ಸಮಾಜ ʻಕುರೂಪಿʼ ಗುರುತಿಸಿದ,  ಹೆಣ್ಣೊಬ್ಬಳ ಮಾನಸಿಕ ತುಮುಲದ ಕಥೆಯೇ ‘ಅವಿವಾಹಿತೆ’. ಬಹಿರಂಗದ ಸೌಂದರ್ಯಕ್ಕಿಂತ ಆಂತರಿಕ ಸೌಂದರ್ಯವೇ ಮುಖ್ಯವೆಂಬ ಭಾವನೆ ಪ್ರತಿಯೊಬ್ಬರಲ್ಲಿ ತುಂಬಿರುತ್ತದೆ. ಆದರೆ ಅಂತರಂಗದ ನಿಷ್ಕಲ್ಮಷ ಹಾಗೂ ನಿರ್ಮಲವಾದ ಭಾವನೆ ಪರಿಗಣನೆಗೆ ಬಾರದ ಸಮಾಜದಲ್ಲಿ ನಿರುಪಮಾಳ ಭವಿಷ್ಯದ ಕನಸು ನುಚ್ಚು ನೂರಾಗುವ ಚಿತ್ರಣವನ್ನು ವ್ಯಾಸರಾಯ ಬಲ್ಲಾಳರು ಸಮರ್ಪಕವಾಗಿ ಚಿತ್ರಿಸಿದ್ದಾರೆ. ಸಮಾಜದಲ್ಲಿ ‘ವಿವಾಹ’ವೆಂಬುದು ತುಂಬಾ ಅಗತ್ಯವೆಂಬ ಚೌಕಟ್ಟು ನಿರ್ಮಾಣವಾಗಿ ಹೋಗಿದೆ. ಬದ್ದ ಕಲ್ಪನೆಗಳ ನೆಲೆಯಲ್ಲಿ ನಿರುಪಮಾ ತನ್ನ ಆಸಕ್ತಿ ಮತ್ತು ಆಶಯಗಳತ್ತ ಗಮನ ಹರಿಸುತ್ತಾಳೆ. ನಿರುಪಮಗೆ ಸಮಾಜದ ಈ ಕ್ರೌರ್ಯ ವ್ಯವಸ್ಥೆಯನ್ನು ಎದುರಿಸಲಾಗುವುದಿಲ್ಲ.  ವ್ಯಾಸರಾಯ ಬಲ್ಲಾಳರ ʻಅವಿವಾಹಿತೆʼ ಕತೆಯ ಕುರಿತು ಡಾ. ರಾಜಶೇಖರ ಜಮದಂಡಿ ಅವರು ಬರೆದ ವಿಮರ್ಶೆ ಇಲ್ಲಿದೆ. 

 

ಒಂದು ಭಾಷೆಯ ಜನ ಮತ್ತೊಂದು ಭಾಷೆಯ ಜನರೊಂದಿಗೆ ಅನಾಯಸವಾಗಿ ಬದುಕನ್ನು ಕಟ್ಟಿಕೊಂಡು ಬಾಳುವುದೆಂದರೆ ಇರುಸುಮುರುಸಾಗುವುದು. ಆದರೂ ಬದುಕಿ ತೋರಿಸಿದವರಿದ್ದಾರೆ. ಅಂತವರ ಸಾಲಿನಲ್ಲಿ ವ್ಯಾಸರಾಯ ಬಲ್ಲಾಳರೂ ಒಬ್ಬರು. ಮುಂಬೈಗೆ ಉದ್ಯೋಗ ಅರಸಿಕೊಂಡು ಹೋಗಿ, ನೆಲಸಿ ಅಲ್ಲಿ ಜನರೊಂದಿಗೆ ಬೆರೆತು ಮುಂಬೈ ಕನ್ನಡಿಗರೆಂದು ಕರೆಯಿಸಿಕೊಂಡಿದ್ದಾರೆ. ಮುಂಬೈಯಲ್ಲಿದ್ದರೂ ಕನ್ನಡದ ಸಂಸ್ಕೃತಿ, ಸಂಸ್ಕಾರ, ಭಾಷೆ, ಆತ್ಮೀಯತೆಯನ್ನು ಬಿಡದೇ ಅವುಗಳನ್ನು ತಮ್ಮ ಬರವಣಿಗೆಯಲ್ಲಿ ಮೂಡಿಸುತ್ತಾ ಬಂದಿದ್ದರು. ಹೀಗೆ ಮುಂಬೈಯಲ್ಲಿರುವಷ್ಟು ಐದು ದಶಕಗಳ ಕಾಲ ಕನ್ನಡ ಸಾಹಿತ್ಯದ ಕೃಷಿಯ ಜೊತೆಜೊತೆಗೆ ವೃತ್ತಿಯನ್ನೂ ನಿಭಾಯಿಸಿಕೊಂಡು ಬಂದರು.

1958ರಲ್ಲಿ ಧಾರವಾಡದ ದ.ಬಾ. ಕುಲಕರ್ಣಿಯವರು ಲಲಿತ ಸಾಹಿತ್ಯ ಮಾಲೆಯ ಮೂಲಕ ‘ಸಂಪಿಗೆಯಹೂ’ ಎಂಬ ಕಥಾಸಂಕಲನ ಪ್ರಕಟಿಸಿದ್ದಾರೆ. ಇದರಲ್ಲಿ ಆರು ಕಥೆಗಳಿವೆ. ಕೊನೆಯ ಕಥೆಯೇ ‘ಅವಿವಾಹಿತೆ’ಯಾಗಿದೆ.

ನಗರದ ಸಂಕೀರ್ಣತೆ ಮನುಷ್ಯನ ಮಾನಸಿಕ ಸಂರಚನೆಯ ಮೇಲೆ ಮಾಡುತ್ತಿರುವ ನಿರಂತರ ಪ್ರಭಾವ ಜೀವನ ಸ್ಥಿತ್ಯಂತರಕ್ಕೆ ಕಾರಣವಾಗಿರುತ್ತದೆ. ಮನುಷ್ಯನ ಆಂತರ್ಯದಲ್ಲಿರುವ ಅಂತಃಕರಣದ ಅಂತರ್ಜಲವನ್ನು ಜೀವನದಿಯಾಗಿ ಉಕ್ಕಿಸಿ ಬದುಕನ್ನು ಹಸಿರಾಗಿಸುವ ಹಂಬಲ ಬಲ್ಲಾಳರ ಕಥಾಸಾಹಿತ್ಯದಲ್ಲಿ ಪ್ರಧಾನವಾಗಿ ಕಾಣಿಸುವ ಅಂಶ. ವ್ಯಕ್ತಿಯ ಭಾವನೆಗಳು ಸಂಸಾರದ ಮೇಲೂ, ಸಂಸಾರದ ಒತ್ತಡಗಳು ವ್ಯಕ್ತಿಯ ಮೇಲೂ ಪ್ರಭಾವ ಬೀರುತ್ತವೆ. ಔದ್ಯೋಗೀಕರಣ ಮತ್ತು ನಗರೀಕರಣದ ಹಲವು ಸಮಸ್ಯೆಗಳಿಂದ ಮನಷ್ಯನಲ್ಲಿ ವಿಚಾರಶೂನ್ಯ ಆವರಿಸಿಕೊಳ್ಳಬಹುದು. ಇದನ್ನು ಮುಂಬೈ ಪರಿಸರದ ಹಿನ್ನೆಲೆಯಲ್ಲಿ ಬಲ್ಲಾಳರು ವಿವರಿಸಿದ್ದಾರೆ.

