ಅಮ್ಮನನ್ನು ಕವಯಿತ್ರಿ ಮತ್ತು ಕವಿಗಳು ಕಂಡ ಬಗೆಯ ತೌಲನಿಕ ಅಧ್ಯಯನವು ಆಸಕ್ತಿದಾಯಕ ಆಗಬಹುದು. ಕವಯಿತ್ರಿಯರ ಸ್ಮೃತಿಯಲ್ಲಿ ಮತ್ತು ಅನುಭವದಲ್ಲಿ ಅಮ್ಮನ ಪಾತ್ರ, ಕಾರ್ಯ, ಲೋಕದೃಷ್ಟಿಗಳು ವಿಶಿಷ್ಟವಾಗಿವೆ. ಅಮ್ಮನನ್ನು ಅರ್ಥ ಮಾಡಿಕೊಳ್ಳಬೇಕೆಂದರೆ ಮೊದಲು ಅವಳು ಮನೆಯಿಂದ ಹೊರಹಾಕುವ ಕಸವನ್ನು ಅರ್ಥ ಮಾಡಿಕೊಳ್ಳಬೇಕು ಎನ್ನುತ್ತಾರೆ ಹಿರಿಯ ಕವಯಿತ್ರಿ! ಅಮ್ಮ ತನ್ನ ಮನೆಯ, ಮನದ, ಸಂಬಂಧದ ಯಾವ ವಸ್ತು ವಿಚಾರಗಳನ್ನೂ ಅವುಗಳಿಂದ ಪುನರ್ ಬಳಕೆ ಸಾಧ್ಯವಿಲ್ಲ ಎನಿಸುವವರೆಗೂ ಹೊರಹಾಕುವುದಿಲ್ಲ, ಅನಂತರವೇ ವಿವಿಧ ಲಕೋಟೆಗಳಲ್ಲಿ ಹಾಕಿ ಮನೆ, ಮನದಿಂದ ಹೊರ ಅಟ್ಟುತ್ತಾಳೆ ಎಂಬ ಚಿಂತನೆಯು ಹೊಸ ಒಳನೋಟವನ್ನು ನೀಡುತ್ತದೆ.
ಪ್ರೊ. ಸಬಿಹಾ ಭೂಮಿಗೌಡ ಸಂಪಾದಿಸಿದ “ಕನ್ನಡ ಮಹಿಳಾ ಕಾವ್ಯ” ಕೃತಿಗೆ ಬರೆದ ಅವರ ಮಾತುಗಳು ಇಲ್ಲಿವೆ…

ಮಹಿಳೆಯರ ಪ್ರಾತಿನಿಧಿಕ ಕವನಗಳ ಸಂಗ್ರಹಕ್ಕೆ ದೊಡ್ಡ ಇತಿಹಾಸವಿಲ್ಲ. 1943ರಲ್ಲಿ ಮೈಸೂರು ಪ್ರಾಂತ್ಯ ಸಮಿತಿ, ಕರ್ನಾಟಕ ಸಾಹಿತ್ಯ ಪರಿಷತ್ತು ಪ್ರಕಟಿಸಿದ `ಹೂಮಾಲೆ’ ಕೃತಿಯು ಮೊತ್ತಮೊದಲ ಮಹಿಳೆಯರ ಕಾವ್ಯ ಸಂಗ್ರಹವಾಗಿದೆ. ಇದರಲ್ಲಿ ಐವರು ಮಹಿಳೆಯರ ಕವನಗಳಿವೆ. ಅನಂತರ 1984ರವರೆಗೂ ಅಂಥ ಸಂಕಲನಕ್ಕಾಗಿ ಕಾಯಬೇಕಾಯಿತು. ಕರ್ನಾಟಕ ಲೇಖಕಿಯರ ಸಂಘವು ಆ ವರ್ಷ `ಕವನ ಸೌರಭ’ವನ್ನು (ನಲವತ್ತೇಳು ಕವಯಿತ್ರಿಯರ ಒಂದೊಂದು ಕವನಗಳು) ಪ್ರಕಟಿಸಿತು. 1999ರಲ್ಲಿ ಕುಲಶೇಖರಿಯವರು ಸಂಪಾದಿಸಿದ `ಈ ಶತಮಾನದ ಕನ್ನಡ ಕವಯಿತ್ರಿಯರು’ ಕೃತಿಯು 1916ರಿಂದ 1998ರ ಅವಧಿಯಲ್ಲಿ ಕವನ ಸಂಕಲನಗಳನ್ನು ಪ್ರಕಟಿಸಿದ 370ರಷ್ಟು ಕವಯಿತ್ರಿಯರನ್ನು ಮತ್ತು ಅವರ ಒಂದೊಂದು ಕವನಗಳನ್ನು ಪರಿಚಯಿಸಿದ ಗಮನಾರ್ಹ ಪ್ರಯತ್ನವಾಗಿದೆ. ಕರ್ನಾಟಕ ಲೇಖಕಿಯರ ಸಂಘವು ಪ್ರಕಟಿಸಿದ `ಉರಿ ಬದಲಾಗಿದೆಯೆ’ (2002) `ಗರಿಕೆ’ (2008) ಸಂಗ್ರಹಗಳಲ್ಲಿ ಮೊದಲನೆಯದು 1997-2002ರ ಅವಧಿಯ ಮೂವತ್ತು ಕವಯಿತ್ರಿಯರ ಮತ್ತು ಎರಡನೆಯದು ಇಪ್ಪತ್ತೊಂಬತ್ತು ಕವಯಿತ್ರಿಯರ ಪ್ರಾತಿನಿಧಿಕ ಕವನಗಳ ಸಂಗ್ರಹವಾಗಿದೆ. 2011ರಲ್ಲಿ ಬೆಂಗಳೂರಿನ ಚಿಂತನ ಪುಸ್ತಕವು ಮಾಧವಿ ಭಂಡಾರಿ ಕೆರೆಕೋಣ ಸಂಪಾದಿಸಿದ, `ನೀನುಂಟು, ನಿನ್ನ ರೆಕ್ಕೆಗಳುಂಟು’ (ಈ ದಶಕದ ಮಹಿಳಾ ಸಂವೇದನೆಯ ಕವನಗಳು) ಪ್ರಕಟಿಸಿತು. ಅದೇ ವರ್ಷ ಮಂಗಳೂರು ವಿಶ್ವವಿದ್ಯಾಲಯದ ಪ್ರಸಾರಾಂಗವು ಐವರು ಕವಯಿತ್ರಿಯರ ಕವಿತೆಗಳಿರುವ `ನಾನು ಮತ್ತು ನನ್ನ ಬರಹ’ ಪ್ರಕಟಿಸಿತು. 2012ರಲ್ಲಿ ಬೆಂಗಳೂರಿನ ಗೀತಾಂಜಲಿ ಪಬ್ಲಿಕೇಷನ್ಸ್ ಎಂಬತ್ತು ಕವಯಿತ್ರಿಯರ ಕವಿತೆಗಳಿರುವ `ಕವನ ಗುಚ್ಛ’ ಪ್ರಕಟಿಸಿತು. ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯವು 2013ರಲ್ಲಿ ಪ್ರಕಟಿಸಿದ `ಮಹಿಳಾ ಕಾವ್ಯ’ ಸಂಕಲನವು 63 ಕವಯಿತ್ರಿಯರ ತಲಾ ನಾಲ್ಕು ಕವನಗಳನ್ನು ಒಳಗೊಂಡಿದೆ. ಅನಂತರದಲ್ಲಿ ಕವಿ ಪ್ರಕಾಶನದ `ಕಾವ್ಯಬೋಧಿ’, (ಕವಿ ಪ್ರಕಾಶನ, 2014) `ಅವಳ ಕವಿತೆ’ (ಕವಿ ಪ್ರಕಾಶನ, 2015-16), ಹರ್ ಪೋಯೆಮ್ಸ್ (ಕುವೆಂಪು ಭಾಷಾ ಭಾರತಿ ಪ್ರಾಧಿಕಾರ, 2016) ಎಂಬ ಅನುವಾದ ಸಂಕಲನ, ಮಹಿಳಾ ಕಾವ್ಯ ಸಂಗ್ರಹ (ಸಿದ್ದಲಿಂಗೇಶ್ವರ ಪ್ರಕಾಶನ, ಗುಲ್ಬರ್ಗಾ, 2017), `ಬೆಂಕಿಯೊಳಗಣ ಬೆಳಕು’ (ಕವಿ ಪ್ರಕಾಶನ, 2018), ಕನ್ನಡ ಬರಹಗಾರ್ತಿಯರ ಪ್ರಾತಿನಿಧಿಕ ಸಂಕಲನ ಸಂಪುಟ 3 ಕಾವ್ಯ (ಕುವೆಂಪು ಭಾಷಾ ಭಾರತಿ ಪ್ರಾಧಿಕಾರ, 2019), ಮಹಿಳಾ ಸಾಹಿತ್ಯ ಸಂಪುಟ-ಕಾವ್ಯ (ಕನ್ನಡ ಸಾಹಿತ್ಯ ಪರಿಷತ್ತು, 2020) ಮತ್ತು ಸೋಜುಗದ ಸೂಜಿಮಲ್ಲಿಗೆ (ನಿರಂತರ ಪ್ರಕಾಶನ, ಗದಗ, 2020) ಇವು ನನ್ನ ಗಮನಕ್ಕೆ ಬಂದ ಮುಖ್ಯ ಸಂಗ್ರಹಗಳಾಗಿವೆ.

