ವಸಂತ ಋತುಗಳನ್ನು ಎಲ್ಲ ಕಾಲಕ್ಕೂ ಕವಿಗಳು ಹಾಡಿಹೊಗಳುತ್ತ ಬಂದಿದ್ದಾರೆ. ಮಾವಿನ ಚಿಗುರು, ಕೋಗಿಲೆಯ ಕುಕಿಲು, ಮುಂಗಾರಿನ ಆರ್ಭಟ ಎಲ್ಲವೂ ಅವರ ವರ್ಣನೆಗೆ ಕಾರಣವಾಗಿವೆ. ಅದೇಕೋ ಬಿರುಬೇಸಗೆಯ, ಸುಡುಬಿಸಿಲಿನ ಅನಭವಗಳು ಅವರನ್ನು ಕಾಡಿದಂತೆ ಕಾಣುತ್ತಿಲ್ಲ. ಪ್ರಸ್ತುತ ಸನ್ನಿವೇಶದಲ್ಲಿ ಭೂಮಿಯ ದಗೆಯನ್ನು ಮೀರಿಸುವಂತೆ ಚುನಾವಣೆಯ ಕಾವು ಏರುತ್ತಿದೆ. ಆದಾಗ್ಯೂ, ಬಿಸಿಲಿನ ಕಾರಣಕ್ಕೋ ಏನೋ ಬೀದಿಯ ತುಂಬ ಕೇಳುತ್ತಿದ್ದ ಆರ್ಭಟದ ಮೈಕ್‌ಗಳ ಹಾವಳಿ ಈ ಬಾರಿ ತೀರ ಕಡಿಮೆಯಾಗಿದೆ.
ಡಾ. ಚಂದ್ರಮತಿ ಸೋಂದಾ ಬರೆಯುವ “ಮಾತು ಮಂದಲಿಗೆ” ಸರಣಿಯ ಹದಿನೆಂಟನೆಯ ಕಂತು ನಿಮ್ಮ ಓದಿಗೆ

ಆಕಾಶವಾಣಿಯ ಬೆಳಗಿನ ಕಾರ್ಯಕ್ರಮದಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿಯೊಬ್ಬರು ಸಲಹೆ ನೀಡುತ್ತಿದ್ದರು; ಕಡುಬೇಸಿಗೆಯ ದಾಹವನ್ನು ನೀಗಿಸಲು ಹುಣಸೆಹಣ್ಣಿನ ಪಾನಕ ತಯಾರಿಸಿ ಕುಡಿಯಿರಿ ಎಂದು. ಅದರ ವಿವರಗಳನ್ನೂ ನೀಡುತ್ತಿದ್ದರು. ಹುಣಸೆ ರಸವನ್ನು ತಯಾರಿಸಿ ಅದರ ಮೂರರಷ್ಟು ಬೆಲ್ಲ ಬೆರೆಸಿ, ಜೀರಿಗೆ ಪುಡಿ, ಕಾಳು ಮೆಣಸಿನ ಪುಡಿ ಹಾಕಿ, ತುಸು ಬ್ಲಾಕ್‌ಸಾಲ್ಟ್ ಸೇರಿಸಿ ಕುಡಿಯಿರಿ ಎಂದು. ಈ ವರ್ಷದ ಬೇಸಿಗೆ ಬಹುಕಾಲ ನೆನಪಲ್ಲಿ ಉಳಿಯುವಷ್ಟು ತೀವ್ರವಾಗಿದೆ. ಬಾಯಾರಿಕೆ ಸುಸ್ತುಗಳಿಂದ ಜನರು ಹೈರಾಣವಾಗುತ್ತಿದ್ದಾರೆ. ಹೌದು ಈ ಬಾರಿಯ ಬೇಸಿಗೆ ಎಲ್ಲರನ್ನೂ ತಲ್ಲಣಗೊಳಿಸುವ ಸುಡು ಬೇಸಿಗೆಯಾಗಿದೆ. ಬೆಳಗಿನ ಆಹ್ಲಾದಕರ ವಾತಾವರಣ ಕಾಣದೆ ಹಲವು ದಿನಗಳೇ ಕಳೆದಿವೆ. ಬೆಳ್ಳಂಬೆಳಗ್ಗೆಯೇ ಮೈ ಬೆವರುವ ಸೆಖೆ. ಈಗ ಕೆಲವು ದಿನಗಳಿಂದ ಬಯಲುನಾಡಲ್ಲಿ ಮಾತ್ರವಲ್ಲ, ಮಲೆನಾಡು ಕೂಡ ಬಿಸಿಯೇರಿ ಕಂಗೆಡುತ್ತಿದೆ. ಹಾಗಾಗಿ ನಮ್ಮನ್ನು ನಾವು ಕಾಪಾಡಿಕೊಳ್ಳಲು ಆಹಾರ ಸೇವನೆಯಲ್ಲಿ ಬದಲಾವಣೆ ಮಾಡಿಕೊಳ್ಳುವುದು ಅನಿವಾರ್ಯವಾಗಿದೆ.

