ಮಾರಿಸ್ ಸಲೇಯ್ಸ್-ರಲ್ಲಿರುವ ಅನುವಾದಕಾರನ ಪ್ರತಿಭೆ ಅವರ ಕಾವ್ಯದ ಭಾಷೆಯಲ್ಲಿ ಪ್ರತಿಫಲಿಸುತ್ತದೆ. ಅವರ ಕಾವ್ಯ ಭಾಷೆಯು ವಿವಿಧ ಭಾಷಾ ಸಾಧನಗಳೊಂದಿಗೆ ಸಂಯಮದ, ಆದರೆ ಸೂಕ್ಷ್ಮಚಿತ್ರಕಾರ್ಯದ ವಿನೋದತೆಯನ್ನು (filigree game) ತೋರಿಸುತ್ತದೆ: ಭಾಷಾಪದಗಳ ವಿಭಿನ್ನ ಪದರಗಳು, ನವಪದಗಳು, ಹಳೆಯ ಪದಗಳು ಮತ್ತು ಸ್ಥಳೀಯ ಹೆಸರುಗಳ ಬಳಕೆ ಕಾವ್ಯದ ಸಾಲುಗಳಲ್ಲಿ ಅಪ್ರಜ್ಞಾಪೂರ್ವಕವಾಗಿ ಪ್ರದರ್ಶಿಸಲಾಗುತ್ತದೆ.
ಎಸ್. ಜಯಶ್ರೀನಿವಾಸ ರಾವ್ ಬರೆಯುವ “ಲೋಕ ಕಾವ್ಯ ವಿಹಾರ” ಸರಣಿಯಲ್ಲಿ ಲ್ಯಾಟ್ವಿಯಾ ದೇಶದ ಕವಿ ಮಾರಿಸ್ ಸಲೇಯ್ಸ್‌ರ(Māris Salējs) ಕಾವ್ಯದ ಕುರಿತ ಬರಹ ಹಾಗೂ ಅವರ ಕೆಲವು ಅನುವಾದಿತ ಕವಿತೆಗಳು ನಿಮ್ಮ ಓದಿಗೆ

ಸಮಕಾಲೀನ ಲ್ಯಾಟ್ವಿಯನ್ ಕಾವ್ಯಲೋಕದಲ್ಲಿ ಅಸಾಧ್ಯವೆಂದು ತೋರುವ ಶಾಸ್ತ್ರೀಯ ಕಾವ್ಯದ ಅತ್ಯುತ್ತಮ ವಿಷಯ ಮೌಲ್ಯಗಳನ್ನು ರೂಪ ಮತ್ತು ಅಭಿವ್ಯಕ್ತಿಯ ನವೀನತೆಯೊಂದಿಗೆ ಸಂಯೋಜಿಸಿ ನಿಭಾಯಿಸುವಲ್ಲಿ ಯಶಸ್ವಿಯಾದ ಕೆಲವರಲ್ಲಿ ಮಾರಿಸ್ ಸಲೇಯ್ಸ್-ರು ಒಬ್ಬರು.

(ಮಾರಿಸ್ ಸಲೇಯ್ಸ್‌)

ಜನವರಿ 1971-ರಲ್ಲಿ ಜನಿಸಿದ ಮಾರಿಸ್ ಸಲೇಯ್ಸ್-ರು (ನಿಜನಾಮ, ಮಾರಿಯನ್ಸ್ ರಿಜೀಯ್ಸ್; Marians Rižijs) ಕವಿಯಲ್ಲದೆ, ಅನುವಾದಕ, ವಿಮರ್ಶಕ ಹಾಗೂ ಸಾಹಿತ್ಯ ಸಂಶೋಧಕರಾಗಿಯೂ ಹೆಸರು ಪಡೆದಿದ್ದಾರೆ. ಅವರು ಪೋಲಿಷ್, ಯುಕ್ರೇನಿಯನ್ ಹಾಗೂ ರಷ್ಯನ್ ಭಾಷೆಗಳಿಂದ ಖ್ಯಾತ ಕವಿಗಳ ಕವನಗಳನ್ನು ತಮ್ಮ ಲ್ಯಾಟ್ವಿಯನ್ ಭಾಷೆಗೆ ಅನುವಾದಿಸುತ್ತಾರೆ. ನೊಬೆಲ್ ಪ್ರಶಸ್ತಿ ವಿಜೇತ ಪ್ರಖ್ಯಾತ ಪೋಲಿಷ್ ಕವಿ ಚೆಸ್‌ಲಾಫ಼್ ಮೀಲೋಶ್‌ರ (Czeslaw Milosz) ಪ್ರಬಂಧಗಳ ಸಂಕಲನ ‘ನೇಟಿವ್ ಯೂರೊಪ್’-ನ ಅನುವಾದ ಅವರ ಅತಿ ಮುಖ್ಯ ಅನುವಾದಗಳಲ್ಲಿ ಒಂದಾಗಿದೆ. 1999-ರಿಂದ 2005-ರವರೆಗೆ, ಸಲೇಯ್ಸ್ ಅವರು ‘ಲೂನಾ’ ಸಾಹಿತ್ಯ ಪತ್ರಿಕೆಯಲ್ಲಿ ಸಂಪಾದಕರಾಗಿ ಕೆಲಸ ಮಾಡಿದರು. ಅವರು ಲಾಟ್ವಿಯಾ ವಿಶ್ವವಿದ್ಯಾಲಯದಲ್ಲಿ ಹಾಗೂ ರೀಗಾದ ಅಕಾಡಮಿ ಆಫ಼್ ಕಲ್ಚರ್‌ನಲ್ಲಿ ಗ್ರಂಥಪಾಲಕರಾಗಿ ಕೆಲಸ ಮಾಡಿದ್ದಾರೆ ಮತ್ತು ಲೇಖಕರಾಗಿ, ಸಂಪಾದಕರಾಗಿ ವಿವಿಧ ಸಾಹಿತ್ಯ ವೇದಿಕೆಗಳಿಗೆ ಬಹು ತರಹದ ಸಾಹಿತ್ಯ ಸೇವೆಯನ್ನು ಮಾಡಿದ್ದಾರೆ.