ಕನ್ನಡ ಸಾಹಿತ್ಯದ ಇತರ ಪ್ರಾತಿನಿಧಿಕ ಕವನ ಸಂಪುಟಗಳಲ್ಲಿ ಮಹಿಳೆಯರ ಪ್ರಾತಿನಿಧ್ಯ ತೀರ ಸೊರಗಿರುವುದನ್ನು ಸ್ತ್ರೀವಾದಿಗಳು ಆಧಾರ ಸಹಿತವಾಗಿ ದಾಖಲಿಸಿದ್ದಾರೆ. ಆ ಕಾರಣಕ್ಕಾಗಿ ಮಹಿಳೆಯರ ಬರಹಗಳಿಗೆ ಉತ್ತೇಜನ ನೀಡಲು ಆರಂಭವಾದ ಪ್ರತ್ಯೇಕ ಕಾವ್ಯ ಸಂಪುಟಗಳು ಅನಂತರದಲ್ಲಿ ಅಸ್ಮಿತೆಯ ಕಾರಣದಿಂದ ಪ್ರಕಟಿಸುವ ತುರ್ತನ್ನು ಎದುರುಗೊಂಡವು ಎಂಬುದು ವಾಸ್ತವ. ಆದರೆ ಇದೊಂದೇ ಕಾರಣವಲ್ಲ. ಕಳೆದ ಶತಮಾನದ ಎಪ್ಪತ್ತು-ಎಂಬತ್ತರ ದಶಕಗಳ ವಾರ್ಷಿಕ ಸಾಹಿತ್ಯ ಸಮೀಕ್ಷೆಗಳಲ್ಲಿ `ಈ ವರ್ಷದಲ್ಲಿ ಮಹಿಳೆಯರು ಕೆಲವು ಮುಖ್ಯ ಕಾದಂಬರಿ ಮತ್ತು ಕಥಾ ಸಂಕಲನಗಳನ್ನು ಪ್ರಕಟಿಸಿದ್ದಾರೆ’ ಎಂಬ ಒಂದು ಸಾಲಿನ ಶಿಫಾರಸು ನೀಡುತ್ತಿದ್ದ ಕ್ರಮ ಇಂದಿಗೂ ಹೆಚ್ಚೇನೂ ಬದಲಾಗಿಲ್ಲ. ತಮ್ಮ ಖಚಿತ ಮತ್ತು ನಿಷ್ಠುರ ವಿಮರ್ಶೆಗಾಗಿ ಹೆಸರಾಗಿದ್ದ ಕನ್ನಡದ ಹಿರಿಯ ವಿಮರ್ಶಕರೊಬ್ಬರು ಕೆಲವು ವರ್ಷಗಳ ಹಿಂದೆ, `ಕನ್ನಡದಲ್ಲಿ ಮಹಿಳೆಯರು ಯಾರು ಗಂಭೀರವಾಗಿ ಸಾಹಿತ್ಯ ರಚನೆ ಮಾಡುತ್ತಿದ್ದಾರೆ? ನಾನು ಯಾರ ಕೃತಿಗಳನ್ನೂ ಓದಿಲ್ಲ. ಬಿಡುವಾದಾಗ ಓದುವೆ. ಓದಬಹುದಾದ ಕೃತಿಗಳ ಒಂದು ಪಟ್ಟಿ ಮಾಡಿಕೊಡಿ’ ಎಂದಿದ್ದರು. ಈ ಮಾತು ಅವರಿಂದ ಕೇಳಿ ನನಗೆ ಗಾಬರಿಯೇ ಆಗಿತ್ತು. ಅನಂತರ ಇವರ ಬಗ್ಗೆ ಕನಿಕರ ತೋರಬೇಕೋ ಹೇವರಿಸಬೇಕೋ ಎಂಬ ಗೊಂದಲಕ್ಕೆ ಒಳಗಾಗಿದ್ದೆ. ಲೇಖಕಿಯರ ಸಾಹಿತ್ಯ ಓದುವ ಅವರ ಆಸಕ್ತಿಯು ನನ್ನನ್ನು ನೋಡಿ ಹುಟ್ಟಿದ್ದೋ ಅಥವಾ ನಿಜವಾದದ್ದೋ ಎಂಬುದನ್ನು ಪರೀಕ್ಷಿಸಲು ಕೆಲ ಕಾಲ ಕಾದೆ. ಅನಂತರ ಭೇಟಿಯಾದರೂ ಅವರಿಂದ ಯಾವ ಬೇಡಿಕೆಯಾಗಲೀ ಉತ್ಸಾಹವಾಗಲೀ ಕಂಡುಬರಲಿಲ್ಲ.

(ಪ್ರೊ. ಸಬಿಹಾ ಭೂಮಿಗೌಡ)

ಇಲ್ಲೇ ಇನ್ನೊಂದು ಸಂಗತಿಯನ್ನು ಪ್ರಸ್ತಾಪಿಸುವುದು ಸೂಕ್ತವೆನಿಸುತ್ತದೆ. ಮಹಿಳೆಯರ ಮಹತ್ವದ, ಹೊಸ ನೋಟದ, ಅಸ್ಮಿತೆಯ, ಕೃತಿಗಳನ್ನು ಪುರುಷ ವಿಮರ್ಶಕರು ಗಮನಿಸಿಯೇ ಇಲ್ಲ; ಇನ್ನು ವಿಮರ್ಶೆ ಬರೆಯುವುದು ದೂರದ ಮಾತು. ನಿದರ್ಶನಕ್ಕೆ ಸೀತೆ ರಾಮ ರಾವಣ, ವಿಮುಕ್ತೆ (ಎಚ್. ವಿ. ಸಾವಿತ್ರಮ್ಮ), ಊರ್ಮಿಳೆ (ನಳಿನಾ ಮೂರ್ತಿ), ಮಾಧವಿ, ಮೂಲಮುಖಿ (ಅನುಪಮಾ ನಿರಂಜನ), ನಾಸು (ಸುನಂದಾ ಬೆಳಗಾಂಕರ್), ಗಾಂಧಿ ಬಂದ (ಎಚ್. ನಾಗವೇಣಿ), ಜಯ, ಕಪ್ಪು ಕಿವಿಯ ಬಳಿಯ ಕುದುರೆಗಳು (ಎಂ. ಎಸ್. ವೇದಾ), ದ್ವಿತ್ವ (ಆರ್. ಸುನಂದಮ್ಮ) ಮುಂತಾದ ಹಲವನ್ನು ಇಲ್ಲಿ ಹೆಸರಿಸಬಹುದು. ಮುನ್ನುಡಿ, ಬೆನ್ನುಡಿ ಬರೆದ ಕೆಲವು ವಿಮರ್ಶಕರನ್ನು ಹೊರತುಪಡಿಸಿದರೆ, ಆ ಕೊರತೆಯನ್ನು ತುಂಬಿದ್ದು ವಿಮರ್ಶಕಿಯರೇ ಎಂಬುದನ್ನು ಗಮನಿಸಬೇಕು.

ಇಂತಹ ಪೂರ್ವಗ್ರಹ, ಜಾಣ ಕುರುಡುತನ ಮತ್ತು ಮರೆವು ಇಂದಿಗೂ ವಿಮರ್ಶಕರಲ್ಲಿ ವ್ಯಾಪಕವಾಗಿರುವ ಹೊತ್ತಲ್ಲಿ ಕವಯಿತ್ರಿಯರ ಪ್ರಾತಿನಿಧಿಕ ಕವನ ಸಂಗ್ರಹಗಳಿಗೆ ಮಹತ್ವವೂ ಇದೆ; ಅವುಗಳ ಪ್ರಕಟಣೆಯ ಅಗತ್ಯವೂ ಇದೆ. ಇಂತಹ ಪ್ರಾತಿನಿಧಿಕ ಸಂಕಲನಗಳು ಮಹಿಳಾ ಸಂವೇದನೆ, ಆದ್ಯತೆ, ಕಾವ್ಯ ಪರಿಶ್ರಮಗಳನ್ನು ಅರಿಯಲು ಸಹಕಾರಿಯಾಗಿವೆ. ಆ ಮೂಲಕ ಮಹಿಳಾ ಕಾವ್ಯ ಚರಿತ್ರೆಯ ಅಧ್ಯಯನಕ್ಕೆ, ಕಾವ್ಯದ ಬೆಳವಣಿಗೆಯ ಹೆಜ್ಜೆ ಗುರುತುಗಳನ್ನು ಅರಿಯುವುದಕ್ಕೆ ಮತ್ತು ಅವರ ಸಾಹಿತ್ಯ ಚರಿತ್ರೆಯನ್ನು ಕಟ್ಟುವುದಕ್ಕೆ ತುಂಬ ಅವಶ್ಯಕವಾಗಿವೆ. ಇಂಥ ಕೆಲಸವನ್ನು ಕವಿ ಪ್ರಕಾಶನವು 2014ರಿಂದ ಮಾಡುತ್ತಿದ್ದು, ಇದುವರೆಗೆ ಮೂರು ಕಾವ್ಯಸಂಗ್ರಹಗಳನ್ನು ಅದು ಹೊರತಂದಿರುವುದು ಗಮನಾರ್ಹ. ಪ್ರಸ್ತುತ ಕೃತಿಯು 2020-2022ರ ನಡುವಿನ ಕವಿತೆಗಳ ಸಂಗ್ರಹವಾಗಿದೆ. ಒಟ್ಟು 60 ಕವಯಿತ್ರಿಯರನ್ನು ಆರಂಭದಲ್ಲಿ ಗುರುತಿಸಲಾಯಿತಾದರೂ ಅಂತಿಮವಾಗಿ 56 ಕವಯಿತ್ರಿಯರ ಕವನಗಳನ್ನು ಇಲ್ಲಿ ಸೇರ್ಪಡೆಗೊಳಿಸಲಾಗಿದೆ. ಇದರಲ್ಲಿ ಸಾಧ್ಯವಾದಷ್ಟು ಸಾಮಾಜಿಕ ನ್ಯಾಯ, ಪ್ರಾದೇಶಿಕ ನ್ಯಾಯವನ್ನು ಒಳಗೊಳಿಸಲಾಗಿದೆ.

