ಹಳ್ಳಿ ಹಾದಿಯ ಹೂವು ಕಾದಂಬರಿಯಲ್ಲಿ ಲೇಖಕರು ಒಂಬತ್ತೋ, ಹತ್ತೋ ವರ್ಷದ ಬಾಲಕ ಶಾಮನಾಗಿ ತಮ್ಮ ಅನುಭವದ ಹೂಗಳನ್ನು ತೋರಣವಾಗಿ ಕಟ್ಟಿದ್ದಾರೆ. ಹಳ್ಳಿ ಹಾದಿಯ ಹೂವಿನ ಪರಿಮಳ ಘಮಘಮಿಸಿ ಓದುಗರ ಮನಸನ್ನ ಉಲ್ಲಾಸಗೊಳಿಸುತ್ತದೆ. ಮೊದಲ ಪುಟದ ಓದು ಆರಂಭಿಸುತ್ತಿದ್ದಂತೆ ಹಳದಿ ಬಣ್ಣದ ಅಂಬರಿ ಹೂವಿನ ಪರಿಮಳದಲ್ಲಿ ಮನಸ್ಸು ಅರಳಿ ಕಥಾನಾಯಕನಾದ ಶಾಮ ನಮ್ಮನ್ನು ನಮಗರಿವಿಲ್ಲದೆ ಆವರಿಸಿಕೊಂಡು ಬಿಡುತ್ತಾನೆ ಅಷ್ಟು ಆಪ್ತತೆ ಈ ಕಾದಂಬರಿಯಲ್ಲಿದೆ.
ಮಂಡಲಗಿರಿ ಪ್ರಸನ್ನ ಬರೆದ “ಹಳ್ಳಿ ಹಾದಿಯ ಹೂವು” ಎಂಬ ಮಕ್ಕಳ ಕಾದಂಬರಿಯ ಕುರಿತು ಡಾ. ತಿಮ್ಮಯ್ಯ ಶೆಟ್ಟಿ ಇಲ್ಲೂರು ಬರಹ
ಮಕ್ಕಳ ಮನೋಲೋಕವನ್ನು ಅರಿಯುವುದು ಸುಲಭದ ಮಾತಲ್ಲ, ಬಾಲ್ಯಕ್ಕೂ ಮುನ್ನ ಕುತೂಹಲದಿಂದ ಮಗು ಪ್ರಪಂಚವನ್ನು ಅರಿಯುವ ಪ್ರಯತ್ನ ಮಾಡಿದರೆ ಬಾಲ್ಯದಲ್ಲಿ ಪ್ರಪಂಚದ ಬಗೆಗಿನ ಜ್ಞಾನ ವಿಸ್ತಾರಕ್ಕಾಗಿ ವಿಮರ್ಶೆ ಮಾಡುವ ಮನೋಭಾವ ಬೆಳೆಸಿಕೊಳ್ಳುತ್ತದೆ. ಇಂತಹ ಮಕ್ಕಳಿಗೆ ಮುದ ನೀಡುವ ಮತ್ತು ಮನಸ್ಸಿಗೆ ಆಹ್ಲಾದ ನೀಡುವ ರೀತಿಯಲ್ಲಿ ಮಕ್ಕಳ ಸಾಹಿತ್ಯ ರಚನೆಯ ಕೆಲಸ ಸಾಹಸದ್ದಾಗಿದೆ. ಮಕ್ಕಳ ಸಾಹಿತಿಯು ಮೊದಲು ತಾನು ಮಗುವಾಗಿ ತನ್ನ ಬಾಲ್ಯವನ್ನು ಮತ್ತು ಜಗತ್ತಿನ ಯಾವುದೇ ಮಗು ಬಾಲ್ಯದಲ್ಲಿ ಕಳೆದ ದಿನಗಳನ್ನು ಹಾಗೂ ಅವರ ಅನುಭವಗಳನ್ನು ಮನಸ್ಸಿನಂತರಾಳದಲ್ಲಿ ಇಳಿಸಿಕೊಂಡು ತಾನು