ಇತ್ತೀಚೆಗೆ ಕಾದಂಬರಿಗಳ ಶೀರ್ಷಿಕೆಗಳು ಅತಿ ಆಕರ್ಷಕವಾಗಿರಲು ಬಯಸುತ್ತಾರೆನೋ? ಹಾಗಾಗಿ ಹಿರಿಯ ಕವಿಗಳ ಕವಿತೆಯ ಸಾಲುಗಳನ್ನು ಕಾದಂಬರಿಗೆ ಶೀರ್ಷಿಕೆಯಾಗಿಸುತ್ತಾರೆ. ಆಹಾಹಾ… ಅದೇನು ಮೋಹಕ ಪದ ಮಾಲೆಗಳು! ಕೆಲವು ಸಲ ಆ ಸಾಲುಗಳಿಗೆ ಸೋತು, ಹೇಗಿದೆಯೆಂದು ಓದಲು ಹೊರಟರೆ! ಹತ್ತು ಸಾಲಿಗೆ ನಿಲ್ಲಿಸುವ ಹಾಗಾಗುತ್ತದೆ. ಅದು ಕಾದಂಬರಿಯೋ, ಲೇಖನವೋ? ಪ್ರಬಂಧವೋ? ಒಂದೂ ಗೊತ್ತಾಗದ ಹಾಗೇ. ಒಟ್ಟಾರೆ ಸಾಹಿತಿ ಎನಿಸಿಕೊಳ್ಳುವ ಅತೀವ ಹಂಬಲ. ಕಥಾ ವಸ್ತು ಕೂಡಾ ಹೊಸದಲ್ಲ. ಎಲ್ಲಿಯೋ ಓದಿರುವೆನಲ್ಲ? ಎನಿಸುತ್ತದೆ. ಸ್ವಂತಿಕೆಯಿಲ್ಲ. ತಮ್ಮದೇ ಆದ ಶೈಲಿಯು ಇಲ್ಲ.
ಸಾಹಿತ್ಯ ಕೃತಿಗಳ ಶೀರ್ಷಿಕೆಗಳ ಕುರಿತು ಅರುಣಾ ಜಿ ಭಟ್. ಬದಿಕೋಡಿ ಬರಹ

ಇದೇನಿದು ಸಂಗತಿ? ಅದೂ ಶೀರ್ಷಿಕೆಯದ್ದು! ಅಂತ ನೀವು ಅಂದುಕೊಂಡಿರೇ? ಹೇಳುವೆ ನಿಧಾನವಾಗಿ. ನಿಧಾನವಾಗಿ ಬೇಡ ಬಿಡಿ. ಬೇಗ ಹೇಳಿ ಬಿಡುವೆ. ಸುಮ್ನೆ ಕಾಟ ಕೊಡೋದ್ಯಾಕೆ..

ಮೂರು ಅಕ್ಷರದ ಪದ ಈ ಶೀರ್ಷಿಕೆ. ಆದರೆ ವಿಚಾರ ದೊಡ್ಡದು. ಮುಖ್ಯವಾದುದು.

ಕಥೆ, ಕಾದಂಬರಿ, ಲೇಖನ, ಹೀಗೆ… ಸಾಹಿತ್ಯದ ಯಾವುದೇ ಪ್ರಕಾರವೇ ಆಗಿರಲಿ. ಅದಕ್ಕೊಂದು ಶೀರ್ಷಿಕೆ ಅಗತ್ಯ. ಮಕ್ಕಳಿಗೆ ನಾಮಕರಣ ಮಾಡುವ ಮೊದಲು, ಎಷ್ಟು ಯೋಚನೆ ಮಾಡುತ್ತೇವೋ? ಅಷ್ಟೇ ಯೋಚನೆ ಮಾಡಬೇಕಾಗುತ್ತದೆ ಬರಹಗಳಿಗೆ ಶೀರ್ಷಿಕೆ ನೀಡುವ ಮುನ್ನ. ಅದು ಸಹಜ ಕೂಡ. ಬರಹದ ಯಾವುದಾದರೂ ಒಂದು ಅಂಶ ಶೀರ್ಷಿಕೆಯಲ್ಲಿದ್ದರೆ ಅದು ಮತ್ತಷ್ಟು ಚಂದವಾಗಿಯೂ ಮೌಲ್ಯವಾಗಿಯೂ ಕಾಣುತ್ತದೆ.

