ಆ ದಿನ ರಾತ್ರಿ ಎಂಟಕ್ಕೆ ಮನೆಗೆ ಬಂದ ಇವರ ಕೆನ್ನೆಯ ಮೇಲೆ ಸ್ಪಷ್ಟವಾಗಿ ಮೂಡಿದ ಲಿಪ್ಸ್ಟಿಕ್‌ನ ಗುರುತು ನನಗೆ ನೋಡಿ ಇಡೀ ಮೈಯೆಲ್ಲಾ ಕರೆಂಟು ಹೊಡೆದ ಅನುಭವ. ಹೃದಯ ಸ್ಥಂಭನವಾಗುವುದೊಂದು ಬಾಕಿ… ಕೆನ್ನೆಯ ಮೇಲೆ ಯಾರೋ ಕಿಸ್ ಮಾಡಿದ್ದಾರೆ. ನನ್ನ ಕಣ್ಣಿನಲ್ಲಿ ತಕ್ಷಣ ಧಾರಾಕಾರವಾಗಿ ಸುರಿಯುವ ಕಣ್ಣೀರಿನಲ್ಲಿ ನಮ್ಮ ದಾಂಪತ್ಯ ಕೊಚ್ಚಿ ಹೋಗುವ ಸೂಚನೆ. ಕೈಯಲ್ಲಿದ್ದ ಮೊಬೈಲ್‌ನಲ್ಲಿ ಅವರಿಗೆ ಅರಿವಾಗುವ ಮೊದಲೇ ಅವರ ಕೆನ್ನೆಯ ಮೇಲಿನ ಕಿಸ್‌ನ ಫೋಟೋ ತೆಗೆದುಕೊಂಡೆ. ನಾನು ಫೋಟೋ ತೆಗೆದುಕೊಂಡಿದ್ದು ಅವರಿಗೆ ಅರಿವಿಗೆ ಬರಲೇ ಇಲ್ಲ.
ಲತಾ ಶ್ರೀನಿವಾಸ್‌ ಬರೆದ ಈ ಭಾನುವಾರದ ಕತೆ “ಒಂದು ಮುತ್ತಿನ ಕಥೆ” ನಿಮ್ಮ ಓದಿಗೆ

ಪ್ರೇಮಿ ಪಿಸು ಮಾತನಾಡುತ್ತಾ ಪ್ರಿಯತಮೆಯ ಕೆನ್ನೆಗೆ ಕೊಡುವ ಬಿಸಿಯ ಮುತ್ತಲ್ಲ, ದಾಂಪತ್ಯದಲ್ಲಿ ಹೆಂಡತಿ ಗಂಡನಿಗೆ ಕೊಡುವ ಮಾಗಿದ ಮುತ್ತಲ್ಲ, ಕೊಟ್ಟರೂ ಕೊಡದಂತೆ ಗಾಳಿಯಲ್ಲಿ ಹಾರಿಬಿಡುವ ಹಾರಿಕೆಯ ಮುತ್ತೂ ಅಲ್ಲ.

ನಿಶ್ಚಿತಾರ್ಥ ಮುಗಿದು ಮದುವೆಗೆ ಆರು ತಿಂಗಳಿರುವಾಗ ಇವರಿಂದ ಬಂದ ಪತ್ರದಲ್ಲಿ ಒಂದು ಸೂಚನೆ ಇತ್ತು. ತುಟಿಗೆ ದಪ್ಪ ಲಿಪ್ಸ್ಟಿಕ್ ಹಾಕಿಕೊಂಡು ಅದನ್ನು ಪತ್ರದ ಮೇಲೆ ಒತ್ತಿ ನಂತರ ಲೆಟರ್‌ನ್ನು ಮುಂದುವರಿಸಬೇಕೆಂದು ಕೇಳಿಕೊಂಡಿದ್ದರು. ನಾನು ಹಾಗೆಯೇ ಮಾಡಿ ರೋಮಾಂಚನಗೊಂಡಿದ್ದೆ. ಮದುವೆಯಾದ ಹೊಸದರಲ್ಲಿ ಹನಿಮೂನಿನಲ್ಲಿ ಹೆಜ್ಜೆಗೊಂದು ಸಿಗುತ್ತಿದ್ದ ಗಟ್ಟಿ ಮುತ್ತುಗಳು, ಮಂಟಪದ ಕೆಳಗೆ, ಬಂಡೆಯ ಹಿಂದೆ, ಬಾಗಿಲ ಸಂದಿ, ಎಲ್ಲೆಂದರಲ್ಲಿ ಹೇಗೆಂದರೆ ಹಾಗೆ, ಎಲ್ಲವನ್ನೂ ಒಟ್ಟು ಮಾಡಿ ಪೋಣಿಸಿದ್ದರೆ ಬಹುಶಃ ಬೀರುವಿನಲ್ಲಿ ಜಾಗವಿರುತ್ತಿರಲಿಲ್ಲವೇನೋ……