ಭಾರತೀಯ ಸ್ತ್ರೀಯ ಬದುಕು ವಿಶಿಷ್ಟವಾದುದು. ಎಷ್ಟೇ ಆಧುನಿಕತೆಗೆ ಮುಖ ಮಾಡಿದ್ದರೂ ಪರಂಪರೆ ಅಥವಾ ಸಂಪ್ರದಾಯದ ಚೌಕಟ್ಟನ್ನು ಸಂಪೂರ್ಣವಾಗಿ ಭೇದಿಸಲು ಇನ್ನೂ ಸಾಧ್ಯವಾಗಿಲ್ಲ. ಪುರುಷನಿಗೆ  ದಕ್ಕುವ ಮತ್ತು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯದಲ್ಲಿ ಓದು, ಉದ್ಯೋಗ, ವಿವಾಹ, ಆಸ್ತಿ, ಅಧಿಕಾರ ಮೊದಲಾದುವುಗಳು ಇವೆ. ಅದೇರೀತಿ ಸ್ತ್ರೀಗೆ ಬೇಕಾದ ಮುಕ್ತವಾದ ವಾತಾವರಣ ಹಾಗೂ ಅವಕಾಶಗಳ ಆಯ್ಕೆ ಒಂದು ಸವಾಲಿನ ಪ್ರಶ್ನೆಯಾಗಿರುತ್ತದೆ. ತನ್ನ ಅಸ್ತಿತ್ವವನ್ನು ಸ್ಥಾಪಿಸುವ ಛಲ ಅವಳಲ್ಲಿ ಜಾಗೃತಗೊಂಡಿದ್ದರೂ ಕೆಲವು ಕಟ್ಟಳೆಗಳಿಂದ ಹೆಣಗಾಡಬೇಕಾಗುತ್ತದೆ. ಕುಟುಂಬ ಪ್ರಧಾನವಾದ ನೆಲೆಯಲ್ಲಿ ಸ್ತ್ರೀ ಪಾತ್ರಗಳನ್ನು ಚಿತ್ರಿಸಿರುವ ಬಲ್ಲಾಳರು ಅವಳ ಬದುಕಿನ ಸೂಕ್ಷ್ಮತೆಗಳನ್ನು ಗುರುತಿಸಲು ಪ್ರಯತ್ನಿಸಿದ್ದಾರೆ. ಸ್ತ್ರೀಯ ಬದುಕಿನ ಹೋರಾಟ ಮತ್ತು ಸಹಾನುಭೂತಿ ಈ ಎರಡೂ ಒಂದು ನಾಣ್ಯದ ಮುಖಗಳಾಗಿವೆ. ಈ ಕಥೆಯಲ್ಲಿ ವೈಚಾರಿಕತೆಯ ಆಶಯಕ್ಕಿಂತಲೂ ಭಾವನಾವಿಹಾರವೇ ಗಮನಾರ್ಹವಾಗಿದೆ.

 

 

ನಗರದ ಸಂಕೀರ್ಣತೆ ಮನುಷ್ಯನ ಮಾನಸಿಕ ಸಂರಚನೆಯ ಮೇಲೆ ಮಾಡುತ್ತಿರುವ ನಿರಂತರ ಪ್ರಭಾವ ಜೀವನ ಸ್ಥಿತ್ಯಂತರಕ್ಕೆ ಕಾರಣವಾಗಿರುತ್ತದೆ. ಮನುಷ್ಯನ ಆಂತರ್ಯದಲ್ಲಿರುವ ಅಂತಃಕರಣದ ಅಂತರ್ಜಲವನ್ನು ಜೀವನದಿಯಾಗಿ ಉಕ್ಕಿಸಿ ಬದುಕನ್ನು ಹಸಿರಾಗಿಸುವ ಹಂಬಲ ಬಲ್ಲಾಳರ ಕಥಾಸಾಹಿತ್ಯದಲ್ಲಿ ಪ್ರಧಾನವಾಗಿ ಕಾಣಿಸುವ ಅಂಶ. ವ್ಯಕ್ತಿಯ ಭಾವನೆಗಳು ಸಂಸಾರದ ಮೇಲೂ, ಸಂಸಾರದ ಒತ್ತಡಗಳು ವ್ಯಕ್ತಿಯ ಮೇಲೂ ಪ್ರಭಾವ ಬೀರುತ್ತವೆ. ಔದ್ಯೋಗೀಕರಣ ಮತ್ತು ನಗರೀಕರಣದ ಹಲವು ಸಮಸ್ಯೆಗಳಿಂದ ಮನಷ್ಯನಲ್ಲಿ ವಿಚಾರಶೂನ್ಯ ಆವರಿಸಿಕೊಳ್ಳಬಹುದು. ಇದನ್ನು ಮುಂಬೈ ಪರಿಸರದ ಹಿನ್ನೆಲೆಯಲ್ಲಿ ಬಲ್ಲಾಳರು ವಿವರಿಸಿದ್ದಾರೆ.

 