ಅದರಲ್ಲೂ ತಿಂಗಳು ಗಟ್ಟಲೆ ಕುಳಿತು ಬರೆದ ಕಾದಂಬರಿ ಎಂದಾದರೆ ಶೀರ್ಷಿಕೆ ಆಕರ್ಷಕವಾಗಿರಲೇ ಬೇಕಲ್ಲ. ಹಿರಿಯ ಸಾಹಿತಿಗಳು ಬರೆದ ಕಾದಂಬರಿಗಳ ಹೆಸರು ನೆನಪಿಸಿಕೊಂಡರೆ ಅದೆಷ್ಟು ಖುಷಿ. ಶೀರ್ಷಿಕೆ ಎಷ್ಟು ಸೊಗಸಾಗಿದೆಯೋ.. ಅಷ್ಟೇ ಸೊಗಸು ಕಥಾ ಹಂದರ. ಅಂಥ ಕಾದಂಬರಿಗಳ ಹೆಸರು ಎಂದೆಂದೂ ಮರೆಯದು. ಆ ಶೀರ್ಷಿಕೆಗಳು ಸ್ವಂತ ಯೋಚನೆಯಲ್ಲೇ ಇಟ್ಟ ಶೀರ್ಷಿಕೆಗಳೇ ಆಗಿರಬಹುದು. ಬಹುಶಃ ಆಗೆಲ್ಲಾ ಒಬ್ಬರು ಒಂದು ಕಾದಂಬರಿಗೆ ಇಟ್ಟ ಹೆಸರನ್ನು ಬೇರೆ ಸಾಹಿತಿಗಳು ತಮ್ಮ ಕಾದಂಬರಿಗಳಿಗೆ ಇಡುತ್ತಿರಲಿಲ್ಲವೆನಿಸುತ್ತದೆ.

ಆದರೆ ಇತ್ತೀಚೆಗೆ ಕಾದಂಬರಿಗಳ ಶೀರ್ಷಿಕೆಗಳು ಅತಿ ಆಕರ್ಷಕವಾಗಿರಲು ಬಯಸುತ್ತಾರೆನೋ? ಹಾಗಾಗಿ ಹಿರಿಯ ಕವಿಗಳ ಕವಿತೆಯ ಸಾಲುಗಳನ್ನು ಕಾದಂಬರಿಗೆ ಶೀರ್ಷಿಕೆಯಾಗಿಸುತ್ತಾರೆ. ಆಹಾಹಾ… ಅದೇನು ಮೋಹಕ ಪದ ಮಾಲೆಗಳು! ಕೆಲವು ಸಲ ಆ ಸಾಲುಗಳಿಗೆ ಸೋತು, ಹೇಗಿದೆಯೆಂದು ಓದಲು ಹೊರಟರೆ! ಹತ್ತು ಸಾಲಿಗೆ ನಿಲ್ಲಿಸುವ ಹಾಗಾಗುತ್ತದೆ. ಅದು ಕಾದಂಬರಿಯೋ, ಲೇಖನವೋ? ಪ್ರಬಂಧವೋ? ಒಂದೂ ಗೊತ್ತಾಗದ ಹಾಗೇ. ಒಟ್ಟಾರೆ ಸಾಹಿತಿ ಎನಿಸಿಕೊಳ್ಳುವ ಅತೀವ ಹಂಬಲ. ಕಥಾ ವಸ್ತು ಕೂಡಾ ಹೊಸದಲ್ಲ. ಎಲ್ಲಿಯೋ ಓದಿರುವೆನಲ್ಲ? ಎನಿಸುತ್ತದೆ. ಸ್ವಂತಿಕೆಯಿಲ್ಲ. ತಮ್ಮದೇ ಆದ ಶೈಲಿಯು ಇಲ್ಲ.

