ಕಾದಂಬರಿ ಮನುಷ್ಯರ ಆಂತರಿಕ ಬೇಗೆಗಳನ್ನು ಹೇಳುವಾಗ “ನೆತ್ತಿ ಸುಡುವ . . . ಬಿರುಬೇಸಿಗೆಯ” ಬೇಗೆಯನ್ನು ನಮ್ಮ ಅನುಭವಕ್ಕೆ ತಾರದೇ ಬಿಡುವುದಿಲ್ಲ; ಆಸ್ಮಾ ದುಃಖದಲ್ಲಿ ಮುಳುಗಿ ಮನೆಯಲ್ಲಿ ಕೂತಿರುವಾಗ “ಮುಚ್ಚಿದ ಕಿಟಕಿಯಿಂದ…. ಸೋರಿ ಅವಳ ಕೂದಲ ಗುಂಗುರುಗಳ ಮೇಲೆ” ಹೊಳಪು ಸುರಿಯುವ ಬಿಸಿಲು ಕೋಲುಗಳು ನೀಡುವ ಹಿತವನ್ನು ಗಮನಿಸದೇ ಇರುವುದಿಲ್ಲ.
ಕಾವ್ಯಾ ಕಡಮೆ ಕಾದಂಬರಿ “ಪುನರಪಿ”ಯ ಕುರಿತು ರಾಮಪ್ರಸಾದ್ ಬಿ.ವಿ. ಬರಹ

ಸತ್ತ ಮೇಲೆ ಮತ್ತೆ ತಾಯಿಯ ಹೊಟ್ಟೆ ಸೇರಿ ಮತ್ತೆ ಹುಟ್ಟುತ್ತೇವೆಯೇ? ಪುನರಪಿ ಕಾದಂಬರಿಯ ಲೋಕೇಶ ಜಿಗಜಿಣಗಿ ಪ್ರಕಾರ ಇಲ್ಲ. ಅವರ ಪ್ರಕಾರ ಸಾವು “ಗಡಿಯಾಚೆಗಿರುವ ಊರು”. ಒಮ್ಮೆ ಬದುಕೆಂಬ ಈ ಊರಿನ ಗಡಿ ದಾಟಿದ ಮೇಲೆ ವಾಪಾಸ್ ಬರುವುದು ಸಾಧ್ಯವೇ ಇಲ್ಲ. ಪ್ರಶ್ನೆ ಇರುವುದು ಒಂದು ಹುಟ್ಟು-ಒಂದು ಸಾವಿನ ಈ “ಮೃತ್ಯುಗಂಟಿದ ಬದುಕನ್ನು” ಹೇಗೆ ಸವೆಸುವುದು? ಈ ಕಾದಂಬರಿಯ ಅನೇಕ ಪಾತ್ರಗಳು ಈ ‘ದುಸ್ತರ’ ಜೀವನದ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಪ್ರತಿಯೊಬ್ಬರ ಸಂಕಟಗಳು ವಿಭಿನ್ನವಾಗಿದ್ದರೂ, ಈ ಎಲ್ಲಾ ಸಂಕಟಗಳ ಆಳದಲ್ಲಿ ಇರುವುದು ಏಕಾಂಗಿತನ, ಏಕತಾನತೆ.

ಅರವತೈದು ವರ್ಷದ ಐದಡಿ ಎತ್ತರದ ಲೋಕೇಶ ಜಿಗಜಿಣಗಿಯ ಪತ್ನಿ ತೀರಿಕೊಂಡಿದ್ದಾರೆ; ಹುಬ್ಬಳ್ಳಿಯಲ್ಲಿ ತಮ್ಮ ನಿವೃತ್ತಿ ಜೀವನವನ್ನು ಹೆಚ್ಚು ಜನರ ಸಂಪರ್ಕವಿಲ್ಲದೇ ಒಂಟಿಯಾಗಿ ಜೀವಿಸುತ್ತಿದ್ದಾರೆ. ಅದೇ ಹುಬ್ಬಳ್ಳಿಯಲ್ಲಿರುವ ಅನುಷಾ-ಆಸ್ಮಾ ಅನ್ನುವ ಸ್ತ್ರೀ-ದಂಪತಿಗಳು ಈ ಸಮಾಜ ಒಪ್ಪದ ತಮ್ಮ ಸಂಬಂಧವನ್ನು ನಿಭಾಯಿಸಿಕೊಳ್ಳುತ್ತಲೇ ವೃದ್ಧರಿಗೆ, ಅಸಹಾಯಕರಿಗೆ ಮನೆ ಊಟ ಒದಗಿಸುವ ಸಮಾಜ ಸೇವೆ ಮಾಡುತ್ತಿದ್ದಾರೆ. ಹೀಗೆ ಅವರು ‘ಲೋಕಿ’ಯ ಸಂಪರ್ಕಕ್ಕೆ ಬರುತ್ತಾರೆ. ಅನುಷಾ “ಅಷ್ಟೇನೂ ಚೂಪಿಲ್ಲದ ಮೂಗಿನ”, “ನಸುಗಪ್ಪು” ಬಣ್ಣದ, ಗಾಢವರ್ಣದ ಬಟ್ಟೆಗಳನ್ನು ಇಷ್ಟ ಪಡುವ ಹೆಣ್ಣು, ಹುಬ್ಬಳ್ಳಿಯಲ್ಲಿ ಒಂದು ಪತ್ರಿಕೆಯಲ್ಲಿ ಕೆಲಸ ಮಾಡುತ್ತಿದ್ದಾಳೆ. ಆಸ್ಮಾ “ಹಣೆಯ ಮೇಲಿನ ಗೆರೆಗಳು ನಿಧಾನಕ್ಕೆ ಢಾಳಾಗುತ್ತಿರುವ”, ಮುವತ್ತೈದು ವರ್ಷದ, ಗಾಢವರ್ಣವನ್ನು ಮೆಚ್ಚದ, “ಕೃರ್ಷವರ್ಣದ ಮಧುಬಾಲಾ”ನ ಹಾಗಿರುವ ಹೆಣ್ಣು: ಮೂಲತಃ ಹಿಮಾಚಲ ಪ್ರದೇಶದ ಸಮೋರಾ ಗ್ರಾಮದ, ಡೋಗ್ರಿ ಭಾಷೆಯ ಹುಡುಗಿ, ಅನುಷಾ ಜೊತೆಯಾದ ಮೇಲೆ ಹುಬ್ಬಳ್ಳಿಯ ಕನ್ನಡ ಕಲಿತು, ಒಂದು ಬ್ಯಾಂಕ್‌ನಲ್ಲಿ ಕೆಲಸ ಮಾಡುತ್ತಿದ್ದಾಳೆ. ಅನುಷಾ ಜೊತೆ ಜಗಳವಾಡಿದ್ದಾಗ ಅವಳ “ಮುಖದ ಮೇಲೆ ಮುದ್ದಾಗಿ ಮೂಡಿದ್ದ ಹಾಸಿಗೆಯ ಸುಕ್ಕುಗಳ ಗುರುತು ನೋಡಿದ್ದೇ” ಮನಸ್ಸಿನಲ್ಲಿರುವ ಅಸಮಾಧಾನವೆಲ್ಲ ಕರಗಿ ಹೋಗುವಷ್ಟು ಅನುಷಾಳನ್ನು ಪ್ರೀತಿಸುತ್ತಾಳೆ.

(ಕಾವ್ಯಾ ಕಡಮೆ)

ಕಾದಂಬರಿಗಳಲ್ಲಿ ಪಾತ್ರಗಳು ಹಾಗೂ ಕತೆಗಳಂತೂ ಇದ್ದೇ ಇರುತ್ತವೆ. ಜೊತೆಗೆ ‘ಪುನರಪಿ’ಯ ನಿರೂಪಣೆ ಓದುಗರಿಗೆ ಆ ಕತೆಗಳು ನಡೆಯುತ್ತಿರುವ, ಪಾತ್ರಗಳು ಜೀವಿಸುತ್ತಿರುವ ಜಾಗದ ಅನುಭವವನ್ನೂ ನೀಡಲು ಪ್ರಯತ್ನಿಸುತ್ತದೆ. ಲೋಕೇಶರು “ದಿನದ ಬಹುಪಾಲು ಸಮಯವನ್ನು…. ಕಳೆಯುವುದು ಹೊರಕೋಣೆಗೆ ಅಂಟಿಕೊಂಡಿರುವ ಗಾಳಿ ಬೆಳಕು ಭರಪೂರ ದೊರೆವ” ಬಾಲ್ಕನಿಯಲ್ಲಿ. ಬೆಂಗಳೂರಿನಲ್ಲಿ ಅನುಷಾ ಇದ್ದ ಪಿಜಿಯನ್ನು ಕಾದಂಬರಿ ಹೀಗೆ ನಮ್ಮ ಕಣ್ಣಿಗೆ ಕಟ್ಟಿ ಕೊಡುತ್ತದೆ – “ಕೆಳಗೆ ನೆಲಕ್ಕೆ ನಡುವೆ ಹೂಹೂವಿರುವ ಡಿಸೈನಿನ ಬಿಳಿ ಬಣ್ಣದ ಸಿರಾಮಿಕ್ಸ್ ಟೈಲ್ಸು