ಅಲ್ಲೇ ರಸ್ತೇ ಬದಿಯಲ್ಲಿ ಚಿಕ್ಕ ಟವಲ್ ಹಾಕಿ ನನ್ನನ್ನು ಕೂರಿಸಿ ತಾನೂ ಛತ್ರಿ ಬಿಡಿಸಿ ಕುಳಿತುಕೊಂಡು ಬಿಟ್ಟಳು. ನನಗೋ ಕೋಪವೆಂದರೆ ಕೋಪ. “ನಾನು ಪಾಯಸ ಕುಡಿದಿದ್ದೇನೆ’’ ಅಂದರೆ ಕೇಳಲೇ ಇಲ್ಲ. ಗಲ್ಲ ಸವರಿ, ತಲೆ ಸವರಿ “ಊಟ ವೇಸ್ಟ್ ಮಾಡಬಾರದು….!” ಎನ್ನುತ್ತಾ ತಿನ್ನಿಸಲು ಬಂದರೆ ನಾನು ತಿನ್ನುತ್ತೇನೆಯೇ? ಸಾಧ್ಯನಾ? ತುತ್ತನ್ನಷ್ಟೇ ತಿಂದೆ ಕೋಪದಿಂದ. ತನ್ನ ಕೈಯ್ಯಲ್ಲೇ ನನ್ನ ಬಾಯೊರೆಸಿ “ಜಾಗ್ರತೆ ಈಗ್ ಹೋಗು ಸಂಜೆ ಬೇಗ ಸೈಡಲ್ಲಿ ಬಾ” ಎಂದು ಟಾಟಾ ಹೇಳಿಬಿಟ್ಟಳು. ಸತ್ಯ ಹೇಳಬೇಕೆಂದರೆ ಅಜ್ಜಿಯ ವಿಚಿತ್ರ ಹಠ ಕಂಡು ಆ ದಿನ ಸಹಿಸಲಾಗದ ಕೋಪ ಬಂದಿತ್ತು.
ಸುಮಾವೀಣಾ ಬರೆಯುವ “ಕೊಡಗಿನ ವರ್ಷಕಾಲ” ಸರಣಿಯ ಹತ್ತೊಂಭತ್ತನೆಯ ಕಂತು ನಿಮ್ಮ ಓದಿಗೆ

ಮಡಿಕೇರಿಯಂಥ ನಗರದ ಆ ಮಳೆಗಾಲದ ಜೀವನ ಒಮ್ಮೊಮ್ಮೆ ಹಿತವೂ ಒಮ್ಮೊಮ್ಮೆ ಅಹಿತವೂ ಅನ್ನಿಸುತ್ತಿತ್ತು. ಮಳೆಗಾಲದ ಆ ಸಂದರ್ಭದಲ್ಲಿ ಶಾಲೆಯಲ್ಲಿ ಕಾಲೇಜಿನಲ್ಲಿ ಕೇಳಿಬರುತ್ತಿದ್ದ ರಿವರ್ ಬ್ಲಾಕ್, ರೋಡ್ ಬ್ಲಾಕ್, ಮರಬಿದ್ದಿದೆ, ಬರೆ ಕುಸಿದಿದೆ ಎಂಬ ಮಾತುಗಳು ಮಳೆಯ ತೀವ್ರತೆಯನ್ನು ಹೇಳುತ್ತಿದ್ದವು. ಮಳೆಗಾಲದ ತಯಾರಿಗಳು ವೃದ್ಧರಾದಿಯಾಗಿ ಮಕ್ಕಳವರೆಗೆ ತಯಾರಿ ನಡೆಸುತ್ತಿದ್ದರು. ಮಳೆಗಾಲದ ಆ ದಿನಗಳಲ್ಲಿ ಹಂಡೆ ಒಲೆಯಲ್ಲಿ ಬಿಸಿ ನೀರು ಸದಾ ಇರುತ್ತಿತ್ತು, ಖಾಲಿ ಕಾಫಿ ಬೆಚ್ಚಗೆ ಇದ್ದೇ ಇರುತ್ತಿದ್ದ ಕಾರಣ ಎಲ್ಲರೂ ರಾಯಲ್ ಟ್ರೀಟ್ಮೆಂಟ್‌ನಲ್ಲಿ ಇರುತ್ತಿದ್ದೆವು. ಶಾಲೆಗೆ ಹೋಗುವ ಮಕ್ಕಳು ಆ ಮಂಜಿನ ವಾತಾವರಣದಲ್ಲಿ ಮುಂದೆ ಯಾವ ವಾಹನ ಬರುತ್ತಿದೆ ತಿಳಿಯದೆ ಬೀಳುವ ವಾಹನ ಅಪಘಾತಕ್ಕೆ ಒಳಗಾಗುವ ಸನ್ನಿವೇಶ ಸಾಮಾನ್ಯವಾಗಿ ಇರುತ್ತಿದ್ದವು.