ಆಫೀಸಿಗೆ ಹೊರಡುವಾಗ, ಮತ್ತು ಬಂದ ತಕ್ಷಣ ಸಿಗುತ್ತಿದ್ದ ಮುತ್ತು ಯಾವ ಹೀರೋ ಹೀರೋಯಿನ್‌ಗೂ ಕಡಿಮೆ ಇಲ್ಲದಂತೆ ಬದುಕಿನಲ್ಲಿ ಮೆರೆದಿದ್ದೆವು.

ದುಡ್ಡು ಕಾಸು ಕಡಿಮೆ ಇದ್ದರೂ, ಬೇರೆಲ್ಲಾ ತೊಂದರೆಗಳು ಬಂದರೂ, ಮುತ್ತಿಟ್ಟು ಸರಿದೂಗಿಸಿ ಬಿಡುತ್ತಿದ್ದೆವು. ಇರುವ ಇಬ್ಬರು ಮಕ್ಕಳು ಪುತ್ತೂರಿನ ಸತ್ಯ ಸಾಯಿ ಸಂಸ್ಥೆಯಲ್ಲಿ ಓದುತ್ತಿದ್ದರು. ಈ ಮುತ್ತಿನ ಮತ್ತಿನಲ್ಲಿ ಇಪ್ಪತ್ತು ವರ್ಷ ಹೇಗೆ ಕಳೆದೆವು ಗೊತ್ತೇ ಆಗಲಿಲ್ಲ. ಈಗ ಎರಡು ತಿಂಗಳಿಂದ ನೋಡುತ್ತಿದ್ದೇನೆ. ಇವರು ಕೈಗೇ ಸಿಗುತ್ತಿಲ್ಲ. ಯಾಕೋ ಯಾವಾಗಲೂ ಯಾವುದೋ ಚಿಂತೆಯಲ್ಲಿದ್ದಂತೆ ಇರುತ್ತಾರೆ. ಯಾವಾಗಲೂ ಕೈಲಿ ಮೊಬೈಲು. ನಾನು ಬೆಡ್ ರೂಂಗೆ ಹೋದ ತಕ್ಷಣ ಕೈಯಲ್ಲಿರುವ ಮೊಬೈಲ್ ಜಾರಿಸಿ ಬಿಡುತ್ತಾರೆ. ಇಲ್ಲದಿದ್ದರೆ ತಿರುಗಿಸಿ ಇಡುತ್ತಾರೆ. ಈಗಂತೂ ನನ್ನ ಅವಾಯ್ಡ್ ಮಾಡುವುದೇ ಆಗಿದೆ. ಯಾಕೆಂದು ಅರ್ಥವೇ ಆಗುತ್ತಿಲ್ಲ. ನಾನು ಮಂಚದ ಮೇಲೆ ಹೋಗಿ ಕುಳಿತರೆ ಇವರಿಗೆ ಇರಿಸು ಮುರಿಸು ಆಗುತ್ತದೆ. ಅಮ್ಮನ ಮನೆಗೆ ಹೊರಟು ನಿಂತರೆ ನನ್ನ ಬಿಟ್ಟಿರಲಾರದೆ ಕಳುಹಿಸಲು ಒಪ್ಪದಿದ್ದವರು ಆರಾಮವಾಗಿ ಇದ್ದು ಬರುವಂತೆ ಹೇಳಿ ಕಣ್ಣೀರು ತರಿಸುತ್ತಾರೆ.