ಲ್ಯಾಟ್ವಿಯಾ ವಿಶ್ವವಿದ್ಯಾಲಯದಲ್ಲಿ ಭಾಷಾಶಾಸ್ತ್ರದ ಅಧ್ಯಯನ ಮಾಡಿದ ಸಲೇಯ್ಸ್‌ರು, 2011-ರಲ್ಲಿ ತಮ್ಮ ಪಿಎಚ್.ಡಿ. ಪದವಿ ಪಡೆದರು. ಸಲೇಯ್ಸ್‌ರು ಚಿತ್ರಕಲೆಯಲ್ಲೂ ಪದವಿಯನ್ನು ಹೊಂದಿದ್ದಾರೆ. ಬಹಳಷ್ಟು ವಿಮರ್ಶಾ ಲೇಖನಗಳು, ಪುಸ್ತಕ ಸಮೀಕ್ಷೆಗಳು, ಸಂಶೋಧನಾ ಪ್ರಬಂಧಗಳನ್ನು ಬರೆದಿದ್ದಾರೆ ಹಾಗೂ ಪ್ರಮುಖ ಲ್ಯಾಟ್ವಿಯನ್ ಕವಿಗಳಾದ ಉಲ್ಡಿಸ್ ಬೆರ್ಜಿನ್ಸ್, ಯಾನಿಸ್ ರಾಕ್ಪೆಲ್ನಿಸ್, ಹರ್ಮನಿಸ್ ಮಾರ್ಗರ್ಸ್ ಮಯೆವ್ಸ್ಕಿಸ್ ಮತ್ತು ನಟ್ಸ್ ಸ್ಕ್ಯೂಜೆನಿಯೆಕ್ಸ್ ಅವರ ಕಾವ್ಯದ ಕುರಿತು ಸುದೀರ್ಘ ವಿಶ್ಲೇಷಣೆಗಳನ್ನು ಬರೆದಿದ್ದಾರೆ ಹಾಗೂ ಇತರ ಪ್ರಸಿದ್ಧ ಲ್ಯಾಟ್ವಿಯನ್ ಕವಿಗಳ ಪುಸ್ತಕಗಳನ್ನು ಸಂಪಾದಿಸಿದ್ದಾರೆ. ಮಾರಿಸ್ ಸಲೇಯ್ಸ್‌ರ ಕವನಗಳನ್ನು ಪೋಲಿಷ್, ಯುಕ್ರೇನಿಯನ್, ಇಂಗ್ಲಿಷ್, ಟರ್ಕಿಷ್, ಫಿನ್ನಿಷ್, ಹಂಗೇರಿಯನ್, ಲಿಥುವೇನಿಯನ್ ಹಾಗೂ ಇಲ್ಲಿ ಕನ್ನಡ ಭಾಷೆಗೂ ಅನುವಾದ ಮಾಡಲಾಗಿದೆ. ಅವರ ಎರಡನೆಯ ಕವನ ಸಂಕಲನ Mana politika-ಗೆ Anna Dagda ಪ್ರಶಸ್ತಿ, ನಾಲ್ಕನೆಯ ಸಂಕಲನ Kā pirms pērkona-ಗೆ Ojārs Vācietis ಪ್ರಶಸ್ತಿ, ಲ್ಯಾಟ್ವಿಯನ್ ಕವಿ ಉಲ್ಡಿಸ್ ಬೆರ್ಜಿನ್ಸ್-ರ (Uldis Bērziņš) ಕಾವ್ಯದ ಬಗ್ಗೆ ಬರೆದ ಪುಸ್ತಿಕೆಗೆ 2011-ರ ವಾರ್ಷಿಕ ಸಾಹಿತ್ಯ ಪ್ರಶಸ್ತಿ, ಹಾಗೂ 2009-ರಲ್ಲಿ ಪೋಲಂಡ್ ದೇಶದ ಸಾಂಸ್ಕೃತಿಕ ಮಂತ್ರಾಲಯದ Order of Merit ಸನ್ಮಾನವನ್ನು ಪಡೆದಿದ್ದಾರೆ.