ನಾನು ಒಂದನೆ ತರಗತಿಯಲ್ಲಿ ಓದುತ್ತಿದ್ದಾಗ ಶಾಲೆ ಬಿಟ್ಟು ಮನೆಗೆ ಬರುವಾಗ ಅಪಘಾತವಾಗಿತ್ತು. ಈಗಿರುವ ಸಾಯಿ ಹಾಕಿಗ್ರೌಂಡಿನ ಎದುರಲ್ಲಿ ಆಚೆ ರಸ್ತೆಯಿಂದ ಈಚೆ ದಾಟುವಾಗ ಜೀಪಿಗೆ ಸಿಕ್ಕಿದ್ದೆ. ಒಂದು ಕ್ಷಣಕ್ಕೆ ಜೀಪಿನಲ್ಲಿ ಇದ್ದವರು ಓ…… ಎನ್ನುತ್ತಿದ್ದು ಕೇಳಿತು ಮತ್ತೆ ಕಣ್ಣು ಬಿಟ್ಟಾಗ ಆಸ್ಪತ್ರೆಯಲ್ಲಿ ಶ್ವೇತಾಂಬರಿಯಾಗಿ ಮಲಗಿದ್ದೆ. ಕಾಲು ಅಲುಗಿಸಲು ಆಗುತ್ತಿರಲಿಲ್ಲ. ಕೈ ಅಲುಗಿಸಲೂ ಆಗುತ್ತಿರಲಿಲ್ಲ. ಅಪ್ಪ ಅಮ್ಮ ನನ್ನ ಸುತ್ತಲೂ ನಿಂತಿದ್ದರು. ಆಗಲೆ ನನ್ನ ಬೆಡ್‌ಗೆ ಹೊಂದಿಕೊಂಡಂತೆ ಇದ್ದ ಕಪಾಟಿನಲ್ಲಿ ಬ್ರೆಡ್ ರಾಶಿಯಾಗಿ ಒಟ್ಟಲ್ಪಟ್ಟಿತ್ತು. ಆಗಲೆ ನನ್ನ ಈಗಿನ ಪರಿಸ್ಥಿತಿಯ ತೀವ್ರತೆ ಅರ್ಥವಾಗಿದ್ದು. ಮರುದಿನ ಸಿಸ್ಟರ್ ಕ್ಲಾಸ್ ಟೀಚರ್ ನೋಡಿಕೊಂಡು ಹೋಗಲು ಬಂದಿದ್ದರು. ಮಿಕ್ಕಂತೆ ನನ್ನಜ್ಜಿ ನನ್ನ ಜೊತೆಗೆ ಇದ್ದು ನಾನು ಆರಾಮವಾಗುವವರೆಗೂ ನನ್ನ ಆರೈಕೆ ಮಾಡಿದ್ದರು. ನನ್ನನ್ನು ಜೋಪಾನವಾಗಿ ನೋಡಿಕೊಂಡ ಅಜ್ಜಿಗೆ ಈ ಮೂಲಕ ಧನ್ಯವಾದಗಳು.

ಡಿಸ್ಪೋಸಲ್ ಸಿರಂಜ್‌ಗಳು ಈಗಿನಂತೆ ಇರಲಿಲ್ಲ. ಸ್ಟೆರಲೈಸೇಶನ್ ಮಾಡಿ ಇಂಜಕ್ಷನ್ ಕೊಡುತ್ತಿದ್ದರು. ಇಂಜಕ್ಷನ್ ಬಹಳ ಭಯ ಅನ್ನಿಸುತ್ತಿತ್ತು. ಸಿಸ್ಟರ್ ಸೂಜಿ ಹಿಡಿದೇ ಬಂದರೂ ತಕ್ಷಣಕ್ಕೆ ಚುಚ್ಚುತ್ತಿರಲಿಲ್ಲ. ಮಾತನಾಡಿಸಿ ಮರೆಯಲ್ಲಿ ಇಂಜಕ್ಷನ್ ಕೊಡುತ್ತಿದ್ದರು. ಇಂದಿಗೂ ಅವರ ಮುಖ ಧ್ವನಿ ಅಸ್ಪಷ್ಟ. ವೈದ್ಯರೂ ನಿರಂತವಾಗಿ ಬಂದು ನೋಡಿ ಹೋಗುತ್ತಿದ್ದರು. ಡ್ರೆಸಿಂಗ್ ಮಾಡುವಾಗ ಟಿಂಚರಿನ ಉರಿ ಹಾಸ್ಪಿಟಲ್‌ನಲ್ಲಿ ಹಾಕುತ್ತಿದ್ದ ಕಪ್ಪು ಫೆನಾಲಿನ ವಾಸನೆ ಅಸಹನೆ ಉಂಟು ಮಾಡಿದರೂ ಆಸ್ಪತ್ರೆಯಿಂದ ಹೊರಬರುವಾಗ ಆ ಕ್ಷಣಕ್ಕೆ ಬೇಸರ ಅನ್ನಿಸಿತು.

