ಗ್ರೀನ್ ಕಾರ್ಡ್ ಪ್ರಕ್ರಿಯೆ ನಡೆಯುವಾಗ ಸದಾ ಒತ್ತಡದಲ್ಲಿ ಇರಬೇಕಾಗುತ್ತದೆ, ಎಲ್ಲಿ ಅದು ತಿರಸ್ಕಾರ ಆಗುತ್ತದೋ ಎನ್ನುವ ಭಯ ಸದಾ ಕಾಡುತ್ತದೆ. ಎಷ್ಟೋ ಸಲ ಸ್ವದೇಶಕ್ಕೆ ಹಿಂತಿರುಗುವ ಎನ್ನುವ ಅನಿಸಿಕೆ ಮೂಡುತ್ತದೆ, ಅದೊಂದು ಅನಿಸಿಕೆ ಅಷ್ಟೆ. ಅಮೇರಿಕಾದ ಜೀವನ ಶೈಲಿ, ಉತ್ತಮ ಜೀವನ, ತಮ್ಮ ಪಾಡಿಗೆ ತಾವು ಜೀವಿಸಲು ಇರುವ ಪ್ರಾಮುಖ್ಯತೆ, ಸರ್ಕಾರಿ ಕಚೇರಿಗಳಲ್ಲಿ ಇರದ ಲಂಚದ ಹಾವಳಿ, ಗುಣಮಟ್ಟದ ಆಹಾರ, ಎಲ್ಲಕಿಂತ ಹೆಚ್ಚಾಗಿ ತವರಲ್ಲಿ ಸಿಗುವ ಗೌರವ ಮುಂತಾದುವುಗಳನ್ನು ಬಿಡಲು ಮನಸಾಗದೆ ಅಮೆರಿಕೆಯಲ್ಲಿಯೇ ಕೊನೆಯವರೆಗೂ ಜೀವನ ಸಾಗುವುದು.
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ”ದಲ್ಲಿ ಅಮೆರಿಕದಲ್ಲಿ ಗ್ರೀನ್‌ ಕಾರ್ಡ್‌ ಪಡೆಯಲು ನಡೆಸುವ ಪರದಾಟಗಳ ಕುರಿತ ಬರಹ ನಿಮ್ಮ ಓದಿಗೆ

ಆಫೀಸಿನಿಂದ ಮನೆಗೆ ಹೋಗುತ್ತಿರುವಾಗ ರಘುವಿನ ಫೋನ್ ಬಂತು. ಅವನ ಧ್ವನಿಯಲ್ಲಿ ತುಂಬಾ ಸಂತೋಷ ಇತ್ತು. ಅವನ ಧ್ವನಿ ಕೇಳಿಯೇ ಏನೋ ಖುಷಿಯ ಸಂಗತಿ ನಡೆದಿದೆ ಅನಿಸಿತು. ಹಾಗಾಗಿ ಏನು ವಿಷಯ ಅಂತ ಕೇಳಿಯೂ ಬಿಟ್ಟೆ. ಅವನು ಖುಷಿಯಿಂದ “ನನ್ನ ಗ್ರೀನ್ ಕಾರ್ಡ್ ಬಂತು” ಎಂದ. “ಕಂಗ್ರಾಟ್ಸ್ ತುಂಬಾ ಸಂತೋಷದ ವಿಷಯ” ಎಂದೆ. ಗ್ರೀನ್ ಕಾರ್ಡ್ ಎಂದರೆ ಅಮೇರಿಕಾದಲ್ಲಿ ಶಾಶ್ವತವಾಗಿ ನೆಲೆಸಲು ಸಿಗುವ ಪರವಾನಿಗೆ.

ಅಮೇರಿಕಾದಲ್ಲಿ ಗ್ರೀನ್ ಕಾರ್ಡ್ ಬರುವುದು ಭಾರತೀಯರಿಗೆ ಮತ್ತು ಚೀನಿಯರಿಗೆ ಒಂದು ದೊಡ್ಡ ಸಾಧನೆ, ಏಕೆಂದರೆ ಈ ಎರಡು ದೇಶಗಳ ಜನಸಂಖ್ಯೆ ಹೆಚ್ಚು. ಗ್ರೀನ್ ಕಾರ್ಡ್ ಸಿಗಲು ವರ್ಷಗಳು ಕಾಯಬೇಕು. ಅದರಲ್ಲಿ ಹಲವಾರು ಹಂತಗಳು. ತುಂಬಾ ಸುಲಭವಾದ ವಿಧಾನವೆಂದರೆ ಅಮೇರಿಕಾದ ನಾಗರೀಕರನ್ನು ಮದುವೆಯಾಗುವುದು. ಇದು ಎಲ್ಲರಿಗೂ ಸಾಧ್ಯವಿಲ್ಲದ್ದರಿಂದ, ಅಮೆರಿಕೆಗೆ ಕೆಲಸದ ವೀಸಾದ ಮೇಲೆ ಬರುವವರ ಗ್ರೀನ್ ಕಾರ್ಡ್ ಬವಣೆ ತಿಳಿದುಕೊಳ್ಳೋಣ.

ಎಚ್೧ಬಿ ವೀಸಾದ ಮೇಲೆ ಬರುವವರು ಆರು ವರುಷ ಅಮೆರಿಕಾದಲ್ಲಿ ನೆಲೆಸಬಹುದು. ಅಷ್ಟರ ಒಳಗಾಗಿ, ಕಂಪನಿಗಳು ಗ್ರೀನ್ ಕಾರ್ಡ್ಗೆ ಅರ್ಜಿ ಹಾಕಬೇಕು. ಇದರ ಮೊದಲ ಹಂತ ಲೇಬರ್, ಎಂದರೆ ನಮ್ಮ ಕಂಪನಿಯಲ್ಲಿ ಕೆಲಸ ಖಾಲಿಯಿದೆ ಅದಕ್ಕೆ ಅಮೆರಿಕಾದಲ್ಲಿ ಸೂಕ್ತವಾದವರು ಯಾರೂ ಸಿಗುತ್ತಿಲ್ಲ ಆದ್ದರಿಂದ ನಾವು ಹೊರಗಡೆ ದೇಶದಿಂದ ನಿಪುಣರನ್ನು ಕರೆಸಿಕೊಳ್ಳಲು ಅನುಮತಿ. ಇದಾದ ನಂತರ ಐ೧೪೦, ಇದಾದ ಮೇಲೆ ಐ೪೮೫. ಐ೪೮೫ ಗೆ ಅರ್ಜಿಹಾಕಲು ತಮ್ಮ ತಮ್ಮ ಆದ್ಯತೆಗೆ ಕಾಯಬೇಕು. ಅದು ಲೇಬರ್ಗೆ ಅರ್ಜಿ ಹಾಕಿದ ದಿನಾಂಕ. ಇದು ತೆರವುಗೊಳ್ಳಲು ಹಲವು ವರುಷಗಳು ತೆಗೆದುಕೊಳ್ಳತ್ತದೆ. ಇದರಲ್ಲಿ ಬೇರೆ ಬೇರೆ ಬಗೆಯ ಲೇಬರ್ ಅರ್ಜಿಗಳು ಇರುವುದರಿಂದ ಇದು ಸುಮಾರು ಮೂರು ವರುಷದಿಂದ ಇಪ್ಪತ್ತು ವರುಷಗಳವರೆಗೆ ಹಿಡಿಯಬಹುದು. ಐ೧೪೦ ಗೆ ಅನುಮೋದನೆ ಸಿಕ್ಕಮೇಲೆ ಒಂದೊಂದು ವರುಷದ ವರೆಗೆ ಎಚ್೧ಬಿ ವೀಸಾಗೆ ಅನುಮೋದನೆ ಸಿಗುತ್ತದೆ. ಅದು ಗ್ರೀನ್ ಕಾರ್ಡ್ ಬರುವವರೆಗೂ ನಡೆಯುತ್ತದೆ. ಗ್ರೀನ್ ಕಾರ್ಡ್ ಬಂದಮೇಲೆ ಯಾವ ಕಂಪೆನಿಯಲ್ಲಾದರೂ ಕೆಲಸಮಾಡಬಹದು, ದೇಶದ ಯಾವ ರಾಜ್ಯದಲ್ಲಾದರೂ ಕೆಲಸಮಾಡಬಹುದು. ಗ್ರೀನ್ ಕಾರ್ಡ್ ಬಂದು ಸುಮಾರು ಐದು ವರುಷಕ್ಕೆ ಅಮೇರಿಕಾದ ನಾಗರೀಕರಾಗುವ ಅವಕಾಶವಿರುತ್ತದೆ.