ಬೇಸಿಗೆಗೆ ತಕ್ಕ ಪಾನೀಯ ಮತ್ತು ಊಟದಲ್ಲಿ ಬಳಸುವ ಮೇಲೋಗರಗಳ ಬದಲಾವಣೆಯನ್ನು ನಾವು ಚಿಕ್ಕವರಿರುವಾಗಲೇ ನಮ್ಮ ಅಜ್ಜಿ, ಅಮ್ಮಂದಿರು ಮಾಡುತ್ತಿದ್ದುದು ನೆನಪಾಗುತ್ತಿದೆ. ಈ ಬೆಲ್ಲದ ಪಾನಕ ಮಲೆನಾಡಿನ ಹಳ್ಳಿಗಳಲ್ಲಿ ತಲೆತಲಾಂತರಗಳಿಂದ ಬಳಕೆಯಲ್ಲಿದ್ದ ಪಾನೀಯ. ಸ್ವಲ್ಪ ಸುಸ್ತು ಅಂದರೆ ʻಇರು ಬೆಲ್ಲದ ಪಾನಕ ಮಾಡಿ ಕೊಡ್ತಿ, ಬಳಲಿಕೆ ಕಡ್ಮೆ ಆಗ್ತುʼ ಅನ್ನುತ್ತಿದ್ದರು. ಬೆಲ್ಲ ಪಿತ್ತೋಪಶಮನ ಎನ್ನುವ ನಂಬಿಕೆ ಚಾಲ್ತಿಯಲ್ಲಿದೆ. ಹಾಗಾಗಿಯೇ ಆ ಭಾಗದಲ್ಲಿ ಮನೆಗೆ ಬಂದವರಿಗೆ ಮೊದಲು ಬೆಲ್ಲ ನೀರು ಕೊಡುವ ರೂಢಿ ಬೆಳೆದುಬಂದಿರಬೇಕು. ಬಿಸಿಲುಕಾಲದಲ್ಲಿ ಹೊರಗಿನಿಂದ ಬಂದವರು ಬೆಲ್ಲನೀರು ಕುಡಿಯುವುದು ಮಾಮೂಲಾಗಿತ್ತು. ʻಈ ಸೆಖೆಲ್ಲಿ ನಂಗೆ ನಾಳೆಯಿಂದ ಚಾ ಬೇಡ, ತಂಪು ಮಾಡುʼ ಎನ್ನುತ್ತಿದ್ದರು ಮನೆಯ ಹಿರಿಯ ಗಂಡಸರು. ಇದಕ್ಕೆ ಕಾದಿರುವವರಂತೆ ಮಹಿಳೆಯರೂ ಮರುದಿನದಿಂದ ನಾಲ್ಕು ಗಂಟೆಯ ಚಹಾ ಅಥವಾ ಇನ್ಯಾವುದೇ ಬಿಸಿ ಪಾನೀಯಗಳಿಗೆಲ್ಲ ಕೊಕ್‌ ಕೊಡುತ್ತಿದ್ದರು. ಎಲ್ಲ ದಿನವೂ ಒಂದೇ ಬಗೆಯ ತಂಪು ಪಾನೀಯ ಇರುತ್ತಿರಲಿಲ್ಲ. ಸಾಧಾರಣವಾಗಿ ಬಿಳೀ ಎಳ್ಳನ್ನು ತೊಳೆದು ಒರಳಿನಲ್ಲಿ ಬೀಸಿ ಅದಕ್ಕೆ ಸ್ವಲ್ಪ ಬೆಲ್ಲ ಮತ್ತು ಹಾಲು ಸೇರಿಸಿ ನಮಗೆಲ್ಲ ಕೊಡುತ್ತಿದ್ದರು. ರುಚಿಗೆಂದು ಏಲಕ್ಕಿಯನ್ನೂ ಎಳ್ಳಿನೊಂದಿಗೆ ಬೆರೆಸುವುದರಿಂದ ಅದಕ್ಕೊಂದು ರುಚಿ ಒದಗುತ್ತಿತ್ತು. ಬಿಸಿ ಆರುತ್ತದೆ ಎನ್ನುವ ಪ್ರಮೇಯವಿಲ್ಲದುದರಿಂದ ಒಂದು ಬೋಗುಣಿಯಲ್ಲಿ ಅದನ್ನು ಮುಚ್ಚಿಡುತ್ತಿದ್ದರು. ಪ್ರಮಾಣ ತುಸು ಹೆಚ್ಚೇ ಇರುತ್ತಿತ್ತು. ಅವಸರವಿಲ್ಲದೆ ಕುಡಿಯಬೇಕೆನಿಸಿದಾಗ ಕುಡಿಯಬಹುದಿತ್ತು. ಒಂದೊಂದು ದಿವಸ ʻಹೆಸರುಹಣಿʼ ತಯಾರಾಗುತ್ತಿತ್ತು. ಹೆಸರುಕಾಳನ್ನು ನೆನಸಿ ಅದನ್ನು ಎಳ್ಳಿನಂತೆಯೇ ರುಬ್ಬಿ ಬೆಲ್ಲದೊಂದಿಗೆ ಹಾಲನ್ನೂ ಬೆರಸಿ ತಯಾರಿಸುತ್ತಿದ್ದರು. ಕೆಲವೊಮ್ಮೆ ಕಾಮಕಸ್ತೂರಿ ಬೀಜವನ್ನು (ಕೆಲವರು ಇದಕ್ಕೆ ರೇಣುಕೆಬೀಜ ಎನ್ನುತ್ತಾರೆ) ನೆನೆಸಿ ಹಾಲು ಬೆಲ್ಲದೊಂದಿಗೆ ತಯಾರಿಸುವುದೂ ಇತ್ತು. ಇವೆಲ್ಲ ದೇಹಕ್ಕೆ ತಂಪನ್ನು ನೀಡುತ್ತದೆ ಎನ್ನುವ ನಂಬಿಕೆ ಇದ್ದುದರಿಂದ ʻನನಗೆ ಸೇರೋದಿಲ್ಲʼ ಎನ್ನುವ ʻಕಣಿʼಗೆ ಅವಕಾಶ ಇರಲಿಲ್ಲ. ಮಜ್ಜಿಗೆ, ಪಾನಕಗಳು ಏರುಬಿಸಿಲಿನ ಹೊತ್ತಿಗೆ ತಯಾರಾಗಿ ಕುಳಿತಿರುತ್ತಿದ್ದವು. ಬೆಳಗಿನ ತಿಂಡಿ ಮುಗಿಸಿ ತೋಟಕ್ಕೋ ಗದ್ದೆಗೋ ಹೋಗಿಬರುತ್ತಿದ್ದ ಮನೆಯ ಗಂಡಸರಿಗೆ ಅವರು ಮನೆಗೆ ಬರುವಷ್ಟರಲ್ಲಿ ಸಿದ್ಧಗೊಂಡಿದ್ದ ಇವುಗಳ ಸೇವೆ ನಡೆಯುತ್ತಿತ್ತು. ಮಕ್ಕಳೂ ಅದರಲ್ಲಿ ಪಾಲುದಾರರೇ.

ನಮ್ಮ ಸೋದರ ಮಾವ ತಮಾಶೆ ಮಾಡುತ್ತಿದ್ದರು; ʻತಂಬಳಿ ಮುಖ್ಯಂತು ಬ್ರಾಹ್ಮಣʼ ಅಂತ. ಮಲೆನಾಡಿನಲ್ಲಿ ತಂಬಳಿ ಎನ್ನುವ ಮೇಲೋಗರ ಬ್ರಾಹ್ಮಣ ಸಮುದಾಯದಲ್ಲಿ ಬಳಕೆಯಾಗುವಂಥದು. ಇನ್ನು ಬೇಸಿಗೆಯಲ್ಲಂತೂ ಊಟ ಪ್ರಾರಂಭವಾಗುವುದೇ ತಂಬಳಿಯೊಂದಿಗೆ. ʻಇವತ್ತು ಎಂಥ ತಂಬಳಿ?ʼ ಎನ್ನುತ್ತಲೇ ಅನ್ನವನ್ನು ಪಾಲುಮಾಡಿ ಕಲೆಸಲು ಶುರುಮಾಡುವವರು ಅಪರೂಪವಲ್ಲ. ಯಾಕೆಂದರೆ ಅಷ್ಟೊಂದು ವಿಧದಲ್ಲಿ ತಂಬಳಿಯನ್ನು ಮಾಡುವುದಿದೆ. ಮನೆಯ ಅಂಗಳದಲ್ಲಿ ಬೆಳೆಯುವ ಮಜ್ಜಿಗೆ ಹುಲ್ಲಿನಿಂದ ಹಿಡಿದು ಕಾಡಿನಲ್ಲಿ ಬೆಳೆಯುವ ಹಲವು ಬಗೆಯ ಸೊಪ್ಪುಗಳು ತಂಬಳಿಯ ಮೂಲಧಾತುಗಳು. ಒಂದೆಲಗ, ಎಲೂರಿಗೆ ಕುಡಿ, ಕನ್ನೆಕುಡಿ ಅಷ್ಟೆ ಅಲ್ಲ, ಹತ್ತಿಕುಡಿಯೂ ತಂಬುಳಿಗೆ ಬಳಕೆಯಾಗುತ್ತಿತ್ತು. ಇನ್ನು ಊರಮುಂದಿನ ದೇವಸ್ಥಾನದ ಬಿಲ್ವಪತ್ರೆಯ ಚಿಗುರೂ ತಂಬುಳಿಗೆ ಆಕರ. ಶುಂಟಿ, ಅಂಬೆಕೊಂಬು (ಮಾಂಗಾಯಿಶುಂಟಿ) ಹಸಿ ಅರಶಿನ ಕೂಡ ಶುಂಟಿಯ ಪರಿಕರಗಳೇ. ಸೊಪ್ಪಿನಂತೆ ಇವನ್ನು ತುಪ್ಪದಲ್ಲಿ ಹುರಿಯಬೇಕಿಲ್ಲ. ಕೆಲವು ತರಕಾರಿಗಳು, ತಿರುಳು ಕೂಡ ತಂಬುಳಿಗೆ ಬಳಸುವ ಪದಾರ್ಥಗಳೇ. ಹೀರೆಕಾಯಿ ತಂಬುಳಿ, ಪಡವಲ ಕಾಯಿ ಮತ್ತು ಸೌತೆಕಾಯಿ ತಿರುಳುಗಳ ತಂಬುಳಿಗಳನ್ನು ಸವಿದೇ ನೋಡಬೇಕು. ಬೇಸಿಗೆಯ ಕಾಡಿನ ಬೆಳೆಯಾದ ಮುರುಗಲು (ಕೋಕಂ) ಹಣ್ಣಿನ ತಂಬುಳಿಗೆ ಮದುವೆ ಮನೆಯಲ್ಲಿಯೂ ಸ್ಥಾನ. ಕಳೆದ ಬಾರಿಯ ಬೇಸಿಗೆಯಲ್ಲಿ ಸುಮಾರು ಐವತ್ತಕ್ಕೂ ಅಧಿಕ ಬಗೆಯ ತಂಬುಳಿಗಳ ವಿವರಗಳು ವಾಟ್ಸಾಪ್‌ನಲ್ಲಿ ಓಡಾಡುತ್ತಿದ್ದವು. ಅಡಿಗೆಮನೆಯೂ ಪ್ರಯೋಗಶಾಲೆಯೇ. ಹೊಸಹೊಸ ಅಡಿಗೆಯ ನಮೂನೆಗಳು ಆಯಾ ಋತುಮಾನಕ್ಕೆ ಸರಿಹೊಂದುವಂತೆ ಆಧುನಿಕ ಜಗತ್ತಿನಲ್ಲಿಯೂ ಸಿದ್ಧಗೊಂಡು ಇತರರಿಗೂ ಅದರ ಮಾಹಿತಿ ರವಾನೆಯಾಗುತ್ತಿರುವುದು ಆರೋಗ್ಯದ ದೃಷ್ಟಿಯಿಂದ ಸ್ವಾಗತವೇ. ಅಜ್ಜಿಕಾಲದ ಆಭರಣಗಳು, ಉಡುಪುಗಳು ಮೊಮ್ಮಗಳ ಕಾಲಕ್ಕೆ ನವನವೀನ ವಿನ್ಯಾಸಗಳನ್ನು ಪಡೆದು ತಯಾರಾಗುವಂತೆ.

ಈಗ ಮಕ್ಕಳಿಗೆ ಬೇಸಿಗೆ ರಜೆ ಪ್ರಾರಂಭವಾಗಿದೆ. ಮುಖ್ಯವಾಗಿ ನಗರ ಪ್ರದೇಶದಲ್ಲಿರುವ ಹೆತ್ತವರಿಗೆ ಈ ರಜೆಯಲ್ಲಿ ಮಕ್ಕಳನ್ನು ಸಂಭಾಳಿಸುವುದು ಹೇಗೆ ಎನ್ನುವ ಗೊಂದಲ, ತಲೆನೋವು. ಅನುಕೂಲ ಮತ್ತು ಸಾಧ್ಯತೆ ಇರುವವರು ಬೇಸಿಗೆ ಶಿಬಿರ, ಅದಕ್ಕಾಗಿ ಇರುವ ಪ್ರತ್ಯೇಕ ತರಗತಿಗಳು ಎಂದು ಹುಡುಕಿ ಮಕ್ಕಳನ್ನು ಸೇರಿಸುತ್ತಾರೆ. ಇದಕ್ಕೂ ಸಾಕಷ್ಟು ಸ್ಪರ್ಧೆ. ಬೆಳಗಿನ ಜಾವವೇ ಕ್ಯೂ ನಿಂತು ತಮ್ಮ ಮಗುವಿಗೆ ಅಲ್ಲಿ ಸೀಟು ಸಿಕ್ಕಿದೆ ಎಂದು ನಿಟ್ಟುಸಿರು ಬಿಡುವವರೂ ಇದ್ದಾರೆ. ಹಳ್ಳಿಯಿಂದ ಬಂದು ಪ್ರಸ್ತುತ ನಗರವಾಸಿಗಳಾಗಿರುವ ತಂದೆ-ತಾಯಿಯರಲ್ಲಿ ಕೆಲವರಿಗೆ ಹಳ್ಳಿಗೆ ಹೋಗುವ ಸವಲತ್ತು ಇದ್ದರೆ, ಅಲ್ಲಿ ಬಂಧುಗಳು ಇದ್ದಲ್ಲಿ ಮಕ್ಕಳಿಗೆ ಹೋಗುವ ಅವಕಾಶವೂ ಇದೆ. ಅಜ್ಜಿಮನೆ, ಹಳ್ಳಿಮನೆ ಎನ್ನುವ ಕೃತಕ ಪರಿಸರಕ್ಕೆ ಬದಲಾಗಿ ನಿಜವಾದ ಅವಕಾಶವೇ ದೊರೆತರೆ ಅದೊಂದು ಸೌಕರ್ಯ. ನಗರಕ್ಕೆ ಬಂದ ಮೊದಲ ತಲೆಮಾರಿನವರಿಗೆ ಅವರ ಮಕ್ಕಳನ್ನು ತಮ್ಮ ಹುಟ್ಟೂರಿಗೆ ಕಳುಹಿಸುವ ಸೌಲಭ್ಯ ತೆರೆದಿತ್ತು. ಅಲ್ಲಿಯ ಮಕ್ಕಳಿಗೂ ಶಾಲೆಗೆ ರಜೆ ಇರುವುದರಿಂದ ಮಕ್ಕಳು ಅವರ ಮನೆಯಲ್ಲಿಯೇ ಇರುತ್ತಾರೆ ಎನ್ನುವ ಹಾಗೂ ಇರಲಿಲ್ಲ. ನೆಂಟರ ಮನೆಗಳಿಗೆ ಲಗ್ಗೆ ಇಡದಿದ್ದರೆ ಬೇಸಿಗೆ ರಜೆಯ ಮಜಾ ಬರುತ್ತಿರಲಿಲ್ಲ.

ಊರಿನಲ್ಲಿ ರಜೆಯ ದಿನಗಳನ್ನು ಮುಗಿಸಿ ಬಂದ ಮಕ್ಕಳನ್ನು ಕೇಳಿದರೆ ಹೇಳುತ್ತಿದ್ದರು, ಅವರು ತಿರುಗಾಡಿ ಬಂದಿರುವ ನೆಂಟರ ಮನೆಗಳ ವಿವರಗಳನ್ನು. ಒಬ್ಬರು ಇನ್ನೊಬ್ಬರ ಮನೆಗೆ ಹೋಗುವುದು, ಅವರ ಮಕ್ಕಳನ್ನೂ ಒಡಗೊಂಡು ಇನ್ನೊಂದು ನೆಂಟರ ಮನೆಗೆ ಅಲ್ಲಿಂದ ಹೊರಡುತ್ತಿದ್ದರು. ಈಗಿನಂತೆ ಹೆಚ್ಚಿನ ಅನುಕೂಲದ ನಿರೀಕ್ಷೆ ಇರಲಿಲ್ಲವಾದುದರಿಂದ ʻಹರಿಹಾಸಿಗೆʼ ಎದ್ದರೆ ಸಾಕಿತ್ತು ಎಲ್ಲರೂ ಒಂದೆಡೆ ಮಲಗಲಿಕ್ಕೆ. ಹಳ್ಳಿಯ ಮಕ್ಕಳ ಅನುಭವಗಳು ನಗರದ ಮಕ್ಕಳಿಗೆ ಹಾಗೂ ನಗರದ ಮಕ್ಕಳ ಅನುಭವಗಳು ಹಳ್ಳಿಯ ಮಕ್ಕಳಿಗೆ ಅವರ ಮಾತುಕತೆಗಳ ಮೂಲಕ ದಕ್ಕುತ್ತಿದ್ದವು. ಯಾರೋ ತಲೆ ಬಾಚುತ್ತಿದ್ದರು, ಮತ್ಯಾರೋ ಮನೆಯ ಹಾಗೂ ಬಂದಿರುವ ಮಕ್ಕಳೆಲ್ಲರ ಬಟ್ಟೆಗಳನ್ನು ತೊಳೆದು ಒಣಗಿಸುತ್ತಿದ್ದರು. (ಆಗಿನ್ನೂ ಹಳ್ಳಿಗಳಿಗೆ ವಾಶಿಂಗ್‌ ಮಿಶನ್‌ ಕಾಲಿಟ್ಟಿರಲಿಲ್ಲ) ಮದುವೆ ಅಥವಾ ವಿಶೇಷ ದಿನಗಳಿದ್ದರೆ ಹೊತ್ತುಹೊತ್ತಿಗೆ ಬಟ್ಟೆ ಬದಲಿಸುವ ರೂಢಿ ಇನ್ನೂ ಬೆಳೆದಿರಲಿಲ್ಲ. ಹೊಳೆಯಲ್ಲಿ ಅಥವಾ ಕೆರೆಯಲ್ಲಿ ಈಜಾಡುವುದು, ಜೇನು ಕೀಳಲು ಹಿರಿಯರ ಜೊತೆಗೆ ಹೋಗುವುದು, ಊರಿನಲ್ಲಿ ಕೋಟೆ-ಕೊತ್ತಲಗಳಿದ್ದರೆ, ದೇವಸ್ಥಾನಗಳಿದ್ದರೆ ಸುತ್ತುವುದು ಇವೆಲ್ಲವೂ ರಜೆಯ ಭಾಗಗಳೇ ಆಗಿದ್ದ ದಿನಗಳವು. ರಜೆಯಲ್ಲಿ ಯಾವ ಊರಿಗೆ ಹೋಗುವುದು, ಯಾವ ರೆಸಾರ್ಟ್ ಬುಕ್‌ ಮಾಡುವುದು ಎನ್ನುವ ಆಲೋಚನೆ, ಅವಕಾಶಗಳು ಇನ್ನೂ ಶುರುವಾಗಿರಲಿಲ್ಲ. ಆ ಕಾಲಕ್ಕೆ ಹೊಂದುವಂತಹ ಗೀತೆಯೊಂದು ಹೀಗಿದೆ.

