆ ಗುರಿ ಮುಟ್ಟದಿದ್ದಾಗ ಒನಕೆ ಓಬವ್ವ ಕೆಚ್ಚೆದೆಯಿಂದ ರಣರಂಗದೊಳಗೆ ಪ್ರವೇಶಿಸಿದಂತೆ ನಾವು ಧೈರ್ಯದಿಂದ ತರಗತಿ ಎಂಬ ಕಲಿಕಾ ಅಂಗಳಕ್ಕೆ ಭೀಮ ಹೆಜ್ಜೆ ಇಡುತ್ತಿದ್ದೆವು. ನಮ್ಮ ಹರಕೆ ಅಲ್ಲಿಗೆ ಮುಗಿಯುತ್ತಿರಲಿಲ್ಲ ದೇವರೇ ಮೇಷ್ಟ್ರು ಬರೋದಂತು ಬಂದ್ರೂ ಕೊನೆ ಪಕ್ಷ ಹೋಂವರ್ಕ್ ಕೇಳುವುದನ್ನು ಮರೆಯಿಸಪ್ಪ ಎಂದು ಮತ್ತೊಂದು ಹರಕೆ ಸಲಿಕೆ ಆಗುತ್ತಿತ್ತು.

ಆದರೆ ದೇವರು ವರ ಕೊಟ್ರು ಪೂಜಾರಿ ವರ ಕೊಡಲ್ಲ ಅಂತಾರಲ್ಲ… ಹಾಗೆ, ಒಂದಿಷ್ಟು ಹೋಂವರ್ಕ್ ಮಾಡಿರುವಂತ ಮಕ್ಕಳು ಸಾರ್ ಹೋಮ್ ವರ್ಕ್ ನೋಡಿ ಅನ್ನೋರು. ಇವರ ಸಂಭ್ರಮಕ್ಕೆ ಬೇರೆಯವರನ್ನ ಮೆಟ್ಟಿಲುಗಳಾಗಿ ಮಾಡಿಕೊಳ್ಳುತ್ತಾರಲ್ಲ ಎಂದು ಮತ್ತಷ್ಟು ಹುಡುಗರು ಗುನುಗುತ್ತಿದ್ದರು. ಒಳ್ಳೆ ಮೂಡಲಿ ಶಾಲೆಗೆ ಬರುವ ಸೌಮ್ಯ ಸ್ವಭಾವದ ಮೇಷ್ಟ್ರುಗಳಾಗಿದ್ದರೆ ನಾಳೆ ಮಾಡಿಕೊಂಡು ಬನ್ನಿ ಅಂತ ವಾರ್ನಿಂಗ್ ಕೊಟ್ಟು ಕೂಡಿಸುತ್ತಿದ್ದರು. ದೂರ್ವಾಸ ಮುನಿಗಳಂತೆ ಸಿಡುಕು ಮೂತಿಯವರಾದರೆ ಹತ್ತಿರಕ್ಕೆ ಕರೆದು ರೋಲರ್‌ನಿಂದ ಮೈ ಮೇಲೆ ಒಂದೆರಡು ಡಿಸೈನ್ ಟ್ಯಾಟು ಹಾಕಿ ಕಳಿಸುತ್ತಿದ್ದರು.

ಆಗ ನಮ್ಮ ಪೋಷಕರು ಯಾರೂ ಬಂದು ನಮ್ಮನ್ನು ವಹಿಸಿಕೊಳ್ಳುತ್ತಿರಲಿಲ್ಲ ಅಥವಾ ನಮ್ಮ ಪರವಾಗಿ ಸಮಜಾಯಿಷಿಯನ್ನು ಟೀಚರಿಗೆ ಕೊಡುತ್ತಿರಲಿಲ್ಲ. ಆದರೆ ಈಗ ಎಷ್ಟೆಲ್ಲ ವ್ಯತ್ಯಾಸಗಳು ಕಾಣುತ್ತವೆ ಎನಿಸಿತು. ನೆನಪುಗಳಲ್ಲಾ ಪುಟ್ಟಿದೆದ್ದು ನನ್ನ ಶಾಲಾ ಜೀವನವನ್ನು ಮರು ಸೃಷ್ಟಿಸಿತು.