ಆ ದಿನ ರಾತ್ರಿ ಎಂಟಕ್ಕೆ ಮನೆಗೆ ಬಂದ ಇವರ ಕೆನ್ನೆಯ ಮೇಲೆ ಸ್ಪಷ್ಟವಾಗಿ ಮೂಡಿದ ಲಿಪ್ಸ್ಟಿಕ್‌ನ ಗುರುತು ನನಗೆ ನೋಡಿ ಇಡೀ ಮೈಯೆಲ್ಲಾ ಕರೆಂಟು ಹೊಡೆದ ಅನುಭವ. ಹೃದಯ ಸ್ಥಂಭನವಾಗುವುದೊಂದು ಬಾಕಿ…

ರೀ…… ಏನ್ರೀ ಇದು?

ಕೆನ್ನೆಯ ಮೇಲೆ ಯಾರೋ ಕಿಸ್ ಮಾಡಿದ್ದಾರೆ. ನನ್ನ ಕಣ್ಣಿನಲ್ಲಿ ತಕ್ಷಣ ಧಾರಾಕಾರವಾಗಿ ಸುರಿಯುವ ಕಣ್ಣೀರಿನಲ್ಲಿ ನಮ್ಮ ದಾಂಪತ್ಯ ಕೊಚ್ಚಿ ಹೋಗುವ ಸೂಚನೆ. ಕೈಯಲ್ಲಿದ್ದ ಮೊಬೈಲ್‌ನಲ್ಲಿ ಅವರಿಗೆ ಅರಿವಾಗುವ ಮೊದಲೇ ಅವರ ಕೆನ್ನೆಯ ಮೇಲಿನ ಕಿಸ್‌ನ ಫೋಟೋ ತೆಗೆದುಕೊಂಡೆ. ನಾನು ಫೋಟೋ ತೆಗೆದುಕೊಂಡಿದ್ದು ಅವರಿಗೆ ಅರಿವಿಗೆ ಬರಲೇ ಇಲ್ಲ.

ನನಗೆ ಮೊದಲೇ ಗೊತ್ತಿತ್ತು. ನಿಮಗೆ ಇಂಥದ್ದೇನೋ ಸಂಬಂಧವಿದೆಯೆಂದು. ಎಲ್ಲಿಗೆ ಹೋಗಿದ್ರಿ? ಏನು ಮಾಡಿದ್ರಿ, ಡ್ರೈವರ್‌ನ ಮನೆಗೆ ಕಳುಹಿಸಿ ಯಾಕೆ ಬಸ್ಸಿನಲ್ಲಿ ಮನೆಗೆ ಬಂದ್ರಿ? ನನ್ನ ಪ್ರಶ್ನೆಗಳ ಸುರಿಮಳೆ.

ಗಾಬರಿ ಆದ ಅವರನ್ನು ಎಳೆದುಕೊಂಡು ಹೋಗಿ ಕನ್ನಡಿಯ ಮುಂದೆ ನಿಲ್ಲಿಸಿ, ಬಲಗೆನ್ನೆಯನ್ನು ತೋರಿಸಿದೆ. ಅವರಿಗೇ ಗಾಬರಿ! ಇದು ಹೇಗಾಯಿತು?

ಆಫೀಸಿನಿಂದ ಎಲ್ಲಿಗೆ ಹೋಗಿದ್ರಿ, ಹೇಳ್ರಿ? ……

ತಾಳೆ…… ನಾನು ಆಫೀಸಿನಿಂದ ಸೀದಾ ಲಾಲ್‌ಭಾಗ್‌ಗೆ ವಾಕ್ ಮಾಡಲು ಡ್ರಾಪ್ ತೆಗೆದುಕೊಂಡೆ. ಡ್ರೆöÊವರ್ ಇವತ್ತು ರಿಸೆಪ್ಶನ್‌ಗೆ ಹೋಗಬೇಕು, ಮನೆಗೆ ಹೋಗಬೇಕೆಂದು ಮೊದಲೇ ಹೇಳಿದ್ದ. ಅವನನ್ನು ಕಳಿಸಿದೆ. ಲಾಲ್‌ಭಾಗ್‌ನಲ್ಲಿ ವಾಕ್ ಮುಗಿಸಿ ಬಸ್ಸಿನಲ್ಲಿ ಬಂದು ಆ ಸರ್ಕಲ್‌ನಲ್ಲಿ ಇಳಿದು ಮನೆಗೆ ಬಂದೆ. ದೇವರಾಣೆಗೂ ಇದು ನಿಜ. ಇದು ಹೇಗಾಯಿತೋ ನನಗೆ ಗೊತ್ತಿಲ್ಲ.