ಮಗುವಾಗಿ ಜಗತ್ತಿಗೆ ತೆರೆದುಕೊಂಡಾಗ ಮಾತ್ರ ಅಂತಹ ಮಕ್ಕಳ ಸಾಹಿತ್ಯ ಗಟ್ಟಿಯಾಗಿ ಉಳಿಯುತ್ತದೆ. ಈ ತೆರನಾದ ಕಾರ್ಯ ಸಾಕಷ್ಟು ಹಿಂದಿನಿಂದ ನಡೆದಿದೆ ಶ್ರೀ ರಾಮಾಯಣ ದರ್ಶನಂ ನಂತಹ ಮಹಾಕಾವ್ಯವನ್ನು ಕೊಟ್ಟ ಕುವೆಂಪು ಅವರು ಕೂಡ ಮಗುವಾಗಿ ಮಕ್ಕಳ ಸಾಹಿತ್ಯವನ್ನು ರಚಿಸಿದ್ದಾರೆ. ಮಕ್ಕಳ ಸಾಹಿತ್ಯವೆಂದರೆ ಮಕ್ಕಳು ಬರೆಯುವಂಥದ್ದು ಮಾತ್ರವಲ್ಲ, ಮಕ್ಕಳಿಗಾಗಿ ಬರೆಯುವ ಯಾವುದೇ ಪ್ರಕಾರವು ಅದು ಮಕ್ಕಳ ಸಾಹಿತ್ಯದಲ್ಲಿ ಅಡಕವಾಗುತ್ತದೆ. ಇಂತಹ ಪ್ರಕಾರದ ಮಕ್ಕಳ ಸಾಹಿತ್ಯ ಪ್ರೌಢ ಸಾಹಿತ್ಯಕ್ಕೆ ಹೋಲಿಸಿದರೆ ಇನ್ನಷ್ಟು ಬೆಳೆಯಬೇಕಾಗಿದೆ.
ಅಂದರೆ ಮಕ್ಕಳ ಸಾಹಿತ್ಯ ರಚನೆಯಲ್ಲಿ ಈಗಲೂ ನಿರಾಸಕ್ತಿ ಕಾಣುತ್ತಿದ್ದೇವೆ. ಅದರಲ್ಲೂ ಗದ್ಯ ಸಾಹಿತ್ಯದ ಕೃಷಿ ಇನ್ನೂ ಆಗಬೇಕಿದೆ. ಕಾವ್ಯ ಪ್ರಕಾರದಲ್ಲಿ ಇತ್ತೀಚಿನ ಉದಯೋನ್ಮುಖ ಬರಹಗಾರರನ್ನು ಒಳಗೊಂಡಂತೆ ಸಮಾಧಾನ ಪಡುವಂತಹ ಕೃಷಿಯಾಗುತ್ತಿರುವ ಸಂಗತಿಯಾದರೆ, ಗದ್ಯ ಪ್ರಕಾರಗಳಾದ ಮಕ್ಕಳ ಕಥೆ, ಮಕ್ಕಳ ನಾಟಕ ಮತ್ತು ಮಕ್ಕಳ ಕಾದಂಬರಿಗಳ ಕೊರತೆ ಸಾಕಷ್ಟಿದೆ. ರಾಯಚೂರ ಜಿಲ್ಲೆಯ ಮಕ್ಕಳ ಸಾಹಿತ್ಯದ ಮಟ್ಟಿಗೆ ಹೇಳುವುದಾದರೆ ಅವಿಭಜಿತ ರಾಯಚೂರು ಜಿಲ್ಲೆಯಲ್ಲಿ ಸಿದ್ದಯ್ಯ ಪುರಾಣಿಕರನ್ನು ಬಿಟ್ಟರೆ ಅಂತಹ ಕೃಷಿ ಮಕ್ಕಳ ಸಾಹಿತ್ಯದಲ್ಲಿ ಮತ್ತೆ ಆಗದೇ ಇರುವುದು ಕಂಡುಬರುತ್ತದೆ. ಇತ್ತೀಚಿನ ದಿನಮಾನಗಳಲ್ಲಿ ಹೊಸಹೊಸ ಬರಹಗಾರರು ಮಕ್ಕಳ ಸಾಹಿತ್ಯದಲ್ಲಿ ಮುಖ ಮಾಡಿ ರಾಯಚೂರು ಜಿಲ್ಲೆಯ ಮಕ್ಕಳ ಸಾಹಿತ್ಯಕ್ಕೆ ಒಂದು ಹೊಸ ಚೈತನ್ಯವನ್ನು ತುಂಬಿದ್ದಾರೆ. ಆದರೆ ಗದ್ಯ ಪ್ರಕಾರದ ಕಾದಂಬರಿ ರಚನೆಯ ಕೊರತೆ ಇದೆ. ಇಂತಹ ಕೊರತೆಯ ಮಧ್ಯದಲ್ಲಿ ಮಂಡಲಗಿರಿ ಪ್ರಸನ್ನ ಅವರ ಹಳ್ಳಿ ಹಾದಿಯ ಹೂವು ಮಕ್ಕಳ ಕಾದಂಬರಿ, ರಾಯಚೂರು ಜಿಲ್ಲೆಯ ಮಕ್ಕಳ ಸಾಹಿತ್ಯ ವಲಯದಲ್ಲಿ ಒಂದು ಹೊಸ ಮನ್ವಂತರ ಸೃಷ್ಟಿಸಿದೆ.
ಎತ್ತಣ ಮಾಮರ ಎತ್ತಣ ಕೋಗಿಲೆ ಎತ್ತಣಂದೆತ್ತ ಸಂಬಂಧವಯ್ಯ? ಎಂಬಂತೆ ಮಂಡಲಗಿರಿ ಪ್ರಸನ್ನ ಅವರ ಕಾರ್ಯ ಕ್ಷೇತ್ರ (ಇಂಜಿನೀಯರಿಂಗ್) ಬೇರೆಯಾದರೂ, ಅವರು ಮನಃಪೂರ್ವಕವಾಗಿ ಕನ್ನಡ ಸಾಹಿತ್ಯವನ್ನು ಅಪ್ಪಿಕೊಂಡಿರುವುದು ಸ್ತುತ್ಯಾರ್ಹ. ಸಾಹಿತ್ಯದ ವಿವಿಧ ಕಾಲದಲ್ಲಿನ ಎಲ್ಲಾ ಪ್ರಕಾರದ ಸಾಹಿತ್ಯವನ್ನು ಗಂಭೀರವಾಗಿ ಅಧ್ಯಯನ ಮಾಡಿ ಈಗಾಗಲೇ ಪ್ರೌಢ ಸಾಹಿತ್ಯದಲ್ಲಿ ಕಾವ್ಯ, ಕಥೆ, ಗಜಲ್, ಲಲಿತ ಪ್ರಬಂಧ, ಮುಂತಾದ ಪ್ರಕಾರದಲ್ಲಿ ಕೃಷಿ ಮಾಡಿ ಹಲವು ಪ್ರಶಸ್ತಿ, ಪುರಸ್ಕಾರಗಳನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರಲ್ಲದೆ, ಅಷ್ಟೇ ಗಂಭೀರವಾಗಿ ಮಕ್ಕಳ ಸಾಹಿತ್ಯದಲ್ಲಿ ಕೃಷಿಯಲ್ಲಿ ಮಕ್ಕಳ ಕವಿತೆ, ಮಕ್ಕಳ ನಾಟಕಗಳು, ಮಕ್ಕಳ ಕಥೆಗಳನ್ನು ರಚನೆ ಮಾಡಿ ಈಗ ಹೊಸ ಹೆಜ್ಜೆಯೊಂದಿಗೆ “ಹಳ್ಳಿ ಹಾದಿಯ ಹೂವು” ಎಂಬ ಮಕ್ಕಳ ಕಾದಂಬರಿ ರಚಿಸಿದ್ದಾರೆ.
