ಯಾವುದೇ ಒಬ್ಬ ಕಲಾವಿದ ಕಲಾಕೃತಿಗಳನ್ನು ತನ್ನ ಸ್ವಂತ ಅಭಿರುಚಿಯಂತೆ ಮಾಡುವುದನ್ನು ಕಲಿಯುವ ಮೊದಲು ನಕಲು ಮಾಡುವುದರಿಂದ ಪ್ರಾರಂಭಿಸುವಂತೆ ಇವರು ಕೂಡ ಮೊದಲು ನಕಲು ಮಾಡಿಯೇ ಪ್ರಾರಂಭಿಸಿದ್ದು. ನೋಡಿದ್ದನ್ನು ಹಾಗೆ ಚಿತ್ರಿಸಲು ಪ್ರಯತ್ನಿಸುವುದು, ಚಂದಮಾಮ ಪತ್ರಿಕೆಯ ಚಿತ್ರಗಳನ್ನು ಚಿತ್ರಿಸುವುದು, ಪತ್ರಿಕೆಗಳಲ್ಲಿ ಬರುವ ಗಾಂಧಿ, ಶ್ರವಣಬೆಳಗೊಳದ ಬಾಹುಬಲಿ ಮೊದಲಾದ ಚಿತ್ರಗಳನ್ನು ನೋಡಿ ನಕಲು ಮಾಡಿ ಚಿತ್ರಿಸುವುದರ ಮೂಲಕ ನಡೆದಬಂದರು. ಕೆ. ವಿ. ಸುಬ್ರಹ್ಮಣ್ಯಂರವರಿಗೆ ಈ ಆಸಕ್ತಿ 7-8ನೇ ತರಗತಿಗಳಲ್ಲಿ ಶುರುವಾಗಿತ್ತು.
ಕಲಾ ವಿಮರ್ಶಕ ಕೆ.ವಿ. ಸುಬ್ರಮಣ್ಯಂ ಅವರ ಕುರಿತು ಹರಿಶ್ರೀ ವೈ.ಜೆ. ಬರೆದ “ಚಿತ್ರಾಕ್ಷರ” ಕೃತಿಯ ಕೆಲವು ಪುಟಗಳು ನಿಮ್ಮ ಓದಿಗೆ

ಕೆ. ವಿ. ಸುಬ್ರಹ್ಮಣ್ಯಂರವರ ಪ್ರಕಾರ ಚಿತ್ರಕಲೆಯೂ ಕೂಡ ಅವರ ಭಾವನೆಗಳನ್ನು ಅಥವಾ ಬದುಕಿನ ಗ್ರಹಿಕೆಗಳನ್ನು ಅಥವಾ ಆ ಮೂಲದ ನವರಸಗಳನ್ನು ವ್ಯಕ್ತಪಡಿಸುವ ಒಂದು ಸಾಧನ. ಅವರಿಗೆ ಹಿರಿಯರನ್ನು ಮತ್ತೆ ಮತ್ತೆ ಓದುವುದು, ಓಡಾಡುವುದು, ಐತಿಹಾಸಿಕ ಸ್ಥಳಗಳನ್ನು ನೋಡುವುದು, ಬರೆಯುವುದು ಹಾಗೂ ಚಿತ್ರಿಸುವುದು ಎಲ್ಲವೂ ಇಷ್ಟ.