ಹಿರಿಯ ಕವಯಿತ್ರಿಯರಿಂದ ಎಳೆಯ ಕವಯಿತ್ರಿಯರ ಕವನಗಳು ಈ ಸಂಗ್ರಹದಲ್ಲಿವೆ. ಕವಿತೆಗಳ ಸಂಗ್ರಹದ ಸಂದರ್ಭದಲ್ಲಿ ಮಾತನಾಡಿಸಿದಾಗ, ಕೆಲವು ಕವಯಿತ್ರಿಯರು `ಯಾಕೋ ಈಗೀಗ ಕವಿತೆ ಬರೆಯಲೇ ಆಗುತ್ತಿಲ್ಲ’, `ಕವಿತೆ ಬರೆದರೂ ಪ್ರಕಟಣೆಗೆ ಕಳಿಸಬೇಕೆನಿಸಿಲ್ಲ’, `ಬರೆದದ್ದು ನನಗೆ ತೃಪ್ತಿ ನೀಡಿಲ್ಲ’, `ಇತ್ತೀಚೆಗೆ ಕಾವ್ಯ ಪ್ರಕಾರದಿಂದ ದೂರ ಸರಿದಿದ್ದೇನೆ’ ಮುಂತಾದ ಮಾತುಗಳನ್ನಾಡಿದರು. ಇದಕ್ಕೆ ಕೆಲವರು ಕಾವ್ಯ ಪ್ರಕಾರದಿಂದ ಬೇರೆ ಪ್ರಕಾರದತ್ತ ಹೊರಳಿರುವುದು ಕಾರಣವಾಗಿದ್ದರೆ, ಇನ್ನು ಕೆಲವೊಮ್ಮೆ ಬದುಕಿನ ಧಾವಂತದಲ್ಲಿ ಬರೆದ ಎಲ್ಲ ಕವಿತೆಗಳನ್ನೂ ಒಂದೆಡೆ ಜೋಡಿಸಲು ಸೋತಿರುವುದೂ ಕಾರಣವಾಗಿರಬಹುದು. ಆದರೆ ಕಾವ್ಯ ಕ್ಷೇತ್ರದಲ್ಲಿ ದೀರ್ಘಕಾಲ ಪರಿಶ್ರಮ ಹೊಂದಿದವರಿಗೂ ಕವಿತೆಯನ್ನು ಬರೆಯಲಾಗದ ಸ್ಥಿತಿ ಮತ್ತು ಬರೆದರೂ ಎಲ್ಲಿಗೂ ಕಳಿಸಬೇಕೆನಿಸದಿರುವ ಮನಸ್ಥಿತಿಗೆ ಕೊರೋನೋತ್ತರ ಕಾಲದ ಪ್ರಭಾವ ಇರಬಹುದೇ ಎಂಬುದು ನನ್ನ ಶಂಕೆ.

ಅದೇ ಸಂದರ್ಭದಲ್ಲಿ, ಹಲವು ಕವಯಿತ್ರಿಯರು `ನನಗೆ ಈ ಹಿಂದೆಯೂ ಸಾಕಷ್ಟು ಅವಕಾಶ ಒದಗಿದೆ. ಈ ಬಾರಿ ಹೊಸಬರಿಗೆ ಅವಕಾಶ ಕೊಡಿ’ ಅಂತಲೂ, `ನನ್ನ ಕವನ ದೀರ್ಘವಾಗಿದೆ. ಒಂದನ್ನೇ ಬಳಸಿಕೊಳ್ಳಿ’ ಎಂದೂ, `ಇತ್ತೀಚೆಗೆ ಇಂತಿಂಥವರು ಚೆನ್ನಾಗಿ ಬರೆಯುತ್ತಿದ್ದಾರೆ. ನೀವು ಅವರ ಕವನಗಳನ್ನು ಸೇರಿಸಿದ್ದೀರಾ?’ ಎಂದೂ ಸೋದರಿತ್ವದ, ಉದಾರತೆಯ, ವಿವೇಕದ ಮಾದರಿಯನ್ನು ಮುಂದಿಟ್ಟರು. ಅವಕಾಶಗಳನ್ನು ಬಾಚಿಕೊಳ್ಳುವುದೇ ಜಾಣತನ ಎಂಬ ಕಾಲದಲ್ಲಿ ಕವಯಿತ್ರಿಯರ ಈ ನಡೆ ನನಗೆ ಮಾದರಿ ಎನಿಸಿದೆ.

ಒಟ್ಟೂ ಕವಿತೆಗಳನ್ನು ಇಡಿಯಾಗಿ ಗ್ರಹಿಸಿದಾಗ ಲೇಖಕಿಯರ ಸಂವೇದನೆಗಳು ವೈವಿಧ್ಯಮಯ ವಸ್ತು-ಸಂಗತಿಗಳಿಗೆ ಸ್ಪಂದಿಸಿವೆ. ಭಾವ ಸಂಬಂಧಗಳಲ್ಲಿ ಮಹಿಳೆಗೆ ಮೊದಲು ನೆನಪಾಗುವುದು ಅಮ್ಮ, ಅವಳ ಬದುಕು. ಅನಂತರದಲ್ಲಿ ಗಂಡ, ಮಕ್ಕಳು, ಸಮಾಜ ತನ್ನ ಮೇಲೆ ಹೊರಿಸಿದ ಮತ್ತು ತಾನೂ ಒಪ್ಪಿಕೊಂಡ ಕರ್ತವ್ಯದ ಹೊರೆ, ಅದನ್ನು ಒಂದು ಹಂತದಲ್ಲಿ ಹುರುಪಿನಿಂದ ಮಾಡಿದ್ದು, ಹಿಂತಿರುಗಿ ನೋಡುವ ಅವಕಾಶ ದೊರೆತಾಗ ತನ್ನ ಬೆಲೆರಹಿತ ಶ್ರಮ, ಸಮಯದ ಅರಿವು, ಅಸ್ಮಿತೆಯ ಕುರಿತ ಹೊಸ ಎಚ್ಚರ, ಆಗ ನಿಧಾನವಾಗಿ ಬಂಧನಗಳನ್ನು ಬಿಡಿಸಿಕೊಳ್ಳಲು ತಹತಹಿಸುವ ಅವಳ ಮನಸ್ಸು, ಎದುರಾಗುವ ಹತ್ತು ಹಲವು ಸಿಕ್ಕುಗಳು ಇಲ್ಲಿನ ಕವನಗಳನ್ನು ರೂಪಿಸಿವೆ.

ಅಮ್ಮನನ್ನು ಕವಯಿತ್ರಿ ಮತ್ತು ಕವಿಗಳು ಕಂಡ ಬಗೆಯ ತೌಲನಿಕ ಅಧ್ಯಯನವು ಆಸಕ್ತಿದಾಯಕ ಆಗಬಹುದು. ಕವಯಿತ್ರಿಯರ ಸ್ಮೃತಿಯಲ್ಲಿ ಮತ್ತು ಅನುಭವದಲ್ಲಿ ಅಮ್ಮನ ಪಾತ್ರ, ಕಾರ್ಯ, ಲೋಕದೃಷ್ಟಿಗಳು ವಿಶಿಷ್ಟವಾಗಿವೆ. ಅಮ್ಮನನ್ನು ಅರ್ಥ ಮಾಡಿಕೊಳ್ಳಬೇಕೆಂದರೆ ಮೊದಲು ಅವಳು ಮನೆಯಿಂದ ಹೊರಹಾಕುವ ಕಸವನ್ನು ಅರ್ಥ ಮಾಡಿಕೊಳ್ಳಬೇಕು ಎನ್ನುತ್ತಾರೆ ಹಿರಿಯ ಕವಯಿತ್ರಿ! ಅಮ್ಮ ತನ್ನ ಮನೆಯ, ಮನದ, ಸಂಬಂಧದ ಯಾವ ವಸ್ತು ವಿಚಾರಗಳನ್ನೂ ಅವುಗಳಿಂದ ಪುನರ್ ಬಳಕೆ ಸಾಧ್ಯವಿಲ್ಲ ಎನಿಸುವವರೆಗೂ ಹೊರಹಾಕುವುದಿಲ್ಲ, ಅನಂತರವೇ ವಿವಿಧ ಲಕೋಟೆಗಳಲ್ಲಿ ಹಾಕಿ ಮನೆ, ಮನದಿಂದ ಹೊರ ಅಟ್ಟುತ್ತಾಳೆ ಎಂಬ ಚಿಂತನೆಯು ಹೊಸ ಒಳನೋಟವನ್ನು ನೀಡುತ್ತದೆ. ಇನ್ನೋರ್ವ ಕವಯಿತ್ರಿಯು ಅಮ್ಮ ಎತ್ತಿಡುವ ಎಲ್ಲವನ್ನೂ ನೆನಪಿಸಿಕೊಂಡು ಪಟ್ಟಿ ಮಾಡುತ್ತ ಬೆರಗಾಗುವುದು ಮಾತ್ರವಲ್ಲ; ಆ ವಸ್ತು-ಸಂಗತಿಗಳ ಮೂಲಕ ಅಮ್ಮ ಕಟ್ಟಿಕೊಂಡ ಸಂಬಂಧಗಳ ಭಾವ ಜಗತ್ತಿನ ಅಗಾಧತೆ ಮತ್ತು ಅನನ್ಯತೆಗಳು ಆಕೆಗೆ ಮೌಲಿಕವೆನಿಸುತ್ತವೆ. ಗಂಡ ಮರೆತದ್ದು, ಮಗ ಮುರಿದದ್ದು, ಮಗಳು ತುಳಿದದ್ದು, ಸೊಸೆ ಎಸೆದದ್ದು ಹೀಗೆ ಎಲ್ಲವನ್ನೂ ಅಮ್ಮ ಮರೆವಿನ ಹಗೇವಿನಲ್ಲಿ ಹುಗಿದಿಟ್ಟು ಕಾಯುವುದರ ಮೂಲಕ ಕಟ್ಟುವ ಸೇತುಬಂಧವು ಕವಯಿತ್ರಿಯ ಕಣ್ಣು ತೆರೆಸುತ್ತದೆ.

