ಮಹಾನ್ ಬಲಶಾಲಿ ಹಾಗೂ ಅಪ್ರತಿಮ ಸುಂದರಿಯ ಪ್ರೇಮ ಊರ ಕಣ್ಣಿಗೆ ದೈವಿಕವಾಗಿ ಕಾಣಿಸುತ್ತದೆ. ವಿವಾಹಬಾಹಿರ ಸಂಬಂಧ ಊರಕಣ್ಣಿಗೆ ಸ್ವೀಕಾರಾರ್ಹ ಅಚ್ಚರಿಯಾಗಿ ಕಾಣಿಸಲಿಕ್ಕೆ, ಪ್ರೇಮಿಗಳ ವ್ಯಕ್ತಿತ್ವವಷ್ಟೇ ಕಾರಣವಲ್ಲ; ಮಲ್ಲನ ಕೇಡಿಗತನದ ಬಗ್ಗೆ ಊರಿಗಿರುವ ಅಸಹನೆಯೂ ಕಾರಣ. ಆ ಅಸಹನೆ ಅಸಹಾಯಕತೆಯಾಗಿರುವಾಗ, ತಮ್ಮ ಸಿಟ್ಟನ್ನು ಕೊಂಚವಾದರೂ ಸಮಾಧಾನಗೊಳಿಸುವ ರೂಪದಲ್ಲಿ ಪ್ರೇಮಪ್ರಕರಣ ಅವರಿಗೆ ಒದಗಿಬಂದಿದೆ. ಈ ಪ್ರೇಮಪ್ರಕರಣ ಜಾತೀಯತೆಯನ್ನು ವಿರೋಧಿಸುವ ಪ್ರತಿಭಟನೆಯ ರೂಪದಂತೆಯೂ ಕಾದಂಬರಿ ಚಿತ್ರಿಸುತ್ತದೆ.
ಆಲೂರು ದೊಡ್ಡನಿಂಗಪ್ಪ ಕಾದಂಬರಿ “ಚಂದ್ರನ ಚೂರು” ಗೆ ರಘುನಾಥ ಚ.ಹ. ಮುನ್ನುಡಿ

ಶತಮಾನಗಳ ಚರಿತ್ರೆಯುಳ್ಳ ಕತ್ತಲ ಮೊತ್ತದ ನಡುವೆಯೂ ಪುಟ್ಟ ಹಣತೆಯೊಂದು ತನ್ನ ಪಾಡಿಗೆ ತಾನು ಬೆಳಕು ಚೆಲ್ಲುವಂತೆ, ಲೇಖಕನೊಬ್ಬ ತನ್ನ ಸುತ್ತಮುತ್ತಲೂ ಜೀವವಿರೋಧದ ಸಂಗತಿಗಳೇ ತುಂಬಿಕೊಂಡಿದ್ದರೂ, ಆರೋಗ್ಯಕರ ಸಮಾಜದ ಕನಸನ್ನು ಅನವರತ ಕಾಣುತ್ತಲೇ ಇರುತ್ತಾನೆ. ಮತ್ತೆ ಮತ್ತೆ ಸ್ವಚ್ಛಗೊಳಿಸುವುದು ಹಾಗೂ ಗಾಳಿಬೆಳಕು ಆಡುವಂತೆ ನೋಡಿಕೊಳ್ಳುವ ಮೂಲಕ ಬಾವಿಯ ನೀರನ್ನು ಕುಡಿಯಲು ಯೋಗ್ಯವಾಗಿರುವಂತೆ ನೋಡಿಕೊಳ್ಳಬೇಕಾಗುತ್ತದೆ. ಆ ಕೆಲಸವನ್ನು ತನ್ನ ಕೃತಿಗಳ ಮೂಲಕ ಲೇಖಕನೊಬ್ಬ ಮಾಡುತ್ತಿರುತ್ತಾನೆ. ಯಾವುದೇ ದೇಶ-ಭಾಷೆಯ ಸಾಹಿತ್ಯ ಪರಂಪರೆಯನ್ನು ಗಮನಿಸಿದರೂ, ಅಲ್ಲಿ ಹಿಂಸೆ ಮತ್ತು ಕೇಡಿನ ವಿರುದ್ಧ ಒಳಿತು ಗೆಲುವು ಸಾಧಿಸುವ ಕಥನಗಳೇ ಎದ್ದುಕಾಣುತ್ತವೆ. ಕಲೆಯ ಅಂತಿಮ ಉದ್ದೇಶವೇ ಕೇಡಿನ ವಿರುದ್ಧದ ಹೋರಾಟದಲ್ಲಿ ಮನುಷ್ಯನಿಗೆ ತಾತ್ವಿಕ ತಳಹದಿಯೊಂದನ್ನು ಒದಗಿಸುವುದು ಹಾಗೂ ನೈತಿಕಶಕ್ತಿಯನ್ನು ನೀಡುವುದು. ತಾತ್ವಿಕತೆ ಕಟ್ಟಿಕೊಡುವ ಮತ್ತು ನೈತಿಕತೆ ವೃದ್ಧಿಸುವ ಕೆಲಸವನ್ನು ಕನ್ನಡ ಸಾಹಿತ್ಯ ಪರಂಪರೆ ಉದ್ದಕ್ಕೂ ಮಾಡಿಕೊಂಡು ಬಂದಿದೆ. ಆ ಕೆಲಸವನ್ನು ವರ್ತಮಾನದ ಬರಹಗಾರರು ಮತ್ತಷ್ಟು ಕಾಳಜಿ ಹಾಗೂ ಬದ್ಧತೆಯೊಂದಿಗೆ ಪ್ರಜ್ಞಾಪೂರ್ವಕವಾಗಿ ಮಾಡುವುದು ಅನಿವಾರ್ಯವಾಗಿದೆ.