ಮಾರಿಸ್ ಸಲೇಯ್ಸ್-ರ ಸಹಕವಿ, ಲ್ಯಾಟ್ವಿಯಾ ದೇಶದ ಕಾರ್ಲಿಸ್ ವೆರ್ಡಿನ್ಸ್‌ರ (Kārlis Vērdiņš) ಅಭಿಪ್ರಾಯದಲ್ಲಿ, ಸಲೇಯ್ಸ್ ಅವರ ಕವಿತೆಗಳಲ್ಲಿ ಕಂಡು ಬರುವ ಪ್ರಕೃತಿಯು ಬಹು ಆಳವಾಗಿ ಅನುಭವವಾಗುವಂತಹದ್ದು, ಭಾವನಾತ್ಮಕವಾದುದು; ಅದು ಕವಿಯು ಸಕ್ರಿಯವಾಗಿ ಅನ್ವೇಷಿಸುವ ಆತ್ಮದ ಚಲನೆಗಳ ಅಭಿವ್ಯಕ್ತಿಯಾಗಿದೆ. ಕಾಡು, ರೆಂಬೆ-ಕೊಂಬೆಗಳು, ಬೇರುಗಳು, ಚೆರಿ ಹಣ್ಣುಗಳು, ಮಿಣುಕುಹುಳಗಳು ಮತ್ತು ಇತರ ಸರಳ ಆದರೂ ನಿಗೂಢ ಸಂಯೋಜನೆಗಳಿಂದ ರೂಪಿಸಲ್ಪಟ್ಟ ವಾಸ್ತವದ ಹರಹುಳ್ಳ ಸಂಗತಿಗಳು, ಯಾವುದೋ ಒಂದು ಅಂತರ್ಬೋಧೆಯ ಉನ್ನತ ಸ್ತರವನ್ನು ಸೂಚಿಸುತ್ತದೆ.

ಸಲೇಯ್ಸ್‌ರವರು ತಮ್ಮ ಮೊದಲ ಕವನ ಸಂಕಲನದಲ್ಲಿ (Māmin, es redzēju dziesmu, 1999; Mummy, I Saw a Song) ಲ್ಯಾಟ್ವಿಯನ್ ಸಂಪ್ರದಾಯಕ್ಕೆ ಮಾತ್ರವಲ್ಲದೆ (ಖ್ಯಾತ ಲಾಟ್ವಿಯನ್ ಕವಿಗಳಾದ ನಟ್ಸ್ ಸ್ಕ್ಯೂಜೆನಿಯೆಕ್ಸ್, ಯಾನಿಸ್ ರಾಕ್ಪೆಲ್ನಿಸ್ ಹಾಗೂ ಉಲ್ಡಿಸ್ ಬೆರ್ಜಿನ್ಸ್‌ರ ಕೈಗಳಲ್ಲಿ ಲ್ಯಾಟ್ವಿಯನ್ ಕಾವ್ಯ ಕಂಡ ತಿರುವು-ತಿರುಚುಗಳನ್ನು ಸೇರಿಸಿಯೇ) ಇಪ್ಪತ್ತನೇ ಶತಮಾನದ ಮೊದಲಾರ್ಧದ ಪೋಲಿಷ್ ಕವಿಗಳಿಗೆ ಸಹ ಗೌರವ ಸಲ್ಲಿಸುತ್ತಾರೆ. ಈ ಪೋಲಿಷ್ ಕವಿಗಳ ಅನುವಾದಿತ ಕವನಗಳನ್ನು ಸಲೇಯ್ಸ್‌ರು ಈ ಸಂಕಲನದಲ್ಲಿ ಸೇರಿಸಿದ್ದಾರೆ. ಈ ಸಂಕಲನಕ್ಕೆ ಸಲೇಯ್ಸ್‌ರೇ ಸ್ವತಃ ಚಿತ್ರಗಳನ್ನು ಕೂಡ ಬಿಡಿಸಿದ್ದಾರೆ. 2001-ರಲ್ಲಿ ಪ್ರಕಟವಾದ ಅವರ ಎರಡನೇ ಸಂಕಲನದಲ್ಲಿ (Mana politika, 2001; My Politics) ಸಲೇಯ್ಸ್‌ರು ತಮ್ಮ ಕಾವ್ಯಾತ್ಮಕ ದೃಷ್ಟಿಕೋನವನ್ನು ಮತ್ತಷ್ಟು ಗಟ್ಟಿಗೊಳಿಸಿದ್ದಾರೆ; ಓದುಗರನ್ನು ಉದ್ದೇಶಿಸಿ ಮಾತನಾಡುವಾಗ ಕಂಡುಬರುವ ಭಾವನಾತ್ಮಕ ನೇರತೆಯನ್ನು ಯಾವುದೇ ರೀತಿಯಲ್ಲಿ ಕಳೆದುಕೊಳ್ಳದೇನೆ, ತಮ್ಮ ಹಿಂದಿನ ಕಾವ್ಯದಲ್ಲಿ ಕೆಲವೊಮ್ಮೆ ಕೇಳಿಬರುವ ಶಿಶುಪ್ರಾಯ ಧ್ವನಿಯ ಅಂಶಗಳನ್ನು ತ್ಯಜಿಸಿದ್ದಾರೆ.