ಅಮ್ಮನ ಕೈಗೆ ಜಾದೂ ಕೋಲಿನ ಶಕ್ತಿ ಇರುವುದನ್ನು ಇನ್ನೊಂದು ಕವನವು ವಿಭಿನ್ನವಾಗಿ ಅರುಹಿದೆ. ಎಲ್ಲವೂ ಸಹಜ, ಸುಲಲಿತ, ಅಯಾಚಿತ, ಅದು ಇರುವಂಥದ್ದೇ ಹೀಗೆ ಎಂಬ ಜಡ್ಡುಗಟ್ಟಿದ ಮನದಿಂದ ನೋಡುವವರಿಗೆ ಅರಿವಾಗದ ಅಮ್ಮನ ಶಕ್ತಿಯು ಮಗಳ ಕಣ್ಣಿಂದ ತಪ್ಪಿಸಿಕೊಳ್ಳುವುದಿಲ್ಲ. ಅಲ್ಲಿ ಅಮ್ಮ ಮುಟ್ಟಿದ್ದೇ ಬಿಡಿ ಮೊಗ್ಗು ಮಾಲೆಯಾಗುವ, ನೀರು ಚಹವಾಗುವ, ಅಕ್ಕಿ ಅನ್ನವಾಗುವ, ಹಾಲು ಮೊಸರಾಗುವ, ಕೂದಲು ಹೆರಳಾಗುವ ಇಂಥ ನೂರಾರು ಸಂಗತಿಗಳನ್ನು ಹೇಳುವ ಮೂಲಕ, ಅದರ ಹಿಂದಿನ ಅಮ್ಮನ ನಿಗಾ, ಪರಿಶ್ರಮ, ಜಾಣ್ಮೆ, ತಾಳ್ಮೆ, ವಿವೇಕ ಮುಂತಾದವುಗಳತ್ತ ಓದುಗರ ಗಮನ ಸೆಳೆಯುತ್ತದೆ. ಅಮ್ಮನ ಜೊತೆ ಅವಳ ಜಗತ್ತಾಗಿದ್ದ ಅಡುಗೆಮನೆ ಕೂಡ ಕವಯಿತ್ರಿಯರ ಭಾವಕೋಶವನ್ನು ಸದಾ ಕಾಡುವ ಸಂಗತಿ. ಯಾವುದನ್ನೋ ಇನ್ಯಾವುದರ ಜೊತೆಗೋ ಸೇರಿಸಿ ರುಚಿಕಟ್ಟಾದ ಅಡುಗೆ ಮಾಡುವಂತೆ, ಯಾವುದು ಯಾವುದರ ಜೊತೆ ಸೂಕ್ತ ಎಂದು ಆಯ್ಕೆ ಮಾಡಿ ಬಡಿಸುವಂತೆ, ಸಂಬಂಧಗಳನ್ನೂ ಆಕೆ ಜೋಡಿಸುತ್ತಾಳೆ. ಹಿಂದಿನ ಕಿಟಕಿಗಳಿಲ್ಲದ ಸ್ಥಿತಿಯಿಂದ ಸಾವಿರಾರು ಕಿಟಿಕಿಗಳ ಅಡುಗೆಮನೆ ತಯಾರಿಸುವ, ಮಾಡಿದ ಅಡುಗೆಯನ್ನು ಎಲ್ಲರಿಗೂ ವಿತರಿಸುವ ಆಶಯ ಹೊಸ ತಲೆಮಾರಿನ ಕವಯಿತ್ರಿಯದು. ಹೀಗೆ ಅಮ್ಮ, ಅಜ್ಜಿಯರ ಬದುಕು ಮತ್ತು ಕಾಣ್ಕೆಗಳು ಕವಯಿತ್ರಿಯರ ದೃಷ್ಟಿಯನ್ನು ವಿಸ್ತಾರಗೊಳಿಸಿವೆ.

ಬಾಲ್ಯಕಾಲವನ್ನು ಇಂದು ಹಲವು ಕಾರಣಗಳಿಗೆ ಕವಯಿತ್ರಿಯರು ನೆನಪಿಸಿಕೊಂಡಿದ್ದಾರೆ. ಕರೆಂಟು ಹೋದಾಗ, ಕತ್ತಲೆ-ಬೆಳಕಿನ ಲೋಕವು ಹುಟ್ಟಿಸುತ್ತಿದ್ದ ಕಲ್ಪನಾ ಲೋಕಕ್ಕೆ ಮೊದಲ ಹೊಡೆತ ಟಾರ್ಚ್‌ನಿಂದ ಬಿದ್ದು, ಇಂದು ಯುಪಿಎಸ್ ನೆರವಿನಿಂದ ಕತ್ತಲಿಲ್ಲದ ಇರುಳನ್ನು ನಾವು ಪಡೆದರೂ ಕಲ್ಪನೆಗಳಿಲ್ಲದ ಬರಡು ರಾತ್ರಿಗಳನ್ನು ಬದಲಿಯಾಗಿ ಪಡೆದಿರುವ ಬಗ್ಗೆ ಕಳವಳ ಕವಿತೆಯದು. ಬಾಲ್ಯದಲ್ಲಿ ಹುರುಪಿನಿಂದ ಆಡುತ್ತಿದ್ದ ಕುಂಟಾಬಿಲ್ಲೆಯ ಆಟವು ಇಂದು ಆಟದ ನೆಪದಲ್ಲಿ ಹೆಣ್ಣುಮಕ್ಕಳನ್ನು ಸಾಮಾಜೀಕರಿಸುವ ರಾಜಕಾರಣವಾಗಿ ಕಾಣುತ್ತಿದೆ. ಈ ಆಟವನ್ನು ಅಂದಿನಿಂದ ದಮಯಂತಿ, ಸೀತೆ, ಸಾವಿತ್ರಿಯರಾದಿಯಾಗಿ ಎಲ್ಲರೂ ಆಡಿದವರೇ. ಇಂದು ಹೆಸರುಗಳು ಬದಲಾಗಿವೆ; ಅವಳ ಸ್ಥಿತಿ ಮಾತ್ರ ಹಾಗೇ ಉಳಿದಿದೆ ಎಂಬ ನೋಟ ಕವಿತೆಯಲ್ಲಿದೆ.