ಮನೆಗೆ ಬಂದು ನೋಡಿದರೆ ನನ್ನ ಬ್ಯಾಗು ಟಿಫಿನ್ ಬಾಕ್ಸ್ ಹೊರಗೆ ಬಿದ್ದಿದ್ದವು. ಬ್ಯಾಗು ನವೆದು ಹೋಗಿತ್ತು. ಬಾಕ್ಸ್ ಜಜ್ಜಿ ಹೋಗಿದ್ದವು. ನೋಟ್ ಪುಸ್ತಕದ ಹಾಳೆಗಳೂ ಸಹ ಅರೆಬರೆ ಹಾಳಾಗಿದ್ದವು. ಇನ್ನು ಶಾಲೆಗೆ ಹೋದಾಗ ಟೀಚರ್ಸ್ ಪ್ರಶ್ನೆಗಳ ಸುರಿ ಮಳೆಸುರಿಸಿದರೂ ಅಡ್ಡ ಮಳೆಯಂತೆ ನಿಂತು ಹೋಯಿತು. ದಾಕ್ಷಾಯಿಣಿ ಎನ್ನುವ ಸಹಪಾಠಿಯಲ್ಲಿ ನೋಟ್ಸ್ ತೆಗೆದುಕೊಂಡು ಕಂಪ್ಲೀಟ್ ಮಾಡುವ ಸರದಿ ಭಯಂಕರವಾಗಿತ್ತು. ಒಟ್ಟಿಗೆ ಅಷ್ಟೂ ನೋಟ್ಸ್ ಬರೆಯಬೇಕಿತ್ತು. ಈಗಲೂ ಆಕ್ಸಿಡೆಂಟ್ ಇಂದ ಆದ ಗಾಯದ ಗುರುತುಗಳು ಇವೆ. ಅಷ್ಟೂ ದಿನದವರೆಗೆ ನನ್ನ ಸಂಗಡ ಅಜ್ಜಿ ಇದ್ದರು. ಅಜ್ಜಿ ಹೆಣ್ಣು ಮಕ್ಕಳೆಂದರೆ ಇಷ್ಟ ಪಡುತ್ತಿದ್ದರು. ನಾನು ನೋಡಿದ ಮಟ್ಟಿಗೆ ನಮ್ಮಮ್ಮ, ದೊಡ್ಡಮ್ಮ, ಚಿಕ್ಕಮ್ಮಂದಿರನ್ನು ಪ್ರೀತಿಸುವ ಹಾಗೆ ನನ್ನ ಸೋದರಮಾವಂದಿರನ್ನು ಪ್ರೀತಿಸುತ್ತಿರಲಿಲ್ಲ. ನಮ್ಮನ್ನು ಅಂದರೆ ಹೆಣ್ಣು ಮೊಮ್ಮಕ್ಕಳನ್ನು ಪ್ರೀತಿಸುವ ಹಾಗೆ ನನ್ನ ತಮ್ಮಂದಿರನ್ನು ಪ್ರೀತಿಸುತ್ತಿರಲಿಲ್ಲ. ಹಬ್ಬ-ಹರಿದಿನಗಳನ್ನು ಆಕೆಯ ಉಸ್ತುವಾರಿಯಲ್ಲಿ ಸಂಭ್ರಮದಿಂದ ಆಚರಿಸುತ್ತಿದ್ದ ದಿನಗಳು ಈಗಲೂ ಕಣ್ಮುಂದೆ ತೇಲಿ ಬರುತ್ತವೆ. “ಹೆಣ್ಣು ಮಕ್ಕಳಿರುವ ಮನೆಗಳಲ್ಲಿ ಯಾವ ಆಚರಣೆಯನ್ನೂ ತಪ್ಪಿಸಬಾರದು. ನಾಳೆ ಹೋದ ಮನೆಯಲ್ಲಿ ಅವರಿಗೆ ತಬ್ಬಿಬ್ಬಾಗತ್ತೆ” ಅನ್ನೋದೇ ಅವಳ ವಾದವಾಗಿತ್ತು. ಎಲ್ಲ ವಿಷಯದಲ್ಲೂ ಹಂಡ್ರೆಡ್ ಪರ್ಸೆಂಟ್ ಬಯಸುವ ಆಕೆಯ ಮಾತುಗಳು ಅಷ್ಟೇ ಖಡಕ್ ಆಗಿರುತ್ತಿದ್ದವು. ನಾನೋದಿದ್ದು ಕಾನ್ವೆಂಟ್ ಶಾಲೆಯಲ್ಲಿ. ಮಡಿಕೇರಿಯಲ್ಲಿದ್ದ ನಮ್ಮ ಮನೆಗೂ ಶಾಲೆಗೂ ಅಷ್ಟೇನೂ ದೂರವಿರಲಿಲ್ಲ. ಕೆಲವೊಮ್ಮೆ ಅಜ್ಜಿ ಶಾಲೆಗೆ ಊಟವನ್ನೂ ತೆಗೆದುಕೊಂಡು ಬರುತ್ತಿದ್ದಳು. ಡಿಸೆಂಬರ್ ತಿಂಗಳಲ್ಲಿ ಆಕೆಯ ಬಗ್ಗೆ ಹೇಳುತ್ತಿರುವುದರಿಂದ ಡಿಸೆಂಬರ್ ತಿಂಗಳಲ್ಲಿಯೇ ಬರುವ ‘ಸುಬ್ರಹ್ಮಣ್ಯಷಷ್ಠಿ’ಯ ನೆನಪುಗಳನ್ನೇ ಮೊದಲಿಗೆ ಹೇಳುತ್ತೇನೆ.

‘ಸುಬ್ರಹ್ಮಣ್ಯ ಷಷ್ಠಿ’ ಎಂದರೆ ‘ತರಕಾರಿ ಹಬ್ಬ’ ಅಲ್ವೇ! ಆ ದಿನ ಬೆಳಗ್ಗೆ ತಿಂಡಿ ಏನು ಮಾಡಿದ್ದರು ನೆನಪಿಗೆ ಬರುತ್ತಿಲ್ಲ. ಆದರೆ “ನಾನೆ ಶಾಲೆಗೆ ಊಟ ತರುವುದಾಗಿ ಹೇಳಿದ ಅಜ್ಜಿ ಮಾತು ನೆನಪಿದೆ. ನೆನಪಲ್ಲಿ ಉಳಿಯೋಹಾಗ್ ಅಜ್ಜಿ ಮಾಡಿದ್ದಾಳೆ. ಆಗ ಮಧ್ಯಾಹ್ನ 1 ಗಂಟೆಗೆ ಊಟಕ್ಕೆ ಬಿಡುತ್ತಿದ್ದರು. 1 ಗಂಟೆ ಕಳೆದು ಹತ್ತು ನಿಮಿಷವಾದರೂ ಅಜ್ಜಿ ಶಾಲೆಯ ಮೇನ್ ಗೇಟ್ ಬಳಿ ಕಾಣಿಸಲಿಲ್ಲ. ಮನೆ ಹತ್ತಿರವೇ ಇದ್ದ ಕಾರಣ ಅಜ್ಜಿ ಊಟ ತೆಗೆದುಕೊಂಡು ಬಂದಿಲ್ಲ ಎಂದವಳೆ ನಾನು ನೇರ ಮನೆಗೆ ಹೋದೆ. ಅಲ್ಲಿ ನಮ್ಮಮ್ಮ “ಅಜ್ಜಿ ಸಿಗಲಿಲ್ಲವ ಎಂದರೆ ಇಲ್ಲ ಎಂದೆ” ಸರಿ! ಎನ್ನುತ್ತಲೇ ಬಿಸಿ ಬಿಸಿ ಷಷ್ಠಿ ಸಾಂಬಾರ್ ಜೊತೆಗೆ ಸ್ವಲ್ಪ ಅನ್ನಹಾಕಿಸಿಕೊಂಡು ಹೊಟ್ಟೆ ಭರ್ತಿ ಬಿಸಿಬಿಸಿ ಗಸಗಸೆ ಪಾಯಸ ಕುಡಿದು ಶಾಲೆಗೆ ಹೊರಟೆ.