ಹಳ್ಳಿ ಹಾದಿಯ ಹೂವು ಕಾದಂಬರಿಯಲ್ಲಿ ಲೇಖಕರು ಒಂಬತ್ತೋ, ಹತ್ತೋ ವರ್ಷದ ಬಾಲಕ ಶಾಮನಾಗಿ ತಮ್ಮ ಅನುಭವದ ಹೂಗಳನ್ನು ತೋರಣವಾಗಿ ಕಟ್ಟಿದ್ದಾರೆ. ಹಳ್ಳಿ ಹಾದಿಯ ಹೂವಿನ ಪರಿಮಳ ಘಮಘಮಿಸಿ ಓದುಗರ ಮನಸನ್ನ ಉಲ್ಲಾಸಗೊಳಿಸುತ್ತದೆ. ಮೊದಲ ಪುಟದ ಓದು ಆರಂಭಿಸುತ್ತಿದ್ದಂತೆ ಹಳದಿ ಬಣ್ಣದ ಅಂಬರಿ ಹೂವಿನ ಪರಿಮಳದಲ್ಲಿ ಮನಸ್ಸು ಅರಳಿ ಕಥಾನಾಯಕನಾದ ಶಾಮ ನಮ್ಮನ್ನು ನಮಗರಿವಿಲ್ಲದೆ ಆವರಿಸಿಕೊಂಡು ಬಿಡುತ್ತಾನೆ ಅಷ್ಟು ಆಪ್ತತೆ ಈ ಕಾದಂಬರಿಯಲ್ಲಿದೆ. ನಾವು ಓದಲು ಆರಂಭಿಸಿದರೆ ಸಾಕು ಅದು ಮುಗಿಯುವವರೆಗೂ ನಮ್ಮನ್ನು ತಾನೇ ತಾನಾಗಿ ಓದಿಸಿಕೊಂಡು ಹೋಗುತ್ತದೆ. ಓದುತ್ತಾ ಸಾಗಿದಂತೆ ಇದು ನಮ್ಮದೇ ಜೀವನದ ಕಥೆ ಎನ್ನುವಷ್ಟು ಸರಳವಾಗಿ ನಮ್ಮನ್ನು ಆಕರ್ಷಿಸುತ್ತದೆ.
ಶಾಮನ ಪಾತ್ರದ ಮೂಲಕ ಮಗುವಿನ ಬಯಕೆ, ಕುತೂಹಲ, ತುಡಿತ ಮತ್ತು ಮಿಡಿತಗಳನ್ನು ಪ್ರಸ್ತುತ ಕಾದಂಬರಿಯಲ್ಲಿ ಲೇಖಕರು ಹೃದಯ ಮುಟ್ಟುವಂತೆ ಕಟ್ಟಿಕೊಟ್ಟಿದ್ದಾರೆ. ಅದರಲ್ಲೂ ಔದ್ಯೋಗಿಕ ಕ್ರಾಂತಿಯಿಂದಲೋ, ಆಧುನಿಕತೆಯ ಭರಾಟೆಯಿಂದಲೋ ಹಳ್ಳಿಯನ್ನು ತೊರೆದು ನಗರದಲ್ಲಿ ವಾಸವಾಗುವ ಕುಟುಂಬಗಳಿಂದ ಮಕ್ಕಳ ಮನೋವಿಕಾಸಕ್ಕೆ ಸಹಾಯಕವಾಗುವ ಎಷ್ಟೋ ಅನುಭವಗಳಿಂದ ಇಂದಿನ ಮಕ್ಕಳು ವಂಚಿತರಾಗುತ್ತಿರುವ ಸಂದರ್ಭದಲ್ಲಿ, ಈ ಕಾದಂಬರಿಯಲ್ಲಿ ಶಾಮ ನಗರದಿಂದ ಹಳ್ಳಿಗೆ ಹೋಗಿ ಶಾಲೆ ಕಲಿತು ಹಳ್ಳಿಯ ಸೊಬಗನ್ನು ಅನುಭವಿಸುವ ಸಂದರ್ಭವನ್ನು ಮತ್ತು ನಮ್ಮ ಭಾಗದ ಅಂದರೆ ಹೈದರಾಬಾದ್ ಕರ್ನಾಟಕದ ಅತಿ ಘೋರ ಘಟನೆ ರಜಾಕಾರರ ಹಾವಳಿಯ ಇತಿಹಾಸವನ್ನು ಅಷ್ಟೇ ನವಿರಾಗಿ ಮಗುವಿನ ಕುತೂಹಲಕ್ಕೆ ಸಾಕ್ಷಿಯಾಗುವಂತೆ ಇತಿಹಾಸದ ಘಟನೆಯನ್ನು ತಿಳಿಸಿಕೊಡುವ ಕಾರ್ಯವನ್ನು ಲೇಖಕರು ಮಾಡಿದ್ದಾರೆ.