ಹೆಣ್ಣು-ಹೆಂಗಸು ಯಾವ ಜಾತಿ-ಧರ್ಮ-ವರ್ಗಕ್ಕೆ ಸೇರಿದ್ದರೂ ಅವರ ನೋವಿನ, ಇಕ್ಕಟ್ಟಿನ ನೆಲೆ ಒಂದೇ ಎಂಬುದನ್ನು `ರಾಜನ ಹೆಂಡತಿಗೂ ಸೆರಗಲ್ಲಿ ಕೆಂಡ ಕಟ್ಟಿದೆ’ ಎಂಬ ನೋಟವನ್ನು ಕವಿತೆಯೊಂದು ಹೇಳುತ್ತದೆ. ಹಾಗೂ ಅಹಂ ತೊರೆದಲ್ಲದೆ, ತಾರತಮ್ಯ ನೀಗಿಕೊಂಡಲ್ಲದೆ ಜಗದ ಉಳಿವು ಅಸಾಧ್ಯ ಎಂಬ ನಿಲುವನ್ನು ಪ್ರತಿಪಾದಿಸುತ್ತದೆ. `ಹೆಂಗಸರಾದ ನಾವು ಪುರಾಣ, ಇತಿಹಾಸಗಳಿಂದ ಏನನ್ನೂ ಕಲಿಯುವುದಿಲ್ಲವಲ್ಲ’ ಎಂದು ವಿಷಾದಿಸುವ ಕವಿತೆಯೊಂದು, ಪುರಾಣ ಪ್ರಸಿದ್ಧರ, ಇತಿಹಾಸ ಪ್ರಸಿದ್ಧರ ಸಾಧನೆಯ ಹಾದಿಯಲ್ಲಿ ಹೆಣ್ಣು ಆನುಷಂಗಿಕ ಪಾತ್ರಕ್ಕೆ ಸೀಮಿತವಾಗಿರುವ ಸತ್ಯವನ್ನು ಗ್ರಹಿಸುವಂತೆ ಒತ್ತಾಯಿಸುತ್ತದೆ. ಒಂದೇ ಸೂರಿನಡಿ ಬಹುಕಾಲವಿದ್ದಾಗ ಪರಮಸ್ನೇಹವೂ ರಣಶತ್ರುತ್ವವಾಗುವ ಸಾಧ್ಯತೆಯನ್ನು ಅರಿತು, ಅದರಿಂದ ಹೊರಬರುವ ಬಗೆಯ ಹುಡುಕಾಟ ಕೆಲವರದು. ಈ ಶತ್ರುತ್ವಕ್ಕೆ ಗಂಡ-ಹೆಂಡತಿಯ ಪಾತ್ರಗಳ ಸಿದ್ಧ ಪಡಿಯಚ್ಚು ಕಾರಣ ಎಂಬುದನ್ನು ಅರಿತುಕೊಂಡಾಗ, ಅವನ ಗಾಯಕ್ಕೆ ಅವಳು ಮತ್ತು ಅವಳ ಗಾಯಕ್ಕೆ ಅವನು ಹಸಿಮದ್ದು ಕಟ್ಟುತ್ತಾ, ಕಟ್ಟಳೆಗಳ ಕಾಯಿಲೆಯಿಂದ ಬಿಡಿಸಿಕೊಳ್ಳುವ ಕೆಲಸ ಆರಂಭವಾಗುತ್ತದೆ ಎಂಬ ತಿಳಿವು ಇನ್ನೋರ್ವ ಕವಯಿತ್ರಿಯದು. ಮಹಿಳೆಗೆ ತನ್ನ ಅಸ್ಮಿತೆಯ ಅರಿವು ಯಾಕೆ ಮತ್ತು ಎಷ್ಟು ಮುಖ್ಯ ಎಂಬ ಚರ್ಚೆ ಕೆಲವು ಕವಿತೆಗಳ ತಿರುಳಾಗಿದೆ. ಬಿಡುಗಡೆಯು ಹೆಣ್ಣಿಗೆ ಅಸಾಧ್ಯದ್ದಲ್ಲ. ಅದಕ್ಕೆ ಮೊದಲು ಆಕೆ ತನ್ನ ತಾನು ಅರಿಯಬೇಕು; ತನಗೆ ಇಷ್ಟವಿಲ್ಲದ್ದನ್ನು ನಿರಾಕರಿಸುವ ಧೈರ್ಯವನ್ನು ತಾಳಬೇಕು. ಹೆಣ್ಣು ತಾನೇ ಎಳೆದುಕೊಂಡ ಗೆರೆಗಳನ್ನೂ ಅಳಿಸಲು ಹಲವು ಸಲ ಹೋರಾಡುತ್ತಿರುತ್ತಾಳೆ. ತನಗೆ ಅನಿಸಿದ್ದು ಮತ್ತು ಹೇಳಬಯಸಿದ್ದು, ಮಾತಾಗಿ ಹೊರಬರದೆ ಗಂಟಲಲ್ಲಿ ಹುದುಗಿಹೋಗುವ ಪರಿಗೆ ಕೆಲವೊಮ್ಮೆ ಅವಳೇ ಬೆದರಿದ್ದಾಳೆ. ಸಜ್ಜನಿಕೆ, ಶಿಷ್ಟಾಚಾರ, ಮರ್ಯಾದೆಯ ಗೆರೆಗಳನ್ನು ದಾಟಿದೊಡನೆ ತಾನು ಬಹಿಷ್ಕೃತಳಾಗುವ ಭಯ ಹೊರಗಿನ ಒತ್ತಡದ್ದೂ ಹೌದು, ಸ್ವನಿಯಂತ್ರಣದ್ದೂ ಹೌದು ಎಂಬುದನ್ನು ಕವಯಿತ್ರಿಯರು ವಿಭಿನ್ನ ದನಿಗಳಲ್ಲಿ ದಾಖಲಿಸಿದ್ದಾರೆ. ಪುರುಷಪ್ರಧಾನ ವ್ಯವಸ್ಥೆಯ ಕಣ್ಣಲ್ಲಿ ತನ್ನ ಅಸ್ತಿತ್ವವನ್ನು ಗುರುತಿಸಿಕೊಂಡು, ಅದರಲ್ಲೇ ಪರದಾಡುತ್ತ, ನಿರಾಕರಣೆಯ ಭಯದಿಂದ ಕಂಗೆಡುತ್ತಿದ್ದವಳಿಗೆ, ಅದೆಲ್ಲ ವ್ಯವಸ್ಥೆಯ ರಾಜಕಾರಣವೆಂಬುದು ಅರಿವಿಗೆ ಬಂದಾಗ, ಅವಳ ಸಾಕ್ಷಾತ್ಕಾರದ ಗಳಿಗೆ ಆರಂಭವಾಗುತ್ತದೆ. ಆ ಹಂತದಲ್ಲಿ ಯಾವ ಬಿಂಬ, ಪ್ರತಿಬಿಂಬ, ಕನ್ನಡಿ, ಮತ್ತು ಅವು ಕಳವಾಗುವ ಯಾವ ಭಯವೂ ಇರುವುದಿಲ್ಲ. ಬೇಲಿಯೂ ಬಾಗಿಲೂ ಇರದೆ ಮುಕ್ತ ಬಯಲು ಅವಳದಾಗಿರುತ್ತದೆ. ಎಲ್ಲರೂ ತಮ್ಮ ಬದುಕಿನಲ್ಲಿ ಅಂಥ ತಿರುವಿಗೆ ತಿರುಗುವ ಕ್ಷಣ ಮುಖ್ಯದ್ದು ಎಂಬ ಧ್ವನಿ ಒಂದು ಕವಿತೆಯಲ್ಲಿ ಪಡಿಮೂಡಿದೆ.

ಇಂತಹ ಪೂರ್ವಗ್ರಹ, ಜಾಣ ಕುರುಡುತನ ಮತ್ತು ಮರೆವು ಇಂದಿಗೂ ವಿಮರ್ಶಕರಲ್ಲಿ ವ್ಯಾಪಕವಾಗಿರುವ ಹೊತ್ತಲ್ಲಿ ಕವಯಿತ್ರಿಯರ ಪ್ರಾತಿನಿಧಿಕ ಕವನ ಸಂಗ್ರಹಗಳಿಗೆ ಮಹತ್ವವೂ ಇದೆ; ಅವುಗಳ ಪ್ರಕಟಣೆಯ ಅಗತ್ಯವೂ ಇದೆ. ಇಂತಹ ಪ್ರಾತಿನಿಧಿಕ ಸಂಕಲನಗಳು ಮಹಿಳಾ ಸಂವೇದನೆ, ಆದ್ಯತೆ, ಕಾವ್ಯ ಪರಿಶ್ರಮಗಳನ್ನು ಅರಿಯಲು ಸಹಕಾರಿಯಾಗಿವೆ. ಆ ಮೂಲಕ ಮಹಿಳಾ ಕಾವ್ಯ ಚರಿತ್ರೆಯ ಅಧ್ಯಯನಕ್ಕೆ, ಕಾವ್ಯದ ಬೆಳವಣಿಗೆಯ ಹೆಜ್ಜೆ ಗುರುತುಗಳನ್ನು ಅರಿಯುವುದಕ್ಕೆ ಮತ್ತು ಅವರ ಸಾಹಿತ್ಯ ಚರಿತ್ರೆಯನ್ನು ಕಟ್ಟುವುದಕ್ಕೆ ತುಂಬ ಅವಶ್ಯಕವಾಗಿವೆ.