ಹಾಕಿದ್ದರಿಂದ ನೆಲ ಫಳಫಳ ಹೊಳೆಯುತ್ತಿತ್ತು. ಬಾಗಿಲಿಗೆ ಹೊಂದಿಕೊಂಡಿರುವಂತೆ ನಾಲ್ಕು ಕೀಲಿಗಳಿರುವ ಒಂದು ಲಾಕರ್ ಇಟ್ಟಿದ್ದರು. ಆ ನೀಲಿ ಬಣ್ಣದ ಮುದ್ದಾದ ಪುಟ್ಟ ಡಬ್ಬಿಯಂತಿರುವ ಲಾಕರಿನ ಮೇಲೆ…. ನಾಲ್ಕಾರು ಕ್ಲಿಪ್ಪು, ಬಣ್ಣಬಣ್ಣದ ವಿವಿಧ ಬಗೆಯ ವಿನ್ಯಾಸಗಳಿರುವ ಹೇರ್ ಬ್ಯಾಂಡು, ಹಣಿಗೆ, ಟಿಕಲಿ ಪ್ಯಾಕೇಟುಗಳಿದ್ದವು”. ಕಾದಂಬರಿ ಮನುಷ್ಯರ ಆಂತರಿಕ ಬೇಗೆಗಳನ್ನು ಹೇಳುವಾಗ “ನೆತ್ತಿ ಸುಡುವ . . . ಬಿರುಬೇಸಿಗೆಯ” ಬೇಗೆಯನ್ನು ನಮ್ಮ ಅನುಭವಕ್ಕೆ ತಾರದೇ ಬಿಡುವುದಿಲ್ಲ; ಆಸ್ಮಾ ದುಃಖದಲ್ಲಿ ಮುಳುಗಿ ಮನೆಯಲ್ಲಿ ಕೂತಿರುವಾಗ “ಮುಚ್ಚಿದ ಕಿಟಕಿಯಿಂದ…. ಸೋರಿ ಅವಳ ಕೂದಲ ಗುಂಗುರುಗಳ ಮೇಲೆ” ಹೊಳಪು ಸುರಿಯುವ ಬಿಸಿಲು ಕೋಲುಗಳು ನೀಡುವ ಹಿತವನ್ನು ಗಮನಿಸದೇ ಇರುವುದಿಲ್ಲ.

ಹೆಂಗಸರು ಬಣ್ಣಗಳನ್ನು ಗಂಡಸರಿಗಿಂತ ಸೂಕ್ಷ್ಮವಾಗಿ ಗಮನಿಸುತ್ತಾರೆ ಅನ್ನುವ ಸಿದ್ಧಾಂತವೊಂದಿದೆ. “ಪುನರಪಿ”ಯ ನಿರೂಪಣೆಯಲ್ಲಿ ಎಲ್ಲೆಲ್ಲೂ ಬಣ್ಣಗಳನ್ನು ನಮಗೆ ಕಾಣಿಸಲಾಗುತ್ತದೆ. ಅನುಷಾಳದ್ದು “ನೀಲಿ ಬಣ್ಣದ ಸ್ಲಿಂಗ್ ಬ್ಯಾಗ್”; ಅವಳು ಇದ್ದ ಪಿಜಿಯ ಗೋಡೆ “ಗುಲಾಬಿ ಬಣ್ಣದ್ದು”; ಅವಳ ಸೂಟ್‌ಕೇಸ್‌ನಲ್ಲಿ ‘ಅನುಷಾ ಚೌಹಾಣ’ ಎಂದು ಹಳದಿ ಎಲೆಯ ಮೇಲೆ ನೀಲಿ ಅಕ್ಷರದಲ್ಲಿ ಬರೆದ ಹೆಸರು. ಲೋಕೇಶರ ದೃಷ್ಟಿಕೋನದಲ್ಲಿ ಕತೆ ಹೇಳಿದಾಗಲೂ ಬಣ್ಣಗಳನ್ನು ನಮಗೆ ತೋರಿಸಲಾಗುತ್ತದೆ. ಕುರ್ಚಿಯ ಹಸಿರು ಬಣ್ಣ, ಪಂಚೆಯ ಹಸಿರು ಚೆಕ್ಸ್, – ಕೆಲವೊಮ್ಮೆ ‘ತಿಳಿ’ ಹಳದಿ, ‘ಗಿಳಿ’ ಹಸಿರನ್ನೂ ಕೂಡ ಗಮನಿಸುವ ಸೂಕ್ಷ್ಮತೆ. ತುಂಬಾ ಭಾವನಾತ್ಮಕ ಸನ್ನಿವೇಶದಲ್ಲೂ ನಿರೂಪಣೆ ಬಣ್ಣಗಳನ್ನು ಗಮನಿಸುತ್ತಲೇ ಇರುತ್ತದೆ.

ದುಃಖದಲ್ಲಿರುವ ಆಸ್ಮಾ ಅನ್ಯಮನಸ್ಕಳಾಗಿ ತಲೆ ಬಾಚಿಕೊಳ್ಳುತ್ತಿರುವಾಗ ಎದುರಿಗೆ ಇರುವುದು ಕಂದು ಬಣ್ಣದ ಕಪಾಟು: ತನ್ನ ಸಾವಿನ ದಿನ ಲೋಕೇಶರ ತಮ್ಮ ಮೆಟ್ಟಿದ್ದು ನೀಲಿ ಬಕ್ಕಲ್‌ಗಳಿರುವ ತನ್ನ ಹವಾಯಿ ಚಪ್ಪಲಿ. ಅರವತ್ತೈದರ ವಯಸ್ಸಿನಲ್ಲಿ ಲೋಕೇಶರು ಹಾಸಿಗೆಯಲ್ಲಿ ಮೂತ್ರ ಮಾಡಿಕೊಂಡ ಮುಜುಗರದ ಸನ್ನಿವೇಶದಲ್ಲೂ ಅವರ ಹೊಸ ಪಾಯಿಜಾಮ ‘ಕ್ರೀಮ್’ ಬಣ್ಣದ್ದು ಅನ್ನುವುದನ್ನು ‘ನಿರೂಪಕಿ’ ನಮ್ಮ ಗಮನಕ್ಕೆ ತರುತ್ತಾರೆ.

ಕತೆ ನಡೆಯುವುದು ಬೆಂಗಳೂರಿಗೆ ಹೋಲಿಸಿದರೆ ‘ಸ್ಲೋ ಮೋಷನ್’ನಲ್ಲಿ ಇರುವಂತೆ ಕಾಣುವ ಹುಬ್ಬಳ್ಳಿಯಲ್ಲಿ. ಆದರೆ ಇಲ್ಲಿ ಹಳ್ಳಿ, ಸಣ್ಣ ಪಟ್ಟಣ, ಸಿಟಿ, ಎಲ್ಲಾ ಒಟ್ಟಿಗೇ ಇವೆ. ತೀರಾ ಹಳೆಯ, ಸ್ವಲ್ಪ ಆಧುನಿಕವಾದ, ಇನ್ನೂ ಮುಂದೆ ಬರಬಲ್ಲಂತಃ ಎಲ್ಲಾ ಕಾಲಗಳೂ ಒಟ್ಟಿಗೆ ಇವೆ. ಸನೋರಾದಂತ ಸಣ್ಣ ಗ್ರಾಮದ ಆಸ್ಮಾ ಬೆಂಗಳೂರಿನಂಥ ಊರಲ್ಲಿ ಇದ್ದು ಈಗ ಹುಬ್ಬಳ್ಳಿಯಲ್ಲಿದ್ದಾಳೆ. ಲೋಕೇಶರು ತಮ್ಮ ಅಪ್ಪನ ಕಾಲದ ಆರಾಮುಕುರ್ಚಿಯಲ್ಲಿ ಕುಳಿತು ಸೆಕೆಂಡ್‌ಹ್ಯಾಂಡ್‌ ಕಾರಿನಲ್ಲಿ ತಂದ ಲ್ಯಾಪ್‌ಟಾಪ್‌ನಲ್ಲಿ ಪತ್ರಿಕೆ ಓದುತ್ತಾರೆ. ಯಾವುದೋ ಕಾಲದಲ್ಲಿ ಆರನೇ ತರಗತಿಯವರೆಗೆ ಓದಿರುವ ಅನುಷಾಳ ಅಮ್ಮ, ಅಕ್ಕನ ಮದುವೆಯಾಗದೇ ತಂಗಿಗೆ ಮದುವೆಯಾಗುವುದು ಹೇಗೆ, ಅಂದು ಅನುಷಾಳಿಗೆ ಬೇಗ ಮದುವೆಯಾಗು ಅನ್ನುತ್ತಿದ್ದಾಳೆ. ಇತ್ತ ಆಸ್ಮಾ-ಅನುಷಾ ಅಲ್ಲೆಲ್ಲೋ ಕಾಣದ ದೇಶದಲ್ಲಿ ಮದುವೆಯಾಗಿರುವ ಸಲಿಂಗ ಸಖಿಯರನ್ನು ನೋಡುತ್ತಾ ಮೈಮರೆಯುತ್ತಾರೆ, ಸ್ವಪ್ನ ಕಾಣುತ್ತಾರೆ. ಆಧುನಿಕ ಪೂರ್ವ, ಆಧುನಿಕ, ಆಧುನಿಕೋತ್ತರ ಜಗತ್ತುಗಳು ಒಂದೇ ಕಾಲದಲ್ಲಿ ಒಟ್ಟಿಗೆ ಇವೆ. ಇದೇ ಈ ಕಾದಂಬರಿಯ ಪಾತ್ರಗಳು ಅನುಭವಿಸುತ್ತಿರುವ ಒಂಟಿತನ ಏಕತಾನತೆಗಳ ಹಿಂದಿನ ಕಾರಣವೇ? ಅಥವಾ, ಹೊಸ ಕಾಲದ ಸಮಸ್ಯೆಗಳಿಗೆ ಉತ್ತರ ಕಂಡುಕೊಳ್ಳುವ ಮುಂಚಿನ ಅನಿವಾರ್ಯ ಸ್ಥಿತಿಯಲ್ಲಿದಾರೆಯೇ ಲೋಕೇಶ, ಆಸ್ಮಾ, ಅನುಷಾರು?