ಹಾಗೆ ಪ್ರಯಾಸದಲ್ಲಿಯೇ ಏರು ದಾರಿಯನ್ನು ಏರಿ ಹೋಗುತ್ತಿರಬೇಕಾದರೆ ಅಜ್ಜಿ ಅರ್ಧಕ್ಕೆ ಸಿಕ್ಕೇ ಬಿಟ್ಟರು. “ಪೋಲಿಸರ ಕೈಗೆ ಕಳ್ಳ ಸಿಕ್ಕಂತಾಯಿತು ನನ್ನ ಪರಿಸ್ಥಿತಿ!”. “ನಾನು ಬರೋವರೆಗೂ ಕಾಯೋದಕ್ಕೇನಾಗಿತ್ತು?” ಎನ್ನುತ್ತಾ ಜೋರಾಗಿ ಕಿರುಚಲು ಪ್ರಾರಂಭ ಮಾಡಿದಳು. ನನಗೆ ಮಾತನಾಡಲು ಅವಕಾಶವೇ ಕೊಡಲಿಲ್ಲ. ಮೊದಲೆ ಅದು ರಸ್ತೆ! ಹೋಗೋರು ಬರೋರು ಎಲ್ಲ ನಮ್ಮನ್ನೆ ನೋಡೋರು. ಅದಕ್ಕೆಲ್ಲಾ ಹೆದರುವ ಜಾಯಮಾನ ಆಕೆಯದ್ದಾಗಿರಲಿಲ್ಲ ಬಿಡಿ! ಅಲ್ಲೇ ರಸ್ತೇ ಬದಿಯಲ್ಲಿ ಚಿಕ್ಕ ಟವಲ್ ಹಾಕಿ ನನ್ನನ್ನು ಕೂರಿಸಿ ತಾನೂ ಛತ್ರಿ ಬಿಡಿಸಿ ಕುಳಿತುಕೊಂಡು ಬಿಟ್ಟಳು. ನನಗೋ ಕೋಪವೆಂದರೆ ಕೋಪ. “ನಾನು ಪಾಯಸ ಕುಡಿದಿದ್ದೇನೆ’’ ಅಂದರೆ ಕೇಳಲೇ ಇಲ್ಲ. ಗಲ್ಲ ಸವರಿ, ತಲೆ ಸವರಿ “ಊಟ ವೇಸ್ಟ್ ಮಾಡಬಾರದು….!” ಎನ್ನುತ್ತಾ ತಿನ್ನಿಸಲು ಬಂದರೆ ನಾನು ತಿನ್ನುತ್ತೇನೆಯೇ? ಸಾಧ್ಯನಾ? ತುತ್ತನ್ನಷ್ಟೇ ತಿಂದೆ ಕೋಪದಿಂದ. ತನ್ನ ಕೈಯ್ಯಲ್ಲೇ ನನ್ನ ಬಾಯೊರೆಸಿ “ಜಾಗ್ರತೆ ಈಗ್ ಹೋಗು ಸಂಜೆ ಬೇಗ ಸೈಡಲ್ಲಿ ಬಾ” ಎಂದು ಟಾಟಾ ಹೇಳಿಬಿಟ್ಟಳು. ಸತ್ಯ ಹೇಳಬೇಕೆಂದರೆ ಅಜ್ಜಿಯ ವಿಚಿತ್ರ ಹಠ ಕಂಡು ಆ ದಿನ ಸಹಿಸಲಾಗದ ಕೋಪ ಬಂದಿತ್ತು. ಮನೆಯಲ್ಲಿ “ದಾರಿಯಲ್ಲಿ ಕೂರಿಸಿ ಊಟಕೊಟ್ಟರು” ಎಂದು ಗಲಾಟೆ ಮಾಡಿದೆ. ಆದರೆ ಅದ್ಯಾವುದಕ್ಕೂ ಆಕೆ ಕೇರ್ ಮಾಡಲಿಲ್ಲ ಅದು ಬೇರೆ ವಿಚಾರ. ಈಗ ನೆನಪಿಸಿಕೊಂಡರೆ ಆಕೆಯ ಆಸ್ಥೆಯನ್ನು ವಿವರಿಸಲು ಮಾತುಗಳೆ ಹೊರಡುವುದಿಲ್ಲ.

ನಾನು ನೋಡಿದ ಮಟ್ಟಿಗೆ ನಮ್ಮಮ್ಮ, ದೊಡ್ಡಮ್ಮ, ಚಿಕ್ಕಮ್ಮಂದಿರನ್ನು ಪ್ರೀತಿಸುವ ಹಾಗೆ ನನ್ನ ಸೋದರಮಾವಂದಿರನ್ನು ಪ್ರೀತಿಸುತ್ತಿರಲಿಲ್ಲ. ನಮ್ಮನ್ನು ಅಂದರೆ ಹೆಣ್ಣು ಮೊಮ್ಮಕ್ಕಳನ್ನು ಪ್ರೀತಿಸುವ ಹಾಗೆ ನನ್ನ ತಮ್ಮಂದಿರನ್ನು ಪ್ರೀತಿಸುತ್ತಿರಲಿಲ್ಲ. ಹಬ್ಬ-ಹರಿದಿನಗಳನ್ನು ಆಕೆಯ ಉಸ್ತುವಾರಿಯಲ್ಲಿ ಸಂಭ್ರಮದಿಂದ ಆಚರಿಸುತ್ತಿದ್ದ ದಿನಗಳು ಈಗಲೂ ಕಣ್ಮುಂದೆ ತೇಲಿ ಬರುತ್ತವೆ. “ಹೆಣ್ಣು ಮಕ್ಕಳಿರುವ ಮನೆಗಳಲ್ಲಿ ಯಾವ ಆಚರಣೆಯನ್ನೂ ತಪ್ಪಿಸಬಾರದು. ನಾಳೆ ಹೋದ ಮನೆಯಲ್ಲಿ ಅವರಿಗೆ ತಬ್ಬಿಬ್ಬಾಗತ್ತೆ” ಅನ್ನೋದೇ ಅವಳ ವಾದವಾಗಿತ್ತು.

ಶಾಲೆಗಳಲ್ಲಿ ವರ್ಷಕ್ಕೊಮ್ಮೆ ಟೂರ್ ಕರೆದುಕೊಂಡು ಹೋಗುವುದು ಎಲ್ಲರಿಗೂ ನೆನಪಿರುತ್ತದೆ. ಹಾಗೆ ನಮ್ಮ ಶಾಲೆಯಲ್ಲೂ ಟೂರ್ ಹೋಗಬೇಕೆಂದು ತೀರ್ಮಾನವಾಗಿತ್ತು ಅದೂ ಎಲ್ಲಿಗೆ? ನಮ್ಮಜ್ಜಿ ಊರು ಬೇಲೂರಿಗೆ? ನಮ್ಮ ಮನೆಯಲ್ಲಿ “ಬೇಲೂರೂ…… ನೋಡಿರುವ ಸ್ಥಳನೆ…..!’’ ಎಂದರೂ ‘‘ಪೇರೆಂಟ್ಸ್ ಜೊತೆ ನೋಡುವುದಕ್ಕೂ ಫ್ರೆಂಡ್ಸ್ ಜೊತೆ ನೋಡುವುದಕ್ಕೂ ವ್ಯತ್ಯಾಸವಿರುತ್ತದೆ’’ ಎಂದು ಹೋಗಿದ್ದೆ. ಹೋಗೋಮೊದಲೆ ನಮ್ಮಮ್ಮನಿಗೆ ಹೇಳಿದ್ದೆ “ಅಜ್ಜಿಗೆ ಹೇಳಬೇಡ” ಅಂತ. ಆದರೂ ನಮ್ಮಮ್ಮ ಕಾಗದ ಬರೆದು ತಿಳಿಸಿದ್ದರು. ಈ ಅಜ್ಜಿನೋ ಶೆಟ್ರ ಅಂಗಡಿ ಮಿಠಾಯಿ, ನಿಪ್ಪಟ್ಟು ಹಿಡಿದುಕೊಂಡು ಬೆಳಗ್ಗೆನೇ ದೇವಸ್ಥಾನದ ಹೊರಭಾಗದಲ್ಲಿ ಬಂದು ಕುಳಿತಿದ್ದರು. ಟೂರ್‌ಗೆ ಹೋದ ಮಕ್ಕಳನ್ನು ಇಟ್ಟುಕೊಂಡು ಸಮಯ ಪಾಲನೆ ಮಾಡುವುದು ಕಷ್ಟ ಅನ್ನೋದು ನಿಮಗೆಲ್ಲರಿಗೂ ತಿಳಿದ ವಿಚಾರವೇ. ನಾವುಗಳು ಸರಿಯಾದ ಟೈಮ್‌ಗೆ ಹೋಗಲಿಲ್ಲ. ಕಾದು ಸುಸ್ತಾಗಿದ್ದ ನಮ್ಮಜ್ಜಿ ನಾವು ಬಸ್ ಇಳಿಯುತ್ತಿದ್ದಂತೆ ಭರಭರನೆ ಬಂದು ನನ್ನನ್ನು ಹುಡುಕಿಯೇ ಬಿಟ್ಟರು. ಏರು ಧ್ವನಿಯಲ್ಲಿ ಕ್ಲಾಸ್ ತೆಗೆದುಕೊಂಡರು. ಈಗ ಆನ್ಲೈನ್ ಕ್ಲಾಸ್, ಆಫ್‌ಲೈನ್‌ ಕ್ಲಾಸ್ ಅನ್ನುವಂತೆ ಅದೊಂಥರಾ ಔಟ್ ಡೋರ್ ಕ್ಲಾಸ್ ಆಗಿತ್ತು. ಆ ದಿನ ಚೆನ್ನಾಗಿರಲಿಲ್ಲ! ಇವತ್ತಿಗೆ ನೆನಪು ಮಾಡಿಕೊಂಡರೆ ಚೆನ್ನಾಗಿದೆ! ತಿಂಡಿ ಕೊಟ್ಟು ಅಜ್ಜಿ ಮನೆಗೆ ಹೋಗಿರುತ್ತಾಳೆ ಅಂದರೆ ಹೋಗೇ ಇರಲಿಲ್ಲ. ನಾವೆಲ್ಲಾ ದೇವಸ್ಥಾನ ನೋಡಿಕೊಂಡು ಬಂದರೂ ಅಲ್ಲೇ ಹೊರಗೆ ಇದ್ದು ನನ್ನ ಟೀಚರ್ ಬಳಿ “ನನ್ನ ಮೊಮ್ಮೊಗಳನ್ನು ಇಲ್ಲಿಯೇ ಬಿಟ್ಟು ಹೋಗಿ ನಾನೇ ಕರೆದುಕೊಂಡು ಬರುತ್ತೇನೆ” ಅಂದರೆ ನಮ್ಮ ಟೀಚರ್ ಬಿಡಲಿಲ್ಲ. ಶಾಲೆಯವರಿಗೆ ಉತ್ತರ ಕೊಡೋದು ಕಷ್ಟ ಎಂದು ಅಜ್ಜಿಯನ್ನು ಓಲೈಸಿದರು. ಕಡೆಗೆ 20 ರೂಗಳನ್ನು ನನ್ನ ಕೈಲಿಟ್ಟು ಕಣ್ಣಲ್ಲಿ ನೀರು ಹಾಕುತ್ತಲೇ ಕೈ ಬೀಸಿ ನಿಧಾನವಾಗಿ ಸರಿದು ಹೋಗೇ ಬಿಟ್ಟಳು.

ನಮ್ಮನೆಗೆ ಅಜ್ಜಿ ಬಂದಾಗಲೆಲ್ಲಾ ನಮ್ಮ ಶಯನೋತ್ಸವ ಅಜ್ಜಿ ಜೊತೆಯಲ್ಲೇ ಆಗುತ್ತಿತ್ತು. ನಮ್ಮಜ್ಜ ಇದ್ದಾಗ ಒಮ್ಮೆ ಅಟ್ಟದಿಂದ ಬಿದ್ದು ಕಾಲು ಮುರಿದುಕೊಂಡಿದ್ದರಂತೆ, ಹಾಲು ಕರೆಯೋವಾಗ ಹಸು ಒದ್ದು ಸೊಂಟಕ್ಕೂ ಪೆಟ್ಟು ಮಾಡಿಕೊಂಡು ತೆವಳಿಕೊಂಡು ಇರೋ ಹಾಗಾದಾಗ ಅಜ್ಜ ಫಿಸಿಯೋಥೆರಪಿನೂ ಮಾಡಿಸಿದ್ರಂತೆ. ಪದೇ ಪದೇ ಹಾಗೆ ಫಿಸಿಯೋಥೇರಪಿ ಮಾಡಿಸಿಕೊಂಡು ಅದಕ್ಕೆ ಅಡಿಕ್ಟ್ ಆಗಿದ್ದ ಅಜ್ಜಿಗೆ ಮತ್ತೆ ಮತ್ತೆ ನೋವು ಬರುತ್ತಿತ್ತು. ಇನ್ನು ಮಡಿಕೇರಿಯ ಚಳಿಗೂ… ನೋವು ಹೆಚ್ಚಾಗೋದು. ಆಕೆ ಪಕ್ಕದಲ್ಲಿದ್ದ ನನ್ನನ್ನೆ ಏಬ್ಬಿಸಿ “ಸೊಂಟ ಅಮುಕು, ಕಾಲುತುಳಿ” ಎಂದು ಆರ್ಡರ್ ಮಾಡೋರು. ಅವಳು ಹೇಳಿದಂತೆ ಮಾಡಿದರೂ ಆಕೆಗೆ ಸಮಾಧಾನವಂತೂ ಆಗುತ್ತಿರಲಿಲ್ಲ. ಇನ್ನೂ ಬೆಳಗ್ಗೆ ನಾಲ್ಕು ಗಂಟೆಗೆ ದಯಾ-ದಾಕ್ಷಿಣ್ಯ ಇಲ್ಲದೆ ನಮ್ಮನ್ನು ಏಳಿಸೋದಕ್ಕೆ ಪ್ರಾರಂಭ ಮಾಡೋಳು. ಮುಟ್ಟಿ, ಮೆಲ್ಲಗೆ ತಟ್ಟಿ ಏಳಿಸಿದರೆ ಅಷ್ಟು ಕಿರಿಕಿರಿ ಅನ್ನಿಸುತ್ತಿರಲಿಲ್ಲ. ಆದರೆ ತಿವಿದು ಏಳಿಸುತ್ತಿದ್ದುದ್ದು ಬಹಳ ಕೋಪ ತರಿಸುತ್ತಿತ್ತು. ನನಗೆ ಎಚ್ಚರವಿದ್ದರೂ ಮೊಂಡುತನದಿಂದ ಬೇಗ ಏಳುತ್ತಿರಲಿಲ್ಲ! ಅಜ್ಜಿಯನ್ನು ಸತಾಯಿಸುತ್ತಿದ್ದೆ. “ಸಿಟ್ಟಿನಿಂದ ತಣ್ಣೀರು ಸುರಿಯುತ್ತೇನೆ, ಕಬ್ಬಿಣ ಕಾಯಿಸಿ ಬರೆ ಹಾಕುತ್ತೇನೆ” ಎನ್ನುತ್ತಿದ್ದಳು. ಭಾನುವಾರಗಳಲ್ಲಿ, ರಜಾ ದಿನಗಳಲ್ಲಿ ಈ ಡ್ರಾಮ ಹೆಚ್ಚೇ!