(ಆಲೂರು ದೊಡ್ಡನಿಂಗಪ್ಪ)

ಆಲೂರು ದೊಡ್ಡನಿಂಗಪ್ಪನವರ `ಚಂದ್ರನ ಚೂರು’ ಕಾದಂಬರಿಯ ಶಕ್ತಿ ಇರುವುದೇ ವರ್ತಮಾನದ ಕೇಡುಗಳನ್ನು ಎದುರು ಹಾಕಿಕೊಂಡಿರುವುದರಲ್ಲಿ. ಈ ದೇಶವನ್ನು ಶಾಪದಂತೆ ಕಾಡುತ್ತಿರುವ ಜಾತೀಯತೆಯ ಸ್ವರೂಪವನ್ನು ಚಿತ್ರಿಸುತ್ತಲೇ, ಅದಕ್ಕೆ ಪ್ರತಿಯಾಗಿ ಮಾನವೀಯ ಸ್ಪಂದನಗಳನ್ನು ಕಟ್ಟಿಕೊಡುವ ಹಂಬಲ `ಚಂದ್ರನ ಚೂರು’ ಕಾದಂಬರಿಯ ಜೀವದ್ರವ್ಯವಾಗಿದೆ.

`ಗಿಣಿ ಬಿಸ್ಕತ್ತು’ ಮೂಲಕ ಕಾದಂಬರಿಕಾರರಾಗಿ ಗುರ್ತಿಸಿಕೊಂಡಿರುವ ದೊಡ್ಡನಿಂಗಪ್ಪ, `ಚಂದ್ರನ ಚೂರು’ ಮೂಲಕ ಕಾದಂಬರಿಕಾರರಾಗಿ ತಮ್ಮ ಅನುಭವಗಳನ್ನು ಮತ್ತೊಮ್ಮೆ ನಿಕಷಕ್ಕೊಡ್ಡಿದ್ದಾರೆ. ‘ಗಿಣಿ ಬಿಸ್ಕತ್ತು’ ಕಾದಂಬರಿಯಲ್ಲಿ ಗ್ರಾಮೀಣ ಬದುಕಿನ ತವಕ ತಲ್ಲಣಗಳ ಬಿಂಬಗಳು ಹಾಗೂ ಬಾಲ್ಯದ ಕಣ್ಣಿನ ಮೂಲಕ ಸಮಾಜವನ್ನು ಅರ್ಥ ಮಾಡಿಕೊಳ್ಳುವ ಪ್ರಯತ್ನವಿದೆ. ಈ ಪ್ರಯತ್ನ ‘ಚಂದ್ರನ ಚೂರು’ ಕಾದಂಬರಿಯಲ್ಲೂ ಮುಂದುವರೆಯುತ್ತದಾದರೂ, ಸಮಾಜದ ಸಂಕೀರ್ಣ ಸ್ವರೂಪವನ್ನು ಚಿತ್ರಿಸುವ ಪ್ರಯತ್ನ ಇಲ್ಲಿ ಮತ್ತಷ್ಟು ಸೃಜನಶೀಲವಾಗಿದೆ.