ಎಲ್ಲ ದಿನವೂ ಒಂದೇ ಬಗೆಯ ತಂಪು ಪಾನೀಯ ಇರುತ್ತಿರಲಿಲ್ಲ. ಸಾಧಾರಣವಾಗಿ ಬಿಳೀ ಎಳ್ಳನ್ನು ತೊಳೆದು ಒರಳಿನಲ್ಲಿ ಬೀಸಿ ಅದಕ್ಕೆ ಸ್ವಲ್ಪ ಬೆಲ್ಲ ಮತ್ತು ಹಾಲು ಸೇರಿಸಿ ನಮಗೆಲ್ಲ ಕೊಡುತ್ತಿದ್ದರು. ರುಚಿಗೆಂದು ಏಲಕ್ಕಿಯನ್ನೂ ಎಳ್ಳಿನೊಂದಿಗೆ ಬೆರೆಸುವುದರಿಂದ ಅದಕ್ಕೊಂದು ರುಚಿ ಒದಗುತ್ತಿತ್ತು. ಬಿಸಿ ಆರುತ್ತದೆ ಎನ್ನುವ ಪ್ರಮೇಯವಿಲ್ಲದುದರಿಂದ ಒಂದು ಬೋಗುಣಿಯಲ್ಲಿ ಅದನ್ನು ಮುಚ್ಚಿಡುತ್ತಿದ್ದರು. ಪ್ರಮಾಣ ತುಸು ಹೆಚ್ಚೇ ಇರುತ್ತಿತ್ತು. 

ಬೇಸಿಗೆ ರಜೆಯಲಿ ಅಪ್ಪನ ಜೊತೆ ನಾ ಹಳ್ಳಿಗೆ ಹೋಗುವೆನು
ಬೆವರನು ಸುರಿಸುವ ರೈತರ ಜೊತೆಯಲಿ ನಾನು ದುಡಿಯುವೆನು
ಮುಗಿಲನೆ ಮುಟ್ಟುವ ಎತ್ತರ ದನಿಯಲಿ ಹಾಡನು ಹೇಳುವೆನು
ಜಗದಲಿ ನಡೆದಿಹ ಕೌತುಕ ವಿಷಯವ ಅವರಿಗೆ ತಿಳಿಸುವೆನು
ತೋಟದಿ ಬೆಳೆದಿಹ ಬಗೆಬಗೆ ಹಣ್ಣಿನ ಸವಿಯನು ಸವಿಯುವೆನು
ಹಚ್ಚನೆ ಹಸುರಿನ ಸುಂದರ ಸೃಷ್ಟಿಯ ಸೊಬಗನು ಕಾಣುವೆನು

ವಿದ್ಯಾಶಂಕರ ಅವರು ಬರೆದಿರುವ ಬೇಸಿಗೆ ರಜೆಯಲ್ಲಿ ಮಕ್ಕಳು ಕೈಗೊಳ್ಳುವ ಕಾರ್ಯಗಳನ್ನು ವಿವರಿಸುವ ಈ ಗೀತೆ ಮೂರ್ನಾಲ್ಕು ದಶಕಗಳ ಹಿಂದಿನ ಕಾಲಕ್ಕೆ ನಮ್ಮನ್ನು ಕರೆದೊಯ್ಯುತ್ತದೆ. ಆಗಿನ್ನೂ ಸ್ಥಿರ ದೂರವಾಣಿಗಳೇ ಅಪರೂಪವಾಗಿದ್ದವು. ಚರದೂರವಾಣಿ ಫೋನ್‌ ಅದರಲ್ಲಿಯೂ ಆಂಡ್ರಾಯಿಡ್‌ ಫೋನ್‌ ಎಲ್ಲರ ಕೈಯನ್ನೂ ಅಲಂಕರಿಸಿದ ಮೇಲೆ ಯಾರಿಗೂ ಇತರರೊಂದಿಗೆ ಮಾತನಾಡಲು, ಸುತ್ತಾಡಲು ಪುರುಸೊತ್ತು ಇರುವುದಿಲ್ಲ. ಮನೆಯಲ್ಲಿರುವವರನ್ನು ಫೋನ್‌ ಇಲ್ಲವೆ ಮೆಸೇಜ್‌ ಮೂಲಕ ಊಟಕ್ಕೆ ಬನ್ನಿ ಎನ್ನುವ ಕಾಲದಲ್ಲಿ ನಾವಿದ್ದೇವೆ. ನಾವು ಚಿಕ್ಕವರಿರುವಾಗ ತೋಟಕ್ಕೆ ಹೋದವರನ್ನು ಊಟಕ್ಕೆ ಕರೆದು ಬನ್ನಿ ಎಂದರೆ ತೋಟದ ಬಾಗಿಲಲ್ಲಿ ನಿಂತು ಜೋರಾಗಿ ಕೂ ಹಾಕುತ್ತಿದ್ದೆವು. ಅದರಲ್ಲಿಯೂ ಸ್ಪರ್ಧೆ ಇರುತ್ತಿತ್ತು, ಯಾರು ಎಷ್ಟು ಜೋರಾಗಿ ಕೂ ಹಾಕುತ್ತೇವೆ ಅಂತ. ʻಹಚ್ಚನೆ ಹಸುರಿನ ಸುಂದರ ಸೃಷ್ಟಿಯ ಸೊಬಗನು ಕಾಣುವೆನುʼ ಎನ್ನುವುದು ಇತ್ತೀಚಿನ ದಿನಗಳಲ್ಲಿ ನಿರೀಕ್ಷೆಯಾಗಿಯೇ ಉಳಿದಿದೆ. ನಮ್ಮ ಸ್ವಾರ್ಥಕ್ಕೆ ತಕ್ಕಂತೆ ಪ್ರಕೃತಿಯನ್ನು ಮನಸೋ ಇಚ್ಛೆ ಬಳಸಲು ಪ್ರಾರಂಭಿಸಿದ ಮೇಲೆ ಅದು ನಮ್ಮ ಮೇಲೆ ಮುನಿಸಿಕೊಂಡಂತೆ ಕಾಣುತ್ತಿದೆ. ಇದುವರೆವಿಗೂ ಮುಂಗಾರು ಮಳೆಯ ವಿಳಾಸ ಕಳೆದುಹೋಗಿರುವ ಕಾರಣದಿಂದ ಭೂಮಿಯ ಒಡಲು ಬತ್ತಿಹೋಗಿದೆ; ಎಲ್ಲೆಡೆ ಹಸಿರು ಮಾಯವಾಗಿ ಧರೆ ಬಣಗುಡುತ್ತಿದೆ.

ಎಷ್ಟೊಂದು ವಿಷಯಗಳನ್ನು ಕುರಿತಂತೆ ಕನ್ನಡ ಕವಿಗಳು ಕವಿತೆಗಳನ್ನು ರಚಿಸಿದ್ದಾರೆ. ಋತುಗಳು ಅವರನ್ನು ಸೆಳೆದಿವೆ. ಅವುಗಳಲ್ಲಿ ವಸಂತನಿಗೆ ಪ್ರಾಧಾನ್ಯ. ಆದಾಗ್ಯೂ, ಬೇಸಿಗೆ ಪ್ರಖರತೆಯನ್ನು ಕುರಿತು ಗಮನ ಹರಿಸಿದವರು ಇಲ್ಲ ಎನ್ನುವಷ್ಟು. ಬಿ.ಆರ್. ಲಕ್ಷ್ಮಣರಾವ್‌ ಅವರಿಗೆ ಸುಡುಬಿಸಿಲಿನ ಬೇಸಿಗೆ ಕಂಡುದು ಹೀಗೆ. ಶಾಲೆ, ತರಗತಿ ಎಲ್ಲವನ್ನೂ ಮುಗಿಸಿ ಬಿಡುವಾಗಿರುವ ಬೇಸಿಗೆ ರಜೆಯಲ್ಲಿ ಬಿಸಿಲು ಸುಡುತ್ತಿದ್ದರೆ ಮಕ್ಕಳಿಗೆ ರಜೆಯ ಮಜವೇ ದೊರಕದು. ಇದನ್ನು ಅವರು ಕಂಡರಿಸಿದ್ದು ಹೀಗೆ;

ಬಂದಿದೆ ಬೇಸಿಗೆ ರಜ ಎಲ್ಲರಿಗೂ ಬಿಸಿಲಿನ ಸಜ
ಬನ್ನಿ ಆಡೋಣ ಸೂರ್ಯನ ಮಹಿಮೆಯ ಹಾಡೋಣ
ಏಕೆ ನಮಗಿಂತ ತಾಪ ಯಾರ ಮೇಲವನ ಕೋಪ
ಎಂದು ಹಳಿಯಬೇಡಿ ಸೂರ್ಯನ ತಪ್ಪು ಎಂದು ತಿಳಿಯಬೇಡಿ
ಮೋಡ ಕೂಡಿಸಲು ಇಳೆಗೆ ಮಳೆ ತರಲು ಉರಿಯುತಿಹನು ಪಾಪ

ಎಂದು ಸೂರ್ಯನ ಬಗ್ಗೆ ವಕೀಲಿಕೆ ನಡೆಸುವ ಕವನವು ಮುಂದುವರಿದು ಅವನನ್ನು ಬೈಯಲಿ, ಹೊಗಳಲಿ ಅವನು ಕುಗ್ಗುವುದೂ ಇಲ್ಲ, ಹಿಗ್ಗುವುದು ಇಲ್ಲ, ತನ್ನ ಕರ್ತವ್ಯ ಮಾಡುತ್ತಾನೆ ಎನ್ನುವ ಸಮರ್ಥನೆ ನೀಡುತ್ತದೆ.