(ಕೆ ವಿ ಸುಬ್ರಹ್ಮಣ್ಯಂ)

ಒಬ್ಬ ವ್ಯಕ್ತಿ ಅವನ ಭಾವನೆಯನ್ನು ಅವನಿಗೆ ಇಷ್ಟವಾದ ರೀತಿಯಲ್ಲಿ ವ್ಯಕ್ತಪಡಿಸಲು ಪ್ರಯತ್ನಿಸುತ್ತಾನೆ. ಉದಾಹರಣೆಗೆ ಸಾಹಿತ್ಯ, ಸಂಗೀತ, ಚಿತ್ರಕಲೆ, ಶಿಲ್ಪಕಲೆ ಇತ್ಯಾದಿ. ಲಲಿತಕಲೆ ಎಂದರೆ ಚಿತ್ರ, ಶಿಲ್ಪ, ಪ್ರಿಂಟ್ ಮತ್ತು ಚಲನಚಿತ್ರವನ್ನೂ ಒಳಗೊಂಡಿದೆ. ಕೆ ವಿ ಎಸ್ ರವರ ಅಭಿಪ್ರಾಯದ ಪ್ರಕಾರ ಕೆಲವು ನಿರ್ದಿಷ್ಟ ವಿಷಯಗಳನ್ನು ಸಮಾಜಕ್ಕೆ ತಲುಪಿಸಲು ದೃಶ್ಯಕಲೆ ನಿಖರವಾದ ಮಾರ್ಗವೆನ್ನುತ್ತಾರೆ. ಆ ಅಂಶ ಅಥವಾ ವಿಷಯಗಳನ್ನು ಬೇರೆ ಮಾರ್ಗಗಳಲ್ಲಿ, ಎಂದರೆ ಸಾಹಿತ್ಯ, ಭಾಷಣ, ಕಾವ್ಯ ಅಥವಾ ಕಥೆಯಲ್ಲಿ ವ್ಯಕ್ತಪಡಿಸುವುದು ಅಷ್ಟು ಪ್ರಭಾವಶಾಲಿಯಲ್ಲ; ಅವುಗಳು ಚಿತ್ರಕಲೆಯ ಮೂಲಕವೇ ಹೆಚ್ಚು ಪ್ರಭಾವಶಾಲಿ.

ಕೆ ವಿ ಸುಬ್ರಹ್ಮಣ್ಯಂರವರ ಚಿತ್ರಕಲಾಕೃತಿಗಳ ಸಂಖ್ಯೆಯ ಬಗ್ಗೆ ಹೇಳಬೇಕೆಂದರೆ ‘ನೂರಾರು’ ಅಷ್ಟೇ. ಯಾವುದೇ ಒಬ್ಬ ಕಲಾವಿದ ಕಲಾಕೃತಿಗಳನ್ನು ತನ್ನ ಸ್ವಂತ ಅಭಿರುಚಿಯಂತೆ ಮಾಡುವುದನ್ನು ಕಲಿಯುವ ಮೊದಲು ನಕಲು ಮಾಡುವುದರಿಂದ ಪ್ರಾರಂಭಿಸುವಂತೆ ಇವರು ಕೂಡ ಮೊದಲು ನಕಲು ಮಾಡಿಯೇ ಪ್ರಾರಂಭಿಸಿದ್ದು. ನೋಡಿದ್ದನ್ನು ಹಾಗೆ ಚಿತ್ರಿಸಲು ಪ್ರಯತ್ನಿಸುವುದು, ಚಂದಮಾಮ ಪತ್ರಿಕೆಯ ಚಿತ್ರಗಳನ್ನು ಚಿತ್ರಿಸುವುದು, ಪತ್ರಿಕೆಗಳಲ್ಲಿ ಬರುವ ಗಾಂಧಿ, ಶ್ರವಣಬೆಳಗೊಳದ ಬಾಹುಬಲಿ ಮೊದಲಾದ ಚಿತ್ರಗಳನ್ನು ನೋಡಿ ನಕಲು ಮಾಡಿ ಚಿತ್ರಿಸುವುದರ ಮೂಲಕ ನಡೆದಬಂದರು. ಕೆ. ವಿ. ಸುಬ್ರಹ್ಮಣ್ಯಂರವರಿಗೆ ಈ ಆಸಕ್ತಿ 7-8ನೇ ತರಗತಿಗಳಲ್ಲಿ ಶುರುವಾಗಿತ್ತು. ಅತ್ಯುತ್ತಮ ಕಲಾವಿದರಾದ ರವಿವರ್ಮರವರ ಚಿತ್ರಗಳನ್ನು ಕೂಡ ಇವರು ನಕಲು ಮಾಡುತ್ತಿದ್ದರು. ಅದು ಹೇಗಿರುತ್ತಿತ್ತು ಎಂಬುದು ಬೇರೆ ವಿಷಯ. ಕೆಲವು ಚೆನ್ನಾಗಿರುತ್ತಿದ್ದವು ಕೆಲವು ಚೆನ್ನಾಗಿರುತ್ತಿರಲಿಲ್ಲ ಎನ್ನುತ್ತಾರೆ.