`ಚಂದ್ರನ ಚೂರು’ ಕಾದಂಬರಿಯಲ್ಲಿ ಕಥೆ ಸಂಭವಿಸುವ ಸ್ಥಳ ಸಾಮಾಜಿಕ ಚಲನೆಗಳಗೆ ತನ್ನನ್ನು ಒಡ್ಡಿಕೊಳ್ಳುತ್ತಿರುವ ಪುಟ್ಟದೊಂದು ಊರು. ಈ ಚಲನೆಯಲ್ಲಿ ಊರ ಅಂಚಿನಲ್ಲಿದ್ದ ಕೇರಿ ಗ್ರಾಮದ ಮಧ್ಯಕ್ಕೆ ಬಂದಿದೆ. ಹತ್ತಾರು ಜಾತಿಗಳ ಜನರು ವಾಸಿಸುವ ಊರು ಕಾಲೊನಿಯನ್ನು ಮಧ್ಯದಲ್ಲಿಟ್ಟುಕೊಂಡು ಆದರ್ಶ ಗ್ರಾಮದ ಹಣೆಪಟ್ಟಿಯನ್ನೂ ತನ್ನದಾಗಿಸಿಕೊಂಡಿದೆ. ಜೀತಮುಕ್ತನಾದ ಶಿವಣ್ಣನ ಅಂಗಡಿ ಕಾಲೊನಿಯಲ್ಲಿದೆ. ಆ ಅಂಗಡಿಯಲ್ಲಿ ಎಲ್ಲ ಜಾತಿಯವರೂ ವ್ಯಾಪಾರ ಮಾಡುತ್ತಾರೆ. ಊರ ಬಾವಿಯ ಅಂಗಳದಲ್ಲಿ ಎಲ್ಲ ಜಾತಿಯ ಹೆಣ್ಣುಮಕ್ಕಳೂ ಸೇರುತ್ತಾರೆ. ಮೇಲ್ನೋಟಕ್ಕೆ ಕಾಣಿಸುವ ಈ ಬೆಳವಣಿಗೆಗಳಿಂದ, ಊರು ಜಾತಿಮುಕ್ತವಾಗಿದೆ ಎಂದು ಭಾವಿಸುವಂತಿಲ್ಲ. ಜಾತಿಯ ಸರ್ಪ ಆಗಾಗ ಹೆಡೆ ಎತ್ತಿ ಫೂತ್ಕರಿಸುತ್ತಲೇ ಇರುತ್ತದೆ; ತನ್ನ ಇರುವನ್ನು ನೆನಪಿಸುತ್ತಲೇ ಇರುತ್ತದೆ. ಹೂವಿನ ರಾಜನಿಗೆ ಮೊದಲು ಕ್ಷೌರ ಮಾಡಿದ್ದರ ಬಗ್ಗೆ ಮಲ್ಲ ಕೋಪಗೊಳ್ಳುತ್ತಾನೆ. ಜಾತಿಯ ಹಿರಿಮೆಯ ಜೊತೆಗೆ ದುಡ್ಡಿನ ದರ್ಪವೂ ಅವನೊಳಗೆ ಸೇರಿಕೊಂಡಿದೆ. ಕಾದಂಬರಿಯಲ್ಲಿನ ಪುಟ್ಟ ಊರು ದೇಶವನ್ನು ಪ್ರತಿನಿಧಿಸಿದರೆ, ಜಾತಿವಿಷವನ್ನು ಕಾರುವ ಮಲ್ಲ ಜಾತಿವ್ಯವಸ್ಥೆಯ ಪ್ರತೀಕವಾಗಿದ್ದಾನೆ.

ಅತ್ಯಂತ ಕಡಿಮೆ ಪಾತ್ರಗಳನ್ನು ಬಳಸಿಕೊಂಡು ಕಥನವನ್ನು ನಿರೂಪಿಸಿರುವುದು `ಚಂದ್ರನ ಚೂರು’ ಕಾದಂಬರಿಯ ಗಮನಾರ್ಹ ಸಂಗತಿಗಳಲ್ಲೊಂದು. ಐದು ಮುಖ್ಯ ಪಾತ್ರಗಳು ಕಥನದ ಹಂದರಕ್ಕೆ ಆಧಾರವಾಗಿ, ಸ್ತಂಭಗಳ ರೂಪದಲ್ಲಿ `ಚಂದ್ರನ ಚೂರು’ ಕಾದಂಬರಿಯಲ್ಲಿ ಹಾಸುಹೊಕ್ಕಾಗಿವೆ. ಜೀವನಪ್ರೇಮದ ಪ್ರತೀಕಗಳಾದ ತ್ಯಾಗ ಎನ್ನುವ ಪುಟ್ಟ ಹುಡುಗ ಹಾಗೂ ಅವನ ತಾಯಿ ದ್ಯಾವಕ್ಕನ ಜೊತೆಗೆ ಜಾತಿವಿಷವನ್ನು ಮೈಮನಸ್ಸುಗಳಲ್ಲಿ ತುಂಬಿಕೊಂಡ ಕೇಡಿನ ರೂಪದಲ್ಲಿ ಮಲ್ಲನಿದ್ದಾನೆ. ಈ ಮಲ್ಲನ ಜಾತಿವಿಷಕ್ಕೆ ಬಲಿಯಾದ ಸಿದ್ಧ ಹಾಗೂ ಜೀವಚ್ಛವವಾದ ಚಂದ್ರ (ಮಲ್ಲನ ಹೆಂಡತಿ ಹಾಗೂ ಸಿದ್ಧನ ಪ್ರೇಯಸಿ) ಕಾದಂಬರಿಯುದ್ದಕ್ಕೂ ನೆರಳಿನಂತೆ ಆವರಿಸಿಕೊಂಡಿದ್ದಾರೆ.

