ಹಾಗೆ ನೋಡಿದರೆ ಅವರ ಕಾಲದಲ್ಲಿಯೇ ನಾವು ಅನೇಕರು ಅಂಕಣಗಳನ್ನು ಬರೆದೆವು. ಅದು ಹಿಂದೆ ಇತಿಹಾಸದಲ್ಲಿ ಎಂದೂ ಇರಲೇ ಇಲ್ಲ. ಇದನ್ನು ʻಡೆಕ್ಕನ್‌ ಹೆರಾಲ್ಡ್‌ʼನ ಸುದ್ದಿ ಸಂಪಾದಕರಾಗಿದ್ದ ನಾಗಭೂಷಣರಾವ್‌ ಅವರು ಅನೇಕ ಸಾರಿ ನನ್ನ ಜತೆಗೆ ಹಂಚಿಕೊಂಡರು. ʻನೋಡಿ, ನೀವು ನಿಮ್ಮ ಚಿತ್ರ ಹಾಕಿಕೊಂಡು ಬರೆಯುತ್ತೀರಿ. ನಮಗೆ ಹೀಗೆ ಬರೆಯಲು ನಮ್ಮ ಕಾಲದಲ್ಲಿ ಅವಕಾಶವೇ ಇರಲಿಲ್ಲʼ ಎಂದು ಅವರು ಹೇಳುತ್ತಿದ್ದರು.
ಹಿರಿಯ ಪತ್ರಕರ್ತ ಪದ್ಮರಾಜ ದಂಡಾವತಿಯವರ ವೃತ್ತಿ ಜೀವನದ ನೆನಪುಗಳ ಕೃತಿ “…ಉಳಿದಾವ ನೆನಪು” ಮೇ ೫ ರಂದು ಭಾನುವಾರ ಬೆಂಗಳೂರಿನಲ್ಲಿ ಬಿಡುಗಡೆಯಾಗಲಿದ್ದು, ಅದರ ಅಧ್ಯಾಯದ ಒಂದು ಭಾಗ ನಿಮ್ಮ ಓದಿಗೆ

ಎಸ್‌.ವಿ. ಜಯಶೀಲರಾವ್‌ ಅವರು ತಮ್ಮ ಕಾಲದಲ್ಲಿ ʻಒಳ್ಳೆಯ ವರದಿಗಾರರುʼ ಎಂದು ಹೆಸರು ಮಾಡಿದ್ದರು. ಅವರ ಸದನ ಸಮೀಕ್ಷೆಯನ್ನು ಪ್ರಶಂಸೆ ಮಾಡುವವರೂ ಬಹಳ ಜನರಿದ್ದರು. ಆದರೆ, ನಮ್ಮ ಸಂಪಾದಕೀಯ ಸಭೆಗಳಲ್ಲಿ ಅವರು ಭಾಗವಹಿಸುತ್ತಿದ್ದಾಗ ಅವರ ಕಾಲು ಎಳೆಯುವ ಸಂದರ್ಭಗಳು ಎದ್ದು ಕಾಣುತ್ತಿದ್ದುವು. ನಮ್ಮ ಹೊಸ ಸಿಬ್ಬಂದಿಯನ್ನು ಉದ್ದೇಶಿಸಿ ಅವರು ತಮ್ಮ ತರಗತಿಗಳಲ್ಲಿ ಟಿ.ಎಸ್‌. ರಾಮಚಂದ್ರರಾವ್‌ ಅವರ ಕುರಿತೇ ಹೆಚ್ಚು ಮಾತನಾಡುತ್ತಾರೆ ಎಂದು ತರಬೇತಿಗೆ ಹೋಗುತ್ತಿದ್ದ ಸಿಬ್ಬಂದಿ ಗೊಣಗುವುದನ್ನು ನಾನೂ ಕೇಳಿದ್ದೆ. ಇದೆಲ್ಲ ತಲೆಮಾರುಗಳ ಸಮಸ್ಯೆ.
ರಾಮಚಂದ್ರರಾವ್‌ ಬಗ್ಗೆ ನಮ್ಮ ಹಿಂದಿನ ತಲೆಮಾರಿನವರು ಆಡುವ ಪ್ರಶಂಸೆಯ ಮಾತುಗಳ ಜತೆಗೆ ನನಗೆ ಎಂದೂ ಕನೆಕ್ಟ್‌ ಆಗಲು ಆಗಿಲ್ಲ. ಅದು ನನ್ನ ಸಮಸ್ಯೆಯೋ ಅಥವಾ ಹಾಗೆ ಮಾತನಾಡುವವರ ಸಮಸ್ಯೆಯೋ ತಿಳಿಯೆ. ಇನ್ನು ನನಗಿಂತ ಹತ್ತು ಹನ್ನೆರಡು ವರ್ಷ ಕಿರಿಯರಿಗೆ ಹೇಗೆ ಅದು ಕನೆಕ್ಟ್‌ ಆಗುತ್ತದೆ? ಆದರೆ, ಟಿ.ಎಸ್‌.ಆರ್‌ ಅವರನ್ನು ವೈಭವಿಸುವುದನ್ನು ನಾನು ನೋಡುತ್ತಲೇ ಬಂದಿರುವೆ. ನಾನು ಅವರ ಕಾಲದಲ್ಲಿ ಕೆಲಸಕ್ಕೆ ಸೇರಿರಲಿಲ್ಲ. ಅವರ ಬಗ್ಗೆ ವೈಯಕ್ತಿಕವಾಗಿ ನನಗೆ ಏನೂ ಗೊತ್ತೂ ಇಲ್ಲ. ಆದರೆ, ಅವರ ವೈಭವೀಕರಣವನ್ನು ನಾನು ಅನೇಕ ವರ್ಷಗಳಿಂದ ನೋಡಿಕೊಂಡು ಬಂದಿರುವೆ. ಬಹುಶಃ ಅವರು ಒಬ್ಬ ಒಳ್ಳೆಯ ನಾಯಕ ಆಗಿದ್ದಿರಬಹುದು ಮತ್ತು ಆಗಿನ ಕಾಲದಲ್ಲಿ ದಿಟ್ಟ ಪತ್ರಕರ್ತ ಎಂದೆನಿಸಿರಬೇಕು. ಅದಕ್ಕೆ ಅವರ ಛೂ ಬಾಣ ಅಂಕಣವೂ ಕಾರಣವಾಗಿರಬಹುದು. ಈಗ ಛೂ ಬಾಣ ಓದಿದರೆ ಏನೂ ಅನಿಸುವುದಿಲ್ಲ. ಬಹುಶಃ ಪತ್ರಿಕೆಯ ಬರವಣಿಗೆ ಆಯಾ ಕಾಲಕ್ಕೆ ಪ್ರಸ್ತುತವಾಗಿರುವುದರಿಂದ ಹೀಗೆ ಅನಿಸುತ್ತಿರಬಹುದು.

(ಪದ್ಮರಾಜ ದಂಡಾವತಿ)

ಹಾಗೆಂದು ಅವರ ವೈಭವೀಕರಣ ಈಗಲೂ ನಿಂತಿಲ್ಲ. ಈಚೆಗೆ ʻಪ್ರಜಾವಾಣಿʼಗೆ 75 ವರ್ಷ ತುಂಬುವ ಸಂದರ್ಭದಲ್ಲಿ ಕೆ.ಎನ್‌. ಹರಿಕುಮಾರ್‌ ಅವರು ತಮ್ಮ ತಾತನವರಾದ ಕೆ.ಎನ್‌. ಗುರುಸ್ವಾಮಿ ಅವರ ಕುರಿತು ಬರೆದ ಲೇಖನದ ಅನುವಾದ ʻಪ್ರಜಾವಾಣಿʼಯಲ್ಲಿಯೂ ಪ್ರಕಟವಾಯಿತು. ಮೂಲ ಲೇಖನ ʻಡೆಕ್ಕನ್‌ ಹೆರಾಲ್ಡ್‌ʼನಲ್ಲಿ ಪ್ರಕಟವಾಗಿತ್ತು. ಹರಿಕುಮಾರ್‌ ಅವರು ತಮ್ಮ ಲೇಖನದಲ್ಲಿ ಎಲ್ಲಿಯೂ ಟಿ.ಎಸ್‌.ಆರ್‌ ಅವರ ಬಗ್ಗೆ ಪ್ರಸ್ತಾಪ ಮಾಡದೇ ಇದ್ದಾಗಲೂ ಅವರ ಚಿತ್ರವನ್ನು ʻಪ್ರಜಾವಾಣಿʼಯಲ್ಲಿ ಬಳಸಿದ್ದು ಈ ವೈಭವೀಕರಣದ ಮುಂದುವರಿಕೆಯಂತೆ ನನಗೆ ಕಾಣುತ್ತದೆ.