ಗ್ರೀನ್ ಕಾರ್ಡ್ ನಡೆಯುವ ಕಾಲದಲ್ಲಿ ಎಚ್೧ಬಿ ವೀಸಾ ಒಂದು ವರುಷಕ್ಕೆ ನವೀರಕರಣ ಹೊಂದುವುದರಿಂದ, ಭಾರತಕ್ಕೆ ಬರಲು ಕಷ್ಟವಾಗುತ್ತದೆ, ಏಕೆಂದರೆ ಮತ್ತೆ ಹಿಂತಿರುಗಿ ಅಮೆರಿಕೆಗೆ ಹೋಗಲು ವೀಸಾ ಸ್ಟಾಂಪಿಂಗ್ ಬೇಕಾಗುತ್ತದೆ. ಅದಕ್ಕೆ ಚೆನ್ನೈ, ಹೈದರಾಬಾದ್, ಮುಂಬೈ ಮುಂತಾದ ಅಮೇರಿಕಾದ ರಾಯಭಾರಿ ಕಚೇರಿಗಳಿಗೆ ಹೋಗಬೇಕಾಗುತ್ತದೆ, ಹಾಗೆ ಹೋದಾಗ ವೀಸಾ ತಿರಸ್ಕರಿಸಲ್ಪಡುವ ಅವಕಾಶವಿರುತ್ತದೆ. ಎಷ್ಟೋಜನ ವೀಸಾ ತಿರಸ್ಕರಿಸಲ್ಪಡುವ ಭಯಕ್ಕೆ ಭಾರತಕ್ಕೆ ಹೋಗುವುದಿಲ್ಲ. ಇದು ವರುಷಗಳೇ ಆಗಬಹುದು. ಇದರಿಂದ ಭಾರತದ ತಮ್ಮ ಮನೆಗಳಲ್ಲಿ ನಡೆಯುವ ಯಾವ ಶುಭಕಾರ್ಯದಲ್ಲಿಯೂ ಭಾಗವಹಿಸಲು ಆಗದೆ ಸಂಕಟ ಪಡುತ್ತಾರೆ. ನನಗೆ ಗೊತ್ತಿರುವ ಸ್ನೇಹಿತರೊಬ್ಬರು ಆರು ವರುಷ ಕಾದು, ಇನ್ನು ಕಾಯಲಾರದೆ ಭಾರತಕ್ಕೆ ಬಂದು, ಮತ್ತೆ ಅಮೇರಿಕಾಗೆ ಹಿಂತಿರುಗಲು ವೀಸಾ ಸಿಗದೆ ಭಾರತದಲ್ಲೇ ಉಳಿಯುವಂತಾಯಿತು. ಗ್ರೀನ್ ಕಾರ್ಡ್ ಇದ್ದರೆ ಅಮೆರಿಕಾಗೆ ಬರಲು ವೀಸಾ ಬೇಕಾಗಿರುವುದಿಲ್ಲ.