ಈ ಆಧುನಿಕ ಜೀವನದಲ್ಲಿ ಕೆಲವು ಹಿನ್ನೆಲೆಯ ಕುಟುಂಬಗಳಲ್ಲಿ ವಯಸ್ಸಾದವರಿಗೆ ಒಂಟಿತನ ಅನಿವಾರ್ಯ. (ಇದರ ಅರ್ಥ ಹಿಂದೆ ಮನುಷ್ಯರೆಲ್ಲಾ ತುಂಬಾ ಸಂತೋಷವಾಗಿದ್ದರು ಎಂದಲ್ಲ: ಹಾಗೂ ಆಧುನಿಕ ಜೀವನದಲ್ಲಿ ಅನುಕೂಲಗಳೇ ಇಲ್ಲವೆಂದಲ್ಲ). ಮಕ್ಕಳೂ ಇಲ್ಲದ ಲೋಕೇಶರು ವೃದ್ಧಾಪ್ಯದಲ್ಲಿ ತಮ್ಮನ್ನು ತಾವೇ ನೋಡಿಕೊಳ್ಳಬೇಕಾಗಿದೆ. ತಮ್ಮ ದೇಹದ ಮೇಲೆ ಹಿಡಿತ ತಪ್ಪಿ ರಾತ್ರಿ ಹಾಸಿಗೆಯಲ್ಲಿ ಮೂತ್ರ ಮಾಡಿಕೊಂಡು ಮುಜುಗರ ಪಡುವಾಗಲೇ ಬೆಡ್‌ಶೀಟನ್ನು ವಾಷಿಂಗ್ ಮಶೀನ್‌ಗೆ ಹಾಕಬೇಕಾಗಿದೆ. “ಮನೆಯಲ್ಲಿ ಒಬ್ಬರೇ ಇದ್ದು ಅಡುಗೆ ಮಾಡಿಕೊಳ್ಳುವುದು ಎಷ್ಟು ತಲೆಬಿಸಿ” ಎಂದು ಈಗ ಅವರಿಗೆ ಅರ್ಥವಾಗಿದೆ. ಪ್ರತಿದಿನವೂ ಅದೇ ದಿನಚರಿ, ಅದೇ ಸಮಯಕ್ಕೆ ಊಟ, ನಿದ್ದೆ, ಏಕತಾನತೆಯ ಬದುಕು. ಅನುಷಾ-ಆಸ್ಮಾನ ವಯಸ್ಸಿನವರಿಗೂ ಸಂಕಟಗಳಿಲ್ಲವೆಂದಿಲ್ಲ. ಇವರುಗಳು ತಮ್ಮ ಹೊಟ್ಟೆಪಾಡಿಗಾಗಿ ಮನೆ ಬಿಟ್ಟು…. ಹೀಗೆ ದೂರದ ಊರಿನಲ್ಲಿ ರೂಮು ಮಾಡಿಕೊಂಡು ಇರಬೇಕು… ಬೆಂಗಳೂರಿನ ಪಿಜಿಗಳಲ್ಲಿರುವ ಹುಡುಗಿಯರು ಯಾವ್ಯಾವುದೋ ರಾಜ್ಯಗಳ ಊರುಗಳಿಂದ ತಮ್ಮ ಕನಸುಗಳನ್ನು ಸಾಕಾರ ಮಾಡಿಕೊಳ್ಳಲು ಅಜ್ಞಾತ ನಗರದಲ್ಲಿ ಜೀವಿಸಬೇಕು. ಇನ್ನು ಸಂಸಾರದಲ್ಲಿರುವ ಅನುಷಾಗೂ ಏಕತಾನತೆ ತಪ್ಪಿದ್ದಲ್ಲ. ವರ್ಷಗಳು ಉರುಳಿದಂತೆ ಅದೇ ಸಾಂಬಾರಿನ ಅದೇ ಒಗ್ಗರಣೆ, ಅದೇ ಜೀವನ. ಅವಳಿಗೂ ”ಒಮ್ಮಿಂದೊಮ್ಮೆಲೇ ತಾನು ಒಂಟಿ” ಅನ್ನಿಸತೊಡಗುತ್ತದೆ. ಇನ್ನು ಅನುಷಾ-ಆಸ್ಮಾರು ‘ಮನಿಯೂಟ’ ಕೊಡುವ ಸರಸ್ವತ್ತಮ್ಮ, ಬಷೀರ್, ಶೋಭಕ್ಕ ಇವರುಗಳೂ ಏಕಾಂಗಿಗಳೇ.