ಈ ಅಂಶಗಳ ಗಮನದಲ್ಲಿಟ್ಟುಕೊಂಡಂತೆಯೇ ಕಥೆಯ ಆರಂಭದಲ್ಲಿ ನಿರುಪಮ ಮುಂಬೈಯಿಯ ಕಂಪನಿಯೊಂದರಲ್ಲಿ ಉದ್ಯೋಗ ಮುಗಿಸಿಕೊಂಡು ವಾಪಾಸು ಮನೆಗೆ ಬರುವ ಸನ್ನಿವೇಶ ಬರುತ್ತದೆ. ನಿತ್ಯದಂತೆ ಬೆಳಿಗ್ಗೆ ಮತ್ತು ಸಂಜೆ ಬಸ್ ಮೂಲಕ ಪ್ರಯಾಣ ಮಾಡುವುದು, ಪ್ರಯಾಣಿರ ಮಧ್ಯೆ ಅಥವಾ ಆ ನೂಕು ನುಗ್ಗಲಿನಲ್ಲಿ ಸಿಕ್ಕಿಹಾಕಿಕೊಂಡು ಮನೆ ಸೇರುವುದು. ಮನೆಗೆ ಬಂದ ತಕ್ಷಣ ಯಥಾರೀತಿ ಮನೆಯ ಕೆಲಸಕಾರ್ಯಗಳಲ್ಲಿ ಭಾಗಿಯಾಗುವುದು, ತನ್ನ ಅಣ್ಣ ಅತ್ತಿಗೆಗೆ ಸಹಕರಿಸುವುದು, ಅವರ ಮಗು ಗೋಪಿಯನ್ನು ಆಡಿಸುವುದು ಹಾಗೂ ಸಮಾಧಾನಪಡಿಸುವುದು. ಗೋಪಿಯೂ ಸಹ ತನ್ನ ತಂದೆ ತಾಯಿಗಿಂತ ನಿರುಪಮಳನ್ನೇ ಹೆಚ್ಚಿನ ರೀತಿಯಲ್ಲಿ ಹಚ್ಚಿಕೊಂಡಿರುವುದುಂಟು. ಅತ್ಯಂತ ಪ್ರೀತಿಯಿಂದ ತನ್ನ ಬೇಸರಿಕೆಯನ್ನು ಮರೆತು ಮಗುವಿನ ಆಗು-ಹೋಗುಗಳನ್ನು ನಿರುಪಮ ಚೆನ್ನಾಗಿ ನಿಭಾಯಿಸುತ್ತಿದ್ದಳು. ಇದು ಅವಳಿಗೆ ನಿತ್ಯವೂ ಸಹಜ ಕ್ರಿಯೆಯಾಗಿತ್ತು. ಈ ಸಂದರ್ಭದಲ್ಲಿ ತನಗೆ ಇನ್ನೂ ಮದುವೆ ಆಗಿಲ್ಲವೆಂಬ ಯೋಚನೆ ಮನದಲ್ಲಡಗಿತ್ತು. ಅವಳ ಅಂತರಂಗದ ನಿರ್ಮಲ ಮನಸ್ಸು ಅವಳ ಸ್ನೇಹಿತೆ ಮೇರಿಡೇಸಾಳಿಗೆ ಮಾತ್ರ ಅರ್ಥವಾಗಿತ್ತು. ಹಾಗಾಗಿ ಅನೇಕಬಾರಿ ಈ ವಿಷಯದ ಬಗೆಗೆ ಸಮಾಧಾನ ಪಡಿಸುತ್ತಿದ್ದಳು.

ನಿರುಪಮ ತನ್ನ ಕೊಠಡಿಯಲ್ಲಿದ್ದ ತನ್ನದೇ ಭಾವಚಿತ್ರವನ್ನು ಆಗಾಗ ನೋಡುತ್ತಾ ಖುಷಿಪಡುತ್ತಿದ್ದಳು. ಏಕೆಂದರೆ ಮುಖದಲ್ಲಿದ್ದ ತೊನ್ನಿನ ಕಲೆಗಳನ್ನು ತನ್ನ ಭಾವಚಿತ್ರದಲ್ಲಿ ತಿದ್ದಿದಂತೆ ಮಾಯವಾಗಿದ್ದವು. ತಾನೂ ಸಹ ಆ ಭಾವಚಿತ್ರದಂತೆ ಸುಂದರವಾಗಿ ತಿದ್ದಿತೀಡಿದಂತೆ ಕಾಣಲ್ಪಟ್ಟಿದ್ದರೆ…  ʻರೆʼ…ಗಳಷ್ಟೇ ಅವಳ ಮನದಲ್ಲಿ ಮೊಳಗುತ್ತಿದ್ದವು. ಒಂದು ವೇಳೆ ಈ ಕಲೆಗಳಿಲ್ಲದಿದ್ದರೆ ಈಗಾಗಲೇ ಡಾಕ್ಟರೋ, ಇಂಜಿನೀಯರೋ ಅವರೊಂದಿಗೆ ಮದುವೆ ನೆರವೇರಬಹುದಾಗಿತ್ತು. ನಿರುಪಮಳ ವಿವಾಹ ಕುರಿತಾಗಿ ಅವಳ ತಂದೆ ಆಗಾಗ ಹಳ್ಳಿಯಿಂದ ಪ್ರಭಾಕರನಿಗೆ ಪತ್ರ ಕುಶಲೋಪಚಾರದ ಬಗೆಗೆ ಬರೆಯುತ್ತಾ, ನಿರುಪಮಳ ಮದುವೆ ವಿಚಾರ ಮಾಡಿ ‘ಗಂಡು’ ನೋಡಿದೆಯಾ? ಎಂದು ಕೇಳುತ್ತಿದ್ದರು. ಎಷ್ಟಾದರೂ ಹೆತ್ತ ಕರುಳಲ್ಲವೆ!!

ನಿರುಪಮೆಗೆ ವಿವಾಹವೆಂಬುದು ದಿನದಿನಕ್ಕೂ ಕನಸಿನ ಮಾತಾಗಿತ್ತು. ಇದನ್ನು ಅರಿತ ಅವಳಣ್ಣ ‘ನಿರುಪಮೆಯ ಮದುವೆ ಗಣಪತಿ ಮದುವೆಯೇ’ ಎಂದು ತಮಾಷೆ ಮಾಡುತ್ತಿದ್ದುದುಂಟು. ಅದು ಅವಳಿಗೆ ಅರಗಿಸಿಕೊಳ್ಳಲಾಗುತ್ತಿರಲಿಲ್ಲ. ತನ್ನ ಅಣ್ಣ ಪಟ್ಟಿರುವ ಸುಖ ನನಗೂ ಬೇಡವೆ! ಎಂಬ ಲೆಕ್ಕಾಚಾರ ನಿರುಪಮಳ ಮನದಲ್ಲಿ ಮೂಡಿ ಮರೆಯಾಗುತ್ತಿತ್ತು. ಕೆಲವೊಮ್ಮೆ ಹೆಣ್ಣಿನ ಮನಸ್ಸನ್ನು ಹೆಣ್ಣೇ ಅರಿಯಬಲ್ಲಳೆಂಬುದನ್ನು ಮೇಲೆ ತಿಳಿಸಿದಂತೆಯೇ ಅವಳಣ್ಣ ‘ನಿರುಪಮಳ ಮದುವೆ ಕನಸಾಗಬಹುದೆ?ʼ ಎಂದು ಹೇಳಿದಾಗ ಅವನ ಹೆಂಡತಿ ಪದ್ಮ ‘ಎಂಥ ಹುಚ್ಚು ಮಾತಾಡುತ್ತಿದ್ದೀರಿ? ಆಕೆಗೂ ಗಂಡನೊಬ್ಬನನ್ನು ಆ ಬ್ರಹ್ಮ ಸೃಷ್ಟಿಸಿರುತ್ತಾನೆ. ತೊನ್ನಿನ ಕಲೆಯಿರುವವರೆಲ್ಲ ಮದುವೆಯಾಗಬಾರದೇನು?ʼ ಎಂದು ಪ್ರಶ್ನಿಸುತ್ತಾಳೆ. ಮದುವೆಯಾಗಿ ಬಂದ ಅಣ್ಣನ ಹೆಂಡತಿಗೆ ನಿರುಪಮಳ ಮೇಲೆ ಎಲ್ಲಿಲ್ಲದ ಸ್ನೇಹ. ಮದುವೆಯಾಗಿ ಹತ್ತುವರ್ಷಗಳಾಗಿದ್ದರೂ ಒಂದು ದಿನವೂ ನಿರುಪಮಳಿಗೆ ಕೆಟ್ಟ ಮಾತಾಡಿರಲಿಲ್ಲ. ತನಗಿಂತ ಒಂದು ವರ್ಷ ಕಿರಿಯಳಾಗಿದ್ದ ನಿರುಪಮಳಿಗೆ ಧ್ವನಿ ಎತ್ತರಿಸಿ ಏನೂ ಹೇಳದೇ ಕೇಳದೇ ಇರುತ್ತಿದ್ದಳು. ಅವರಿಬ್ಬರಲ್ಲಿ ಹೊಂದಾಣಿಕೆ ಸಹಜವಾಗಿತ್ತು.

