ಭೂಲೋಕದ ನರಕ

ಭೂಲೋಕದ ನರಕ
ಜನರ ಓಡಾಟ ಇರುವೆಯಂತೆ
ಚೀರಾಟ, ನೋವು ದಟ್ಟಡವಿ
ಯಾರಿಗೂ ಕಿವಿ ಕೇಳಿಸಲ್ಲ
ಕಣ್ಣು ಕಾಣಲ್ಲ, ಹೃದಯವೂ ಸತ್ತಿದೆ

ಸ್ಟ್ರೆಚರ್ ಮೇಲೆ ಮೂರು ವರ್ಷದ ಹೂವು
ಹೊಟ್ಟೆ ಹಿಡಿದು ನರಳುತ್ತ
“ನೀರು ನೀರು ನೀರು” ಕೊಡಿ
ಅಂಗಲಾಚಿ ಗೊಗರೆಯುವ
ಒಡೆದಿತ್ತಂತೆ ‘ಅಪೆಂಡಿಕ್ಸ್’

ಜನ್ಮ ಕೊಟ್ಟ ತಂದೆ ತಾಯಿ ಇಬ್ಬರೂ
ಅಲ್ಲೆಲ್ಲೋ ಅಂಗವೈಕಲ್ಯದಲ್ಲಿ ಹೊರಳಾಡುವ
ಕಣ್ಣೀರ ತುಂಬಿಕೊಂಡ
ತಾಯಿಯಂತಿರುವವಳು ಸಮಾಧಾನಿಸಲು
ಭಗೀರಥನಂತೆ ನುಂಗಿ ದುಃಖ
‘ನೀರ್ ಕೊಡಬಾರದು’ ಪಾಲಿಸಿ
ಅದೆಂಥ ರೋಗವೋ?

ದೂರದಲ್ಲಿ ಕೂತ
ನನ್ನ ಕಣ್ಣಲ್ಲೂ ನೀರು
ಅವರವರ ದುಃಖ
ಅವರವರೆ ಅನುಭವಿಸುವ
ಪಾಲುದಾರಿಕೆ ಇಲ್ಲ

ಕರುಣಾಮೂರ್ತಿಗೆ ಕಾಣದೆ
ಈ ಬಾಡಲಿರುವ ಹೂವು?
ಅಂಗಗಳೆಲ್ಲವೂ ಸರಿಯಿರುವವ
ಅಂಗವೈಕಲ್ಯ ತೋರಿಸಿದರೆ?
ಜಗ ಮೆಚ್ಚುವುದೇ?