ಹೀಗಾಗಿ ಕೆ ವಿ ಸುಬ್ರಹ್ಮಣ್ಯಂರವರು ಮೂಲತಹ ಕಲಾವಿದರು. ಹಾಗೆ ನೋಡಿದರೆ ಎಲ್ಲರೂ ಒಂದು ರೀತಿಯ ಕಲಾವಿದರೇ. ಕಾಲಾನುಸಾರವಾಗಿ ಬರಹಕ್ಕು ಇವರು ಹೆಚ್ಚು ಒತ್ತು ಕೊಟ್ಟರು. ಇವರ ಪ್ರಕಾರ ಬರಹಕ್ಕೂ ಮತ್ತು ಚಿತ್ರಕಲೆಗೂ ಬಹಳ ಅಂತರ, ವ್ಯತ್ಯಾಸ; ಉದ್ದೇಶಗಳೂ ಬೇರೆ ಬೇರೆಯಾಗಿವೆ. ಬರಹವನ್ನು ಇವರು ಪೂರ್ಣವಾಗಿ ತಮ್ಮ ಆತ್ಮ ಸಂತೋಷಕ್ಕಾಗಿ ಬರೆಯುತ್ತಿಲ್ಲ. ಆದರೆ ಚಿತ್ರಕಲೆಯನ್ನು ಮಾತ್ರ ತಮ್ಮ ಸಂತೋಷಕ್ಕಾಗಿ, ತೃಪ್ತಿಗಾಗಿ ಇವರು ಕಂಡದ್ದನ್ನು ಬೇರೆಯವರಿಗೂ ತೋರಿಸುವದಕ್ಕಾಗಿಯೂ ಬರೆಯುತ್ತಾರೆ. ಈ ಮುಖಾಂತರ ನಾವು ಸುತ್ತ ಕಾಣುವ ಹಲವು ಸಂಕೀರ್ಣ ವಿಷಯಗಳು, ಸಾಮಾಜಿಕ ಆತಂಕಗಳು ನವರಸಗಳಂತಹ ವೈವಿಧ್ಯಮಯ, ವೈರುಧ್ಯಮಯ ಅಂಶಗಳ ಭಾವನೆಗಳನ್ನು ಅಭಿವ್ಯಕ್ತ ವ್ಯಕ್ತಪಡಿಸಬಹುದೆಂಬ ಅಭಿಪ್ರಾಯ ಇವರದು. ನಮ್ಮ ಪೂರ್ವ ಸೂರಿ ದೊಡ್ಡ ಕಲಾವಿದರಲ್ಲಿ ಒಬ್ಬರಾದ ವೆಂಕಟಪ್ಪನವರು ಇವರ ಮೇಲೆ ಪ್ರಾರಂಭದಲ್ಲಿ ಪ್ರಭಾವ ಬೀರಿದವರು. ‘ಹೇಗೆ ಅವರು ಊಟಿಯ ಚಿತ್ರಗಳನ್ನು ಅಷ್ಟು ನೈಜವಾಗಿ ಚಿತ್ರಿಸುತ್ತಿದ್ದರು ಎನ್ನುವುದು ಒಂದು ಅಚ್ಚರಿ, ಆಗ. ಈಗ ಆ ಕೆಲಸವನ್ನು ಕ್ಯಾಮೆರಾದಲ್ಲಿ ಫೋಟೋ ಹಿಡಿಯುವ ಮೂಲಕ ಕ್ಷಣಾರ್ಧದಲ್ಲಿ ಗ್ರಹಿಸಬಹುದು. ಆದರೆ ವೆಂಕಟಪ್ಪನವರು ಪ್ರಕೃತಿಯ ನಡುವೆ ತಪಸ್ಸು ಮಾಡಿದ ಹಾಗೆ ಅದನ್ನು ಅನುಭಾವಿಸಿ-ಧ್ಯಾನಿಸಿ ಆ ದೃಶ್ಯಗಳನ್ನು ಚಿತ್ರಿಸುತ್ತಿದ್ದರು ಎಂಬುದು ಒಂದು ಅದ್ಭುತ ಸಂಗತಿ’ ಎನ್ನುತ್ತಾರೆ ಕೆ ವಿ ಎಸ್ ರವರು. ‘ಹಾಗೆ ಮಾಡಲು ಊಟಿಗೆ ಹೋಗಿಯೇ ಚಿತ್ರಿಸಲು ಪ್ರಯತ್ನಿಸಿದರೂ ಕೂಡ ಸಾಧ್ಯವಾಗಲಿಲ್ಲ ಬಿಡಿ’ ಎನ್ನುತ್ತಾರೆ.