ಸಾಮಾನ್ಯವಾಗಿ ತಂದೆ ತೀರಿಕೊಂಡ ಒಂದು ವರ್ಷದೊಳಗೆ ಮನೆಯಲ್ಲಿ ಶುಭಕಾರ್ಯ (ವಿವಾಹ) ನಡೆಯಬೇಕೆಂಬ ನಂಬಿಕೆಯಿದೆ. ಇಲ್ಲದಿದ್ದರೆ ಮೂರು ವರ್ಷ ಕಳೆದ ಮೇಲೆಯೇ. ಅದೇರೀತಿಯಾಗಿ ಬಲ್ಲಾಳರು ಈ ಸನ್ನಿವೇಶವನ್ನು ಕಥೆಯಲ್ಲಿ ತಂದು ನಿರುಪಮಳ ಅಣ್ಣ ಮನೆಯ ಹಿರಿಯವನಾಗಿ ತನ್ನ ತಂಗಿಯ ಮದುವೆಯನ್ನು ಮೂರುವರ್ಷದ ನಂತರ ಮಾಡಲು ಮುಂದಾಗಿರುತ್ತಾನೆ. ತನ್ನ ಹೆಂಡತಿಗೆ ಸದಾ ಮನೆ ಕೆಲಸದಲ್ಲಿ ನೆರವಿಗೆ ಬರುವಂತೆ ತನ್ನ ತಂಗಿ ಮನೆಯಲ್ಲಿರಬೇಕೆಂಬ ಮನಸ್ಥಿತಿಯನ್ನು ಪ್ರಭಾರಕರನಲ್ಲಿ ಕಾಣುತ್ತೇವೆ. ಹಾಗೆಯೇ ಮಾತಿನ ಮಧ್ಯದಲ್ಲಿ ‘ನಿರುಪಮ ಗಂಡಾಗಬೇಕಿತ್ತು. ಯಾಕಾದರೂ ಬ್ರಹ್ಮ ಆಕೆಯನ್ನು ಹೆಣ್ಣಾಗಿ ಸೃಷ್ಟಿಸಿದನೋ’ ಎಂಬ ಆತನ ಮಾತಿನಲ್ಲಿ ಸ್ವಾರ್ಥಬುದ್ಧಿ ಇಣುಕು ಹಾಕುತ್ತಿತ್ತು.

ಸ್ವಭಾವತಃ ಮೃದು ವ್ಯಕ್ತಿತ್ವದ ನಿರುಪಮ ಅನಿವಾರ್ಯವಾಗಿ ದುಡಿಮೆಯನ್ನು ಪ್ರವೇಶಿಸಿರುತ್ತಾಳೆ. ತನಗೊಬ್ಬ ಬಾಳಸಂಗಾತಿ ಇಲ್ಲವೆಂಬ ಕೊರಗನ್ನು ನಿರೂಪಮ ಮರೆಯಲು ಪುಸ್ತಕಗಳನ್ನು ಓದುತ್ತಿದ್ದಳು. ಆ ಪುಸ್ತಕಗಳೇ ಅವಳ ಜೀವನ ಸಂಗಾತಿಯಾಗಿದ್ದವು. ‘ಹೆಣ್ಣಿಗೆ ವಿವಾಹವೆಂಬುದೇ ಬದುಕಿಗೆ ಆಧಾರವೆ?’ ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು ನಿರುಪಮ ಪ್ರಯತ್ನಿಸುತ್ತಿದ್ದಳು. ತನ್ನ ಮದುವೆ ವಿಚಾರದಲ್ಲಿ ಸೋತು ಸುಣ್ಣವಾಗಿದ್ದ ನಿರುಪಮಳನ್ನು ಕಂಡ ಗೆಳತಿ ಮೇರಿಡೇಸಾ ಬುದ್ಧಿವಾದ ಹೇಳುತ್ತಿದ್ದಳು. ತಾನು ಹೇಗೆ ಪತ್ರಿಕಾ ಜಾಹೀರಾತಿನ ಮೂಲಕ ‘ವರ’ನೊಬ್ಬನನ್ನು ಹುಡುಕಿಕೊಂಡೆ. ಹಾಗೆಯೇ ನೀನೂ ಸಹ ಈ ಪ್ರಯತ್ನ ಮಾಡಬಹುದೆಂದು ಸಲಹೆಯನ್ನು ನೀಡುತ್ತಾಳೆ. ಆಗ ತನ್ನ ಅಣ್ಣನಿಗೆ ಈ ವಿಷಯವನ್ನು ವಿವರಿಸಿ ಗಮನಕ್ಕೆ ತಂದಾಗ ಒಲ್ಲದ ಮನಸ್ಸಿನಿಂದ ಒಪ್ಪಿಗೆ ಸೂಚಿಸುತ್ತಾನೆ.