ಹಾಗೇ ಗಮನಿಸಿದೆ ಕೊರಳಿನಲ್ಲಿರುವ ಚಿನ್ನದ ಸರವೂ ಮಾಯ. ನನ್ನ ಅನುಮಾನವೂ ಧೃಢವಾಯಿತು. ರೀ ಸರ ಎಲ್ರಿ… ಸರ… “ಹಾ ಸರನಾ…… ಮಧ್ಯಾಹ್ನ ಇತ್ತು.” ಅದೇ ನಾನು ಕೇಳುತ್ತಿರುವುದು. ಮತ್ತೆ ನನ್ನ ಅಳು ಜೋರಾಯಿತು.

ಸಾಯಂಕಾಲ ಯಾವಳೋ ನಿಮಗೆ ಲಾಲ್‌ಭಾಗ್‌ನಲ್ಲಿ ಸಿಕ್ಕಿದ್ದಾಳೆ. ನಿಮ್ಮ ಸರಸದಲ್ಲಿ ಸರ ಬಿದ್ದು ಹೋಗಿದೆ. ಎಲ್ಲಾ ಕಣ್ಣಿಂದ ಕಂಡಂತೆ ನನ್ನ ಕಲ್ಪನೆಗಳು ಪುಂಕಾನು ಪುಂಕವಾಗಿ ಹರಿದು ಬಂದವು. ಇವರ ಮುಖ ಇದ್ದಕ್ಕಿದ್ದಂತೆ ಗಂಭೀರವಾಯಿತು. ಮಾಡದ ತಪ್ಪಿನ ಮುಖ ಭಾವ ಸ್ಪಷ್ಟವಾಗಿ ಗೋಚರಿಸುತ್ತಿತ್ತು. ಸರ್ಕಲ್‌ನಿಂದ ಮನೆಗೆ ಬರುವಾಗ ಯಾವನೋ ಒಬ್ಬ ಬೈಕ್ ಸವಾರ ನನ್ನ ಗುದ್ದಿಕೊಂಡೇ ಹೋದ. ಅವನೇ ಏನಾದರೂ ಚೈನ್ ಕಿತ್ತಿರಬಹುದು.…ನಾನು ಬೈದುಕೊಂಡು ಮನೆಗೆ ಬಂದೆ. ಇಲ್ಲಿ ಯಾರೂ ನಿಮ್ಮ ಸುಳ್ಳು ಕಥೆ ಕೇಳಲು ರೆಡಿ ಇಲ್ಲ. ನನ್ನ ಬಾಯಿಯಲ್ಲಿ ಬರಬಾರದ ಮಾತುಗಳು ಬಂದು ಹೋದವು. ನನ್ನ ವಿಷಪೂರಿತ ಮಾತುಗಳಿಂದ ಅವರೂ ಸಾಕಷ್ಟು ನೊಂದಿದ್ದರು. ಇಬ್ಬರೂ ಬೆಡ್ ರೂಂ ಸೇರಿ ರಾತ್ರಿ ಎಲ್ಲಾ ಕಲ್ಲು ವಿಗ್ರಹಗಳಂತೆ ಕುಳಿತು ಬೆಳಗು ಕಂಡಿದ್ದೆವು.

ರಾತ್ರಿ ಎಲ್ಲಾ ನಿದ್ದೆಗೆಟ್ಟಿದ್ದರಿಂದ ಸೋತು ಸೊಪ್ಪಾಗಿದ್ದ ಮುಖ ಹೊತ್ತು ಆಫೀಸಿಗೆ ಹೊರಟರು.