ಈಗ ರಘುವಿನ ವಿಷಯಕ್ಕೆ ಬರೋಣ. ರಘು ಮೊದಲು ಅಮೆರಿಕೆಗೆ ಎಚ್೧ಬಿ ವೀಸಾದ ಮೇಲೆ ಒಂದು ಕಂಪನಿಗೆ ಕೆಲಸಕ್ಕೆ ಬರುತ್ತಾನೆ. ಆ ಕಂಪನಿ ಅವನಿಗೆ ಗ್ರೀನ್ ಕಾರ್ಡ್ ಅರ್ಜಿಯನ್ನು ಮೊದಲಿಗೆ ಹಾಕಿರುವುದಿಲ್ಲ. ಮೊದಲಿಗೆ ಹಾಕಿ, ಗ್ರೀನ್ ಕಾರ್ಡ್ ಬೇಗ ಬಂದರೆ ಬೇರೆ ಕಂಪನಿಗೆ ಜಿಗಿಯುವುದು ಖಚಿತ ಎಂದು ಕಂಪನಿಯವರಿಗೆ ತಿಳಿದಿರುತ್ತದೆ. ಎಚ್೧ಬಿ ವೀಸಾ ಆರು ವರುಷಗಳವರೆಗೆ ಇರುವುದರಿಂದ ಗ್ರೀನ್ ಕಾರ್ಡ್ ಪ್ರಕ್ರಿಯೆಯನ್ನು ಆರನೇ ವರುಷದಲ್ಲಿ ಪ್ರಾರಂಭಿಸುತ್ತಾರೆ, ಹೀಗೆ ಮಾಡುವುದರಿಂದ ಹೆಚ್ಚಿನ ವರುಷಗಳು ಒಬ್ಬರನ್ನು ತಮ್ಮ ಕಂಪನಿಯಲ್ಲೇ ಕೆಲಸದಲ್ಲಿ ದುಡಿಸಬಹುದು ಎನ್ನುವುದು ಕಂಪನಿಗಳ ಯೋಜನೆ. ಎಚ್೧ಬಿ ವೀಸಾದ ಮೇಲೆ ಕೆಲಸ ಮಾಡುವವರು ಆ ಒಂದು ಕಂಪನಿಗೆ ಮಾತ್ರ ಕೆಲಸಮಾಡಬಹದು, ಬೇರೆ ಕಂಪನಿಗೆ ಹೋಗಬೇಕಾದರೆ ವೀಸಾವನ್ನು ವರ್ಗಾವಣೆ ಮಾಡಿಸಿಕೊಳ್ಳಬೇಕು, ಎಲ್ಲಾ ಕಂಪನಿಗಳೂ ವೀಸಾ ಮಾಡಲು ತಯಾರಿರುವುದಿಲ್ಲ. ಅದಲ್ಲದೆ ವೀಸಾ ವರ್ಗಾವಣೆಯ ವಿಷಯ ಪ್ರಸ್ತುತ ಕೆಲಸ ಮಾಡುತ್ತಿರುವ ಕಂಪನಿಗೆ ತಿಳಿಯಬಾರದು, ಹಾಗೇನಾದರೂ ತಿಳಿದಲ್ಲಿ ಅವರು ವೀಸಾವನ್ನು ರದ್ದುಗೊಳಿಸಬಹದು, ವೀಸಾ ರದ್ದುಗೊಂಡಲ್ಲಿ ಸ್ವದೇಶಕ್ಕೆ ಹಿಂತಿರುಗಬೇಕಾಗುತ್ತದೆ. ಒಬ್ಬರೇ ಇದ್ದಲ್ಲಿ ಪರವಾಗಿಲ್ಲ, ಮದುವೆಯಾಗಿ ಮಕ್ಕಳು ಶಾಲೆಯಲ್ಲಿದ್ದರೆ, ಮನೆ ಕೊಂಡುಕೊಂಡಿದ್ದರೆ, ಎಲ್ಲವನ್ನು ಇದ್ದಕ್ಕಿದ್ದಂತೆ ನಿಲ್ಲಿಸಿ ಹೊರಡುವುದು ಕಷ್ಟ. ಆದ್ದರಿಂದ ವೀಸಾ ವರ್ಗಾವಣೆ ಪ್ರಯತ್ನಕ್ಕೆ ಯಾರೂ ಬೇಗ ಸಿದ್ಧರಾಗುವುದಿಲ್ಲ.