ಇನ್ನು ಹಿರಿಯ ಸಾಹಿತಿಗಳ ಪ್ರಸಿದ್ಧ ಕಾದಂಬರಿಗಳ ಶೀರ್ಷಿಕೆಗಳನ್ನೇ ತಮ್ಮ ಕಾದಂಬರಿಗೂ ಇಡುವುದನ್ನು ಗಮನಿಸಿದ್ದೇನೆ! ಹಾಗೆ ಇಡಬಾರದೆನುವ ನಿಯಮ ಇಲ್ಲವೇನೋ. ಆದರೂ ನಮ್ಮ ಕಾದಂಬರಿಗೆ, ನಾವೇ ಯೋಚಿಸಿ ಇಟ್ಟರೆ ಚಂದವಲ್ಲವೇ? ಜನ ಮೆಚ್ಚಿದ ಚಿತ್ರಗೀತೆಗಳ ಸಾಲುಗಳನ್ನು ಸಹ ತಮ್ಮ ಕೃತಿಗಳಿಗೆ ಶೀರ್ಷಿಕೆಯಾಗಿ ಇಡುವವರಿದ್ದಾರೆ. ಒಟ್ಟಿನಲ್ಲಿ ರಪಕ್ ಎಂದು ಗಮನ ಸೆಳೆಯುವ ಹಾಗಿರಬೇಕು ಅಷ್ಟೇ. ಕಾದಂಬರಿ ಬರೆದು ಹೆಸರು ಇಡುತ್ತಾರೋ? ಕವಿತೆಯ ಸಾಲು ಕೇಳಿ ಕಾದಂಬರಿ ಬರೆಯುತ್ತಾರೋ? ಅವರವರಿಗೆ ಗೊತ್ತು ಆ ವಿಚಾರ.

ಆದರೆ ಚಂದದ ಹೆಸರಿನೊಳಗಿನ ಬರಹವನ್ನ ಓದಲು ಕಷ್ಟವಾಗತೊಡಗಿದರೆ ಮಾತ್ರ “ಹೊರಗೆ ಶೃಂಗಾರ, ಒಳಗೆ ಗೋಳಿ ಸೊಪ್ಪು” ಎನ್ನುವ ಮಾತು ನೆನಪಿಗೆ ಬರುತ್ತದೆ. ಬೇಸರವೂ ಮೂಡುತ್ತದೆ.