ಮಕ್ಕಳ ಕಣ್ಣಿನಿಂದ ಸಮಾಜವನ್ನು ನೋಡುವ, ಚಿತ್ರಿಸುವ ತಂತ್ರವನ್ನು ದೊಡ್ಡನಿಂಗಪ್ಪ ಕೂಡ ಈ ಕಾದಂಬರಿಯಲ್ಲಿ ಬಳಸಿಕೊಂಡಿದ್ದಾರೆ. ಅಪಾರ ಜೀವನೋತ್ಸಾಹ ಮತ್ತು ಮುಗ್ಧತೆಯನ್ನು ಒಳಗೊಂಡ ತ್ಯಾಗನ ಕಣ್ಣುಗಳ ಮೂಲಕ ಊರಿನ ಜಾತೀಯತೆಯ ಸ್ವರೂಪವನ್ನು ಕಾದಂಬರಿ ಕಟ್ಟಿಕೊಡುತ್ತದೆ. ತ್ಯಾಗನ ಸಾವು ಕೂಡ ಊರು ಅಥವಾ ಸಮಾಜದಲ್ಲಿನ ಮದ್ದಿಲ್ಲದ ಕಾಯಿಲೆಯ ತೀವ್ರತೆಯನ್ನು ಸಹೃದಯರ ಗಮನಕ್ಕೆ ತರುವ ಪ್ರಯತ್ನವಾಗಿದೆ. ತನ್ನ ಕಣದಲ್ಲಿ ಹೆಜ್ಜೆ ಮೂಡಿಸಿದ ಆಡುವ ಹುಡುಗನನ್ನು ಮಲ್ಲ ಮನ ಬಂದಂತೆ ಥಳಿಸುತ್ತಾನೆ. ಜೋರು ಗಾಳಿಗೆ ಉದುರಿದ ತೆಂಗಿನಕಾಯಿಗಳನ್ನು ಹೆಕ್ಕಿಕೊಂಡ ಹುಡುಗನನ್ನು ಕೊಂದು, ಸುಟ್ಟುಹಾಕುತ್ತಾನೆ. ಈ ಅಮಾನುಷ ನಡವಳಿಕೆಯನ್ನು ಅರ್ಥ ಮಾಡಿಕೊಳ್ಳುವುದು ಹೇಗೆ? ಮಲ್ಲನ ಕ್ರೌರ್ಯ ವ್ಯಕ್ತಿಗತವಾಗಿರದೆ, ಸಮಾಜದ ಒಂದು ವರ್ಗ ಜಾತಿವ್ಯಸನದಿಂದ ಸೃಷ್ಟಿಸಿದ ತರತಮದಿಂದ ಕೂಡಿದ ಸಾಮಾಜಿಕ ವ್ಯವಸ್ಥೆಯ ಅಭಿವ್ಯಕ್ತಿಯಾಗಿದೆ. ಈ ವ್ಯವಸ್ಥೆಗೆ ತ್ಯಾಗನಂಥ ಪುಟ್ಟ ಹುಡುಗನನ್ನು ಆಪೋಶನ ತೆಗೆದುಕೊಳ್ಳುವುದು ವಿನೋದವಾಗಿ ಕಾಣಿಸುತ್ತದೆ. ತ್ಯಾಗನಷ್ಟೇ ಅಲ್ಲ, ಅವನ ತಂದೆ ಸಿದ್ಧನೂ ಈ ವ್ಯವಸ್ಥೆಗೆ ಬಲಿಯಾಗಿದ್ದಾನೆ. ಆದರೆ, ಸಿದ್ಧನ ಸಾವಿನ ಹಿಂದೆ ಒಂದು ಅನೈತಿಕವೆನ್ನಬಹುದಾದ ಪ್ರೇಮಕಥೆಯಿದೆ. ತಾನು ಕೆಲಸ ಮಾಡುವ ಒಡೆಯನ ಪತ್ನಿ ಒಲಿದುಬಂದಾಗ, ಅವಳೊಡನೆ ಸಿದ್ಧ ಕೂಡುತ್ತಾನೆ. ಮಹಾನ್ ಬಲಶಾಲಿ ಹಾಗೂ ಅಪ್ರತಿಮ ಸುಂದರಿಯ ಪ್ರೇಮ ಊರ ಕಣ್ಣಿಗೆ ದೈವಿಕವಾಗಿ ಕಾಣಿಸುತ್ತದೆ. ವಿವಾಹಬಾಹಿರ ಸಂಬಂಧ ಊರಕಣ್ಣಿಗೆ ಸ್ವೀಕಾರಾರ್ಹ ಅಚ್ಚರಿಯಾಗಿ ಕಾಣಿಸಲಿಕ್ಕೆ, ಪ್ರೇಮಿಗಳ ವ್ಯಕ್ತಿತ್ವವಷ್ಟೇ ಕಾರಣವಲ್ಲ; ಮಲ್ಲನ ಕೇಡಿಗತನದ ಬಗ್ಗೆ ಊರಿಗಿರುವ ಅಸಹನೆಯೂ ಕಾರಣ. ಆ ಅಸಹನೆ ಅಸಹಾಯಕತೆಯಾಗಿರುವಾಗ, ತಮ್ಮ ಸಿಟ್ಟನ್ನು ಕೊಂಚವಾದರೂ ಸಮಾಧಾನಗೊಳಿಸುವ ರೂಪದಲ್ಲಿ ಪ್ರೇಮಪ್ರಕರಣ ಅವರಿಗೆ ಒದಗಿಬಂದಿದೆ. ಈ ಪ್ರೇಮಪ್ರಕರಣ ಜಾತೀಯತೆಯನ್ನು ವಿರೋಧಿಸುವ ಪ್ರತಿಭಟನೆಯ ರೂಪದಂತೆಯೂ ಕಾದಂಬರಿ ಚಿತ್ರಿಸುತ್ತದೆ. ಸಿದ್ಧನನ್ನು ಕೊಲ್ಲುವ ಮೂಲಕ ಮಲ್ಲ ತನ್ನ ಜಾತಿಶ್ರೇಷ್ಠತೆಯನ್ನು ಉಳಿಸಿಕೊಳ್ಳುತ್ತಾನೆ. ಆ ಮೂಲಕ ಊರಿನ ರಮ್ಯ ಕನಸೊಂದು ಭಂಗಗೊಂಡು, ದುಸ್ವಪ್ನದ ರೂಪದಲ್ಲಿ ಕಾಡತೊಡಗುತ್ತದೆ.