(ಕೆ ವಿ ಸುಬ್ರಹ್ಮಣ್ಯಂ ಅವರ ಒಂದು ಕಲಾಕೃತಿ)

ಆನಂತರ ಇವರು ಚಿತ್ರಿಸಿದ ಭೂದೃಶ್ಯಗಳು ಇವರದೇ ಆದ ಒಂದು ವಿಶಿಷ್ಟ ರೀತಿಯಲ್ಲಿ ಬಂದವು. ಉದಾಹರಣೆಗೆ ಜೋಗ್‌ಫಾಲ್ಸ್ ಮತ್ತು ವೆಂಕಟಪ್ಪನವರ ಊಟಿಯ ಚಿತ್ರದಿಂದ ನಕಲು ಮಾಡಿದ ಒಂದು ಭೂದೃಶ್ಯ ಚಿತ್ರ. ಅವೆಲ್ಲ ಅಷ್ಟು ವಿಶೇಷವಾಗಿ ಬರದಿದ್ದರೂ ಅವುಗಳನ್ನು ಬಿಡಿಸಬೇಕೆಂಬ ಒಂದು ಹುಚ್ಚು. ಒಂದು ಚಿತ್ರದಲ್ಲಿ ರಸ್ತೆ, ರಸ್ತೆಯ ಮೇಲಿನ ಹುಲ್ಲು, ಹುಲ್ಲುಗರಿಯಲ್ಲಿನ ಹಸಿರು-ಹಳದಿ ಬಣ್ಣಗಳ ಸೂಕ್ಷ್ಮತೆಯನ್ನು ಗಮನಿಸಿದಂತೆಲ್ಲಾ ಆಸಕ್ತಿ ಹೆಚ್ಚಾಗುತ್ತಿತ್ತು. ಆದರೂ ಇವರು ಹೇಳಬೇಕಾದ ವಿಷಯಗಳು ಹಲವು ಇವೆ. ಅವುಗಳನ್ನು ಬರೆದಾಗ ಅಷ್ಟು ಪ್ರಭಾವಶಾಲಿಯಾಗಿ ಬರೆಯಲು ಸಾಧ್ಯವಾಗದಿರಬಹುದು. ಆದ ಕಾರಣ ಇವರ ಅನೇಕ ಬರಹಗಳು ಬೇರೆಯವರ ಕಲಾಕೃತಿಗಳ ಬಗ್ಗೆ ಅಭಿಪ್ರಾಯ ತಿಳಿಸಲು, ಕಲಾ ಇತಿಹಾಸದಲ್ಲಿ ಇಂದಿನ ಕಲಾ ಕೃತಿಗಳು ಹೇಗೆ ವಿಭಿನ್ನ ಎಂದು ಹೇಳುವ ಹಲವು ಒಳನೋಟ, ಉದ್ದೇಶಗಳನ್ನು ಒಳಗೊಂಡಿರುತ್ತವೆ. ಆದರೆ ಇವರ ಬಹುತೇಕ ಎಲ್ಲಾ ಕಲಾಕೃತಿಗಳನ್ನು ಇವರ ಅನುಭವಗಳನ್ನು ಹೇಳಲೆಂದೆ ಚಿತ್ರಿಸಿದ್ದಾರೆ.