ರಘುವಿನ ಲೇಬರ್‌ಗೆ ಅನುಮೋದನೆ ಸಿಕ್ಕಿ, ಐ೧೪೦ಗೂ ಅನುಮೋದನೆ ಸಿಕ್ಕ ಮೇಲೆ, ತಾನು ಕೆಲಸಮಾಡುತ್ತಿದ್ದ ಕಂಪನಿ ಮುಚ್ಚಿಹೋಯಿತು. ಮತ್ತೊಂದು ಕಂಪನಿಗೆ ಹೋದಮೇಲೆ ಅಲ್ಲಿ ಮೊದಲಿಂದ ಗ್ರೀನ್ ಕಾರ್ಡ್ ಪ್ರಕ್ರಿಯೆಗೆ ಚಾಲನೆ ನೀಡಬೇಕಾಗುತ್ತದೆ. ಗ್ರೀನ್ ಕಾರ್ಡ್ ಬರಲು ಮತ್ತೆ ಹಲವಾರು ವರುಷಗಳು ಮುಂದಕ್ಕೆ ಹೋಗುತ್ತದೆ. ಇಲ್ಲವೆಂದರೆ ರಿಸ್ಕ್ ತೆಗೆದುಕೊಳ್ಳಬಹದು. ರಘುವಿಗೆ ಕೆಲಸ ಕೊಡಲು ಒಂದು ಕಂಪನಿ ಒಪ್ಪಿಕೊಂಡರೂ ಗ್ರೀನ್ ಕಾರ್ಡ್ ಪ್ರಕ್ರಿಯೆಯನ್ನು ಮೊದಲಿಂದಲೂ ಪ್ರಾರಂಭಿಸಲು ಹೊಸ ಕಂಪನಿ ಒಪ್ಪಿಕೊಳ್ಳಲಿಲ್ಲ, ಆದದ್ದು ಆಗಲಿ ಎಂದು ರಘು ಹೊಸ ಕಂಪನಿಯಲ್ಲಿ ಕೆಲಸಕ್ಕೆ ಸೇರಿಕೊಂಡ. ಗ್ರೀನ್ ಕಾರ್ಡ್ ಪ್ರಕ್ರಿಯೆಯ ಎಲ್ಲ ಹಂತಗಳಲ್ಲೂ ಪ್ರಶ್ನೆಗಳು ಎದುರಾದವು. ವಕೀಲರು ಯಾವುದಕ್ಕೂ ಸಿದ್ಧರಾಗಿರಲು ಹೇಳಿದ್ದರು. ಒಂದುವೇಳೆ ಗ್ರೀನ್ ಕಾರ್ಡ್‌ಗೆ ಅನುಮೋದನೆ ಸಿಗದಿದ್ದರೆ, ಮತ್ತೆ ಮೊದಲಿಂದ ಪ್ರಕ್ರಿಯೆ ಪ್ರಾರಂಭಿಸಲು ಅವನಿಗೆ ಅವಕಾಶವಿರಲಿಲ್ಲ. ಆದ್ದರಿಂದ ತುಂಬಾ ಭಯಗೊಂಡಿದ್ದ. ಕಾರು, ಮನೆ ತೆಗೆದುಕೊಂಡಿದ್ದ, ಎಲ್ಲವನ್ನು ಇದ್ದಕಿದ್ದಂತೆ ಮಾರಿದರೆ ತುಂಬಾ ಹಣ ಕಳೆದುಕೊಳ್ಳುವ ಸಂದರ್ಭ ಎದುರಾಗುತ್ತಿತ್ತು. ಆದ್ದರಿಂದಲೇ ಗ್ರೀನ್ ಕಾರ್ಡ್ ಸಿಕ್ಕಿರುವುದಕ್ಕೆ ತುಂಬಾ ಖುಷಿಯಾಗಿದ್ದ.