ಆ ಅಂಗಡಿಯಲ್ಲಿ ಎಲ್ಲ ಜಾತಿಯವರೂ ವ್ಯಾಪಾರ ಮಾಡುತ್ತಾರೆ. ಊರ ಬಾವಿಯ ಅಂಗಳದಲ್ಲಿ ಎಲ್ಲ ಜಾತಿಯ ಹೆಣ್ಣುಮಕ್ಕಳೂ ಸೇರುತ್ತಾರೆ. ಮೇಲ್ನೋಟಕ್ಕೆ ಕಾಣಿಸುವ ಈ ಬೆಳವಣಿಗೆಗಳಿಂದ, ಊರು ಜಾತಿಮುಕ್ತವಾಗಿದೆ ಎಂದು ಭಾವಿಸುವಂತಿಲ್ಲ. ಜಾತಿಯ ಸರ್ಪ ಆಗಾಗ ಹೆಡೆ ಎತ್ತಿ ಫೂತ್ಕರಿಸುತ್ತಲೇ ಇರುತ್ತದೆ; ತನ್ನ ಇರುವನ್ನು ನೆನಪಿಸುತ್ತಲೇ ಇರುತ್ತದೆ.

ತ್ಯಾಗ ಹಾಗೂ ಸಿದ್ಧ ಬೇರೆ ಬೇರೆ ಕಾರಣಗಳಿಗಾಗಿ ಸಾವಿಗೀಡಾದರೂ, ಆ ಎರಡು ಸಾವುಗಳ ನೋವು ತಾಕುವುದು ದ್ಯಾವಕ್ಕನಿಗೆ. ಯಾವುದೇ ಬಗೆಯ ದರ್ಪ, ದೌಜ್ಯನಗಳ ನೋವು ತೀವ್ರವಾಗಿ ತಾಕುವುದು ಹಾಗೂ ವ್ಯವಸ್ಥೆಯ ಬೇಟ-ಬೇಟೆಗೆ ಮಿಕವಾಗುವುದು ಹೆಣ್ಣೇ ಎನ್ನುವ ಚಾರಿತ್ರಿಕ ಸತ್ಯಕ್ಕೆ ದ್ಯಾವಕ್ಕನ ಬದುಕು ಇನ್ನೊಂದು ಅಡಿಗೆರೆಯಷ್ಟೇ. ಗಂಡನ ಅಗಲಿಕೆಯ ನೋವನ್ನು ಮಗನ ಇರುವಿಕೆಯಲ್ಲಿ ಮರೆಯಲು ಪ್ರಯತ್ನಿಸುವ ತಾಯಿ, ಓದಲಿಕ್ಕೆಂದು ಸಿದ್ಧಗಂಗೆಗೆ ಹೋಗಬೇಕಿದ್ದ ಹುಡುಗ ಇದ್ದಕ್ಕಿದ್ದಂತೆ ನಾಪತ್ತೆಯಾದಾಗ ಅನುಭವಿಸುವ ಸಂಕಟ ಊಹಾತೀತವಾದುದು. ಸಾವೆನ್ನುವುದು ಹೆಣ್ಣಿಗೆ ಮತ್ತೆ ಮತ್ತೆ ಮರುಕಳಿಸುವ ಸುಡುವಾಸ್ತವ ಎನ್ನುವುದಕ್ಕೆ ದ್ಯಾವಕ್ಕನ ಬದುಕೇ ಉದಾಹರಣೆಯಂತಿದೆ. ದ್ಯಾವಕ್ಕನ ಬದುಕಿನ ದುರಂತ ಈ ನೆಲದ ದುರಂತವೂ ಹೌದೆನ್ನುವುದನ್ನು ಸಹೃದಯರ ಗಮನಕ್ಕೆ ತರುವಲ್ಲಿ `ಚಂದ್ರನ ಚೂರು’ ಕಾದಂಬರಿ ಯಶಸ್ವಿಯಾಗಿದೆ.