ಇಂಥ ಬಿಡುಗಡೆಯ ಸ್ತರ ಏಕಾಏಕಿ ಆಗುವುದಿಲ್ಲ: ಅದೊಂದು ಪ್ರಕ್ರಿಯೆ. ಮೀರಬೇಕು ಒಮ್ಮೆಯಾದರೂ ಎಂಬ ತುಡಿತ, ಹಂಬಲ, ಅಭೀಪ್ಸೆ ಒಳಗಿನಿಂದ ಮೊದಲು ಹುಟ್ಟಬೇಕು. ಆರಂಭದಿಂದ ಯಾರ್ಯಾರೋ ಹಾಕಿದ ಗೆರೆಗಳ ಒಳಗೆ ತನ್ನನ್ನು ಇರಿಸಿಕೊಂಡವಳಿಗೆ, ಅದೇ ಶಿಸ್ತು, ಸರಿ, ಚೆಂದ ಎನಿಸಿ, ತನ್ನ ಮುಂದೆ ಗೆರೆಗಳಿಲ್ಲದಾಗಲೂ ಮನದೊಳಗಿನ ನಿಯಂತ್ರಣದಿಂದ ತಾನೇ ಗೆರೆಗಳನ್ನು ಕಲ್ಪಿಸಿಕೊಳ್ಳುವ ಮನಸ್ಥಿತಿಯಿಂದ ತಪ್ಪಿಸಿಕೊಳ್ಳಲಾಗದ ಬಗೆಯನ್ನು ಕವಿತೆಯೊಂದು ಚಿತ್ರಿಸಿದೆ. ಮುಂದೆ ಯಾವುದೋ ಒಂದು ಗಳಿಗೆಯಲ್ಲಿ ಒಮ್ಮೆಯಾದರೂ ಹಾಕಿದ ಗೆರೆ ಮೀರುವ ಉಮೇದು ಅವಳಲ್ಲಿ ಹೊಕ್ಕಾಗ, ಗೆರೆಗಳಿಂದಾಗಿ ರಾಮಾಯಣಗಳೇ ಆಗಿರುವುದು ನೆನಪಾದರೂ ಗೆರೆ ಮೀರುವ ಹಂಬಲ ಅವಳಲ್ಲಿ ಬೆಳೆಯುವುದನ್ನು ಹಂತಹಂತವಾಗಿ ವಿವರಿಸಿದೆ. `ಸ್ವ’ದ ಎಚ್ಚರ ಮೂಡಿದಾಗ, ನೋಟವು ಸ್ಪಷ್ಟವೂ ಖಚಿತವೂ ಸೂಕ್ಷ್ಮವೂ ಅನನ್ಯವೂ ಆಗುತ್ತದೆ. ನಾವೆಂದೂ ದೊಡ್ಡದೊಡ್ಡ ಕೆಲಸ ಮಾಡಿದವರಲ್ಲ; ಸಣ್ಣಸಣ್ಣ ಸಿಕ್ಕಸಿಕ್ಕ ಕೆಲಸಗಳನ್ನು ಮಾಡಿದವರೆಂದು ಆರಂಭವಾದ ಕವಿತೆಯು ಅಂತ್ಯದಲ್ಲಿ ಹೆಣ್ಣುಮಕ್ಕಳು ಮಾಡಿದ್ದೆಲ್ಲ ನೆಲವನ್ನು ಹಸಿರಾಗಿಸಿದ, ಉಸಿರನ್ನು ಸಹಜವಾಗಿಸಿದ, ಜೀವಪರವಾದ ಕೆಲಸಗಳೇ. ಅವಳ ಜಗತ್ತಿನಲ್ಲಿ ಯಾವ ಆಯುಧಗಳಿಗೂ ಕೆಲಸಗಳೇ ಇಲ್ಲವೆಂಬುದನ್ನು ಸ್ಥಾಪಿಸಿದ ಕ್ರಮ ಅನನ್ಯವಾಗಿದೆ. ಕಲೆಗಳು ಮತ್ತು ಗಾಯಗಳ ಕುರಿತ ಕವನಗಳು ಅವನ್ನು ನೋಡುವ ದೃಷ್ಟಿಕೋನದ ಕಾರಣದಿಂದ ಗಮನ ಸೆಳೆಯುತ್ತವೆ. ಕಲೆಗಳು ಬೇಕು ಎನ್ನುವ ಕವಿತೆಯು ವಿವಿಧ ಬಗೆಯ ಕಲೆಗಳು ಬದುಕಿನಲ್ಲಿ ನಮಗೆ ಪಾಠದಂತೆ ದಕ್ಕಿದವುಗಳು. ಕಲೆಗಳು ಇರಲಿ ಹಣೆಬೊಟ್ಟಿನಂತೆ ಎನ್ನುತ್ತದೆ. ಇನ್ನೊಂದು ಕವಿತೆಯು ಗಾಯಗಳನ್ನು ವ್ರಣವಾಗಲು ಬಿಡಬಾರದು, ಅದರೆಡೆಗೆ ಕರುಣೆಯ ಪಾಲಿರಲಿ. ಏಕೆಂದರೆ ಗಾಯಗಳು ನಮ್ಮ ಆತ್ಮದ ರಾಗಗಳು ಎಂದು ತಾಳಿದ ನಿಲುವು ವಿಶಿಷ್ಟವೆನಿಸುತ್ತದೆ.

ಪ್ರೀತಿ ಪ್ರೇಮಗಳದು ಇನ್ನೊಂದು ಆಯಾಮ. ಪ್ರೀತಿಯ ವಿವಿಧ ಮಗ್ಗುಲುಗಳನ್ನು ಕಿರುಗವನಗಳಲ್ಲಿ ಕಟ್ಟಿದವರದು ಒಂದು ಬಗೆಯಾದರೆ, ತನ್ನ ಸಾಂಗತ್ಯಕ್ಕಾಗಿ ಹಂಬಲಿಸುವ ಗೆಳೆಯ ದಾಂಪತ್ಯದ ಚೌಕಟ್ಟಿನಲ್ಲಿ ಕಳೆದುಹೋಗದಿರಲಿ ಎಂಬ ಹಾರೈಕೆಯದು ಇನ್ನೊಂದು ಬಗೆ. ಅದಕ್ಕಾಗಿ ಆತನ ಪ್ರೀತಿಯ ಅಭಿವ್ಯಕ್ತಿಗಾಗಿ ಸಂದರ್ಭವನ್ನು ನಿರ್ಮಿಸುವ ಅವಳ ತಹತಹಿಕೆಯು ಲವಲವಿಕೆಯಿಂದ ಕೂಡಿದೆ. ಎಲ್ಲವೂ ಇಲ್ಲಿ ಬದಲಾಗುವುದು ನಿಜ. ಆದರೆ ಅರಳಿದ ಹೂ ಮತ್ತು ಪ್ರೀತಿ ಕೂಡಾ ಗುರುತೇ ಇಲ್ಲದಂತೆ ಬದಲಾಗುವ ಪರಿಗೆ ಓರ್ವ ಕವಯಿತ್ರಿ ಕೌತುಕ, ಗಾಬರಿ, ನೋವು ಮತ್ತು ಅಸಹಾಯಕತೆಯಿಂದ ಮುಖಾಮುಖಿಯಾಗುತ್ತಾಳೆ. ಹೇಳಲಾಗದ ಪ್ರೀತಿಯನ್ನು ಕಣ್ಣಲ್ಲಿ ಕುದಿಸಿ ಕುದಿಸಿ ಉಕ್ಕಿಸಿದ ಭಾವನೆಗಳ ಘಮಲಿಗೆ ಬೈಟು ಕಾಫಿ ಕುಡಿಯುವುದನ್ನು ಇನ್ನೊಬ್ಬಾಕೆ ಹೋಲಿಸುವುದು ವಿಶೇಷವೆನಿಸುತ್ತದೆ.

ದೇಹರಾಜಕಾರಣವನ್ನು ಅರ್ಥ ಮಾಡಿಕೊಂಡು, ಮೊದಲಿನ ಸಂಕೋಚ ಮತ್ತು ಭಯದಿಂದ ಮುಕ್ತರಾಗಿ ಇಂದು ನಿರ್ಭಿಡೆ ಮತ್ತು ವೈಚಾರಿಕ ಎಚ್ಚರದಿಂದ ಬರೆಯುವವರ ಸಂಖ್ಯೆ ಹೆಚ್ಚಾಗಿದೆ. ತನ್ನ ದೇಹವನ್ನು ಇರುವಂತೆ ಪ್ರೀತಿಸುವುದನ್ನು ಅರಿತು, ತನ್ನ ಸೃಷ್ಟಿ ಸಾಮರ್ಥ್ಯದ ಅನನ್ಯತೆಯ ಬಗ್ಗೆ ಅಭಿಮಾನ ತಾಳುವ, ಸ್ವನಿಯಂತ್ರಣವನ್ನು ಇಂದು ಕಲಿಯಬೇಕಾದದ್ದು ಗಂಡಸರು ಎಂಬುದನ್ನು ಸೂಚಿಸುವ, ಪುಟ್ಟ ಲಂಗೋಟಿಯೊಳಗೆ ತಮ್ಮ ಲೈಂಗಿಕತೆಯನ್ನು ಭದ್ರವಾಗಿ ಕಟ್ಟಿಕೊಂಡಿರುತ್ತಿದ್ದ ಹಿಂದಿನವರ ಮಾದರಿಯನ್ನು ನೆನಪಿಸುವ ಬಗೆಗಳು ಅನನ್ಯವಾಗಿವೆ. ಮುಟ್ಟಿನ ಕುರಿತ ಕವನಗಳೂ ಈ ಮಾದರಿಯವು. ಋತುಚಕ್ರದ ಮೈಲಿಗೆ ಮತ್ತು ಸ್ಪರ್ಶದ ಮೈಲಿಗೆ ಕಳೆದುಕೊಂಡಾಗಲೇ ಮನಸ್ಸು, ದೇಹ, ಸಂಬಂಧಗಳ ಬಿಗುತ್ವ ಕಳೆಯುತ್ತದೆ; ಚಿಂತನೆಯ ಕಿಲುಬು ನಾಶವಾಗುತ್ತದೆ, ಜೀವಪರವಾಗುವ ಬಗೆ ಇದು ಎಂದು ಕವನಗಳು ಸೂಚಿಸಿವೆ. ಸಾವನ್ನು ಹತ್ತಿರದಿಂದ ಕಂಡವರಿಗೆ, ಸಾವು-ಬದುಕಿನ ವಿನ್ಯಾಸ ವಿಭಿನ್ನವಾಗಿ ತೋರಬಹುದು. ಸಾವಿಗೆ ಹೆದರುವ ಬದಲು, ಅದು ಸಾಯುವವರ ಸಮಸ್ಯೆಯೇ ಅಲ್ಲ ಎನಿಸಿದರೆ ಅಚ್ಚರಿಯಿಲ್ಲ. ಸಾವಿಗಿಂತ ಬದುಕೇ ಹೆಚ್ಚು ಸಂಕೀರ್ಣ ಎಂಬ ವಾಸ್ತವದತ್ತ ಕವಿತೆಯು ನಮ್ಮನ್ನು ಒಯ್ಯುತ್ತದೆ.