ಈ ಕಾದಂಬರಿಯಲ್ಲಿ “ಲೋಕೇಶರ ಕೊನೆಯ ಮಾತಿನಿಂದ ಅನುಷಾಳ ಮೊದಲ ಮಾತಿನ ತನಕ ಆ ಕೋಣೆಯಲ್ಲಿದ್ದ ಬರೀ ಒಂದು ನಿಮಿಷದ ನಿಶಬ್ದವೂ ಪೂರ್ತಿ ಒಂದು ಯುಗದಷ್ಟು ದೊಡ್ಡದಿತ್ತು”- ಈ ತರದ ಸಾಲುಗಳನ್ನ ಓದಿದ ತಕ್ಷಣ, “ಅಬ್ಬಾ, ಎಷ್ಟು ಸುಂದರವಾಗಿದೆ” ಎಂದು ಅನಿಸುವಂಥ ಅನೇಕ ಸಾಲುಗಳಿವೆ., ”ಹೆರಳ ಬೇರು, ಉರುಳ ಬಿಸುಪು, ಬೆರಳ ಮೊನಚು, ಕೊರಳ ಜಿನಿಸು ಎಲ್ಲವೂ ಎಲ್ಲವೂ ಇತ್ತು” ಅನ್ನುವ ತರದ ಕಾವ್ಯಾತ್ಮಕವಾದ ಭಾಷೆಯಿದೆ. ಜೊತೆಗೆ, ”ಹೌದಲ್ಲವೇ, ಈ ಜೀವನದ ಹೀಗೇ ಅಲ್ಲವೇ” ಅನಿಸುವಂತಹ ಕೆಲವು ವ್ಯಾಖ್ಯಾನಗಳೂ ಇವೆ. “ಇನ್ನೊಬ್ಬರಿಗೆ ವೈಯಕ್ತಿಕವಾಗಿ ನೋವು, ಅನ್ಯಾಯವನ್ನು ಉಂಟು ಮಾಡದ ಯಾವುದೂ ತಪ್ಪಲ್ಲದ ಈ ಲೋಕದಲ್ಲಿ; ಹಲವು ಸರ್ತಿ ಅವಳು [ಅನಿಷಾ] ತಪ್ಪು-ಸರಿ, ಸತ್ಯ-ಸುಳ್ಳುಗಳ ಧರ್ಮಸಂಕಟದಲ್ಲಿ ಬಿದ್ದಿದ್ದಿದೆ”. ಇದು ಆಧುನಿಕ ಜಗತ್ತಿಗೆ ಬೇಕಾಗುವ ನೈತಿಕತೆ ಇರಬಹುದೇ? ಈ ದೃಷ್ಟಿಯಲ್ಲಿ ನೋಡಿದಾಗ ಅನುಷಾ-ಆಸ್ಮಾ ಸಂಬಂಧದಲ್ಲಾಗಲೀ, ಲೋಕೇಶರ ಹೆಂಡತಿ ಮಕ್ಕಳಾಗುವುದನ್ನು ಇಷ್ಟಪಡದಿರುವುದರಲ್ಲಾಗಲೀ ಯಾವುದೇ ಅನೈತಿಕತೆಯಿಲ್ಲ. ವ್ಯಕ್ತಿ ಎಲ್ಲಿಯ ತನಕ ಬೇರೆಯವರಿಗೆ ಅನ್ಯಾಯ ಮಾಡುವುದಿಲ್ಲವೊ, ಅಲ್ಲಿಯವರಿಗೆ ಆತನ/ಆಕೆಯ ವೈಯಕ್ತಿಕ ಆಯ್ಕೆಗಳು, ಆದ್ಯತೆಗಳು ಅವರಿಗೇ ಬಿಟ್ಟಿದ್ದು. ಸಮಾಜ ಅದರ ಬಗ್ಗೆ ತಲೆ ಕೆಡಿಸಿಕೊಳ್ಳುವ ಅವಶ್ಯಕತೆಯಿಲ್ಲ. ಆದರೆ, ಯಾವುದೇ ಒಬ್ಬ ವ್ಯಕ್ತಿ ಸಮಾಜದ ಜೊತೆಗೆ, ಇತರರ ಜೊತೆಗೆ ಸಂಪರ್ಕವನ್ನು