ಕೆ. ವಿ. ಸುಬ್ರಹ್ಮಣ್ಯಂ ರವರ ಪ್ರಕಾರ ವಿಮರ್ಶೆ ಬಗ್ಗೆ ಹೇಳುವುದಾದರೆ ವಿಮರ್ಶೆಗೆ ಕೆಲವು ನಿಯಮಗಳು, ಮಾನದಂಡಗಳು ಇವೆ ಎಂದು ಕೆಲವರು ಅಂದುಕೊಂಡಿದ್ದಾರೆ; ಹೌದು ಇವೆ, ಆದರೆ ಅದು ಎಲ್ಲರಿಗೂ, ಎಲ್ಲ ಕಾಲಕ್ಕೂ ಅಲ್ಲ. ಕೆವಿಎಸ್ ರವರಿಗಿಂತ ಮೊದಲು ಬಂದವರೆಲ್ಲ ಅವರಿಗಿಂತ ಮೊದಲು ಬಂದವರನ್ನು ಅನುಸರಿಸಿದ್ದರು. ನಂತರ ಕೆ ವಿ ಎಸ್ ರವರು ಇವರಿಗಿಂತ ಮೊದಲು ಬಂದವರನ್ನು ಅನುಸರಿಸಲು ಪ್ರಯತ್ನ ಪಟ್ಟರು. ಆದರೆ ಇವರಿಗೆ ಅಂತಹ ಅತ್ಯುತ್ತಮ ಮಾದರಿಗಳೇನು ಇರಲಿಲ್ಲ. ನಮ್ಮಲ್ಲಿ ದೃಶ್ಯಕಲಾ ವಿಮರ್ಶೆಯು ಕಳೆದ ಸುಮಾರು 100 ವರ್ಷಗಳಲ್ಲಿ ಬೆಳೆದು ಬಂದಿದೆ. ಭಾರತೀಯ ಸಂಸ್ಕೃತಿಯಲ್ಲಿ ಕಲೆಗೆ ವಿಮರ್ಶೆಯ ಅಗತ್ಯ ಇಲ್ಲ. ಅಂದರೆ ಕಲೆ ಎಂದರೆ ಚೆನ್ನಾಗಿದೆ ಎನ್ನುವುದು: ಚೆನ್ನಾಗಿಲ್ಲ ಎನ್ನುವುದಲ್ಲ.

(ಹರಿಶ್ರೀ ವೈ.ಜೆ.)

ಕಲೆಯೆಂದರೆ ಸುಂದರವಾದದ್ದು, ಅದೊಂದು ದೇವರ ಸೃಷ್ಟಿ, ಹಾಗಾಗಿ ಅದು ದೈವಿಕವಾದದ್ದು, ಚೆನ್ನಾಗಿಯೇ ಇರುತ್ತದೆ ಎಂಬ ಭಾವನೆ. ಅದು ಚೆನ್ನಾಗಿಲ್ಲ ಎಂದು ವಿಮರ್ಶೆ ಮಾಡುವ ಪರಂಪರೆ ನಮ್ಮಲ್ಲಿರಲಿಲ್ಲ. ಅದು ಇದ್ದರೂ ಬೇರೆ ರೀತಿಯಲ್ಲಿ ಅಕ್ಷರ ಸಾಹಿತ್ಯದಲ್ಲಿ ಇರಬಹುದು, ಕಳೆದ ನೂರು ನೂರೈವತ್ತು ವರ್ಷಗಳಲ್ಲಿ ಪಶ್ಚಿಮದ ಪ್ರಭಾವದಿಂದ ವಿಮರ್ಶೆಯು ನಮ್ಮ ದೇಶದ ಕಲೆ ಬರಹಗಳಲ್ಲಿ ಕಾಣಿಸಿಕೊಂಡಿತು. ವಿಖ್ಯಾತ ಪಶ್ಚಿಮ ಮತ್ತು ಯೂರೋಪಿನ ಹಲವರು ದೃಶ್ಯಕಲಾ ಇತಿಹಾಸಕಾರರಂತೆ ನಮ್ಮಲ್ಲಿನ ಅನೇಕ ವಿಮರ್ಶಕರು ಪತ್ರಿಕೆಗಳಲ್ಲಿ ಬರೆದಿರುವವರೇ ಆಗಿದ್ದಾರೆ.

ಬಿ. ವಿ. ಕೆ ಶಾಸ್ತ್ರಿ, ಎಸ್ ಎನ್ ಚಂದ್ರಶೇಖರ್, ಕೆ. ವಿ. ಸುಬ್ರಹ್ಮಣ್ಯಂ ಹೀಗೆ ಅನೇಕರು ಪತ್ರಿಕೆಗಳಿಗೆ ಬರೆದವರು ಎಂಬುದು ಆಶ್ಚರ್ಯಕರವಾದ ಸುದ್ದಿ. ಪತ್ರಿಕೆಗಳಲ್ಲಿಯೂ ಬಹಳ ಗಂಭೀರವಾದ ವಿಮರ್ಶೆಯು ಬರುವುದು ಸಾಧ್ಯ ಎಂದು ಇವರೆಲ್ಲ ತೋರಿಸಿದ್ದಾರೆ. ಕೆ ವಿ ಎಸ್ ರವರು ಒಂದು ಕಲಾ ಪ್ರದರ್ಶನಕ್ಕೆ ಹೋದರೆ “ಕಲಾ ಇತಿಹಾಸದ ದೃಷ್ಟಿಯಿಂದ ನಿನ್ನೆ ಇವತ್ತು ಮತ್ತು ನಾಳೆಗಳ ಮೂಲಕ ಆ ಕಲಾಕೃತಿಗಳನ್ನು ನೋಡುತ್ತಾರೆ”. ‘ಇಡಿಯಾಗಿ ಬರಹ ಎನ್ನುವುದು ತಮ್ಮೊಬ್ಬರದೆ ಅಲ್ಲ, ಆದರೆ ಕಲಾಕೃತಿಗಳು ಖಂಡಿತ ನನ್ನದು ಮಾತ್ರ’ ಎಂದು ಹೇಳುತ್ತಾರೆ..