ಸಲೇಯ್ಸ್-ರ ನಾಲ್ಕನೇ ಸಂಕಲನದಲ್ಲಿ (Nedaudz vairāk, 2013; A Little Bit More) ಕಂಡುಬರುವ ಕವನಗಳು ಸಮೃದ್ಧವಾದ ಬಣ್ಣಗಳಿಂದ ಕೂಡಿವೆ. ವಸಂತಕಾಲದ ಆರಂಭದಲ್ಲಿ, ಇವು ಬೆಳ್ಳಿ-ಬಣ್ಣದ ವರ್ಣವ್ಯಾಪ್ತಿಗೆ ಸೇರಿದ ತಂಪಾದ ಛಾಯೆಗಳಾಗಿವೆ, ಉದಾಹರಣೆಗೆ, ‘ಕೆಸರಹಳ್ಳಗಳು ಮೈಕಾವನ್ನು ಆವರಿಸುತ್ತವೆ,’ ‘ಹಿಮ ಬೀಳಲಿ, ಮಿಂಚು ಹರಿಯಲಿ,’ ‘ಬೆಳಿಗ್ಗೆ. ಬ್ರಹ್ಮಾಂಡವು ಹಿಮದಿಂದ ರಂಗಾಗಿದೆ.’ ಬೇಸಿಗೆಯಲ್ಲಿ, ಅವು ಬೆಚ್ಚಗಿನ ಬಣ್ಣಗಳಾಗುತ್ತವೆ: ‘ದೂರದ ನೀಲಿ ದ್ರಾಕ್ಷಿಗಳು.’ ವಸಂತಕಾಲದಲ್ಲಿ, ಬೆಲೆಬಾಳುವ ಲೋಹಗಳನ್ನು ಒಟ್ಟಿಗೆ ಬೆಸೆಯಲಾಗುತ್ತದೆ: ‘ಅವಳು ಮತ್ತೊಮ್ಮೆ ಹೊಳೆಯಬೇಕು / ಬೆಳ್ಳಿ, ಬಂಗಾರ ಮತ್ತು ತಾಮ್ರದ ಬಣ್ಣಗಳಲ್ಲಿ.’ ಎಂದರೆ, ಶಬ್ದಗಳು, ಗಂಧಗಳು ಮತ್ತು ರಂಗುಗಳ ಸಹಾಯದಿಂದ ಭಾವನೆಗಳ ಸೂಕ್ಷ್ಮ ಅನುಬಂಧವನ್ನು ಚಿತ್ರಿಸಲಾಗಿದೆ. ‘ಮೆದುಳಿನ ಎಲೆಗಳು,’ ‘ಬೆಳಕಿನ ದಳಗಳಲ್ಲಿ,’ – ಇಂತಹ ವಾಸ್ತವದ ಕೆಲ ವಿಚಿತ್ರ ರೂಪಕಗಳು ಒಂದು ತರಹದಲ್ಲಿ ಆಕರ್ಷಕವಾಗಿವೆ. ಆಧುನಿಕ ನಿರಾಕರಣವಾದಿ ಗ್ರಹಿಕೆಯ ಹಿನ್ನೆಲೆಯಲ್ಲಿ ಇವು ಎದ್ದು ಕಾಣುತ್ತದೆ.

ಈ ಸಂಕಲನದಲ್ಲಿ ನಗರೀಕರಣದ ಚಿತ್ರಗಳು ಮಾಯವಾಗಿ, ಅದರ ಬದಲಿಗೆ ಪ್ರಾಕ್ತನ ನಿಸರ್ಗದ ಚಿತ್ರಗಳು ಕಂಡುಬರುತ್ತವೆ. ಕೆಲವು ಸ್ಥಳಗಳಲ್ಲಿ ಮಾತ್ರ ನಗರದ ಜನಸಂದಣಿ, ಗದ್ದಲ, ಮತ್ತು ಇದರಿಂದ ಹುಟ್ಟುವ ತಾತ್ಸಾರವನ್ನು ತೋರಿಸಲಾಗಿದೆ. ಇಲ್ಲಿ ಕಂಡುಬರುವ ಭಾವಗೀತಾತ್ಮಕ “ನಾನು” ಪ್ರಕೃತಿಯ ಪ್ರಕ್ರಿಯೆಗಳು ಮತ್ತು ನೈಜತೆಗಳಲ್ಲಿ ಆಶ್ರಯ ಪಡೆಯುತ್ತದೆ, ಆದರೆ ತನ್ನೊಳಗೆ ನಗರವು ಹೆಚ್ಚು ಶಕ್ತಿಯುತವಾಗಿದೆ ಎಂಬ ಅರಿವಿದೆ. ಇಡೀ ಸಂಕಲನದಲ್ಲಿ ವ್ಯಾಪಿಸಿರುವ ‘ಹಕ್ಕಿ’ಯ ರೂಪಕದ ಮೂಲಕ ಸಲೇಯ್ಸ್-ರ ಕಾವ್ಯದ ಪ್ರಕೃತಿಯೊಂದಿಗಿನ ಬೆಸುಗೆ ಮುಂದುವರಿಯುತ್ತದೆ. ಪಕ್ಷಿಗಳಿಗೆ ವಿವಿಧ ಕಾರ್ಯಗಳನ್ನು ನಿಗದಿಪಡಿಸಲಾಗಿದೆ: ಅವು ಹಾಡು, ಗದ್ದಲ, ಯಾ ಸಂಚಲನವನ್ನು ತಮ್ಮ ಜೊತೆಯಲ್ಲಿ ಇರಿಸಿಕೊಳ್ಳುತ್ತವೆ; ಅವು ರೂಪಕಗಳು, ಹೋಲಿಕೆಗಳು ಮತ್ತು ವಿಶೇಷಣಗಳಿಂದ ಕಾವ್ಯ ಜಗತ್ತನ್ನು ತುಂಬುತ್ತವೆ; ಹಾಗೂ, ಪಕ್ಷಿಯ ರೂಪಕವು ಸ್ವರ್ಗ ಮತ್ತು ಭೂಮಿಯ ನಡುವೆ ಬಾಂಧವ್ಯ ಕಲ್ಪಿಸುತ್ತದೆ.