ಹೋಮ್ ವರ್ಕ್ ಶಿಕ್ಷಕರಿಗೆ ನಿಜಕ್ಕೂ ರಾಶಿ ಅನುಭವಗಳ ಕಣಜ. ಹೂವೊಂದು ಒಳಗೊಳ್ಳುವ ಹಲವು ಎಸಳುಗಳಿಂದ ಸ್ಪುರಿಸುವ ಪರಿಮಳದಂತೆ. ಅವುಗಳನ್ನು ಬಿಡಿಸುತ್ತಾ ಹೋದಂತೆ ನಮಗೆ ಇಡೀ ಉದ್ಯಾನವನ ಸುತ್ತಿದಂತೆ ಭಾಸವಾಗುತ್ತದೆ.

ನನ್ನ ಈ ಬಿಗುಮಾನಕ್ಕೆ ಮತ್ತಷ್ಟು ಮಸಾಲೆ ಹಾಕಿ ಪುಷ್ಟಿ ತುಂಬಿದವರು ಅವರಿಬ್ಬರ ಜೊತೆ ಬಂದಿದ್ದ ಮತ್ತೊಬ್ಬ ಪೋಷಕಿ. ನಾವು ದುಡಿಯೋದು ಯಾರಿಗೆ ಹೇಳಿ ಮೇಡಂ? ಈ ಮಕ್ಕಳಿಗೆ ತಾನೇ? ಇವರೆಲ್ಲ ಓದಿ ಚೆನ್ನಾಗಿ ಬದುಕು ಕಟ್ಟಿಕೊಳ್ಳಲಿ ಅಂತಾನೆ ನಮ್ಮ ಆಸೆ. ಅದಕ್ಕೆ ನಾನು ಮಗಳಿಂದ ಏನೂ ಕೆಲಸ ಮಾಡಿಸುವುದಿಲ್ಲ. ಬರಿ ಓದಿಕೊಳ್ಳುವುದಷ್ಟೇ ಕೆಲಸ ಅಂದಾಗ ನನಗೆ ನಿಜಕ್ಕೂ ನಮ್ಮ ಸರ್ಕಾರಿ ಶಾಲೆಗಳ ಶೈಕ್ಷಣಿಕ ಪ್ರಗತಿಗೆ ಇವರೆಲ್ಲ ದಾರಿ ದೀಪಗಳಂತೆ ಕಂಡರು.

ನನ್ನ ಶಾಲೆಯಲ್ಲಿ ಸುಚಿತ್ರ ಎಂಬ ವಿದ್ಯಾರ್ಥಿನಿಯೊಬ್ಬಳು ಇದ್ದಳು. ಅವಳ ಹೆಸರು ಮಾತ್ರ ಸುಚಿತ್ರ. ಆದರೆ ಗುಣಗಳೆಲ್ಲ ವಿಚಿತ್ರ. ಹೋಂವರ್ಕ್ ಬಗೆಗಿನ ಅವಳ ಮನೋಧೋರಣೆ ಇನ್ನೂ ಚಿತ್ರ ವಿಚಿತ್ರ. ಆದರೆ ಹೋಮ್ ವರ್ಕ್ ಮಾತ್ರ ಪಕ್ಕ ಮಾಡುತ್ತಿದ್ದಳು. ನಾನು ಪಕ್ಕದ ಶಾಲೆಗೆ ಒಂದು ವರ್ಷದಮಟ್ಟಿಗೆ ನಿಯೋಜನೆ ಮೇರೆಗೆ ಹೋಗಿದ್ದೆ. ಎಂದಿನಂತೆ ಮಕ್ಕಳಿಗೆ ಹೋಂ ವರ್ಕ್ ನೀಡಿದೆ. ಅವಳು ಬೆಳಗ್ಗೆ ಬಂದ ತಕ್ಷಣ ಹೋಂವರ್ಕ್ ಅನ್ನು ತಂದು ನನ್ನ ಟೇಬಲ್ ಮೇಲೆ ಇರಿಸಿದಳು. ನಾನು ಆಗ ಯಾವುದೋ ಸೆನ್ಸಸ್ ಕಾರ್ಯದಲ್ಲಿ ಭಾಗಿಯಾಗಿದ್ದೆ. ನಾಳೆ ನೋಡುವೆ ಮಕ್ಕಳೇ ಅಂದೆ. ಹೀಗೆ ನಿರಂತರ ಮೂರು ದಿನಗಳ ಗಣತಿಯ ಪಾಲುದಾರಳಾಗಿ ಶಾಲೆಯಲ್ಲಿ ಹೆಚ್ಚು ಸಮಯ ಕಳೆಯಲು ಅವಕಾಶ ಸಿಗಲಿಲ್ಲ. ಆದರೂ ದಿನವು ಹೋಂವರ್ಕ್ ನೀಡುತ್ತಿದ್ದೆ. ಸುಚಿತ್ರ ಪ್ರತಿದಿನ ಶಿಸ್ತಿನ ಸಿಪಾಯಿಯಂತೆ ಹೋಂವರ್ಕ್ ಮಾಡಿ ತರುತ್ತಿದ್ದಳು. ನಾನು ಪೇಜ್ ತಿರುಗಿಸಿ ಹಾಗೆ ಕಣ್ಣಾಡಿಸುತ್ತಾ ಗುಡ್ ಎಂದು ಶಹಭಾಷ್ ಗಿರಿ ನೀಡಿ ಸಹಿ ಮಾಡದೆ ಹಾಗೆ ನೀಡುತ್ತಿದ್ದೆ. ಅದಕ್ಕೆ ಸಕಾರಣವಿತ್ತು. ಶಿಕ್ಷಕರು ಸಹಿ ಮಾಡಿದರೆಂದರೆ ಎಲ್ಲವೂ ಸರಿ ಇದೆ ಎಂದೇ ಅರ್ಥ. ಆದರೆ ನಾನು ಅದನ್ನು ಸರಿಯಾಗಿ ಪರೀಕ್ಷಿಸಿ ತಪ್ಪುಗಳನ್ನ ತಿದ್ದಲು ಸಮಯ ಇರಲಿಲ್ಲ. ಆದ್ದರಿಂದ ನಾನು ಹಾಗೆ ಬಾಯಲ್ಲೇ ಮಗುವನ್ನ ಮುಂದಿನ ಹೋಂವರ್ಕ್ ಮಾಡಲು ಪ್ರೇರೇಪಿಸುತ್ತಿದ್ದೆ. ನಾಲ್ಕನೇ ದಿನಕ್ಕೆ ಎಲ್ಲರ ಹೋಮ್‌ವರ್ಕ್‌ ಚೆಕ್ ಮಾಡಿ ರಜು ಮಾಡಿದೆ. ಅಂದು ಕನ್ನಡದ ಪದ್ಯವನ್ನು ಮಾಡಿದೆ. ನಾಲ್ಕು ದಿನಗಳ ನಂತರ ಮತ್ತೆ ಶಾಲಾ ಕಾರ್ಯದಲ್ಲಿ ತೊಡಗಿ ಮನಸ್ಸು ಬಹಳಷ್ಟು ಹಗುರವೆನಿಸಿತು.

ಮಾರನೇ ದಿನ ಅಚ್ಚರಿಯೊಂದು ಕಾದಿತ್ತು. ಹಿಂದಿನ ದಿನ ಹೇಳಿಕೊಟ್ಟ ಪದ್ಯವನ್ನು ಓದಿಸಲು ಪುಸ್ತಕ ತೆರೆದಾಗ ಸುಚಿತ್ರಾ ಪುಸ್ತಕದಲ್ಲಿ ಪದ್ಯವೇ ಮಾಯವಾಗಿತ್ತು. ಪದ್ಯ ಮತ್ತು ಎಲ್ಲಿಯವರೆಗೆ ಅಭ್ಯಾಸ ಚಟುವಟಿಕೆಗಳನ್ನು ಮಾಡಿಸಿ ಸಹಿ ಮಾಡಿದ್ದೇನೋ ಅಲ್ಲಿಯವರೆಗೆ ಪುಟಗಳನ್ನು ಪುಸ್ತಕದಿಂದ ಹರಿದು ಹಾಕಲಾಗಿತ್ತು. ನಾನು ಅಭ್ಯಾಸ ಪುಸ್ತಕ ನೋಡಿ ಗಾಬರಿಯಾದೆ. ನೆನ್ನೆ ತಾನೆ ಅಷ್ಟು ಚೆಂದವಾಗಿ ಇದ್ದ ಪುಸ್ತಕದ ಇಷ್ಟೊಂದು ಪುಟಗಳು ಒಂದೇ ದಿನದಲ್ಲಿ ಹೇಗೆ ಹರಿದವು? ಎಂದು ಅಚ್ಚರಿಯಾಯಿತು.