ಅವಳಾಸೆಯಂತೆ ಪತ್ರಿಕೆಗೆ ಬರೆಯುತ್ತಾ: “28ವರ್ಷ ವಯಸ್ಸಿನ ದುಡಿಯುವ ಕುಲೀನ ಬ್ರಾಹ್ಮಣ ಯುವತಿಗೆ ಯೋಗ್ಯ ವರ ಬೇಕಾಗಿದ್ದಾನೆ. ಮುಖದಲ್ಲಿ ಕೆಲವು ತೊನ್ನಿನ ಕಲೆಗಳಿವೆ. ಇವುಗಳನ್ನು ಕಡೆಗಣಿಸಿ ಕೈಹಿಡಿಯುವ ಕರುಣಾಳು ಇದ್ದರೆ ಪ್ರತ್ಯುತ್ತರ ನೀಡಬಹುದು” ಎಂದು ಪತ್ರಿಕಾ ಜಾಹೀರಾತು ನೀಡುತ್ತಾನೆ. ಇದಕ್ಕೆ ಪ್ರತಿಕ್ರಿಯೆಯಾಗಿ ಹತ್ತು ದಿನಗಳ ನಂತರ ಮದುವೆಯಾಗುವ ಒಬ್ಬ ಗಂಡು ಪತ್ರ ಬರೆಯುತ್ತಾ: “ನಾನು ಯುದ್ಧವೊಂದರಲ್ಲಿ ಭಾಗವಹಿಸಿದಾಗ ಒಂದು ಕೈ-ಒಂದು ಕಾಲು ಕಳೆದುಕೊಂಡಿದ್ದೇನೆ. ನನಗೀಗ 40ವರ್ಷ. ಸ್ವಲ್ಪ ಪೆನ್ಶನ್ ಹಣ ಕೂಡಾ ನನಗೆ ಬರುತ್ತದೆ. ಹೇಗೂ ನಿಮ್ಮ ತಂಗಿ ದುಡಿಯುತ್ತಿರುವುದರಿಂದ ವಿವಾಹ ಸಂಬಂಧ ಬೆಳೆಸಲು ಇಚ್ಚಿಸಿದ್ದೇನೆ” ಎಂದು ತಿಳಿಯಪಡಿಸಿದ್ದನು. “ತಾನೊಂದು ಬಗೆದರೆ ವಿಧಿಯೊಂದು ಬಗೆದಿತ್ತು” ಎಂಬ ಮಾತು ನಿರುಪಮಳಿಗೆ ಅಕ್ಷರಶಃ ಸತ್ಯವಾಗಿತ್ತು. ಪತ್ರ ನೋಡಿದ ತಕ್ಷಣ ಚೂರುಚೂರಾಗಿ ಹರಿದು ಹಾಕುತ್ತಾಳೆ. ಇಂತಹ ಪತ್ರವನ್ನು ಬಹುಶಃ ತನ್ನ ಅಣ್ಣನೇ ಯಾಕೆ ಬರೆದು ನನಗೆ ಕೊಟ್ಟಿರಬಾರದೆಂಬ ಸಂದೇಹ ನಿರುಪಮಳ ತಲೆಯಲ್ಲಿ ಒಂದು ಬಾರಿ ಸುಳಿದು ಹೋಗದೇ ಇರಲಿಲ್ಲ.

ಸಮಾಜ ʻಕುರೂಪಿʼ ಗುರುತಿಸಿದ,  ಹೆಣ್ಣೊಬ್ಬಳ ಮಾನಸಿಕ ತುಮುಲದ ಕಥೆಯೇ ‘ಅವಿವಾಹಿತೆ’. ಬಹಿರಂಗದ ಸೌಂದರ್ಯಕ್ಕಿಂತ ಆಂತರಿಕ ಸೌಂದರ್ಯವೇ ಮುಖ್ಯವೆಂಬ ಭಾವನೆ ಪ್ರತಿಯೊಬ್ಬರಲ್ಲಿ ತುಂಬಿರುತ್ತದೆ. ಆದರೆ ಅಂತರಂಗದ ನಿಷ್ಕಲ್ಮಷ ಹಾಗೂ ನಿರ್ಮಲವಾದ ಭಾವನೆ ಪರಿಗಣನೆಗೆ ಬಾರದ ಸಮಾಜದಲ್ಲಿ ನಿರುಪಮಾಳ ಭವಿಷ್ಯದ ಕನಸು ನುಚ್ಚು ನೂರಾಗುವ ಚಿತ್ರಣವನ್ನು ಬಲ್ಲಾಳರು ಸಮರ್ಪಕವಾಗಿ ಚಿತ್ರಿಸಿದ್ದಾರೆ. ಸಮಾಜದಲ್ಲಿ ‘ವಿವಾಹ’ವೆಂಬುದು ತುಂಬಾ ಅಗತ್ಯವೆಂಬ ಚೌಕಟ್ಟು ನಿರ್ಮಾಣವಾಗಿ ಹೋಗಿದೆ. ಬದ್ದ ಕಲ್ಪನೆಗಳ ನೆಲೆಯಲ್ಲಿ ನಿರುಪಮಾ ತನ್ನ ಆಸಕ್ತಿ ಮತ್ತು ಆಶಯಗಳತ್ತ ಗಮನ ಹರಿಸುತ್ತಾಳೆ. ಈ ಸಂದರ್ಭಗಳನ್ನು ಉಪಯೋಗಿಸಿಕೊಂಡು ಹೊಂಚು ಹಾಕುವ ಗಂಡಸೆಂಬ ಮೃಗೀಯ ಶಕ್ತಿಗಳು ಅವಳ ಆಸೆಯನ್ನು ಬೇಕಂತಲೇ ಕುಂದಿಸಲು ಮುಂದಾಗುತ್ತವೆ. ನಿರುಪಮಗೆ ಸಮಾಜದ ಈ ಕ್ರೌರ್ಯ ವ್ಯವಸ್ಥೆಯನ್ನು ಎದುರಿಸಲಾಗುವುದಿಲ್ಲ. ತಾನು ಉದ್ಯೋಗಿಯಾಗಿದ್ದರೂ ಸ್ವತಂತ್ರ ಬದುಕು ನಡೆಸಬಲ್ಲೆನೆಂಬ ಆತ್ಮವಿಶ್ವಾಸವಿಲ್ಲ. ಕಾರಣ ತನಗೆ ತಕ್ಕ ಬಾಳಸಂಗಾತಿಯೊಬ್ಬ ಬದುಕು ಕಟ್ಟಿಕೊಳ್ಳುವಲ್ಲಿ ಸಹಕರಿಸುವವರಿಲ್ಲ. ಇದರಿಂದ ವ್ಯವಸ್ಥೆಯ ಶೋಷಣೆಗೆ ಅವಳು ಸುಲಭವಾಗಿ ಒಳಗಾಗುತ್ತಾಳೆ.

ಹೆಣ್ಣಿನ ಭಾವನೆಗಳಿಗೆ ಬೆಲೆ ಬರಬೇಕಾದರೆ ಅವಳ ಮಾನಸಿಕ ತುಮುಲಗಳಿಗೆ ವಿರಾಮ ಬೇಕೇಬೇಕು. ಅದನ್ನು ಮನಃಪೂರ್ವಕವಾಗಿ ಅರಿಯುವ ವಿಶಾಲವಾದ ಮನಸ್ಸು ಅಗತ್ಯವಾಗಿರುತ್ತದೆ. ಅಂತಹ ಮನಸ್ಸಿನ ಹುಡುಕಾಟವನ್ನು ನಿರುಪಮ ಇಲ್ಲಿ ಹುಡುಕುತ್ತಿದ್ದಾಳೆ. ಬದುಕನ್ನು ಕಟ್ಟಿಕೊಳ್ಳಲು ತಕ್ಕಮಟ್ಟಿಗೆ ಬೇಕಾದ ಹಣವನ್ನು ವೃತ್ತಿಯ ಮೂಲಕ ಸಂಪಾದಿಸಿದ್ದಾಳೆ. ಇದು ಬಹಿರಂಗದ ಆಗು ಹೋಗುಗಳಿಗೆ ಅನುಕೂಲವಾಯಿತಷ್ಟೆ. ಆದರೆ ಮಾನಸಿಕ ತುಮುಲಗಳ ನಿಯಂತ್ರಣದ ಆಗುಹೋಗುಗಳಿಗೆ ಸಂಗಾತಿಯೊಬ್ಬ ಅತ್ಯವಶ್ಯಕ.