ಸಿದ್ಧನ ಸಾವಿಗೆ, ತ್ಯಾಗನ ಸಾವಿಗೆ ಊರಿಗೆ ಊರೇ ಮರುಗುತ್ತದೆ. ಅಷ್ಟು ಮಾತ್ರವಲ್ಲ, ಮನುಷ್ಯರ ಸಣ್ಣತನಕ್ಕೆ ಪ್ರಾಣಿಗಳೂ ಸಂಕಟಪಡುತ್ತವೆ. ಸಂಕಟಗಳು ಹೆಣೆದುಕೊಂಡ ಈ ಕಥೆಯನ್ನು ನಾನಿನ್ನು ಮುಂದುವರಿಸಲಾರೆ ಎಂದು ಕಾದಂಬರಿಕಾರ ಸೋತಾಗ, ಸಕಲ ಜೀವಜಂತುಗಳೂ ಕಥೆಯನ್ನು ಹೇಳತೊಡಗುತ್ತವೆ; ವರ್ತಮಾನದ ತವಕತಲ್ಲಣಗಳಿಗೆ ಪ್ರತಿಕ್ರಿಯಿಸತೊಡಗುತ್ತವೆ. ಈ ಮೂಲಕ, ಊರಿನ ಕಥೆ ನಾಡಿನದಾಗಿ, ಸಕಲ ಜೀವಜಂತುಗಳದಾಗಿ, ಪರಿಸರದ ಕಥೆಯಾಗಿ ತನ್ನ ವ್ಯಾಪ್ತಿಯನ್ನು ಹಿಗ್ಗಲಿಸಿಕೊಳ್ಳುತ್ತದೆ.

ದ್ಯಾವಕ್ಕನ ಕುಟುಂಬದ ದಾರುಣ ಕಥನದ ನಡುವಿನ ಕೆಲವು ಪ್ರಸಂಗಗಳು ಊರೊಂದರ ಬಹುತ್ವದ ಚಹರೆಗಳನ್ನು ಕಟ್ಟಿಕೊಡುವುದರ ಜೊತೆಗೆ, ಕಾದಂಬರಿಯ ಹೊಳಪನ್ನೂ ಹೆಚ್ಚಿಸಿವೆ. ಅಂಥದೊಂದು ಪ್ರಸಂಗ, ಕೊಯ್ದು ಗುಡ್ಡೆ ಹಾಕಲಿಕ್ಕಾಗಿ ಹಿಡಿಯಲು ಬರುವ ಗುಂಪಿಗೆ ಚಳ್ಳೆಹಣ್ಣು ತಿನ್ನಿಸಿ ಊರಲ್ಲೆಲ್ಲ ಓಡುವ ಹಂದಿಮರಿಯ ಪ್ರಸಂಗ. ಈ ಪ್ರಸಂಗ ಊರಿನ ಜನರ ಬಾಡಿನ ಪ್ರೇಮವನ್ನು ಸ್ವಾರಸ್ಯಕರವಾಗಿ ಕಟ್ಟಿಕೊಡುವುದರ ಜೊತೆಗೆ, ಹಂದಿಮರಿಯನ್ನು ಕೊಯ್ದು ಪಾಲು ಮಾಡುವ ಮೂಲಕ ಬಾಣಂತನಕ್ಕೆ ತವರಿಗೆ ಬಂದ ಮಗಳನ್ನು ಗಂಡನ ಮನೆಗೆ ಕಳಿಸುವ ಖರ್ಚಿಗೆ ಹಣ ಹೊಂದಿಸಿಕೊಳ್ಳಬೇಕಾದ ನಂಜಣ್ಣನ ಅನಿವಾರ್ಯತೆಯನ್ನೂ ಕಾಣಿಸುತ್ತದೆ. ರೊಚ್ಚಿಗೆದ್ದು ದಿಕ್ಕೆಟ್ಟು ಓಡುವ ಬಸವ, ಎಲ್ಲರ ಪಾಲಿಗೂ ತಾಯಿ ಎನ್ನಿಸಿಕೊಂಡಿದ್ದ ಸೂಲಗಿತ್ತಿ ಮಲೆಯಮ್ಮ ಎದುರು ಬಂದಾಗ ತನ್ನ ದಿಕ್ಕುಬದಲಿಸುವ ಪ್ರಸಂಗ ಹೃದಯಸ್ಪರ್ಶಿಯಾಗಿದೆ. ಕಣ್ಣುಗಾಣದ ತಾಯಿಯೆದುರು ಮೂಕಪಶುವಿನ ಒಳಗಣ್ಣು ತೆರೆಯುವ ಈ ಪ್ರಸಂಗ ಕಾದಂಬರಿಯ ಆರ್ದ್ರತೆಯನ್ನು ಹೆಚ್ಚಿಸಿದೆ. ತೋಟದಲ್ಲಿನ ತೆಂಗಿನಕಾಯಿಗಳನ್ನು ಕದಿಯುವ ತನ್ನ `ಕಸುಬುದಾರಿಕೆ’ಯ ಬಗ್ಗೆ ಜಂಬ ಕೊಚ್ಚಿಕೊಳ್ಳುವ ಶಿವಣ್ಣ, ಇರುಳಿನಲ್ಲಿ ಕಾಯಿ ಕದಿಯಲು ಹೋಗಿ ಅಧೀರನಾಗುವುದು, ಕೊಲೆಯಾದ ಸಿದ್ಧನೇ ದೆವ್ವವಾಗಿ ಮಲ್ಲನ ತೋಟವನ್ನು ಅಮಾವಾಸ್ಯೆ ಹುಣ್ಣಿಮೆಯಂದು ಕಾಯುತ್ತಿರಬೇಕೆಂದು ಅಳುಕುವುದು, ಕಥನದ ಹೊಳಪನ್ನು ಹೆಚ್ಚಿಸುವ ಪ್ರಸಂಗವಾಗಿದೆ. ಇಂಥ ಬಿಡಿ ಬಿಡಿ ಪ್ರಸಂಗಗಳು `ಚಂದ್ರನ ಚೂರು’ ಕಾದಂಬರಿಯ ಸಾಧ್ಯತೆಯನ್ನು ಹೆಚ್ಚಿಸಿವೆ.