ಕಾದಂಬರಿಯ ಆರಂಭದಿಂದ ಕೊನೆಯವರೆಗೂ ಸೋಮಲಾಪುರದ ಸೊಬಗಿನ ವರ್ಣನೆಯನ್ನು ಬಹಳ ಸುಂದರವಾಗಿ ಹೆಣೆದಿದ್ದಾರೆ. ಸೋಮಲಾಪುರದ ಹಳ್ಳ, ಹರಿಯುವ ನೀರಿನ ಜುಳು ಜುಳು ನಿನಾದ, ಕಾಲಿಗೆ ಮುತ್ತಿಟ್ಟು ಸರ್ರನೆ ಓಡುವ ಪುಟ್ಟ ಪುಟ್ಟ ಮೀನುಗಳು, ಬೇಸಿಗೆಯ ಬಿಸಿಲಿನ ಬೇಗೆಯಲಿ ಹಳ್ಳದಲ್ಲಿ ಈಜಾಡಿದ ತಂಪಾದ ಅನುಭವ, ಸಾಲು ಸಾಲು ಗಿಡಮರಗಳು, ಹಸಿರಾದ ಹೊಲಗದ್ದೆಗಳು, ಎತ್ತರವಾದ ಸ್ಥಳದಲ್ಲಿ ನಿಂತು ಸೂರ್ಯಾಸ್ತ ನೋಡುವ ಖುಷಿ, ಹನುಮಂತ ದೇವರ ಗುಡಿಯ ಶಾಲೆ, ಹಳ್ಳಿ ಹಾದಿಯ ಅಂಬರೆ ಹೂವುಗಳು, ಅಜ್ಜ ಅಜ್ಜಿಯ ಪ್ರೀತಿ, ಮಾಮ ರಾಘುವಿನ ಮಮಕಾರ ಮತ್ತು ಚಿಕ್ಕಮ್ಮ ಶಶಿಯ ಅಕ್ಕರೆ ಇವೆಲ್ಲವುಗಳು ಸಕ್ಕರೆಯ ಸಿಹಿಯಂತೆ ಓದುಗರ ಮನಸ್ಸನ್ನು ಸೂರೆಗೊಳ್ಳುತ್ತವೆ. ಇದೆಲ್ಲಕ್ಕಿಂತ ಮಿಗಿಲಾಗಿ ಜನಪದ ರಂಗ ಕಲೆ ಪ್ರಕಾರಗಳಲ್ಲಿ ಒಂದಾದ ಬಯಲಾಟದ ಸನ್ನಿವೇಶ ಮತ್ತು ವಿಶೇಷತೆ ಹಾಗೂ ಬಯಲಾಟದ ದಿನದಲ್ಲಿ ಸೋಮಲಾಪುರದಲ್ಲಿನ ಜನರ ಸಡಗರ, ಸಂಭ್ರಮವನ್ನು ಅದರಲ್ಲೂ ಮಕ್ಕಳು ಬಯಲಾಟದ ಪಾತ್ರಗಳ ನಟನೆ ಮತ್ತು ರಾತ್ರಿಯಿಡಿ ಶೆಟ್ಟರ ಅಂಗಡಿಯ ಕರದಂಟಿನ ಸವಿಯ ಅನುಭವಗಳು ಹೀಗೆ ಹತ್ತು ಹಲವಾರು ಮನೋಲ್ಲಾಸಭರಿತ ಅನುಭವಗಳನ್ನೊಳಗೊಂಡ ಈ ಹಳ್ಳಿ ಹಾದಿಯ ಹೂವು ಕಾದಂಬರಿ ಓದುಗರನ್ನು ಹಿಡಿದಿಡುವಲ್ಲಿ ಯಶಸ್ವಿಯಾಗುತ್ತದೆ. ಮಕ್ಕಳ ಸಾಹಿತ್ಯ ವಲಯದಲ್ಲಿನ ಕಾದಂಬರಿ ಪ್ರಕಾರದ ಕೊರತೆಯನ್ನು ನೀಗಿಸಲು ಮೊದಲ ಅಡಿಯಿಟ್ಟ ಹಿರಿಯರಾದ ಮಂಡಲಗಿರಿ ಪ್ರಸನ್ನ ಅವರಿಗೆ ಅಭಿನಂದಿಸುತ್ತೇನೆ.
(ಕೃತಿ: ಹಳ್ಳಿ ಹಾದಿಯ ಹೂವು(ಮಕ್ಕಳ ಕಾದಂಬರಿ), ಲೇಖಕರು: ಮಂಡಲಗಿರಿ ಪ್ರಸನ್ನ, ಪ್ರಕಾಶಕರು: ವಸು ಪ್ರಕಾಶನ, ಬೆಂಗಳೂರು, ಪುಟಗಳು: 120+2, ಬೆಲೆ: 165/-)
ರಾಯಚೂರು ಜಿಲ್ಲೆಯ ಮಾನ್ವಿಯ ಶಾರದಾ ವಿದ್ಯಾನಿಕೇತನ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ತಿಮ್ಮಯ್ಯ ಶೆಟ್ಟಿ ಇಲ್ಲೂರು ಅವರು ಮೂಲತಃ ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಮದರಕಲ್ ಗ್ರಾಮದವರು. ಇವರು ವೃತ್ತಿಯಿಂದ ಪ್ರಾಧ್ಯಾಪಕರಾಗಿದ್ದರೂ ಪ್ರವೃತ್ತಿಯಿಂದ ಸಾಹಿತಿಗಳಾಗಿ, ಬಾಲ್ಯಾವಸ್ಥೆ ಮತ್ತು ಬೆಳವಣಿಗೆ (ಶೈಕ್ಷಣಿಕ ಮನೋವಿಜ್ಞಾನ – ೨೦೧೬), ಕಲಿಕೆ ಮತ್ತು ಬೋಧನಾ ಪ್ರಕ್ರಿಯೆಯ ಮನೋವಿಜ್ಞಾನ (೨೦೧೯), ಧರಣಿ ಬೆಳಗಿದ ದೇವತೆ (ಕವನ ಸಂಕಲನ-೨೦೧೯), ೪. ಭಾವನೆಗಳ ಗೊಂಚಲು (ಚುಟುಕುಗಳ ಸಂಕಲನ-೨೦೧೯), ೫. ಮರಗಳು ಮಾತಾಡಿದ್ರೆ…. (ಮಕ್ಕಳ ಕವಿತೆಗಳ ಸಂಕಲನ – ೨೦೨೧) ಮತ್ತು ದೇವ ಕುಸುಮಗಳು (ಮಕ್ಕಳಿಗಾಗಿ ಜನಪದ ಆಶಯದ ತ್ರಿಪದಿಗಳು – ೨೦೨೩) ಎಂಬ ಕೃತಿಗಳನ್ನು ಪ್ರಕಟಿಸಿದ್ದಾರೆ.