ದೇವರು-ಧರ್ಮ-ನಂಬಿಕೆಗಳ ಬಗೆಗೆ ಕವಯಿತ್ರಿಯರ ನೋಟವು ಹೊಸತನದಿಂದ ಕೂಡಿದೆ. ಎಲ್ಲ ಧರ್ಮದ ಪುರೋಹಿತಶಾಹಿಯೊಳಗೂ ಇರುವ ಅವೈಚಾರಿಕತೆ, ಧರ್ಮಾಂಧತೆಯನ್ನು ಒಬ್ಬರು ಬಯಲಿಗೆಳೆದರೆ, ಇನ್ನೊಬ್ಬರು ಮೈಲುಗಟ್ಟಲೆ ನಡೆನಡೆದು ಬೊಕ್ಕೆಯೆದ್ದ ರಾಧೆಯರ ಜೊತೆ ನಡೆದ ಕೃಷ್ಣನನ್ನು, ಎಂಜಲು ತಿನಿಸಿದ ಶಬರಿಯ ಕುಟೀರದಲ್ಲಿ ವಿರಮಿಸಿದ ರಾಮನನ್ನು, ಸ್ಥಾವರಗೊಳಿಸಿದ ತನ್ನನ್ನು ಜಂಗಮಗೊಳಿಸಿಕೊಂಡ ಬುದ್ಧನನ್ನು ಆದರ್ಶವಾಗಿ ಕಂಡಿದ್ದಾರೆ. ಮಗದೊಬ್ಬರು ರಾಮ ರಹೀಮರ ಕರುಣೆಯ ಕೂಸು ತಾನು ಎಂದ ಕಬೀರನ ಸಂದೇಶವನ್ನು ಆದರ್ಶವೆಂದು ಸಾರಿದ್ದಾರೆ. ಪ್ರಕೃತಿಯ ಎದುರು ಗುಡಿ, ಚರ್ಚು, ಮಸೀದಿ ಎಲ್ಲವೂ ಇಟ್ಟಿಗೆ ಚೂರುಗಳು ಎಂಬ ವಾಸ್ತವದ ನಿಲುವು ಕವಿತೆಯದು. ಸಮಕಾಲೀನ ಸಮಾಜದ ಬಿಕ್ಕಟ್ಟುಗಳಾದ ಹಿಂಸೆ, ಕ್ರೌರ್ಯ, ಕಿತ್ತಾಟ, ಯುದ್ಧ, ರಕ್ತಪಿಪಾಸುತನ, ಲೈಂಗಿಕ ದೌರ್ಜನ್ಯ ಇವೆಲ್ಲವುಗಳಿಗೆ ಕವಯಿತ್ರಿಯರು ಬುದ್ಧ, ಬಸವ, ಅಂಬೇಡ್ಕರ್, ಗಾಂಧಿಯವರ ಬದುಕು, ಆದರ್ಶ, ಸಾಧನೆಗಳಲ್ಲಿ ಪರಿಹಾರವನ್ನು ಕಂಡಿದ್ದಾರೆ. ಅಂಬೇಡ್ಕರ್ ಅವರನ್ನು ಅಪಮಾನಿಸಿದ, ತಿರಸ್ಕರಿಸಿದ, ಹೊರಗಟ್ಟಿದ ಸಮುದಾಯದ ಕೂಸಾದ ತಾನು ಅಂಬೇಡ್ಕರ್‌ರಿಂದಲೇ ಅಪಾರ ಪ್ರೀತಿ, ವ್ಯಕ್ತಿಘನತೆ, ಸಮಾನತೆ ಮತ್ತು ಸಹಜೀವನದ ಮೌಲ್ಯಗಳನ್ನು ಅರಿತಿದ್ದಾಗಿ ಒಬ್ಬರು ಹೇಳಿದರೆ, ಇನ್ನೊಬ್ಬರು ನಮಗಿಂದು ಕಾಲಕಾಲಕ್ಕೂ ಬದುಕು ಕಾಯ್ವ ಬುದ್ಧರು ಬೇಕು, ಅವರು ರೂಕ್ಷರ ಮೈದಡವಿ, `ಪ್ರೀತಿ ತಂದಿರಾ ಭಿಕ್ಷಕೆ’ ಎಂದು ನಿತ್ಯ ಎಚ್ಚರಿಸುವ ತುರ್ತಿದೆ ಎಂದಿದ್ದಾರೆ. ಗೆಳೆಯನಿಂದ ಬುದ್ಧನಲ್ಲಿ ಹೆಣ್ತನದ ಗುಣವನ್ನು ಗ್ರಹಿಸಿದ ಕವಯಿತ್ರಿ, `ಹೆಣ್ಣು ಬುದ್ಧನಾಗಬಲ್ಲಳೇ? ಅಥವಾ ಬುದ್ಧನಾಗುವುದೆಂದರೆ ಹೆಣ್ಣಾಗುವುದೇ?’ ಎಂಬ ಹೊಸ ಪ್ರಶ್ನೆಯನ್ನು ಎತ್ತಿರುವುದು ವಿಶೇಷವೆನಿಸುತ್ತದೆ. ಯುದ್ಧ ಸಂಸ್ಕೃತಿಯನ್ನು ಬಲವಾಗಿ ವಿರೋಧಿಸುವ ಕವಯಿತ್ರಿಯರು, ನಾವು ಸುಮ್ಮನೆ ಕೃಷಿ ಮಾಡೋಣ, ಕಲ್ಲುಮುಳ್ಳುಗಳ ಆರಿಸಿ ತಿಪ್ಪೆಗೆ ಸುರಿದು, ನೆಲವ ಹಸನು ಮಾಡೋಣ, ಅಲ್ಲಿ ಪ್ರೀತಿಯ ಬೀಜಗಳ ಬಿತ್ತಿ ಬೆಳೆಯೋಣ ಎಂದು ಕರೆ ಕೊಡುತ್ತಾರೆ. ಬಾಂಬು ಸಂಸ್ಕೃತಿಯನ್ನು ಬಲವಾಗಿ ವಿರೋಧಿಸುವ ಕವಿತೆ, ಅವರಿಗೆ ಸಾಧ್ಯವಿದ್ದರೆ ಹೃದಯಗಳನ್ನು ಬೆಸೆವ ಬಾಂಬು ಹಾಕಲಿ ಎಂಬ ಸವಾಲು ಹಾಕುವುದು ಕಂಡುಬರುತ್ತದೆ.

ಲೈಂಗಿಕ ಅಲ್ಪಸಂಖ್ಯಾತರೂ ಇತ್ತೀಚಿನ ವರ್ಷಗಳಲ್ಲಿ ಕನ್ನಡ ಕಾವ್ಯ ಕ್ಷೇತ್ರವನ್ನು ಪ್ರವೇಶಿಸಿದ್ದಾರೆ. ತಮ್ಮ ಬಗೆಗೆ ಜನರಿಗಿರುವ ಪೂರ್ವಾಗ್ರಹಗಳನ್ನು ಟೀಕಿಸುತ್ತ, ತನ್ನ ಸಮುದಾಯವೂ ಅಸ್ಮಿತೆ ಹಾಗೂ ಸಾಂಸ್ಕೃತಿಕ ಅನನ್ಯತೆ ಹೊಂದಿರುವುದನ್ನು ಒಬ್ಬ ಕವಯಿತ್ರಿ ಪ್ರತಿಪಾದಿಸಿರುವುದು ಕಂಡುಬರುತ್ತದೆ. ವಿಶೇಷವೆಂದರೆ ಲೈಂಗಿಕ ಅಲ್ಪಸಂಖ್ಯಾತರ ಮತ್ತು ಗೃಹಿಣಿಯ ನೋವನ್ನು ಕವಯಿತ್ರಿಯೊಬ್ಬರು ತುಲನಾತ್ಮಕವಾಗಿ ಪರಿಶೀಲಿಸಿದ್ದಾರೆ. ಅಲ್ಲಿ ತಾಳಿ ಕಟ್ಟಿ ನಡೆದರೆ, ಇಲ್ಲಿ ತಾಳಿ ಕಟ್ಟದೆ ನಡೆಯುತ್ತದೆ. ಆಕೆ ಮರ್ಯಾದೆಗೆ ಅಂಜಿ, ಈಕೆ ಹಸಿವಿಗೆ ಸೋತು ಸಮಾಜದ ತುಳಿತಕ್ಕೆ ಒಳಗಾಗಿದ್ದು, ಇಬ್ಬರ ಮೇಲಿನ ದೌರ್ಜನ್ಯಗಳ ಹಿಂದೆ ಪುರುಷಪ್ರಧಾನ ಮನಸ್ಥಿತಿ ಕೆಲಸ ಮಾಡಿದೆ ಎಂಬುದನ್ನು ಕವನವಾಗಿಸಿದ್ದು ಗಮನ ಸೆಳೆಯುತ್ತದೆ.