ವಸಂತ ಋತುಗಳನ್ನು ಎಲ್ಲ ಕಾಲಕ್ಕೂ ಕವಿಗಳು ಹಾಡಿಹೊಗಳುತ್ತ ಬಂದಿದ್ದಾರೆ. ಮಾವಿನ ಚಿಗುರು, ಕೋಗಿಲೆಯ ಕುಕಿಲು, ಮುಂಗಾರಿನ ಆರ್ಭಟ ಎಲ್ಲವೂ ಅವರ ವರ್ಣನೆಗೆ ಕಾರಣವಾಗಿವೆ. ಅದೇಕೋ ಬಿರುಬೇಸಗೆಯ, ಸುಡುಬಿಸಿಲಿನ ಅನಭವಗಳು ಅವರನ್ನು ಕಾಡಿದಂತೆ ಕಾಣುತ್ತಿಲ್ಲ. ಪ್ರಸ್ತುತ ಸನ್ನಿವೇಶದಲ್ಲಿ ಭೂಮಿಯ ದಗೆಯನ್ನು ಮೀರಿಸುವಂತೆ ಚುನಾವಣೆಯ ಕಾವು ಏರುತ್ತಿದೆ. ಆದಾಗ್ಯೂ, ಬಿಸಿಲಿನ ಕಾರಣಕ್ಕೋ ಏನೋ ಬೀದಿಯ ತುಂಬ ಕೇಳುತ್ತಿದ್ದ ಆರ್ಭಟದ ಮೈಕ್‌ಗಳ ಹಾವಳಿ ಈ ಬಾರಿ ತೀರ ಕಡಿಮೆಯಾಗಿದೆ. ವೇದಿಕೆಗಳಿಂದಲೋ, ಜಾಲತಾಣಗಳ ಮೂಲಕವೋ ಒಬ್ಬರು ಇನ್ನೊಬ್ಬರಿಗೆ ಬಿಸಿ ತಾಗಿಸುವುದರಲ್ಲಿ ತಲ್ಲೀನರಾಗಿರುವುದು ಇದಕ್ಕೆ ಕಾರಣವಿರಬಹುದು.

ಯಾತಕ್ಕೆ ಮಳೆ ಹೋದವೋ ಶಿವ ಶಿವ
ಲೋಕಾ ತಲ್ಲಣೀಸುತಾವೋ
ಬೇಕಿಲ್ಲದಿದ್ದಾರೆ ಬೆಂಕೀಯ ಮಳೆ ಸುರಿದು
ಉರಿಸಿ ಕೊಲ್ಲಲು ಬಾರದೆ

ಪ್ರಕೃತಿ ಮುನಿಸಿಕೊಂಡು ಮಳೆ ಸುರಿಯದಿದ್ದಾಗ ತಮ್ಮ ಬದುಕು ಯಾವ ಸ್ಥಿತಿ ತಲುಪಿದೆ ಎನ್ನುವುದನ್ನು ಗೀತೆಯ ಮೂಲಕ ತಮ್ಮ ದೈವದಲ್ಲಿ ನಿವೇದಿಸಿಕೊಂಡಿದ್ದಾರೆ. ಮತ್ತೆ ಅಂಥ ಸಂದರ್ಭ ಬಾರದಿರಲಿ, ಬಿಸಿಲಿನ ಪ್ರಖರತೆ ತಗ್ಗಿ ಮನುಕುಲ ನೆಮ್ಮದಿಯಿಂದ ಬದುಕುವ ಅವಕಾಶವನ್ನು ಪ್ರಕೃತಿ ಕಲ್ಪಿಸುತ್ತದೆ, ನಮ್ಮ ಬವಣೆ ನಿವಾರಣೆಯಾಗುತ್ತದೆ, ಎನ್ನುವ ಭರವಸೆಯೊಂದಿಗೆ ಮಳೆಯ ನಿರೀಕ್ಷೆ ಮಾಡೋಣ.