ಒಮ್ಮೆ ಹೀಗೆ ಏಳದೆ ಹಟ ಮಾಡುವಾಗ ನಮ್ಮಜ್ಹಿಗೆ ಸಂದೇಹ ಬಂದು ಉಸಿರಾಡುತ್ತೇನೋ? ಇಲ್ಲವೋ? ಎಂದು ನನ್ನ ಮೂಗಿಗೆ ಕೈಅಡ್ಡಹಿಡಿದ ದಿನ ನೆನಪಿಸಿಕೊಂಡರೆ ಈಗಲೂ ನಗು ಬರುತ್ತದೆ. ಹಾಗೂ ಹೀಗೂ ಎದ್ದು ಚಿಕ್ಕದೋ ದೊಡ್ಡದೋ ರಂಗೋಲಿ ಹಾಕಿದ ಮೇಲೆ ಅಜ್ಜಿ ಫುಲ್ ಖುಷ್ ಆಗಿ ಬಿಡುತ್ತಿದ್ದಳು. ರಂಗೋಲಿ ಎಳೆ ಎಳೆಯುವುದಕ್ಕೆ, ಸಿಂಗಲ್ ಎಳೆ, ಡಬಲ್ ಎಳೆಗಳನ್ನು ಎಳೆಯಲು, ದಂಡೆಯ ಹಾಗೆ ಹೂ ಕಟ್ಟಲು ನನಗೆ ಟ್ರೇನಿಂಗ್ ಕೊಟ್ಟಿದ್ದು ಅಜ್ಜಿನೇ…! ಬಿಡುವಿದ್ದಾಗ ಸ್ಲೇಟಲ್ಲಿ ಎಳೆ ರಂಗೋಲಿ ಎಳೆದುಕೊಟ್ಟು “ಕಲಿ! ಕಲಿ!” ಎಂದು ಬಲವಂತ ಮಾಡಿ ರಂಗೋಲಿ ಕಲಿಸಿದ್ದಳು. ಒಮ್ಮೆ ನಾನು ಕಾಲೇಜಿನಲ್ಲಿ ರಂಗೋಲಿ ಸ್ಪರ್ಧೆಯಲ್ಲಿ ರಂಗೋಲಿ ಹಾಕಲು ತಯಾರಿ ಮಾಡಿಕೊಂಡಿದ್ದೆ. ಪೇಪರ್‌ನಲ್ಲಿ ರಂಗೋಲಿ ಬಿಡಿಸಿಕೊಂಡು ಸ್ಕೆಚ್ ಪೆನ್ನಲ್ಲಿ ಕಲರ್‌ ಮಾಡಿ “ಕಾಲೇಜಲ್ಲೂ ಹೀಗೇ ಹಾಕುತ್ತೇನೆ ನೋಡು!” ಎಂದಿದ್ದೆ. ಕನ್ನಡಕ ಮತ್ತೆ ಮತ್ತೆ ಒರೆಸಿಕೊಂಡು ನೋಡಿ ಖುಷಿಪಟ್ಟರೂ ರಿಯಲ್ ಆಗಿ ನೋಡಲೇಬೇಕು ಅನ್ನುವ ಭಾವ ಅವಳಲ್ಲಿತ್ತು.ಸರಿ! ನಾನು ಅಜ್ಜಿಗೆ ಸರ್ಪ್ರೈಸ್ ಕೊಡಬೇಕು ಎಂದೇ ಮರು ದಿನ ಬೆಳಗ್ಗೆ ರಂಗೋಲಿ ಹಾಕಿ ಕಲರ್ ತುಂಬಿಸುತ್ತಿದ್ದೆ. ಇನ್ನೇನು ಫಿನಿಷಿಂಗ್ ಕೊಡಬೇಕು ಅನ್ನುವಷ್ಟರಲ್ಲಿ ನಮ್ಮಜ್ಜಿ ಲಕ್ಷ್ಮಮ್ಮನವರು ಬಾಗಿಲು ತೆಗೆದು ನಾನು ಹಾಕುತ್ತಿದ್ದ ರಂಗೋಲಿ ನೋಡಿ ಖುಷಿ ಪಟ್ಟರೂ “ಅಲ್ಲಿ ಹಾಗಾಗಬೇಕು ಇಲ್ಲಿ ಹೀಗೆ ಸರಿ ಮಾಡು” ಎಂಬ ಸಲಹೆ ಕೊಟ್ಟಂತೆ ನಾನೂ ಹಾಗೇ ಮಾಡಿ ಕಡೆಗೆ ರಂಗೋಲಿ ಮಧ್ಯದಲ್ಲಿ ಒಂದು ದೊಡ್ಡ ಚುಕ್ಕಿ ಇಟ್ಟು ಎಚ್ಚರತಪ್ಪಿ ಭರ್ರನೆ ಕೈ ಎಳೆದೆ, ಆ ರಭಸಕ್ಕೆ ಅರ್ಧ ರಂಗೋಲಿ ಹಾಳಾಗಿತ್ತು. ಆಗಂತೂ ಅಜ್ಜಿ ಮತ್ತು ನಾನು ತುಂಬಾ ಬೇಸರ ಮಾಡಿಕೊಂಡಿದ್ದೆವು.