ಹೀಗೆ ಕತೆ ಸರಳವಾಗಿದ್ದರೂ ಅನೇಕ ಸೂಕ್ಷ್ಮಭಾವನೆಯ ಅಂಶಗಳನ್ನು ಒಳಗೊಂಡು ಒಂದು ಸಂಕೀರ್ಣ ಅನುಭವವನ್ನು ತಂದುಕೊಡುತ್ತದೆ. ಕೌಟುಂಬಿಕ ಬದುಕಿನಲ್ಲಿ ಪರಸ್ಪರ ಅವಲಂಬನೆಯ ಅಗತ್ಯ ತೀರಾ ಅನಿವಾರ್ಯವಾಗಿಬಿಡುತ್ತದೆ. ಹೆಣ್ಣಿನ ಅಸಹಾಯಕ ಪರಿಸ್ಥಿತಿ, ಬದಲಾಗುತ್ತಿರುವ ಸಾಮಾಜಿಕ ಸನ್ನಿವೇಶ, ದುಡಿಯುವ ಹೆಣ್ಣಿಗೆ ಕೆಲವೊಮ್ಮೆ ತಕ್ಕ ಗಂಡು ದೊರೆಯದಿರುವ ಸಮಸ್ಯೆ. ಕಥೆ ನಮಗೆ ಮುಖ್ಯವಾಗುವುದು ನಿರುಪಮೆಯನ್ನು ಯುದ್ಧದಲ್ಲಿ ಹೋರಾಡಿದ ಒಬ್ಬ ಯೋಧನ ಪತ್ರದ ಮುಂದೆ ತಂದು ನಿಲ್ಲಿಸುವುದು.

ಪರಿಸ್ಥಿತಿಯ ಒತ್ತಡಗಳನ್ನು ನಿವಾರಿಸಲಾಗದೆ ತಹತಹಿಸುತ್ತಾ ಅಸಹಾಯಕತೆಯಿಂದ ಪರಿತಪಿಸುವ ಇಲ್ಲಿನ ಸ್ತ್ರೀ ಪಾತ್ರವು ಓದುಗರಿಂದ ಸಹಾನುಭೂತಿ ಪಡೆಯುತ್ತದೆ. ಪುರುಷ ಪಾತ್ರಗಳು ಪ್ರಧಾನ ನೆಲೆಯಲ್ಲಿ ನಿಂತು ಹೆಣ್ಣಿನ ಬದುಕನ್ನು ನಿರ್ಧರಿಸುವಂತೆ ಭಾಸವಾಗುತ್ತವೆ. ಪ್ರಭಾಕರ ನಿರುಪಮಳ ಮನಸ್ಸನ್ನು ಕದಡುವ ರೀತಿಯಿಂದ, ಅವಳಿಗೆ ಸಮಾಧಾನವನ್ನು ನೀಡುತ್ತಿದ್ದೇನೆಂಬ ಕಲ್ಪನೆಯಿಂದ ಆಕೆಯ ಸ್ವಭಾವವನ್ನು ಗಂಡು ನಿಯಂತ್ರಿತ ಶಕ್ತಿಯಂತೆ ಕಂಡುಬರುತ್ತಾನೆ.

ಹೆಣ್ಣಿನ ಬದುಕು ಸ್ವಾತಂತ್ರ್ಯವನ್ನು ಅಪೇಕ್ಷಿಸಿದರೂ ಪುರುಷನ ಪರಿವೇಶವನ್ನು ಕಳಚಲಾಗದ, ಕುಟುಂಬದ ಸೀಮಿತ ಕ್ಷೇತ್ರದಿಂದ ಹೊರಬರಲಾರದ ಸಂದಿಗ್ಧತೆಯನ್ನು ಇಲ್ಲಿ ಗುರುತಿಸಬಹುದು. ಕೌಟುಂಬಿಕ ಬಂಧನ ಅಥವಾ ತನ್ನ ಅಣ್ಣನಿಂದ ದೊರೆಯದ ಸ್ವಾತಂತ್ರ್ಯ ತತ್ಪರಿಣಾಮವಾಗಿ ಮನದೊಳಗೆ ಅನುಭವಿಸುವ ಅತೃಪ್ತಿ, ಅಸಮಾಧಾನಗಳು ವ್ಯಕ್ತಿಯನ್ನು ಹೇಗೆ ಘಾಸಿಗೊಳಿಸುತ್ತವೆ ಎಂಬುದನ್ನು ಬಲ್ಲಾಳರು ʻನಿರುಪಮʼ ಪಾತ್ರದ ಮೂಲಕ ಸೂಕ್ಷ್ಮವಾಗಿ ನಿರೂಪಿಸಿದ್ದಾರೆ. ಒಟ್ಟಾರೆ ಈ ಕಥೆ ಮಧ್ಯಮ ವರ್ಗದ ಕೌಟುಂಬಿಕ ಚಿತ್ರಣವನ್ನು ಅನಾವರಣಗೊಳಿಸುತ್ತದೆ.

ಬಲ್ಲಾಳರ ಕಥೆಗಳ ಹಿನ್ನಲೆಯಲ್ಲಿ ಮುಂಬೈ ಪ್ರದೇಶ ಇರುವುದನ್ನು ನಿರಾಕರಿಸಲಾಗುವುದಿಲ್ಲ. ನಗರದ ಸಂಕೀರ್ಣತೆ ಮನುಷ್ಯನ ಮನೋಭಾವದ ಮೇಲೆ ಬೀರುವ ಪರಿಣಾಮವನ್ನು ಅತ್ಯಂತ ನಯವಾಗಿ ಹಿಡಿದಿಟ್ಟಿರುವ ರೀತಿ ಅವರ ಮನೋಧರ್ಮವನ್ನು ಹಾಗೂ ಸ್ವೋಪಜ್ಞತೆಯನ್ನು ಪ್ರಸ್ತುತಪಡಿಸುತ್ತದೆ. ಹಾಗೆಯೇ ಅವರ ಕಥೆಗಳ ವಸ್ತುವಿನಲ್ಲಿ ವಸತಿಹೀನ, ನಿರುದ್ಯೋಗ, ಪ್ರೇಮಸಂಬಂಧ, ನೈತಿಕ ಅಧಃಪತನ, ನಿರಾಶೆ, ಬೇಸರ, ಆತಂಕ, ನೋವು ಮೊದಲಾದ ಅಂಶಗಳನ್ನು ಗುರುತಿಸಬಹುದು.