ಮಾರಿಸ್ ಸಲೇಯ್ಸ್-ರ ಐದನೇ ಸಂಕಲನ Tuvošanās [Approaching, 2018]) ಪ್ರಪಂಚವನ್ನು ಮತ್ತು ಜೀವನವನ್ನು ವಿವಿಧ ಗ್ರಹಿಕೆಗಳ ಮೂಲಕ ಸಮೀಪಿಸುವ ಕಥೆಯಾಗಿದೆ. ಈ ಕಥೆಯಲ್ಲಿ ಜಗತ್ತು ಕೆಲ ಕ್ಷಣಗಳ ಕಾಲ ತನ್ನನ್ನು ನೋಡಲು ಮತ್ತು ಅರ್ಥಮಾಡಿಕೊಳ್ಳಲು ಅವಕಾಶ ಮಾಡಿಕೊಟ್ಟಂತಿದೆ. ಪ್ರತಿ ಕ್ಷಣವು ಜೀವನದ ಒಂದು ನಿರ್ದಿಷ್ಟ ಹಂತದಲ್ಲಿ ಅನುಭವಿಸಿದ ಲಘುತೆ ಮತ್ತು ಭಾರವನ್ನು ಸರಿದೂಗಿಸುತ್ತದೆ, ಅಭಿವ್ಯಕ್ತಿಯ ನಿಖರತೆಯು ತರ್ಕವನ್ನು ಮಾಧುರ್ಯದಿಂದ ಕಿತ್ತೊಗೆಯುವ ಕವಿತೆಯ ಧ್ವನಿ-ಪದರದ ಪ್ರವೃತ್ತಿಯೊಂದಿಗೆ ಘರ್ಷಿಸುತ್ತದೆ. ಸ್ವಲ್ಪ ಮಟ್ಟಿಗೆ ಹೇಳುವುದಾದರೆ, ಈ ಸಂಕಲನವು ಸಮತೋಲನದ ಬಿಂದುವನ್ನು ಹುಡುಕುವ ಮತ್ತು ಮರುಪಡೆಯುವ ಅಂತ್ಯವಿಲ್ಲದ ಪ್ರಯಾಣವಾಗಿದೆ. ಸಲೇಯ್ಸ್-ರ ಕಾವ್ಯದಲ್ಲಿ ಹಲವಾರು ಚಿರಕೃತಿಗಳ (ಕ್ಲಾಸಿಕ್ಸ್-ಗಳ) ಸ್ಮೃತಿಗಳನ್ನು ಗಮನಿಸಬಹುದು, ಆದರೆ ಕವಿಯ ಸ್ವಂತ ಧ್ವನಿ ಯಾವಾಗಲೂ ವಿಶಿಷ್ಟವಾಗಿದೆ: ಆ ಧ್ವನಿಯು ಪ್ರಪಂಚ, ಪ್ರಕೃತಿ ಹಾಗೂ ಅನ್ಯೋನ್ಯತೆಯ ಆಳವಾದ ಅರ್ಥಗಳನ್ನು ಒಳಗೊಂಡಿದೆ, ಇದು ಇವರ ಕಾವ್ಯವನ್ನು ವಿವಿಧ ತಲೆಮಾರುಗಳ ಓದುಗರಿಗೆ ಅರ್ಥವಾಗುವಂತೆ ಮಾಡುತ್ತದೆ.