ನಾನು ಈ ಮಾತನ್ನು ಕೆ.ಎನ್‌. ಶಾಂತಕುಮಾರ್‌ ಅವರ ಮುಂದೆಯೂ ವ್ಯಕ್ತಪಡಿಸಿದ್ದೆ. ಹಾಗೆ ನೋಡಿದರೆ ʻಪ್ರಜಾವಾಣಿʼಯ ಏಳಿಗೆಯಲ್ಲಿ ಹರಿಕುಮಾರ್‌, ಶಾಂತಕುಮಾರ್‌ ಅವರ ಪಾತ್ರ ಬಹಳ ದೊಡ್ಡದಿದೆ. ಅವರ ತಂದೆ ಕೆ.ಎ. ನೆಟ್ಟಕಲ್ಲಪ್ಪ ಮತ್ತು ತಾತ ಕೆ.ಎನ್‌. ಗುರುಸ್ವಾಮಿಯವರನ್ನಂತೂ ಯಾರೂ ನೆನಪು ಮಾಡಿಕೊಳ್ಳುವಂತೆ ಕಾಣದು. ಎಲ್ಲ ನಾಲ್ಕೂ ಪತ್ರಿಕೆಗಳನ್ನು ಮಾರುಕಟ್ಟೆ ಮಾಡುವುದರಲ್ಲಿ ಕೆ.ಎನ್‌. ತಿಲಕ್‌ಕುಮಾರ್‌ ಅವರ ಪಾತ್ರವೂ ಗಣನೀಯವಾಗಿದೆ. ಆ ಪತ್ರಿಕೆಯ ಇತಿಹಾಸದಲ್ಲಿ ಈ ಎಲ್ಲರ ಹೆಸರು ದಾಖಲಾಗುವಂತೆ ಕಾಣುವುದಿಲ್ಲ.

ನನ್ನ ಈ ಆಕ್ಷೇಪಕ್ಕೆ ನಿಖರ ಉದಾಹರಣೆ ಕೊಡಬೇಕು ಎಂದರೆ ʻಪ್ರಜಾವಾಣಿʼಯಲ್ಲಿ ಕಾರ್ಯನಿರ್ವಾಹಕ ಸಂಪಾದಕರಾಗಿ ನಿವೃತ್ತರಾದ ದಿ.ಜಿ.ಎನ್‌. ರಂಗನಾಥರಾವ್‌ ಅವರು ʻಪತ್ರಿಕೋದ್ಯಮʼ ಎಂಬ ಒಂದು ಬೃಹತ್‌ ಕೃತಿಯನ್ನು ರಚಿಸಿದ್ದಾರೆ. ಇದು ಪತ್ರಿಕೋದ್ಯಮದ ವಿದ್ಯಾರ್ಥಿಗಳನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ರಚಿಸಿದ ಗ್ರಂಥ. ಇದು 2006 ರಲ್ಲಿ ಮೊದಲ ಮುದ್ರಣ ಕಂಡಿತ್ತು, 2014 ರಲ್ಲಿ ಮೂರನೇ ಪರಿಷ್ಕೃತ ಮುದ್ರಣ ಕಂಡಿತು. ನನ್ನ ಬಳಿ ಈ ಪರಿಷ್ಕೃತ ಮುದ್ರಣದ ಪ್ರತಿ ಇದೆ.

ಅದು ಪರಿಷ್ಕೃತವಾದ ಕಾರಣ ಅದರಲ್ಲಿ ಈಚಿನ ವಿದ್ಯಮಾನಗಳು ಸೇರಿರುತ್ತವೆ ಎಂಬುದು ಗ್ರಹೀತ. ಕೊನೆಯ ಪಕ್ಷ ಅವರು ಕೆಲಸ ಮಾಡಿದ, ನಿವೃತ್ತಿಯೂ ಅದ ʻಪ್ರಜಾವಾಣಿʼಯ ಕುರಿತ ಮಾಹಿತಿಯೂ ಅಲ್ಲಿ ಪರಿಷ್ಕಾರವಾಗಿಲ್ಲ. ಅದಕ್ಕೆ ಕಾರಣವೇನಿರಬಹುದು ಎಂದು ತಿಳಿಯುವುದಿಲ್ಲ. ಅವರು ಪತ್ರಿಕೋದ್ಯಮದ ಇತಿಹಾಸ ಬರೆದಿರುವ ಕಾರಣ ಅದರಲ್ಲಿ ಸರಿಯಾದ ಮತ್ತು ಅವರೇ ತಮ್ಮ ಪುಸ್ತಕದ ಶೀರ್ಷಿಕೆಯಲ್ಲಿ ಹೇಳಿದ ಹಾಗೆ ʻಸಮಗ್ರ ಮಾಹಿತಿʼಯನ್ನು ಅದು ಒಳಗೊಂಡಿರಬೇಕಿತ್ತು ಎಂದು ಓದುಗರು ನಿರೀಕ್ಷಿಸುವುದು ಸ್ವಾಭಾವಿಕವಾಗಿಯೇ ಇದೆ.