ಬಲ್ಲಾಳರು ರಚಿಸಿರುವ ಕುಟುಂಬ ಕೇಂದ್ರಿತ ಸಾಮಾಜಿಕ ಸಹಜ ವಿಷಯಗಳುಳ್ಳ ಕಥೆಗಳು ಮಾನವೀಯತೆಯನ್ನು ಚಿತ್ರಿಸಿವೆ. ಸಮಸ್ಯೆಯನ್ನು ಸಹಾನುಭೂತಿಯಿಂದ ಚಿತ್ರಿಸಿರುವ ಜಾಣ್ಮೆ ಬಲ್ಲಾಳರಿಗೆ ಸಿದ್ಧಿಸಿದೆ. ಮನುಷ್ಯನ ಆಂತರ್ಯದಲ್ಲಿರುವ ಅಂತಃಕರಣದ ಅಂತರ್ಜಲವನ್ನು ಜೀವನದಿಯಾಗಿ ಉಕ್ಕಿಸಿ ಬದುಕನ್ನು ಹಸಿರಾಗಿಸುವ ಹಂಬಲ ಬಲ್ಲಾಳರ ಕಥಾಸಾಹಿತ್ಯದಲ್ಲಿ ಪ್ರಧಾನವಾಗಿ ಕಾಣಿಸುವ ಅಂಶವಾಗಿದೆ. ಇದನ್ನು ಅವಿವಾಹಿತೆಯ ನಿರುಪಮೆಯ ಪಾತ್ರದ ಮೂಲಕ ಚಿತ್ರಿಸಲು ಪ್ರಯತ್ನಿಸಿದ್ದಾರೆ.

ಬಲ್ಲಾಳರು ತಮ್ಮ ಬರವಣಿಗೆಯನ್ನು ಆರಂಭಿಸಿದ್ದು ಕನ್ನಡದಲ್ಲಿ ಪ್ರಗತಿಶೀಲ ಚಳುವಳಿ ಪ್ರಖರವಾಗಿದ್ದ ಕಾಲದಲ್ಲಿ. ಹೀಗಾಗಿ ಸಹಜವಾಗಿ ಈ ಚಳುವಳಿಯ ಪ್ರಭಾವ ಅವರ ಮೇಲೆ ಗಾಢವಾಗಿದೆ. ಮುಂಬೈ ನಗರದ ಕಾರ್ಮಿಕ ಬಂಧುಗಳ ಬದುಕನ್ನು ಹತ್ತಿರದಿಂದ ಕಂಡ ಅನುಭವವನ್ನು ಕಥಾಪ್ರಪಂಚದಲ್ಲಿ ದಾಖಲಿಸಿದ್ದಾರೆ. ಇದು ಅವರ ಒಂದು ಮುಖವಾದರೆ ಇನ್ನೊಂದು ಮುಖ ‘ಸ್ತ್ರೀ ಜಗತ್ತು’ ಕಥಾಸಾಹಿತ್ಯದಲ್ಲಿ ಬಲ್ಲಾಳರಂತೆ ಹೆಣ್ಣಿನ ಪ್ರಪಂಚವನ್ನು ಬಹಳ ಸೂಕ್ಷ್ಮವಾಗಿ ಚಿತ್ರಿಸಿದ ಚಿಂತನೆ ಇತರರಲ್ಲಿ ಕಾಣಸಿಗುವುದಿಲ್ಲವೆಂದು ವಿಮರ್ಶಕರು ಅಭಿಪ್ರಾಯ ಪಟ್ಟಿದ್ದಾರೆ.

ಬಲ್ಲಾಳರು ಚಿತ್ರಿಸಿರುವ ಇಂಥ ಕೆಲವು ಸ್ತ್ರೀ ಪಾತ್ರಗಳು ತಮ್ಮ ಬೌದ್ಧಿಕ ಉನ್ನತಿಯನ್ನು ಮಾತ್ರವಲ್ಲ ಹೃದಯವಂತಿಕೆಯನ್ನು ಉಳಿಸಿಕೊಂಡು ತಮ್ಮ ಬದುಕಿನ ಪರಿಪೂರ್ಣತೆಯನ್ನು ಸಾಧಿಸಿಕೊಂಡಿವೆ. ಕಥೆಯಲ್ಲಿ ದೈನ್ಯತೆ ಮತ್ತು ಕರುಣೆ ಅನಾಯಾಸವಾಗಿ ಮೂಡಿಬಂದಿವೆ. ಕಥಾನಾಯಕಿ ನಿರುಪಮ ತನ್ನ ಭಾವಪ್ರಪಂಚದ ಮೇಲೆ ಹಿಡಿತ ಕಳೆದುಕೊಳ್ಳುವಂಥ ಅನಿವಾರ್ಯ ಸ್ಥಿತಿ ಪ್ರಾಪ್ತವಾಗುತ್ತದೆ. ಆದರೂ ಅದನ್ನು ಸಹಿಸಿಕೊಂಡು ತನ್ನಲ್ಲಿಯೇ ಹತ್ತಿಟ್ಟುಕೊಳ್ಳುತ್ತಾಳೆ. ಕೈಯ್ಯಲ್ಲೊಂದು ಕೆಲಸವೆಂಬುದು ಗಟ್ಟಿಯಾಗಿದ್ದರೂ ತನಗೆ ವಿವಾಹ ಇಲ್ಲದಿರುವುದನ್ನು ಸಮಾಜ ಹೇಗೆ ನೋಡುತ್ತಿದೆ ಎಂಬ ಆಲೋಚನೆ ನಿರುಪಮಗೆ ನಿತ್ಯವೂ ಕಾಡುತ್ತಿರುತ್ತದೆ.

ಮಾಧ್ಯಮವರ್ಗದ ಕೌಟುಂಬಿಕ ಚಿತ್ರಣ, ಉದ್ಯೋಗವಿದ್ದರೂ ಕುಟುಂಬದಲ್ಲಿ ಸಂಗಾತಿ ಇಲ್ಲದೇ ಚಡಪಡಿಸುವ ಸ್ತ್ರೀಯ ಅನುಭವವನ್ನು ಸಮರ್ಥವಾಗಿ ಈ ಕಥೆಯಲ್ಲಿ ನಿರೂಪಿಸಲಾಗಿದೆ. ವೈವಾಹಿಕ ಜೀವನದ ಅಪೇಕ್ಷೆಯ ತುಡಿತವಿದ್ದರೂ ನಿರುಪಮೆಗೆ ಯಾವುದೂ ಈಡೇರುವುದಿಲ್ಲ. ದುಡಿಯುವ ಮಹಿಳೆಯಾಗಿದ್ದರೂ ಒಂದಲ್ಲ ಒಂದು ರೀತಿಯಲ್ಲಿ ದೈಹಿಕ-ಮಾನಸಿಕ ಸಮಸ್ಯೆ, ತೊಳಲಾಟ, ಅಸಹ್ಯದಿಂದ ಸಮಾಜ ನೋಡುವ ದೃಷ್ಟಿಕೋನದಿಂದ ಮಹಿಳೆಗೆ ಹಲವು ರೀತಿಯಿಂದ ಶೋಷಣೆಗೊಳಪಡುವ ಚಿತ್ರಣವನ್ನು ಬಲ್ಲಾಳರು ಚಿತ್ರಿಸಿದ್ದಾರೆ. ದುಡಿಯುವ ಮಹಿಳೆಯರಲ್ಲಿ ಕಂಡೂ ಕಾಣದಂತಿರುವ ತಲ್ಲಣಗಳ ಮುಖಾಮುಖಿಯನ್ನು ಬಲ್ಲಾಳರು ಸೂಕ್ಷ್ಮವಾಗಿ ನಿದರ್ಶಿಸಿದ್ದಾರೆ. ಔದ್ಯೋಗಿಕ ಉನ್ನತಿಯನ್ನು ಸಾಧಿಸಿದ್ದರೂ ಜೀವನದಲ್ಲಿ ಸಂಗಾತಿ ಇಲ್ಲವೆಂಬ ಬೇಸರಿಕೆ ಹೇಗಿರುತ್ತದೆಂಬುದನ್ನು ಹಾಗೂ ಅತೃಪ್ತಿ ಹೇಗೆ ಕಾಡುತ್ತದೆಯೆಂಬುದನ್ನು ಪಾತ್ರದ ಒಳಹೊಕ್ಕು ಅನಾವರಣಗೊಳಿಸಿದ್ದಾರೆ. ಕಥೆಯಲ್ಲಿ ನಿರುಪಮಳ ಮನೋಭಾವಕ್ಕೆ ಪ್ರಾಧಾನ್ಯ ನೀಡುವ ಮೂಲಕ ಸ್ವಾಭಿಮಾನಿ ಹೆಣ್ಣಿನ ಅಂತಃಕರಣವನ್ನು ದಾಖಲಿಸಿದ್ದಾರೆ.