ಉದಾಹರಣೆಗೆ ‘ಜೋಗ್ ಫಾಲ್ಸ್’ ಅನ್ನು ನೋಡಿದರೆ ಐದಾರು ಕೃತಿಗಳಿವೆ. ನಾವು ಬಹಳ ಬೇಸಿಕ್ಸ್ ಎಂದು ಏನು ಹೇಳುತ್ತೇವೆ ಹಾಗೆಯೇ ಭೂದೃಶ್ಯಗಳಿಗೆ ಕೆಲವು ನಿಯಮಗಳಿವೆ. ಆದರೆ ಬಹಳಷ್ಟು ಕಡೆ ಇವರು ನಿಯಮಗಳನ್ನು ಮುರಿಯುತ್ತಾ ಹೋದರು. ಅಂದರೆ “ನಿಯಮಗಳನ್ನು ಮುರಿಯುತ್ತಲೇ ಹೋಗಬೇಕು ಎಂದು ಹೇಳುತ್ತಿಲ್ಲ” ಮತ್ತು “ಬೇಕು ಎಂದು ಮುರಿಯುವುದಲ್ಲ. ಅಗತ್ಯವಿದ್ದಾಗ ಮಾತ್ರ ಮುರಿಯಬೇಕು, ನಮ್ಮದೇ ಆದ ದಾರಿಗಳನ್ನು ಕಂಡುಕೊಳ್ಳಬೇಕು”. ಉದಾಹರಣೆಗೆ ತೈಲವರ್ಣ, ಜಲ ವರ್ಣ, ಗ್ರಾಫಿಕ್ಸ್ ಹೀಗೆ ಎಲ್ಲಾ ಮಾಧ್ಯಮ ಪ್ರಭೇದಗಳಿಗೂ ಒಂದಷ್ಟು ನಿಯಮಗಳಿವೆ. ಆದರೆ ಅವುಗಳನ್ನು ಬೇರೆ ರೀತಿ ಉಪಯೋಗಿಸಲು ಪ್ರಯತ್ನಿಸಿದ್ದಾರೆ. ಹಾಗೆಯೇ ಇವರು ನಿಗದಿತ ಪರಂಪರೆಯನ್ನು ಬಿಟ್ಟು ಹೊಸ ಪ್ರಯತ್ನಗಳನ್ನು ಮಾಡಿದ್ದಾರೆ. ಇನ್ನೊಮ್ಮೆ ಇವರ ‘ಜೋಗ ಫಾಲ್ಸ್’ ಕಲಾಕೃತಿಗಳನ್ನು ಇಲ್ಲಿ ನೆನೆಯುವಾಗಲೂ ಅಷ್ಟೇ. ಕಾಗದದ ಮೇಲೆ ತೈಲ ವರ್ಣಗಳನ್ನು ಬಳಸುತ್ತಾರೆ. ಅದು ಎಷ್ಟು ದಿನ ಇರುತ್ತದೆ ಎಂಬ ಲೆಕ್ಕಾಚಾರವಿಲ್ಲ. ಅಲ್ಲಿ ಹೋಗಿ ಕಂಡಿದ್ದ ಸಮಯದಲ್ಲಿ ಚಿತ್ರಿಸಿದ ‘ಸಂದರ್ಭ’ ಚಿತ್ರಗಳಷ್ಟೇ. ಕ್ಯಾಮೆರಾಗಳನ್ನು ಕೊಂಡುಕೊಳ್ಳಲು ಸಾಧ್ಯವಾಗದಿದ್ದ ಆ ಸಮಯದಲ್ಲಿ “ಸೌಂದರ್ಯವನ್ನು ದಾಖಲಿಸಬೇಕು, ಮನಸ್ಸಿನಲ್ಲಿ ಇಟ್ಟುಕೊಳ್ಳಬೇಕು, ನಾಲ್ಕು ಜನರಿಗೂ ತೋರಿಸಬೇಕು” ಎಂಬ ಉದ್ದೇಶವಷ್ಟೇ ಆಗಿರುವಂತಿದೆ.

(ಕೃತಿ: ಚಿತ್ರಾಕ್ಷರ (ಕೆ.ವಿ. ಸುಬ್ರಮಣ್ಯಂ ಅವರ ಚಿತ್ರ ಮತ್ತ ಸಾಹಿತ್ಯಗಳ ಪಕ್ಷಿನೋಟ), ಲೇಖಕರು: ಹರಿಶ್ರೀ ವೈ.ಜೆ., ಪ್ರಕಾಶಕರು: ಕನ್ನಡ ಪ್ರಕಾಶನ, ಬೆಲೆ: 150/-)