ಸಾಧಿಸುವುದು ಹೇಗೆ? ಯಾರನ್ನಾದಾರೂ ಸಂಪೂರ್ಣವಾಗಿ ತನ್ನ ಒಳಜೀವಕ್ಕಿಂತ ಮಿಗಿಲಾಗಿ ಹಚ್ಚಿಕೊಳ್ಳಲು ಸಾಧ್ಯವೇ? ಪ್ರತಿಯೊಬ್ಬರಿಗೂ ಅವರವರ ಒಳಜೀವವೇ ಎಲ್ಲಕ್ಕಿಂತ ಮಿಗಿಲಲ್ಲವೇ? ಇದು ನಿಜವಾದರೆ ಮತ್ತೆ ವ್ಯಕ್ತಿ ಏಕಾಂಗಿಯಾಗುವುದಿಲ್ಲವೇ? ವೈಯಕ್ತಿಕ ಸ್ವಾತಂತ್ರ್ಯ ಬಯಸುವ ವ್ಯಕ್ತಿ ಏಕಾಂಗಿಯಾಗಿರದಂತೆ ಸಮಾಜದ ಜೊತೆ, ಇತರರ ಜೊತೆ ಸೇತುವೆಗಳನ್ನು ಕಟ್ಟಿಕೊಳ್ಳುವುದು ಹೇಗೆ?

ಇದರ ಉತ್ತರ ಲೋಕೇಶರು ಕೊನೆಗೆ ತೆಗೆದುಕೊಳ್ಳುವ ಎರಡು ತೀರ್ಮಾನಗಳಲ್ಲಿದೆ. ಆಸ್ಮಾ-ಅನುಷಾರು ಭಾಗವಾಗಿದ್ದ ”ಮನಿಯೂಟ” ಸೇವೆ ನಿಂತುಹೋಗುವ ಹಾಗೆ ಇದ್ದಾಗ ಲೋಕೇಶರು ತಮ್ಮ ಹಣದಿಂದ ತಮ್ಮ ಮನೆಯಲ್ಲೇ ಅದನ್ನು ಮುಂದುವರಿಸಲು ಸಹಾಯ ಮಾಡುತ್ತಾರೆ. ಹಾಗೂ ಎಷ್ಟು ನಿಜವೋ, ಎಷ್ಟು ಕಲ್ಪನೆಯೋ ಎಂದು ತಮಗೇ ಗೊತ್ತಿಲ್ಲದ ತಮ್ಮ ಆತ್ಮಕತೆಯನ್ನು ಅದರಲ್ಲಿ ಬರುವ ಇನ್ನು ಜೀವಂತವಾಗಿರುವ ತನ್ನ ಮೊದಲ ಪ್ರೀತಿಯಾಗಿದ್ದ ಸಂಜೀವಿನಿ ಓದಿದರೆ ಅವಳ ಮೇಲೆ ಏನು ಪರಿಣಾಮವಾಗಬಹುದು ಎಂದು ಯೋಚಿಸಿ ಆತ್ಮಕತೆಯನ್ನು ‘ಕಾದಂಬರಿ” ಎಂದು ತಿದ್ದುತ್ತಾರೆ. ಈ ಎರಡನೇ ತೀರ್ಮಾನ, ನಮ್ಮ ವೈಯಕ್ತಿಕ ನಡವಳಿಕೆಗಳು, ಆಯ್ಕೆಗಳು, ಆದ್ಯತೆಗಳು, ಇನ್ನೊಬ್ಬರ ಖಾಸಗೀತನವನ್ನು ಅತಿಕ್ರಮಿಸಬಾರದು ಅನ್ನುವ ತಿಳುವಳಿಕೆಯಿಂದ ಮೂಡಿದೆ. ಇನ್ನು ಮೊದಲನೇ ತೀರ್ಮಾನ ನಮ್ಮ ಸಂಬಂಧಗಳು ರಕ್ತ ಸಂಬಂಧಿಗಳ ಜೊತೆ ಮಾತ್ರ ಇರಬೇಕಿಲ್ಲ. ನಮ್ಮ ಸುತ್ತಾ ಮುತ್ತಾ ನಮ್ಮ ತರಹದ್ದೇ ಅವಶ್ಯಕತೆಗಳಿರುವ ವ್ಯಕ್ತಿಗಳ ಜೊತೆಗೂ ಇರಬಹುದು. ಇದು ಆಧುನಿಕ (ಅಥವಾ ಆಧುನಿಕೋತ್ತರ ಅನ್ನಿ) ಸಮಾಜದಲ್ಲಿ ಇರಬಹುದಾದ ಸಮುದಾಯದ ಕಲ್ಪನೆ. ಲೋಕೇಶರು ತಮ್ಮದೇ ರೀತಿ ಏಕಾಂಗಿಗಳಾಗಿರುವ ಇತರರಿಗೆ ಮನೆ ಊಟದ ಏರ್ಪಾಡು ಮಾಡುವುದಕ್ಕೆ ಸಹಾಯ ಮಾಡುವ ಮೂಲಕ ಸಮಾಜದ ಇತರರ ಜೊತೆ ಸೇತುವೆ ನಿರ್ಮಿಸಿಕೊಳ್ಳುತ್ತಾರೆ.

ಮತ್ತೆ ಮೊದಲಿಗೆ ಬಂದರೆ, ಒಂದು ಹುಟ್ಟು-ಒಂದು ಸಾವಿನ ಈ “ಮೃತ್ಯುಗಂಟಿದ ಬದುಕನ್ನು” ಈ ಕಾಲದಲ್ಲಿ ಹೇಗೆ ಸವೆಸುವುದು? ಏಕಾಂಗಿತನ, ಏಕತಾನತೆಗಳನ್ನು ಎದುರಿಸುವುದು ಹೇಗೆ? (ಈ ಸಮಸ್ಯೆಗಳು ಎಲ್ಲರಿಗೂ ಇರಬೇಕಾಗಿಲ್ಲ; ಈ ಕಾದಂಬರಿಯ ಪಾತ್ರಗಳಿಗೆ ತಮ್ಮ ಜೀವನದ ಸಂದಂರ್ಭದಲ್ಲಿ ಮಾತ್ರ ಹುಟ್ಟಿರುವ ಸಮಸ್ಯೆಗಳಿರಬಹುದು ಇವು). ಕಾದಂಬರಿಗಳು ನೈತಿಕ ಪ್ರಶ್ನೆಗಳಿಗೆ ಉತ್ತರ ಕೊಡುವ ಗ್ರಂಥಗಳೇನಲ್ಲ. ಆದರೆ ಉತ್ತರದ ಸೂಚನೆಗಳಂತೂ ಈ ಕಾದಂಬರಿಯಲ್ಲಿವೆ. ನಮ್ಮ ನೋವುಗಳನ್ನು ಏಕಾಂಗಿತನವನ್ನೂ ಅನುಭವಿಸುತ್ತಲೇ ಇತರರ ಬಗ್ಗೆ ಸಹಾನುಭೂತಿಯಿಂದ ನೋಡಬಲ್ಲ ಅಂತಃಕರಣದ ಮೂಲಕ, ನಮ್ಮ ಹಾಗೇ ಏಕಾಂಗಿಗಳಾಗಿರುವ- ಆದರೆ ನಮ್ಮ ಹಾಗೇ ಇರಬೇಕಾಗಿಲ್ಲದ, ನಮ್ಮ ಅಭಿರುಚಿಗಳನ್ನೇ ಹೊಂದಿರಬೇಕಿಲ್ಲದ, ನಮ್ಮ ರೀತಿಯೇ ಜೀವಿಸುತ್ತಿಲ್ಲದ- ವ್ಯಕ್ತಿಗಳ ಜೊತೆಗೆ ಸೇತುವೆಗಳನ್ನು ನಿರ್ಮಿಸಿಕೊಳ್ಳುವುದರ ಮೂಲಕ ಅನ್ನುವುದೇ ಆ ಉತ್ತರವಿರಬಹುದೇ?

(ಕೃತಿ: ಪುನರಪಿ (ಕಾದಂಬರಿ), ಲೇಖಕರು: ಕಾವ್ಯಾ ಕಡಮೆ ನಾಗರಕಟ್ಟೆ, ಪಲ್ಲವ ಪ್ರಕಾಶನ, ಪುಟಗಳು: 142)