ಪುಸ್ತಕದ ಪುಟ 121 ರಲ್ಲಿ ಅವರು ʻಪ್ರಜಾವಾಣಿʼಯ ಕುರಿತು ಬರೆದಿದ್ದಾರೆ. ಪುಟ 122 ರಲ್ಲಿ ಈ ಮಾಹಿತಿ ಮುಗಿಯುತ್ತದೆ. ಅದರಲ್ಲಿ ಅವರು ʻಪ್ರಜಾವಾಣಿ, ಟಿ.ಎಸ್‌.ಆರ್‌, ನಂತರ ವೈ.ಎನ್‌. ಕೆ., ಎಂ.ಬಿ. ಸಿಂಗ್‌, ಜಿ.ಎನ್‌. ರಂಗನಾಥರಾವ್‌ ಅವರಂಥ ದಕ್ಷರ ಸಂಪಾದಕತ್ವದಲ್ಲಿ ಮುನ್ನಡೆ ಸಾಧಿಸಿತುʼ ಎಂದು ಬರೆಯುತ್ತಾರೆ. ಸಿಂಗ್‌ ಅವರ ನಿವೃತ್ತಿ ನಂತರ ಅಂದರೆ 1990 ರ ದಶಕದ ವೇಳೆಗಾಗಲೇ ಕೆ.ಎನ್‌. ಹರಿಕುಮಾರ್‌ ಅವರು ಸಂಪಾದಕರಾಗಿದ್ದರು. ಅವರ ನಂತರ ಕೆ.ಎನ್‌. ಶಾಂತಕುಮಾರ್‌ ಅವರು ಸಂಪಾದಕರಾದರು. ರಂಗನಾಥ ರಾವ್‌ ನಂತರ ಅನೇಕರು ಅವರ ಹಾಗೆಯೇ ಸಹ ಸಂಪಾದಕರಾಗಿ, ಕಾರ್ಯನಿರ್ವಾಹಕ ಸಂಪಾದಕರಾಗಿ ಕೆಲಸ ನಿರ್ವಹಿಸಿದರು.

ರಂಗನಾಥರಾವ್‌ ಲೇಖನ ಓದಿದರೆ ಅವರ ನಂತರ ಮುಂದೆ ಯಾರೂ ದಕ್ಷರು ಬರಲೇ ಇಲ್ಲ ಎಂದೂ ಅರ್ಥವಾಗುತ್ತದೆ! ಅದನ್ನು ಅವರು ನಂಬುತ್ತಾರೋ ಇಲ್ಲವೋ ತಿಳಿಯೆ. ಅವರು ತಮ್ಮ ಆತ್ಮಚರಿತ್ರೆ ಬರೆದಿದ್ದರೆ ಅಲ್ಲಿಗೆ ನಿಲ್ಲಿಸಬಹುದಿತ್ತು. ಆದರೆ, ಅವರು ಬರೆದಿರುವುದು ಪತ್ರಿಕೋದ್ಯಮದ ಚರಿತ್ರೆ. ಅದರಲ್ಲಿ ಹೀಗೆ ಬಿಡಲು ಅವಕಾಶ ಇರುವುದಿಲ್ಲ. ಮಾಹಿತಿಯನ್ನು ಸರಿಪಡಿಸುವುದಾದರೆ, 2006 ರಲ್ಲಿಯೇ ರಂಗನಾಥ ರಾವ್‌ ಅವರ ಪೂರ್ವಾಧಿಕಾರಿಗಳಾಗಿ ಸಿಂಗ್‌ ಅವರ ನಂತರ ಬಿ.ಎಂ. ಕೃಷ್ಣಸ್ವಾಮಿಯವರು ಮತ್ತು ರಾಮಣ್ಣ ಅವರು ಕೆಲಸ ಮಾಡಿದ್ದರು. ರಂಗನಾಥ ರಾವ್‌ ಅವರ ಉತ್ತರಾಧಿಕಾರಿಗಳಾಗಿದ್ದ ಕೆ. ಶ್ರೀಧರ್‌ ಆಚಾರ್‌, ಶೈಲೇಶ್‌ಚಂದ್ರ ಗುಪ್ತ ಅವರ ಅವಧಿ ಮುಗಿದು ಆರ್‌.ಪಿ. ಜಗದೀಶ್‌ ಆ ಹುದ್ದೆಗೆ ಬಂದಿದ್ದರು. ನಂತರ 2008 ರಲ್ಲಿ ನಾನು ಆ ಹುದ್ದೆಗೆ ಬಂದೆ. ಇದನ್ನು ಮಾಹಿತಿಗಾಗಿ ಮಾತ್ರ ಇಲ್ಲಿ ಬರೆಯುತ್ತಿರುವೆ. ಅವರ ಪುಸ್ತಕದ ಪರಿಷ್ಕೃತ ಆವೃತ್ತಿ 2014 ರಲ್ಲಿ ಬಂದಾಗಲೂ ನಾನೇ ಆ ಹುದ್ದೆಯಲ್ಲಿ ಇದ್ದೆ. ಎಲ್ಲರೂ ತಮ್ಮ ಅವಧಿಯಲ್ಲಿ ತಮ್ಮ ಸಾಮರ್ಥ್ಯ ಹಾಗೂ ಮಿತಿಗಳಿಗೆ ತಕ್ಕಂತೆ ಕೆಲಸ ಮಾಡಿಯೇ ಮಾಡಿರುತ್ತಾರೆ. ಅವರ ಹೆಸರುಗಳನ್ನೇ ಬರೆಯಬಾರದು ಎನಿಸುವಷ್ಟು ಅವರು ಅಸ್ಪೃಶ್ಯರಾಗುವುದು ಒಂದು ಚೋದ್ಯ. ಇವರ ಹೆಸರುಗಳನ್ನೆಲ್ಲ ರಾಯರ ಪುಸ್ತಕ ಓದುವವರಿಗೆ ನಾವು ಹೋಗಿ ಹೇಳಲು ಆಗುತ್ತದೆಯೇ?

ಮುಂದೆ ರಂಗನಾಥ ರಾವ್‌ ಅವರು 125 ನೇ ಪುಟದಲ್ಲಿ ನಿಯತ ಕಾಲಿಕಗಳ ಕುರಿತು ಬರೆಯುತ್ತ 1990 ರಲ್ಲಿ ಹರಿಕುಮಾರ್‌ ಅವರು ʻಪ್ರಜಾವಾಣಿʼ ಗುಂಪಿನ ನಾಲ್ಕೂ ಪತ್ರಿಕೆಗಳ ಸಂಪಾದಕರಾದುದನ್ನು ಬರೆಯುತ್ತಾರೆ. ಅದೇ ಪುಟದ ಕೊನೆಯಲ್ಲಿ ಶಾಂತಕುಮಾರ್‌ ಅವರು ʻಸುಧಾʼ ಪತ್ರಿಕೆಯ ಸಂಪಾದಕರಾಗಿದ್ದಾರೆ ಎಂದು ಬರೆದಿದ್ದಾರೆ. ಇದು ತಪ್ಪು ಮಾಹಿತಿ. ಶಾಂತಕುಮಾರ್‌ ಅವರು ಸಮೂಹದ ನಾಲ್ಕೂ ಪತ್ರಿಕೆಗಳ ಸಂಪಾದಕರಾಗಿದ್ದರು. ಮುಂದೆ ಪುಟ 152 ರಿಂದ 159 ರ ವರೆಗೆ ಟಿ.ಎಸ್‌. ರಾಮಚಂದ್ರರಾವ್‌ ಅವರ ಇತಿಹಾಸ ವಿಸ್ತಾರವಾಗುತ್ತದೆ. ಇಲ್ಲಿಗೆ ನಾನು ಈ ವಿಚಾರವನ್ನು ಕೈ ಬಿಡುವೆ.