ನಾನು ಅವಳನ್ನು ಕರೆದು ನಿನ್ನ ತಂಗಿ ಅಥವಾ ತಮ್ಮನಿಗೆ ಪುಸ್ತಕ ಯಾಕೆ ಕೊಟ್ಟೆ. ನೋಡು ಪುಸ್ತಕ ಹೇಗೆ ಹರಿದು ಹಾಕಿದ್ದಾರೆ ಎಂದು ತುಸು ಕೋಪ ಮಿಶ್ರಿತ ದನಿಯಲ್ಲಿ ಕೇಳಿದೆ. ಆದರೆ ಅವಳು ಅಷ್ಟೇ ಸಾವಧಾನದಿಂದ ಸಮಾಧಾನ ಚಿತ್ತವಾಗಿ, ಇಲ್ಲ ಮಿಸ್ ನಾನು ಯಾರಿಗೂ ಕೊಟ್ಟಿಲ್ಲ ಎಂದು ಉತ್ತರಿಸಿದಳು. ಹಾಗಾದರೆ ಪೇಜ್ ಯಾಕೆ ಕಿತ್ತು ಹೋದವು ಎಂದಿದ್ದಕ್ಕೆ ಅಯ್ಯೋ ಅದಾ ನೀವು ಪಾಠ ಮಾಡಿ ಆಗಿತ್ತಲ್ಲಾ ಮಿಸ್, ಪಾಠ ಮುಗಿದ ಮೇಲೆ ಅದು ಯಾಕೆ ಎಂದು ಹರಿದು ಹಾಕಿದೆ ಎಂದು ಸ್ವಲ್ಪವೂ ಕಳವಳ ಭಯ ಏನೂ ಇಲ್ಲದೆ ಮೊಗದಾವರೆ ಅರಳಿಸಿ ನಗುತ್ತಾ ಹೇಳಿದಳು. ನನಗೆ ಈ ಮಾತುಗಳನ್ನು ಕೇಳಿ ಶಾಕ್ ಆಯಿತು‌. ಕೂಡಲೆ ತಲೆಯೊಳಗೆ ಏನೋ ವಿಚಾರ ಹೊಳೆದಂತಾಗಿ ತಕ್ಷಣ ಹೋಂವರ್ಕ್ ತಗೊಂಡು ಬಾ ಅಂದೆ. ಮೂರ್ನಾಲ್ಕು ದಿನಗಳಿಂದ ಬರೆದು ನಿನ್ನೆ ತಾನೆ ತೋರಿಸಿದ ಪುಸ್ತಕದಲ್ಲಿ ಶಿಕ್ಷಕಿಯ ಸಹಿ ಹಾಕಿದ್ದು ಪುಸ್ತಕದೆಡೆಗೆ ಮಾತನಾಡದೆ ದೃಷ್ಟಿ ಹರಿಸಿದೆ. ಅವಳಿಗೆ ನನ್ನ ನೋಟದ ಅರ್ಥ ತಿಳಿದುಹೋಗಿತ್ತು. ಮಿಸ್ ನೀವು ನೆನ್ನೆ ಹೋಮ್ ವರ್ಕ್ ನೋಡಿದ ಮೇಲೆ ಮತ್ತೆ ಯಾಕೆ ಈ ಪುಟಗಳು ಎಂದು ಹರಿದು ಹಾಕಿದೆ ಎಂದಳು. ಒಂದು ಕ್ಷಣ ಏನು ಮಾಡಬೇಕೆಂದು ತಿಳಿಯದೆ ಮೌನಕ್ಕೆ ಶರಣಾದೆ.

ತದನಂತರ ಅವಳನ್ನು ತಿದ್ದಿ ಬುದ್ದಿ ಹೇಳಲು ಮಾಡಿದ್ದೆಲ್ಲ ಗೋರ್ಕಲ್ಲ ಮೇಲೆ ಮಳೆ ಹೋದಂತೆ ಆಯ್ತು. ಅವಳ ದೃಷ್ಟಿಯಲ್ಲಿ ಟೀಚರ್ ಪಾಠ ಮಾಡಿದ್ದು ಮುಗಿದರೆ ಆ ಪೇಜ್‌ಗಳು ಇರಬಾರದು. ಹೋಮ್ ವರ್ಕ್‌ಗೆ ಶಿಕ್ಷಕರ ಸಿಹಿ ಬಿದ್ದರೆ ಅದು ರದ್ದಿ ಪೇಪರ್‌ಗೆ ಸಮವಾಗಿತ್ತು. ಅವಳಲ್ಲಿ ಬದಲಾವಣೆ ಕಾಣದಾದಾಗ ಪ್ರತಿ ಪಾಠ ಮುಗಿದಾಗ ಹೋಮ್ ವರ್ಕ್ ನೋಡಿ ತಿದ್ದುತ್ತಿದ್ದೆ. ಆದರೆ ರುಜು ಮಾಡುತ್ತಿರಲಿಲ್ಲ, ದಿನಾಂಕ ನಮೂದಿಸುತ್ತಿರಲಿಲ್ಲ. ಹಾಗಾಗಿ ಮುಕ್ಕಾಲು ತಿಂಗಳು ಕಳೆದರೂ ಆ ಪುಟಗಳು ಮಾತ್ರ ಶಿಕ್ಷಕಿಯ ಸಹಿಯ ನಿರೀಕ್ಷೆಯಲ್ಲಿ ಬಕಪಕ್ಷಿಯಂತೆ ಕಾಯುತ್ತಿದ್ದವು. ಈ ಮಧ್ಯ ಶಾಲೆಗೆ ಭೇಟಿ ನೀಡಿದ ಇನ್ಸ್ಪೆಕ್ಟರ್ ಮಕ್ಕಳ ಅಭ್ಯಾಸ ಪುಸ್ತಕ ನೋಡಿ ವಿಸಿಟ್ ಬುಕ್‌ನಲ್ಲಿ ಮಕ್ಕಳ ಅಭ್ಯಾಸ ಪುಸ್ತಕ ಓದಿ ತಿದ್ದಿದ ನಂತರ ಸಹಿ ಮಾಡಲು ಶಿಕ್ಷಕಿಗೆ ನಿರ್ದೇಶಿಸಲಾಗಿದೆ ಎಂದು ವರದಿ ಬರೆದಾಯಿತು. ಅವಳ ಬುಕ್ ತರಿಸಿ ಇನ್ಸ್ಪೆಕ್ಟರ್ ಇಂದಾನೆ ಸಹಿ ಮಾಡಿಸಿದೆ. ಅಂದು ಮಧ್ಯಾಹ್ನದವರೆಗೂ ಶೈಕ್ಷಣಿಕ ವಿಚಾರಗಳ ಕುರಿತು ಚರ್ಚಿಸುತ್ತಾ ಅವರನ್ನು ಅಲ್ಲೇ ಇರುವಂತೆ ನೋಡಿಕೊಂಡೆ‌. ಊಟದ ವಿರಾಮ ಮುಗಿಸಿ ಬಂದ ಮೇಲೆ ಪುಸ್ತಕ ತರಿಸಿ ಅಧಿಕಾರಿಗೆ ತೋರಿಸಿದೆ.‌ ಸಹಿ ಹಾಕಿದ್ದ 60 ಪೇಜ್‌ಗಳನ್ನ ಹರಿದು ಬ್ಯಾಗಲ್ಲಿ ತುರಿಕಿಕೊಂಡಿದ್ದಳು. ಗಾಬರಿಯಾದ ಇನ್ಸ್ಪೆಕ್ಟರ್ ಪೇಜ್‌ಗಳು ಎಲ್ಲಿ ಹೋದವು ಎಂದರು. ಆಗ ಅವಳು ಸರಿಯಾಗಿದೆ ಅಂತ ನೀವು ಸೈನ್ ಮಾಡಿದ್ರಲ್ಲ ಸರ್, ಆ ಪಾಠ ಮುಗಿಯಿತು. ಅದಕ್ಕೆ ಹರಿದು ಹಾಕಿದೆ ಎಂದಳು. ಆಗ ಇನ್ಸ್ಪೆಕ್ಟರ್ ಈ ಮಗುವಿಗೆ ನೀವೇ ಸರಿಯಾದ ಟೀಚರ್ ನೀವು ಮಾಡುವ ಕ್ರಮವೇ ಸರಿಯಿತ್ತು. ಅನ್ಯಾಯವಾಗಿ ನಾನು ಒಂದು ವರ್ಷದ ನಿಮ್ಮ ಶ್ರಮ ಅರ್ಥ ಮಾಡಿಕೊಳ್ಳದೇ ಎಲ್ಲವನ್ನು ಹಾಳು ಮಾಡಿಬಿಟ್ಟೆ. ಇಷ್ಟೊಂದು ಪೇಜ್‌ಗಳನ್ನ ಹರಿಯುವುದಕ್ಕೆ ನಾನೇ ಕಾರಣನಾದೆ ಎಂದು ನನಗೂ ಶಹಭಾಸ್ ಗಿರಿ ನೀಡಿ ಹೊರಟರು.

ಇದೊಂದೇ ಅಲ್ಲ. ಹೋಂ ವರ್ಕ್ ಸುತ್ತ ಹಲವಾರು ಹಾಸ್ಯಮಯ ಹಾಗೂ ಗಂಭೀರ ವಿಚಾರಗಳು ಹೆಣೆದುಕೊಂಡಿರುತ್ತವೆ. ಹೋಂವರ್ಕ್ ಮನೆಯಲ್ಲಿ ಬಿಟ್ಟು ಬಂದಿದ್ದೇನೆ ನಾಳೆ ತಂದು ತೋರಿಸುತ್ತೇನೆ ಎಂಬ ಡೈಲಾಗ್‌ಗಳು ಬಹಳಷ್ಟು ಶಿಕ್ಷಕರನ್ನು ಎದುರು ಗೊಂಡಿರುತ್ತವೆ. ನಾವು ಓದಿದ ಕಾಲದಲ್ಲಿ ಆದರೆ ಮನೆಯಲ್ಲಿ ಬಿಟ್ಟು ಬಂದಿದ್ದೇನೆ ಎಂದಾಗ ಕೆಲವು ಶಿಕ್ಷಕರು ಸಹಸ್ರ ನಾಮಾವಳಿ ಹಾಡಿ ಕೂಡಿಸುತ್ತಿದ್ದರು. ಮತ್ತಷ್ಟು ಜನ ಶಿಕ್ಷಕರು ರೂಲರ್‌ನಿಂದು ಮಕ್ಕಳ ಮೈ ಮೇಲೆ ದೊಣ್ಣೆ ಕುಣಿತ ಮಾಡಿಸುತ್ತಿದ್ದರು. ಆದರೆ ಈಗ ಆಗಿಲ್ಲ. ಮಕ್ಕಳು ಹೋಮ್ ವರ್ಕ್ ಮನೇಲಿ ಬಿಟ್ಟು ಬಂದಿದ್ದೇವೆ ಎಂದರೆ ಹೌದಾ, ಬಾ ಬೈಕ್ ಏರಿ ಕೂರು ಕರೆದುಕೊಂಡು ಹೋಗುವೆ ಹೋಂವರ್ಕ್ ತರೋಣ ಎಂದು ಕೆಲವು ಶಿಕ್ಷಕರು ಹೇಳಿದರೆ, ಮತ್ತಷ್ಟು ಜನ ಶಿಕ್ಷಕರು ಹೋಮ್ ವರ್ಕ್ ಮರೆತುಹೋಗುವಷ್ಟು ವಯಸ್ಸಾಯಿತಾ? ಡೈರಿಯಲ್ಲಿ ನೋಟ್ ಮಾಡಿಕೊಂಡಿರಲಿಲ್ಲವಾ? ಎಂದು ಪ್ರಶ್ನಿಸುತ್ತಾ ವಿದ್ಯಾರ್ಥಿಗಳು ಸುಳ್ಳು ಹೇಳುವುದನ್ನು ತಡೆಯಲು ಪ್ರಯತ್ನಿಸುತ್ತಾರೆ.