ಗಾಡಿಯಲ್ಲಿ ಬರುತ್ತಿದ್ದ ಮಲ್ಲ, ಬಸವನ ದಾಳಿಯಿಂದ ಗಾಡಿಯೊಂದಿಗೆ ಉರುಳಿಬಿದ್ದು ತೀವ್ರವಾಗಿ ಗಾಯಗೊಂಡಾಗ ಊರು ಪ್ರತಿಕ್ರಿಯಿಸುವ ರೀತಿ ವಿಶಿಷ್ಟವಾಗಿದೆ; ಎಷ್ಟೇ ಶೋಷಣೆಗೊಳಗಾದರೂ ಅಂತಃಕರಣವನ್ನು ಕಳೆದುಕೊಳ್ಳದ ಸಮುದಾಯದ ಬಗ್ಗೆ ಹೆಮ್ಮೆ ಮೂಡಿಸುವಂತಿದೆ. ಕಲೆ ನೋವಿನ ದಾಖಲೆಯಾದರೆ ಸಾಲದು; ಅದು ನೋವಿನಲೆಗಳ ಮೇಲೆ ಮಾನವೀಯತೆಯ ನವನೀತವನ್ನು ತೇಲಿಸಬೇಕು ಕಾಣಿಸಬೇಕು ಎನ್ನುವುದಕ್ಕೆ ಈ ಪ್ರಸಂಗ ಉದಾಹರಣೆಯಂತಿದೆ.

(ರಘುನಾಥ ಚ.ಹ.)

ಆಲೂರು ದೊಡ್ಡನಿಂಗಪ್ಪ ಮೂಲತಃ ಕವಿ. `ಚಂದ್ರನ ಚೂರು’ ಕಾದಂಬರಿಯಲ್ಲೂ ದೊಡ್ಡನಿಂಗಪ್ಪ ಕವಿಯಾಗಿದ್ದಾರೆ. ರೂಪಕಗಳ ಮೂಲಕ ಗ್ರಾಮೀಣ ಭಾರತದ ಸಾಮಾಜಿಕ ಬಿಂಬಗಳನ್ನು ಹಿಡಿದಿಡಲು ಪ್ರಯತ್ನಿದ್ದಾರೆ. ಪ್ರಾಣಿಪಕ್ಷಿಗಳನ್ನೂ, ನಿಸರ್ಗವನ್ನೂ, ಜಡವಸ್ತುಗಳನ್ನೂ ತಮ್ಮ ಜೊತೆಗೆ ಕಥೆ ಹೇಳಲು ಕೂರಿಸಿಕೊಂಡಿದ್ದಾರೆ. ಈ ತಂತ್ರ ಪರಿಣಾಮಕಾರಿಯಾಗಿದ್ದರೂ, ಸಂವಹನದ ದೃಷ್ಟಿಯಿಂದ ಕಾದಂಬರಿಗೆ ತೊಡಕೂ ಹೌದು. ಕಾವ್ಯದ ಧ್ವನಿ ಕಥೆ ಮತ್ತು ಕಾದಂಬರಿಯಲ್ಲೂ ಅಪೇಕ್ಷಣೀಯ. ಆದರೆ, ಆ ಧ್ವನಿ ಕಾದಂಬರಿಯಲ್ಲಿನ ವಿವರಗಳನ್ನು ನಿಯಂತ್ರಿಸುವಂತಾಗಬಾರದು. ದೊಡ್ಡನಿಂಗಪ್ಪನವರು ಕಾವ್ಯದ ಧ್ವನಿಗೆ ಹೆಚ್ಚು ಒತ್ತು ನೀಡಿ, ಕಾದಂಬರಿಗೆ ಜೀವಶಕ್ತಿಯಾದ ವಿವರಗಳನ್ನು ಬೆಳೆಸುವ ಸಾಧ್ಯತೆಗಳನ್ನು ಕೆಲವೆಡೆ ಬಿಟ್ಟುಕೊಟ್ಟಂತೆ ಕಾಣುತ್ತದೆ. ಇದರಿಂದ ಕಥನದ ಪರಿಣಾಮಕ್ಕೆ ತೊಡಕಾಗಿಲ್ಲವಾದರೂ, ವಿವರಗಳ ಮೂಲಕ ಕಾದಂಬರಿಯ ಚೆಲುವು ಮತ್ತು ಕಥನದ ಸಾಂದ್ರತೆಯನ್ನು ಹೆಚ್ಚಿಸುವ ಸವಾಲನ್ನು ಕಾದಂಬರಿಕಾರರು ಬಿಟ್ಟುಕೊಟ್ಟಂತೆ ಕಾಣಿಸುತ್ತದೆ.