ಮಾರಿಸ್ ಸಲೇಯ್ಸ್-ರಲ್ಲಿರುವ ಅನುವಾದಕಾರನ ಪ್ರತಿಭೆ ಅವರ ಕಾವ್ಯದ ಭಾಷೆಯಲ್ಲಿ ಪ್ರತಿಫಲಿಸುತ್ತದೆ. ಅವರ ಕಾವ್ಯ ಭಾಷೆಯು ವಿವಿಧ ಭಾಷಾ ಸಾಧನಗಳೊಂದಿಗೆ ಸಂಯಮದ, ಆದರೆ ಸೂಕ್ಷ್ಮಚಿತ್ರಕಾರ್ಯದ ವಿನೋದತೆಯನ್ನು (filigree game) ತೋರಿಸುತ್ತದೆ: ಭಾಷಾಪದಗಳ ವಿಭಿನ್ನ ಪದರಗಳು, ನವಪದಗಳು, ಹಳೆಯ ಪದಗಳು ಮತ್ತು ಸ್ಥಳೀಯ ಹೆಸರುಗಳ ಬಳಕೆ ಕಾವ್ಯದ ಸಾಲುಗಳಲ್ಲಿ ಅಪ್ರಜ್ಞಾಪೂರ್ವಕವಾಗಿ ಪ್ರದರ್ಶಿಸಲಾಗುತ್ತದೆ.

ನಾನು ಕನ್ನಡಕ್ಕೆ ಅನುವಾದಿಸಿದ ಇಲ್ಲಿರುವ ಮಾರಿಸ್ ಸಲೇಯ್ಸ್ರ ಆರು ಕವನಗಳಲ್ಲಿ ಮೊದಲ ಕವನವನ್ನು ಇಯೆವಾ ಲೆಸಿನ್ಸ್ಕಾ (Ieva Lešinska) ಹಾಗೂ ಉಳಿದ ಐದು ಕವನಗಳನ್ನು ಮಾರ್ಟಾ ಜಿಯೆಮೆಲಿಸ್ (Mārta Ziemelis) ಅವರುಗಳು ಮೂಲ ಲ್ಯಾಟ್ವಿಯನ್ ಭಾಷೆಯಿಂದ ಇಂಗ್ಲಿಷ್‌ಗೆ ಅನುವಾದಿಸಿದ್ದಾರೆ.

1
ಕಾಗೆಗಳು ತಮ್ಮ ಕವನಗಳಲ್ಲಿ
ಮೂಲ: Crows in their poems

ಕಾಗೆಗಳು ತಮ್ಮ ಕವನಗಳಲ್ಲಿ
ಮಾರಕ ತಪ್ಪುಗಳನ್ನು ಮಾಡುತ್ತಾವೆ. ನಂತರ
ಅತೃಪ್ತರಾಗಿ ನೀರ ಹಳ್ಳಗಳಲ್ಲಿ ನಡೆದು ಹೋಗುತ್ತಾವೆ
ಕೊಳೆನೀರು ಕುಡಿಯುತ್ತಾ.

ಪುಟ್ಟ ಹುಡುಗಿಯರು ಕಾಗೆಗಳ ನೋಡುತ್ತಾರೆ
ಕೇಕೆ ಹಾಕುತ್ತಾ ಹಿಂದೆ ಓಡುತ್ತಾರೆ:
ಅಗೋ ಕಾಗೆ, ಅಗೋ ಕಾಗೆ!
ಆದರೆ ಅವು ಹಾರಿ ಹೋಗುತ್ತಾವೆ
ತಮ್ಮ ಒಡ್ಡೊಡ್ಡಾದ ರೆಕ್ಕೆಗಳನ್ನು ಬಿಚ್ಚಿಕೊಳ್ಳುತ್ತಾ
ಫುಟ್-ಪಾತಿನ ಮೇಲೆ ತೊಯ್ದ
ಪಾದಗುರುತುಗಳ ಹಿಂದೆ ಬಿಟ್ಟು.
ನಂತರ ಅವು ಸದ್ದಿಲ್ಲದೆ ಅಳುತ್ತಾವೆ
ಕಾರುಗಳ ಅಡಿಯಲ್ಲಿ ಗುಂಪಾಗಿ ಮುದುರಿಕೊಂಡು
ಏಕೆಂದರೆ ಅವುಗಳಿಗೆ ಹೇಗೆಂದು ಗೊತ್ತಿಲ್ಲ
ಕವನ ಬರೆಯುವುದು
ವ್ಯಾಕರಣಬದ್ಧವಾಗಿ.

2
ಕಿಡಿಯೊಂದು ಬಟ್ಟೆಯ ಕಚ್ಚಿ ಕಚ್ಚಿ
ಮೂಲ: A spark bit through cloth

ಕಿಡಿಯೊಂದು ಬಟ್ಟೆಯ ಕಚ್ಚಿ ಕಚ್ಚಿ
ದೇಹವ ತಲುಪಿ, ಚರ್ಮವ ಸುಟ್ಟಿತು.
ನನ್ನ ಬದಿ ನಿಂತು ನೆರಳಿನಲ್ಲಿ ನಡುಗುತ್ತಿರುವೆ
ಕಂಡೂ ಕಾಣದಂತೆ ನೀನು.
ನಿನ್ನ ಬಗ್ಗೆ ಒಂದು ಶಬ್ಧವೂ ಹೇಳುವುದಿಲ್ಲ ನೀನು.
ಚರ್ಮದಡಿಯಲ್ಲಿ ಕೆಂಪು ರಕ್ತ,
ಸೂರ್ಯನ ಕುದಿಯುವ ಕೆಂಪು
ಭೂಮಿಯ ಹಿಂದೆ ಸುರಿಬೀಳುತ್ತೆ
ಮುಸ್ಸಂಜೆಯ ಕಪ್ಪು ಉಪ್ಪಿನೊಳಗೆ.
ಮುಂದಿನ ವರ್ಷ ನೀನು ಮತ್ತೊಮ್ಮೆ ನನ್ನ ಬಳಿ ಬರುವೆ,
ಈಗಷ್ಟೆ ಕೊಯ್ದ ಹಳದಿ ಒಣಹುಲ್ಲ
ಬಣವೆ ಸಾಲುಗಳನ್ನ ಕಟ್ಟಿರುತ್ತಾರೆ,
ಈಗಷ್ಟೆ ಗದ್ದೆಗಳನ್ನ ಉತ್ತಿರುತ್ತಾರೆ;
ಮೊಣಕೈವರೆಗೂ ಕಪ್ಪು ಮಣ್ಣು.
ಬಾನಂಚಿನಲ್ಲಿ ಕಾಣುವ ಕೊನೆಯ ಕಾಡುಗಳನ್ನ
ಈಗಷ್ಟೆ ಕೆಂಪು ಕಚ್ಚಿದೆ.
ನೀನು ಬರುವೆ.
ಸಾವು ನಿಲ್ಲುತ್ತೆ ಗರಬಡಿದಂತೆ,
ಒಂದು ಹೆಜ್ಜೆಯೂ ಮುಂದೆ ಇಡಲಾಗಲ್ಲ.
ನಿನ್ನ ಕಾಲಿನಿಂದ ಅನುದ್ದಿಷ್ಟವಾಗಿ ಒದೆಯಲ್ಪಟ್ಟ
ಉರುಟುಗಲ್ಲು ಉರುಳಿ ಇನ್ನೂ ಹತ್ತಿರ ಬರುತ್ತೆ,
ಹಿಮಗಟ್ಟಿದ ಹೈವೇ-ಯ ಬದಿಯಲ್ಲಿ ಕುಪ್ಪಳಿಸುತ್ತಾ.

3
ನಗುತರಿಸುವಂತಹ ಒಂದು ಸಣ್ಣ ಲೋಕ
ಮೂಲ: A hilariously small world

ನಗುತರಿಸುವಂತಹ ಒಂದು ಸಣ್ಣ ಲೋಕ.
ನನ್ನ ಅಂಗೈಯಿಂದ ಜಾರುತ್ತಲೇ ಇರುತ್ತೆ,
ನನ್ನ ಕಣ್ಣೀರಿಸುವ ಕಣ್ಣುಗಳನ್ನು
ರುಮಾಲಿನಿಂದ ಒರೆಸುತ್ತಾ ಕೇಳುವೆ,
ಯಾರಹತ್ತಿರವಾದರೂ ಭೂತಗನ್ನಡಿ ಇದೆಯಾ ಎಂದು.
ಇಲ್ಲ, ಯಾರ ಹತ್ತಿರವೂ ಇಲ್ಲ,
ಆದರೆ, ಒಂದು ಇರುವೆಯ
ಫೋಟೋ ಕೂಡ ತೆಗೆಯಬಹುದಲ್ಲವಾ
ಲೇಟೆಸ್ಟ್ ಐ-ಫೋನಿನಲ್ಲಿ.

ಮರದಲ್ಲಿ ಕೂತಿರುವ ಮಳೆಮಂಗಗಳು
ನಾನೀಗ ಏನು ಮಾಡುವೆನೆಂದು ಗಮನಿಸುತ್ತಿವೆ.
ನಾನು ನನ್ನ ಅಂಗೈಯನ್ನು ಬೆನ್ನಹಿಂದೆ ಅಡಗಿಸಿ
ಲೋಕವನ್ನು ಹಾಗೆ ಬಿಟ್ಟು ಬಿಡುವೆ.
ತನ್ನ ಪುಟ್ಟ ರೆಕ್ಕೆಗಳನ್ನು ಪಟಪಟಿಸುತ್ತಾ
ಅದು ಹಾರಿ ಹೋಗುವುದು.
ಇನ್ನೈದು ನಿಮಿಷಗಳಲ್ಲಿ ಚಂಡಮಾರುತವೊಂದು
ಶುರುವಾಗುವುದು.

4
ಹಿಂದೆ ಇದ್ದಷ್ಟು ಭಾರವಾಗಿಲ್ಲ ನನ್ನ ಆತ್ಮ
ಮೂಲ: My soul isn’t as dense as it was earlier

ಹಿಂದೆ ಇದ್ದಷ್ಟು ಭಾರವಾಗಿಲ್ಲ ನನ್ನ ಆತ್ಮ,
ಮೋಡದಂತಾಗಿದೆ ಈಗ,
ಅದು ತೇಲಿಕೊಂಡು ಹೋಗುತ್ತೆ ಆ ಜಾಗಕ್ಕೆ,
ಕಾಲ್ನಡಿಗೆಯಲ್ಲಿ
ಎಲ್ಲಿಂದ ಬಂತೋ ಆ ಜಾಗಕ್ಕೆ,
ಈ ವಿರಾಮದಲ್ಲಿ ನದಿಯು ಶಾಂತವಾಗಿ ನಿಂತಿದೆ,
ಪ್ರತಿಬಿಂಬವು ಕದಲುತ್ತಿಲ್ಲ,
ಹುಳವು ಸೇಬುಹಣ್ಣನ್ನು ತಿನ್ನುವುದಿಲ್ಲ,
ನಕ್ಷತ್ರವು ಬೀಳುವುದಿಲ್ಲ.