ಕಡಿಮೆ ಇಂಗ್ರೀಡಿಯೆಂಟ್ಸ್ ಬಳಸಿ ರುಚಿಯಾಗಿ ಅಡುಗೆ ಮಾಡುವುದರಲ್ಲಿ ಲಕ್ಷ್ಮಮ್ಮನವರದ್ದು ಎತ್ತಿದ ಕೈ. ಹುಳಿಯನ್ನ, ಗೊಜ್ಜವಲಕ್ಕಿ, ಬದನೆಕಾಯಿ ಪಲ್ಯ ತುಂಬಾ ರುಚಿಯಾಗಿ ಮಾಡುತ್ತಿದ್ದಳು. ಆಕೆ ಮಾಡಿದ ಅಡುಗೆಯನ್ನು ಡಬ್ಬಿಯಲ್ಲಿ ಹಾಕಿ ತೆಗೆದುಕೊಂಡು ಹೋದರೆ ನನ್ನ ಸ್ನೇಹಿತೆಯರು “ಈ ಪರಿಮಳವನ್ನು ನಾವುಗಳು ಮದುವೆ, ಫಂಕ್ಷನ್‌ಗಳಲ್ಲಿ ಮಾತ್ರ ಹಾಕುವುದು” ಎಂದರೆ ಇನ್ನು ಕೆಲವರು “ನಿಮ್ಮಜ್ಜಿ ಮಾಡಿದ್ದಾ……?” ಎಂದು ರುಚಿ ನೋಡುತ್ತಿದ್ದರು. ಮಾಡಿದ ಅಡುಗೆಯನ್ನು ಆಕೆ ಮುತ್ತುಗದಹಾಳೆ, ಅಡಿಕೆಹಾಳೆ, ಬಾಳೆಎಲೆಯಲ್ಲಿ ಅಷ್ಟೇ ಚೆನ್ನಾಗಿ ಪ್ಯಾಕ್ ಮಾಡುತ್ತಿದ್ದಳು. ಅದನ್ನು ನೋಡುವುದಕ್ಕೇ ಖುಷಿಯಾಗುತ್ತಿತ್ತು. ಈಗೆಲ್ಲಾ ಪ್ಲಾಸ್ಟಿಕ್ ಡಬ್ಬಗಳು ಪ್ಲಾಸ್ಟಿಕ್ ಹಾಳೆಗಳು ಅಲ್ವ! ಅಡುಗೆ ಎಂದರೆ ತುಂಬಾ ಇಂಗ್ರೀಡಿಯೆಂಟ್ಸ್ ಹಾಕಿ ಬೇಯಿಸಿ ಅದನ್ನು ಬಡಿಸುವಾಗ ಅಲಂಕಾರ ಮಾಡುವುದಲ್ಲ. ಅಡುಗೆಗೆ ನಾವು ಹಾಕುವ ಇಂಗ್ರೀಡಿಯೆಂಟ್ಸ್ ಮತ್ತು ಟೈಮಿಂಗ್ಸ್ ಎರಡೂ ಮುಖ್ಯ. ಯಾವುದಾದ ಮೇಲೆ ಯಾವುದು ಹಾಕಿದರೆ ಏನಾಗುತ್ತದೆ ಅನ್ನುವ ಸೂಕ್ಷ್ಮಗಳನ್ನು ಅರ್ಥಾತ್ ಕ್ರಮಬದ್ಧತೆ ಅನ್ನೋದನ್ನ ಅಜ್ಜಿಯಿಂದ ನಾನು ಕಲಿತ ಬಹು ಮುಖ್ಯ ಪಾಠ.

ನಮಗೆ ಮಧ್ಯಾಹ್ನ 3.30 ಕ್ಕೆ ಕಾಲೇಜ್ ಮುಗಿಯುತ್ತಿತ್ತು. 3,45ಕ್ಕೆಲ್ಲಾ ನಾನು ಮನೆಯಲ್ಲಿರಬೇಕಿತ್ತು. ಹೇಗೆ? ಯಾರ ಜೊತೆಗೆ ಬರುತ್ತೇನೆ? ಎಂದು ಉಪನಯನಗಳೊಳಗೆ ಸೂಕ್ಷ್ಮವಾಗಿ ನೋಡಿರುತ್ತಿದ್ದ ಅಜ್ಜಿ ಮನೆಗೆ ಬಂದ ನಂತರ. “ರಸ್ತೆ ಅಳೆದುಕೊಂಡು ಅವರ್ಜೊತೆಗೆಲ್ಲಾ ಕಿಲಕಿಲಾ ಅನ್ನಬೇಕಲ್ಲ ನೀನು?” ಎಂದು ಗದರಿ ಮತ್ತೆ ಮೆಲ್ಲಗೆ “ತಲೆಕೆದರಿಕೊಂಡಿದ್ದೋಳ್ ಯಾರು? ಜುಟ್ಟು ಹಾಂಕೊಂಡಿದ್ದೋಳ್ಯಾರು?” ಎಂದು ಕೇಳುತ್ತಿದ್ದ ಪ್ರಶ್ನೆಗಳಿಗೆ ಉತ್ತರಿಸಿ……. ಸಾಕಾಗುತ್ತಿತ್ತು! ಈಗ ಅವರೆಲ್ಲರ ಪರಿಚಯ ಹೇಳುತ್ತೇನೆ ಬಾ! ಅಂದರೆ ಆಕೆ ಬರಲು ಸಾಧ್ಯನಾ…? ನನಗಿನ್ನೂ ಆಕೆಯಲ್ಲಿ ಹೇಳಬೇಕಾಗಿದ್ದ ಗುಟ್ಟುಗಳು ಸಾಕಷ್ಟಿದ್ದವು…. ಆದರೆ ಆಕೆಯೇ ಈಗ ನಮ್ಮೊಂದಿಗಿಲ್ಲ….