ನಾನು ಹಟಕ್ಕೆ ಬಿದ್ದವಳಂತೆ ಯಾವತ್ತೂ ಪೊಲೀಸ್ ಸ್ಟೇಷನ್ ಮೆಟ್ಟಿಲು ಹತ್ತದವಳು, ಸ್ಟೇಷನ್‌ಗೆ ಹೋಗಿ “ಸರ್ ನಮ್ಮ ಮನೆಯವರ ಸರ ಕಳುವಾಗಿದೆ. ನೆನ್ನೆ ಸಾಯಂಕಾಲ ಸುಮಾರು 7.30ರ ಸಮಯದಲ್ಲಿ ಬೈಕ್ ಸವಾರ ಸರ ಕಿತ್ತುಕೊಂಡಿದ್ದಾನೆ. ಏಳು ಮೂವತ್ತರ ಸಮಯದಿಂದ ಎಂಟು ಗಂಟೆಯ ಒಳಗಿನ ಸಿ.ಸಿ.ಕ್ಯಾಮರಾ ಫೂಟೇಜ್ ನೋಡಬೇಕಿತ್ತು, ದಯವಿಟ್ಟು ತೋರಿಸಿ” ಎಂದೆ.

ಆ ಪುಣ್ಯಾತ್ಮ ಯಾರೋ ಒಳ್ಳೆಯ ಮನುಷ್ಯ, ಫೂಟೇಜ್ ತೆಗೆದು ತೋರಿಸಿದ, ಇವರ ಬಲಗಡೆ ನಡೆದು ಬಂದ ಮಂಗಳ ಮುಖಿ ಇವರ ಕೆನ್ನೆಗೆ ಮುತ್ತು ಕೊಟ್ಟು, ಎಡಗಡೆ ಪ್ಯಾಂಟಿನ ಜೇಬಿಗೆ ಕೈ ಹಾಕಿದ ದೃಶ್ಯ ಅದೇ ಸಮಯದಲ್ಲಿ ಬೈಕ್ ಸವಾರ ಇವರ ಚೈನ್ ಕಿತ್ತು ಪರಾರಿಯಾಗಿದ್ದು, ಸಿ.ಸಿ.ಕ್ಯಾಮರಾದಲ್ಲಿ ಸ್ಪಷ್ಟವಾಗಿ ರೆಕಾರ್ಡ್ ಅಗಿತ್ತು. ಎಡಗಡೆ ಪ್ಯಾಂಟಿನ ಜೇಬಿನಲ್ಲಿರುವ ಪರ್ಸನ್ನು ಜೋಪಾನವಾಗಿ ಹಿಡಿಯುವ ಗಾಬರಿಯಲ್ಲಿ ಮಂಗಳ ಮುಖಿ ಇವರ ಕೆನ್ನೆಗೆ ಚುಂಬಿಸಿದ್ದು, ಇವರ ಗಮನಕ್ಕೆ ಬಂದೇ ಇಲ್ಲ. ಅದನ್ನು ನೋಡಿ ನನಗೆ ವಿಶ್ವವನ್ನೇ ಗೆದ್ದ ಸಂಭ್ರಮ. ಪೊಲೀಸ್ ಮುಖದಲ್ಲಿ ತುಂಟನಗು, ಏನ್ ಮೇಡಂ, ಗಂಡ ಹೆಂಡತಿ ಕನ್ಫ್ಯೂಜನಾ? ನನ್ನ ಜೋರಾದ ನಗುವಿಗೆ ಅವರ ದನಿಯೂ ಜೊತೆ ಆಯಿತು.

ಥ್ಯಾಂಕ್ಯೂ ಸರ್.

“ಬೈಕ್ ನಂಬರ್ ರೆಕಾರ್ಡ್ ಆಗಿದೆ. ಖಂಡಿತವಾಗಿಯೂ ನಾವು ಕಳ್ಳನನ್ನು ಹಿಡಿಯುತ್ತೇವೆ…” ಬೆಟ್ಟದಂತೆ ಬಂದ ಅನುಮಾನ ದೇವರ ಮುಂದಿನ ಕರ್ಪೂರದಂತೆ ಕರಗಿತ್ತು. ಇವರೂ ಆಫೀಸಿನಲ್ಲಿ ಕೂರಲಾರದೆ ಅರ್ಧ ದಿನ ರಜಾ ಹಾಕಿ ಮನೆಗೆ ಬಂದಿದ್ದರು. ನಾನು ಸೋಫಾದಲ್ಲಿ ಕುಳಿತ ಇವರಿಗೆ ಹಿಂದಿನಿಂದ ಬಂದು ಎಡಕೆನ್ನೆಗೆ ಒತ್ತಿ ಒಂದು ಮುತ್ತನಿತ್ತೆ…… ಇವರು ಏನೂ ಅರ್ಥವಾಗದ ಗೊಂದಲದಲ್ಲಿದ್ದರು.