ಹರಿಕುಮಾರ್‌ ಅವರಿಂದಾಗಿ ನನ್ನಂತೆ ವಿವಿಧ ಸಮುದಾಯಗಳ, ವಿವಿಧ ಪ್ರದೇಶಗಳ ಹುಡುಗರು, ಹುಡುಗಿಯರು ಪತ್ರಿಕೋದ್ಯಮಕ್ಕೆ ಬರಲು ಸಾಧ್ಯವಾಯಿತು. ಇಲ್ಲವಾದರೆ, ಸಾಧ್ಯವೇ ಆಗುತ್ತಿರಲಿಲ್ಲ. ಮತ್ತು ʻಪ್ರಜಾವಾಣಿʼಗೆ ಈಗಿನ ಬಹುತ್ವ, ಆಳ ಮತ್ತು ಅಗಲ ಬರುತ್ತಿರಲಿಲ್ಲ. ಶಾಂತಕುಮಾರ್‌ ಅವರೂ ತಾವು ಸಂಪಾದಕರಾಗಿದ್ದ ಅವಧಿಯಲ್ಲಿ ಅನೇಕ ಪ್ರಯೋಗಗಳನ್ನು ಮಾಡಿದರು, ಪತ್ರಿಕೆಗೆ ಹೊಸ ಆಯಾಮಗಳನ್ನು ಕೊಟ್ಟರು, ತಮ್ಮ ಕೈ ಕೆಳಗಿನ ಸಿಬ್ಬಂದಿಯ ಬರವಣಿಗೆಯ ಸ್ವಾತಂತ್ರ್ಯಕ್ಕೆ ಅವರು ಎಂದೂ ಅಡ್ಡಿ ಮಾಡಲಿಲ್ಲ. ಹಾಗೆ ನೋಡಿದರೆ ಅವರ ಕಾಲದಲ್ಲಿಯೇ ನಾವು ಅನೇಕರು ಅಂಕಣಗಳನ್ನು ಬರೆದೆವು. ಅದು ಹಿಂದೆ ಇತಿಹಾಸದಲ್ಲಿ ಎಂದೂ ಇರಲೇ ಇಲ್ಲ. ಇದನ್ನು ʻಡೆಕ್ಕನ್‌ ಹೆರಾಲ್ಡ್‌ʼನ ಸುದ್ದಿ ಸಂಪಾದಕರಾಗಿದ್ದ ನಾಗಭೂಷಣರಾವ್‌ ಅವರು ಅನೇಕ ಸಾರಿ ನನ್ನ ಜತೆಗೆ ಹಂಚಿಕೊಂಡರು. ʻನೋಡಿ, ನೀವು ನಿಮ್ಮ ಚಿತ್ರ ಹಾಕಿಕೊಂಡು ಬರೆಯುತ್ತೀರಿ. ನಮಗೆ ಹೀಗೆ ಬರೆಯಲು ನಮ್ಮ ಕಾಲದಲ್ಲಿ ಅವಕಾಶವೇ ಇರಲಿಲ್ಲʼ ಎಂದು ಅವರು ಹೇಳುತ್ತಿದ್ದರು. ತನ್ನ ಸಿಬ್ಬಂದಿ ತನ್ನ ಮುಂದೆಯೇ ಪ್ರಖ್ಯಾತರಾಗುವುದನ್ನು ಕಂಡು ಶಾಂತಕುಮಾರ್‌ ಸಂತೋಷ ಪಟ್ಟಿದ್ದರು. ಇದು ಮಾಲೀಕರು ಬಿಡಿ ಅನೇಕ ಪತ್ರಕರ್ತರಲ್ಲಿಯೂ ಇಲ್ಲದ ಗುಣ. ತನ್ನ ಸಹೋದ್ಯೋಗಿ ಹೆಸರು ಮಾಡುವುದನ್ನು ಕಂಡು ಕರುಬಿ ಕರಕಲಾದವರು ಎಷ್ಟು ಜನರಿಲ್ಲ?!

(ಕೃತಿ: …ಉಳಿದಾವ ನೆನಪು (ಪತ್ರಕರ್ತನ ವೃತ್ತಿಜೀವನದ ನೆನಪುಗಳು), ಲೇಖಕರು: ಪದ್ಮರಾಜ ದಂಡಾವತಿ, ಪ್ರಕಾಶಕರು: ಅಂಕಿತ ಪುಸ್ತಕ, ಬೆಲೆ: 250/-)