2020-22ರ ಈ ಮೂರು ವರ್ಷದ ಅವಧಿಯು ಸಾಮಾಜಿಕ, ಆರ್ಥಿಕ, ಆರೋಗ್ಯ ಮತ್ತು ಸಾಂಸ್ಕೃತಿಕ ವಲಯಗಳಲ್ಲಿ ಹಲವು ಏರಿಳಿತಗಳನ್ನು ಕಂಡ ಕಾಲ. ಕನ್ನಡದ ಕವಯಿತ್ರಿಯರು ತಮ್ಮ ಸುತ್ತಲಿನ ವಿದ್ಯಮಾನಗಳಿಗೆ ಪ್ರತಿಕ್ರಿಯೆಗಳನ್ನು ಮತ್ತು ಪ್ರತಿರೋಧಗಳನ್ನು ತೋರುವಲ್ಲಿ ಔದಾಸೀನ್ಯವನ್ನು ತೋರಿಲ್ಲವೆಂಬುದು ನನಗೆ ಮುಖ್ಯವೆನಿಸಿದೆ. ಕೊರೋನ ಎಂಬ ಜಾಗತಿಕ ಸಾಂಕ್ರಾಮಿಕ ಪಿಡುಗಿನ ದುಷ್ಪರಿಣಾಮಗಳು, ರೈತ ವಿರೋಧೀ ಕಾನೂನುಗಳ ಜಾರಿ, ರಾಷ್ಟ್ರೀಯತೆಯ ಹೆಸರಿನಲ್ಲಿ ವೈಚಾರಿಕ ಮತ್ತು ಎಡಪಂಥೀಯ ಚಿಂತಕರು, ಪತ್ರಕರ್ತರು ಮತ್ತು ಸಾಮಾಜಿಕ ಕಾರ್ಯಕರ್ತರ ಬಂಧನ, ವೈಚಾರಿಕತೆಯ ಬದಲಿಗೆ ಅವೈಚಾರಿಕತೆಯನ್ನು ಬಿತ್ತಿದ್ದು, ಕೋಮುವಾದವನ್ನು ಇನ್ನಿಲ್ಲವೆನ್ನುವಂತೆ ಪ್ರೇರೇಪಿಸಿ, ಉತ್ಪಾದಿಸಿ ಸಾಮಾಜಿಕ ಸ್ವಾಸ್ಥ್ಯವನ್ನು ಕದಡಿದ್ದು, ಎನ್‌ಆರ್‌ಸಿ ಹೆಸರಿನಲ್ಲಿ ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯ ನಡೆಸಿದ್ದು, ಮೀ ಟೂ ಚಳವಳಿ, ನೋಟು ರದ್ದತಿ ಇವೇ ಮುಂತಾದ ಹತ್ತು ಹಲವು ವಿದ್ಯಮಾನಗಳಿಗೆ ಕವಯಿತ್ರಿಯರ ಪ್ರತಿಕ್ರಿಯೆಗಳು ಅಧ್ಯಯನಯೋಗ್ಯವೆನಿಸಿವೆ. ಇದಕ್ಕೆ ಕಾರಣರಾದ ವ್ಯಕ್ತಿ, ಶಕ್ತಿ, ಸರಕಾರ, ಅದರ ಮುಂಚೂಣಿ ನಾಯಕರು ಎಲ್ಲರೂ ಇಲ್ಲಿ ವಿಮರ್ಶೆಗೆ ಮತ್ತು ಟೀಕೆಗೆ ಒಳಪಟ್ಟಿದ್ದಾರೆ.

ಈ ಮೂರು ವರ್ಷಗಳಲ್ಲಿ ಬಾಲೆಯರಿಂದ ವೃದ್ಧೆಯವರೆಗೆ ನಡೆದ ಗುಂಪು ಅತ್ಯಾಚಾರ ಮತ್ತು ಕೊಲೆಗಳು, ದಲಿತ ಹೆಣ್ಣುಮಕ್ಕಳು ಮತ್ತು ಲೈಂಗಿಕ ಕಾರ್ಯಕರ್ತೆಯರ ಮೇಲೆ ನಡೆದ ಲೈಂಗಿಕ ದೌರ್ಜನ್ಯಗಳಿಗೆ ಸಾಮಾಜಿಕರ ತಣ್ಣಗಿನ ಪ್ರತಿಕ್ರಿಯೆಗಳಿಗೆ ಹಲವು ಕವನಗಳು ಆಕ್ರೋಶದ ದನಿ ನೀಡಿವೆ. ಹೆಣ್ಣು ಜೀವವು ಕೇವಲ ಭೋಗದ ನೆಲೆಯಾಗಿ ಬಳಕೆಯಾಗುವುದರ ಕುರಿತ ಆಕ್ರೋಶ, ಅಸಹಾಯಕ ಮತ್ತು ಮುಗ್ಧ ಎಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಹಾಗೂ ಕೊಲೆಗಳು ಕಟುವಿಮರ್ಶೆಗೆ ಒಳಗಾಗಿವೆ. ಸುತ್ತಲಿನ ದುಃಖ, ದೌರ್ಜನ್ಯಗಳಿಗೆ ದನಿಯಾಗಲು ಸೋಲುತ್ತಿದೆ ಕವಿತೆ; ಅಪಮಾನದಲಿ ತಲೆ ತಗ್ಗಿಸಿದೆ. ಎಲ್ಲ ಬಗೆಯ ದೌರ್ಜನ್ಯಕ್ಕೆ ರೋದಿಸಿ, ಕವಿತೆಯು ಕವಿತೆಯಾಗಲು ನಾಚುತ್ತಿದೆ, ಆತ್ಮಹತ್ಯೆಗೆ ತಾವು ಅರಸಿದೆ ಕವಿತೆ ಎಂಬಲ್ಲಿ ಕವಯಿತ್ರಿಯ ಕಳವಳ ಹರಳುಗಟ್ಟಿದೆ. ಮಹಿಳೆಯರ ಮೇಲಿನ ದೌರ್ಜನ್ಯಗಳ ಅತಿರೇಕ ಎಲ್ಲಿಯವರೆಗೆ ಮುಟ್ಟಿದೆಯೆಂದರೆ, ಗೋರಿಯಲ್ಲಿನ ಮಹಿಳೆಯ ಶವವನ್ನೂ ಮೂರು ದಿನಗಳ ಕಾಲ ಕಾಯಬೇಕಾದ ದುಸ್ಥಿತಿ ಬಂದಿದೆ ಎಂಬ ವಿಷಾದ ಮಡುಗಟ್ಟಿದೆ. ಲೈಂಗಿಕ ಕಾರ್ಯಕರ್ತೆಯರಿಗೂ ಘನತೆಯ ಬದುಕಿದೆ. ಅವರು ಈ ವೃತ್ತಿಗೆ ಬರಲು ಕಾರಣರಾದವರನ್ನು ಬಿಟ್ಟು ಅವರನ್ನೇ ದೂಷಿಸುವ ಆಷಾಢಭೂತಿತನವನ್ನು ಕವಿತೆಗಳು ಪ್ರಶ್ನಿಸಿವೆ. ಆಹಾರ, ವಸ್ತç, ಬಣ್ಣ, ಜಾತಿ, ದೇಹ, ಅಧಿಕಾರ ಹೀಗೆ ಹಲವು ರಾಜಕಾರಣಗಳನ್ನು ಗುರುತಿಸಿ, ಅವುಗಳ ಹಿಂದಿನ ಮರ್ಮವನ್ನು ಪ್ರಶ್ನಿಸುವ ಮನಸ್ಥಿತಿ ಹಲವು ಕವನಗಳಲ್ಲಿ ಕಂಡುಬರುತ್ತದೆ.

ಇಲ್ಲಿನ ಕವನಗಳನ್ನು ಇಡಿಯಾಗಿ ಗಮನಿಸಿದಾಗ ಕವಯಿತ್ರಿಯರ ರಚನೆಗಳ ವೈವಿಧ್ಯ ಗಮನಾರ್ಹವಾಗಿದೆ. ಈ ಸಂಗ್ರಹದಲ್ಲಿ ಗಝಲ್ ರೂಪದ, ಮುಕ್ತಕ ರೂಪದ, ಕಿರುಗವನ ರಚನೆಗಳಿವೆ. ಜನಪದ ಧಾಟಿಯ, ಪ್ರಾಸ ಮತ್ತು ಲಯಬದ್ಧ ಕವಿತೆಗಳಿವೆ. ನೀಳ್ಗವನಗಳು ಗಮನ ಸೆಳೆಯುತ್ತವೆ. ಭಾಷೆಯ ನೆಲೆಯಲ್ಲೂ ಹೊಸತನ ಕಾಣಬಹುದು. ಪ್ರಾದೇಶಿಕ ಭಾಷೆ, ಗ್ರಾಮೀಣ ಭಾಷೆಗಳಿಗೂ ಅವಕಾಶ ದೊರೆತಿದೆ. ಇಪ್ಪತ್ತೊಂದನೆಯ ಶತಮಾನದ ಮೂರನೆಯ ದಶಕಕ್ಕೆ ಕಾಲಿಟ್ಟ ಸಂದರ್ಭದಲ್ಲಿ ಎಲ್ಲರ ವಿಚಾರಗಳು ಏಕರೂಪದಲ್ಲಿ ಇಲ್ಲ, ಅದು ಸಾಧ್ಯವೂ ಇಲ್ಲ. ಯಾವತ್ತೂ ಹಲವು ದಶಕ ಮತ್ತು ಶತಮಾನಗಳ ಹಿಂದಿನ ಆಲೋಚನೆಗಳನ್ನು ಹೊಂದಿದ ಬರಹಗಾರರು ಜೊತೆಜೊತೆಗೆ ಬರೆಯುತ್ತಿರುತ್ತಾರೆ. ಅವರ ಭಾವನೆಗಳು, ಮೌಲ್ಯಗಳು, ದೃಷ್ಟಿಕೋನಗಳು ನಂಬಿಕೆಗಳಲ್ಲಿ ಅಂತರ ಸಹಜ. ಹೀಗಾಗಿ ಕವಿತೆಗಳ ಓದು ಮಹಿಳಾ ಚಿಂತನೆಗಳ ಹಲವು ಪದರಗಳನ್ನು ಅನಾವರಣ ಮಾಡುವುದು ಸಹಜವಾಗಿದೆ. ಅದಕ್ಕೆ ಈ ಸಂಕಲನವೂ ಸಾಕ್ಷಿಯಾಗಿದೆ.

(ಕೃತಿ: ಕನ್ನಡ ಮಹಿಳಾ ಕಾವ್ಯ, ಸಂಪಾದಕರು: ಪ್ರೊ. ಸಬಿಹಾ ಭೂಮಿಗೌಡ, ಪ್ರಕಾಶಕರು: ಕವಿ ಪ್ರಕಾಶನ, ಕವಲಕ್ಕಿ, ಬೆಲೆ: 250/ )