ಈ ಅಂತರ್ಜಾಲವೆಂಬ ಮಾಯಾ ಲೋಕದಲ್ಲಿ, ಕಥೆಗಳನ್ನು ಹಂಚಿ, ನನಗೆ ಹೆಚ್ಚು ಮೆಚ್ಚುಗೆ ಕೊಡಿ, ಚೆನ್ನಾಗಿಲ್ಲ ಕಥೆ ಅಂತ ಕಾಮೆಂಟ್ ಹಾಕಬೇಡಿ. ಎಂದೆಲ್ಲಾ ಕಾಡಿಬೇಡಿ ಅತ್ಯುತ್ತಮ ಬರೆಹಗಾರ್ತಿ ಎನ್ನುವ ಸರ್ಟಿಫಿಕೇಟ್ ಪಡೆದರೆ ಹೆಮ್ಮೆ ಏನಿದೆ? ನಮ್ಮ ಕಥೆಯನ್ನು ಪರಿಚಯವೇ ಇಲ್ಲದ ನಾಲ್ಕು ಮಂದಿ ಮನಸಾರೆ ಮೆಚ್ಚಿದರೂ ಅದೇ ಸಂತೋಷ. ನಮ್ಮ ಮನದ ನೋವಿಗೋ… ನಮ್ಮ ಮನಸನ್ನು ನೆಮ್ಮದಿಯಲ್ಲಿಡುವುದಕ್ಕೋ ನಾವು ಬರೆಯುತ್ತಿದ್ದರೆ… ಯಾವ ಬಹುಮಾನಗಳ ಬಯಕೆಯು ಇರುವುದಿಲ್ಲ. ಕೆಲವು ಸಲ ಅದಾಗಿಯೇ ಒಲಿದು ಬಂದಾಗ ಸಂಭ್ರಮ ಆಗಿಯೇ ಆಗುತ್ತದೆ. ಬರೆದುದು ಸಾರ್ಥಕವೆನಿಸುತ್ತದೆ. ಅತಿ ಹೆಚ್ಚು ಜನರು ಓದಿದ ಕಥೆಗೆ ಬಹುಮಾನ ಅಂತ ಇದ್ರೆ… ಅದು ಕನಸಿನ ಮಾತು ಬಿಡಿ. ಪ್ರಚಾರದಲ್ಲಿರುವ ಮಂದಿಗಷ್ಟೇ ಅದು ಸಿಗುತ್ತದೆ. ಕಥೆಯನ್ನು ಓದಿ, ಓದಿ ಎಂದಾಗ, ಓದುವವರು ಇರುತ್ತಾರೆ ಜೊತೆಗೆ. ಉಘೇ, ಉಘೇ ಎನ್ನುವವರೂ ಇರುತ್ತಾರೆ. ಅವರೆಲ್ಲ ಓದಿಗೆ ಹೊಸಬರೆನೋ ಎಂದೆನಿಸುತ್ತದೆ. ಹೇಗಿದ್ದ ಕಥೆಗೂ ಮೆಚ್ಚುಗೆ ಕೊಟ್ಟಿರುತ್ತಾರೆ.

ಅದೇನೇ ಇರಲಿ. ಈ ವಿಚಾರ ಹಂಚಿಕೊಳ್ಳುವ ಭಂಡ ಧೈರ್ಯ ಮಾಡಿದ್ದೇನೆ. ಕೆಲವರಿಗೆ ಹಿತವೆನಿಸಿದರೆ, ಹಲವರಿಗೆ ಅಹಿತ. ಕಲ್ಪನೆ, ಭಾವನೆಗಳನ್ನು ಕದಿಯುತ್ತಾರೆ! ಬಡಪಾಯಿ ಕವಿ ಬರೆದ ಕವಿತೆಯ ವಿಷಯವನ್ನೇ ಪ್ರಸಿದ್ಧರೆನಿಸಿದ ಕವಿ ಬರೆದಾಗ…. ಅವರ ಕವಿತೆ ಎಲ್ಲೆಡೆ ಓಡುತ್ತದೆ. ಇಂಥ ಕಲ್ಪನೆ! ಎನಿಸುತ್ತದೆ. ಹೇಳಲಾಗದ ಬಡಪಾಯಿ ಕವಿ ಚಡಪಡಿಸಿ, ಸುಮ್ಮನಾಗುತ್ತಾನೆ. ಕಾಲಾಯ ತಸ್ಮೈ ನಮಃ. ಎನ್ನೋಣ ಅಲ್ಲವೇ?

ಕಂಡದ್ದು ನಿಜವಾದರೂ, ಹೇಳುವ ಹಾಗಿಲ್ಲ ಈ ಕಾಲದಲ್ಲಿ. ಕೆಂಡದಂಥ ಕೋಪ ಬಂದೀತು. ಹೇಳೋದಕ್ಕೆ ಇವರ್ಯಾರು? ಎನ್ನಬಹುದು. ಆದರೂ ಹೇಳಿರುವೆ. ತೆನಾಲಿ ರಾಮ ತಲೆಗೆ ಗಡಿಗೆ ಹಾಕಿಕೊಂಡು ನಡೆದ ಹಾಗೇ, ನಾನು ಹೆಲ್ಮೆಟ್ ಹಾಕಿ ಹೆಜ್ಜೆ ಹಾಕುವ ಹಾಗಾದೀತೆ?