`ಚಂದ್ರನ ಚೂರು’ ಕಾದಂಬರಿಯ ಮೂಲಕ ಆಲೂರು ದೊಡ್ಡನಿಂಗಪ್ಪ, ನಮ್ಮ ಸಾಮಾಜಿಕ ವ್ಯವಸ್ಥೆಯಲ್ಲಿನ ಅಪಸವ್ಯಗಳನ್ನು ಸಹೃದಯರ ಗಮನಕ್ಕೆ ತರುವ ಕೆಲಸ ಮಾಡಿದ್ದಾರೆ. ಬಾವಿಯ ನೀರನ್ನು ಗಾಳಿಬೆಳಕಿಗೊಡ್ಡುವ ಈ ಕೆಲಸ ಪರಿಣಾಮಕಾರಿಯಾಗಿದೆ, ಯಶಸ್ವಿಯಾಗಿದೆ ಹಾಗೂ ಕಾದಂಬರಿಕಾರರಾಗಿ ದೊಡ್ಡನಿಂಗಪ್ಪನವರ ಸಾಧ್ಯತೆಗಳ ಬಗ್ಗೆ ಅಚ್ಚರಿ ಮತ್ತು ಮೆಚ್ಚುಗೆ ಹುಟ್ಟಿಸುತ್ತದೆ. ಸಹೃದಯರು ಪ್ರೀತಿಯಿಂದ ಸ್ವಾಗತಿಸಬೇಕಾದ ಹಾಗೂ ಓದಿ ಚರ್ಚಿಸಬೇಕಾದ ಕೃತಿಯಿದು. ಕಾದಂಬರಿ ಪ್ರಕಾರದ ಅಪಾರ ಸಾಧ್ಯತೆಗಳನ್ನು ದುಡಿಸಿಕೊಳ್ಳುವ ನಿಟ್ಟಿನಲ್ಲಿ ದೊಡ್ಡನಿಂಗಪ್ಪನವರ ಪ್ರಯತ್ನದ ರೂಪದಲ್ಲೂ ಮುಖ್ಯವಾದ ಕೃತಿಯಿದು.

ಆಲೂರು ದೊಡ್ಡನಿಂಗಪ್ಪ ಕಾಲೇಜು ದಿನಗಳಿಂದಲೂ ನನಗೆ ಪರಿಚಿತರು. ಅವರ ಮೆಲುದನಿ ಹಾಗೂ ಸೋಗಿಲ್ಲದ ಸಜ್ಜನಿಕೆ ನನಗಿಷ್ಟ. ಅವರ ವ್ಯಕ್ತಿತ್ವದಲ್ಲಿನ ಪ್ರಾಮಾಣಿಕತೆ ಹಾಗೂ ನಿಷ್ಠುರತೆಯನ್ನು ಬರವಣಿಗೆಯಲ್ಲೂ ಅನುಭವಿಸಿರುವೆ. ನೀರು ತಿಳಿಯಾಗಿಸುವ ಕೆಲಸದಲ್ಲಿ ನನ್ನನ್ನೂ ಭಾಗಿಯಾಸಿಕೊಂಡಿದ್ದಕ್ಕಾಗಿ ದೊಡ್ಡನಿಂಗಪ್ಪನವರಿಗೆ ಸ್ನೇಹಪೂರ್ವಕ ಕೃತಜ್ಞತೆ.

(ಕೃತಿ: ಚಂದ್ರನ ಚೂರು (ಕಾದಂಬರಿ), ಲೇಖಕರು: ಆಲೂರು ದೊಡ್ಡನಿಂಗಪ್ಪ, ಪ್ರಕಾಶಕರು: ಪಂಪ ಸಾಂಸ್ಕೃತಿಕ ವೇದಿಕೆ)