5
ಸಣ್ಣವು ಅವು, ಬಾನಿಗಾಗಿ ಕಾಯುತ್ತಿದ್ದಾವೆ
ಮೂಲ: They’re small and wait for the sky

ಸಣ್ಣವು ಅವು, ಬಾನಿಗಾಗಿ ಕಾಯುತ್ತಿದ್ದಾವೆ,
ಬಾನು ಬರುವುದಿಲ್ಲ.
ಅವು ಕತ್ತಲಾಗುತ್ತವೆ, ಕಾಯುವುದಿಲ್ಲ ಇನ್ನು.
ಆದಾಗ್ಯೂ, ಅದು ಬರುವುದಿಲ್ಲ.
ಕೊನೆಗೆ ಅವು ಇಲ್ಲವೇ ಇಲ್ಲ ಅಲ್ಲಿ.
ಆಮೇಲೆ, ಎಲ್ಲವೂ ಮೊದಲಿನಂತೆಯೇ ಆಗುತ್ತೆ.
ಬಾನು ಹೇಗೆಂದರೆ ಅದರಿಂದ ತಪ್ಪಿಸಿಕೊಳ್ಳಲಿಕ್ಕಾಗಲ್ಲ.
ಕೆಂಪು ಬಣ್ಣದ ಅಕ್ಟೋಬರ್ ಆರ್ಕೆಸ್ಟ್ರಾ-ವೊಂದು
ಎಲ್ಲವನ್ನೂ ಮರಗಳಿಂದ ನೆಲಕ್ಕೆ ಹಾರಿಸುತ್ತೆ,
ಆಮೇಲೆ ಎಲ್ಲೆಲ್ಲೂ ಸಂಗೀತವೇ,
ಹತಾಶೆಯ ಹಾಗೆ ಪ್ರಜ್ವಲ.
ಅಲ್ಲ, ಅದು ನಮಗಲ್ಲ,
ನಮಗಾಗಿರಲು ಸಾಧ್ಯವಿಲ್ಲ.
ನಾವು ಹರಿದ್ವರ್ಣದ ಗದ್ದಲದಿಂದ ಬಹು ದೂರವಿದ್ದೇವೆ,
ತರಚಿದ ಮೊಣಕಾಲುಗಳು, ಬರಿಗಾಲುಗಳೊಂದಿಗೆ.
ಆದರೀಗ,
ಚಳಿಗಾಲದ ಹಿಮಬಿರುಗಾಳಿಯ ಸೆಳೆಯೊಂದು
ಮಿಂಚಿನಂತೆ ಮನೆಗಳ ಮೇಲೆ ಹಾರುತಿದೆ,
ನಮ್ಮ ನಂತರ
ಕೆಲದಿನಗಳ ನಂತರ.

5
ಕಿರುಗವನಗಳು

ಅಯ್ಯೊ ದೇವ್ರೇ!
ವಾಕ್ಯಗಳು ಅರ್ಥಕ್ಕಾಗಿ ಚೀರುತ್ತಿವೆ.
ಆದರೆ ನಾನು ಆ ವಾಕ್ಯಗಳ ಅಪ್ಪನಲ್ಲ.

*****

ನನ್ನೊಳು ಎಲ್ಲವೂ ತಲೆಕೆಳಗಾಗಿವೆ
ಪ್ರಭುವು ನನ್ನೊಳಗೆ ತಲೆಕೆಳಗಾಗಿದ್ದಾನೆ
ದೇವರು ನನ್ನೊಳಗೆ ತಲೆಕೆಳಗಾಗಿದ್ದಾನೆ
ಹಾಗೂ ಇರದಿದ್ದವುಗಳೆಲ್ಲಾ ಸುರುಟಿಹೋಗಿ
ಇರುವಂತಹವುಗಳಾಗಿವೆ

*****

ನೋಡಲ್ಲಿ! ನೈಟಿಂಗೇಲ್ ಹಕ್ಕಿಗಳು ಬಾನಂಚಿನಾಚೆ ಮುದುರಿ ಕೂತಿವೆ
ಕೆರೆಯ ಮುಖಪುಟದ ಬದಿಯಲ್ಲಿ ನೀನು ವಿಹರಿಸುತ್ತಿರುವಾಗ
ಏನವು ಆ ಹೊಗೆಧೂಮಗಳು ಎಂಬ ಕುತೂಹಲ ನಿನಗೆ: ಹಕ್ಕಿಗಳ ಉಸಿರು ಅವು