ಅತಿಯಾದ ಸಂಕೀರ್ಣತೆಯ ಚಿತ್ರಣಕ್ಕೆಳಸುವ ಸಾಹಸ ಮಾಡದೆ, ಸ್ಥೂಲವಾಗಿ ಎಳೆದ ಗೆರೆಗಳಲ್ಲಷ್ಟೇ ಕಥೆ ಬೆಳೆಯಿಸಿಕೊಂಡು ಹೋಗುವುದು ಬಲ್ಲಾಳರ ಕ್ರಮ. ಕೆಲವೊಮ್ಮೆ ಸಂಪ್ರದಾಯಕ್ಕೆ ಹೆಚ್ಚು ಜೋತು ಬೀಳದೆ, ಹಳೆಯ ಆಚಾರ ವಿಚಾರಗಳನ್ನು ತೊರೆದೂ ತೊರೆಯದ, ನಗರಜೀವಿ ಮಧ್ಯಮ ವರ್ಗದ ಸಾಮಾಜಿಕ ಚಿತ್ರಣವನ್ನು ಇವರ ಕಥೆ ಕಾದಂಬರಿಗಳಲ್ಲಿ ಕಾಣಬಹುದು. ಎಂದಿನಂತೆ ಸಮಾಜದ ಹಾಗೂ ವ್ಯಕ್ತಿಯ ನಡುವಣ ಬದುಕಿನ ಹೋರಾಟ, ವಾಸ್ತವಿಕತೆ ಹಾಗು ಆದರ್ಶದ ತಾಕಲಾಟ. ಸಮಸ್ಯೆ ಹೆಚ್ಚು ತೊಡಕಾಗುವುದರೊಳಗೇ ಪರಿಸ್ಥಿತಿಯನ್ನು ಒಂದು ರೀತಿಯಲ್ಲಿ ಸರಳಗೊಳಿಸುವ ಪ್ರಯತ್ನ. ಪಾತ್ರಗಳಲ್ಲಿ ಶಿಥಿಲತೆ ಅಥವಾ ದೌರ್ಬಲ್ಯ ಕಂಡುಬಂದರೂ ನಿವಾರಿಸಲು ತಕ್ಕ ದಾರಿಯನ್ನು ಹುಡುಕಿಬಿಡುತ್ತಾರೆ. ಹಾಗಾಗಿ ಕೊನೆಗೆ ಓದುಗರಿಗೆ ಹೀಗಲ್ಲದೆ ಇನ್ನು ಹೇಗೆ ಇದು ಅಂತ್ಯಗೊಳಿಸುವುದು ಸಾಧ್ಯವಿದ್ದೀತು ಎನಿಸುತ್ತದೆ.

ಐವತ್ತರ ದಶಕದಲ್ಲಿ ಬಲ್ಲಾಳರು ಬರೆದಿರುವ ಬಹಳಷ್ಟು ಕಥೆಗಳು ಕುಟುಂಬವು ಪ್ರಧಾನ ಸ್ಥಾನ ಪಡೆದಿದ್ದು, ಈ ಹಿನ್ನೆಲೆಯಲ್ಲಿ ಸ್ತ್ರೀ ಮನೋಭಾವದ ವಿವಿಧ ವಿನ್ಯಾಸಗಳ ಅನಾವರಣ ಕಾಣದೊರೆಯುತ್ತವೆ. ಒಟ್ಟಾರೆಯಾಗಿ ಐವತ್ತರ ದಶಕದಲ್ಲಿ ಬಲ್ಲಾಳರು ಬರೆದಿರುವ ಬಹಳಷ್ಟು ಕಥೆಗಳು ಕುಟುಂಬ ಕೇಂದ್ರಿತವಾದವುಗಳು. ಈ ಹಿನ್ನೆಲೆಯಲ್ಲಿ ಸ್ತ್ರೀಯ ಮನೋಭಾವದ ವಿವಿಧ ವಿನ್ಯಾಸಗಳ ಅನಾವರಣ ಕಾಣುತ್ತವೆ.

(ಆಕರಗಳು:
* ವ್ಯಾಸರಾಯ ಬಲ್ಲಾಳರ ಸಾಹಿತ್ಯ ಚಿಂತನೆ: ಡಾ. ಡಿ. ವಿಜಯಲಕ್ಷ್ಮಿ, ಜ್ಞಾನೋದಯ ಪ್ರಕಾಶನ, ಬೆಂಗಳೂರು. 1998
* ವ್ಯಾಸರಾಯ ಬಲ್ಲಾಳ: ಡಾ. ಡಿ.ವಿಜಯಲಕ್ಷ್ಮಿ, ನವಕರ್ನಾಟಕ, ಬೆಂಗಳೂರು. 2001
* ಸಂಪಿಗೆಯ ಹೂ: ವ್ಯಾಸರಾಯಬಲ್ಲಾಳ, ಲಲಿತ ಸಾಹಿತ್ಯಮಾಲಾ, ಧಾರವಾಡ. 1958.
* ವ್ಯಾಸರಾಯ ಬಲ್ಲಾಳ ಒಂದು ಅಧ್ಯಯನ(ಅಪ್ರಕಟಿತ ಸಂಶೋಧನಾ ಪ್ರಬಂಧ): ಡಿ. ವಿಜಯಲಕ್ಷ್ಮಿ, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ, ಮೈಸೂರು ವಿಶ್ವವಿದ್ಯಾಲಯ ಮೈಸೂರು. 1997)