ಗ್ರೀನ್ ಕಾರ್ಡ್ ಪ್ರಕ್ರಿಯೆ ನಡೆಯುವಾಗ ಸದಾ ಒತ್ತಡದಲ್ಲಿ ಇರಬೇಕಾಗುತ್ತದೆ, ಎಲ್ಲಿ ಅದು ತಿರಸ್ಕಾರ ಆಗುತ್ತದೋ ಎನ್ನುವ ಭಯ ಸದಾ ಕಾಡುತ್ತದೆ. ಎಷ್ಟೋ ಸಲ ಸ್ವದೇಶಕ್ಕೆ ಹಿಂತಿರುಗುವ ಎನ್ನುವ ಅನಿಸಿಕೆ ಮೂಡುತ್ತದೆ, ಅದೊಂದು ಅನಿಸಿಕೆ ಅಷ್ಟೆ. ಒಂದು ವರ್ತುಲದಲ್ಲಿ ಅದಾಗಲೇ ಸಿಲುಕಿಕೊಂಡಾಗಿರುತ್ತದೆ. ಅಮೇರಿಕಾದ ಜೀವನ ಶೈಲಿ, ಉತ್ತಮ ಜೀವನ, ತಮ್ಮ ಪಾಡಿಗೆ ತಾವು ಜೀವಿಸಲು ಇರುವ ಪ್ರಾಮುಖ್ಯತೆ, ಸರ್ಕಾರಿ ಕಚೇರಿಗಳಲ್ಲಿ ಇರದ ಲಂಚದ ಹಾವಳಿ, ಗುಣಮಟ್ಟದ ಆಹಾರ, ಎಲ್ಲಕಿಂತ ಹೆಚ್ಚಾಗಿ ತವರಲ್ಲಿ ಸಿಗುವ ಗೌರವ ಮುಂತಾದುವುಗಳನ್ನು ಬಿಡಲು ಮನಸಾಗದೆ ಅಮೆರಿಕೆಯಲ್ಲಿಯೇ ಕೊನೆಯವರೆಗೂ ಜೀವನ ಸಾಗುವುದು. ಒಂದು ಸಲ ಗ್ರೀನ್ ಕಾರ್ಡ್ ಸಿಕ್ಕು ಕಷ್ಟಪಡುವ ಮನವಿದ್ದರೆ, ಜೀವನ ಸುಖಮಯ. ಅಮೆರಿಕೆಯ ಯಾವ ರಾಜ್ಯದಲ್ಲಿಯಾದರೂ ಕೆಲಸ ಸಿಕ್ಕೇ ಸಿಗುತ್ತದೆ.

ಅಮೇರಿಕಾದ ವೀಸಾ, ಗ್ರೀನ್ ಕಾರ್ಡ್ ಬವಣೆಗಳ ಬಗ್ಗೆ, ವೀಸಾದಮೇಲೆ ಕೆಲಸಮಾಡುವವರ ಮೇಲೆ ಭಾರತೀಯರೇ ದಬ್ಬಾಳಿಕೆ ಮಾಡುವುದನ್ನು ನನ್ನ “ಇಮಿಗ್ರೇಷನ್ ದಿ ಪೈನ್ (ವಲಸೆ ಒಂದು ನೋವು)” ಎಂಬ ನನ್ನ ಆಂಗ್ಲ ನಾಟಕದಲ್ಲಿ ವಿವರಿಸಿದ್ದೇನೆ. ಅದು ಅಮೇರಿಕಾದಲ್ಲಿ ಪ್ರಕಟಣೆಗೊಂಡಿದೆ.