ಪ್ರತಿದಿನ ಎಲ್ಲಾ ಶಿಕ್ಷಕರು ತಮ್ಮ ವಿಷಯಗಳನ್ನು ಹೋಂವರ್ಕ್ ಮಾಡಿದರೆ ಮಕ್ಕಳಿಗೆ ಒಮ್ಮೆಗೆ ಮಾನಸಿಕ ಒತ್ತಡ ಬಿದ್ದು ಕಿರಿಕಿರಿ ಪಡುತ್ತಾರೆ. ಜೊತೆಗೆ ಹೆಚ್ಚು ಕಾಲ ಕೂರುವುದರಿಂದ ದೈಹಿಕ ಬೆಳವಣಿಗೆ ಮೇಲು ಪರಿಣಾಮ ಬೀರುತ್ತದೆ ಎಂದು ಅರಿತು ಶಿಕ್ಷಣ ಇಲಾಖೆ ಮಹತ್ವದ ಆದೇಶ ನೀಡಿದೆ. ಮಕ್ಕಳ ವಯೋಮಾನ, ತರಗತಿ ಎಲ್ಲವನ್ನು ಪರಿಗಣಿಸಿ ಒಂದು ವಾರದಲ್ಲಿ ಇಂತಿಷ್ಟು ವಿಷಯಗಳಲ್ಲಿ ಇಷ್ಟೇ ಹೋಂವರ್ಕ್ ನೀಡಬೇಕು ಎಂದು ಶಿಕ್ಷಣ ತಜ್ಞರು ಮತ್ತು ಮಕ್ಕಳ ವಿಜ್ಞಾನಗಳ ಮೂಲಕ ಚರ್ಚಿಸಿ ನಿಗದಿಪಡಿಸಿದೆ. ಅದರಂತೆ ಈಗ ಹೋಂವರ್ಕ್ ಮಕ್ಕಳಿಗೆ ಹೊರೆಯಾಗುತ್ತಿಲ್ಲ.

ಇಂದು ಶಿಶುಸ್ನೇಹಿ ಹೋಮ್ ವರ್ಕ್ ನೀಡಲಾಗುತ್ತಿದೆ. ನಾವೆಲ್ಲ ಓದುವಾಗ ಇದು ಓದು ಬರಹವನ್ನು ಮಾತ್ರ ಒಳಗೊಂಡಿತ್ತು. ಆದರೆ ಈಗ ನಾವಿನ್ಯಪೂರ್ಣತೆಗೆ ತೆರೆದುಕೊಂಡಿದೆ. ಹೊಸ ಹೊಸ ಪ್ರಯೋಗಗಳು, ಯೋಜನಾ ಕಾರ್ಯ, ನಿಯೋಜಿತ ಕಾರ್ಯ, ವಿಭಿನ್ನ ಚಟುವಟಿಕೆಗಳು, ಸಮೀಕ್ಷೆ, ವರದಿ, ಪ್ರಬಂಧ, ಅನುಭವಗಳ ಅಭಿವ್ಯಕ್ತಿ ಮುಂತಾದ ಸ್ವರೂಪಗಳಲ್ಲಿ ಹೋಮ್ ವರ್ಕ್ ನೀಡಲಾಗುತ್ತದೆ. ಮಕ್ಕಳ ಕಲಿಕೆ ದೃಷ್ಟಿಯಿಂದ ಶಾಲಾ ಜೀವನದ ಅತಿ ಮುಖ್ಯವಾದ ಚಟುವಟಿಕೆಗಳಲ್ಲಿ ಹೋಮ್ ವರ್ಕ್ ಕೂಡ ಒಂದಾಗಿದೆ.